ಮನೆಯೆದುರಿನ ಮರ ಅವಸರದಲ್ಲಿ ಎಂಬಂತೆ ಎಲೆ ಎಲ್ಲ ಉದುರಿಸಿಕೊಂಡು ಬೋಳಾಗಿ ನಿಂತಿದೆ. ಇದೀಗ ಇಲ್ಲಿ -ಅದೂ ಅಲ್ಲದ, ಇದೂ ಅಲ್ಲದ ಋತು. ಕಾಲು ಹಾಗು ಕೈಬೆರಳಿನ ತುದಿಗಳಿಂದ ಚಳಿ ಮೆಲ್ಲನೆ ಮೈಗೇರುವ ತವಕದಲ್ಲಿರುವ ಹೊತ್ತು. ಬೇಸಿಗೆಯಲ್ಲಾ ಮನಸ್ಸು ಗರಿಗೆದರಿ ಹಾರಿ ಈಗ ಬಂದಿಳಿದು ಕಾವಿಗೆ ಕೂರುವ ಹೊತ್ತು. ಯಾಕೋ ಎಲ್ಲಾ ತುಂಬಾ ಕಳೆಗುಂದಿದಂತೆ ಅನಿಸುತ್ತಿದೆ.

ಕೆಲಸಗಳು ಇದ್ದೂ ಇಲ್ಲವೆಂಬಂತೆ ಒಂದು ಕಡೆಯಾದರೆ, ಇನ್ನೊಂದು ಕಡೆ ಕೆಲಸ ಕಳಕೊಂಡವರು ಹೆಚ್ಚುತ್ತ ಇದ್ದಾರೆ. ಇನ್ನೂ ಹೆಚ್ಚುತ್ತಾರೆ ಅಂತ ಸುದ್ದಿ ಬೇರೆ. ಎಷ್ಟೋ ಮನೆಗಳು ಮುರಿಯುತ್ತವಂತೆ. ಮುರಿದದ್ದನ್ನು ಮತ್ತೆ ಕಟ್ಟಿಕೊಳ್ಳಲು ಬಲವನ್ನೇನೋ ಮಂದಿ ಕಂಡುಕೊಳ್ಳುತ್ತಾರಂತೆ. ಆದರೆ ಅದಕ್ಕಿನ್ನೂ ಕಾಯಬೇಕಂತೆ. ದುಡಿಯುಬೇಕನ್ನುವವರಿಗೆ ಕೆಲಸಕ್ಕೆ ತೊಂದರೆ. ಕೆಲಸವಿದ್ದರೂ, ತಂಡಿಯನ್ನು ನಿಭಾಯಿಸುವಷ್ಟು ಕಾವು ಸಿಗುವ ತೊಂದರೆ ಈ ಚಳಿಗಾಲದ ದಾರುಣತೆಯನ್ನು ಹೆಚ್ಚಿಸಬಹುದು ಎಂಬ ಸುದ್ದಿ ಮನಸ್ಸನ್ನು ಮುದುಡಿಸುತ್ತದೆ.

ಆಸ್ಟ್ರೇಲಿಯದ ಬಾಗಿಲನ್ನು ಮತ್ತೆ ನಿರಾಶ್ರಿತರ ಅದರುವ ಕೈಗಳು ತಟ್ಟುತ್ತಿವೆ. ಮುರುಕು ದೋಣಿಗಳು, ಅದರಲ್ಲಿ ಬೆದರಿದ ಜೀವಗಳು ತಮ್ಮ ಮಕ್ಕಳುಮರಿಗಳನ್ನು ಅವುಚಿಕೊಂಡು ತೇಲಿಬರುತ್ತಿದೆ. ಇರಾಕಿನಿಂದ ಶೆಲ್ಲು, ಬಾಂಬು ಅಲ್ಲದೆ ಈಗೀಗ ಹೆಚ್ಚುತ್ತಿರುವ ಕಾರುಬಾಂಬಿನಿಂದ ಬಚಾವಾಗಲು ಓಡುತ್ತಿದ್ದರೆ, ಆಫ್ಗಾನಿಸ್ತಾನದಲ್ಲಿ ಮೈಲುಗೈ ಪಡೆದ ಅಟ್ಟಹಾಸದ ಕಟುಕರಿಂದ ಓಡುತ್ತಿದ್ದಾರೆ. ಪಾಕಿಸ್ತಾನದ ಗುಂಡು ತೂರುವ ಕೊಲೆಗಡುಕರಿಂದ ತಲೆತಪ್ಪಿಸಿಕೊಂಡು ಬರುತ್ತಿದ್ದರೆ, ಇತ್ತ ಕಡೆ ಒಳಗೊಳಗೆ ಕುದಿಯುತ್ತಲೇ ಇದ್ದು, ಥಟ್ಟನೆ ಭುಗಿಲೆದ್ದ ಶ್ರೀಲಂಕಾದ ಸಂಘರ್ಷದಿಂದ ತಮಿಳು ಜೀವಗಳು ಓಡಿಬರುತ್ತಿದ್ದಾರೆ.

ಹೀಗೆ ಬರುವುದು ಹೆಚ್ಚುತ್ತಿದ್ದಂತೆ ಆಸ್ಟ್ರೇಲಿಯದ ಒಳಗಿನ ಗುದ್ದಾಟವೂ ಹೆಚ್ಚುತ್ತದೆ. “ಒಳಗೆ ಬಿಡಬೇಡಿ”, “ಹಿಂದಕ್ಕೆ ಕಳಸಿ”, “ಅವರೆಲ್ಲಾ ಪಾತಕಿಗಳು!”, “ಎಲ್ಲಾದರೂ ಸಾಯಲಿ, ಇಲ್ಲಿಬೇಡ” ಎನ್ನುವ ದನಿಗಳು ದೊಡ್ಡದಾಗುತ್ತಾ ಹೋಗುತ್ತವೆ. ಆಶ್ರಯ ಬೇಡಿ ಬಂದವರನ್ನು “illegal” ಎಂದು ಕರೆಯುವುದು ತಪ್ಪಷ್ಟೇ ಅಲ್ಲ, ದುಷ್ಟತನವೂ ಹೌದು ಎಂದು ವರ್ಷಾನುವರ್ಷಗಳಿಂದ ಕೂಗುಗಳು ಕೇಳುತ್ತಿದ್ದರೂ, ಆಸ್ಟ್ರೇಲಿಯದ ಪ್ರೆಸ್ ಕೌನ್ಸಿಲ್ ಹಾಗೆ ಕರೆಯಕೂಡದೆಂದು ವಿವರಣೆ ಹೊರಡಿಸಿದ್ದರೂ, ರೇಡಿಯೋ ಟೀವಿ ಪತ್ರಿಕೆಗಳಲ್ಲಿ ನಿರಾಶ್ರಿತರನ್ನು “illegal” ಎಂದೇ ಕರೆದು ಅವರ ಬಗ್ಗೆ ಅನುಮಾನ ಹುಟ್ಟಿ ಜರಿಯಲು ದಾರಿ ಮಾಡಿಕೊಡುತ್ತಿದ್ದಾರೆ.

ಇತ್ತ “ಸ್ವೈನ್ ಫ್ಲೂ” ಧುತ್ತೆಂದು ಎದುರಾಗಿದೆ. ಅಮೇರಿಕಾ, ಯೂರೋಪು, ಏಷಿಯಾದ ದೇಶಗಳ ಆರೋಗ್ಯ ಸವಲತ್ತುಗಳನ್ನು ತೀವ್ರ ಪರೀಕ್ಷೆಗೆ ಒಡ್ಡುವುದರಲ್ಲಿ ಅನುಮಾನವಿಲ್ಲದಂತಾಗಿದೆ. ಎಷ್ಟು ಜನರನ್ನು ಬಲಿ ತೆಗೆದುಕೊಳ್ಳಬಹುದೆಂದು ಲೆಕ್ಕಾಚಾರ ಶುರುವಾಗಿದೆ. ಇದರಿಂದ ಈಗಾಗಲೇ ನಡುಗುತ್ತಿರುವ ದೇಶಗಳ ಆರ್ಥಿಕತೆಗೆ ಇನ್ನೆಷ್ಟು ಗುದ್ದು ಬೀಳಬಹುದೆಂದೂ ತಲೆಕೆರೆದುಕೊಳ್ಳುತ್ತಿದ್ದಾರೆ. ಸೀನಿದವರಿಂದ ದೂರಕ್ಕೆ ಮಾರುದ್ದ ಹಾರುವ, ಕೈಕುಲುಕಲು ಬಂದವರಿಗೆ ಕೈಚಾಚಲೂ ಅನುಮಾನಿಸುವ ಹೊತ್ತು ಇದು. ದಕ್ಷಿಣ ಭೂಖಂಡದ ಚಳಿಗಾಲದಲ್ಲಿ ಇದು ಮತ್ತೂ ಮಾರಣಾಂತಿಕ ಎಂಬುದು ಎಲ್ಲರ ದುಗುಡಕ್ಕೆ ಕಾರಣ.

ನಡುಹಗಲು ಹತ್ತಿರವಾದರೂ ಮೋಡ ಮುಸುಕಿಯೇ ಇದ್ದು ಸೂರ್ಯನ ಇರವೇ ಅನುಮಾನ ಹುಟ್ಟಿಸುವಂತಿದೆ. ಯಾವ ಬ್ರಿಟಿಷ್ ಚಕ್ರಾಧಿಪತ್ಯಕ್ಕೆ ಜೀವ ಮುಡಿಪಾಗಿಟ್ಟು ಯುದ್ಧಗಳಲ್ಲಿ ಕಾದಿದ್ದಾರೋ, ಅದೇ ಸರ್ಕಾರದ ವಿರುದ್ಧ ತಮ್ಮ ಹಕ್ಕಿಗಾಗಿ ಹಲವಾರು ವರ್ಷಗಳಿಂದ ಗೂರ್ಖಾಗಳು ಸೆಣಸುತ್ತಿದ್ದಾರೆ. ನೇಪಾಳದ ಗುಡ್ಡಗಾಡಿಂದ ಆಯ್ದ ಗೂರ್ಖಾ ರೆಜಿಮೆಂಟು ಈಗಲೂ ಬ್ರಿಟನ್ನಿನ ತುಕಡಿಗಳಲ್ಲೊಂದು. ಅವರಲ್ಲಿ ೧೯೯೭ರ ಮುನ್ನ ನಿವೃತ್ತರಾದ ಗೂರ್ಖಾ ಮಂದಿ ಬ್ರಿಟನ್ನಿನಲ್ಲಿ ತಳವೂರುವ ಹಾಗಿಲ್ಲ ಎಂದು ಸರ್ಕಾರ ಘೋಷಿಸಿತ್ತು, ಆದರೆ ಈಗ, ಆ ಘೋಷಣೆ ಬ್ರಿಟನ್ನಿನ ಸಂಸತ್ತಿನ ಓಟಿನಲ್ಲಿ ಸೋತ ಸುದ್ದಿ ಬಂದಿದೆ. ಗೂರ್ಖಾಗಳ ಮುಖದಲ್ಲಿ ತುಸು ನಗು ಅರಳಿದೆ. ಯುದ್ಧ ಪದಕಗಳು ಸೆಟೆದ ಎದೆಗಳ ಮೇಲೆ ಮತ್ತೆ ಹೊಳೆಯುತ್ತಿದೆ. ಒತ್ತಿ ಹಿಡಿದ ಖುಷಿಯೂ ನಗುವೂ ಅವರ ಸಂಯಮವನ್ನು ಧಿಕ್ಕರಿಸುತ್ತಿದೆ. ಆದರೂ ಗೂರ್ಖಾಗಳ ಹಕ್ಕಿನ ಹೋರಾಟವಿನ್ನೂ ಮುಗಿದಿಲ್ಲ. ಸರ್ಕಾರದ ಮುಂದಿನ ಅಡ್ಡಗಾಲು ಏನಿರಬಹುದೆಂಬ ಆತಂಕವಿದ್ದೇ ಇದೆ. ತನಗೆ ಬೇಕಾದಾಗ ಯುದ್ಧಸೇವೆಗೆ ಬಳಸಿಕೊಂಡು, ಬೇಡದಾಗ ಕೈತೊಳೆದುಕೊಳ್ಳುವ ಸರ್ಕಾರಗಳ ಇಂತಹ ದೌರ್ಜನ್ಯಕ್ಕೆ ಕೊನೆ ಯಾವಾಗ ಎಂದು ಕೇಳುವಂತಾಗುತ್ತದೆ.

ಮೋಡದ ಹಿಂದಿಂದ ತುಸುವೇ ಇಣುಕಿಹೋದ ಸೂರ್ಯ ತಾನಿದ್ದೇನೆ ಎಂದು ಖಾತರಿ ಮಾಡಲೋಸ್ಕರವೇ ಹಾಗೆ ಮಾಡಿದಂತಿತ್ತು. ಸೂರ್ಯನಿಗೆ ನಗುವುದಕ್ಕೂ ಅನುಮಾನವಿರುವಂತಿತ್ತು. ಅಂತಹ ಹೊತ್ತಿದು.