ರಾತ್ರಿ ನಿದ್ದೆಗೆಟ್ಟಿದ್ದಕ್ಕೆ ಬಂದಿದ್ದ ತಲೆಸುತ್ತೋ, ಹೊಟ್ಟೆಗಿಲ್ಲದೇ ಆದ ಆಯಾಸವೋ ಅಥವಾ ಹ್ಯಾಂಗೋವರೋ ಒಟ್ಟು ತಲೆ ಗಿಂ ಎಂದು ಬಹಳ ಜೋರಾಗಿ ಚಕ್ಕರ್ ಬಂದು ವಾಂತಿ ಬರುವ ಹಾಗಾಯಿತು. ಇನ್ನು ಒಂದೇ ಒಂದು ಕ್ಷಣ ನಿಂತಿದ್ದರೂ ಬಿದ್ದೇಬಿಡುತ್ತೇನೆ ಎಂದನಿಸಿತು. ಕೈಯಲ್ಲಿ ಹಸುಗೂಸಿದೆ ಎನ್ನುವುದನ್ನೂ ಮರೆತು ಮಗುವಿನ ತಲೆಯನ್ನು ಎದೆಗೆ ಅವುಚಿಸಿಕೊಂಡಿದ್ದ ಎಡಗೈಯಿಂದ ಅರವಿಂದನ ತೋಳನ್ನು ಹಿಡಿದುಕೊಳ್ಳಲು ಹೋದಳು. ಮಗುವಿನ ತಲೆಗೆ ಯಾವ ಆಧಾರವೂ ಇಲ್ಲದಂತಾಗಿ ಹಿಮ್ಮೀಟಿದಂತಾಗಿ ಜೋರಾಗಿ ಅಳತೊಡಗಿತು.
ಗುರುಪ್ರಸಾದ್ ಕಾಗಿನೆಲೆ ಬರೆದ ನೀಳ್ಗತೆ “ಥ್ಯಾಂಕ್ಸ್‌ಗಿವಿಂಗ್”ನ ಕೊನೆಯ ಕಂತು ನಿಮ್ಮ ಓದಿಗಾಗಿ
ವಿಶೂ ‘ಅಮ್ಮ, ಡ್ಯಾಡಿ. ಏಳಿ. ನಿಮಗೆ ತುಂಬಾ ನಿದ್ರೆ. ಎಬ್ಬಿಸೋಣ ಅಂದರೆ, ವಿನಯನೇ ಬೇಡ ಅಂದ.’ ಎಂದು ಅರವಿಂದ, ಸುಕನ್ಯಾರನ್ನು ಎಬ್ಬಿಸುತ್ತಿದ್ದ. ಸುಕನ್ಯಾ ಧಡಕ್ಕನೆ ಎದ್ದಳು. ಯಾರೋ ಮೈಮೇಲೆ ಒಂದು ಬಿಳೀ ಚಾದರವನ್ನೂ ಹೊದಿಸಿದ್ದಾರೆ. ಎದ್ದು ಕಣ್ಣುಜ್ಜಿಕೊಂಡು ನೋಡಿದರೆ ಗಂಟೆ ಎಂಟೂವರೆ. ಪಕ್ಕದಲ್ಲಿ ಅರವಿಂದ ಇನ್ನೂ ನಿದ್ದೆ ಮಾಡಿದ್ದಾನೆ.
‘ಅಲಿಶಾಗೆ ಏನಾಯ್ತೋ. ಎಬ್ಬಿಸಬಾರದಾ? ರೀ, ಏಳೀ. ಬೆಳಿಗ್ಗೆ ಎಂಟೂವರೆ ಆಯ್ತು. ಇಲ್ಲಿ ಮಲಗೋಕೆ ಬಂದವೇನೋ, ನಾವು.?’ ಧಡ್ ಎಂದು ಎದ್ದಾಗ ತಲೆ ಏಕ್‍ದಂ ಜೋಲಿ ಹೊಡೆದಹಾಗಾಗಿ ರಿಕ್ಲೈನರ್ ಮೇಲೇ ಧಪ್ ಎಂದು ಕೂತಳು.
‘ಅಮ್ಮಾ ನಿಧಾನ. ಹುಷಾರಾಗಿದೀ ತಾನೆ. ಅಲಿಶಾ ಆರಾಮಾಗೇ ಇದಾಳೆ. ಅವಳಿಗೆ ಹೆಣ್ಣು ಮಗು. ಬಂದ ಅರ್ಧಗಂಟೆಯಲ್ಲಿಯೇ ಆಯಿತು. ಈಗ ರೂಮಿಗೆ ಕರಕೊಂಡು ಬಂದಿದಾರೆ. ಮಗೂ ಕೂಡ ಆರಾಮಾಗಿದೆ. ಇಂಕ್ಯುಬೇಟರ್ ಏನೂ ಬೇಡ ಅಂತ ಡಾಕ್ಟರ್ ಹೇಳಿದಾರೆ. ಪಾಪೂ ಅಲಿಶಾ ರೂಮಲ್ಲಿಯೇ ಇದೆ. ನೀವು ಹೋಗಿ ನೋಡಿ. ನಾವು ಕೊಂಚ ಮನೇಗೆ ಹೋಗಿ ಸ್ನಾನ ಮಾಡಿ ಬರ್ತೀವಿ’ ಎಂದು ವಿಶೂ, ಸುಪ್ರೀತ ಇಬ್ಬರೂ ಮನೆಗೆ ಹೊರಡಲು ಅನುವಾದರು.
ಅರವಿಂದನೂ ಧಡಬಡ ಮಾಡಿಕೊಂಡೇ ಎದ್ದ. ಸುಪ್ರೀತ, ವಿಶೂ ಒಳಗೆ ಹೋಗುವತನಕ ಕಾದಿದ್ದು ನಂತರ ಮತ್ತೆ ಎದ್ದು ನಿಲ್ಲಲು ಪ್ರಯತ್ನಿಸಿದಳು. ಮತ್ತೆ ಕಾಲು ಕುಸಿದಹಾಗನಿಸಿತು. ಐದು ನಿಮಿಷ ಸುಧಾರಿಸಿಕೊಂಡು, ನಿಧಾನವಾಗಿ ಎದ್ದು, ಅರವಿಂದನ ತೋಳು ಹಿಡಿದು ಅಲಿಶಾ ಇದ್ದ ರೂಮಿಗೆ ನಡೆದಳು.
‘ಮಗೂ ಹುಷಾರಾಗಿದೆಯಂತಾ?’
‘ನನಗೇನು ಗೊತ್ತೇ, ನನಗೂ ನಿದ್ರೆ ಬಂದುಬಿಟ್ಟಿತ್ತು.’
‘ಥೂ ಎಂಥ ಅಸಹ್ಯಾರಿ. ಇಲ್ಲಿ ಬಂದು ಆಸ್ಪತ್ರೆ ವೈಟಿಂಗ್ ರೂಮಲ್ಲಿ ಐದುಗಂಟೆ ನಿದ್ರೆ ಮಾಡೋದು ಅಂದರೆ. ನೋಡಿದವರು ಏನು ತಿಳ್ಕೊಂಡಾರು. ಯಾರೋ ಪುಣ್ಯಾತ್ಮರು ಬೆಡ್‌ಶೀಟು ಬೇರೆ ಹೊದಿಸಿದ್ದರು.’
‘ಅಯ್ಯೋ, ಹೋಗ್ಲಿಬಿಡು. ಅದು ಹೆರಿಗೆ ಕೋಣೆಯ ವೈಟಿಂಗ್ ರೂಮು. ಅಲ್ಲಿ ಜನ ಬಹಳ ಹೊತ್ತು ಕಾಯ್ತಾರೆ. ನಿದ್ರೆ ಬಂದವರೆ ಮಲಗಲಿ ಅಂತ ತಾನೇ ರಿಕ್ಲೈನರ್‍ಗಳನ್ನು ಇಟ್ಟಿರೋದು. ನೀನೇನು ಯೋಚನೇ ಮಾಡಬೇಡ. ನಡಿ’
ಒಳಗೆ ಅಲಿಶಾಳ ಕೋಣೆಗೆ ಹೋದಾಗ ಅಲಿಶಾಳಿಗೂ ಪೂರ್ಣ ಎಚ್ಚರವಾಗಿತ್ತು. ವಿನಯ ಅಲ್ಲಿಯೇ ಪಕ್ಕದಲ್ಲಿದ್ದವನು ‘ಬಾ ಅಮ್ಮಾ, ಬಾ. ಇಲ್ಲಿ ನೋಡು, ನಿನ್ನ ಮೊಮ್ಮಗಳು, ಗೌರಿ. ಎಲ್ಲ ಏನೂ ತೊಂದರೆಯಿಲ್ಲದ ಹಾಗೆ ಆಯಿತು.’ ಎಂದ. ಸುಕನ್ಯಾ ಮೊಮ್ಮಗಳನ್ನು ನೋಡಿದಳು. ನೀಲಿ ಕಣ್ಣುಗಳು, ನಾಲ್ಕೇ ನಾಲ್ಕು ಕೆಂಚು ಕೂದಲು. ಕೆಂಪಗೆ ಅಲಿಶಾಳ ಬಣ್ಣವೇ ಇತ್ತು. ಐದುವಾರ ಮುಂಚೆ ಹುಟ್ಟಿದ್ದರೂ ದುಂಡು ದುಂಡಗಿತ್ತು, ಮಗು.
ವಿನಯ ತನ್ನ ಫೋನಿನಲ್ಲಿ ಎಲ್ಲರಿಗೂ ಮೆಸೇಜು, ಇಮೈಲು ಮಾಡುತ್ತಿದ್ದ. ವಿಶೂ, ಸುಪ್ರೀತ ಇಬ್ಬರೂ ಬಂದು ಮಗುವಿನ ಜತೆ ಫೊಟೋ ತೆಗೆಸಿಕೊಂಡಿದ್ದರು. ಅವರ ಫೋಟೋಗಳನ್ನು ಫೇಸ್‌ಬುಕ್ಕಿಗೆ ಹಾಕಿದ್ದನ್ನು ವಿನಯ ಅಲಿಶಾಳಿಗೆ ತೋರಿಸುತ್ತಿದ್ದ.
‘ಇನ್ನೂ ಹಸುಗೂಸು ಕಣೋ. ಅದರ ಫೋಟೋನ ಇಡೀ ಪ್ರಪಂಚಕ್ಕೆ ತೋರಿಸಿಕೊಂಡು ಬರೋದು ತಪ್ಪಲ್ವಾ?’ ಎಂದು ಸುಕನ್ಯಾ ಹೇಳಿದ್ದು ವಿನಯಾ, ಅಲಿಶಾಗೆ ಕೇಳಿಸಿತೊ, ಬಿಟ್ಟಿತೋ ಗೊತ್ತಾಗಲಿಲ್ಲ.
ಅಲಿಶಾ ಸುಸ್ತಾಗಿದ್ದಳು. ಅನೆಸ್ಥೆಷಿಯಾದ ಮಬ್ಬು, ನೋವು ತಿಂದ ಸುಸ್ತು ಮುಖದಲ್ಲಿ ಎದ್ದು ಕಾಣುತ್ತಿತ್ತು. ಪಕ್ಕದಲ್ಲಿಯೇ ಮಲಗಿದ್ದ ಮಗು ಕೊಂಚ ಕುಯ್ ಎಂದಾಗ ಮಗುವನ್ನು ಎದೆಗೆ ಒತ್ತಿಕೊಂಡು ಅರವಿಂದ ಇದ್ದಾನೆ ಎಂಬುದನ್ನೂ ಲಕ್ಷಿಸದೆ ಗೌನು ಸರಿಸಿ, ಮೊಲೆಯೂಡಿಸತೊಡಗಿದಳು. ಆಕೆಗೆ ಕೂರಲೂ ತ್ರಾಣವಿರಲಿಲ್ಲ. ಅರವಿಂದ ಆ ಈ ಕಡೆ ತಿರುಗಿ ಕೊನೆಗೆ ಗೋಡೆಯ ಮೇಲೆ ಹಾಕಿದ್ದ ಪೇಯಿಂಟಿಂಗ್ ನೋಡುತ್ತಾ ನಿಂತ.
ಕ್ರಿಬ್ಬಿನ ಲೇಪು, ಚಾದರಗಳು, ಕಟ್ಟಿದ್ದ ಆಟಿಕೆ, ಮೂಲೆಯಲ್ಲಿ ‘ಇಟ್ ಈಸ್ ಅ ಗರ್ಲ್’ ಎಂದು ಬರೆದಿದ್ದ ಹೀಲಿಯಮ್ ಬಲೂನುಗಳ ಗೊಂಚಲು, ಗೋಡೆಗೆ ಹಾಕಿದ್ದ ಫ್ಲಾಟ್ ಸ್ಕ್ರೀನ್ ಟೀವಿ. ಪಕ್ಕದಲ್ಲಿದ್ದ ಐಸ್‌ಹಾಕಿದ್ದ ನೀರಿನ ದೊಡ್ಡ ಲೋಟ. ಅಲಿಶಾಗೆ ಎಂದು ಆಸ್ಪತ್ರೆಯ ಕೆಫೆಟೇರಿಯಾದಿಂದ ಬಂದಿದ್ದ ಬೇಯಿಸಿದ ಮೊಟ್ಟೆ, ಕಿತ್ತಳೆ ರಸದ ತಿಂಡಿ ತಟ್ಟೆಗಳು- ಯಾವುದೂ ತಾನು ನಿರೀಕ್ಷಿಸಿದ್ದಂತಿರಲಿಲ್ಲ. ಡಯಾಪರಿನ ಜಾಹೀರಾತಿನಲ್ಲಿ ಬರುವ ಬೊಂಬೆಯಂತಿದ್ದ ಪಿಂಕುಪಿಕಾದ ಗೌರಿಗೆ ಏಕ್‌ದಂ ಅಜ್ಜಿಯಾಗಿಬಿಟ್ಟೆ ಅನ್ನಿಸಿತು.
ಗೌರಿ ಬಣ್ಣದಲ್ಲಿ, ರೂಪದಲ್ಲಿ ಅಲಿಶಾಳಂತೆಯೇ, ಕೊಂಚವೂ ವಿನಯನನ್ನು ಹೋಲುತ್ತಿಲ್ಲ. ಏನಿಲ್ಲವಾದರೂ ಕೊಂಚ ವಿನಯನ ಬಣ್ಣವಾದರೂ ಇರುತ್ತದೆ ಅಂದುಕೊಂಡಿದ್ದಳು. ಮಗುವನ್ನು ಎತ್ತಿಕೊಳ್ಳಬೇಕೋ ಬಿಡಬೇಕೋ ಗೊತ್ತಾಗದೇ ಕಕ್ಕಾಬಿಕ್ಕಿಯಾದಳು.
ಅಲಿಶಾ ಇಬ್ಬರ ಕಸಿವಿಸಿಯನ್ನು ಗಮನಿಸಿದವಳಂತೆ ಒಂದು ಟವಲನ್ನು ಮೈಮೇಲೆ ಹಾಕಿಕೊಂಡು ‘ಅಮ್ಮ ಇವತ್ತು ಥ್ಯಾಂಕ್ಸ್ ಗಿವಿಂಗು. ನಿಮ್ಮ ಎಲ್ಲ ಪ್ಲಾನುಗಳೂ ಉಲ್ಟಾ ಆಗಿಬಿಟ್ಟವು’ ಎಂದಳು.
‘ಹಾಗ್ಯಾಕಂತೀಯಾ, ಅಲಿಶಾ. ಈ ನಂ ಪುಟ್ಟ ಗೌರೀಗೆ ಅಜ್ಜೀನ ನೋಡೋಕೆ ಅರ್ಜೆಂಟನಿಸುತ್ತೆ. ನಾನು ನಿಮ್ಮನೇಗೆ ಬರೋದಕ್ಕೆ ಅನುಮಾನ ಮಾಡ್ತೀನಂತ ಅವಳೇ ನಮ್ಮನೇಗೆ ಬಂದುಬಿಟ್ಟಳು. ಗೌರಿ ಅಂತ ಒಳ್ಳೆ ಹೆಸರಿಟ್ಟಿದೀರ. ಕರೆಯೋದಕ್ಕೆ ಖುಷಿಯಾಗುತ್ತೆ, ನೋಡು.’
‘ಎತ್ಕೋತೀರಾ ಮಾ? ಹಾಗೇ ಮಲಗಿದ್ದಾಳೆ. ಇನ್ನೂ ಚೀಪೋಕ್ಕೆ ಆಗುತ್ತಾ ಇಲ್ಲ. ಸುಮ್ಮನೆ ಚಪಲ ಅಷ್ಟೇ. ನಾನು ಬಾತ್‌ರೂಮಿಗೆ ಹೋಗಬೇಕು’ ಎಂದಳು.
‘ಡ್ಯಾಡಿ. ಪಕ್ಕದಲ್ಲಿ ಇನ್ನೊಂದು ರೂಮಿದೆ. ಅಲ್ಲಿ ಬೇಕಿದ್ದರೆ ಮಲಗಿಕೊಳ್ಳಿ’ ಎಂದಾಗ ಅರವಿಂದ ‘ಇಲ್ಲ, ಇಲ್ಲ. ಇಲ್ಲೀತನಕ ನಿದ್ದೆ ಮಾಡಿದ್ದಾಯಿತು’ ಎಂದು ಅಲ್ಲಿಯೇ ಇದ್ದ ಬೆಂಚಿನ ಮೇಲೆ ಕೂತ.
ಸುಕನ್ಯ ಬಂದು ‘ನಿಮಗೆ ಸುಳಿವು, ಸೂಕ್ಷ್ಮ ಗೊತ್ತಾಗೊಲ್ಲ. ಆಕೆಗೆ ಈಗ ತಾನೆ ಸಿಸೇರಿಯನ್ ಆಗಿದೆ. ಬಾತ್‌ರೂಮಿನ ತನಕ ನಡೆಯೋಕೆ ಆಗಲ್ಲ. ಬೆಡ್‌ಪ್ಯಾನ್ ಕೊಡಬೇಕೆನ್ನಿಸುತ್ತೆ. ನೀವು ಪಕ್ಕದ ರೂಮಲ್ಲಿ ಇರಿ. ಮಗೂನ ನೀ ಇಲ್ಲಿ ಕೊಡಮ್ಮ, ಅಲಿಶಾ. ನಾ ಎತ್ಕೊಂಡ್ತೀನಿ’ ಎಂದು ಮಗುವನ್ನು ಎತ್ತಿಕೊಳ್ಳುವುದಕ್ಕೆ ಹೋದಳು.
‘ತಲೆ ಹುಷಾರು, ಅಮ್ಮ. ನಿನ್ನ ತೋಳನ್ನು ತಲೆ ಹತ್ತಿರ ಅವುಚಿಸಿಕೋ’ ಎಂದ ವಿನಯ, ಸುಕನ್ಯಾಳನ್ನೇ ಗಮನಿಸುತ್ತಾ.
‘ನಿಮ್ಮಿಬ್ಬರನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡಿದ್ದೀನಿ ಕಣೋ. ಕೊಡಿಲ್ಲಿ’ ಎನ್ನುತ್ತಾ ಮಗುವನ್ನು ಎತ್ತಿಕೊಂಡಳು, ಸುಕನ್ಯಾ. ಹೊರಗೆ ಹೋಗುತ್ತಾ ಒಂದು ಕೈಯಿಂದ ರೂಮಿನ ಬಾಗಿಲನ್ನು ಮುಂದೆ ಎಳೆದುಕೊಳ್ಳುವುದಕ್ಕೆ ಪ್ರಯತ್ನಿಸಿದಳು.
ಎಲ್ಲರೂ ನೋಡುತ್ತಾ ಇದ್ದಂತೆ ಮುಂದೆ ಧಡ್ ಎಂದು ಜೋರಾಗಿ ಕಾರ್ಪೆಟ್ಟನ್ನು ಎಡವಿದಳು. ಮಗುವನ್ನು ಒಂದು ಕೈಯಲ್ಲಿ ಇಟ್ಟುಕೊಂಡು ಇನ್ನೊಂದು ಕೈಯಿಂದ ಬಾಗಿಲನ್ನು ಎಳೆದುಕೊಂಡಿದಕ್ಕೋ, ರಾತ್ರಿ ನಿದ್ದೆಗೆಟ್ಟಿದ್ದಕ್ಕೆ ಬಂದಿದ್ದ ತಲೆಸುತ್ತೋ, ಹೊಟ್ಟೆಗಿಲ್ಲದೇ ಆದ ಆಯಾಸವೋ ಅಥವಾ ಹ್ಯಾಂಗೋವರೋ ಒಟ್ಟು ತಲೆ ಗಿಂ ಎಂದು ಬಹಳ ಜೋರಾಗಿ ಚಕ್ಕರ್ ಬಂದು ವಾಂತಿ ಬರುವ ಹಾಗಾಯಿತು. ಇನ್ನು ಒಂದೇ ಒಂದು ಕ್ಷಣ ನಿಂತಿದ್ದರೂ ಬಿದ್ದೇಬಿಡುತ್ತೇನೆ ಎಂದನಿಸಿತು. ಕೈಯಲ್ಲಿ ಹಸುಗೂಸಿದೆ ಎನ್ನುವುದನ್ನೂ ಮರೆತು ಮಗುವಿನ ತಲೆಯನ್ನು ಎದೆಗೆ ಅವುಚಿಸಿಕೊಂಡಿದ್ದ ಎಡಗೈಯಿಂದ ಅರವಿಂದನ ತೋಳನ್ನು ಹಿಡಿದುಕೊಳ್ಳಲು ಹೋದಳು. ಮಗುವಿನ ತಲೆಗೆ ಯಾವ ಆಧಾರವೂ ಇಲ್ಲದಂತಾಗಿ ಹಿಮ್ಮೀಟಿದಂತಾಗಿ ಜೋರಾಗಿ ಅಳತೊಡಗಿತು.
ಇಂಥದ್ದು ಏನಾದರೂ ಆಗುತ್ತದೆ ಎಂದು ಮೊದಲೇ ನಿರೀಕ್ಷಿಸಿದ್ದನೋ ಅಥವಾ ಬಾಗಿಲನ್ನು ಹಿಂದಿನಿಂದ ಹಾಕಿಕೊಳ್ಳಲು ಬಂದಿದ್ದನೋ, ವಿನಯ ಏಕ್‌ದಂ ಮುಂದೆ ಹಾರಿ ಸುಕನ್ಯಾಳನ್ನು, ಮಗುವನ್ನು ತಬ್ಬಿಹಿಡಿದ. ಮಗು ಕಿಟಾರನೆ ಕೂಗಲು ಶುರುಮಾಡಿತು.
‘ವಾಟ್ ದ ಹೆಕ್ ವರ್ ಯು ಥಿಂಕಿಂಗ್? ಅಮ್ಮ..’ ಗೌರಿಯನ್ನು ಸುಕನ್ಯಾಳ ಕೈಯಿಂದ ಇಸಕೊಂಡು ಆಕೆಯನ್ನು ಅಲ್ಲಿಯೇ ಹಾಗೆಯೇ ಗೋಡೆಗೆ ಒರಗಿಸಿ ಕೂಡಿಸಿದ. ತಕ್ಷಣಕ್ಕೆ ಕುರ್ಚಿಯೂ ಸಿಗದಿದ್ದರಿಂದ ಸುಕನ್ಯಾ ಬಾಗಿಲವಾಡದಿಂದ ಕೊಂಚ ಪಕ್ಕಕ್ಕೆ ಸರಿದು ಗೋಡೆಗಾನಿಸಿಕೊಂಡು ನೆಲದ ಮೇಲೆಯೇ ಕೂತಳು.
‘ಮೈ ಗಾಡ್ ಅಮ್ಮ, ಆಗದಿದ್ದರೆ ಆಗಲ್ಲ ಅಂತ ಹೇಳಬೇಕಮ್ಮ. ಹುಟ್ಟಿ ಇನ್ನೂ ಆರುಗಂಟೆಯಾಗಿಲ್ಲ ಮಗುವಿಗೆ. ಏನಾಯ್ತೋ ಏನೋ, ಒಂದೇ ಸಮ ಅಳುತ್ತಿದೆ. ಅಲಿಶಾ, ಎಮೆರ್ಜೆನ್ಸಿ ಕಾಲ್ ಬಟನ್ ಒತ್ತು’ ಎಂದ.
ಅಲಿಶಾ ಕಾಲ್ ಬಟನ್ ಒತ್ತುತ್ತಿದ್ದಂತೆ ಅಲಾರಾಂ ಹೊಡೆದು ಏಳೆಂಟು ಜನ ಡಾಕ್ಟರುಗಳು, ನರ್ಸುಗಳು ಎಲ್ಲರೂ ಧಡ ಧಡ ಬಂದರು. ಸುಕನ್ಯಾ ನೆಲದ ಮೇಲೆ ಕೂತಿದ್ದನ್ನು ನೋಡಿ ಈಕೆಗೇ ಏನಾದರೂ ಆಗಿದೆ ಎಂದು ಆಕೆಯನ್ನು ವಿಚಾರಿಸಲು ಬಂದರು. ಎಲ್ಲರನ್ನೂ ರೂಮಿನ ಒಳಗೆ ಕಳಿಸಿದಳು. ಎದ್ದು ಬೇರೆಕಡೆ ಕೂರಬೇಕು ಎನ್ನಿಸಿದರೂ ಎದ್ದರೆ ಎಲ್ಲಿ ಬಿದ್ದುಬಿಡುತ್ತೇನೋ ಎಂದು ಹೆದರಿಕೆಯಾಗಿ ಅಲ್ಲಿಯೇ ಕೂತಿದ್ದಳು.
ವಿನಯ ದೊಡ್ಡಧ್ವನಿಯಲ್ಲಿ ಎಲ್ಲರಿಗೂ ಹೇಳುತ್ತಿದ್ದ ‘ನಮ್ಮಮ್ಮ ಮಗೂನ ಕರಕೊಂಡು ಆಕಡೆ ಹೋಗುತ್ತಿದ್ದರು. ಕೈಕಾಲಲ್ಲಿ ಶಕ್ತಿ ಇಲ್ಲದ ಹಾಗೆ ಕುಸಿದುಬಿಟ್ಟಳು. ನೆಲಕ್ಕೆ ಬೀಳಲಿಲ್ಲ. ಮಗುವಿನ ತಲೆಗೆ ಆಧಾರವಿಲ್ಲದೆ ಹಿಂದಕ್ಕೆ ವಾಲಿತು. ಒಂತರಾ ಹೈಪರೆಕ್ಸ್‌ಟೆಂಡ್ ಆದಹಾಗೆ. ಮಗೂಗೆ ವಿಪ್‌ಲ್ಯಾಶ್ ತರ ಏನಾದರೂ ಆಯ್ತಾ ಅಂತ ನಂಗೆ ಹೆದರಿಕೆ.’
ಎಲ್ಲರೂ ಸುಕನ್ಯಾಳನ್ನೇ ನೋಡುತ್ತಿದ್ದಾಗ ಸುಕನ್ಯಾಳಿಗೆ ಭೂಮಿ ಬಿರಿಯಬಾರದೇ ಅನಿಸಿತು. ಅವಮಾನದಿಂದ ಕುಗ್ಗಿಹೋಗಿದ್ದಳು. ಆದರೂ ಮೇಲೇಳಲಾಗಲಿಲ್ಲ.
ಸುಕನ್ಯಾಳಿಗೆ ಏನಾಯಿತು ಎಂದು ಗೊತ್ತಾಗುವಷ್ಟರಲ್ಲಿ ಏನೇನೋ ಆಗಿಹೋಗಿತ್ತು. ಮಕ್ಕಳ ತಜ್ಞರ ತಂಡವೇ ಅಲ್ಲಿ ಬಂದಿತ್ತು. ಒಬ್ಬ ಡಾಕ್ಟರು ವಿನಯನಿಗೆ ಹೇಳುತ್ತಿದ್ದುದು ಕೇಳಿಸಿತು. ‘ಮಗೂಗೆ ಏನೇನೂ ಆಗಿಲ್ಲ. ನಿಮಗೆ ತುಂಬಾ ಆತಂಕ. ಅಮ್ಮ, ಮಗೂ ಇನ್ನೂ ಮೂರುದಿನ ಆಸ್ಪತ್ರೆಯಲ್ಲಿಯೇ ಇರುತ್ತಾರಲ್ಲ. ಅಬ್ಸರ್ವೇಶನ್ನಲ್ಲಿ ಇಡೋಣ. ಮಗೂ ತಲೇಗೇನಾದರೂ ಪೆಟ್ಟಾಯ್ತಾ? ನಿಮ್ಮ ತಾಯಿ ಹುಷಾರಾಗಿದಾರಾ? ಅವರನ್ನು ಚೆಕ್ ಮಾಡಬೇಕಾ’
‘ಇಲ್ಲ, ಇಲ್ಲ. ನಾನು ಹತ್ತಿರದಲ್ಲಿಯೇ ಇದ್ದೆ. ಪೆಟ್ಟಾಗೋದರಲ್ಲಿತ್ತು. ನಾನು ತಡೆದೆ.’
‘ಸದ್ಯ ಒಳ್ಳೇದು. ಮನೇಗೆ ಹೋದಮೇಲೂ ಸ್ವಲ್ಪ ಹುಷಾರಾಗೇ ಇರಿ. ನಿಮಗೆ ಅನುಮಾನ ಇದ್ದರೆ ನಮ್ಮ ನ್ಯೂರೋಸರ್ಜನ್ನಿಗೆ ಒಂದು ಬಾರಿ ಬಂದು ನೋಡಿಕೊಂಡು ಹೋಗಲಿಕ್ಕೆ ಹೇಳ್ತೀನಿ. ಬೇಕಿದ್ರೆ ಮಗೂ ಕುತ್ತಿಗೇದು ಒಂದು ಎಕ್ಸ್ ರೇ ಮಾಡಿಸಿಬಿಡೋಣ.’
‘ಎಕ್ಸ್ ರೇಲಿ ಏನು ಗೊತ್ತಾಗತ್ತೆ. ಎಮ್‌ಆರ್‌ಐ ಮಾಡಿಸೋದು ಒಳ್ಳೇದಲ್ವಾ.’ ವಿನಯ ಕೇಳಿದ.
‘ಒಂದು ನಿಮಿಷ ನಾನು ನ್ಯೂರೋಸರ್ಜನಿಗೆ ಫೋನು ಮಾಡಿ ಕೇಳುತ್ತೇನೆ’ ಎಂದು ಫೋನು ಮಾಡಲು ಆ ಕಡೆ ಹೋದ. ಸುಕನ್ಯಾಳಿಗೆ ಫೋನಿನ ಸಂಭಾಷಣೆ ಅಸ್ಪಷ್ಟವಾಗಿ ಕೇಳುತ್ತಿತ್ತು. ‘ಮಗೂ ಅಪ್ಪ ರೇಡಿಯಾಲಜಿಸ್ಟ್’ ಎಂದು ಆ ಡಾಕ್ಟರು ಹೇಳಿದ್ದು ಆಕೆಗೆ ಸ್ಪಷ್ಟವಾಗಿ ಕೇಳಿಸಿತ್ತು.
ಐದು ನಿಮಿಷದ ನಂತರ ನ್ಯೂರೋಸರ್ಜನ್ ಬಂದ. ಆತ ಸೀದಾ ಸುಕನ್ಯಾಳ ಎದುರು ಕೂತು ಏನೇನಾಯಿತು ಎಂದು ವಿವರವಾಗಿ ಕೇಳಲು ತೊಡಗಿದ. ಆಕೆ, ಹೂ ಉಹೂ ಬಿಟ್ಟು ಬೇರೆ ಮಾತಾಡಲಾಗಲಿಲ್ಲ. ಆತ ಪ್ರಶ್ನೆಗಳನ್ನು ಕೇಳುತ್ತಿದ್ದಾಗ ತನ್ನನ್ನು ಕಟಕಟೆಯಲ್ಲಿ ನಿಲ್ಲಿಸಿ ವಿಚಾರಣೆ ಮಾಡುತ್ತಿದ್ದಾರೇನೋ ಎನ್ನಿಸಿತು. ತನ್ನ ತಲೆ ಸುತ್ತಿಗೆ ಎಲ್ಲ ಟೆಸ್ಟುಗಳನ್ನೂ ಮಾಡಿ ಏನೇನೂ ತೊಂದರೆ ಇಲ್ಲ ತನಗೆ ಎಂದು ಇದೇ ಡಾಕ್ಟರುಗಳಲ್ಲವಾ ಹೇಳಿದ್ದು. ಈಗತಾನೇ ಹುಟ್ಟಿದ ಮಗುವನ್ನು ಎತ್ತಿಕೊಂಡಾಗ ತಾನು ಜೋಲಿಹೊಡೆದು ಬೀಳುತ್ತೀನಿ ಎಂದು ತನಗೆ ಗೊತ್ತಿದ್ದರೆ ಮಗುವನ್ನು ಎತ್ತಿಕೊಳ್ಳಲು ಹೋಗುತ್ತಿದ್ದನೇ, ನಾನು. ಎಂಥ ರಾದ್ಧಾಂತವಾಗಿ ಹೋಯಿತು.
ಜೋರಾಗಿ ಅತ್ತುಬಿಡೋಣ ಅನ್ನಿಸಿತು. ಬಾತ್‌ರೂಮಿಗೆ ಹೋಗಲು ಅವಸರವಾಗುತ್ತಿತ್ತು. ಎದ್ದುನಿಂತರೆ ಮತ್ತೆಲ್ಲಿ ಬಿದ್ದೇನೋ ಎಂದು ಹಾಗೇ ಕೂತಿದ್ದಳು. ಈ ಒಂದು ಗಂಟೆಯ ಅವಧಿಯಲ್ಲಿ ತಾನು ಅಜ್ಜಿ ಆಗಿದ್ದೀನೋ, ಇಲ್ಲವೋ ಎನ್ನುವುದೂ ಮರೆತುಹೋಗಿತ್ತು.
ಅಲಿಶಾ ಸುಸ್ತಾಗಿದ್ದಳು. ಅನೆಸ್ಥೆಷಿಯಾದ ಮಬ್ಬು, ನೋವು ತಿಂದ ಸುಸ್ತು ಮುಖದಲ್ಲಿ ಎದ್ದು ಕಾಣುತ್ತಿತ್ತು. ಪಕ್ಕದಲ್ಲಿಯೇ ಮಲಗಿದ್ದ ಮಗು ಕೊಂಚ ಕುಯ್ ಎಂದಾಗ ಮಗುವನ್ನು ಎದೆಗೆ ಒತ್ತಿಕೊಂಡು ಅರವಿಂದ ಇದ್ದಾನೆ ಎಂಬುದನ್ನೂ ಲಕ್ಷಿಸದೆ ಗೌನು ಸರಿಸಿ, ಮೊಲೆಯೂಡಿಸತೊಡಗಿದಳು. ಆಕೆಗೆ ಕೂರಲೂ ತ್ರಾಣವಿರಲಿಲ್ಲ. ಅರವಿಂದ ಆ ಈ ಕಡೆ ತಿರುಗಿ ಕೊನೆಗೆ ಗೋಡೆಯ ಮೇಲೆ ಹಾಕಿದ್ದ ಪೇಯಿಂಟಿಂಗ್ ನೋಡುತ್ತಾ ನಿಂತ.
ಡಾಕ್ಟರುಗಳೆಲ್ಲ ಬಂದು ನೋಡಿಕೊಂಡು ಹೋಗಿ ಮಗುವಿಗೆ ಬೇರೆ ಯಾವ ಟೆಸ್ಟಿನ ಅವಶ್ಯಕತೆಯೂ ಇಲ್ಲ ಅಂದು ನಿರ್ಧರಿಸಿ ಮಗುವನ್ನು ಐಸಿಯುನಲ್ಲಿ ಅಬ್ಸರ್ವೇಶನ್‌ಗೆ ಇಡಬೇಕು ಎಂದು ಕರಕೊಂಡು ಹೋದರು. ಅಲಿಶಾ ಅಲ್ಲಿಗೆ ಹೋಗುವ ಅವಶ್ಯಕತೆ ಈಗಿಲ್ಲವೆಂದೂ ಆಗಾಗ್ಗೆ ಹಾಲನ್ನು ಪಂಪು ಮಾಡಿ ಕಳಿಸಿಕೊಡಬೇಕೆಂದೂ ಹೇಳಿದ್ದರು. ಅಲಿಶಾ ಒಂದೇ ಒಂದು ಮಾತಾಡದೇ ಸುಮ್ಮನೆ ಕಣ್ಣು ಮುಚ್ಚಿ ಮಲಗಿದ್ದಳು. ಆಕೆಗೆ ನಿದ್ರೆ ಬಂದಿದೆ ಎಂದುಕೊಂಡು ಮನೆಗೆ ಹೊರಡಲು ಅನುವಾದಳು, ಸುಕನ್ಯಾ.
ವಿನಯ ಹತ್ತಿರ ಬಂದು ಕೈಹಿಡಿದುಕೊಂಡು ಸುಕನ್ಯಾಳನ್ನು ಎತ್ತಿದ. ‘ಅಮ್ಮ ಸಾರಿ. ಮಗೂಗೆ ಏನಾದರೂ ಪೆಟ್ಟಾಯ್ತಾ ಎಂದು ಹೆದರಿ ಡಾಕ್ಟರುಗಳು ಬರಲಿ ಎಂದು ನಾನು ಅಲಿಶಾಳಿಗೆ ಅಲಾರಾಂ ಒತ್ತಲು ಹೇಳಿದ್ದು. ದೊಡ್ಡ ರಾದ್ಧಾಂತವೇ ಆಗಿ ಹೋಯಿತು. ಆಸ್ಪತ್ರೆಯಲ್ಲಿ ಮಗೂಗೆ ಏನಾದರೂ ಹೆಚ್ಚುಕಮ್ಮಿಯಾದ್ರೆ ಅವರ ಜವಾಬ್ದಾರಿ ನೋಡು. ಹಾಗಾಗಿ ಡಾಕ್ಟರುಗಳೂ ಬೇಕೋ ಬೇಡವೋ ಸ್ವಲ್ಪ ಜಾಸ್ತಿಯೇ ಕಾಳಜಿ ವಹಿಸಿನೋಡ್ತಾರೆ. ಅದಕ್ಕೇ ಅವರು ಬಂದು ನಿನ್ನ ಏನೇನೋ ಪ್ರಶ್ನೆಗಳನ್ನೂ ಕೇಳಿದ್ದು. ತಪ್ಪು ತಿಳ್ಕೋಬೇಡ. ಈಗ ಮನೇಗೆ ಹೋಗಿ ಸ್ವಲ್ಪ ಆರಾಮು ಮಾಡು. ನನ್ನ ಸ್ನೇಹಿತ ಯುನಿವರ್ಸಿಟಿಯಲ್ಲಿ ಕಾರ್ಡಿಯಾಲಜಿ ಪ್ರೊಫೆಸರು. ಅವನಿಗೆ ಫೋನು ಮಾಡಿ ಹೇಳ್ತೀನಿ. ಸ್ವಲ್ಪ ಎಲ್ಲ ಸೆಟಲ್ ಆದ ಮೇಲೆ ಹೋಗಿ ಅವನ ಹತ್ತಿರ ತೋರಿಸಿಕೊ. ಯಾಕೆ ಹೀಗೆ ನಿನಗೆ ತಲೆಸುತ್ತು ಬರ್ತಿದೆ ಅಂತ ಗೊತ್ತಾಗಬೇಕು.’
‘ಎಲ್ಲ ಟೆಸ್ಟುಗಳೂ ಆಯಿತೋ’ ಸುಕನ್ಯಾ ಕ್ಷೀಣವಾದ ಧ್ವನಿಯಲ್ಲಿ ಹೇಳಿದಳು.
‘ನಾಟ್ ಎನಫ್. ನಾನು ಎಲ್ಲ ನೋಡ್ಕೋತೀನಿ. ನೀನು ಈಗ ಮನೇಗೆ ಹೋಗು.’
*****
ಅರವಿಂದ ವಾಪಸ್ಸು ಮನೆಗೆ ಹೋಗುವಾಗ ಕಾರು ಡ್ರೈವ್ ಮಾಡುತ್ತಿದ್ದಾಗ ಬಲಗೈಯಿಂದ ಸುಕನ್ಯಾಳ ಎಡಗೈಯನ್ನು ಭದ್ರವಾಗಿ ಹಿಡಿದಿದ್ದ.
ಸುಕನ್ಯಾ ‘ರೀ’ ಎಂದಳು.
ಅರವಿಂದ ಸುಮ್ಮನೆ ನೋಡಿದ.
‘ನನ್ನಿಂದ ದೊಡ್ಡ ತಪ್ಪಾಗಿಹೋಯಿತು ರೀ. ನನಗೆ ಈ ತರ ಬಹಳ ಸಾರಿ ಆಗಿದೆ. ಟೆಸ್ಟುಗಳೆಲ್ಲಾ ನೆಗಟೀವ್ ಬಂತು ಅಂತ ನಾನು ನಿಮಗೂ ಹೇಳಿರಲಿಲ್ಲ. ಮಗೂ ಎತ್ತಿಕೊಳ್ಳೋ ಆಸೆ. ಏನೋ ಮಾಡಕ್ಕೆ ಹೋಗಿ ಏನೋ ಆಗಿಹೋಯಿತು.’
‘ಸುಕನ್ಯಾ ಆಗಿಹೋಗಿದ್ದರ ಬಗ್ಗೆ ಯೋಚಿಸುವುದು ಉಪಯೋಗವಿಲ್ಲ’ ಎಂದು ಶುಷ್ಕವಾಗಿ ನಕ್ಕ.
ಕಾರು ಮನೆಯ ಹತ್ತಿರ ಬಂದಾಗ ಒಂದು ಕಡೆ ಪಕ್ಕದಲ್ಲಿ ನಿಲ್ಲಿಸಿ, ಸುಕನ್ಯಾಳ ಹತ್ತಿರ ಬಂದು ಕೆನ್ನೆಗೊಂದು ಮುತ್ತಿಟ್ಟು ‘ನನ್ನ ಸ್ನೇಹಿತ ಒಬ್ಬ ಹೇಳುತ್ತಿದ್ದ. ಆತ ಅಫ್ ಕೋರ್ಸ್ ಬಿಳಿಯ. ಮೊದಲೇ ಹೇಳಿಬಿಡ್ತೀನಿ. ಹದಿಹರೆಯದಲ್ಲಿ ಮಕ್ಕಳನ್ನು ಬೆಳೆಸೋದು ಕಷ್ಟ ಎಂದುಕೊಂಡಿದ್ದರೆ ಮಕ್ಕಳು ಬೆಳೆದು ಅವರ ಸಂಸಾರ ದೊಡ್ಡದಾಗುವ ತನಕ ಕಾದುನೋಡು. ಅಷ್ಟು ಹೊತ್ತಿಗೆ ನಿನಗೂ ಕೈಕಾಲು ನಡುಗುತ್ತಾ ಇರುತ್ತೆ. ಅನುಕಂಪ, ಔದಾರ್ಯ, ಪ್ರೀತಿಯ ಹೆಸರಿನಲ್ಲಿ ನಿನ್ನ ಬದುಕನ್ನು ಅವುಗಳು ಕಂಟ್ರೋಲು ಮಾಡುತ್ತಾವಲ್ಲ ಆಗ ನಿಜವಾದ ಕಷ್ಟ ಏನು ಅಂತ ಅರ್ಥ ಆಗುತ್ತೆ, ಅಂತ. ಈಗ ಕೊಂಚ ಅನುಭವವಾಗುತ್ತಾ ಇದೆ, ನಮಗೂ.’
‘ಮಕ್ಕಳದೇನು ತಪ್ಪು, ಇದರಲ್ಲಿ. ನಾನು ಹೇಳಬೇಕಿತ್ತಲ್ಲವಾ. ವಿನಯನಿಗೆ. ಅಥವಾ ನಾನು ಇನ್ನೂ ಕೊಂಚ ಎಚ್ಚರಿಕೆ ತೆಗೆದುಕೊಳ್ಳಬೇಕಾಗಿತ್ತು, ಮಗುವನ್ನು ಎತ್ತಿಕೊಳ್ಳುವ ಮುಂಚೆ.’
‘ಅದೆಲ್ಲ ಇರಲಿ. ಒಂದು ವಿಷಯ ಮಾತ್ರ ಪಕ್ಕಾ ಮಾಡ್ಕೋ. ನಿನ್ನ ಮಗನ ಬೇಬಿಸಿಟ್ಟರ್‌ಗಳ ಪಟ್ಟಿಯಿಂದ ನೀನಂತೂ ಔಟು’ ಎಂದು ನಕ್ಕ.
ಸುಕನ್ಯಾಳಿಗೂ ಇದು ಅರಿವಾಗಿದ್ದರೂ ಬೇಬಿಸಿಟರ್ ಪಟ್ಟಿ ಎಂದಾಗ ನಗು ಬಂತು.
ಮನೆ ತಲುಪಿದಾಗ ಮಧ್ಯಾಹ್ನ ಎರಡುಗಂಟೆಯಾಗಿತ್ತು.
ಸುಪ್ರೀತ ‘ಹಾಯ್ ಆಂಟಿ’ ಎಂದು ಬಂದು ಬಾಗಿಲು ತೆಗೆದ. ಕೈ ನೆಕ್ಕುತ್ತಿದ್ದ. ಅಡುಗೆಮನೆಯ ಒಳಗಿಂದ ದೋಸೆಯ ವಾಸನೆ ಬಂತು. ವಿಶೂ ‘ಅಮ್ಮಾ, ಡ್ಯಾಡಿ. ಬನ್ನಿ, ಬನ್ನಿ. ಇದು ಸೆಲಬ್ರೇಶನ್ ಟೈಮ್. ನಾನು ಚಿಕ್ಕಪ್ಪ ಆದೆ. ರತ್ನಂಗೆ ಪಾಪ ಸುಸ್ತಾಗಿತ್ತು ಅನ್ನಿಸುತ್ತೆ. ಜ್ವರ ಬಂದಿರಬೇಕು. ಅವಳ ರೂಮಿನಲ್ಲಿ ಮಲಗಿದ್ದಾಳೆ. ನಾನು ಇಂಥ ಒಳ್ಳೆ ದೋಸೆ ಮಾಡ್ತೀನಿ ಅಂತ ನನಗೇ ಗೊತ್ತಿರಲಿಲ್ಲ. ಒಂದು ದೋಸೇನ ರತ್ನ ಮಾಡಿಕೊಟ್ಟಳು. ಆಮೇಲೆ ಅಷ್ಟೂ ನಾನೇ ಮಾಡಿದೆ. ಸುಪ್ರೀತ ಜೀವನದಲ್ಲಿಯೇ ಇಂಥ ಒಳ್ಳೆ ದೋಸೆ ತಿಂದಿರಲಿಲ್ಲ ಅನ್ನಿಸುತ್ತೆ. ಹೇಗಿದೆ ಸುಪ್ರೀತ, ನನ್ನ ದೋಸೆ?’
‘ಮ್.. ಮ್.. ಫಿಂಗರ್ ಲಿಕಿಂಗ್ ಗುಡ್’ ಎಂದು ಇನ್ನೊಮ್ಮೆ ಬೆರಳನ್ನು ನೆಕ್ಕಿದ. ‘ಮಾ… ನಂಗೆ ಮಾಮಿ ಯಾವಾಗಲೂ ಹೇಳುತ್ತಿದ್ದಳು. ದೋಸಾ ಎಲ್ಲ ಕೈಯಲ್ಲಿ ತಿನ್ನಬೇಕು ಅಂತ. ಇವತ್ತು ನನಗೆ ಗೊತ್ತಾಯಿತು, ನೋಡಿ’ ಎಂದ. ದೋಸೆ ತಿನ್ನುವ ಭರದಲ್ಲಿ ತಾನು ಸುಪ್ರೀತನಿಗೂ ‘ಮಾ’ ಆಗಿದ್ದು ಯಾಕೋ ಹಿತವೆನಿಸಿತು.
‘ಅಮ್ಮಾ, ಬೇಗ ಸ್ನಾನ ಮಾಡಿ ಬನ್ನಿ. ನಾನು ನಿಮಗೆ ದೋಸೆ ಮಾಡಿಕೊಡ್ತೀನಿ. ನಾವು ಬ್ಲಾಕ್ ಫ್ರೈಡೇ ಶಾಪಿಂಗಿಗೆ ಹೋಗಬೇಕು. ಎಲ್ಲ ಅಂಗಡಿಗಳು ಸಂಜೆ ಐದುಗಂಟೆಗೆಲ್ಲ ಬಾಗಿಲು ತೆಗೆಯುತ್ತವೆ.’ ಎಂದ, ಉತ್ಸಾಹದಿಂದ, ವಿಶೂ.
ಅರವಿಂದ ‘ವಿಶೂ. ನೀವು ನಿಮ್ಮ ಕೆಲಸ ಏನಿದೆಯೋ ಮಾಡಿಕೊಳ್ಳಿ. ನನಗೆ ಈಗ ಹಸಿವಿಲ್ಲ. ನಾನು ಆಮೇಲೆ ಊಟ ಮಾಡ್ತೀನಿ. ಈಗ ಒಂದು ಗಂಟೆ ಮಲಗುತ್ತೀನಿ’ ಎಂದು ತನ್ನ ರೂಮಿಗೆ ಹೋದ.
ಸುಕನ್ಯಾ ನೇರವಾಗಿ ರತ್ನಾಳ ರೂಮಿಗೆ ಹೋದಳು. ರತ್ನಾ ಮಲಗಿದ್ದಳು. ಪಕ್ಕದ ಕಾಫಿ ಟೇಬಲ್ಲಿನ ಮೇಲೆ ಆಕೆ ಕುಡಿದಿಟ್ಟಿದ್ದ ನೀರಿನ ಲೋಟವಿತ್ತು. ಒಂದು ನಿಮಿಷ ಅಲ್ಲಿಯೇ ಕುರ್ಚಿಯಲ್ಲಿ ಕೂತಳು, ಸುಕನ್ಯಾ.
ವಿನಯ ವಿಶೂಗೆ ಅಥವಾ ಮನೆಗೆ ಇನ್ನೂ ಫೋನು ಮಾಡಿ ಆಸ್ಪತ್ರೆಯ ಘಟನೆಯನ್ನು ಹೇಳಿದಂತಿಲ್ಲ ಅನಿಸಿತು. ರತ್ನಾಳಿಗೆ ಏನಾದರೂ ದಾರಿ ತೋರಿಸಬೇಕು. ಆಕೆ ಇಲ್ಲಿ ನನ್ನ ಜತೆ ಬಂದು ಕೂತಿದ್ದಾಳೆ. ಆಕೆಯ ಮುಂದಿನ ಜೀವನದ ಬಗ್ಗೆ ನಾವು ಯೋಚನೆ ಮಾಡಲೇ ಇಲ್ಲ, ನಾವು ಎಷ್ಟು ದಿನ ಇರುತ್ತೀವಿ. ಪಾಪ, ಆಕೆ ಈ ಕಾಣದ ದೇಶದಲ್ಲಿ ಒಬ್ಬಳೇ ಇದ್ದುಗೊಂಡು ಏನು ಮಾಡುತ್ತಾಳೆ. ಅವಳಿಗೇನು ಕಡಿಮೆ ವಯಸ್ಸಾಯಿತೇ?
ಏನು ಮಾಡುತ್ತಿದ್ದೀನಿ ಎಂದು ಗೊತ್ತಾಗುವ ಹೊತ್ತಿಗೆ ಆಕೆಯ ಲೋಟವನ್ನು ಸಿಂಕಿನಲ್ಲಿ ಹಾಕಿ ಅಲ್ಲಿಲ್ಲಿ ಬಿದ್ದ ಪಾತ್ರೆಗಳನ್ನು ಜೋಡಿಸಿ ಓರಣವಾಗಿ ಇಡಲು ಶುರುಮಾಡಿದ್ದಳು. ಪಾತ್ರೆಗಳ ಡಣಡಣ ಶಬ್ದಕ್ಕೆ ರತ್ನಳಿಗೆ ಎಚ್ಚರವಾಗಿ ನಾಚಿಕೆಯಾದಂತಾಯಿತು.
‘ಅಮ್ಮಾ. ಏನು ಮಾಡ್ತಾ ಇದ್ದೀರಿ’ ಎಂದು ಎದ್ದು ಬರಲು ಹೋದಳು.
‘ಏನಿಲ್ಲ, ನೀನು ಮಲಕ್ಕೋ. ನಿದ್ರೆ ಮಾಡು’ ಎಂದಳು, ಸುಕನ್ಯಾ ಕುಳಿತಲ್ಲಿಂದಲೇ.
‘ಇಲ್ಲ, ಇಲ್ಲ. ಕೂತ್ಕೊಳಿ ನೀವು. ವಿನಯಂಗೆ ಹೆಣ್ಣು ಮಗೂಂತೆ. ವಿಶೂ ಹೇಳಿದ. ಮಗೂ ಚೆನ್ನಾಗಿದ್ಯಾ? ಯಾರ ಹಾಗಿದೆ. ನಮ್ಮ ವಿನಯನ ಹಾಗಿದೆಯಾ?’ ಕೇಳಿದಳು.
‘ಮಗೂ ಚೆನ್ನಾಗಿದೆ. ಮಗೂ ಇಬ್ಬರನ್ನೂ ಹೋಲುತ್ತೆ ಅನ್ನಿಸುತ್ತೆ. ಅಪ್ಪ, ಅಮ್ಮ ಅಲ್ಲವಾ? ಯಾಕೆ ಹುಷಾರಿಲ್ಲವಾ. ಮಾತ್ರೆ ತಗೋಬೇಕಿತ್ತು. ವಿಶೂಗೆ ದೋಸೆ ಮಾಡಿಕೊಟ್ಯಂತೆ. ಬಹಳ ಚೆನ್ನಾಗಿದೆ ಅಂತ ಇಬ್ಬರೂ ತಿನ್ನುತ್ತಾ ಕೂತಿದ್ದರು.’
‘ನನಗೆಲ್ಲಿ ಮಾಡೋಕೆ ಬಿಡ್ತಾರೆ, ಅವರಿಬ್ಬರು. ಮಾಡೋದು ಹೇಳಿಸಿಕೊಂಡು ಅವರೇ ಮಾಡಿಕೋತೀವಿ ಅಂದರು. ನಾನು ಮಾಡಿಕೊಳ್ಳಲಿ ಅಂತ ಬಿಟ್ಟೆ. ಅವರಿಬ್ಬರೂ ಒಬ್ಬರಿಗೊಬ್ಬರು ಮಾಡಿಕೊಟ್ಟರು ಅನ್ನಿಸುತ್ತೆ. ಚೆನ್ನಾಗಿ ಹೊಂದಾಣಿಕೆ ಮಾಡಿಕೋತಾರೆ, ಇಬ್ಬರು. ಫಸ್ಟ್‌ಕ್ಲಾಸ್ ಸಂಸಾರ ಮಾಡ್ತಾರೆ, ನೀವೇನೂ ಯೋಚನೆ ಮಾಡೋ ಗೋಜೇ ಇಲ್ಲ’ ಎಂದಳು, ನೇರವಾಗಿ ಸುಕನ್ಯಾಳನ್ನು ನೋಡುತ್ತಾ. ನೇರವಾಗಿ ಕಣ್ಣಲ್ಲಿ ಕಣ್ಣಿಟ್ಟು ಏನೇ ಮಾತಾಡಿದರೂ ಆ ಮಾತಿಗೆ ಬೇರೆಯೇ ಅರ್ಥ ಇರುತ್ತದೆ ಎಂಬುದನ್ನು ಅರಿತವಳಂತೆ.
‘ಏನು ಹೊಂದಾಣಿಕೆ ಮಾಡಿಕೋತಾರೋ, ಏನೋ ರತ್ನಾ. ಇಬ್ಬರು ಗಂಡಸರು ಸೇರಿ ಸಂಸಾರ ಮಾಡೋದುಂಟೇನೇ’ ತಾನು ರತ್ನಾಳಿಂದ ಮುಚ್ಚಿಡಬೇಕು, ಅವಳಿಗರ್ಥವಾಗದ ಯಾವುದೋ ಪ್ರಪಂಚದ ವಿಷಯ ಎಂದೆಲ್ಲ ಅಂದುಕೊಂಡದ್ದು ಈಗ ಇದ್ದಕ್ಕಿದ್ದಂತೆ ಕೇವಲ ರತ್ನಾಳ ಈ ಒಂದೇ ಒಂದು ಮಾತಿನಿಂದ ಪಟ್ಟಾಂಗ ಹೊಡೆಯುವ ವಿಷಯವಾಗಿಬಿಟ್ಟಿತು ಎಂದೆನಿಸಿ ಹಗುರೆನಿಸಿತು, ಸುಕನ್ಯಾಳಿಗೆ.
‘ಇಂಡಿಯಾಕ್ಕೆ ಹೋಗೋ ವಿಷಯ ಏನು ನಿರ್ಧಾರ ಮಾಡಿದಿರಿ?’
‘ಹೋಗೋಣ ಅನ್ನಿಸ್ತಾ ಇದೆ. ಇಲ್ಲಿ ಅಲಿಶಾ ಅರ್ಥ ಮಾಡ್ಕೋತಾಳೆ. ಮತ್ತೆ ಶಾರದತ್ತೆಗೆ ಈ ಸಮಯದಲ್ಲಿ ನಾನಿಲ್ಲದೇ ಹೋದರೆ ಚೆನ್ನಾಗಿರೊಲ್ಲ.’
‘ಹೋಗಿ ಒಂದಿಷ್ಟು ದಿನ ಇದ್ದು ಬನ್ನಿ. ನಿಮಗೂ ಒಂತರಾ ಬದಲಾವಣೆ ಇರುತ್ತೆ. ಮಕ್ಕಳು ದೊಡ್ಡವರಾಗಿದಾರೆ. ಇವೆಲ್ಲವನ್ನೂ ಒಂದಿಷ್ಟು ದಿನ ಬಿಟ್ಬಿಡಿ ಅಮ್ಮ.’ ಎಂದಳು, ರತ್ನ.
ರತ್ನ ಯಾವ ವಿಷಯವನ್ನು ಕುರಿತು ಮಾತಾಡುತ್ತಿದ್ದಾಳೆ ಎಂದು ಸುಕನ್ಯಾಳಿಗೆ ಅಂದಾಜಾಗಲಿಲ್ಲ. ಏನನ್ನು ಬಿಟ್ಟುಬಿಡುವುದು? ಈ ಸಂಸಾರವನ್ನೇ? ತನಗೆ ವಿನೂ, ವಿಶೂರ ಪ್ರಪಂಚ ಯಾವತ್ತಾದರೂ ಪೂರ ಅರ್ಥವಾಗುತ್ತದೆಯಾ? ತನಗೆಂದೂ ಅರ್ಥವಾಗದ ಈ ಲಂಘನವೇ ನಾಗರಿಕತೆಯ ಲಕ್ಷಣವಾ? ಯಾರಿಗೂ ವಾಮನನಂತೆ ದಾಪುಗಾಲಿಟ್ಟು ಒಂದೇ ಹೆಜ್ಜೆಗೆ ಸಪ್ತಸಮುದ್ರ ದಾಟಲು ಸಾಧ್ಯವೇ ಇಲ್ಲ. ಪುಟ್ಟ ಪುಟ್ಟ ಹೆಜ್ಜೆಯಿಡಬೇಕು. ವಿಶೂ, ವಿನಯ ಇಲ್ಲಿ ಪುಟ್ಟಪುಟ್ಟ ಹೆಜ್ಜೆ ಇಟ್ಟುಕೊಂಡೇ ಬೆಳೆದವರು. ಹಾಗೆಯೇ ರತ್ನ ಅಥವಾ ಅವಳು ಹೇಳುವ ಇಂಡಿಯಾ ಕೂಡ ಪುಟ್ಟ ಪುಟ್ಟ ಹೆಜ್ಜೆ ಇಟ್ಟುಕೊಂಡು ಬಹಳ ದೂರ ಹೋದಂತಿದೆ. ತಾನು ಮಾತ್ರ ಯಾವತ್ತು ಬಿಟ್ಟೆನೋ ಅಲ್ಲಿಯೇ ಇದ್ದೇನೆ. ತಾನು ವಿನೂ, ವಿಶೂರ ಪ್ರಪಂಚಕ್ಕೆ ಹಾರಬೇಕಾಗಿದೆ. ಈ ಲಂಘನದ ಮೊದಲ ಹೆಜ್ಜೆ ಭಾರತದಲ್ಲಿದೆಯಾ?
‘ನೀನು ಸ್ವಲ್ಪ ಸುಧಾರಿಸಿಕೊ. ನಾನು ಸ್ನಾನ ಮಾಡಿಬರುತ್ತೀನಿ’ ಎಂದು ಮನೆಯೊಳಗೆ ಬಂದು ವಿಶೂ ದೋಸೆ ಮಾಡಿಕೊಂಡು ಮತ್ತೆ ದೋಸೆ ಹಿಟ್ಟನ್ನು ಓವನ್ನಿನಲ್ಲಿಯೇ ಇಟ್ಟಿದ್ದಾನಾ. ಇಟ್ಟಿದ್ದರೆ ವಾಪಸ್ ತೆಗೆದು ಫ್ರಿಜ್ಜಿನಲ್ಲಿಡಬೇಕು. ಓವನ್‌ನಲ್ಲಿ ಜಾಸ್ತಿ ಹೊತ್ತಿಟ್ಟರೆ ಹುದುಗು ಜಾಸ್ತಿಯಾದರೆ ಮತ್ತೆ ಸಂಜೆಗೆ ದೋಸೆ ಚೆನ್ನಾಗಿ ಬರುವುದಿಲ್ಲ ಎಂದುಕೊಳ್ಳುತ್ತಾ ಓವನ್ ಬಾಗಿಲು ತೆಗೆದಳು.
ಪಕ್ಕದ ಮನೆಯ ಶೆರಿಲ್ ಕಳಿಸಿದ ಟರ್ಕಿಕೋಳಿ ಕಾಣಿಸಿತು.
(ಮುಕ್ತಾಯ)
ಗುರುಪ್ರಸಾದ್ ಕಾಗಿನೆಲೆ ಹುಟ್ಟಿದ್ದು ಶಿವಮೊಗ್ಗದಲ್ಲಿ. ಮಿನೆಸೊಟಾ ರಾಜ್ಯದ ರಾಚೆಸ್ಟರ್ನಲ್ಲಿ ವಾಸಿಸುತ್ತಿದ್ದಾರೆ. ಸದ್ಯಕ್ಕೆ ಅಮೇರಿಕಾದ ರಾಚೆಸ್ಟರ್ನಲ್ಲಿ ಎಮರ್ಜೆನ್ಸಿ ಮೆಡಿಸಿನ್ ವಿಭಾಗದಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ನಿರ್ಗುಣ, ಶಕುಂತಳಾ (ಕಥಾ ಸಂಗ್ರಹಗಳು), ಆಚೀಚೆಯ ಕಥೆಗಳು (ಸಂಪಾದಿತ ಕಥಾ ಸಂಕಲನ), ವೈದ್ಯ ಮತ್ತೊಬ್ಬ (ಲೇಖನ ಸಂಗ್ರಹ) “ಬಿಳಿಯ ಚಾದರ”, ‘ಹಿಜಾಬ್” (ಕಾದಂಬರಿಗಳು) ಅವರ ಪ್ರಕಟಿತ ಕೃತಿಗಳು.