ಬಾಗಿಲು ತೆರೆಯಿತು. ಒಬ್ಬ ಸಣಕಲು ಮನುಷ್ಯ ಒಳ ಬಂದ. ಮೊದಲ ನೋಟದಲ್ಲೇ ಅವನ ಮೀಸೆ ನನ್ನ ಗಮನ ಸೆಳೆಯಿತು. ನಿಜಕ್ಕೂ ಹೇಳಬೇಕೆಂದರೆ ಅವನ ಮೀಸೆಯಿಂದಲೇ ಅವನು ಎದ್ದು ಕಾಣುತ್ತಿದ್ದ, ಅದಿಲ್ಲದಿದ್ದರೆ ಯಾರೂ ಅವನ ಕಡೆಗೆ ಗಮನ ನೀಡದಂತಿದ್ದ ಆ ವ್ಯಕ್ತಿ. ಅವನು ತನ್ನ ಕೈಸರ್ ವಿಲ್ಹೆಮ್‌ ಮೀಸೆಯನ್ನು ಬೆರಳಿನಿಂದ ತೀಡಿಕೊಳ್ಳುತ್ತ ನನ್ನ ಮಂಚದ ಬಳಿ ಬಂದ. ಅವನ ಹಿಂದೆಯೇ ಒಂದಿಷ್ಟು ಜನರು ಒಳಬಂದರು. ನಾನು ದಿಗ್ಭ್ರಾಂತನಾದೆ. ಅವರು ಯಾರು, ನನ್ನಲ್ಲಿಗೆ ಯಾಕೆ ಬಂದರು ಎಂದು ಅರ್ಥವೇ ಆಗಲಿಲ್ಲ.  ಸಾದತ್‌ ಹಸನ್ ಮಾಂಟೋನ ಕತೆಗಳನ್ನು ಭಾರತಿ ಬಿ.ವಿ  ಅವರು ಕನ್ನಡಕ್ಕೆ ಅನುವಾದಿಸಿದ್ದು ‘ಯಕ್..’ ಎಂಬ ಶೀರ್ಷಿಕೆಯಡಿ ಇತ್ತೀಚೆಗೆ ಪ್ರಕಟವಾಗಿದೆ. ಈ ಸಂಕಲನದ ಒಂದು ಕತೆ ನಿಮ್ಮ ಓದಿಗೆ

ಫರಾಸ್ ರಸ್ತೆಯಿಂದ ಸಫೇದ್ ಗಲ್ಲಿಯ ಕಡೆಗೆ ಹೊರಟರೆ ಕೊನೆಯಲ್ಲಿ ಒಂದಿಷ್ಟು ರೆಸ್ಟೋರೆಂಟುಗಳು ಎದುರಾಗುತ್ತವೆ. ಬಾಂಬೆಯಲ್ಲಿ ರೆಸ್ಟೋರೆಂಟುಗಳು ಎಲ್ಲೆಡೆ ಕಾಣಸಿಗುತ್ತವೆ. ಆದರೆ ಇಲ್ಲಿನ ರೆಸ್ಟೋರೆಂಟುಗಳು ವಿಶೇಷ, ಯಾಕೆಂದರೆ ಆ ಸ್ಥಳ ವೇಶ್ಯೆಯರಿಗೆ ಹೆಸರುವಾಸಿಯಾಗಿತ್ತು. ಈಗ ಕಾಲ ಬದಲಾಗಿದೆ. ಸುಮಾರು 20 ವರ್ಷಗಳ ಕೆಳಗೆ ನಾನು ಆ ರೆಸ್ಟೋರೆಂಟುಗಳಿಗೆ ಹೋಗುತ್ತಿದ್ದುದು.

ಸಫೇದ್ ಗಲ್ಲಿಯನ್ನು ಹಾದು ಹೋದರೆ ಅಲ್ಲಿ ದಿನಪೂರ್ತಿ ಸಿನಿಮಾಗಳನ್ನು ತೋರಿಸುತ್ತಿದ್ದ ಒಂದು ಥಿಯೇಟರ್‌ ಇತ್ತು. ಅಲ್ಲಿದ್ದ ನಾಲ್ಕೂ ಥಿಯೇಟರುಗಳ ಹೊರಗೂ ಉತ್ಸಾಹಿ ಜನರ ಗುಂಪು ಸೇರುತ್ತಿತ್ತು ಮತ್ತು ಗಿರಾಕಿಗಳನ್ನು ಆಕರ್ಷಿಸಲು ಕಿವಿ ಕಿವುಡಾಗುವಂತೆ ಗಂಟೆ ಬಾರಿಸಿ ಅರಚುತ್ತಿದ್ದರು, “ಬನ್ನಿ, ಒಳಗೆ ಬನ್ನಿ, ಎರಡು ಆಣೆ, ಫಸ್ಟ್ ಕ್ಲಾಸ್ ಸಿನಿಮಾ, ಎರಡೇ ಆಣೆ!” ಒಮ್ಮೊಮ್ಮೆ ಈ ಗಂಟೆ ಬಾರಿಸುವವರು ಜನರನ್ನು ಬಲವಂತವಾಗಿ ಒಳಗೆ ತಳ್ಳುತ್ತಿದ್ದುದೂ ಉಂಟು.

ಅಲ್ಲಿ ಮಾಲೀಶ್ ಮಾಡುವವರು ಕೂಡಾ ಇರುತ್ತಿದ್ದರು. ಗಿರಾಕಿಗಳ ತಲೆಯನ್ನು ದಬದಬ ಕುಟ್ಟುವುದನ್ನೇ ಅತ್ಯಂತ ವೈಜ್ಞಾನಿಕವಾದ ರೀತಿಯ ಮಸಾಜ್ ಎಂದು ಅವರು ಹೇಳಿಕೊಳ್ಳುತ್ತಿದ್ದರು. ಮಸಾಜ್ ಮಾಡಿಸಿಕೊಳ್ಳಬೇಕು ಸರಿ, ಆದರೆ ಈ ಬಾಂಬೆಯ ಜನರಿಗೆ ಅದೇಕೆ ಅದರ ಮೇಲೆ ಅಷ್ಟು ಮೋಹವೋ ಕಾಣೆ. ಹಗಲು ರಾತ್ರಿ ಎನ್ನದೇ ಆ ಪರಿ ಮಸಾಜ್ ಮಾಡಿಸಿಕೊಳ್ಳುವ ಅಗತ್ಯವೇನಿದೆಯೋ ಗೊತ್ತಿಲ್ಲ. ಬೆಳಗಿನ ಜಾವದ ಮೂರು ಗಂಟೆಗೂ ಮಸಾಜ್ ಮಾಡುವವ ಬೇಕೆಂದರೆ ಸುಲಭದಲ್ಲಿ ದೊರಕುತ್ತಾನೆ. ರಾತ್ರಿಯಿಡೀ ರಸ್ತೆಯ ಈ ಮೂಲೆಯಿಂದ ಆ ಮೂಲೆಯವರೆಗೆ ‘ಪಿ-ಪಿ-ಪಿ’ ಎಂದು ಯಾರೋ ಒಬ್ಬರು ಕೂಗುತ್ತಲೇ ಇರುತ್ತಾರೆ. ಬಾಂಬೆಯಲ್ಲಿ ಪಿ ಅನ್ನುವುದು ಮಸಾಜಿಗೆ ಅಡ್ಡ ಹೆಸರು.

ಫರಾಸ್ ರೋಡ್ ಅನ್ನುವುದು ಒಂದು ರಸ್ತೆಯ ಹೆಸರಾದರೂ, ವೇಶ್ಯೆಯರೇ ಇರುವ ಇಡೀ ಬಡಾವಣೆಯನ್ನೇ ಆ ಹೆಸರಿನಿಂದ ಕರೆಯುತ್ತಿದ್ದರು. ಅಲ್ಲಿ ಬೇರೆ ಬೇರೆ ಹೆಸರಿನ ಹಲವಾರು ಓಣಿಗಳಿದ್ದರೂ, ಎಲ್ಲವನ್ನೂ ಸೇರಿಸಿ ಫರಾಸ್ ರೋಡ್ ಅಥವಾ ಸಫೇದ್ ಗಲ್ಲಿ ಎಂದೇ ಕರೆಯಲಾಗುತ್ತಿತ್ತು. ಅಲ್ಲಿ ನೂರಾರು ಅಂಗಡಿಗಳ ಕಬ್ಬಿಣದ ಸರಳುಗಳ ಹಿಂದೆ ಎಲ್ಲ ವಯಸ್ಸಿನ, ಬಣ್ಣದ ವೇಶ್ಯೆಯರು ತಮ್ಮನ್ನು ತಾವು ಮಾರಿಕೊಳ್ಳಲು ಗಿರಾಕಿಗಳಿಗಾಗಿ ಕಾಯ್ದು ನಿಲ್ಲುತ್ತಿದ್ದರು.

ಎಂಟು ಆಣೆಯಿಂದ ಹಿಡಿದು ನೂರು ರೂಪಾಯಿನವರೆಗಿನ ಯಹೂದಿ, ಪಂಜಾಬಿ, ಮರಾಠಿ, ಕಾಶ್ಮೀರಿ, ಗುಜರಾತಿ, ಆಂಗ್ಲೋ ಇಂಡಿಯನ್, ಫ್ರೆಂಚ್, ಚೀನಿ, ಜಪಾನಿ ವೇಶ್ಯೆಯರು ಯಾರು ಬೇಕೆಂದರೆ ಅವರು ಸಿಗುತ್ತಿದ್ದರು. ಅವರು ಹೇಗಿದ್ದರು ಎಂದು ನನ್ನನ್ನು ಕೇಳದಿರಿ, ಒಟ್ಟಿನಲ್ಲಿ ಹೆಂಗಸರು… ಅವರೆಲ್ಲರಿಗೂ ಗಿರಾಕಿಗಳು ಸಿಗುತ್ತಿದ್ದರು. ಅಲ್ಲಿ ತುಂಬಾ ಚೀನಿಯರು ವಾಸಿಸುತ್ತಿದ್ದರು. ಅದೇನು ವ್ಯಾಪಾರ ಮಾಡುತ್ತಿದ್ದರೋ ಗೊತ್ತಿಲ್ಲ, ಆದರೆ ತುಂಬಾ ಚೀನೀಯರು ಅಲ್ಲಿ ವಾಸಿಸುತ್ತಿದ್ದುದು ಮಾತ್ರ ಗೊತ್ತು. ಕೆಲವು ರೆಸ್ಟೋರೆಂಟುಗಳ ಮುಂದೆ ಇರುವ ಜಾಹೀರಾತು ಫಲಕಗಳಲ್ಲಿ ಸಣ್ಣ ಸಣ್ಣ ಕ್ರಿಮಿಕೀಟಗಳಂಥ ಅಕ್ಷರಗಳಲ್ಲಿ ಮೇಲಿನಿಂದ ಕೆಳಗೆ ಅದೇನೋ ಬರೆದಿರುತ್ತಿತ್ತು, ಅದೇನು ಬರೆದಿರುತ್ತಿತ್ತೋ ದೇವರಿಗೇ ಗೊತ್ತು.

ಅಲ್ಲಿ ತುಂಬ ಜನ ವ್ಯಾಪಾರಿಗಳು, ಎಲ್ಲ ಕೋಮಿನವರೂ ವಾಸಿಸುತ್ತಿದ್ದರು. ಅಲ್ಲಿ ಅರಬ್ ಸೇನ್ ಎನ್ನುವ ಗಲ್ಲಿಯೊಂದಿತ್ತು. ಅಲ್ಲಿನ ಜನರು ಅದನ್ನು ಅರಬ್ ಓಣಿ ಎಂದು ಕರೆಯುತ್ತಿದ್ದರು, ಅಲ್ಲಿ ಸುಮಾರು 20-25 ಜನ ಅರಬ್ಬರು ಇದ್ದರು, ಅವರು ತಮ್ಮನ್ನು ಮುತ್ತಿನ ವ್ಯಾಪಾರಿಗಳೆಂದು ಕರೆದುಕೊಳ್ಳುತ್ತಿದ್ದರು. ಉಳಿದವರು ಪಂಜಾಬಿಗಳು ಮತ್ತು ರಾಂಪುರಿಗಳು.

ಅಲ್ಲಿ ನಾನು ಬಾಡಿಗೆಗೆ ಕೋಣೆಯೊಂದನ್ನು ಹಿಡಿದೆ. ಸೂರ್ಯನ ಬೆಳಕು ಕಾಣದ ಕೋಣೆ, ಹಾಗಾಗಿ ಯಾವಾಗಲೂ ವಿದ್ಯುತ್ ದೀಪ ಉರಿಸುತ್ತಲೇ ಇರಬೇಕಿತ್ತು. ಅದಕ್ಕೆ ತಿಂಗಳಿಗೆ ಒಂಬತ್ತೂವರೆ ರೂಪಾಯಿ ಬಾಡಿಗೆ. ನೀವು ಬಾಂಬೆಯನ್ನು ನೋಡಿಲ್ಲವಾದರೆ, ಅಲ್ಲಿ ಯಾರಿಗೂ ಯಾರ ಬಗ್ಗೆಯೂ ಆಸಕ್ತಿ ಇಲ್ಲವೆಂದು ಹೇಳಿದರೆ ನೀವು ನಂಬುವುದಿಲ್ಲವೇನೋ. ಆದರೆ ಸತ್ಯವೇನೆಂದರೆ, ನೀವು ನಿಮ್ಮ ಕೋಣೆಯಲ್ಲಿ ಸಾಯುತ್ತಿದ್ದರೂ ಕೂಡಾ ಯಾರೂ ಕೇಳುವವರು ಇರುವುದಿಲ್ಲ. ನಿಮ್ಮ ಸುತ್ತಮುತ್ತ ಯಾರಾದರೂ ಕೊಲೆಯಾದರೆ ಕೂಡಾ ನಿಮಗೆ ಆ ಸುದ್ದಿ ತಲುಪುವುದಿಲ್ಲ.

ಇಡೀ ಅರಬ್ ಗಲ್ಲಿಯಲ್ಲಿ ಎಲ್ಲರ ಬಗ್ಗೆ ಕಾಳಜಿ ವಹಿಸುವವ ಒಬ್ಬನೇ ಒಬ್ಬ ವ್ಯಕ್ತಿಯಿದ್ದ. ಅವನೇ ಮಮ್ಮದ್ ಭಾಯಿ. ಮಮ್ಮದ್ ಭಾಯಿ ರಾಂಪುರದವನು. ಲಾಠಿ, ಮರದ ದೊಣ್ಣೆ, ಕತ್ತಿ ಯಾವುದರಲ್ಲಿಯೇ ಆಗಲಿ, ಹೊಡೆದಾಡುವುದರಲ್ಲಿ ನಿಪುಣ. ಅರಬ್ ಗಲ್ಲಿಯ ರೆಸ್ಟೋರೆಂಟುಗಳಲ್ಲಿ ಆಗಾಗ್ಗೆ ಅವನ ಹೆಸರು ಕಿವಿಗೆ ಬೀಳುತ್ತಿತ್ತು. ಆದರೆ ಅವನನ್ನು ಭೇಟಿಯಾಗುವ ಸಂದರ್ಭ ಬಹಳ ಕಾಲದಿಂದಲೂ ಕೂಡಿಬಂದಿರಲಿಲ್ಲ.

ಆ ದಿನಗಳಲ್ಲಿ ನಾನು ನಸುಕಿನಲ್ಲಿಯೇ ಕೋಣೆಯಿಂದ ಹೊರಟು ಬಿಡುತ್ತಿದ್ದೆ. ಹಿಂದಿರುಗುವಾಗ ಬಹಳ ತಡವಾಗುತ್ತಿತ್ತು. ನನಗೆ ಅವನನ್ನು ಭೇಟಿಯಾಗಲು ಬಹಳ ಆಸೆಯಿತ್ತು. ಆ ನೆರೆಹೊರೆಯಲ್ಲಿ ಅವನೊಬ್ಬ ದಂತಕಥೆಯಾಗಿದ್ದ.

ಇಪ್ಪತ್ತು ಇಪ್ಪತ್ತೈದು ಜನರು ಶಸ್ತ್ರಾಸ್ತ್ರ ಸನ್ನದ್ಧರಾಗಿ ಬಂದರೂ ಅವನ ಕೂದಲೂ ಕೊಂಕದಂತೆ ನಿಮಿಷದಲ್ಲಿ ಅವರನ್ನೆಲ್ಲ ಹಿಮ್ಮೆಟ್ಟಿಸುತ್ತಾನೆ, ಚಾಕು ಚೂರಿ ಹಿಡಿದು ಕಾದಾಡುವುದರಲ್ಲಿ ಅವನನ್ನು ಸರಿಗಟ್ಟುವವರೇ ಇಲ್ಲ, ಮಿಂಚಿನ ವೇಗದಲ್ಲಿ ಚೂರಿಯನ್ನು ಹೇಗೆ ಎದುರಾಳಿಯ ದೇಹದೊಳಗೆ ಇಳಿಸುತ್ತಾನೆಂದರೆ ಚುಚ್ಚಿಸಿಕೊಂಡಾತ ನೂರು ಹೆಜ್ಜೆ ನಡೆದ ನಂತರ ಇದ್ದಕ್ಕಿದ್ದಂತೆ ಅಲ್ಲಿಯೇ ಕುಸಿದು ಬೀಳುತ್ತಾನೆ, ಇವೆಲ್ಲ ಮಮ್ಮದ್ ಭಾಯಿಯಿಂದ ಮಾತ್ರ ಸಾಧ್ಯ… ಹೀಗೆ ಅವನ ಬಗ್ಗೆ ಬೇಕಾದಷ್ಟು ಕಥೆಗಳು ಪ್ರಚಲಿತವಾಗಿದ್ದವು.

ನನಗೆ ಅವನ ಚಾಕು ಚೂರಿ ಹೊಡೆದಾಟಗಳನ್ನು ನೋಡಲು ಆಸಕ್ತಿಯೇನೂ ಇರಲಿಲ್ಲ. ಆದರೆ ಅವನ ಬಗ್ಗೆ ಕೇಳಿದ್ದ ಮತ್ತೆ ಕೆಲವು ಕಥೆಗಳಿಂದಾಗಿ ಅವನನ್ನು ನೋಡಲೇಬೇಕೆಂದೆನಿಸಿತ್ತು. ಅವನ ಜೊತೆ ಮಾತಾಡಬೇಕು ಎಂದೆಲ್ಲ ಇರಲಿಲ್ಲ, ಸುಮ್ಮನೇ ಹತ್ತಿರದಿಂದ ನೋಡಬೇಕು ಎಂಬ ಆಸೆಯಷ್ಟೇ.

ಇಡೀ ಗಲ್ಲಿಯಲ್ಲಿ ಅವನ ಶಕ್ತಿ ಸಾಮರ್ಥ್ಯದ ಕಥೆಗಳು ಹಬ್ಬಿ ಉಳಿದೆಲ್ಲರನ್ನೂ ಮಂಕಾಗಿಸಿತ್ತು. ಅವನೊಬ್ಬ ದೊಡ್ಡ ದಾದಾ ಆಗಿದ್ದ. ಹಾಗಿದ್ದರೂ ಕೂಡಾ ಅವನು ಆ ಗಲ್ಲಿಯಲ್ಲಿ ಯಾವ ಹೆಣ್ಣುಮಕ್ಕಳನ್ನು ಕಣ್ಣೆತ್ತಿಯೂ ನೋಡುವುದಿಲ್ಲ, ಕಚ್ಚೆಭದ್ರದವನು ಎಂದು ಜನರು ಹೇಳುತ್ತಿದ್ದರು. ಬಡವರನ್ನು ಕಂಡರೆ ಕರುಣೆ ಇತ್ತು. ಅರಬ್ ಗಲ್ಲಿ… ಬರೀ ಅರಬ್ ಗಲ್ಲಿ ಯಾಕೆ, ಅದರ ಸುತ್ತಮುತ್ತಲಿನ ಗಲ್ಲಿಗಳಲ್ಲಿದ್ದ ಎಲ್ಲ ನಿರ್ಗತಿಕ ಹೆಣ್ಣುಮಕ್ಕಳಿಗೂ ಮಮ್ಮದ್ ಭಾಯಿ ಪರಿಚಿತನಿದ್ದ ಏಕೆಂದರೆ ಅವನು ಅವರಿಗೆಲ್ಲ ಸಹಾಯ ಮಾಡುತ್ತಿದ್ದ. ತಾನೇ ಆ ಹೆಣ್ಣುಮಕ್ಕಳ ಬಳಿ ಹೋಗುತ್ತಿರಲಿಲ್ಲ. ಬದಲಿಗೆ ತನ್ನ ಶಿಷ್ಯರಲ್ಲಿ ಒಬ್ಬನನ್ನು ಕಳಿಸಿ ಅವರ ಬಗ್ಗೆ ಎಲ್ಲ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದ.

ಅವನು ಹೊಟ್ಟೆಪಾಡಿಗೆ ಏನು ಮಾಡುತ್ತಿದ್ದ ಎಂಬುದು ನನಗೆ ತಿಳಿದಿಲ್ಲ. ಚೆನ್ನಾಗಿ ತಿಂದುಣ್ಣುತ್ತಿದ್ದ, ಒಳ್ಳೆಯ ಬಟ್ಟೆ ಹಾಕುತ್ತಿದ್ದ, ಅವನದ್ದೊಂದು ಟಾಂಗಾ ಇತ್ತು, ಅದಕ್ಕೊಂದು ದಷ್ಟಪುಷ್ಟವಾದ ಕುದುರೆ ಕಟ್ಟಿದ್ದ. ತಾನೇ ಟಾಂಗಾ ಓಡಿಸುತ್ತಿದ್ದ, ಜೊತೆಗೆ ಇಬ್ಬರು ಮೂವರು ನಂಬಿಕಸ್ಥರ ಪಡೆ ಇರುತ್ತಿತ್ತು. ಆ ಟಾಂಗಾದಲ್ಲಿ ಕುಳಿತು ಬಿಂಡಿ ಬಜಾರಿನಲ್ಲೊಂದು ಸುತ್ತು ಹಾಕುತ್ತಿದ್ದ ಅಥವಾ ಯಾವುದಾದರೂ ದರ್ಗಾಗೆ ಹೋಗಿ ಬರುತ್ತಿದ್ದ. ನಂತರ ಯಾವುದಾದರೂ ಇರಾನಿ ರೆಸ್ಟೋರೆಂಟಿನಲ್ಲಿ ಕುಳಿತು ತನ್ನ ಸಹಚರರೊಡನೆ ಹೊಡೆದಾಟಗಳ ಬಗ್ಗೆ ಉತ್ಸಾಹದಿಂದ ಮಾತನಾಡುತ್ತಿದ್ದ.

ಒಬ್ಬ ಮುಸ್ಲಿಂ ಮಾರ್ವಾಡಿ ನರ್ತಕ ನನ್ನ ಪಕ್ಕದ ಮನೆಯಲ್ಲಿದ್ದ. ಅವನು ಮಮ್ಮದ್ ಭಾಯಿಯ ಬಗ್ಗೆ ನೂರಾರು ಕಥೆಗಳನ್ನು ಹೇಳುತ್ತಿದ್ದ, ಅವನ ಬಳಿ ಒಂದು ಲಕ್ಷ ರೂಪಾಯಿ ಇರುವ ಕಥೆಯನ್ನೂ ಸೇರಿ. ಒಂದು ಸಲ ಇವನಿಗೆ ಕಾಲರಾ ರೋಗ ಬಂದಿದ್ದು ಮಮ್ಮದ್ ಭಾಯಿಗೆ ತಿಳಿದು, ಅರಬ್ ಗಲ್ಲಿಯ ಎಲ್ಲ ಡಾಕ್ಟರುಗಳನ್ನೂ ಅವನ ಕೋಣೆಗೆ ಕರೆಸಿ, “ನೋಡಿ ಈ ಆಶಿಕ್ ಹುಸೇನನಿಗೆ ಏನಾದರೂ ಆದರೆ ನಿಮ್ಮನ್ನು ಜೀವದಿಂದ ಉಳಿಸುವುದಿಲ್ಲ,” ಎಂದಿದ್ದನಂತೆ. ಪೂಜ್ಯ ಭಾವನೆಯಲ್ಲಿ ಆಶಿಕ್ ಹುಸೇನ್ ಹೇಳಿದ್ದ, “ಮಾಂಟೋ ಸಾಬ್, ಮಮ್ಮದ್ ಭಾಯಿ ದೇವತಾ ಮನುಷ್ಯ! ದೇವತಾ ಮನುಷ್ಯ! ಅವನು ಆ ಡಾಕ್ಟರುಗಳನ್ನು ಬೆದರಿಸಿದಾಗ ಅವರು ಭಯದಿಂದ ನಡುಗಿಹೋದರು. ನನ್ನನ್ನು ಎಷ್ಟು ಚೆನ್ನಾಗಿ ನೋಡಿಕೊಂಡರೆಂದರೆ ಎರಡೇ ದಿನಗಳಲ್ಲಿ ನಾನು ಸಂಪೂರ್ಣ ಗುಣವಾಗಿದ್ದೆ!”

ಅರಬ್ ಗಲ್ಲಿಯ ಮೂಲೆಮೂಲೆಗಳಲ್ಲಿ ಮಮ್ಮದ್ ಭಾಯಿಯ ಬಗ್ಗೆ ಇಂತಹ ನೂರಾರು ಕಥೆಗಳನ್ನು ಕೇಳಿದ್ದೆ. ಒಬ್ಬ ಯುವಕ ಸಮರಕಲೆಯಲ್ಲಿ ಆಸಕ್ತಿ ಇದ್ದವನು, ಹಾಗಾಗಿಯೇ ಮಮ್ಮದ್ ಭಾಯಿಯ ಶಿಷ್ಯನಾಗಿದ್ದಿರಬೇಕು, ಅವನು ಹೇಳಿದ್ದ ಮಮ್ಮದ್ ಭಾಯಿ ತನ್ನ ಬೆಲ್ಟಿನ ಕೆಳಗೆ ಒಂದು ಹರಿತವಾದ ಚೂರಿ ಅಡಗಿಸಿಟ್ಟುಕೊಳ್ಳುತ್ತಾನೆ. ಅದು ಕ್ಷೌರ ಮಾಡಿಕೊಳ್ಳುವಷ್ಟು ಹರಿತ. ಒರೆಯಿಲ್ಲದೆ ಹಾಗೇ ಇಟ್ಟುಕೊಳ್ಳುವುದರಿಂದ ಆ ಕೊರೆಯುವ ಚೂರಿ ಅವನ ಹೊಟ್ಟೆಗೆ ಒತ್ತುತ್ತ ಇರುತ್ತದೆ. ಅವನು ಬಾಗುವಾಗ ಸ್ವಲ್ಪ ಗಮನ ತಪ್ಪಿದರೆ ಅದು ಅವನ ಹೊಟ್ಟೆಯನ್ನೇ ಸೀಳಿ ಅವನ ಕಥೆಯೇ ಮುಗಿದು ಬಿಡುತ್ತದೆ ಎಂದು.

ದಿನಗಳೆದಂತೆ ನಾನು ಅವನನ್ನು ಭೇಟಿಯಾಗುವ ಆಸೆ ಎಷ್ಟು ಹೆಚ್ಚುತ್ತಿತ್ತು ಎಂದು ನಿಮಗೀಗ ಅರ್ಥವಾಗಿರಬೇಕು. ಅವನು ನೋಡಲು ಹೇಗಿದ್ದ ಎಂದು ನನಗೆ ಗೊತ್ತಿಲ್ಲ. ಆದರೆ ಅವನು ಬಹಳ ದೊಡ್ಡ ಗಾತ್ರದವನಿದ್ದಿರಬೇಕು ಎಂದು ನಾನು ಕಲ್ಪಿಸಿಕೊಂಡಿದ್ದೆ ಎಂಬುದು ಈಗಲೂ ನನಗೆ ನೆನಪಿದೆ, ಹರ್ಕ್ಯುಲಿಸ್ ಸೈಕಲ್ಲಿನ ಜಾಹೀರಾತಿಗೆ ರೂಪದರ್ಶಿಯಾಗಿದ್ದನಲ್ಲ ಅವನ ರೀತಿ.

ನಾನು ಆ ದಿನಗಳಲ್ಲಿ ನಸುಕಿನಲ್ಲಿಯೇ ಕೆಲಸಕ್ಕೆ ಹೊರಡುತ್ತಿದ್ದೆ ಮತ್ತು ಹಿಂದಿರುಗುವಾಗ ರಾತ್ರಿ ಹತ್ತು ಗಂಟೆಯಾಗಿರುತ್ತಿತ್ತು. ಬಂದ ನಂತರ ಬೇಗನೇ ಏನಾದರೂ ತಿಂದು ಹಾಸಿಗೆಗೆ ಬೀಳುತ್ತಿದ್ದೆ. ಬದುಕು ಈ ರೀತಿ ಇರುವಾಗ ಮಮ್ಮದ್ ಭಾಯಿಯನ್ನು ಭೇಟಿಯಾಗುವುದು ಹೇಗೆ?

ಒಮ್ಮೊಮ್ಮೆ ಕೆಲಸಕ್ಕೆ ಚಕ್ಕರ್ ಹಾಕಿ ಅರಬ್ ಗಲ್ಲಿಯಲ್ಲಿಯೇ ಉಳಿದು ಮಮ್ಮದ್ ಭಾಯಿಯನ್ನು ಭೇಟಿಯಾಗಲೇ ಎನ್ನಿಸಿಬಿಡುತ್ತಿತ್ತು. ಆದರೆ ಕೆಲಸವು ರಾಶಿ ರಾಶಿ ಬಿದ್ದಿದ್ದರಿಂದ ಇದನ್ನು ಕಾರ್ಯರೂಪಕ್ಕೆ ತರಲು ನನ್ನಿಂದ ಸಾಧ್ಯವಾಗಲಿಲ್ಲ. ಅವನನ್ನು ಹೇಗೆ ಭೇಟಿಯಾಗಲಿ ಎಂದು ಯೋಚಿಸುತ್ತಿರುವಾಗಲೇ ನನಗೆ ಫ್ಲು ಜ್ವರ ಶುರುವಾಯಿತು. ಅದು ಎಷ್ಟು ತೀವ್ರವಾಯಿತೆಂದರೆ ನನ್ನ ಆರೋಗ್ಯದ ಬಗ್ಗೆ ಹೆದರಿಕೆ ಶುರುವಾಯಿತು. ಅರಬ್ ಗಲ್ಲಿಯ ಒಬ್ಬ ಡಾಕ್ಟರ್ ಜ್ವರ ಹೀಗೇಯೇ ಇದ್ದರೆ ಅದು ನ್ಯುಮೋನಿಯಾಗೆ ತಿರುಗಬಹುದು ಎಂದು ಹೇಳಿದರು.

ನಾನು ಒಬ್ಬೊಂಟಿ ಜೀವ. ಪಕ್ಕದ ಮನೆಯಾತನಿಗೆ ಪುಣೆಯಲ್ಲಿ ಕೆಲಸ ಸಿಕ್ಕಿದ್ದರಿಂದ ಅಲ್ಲಿದ್ದ. ಜ್ವರವು ನನ್ನನ್ನು ಜೀವಂತ ಸುಡುತ್ತಿತ್ತು. ಒಂದೇಸಮ ನೀರು ಕುಡಿದರೂ ಬಾಯಾರಿಕೆ ತೀರುತ್ತಲೇ ಇಲ್ಲ. ನಾನು ಸ್ವಲ್ಪ ಗಟ್ಟಿಗನೇ. ನನ್ನನ್ನು ನೋಡಿಕೊಳ್ಳಲು ನನಗೆ ಯಾರ ಸಹಾಯವೂ ಬೇಕಿಲ್ಲ. ಆದರೆ ಈಗ ಬಂದಿರುವ ಜ್ವರ ಎಂಥದ್ದೆಂದು ನನಗೆ ಗೊತ್ತಾಗಲಿಲ್ಲ, ಫ್ಲು, ಮಲೇರಿಯಾ ಅಥವಾ ಬೇರೆ ಯಾವುದು ಎಂದು. ಅದು ನನ್ನನ್ನು ಅಡ್ಡಡ್ಡ ಮಲಗಿಸಿಬಿಟ್ಟಿತು.

ಜೀವನದಲ್ಲಿ ಮೊದಲ ಬಾರಿಗೆ ಯಾರಾದರೂ ನನ್ನನ್ನು ಸಾಂತ್ವನಗೊಳಿಸಬಾರದಾ ಎಂದು ಬಯಸುವಂತಾಗಿ ಹೋಯಿತು. ಅಥವಾ ಅದು ಸಾಧ್ಯವಾಗದಿದ್ದರೆ ಯಾರೋ ಬಂದು ಒಂದು ಕ್ಷಣ ತಮ್ಮ ಮುಖವನ್ನು ತೋರಿಸಿದರೂ ಸಾಕು, ನನಗಾಗಿ ಮಿಡಿಯುವ ಜೀವವೊಂದು ಇದೆ ಎನ್ನಿಸಿ ನೆಮ್ಮದಿಯಾಗಬಹುದು ಎನ್ನುವಂತೆ.

ಎರಡು ದಿನ ನಾನು ಹಾಸಿಗೆಯಲ್ಲೇ ಹೊರಳಾಡುತ್ತ ಬಿದ್ದಿದ್ದೆ. ಆದರೆ ಯಾರೂ ಬರಲಿಲ್ಲ. ಆದರೆ ಯಾರು ಬರಬೇಕಿತ್ತು? ನನಗಿದ್ದ ಸ್ನೇಹಿತರಾದರೂ ಎಷ್ಟು ಜನ? ಬೆರಳೆಣಿಕೆಯಷ್ಟು ಸ್ನೇಹಿತರೂ ಎಷ್ಟು ದೂರದಲ್ಲಿದ್ದರೆಂದರೆ ನಾನು ಸತ್ತರೂ ಅವರಿಗೆ ವಿಷಯ ತಿಳಿಯುವುದು ಸಾಧ್ಯವಿರಲಿಲ್ಲ. ನಾನು ಮೊದಲೇ ಹೇಳಿದಂತೆ, ಬಾಂಬೆಯಲ್ಲಿ ಯಾರು ಯಾರ ಬಗ್ಗೆಯೂ ಗಮನ ಕೊಡುತ್ತಿರಲಿಲ್ಲ. ಯಾರು ಬದುಕಿದರೂ, ಸತ್ತರೂ ಉಳಿದವರಿಗದು ಅಮುಖ್ಯ.

ನಾನು ಬಹಳ ಕೆಟ್ಟ ಪರಿಸ್ಥಿತಿಯಲ್ಲಿದ್ದೆ. ಹೋಟೆಲಿನ ಚಹಾದ ಹುಡುಗ ಆಶಿಕ್, ಹುಸೇನನ ಹೆಂಡತಿಗೆ ಆರೋಗ್ಯ ಸರಿಯಿಲ್ಲ, ಹಾಗಾಗಿ ಅವನು ಊರಿಗೆ ಹೋದ ಎಂದಿದ್ದ. ಯಾರನ್ನು ಕರೆಯಲಿ? ನನಗೆ ಶಕ್ತಿಯೇ ಇರಲಿಲ್ಲ. ಶಕ್ತಿಗೂಡಿಸಿಕೊಂಡು ಡಾಕ್ಟರ್ ಬಳಿ ತೆವಳಿಕೊಂಡಾದರೂ ಹೋಗಲಾ ಎಂದು ಯೋಚಿಸುತ್ತಿರುವಾಗಲೇ ಬಾಗಿಲು ಬಡಿದ ಸದ್ದು. ಚಹಾದ ಹುಡುಗನಿರಬೇಕು ಎಂದುಕೊಂಡೇ ನಿರ್ಜೀವ ದನಿಯಲ್ಲಿ, “ಒಳಗೆ ಬನ್ನಿ,” ಎಂದೆ.

ಬಾಗಿಲು ತೆರೆಯಿತು. ಒಬ್ಬ ಸಣಕಲು ಮನುಷ್ಯ ಒಳ ಬಂದ. ಮೊದಲ ನೋಟದಲ್ಲೇ ಅವನ ಮೀಸೆ ನನ್ನ ಗಮನ ಸೆಳೆಯಿತು. ನಿಜಕ್ಕೂ ಹೇಳಬೇಕೆಂದರೆ ಅವನ ಮೀಸೆಯಿಂದಲೇ ಅವನು ಎದ್ದು ಕಾಣುತ್ತಿದ್ದ, ಅದಿಲ್ಲದಿದ್ದರೆ ಯಾರೂ ಅವನ ಕಡೆಗೆ ಗಮನ ನೀಡದಂತಿದ್ದ ಆ ವ್ಯಕ್ತಿ. ಅವನು ತನ್ನ ಕೈಸರ್ ವಿಲ್ಹೆಮ್‌ ಮೀಸೆಯನ್ನು ಬೆರಳಿನಿಂದ ತೀಡಿಕೊಳ್ಳುತ್ತ ನನ್ನ ಮಂಚದ ಬಳಿ ಬಂದ. ಅವನ ಹಿಂದೆಯೇ ಒಂದಿಷ್ಟು ಜನರು ಒಳಬಂದರು.

ನಾನು ದಿಗ್ಭ್ರಾಂತನಾದೆ. ಅವರು ಯಾರು, ನನ್ನಲ್ಲಿಗೆ ಯಾಕೆ ಬಂದರು ಎಂದು ಅರ್ಥವೇ ಆಗಲಿಲ್ಲ. ಕೈಸರ್ ವಿಲ್ಹೆಮ್‌ ಮೀಸೆಯ ಸಣಕಲು ಆಸಾಮಿ ಮೃದುವಾದ ದನಿಯಲ್ಲಿ, ಮಂಟೋ ಸಾಹಿಬ್, ಇದೇನು ಮಾಡಿಕೊಂಡಿರಿ? ಕರ್ಮವೇ, ನನಗೆ ಯಾಕೆ ಹೇಳಲಿಲ್ಲ?” ಮಾಂಟೋವನ್ನು ವಮಟೋ ಮಾಡುವುದು ನನಗೇನೂ ಹೊಸದಲ್ಲ. ಹಾಗಾಗಿ ಅದನ್ನು ಸರಿಪಡಿಸುವ ತಂಟೆಗೆ ಹೋಗಲಿಲ್ಲ ನಾನು. ಕ್ಷೀಣದನಿಯಲ್ಲಿ, “ಯಾರು ನೀವು?” ಎಂದು ಕೇಳಿದೆ.

“ಮಮ್ಮದ್ ಭಾಯಿ”
ನಾನು ಧಿಗ್ಗನೆ ಎದ್ದು ಕುಳಿತೆ.
“ಮಮ್ಮದ್ ಭಾಯಿ, ನೀವು ಮಮ್ಮದ್ ಭಾಯಿ… ಕುಖ್ಯಾತ ದಾದಾ!” ತಕ್ಷಣವೇ ನನಗೆ ನನ್ನ ಮಾತು ಎಡವಟ್ಟಿನದೆನಿಸಿ ನಿಲ್ಲಿಸಿದೆ.

ಮಮ್ಮದ್ ಭಾಯಿ ತನ್ನ ಕಿರುಬೆರಳಿನಿಂದ ಮೀಸೆಯನ್ನು ತೀಡಿ ನಗುತ್ತಾ, “ಹೌದು ವಮಟೋ ಭಾಯಿ, ನಾನು ಮಮ್ಮದ್, ಕುಖ್ಯಾತ ದಾದಾ. ಹೋಟೆಲಿನ ಚಹಾದ ಹುಡುಗ ನಿಮ್ಮ ಆರೋಗ್ಯ ಸರಿ ಇಲ್ಲವೆಂದು ಹೇಳಿದ. ನನಗೆ ಹೇಳದೇ ಇರುವುದರ ಹಿಂದಿನ ಉದ್ದೇಶವಾದರೂ ಏನು? ಜನರು ಗುಟ್ಟು ಮಾಡಿದರೆ ಸಿಟ್ಟು ಕೆರಳುತ್ತದೆ.”

ನಾನು ಏನೋ ಹೇಳುವುದರಲ್ಲಿ ಮಮ್ಮದ್ ಭಾಯಿ ಜೊತೆಯಲ್ಲಿ ಇದ್ದ ಒಬ್ಬನಿಗೆ, “ಇವನೇ ನಿನ್ನ ಹೆಸರೇನು? ಹೋಗಿ ಆ ಡಾಕ್ಟರ್ ಇದ್ದಾನಲ್ಲ ಅದೇನು ಅವನ ಹೆಸರು, ಏನೋ ಒಂದು… ಅರ್ಥವಾಯಿತಲ್ಲವಾ ಯಾರು ಅಂತ? ಅವನಿಗೆ ಹೋಗಿ ಹೇಳು ಮಮ್ಮದ್ ಭಾಯಿಗೆ ಅವನ ಅವಶ್ಯಕತೆ ಇದೆ ಎಂದು. ಏನು ಮಾಡುತ್ತಿದ್ದರೂ ಅದನ್ನು ಅತ್ತ ಬಿಸಾಕಿ ಈ ಕೂಡಲೇ ಬರಬೇಕೆಂದು ಹೇಳು. ಮತ್ತೆ ಆ ತಿರುಬೋಕಿಗೆ ಹೇಳು ಅವನ ಹತ್ತಿರ ಏನೇನು ಔಷಧಗಳಿವೆಯೋ ಅದನ್ನೆಲ್ಲ ಜೊತೆಗೆ ತೆಗೆದುಕೊಂಡು ಬಾ ಎಂದು,” ಶಿಷ್ಯ ಆ ಕೂಡಲೇ ಹೊರಟ.

ನಾನು ಮಮ್ಮದ್ ಭಾಯಿಯನ್ನೇ ನೋಡಲಾರಂಭಿಸಿದೆ. ಅವನ ಬಗ್ಗೆ ಕೇಳಿದ್ದ ಎಲ್ಲ ಕಥೆಗಳೂ ನನ್ನ ಜ್ವರದಿಂದ ಬಳಲಿದ ಮನಸ್ಸಿನಲ್ಲಿ ಗಿರಕಿ ಹೊಡೆಯಲಾರಂಭಿಸಿದವು. ಆದರೆ ಪ್ರತಿಬಾರಿ ಅವನನ್ನು ನೋಡಿದಾಗಲೂ ನನ್ನ ತಲೆಯಲ್ಲಿ ಆ ಎಲ್ಲ ಚಿತ್ರಣವೂ ಕಲಸುಮೇಲೋಗರವಾಗಿ ಕಣ್ಣಿಗೆ ಕಾಣುತ್ತಿದ್ದುದು ಅವನ ಮೀಸೆಯಷ್ಟೇ. ಅದು ಹೆದರಿಕೆ ಹುಟ್ಟಿಸುತ್ತಿತ್ತು, ಜೊತೆಗೆ ಚೆಂದವಾಗಿಯೂ ಇತ್ತು. ನನಗನ್ನಿಸಿತು ಅವನ ಸೌಮ್ಯ ಮತ್ತು ಸೊಗಸಾದ ಚಹರೆ ಸ್ವಲ್ಪ ಹೆದರಿಕೆ ಹುಟ್ಟಿಸುವಂತೆ ಕಾಣಲಿ ಎಂದೇ ಆ ಮೀಸೆಯನ್ನು ಬೆಳೆಸಿರಬೇಕು ಎಂದು. ಅವನು ತಾನು ಹೇಳಿಕೊಳ್ಳುವಷ್ಟು ಕ್ರೂರಿಯಲ್ಲ ಎನ್ನಿಸಿತು ಆ ಕ್ಷಣಕ್ಕೆ.

ಕೋಣೆಯಲ್ಲಿ ಕುರ್ಚಿ ಇರಲಿಲ್ಲ, ಹಾಗಾಗಿ ಮಮ್ಮದ್ ಭಾಯಿಯನ್ನು ಹಾಸಿಗೆಯ ಮೇಲೆಯೇ ಕುಳಿತುಕೊಳ್ಳಲು ಹೇಳಿದೆ. ಆದರೆ ಅವನು ಒರಟಾಗಿ ನಿರಾಕರಿಸಿ, “ಹೀಗೆಯೇ ಸರಿ ಇದೆ. ನಿಂತೇ ಇರುತ್ತೇನೆ,” ಎಂದ. ಆ ನಂತರ ಅವನು ಶತಪಥ ಹಾಕಲಾರಂಭಿಸಿದ ಕೋಣೆಯಲ್ಲಿ ಹೆಚ್ಚು ಜಾಗ ಇಲ್ಲದಿದ್ದರೂ. ತನ್ನ ಕುರ್ತಾ ಎತ್ತಿ ಪೈಜಾಮಾದ ಲಾಡಿಯ ಬಳಿ ಸಿಕ್ಕಿಸಿದ್ದ ಬಾಕು ಹೊರ ತೆಗೆದ. ಆ ಬಾಕು ಬೆಳ್ಳಿಯಿಂದ ಮಾಡಿದ್ದಿರಬೇಕು, ಅದರ ಹೊಳೆವ ಅಲಗು ವರ್ಣಿಸಲಸದಳವಾಗಿತ್ತು. ಅವನು ಅದನ್ನು ತನ್ನ ಮೊಣಕೈ ಹತ್ತಿರಕ್ಕೆ ತಂದು ಅಲ್ಲಿದ್ದ ಕೂದಲನ್ನು ನಯವಾಗಿ ಬೋಳಿಸಿದ. ಸಂತೃಪ್ತಿಯಿಂದ ಗುಟುರು ಹಾಕಿ ಬೆರಳಿನ ಉಗುರುಗಳನ್ನು ಕತ್ತರಿಸಲಾರಂಭಿಸಿದ.

ಅವನ ಇರುವಿಕೆಯೇ ನನ್ನ ಜ್ವರವನ್ನು ಹಲವು ಡಿಗ್ರಿಗಳಷ್ಟು ತಗ್ಗಿಸಿತ್ತು. ತುಸು ಶಾಂತವಾದ ಮನಸ್ಸಿನಿಂದ ಹೇಳಿದೆ, “ಮಮ್ಮದ್ ಭಾಯಿ, ನಿಮ್ಮ ಬಾಕು ತುಂಬ ಹರಿತವಾಗಿದೆ. ಹೊಟ್ಟೆಯ ಹತ್ತಿರ ಅದನ್ನು ಇಟ್ಟುಕೊಳ್ಳಲು ಭಯವಾಗುವುದಿಲ್ಲವಾ?” ಮಮ್ಮದ್ ಭಾಯಿ ನೀಟಾಗಿ ಉಗುರು ಕತ್ತರಿಸುತ್ತಾ, “ವಮಟೋ ಭಾಯಿ, ಈ ಬಾಕು ಬೇರೆಯವರಿಗೋಸ್ಕರ, ಅದಕ್ಕೆ ಆ ವಿಷಯ ಗೊತ್ತು. ಅದು ನನ್ನದು, ನನ್ನನ್ನು ಹೇಗೆ ನೋಯಿಸಲು ಸಾಧ್ಯ?” ಅವನು ತಾಯಿ ತನ್ನ ಮಗುವಿನ ಬಗ್ಗೆ ಮಾತನಾಡುತ್ತ, “ನನ್ನ ಮಗ ನನ್ನ ಮೇಲೆ ಕೈ ಮಾಡಲು ಹೇಗೆ ಸಾಧ್ಯ?” ಎಂದು ಹೇಳುವ ರೀತಿಯಲ್ಲಿ ಬಾಕುವಿನ ಬಗ್ಗೆ ಮಾತನಾಡಿದ.

ಡಾಕ್ಟರ್ ಬಂದರು. ಅವರ ಹೆಸರು ಪಿಂಟೋ ಮತ್ತು ನನ್ನ ಹೆಸರು ವಮಟೋ. ಅವನು ಕ್ರಿಶ್ಚಿಯನ್ ಧರ್ಮದ ರೀತಿಯಲ್ಲಿ ಮಮ್ಮದ್ ಭಾಯಿಗೆ ನಮಸ್ಕರಿಸಿ, ನನಗೆ ಏನಾಗಿದೆ ಎಂದು ಕೇಳಿದರು. ಮಮ್ಮದ್ ಭಾಯಿ ನನಗೆ ಏನಾಗಿದೆ ಎಂದು ಸಂಕ್ಷಿಪ್ತವಾಗಿ ಹೇಳಿದ. ಅದನ್ನು ಹೇಳುವಾಗ ಅವನ ದನಿ ಹೇಗಿತ್ತೆಂದರೆ ನನ್ನನ್ನು ಗುಣಪಡಿಸದಿದ್ದರೆ ನಿನಗಿದೆ ಗ್ರಹಚಾರ ಎನ್ನುವ ರೀತಿಯಲ್ಲಿ.

ಪಿಂಟೋ ವಿಧೇಯ ಹುಡುಗನಂತೆ ತನ್ನ ಕೆಲಸ ಮಾಡಿದರು. ನನ್ನ ನಾಡಿಬಡಿತ ಪರೀಕ್ಷಿಸಿ, ಎದೆಯ ಮೇಲೆ ಸ್ಟೆತಾಸ್ಕೋಪ್ ಇಟ್ಟು ನೋಡಿದರು. ನನ್ನ ಬ್ಲಡ್ ಪ್ರೆಷರ್ ನೋಡಿ ನಂತರ ನನಗೆ ಏನೇನು ತೊಂದರೆ ಇದೆ ಎಂದೆಲ್ಲ ವಿಚಾರಿಸಿಕೊಂಡರು. ನಂತರ ಮಮ್ಮದ್ ಭಾಯಿಯತ್ತ ತಿರುಗಿ ಹೇಳಿದರು, “ಚಿಂತಿಸುವ ಅಗತ್ಯವಿಲ್ಲ. ಇವರಿಗೆ ಮಲೇರಿಯಾ ಆಗಿದೆ. ಒಂದು ಇಂಜೆಕ್ಷನ್ ಕೊಡುತ್ತೇನೆ.”

ಮಮ್ಮದ್ ಭಾಯಿ ಹತ್ತಿರದಲ್ಲೇ ನಿಂತಿದ್ದ. ಡಾಕ್ಟರ್ ಪಿಂಟೋ ಹೇಳುವುದನ್ನು ಕೇಳುತ್ತಾ ತನ್ನ ಮಣಿಕಟ್ಟನ್ನು ಶೇವ್ ಮಾಡುತ್ತಾ ಹೇಳಿದ, “ನನಗೆ ವಿವರಗಳು ಬೇಕಿಲ್ಲ. ಇಂಜೆಕ್ಷನ್ ಕೊಡುವುದು ಅಗತ್ಯವೆನಿಸಿದರೆ ಕೊಡು. ಆದರೆ ಅವನಿಗೇನಾದರೂ ಆದರೆ…”

ಡಾಕ್ಟರ್ ಭಯದಿಂದ ನಡುಗುತ್ತಾ, “ಇಲ್ಲ ಮಮ್ಮದ್ ಭಾಯಿ ಎಲ್ಲ ಸರಿಯಾಗುತ್ತದೆ.”

ಮಮ್ಮದ್ ಭಾಯಿ ತನ್ನ ಬಾಕುವನ್ನು ಮರಳಿ ಸೊಂಟಕ್ಕೆ ಸಿಕ್ಕಿಸುತ್ತಾ, “ಸರಿ ಹಾಗಿದ್ದರೆ.”

“ಈಗ ಈ ಇಂಜೆಕ್ಷನ್ ಕೊಡುತ್ತೇನೆ,” ಡಾಕ್ಟರ್ ತನ್ನ ಬ್ಯಾಗಿನಲ್ಲಿದ್ದ ಸಿರಿಂಜ್ ತೆಗೆಯುತ್ತ ಹೇಳಿದರು.

“ತಾಳು ತಾಳು” ಮಮ್ಮದ್ ಭಾಯಿ ಅವನನ್ನು ತಡೆದ. ಅವನು ಅಧೀರನಾಗಿದ್ದ.
ಡಾಕ್ಟರ್ ಸಿರಿಂಜನ್ನು ಮರಳಿ ಬ್ಯಾಗಿನಲ್ಲಿರಿಸುತ್ತಾ ಅಳುದನಿಯಲ್ಲಿ, “ಏನು?” ಎಂದು ಕೇಳಿದರು.

“ನನಗೆ ಸೂಜಿ ಚುಚ್ಚುವುದನ್ನು ನೋಡಲಾಗುವುದಿಲ್ಲ,” ಮಮ್ಮದ್ ಭಾಯಿ ಹೇಳುತ್ತಾ ತನ್ನ ಸಹಚಾರಿಗಳೊಡನೆ ಅಲ್ಲಿಂದ ಹೊರಟ.

ಡಾಕ್ಟರ್ ಪಿಂಟೋ ನನಗೆ ಕ್ವಿನೈನ್ ಇಂಜೆಕ್ಷನ್ ಕೊಟ್ಟರು. ಸ್ವಲ್ಪವೂ ನೋವಾಗದಂತೆ ಚುಚ್ಚಿದರು. ಸಾಧಾರಣವಾಗಿ ಮಲೇರಿಯಾ ಇಂಜೆಕ್ಷನ್ ಚುಚ್ಚುವಾಗ ತುಂಬ ನೋವಾಗುತ್ತದೆ. ಅವರು ಮುಗಿಸಿದ ನಂತರ ನಾನು ಎಷ್ಟು ಹಣ ಕೊಡಬೇಕು ಎಂದು ಕೇಳಿದೆ. “ಹತ್ತು ರೂಪಾಯಿ” ಅವರು ಹೇಳಿದರು.

ನನ್ನ ದಿಂಬಿನ ಕೆಳಗಿದ್ದ ಪರ್ಸ್ ತೆಗೆದು ಹತ್ತು ರೂಪಾಯಿ ನೀಡುವಾಗ ಮಮ್ಮದ್ ಭಾಯಿ ಬಂದ. ಸಿಟ್ಟಿನಿಂದ ನಮ್ಮನ್ನು ನೋಡುತ್ತಾ, “ಏನು ನಡೆಯುತ್ತಿದೆ ಇಲ್ಲಿ?” ಎಂದು ಗುಡುಗಿದ. “ಹಣ ಕೊಡುತ್ತಿದ್ದೇನೆ,” ಎಂದೆ. “ಏನು! ನಮ್ಮಿಂದ ಹಣ ವಸೂಲಿ ಮಾಡುತ್ತೀಯಾ?’ ಮಮ್ಮದ್ ಭಾಯಿ ಕೇಳಿದ. ಡಾಕ್ಟರ್ ಪಿಂಟೋ ಥರಥರ ನಡುಗಿದರು. “ನಾನೆಲ್ಲಿ ಹಣ ಕೇಳಿದೆ? ಅವರೇ ಕೊಡುತ್ತಿದ್ದರು” “ನಮ್ಮಿಂದಲೇ ಹಣ ವಸೂಲಿ! ವಾಪಸ್ ಕೊಡು…” ಮಮ್ಮದ್ ಭಾಯಿಯ ದನಿ ಅವನ ಬಾಕುವಿನಷ್ಟೇ ಹರಿತವಾಗಿತ್ತು. ಪಿಂಟೋ ನೋಟನ್ನು ನನಗೆ ವಾಪಸ್ ಕೊಟ್ಟು, ಬ್ಯಾಗ್ ಎತ್ತಿಕೊಂಡು, ಮಮ್ಮದ್ ಭಾಯಿಯಲ್ಲಿ ಕ್ಷಮೆ ಯಾಚಿಸಿ ಹೊರಟು ಹೋದರು.

ಮಮ್ಮದ್ ಭಾಯಿ ತಮ್ಮ ಚೂಪಾದ ಮೀಸೆಯನ್ನು ತಿರುಚುತ್ತಾ ನಕ್ಕು, “ವಮಟೋ ಭಾಯಿ, ಅವರು ನಮ್ಮಿಂದ ಶುಲ್ಕ ವಸೂಲಿ ಮಾಡಲು ಹೊರಟಿದ್ದರು ಅನ್ನುವುದನ್ನು ನನಗೆ ನಂಬಲಾಗುತ್ತಿಲ್ಲ. ನಿಮ್ಮಿಂದೇನಾದರೂ ಅವರು ಹಣ ಪಡೆದಿದ್ದರೆ ನಾನು ನನ್ನ ಮೀಸೆ ಬೋಳಿಸಿಕೊಳ್ಳುತ್ತಿದ್ದೆ ಗ್ಯಾರಂಟಿ. ಇಲ್ಲಿರುವ ಎಲ್ಲರೂ ನಿಮ್ಮ ಸೇವೆಗೆ ಸಿದ್ಧರಾಗಿದ್ದೇವೆ.”

ಒಂದು ಕ್ಷಣ ಅಲ್ಲಿ ಮೌನ ಆವರಿಸಿತು. ನಂತರ ನಾನು ಕೇಳಿದೆ, “ಮಮ್ಮದ್ ಭಾಯಿ ನಾನು ನಿಮಗೆ ಹೇಗೆ ಗೊತ್ತು?” ಮಮ್ಮದ್ ಭಾಯಿ ಮೀಸೆ ಕುಣಿಸುತ್ತಾ, “ಮಮ್ಮದ್ ಭಾಯಿಗೆ ಯಾರು ಗೊತ್ತಿಲ್ಲ? ನಾನು ಇಲ್ಲಿಯ ಮುಖ್ಯಸ್ಥ. ನನ್ನ ಜನರ ಬಗ್ಗೆ ಎಲ್ಲ ವಿಷಯವನ್ನೂ ನಾನು ಗೊತ್ತು ಮಾಡಿಕೊಳ್ಳುತ್ತೇನೆ. ನನ್ನ ಸಿಐಡಿಗಳು ಇದ್ದಾರೆ. ಅವರು ನನಗೆ ಎಲ್ಲ ವಿಷಯ ತಲುಪಿಸುತ್ತಾರೆ. ನನಗೆ ನಿನ್ನ ವಿಷಯವೆಲ್ಲ ಗೊತ್ತು.”

“ಯಾವ ವಿಷಯ?” ನಾನು ತಮಾಷೆಯಾಗಿಯೇ ಕೇಳಿದೆ.

ಇಡೀ ಗಲ್ಲಿಯಲ್ಲಿ ಅವನ ಶಕ್ತಿ ಸಾಮರ್ಥ್ಯದ ಕಥೆಗಳು ಹಬ್ಬಿ ಉಳಿದೆಲ್ಲರನ್ನೂ ಮಂಕಾಗಿಸಿತ್ತು. ಅವನೊಬ್ಬ ದೊಡ್ಡ ದಾದಾ ಆಗಿದ್ದ. ಹಾಗಿದ್ದರೂ ಕೂಡಾ ಅವನು ಆ ಗಲ್ಲಿಯಲ್ಲಿ ಯಾವ ಹೆಣ್ಣುಮಕ್ಕಳನ್ನು ಕಣ್ಣೆತ್ತಿಯೂ ನೋಡುವುದಿಲ್ಲ, ಕಚ್ಚೆಭದ್ರದವನು ಎಂದು ಜನರು ಹೇಳುತ್ತಿದ್ದರು.

“ನನಗೆ ಗೊತ್ತಿಲ್ಲದ್ದೇನಿದೆ? ನೀನು ಅಮೃತಸರದವನು, ಕಾಶ್ಮೀರಿ. ಇಲ್ಲಿನ ದಿನಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತೀ. ನೀನು ಬಿಸ್ಮಿಲ್ಲಾ ಹೋಟೆಲಿನವರಿಗೆ ಹತ್ತು ರೂಪಾಯಿ ಸಾಲ ಹಿಂದಿರುಗಿಸಬೇಕು, ಹಾಗಾಗಿ ಆ ದಿಕ್ಕಿನ ಕಡೆ ತಲೆ ಇಟ್ಟೂ ಮಲಗುವುದಿಲ್ಲ. ಬಿಂಡಿ ಬಜಾರಿನ ಒಬ್ಬ ಪಾನ್ ಅಂಗಡಿಯವ ನಿನ್ನ ಹಿಂದೆ ಬಿದ್ದಿದ್ದಾನೆ. ಸಿಗರೇಟ್ ಮಾರಿದ್ದಕ್ಕೆ ತನಗೆ ಬರಬೇಕಾದ ಇಪ್ಪತ್ತು ರೂಪಾಯಿ ಹತ್ತು ಆಣೆಗಳನ್ನು ವಸೂಲಿ ಮಾಡಲು” ನನಗೆ ಅವಮಾನದಿಂದ ಸಾಯುವಂತಾಯಿತು.

ಮಮ್ಮದ್ ಭಾಯಿ ತನ್ನ ಮುಳ್ಳುಗೂದಲಿನ ಮೀಸೆಯನ್ನು ಮತ್ತೆ ತೀಡಿಕೊಳ್ಳುತ್ತಾ, “ವಮಟೋ ಭಾಯಿ ಚಿಂತಿಸಬೇಕಿಲ್ಲ. ನಿಮ್ಮ ಸಾಲವನ್ನು ತೀರಿಸಿದ್ದೇವೆ. ನೀವು ಹೊಸದಾಗಿ ಬದುಕು ಪ್ರಾರಂಭಿಸಬಹುದು. ಆ ಬೇವರ್ಸಿಗಳಿಗೆ ಹೇಳಿದ್ದೀನಿ ಮತ್ತೆಂದೂ ವಮಟೋ ಭಾಯಿಯ ವಿಷಯಕ್ಕೆ ತಲೆ ಹಾಕಬೇಡಿ ಎಂದು. ದೇವರ ದಯೆಯಿಂದ ನಿಮಗೆ ಇನ್ಯಾರೂ ತೊಂದರೆ ಕೊಡುವುದಿಲ್ಲ.”

ನನಗೆ ಏನು ಹೇಳಬೇಕೆಂದೇ ತೋಚಲಿಲ್ಲ. ಕ್ವಿನೈನ್ ಇಂಜೆಕ್ಷನ್ ಪ್ರಭಾವದಿಂದ ಕಿವಿಯಲ್ಲಿ ಗುಯ್ಗುಡುವ ಸದ್ದು. ಅವನ ಕರುಣೆ ನನ್ನನ್ನು ಎಷ್ಟು ಭಾವಪರವಶನಾಗಿಸಿತ್ತೆಂದರೆ ನನ್ನ ಕೃತಜ್ಞತೆಯನ್ನು ಹೇಳಲು ಪದಗಳೇ ಸಿಗಲಿಲ್ಲ. ನಾನು, “ಮಮ್ಮದ್ ಭಾಯಿ, ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ,” ಎಂದಷ್ಟೇ ಹೇಳಲು ಸಾಧ್ಯವಾಯಿತು. ಮಮ್ಮದ್ ಭಾಯಿ ಮೀಸೆ ಹುರಿ ಮಾಡಿ ಹೊರಟ.

ಡಾಕ್ಟರ್ ಪಿಂಟೋ ಪ್ರತಿದಿನ ಬೆಳಗ್ಗೆ ಸಂಜೆ ನನ್ನನ್ನು ನೋಡಲು ಬರುತ್ತಿದ್ದರು. ಪ್ರತಿಬಾರಿ ನಾನು ಹಣದ ಬಗ್ಗೆ ಮಾತಾಡಿದಾಗಲೂ ಅವರು ತಮ್ಮ ಕಿವಿಗಳನ್ನು ಮುಚ್ಚಿಕೊಂಡು ಹೇಳುತ್ತಿದ್ದರು, “ಬೇಡ ಮಿಸ್ಟರ್ ಮಾಂಟೋ! ಇದು ಮಮ್ಮದ್ ಭಾಯಿಯ ವ್ಯವಹಾರ. ನಾನು ಬಿಡಿಗಾಸನ್ನೂ ತೆಗೆದುಕೊಳ್ಳುವಂತಿಲ್ಲ.” ಮಮ್ಮದ್ ಭಾಯಿ ಬಹಳ ಅದ್ಭುತ ಅನಿಸುತ್ತಿದ್ದ. ಅವನು ಎಷ್ಟು ಭಯ ಹುಟ್ಟಿಸಿದ್ದನೆಂದರೆ ಜಿಪುಣ ಪಿಂಟೋ ಡಾಕ್ಟರ್ ಇಂಜೆಕ್ಷನ್ ಕೂಡಾ ತನ್ನ ದುಡ್ಡಿನಲ್ಲೇ ತರುತ್ತಿದ್ದರು.

ಮಮ್ಮದ್ ಭಾಯಿ ನನ್ನನ್ನು ನೋಡಲು ದಿನವೂ ಬೆಳಗ್ಗೆ ಅಥವಾ ಸಾಯಂಕಾಲ ಬರುತ್ತಿದ್ದ, ಜೊತೆಗೆ ಐದಾರು ಶಿಷ್ಯಂದಿರು. ಇದೊಂದು ಸಾಧಾರಣ ಮಲೇರಿಯಾ ಖಾಯಿಲೆ ಎಂದು ನನಗೆ ಧೈರ್ಯ ಹೇಳಿ, “ಇನ್ಶಾ ಅಲ್ಲಾಹ್, ಡಾಕ್ಟರ್ ಪಿಂಟೋನ ಚಿಕಿತ್ಸೆ ನಿಮ್ಮನ್ನು ಬೇಗ ಗುಣಪಡಿಸುತ್ತದೆ,” ಎನ್ನುತ್ತಿದ್ದ.

ಹದಿನೈದು ದಿನಗಳಲ್ಲಿ ನಾನು ಸಂಪೂರ್ಣ ಗುಣವಾದೆ. ಚೇತರಿಸಿಕೊಳ್ಳುತ್ತಿರುವ ಆ ಹದಿನೈದು ದಿನಗಳಲ್ಲಿ ಮಮ್ಮದ್ ಭಾಯಿಯ ಬಗ್ಗೆ ಎಲ್ಲವೂ ತಿಳಿಯುತ್ತಾ ಹೋಯಿತು. ಅವನ ವಯಸ್ಸು ಇಪ್ಪತ್ತೈದರ ಮೇಲೆ ಇರಬೇಕು. ಸಣಕಲು ಆಸಾಮಿ. ಆದರೆ ಅತ್ಯಂತ ಚುರುಕಿನ ಕೈಚಳಕ ಅವನದ್ದು. ಅರಬ್ ಗಲ್ಲಿಯ ಜನ ಹೇಳುತ್ತಿದ್ದರು ಜೇಬಿನಿಂದ ಚಾಕು ತೆಗೆದು ಎದುರಿರುವ ವ್ಯಕ್ತಿಯ ಎದೆಗೆ ನೇರ ಚುಚ್ಚುವಂತೆ ಎಸೆಯಬಲ್ಲವನಾಗಿದ್ದ ಎಂದು. ಮೊದಲೇ ನಾನು ಹೇಳಿದ್ದೆನಲ್ಲ: ಅವನು ಚಾಕು ಚೂರಿ ದೊಣ್ಣೆಗಳನ್ನು ಬಳಸುವುದರಲ್ಲಿ ನಿಪುಣನೆಂದು. ಅವನು ನೂರಾರು ಕೊಲೆಗಳನ್ನು ಮಾಡಿರುವ ಬಗ್ಗೆ ಅಸಂಖ್ಯಾತ ಕಥೆಗಳು ಪ್ರಸಿದ್ಧಿ ಗಳಿಸಿದ್ದರೂ, ನಾನು ಅವುಗಳನ್ನು ನಂಬಲು ಸಿದ್ಧನಿರಲಿಲ್ಲ. ನನಗೆ ಅವನ ಬಾಕು ನೆನಪಾದರೆ ಬೆವರು ಕಿತ್ತುಕೊಂಡು ಬರುವಷ್ಟು ಹೆದರಿಕೆಯಾಗುತ್ತಿತ್ತು. ಅವನು ಯಾಕೆ ಯಾವಾಗಲೂ ಆ ಮಾರಕಾಸ್ತ್ರವನ್ನು ತನ್ನ ಹೊಟ್ಟೆಯ ಬಳಿ ಒರೆಯಿಲ್ಲದೆ ಇಟ್ಟುಕೊಳ್ಳುತ್ತಾನೆ?

ನನ್ನ ಆರೋಗ್ಯ ಸುಧಾರಿಸಿದ ಮೇಲೆ, ಅರಬ್ ಗಲ್ಲಿಯ ಚೈನೀಸ್ ರೆಸ್ಟೋರೆಂಟುಗಳಲ್ಲಿ ಆಗಾಗ ಎದುರಾಗುತ್ತಿದ್ದೆವು. ಅವನು ತನ್ನ ಬಾಕುವಿನಿಂದ ಕೈ ಉಗುರು ಕತ್ತರಿಸುತ್ತಿರುತ್ತಿದ್ದ. ನಾನು ಕೇಳಿದೆ, “ಮಮ್ಮದ್ ಭಾಯಿ ಇದು ಪಿಸ್ತೂಲು, ಬಂದೂಕುಗಳ ಕಾಲ. ನೀವು ಯಾಕೆ ಇನ್ನೂ ಬಾಕು ಬಳಸುತ್ತೀರಾ?” ಅವನು ಮೀಸೆ ಸರಿಮಾಡಿಕೊಂಡು, “ವಮಟೋ ಭಾಯಿ, ನನಗೆ ಬಂದೂಕುಗಳಿಂದ ಯಾವ ಸಂತೋಷವೂ ಸಿಗುವುದಿಲ್ಲ. ಸಣ್ಣಮಕ್ಕಳೂ ಅದನ್ನು ಉಪಯೋಗಿಸಬಹುದು. ಟ್ರಿಗರ್ ಎಳೆದರೆ ಮುಗಿಯಿತು, ಢಮಾರ್! ಅದರಲ್ಲೇನು ಮಜಾ ಇದೆ? ಇದಿದೆಯಲ್ಲ… ಈ ಬಾಕು… ಈ ಚಾಕು… ಈ ಚೂರಿ… ಅದೆಷ್ಟು ಮಜಾ ನಿಮಗೆ ಗೊತ್ತಾ… ನನ್ನಾಣೆಗೂ… ಇದು ಏನು ಗೊತ್ತಾ… ಅದೇನೋ ಹೇಳುತ್ತೀರಲ್ಲ… ಹಾಂ… ಕಲೆ… ಇದು ಒಂದು ಕಲೆ… ಯಾರಿಗೆ ಚಾಕು ಚೂರಿ ಬಳಸುವ ಕಲೆ ಗೊತ್ತಿಲ್ಲವೋ ಅವನು ಕೆಲಸಕ್ಕೆ ಬಾರದವನು… ಪಿಸ್ತೂಲ್ ಏನು… ಅದೊಂದು ಆಟಿಕೆ… ಸಾಯಿಸುವ ಆಟಿಕೆ ಅಷ್ಟೇ… ಅದರಲ್ಲಿ ಯಾವ ಮಜಾ ಇದೆ ಮಣ್ಣು… ಈ ಬಾಕುವನ್ನು ನೋಡಿ… ಅದರ ಹರಿತವಾದ ಅಲಗನ್ನು ನೋಡಿ,”

ಹೀಗೆ ಹೇಳುತ್ತಾ ಹೆಬ್ಬೆರಳನ್ನು ಒದ್ದೆ ಮಾಡಿಕೊಂಡು ಅದರಿಂದ ಅಲಗನ್ನು ಸವರುತ್ತಾ, “ಇದರಿಂದ ಯಾವ ಸದ್ದೂ ಬರುವುದಿಲ್ಲ. ಯಾರದ್ದಾದರೂ ಹೊಟ್ಟೆಗೆ ಸೀದಾ ಇಳಿಸಿಬಿಡಬಹುದು. ಎಷ್ಟು ಸುಲಭವಾಗಿ ಹೊಟ್ಟೆಯೊಳಗೆ ಹೊಕ್ಕುತ್ತದೆ ಎಂದರೆ ಆ ಬೇವರ್ಸಿಗೆ ಗೊತ್ತು ಕೂಡಾ ಆಗುವುದಿಲ್ಲ. ಬಂದೂಕು, ಪಿಸ್ತೂಲು ಎಲ್ಲವೂ ಉಪಯೋಗವಿಲ್ಲದ್ದು, ಕೆಲಸಕ್ಕೆ ಬಾರದ್ದು,” ಎನ್ನುತ್ತಿದ್ದ.

ದಿನವೂ ಮಮ್ಮದ್ ಭಾಯಿಯನ್ನು ನೋಡುವುದು ಮಾಮೂಲಾಯಿತು. ನನಗೆ ಮಾಡಿದ ಉಪಕಾರಕ್ಕೆ ನಾನು ಕಟ್ಟುಬಿದ್ದಿದ್ದೆ. ಆದರೆ ನಾನು ಯಾವಾಗಲಾದರೂ ಕೃತಜ್ಞತೆ ಹೇಳಲು ಯತ್ನಿಸಿದರೆ ಅವನು ಸಿಟ್ಟಾಗಿ, “ನಾನು ನಿನಗೆ ಉಪಕಾರ ಮಾಡಲಿಲ್ಲ, ಅದು ನನ್ನ ಕರ್ತವ್ಯವಾಗಿತ್ತು,” ಎನ್ನುತ್ತಿದ್ದ.

ಅವನು ರೌಡಿ ಅನ್ನಿಸಿಕೊಂಡಿದ್ದರೂ, ಅವನಲ್ಲಿ ಹೆದರುವಂಥದ್ದೇನಿತ್ತು ಎಂದು ನನಗೆ ಇಂದಿಗೂ ಅರ್ಥವಾಗಿಲ್ಲ, ಅವನ ಮೀಸೆಯನ್ನು ಬಿಟ್ಟು. ಮುಳ್ಳುಹಂದಿಯ ಮುಳ್ಳುಗಳಂತೆ ಮೀಸೆಯ ಪ್ರತಿಯೊಂದು ಕೂದಲು ಕೂಡಾ ನೆಟ್ಟಗೆ ನಿಂತಿರುತ್ತಿತ್ತು. ಯಾರೋ ಹೇಳಿದರು ಅದಕ್ಕೆ ಅವನು ದಿನವೂ ಎಣ್ಣೆ ಹಚ್ಚುತ್ತಾನೆ ಎಂದು. ಆಹಾರ ತಿನ್ನುವಾಗ, ಅದರೊಳಗೆ ಬೆರಳುಗಳನ್ನು ಅದ್ದಿ ಅದರಿಂದ ಮೀಸೆ ಮಸಾಜ್ ಮಾಡುತ್ತಿದ್ದ, ಎಣ್ಣೆ ಹಚ್ಚಿದರೆ ಕೂದಲು ಚೆನ್ನಾಗಿ ಬೆಳೆಯುತ್ತದೆ ಎಂಬ ನಂಬಿಕೆಯಲ್ಲಿ. ಅವನ ಮೀಸೆ ಅಥವಾ ಅವನ ಬಳಿಯಿದ್ದ ಆ ಬಾಕುವಿನಿಂದಾಗಿ ಅವನು ದಾದಾ ಎನ್ನಿಸಿಕೊಂಡಿದ್ದ.

ನಾವು ಒಳ್ಳೆಯ ಸ್ನೇಹಿತರಾದೆವು. ಅವನು ಅನಕ್ಷರಸ್ಥನಾದರೂ ನನ್ನನ್ನು ಎಷ್ಟು ಗೌರವಿಸುತ್ತಿದ್ದ ಎಂದರೆ ಇಡೀ ಅರಬ್ ಗಲ್ಲಿಯಲ್ಲಿ ಆ ಬಗ್ಗೆ ಎಲ್ಲರೂ ಅಸೂಯೆಗೊಳ್ಳುವಷ್ಟು.

ಒಂದು ಮುಂಜಾನೆ ನಾನು ಕಚೇರಿಗೆ ಹೊರಟಾಗ, ಚೈನೀಸ್ ರೆಸ್ಟೋರೆಂಟಿನಲ್ಲಿ ಮಮ್ಮದ್ ಭಾಯಿ ಅರೆಸ್ಟ್ ಅಗಿದ್ದಾನೆಂದು ಯಾರೋ ಮಾತಾಡಿಕೊಳ್ಳುವುದು ಕಿವಿಗೆ ಬಿತ್ತು. ಇದು ನನಗೆ ಅಚ್ಚರಿಯುಂಟುಮಾಡಿತು ಏಕೆಂದರೆ ಮಮ್ಮದ್ ಭಾಯಿಗೆ ಆ ಏರಿಯಾದ ಎಲ್ಲ ಪೊಲೀಸರ ಜೊತೆಗೂ ಸ್ನೇಹವಿತ್ತು. ನಾನು ಯಾರನ್ನೋ ಮಮ್ಮದ್ ಭಾಯಿ ಅರೆಸ್ಟ್ ಆದ ಕಾರಣ ಕೇಳಿದೆ.

ಅರಬ್ ಗಲ್ಲಿಯ ವಾಸಿಯಾದ ಶಿರಿನ್ ಬಾಯಿಯ ಪುಟ್ಟ ಮಗಳು ಹಿಂದಿನ ದಿನ ಅತ್ಯಾಚಾರಕ್ಕೊಳಗಾಗಿದ್ದಳು. ಶಿರಿನ್ ಬಾಯಿ, ಮಮ್ಮದ್ ಭಾಯಿಯ ಬಳಿಗೆ ಹೋಗಿ ಹೇಳಿದ್ದಳು, “ನೀವು ನಮ್ಮ ರಕ್ಷಕ. ಯಾವನೋ ನನ್ನ ಮಗಳಿಗೆ ಹೀಗೆ ಮಾಡಿಬಿಟ್ಟಿದ್ದಾನೆ. ನೀವು ನೋಡಿದರೆ ಮನೆಯಲ್ಲಿ ಆರಾಮವಾಗಿ ಇದ್ದೀರಿ ಅವನಿಗೇನೂ ಮಾಡದೆ”

ಮಮ್ಮದ್ ಭಾಯಿ ಆ ವಯಸ್ಸಾದಾಕೆಯತ್ತ ಘೋರ ಅವಮಾನದ ಮಾತುಗಳನ್ನು ತೂರಿ ಹೇಳಿದ, “ನಾನೇನು ಮಾಡಬೇಕು ಈಗ?” ಶಿರಿನ್ ಬಾಯಿ, “ಆ ಸೂಳೆಮಗನ ಹೊಟ್ಟೆಯನ್ನು ಸೀಳಿ ಬಗೆಯಿರಿ,” ಎಂದಳು.

ಮಮ್ಮದ್ ಭಾಯಿ ಹೋಟೆಲ್ ಒಂದರಲ್ಲಿ ಕುಳಿತು ಊಟ ಮಾಡುತ್ತಿದ್ದ. ಶಿರಿನ್ ಬಾಯಿ ಮಾತು ಮುಗಿಸಿದ ಕೂಡಲೇ ಅವನು ತನ್ನ ಸೊಂಟದಿಂದ ಬಾಕು ಹೊರಗೆಳೆದು ತನ್ನ ಹೆಬ್ಬೆರಳಿನಿಂದ ಅದು ಹರಿತವಾಗಿದೆಯೇ ಎಂದು ಪರೀಕ್ಷಿಸಿ ಹೇಳಿದ, “ನೀನು ಹೋಗು, ನಾನು ಆ ಕೆಲಸ ಮುಗಿಸುತ್ತೇನೆ.”

ಅವನು ಮುಗಿಸಿದ. ಅರ್ಧ ಗಂಟೆಯೊಳಗೆ ಶಿರಿನ್ ಬಾಯಿಯ ಮಗಳನ್ನು ರೇಪ್ ಮಾಡಿದ ವ್ಯಕ್ತಿ ಸತ್ತಿದ್ದ. ಮಮ್ಮದ್ ಭಾಯಿ ಅರೆಸ್ಟ್ ಆದ. ಆದರೆ ಅದಕ್ಕೆ ಯಾವ ಸಾಕ್ಷಿಗಳೂ ಇರಲಿಲ್ಲ. ಅಲ್ಲಿ ಯಾರಾದರೂ ಇದ್ದಿದ್ದರೂ, ಅವರು ಯಾರೂ ಎಂದಿಗೂ ಕೋರ್ಟಿನಲ್ಲಿ ಸಾಕ್ಷಿ ಹೇಳುತ್ತಿರಲಿಲ್ಲ.

ಅವನು ಎರಡು ದಿನ ಪೊಲೀಸ್ ಕಸ್ಟಡಿಯಲ್ಲಿದ್ದ. ಆದರೆ ಅದು ಮತ್ತೊಂದು ಮನೆಯೇ ಇದ್ದಂತಿತ್ತು ಯಾಕೆಂದರೆ ಅಲ್ಲಿದ್ದ ಎಲ್ಲ ಅಧಿಕಾರಿಗಳಿಗೂ ಅವನು ಗೊತ್ತಿದ್ದವನೇ. ಆದಾಗ್ಯೂ ಅವನು ಬೇಲ್ ಸಿಕ್ಕಿ ಅಲ್ಲಿಂದ ಹೊರಬರುವಾಗ ತಾನು ಸಿಕ್ಕಿಬೀಳುವುದು ಖಂಡಿತ ಅನಿಸುತ್ತಿತ್ತು. ಹಾಗಾಗಿ ಅವನು ಸಪ್ಪೆಯಾಗಿದ್ದ.

ಮಮ್ಮದ್ ಭಾಯಿ ಆ ದಿನ ಚೈನೀಸ್ ರೆಸ್ಟೋರೆಂಟಿನಲ್ಲಿ ಸಿಕ್ಕಿದ. ಮಾಮೂಲಿಯಾಗಿ ಶುಭ್ರವಾಗಿರುತ್ತಿದ್ದ ಅವನ ಬಟ್ಟೆ ಅಂದು ಕೊಳಕಾಗಿತ್ತು. ನಾನು ಅವನ ಬಳಿ ಕೊಲೆಯ ವಿಷಯವನ್ನೇ ಮಾತಾಡಲಿಲ್ಲ. ಆದರೆ ಅವನೇ ಹೇಳಿದ, “ವಮಟೋ ಸಾಬ್, ಆ ಸೂಳೆಮಗನನ್ನು ಕೊಲ್ಲಲು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಂಡುಬಿಟ್ಟೆ. ಅವನಿಗೆ ಚೂರಿ ಚುಚ್ಚುವಾಗ ತಪ್ಪು ಮಾಡಿದೆ. ನನ್ನ ಕೈ ತಿರುಚಿಕೊಂಡುಬಿಟ್ಟಿತು. ಆದರೆ ಇದರಲ್ಲಿ ಆ ಸೂಳೆಮಗನದ್ದೂ ತಪ್ಪಿದೆ. ಅವನು ಇದ್ದಕ್ಕಿದ್ದಂತೆ ತಿರುಗಿಬಿಟ್ಟ. ಹಾಗಾಗಿ ಎಲ್ಲವೂ ಎಡವಟ್ಟಾಯಿತು. ಅವನು ಸತ್ತ, ಆದರೆ ಅಷ್ಟು ನೋವು ಅನುಭವಿಸುತ್ತ ಸತ್ತಿದ್ದಕ್ಕೆ ಸ್ವಲ್ಪ ಬೇಸರವಾಯಿತು.”

ನಾನು ಹೇಗೆ ಪ್ರತಿಕ್ರಿಯಿಸಿರಬಹುದೆಂದು ನೀವು ಊಹಿಸಬಲ್ಲಿರಿ. ಅವನಿಗೆ ಅವನನ್ನು ಕೊಂದಿದ್ದು ಬೇಸರವಾಗಿರಲಿಲ್ಲ. ಆದರೆ ಹೆಚ್ಚು ನೋವಾಗುವಂತೆ ಸಾಯಿಸಿದೆನಲ್ಲ ಎಂದು ಬೇಜಾರಾಗಿತ್ತು!

ವಿಚಾರಣೆ ಶುರುವಾಯಿತು. ಮಮ್ಮದ್ ಭಾಯಿಗೆ ಸ್ವಲ್ಪ ಆತಂಕವಾಗಿತ್ತು ಏಕೆಂದರೆ ಈ ಹಿಂದೆ ಅವನು ನ್ಯಾಯಾಧೀಶರ ಎದುರು ನಿಂತಿರಲಿಲ್ಲ. ನಾನು ಮೊದಲೇ ಹೇಳಿದಂತೆ, ಅವನು ಅದೆಷ್ಟು ಜನರ ಕೊಲೆ ಮಾಡಿದ್ದನೋ ನನಗೆ ನಿಜಕ್ಕೂ ಗೊತ್ತಿಲ್ಲ. ಆದರೆ ಅವನಿಗೆ ನ್ಯಾಯಾಧೀಶರು, ವಕೀಲರು, ಸಾಕ್ಷಿಗಳು ಇವುಗಳ ಬಗ್ಗೆಯೆಲ್ಲ ಏನೂ ತಿಳಿದಿರಲಿಲ್ಲ. ಪೊಲೀಸರು ಕೇಸ್ ಮಂಡಿಸಿದರು.

ವಿಚಾರಣೆಯ ದಿನ ನಿಗದಿಯಾಯಿತು. ಮಮ್ಮದ್ ಭಾಯಿ ವಿಚಲಿತನಾಗಿದ್ದ. ಪದೇ ಪದೇ ತನ್ನ ಮೀಸೆ ತೀಡಿಕೊಳ್ಳುತ್ತಾ ಹೇಳಿದ, “ವಮಟೋ ಸಾಹಿಬ್, ನಾನು ಕೋರ್ಟ್‌ ರೂಮಿಗೆ ಹೋಗುವ ಬದಲು ಸತ್ತು ಹೋಗುತ್ತೇನೆ, ಅದೇ ವಾಸಿ. ಅದು ಹೇಗಿದೆ ಅಂತ ನಿಮಗೆ ಗೊತ್ತಿಲ್ಲ!” ಅರಬ್ ಗಲ್ಲಿಯ ಅವನ ಸ್ನೇಹಿತರು ಸಾಕ್ಷಿಗಳು ಇಲ್ಲದ್ದರಿಂದ ಏನೂ ತೊಂದರೆಯಾಗುವುದಿಲ್ಲ ಎಂದು ಭರವಸೆ ಕೊಟ್ಟರು. ಆದರೆ ಅವನ ಮೀಸೆ ಮಾತ್ರ ನ್ಯಾಯಾಧೀಶರು ಅವನ ವಿರುದ್ಧವಾಗಿ ತೀರ್ಪು ನೀಡುವಂತೆ ಮಾಡಬಹುದು ಎಂದು ಅಭಿಪ್ರಾಯ ಪಟ್ಟರು.

ಮಮ್ಮದ್ ಭಾಯಿ ಅದರ ಬಗ್ಗೆ ಯೋಚನೆ ಮಾಡಿದ. ಅವನ ವಿಚಾರಣೆಯ ದಿನ ಹತ್ತಿರವಾದಾಗ ಒಂದು ಇರಾನಿ ರೆಸ್ಟೋರೆಂಟಿನಲ್ಲಿ ಸಿಕ್ಕ. ಅತ್ಯಂತ ಚಿಂತಾಕ್ರಾಂತನಾಗಿದ್ದ. ಮೀಸೆಯನ್ನು ಏನು ಮಾಡಬೇಕು ಎಂಬುದೇ ಅರ್ಥವಾಗುತ್ತಿಲ್ಲ. ಕೋರ್ಟಿಗೆ ಆ ಮೀಸೆಯ ಸಮೇತ ಹೋದರೆ ಶಿಕ್ಷೆಗೊಳಪಡುವ ಎಲ್ಲ ಸಾಧ್ಯತೆಯೂ ಇತ್ತು.

ನಿಮಗಿದು ಒಂದು ಕಥೆಯಾಗಿ ತೋರುತ್ತಿರಬಹುದು. ಆದರೆ ಅವನಿಗೆ ನಿಜಕ್ಕೂ ಗಾಬರಿಯಾಗಿತ್ತು. ಎಂದೂ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಅವನ ಈ ಸ್ಥಿತಿ ನೋಡಿ ಅವನ ಶಿಷ್ಯಂದಿರಿಗೂ ಚಿಂತೆಯಾಗಿತ್ತು.

ಆದರೆ ಅವನ ಆಪ್ತರನೇಕರು ಅವನಿಗೆ ಬುದ್ಧಿ ಹೇಳಿದ್ದರು, “ಮಮ್ಮದ್ ಭಾಯಿ, ನೀವು ಕೋರ್ಟಿಗೆ ಹೋಗಬೇಕು ಅಂತಿದ್ದರೆ ಮೀಸೆ ತೆಗೆಯಿರಿ. ಇಲ್ಲದಿದ್ದರೆ ಶಿಕ್ಷೆ ಗ್ಯಾರಂಟಿ!”

ಅದರ ಬಗ್ಗೆ ಎಷ್ಟು ಚಿಂತೆಗೊಳಗಾದ್ದನೆಂದರೆ ನಿಜಕ್ಕೂ ಅವನನ್ನು ಸಾಯಿಸಿದ್ದು ತಾನೋ ಅಥವಾ ತನ್ನ ಮೀಸೆಯೋ ಎನ್ನಿಸಲು ಪ್ರಾರಂಭವಾಯಿತು! ಯಾವ ನಿರ್ಧಾರಕ್ಕೂ ಬರಲಾಗಲಿಲ್ಲ. ತನ್ನ ಸೊಂಟದಲ್ಲಿದ್ದ ಚೂರಿ ತೆಗೆದು ಓಣಿಯಲ್ಲಿ ಬೀಸಿ ಒಗೆದ. ನನಗೆ ನನ್ನ ಕಣ್ಣನ್ನೇ ನಂಬಲಾಗಲಿಲ್ಲ.

“ಮಮ್ಮದ್ ಭಾಯಿ ಇದೇನು ಮಾಡುತ್ತಿದ್ದೀರಿ?”

“ಏನಿಲ್ಲ ವಮಟೋ ಭಾಯಿ. ನನಗೀಗ ದೊಡ್ಡ ತೊಂದರೆ ಎದುರಾಗಿದೆ. ನಾನು ಕೋರ್ಟಿಗೆ ಹೋಗಬೇಕು. ನನ್ನ ಸ್ನೇಹಿತರು ಹೇಳುತ್ತಿದ್ದಾರೆ ಜಡ್ಜ್ ನನ್ನ ಮೀಸೆಯನ್ನು ನೋಡಿದರೆ ನನಗೆ ಶಿಕ್ಷೆಯಾಗುವುದು ಗ್ಯಾರಂಟಿ ಎಂದು. ಏನು ಮಾಡಲಿ?”

ನಾನೇನು ಹೇಳಲಿ? ನಾನು ಅವನ ಮೀಸೆಯನ್ನೇ ನೋಡುತ್ತಾ ಹೇಳಿದೆ, “ಮಮ್ಮದ್ ಭಾಯಿ ಅವರು ಹೇಳುವುದು ಸರಿ. ನಿಮ್ಮ ಮೀಸೆ ನ್ಯಾಯಾಧೀಶರ ನಿರ್ಧಾರದ ಮೇಲೆ ನಿಜಕ್ಕೂ ಪ್ರಭಾವ ಬೀರುತ್ತದೆ. ನಿಜಕ್ಕೂ ಹೇಳಬೇಕೆಂದರೆ ಆ ನಿರ್ಣಯ ನಿಮ್ಮ ವಿರುದ್ಧವಲ್ಲ, ನಿಮ್ಮ ಮೀಸೆಯ ವಿರುದ್ಧವಾಗಿ ಅನ್ನಬಹುದು.”

“ಹಾಗಿದ್ದರೆ ಅದನ್ನು ಬೋಳಿಸಿಬಿಡಲಾ?” ಮಮ್ಮದ್ ಭಾಯಿ ಕೇಳಿದ ತನ್ನ ಪ್ರಾಣಪ್ರಿಯವಾದ ಮೀಸೆಯನ್ನು ನೇವರಿಸುತ್ತ,

“ನಿಮಗೇನನ್ನಿಸುತ್ತದೆ?”

“ನನಗೇನು ಅನಿಸುತ್ತದೆ ಅನ್ನುವುದು ಮುಖ್ಯವಲ್ಲ. ಅದನ್ನು ತಿಳಿಯಪಡಿಸುವ ಅಗತ್ಯವೂ ಇಲ್ಲ. ಆದರೆ ಎಲ್ಲರೂ ಅದನ್ನು ಬೋಳಿಸುವುದು ಒಳ್ಳೆಯದು ಅನ್ನುತ್ತಿದ್ದಾರೆ. ಬೋಳಿಸಿ ಬಿಡಲಾ ವಮಟೋ ಭಾಯಿ?”

“ಹಾಗೆ ಮಾಡಿಬಿಡಿ. ಅದು ಸರಿ ಅನ್ನಿಸಿದರೆ ಮಾಡಿಬಿಡಿ. ಇದು ಕೋರ್ಟಿಗೆ ಸಂಬಂಧಪಟ್ಟ ವಿಷಯ. ನಿಮ್ಮ ಮೀಸೆ ನಿಜಕ್ಕೂ ಭಯ ಹುಟ್ಟಿಸುತ್ತದೆ.”

ಮರುದಿನ ಮಮ್ಮದ್ ಭಾಯಿ ತನ್ನ ಮೀಸೆಯನ್ನು ಬೋಳಿಸಿದ, ಅದೂ ಬೇರೆಯವರ ಬುದ್ಧಿಮಾತಿಗೆ ಬೆಲೆ ಕೊಟ್ಟಷ್ಟೇ. ಅವರ ಕೇಸ್ ಎಫ್ ಎಚ್ ಟೀಗ್ ಅವರ ಮುಂದೆ ಬಂದಿತು. ಅವನ ವಿರುದ್ಧ ಸಾಕ್ಷಿಗಳಿರಲಿಲ್ಲ. ಆದರೆ ಜಡ್ಜ್ ಆತನೊಬ್ಬ ಸಮಾಜಘಾತುಕ ಶಕ್ತಿ ಎಂದು ತೀರ್ಮಾನಿಸಿ ಆ ಊರನ್ನು ಬಿಟ್ಟುಹೋಗುವಂತೆ ತೀರ್ಪು ನೀಡಿದರು. ಅವನಿಗೆ ಕೇವಲ ಒಂದು ದಿನ ಮಾತ್ರ ಕಾಲಾವಕಾಶವಿತ್ತು ಬಾಂಬೆ ಬಿಟ್ಟು ಹೋಗಲು.

ಕೋರ್ಟ್ ಬಿಟ್ಟು ಹೊರಬಂದ ಮೇಲೆ ಅವರು ನನಗೇನೂ ಹೇಳಲಿಲ್ಲ. ನಾವೆಲ್ಲ ಆ ಸಂಜೆ ಇರಾನಿ ರೆಸ್ಟೋರೆಂಟ್ ಒಂದರಲ್ಲಿ ಭೇಟಿಯಾದೆವು. ಇಪ್ಪತ್ತು ಶಿಷ್ಯಂದಿರು ಅವನನ್ನು ಸುತ್ತುವರೆದಿದ್ದರು. ಅವರೆಲ್ಲ ಚಹಾ ಕುಡಿದರು. ನನ್ನನ್ನು ನೋಡಿದಾಗ ಅವನೇನೂ ಹೇಳಲಿಲ್ಲ. ಮೀಸೆಯಿಲ್ಲದೆ ಅವನು ಅತ್ಯಂತ ಗೌರವಾನ್ವಿತನಂತೆ ಕಾಣುತ್ತಿದ್ದ. ಆದರೆ ಅವನು ದುಃಖಿತನಾಗಿದ್ದ.

ನಾನು ಅವನ ಪಕ್ಕ ಕುಳಿತು ಕೇಳಿದೆ, “ಏನಾಯಿತು ಮಮ್ಮದ್ ಭಾಯಿ?”

ಅವನು ಹಿಡಿಶಾಪ ಹಾಕುತ್ತಾ ಹೇಳಿದ, “ಮಮ್ಮದ್ ಭಾಯಿ ಸತ್ತ”

“ಯೋಚಿಸಬೇಡಿ. ಇಲ್ಲಿ ಅಲ್ಲದಿದ್ದರೆ ಮತ್ತೆ ಎಲ್ಲೋ ಬದುಕಬಹುದು.”

ಅವನು ಎಲ್ಲ ಜಾಗಗಳಿಗೂ ಹಿಡಿಶಾಪ ಹಾಕಿದ. ಆ ನಂತರ, “ನಾನು ಬೇರೆಲ್ಲಿ ಬದುಕುತ್ತೇನೆ ಅನ್ನುವುದು ಪ್ರಶ್ನೆಯಲ್ಲ. ಇಲ್ಲಿ ಅಲ್ಲದಿದ್ದರೆ ಮತ್ತೆಲ್ಲೋ ಆಗುತ್ತದೆ. ಎಲ್ಲ ಒಂದೇ. ಆದರೆ ನಾನೇಕೆ ನನ್ನ ಮೀಸೆಯನ್ನು ಬೋಳಿಸಿದೆ?”

ಅವನು ತನಗೆ ಮೀಸೆ ಬೋಳಿಸಲು ಹೇಳಿದವರ ಮೇಲೆಲ್ಲ ಹರಿಹಾಯ್ದ. ನಂತರ ಕೇಳಿದ, “ಈ ಊರನ್ನು ಬಿಟ್ಟು ಹೋಗಲೇಬೇಕು ಅನ್ನುವುದೇ ಆಗಿದ್ದರೆ ನಾನು ಮೀಸೆಯ ಜೊತೆಯೇ ಹೋಗಬಹುದಿತ್ತಲ್ಲ?”

ನನಗೆ ನಗು ತಡೆಯಲಾಗಲಿಲ್ಲ.

ಅವನಿಗೆ ಸಿಟ್ಟು ಉಕ್ಕೇರಿತು. “ಎಂಥ ಮನುಷ್ಯ ನೀವು ಮಂಟೋ ಸಾಹಿಬ್? ಥೂ… ಅವರು ನನಗೆ ಗಲ್ಲು ಶಿಕ್ಷೆ ವಿಧಿಸಬೇಕಿತ್ತು. ನಾನು ಯಾರಿಗೂ ಹೆದರಿದವನಲ್ಲ. ಆದರೆ ಅಯ್ಯೋ ದರಿದ್ರ ನನ್ನ ಮೀಸೆಗೆ ಹೆದರಿಬಿಟ್ಟೆನಲ್ಲ.”

ಅವನು ತನ್ನ ಕಪಾಳಕ್ಕೆ ತಾನೇ ಎರಡು ಬಾರಿ ಬಾರಿಸಿಕೊಂಡು, “ಮಮ್ಮದ್ ಭಾಯಿ, ನಿನಗೆ ಒಳ್ಳೆಯದಾಗುವುದಿಲ್ಲ! ಥು ನಿನ್ನ ಮೀಸೆಗೇ ನೀನೇ ಹೆದರಿಕೊಂಡೆಯಾ? ಇಲ್ಲಿಂದ ತೊಲಗು, ನಿನ್ನಮ್ಮನ್…”

ಹೀಗೆನ್ನುವಾಗಲೇ ಅವನ ಕಣ್ಣಿನ ತುಂಬಾ ನೀರು ತುಂಬಿಕೊಂಡಿತು. ಆದರೆ ಅದು ಅವನ ನುಣುಪಾದ ಗಲ್ಲದ ಮೇಲೆ ಅದೆಷ್ಟು ವಿಚಿತ್ರವಾಗಿ ಕಾಣಿಸಿತು!

(ಮೂಲ: A Question of Honour)
(ಕೃತಿ: ಯಕ್…!‌ (ಮಾಂಟೋನ ಕಥೆಗಳು), ಮೂಲ: ಸಾದತ್‌ ಹಸನ್‌ ಮಾಂಟೋ, ಕನ್ನಡಕ್ಕೆ: ಭಾರತಿ ಬಿ.ವಿ., ಪ್ರಕಾಶಕರು: ಬಹುರೂಪಿ, ಬೆಲೆ:300/-)