ಏಳು ಲಾಖಿ… ಈ ಆಸ್ಪತ್ರೆಯಲ್ಲಿ ಎಷ್ಟೆಂದು ಮಲಗುತ್ತೀಯ ನಡೀ” ಎನ್ನುತ್ತಾ ಜೀತೂ ಮೈಮೇಲೆ ಖಬರಿಲ್ಲದವನಂತೆ ಲಾಖಿಯ ಭುಜ ಹಿಡಿದು ಅಲುಗಾಡಿಸುತ್ತಿದುದನ್ನ ನೋಡಿ ಅಲ್ಲೇ ಓಡಾಡುತ್ತಿದ್ದ ಬಿಳಿಸೀರೆಯ ದಾದಿ ಕನಿಕರಗೊಂಡು “ತಮ್ಮಾ ನೀನು ಎಷ್ಟು ಎಬ್ಬಿಸಿದ್ರೂ ಅವಳಿನ್ನ ಏಳಲಾರಳು, ನೋಡಲ್ಲಿ ನಿನ್ನ ಮಕ್ಕಳು ಕಂಗಾಲಾಗಿ ನಿನ್ನನ್ನೇ ನೋಡ್ತಿವೆ” ಎಂದು ಅವನ ಭುಜ ಹಿಡಿದು ಸಂತೈಸಿದಳು. ಜೀತೂ ಮತ್ತೆ ವಾಸ್ತವದಲ್ಲಿ ಬಿದ್ದ. ಲಾಖಿ ಕ್ಯಾರೇ ಎನ್ನದಂತೆ ಮಲಗಿಯೇ ಇದ್ದಳು.
ಇಂದು ಬಿಡುಗಡೆಗೊಳ್ಳುತ್ತಿರುವ ಶುಭಾ ಎ.ಆರ್. ಅವರ “ತುಂಡು ಭೂಮಿ ತುಣುಕು ಆಕಾಶ” ಕಥಾ ಸಂಕಲನದ ಒಂದು ಕತೆ ನಿಮ್ಮ ಓದಿಗೆ

 

 

ಕಣ್ಣೀರ ಸುರಿ ಕೆರಳು ಕಾದು ಕೊಲ್ ಕೊಲ್ಲಿಸಿಕೊ
ಬಿನ್ನಣಿಸು ಹಂಬಲಿಸು ದುಡಿ ಬೆದರು ಬೀಗು
ಚಿಣ್ಣರಾಟವೆನೆ ನೋಡುತೆ ನಿನ್ನ ಪಾಡುಗಳ
ತಣ್ಣಗಿರುವನು ಶಿವನು – ಮರುಳ ಮುನಿಯ
– ಡಿ.ವಿ.ಜಿ.

ಜೀತೂರಾಮ ದಿಗ್ಭ್ರಾಂತನಾಗಿ ನಿಂತುಬಿಟ್ಟ. ಬಿಳಿಕೋಟು ಹಾಕಿದ ಆಸ್ಪತ್ರೆಯ ಆ ಡಾಕ್ಟರ್ ಸಾಹೇಬ ಲಾಖಿಯ ಬಗ್ಗೆ ಏನು ಹೇಳುತ್ತಿದ್ದಾನೆನ್ನುವುದು ಅವನ ಕಿವಿ ತಮಟೆಯ ಮೇಲೆ ಫಿರಂಗಿ ಗುಂಡಿನಂತೆ ಅಪ್ಪಳಿಸಿದ್ದಷ್ಟೇ ಗೊತ್ತಾದದ್ದು. ಮುಂದಿನದೇನು ಅವನ ತಲೆಗೆ ಹೋಗಲೇ ಇಲ್ಲ. ಲಾಖಿ ಇಲ್ಲ…ತನ್ನ ಲಾಖಿ ..ಹದಿನೈದು ವರ್ಷ ತನ್ನೊಂದಿಗೆ ಈ ಬದುಕಿನ ಎಲ್ಲ ಕಷ್ಟ-ಸುಖಗಳ ಬಂಡಿಗೆ ಮೂಗೆತ್ತಿನಂತೆ ಹೆಗಲು ಕೊಟ್ಟು ಬಸವಳಿದ ಲಾಖಿ ಇನ್ನಿಲ್ಲ… ಯಾವ ಮಾಯದಲ್ಲೋ ಕಣ್ಣೀರಿನಿಂದ ತುಂಬಿಕೊಂಡ ಮಬ್ಬುಗಣ್ಣುಗಳನ್ನಗಲಿಸಿ ಅತ್ತಿತ್ತ ನೋಡಿದ. ಅಲ್ಲಿ ಕೆಲವು ಮಾರಡಿ ದೂರದಲ್ಲಿ ಪುಟ್ಟ ಇಮಲಿ ಕಾಗದದ ತಾಟಿನಲ್ಲಿ ಯಾರೋ ಹಾಕಿಕೊಟ್ಟಿದ್ದ ತುಂಡು ಸಮೋಸಾದ ಚೂರುಗಳನ್ನ ಪುಟ್ಟ ಜಗ್ಯಾನ ಬಾಯಿಗಿಡಲು ಪ್ರಯತ್ನಿಸುತ್ತಿದ್ದಳು. ಜಗ್ಯಾ ಸಮೋಸಾ ಖಾರವಿದ್ದುದರಿಂದಲೋ ಏನೋ ಕಣ್ಣು ಮೂಗಿನಲ್ಲಿ ನೀರಿಳಿಸುತ್ತಾ ತಲೆಯಲುಗಿಸುತ್ತಿದ್ದುದೂ ಇಮಲಿ ಥೇಟು ಲಾಖಿಯಂತೆಯೇ, ತನ್ನ ಹರಿದ ಲಂಗದ ಚುಂಗಿನಿಂದ ಅವನ ಕಣ್ಣು ಮೂಗನ್ನೊರೆಸಿ ಸಮಾಧಾನಪಡಿಸುತ್ತಿದ್ದುದೂ ಕಂಡು ಜೀತೂವಿನ ಹೊಟ್ಟೆಯಲ್ಲಿ ಬೆಂಕಿ ಬಿದ್ದಂತಾಯಿತು. ಲಾಖಿ.. ಈ ಪುಟ್ಟ ಮಕ್ಕಳನ್ನ ಬಿಟ್ಟು ಹೋಗಲು ನಿನಗೆ ಮನಸ್ಸಾದರೂ ಹೇಗೆ ಬಂತು? ನೋಡಲ್ಲಿ ಜಗ್ಯಾ ಅಳುತ್ತಿದ್ದಾನೆ, ಇಮಲಿಗೂ ಹಸಿವಾಗಿದೆ .. ಇನ್ನೇನು ಅವರಿಬ್ಬರು ಮಾ… ಎನ್ನುತ್ತಾ ನಿನ್ನನ್ನ ಹುಡುಕಿಕೊಂಡು ಬಂದುಬಿಡುತ್ತಾರೆ… ಲಾಖೀ.. ನಿನಗೇಕೆ ಕೇಳುತ್ತಿಲ್ಲ? ಜೀತೂ ಮೌನದಲ್ಲೇ ಲಾಖಿಯನ್ನ ಮಾತಾಡಿಸುತ್ತಿದ್ದ. ಅಷ್ಟರಲ್ಲೇ ಆ ಡಾಕ್ಟರ್ ಸಾಹೇಬನಿಗೆ ಜೀತೂವಿನ ತುಂಬಿದ ಕಣ್ಣುಗಳನ್ನೂ ಅವನ ದಯನೀಯ ನೋಟಕ್ಕೆ ಗುರಿಯಾಗಿದ್ದ ಇಮಲಿ, ಜಗ್ಯಾರನ್ನೂ ನೋಡಿ ಕನಿಕರವೆನಿಸಿರಬೇಕು. ಮೆಲ್ಲನೆ ಜೀತೂವಿನ ಭುಜ ತಟ್ಟಿ ಎಚ್ಚರಿಸಿದ. ಜೀತೂ ಮತ್ತೆ ಈ ಲೋಕಕ್ಕೆ ಬಂದ. ಆ ಬಿಳಿಕೋಟಿನವನ ಹಿಂದೆ ಗೋಣು ಬಗ್ಗಿಸಿ ಆಸ್ಪತ್ರೆ ಎನ್ನುವ ಆ ಕೊಳಕು ಕಟ್ಟಡದೊಳಗೆ ಮೂಕಪಶುವಿನಂತೆ ನಡೆದ. ಅಲ್ಲಿ ಆ ಉದ್ದಾನುದ್ದದ ಪಡಸಾಲೆಯಲ್ಲೆ ಅಲ್ಲಲ್ಲಿ ಕುಳಿತು ಕೊಳಕು ಬಟ್ಟೆಯಲ್ಲಿ ಕಟ್ಟಿತಂದ ಬುತ್ತಿ ಬಿಚ್ಚಿ ತಿನ್ನುತ್ತಿರುವವರು, ಆಕಾಶಕ್ಕೆ ಕಣ್ಣು ನೆಟ್ಟು ಪ್ರಪಂಚದ ಆಗುಹೋಗುಗಳೇ ಗೊತ್ತಿಲ್ಲದೆ ಕಲ್ಲಿನಂತೆ ಕುಳಿತವರು, ಪಾನಿನ ರಸ ಉಗಿದುಗಿದು ಕೆಂಬಣ್ಣಕ್ಕೆ ತಿರುಗಿದ್ದ ಕಲ್ಲು ಕಂಬಗಳಿಗೊರಗಿ ಕಣ್ಣೀರನ್ನೊರಸಿಕೊಳ್ಳುತ್ತಾ ದಯನೀಯ ನೋಟ ಬೀರುತ್ತಾ ಒಳಗಿರುವವರ ಬಗ್ಗೆ ಸುದ್ದಿ ತಿಳಿಯಲು ಕಾತರರಾಗಿರುವವರು ಒಬ್ಬರೇ ಇಬ್ಬರೇ ..

ಇವರುಗಳ ಸಂಬಂಧಿಕರು ಯಾರಿದ್ದಾರೋ ಪೋಟ್ ಎನ್ನುವ ಈ ಕುಗ್ರಾಮದ ಸರಕಾರಿ ಆಸ್ಪತ್ರೆಯ ವಾರ್ಡುಗಳಲ್ಲಿ? ಒಳಗೆ ನರಳುತ್ತಿರುವ ತಮ್ಮ ಹೆಂಡತಿಯೋ ಗಂಡನೋ ಮಕ್ಕಳೋ ಅಪ್ಪ ಅಮ್ಮನೋ ಅಜ್ಜಿ ತಾತನೋ … ಜೀತೂರಾಮನ ಕಣ್ಣಮುಂದೆ ಸಂಬಂಧಗಳ ಪಟ್ಟಿ ಸಂಕಟ ಮೋಚನನ ಬಾಲದಂತೆ ಬೆಳೆಯುತ್ತಲೇ ಹೋಯಿತು. ಬಿಳಿಕೋಟಿನ ಸಾಹೇಬ ಅಲ್ಲೇ ಬಿದಿರಿನ ಚಾಪೆ ಅಡ್ಡಗಟ್ಟಿಸಿದ್ದ ಮೂಲೆಯಲ್ಲಿ ನಿಂತ. ಜೀತೂ ತಾನೂ ಯಾಂತ್ರಿಕವಾಗಿ ನಿಂತ ಅಲ್ಲಿ ಆ ಬಿದಿರ ಚಾಪೆಯ ಮರೆಯಲ್ಲಿ ಹರಕು ಜಮಖಾನೆಯ ಮೇಲೆ ಲಾಖಿ ತಣ್ಣಗೆ ಕಣ್ಮುಚ್ಚಿ ಮಲಗಿಬಿಟ್ಟಿದ್ದಳು. ಲಾಖಿಯನ್ನ ಅಲ್ಲಿ ನೋಡಿದ ಜೀತೂ ಕ್ಷಣ ಕಾಲ ಎಲ್ಲ ಮರೆತು ಲಾಖೀ… ನೀನು ಸರಿಹೋಗಿಬಿಟ್ಟೆಯಾ ಏಳು ಮನೆಗೆ ಹೋಗೋಣ ಎಂದು ಆತುರಪಡಿಸಿದ. ಉಹೂಂ ಲಾಖಿ ಕಣ್ತೆರೆಯಲಿಲ್ಲ.. ಮಿಸುಕಾಡಲೂ ಇಲ್ಲ.. ಜೀತೂ ಮತ್ತೆ ಮತ್ತೆ ಕರೆದವ ಅಲ್ಲೇ ಮೊಣಕಾಲೂರಿ ಕುಳಿತು ಅವಳ ಭುಜ ಹಿಡಿದು ಅಲುಗಾಡಿಸಿದ… ತಣ್ಣಗೆ ಕೊರೆವ ಅವಳ ಮೈ ಸೋಕಿದ್ದೇ ಜೀತೂಗೆ ಡಾಕ್ಟರ ಸಾಹೇಬನ ಮಾತು ನೆನಪಾಯಿತು… ಇನ್ನೆಲ್ಲಿಯ ಲಾಖಿ? ಇಲ್ಲಿರುವದು ಬರೀ ಅವಳ ನಿರ್ಜೀವ ದೇಹ ಅಷ್ಟೆ ಲಾಖೀ.. ಲಾಖೀ.. ಒಮ್ಮೆ ಎದ್ದುಬಿಡು. ಇನ್ನುಮೇಲೆ ನೀನು ಹೇಳಿದಂತೆ ನಾನು ಕೇಳುತ್ತೇನೆ, ನಾನು ಶರಾಬು ಕುಡಿಯುವುದು ನಿನಗಿಷ್ಟವಿಲ್ಲ ತಾನೆ… ಇಗೋ ಇನ್ನು ಮುಂದೆ ಶರಾಬಿನ ಬಾಟಲಿ ಮುಟ್ಟಿದರೆ ನಿನ್ನಾಣೆ ಎಂದವನೆ ಅವಳ ತಲೆಯ ಮೇಲೆ ಕೈ ಇರಿಸಿದ. ಎಣ್ಣೆಗಾಣದೆ ಗಂಟುಗಂಟಾದ ಅವಳ ಕೂದಲು ಕೈಗೆ ಸಿಕ್ಕಿತು.

ಎಷ್ಟು ಚಂದವಿತ್ತು ಒಂದಾನೊಂದು ಕಾಲದಲ್ಲಿ ಲಾಖಿಯ ಕೂದಲು, ಅವಳು ಕೋಪ ಮಾಡಿಕೊಂಡಾಗಲೆಲ್ಲ ವಾರೆ ನೋಟ ಬೀರುತ್ತಾ ಇದೇ ಕೂದಲನ್ನ ತನ್ನ ಬಲಗೈಯ ತೋರು ಬೆರಳಿಗೆ ಸುತ್ತಿಕೊಳ್ಳುತ್ತಿದ್ದಳಲ್ಲ. “ಲಾಖೀ , ನಾನು ಕುಡಿದು ಬಂದು ನಿನ್ನ ಕಾಡಿದಾಗ ನೀನು ಜೋರು ಧ್ವನಿ ತೆಗೆದು ಮಾತಾಡುತ್ತಿದ್ದೆ. ಆಗೆಲ್ಲಾ ನಾನು ಮತಿಗೆಟ್ಟು ನಿನ್ನ ಇದೇ ಕೂದಲು ಹಿಡಿದೆಳೆದು ಎಷ್ಟು ಬಾರಿ ನಿನ್ನ ಕಣ್ಣಲ್ಲಿ ನೀರು ತರಿಸಿದ್ದೇನಲ್ಲವೆ? ಇಲ್ಲ ಇನ್ನು ಮುಂದೆ ಹೀಗೆಲ್ಲಾ ಮಾಡುವುದಿಲ್ಲ ಲಾಖಿ. ಒಮ್ಮೆ ಕಣ್ಣು ಬಿಡು. ನಿನ್ನ ಇಮಲಿ, ಜಗ್ಯಾ ಇಬ್ಬರೂ ಕಾಯುತ್ತಿದ್ದಾರೆ. ಏಳು ಲಾಖಿ… ಈ ಆಸ್ಪತ್ರೆಯಲ್ಲಿ ಎಷ್ಟೆಂದು ಮಲಗುತ್ತೀಯ ನಡೀ” ಎನ್ನುತ್ತಾ ಜೀತೂ ಮೈಮೇಲೆ ಖಬರಿಲ್ಲದವನಂತೆ ಲಾಖಿಯ ಭುಜ ಹಿಡಿದು ಅಲುಗಾಡಿಸುತ್ತಿದುದನ್ನ ನೋಡಿ ಅಲ್ಲೇ ಓಡಾಡುತ್ತಿದ್ದ ಬಿಳಿಸೀರೆಯ ದಾದಿ ಕನಿಕರಗೊಂಡು “ತಮ್ಮಾ ನೀನು ಎಷ್ಟು ಎಬ್ಬಿಸಿದ್ರೂ ಅವಳಿನ್ನ ಏಳಲಾರಳು, ನೋಡಲ್ಲಿ ನಿನ್ನ ಮಕ್ಕಳು ಕಂಗಾಲಾಗಿ ನಿನ್ನನ್ನೇ ನೋಡ್ತಿವೆ” ಎಂದು ಅವನ ಭುಜ ಹಿಡಿದು ಸಂತೈಸಿದಳು. ಜೀತೂ ಮತ್ತೆ ವಾಸ್ತವದಲ್ಲಿ ಬಿದ್ದ. ಲಾಖಿ ಕ್ಯಾರೇ ಎನ್ನದಂತೆ ಮಲಗಿಯೇ ಇದ್ದಳು. ಓ… ಇಷ್ಟು ಹೊತ್ತು ತಾನು ಕೇಳಿದ್ದು ನೋಡಿದ್ದು ಯಾವುದೂ ಕನಸಲ್ಲ. ಲಾಖಿ ನಿಜಕ್ಕೂ ಸತ್ತೇ ಹೋದಳೆ… ಮುಂದೇನು ಗತಿ? ತನ್ನ ಚಿಕ್ಕ ಮಕ್ಕಳ ಗತಿಯೇನು? ಎನ್ನುತ್ತಾ ಮತ್ತೆ ಕಲ್ಲಾದ. ದಾದಿಗೆ ಅವನ ಪರಿಸ್ಥಿತಿ ನೋಡಿ ಅಯ್ಯೋ ಎನಿಸಿದರೂ ಸರಕಾರಿ ಆಸ್ಪತ್ರೆಯ ಈ ಕಾರಿಡಾರಿನಲ್ಲಿ ಇಂತಹ ಎಷ್ಟೋ ಸಾವುಗಳನ್ನೂ, ರೋಧನವನ್ನೂ ದಿನೇ ದಿನೇ ನೋಡಿ ಅಭ್ಯಾಸವಾದ್ದರಿಂದಲೋ ಏನೋ.. “ಸಾಕು ನಿಲ್ಲಿಸು, ಎಳೇ ಮಕ್ಕಳ ಥರ ಆಡಬೇಡ, ಮೊದಲು ಇದನ್ನ ಇಲ್ಲಿಂದ ತಗೊಂಡು ಹೋಗೊ ವ್ಯವಸ್ಥೆ ಮಾಡು. ಬಹಳ ಹೊತ್ತು ನಾವಿಲ್ಲಿ ಹೆಣವನ್ನ ಇಟ್ಟುಕೊಳ್ಳಲು ಆಗಲ್ಲ. ದೊಡ್ಡ ಸಾಹೇಬರು ಬಂದರೆ ನನ್ನನ್ನ ಬೈಯ್ತಾರಷ್ಟೆ” ಎಂದು ಗದರಿದಳು.

ಜೀತೂ ಎದ್ದು ಕಣ್ಣೊರೆಸಿಕೊಂಡ. ಹೌದಲ್ಲ ಲಾಖಿಯನ್ನ ಊರಿಗೆ ಕರೆದೊಯ್ದು ಸಂಸ್ಕಾರಕ್ಕೆ ವ್ಯವಸ್ಥೆ ಮಾಡಬೇಕಲ್ಲ? ಏನೋ ನೆನಪಾಗಿ ಜೇಬಿನಲ್ಲಿ ಕೈಯಾಡಿಸಿದ. ಹತ್ತುರೂಪಾಯಿ ನೋಟೊಂದು ಹೊರಬಂತು. ಬೇರೆ ಸಂದರ್ಭದಲ್ಲಾಗಿದ್ದರೆ ಆ ಹತ್ತು ರೂಪಾಯಿಯ ನೋಟು ಜೀತೂಗೆ ಸಾವಿರ ರೂಪಾಯಿಯಂತೆ ಕಾಣುತ್ತಿತ್ತೇನೋ. ಈಗ ಅದು ಅಣಕಿಸಿ ನಕ್ಕಂತಾಯಿತು. ಈ ಹತ್ತು ರೂಪಾಯಿ ಸಾಕಾಗುತ್ತದೆಯೇ? ನೆನ್ನೆ ತಾನೆ ಕೂಲಿ ಮಾಡಿ ಬಂದ ನೂರು ರೂಪಾಯಿ ಜೇಬಿನಲ್ಲಿತ್ತು. ಸಂಜೆಯವರೆಗೆ ಹೇಗೋ ನಿಯಂತ್ರಿಸಿಕೊಂಡಿದ್ದ ಜೀತೂವಿನ ಕಾಲ್ಗಳು ಅವನಿಗೇ ಅರಿವಿಲ್ಲದಂತೆ ಶರಾಬುಖಾನೆಯತ್ತ ಒಯ್ದಿದ್ದವಲ್ಲ. ಉಳಿದದ್ದು ಈ ಹತ್ತೇ ರೂಪಾಯಿ. “ಊರಿಗೆ ಹೋದರೆ ಅವರಿವರನ್ನ ಕೇಳಿ ಮಣ್ಣಿಗೆ ವ್ಯವಸ್ಥೆ ಮಾಡಬಹುದು. ನೋಡೋಣ” ಎಂದು ಎದ್ದವನಿಗೆ ಲಾಖಿಯ ಸಾವಿನ ದು:ಖ ತಾತ್ಕಾಲಿಕವಾಗಿ ಕಣ್ಮರೆಯಾಗಿ ಈಗ ಅವಳನ್ನ ಊರಿಗೆ ಕರೆದೊಯ್ಯುವ ಹೊಸ ಸಮಸ್ಯೆ ಎದುರಾಯಿತು. ಲಾಖಿಯನ್ನ ಇಲ್ಲಿಗೆ ಕರೆತರುವಾಗ ಅವಳು ಎದೆನೋವೆಂದು ನರಳುತ್ತಿದ್ದವಳು ಅರೆಬರೆ ಎಚ್ಚರದಿಂದಿದ್ದಳು. ಬಸ್ಸಿನ ಮುಖವನ್ನೇ ಕಾಣದ ತನ್ನ ಕುಗ್ರಾಮದಿಂದ ಸರಿಸುಮಾರು ಎಂಟು ಮೈಲು ದೂರದ ಈ ಸರ್ಕಾರಿ ಪ್ರಾಥಮಿಕ ಚಿಕಿತ್ಸಾಲಯಕ್ಕೆ ಹಾದಿಯಲ್ಲಿ ಹೋಗುತ್ತಿದ್ದ ಯಾವುದೋ ಲಾರಿಗೆ ಕೈಯೊಡ್ಡಿ ಲಾಖಿಯ ಪರಿಸ್ಥಿತಿಯನ್ನ ವಿವರಿಸಿ ಕಾಡಿ ಬೇಡಿ ಡ್ರೈವರನ ಸಹಾಯದಿಂದ ಅವಳನ್ನೆತ್ತಿ ಲಾರಿಯ ಹಿಂಬದಿಯಲ್ಲಿ ಮಲಗಿಸಿದ್ದ. ಮಾನವೀಯತೆಗಾಗಿ ಜೀತೂವಿನ ಬಳಿ ಒಂದು ಕಾಸನ್ನೂ ಕೇಳದ ಆ ಲಾರಿಯವ ಈ ಆಸ್ಪತ್ರೆಯ ಬಳಿ ಅವಳನ್ನ ಇಳಿಸಲು ನೆರವಾದವನೆ, ಭರ್ರನೆ ಹೊರಟುಬಿಟ್ಟಿದ್ದ.

ಸರ್ಕಾರಿ ಆಸ್ಪತ್ರೆಯಲ್ಲಿ ಶವ ಸಾಗಿಸುವ ವಾಹನ ಇರುತ್ತದೆಂದು ಯಾರೋ ಎಂದೋ ಮಾತನಾಡಿಕೊಂಡದ್ದು ನೆನಪಾಗಿ ಜೀತೂ ಆ ಬಿಳಿ ಸೀರೆಯ ದಾದಿಯ ಹಿಂದೆ ಓಡಿದ. “ಅಕ್ಕಾ ಮತ್ತೆ ನನ್ನ ಹೆಂಡತಿಯನ್ನ ಊರಿಗೆ ಕರೆದುಕೊಂಡು ಹೋಗಬೇಕಲ್ಲ. ಇಲ್ಲಿ ಏನಾದರೂ ಗಾಡಿ ಸಿಗುತ್ತಾ?” ಎಂದವನ ಮುಗ್ಧ ಪ್ರಶ್ನೆಗೆ ಆ ದಾದಿಗೆ ನಗಬೇಕೋ ಅಳಬೇಕೋ ತಿಳಿಯದಾಯಿತು. ಬಾಡಿ ತೆಗೆದುಕೊಂಡು ಹೋಗಬೇಕು ಎಂದೇ ಕೇಳಿ ಅಭ್ಯಾಸವಾಗಿ ಹೋಗಿದ್ದ ಅವಳ ಕಿವಿಗಳಿಗೆ ನನ್ನ ಹೆಂಡತಿಯನ್ನ ಕರೆದುಕೊಂಡು ಹೋಗಬೇಕು ಎನ್ನುವ ಮಾತುಗಳು ಬೆರಗನ್ನುಂಟುಮಾಡಿದವು. “ಅಯ್ಯೋ ಹುಚ್ಚಪ್ಪಾ ಇದು ಬಾಡಿ ಸಾಗಿಸೋ ಗಾಡಿ ಇಡೋ ಅಷ್ಟು ದೊಡ್ಡ ಆಸ್ಪತ್ರೆಯಲ್ಲ, ನೀನೇ ಏನಾದರು ವ್ಯವಸ್ಥೆ ಮಾಡಿಕೋಬೇಕು, ಹೊರಗೆ ವಿಚಾರಿಸು” ಎಂದವಳೇ ಒಳ ನಡೆದಳು. ಜೀತೂನ ಸಣ್ಣ ಆಸೆ ಅಲ್ಲೇ ಮಣ್ಣಾಯಿತು. ಬೇರೆ ವ್ಯವಸ್ಥೆ ಎಂದರೆ ದುಡ್ಡೆಂಬ ದುಡ್ಡು ಕಣ್ಣ ಮುಂದೆ ಕುಣಿಯಲಾರಂಭಿಸಿತು. ಇಮಲಿಯಾಗಲೇ ವಿಷಯದ ಅರಿವಾಗಿ ಅಮ್ಮನ ಮುಂದೆ ಕುಳಿತು ಅಳಲಾರಂಭಿಸಿದ್ದಳು. ಜಗ್ಯಾಗೆ ಸಾವೆಂಬುದಿನ್ನೂ ಅರಿವಾಗದ ವಯಸ್ಸು ಏನೂ ಅರ್ಥವಾಗದೆ ಅಮ್ಮನ ಕೈ ಹಿಡಿದಿಕೊಂಡು ಕುಳಿತುಬಿಟ್ಟಿದ್ದ. ಮಗಳ ತಲೆ ಸವರಿ ‘ಈಗ ಬಂದೆ’ ಎಂದವನೇ ಆಸ್ಪತ್ರೆಯಿಂದ ಹೊರ ಬಂದು ಅಲ್ಲೇ ಮೂಲೆಯಲ್ಲಿದ್ದ ಪಾನ್ ಅಂಗಡಿಯ ಬಳಿ ಹೋಗಿ ನಿಂತ .

‘ಯಾವ ಪಾನ್ ಕೊಡಲಿ’ ಎಂಬ ಅಂಗಡಿಯಾತನ ಪ್ರಶ್ನೆಗೆ ಜೀತೂನ ಅಸಹಾಯಕ ನೋಟವೆ ಉತ್ತರವಾಗಿ ತನ್ನನ್ನು ತಾನು ಕ್ಷಣ ಸಂಭಾಳಿಸಿಕೊಂಡವನೇ ‘ಅಣ್ಣಾ ಹೀಗೆ ಹೀಗೆ ಆಗಿಹೋಗಿದೆ, ಊರಿಗೆ ಹೋಗಬೇಕು. ಏನಾದರೂ ವ್ಯವಸ್ಥೆ ಮಾಡಿ ಪುಣ್ಯ ಕಟ್ಟಿಕೋ’ ಎಂದು ಗೋಗರೆದ. ಅಂಗಡಿಯವ ಕ್ಷಣ ಯೋಚಿಸಿದವನೇ ‘ನಿನ್ನ ನೋಡಿದರೆ ಪಾಪ ಅನಿಸತ್ತೆ, ಸಾಮಾನ್ಯವಾಗಿ ಇಲ್ಲಿಂದ ನಿನ್ನೂರಿನ ದೂರಕ್ಕೆ ಹೆಣ ಸಾಗಿಸಲು ಒಂದೂವರೆ ಸಾವಿರವಾದರೂ ಕೇಳ್ತಾರೆ, ಆದರೆ ನಿನ್ನ ಹತ್ರ ಅಷ್ಟು ಇರೋ ಹಾಗೆ ಕಾಣಲ್ಲ. ಒಂದೈನೂರು ಕಡಿಮೆ ಮಾಡಿಸಿಕೊಡ್ತೀನಿ. ನನ್ನ ಸ್ನೇಹಿತನದೇ ಗಾಡಿ ಇದೆ. ಅಷ್ಟಾದರೂ ಜೋಡಿಸಿಕೊಂಡು ಬಾ. ನಾನಿಲ್ಲೇ ಇರ್ತೀನಿ” ಎಂದವನು ಕಷ್ಟದಲ್ಲಿರುವ ಒಂದು ಜೀವಕ್ಕೆ ತನ್ನ ಕೈಲಾದ ಸಹಾಯ ಮಾಡಿದ ಭಾವದಲ್ಲಿ ಮತ್ತೆ ತನ್ನ ಗಿರಾಕಿಗಳತ್ತ ತಿರುಗಿದ. ಜೀತೂನ ತಲೆ ಗಿರ್ರೆಂದಿತು. ಸಾವಿರ ರೂಪಾಯಿ? ಎಲ್ಲಿಂದ ತರುವುದು? ತನ್ನನ್ನೇ ತಾನು ಒತ್ತೆ ಇಟ್ಟರೂ ಈ ಊರಿನಲ್ಲಿ ಕಾಸು ಸಿಕ್ಕೀತೆ? ಗುರುತಿಲ್ಲ ಪರಿಚಯವಿಲ್ಲ ಎಂದು ಕಂಗಾಲಾಗಿ ಅಲ್ಲಿಂದಾಚೆ ಬಂದ.


ಆಸ್ಪತ್ರೆಯ ಮುಂದೆ ಬರುವವರನ್ನೆಲ್ಲಾ ಕರೆದೊಯ್ಯಲಿಕ್ಕಾಗೇ ಇರುವ ಉದ್ದಾನುದ್ದ ರಸ್ತೆಯ ಮೇಲೆ ಥರಾವರಿ ವಾಹನಗಳು ಭರ್ರನೆ ಹೋಗುತ್ತಿದ್ದುದ ನೋಡಿ ಹೊಸ ಆಲೋಚನೆ ಹೊಳೆದಂತೆ ರಸ್ತೆ ಬದಿಗೆ ನಿಂತು ಹೋಗಿ ಬರುವ ವಾಹನಗಳಿಗೆಲ್ಲ ಕೈ ಮಾಡಲಾರಂಭಿಸಿದ. ಜೀತೂನ ಕೆದರಿದ ತಲೆ, ಮಾಸಿದ ಬಟ್ಟೆ, ಚಪ್ಪಲಿಯಿಲ್ಲದ ಬರಿಗಾಲು ನೋಡಿಯೇ ಫಳಫಳನೆ ಹೊಳೆವ ವಾಹನಗಳು ನಿಲ್ಲಿಸಿದರೆಲ್ಲಿ ಮೈಲಿಗೆಯಾಗುವದೋ ಎಂದು ಹೆದರಿ ಧೂಳೆಬ್ಬಿಸುತ್ತಾ ಮರೆಯಾದವು. ಒಂದೆರಡು ಲಾರಿ ಚಾಲಕರು ಕುತೂಹಲದಿಂದ ನಿಲ್ಲಿಸಿದರೂ ಲಾಖಿಯ ಹೆಣ ಹೊತ್ತೊಯ್ಯುವ ವಿಷಯ ಕೇಳಿಯೇ ಹಾವು ಮೆಟ್ಟಿದವರಂತೆ ಬೆಚ್ಚಿ ಜೀತೂನ ಕ್ಷಮೆ ಕೇಳಿ ತಂತಮ್ಮ ದಾರಿ ಹಿಡಿದು ಹೊರಟೇ ಹೋದರು. ಜೀತೂ ಹಠ ಬಿಡದವನಂತೆ ವಾಹನಗಳಿಗೆ ಕೈ ಮಾಡುತ್ತಲೇ ಇದ್ದ.. ಫಕ್ಕನೆ ಯಾರೋ ಕೈಹಿಡಿದು ಎಳೆಯುತ್ತಿರುವ ಅರಿವಾಗಿ ಜೀತೂ ಎಚ್ಚರಗೊಂಡು ನೋಡಿದ. ಇಮಲಿ ಕಣ್ಣೀರಲ್ಲಿ ತೊಯ್ದ ಮುಖ ಹೊತ್ತು ನಿಂತಿದ್ದಳು. ಬೇಗ ಅಮ್ಮನನ್ನ ಕರೆದುಕೊಂಡು ಹೋಗಬೇಕೆಂದೂ ಇಲ್ಲವಾದರೆ ದೊಡ್ಡ ಸಾಹೇಬರು ಬಂದರೆ ಕೂಗಾಡುತ್ತಾರೆಂದೂ ಎಚ್ಚರಿಸಿದ ದಾದಿ, ಅಮ್ಮನನ್ನು ಆ ಆಸ್ಪತ್ರೆಯ ಹೊರಗಿರುವ ಮರದ ಕೆಳಗೆ ತಂದು ಮಲಗಿಸಿದ್ದಾರೆಂದೂ ಅಲ್ಲಿ ಅಮ್ಮ ಮಲಗಲು ಚಾಪೆ ಸಹಾ ಇಲ್ಲದೆ ಮಣ್ಣಿನ ಮೇಲೆ ಮಲಗಿದ್ದಾಳೆಂದೂ ಅಳುತ್ತಳುತ್ತಲೇ ವರದಿ ಒಪ್ಪಿಸಿ, ಜಗ್ಯಾನೊಬ್ಬನೇ ಬಿಟ್ಟು ಬಂದಿರುವ ನೆನಪಾಗಿ ಮತ್ತೆ ಓಡಿಹೋದಳು.

ಜೀತೂ ಭಾರವಾದ ಹೆಜ್ಜೆ ಹೊತ್ತು ಮತ್ತೆ ಆಸ್ಪತ್ರೆಯತ್ತ ನಡೆದ. ಕನಿಕರದ ಕಣ್ಣುಗಳ ಆ ಬಿಳಿಕೋಟಿನ ಡಾಕ್ಟರ್ ಸಾಹೇಬ ನೆನಪಾದ. ಆತ ದೊಡ್ಡ ಸಾಹೇಬನಂತೂ ಆಗಿರಲಿಕ್ಕಿಲ್ಲ. ತನ್ನ ಬಳಿ ಎಷ್ಟು ನಯವಾಗಿ ಮಾತಾಡಿದ್ದನಲ್ಲ. ಆತನೇನಾದರೂ ಸಹಾಯ ಮಾಡಬಹುದೆ ಎನಿಸಿ ಆಸ್ಪತ್ರೆಯ ಕಾರಿಡಾರಿನ ಉದ್ದಕ್ಕೂ ಓಡಾಡಿದ. ಉಹೂಂ ಆತನೆಲ್ಲೂ ಕಾಣಲಿಲ್ಲ. ಮತ್ತೆ ಅದೇ ಬಿಳಿಯ ಸೀರೆಯ ದಾದಿ ಕಂಡವಳು ಜೀತೂನ ಮುಖದಲ್ಲಿನ ಅಸಹಾಯಕತೆಯನ್ನೂ ಲಾಖಿಯ ಶವದ ಬಳಿ ಏನೂ ಅರಿಯದಂತೆ ಆಡುತ್ತಿರುವ ಜಗ್ಯಾ ಹಾಗೂ ಪೆಚ್ಚುಮೋರೆ ಹಾಕಿಕೊಂಡಿದ್ದ ಇಮಲಿಯನ್ನ ನೋಡಿದವಳಿಗೆ ಪರಿಸ್ಥಿತಿಯ ಅರ್ಥವಾಗಲು ಹೆಚ್ಚಿನ ಸಮಯವೇನೂ ಬೇಕಾಗಲಿಲ್ಲ. ರವಿಕೆಯೊಳಗಿಂದ ಬೆವರಿ ಮುದ್ದೆಯಾಗಿದ್ದ ನೂರರ ಒಂದು ನೋಟನ್ನ ಮಾತಾಡದೆ ಜೀತೂನ ಕೈಗಿರಿಸಿ ಬೇಗ ಲಾಖಿಯ ಶವ ಸಾಗಿಸಲು ವ್ಯವಸ್ಥೆ ಮಾಡಲು ಮತ್ತೊಮ್ಮೆ ಎಚ್ಚರಿಸಿ ಮುಂದೆ ಹೋದಳು. ಜೀತೂನ ಕಣ್ಣುಗಳಲ್ಲಿ ಬೆಳಕು ಕಾಣಿಸಿತು. ಮರುಕ್ಷಣ ಈ ಇಷ್ಟು ಕಡಿಮೆ ದುಡ್ಡಿನಿಂದ ಏನಾಗುತ್ತದೆ ಎನಿಸಿ ಪೆಚ್ಚಾದ. ಲಾಖಿಯ ಕಡೆಗೊಮ್ಮೆ ನೋಡಿದ.ಇದಾವುದರ ಪರಿವೆಯೇ ಇಲ್ಲದಂತೆ ಬಿದ್ದುಕೊಂಡಿದ್ದಳವಳು.

ಇತ್ತೀಚೆಗಷ್ಟೆ ಸಂತೆಯಲ್ಲಿ ಮಾರಾಟಕ್ಕಿಟ್ಟಿದ್ದ ಕೆಂಪು ರಂಗಿನ ಚಮಕಿ ಹಾಕಿದ ಸೀರೆಯನ್ನ ಲಾಖಿ ಅದೆಷ್ಟು ಆಸೆಗಣ್ಣಿನಿಂದ ನೋಡಿದ್ದಳಲ್ಲ ಕೊನೆಗೂ ತನಗೆ ನೂರಾ ಐವತ್ತು ರೂಪಾಯಿಯ ಆ ಸೀರೆಯನ್ನ ಅವಳಿಗೆ ಕೊಡಿಸಲಾಗಲೇ ಇಲ್ಲ ಎನಿಸಿ ಅವನ ಕಣ್ಣುಗಳಲ್ಲಿ ನೀರುಕ್ಕಿತು. ಅಂದು ಅವನ ಕೈಲಿ ಬಿಹಾರಿ ಸಾಹೇಬರ ಗೋಡೋನಿನಲ್ಲಿ ವಾರವಿಡೀ ಲೋಡು ಇಳಿಸಿ ಸಂಪಾದಿಸಿದ್ದ ಐನೂರು ರೂಪಾಯಿಗಳೇನೋ ಇದ್ದವು. ಆದರೆ ಅವನ ಮುಂದೆ ಖರ್ಚಿನ ದೊಡ್ಡ ಪಟ್ಟಿಯೇ ಇತ್ತಲ್ಲ. ಇಮಲಿಗೊಂದು ಅಗ್ಗದ ಲಂಗ ರವಿಕೆ, ಜಗ್ಯಾನಿಗೆ ಶರಟು, ಚಡ್ಡಿ, ರೊಟ್ಟಿಗೆ ಹಿಟ್ಟು,ಎಣ್ಣೆ ತನಗೆರಡು ಕಟ್ಟು ಬೀಡಿ ಎಂದು ಕಾಸು ಖಾಲಿಯಾದದ್ದೇ ತಿಳಿದಿರಲಿಲ್ಲ. ಕೊನೆಗೆ ಲಾಖಿ ಯಾವಾಗಲೂ ಬಾಯಿ ಚಪ್ಪರಿಸಿ ತಿನ್ನುತ್ತಿದ್ದ ಬ್ರೆಡ್ ಪಕೋಡವನ್ನು ಮಾತ್ರಾ ಕೊಡಿಸಲು ಸಾಧ್ಯವಾಗಿದ್ದು ಜೀತೂನಲ್ಲಿ ಲಾಖಿಯ ಬಗ್ಗೆ ಅಪಾರ ಕರುಣೆ ಹುಟ್ಟಿಸಿತ್ತು. ಪಾಪದವಳು ಇಷ್ಟ ಪಟ್ಟ ಒಂದು ಸೀರೆಯನ್ನು ಬೇಕೇ ಬೇಕು ಎಂದು ಹಠ ಮಾಡಲಿಲ್ಲ. ಈ ಸಲ ಕೈಗೆ ದುಡ್ಡು ಬಂದರೆ ಮೊದಲು ಲಾಖಿಗೆ ಆ ಕೆಂಪು ರಂಗಿನ ಚಮಕಿ ಸೀರೆಯನ್ನೇ ಮೊದಲು ತರುವುದು. ಆದರೆ ಅವಳಿಗೆ ಮೊದಲೇ ತಿಳಿಯಬಾರದು. ತಾನು ಇದ್ದಕ್ಕಿದ್ದಂತೆ ಅವಳ ಕಣ್ಮುಂದೆ ಸೀರೆ ಹಿಡಿದಾಗ ಅವಳ ಕಣ್ಣುಗಳು ಖುಷಿಯಿಂದ ಅರಳುವುದನ್ನು ನೋಡಬೇಕು ಎಂದು ಮನಸ್ಸಿನಲ್ಲೇ ತೀರ್ಮಾನ ತೆಗೆದುಕೊಂಡಿದ್ದ ಜೀತೂ ರಾಮನಿಗೆ ಕೊನೆಗೂ ಆ ಘಳಿಗೆ ಒದಗಿ ಬರಲೇ ಇಲ್ಲ.

ಜೀತೂನ ಕೆದರಿದ ತಲೆ, ಮಾಸಿದ ಬಟ್ಟೆ, ಚಪ್ಪಲಿಯಿಲ್ಲದ ಬರಿಗಾಲು ನೋಡಿಯೇ ಫಳಫಳನೆ ಹೊಳೆವ ವಾಹನಗಳು ನಿಲ್ಲಿಸಿದರೆಲ್ಲಿ ಮೈಲಿಗೆಯಾಗುವದೋ ಎಂದು ಹೆದರಿ ಧೂಳೆಬ್ಬಿಸುತ್ತಾ ಮರೆಯಾದವು. ಒಂದೆರಡು ಲಾರಿ ಚಾಲಕರು ಕುತೂಹಲದಿಂದ ನಿಲ್ಲಿಸಿದರೂ ಲಾಖಿಯ ಹೆಣ ಹೊತ್ತೊಯ್ಯುವ ವಿಷಯ ಕೇಳಿಯೇ ಹಾವು ಮೆಟ್ಟಿದವರಂತೆ ಬೆಚ್ಚಿ ಜೀತೂನ ಕ್ಷಮೆ ಕೇಳಿ ತಂತಮ್ಮ ದಾರಿ ಹಿಡಿದು ಹೊರಟೇ ಹೋದರು.

ಸಿಕ್ಕರೆ ಕೂಲಿ ಕೆಲಸ ಇಲ್ಲದಿದ್ದರೆ ಅವರಿವರ ಹತ್ತಿರ ಕೂತು ನಿಂತು ಹರಟೆ ಹೊಡೆಯುವ ಜೀತೂರಾಮನಿಗೆ ಎಂದೂ ಇದ್ದ ಜಾಗ ಬಿಟ್ಟು ದೊಡ್ಡ ಶಹರಕ್ಕೆ ಕೆಲಸ ಹುಡುಕಿಕೊಂಡು ಹೋಗಬೇಕೆಂದು ಅನಿಸಿಯೇ ಇರಲಿಲ್ಲ. ಲಾಖಿಯೇ ಆಗಾಗ ಈ ಬಗ್ಗೆ ಮಾತಾಡುತ್ತಿದ್ದಳಾದರೂ ಜೀತೂ ಇದು ನನ್ನ ಅಪ್ಪ, ಅಜ್ಜ, ಮುತ್ತಜ್ಜ ಬಾಳಿದ ಊರು ಬಿಟ್ಟು ನಾನೆಲ್ಲೂ ಬರಲಾರೆ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿ ಮಾತಿಗೆ ಮತು ಬೆಳೆದು ತೀರಾ ಲಾಖಿಯ ಮೇಲೆ ಕೈಯೆತ್ತುವವರೆಗೂ ಹೋಗಿಬಿಡುತ್ತಿದ್ದರಿಂದ ಲಾಖಿಯೇ ಸುಮ್ಮನಾಗಿಬಿಡುತ್ತಿದ್ದಳು. ಇಲ್ಲಿ ಊರಲ್ಲಿ ಸಾಲಕ್ಕೆ ಸಾರಾಯಿಯೂ ಹರಟೆ ಅಡ್ಡದಾರಿಯ ಸ್ನೇಹಿತರೂ ಇದ್ದಾಗ ಜೀತೂರಾಮ ಊರು ಬಿಟ್ಟು ಬಂದಾನಾದರೂ ಹೇಗೆ? ಜೊತೆಗೆ ತೀರಾ ಮೈಮುರಿಯುವ ದುಡಿತವನ್ನ ಅವನೆಂದೂ ಇಷ್ಟ ಪಡುತ್ತಲೇ ಇರಲಿಲ್ಲ. ಲಾಖಿಯೇ ಆಗಾಗ ಅಕ್ಕ ಪಕ್ಕದ ಹಳ್ಳಿಗಳ ಹೊಲದಲ್ಲೋ ಅನುಕೂಲಸ್ತರ ಮನೆಗಳಲ್ಲೋ ಕೆಲಸ ಮಾಡಿ ಸಂಸಾರದ ಹೊಟ್ಟೆ ನೋಡಿಕೊಳ್ಳುತ್ತಿದ್ದಳು. ಹಾಗೆಂದು ಅವಳಿಗೆ ಸಿಗುತ್ತಿದ್ದುದೂ ಪುಡಿಗಾಸೇ ವಿನಃ ಮೂರಂಕಿಯ ಮೊತ್ತವೂ ಅಲ್ಲ. ಮೊದ ಮೊದಲು ಜೀತೂರಾಮ ಹೀಗೆ ಲಾಖಿ ಕೆಲಸಕ್ಕೆ ಹೋಗುವುದನ್ನ ವಿರೋಧಿಸಿ ಕೂಗಾಡಿದರೂ ಮಕ್ಕಳು ಊಟಕ್ಕಾಗಿ ತನ್ನನ್ನು ಕಾಡದೇ ಇರುವುದೂ ಮನೆಯ ಸಣ್ಣ ಪುಟ್ಟ ಖರ್ಚುಗಳೆಲ್ಲ ತನ್ನಿಂದ ಲಾಖಿಯ ಹೆಗಲಿಗೆ ಜರುಗಿದ್ದು ಗಮನಿಸಿ ಒಳಗೊಳಗೇ ಸುಖಿಸುತ್ತಾ ಉಳಿದ ದುಡ್ಡಿನಲ್ಲಿ ಇನ್ನೂ ಒಂದೆರಡು ಬಾಟಲು ಹೆಚ್ಚಾಗಿಯೇ ಏರಿಸುತ್ತಿದ್ದ. ಏನೇ ಇದ್ದರೂ ಲಾಖಿಗೆ ಜೀತೂರಾಮನೇ ದೇವರು, ಜೀತೂಗೆ ಲಾಖಿಯೇ ದೇವತೆ ಎಂದು ಅವರಿವರು ಹಾಸ್ಯ ಮಾಡುವಷ್ಟು ಅನ್ಯೋನ್ಯತೆಯಿದ್ದುದೂ ಸುಳ್ಳಲ್ಲ. ಎಲ್ಲ ಏಳು ಬೀಳುಗಳ ಮಧ್ಯೆಯೂ ಸಂಸಾರ ತೇಲುತ್ತಲೆ ಸಾಗಿತ್ತು. ಅಂತಾದ್ದರಲ್ಲಿ ಈ ಲಾಖಿ ಹೀಗೆ ಎಂದೂ ಇಲ್ಲದವಳೂ ಎದೆ ನೋವೆಂದು ಒದ್ದಾಡಿದವಳೂ ಇದ್ದಕ್ಕಿದ್ದಂತೆಯೇ ಕೈ ಬಿಟ್ಟು ಹೊರಟು ಬಿಡುತ್ತಾಳೆಂದು ಕನಸಲ್ಲೂ ಊಹಿಸದ ಜೀತೂ ರಾಮ ದಿಗ್ಭ್ರಮೆಗೆ ಒಳಗಾಗಿದ್ದ. ಲಾಖಿ ಇನ್ನಿಲ್ಲ ಎನ್ನುವುದನ್ನು ಅರಗಿಸಿಕೊಳ್ಳುವುದೇ ಕಷ್ಟವಾಗಿರುವಾಗ ಈ ದುಡ್ದಿನ ಸಮಸ್ಯೆ ಬೇರೆ!

“ಯಪ್ಪಾ, ಅಲ್ಲಿ ದಾಗುಟ್ರು ಬೈತಾ ಇದ್ದಾರೆ ಅಮ್ಮನ್ನ ಬೇಗ ಇಲ್ಲಿಂದ ತೆಗೆದ್ಕೊಂಡು ಹೋಗಬೇಕಂತೆ” ಇಮಲಿ

ಕೈ ಹಿಡಿದು ಜಗ್ಗಿದಾಗ ಜೀತೂರಾಮ ಮತ್ತೆ ಪ್ರಪಂಚಕ್ಕೆ ಬಂದ. ಒಂದು ಕ್ಷಣ ಅವನಿಗೆ ಲಾಖಿಯ ಮೇಲೆ ಭಯಂಕರ ಸಿಟ್ಟು ಉಕ್ಕಿ ಬಂತು. ಹಾಳಾದವಳು ಹೀಗಾ ಮಾಡುವುದು? ಇದ್ದಾಗಲೆಲ್ಲ ಏನೇ ಕಷ್ಟ ಬಂದರೂ ಹೆಗಲು ಕೊಡುತ್ತಿದ್ದವಳು ಹೀಗೆ ಹೆಗಲಿಗೇ ಹೊರೆಯಾಗಿಬಿಟ್ಟಳಲ್ಲ ಎಂದು ಅವುಡುಗಚ್ಚಿದ. ಲಾಖಿಯ ಶಾಂತ ಮುಖ ಕಣ್ಣ ಮುಂದೆ ತೇಲಿ ಬಂದು ಕೂಡಲೇ ಜೀತೂರಾಮ ಗಲ್ಲ ಬಡಿದುಕೊಂಡ. ಇಷ್ಟು ವರ್ಷ ಎಲ್ಲ ಕಷ್ಟಕ್ಕೂ ಜೊತೆಯಾಗಿ ಮಕ್ಕಳು, ಮನೆ, ಗಂಡ ಎಂದು ಜೀವ ತೇಯುತ್ತಾ ಎಲ್ಲಾ ಆಸೆಗಳನ್ನೂ ಅದುಮಿಟ್ಟುಕೊಂಡು ಜೊತೆಗೆ ನಡೆದವಳ ಬಗ್ಗೆ ತಾನು ಸಿಟ್ಟಾಗುವುದೆ? ಅಳುತ್ತಿದ್ದ ಇಮಲಿಯತ್ತ ನೋಡಿದ. ಲಾಖಿಯದೇ ತದ್ರೂಪು. ಅರೇ ತಾನಿಷ್ಟು ದಿನ ಗಮನಿಸಿಯೇ ಇರಲಿಲ್ಲವಲ್ಲ ಎಂದುಕೊಂಡವನೇ ಬಾಗಿ ಅವಳನೆದೆಗಪ್ಪಿ ಹಿಡಿದು ಅಳತೊಡಗಿದ. ಇಮಲಿಗೂ ತಡೆಯಲಾಗಲಿಲ್ಲ. ಲಾಖಿ ಇಲ್ಲ ಎಂದು ಗೊತ್ತಿದ್ದರೂ ಜಗ್ಯಾನ ಮುಖ ನೋಡಿ ಅಪ್ಪನ ಪೆಚ್ಚುಮೋರೆ ನೋಡಿ ತಡೆದುಕೊಂಡಿದ್ದವಳು ಈಗ ಜೀತೂ ರಾಮ ದನಿ ತೆಗೆದು ಅಳುತ್ತಲೇ ತಡೆಯಲಾಗದೆ ತಾನೂ ಅಳತೊಡಗಿದಳು.ಅಲ್ಲೇ ಬಿದ್ದಿದ್ದ ಸಣ್ಣ ಪುಟ್ಟ ಕಲ್ಲಿನ ಚೂರುಗಳನ್ನ ಆಯ್ದುಕೊಂಡು ಅತ್ತಿತ್ತ ಎಸೆಯುತ್ತಾ ಆಗಾಗ ಅಮ್ಮನ ಕಡೆ ನೋಡುತ್ತಾ ಇತ್ತ ಪುಟ್ಟ ಜಗ್ಯಾನಿಗೆ ಏನೊಂದೂ ಅರ್ಥವಾಗದೆ ತಾನೂ ಓಡಿ ಬಂದು ಇಬ್ಬರಿಗೂ ಜೋತು ಬಿದ್ದು ಅಳಲು ಶುರು ಮಾಡಿದ.

ಅದೆಷ್ಟು ಹೊತ್ತು ಮೂವರೂ ಅದೇ ಸ್ಥಿಯಲ್ಲಿದರೋ ಏನೊ. ದಾರಿಯಲ್ಲಿ ಹೋಗುವವರು ಬರುವವರೆಲ್ಲರ ಕನಿಕರದ ನೋಟಗಳಿಗೂ ಅವರನ್ನು ಸಂತೈಸುವ ಶಕ್ತಿ ಇರಲಿಲ್ಲವಾಗಿ ಆಸ್ಪತ್ರೆಯ ಮುಂದೆ ಇಂತಹಾ ದೃಶ್ಯಗಳು ಸರ್ವೇ ಸಾಮಾನ್ಯ. ಪಾಪ ಇವರ ಕಡೆಯವರಾರೋ ತೀರಿಕೊಂಡಿರಬೇಕೆಂದುಕೊಂಡು ತಲೆ ಬಗ್ಗಿಸಿ ಹಾಗೇ ನಡೆದರು. ಇವರ ಅಳು ಆಸ್ಪತ್ರೆಯ ಒಳಗಿದ್ದ ಆ ಬಿಳಿಕೋಟಿನ ದಾಗಟ್ರಿಗೂ ಕೇಳಿಸಿರಬೇಕು. ದಡಬಡಿಸಿ ಓಡಿಬಂದರೆ ನೊಡುವುದೇನು. ಅತ್ತ ಲಾಖಿ ಹಾಗೇ ಇದ್ದಲ್ಲೇ ಮಲಗಿದ್ದಾಳೆ. ಇತ್ತ ಇವರು ಮೂವರು ಲೋಕದ ಪರಿವೆಯಿಲ್ಲದವರಂತೆ ಅಳುವಿನಲ್ಲಿ ಮುಳುಗಿದ್ದಾರೆ. ಮೆಡಿಕಲ್ ಸೇರಿದಾಗಿನಿಂದ ಸಾವಿನ ಈ ನೋಟಕ್ಕೆ ಒಗ್ಗಿ ಹೋಗಿದ್ದ ಆ ದಾಗುಟ್ರು ಜೀತೂರಾಮನ ಹೆಗಲ ಮೇಲೆ ಕೈಯಿರಿಸಿ ಸಮಾಧಾನ ಹೇಳಲು ಬಾಯ್ತೆರೆಯುವಷ್ಟರಲ್ಲಿ ಅದೆಲ್ಲಿದ್ದಳೋ ಆ ದಾದಿಯೂ ಓಡಿ ಬಂದವಳೇ ಲಾಖಿಯ ಶವ ಸಾಗಿಸಲು ಪರದಾಡುತ್ತಿರುವ ಜೀತೂರಾಮನ ಅಸಹಾಯಕತೆಯನ್ನೂ ಎರೆಡೇ ಮಾತುಗಳಲ್ಲಿ ಹೇಳಿದಳು. ಆತನಿಗೆ ಏನು ಹೇಳಲೂ ತೋಚದಾಯಿತು. ಕೈ ಅನಾಯಾಸವಾಗಿ ಜೇಬಿನತ್ತ ಹೋಯಿತು. ಜೀತೂರಾಮ ಆ ದುಃಖದಲ್ಲೂ ಅದನ್ನ ಗಮನಿಸಿ ಕೊಂಚ ಹುರುಪುಗೊಂಡ. ಆರ್ಥನಾಗಿ ಇನ್ನೇನು ಕೈಯೊಡ್ಡಬೇಕೆನ್ನುವಷ್ಟರಲ್ಲಿ ದಾದಿ ಕೊಟ್ಟ ನೂರರ ನೋಟು ಅವನ ಅಂಗಿಯ ಹರಿದ ಕಿಸೆಯಿಂದ ಹೊರಗಿಣುಕಿದ್ದು ಡಾಕ್ಟರರಿಗೆ ಕಾಣಿಸಿಯೇ ಬಿಟ್ಟಿತು. ಆದರೂ ಖಾಲಿ ಕೈ ಹೊರಬರಲಾರದೆ ಹಾಗೇ ಐವತ್ತರ ನೋಟೊಂದು ಹೊರ ತಂದಿತು. ಸಿಕ್ಕಷ್ಟೇ ಸಾಕು ಎನುವ ಸ್ಥಿಯಲ್ಲಿದ್ದ ಜೀತೂ ರಾಮ ತಟ್ಟನೇ ನೋಟು ಕಸಿದುಕೊಂಡ. ಲಾಖಿಯನ್ನ ನಾನು ಹೇಗಾದರೂ ಕರೆದೊಯ್ಯುತ್ತೇನೆ ಎಂದು ನಿರ್ಧರಿಸಿದ.

“ಸಾಹೇಬ್ರೆ ಅರ್ಧ ಗಂಟೆ ಟೇಮು ಕೊಡಿ, ನನ್ನ ಮಕ್ಕಳು ಇಲ್ಲೇ ಇರ್ತಾರೆ. ಹೀಗೆ ಹೋಗಿ ಹಾಗೆ ಬಂದು ಇವಳನ್ನ ಕರ್ಕೊಂಡು ಹೋಯ್ತೀನಿ”

ಜೀತೂರಾಮನ ಕಣ್ಗಳ ಅಸಹಾಯಕತೆಗೆ ಡಾಕ್ಟರೂ ದಾದಿಯೂ ಇಲ್ಲವೆನಲಾಗದಿದ್ದರೂ ಇಂತಹ ಲೆಕ್ಕವಿಲ್ಲದಷ್ಟು ಕೇಸುಗಳನ್ನು ನೋಡಿದ್ದವರು ಕ್ಷಣ ಅನುಮಾನಿಸಿದರು. ಮೊದಲೇ ಕೈಯಲ್ಲಿ ಮೂರು ಕಾಸಿಲ್ಲ ಎನ್ನುತ್ತಿದ್ದಾನೆ ಮತ್ತೆಲ್ಲಿ ತಲೆಗೆ ಬರುತ್ತದೋ.. ಜೀತೂರಾಮನಿಗೆ ಅರ್ಥವಾಯಿತು.

“ಸಾಹೇಬ್ರೆ ನಾ ಮೋಸ ಮಾಡಿ ಓಡಿ ಹೋಗ್ತೀನಿ ಅಂತಾ ಅಂದುಕೊಂಡಿದೀರಾ? ನಾನು ಬಡವಾ ಸರಿ ಮೋಸಗಾರ ಅಲ್ಲ. ನನ್ನ ಲಾಖೀದು ಒಂದು ಆಸೆ ಇತ್ತು. ಅದಕ್ಕಷ್ಟೇ ಈಗಲೆ ಬರ್ತೀನಿ” ಅಂದವನೇ ಅವರುಗಳ ಉತ್ತರಕ್ಕೂ ಕಾಯದೆ ಭುಜದ ಮೇಲಿದ್ದ ಹರಿದ ಟವೆಲ್ಲಿನಿಂದ ಕಣ್ಣಿರೊರೆಸಿಕೊಂಡು ಓಡಿದ. ಇಮಲಿ ಇನ್ನೂ ಅಳುತ್ತಲೇ ಇದ್ದ ಜಗ್ಯಾನ ಕೈಹಿಡಿದು ಲಾಖಿಯ ಪಕ್ಕ ಕೂತಳು. ಬಿಳಿ ಉಡುಪಿನವರಿಬ್ಬರೂ ಇನ್ನೇನು ಮಾಡಲೂ ತೋಚದೆ ಒಳನಡೆದರು. ಇಮಲಿಗೊಂದೇ ಚಿಂತೆ.ಈ ಅಪ್ಪ ಹೋದದ್ದಾದರೂ ಎಲ್ಲಿಗೆ? ಅಮ್ಮ ನೋಡಿದರೆ ಮತ್ತೇ ಏಳಲಾರದ ಕಡೆ ಹೋಗಿದ್ದಾಳೆ. ಈ ಜಗ್ಯಾನೋ ಇನ್ನೂ ಕೂಸು. ಅಪ್ಪ ಬರದೇ ಇದ್ದರೆ? ಏನು ಮಾಡುವುದು? ಎಂದೇ ತಲೆ ಕೊರೆತ.

ಇಮಲಿಯೇನೂ ತೀರಾ ದೊಡ್ಡ ವಯಸ್ಸಿನವಳಲ್ಲದಿದ್ದರೂ ಕಷ್ಟದ ಮಧ್ಯೆಯೇ ಬೆಳೆದಿದ್ದವಳಿಗೆ ಎಲ್ಲವೂ ಅರ್ಥವಾಗುತ್ತಿತ್ತು. ಲಾಖಿಗಂತೂ ಇಮಲಿ ಕಣ್ಣೇ ಆಗಿದ್ದಳಲ್ಲ. ಅಮ್ಮನ ದುಡಿತ ಅಪ್ಪನ ಕುಡಿತ ಎಲ್ಲವೂ ಅವಳಿಗೆ ತಿಳಿಯದ್ದೇನಲ್ಲ. ಆದರೂ ಅವರಿಬ್ಬರೂ ಸದಾ ನಗುನಗುತ್ತಾ ಇರೋದನ್ನ ನೋಡಿದಾಗಲೆಲ್ಲ ಅಕ್ಕಪಕ್ಕದ ಮನೆಗಳಲ್ಲಿ ಗಂಡ ಹೆಂಡಿರ ಜಗಳ ಹೊಡೆತದ ಸದ್ದು ಕೂಗಾಟ ಎಲ್ಲದರ ಮಧ್ಯೆ ತನ್ನ ಹರಕು ಜೋಪಡಿ ಸ್ವರ್ಗದಂತೆ ಇಮಲಿಗೆ. ಈ ಅಮ್ಮನಿಗೆ ಸದಾ ಮನೆಯದ್ದೇ ಚಿಂತೆ. ಇತ್ತೀಚೆಗೆಲ್ಲಾ ಬೇಗ ಸುಸ್ತಾಗುತ್ತಿದ್ದವಳು ಆಗಾಗ ಸ್ವಲ್ಪ ಎದೆನೋವೆಂದು ಮೂಲೆ ಹಿಡಿಯುತ್ತಿದ್ದರೂ ಅಪ್ಪ ಬರುವ ಹೊತ್ತಿಗೆ ಏನೂ ಇಲ್ಲದವಳಂತೆ ಎದ್ದು ಬಿಡುತ್ತಿದ್ದಳಲ್ಲ. ನಿಜವಾಗಲೂ ನೋವು ಕಡಿಮೆಯಾಗುತ್ತಿತ್ತೋ ಅಥವಾ ಅಪ್ಪನಿಗೆ ಗೊತ್ತಾಗಬಾರದು ಅಂತ ನಾಟಕವೇ ಮಾಡುತ್ತಿದ್ದಳೋ ಇಮಲಿಗೆ ತಿಳಿಯುತ್ತಿರಲಿಲ್ಲ.

ಸಣ್ಣ ಪುಟ್ಟ ವಿಚಾರಗಳನ್ನ ಜೀತೂರಾಮನ ಗಮನಕ್ಕೆ ತಂದು ಗಾಬರಿ ಮಾಡುವುದು ಲಾಖಿಗೂ ಬೇಕಿರಲಿಲ್ಲ. ಇನ್ನ ಆಸ್ಪತ್ರೆ ಎಂದರೆ ಮೈಲುಗಟ್ಟಲೆ ದೂರ ಹೋಗಬೇಕು. ಒಮ್ಮೆ ಹತ್ತಿದ ಓಡಾಟ ಹಾಗೇ ಮುಂದುವರೆದರೆ ಮನೆ ನಡೆಯುವುದು ಹೇಗೆ, ಮಕ್ಕಳನ್ನ ನೋಡಿಕೊಳ್ಳುವವರು ಯಾರು ಎಂದೆಲ್ಲ ಲಾಖಿ ಯೋಚಿಸಿರಬೇಕು, ಇಮಲಿಗೂ ಅರ್ಥವಾಗದಂತೆ ಅವಳ ನೋವು ಮಾಯವೆ ಆಗಿಬಿಡುತ್ತಿದ್ದುದು ನೆನೆದು ಇಮಲಿಯ ಕಣ್ಣಲ್ಲಿ ನೀರು ಸುರಿಯಿತು. ಮುಂದೆ? ಅಮ್ಮನಿಲ್ಲದ ಮನೆ! ಪಕ್ಕದ ಮನೆ ಇಚ್ಕೀಯ ಅಮ್ಮ ಅದೇನೊ ಜ್ವರ ಬಂದು ಸತ್ತ ಎರಡೇ ತಿಂಗಳಲ್ಲಿ ಅವಳಪ್ಪ ಹೊಸ ಹೆಂಗಸೊಂದನ್ನು ಕರೆದುಕೊಂಡುಬಂದಿದ್ದ. ದಿನ ಬೆಳಗಾದರೆ ಆಕೆ ಇಚ್ಕೀಯನ್ನು ಬೈಯುವುದು ಹೊಡೆಯುವುದು, ಅವಳು ಅಳುವುದು ಎಲ್ಲ ಸ್ಪಷ್ಟವಾಗೇ ಕೇಳುತ್ತಿತ್ತು. ಇಮಲಿ ಲಂಗದ ತುದಿಯಿಂದ ಕಣ್ಣೀರೊರೆಸಿಕೊಂಡಳು. ಅಪ್ಪನೂ ಬೇರೆ ಹೆಂಗಸನ್ನ ಕರೆತಂದರೆ? ನೆನೆದೇ ಅವಳಿಗೆ ಮತ್ತೆ ಅಳುವುಕ್ಕಿ ಬಂತು. “ಮಾ.. ಏಳು ಏಳು” ಎನ್ನುತ್ತಾ ಲಾಖಿಯ ಭುಜ ಹಿಡಿದು ಅಲುಗಾಡಿಸಿದಳು. ಲಾಖಿಯೇನು ಎದ್ದಾಳು? ಜಗ್ಯಾನಿಗೋ ಅರ್ಥವೇ ಆಗದೆ ಮಾ ಯಾಕೆ ಏಳಲ್ಲ? ಏನಾಗಿದೆ ಇರು ಚೂಜಿ ಚುಚ್ಚಿದ್ರೆ ಏಳ್ತಾಳೆ ಎಂದವನೇ ಅಲ್ಲೇ ಪಕ್ಕದಲ್ಲಿ ಬಿದ್ದಿದ್ದ ಸಣ್ಣ ಕಡ್ಡಿಯ ಚೂರೊಂದನ್ನ ತೆಗೆದುಕೊಂಡು ಲಾಖಿಯ ತೋಳಿಗೆ ಚುಚ್ಚುವವನಂತೆ ಮಾಡಿದ. ಇಮಲಿ ತಟ್ಟನೆ ಕೈ ತಡೆದವಳೇ ಜಗ್ಯಾನ ತಲೆ ಸವರಿ ತನ್ನ ಮಡಿಲಲ್ಲಿ ಕುಳ್ಳಿರಿಸಿಕೊಂಡು ಮಾ ಇನ್ನು ಮುಂದೆ ಎಂದೂ ಏಳುವುದಿಲ್ಲ ಮತಾಡುವುದಿಲ್ಲ ಎಂದು ಅವನಿಗೆ ಅರ್ಥ ಮಾಡಿಸಲು ಪ್ರಯತ್ನ ಮಾಡುತ್ತಿರುವಾಗಲೇ ಜೀತೂರಾಮ ದೂರದ ತಿರುವಿನಲ್ಲಿ ಕಾಣಿಸಿ ಸಮಾಧಾನದ ನಿಟ್ಟುಸಿರು ಬಿಟ್ಟಳು. ಅಪ್ಪ ನಮ್ಮನ್ನ ಬಿಟ್ಟು ಹೋಗಿಲ್ಲ ಹಾಗಾದರೆ ನಾನೇ ಭಯಪಟ್ಟೆ ಎಂದು ಜಗ್ಯಾನನ್ನ ಮಡಿಲಿನಿಂದ ಕೆಳಗಿಳಿಸಿ ಎದ್ದು ನಿಂತಳು.

ಬಿಸಿಲಿಗೆ ಬೆವರು ಧಾರೆಯಾಗಿ ಕಣ್ಣೀರ ಜೊತೆ ಸೇರಿ ಮುಖವನ್ನೆಲ್ಲಾ ತೋಯಿಸಿದ್ದರೂ ಲೆಕ್ಕಿಸದೆ ಜೀತೂರಾಮ ಓಡಿ ಬಂದ. ಕೈಯಲ್ಲಿ ಸಣ್ಣ ಪ್ಲಾಸ್ಟಿಕ್ ಕವರ್. ಜಗ್ಯಾನ ಹೊಟ್ಟೆಯ ಹಸಿವು ಭುಗಿಲ್ಲೆಂದಿರಬೇಕು. ಅಪ್ಪೋ ಅಪ್ಪೋ ಎಂದು ಓಡಿ ಹೋಗಿ ಜೀತೂರಾಮನ ಕಾಲುಗಳನ್ನ ತಬ್ಬಿಹಿಡಿದವನು ಆಸೆಯಿಂದ ಆ ಕವರಿಗೆ ಕೈಯೊಡ್ಡಿದ. ಜೀತೂರಾಮನಿಗೆ ಕರುಳಲ್ಲಿ ಕತ್ತರಿಯಾಡಿಸಿದಂತಾಯ್ತು. “ಲಾಖೀ ನೀನಿದ್ದಿದ್ದರೆ ಈ ಮಕ್ಕಳು ಹೀಗೆ ಹಸಿವಿಂದ ಒದ್ದಾಡ್ತಾ ಇದ್ದರೇನೆ? ಏನೋ ಒಂದು ಹೊಂದಿಸಿ ಹೊಟ್ಟೆ ತಂಪು ಮಾಡ್ತಾ ಇದ್ದೆಯಲ್ಲ” ಎಂದುಕೊಂಡೇ ಕವರಿಗೆ ಕೈ ಹಾಕಿದ ಜಗ್ಯಾನ ಆಸೆದುಂಬಿದ ಕಣ್ಣುಗಳು ಇಮಲಿಯ ಕುತೂಹಲದ ಕಣ್ಣುಗಳಿಗೆ ಕೆಂಪು ಬಣ್ಣದ ಫಳ ಫಳ ಹೊಳೆವ ನಕ್ಕಿ ಹಾಕಿದ ಬಟ್ಟೆ ಕಾಣಿಸಿತು. ಏನೂ ಅರ್ಥವಾಗಲಿಲ್ಲ ಅವರಿಬ್ಬರಿಗೂ. ತಿಂಡಿಯ ಆಸೆಯಲ್ಲಿದ್ದ ಜಗ್ಯಾನ ಮುಖದಲ್ಲಿ ನಿಧಾನವಾಗಿ ನಿರಾಸೆ ಆಕ್ರಮಿಸಿ ಕಣ್ಣುತುಂಬಿಕೊಳ್ಳತೊಡಗಿತು. ಇಮಲಿಗೆ ಆಶ್ಚರ್ಯ.

ಅಪ್ಪ ಯಾವುದೋ ಗಾಡಿಯ ವ್ಯವಸ್ಥೆ ಮಾಡಲು ಹೋಗಿದ್ದಾನೆಂದುಕೊಂಡರೆ ಇದೇನು ಹೊಸ ಬಟ್ಟೆ ತಂದ ಹಾಗಿದೆಯಲ್ಲ. ಅಮ್ಮ ನೋಡಿದರೆ ಹೀಗೆ! ಅಪ್ಪನ ಮುಖವನ್ನೇ ದಿಟ್ಟಿಸಿದಳು. ಜೀತೂರಾಮನ ಕಣ್ಣಿಗೆ ಕಲ್ಲಿನಂತೆ ಮಲಗಿದ್ದ ಇಮಲಿಯೊಬ್ಬಳೇ ಕಾಣುತ್ತಿದ್ದುದು. ಲೋಕದ ಪರಿವೆಯಿಲ್ಲದವನಂತೆ ನಿಧಾನಕ್ಕೆ ಕೈಲಿದ್ದ ಬಟ್ಟೆ ಬಿಚ್ಚಿದ. ಕೆಂಪು ಬಣ್ಣದ ಹೊಳೆವ ಚಿತ್ತಾರದ ಸೀರೆ ಹೊಳೆಯುತ್ತಿತ್ತು. ಮೆಲ್ಲನೆ ಲಾಖಿಯ ತಲೆಯೆತ್ತಿ ಮಡಿಲಲ್ಲಿರಿಸಿಕೊಂಡ. ಸೀರೆಯನ್ನ ಇಮಲಿಯ ಕೈಗಿತ್ತು ಹಾಸಲು ಹೇಳಿದ. ಅರ್ಥವಾಗದ ಇಮಲಿ ತನಗೆ ಬಂದಂತೆ ನೆಲದ ಮೇಲೆ ಉದ್ದಕ್ಕೂ ಆ ಕೆಂಪು ಬಣ್ಣದ ಸೀರೆಯನ್ನ ಹಾಸಿದಳು. ರಾತ್ರೆ ಹೊತ್ತು ನೀಲಿಯಾಕಾಶದಲ್ಲಿ ನಕ್ಷತ್ರಗಳನ್ನ ನೋಡುತ್ತಿದ್ದ ಇಮಲಿಗೆ ಇಂದೇಕೋ ಆಕಾಶ ಕೆಂಪಾಗಿ ಕಂಡಂತಾಯಿತು. ಜೀತೂರಾಮ ಮೆಲ್ಲನೆ ಲಾಖಿಯನ್ನೆತ್ತಿ ಸೀರೆಯ ಮೇಲೆ ಮಲಗಿಸಿ ತನಗೆ ಬಂದಂತೆ ಸುತ್ತಿದ. ಅಂತೂ ಲಾಖಿ ತನ್ನ ಇಷ್ಟದ ಹೊಳೆವ ಚಿತ್ತಾರದ ಸೀರೆ ಉಟ್ಟು ಮಲಗಿದಳು. ಮುಂದೇನು ಎನ್ನುವಂತೆ ಇಮಲಿ ಅಪ್ಪನ ಮುಖ ನೋಡಿದಳು. ಜಗ್ಯಾನಿಗೆ ತನ್ನ ಹಸಿವು ಮರೆತೇ ಹೋಗಿ ಆ ಕೆಂಪು ಸೀರೆಯಲ್ಲಿ ಅಮ್ಮ ತುಂಬಾ ಸುಂದರವಾಗಿ ಕಂಡಂತಾಗಿ ಬಾಗಿ ಲಾಖಿಯ ಕೆನ್ನೆಗೆ ಮುತ್ತಿಟ್ಟ. ಜೀತೂ ಮುಖ ಅತ್ತ ತಿರುಗಿಸಿದ.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

ಅಂತೂ ಲಾಖಿ ತನ್ನ ಇಷ್ಟದ ಸೀರೆ ಹೊದ್ದು ನೆಮ್ಮದಿಯಿಂದ ಮಲಗಿಬಿಟ್ಟಳು. ಪೇಟೆ ಬೀದಿಗೆ ಹೋಗಿ ಅಲ್ಲಿನ ಒಂದೆರಡು ಅಂಗಡಿಗಳಲ್ಲಿ ಕಾಡಿ ಬೇಡಿ , ಲಾಖಿಯ ವಿಷಯ ತಿಳಿಸಿದ ಜೀತೂರಾಮ ಹಾಗೂ ಹೀಗೂ ನೂರ ನಲವತ್ತು ರೂಪಾಯಿಗೆ ಆ ಕೆಂಪು ಚಿತ್ತಾರದ ಸೀರೆ ತಂದಿದ್ದ. ಈಗವನಿಗೆ ಇನ್ನಾವುದರ ಪರಿವೆಯೂ ಇದ್ದಂತಿರಲಿಲ್ಲ. ಜೇಬಿನಲ್ಲಿ ತಡಕಾಗಿ ಇದ್ದ ಚಿಲ್ಲರೆ, ಸಣ್ಣ ಪುಟ್ಟ ನೋಟು ಸೇರಿಸಿ ಅಲ್ಲೇ ಬಿಸಿಯಾಗಿ ಸಮೋಸ, ಪೂರಿ ಕರಿಯುತ್ತಿದ್ದವನ ಬಳಿ ಹೋಗಿ ನಾಲ್ಕು ಸಮೋಸ, ಎರಡು ಪ್ಲೇಟು ಪೂರಿ ಬಾಜಿ ಕಟ್ಟಿಸಿಕೊಂಡು ಬಂದ. ಜಗ್ಯಾನ ಹೊಟ್ಟೆಯ ಹಸಿವು ಮತ್ತೆ ಕೆರಳಿ ಆತುರಾತುರವಾಗಿ ಕೈಯೊಡ್ಡಿದ. ಮಕ್ಕಳಿಬ್ಬರೂ ತಿಂಡಿ ಹಂಚಿ ಲಾಖಿಯ ತಲೆಯ ಬಳಿ ಕುಳಿತವನ ನೋಡಿ ಇಮಲಿಗೆ ಕರುಣೆಯುಕ್ಕಿ ಬಂತು. ನಿಧಾನಕ್ಕೆ ಪೂರಿ ಮುರಿದು ಬಾಜಿಯಲ್ಲದ್ದಿ ಅಪ್ಪನ ಬಾಯಿಗಿಟ್ಟಾಗ ಜೀತೂರಾಮನಿಗೆ ಬೇಡವೆನ್ನಲಾಗಲಿಲ್ಲ. ಮೂವರೂ ತಿಂದು ಮುಗಿಸಿ ಆಸ್ಪತ್ರೆಯ ಆವರಣದಲ್ಲಿದ್ದ ನಲ್ಲಿಗೆ ಬೊಗಸೆಯೊಡ್ಡಿ ನೀರು ಕುಡಿದರು. ಜೀತೂರಾಮನ ಮೈಯಲ್ಲಿ ಹೊಸ ಶಕ್ತಿ ಬಂದಂತಾಯಿತು. ಮೆಲ್ಲನೆ ಲಾಖಿಯನ್ನ ಎರಡೂ ಕೈಗಳಲ್ಲಿ ಎತ್ತಿಕೊಂಡ. ಅರೇ ಎಷ್ಟು ಹಗುರವಾಗಿದ್ದವಳು ಈಗೆಷ್ಟು ಭಾರವಾಗಿಬಿಟ್ಟಳಲ್ಲ ಎನಿಸಿತು. ಇಲ್ಲ ಲಾಖೀ ನನಗಿಂತ ಜಾಸ್ತಿ ನಮ್ಮೆಲ್ಲರ ಭಾರ ಹೊತ್ತವಳು ನೀನು, ನೀನು ನನಗೆಂದೂ ಭಾರವಾಗಲು ಸಾಧ್ಯವಿಲ್ಲ.. ನೀನು ಭಾರವೇ ಇಲ್ಲ. ಜೀತೂರಾಮ ಭರಭರನೆ ನಡೆದ. ಇಮಲಿ ಅರ್ಥವಾದವಳಂತೆ ಜಗ್ಯಾನ ಕೈ ಹಿಡಿದು ಅಪ್ಪನನ್ನ ಹಿಂಬಾಲಿಸಿದಳು. “ಅಪ್ಪ ನೀನೆಷ್ಟು ಒಳ್ಳೆಯವನು. ಇನ್ನೊಂದು ಅಮ್ಮನ್ನ ಮಾತ್ರ ತರಬೇಡಾ. ಮನೇ ಕೆಲಸ ಎಲ್ಲಾ ನಾನೆ ಮಾಡ್ತೀನಿ. ಕೂಲಿಗೂ ಹೋಗ್ತೀನಿ. ಹೊಸ ಅಮ್ಮನ್ನ ಮಾತ್ರ ತರಬೇಡ…” ಜೀತೂರಾಮನ ಕೆನ್ನೆಗೆ ಹೊಡೆದಂತಾಯ್ತು. ಆದ್ರಭಾವದಿಂದ ಇಮಲಿಯನ್ನೇ ನೋಡಿದ. ಅಷ್ಟೇ ಸಾಕಾಯ್ತು ಇಮಲಿಗೆ. ಅಪ್ಪ ಅಂತಹವನಲ್ಲ ಎಂದು ತೀರ್ಮಾನಿಸಿ ಸಮಾಧಾನದಿಂದ ನಡೆಯಲು ಗೋಳಾಡುತ್ತಿದ್ದ ಜಗ್ಯಾನನ್ನ ಕಷ್ಟಪಟ್ಟು ಸೊಂಟಕ್ಕೇರಿಸಿ ನಿಧಾನವಾಗಿ ಹೆಜ್ಜೆ ಹಾಕಿದಳು.

ಅಪ್ಪಿ ತಪ್ಪಿ ಎಂದಾದರೂ ತಾನು ಕೆಲಸ ಮಾಡುತ್ತಿದ್ದ ಮನೆಗಳಲ್ಲೋ ಗೋಡೆಗೆ ಮೆತ್ತಿದ್ದ ಸಿನೇಮಾದ ಪೋಸ್ಟರ್‍ ಗಳಲ್ಲೋ ನಾಯಕ ನಾಯಿಕೆಯನ್ನ ಎತ್ತಿಕೊಂಡಿರುವ ಚಿತ್ರ ಕಣ್ಣಿಗೆ ಬಿದ್ದಾಗಲೆಲ್ಲ ಲಾಖಿಗೆ ಮದುವೆಯಾದ ಹೊಸತರಲ್ಲಿ ಜೀತೂರಾಮ ತನ್ನನ್ನೂ ಹೀಗೇ ಎತ್ತಿ ಹಿಡಿದು ಕಾಡುತ್ತಿದ್ದುದು ನೆನಪಾಗಿ ಈಗಲೂ ಯಾವಾಗಲಾದರೂ ಹಾಗೆ ಮಾಡಬಾರದೆ ಎಂದು ಕನಸು ಕಾಣುತ್ತಿದ್ದಳು. ಆದರೆ ಮಕ್ಕಳು ಏನೆಂದುಕೊಂಡಾರು ನಾವು ಹೀಗೆ ಆಡಿದರೆ ಎಂದುಕೊಂಡು ಸುಮ್ಮನಾಗುತ್ತಿದ್ದಳು. ಇವತ್ತು ಮಾತ್ರಾ ಲಾಖಿಗೆ ಅದಾವ ಸಂಕೋಚವೂ ಇರಲಿಲ್ಲ. ತನ್ನಿಷ್ಟದ ಹೊಸ ಸೀರೆಯುಟ್ಟು ಜೀತೂರಾಮನ ಕೈಗಳಲ್ಲಿ ಸ್ವರ್ಗ ಕಾಣುವವಳಂತೆ ನಿಶ್ಚಿಂತೆಯಿಂದ ಮಲಗಿಬಿಟ್ಟಿದ್ದಳು. ಜೀತೂರಾಮನಿಗೂ ಯಾರ ಪರಿವೆಯಿರದೆ ತನ್ನ ಲಾಖಿಯನ್ನೆತ್ತಿಕೊಂಡು ಭರಭರನೆ ಮುನ್ನಡೆದ. ಟಾರು ರಸ್ತೆ ಮುಗಿದು ಹಳ್ಳಿಯ ಕಚ್ಚಾ ರಸ್ತೆ ಪ್ರಾರಂಭವಾಯಿತು. ಜೀತೂರಾಮನ ಕೈ ಸೋಲುತ್ತಾ ಬಂತು. ಲಾಖಿಯನ್ನ ಅಲ್ಲೇ ರಸ್ತೆಯ ಪಕ್ಕ ಮಲಗಿಸಿ ಹತ್ತು ನಿಮಿಷ ಕುಳಿತುಕೊಂಡು ದಣಿವಾರಿಸಿಕೊಂಡ. ಇಮಲಿ ಅಲ್ಲೇ ಯಾವುದೋ ಅಂಗಡಿಯಲ್ಲಿ ಕೇಳಿ ಒಂದು ಹಳೆಯ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ತಂದು ಅಪ್ಪನಿಗೆ ಕೊಟ್ಟಳು.

ಅಕ್ಕ ಪಕ್ಕ ನಡೆವವರು ಹೊಸ ಸೀರೆಯಲ್ಲಿದ್ದ ಲಾಖಿಯನ್ನೂ ಮಗುವಿನಂತೆ ಅವಳನ್ನೆತ್ತಿಕೊಂಡು ಅತ್ತಿತ್ತ ನೋಡದೆ ನಡೆಯುತ್ತಿರುವ ಜೀತೂರಾಮನನ್ನೂ, ಅವನ ಹಿಂದೆಯೇ ಜಗ್ಯಾನ ಕೈಹಿಡಿದು ಆಗಾಗ ಕಣ್ಣೊರೆಸಿಕೊಳ್ಳುವ ಇಮಲಿಯನ್ನೂ ನೋಡಿ ಏನೂ ಗೊತ್ತಾಗದೆ ಹಾಗೇ ಮುಂದೆ ಸಾಗ ಹತ್ತಿದರು. ನಿಷ್ಕರುಣಿ ಬಿಸಿಲಿಗೆ ಬವಳಿ ಬಂದಂತೆ ಬಿದ್ದಿದ್ದ ರಸ್ತೆ ಜೀತೂರಾಮನ ಸಂಸಾರದ ಈ ಮೆರವಣಿಗೆ ನೋಡಿ ಒಳಗೊಳಗೇ ದುಃಖಿಸತೊಡಗಿತು.