Advertisement
ಹೊಸ ಬದುಕಿಗೆ ಬಿದ್ದ ಬುನಾದಿ: ಜುಲೇಖಾ ಬೇಗಂ ಜೀವನ ವೃತ್ತಾಂತ

ಹೊಸ ಬದುಕಿಗೆ ಬಿದ್ದ ಬುನಾದಿ: ಜುಲೇಖಾ ಬೇಗಂ ಜೀವನ ವೃತ್ತಾಂತ

ಬಿಡುವಿದ್ದಾಗೆಲ್ಲ ಅವರ ಮನೆಗೆ ಹೋಗುವುದು ಸಾಮಾನ್ಯವಾಯಿತು. ಸುಮ್ಮನಿರುವ ಗೆಜ್ಜೆ ನನ್ನ ಮನಸ್ಸಲ್ಲೇನೊ ಸದ್ದು ಮಾಡಿದರಂತೆ. ‘ನಾನೂ ಗೆಜ್ಜೆ ಕಟ್ಬೇಕು. ಕಟ್ರಿ’ ಎಂದು ಅಲವತ್ತುಕೊಂಡೆ. ‘ಹಾಗೆಲ್ಲ ಕಟ್ಬಾರ್ದವ್ವಾ, ದೇವ್ರಿಗೆ ಪೂಜೆ ಮಾಡಿ ಕಟ್ಟೋದು ಗೊತ್ತೇನು?’ ಎಂದು ಸುಮ್ಮನಿರಿಸಲು ನೋಡಿದರು. ಬಿಡುವವಳಲ್ಲ ನಾನು, ‘ಹಾಂ, ನಾನೂ ಪೂಜೆ ಮಾಡ್ತೇನಿ. ಕಟ್ರಲಾ’ ಎನ್ನುತ್ತಿದ್ದೆ. ನನ್ನ ಚಾಲಾಕಿತನ ಕಂಡು ನಕ್ಕು, ತಲೆ ಬಡಿದುಕೊಂಡು, ‘ನಿಮ್ಮವ್ವ ಬಿಟ್ಟಾಳ ನಮ್ಮನ್ನ, ಕಸಬರಿಕಿ ತಗೊಂಡು ಓಡ್ಸ್ಕೋತಾ ಬರ್ತಾರ’ ಎಂದು ತಮಾಷೆ ಮಾಡಿಬಿಡುತ್ತಿದ್ದರು.
ಕೀರ್ತಿ
ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಆರನೆಯ ಕಂತು

ನನಗೀಗಲೂ ಗೊಂಬೆಗಳೆಂದರೆ ಅದೇನೊ ಖುಷಿ. ಚಿಕ್ಕವಳಿದ್ದಾಗ ಅವ್ವ ಅಪ್ಪರೊಂದಿಗೆ ಊರೂರು ಜಾತ್ರೆಗೆ ಹೋದಾಗ ಗೊಂಬೆಗಳನ್ನು ತರುತ್ತಿದ್ದೆ. ಆಟ ಆಡುತ್ತಾ, ಆ ಗೊಂಬೆಗಳ ಕೈ ಕಾಲುಗಳನ್ನು ಬೇರಾಗಿಸಿದ ಪ್ರಸಂಗಗಳೂ ಇವೆ! ಹೊಸಪೇಟೆಯಲ್ಲಿದ್ದ ಸಂದರ್ಭದಲ್ಲಿ ಅವ್ವ ಬೈದಾಗೆಲ್ಲ ಮುಸ್ಲಿಮರ ಮನೆಗಳಿಗೆ ಹೋಗುತ್ತಿದ್ದೆ ಎಂದಿದ್ದೆನಲ್ಲಾ, ಅವರು ನನಗೊಂದು ಗೊಂಬೆ ಕೊಟ್ಟಿದ್ದರು. ಬರೀ ಗೊಂಬೆ ಮಾತ್ರ. ಅವರ ಮಕ್ಕಳಿಗೆ ಗೊಂಬೆಗಳನ್ನು ಆಡಿಸಿ, ಮಲಗಿಸಲೆಂದು ಮಂಚವನ್ನು ಮಾಡಿಕೊಡುತ್ತಿದ್ದರು. ನನಗೋ ಮಂಚದ ಆಸೆ. ಆದರೇನು, ಕೇಳಲು ಸಂಕೋಚ. ಹಾಗಾಗಿ ಹರಿಯುತ್ತಿದ್ದ ಝರಿ ಪಕ್ಕ ಕುಳಿತು, ’ನನ್ ಗೊಂಬೆಗೆ ಮಂಚ ಕೊಡು’ ಎಂದು ಕಣ್ಣೀರ್ಗರೆಯುತ್ತಾ, ಬಾರಿ ಬಾರಿ ಬೇಡಿಕೊಳ್ಳುತ್ತಿದ್ದೆ. ಏನೂ ಪ್ರಯೋಜನವಾಗಲಿಲ್ಲ ಬಿಡಿ.

ಗೊಂಬೆಗೆ ಅಲಂಕಾರ ಮಾಡುವುದು ನನಗೊಂದು ಹವ್ಯಾಸವೇ ಆಗಿತ್ತು. 2010ರಲ್ಲಿ ಯಾದಗಿರಿ ಮಲ್ಲಾಭಿಯಿಂದ ಶ್ರೀಶೈಲಕ್ಕೆ ನಾನೊಬ್ಬಳೇ ಪಾದಯಾತ್ರೆ ಮಾಡಿದ್ದೆ. ಹದಿಮೂರು ದಿನಕ್ಕೆ ನಾಲ್ಕುನೂರು ಕಿ.ಮೀ.ಗಳ ಪಯಣ. ಸಾಮಾನ್ಯವಾಗಿ ಆ ಭಾಗದಿಂದ ಪಾದಯಾತ್ರೆ ಹೊರಡುವವರೆಲ್ಲ ಹೋಳಿ ಹುಣ್ಣಿಮೆ ದಿನ ಕಾಮ ದಹನ ಮಾಡಿ, ಅದರ ಬೂದಿ ತೆಗೆದ ಮಾರನೇ ದಿನ ಹೊರಡುತ್ತಾರೆ. ಕೋಟ್ಯಾಂತರ ಸಂಖ್ಯೆಯಲ್ಲಿ ಜನ ಹೊರಡುತ್ತಾರೆ. ಅವರ ವೇಗಕ್ಕೆ ನಡೆದು ನನಗೆ ಅಭ್ಯಾಸವಿಲ್ಲ ಎಂಬುದು ತಿಳಿದಿತ್ತು. ಹಾಗಾಗಿ ಶಿವರಾತ್ರಿ ಕಳೆದು ಪಾಡ್ಯ ಪೂರೈಸಿ, ಮಾರನೆಯ ದಿನಕ್ಕಾಗಲೇ ಹೊರಟುನಿಂತಿದ್ದೆ. ಅಂದರೆ ಹೆಚ್ಚು ಕಡಿಮೆ ಹದಿನೈದು ದಿನ ಮುಂಚಿತವಾಗಿ ಹೊರಟಂತೆ ಲೆಕ್ಕ. ಅಲ್ಲಿಗೆ ಹೋದವರು ಮರಳುವಾಗ ಅಲ್ಲಿಂದ ತಿಂಡಿ ತಿನಿಸು, ಬಳೆಗಳ ಜೊತೆಗೆ ಗೊಂಬೆಗಳನ್ನೂ ತರುತ್ತಾರೆ. ಹೆಣ್ಣು – ಗಂಡು ಗೊಂಬೆಗಳು ಶಿವ ಪಾರ್ವತಿಯರ ಸಂಕೇತ. ಹಾಗಾಗಿ ಜೋಡಿ ಗೊಂಬೆಗಳನ್ನೇ ಕೊಂಡೊಯ್ಯುತ್ತಾರೆ. ಮನೆಗೆ ಹೋದ ಮೇಲೆ, ಆ ಚೀಲಕ್ಕೆ ಪೂಜೆ ಮಾಡಿ, ತಂದ ಗೊಂಬೆಗಳನ್ನು ಮಕ್ಕಳಿಗೆ ಆಟವಾಡಲು ನೀಡುವ ಪರಂಪರೆಯಿದೆ. ಅಲ್ಲಿಂದ ನಾ ತಂದ ಗೊಂಬೆಗಳಿಗೆ ಅಲಂಕರಿಸಿ, ಬೇಕಾದ ವಸ್ತ್ರವಿನ್ಯಾಸವನ್ನೂ ಮಾಡಿಟ್ಟುಕೊಂಡಿದ್ದೇನೆ.

ಹಾಂ, ಈ ಎಲ್ಲ ಆಟಿಕೆಗಳನ್ನು ಆಡುವ ಭರದಲ್ಲಿ, ಅವ್ವ ಅಪ್ಪರೊಂದಿಗೆ ಊರೂರ ಜಾತ್ರೆ ಸುತ್ತಾಡುವ ನೆಪದಲ್ಲಿ ಶಾಲೆಗೆ ಹೋಗಲಾಗಲಿಲ್ಲ. ಮನೆಯಲ್ಲಿದ್ದ ದುಡ್ಡು, ಆಭರಣ ಕಳುವಾದ ಮೇಲಂತೂ ಶಾಲೆಗೆ ಹೋಗುವುದಿರಲಿ, ಮನೆಯ ವಾತಾವರಣವೇ ಉಸಿರುಗಟ್ಟಿಸುತ್ತಿತ್ತು. ಅದಕ್ಕಾಗಿ ಐದಾರು ತಿಂಗಳಲ್ಲೇ ಕುಕನೂರಿನಿಂದ ಗದಗಿಗೆ ಬಂದೆವು. ಗದಗಿನ ತೋಂಟದಾರ್ಯ ಸ್ವಾಮಿ ಮಠವನ್ನು ಒಂದಷ್ಟು ದಿನಕ್ಕಾಗಿ ಆಶ್ರಯಿಸಿದ್ದೆವು. ಅಲ್ಲೇ ಹತ್ತಿರದಲ್ಲಿದ್ದ ಒಂದಷ್ಟು ದೇವಸ್ಥಾನಗಳನ್ನು ಸುತ್ತು ಬಂದದ್ದಾಯಿತು. ಮಂಕುಹಿಡಿದಿದ್ದ ಅವ್ವ ಮತ್ತೆ ಯಥಾಸ್ಥಿತಿಗೆ ಬರಲೇ ಇಲ್ಲ. ಅಪ್ಪನಿಗೂ ಉದ್ಯೋಗವಿರಲಿಲ್ಲ. ನಾ ಕೂಡಿಟ್ಟಿದ್ದ ದುಡ್ಡು, ನನ್ನ ಕಾಲ್ಗೆಜ್ಜೆ ಮಾರಿ ಸಿಕ್ಕ ಹಣ, ಅವರಿವರ ಬಳಿ ಮಾಡಿದ್ದ ಕೈ ಸಾಲದಿಂದಲೇ ದಿನ ಕಳೆಯುತ್ತಿತ್ತು.

ಬದುಕಿಗೆ ಬಂದೊದಗುವ ಈ ಆಕಸ್ಮಿಕ ಅವಕಾಶಗಳು ಹೇಗಿರುತ್ತವೆ ನೋಡಿ! ಆ ಸಂದರ್ಭದಲ್ಲಿ ಗದಗಿಗೆ ‘ಕುಚ್ಚೇಶ್ವರ ನಾಟ್ಯ ಸಂಘ, ಕಮತಗಿ’ ಕಂಪೆನಿ ಆಗಮಿಸಿತ್ತು. ನಮ್ಮವ್ವ ಮತ್ತು ಭಾಗಮ್ಮ ಎಂಬ ಬ್ರಾಹ್ಮಣ ಹೆಣ್ಣು ಮಗಳು (ನಾವು ಅವರನ್ನು ಅಕ್ಕಿಯವರೆಂದು ಕರೆಯುತ್ತಿದ್ದೆವು) ಒಂದೇ ಸ್ಥಳದಲ್ಲಿ ಮದುವೆಯಾಗಿದ್ದು. ಎದುರು ಬದುರಿದ್ದ ಮನೆ, ಹಾಗಾಗಿ ಇಬ್ಬರೂ ಗೆಳತಿಯಾಗಿದ್ದರು. ಅವರು ಗದಗಿನ ದೇವಸ್ಥಾನವೊಂದರಲ್ಲಿ ಅವ್ವನಿಗೆ ಸಿಕ್ಕಿದ್ದರು. ದೇವಳದ ಪ್ರಾಂಗಣ ವಿಶಾಲವಾಗಿತ್ತು. ತಮ್ಮನೊಂದಿಗೆ ಆಟವಾಡುತ್ತಿದ್ದೆ. ‘ಅಯ್ ಶಿವಬಸಮ್ಮ! ನೀನೇನ್ ಇಲ್ ಬಂದೀ?’ ಎಂದೇನೋ ಮಾತುಕತೆ ಶುರುವಾಯಿತು. ಆಡಿದ ಮಾತುಗಳು ಸ್ಪಷ್ಟವಾಗಿ ಕೇಳುವಷ್ಟೇ ದೂರದಲ್ಲಿದ್ದೆವು. ಅವ್ವ ಅವರ ಕುರಿತು ವಿಚಾರಿಸಲು ಶುರುವಿಟ್ಟಿದ್ದಳು. ಭಾಗಮ್ಮನವರು, ‘ನನ್ ಮಗ್ಳು ಇಲ್ಲೇ ನಾಟ್ಕದ ಕಂಪೆನಿಯಾಗ ಡಾನ್ಸ್ ಮಾಡ್ತಾಳ, ಪಾರ್ಟ್ ಮಾಡ್ತಾಳ’ ಅಂತೆಲ್ಲ ವಿವರ ಒಪ್ಪಿಸಿದ್ದಾಗಿತ್ತು. ಅವ್ವನೂ ತನ್ನ ನೋವನ್ನೆಲ್ಲ ಹಂಚಿಕೊಂಡಳು. ನನ್ನ ಮತ್ತೆ ತಮ್ಮನ ವಯಸ್ಸೂ ಹೇಳಿದ್ದಳು. ಭಾಗಮ್ಮನವರು ನನ್ನ ಕಂಡಿದ್ದೇ, ಮನೆಗೆ ಕರೆದುಕೊಂಡು ಹೋಗುತ್ತೇನೆಂದು ಅವ್ವನಲ್ಲಿ ದುಂಬಾಲುಬಿದ್ದರು. ಕರೆದುಕೊಂಡು ಹೋದವರ ಜವಾಬ್ದಾರಿ, ತಂದುಬಿಡುವುದೂ ಆಗಿರುತ್ತದೆ ಅಂತೆಲ್ಲ ಅವ್ವನ ಕಟ್ಟಾಜ್ಞೆ.

ಆಗ ಸಂಜೆಯ ಸೂರ್ಯ ಪಡುವಣದಲ್ಲಿ ಮುಳುಗುತ್ತಿದ್ದ. ಇವತ್ತಿಗೆ ಕಷ್ಟವೆಂದು, ನಾಳೆ ಬೆಳಿಗ್ಗೆ ಮರಳಿ ಒಪ್ಪಿಸುತ್ತೇನೆಂಬ ನಂಬಿಕೆಯ ಮೇರೆಗೆ ಅವ್ವ ನನ್ನನ್ನು ಕಳುಹಿಕೊಟ್ಟಳು. ಅವರ ಮನೆ ತಲುಪುವ ಹೊತ್ತಿಗೆ ಸಮಯ ಏಳೂವರೆಯಾಗಿತ್ತು. ಗೆಜ್ಜೆಗಳೆಲ್ಲ ಹಾಡಿನ ಲಯಕ್ಕೆ ನಲಿಯುವುದಕ್ಕೆ ತಯಾರಾದಂತಿತ್ತು. ಒಬ್ಬ ಲಕ್ಷ್ಮಣ ಅಣ್ಣ ಹಾರ್ಮೋನಿಯಂ ನುಡಿಸುತ್ತಿದ್ದ, ಇನ್ನೊಬ್ಬ ರಾಮಣ್ಣನ ಕೈಯಲ್ಲಿ ತಬಲ. ಲಕ್ಷ್ಮೀ ನರ್ತಿಸುತ್ತಿದ್ದಳು. ಇಡೀ ಮನೆಯೇ ಕಲೆಗೆ ಮುಡಿಪಾದಂತಿತ್ತು. ನೋಡುತ್ತಾ, ಅದರೊಳಗೆ ಬೆರೆತು ಮೈಮರೆತು ಹೋದೆ. ಹಾಡಿಗೆ ನಾನೂ ಹೆಜ್ಜೆ ಹಾಕಿದೆ. ತಾಳ, ಲಯ ಯಾವುದೂ ಇಲ್ಲದೆ ನನ್ನಿಷ್ಟದಂತೆ ಕುಣಿದೆ. ಮೂರು ಮಂದಿ ನನ್ನ ತುಂಟತನ ಮೆಚ್ಚಿದರು. ಯಾರ ಮಗಳು? ಎಲ್ಲಿಯವಳು ಎಂಬೆಲ್ಲ ವಿಚಾರ ತಿಳಿದ ನಂತರ, ಪರಿಚಿತಳೇ ಎಂದು ಮತ್ತಷ್ಟು ಆಪ್ತವಾದೆ.

ಲಕ್ಷ್ಮೀ ತನ್ನವ್ವನಲ್ಲಿ ನನ್ನನ್ನು ನಾಟಕಕ್ಕೆ ಕರೆದುಕೊಂಡು ಹೋಗಬೇಕೆಂದು ಹೇಳುತ್ತಿದ್ದದ್ದು, ನನ್ನ ಕಿವಿಗೂ ಬಿತ್ತು. ಅವರವ್ವನ ಒಪ್ಪಿಗೆಯೂ ದೊರೆತಿತ್ತು. ಸ್ನಾನ ಮುಗಿಸಿ, ಬೇಗನೆ ಹೊರಟೆ. ಕಂಪೆನಿಯೊಳಕ್ಕೆ ಹೋಗುತ್ತಿದ್ದಂತೆ ನನಗಾದ ಆನಂದ ಹೇಳತೀರದು. ಕಂಡ ಕಲಾವಿದರೆಲ್ಲ ‘ಈಕಿ ಯಾರು?’ ಎಂದು ಆಶ್ಚರ್ಯಚಕಿತರಾಗಿ ಕೇಳಿದರೆ, ಲಕ್ಷ್ಮಿ ಸಾರಾಸಗಟಾಗಿ ‘ನಮ್ಮತ್ತಿ ಮಗ್ಳು’ ಎಂದುಬಿಟ್ಟಳು. ಕಂಪೆನಿಗೆ ಕಾಲಿಡುತ್ತಿದ್ದಂತೆ ಕಳೆದುಹೋದ ನನ್ನನ್ನು ಇವಳ ಮಾತು ಗಾಳಿಯಲ್ಲಿ ತೇಲಿಬಿಟ್ಟಿತು. ಲಕ್ಷ್ಮಿ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಹೆಣ್ಣು. ನಾನು ರೈತಾಪಿ ಕುಟುಂಬದಲ್ಲಿ ಹುಟ್ಟಿದ್ದು. ‘ಎತ್ತಣಿಂದೆತ್ತ ಸಂಬಂಧವಯ್ಯಾ!’ ಎಂದು ಅಲ್ಲಮ ಕೇಳುತ್ತಾನಲ್ಲಾ ಹಾಗೆ. ಅಲ್ಲಿದ್ದ ಕಲಾವಿದರು ನನ್ನ ಮುಖ, ಹಾವ ಭಾವ ನೋಡುತ್ತಾ, ‘ಕಂಪೆನಿಗೆ ಹೇಳಿ ಮಾಡಿಸಿದ ಹುಡ್ಗಿ’ ಎಂದೆಲ್ಲ ಕೊಂಡಾಡಿದರು. ರಂಗಭೂಮಿಯ ಹೊಸ ಲೋಕದಲ್ಲಿ ನಾನಿಟ್ಟ ಮೊದಲ ಹೆಜ್ಜೆಗಳನ್ನು ಮರೆಯುವುದಾದರೂ ಹೇಗೆ! ಹೌದು, ನಾನಲ್ಲದ ಇನ್ನೊಂದಾಗುವ ಇದೇ ರಂಗಭೂಮಿಯಲ್ಲಿ ಅಂದು ನಾನೇ ಆಗಿದ್ದೆ.

ಮಾತಿನಂತೆ ಭಾಗಮ್ಮನವರು ನನ್ನನ್ನು ಮಾರನೇ ದಿನವೇ ಅವ್ವನ ಕೈಗೊಪ್ಪಿಸಿದ್ದರು. ಎರಡನೇ ತರಗತಿಯವರೆಗಷ್ಟೇ ಓದಿದ್ದೆ. ಮುಂದೆ ಓದಲಾಗಲಿಲ್ಲ. ಹಠ ಹಿಡಿದು, ಆಗತಾನೆ ಶಾಲೆಗೆ ಸೇರಿದ್ದೆ. ಪ್ರತಿದಿನವೂ ಅಲ್ಲಿದ್ದ ಮೇಷ್ಟ್ರು, ವರ್ಗಾವಣೆ ಪತ್ರ ತೆಗೆದುಕೊಂಡು ಬರುವಂತೆ ತಿಳಿಸುತ್ತಿದ್ದರು. ಅಲ್ಲಿಯವರೆಗೂ ಓದಬೇಕೆಂದಿದ್ದ ಹಂಬಲ ಕಂಪೆನಿಗೆ ಕಾಲಿಟ್ಟಾಗಿಂದ ದಿಕ್ಕು ಬದಲಿಸಿಬಿಟ್ಟಿತ್ತು! ಶಾಲೆಗೆ ಹೋಗುತ್ತೇನೆಂದು ಹೇಳಿ, ಲಕ್ಷ್ಮಿ ಮನೆಯಲ್ಲಿ ಸಮಯ ಕಳೆಯುತ್ತಿದ್ದೆ. ಅವರ ಮನೆಯಲ್ಲಿ ನಿತ್ಯವೂ ರಿಹರ್ಸಲ್ ನಡೆಯುತ್ತಿತ್ತು. ಅದನ್ನು ನೋಡುವ ಸಲುವಾಗಿಯೇ ಹೋಗುತ್ತಿದ್ದೆ ಎನ್ನಿ.

ಆಗೆಲ್ಲ ಕಂಪೆನಿಗಳಲ್ಲಿ ನಾಟಕ ಆರಂಭವಾಗುತ್ತಿದ್ದಂತೆಯೇ ಅಂಕದ ಪರದೆ ತೆರೆಯುತ್ತಿದ್ದರು. ತಕ್ಷಣವೇ ಪೂಜ ನೃತ್ಯವಿತ್ತು.  ‘ಅರುಣೋದಯವಾಯಿತು ನಮಗಿಂದು, ಅರುಣೋದಯವಾಯಿತು ಸ್ವಾತಂತ್ರ್ಯ ಭಾರತ ಯುವಕ ಯುವತಿಯರಿಗೆ’ ಎಂಬ ಹಾಡಿಗೆ ಮಮತಾ ಗುಡೂರು ಮತ್ತು ಭಾನಾಪುರ ಲಕ್ಷ್ಮಿ ಇಬ್ಬರೂ ನೃತ್ಯ ಮಾಡುತ್ತಿದ್ದರು. ಕುರ್ಚಿಯಲ್ಲೇ ಕೈ ಹಾರಿಸಿ, ಹುಬ್ಬೇರಿಸಿ ನಾನು ಕುಳಿತಲ್ಲೇ ನರ್ತಿಸುತ್ತಿದ್ದೆ. ವೇದಿಕೆಯಲ್ಲಿ ಮಾಡುವುದಕ್ಕಿಂತ ಪ್ರೇಕ್ಷಕರ ನಡುವಲ್ಲೇ ಹೀಗೆ ಮಾಡಿದರೆ ಎಲ್ಲರ ಗಮನ ಸೆಳೆಯುವುದು ಸಹಜ ಮತ್ತು ಬೇಗ ತಾನೆ? ನನ್ನ ಕತೆಯೂ ಹಾಗೇ ಆಯಿತು.

ಬಿಡುವಿದ್ದಾಗೆಲ್ಲ ಅವರ ಮನೆಗೆ ಹೋಗುವುದು ಸಾಮಾನ್ಯವಾಯಿತು. ಸುಮ್ಮನಿರುವ ಗೆಜ್ಜೆ ನನ್ನ ಮನಸ್ಸಲ್ಲೇನೊ ಸದ್ದು ಮಾಡಿದರಂತೆ. ‘ನಾನೂ ಗೆಜ್ಜೆ ಕಟ್ಬೇಕು. ಕಟ್ರಿ’ ಎಂದು ಅಲವತ್ತುಕೊಂಡೆ. ‘ಹಾಗೆಲ್ಲ ಕಟ್ಬಾರ್ದವ್ವಾ, ದೇವ್ರಿಗೆ ಪೂಜೆ ಮಾಡಿ ಕಟ್ಟೋದು ಗೊತ್ತೇನು?’ ಎಂದು ಸುಮ್ಮನಿರಿಸಲು ನೋಡಿದರು. ಬಿಡುವವಳಲ್ಲ ನಾನು, ‘ಹಾಂ, ನಾನೂ ಪೂಜೆ ಮಾಡ್ತೇನಿ. ಕಟ್ರಲಾ’ ಎನ್ನುತ್ತಿದ್ದೆ. ನನ್ನ ಚಾಲಾಕಿತನ ಕಂಡು ನಕ್ಕು, ತಲೆ ಬಡಿದುಕೊಂಡು, ‘ನಿಮ್ಮವ್ವ ಬಿಟ್ಟಾಳ ನಮ್ಮನ್ನ, ಕಸಬರಿಕಿ ತಗೊಂಡು ಓಡ್ಸ್ಕೋತಾ ಬರ್ತಾರ’ ಎಂದು ತಮಾಷೆ ಮಾಡಿಬಿಡುತ್ತಿದ್ದರು.

ಬರಬರುತ್ತಾ ನಾನವರಿಗೆ ಹೊಂದಿಕೊಂಡಿದ್ದೋ ಅವರೇ ನನ್ನೊಂದಿಗೆ ಹೊಂದಾಣಿಕೆ ಮಾಡಿಕೊಂಡರೋ ಗೊತ್ತಿಲ್ಲ. ಪರಸ್ಪರ ಬಾಂಧವ್ಯ ಗಟ್ಟಿಯಾಯಿತು. ನನಗಾಗ ಎಂಟು ವರ್ಷವಿರಬಹುದು. ನನ್ನ ಆಸಕ್ತಿಯನ್ನು ಕಂಡ ಭಾಗಮ್ಮನವರು ಅವ್ವನಲ್ಲಿ, ‘ನಿನ್ ಮಗ್ಳನ್ನ ಕಂಪೆನಿಗೆ ಕಕ್ಕೊಂಡು ಹೋಕೆನಿ. ಭಾನಾಪುರದಾಗ ನಮ್ ತೋಟ ಐತಿ. ಮೂರು ಮಂದಿ ಅಲ್ಲೇ ಉಳ್ಕೊಂಡು ಬಿಡ್ರಲಾ. ಹೆಂಗೂ ತೋಟ ಐತಿ. ತೋಟ ನೋಡ್ಕೋತಾ ಇದ್ಬಿಡ್ರಲಾ’ ಎಂದಿದ್ದರಂತೆ. ಆರೋಗ್ಯ ಸರಿಯಿಲ್ಲದ ಅವ್ವನಿಗೆ ಒಂದೆಡೆ ನೆಲೆ ನಿಲ್ಲುವುದು ಅವಶ್ಯವಾಗಿತ್ತು. ಆದರೆ ಅಪ್ಪನಿಗೆ ಕುಟುಂಬದ ಜವಾಬ್ದಾರಿಯ ಪ್ರಶ್ನೆ. ಅಪ್ಪ ಒಪ್ಪಲಿಲ್ಲ. ಭಾಗಮ್ಮನವರ ಮಾತೇ ಅವ್ವನ ಮನಸ್ಸಲ್ಲಿ ಸುಳಿದಾಡುತ್ತಿತ್ತು. ಮಗಳ ಭವಿಷ್ಯವೇ ಕಂಪೆನಿಯಲ್ಲಿದೆ ಎಂದವಳಿಗೆ ಅನಿಸಿರಬಹುದು. ನನ್ನನ್ನು ಭಾಗಮ್ಮನವರೊಂದಿಗೆ ಕಳುಹಿಸಿಯೇಬಿಟ್ಟಳು. ಅಪ್ಪನಿಗೆ ಸಣ್ಣ ಸುಳಿವೂ ನೀಡದಂತೆ ಭಾಗಮ್ಮನವರು ತಿಳಿಸಿದ್ದರು. ಭಾನಾಪುರಕ್ಕೆ ಮಗಳನ್ನು ಕರೆದುಕೊಂಡು ಹೋಗಿರಬಹುದು. ಅಲ್ಲಿಗೊಮ್ಮೆ ಹೋಗಿ ನೋಡೋಣ, ಸಿಕ್ಕರೂ ಸಿಗಬಹುದೆಂಬ ಅಮ್ಮನ ಈ ಯೋಚನೆಯ ಹಿಂದೆ ಭಾಗಮ್ಮನವರ ಉಪಾಯವೇ ಅಡಗಿತ್ತು.

ಅಂತೂ ಭಾನಾಪುರಕ್ಕೆ ಹೋಗಿ, ಅಲ್ಲಿದ್ದ ಅವರ ಅಣ್ಣನಲ್ಲಿ ವಿಚಾರಿಸಿದ್ದಾಯಿತು. ನಾನಿದ್ದರೆ ತಾನೆ ಸಿಗುವುದಕ್ಕೆ, ನಾನಾಗಲೇ ಮಾನವಿ ಕ್ಯಾಂಪ್‌ಗೆ ಸಿದ್ಧವಾಗಿದ್ದೆ. ಅಪ್ಪನ ಕೋಪ ನೆತ್ತಿಗೇರಿತ್ತು. ಅಪ್ಪನ ರಂಪಾಟ ನೋಡಲಾಗದೆ ‘ಭಾಗಮ್ಮ ನಂಗೂ ಕ್ಯಾಂಪ್ ಎಲ್ಲಿ ಅಂತ ಹೇಳಿಲ್ರಿ ಈರಪ್ನೋರೆ. ಕೇಳ್ ತಿಳ್ಕೋತೀನಿ. ಸಮಯ ಕೊಡ್ರಿ’ ಎಂದು ಅವರಣ್ಣ ಬೇಡಿಕೊಂಡರಂತೆ. ಇದಾಗಿ ಎರಡು ಮೂರು ತಿಂಗಳು ನನ್ನ ಹುಡುಕುತ್ತಾ, ಅದೇ ಊರಿನಲ್ಲಿ ಅವ್ವ ಅಪ್ಪರಿಬ್ಬರು ಉಳಿದುಕೊಂಡಿದ್ದರು.

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ