ಒಂದಂತೂ ನಿಜ. ಅಂತರ್ಜಾಲದಿಂದಾಗಿ ಇಡಿ ಪ್ರಪಂಚವೇ ಇವತ್ತು ಒಂದು ಹಳ್ಳಿಯಾಗಿದೆ. ಯಾವುದನ್ನು ಹಿಂದಿನ ಬಾಗಿಲಿನ ವಸಾಹತೀಕರಣ ಎಂದು ಕರೆಯಲಾಗುವುದೋ ಅಂತಹ ಜಾಗತೀಕರಣದಿಂದಾಗಿ ಪ್ರಪಂಚ ಮಟ್ಟದಲ್ಲಿ ತಮ್ಮ ವ್ಯವಹಾರಗಳನ್ನು, ಉದ್ಯಮಗಳನ್ನು ಸ್ಥಾಪಿಸುವ ದೈತ್ಯ ಬಹುರಾಷ್ಟ್ರೀಯ ಕಂಪೆನಿಗಳು ಚಿಕ್ಕಪುಟ್ಟ ದೇಶಗಳಲ್ಲೂ ತಮ್ಮ ಅಸ್ತಿತ್ವವನ್ನು ಸಾರಿ ಹೇಳುತ್ತಿವೆ. ಇವು ನಮ್ಮ ರಸ್ತೆಗಳ ನೋಟಗಳನ್ನು ಮಾತ್ರವಲ್ಲ, ಬದುಕು, ಹಣಕಾಸು ಮತ್ತು ಸಂಬಂಧಗಳನ್ನು ನಾವು ನೋಡುವ ರೀತಿಯನ್ನು ಸಹ ಬದಲಿಸಿವೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಇಪ್ಪತ್ತೆರಡನೆಯ ಬರಹ
1. “ಇಲ್ಲ ಮ್ಯಾಮ್, ನಾನು ಈಗ ರಂಜಿನಿ* ಹತ್ರ ಮಾತಾಡ್ತಾ ಇಲ್ಲ”
“ಯಾಕಮ್ಮಾ, ಅವಳು ನಿನ್ನ ಆಪ್ತಸ್ನೇಹಿತೆ ಅಲ್ವಾ? ಹತ್ತು ವರ್ಷದಿಂದ ನೀವಿಬ್ರೂ ಒಳ್ಳೆ ಸ್ನೇಹಿತರು ಅಂತಿದ್ಯಲ್ಲಾ?”
“ಹೌದು … ಆದ್ರೆ ನಾ ಅವಳ್ಗೆ ಟೈಮ್ ಕೊಡ್ತಿಲ್ಲ ಅಂತ ಮುನಿಸ್ಕೊಂಡು ಮಾತು ಬಿಟ್ಟೋಳು ಮಾತೇ ಆಡ್ತಿಲ್ಲ ಮ್ಯಾಮ್. ನಾನೂ ಏನೂ ಮಾಡಕ್ಕಾಗದೆ ಸುಮ್ಮನಾದೆ.”
2. “ಹೇಗಿದಾನೋ ಗೊತ್ತಿಲ್ಲ ಆಂಟಿ. ನಂದು ಅವಂದು ಬ್ರೇಕ್ ಅಪ್ ಆಯ್ತು.”
“ಅಯ್ಯೋ, ಯಾಕಮ್ಮಾ? ಏಳು ವರ್ಷದಿಂದ ಇಷ್ಟ ಪಡ್ತಿದ್ರಲ್ಲಮ್ಮಾ ನೀವಿಬ್ರು?”
“ಹೌದು ಆಂಟಿ, ಆದ್ರೆ ಕೆಲ್ಸದ್ ಜಾಗಾನ ಶಿಫ್ಟ್ ಮಾಡೋ ವಿಷಯದಲ್ಲಿ ಜಗಳ ಆಯ್ತು, ಅದಕ್ಕೆ ಬ್ರೇಕ್ ಅಪ್ ಆಯ್ತು, ಆಂಟಿ”
3. “ಓಹ್, ಹೌದಾಪ್ಪ? ಅವಳನ್ನ ಅಷ್ಟೊಂದು ಇಷ್ಟ ಪಡ್ತೀಯಾ?”
“ಎಸ್ ಆಂಟಿ, ಐ ಲವ್ ಹರ್”.
“ಮತ್ತೆ, ಬೇಗ ಮದ್ವೆ ಊಟ ಹಾಕಿಸ್ತೀಯಾ ಅನ್ನು”.
“ಓಹ್ ನೋ ಆಂಟಿ, ಹೇಳಕ್ಕಾಗಲ್ಲ, ಇಟ್ ಡಿಪೆಂಡ್ಸ್”.
“ಹಾಗಾದ್ರೆ … ಪ್ರೀತಿ ಮದುವೇಲೇ ಕೊನೆಯಾಗ್ಬೂಕೂಂತ …”
“ಕಂಪಲ್ಶನ್ ಏನಿದೆ ಆಂಟಿ?”
4. “ನೀವು ಮದ್ವೆಗೆ ಖಂಡಿತ ಬರ್ಬೇಕು ಅಕ್ಕ. ಜೀವನ್* ಅಂತ ನನ್ನ ಕೊಲೀಗ್‌ನ ಮದ್ವೆ ಆಗ್ತಾ ಇದೀನಿ. ಮೊದಲ್ನೇ ಮದುವೇದು ಡೈವೋರ್ಸ್ ಕೆಲಸಗಳು ಆಗೋದು ಸ್ವಲ್ಪ ನಿಧಾನ ಆಯ್ತು ಅಕ್ಕ. ಅದಕ್ಕಾಗಿ ಈಗ ಮದುವೆ. ನೀವು ಖಂಡಿತ ಬರ್ಬೇಕು”.
“ಜೀವನ್! ಹಾಂ, ನೋಡಿದ್ದೀನಿ ಅವನನ್ನ. ನಿಂಗೂ ಅವಂಗೂ ವಯಸ್ನಲ್ಲಿ …”
“ತುಂಬ ವ್ಯತ್ಯಾಸ ಇದೆ ಅಕ್ಕ, ಅವ್ನು ನನಗಿಂತ ಒಂಬತ್ತು ವರ್ಷ ಚಿಕ್ಕವ್ನು. ಆದ್ರೆ ನಾವು ಟ್ರೆಕ್ಕಿಂಗ್‌ಗೆ ಹೋಗ್ತಾ ಇದ್ವಲ್ಲಾ, ತುಂಬ ಕ್ಲೋಸ್ ಆದ್ವಿ ಅಕ್ಕ. ನಂಗೆ ಮೊದಲ್ನೇ ಮದುವೆಯಿಂದ ಹದಿನೆಂಟು ವರ್ಷದ ಮಗ ಇದಾನೆ ಅನ್ನೋದರ ಬಗ್ಗೆ ಕೂಡ ಇವ್ನು ತಲೆ ಕೆಡಿಸಿಕೊಂಡಿಲ್ಲ. ನಮ್ಮ ಎರಡೂ ಮನೆಯವರೂ ಒಪ್ಪಿದ್ರು. ಖಂಡಿತ ಬನ್ನಿ ಅಕ್ಕ ಮದುವೆಗೆ”.
*****
ಮೇಲಿನ ಸಂಭಾಷಣೆಗಳು ನಾನು ನಿಜಜೀವನದಲ್ಲಿ ಈಗ ಮೂರು-ನಾಲ್ಕು ವರ್ಷಗಳಲ್ಲಿ ಮಾಡಿದಂಥವು. (*ಖಾಸಗಿತನವನ್ನು ಕಾಪಾಡುವುದಕ್ಕಾಗಿ ಹೆಸರುಗಳನ್ನು ಬದಲಾಯಿಸಿದ್ದೇನೆ). ಮನುಷ್ಯ ಸಂಬಂಧಗಳ ವಿಷಯದಲ್ಲಿ ನವಪೀಳಿಗೆಯ ನವಸಮೀಕರಣಗಳನ್ನು ಇವು ತೋರಿಸಿಕೊಡುತ್ತಿವೆ, ಅಲ್ಲವೆ?
ನಾನು ಎಪ್ಪತ್ತರ ದಶಕದ ಮೊದಲ ವರ್ಷಗಳಲ್ಲಿ ಹುಟ್ಟಿದವರ ಪೀಳಿಗೆಗೆ ಸೇರಿದವಳು. “ಬೆಸ್ಟ್ ಫ್ರೆಂಡ್ಸ್ ಆರ್ ಫಾರ್ ಎವರ್”, “ಮ್ಯಾರೇಜಸ್ ಆರ್ ಮೇಡ್ ಇನ್ ಹೆವೆನ್”, “ಜನ್ಮ ಜನ್ಮದ ಅನುಬಂಧ ಹೃದಯ ಹೃದಯಗಳ ಪ್ರೇಮಾನುಬಂಧ” – ಇಂತಹ ಸೂಕ್ತಿಗಳನ್ನು, ಹಾಡುಗಳನ್ನು ಕೇಳುತ್ತಾ ಬೆಳೆದ ನಮ್ಮ ಪೀಳಿಗೆಗೆ ಹೊಸ ಪೀಳಿಗೆಯ ಅಂದರೆ 1990ರ ನಂತರ ಹುಟ್ಟಿದವರ ಸಂಬಂಧ-ಸಮೀಕರಣಗಳು ಅರ್ಥ ಆಗುವುದು ಬಹಳ ಕಷ್ಟ. ಇದರ ಅರ್ಥ `ನಮ್ಮ ಪೀಳಿಗೆಯವರು ಬಹಳ ಉತ್ತಮ ದರ್ಜೆಯ ಮನುಷ್ಯರು, ಬಹಳ ಅದ್ಭುತ ಸಂಬಂಧಗಳನ್ನು ಇಟ್ಟುಕೊಳ್ಳುತ್ತೇವೆ, ಈಗಿನ ಪೀಳಿಗೆಯವರು ಹಾಗಲ್ಲ’ ಎಂದೇನಲ್ಲ.
ಇಲ್ಲಿ ಪ್ರಶ್ನೆ ಯಾವ ಪೀಳಿಗೆ ಪ್ರೀತಿವಂತ ಯಾವುದು ಪ್ರೀತಿವಂತ ಅಲ್ಲ ಎಂಬುದಲ್ಲ. ಪೀಳಿಗೆಗಳು ಸಂಬಂಧಗಳಿಂದ ಏನನ್ನು ನಿರೀಕ್ಷಿಸುತ್ತವೆ, ಯಾವುದಕ್ಕೆ ಪ್ರಾಮುಖ್ಯ ಕೊಡುತ್ತವೆ ಎಂಬುದು ಪ್ರಶ್ನೆ. ಮೂಲತಃ ಮನುಷ್ಯನ ಪ್ರಾಥಮಿಕ ಅಗತ್ಯಗಳು ಎಂದಿದ್ದರೂ ಅವವೇ ಆಗಿರುತ್ತವೆ. ಆಹಾರ, ವಸ್ತ್ರ, ವಾಸ್ತವ್ಯ, ಔಷಧಗಳ ಮೂಲಭೂತ ಅವಶ್ಯಕತೆಗಳ ಜೊತೆಗೆ ತನ್ನನ್ನು ಪ್ರೀತಿಯಿಂದ ಆದರಿಸುವ ಒಂದೆರಡು ಜೀವಗಳು ಮನುಷ್ಯನಿಗೆ ಬೇಕು ಎಂಬುದು ಸರ್ವಕಾಲಿಕ ಸತ್ಯ. ಹೀಗಿದ್ದ ಮೇಲೆ ಮನುಕುಲದ ಇತಿಹಾಸದಲ್ಲಿ ಇದ್ದಕ್ಕಿದ್ದಂತೆ ಪ್ರೀತಿವಂತವಲ್ಲದ ಒಂದು ಪೀಳಿಗೆ ಹುಟ್ಟಿಬಿಡುವುದಿಲ್ಲ. ಯಾವ ಬದಲಾವಣೆಯೂ ಇದ್ದಕ್ಕಿದ್ದಂತೆ ಆಗುವುದಿಲ್ಲ. ಬಹುಶಃ ಪ್ರೀತಿ ಮತ್ತು ಸಾರ್ಥಕ ಸಂಬಂಧಗಳ ವ್ಯಾಖ್ಯಾನದಲ್ಲಿ ಕಾಲದಿಂದ ಕಾಲಕ್ಕೆ ಆಗುತ್ತಿರುವ ಬದಲಾವಣೆಗಳು ಇಂದು ನಮ್ಮ ಕಣ್ಣಿಗೆ ರಾಚುತ್ತಿರುವ ವೈದೃಶ್ಯ(ಕಾಂಟ್ರಾಸ್ಟ್)ಕ್ಕೆ ಕಾರಣವಿರಬಹುದು. ಜೊತೆಗೆ ಬದಲಾವಣೆ ಎಂಬುದು ನಿಧಾನ ಗತಿಯಲ್ಲಿ ಆಗುತ್ತಲೇ ಇರುತ್ತದೆ. ಅದರ ಪ್ರಮಾಣ ಹೆಚ್ಚಾದಾಗ ಅದು ದೊಡ್ಡ ಪ್ರಮಾಣದ ಮಾರ್ಪಾಡೆಂಬಂತೆ ಕಣ್ಣಿಗೆ ಹೊಡೆದು ಕಾಣುತ್ತದೆ ಅಷ್ಟೆ. ಇಂಗ್ಲಿಷ್‌ನಲ್ಲಿ `ಕ್ಯುಮುಲೇಟಿವ್’ ಅಂತಾರಲ್ಲ ಹಾಗೆ. ಬದಲಾವಣೆಯ ಸಂಚಯ ಇದು.
ನಾವು ವಸ್ತುನಿಷ್ಠವಾಗಿ ಸನ್ನಿವೇಶವನ್ನು ನೋಡಲು ಪ್ರಯತ್ನ ಮಾಡಿದರೆ ಇಲ್ಲಿ ಪ್ರಶ್ನೆ ಇರುವುದು ಸಂಬಂಧ ಕೊಡುವ ಭಾವನಾತ್ಮಕ ಸುರಕ್ಷೆ ಮತ್ತು ಸಂಬಂಧದ ಅಧಿಕೃತತೆ(ಅಥೆಂಟಿಸಿಟಿ – ನಿಜಾಯತಿ – ಅರ್ಥಪೂರ್ಣತೆ)ಗಳ ನಡುವಿನ ಆಯ್ಕೆಯದು ಅನ್ನಿಸುತ್ತದೆ. ಅಧ್ಯಯನದ ಅನುಕೂಲಕ್ಕಾಗಿ ಜಾಗತೀಕರಣಕ್ಕೆ ಮುಂಚೆ ಹುಟ್ಟಿದವರು ಮತ್ತು ನಂತರ ಹುಟ್ಟಿದವರು ಎಂದು ನಾವು ಮನುಷ್ಯರಲ್ಲಿ ಎರಡು ವಿಭಾಗ ಮಾಡಿಕೊಂಡರೆ, ಜಾಗತೀಕರಣಕ್ಕೆ ಮುಂಚೆ ಹುಟ್ಟಿದವರು ಸುರಕ್ಷೆಯನ್ನೂ ಜಾಗತೀಕರಣದ ನಂತರ ಹುಟ್ಟಿದವರು ಅಧಿಕೃತತೆಯನ್ನೂ(ನಿಜಗುಣ) ಆಯ್ಕೆ ಮಾಡಿಕೊಳ್ಳುವಂತೆ ತೋರುತ್ತದೆ.
ಮನುಕುಲದ ಇತಿಹಾಸವನ್ನು ಗಮನಿಸಿದರೆ, ಆದಿವಾಸಿ ಸಮುದಾಯ ಜೀವನದಿಂದ ಕೂಡು ಕುಟುಂಬಗಳ ಗ್ರಾಮೀಣ ಬದುಕು, ನಂತರ ನಗರಗಳ ಬೀಜಕೆಂದ್ರ ಕುಟುಂಬಗಳ ಬದುಕು, ತದನಂತರ `ಒಂದೇ ಮಗು ಸಾಕು’ ಎಂಬ ನಿರ್ಧಾರ ಮಾಡಿದ ದಂಪತಿಗಳ ಬದುಕು, ಇನ್ನೂ ಮುಂದುವರಿದು `ಮಕ್ಕಳೇ ಬೇಡ ನಮಗೆ’ ಎಂದು ನಿರ್ಧರಿಸಿ ಜೊತೆಗಿರುವರು, ಮದುವೆ ಬೇಡ ಎಂದು ನಿರ್ಧರಿಸಿ ಸಹ ಜೀವನ ನಡೆಸುವವರು.. ಮದುವೆಯಾದರೂ ಭೌತಿಕವಾಗಿ ದೂರದೂರ ಇರುವ ಪ್ರದೇಶಗಳಲ್ಲಿ ಬದುಕುವ ಒಪ್ಪಂದ ಮಾಡಿಕೊಂಡು ಭಾವನಾತ್ಮಕವಾಗಿ ಜೊತೆಗಿರುವವರು, ಹೀಗೆ ಮನುಕುಲವು ಸಂಗಾತಿ-ಸಂಬಂಧದಲ್ಲಿ ಅನೇಕಾನೇಕ ಪ್ರಯೋಗಗಳ್ನು ಮಾಡುತ್ತಾ ಬಂದಿದೆ. ಆದರೆ ಇನ್ನೂ ಯಶಸ್ಸನ್ನು ಮಾತ್ರ ಕಂಡಿಲ್ಲ!!
ಮನುಕುಲವು ಮಾಡಿದಂತಹ ಮೇಲೆ ಹೇಳಿದ ಪ್ರಯೋಗಗಳನ್ನು ಗಮನಿಸಿದಾಗ, ವ್ಯಕ್ತಿಸ್ವಾತಂತ್ರ್ಯ ಮತ್ತು ಒಗೆತನ(ಒಗ್ಗಿಕೊಳ್ಳುವಿಕೆ – ಜೊತೆಯಾಗಿರುವುದು) ಇವೆರಡನ್ನು ಸಮತೋಲನದಲ್ಲಿರಿಸಲು ನಾವೆಲ್ಲ ಸದಾ ಪ್ರಯತ್ನಿಸುತ್ತೇವೆ ಅನ್ನಿಸುತ್ತೆ, ಆದರೆ ಇಲ್ಲೊಂದು ಬಿಕ್ಕಟ್ಟಿದೆ. ಇವೆರಡನ್ನೂ ನಾವು ಒಟ್ಟಿಗೆ ಪಡೆದುಕೊಳ್ಳಲು ಸಾಧ್ಯ ಇಲ್ಲ. ಒಂದು ಬೇಕಾದರೆ ಇನ್ನೊಂದನ್ನು ಸ್ವಲ್ಪವಾದರೂ ತ್ಯಾಗ ಮಾಡಬೇಕು. ಒಂದಿನ್ನೊಂದನ್ನು ಹೊರಗಿಡುವ ಸಂಗತಿಗಳಿವು(ಮ್ಯೂಚುವಲಿ ಎಕ್ಸ್ಕ್ಲೂಸಿವ್), ಒಳಗೊಳ್ಳುವಂಥವಲ್ಲ. ಮನುಷ್ಯನು ಇನ್ನೊಬ್ಬ ಮನುಷ್ಯನೊಂದಿಗೆ ಉತ್ತಮ ಸಂಬಂಧ ಬೇಕಾದರೆ ತನ್ನ ವ್ಯಕ್ತಿ ಸ್ವಾತಂತ್ರ್ಯವನ್ನು ಕೊಂಚ ಬಿಟ್ಟುಕೊಡಬೇಕಾಗುತ್ತದೆ, ಅಥವಾ ಸಂಪೂರ್ಣ ಸ್ವಾತಂತ್ರ್ಯ ತನಗೆ ಬೇಕು ಅಂದರೆ ಸಂಬಂಧವನ್ನು ಬಿಟ್ಟುಕೊಡಲು ತಯಾರಾಗಬೇಕಾಗುತ್ತದೆ. ಇಲ್ಲಿ ವ್ಯಕ್ತಿಯ ಆಯ್ಕೆ ಯಾವುದು ಎಂಬುದರ ಮೇಲೆ ಅವನ ಜೀವನಸ್ಥಿತಿ ನಿರ್ಧಾರವಾಗುತ್ತದೆ.
ಈ ಹಿನ್ನೆಲೆಯಲ್ಲಿ ಗಮನಿಸುವುದಾದರೆ ಜಾಗತೀಕರಣೋತ್ತರ ಪೀಳಿಗೆಯು ವ್ಯಕ್ತಿಸ್ವಾತಂತ್ರ್ಯಕ್ಕೆ ಹೆಚ್ಚಿನ ಪ್ರಾಮುಖ್ಯ ಕೊಟ್ಟು ಸಂಬಂಧಗಳ ದೀರ್ಘಕಾಲೀನ ಉಳಿಬಾಳುವೆಗೆ ಕಡಿಮೆ ಪ್ರಾಮುಖ್ಯ ಕೊಡುವಂತೆ ತೋರುತ್ತದೆ.

ಈ ನೂತನ ಪೀಳಿಗೆ ಅಥವಾ `ಝೆನ್ ಝೀ’ಯು ಒಂದು ಹೊಸ ಪರಿಕಲ್ಪನೆಯನ್ನು ಮುಂದಿಡುತ್ತದೆ. ಅದೇನಂದರೆ ಆಯ್ದುಕೊಂಡ ಕುಟುಂಬ(ಚೋಸನ್ ಫ್ಯಾಮಿಲಿ)ದ ಪರಿಕಲ್ಪನೆ. – ಇದು ಒಂದು ಹೊಸ ಮಾದರಿಯ ಜೀವನ ವ್ಯವಸ್ಥೆ. ಜಾತಿ, ಲಿಂಗ, ವರ್ಗ, ರಕ್ತ ಸಂಬಂಧ ಇವು ಯಾವುವನ್ನೂ ಲೆಕ್ಕಿಸದೆ ಸಮಾನ ಮನಸ್ಕರಾದ ಸ್ನೇಹಿತ-ಸ್ನೇಹಿತೆಯರು ಒಂದು ಕುಟುಂಬದಂತೆ ಒಂದೇ ಮನೆಯಲ್ಲಿ ಅಥವಾ ಅಕ್ಕ ಪಕ್ಕದ ಮನೆಗಳಲ್ಲಿ ವಾಸಿಸುವುದು ಮತ್ತು ಪರಸ್ಪರರನ್ನು ಪ್ರೀತಿಯಿಂದ ಬೆಂಬಲಿಸುವುದು. ಕೆಲಸ ಮತ್ತು ವಿರಾಮ ಎರಡೂ ಸನ್ನಿವೇಶಗಳಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಒಟ್ಟಿಗಿರುವುದು, ಪ್ರವಾಸ-ಸಂತೋಷಕೂಟಗಳಿರಲಿ, ನೋವು ಕಷ್ಟ ರೋಗರುಜಿನಗಳಿರಲಿ ಜೊತೆಯಾಗಿದ್ದು ತಮ್ಮನ್ನು ನಂಬಿಕೊಂಡ ಜೀವ ನೋಯದಂತೆ ಕಾಯುವುದು. ಇದನ್ನು ಆಯ್ದುಕೊಂಡ ಕುಟುಂಬ (ಚೋಸನ್ ಫ್ಯಾಮಿಲಿ) ಎಂದು ಅವರು ಕರೆಯುತ್ತಾರೆ. ಈ ಕುಟುಂಬ ಸದಸ್ಯರ ಸಂಖ್ಯೆ ಎರಡರಿಂದ ಇಪ್ಪತ್ತರ ತನಕ ಇರಬಹುದು. ಈ `ಕುಟುಂಬ’ದಲ್ಲಿ ಗಂಡು, ಹೆಣ್ಣು ಮಾತ್ರವಲ್ಲದೆ ಮೂರನೆಯ ಲಿಂಗಿಗಳು ಸಹ ಇರಬಹುದು. ಭಾರತದ ಜಾತಿ ಆಧಾರಿತ, ಗಂಡಾಳಿಕೆಯ ಸಮಾಜ ವ್ಯವಸ್ಥೆಗೆ ಈ ಹೊಸ ಬದುಕಿನ ರೀತಿಯನ್ನು ಒಪ್ಪುವುದು ಸುಲಭದ ಮಾತಲ್ಲ ಅನ್ನುವ ವಿಷಯವನ್ನು ನಾವು ಗಮನಿಸಬೇಕು. ಆದರೆ ನೂತನಪೀಳಿಗೆಯೇನೂ ಈ ಕುರಿತು ಹಿರಿಯರ ಒಪ್ಪಿಗೆ ಪಡೆಯುವುದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆತ್ಮವಂಚನೆಯನ್ನು ದೂರವಿಟ್ಟು ಬಾಳುವೆ ಮಾಡುವುದನ್ನು ಇಷ್ಟ ಪಡುವ ಪೀಳಿಗೆ ಇದು. ಹಿಂದಿನ ಪೀಳಿಗೆಗಳವರ ಮನೆಯಲ್ಲಿ ಗಂಡ/ಹೆಂಡತಿ ತನಗೆ ಎಷ್ಟೇ ಹಿಂಸೆ ಕೊಟ್ಟರೂ ಹೊರಗಿನ ಪ್ರಪಂಚಕ್ಕೆ ಏನೂ ತೋರಿಸಿಕೊಳ್ಳದಿರುವುದು – ಏನೂ ಚೆನ್ನಾಗಿಲ್ಲದಿದ್ದರೂ ಎಲ್ಲಾ ಚೆನ್ನಾಗಿದೆ ಅನ್ನುವುದು – ಹೀಗೆ ಬದುಕಿದ್ದನ್ನು ಈ ಪೀಳಿಗೆಯು `ಡಿಸ್‌ಫಂಕ್ಷನಲ್ ಫ್ಯಾಮಿಲಿ’ (ನಿಷ್ಕ್ರಿಯ ಕುಟುಂಬ) ಎಂದು ಕರೆದು ಅಮಾನ್ಯಗೊಳಿಸುತ್ತದೆ. ಅದಕ್ಕೇ ಇರಬೇಕು, ಕಷ್ಟ ಸುಖ ಹೇಳಿಕೊಳ್ಳಲು ಈ ಪೀಳಿಗೆಯು ಯಾರನ್ನು ನೆಮ್ಮುತ್ತದೆ ಅಂದರೆ ಮನೋಚಿಕಿತ್ಸಕರನ್ನು(ಥೆರಪಿಸ್ಟ್). ಈ ಮನೋಚಿಕಿತ್ಸಕರೊಂದಿಗೆ ಈ ನೂತನ ಪೀಳಿಗೆಯವರು ಹೆಚ್ಚಿನ ಒಡನಾಟವನ್ನು ಹೊಂದಿದ್ದು, ಅವರನ್ನು ತಮ್ಮ ಹಿತಮಯ ಜೀವನದ ಬಹಳ ಮುಖ್ಯ ಭಾಗವೆಂದು ಭಾವಿಸುತ್ತಾರೆ.
*****
ಈವರೆಗೆ ನೂತನ ಪೀಳಿಗೆಯು ಸಂಬಂಧಗಳನ್ನು ಹೇಗೆ ನೋಡುತ್ತದೆ ಎಂಬುದನ್ನು ಗಮನಿಸಿದೆವು. ಈಗ ಇನ್ನೊಂದು ಮುಖ್ಯ ವಿಚಾರದ ಬಗ್ಗೆ ಈ ಪೀಳಿಗೆಯ ದೃಷ್ಟಿಕೋನವನ್ನು ಗಮನಿಸೋಣ. ಅದು ಯಾವುದೆಂದರೆ, ಹಣಕಾಸು ನಿರ್ವಹಣೆಯ ವಿಚಾರ.
ಜಾಗತೀಕರಣಕ್ಕೆ ಮುಂಚೆ ಹುಟ್ಟಿ ಬೆಳೆದ ಪೀಳಿಗೆಯವರಲ್ಲಿ ನನ್ನಂತಹ ಅನೇಕರು `ಸರಳ ಜೀವನ, ಉನ್ನತ ಚಿಂತನ’ ಎಂಬ ಆದರ್ಶವನ್ನು ದೊಡ್ಡದು ಎಂದು ಭಾವಿಸಿದ ವಾತಾವರಣದಲ್ಲಿ ಬೆಳೆದವರು. ಒಂದೇ ಒಂದು ಬಿಡಿಗಾಸನ್ನೂ ಕೈಯಲ್ಲಿ ಮುಟ್ಟದೆ ಬದುಕಿ ಬಾಳಿದ ರಾಮಕೃಷ್ಣ ಪರಮಹಂಸರಂತಹ ಸಂತರ ಕಥೆಗಳನ್ನು ಕೇಳಿದವರು. `ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ ಮೊರೆವ ತೊರೆಯಡಿಯಲ್ಲಿ ಗುಡಿಸಲೊಂದಿರಲಿ’, `ಪ್ರೀತಿಯೆ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ’, `ಬೇಕು ಎಂದರೆ ಬಡತನ, ಸಾಕು ಎಂದರೆ ಸಿರಿತನ’ … ಇಂತಹ ಹಾಡು-ಸೂಕ್ತಿಗಳನ್ನು ದಿನಚರಿಯಲ್ಲಿ ಬೆರೆಸಿಕೊಂಡಿದ್ದವರು. `ಹರಕು ಚಾಪೆಯ ಮೇಲೆ ಕುಳಿತು ಉದ್ಗ್ರಂಥಗಳನ್ನು ಓದುವ ಕವಿಯ ಚಿತ್ರ, ಒಂದು ವಿಶ್ವವಿದ್ಯಾಲಯದ ಉಪಕುಲಪತಿಯ ಸ್ಥಾನಕ್ಕೆ ಏರಿದರೂ ಇಡೀ ಜೀವನ ಖಾದಿ ಪಂಚೆ-ಜುಬ್ಬಾ, ಗಾಂಧಿ ಟೋಪಿ ಧರಿಸಿ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿನಿಲಯದಲ್ಲೇ ತಮ್ಮ ವಯಸ್ಕಜೀವನದ ಐವತ್ತೇಳು ವರ್ಷಗಳನ್ನು ಕಳೆದ ಎಚ್ಚೆನ್ (ಡಾ.ಎಚ್. ನರಸಿಂಹಯ್ಯ), ನಾಲ್ಕು ಬಿಳಿ ಪೈಜಾಮ-ಕುರ್ತಾ ಮತ್ತು ನೀಲಿ ಪಗಡಿ ಧರಿಸಿ ಸೈಕಲ್ ಮೇಲೆ ತಮ್ಮ ವಿಶ್ವವಿದ್ಯಾಲಯಕ್ಕೆ ಪಾಠ ಮಾಡಲು ಹೋಗುತ್ತಿದ್ದ ಮನಮೋಹನ್ ಸಿಂಗ್‌ರ ಜೀವನಕಥೆಗಳು ನಮ್ಮ ಆದರ್ಶ ಆಗಿದ್ದವು.
ಆದರೆ, ಮೇಲೆ ವಿವರಿಸಿದ ಜೀವನಶೈಲಿಗಳು ಇಂದಿನ ಅಂದರೆ ಹೊಸ ಸಹಸ್ರಮಾನದ ಪ್ರಪಂಚದಲ್ಲಿ ತುಂಬ ಅವಾಸ್ತವಿಕ, ಆತ್ಮಹತ್ಯಾತ್ಮಕ ಮೂರ್ಖ(`ನಾನ್ ಮೆಟೀರಿಯಲಿಸ್ಟಿಕ್’) ಎಂದು ಭಾಸವಾಗಬಹುದಾದ ಜೀವನಶೈಲಿಗಳಾಗಿರಬಹುದು! ಏಕೆಂದರೆ ಇಂದು ನಾವು ಬಾಳಿ ಬದುಕುತ್ತಿರುವ, ಜಾಗತೀಕರಣದ ನಂತರದ ಪ್ರಪಂಚವು `ಸುಖ=ಎಂದರೆ ಹೆಚ್ಚು ಹಣ ಗಳಿಸುವ ಹಾಗೂ ಖರ್ಚು ಮಾಡುವ ಶಕ್ತಿ’ ಎಂಬ ತತ್ವವನ್ನು ಆಧರಿಸಿರುವಂತೆ ತೋರುತ್ತದೆ. ಒಳ್ಳೆಯ ಕುಡಿಯುವ ನೀರಿಗೂ ಹಣ ತೆರಬೇಕಾದ ಸಂದರ್ಭದಲ್ಲಿ ನಾವಿದ್ದೇವೆ. `ಇದನ್ನು ಕೊಳ್ಳಿ, ಅದನ್ನು ಕೊಳ್ಳಿ, ನಿಮಗೆ ಅದು ಬೇಡವೆ? ಇದು ಬೇಡವೆ?’ ಎಂದು ಕಿರುಚುವ ಜಾಹೀರಾತುಗಳು ನಮ್ಮ ಕಣ್ಣು ಮತ್ತು ನಮ್ಮ ಮನಸ್ಸುಗಳು ಹೋದಲ್ಲೆಲ್ಲ ಒಂದೇ ಒಂದು ಇಂಚು ಜಾಗವನ್ನೂ ವ್ಯರ್ಥ ಮಾಡದೆ ವ್ಯಾಪಿಸಿರುತ್ತವೆ. ಸಾಲ ತೆಗೆದುಕೊಳ್ಳುವುದರ ಬಗೆಗೂ ಹಳೆಯ ಕಾಲದಲ್ಲಿದ್ದ ಚಿಂತನೆಯು ಈಗ ಬದಲಾಗಿದೆ. ಆರ್ಥಿಕ ಸಾಕ್ಷರತೆ (ಫೈನಾನ್ಶಿಯಲ್ ಲಿಟ್ರೆಸಿ) ಎಂಬ ಹೊಸ ತಿಳುವಳಿಕೆಯನ್ನು ನೂತನ ಪೀಳಿಗೆಯು ಪುರಸ್ಕರಿಸುತ್ತಿದೆ.
*****
ಹಾಗಾದರೆ ದಾರಿ ಯಾವುದು? ನಾವು ನಮ್ಮ ಮನೆಗಳಲ್ಲಿ, ಶಾಲೆ-ಕಾಲೇಜುಗಳಲ್ಲಿ ನಮ್ಮ ಮಕ್ಕಳಿಗೆ ಯಾವ ಮೌಲ್ಯಗಳನ್ನು ಹೇಳಿಕೊಡಬೇಕು? ಪ್ರೀತಿಯನ್ನು ಆಸ್ತಿ ಅಂದುಕೊಳ್ಳುವ ಮೌಲ್ಯವನ್ನೋ ಅಥವಾ ಆಸ್ತಿಯನ್ನು ಮನಸಾರೆ ಪ್ರೀತಿಸುವ ಮೌಲ್ಯವನ್ನೋ? ಅಥವಾ ಈ ಎರಡೂ ಅತಿರೇಕಗಳ ಮಧ್ಯದಲ್ಲಿ ನಾವು ಹುಡುಕುತ್ತಿರುವ ನೆಮ್ಮದಿ ಇದೆಯೇನು?
ಹಣದ ಒಂದು ವಿಚಿತ್ರ ಗುಣ ಅಂದರೆ ಅದು ನಮ್ರ ಸೇವಕ ಆದರೆ ಅತಿ ಕ್ರೂರ ಒಡೆಯ. ಒಂದು ಮಟ್ಟದವರೆಗೆ ನಮಗೆ ಹಣ ಅತ್ಯಗತ್ಯ. ಆಹಾರ, ಬಟ್ಟೆ, ತಲೆ ಮೇಲಿನ ಸೂರು, ಮತ್ತು ಔಷಧಗಳ ಪೂರೈಕೆ, ಸ್ವಂತ ಮನೆ, ಸ್ವಂತ ವಾಹನ ಇಟ್ಟುಕೊಳ್ಳುವಷ್ಟು ಹಣದ ಅನುಕೂಲ, ಮಕ್ಕಳ ಶಾಲೆ, ಕಾಲೇಜಿನ ಶುಲ್ಕ ಕಟ್ಟಲಾಗುವಷ್ಟು ಸಂಪನ್ಮೂಲ … ಒಟ್ಟಿನಲ್ಲಿ ಇನ್ನೊಬ್ಬರ ಮುಂದೆ ಕೈಯೊಡ್ಡಬೇಕಿಲ್ಲದ ಘನತೆಯ ಜೀವನ ಇವು ಪೂರೈಕೆಯಾಗುವ ತನಕ ಹಣದ ಅವಶ್ಯಕತೆ ಬಹಳವಾಗಿ ಇರುತ್ತದೆ. ಸಾರ್ವಜನಿಕ ಸಾರಿಗೆಗಾಗಿ ಕಾಯದೆ `ಕ್ಯಾಬ್’ ಕರೆಯಲು, ದೂರ ದೂರದ ಬೆಟ್ಟತಾಣಗಳಿಗೆ ವರ್ಷಕ್ಕೊಮ್ಮೆ ಮನೆಮಂದಿಯೆಲ್ಲಾ ಪ್ರವಾಸ ಹೋಗಲು ಖಂಡಿತವಾಗಿಯೂ ಹಣ ಬೇಕು. ಸ್ವಲ್ಪ ಲೆಕ್ಕಾಚಾರ ಮಾಡಿದರೆ ಮನುಷ್ಯನಿಗೆ ನೆಮ್ಮದಿಯಿಂದ ಬದುಕಲು ಎಷ್ಟು ಹಣ ಬೇಕು ಎಂಬ ಪ್ರಶ್ನೆಗೆ ಉತ್ತರ ಕೊಡಬಹುದು ನಾವು. ಆದರೆ ಮನುಷ್ಯನಿಗೆ ಎಷ್ಟು ಹಣ ಸಾಕು? ಈ ಪ್ರಶ್ನೆಗೆ ಮಾತ್ರ ಎಲ್ಲರಿಗೂ ಸಲ್ಲುವ ಉತ್ತರವನ್ನು ಯಾರೂ ಕೊಡಲಾಗದು. ಬಹುಶಃ `ಕ್ರಿಯೇಟ್ ವೆಲ್ತ್ ಟು ಶೇರ್ ವೆಲ್ತ್’ (ಸಂಪತ್ತನ್ನು ಸೃಷ್ಟಿಸುವುದು ಅದನ್ನು ಹಂಚಿಕೊಳ್ಳಲು)ಎಂಬ ಮೌಲ್ಯವನ್ನು ಇಟ್ಟುಕೊಂಡು, ಅಪಾರ ಮಟ್ಟದ ದಾನ, ಪರೋಪಕಾರಗಳಿಗಾಗಿ ತಮ್ಮ ಸಂಪತ್ತನ್ನು ವ್ಯಯಿಸುವ ಎನ್.ಆರ್.ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿಗಳು ಈ ಪ್ರಶ್ನೆಗೆ ಒಂದು ಮಟ್ಟದ ತೃಪ್ತಿಕರ ಉತ್ತರ ಕೊಟ್ಟಿದ್ದಾರೆ ಅನ್ನಬಹುದೆ? ಜಾಗತೀಕರಣದ ಮುಂಚೆ ಹುಟ್ಟಿ ಜಾಗತೀಕರಣೋತ್ತರ ಪ್ರಪಂಚದಲ್ಲಿ ಬಾಳುವುದನ್ನು ಅರಿತ ಶ್ರೇಷ್ಠ ಮಾನವತಳಿಯು ಬಹುಶಃ ಇವರಂತೆ ಇರಬಹುದು.
****
ಒಂದಂತೂ ನಿಜ. ಅಂತರ್ಜಾಲದಿಂದಾಗಿ ಇಡಿ ಪ್ರಪಂಚವೇ ಇವತ್ತು ಒಂದು ಹಳ್ಳಿಯಾಗಿದೆ. ಯಾವುದನ್ನು ಹಿಂದಿನ ಬಾಗಿಲಿನ ವಸಾಹತೀಕರಣ ಎಂದು ಕರೆಯಲಾಗುವುದೋ ಅಂತಹ ಜಾಗತೀಕರಣದಿಂದಾಗಿ ಪ್ರಪಂಚ ಮಟ್ಟದಲ್ಲಿ ತಮ್ಮ ವ್ಯವಹಾರಗಳನ್ನು, ಉದ್ಯಮಗಳನ್ನು ಸ್ಥಾಪಿಸುವ ದೈತ್ಯ ಬಹುರಾಷ್ಟ್ರೀಯ ಕಂಪೆನಿಗಳು ಚಿಕ್ಕಪುಟ್ಟ ದೇಶಗಳಲ್ಲೂ ತಮ್ಮ ಅಸ್ತಿತ್ವವನ್ನು ಸಾರಿ ಹೇಳುತ್ತಿವೆ. ಇವು ನಮ್ಮ ರಸ್ತೆಗಳ ನೋಟಗಳನ್ನು ಮಾತ್ರವಲ್ಲ, ಬದುಕು, ಹಣಕಾಸು ಮತ್ತು ಸಂಬಂಧಗಳನ್ನು ನಾವು ನೋಡುವ ರೀತಿಯನ್ನು ಸಹ ಬದಲಿಸಿವೆ. ಬದಲಾದ ಮಹಾವಾಸ್ತವಕ್ಕೆ ನಾವು ಕಣ್ಣು ಬಿಡಬೇಕು. ಮನುಕುಲವು ಮುಖಾಮುಖಿಯಾಗುತ್ತಿರುವ ಒಂದು ಮಹಾಸ್ಥಿತ್ಯಂತರದ ಭಾಗವಾಗಿರುವ ನಾವೆಲ್ಲರೂ ನಮ್ಮ ಕಣ್ಣುಕಿವಿಗಳನ್ನು ತೆರೆದು ಹೊಸಕಲಿಕೆಗೆ ಸಿದ್ಧರಾಗಬೇಕಿದೆ ಅನ್ನಿಸುತ್ತೆ.

ಬಹುಶಃ, ಜಾಗತೀಕರಣಕ್ಕೆ ಮುಂಚೆ ಹುಟ್ಟಿದ ಪೀಳಿಗೆ ಮತ್ತು ನಂತರ ಹುಟ್ಟಿದ ಪೀಳಿಗೆಗಳು ಪರಸ್ಪರರನ್ನು ಅರಿಯಲು ಆಳವಾದ ಪ್ರಯತ್ನ ಮಾಡಬೇಕಿದೆ. ವಿಳಾಸ ಕೇಳಲು ಗೂಗಲಪ್ಪನನ್ನು ಮತ್ತು ಅಡಿಗೆ ವಿಧಾನ ಕೇಳಲು ಯೂಟ್ಯೂಬಮ್ಮನನ್ನು ನಂಬಿರುವ ಪೀಳಿಗೆಗೆ ಹಿರಿಯರು ಹತ್ತಿರವಾಗಬೇಕು ಅಂದರೆ ಹಿರಿಯರ ಪ್ರಯತ್ನವೇ ಇಲ್ಲಿ ತುಸು ಹೆಚ್ಚಾಗಬೇಕೇನೊ! ಬಹುಶಃ ಭೇಟಿಬಿಂದುವಿನ ಕಡೆಗಿನ ಪ್ರಯಾಣದಲ್ಲಿ ಹಿರಿಯರೇ ಹೆಚ್ಚಿನ ಎರಡು ಹೆಜ್ಜೆ ಇಡಬೇಕಿದೆ. ತಮ್ಮ ಮಕ್ಕಳ ಕಣ್ಣುಗಳಿಂದ ಪ್ರಪಂಚ ಹೇಗೆ ಕಾಣುತ್ತದೆ ಎಂದು ಅರ್ಥ ಮಾಡಿಕೊಳ್ಳಲು ಹಿರಿಯರು ತಾವು ಕಲಿತ ಕೆಲವು ಸಂಗತಿಗಳನ್ನು ಮರೆಯಬೇಕಾಗಬಹುದು. ಕಲಿಯುವ ಮನಸ್ಸಿದ್ದರೆ, ಹಣಕಾಸು ನಿರ್ವಹಣೆ ಮತ್ತು ಮಾನವ ಸಂಬಂಧಗಳ ಬಗ್ಗೆ ಜಾಗತೀಕರಣೋತ್ತರ ಪೀಳಿಗೆಯ ನೋಟನಿಲುವುಗಳನ್ನು ಅರಿಯುವುದು ಹಿರಿಯರಿಗೆ ಕಷ್ಟಸಾಧ್ಯವಾದರೂ ಅಸಾಧ್ಯವಾಗಲಾರದು.
ಕಲಿಯುವುದನ್ನು ನಿಲ್ಲಿಸಲಾಗದಲ್ಲ! ಏಕೆಂದರೆ ಬದುಕು ಎಂದೂ ಕಲಿಸುವುದನ್ನು ನಿಲ್ಲಿಸುವುದಿಲ್ಲ!

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.

ಸೊಗಸಾದ ಲೇಖನ. ಪ್ರಸ್ತುತ ಸಂದರ್ಭ, ಸಮಾಜಕ್ಕೆ ಅತ್ಯಂತ ಅವಶ್ಯವಾದದ್ದು. ಎಲ್ಲಾ ಪೀಳಿಗೆಯ ಜನರಿಗೂ ತಲುಪಬೇಕಾದದ್ದು. ಎಲ್ಲವನ್ನೂ ವಸ್ತುನಿಷ್ಠವಾಗಿ, ವಿವರವಾಗಿ ನಿರೂಪಿಸಿದ್ದೀರಿ. ವಂದನೆಗಳು.