ಹಾಗೆ ನಡೆದುಕೊಂಡು ಹೋಗುವಾಗ, ಊರಿನ ಪಡ್ಡೆ ಹುಡುಗರೆಲ್ಲ ‘ಸೋಗಲಾಡಿ ಸುಬ್ಬಿ, ಸೋಗಲಾಡಿ ಸುಬ್ಬಿ’ ಎಂದು ತಮಾಷೆ ಮಾಡುತ್ತಿದ್ದರು. ಆರು ವರ್ಷದವಳಾಗಿದ್ದ ನಾನು, ಇವ್ಯಾವ ಮಾತು ನನಗೆ ಬೇಕಿಲ್ಲವೆಂಬಂತೆ ಅವರೆಡೆಗೆ ಕಣ್ಣು ಹಾಯಿಸಿ, ಹುಬ್ಬೇರಿಸಿ ಮುಂದೆ ಹೆಜ್ಜೆ ಹಾಕುತ್ತಿದ್ದೆ. ಶಾಲೆಗೆ ಬಂದರೆ ಕೇಳಬೇಕೇ! ಕೆಲವರು ‘ನೀನು ಮಲ್ಲವ್ವನೋ ಸಿಂಗಾರವ್ವನೋ?’ ಎಂದರೆ, ಎಲ್ಲ ಟೀಚರ್ ಸೇರಿ ‘ನಿಮ್ಮವ್ವಗ ಕೆಲ್ಸ ಇಲ್ಲ, ನಿಂಗ್ ಬ್ಯಾಸರಿಲ್ಲ ತಗ’ ಎಂದು ನಾನು ಮಾಡಿಕೊಂಡ ಸಿಂಗಾರದ ಬಗ್ಗೆಯೇ ಚರ್ಚೆ ನಡೆಸುತ್ತಿದ್ದರು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ನಾಲ್ಕನೆಯ ಕಂತು
ಜಾತ್ರೆಯಲ್ಲಿದ್ದ ಆ ಚಹಾ ಅಂಗಡಿಯಲ್ಲಿ ಒಂದಷ್ಟು ಹೊತ್ತು ಕೂತುಕೊಂಡು, ನನ್ನ ಕೈಯಾರೆ ಹಣವನ್ನು ಸಂಗ್ರಹಿಸಿ ಗಲ್ಲ ಪೆಟ್ಟಿಗೆಗೆ ಹಾಕುತ್ತಿದ್ದೆ. ಹಣದ ಪೆಟ್ಟಿಗೆ ತುಂಬುತ್ತದಾ ಎಂಬ ಕಾತರತೆ ನನಗೂ ಇತ್ತು. ಆದರೆ ಇಲ್ಲಿ ತಡವಾಯಿತೆಂದರೆ ಅವ್ವ ಅಪ್ಪ ಬಿಡಬೇಕಲ್ಲ! ‘ಮಾಮ ಚಾ ಕೊಡು. ನಮ್ಮವ್ವ ಬೈತಾಳ’ ಎಂದು ಪಟ್ಟುಹಿಡಿದು ಕೇಳಿ, ಪಡೆದು ಅಲ್ಲಿಂದ ಹೊರಟುಬಿಡುತ್ತಿದ್ದೆ. ಎರಡು ಚಹಾ ತರುವುದಕ್ಕೆ ಇಷ್ಟು ಹೊತ್ತು ಬೇಕಾ ಎಂದು ಅವ್ವ ಗದರುತ್ತಿದ್ದಂತೆ, ‘ನೀ ನೋಡಿದ್ರೆ ಇಲ್ ಬೈತಿದಿ. ಮಾಮ ನೋಡಿದ್ರೆ ಗಲ್ಲದ ಪೆಟ್ಟಿಗೆ ಮೇಲೆ ಕುಂದ್ರು ಅಂತಾನ. ನಾನೇನ್ ಮಾಡ್ಲವ್ವಾ? ನನ್ನನ್ನ ಅಂಗ್ಡಿಗೆ ಕಳಸ್ಬೇಡ ನೀನು’ ಎಂದು ಅಸಹಾಯಕಳಾಗಿ ಹೇಳುತ್ತಿದ್ದೆ. ‘ಏನ್ ಆ ಹುಡ್ಗಿ ಕೂಡ ಹಚ್ಚಿದಿ, ಬಿಡಲೇ’ ಎಂದು ಅಪ್ಪ ಅವ್ವನಿಗೆ ಕೂಗುತ್ತಿದ್ದರು.
ಈ ಜಾತ್ರೆಯ ಗೌಜಿನಲ್ಲಿ ನಾಲ್ಕೈದು ದಿನಗಳು ಕಳೆಯುತ್ತಿದ್ದದ್ದೇ ಗೊತ್ತಾಗುತ್ತಿರಲಿಲ್ಲ. ಬಣ್ಣಬಣ್ಣದ ಬ್ಯಾಗಡಿಗಳನ್ನು ಇಟ್ಟು ಹೂ ಮಾಲೆ ಕಟ್ಟಿ ಮಾರುವ ಆ ಖುಷಿ ಹೇಳತೀರದು. ಅಂತೂ ವ್ಯಾಪಾರವನ್ನೆಲ್ಲ ಪೂರೈಸಿಕೊಂಡು, ಊರಿಗೆ ಬರುತ್ತಿದ್ದೆವು. ಅಂದಿನ ಶಾಲೆಗಳ ರೀತಿನೀತಿಗಳೇ ಬೇರೆ ಇರುತ್ತಿತ್ತು. ಐದು ದಿನ ರಜೆ ಹಾಕಿ ಮತ್ತೆ ಶಾಲೆಗೆ ಬಂದರೆ, ಅಷ್ಟು ಸುಲಭವಾಗಿ ಒಳ ಸೇರಿಸಿಕೊಳ್ಳುತ್ತಿದ್ದರಾ! ಊಹೂಂ, ಮುಳ್ಳದಂಡಿಗೆ ಏರಿಸುತ್ತಿದ್ದರು. ಅಂದರೆ, ಕೈಗಳನ್ನು ಹಗ್ಗದಿಂದ ಕಟ್ಟಿ, ಎತ್ತರದ ಹಲಗೆಗೆ ಏರಿಸುವುದು. ಕೆಳಗೆ ಮುಳ್ಳನ್ನು ಇಡುತ್ತಿದ್ದರು. ಕೈಗಳನ್ನು ಚೂರು ಸಡಿಲಿಸಿದರೆ ಮುಳ್ಳುಗಳೆಲ್ಲ ಪಾದಕ್ಕೆ ಚುಚ್ಚಿ ಜೀವ ಹೋದಂತಹ ಅನುಭವವಾಗುತ್ತಿತ್ತು. ಈಗೆಲ್ಲಾದರೂ ಇಂತಹ ಶಿಕ್ಷೆ ಕೊಟ್ಟಿದ್ದರೆ! ಆದರೊಂದು, ನಾವೆಲ್ಲ ಈ ಶಿಕ್ಷೆಗೆ ಹೆದರುತ್ತಿದ್ದೆವು ನಿಜ, ಆದರೆ ಸುಖಾಸುಮ್ಮನೆ ಊರು ಸುತ್ತುತ್ತಾ, ಕಾರಣವೇ ಇಲ್ಲದೆ ರಜೆ ಹಾಕುತ್ತಿರಲಿಲ್ಲ. ಅಕ್ಷರಜ್ಞಾನ ಅನ್ನೋದು ಗುರಿಯಾಗಿರಲಿಲ್ಲ, ನಮ್ಮ ಆದ್ಯತೆಯಾಗಿತ್ತು.
ಬಿನ್ನೆತ್ತೆ, ಒನ್ನತ್ತೆ ಓದುವಾಗ ಅಂಕ್ಲೀಪಿ ಪುಸ್ತಕಗಳನ್ನು ಓದಲೇಬೇಕಿತ್ತು ಆಗ. ಬಿನ್ನತ್ತೆ ಎಂದರೆ (ಎಲ್.ಕೆ.ಜಿ, ಯೂಕೆ.ಜಿ), ಮಗ್ಗಿ, ಕಾಗುಣಿತ ಎಲ್ಲವೂ ಅಂಕಲಿಪಿಯಲ್ಲಿತ್ತು. ಮಗ್ಗಿ ಎಂದರೆ ಎರಡೊಂದ್ಲ ಎರಡು ಇಲ್ಲಿಂದ ಆರಂಭವಾಗಿ ಎರಡ್‌ಇಪ್ಪೋತ್ಲಿ ನಲ್ವತ್ತು ಹೇಳುವುದಷ್ಟೇ ಅಲ್ಲ, ಎರಡ್‌ಇಪ್ಪೋತ್ಲಿ ಇಂದ ಮತ್ತೆ ಒಂದರ ತನಕ ಉಲ್ಟಾ ಹೇಳಬೇಕಿತ್ತು. ಮೇಲೆ ಹೋಗುವುದಷ್ಟೇ ಅಲ್ಲ, ಕೆಳಗಿಳಿಯುವುದಕ್ಕೂ ಗೊತ್ತಿರಬೇಕು ನೋಡಿ. ಮೇಲೇರಿ, ಕೆಳಗಿಳಿದು ಮತ್ತೆ ಮೇಲೇರುವ ಬದುಕಿನ ಚಕ್ರಕ್ಕೂ ಅದರದ್ದೇ ಆದ ಲಯವಿರುತ್ತಿತ್ತು. ಹಾಗೇ ಒಂದು ಕಾಲು ‘ಕಾಲು’, ಎರಡು ಕಾಲು ‘ಅರ್ಧ’, ಮೂರು ಕಾಲು ‘ಮುಕ್ಕಾಲು’, ನಾಲ್ಕು ಕಾಲು ‘ಒಂದು’… ಅಂತ ಬಾಯಿಪಾಠ ಮಾಡಬೇಕಿತ್ತು. ಮೊದಲನೇ ತರಗತಿಯಲ್ಲಿ ಇಷ್ಟು ಕಲಿತರೆ ಮುಂದಿನ ತರಗತಿಯಲ್ಲಿ ಒಂದು ಅರ್ಧ ‘ಅರ್ಧ’, ಎರಡು ಅರ್ಧ ‘ಒಂದು’… ಹೀಗೆ ಉರುಹೊಡೆಯಬೇಕಿತ್ತು. ನಾ ಶಾಲೆಗೆ ಸೇರಿದ ವರ್ಷದಲ್ಲಿ ಮಿಲಿಗ್ರಾಂ, ಗ್ರಾಂ, ಕಿಲೋಗ್ರಾಂ ಲೆಕ್ಕಾಚಾರವೂ ಬಂದಿತ್ತು. ಈಗ ಆ ಸಂದರ್ಭ ಯೋಚಿಸಿದರೂ ಸಾಕು, ಲೆಕ್ಕದಲ್ಲಿ ನಾವೆಷ್ಟು ಪಕ್ಕಾ ಆಗಿರುತ್ತಿದ್ದೆವು ಎನಿಸುತ್ತದೆ.
ಜಾತ್ರೆಯಿಂದ ಮನೆಗೆ ಖಾಲಿಡುವ ತನಕವೂ ಖುಷಿಯಲ್ಲಿರುತ್ತಿದ್ದೆ. ಪಾಟಿಚೀಲ ನೋಡುತ್ತಿದ್ದಂತೆ ಏನು ಪಾಠ ಆಗಿದೆಯೋ ಏನೊ ಎಂಬ ಯೋಚನೆಗಳೆಲ್ಲ ರೆಕ್ಕೆ ಬಿಚ್ಚಿ ಹಾರುತ್ತಿತ್ತು. ಅಂತೆಯೇ ಕಣ್ಣೀರೂ ಧಾರಾಕಾರವಾಗಿ ಸುರಿಯುತ್ತಿತ್ತು. ಸುಭದ್ರಮ್ಮ, ಮಮ್ತಾಜ್ ಟೀಚರ್ ನೆನಪಿದೆ. ಶಾಲೆಯ ಮೆಟ್ಟಿಲೇರುವ ತನಕವೂ ನಡುಕ. ದಪ್ಪನೆಯ ರೂಲ್ ಕಟ್ಟಿಗೆ ಹಿಡಿದ ಮೇಷ್ಟ್ರು ಯಾವ ದಾಕ್ಷಿಣ್ಯಕ್ಕೂ ಒಳಗಾಗದೇ, ಕೈ ಹಿಡಿ ಎನ್ನುತ್ತಿದ್ದರು. ಪಟಾರ್ ಎಂದು ಕಟ್ಟಿಗೆಯಿಂದ ಹೊಡೆದ ಅರೆಕ್ಷಣಕ್ಕೆ ಜೀವವೇ ಹೋಯಿತೇನೊ ಅನಿಸುತ್ತಿತ್ತು. ಅಂದಹಾಗೆ ಇದನ್ನೆಲ್ಲ ಕಂಡೇ ಎದೆಯಲ್ಲಿ ಭಯತುಂಬಿಕೊಂಡವಳು ನಾನು. ಒಂದುವೇಳೆ ಹೊಡೆತ ತಿಂದಿದ್ದರೆ ಅದೇನಾಗುತ್ತಿದ್ದೆನೊ ಏನೊ!
ಮಕ್ಕಳನ್ನೆಲ್ಲ ಒಟ್ಟು ಕೂರಿಸಿ, ಒಬ್ಬರನ್ನು ನಿಲ್ಲಿಸಿ ಮಗ್ಗಿಯನ್ನು ಮತ್ತೆ ಪುನರುಚ್ಛರಿಸುತ್ತಿದ್ದರು. ಅವಳು ನಾಕೊಂದ್ಲಿ ನಾಕು ಎಂದರೆ ನಾವು ಅದನ್ನೇ ಹೇಳಬೇಕಿತ್ತು. ಹಾಗೇ ಕಂಠಸ್ಥವಾಗುತ್ತಿತ್ತು. ನಿದ್ರೆಯಿಂದ ಎಬ್ಬಿಸಿ ಕೇಳಿದರೂ ಮಗ್ಗಿ ತಪ್ಪುತ್ತಿರಲಿಲ್ಲ. ತಿಥಿ, ವಾರ, ನಕ್ಷತ್ರ, ಚೈತ್ರ, ವೈಶಾಖ ಎಂಬ ಕನ್ನಡ ತಿಂಗಳುಗಳು, ಅರವತ್ತು ಸಂವತ್ಸರಗಳ ಹೆಸರುಗಳೆಲ್ಲ ಬಾಯಲ್ಲಿ ನಲಿದಾಡುತ್ತಿತ್ತು ಆಗ. ಶಾಲೆಗೆ ಹೋಗುವ ಮುನ್ನ ನನ್ನ ಗೆಳತಿ ಮೆಹಬೂಬಿಯ ಮನೆಗೆ ತೆರಳುತ್ತಿದ್ದೆ. ಟೀಚರ್ ಏನೇನು ಮಾಡಿದ್ದಾರೆಂದು ಕಣ್ಣಾಡಿಸುತ್ತಿದ್ದೆ. ಅವಳೂ ಹೇಳಿಕೊಡುತ್ತಿದ್ದಳು. ಬರೀ ಮೂರನೇ ತರಗತಿ ಪಾಸಾಗಿದ್ದ ನಾನು ಆಗಿನ ಪಾಠ ಕಲಿತಿದ್ದಕ್ಕೆ ಹತ್ತನೇ ತರಗತಿ ಓದುತ್ತಿದ್ದ ಮಗನಿಗೆ ಪಾಠ ಮಾಡುವುದಕ್ಕೂ ಸಾಧ್ಯವಾಯಿತು ಎಂದರೆ ಆಶ್ಚರ್ಯವೇನಿಲ್ಲ.
‘ಏನ್ ಮಲ್ಲವ್ವ? ಶಾಲಿಗ್ ಯಾಕ್ ಬರ್ಲಿಲ್ಲ?’ ಎಂದ ಬಿಗುಮಾತಿನ ಪ್ರಶ್ನೆಗೆ ಉತ್ತರಿಸುವುದಿರಲಿ, ಅಳುವೇ ನಿಲ್ಲುತ್ತಿರಲಿಲ್ಲ. ಆಗೆಲ್ಲ ಕಣ್ಣೀರು ಒರೆಸಿ, ಸಮಾಧಾನ ಮಾಡುತ್ತಿರಲಿಲ್ಲ ಬಿಡಿ. ಹೇಗೊ ಸುಧಾರಿಸಿಕೊಂಡು, ‘ನಾ ಏನ್ ಮಾಡ್ಲಿ ಟೀಚರ್? ನಮ್ಮವ್ವ ಅಪ್ಪ ಕರ್ಕೊಂಡು ಹೋಬಿಟ್ರು. ಮನ್ಯಾಗ ಒಬ್ಬಾಕಿನೇ ಹೆಂಗಿರ್ತಿ ಅಂತ್ ತಿಳ್ಕೊಂಡು ಕರುದ್ರು ಟೀಚರ್. ಹೊಡಿತಿರಾದ್ರೆ ಹೊಡಿರಿ ಟೀಚರ್’ ಎನ್ನುವಾಗ ಮುಖ ಎಲ್ಲ ಕಣ್ಣೀರಮಯವಾಗಿರುತ್ತಿತ್ತು! ಬರೆದ ಅಲ್ಪಸ್ವಲ್ಪ ಭಾಗವನ್ನೇ ತೋರಿಸುತ್ತಿದ್ದೆ. ‘ಇದು ಗೊತ್ತಾಗವಲ್ದು, ತಿಳಿಸಿಹೇಳ್ರಿ’ ಎಂದು ಅಳುತ್ತಾ, ಗೋಗರೆಯುತ್ತಿದ್ದೆ. ‘ನಿಂಗ್ ಓದೋ ಆಸೆ ಅಯ್ತಲ್ಲವ್ವಾ! ನಿಮ್ಮಪ್ಪ, ಅವ್ವಗ ಬುದ್ಧಿ ಇಲ್ಲ. ಓದೋ ವಯಸ್ನಾಗ ಜಾತ್ರೆಲಿ ದುಡಿಯಕ್ ಕರ್ಕೊಂಡು ಹೋಗ್ತಾರೆನು?’ ಎಂದು ಗದರುತ್ತಿದ್ದರು. ಇಷ್ಟಕ್ಕೇ ಮುಗಿಯುತ್ತಿರಲಿಲ್ಲ, ಸುಭದ್ರಮ್ಮ ಟೀಚರ್ ಅವ್ವನನ್ನು ಭೇಟಿಯಾಗಿ, ಮಲ್ಲವ್ವನನ್ನು ಶಾಲೆಯಿಂದ ಬಿಡಿಸಬೇಡಿಯೆಂದೂ ತಿಳಿಹೇಳುತ್ತಿದ್ದರು.

ಪ್ರಭಾತ್‌ಪೇರಿ ದಿನದ ಸಂಭ್ರಮ ಹಂಚಿಕೊಳ್ಳದಿದ್ದರೆ ಆದೀತೆ! ಆಗಷ್ಟ್ ಹದಿನೈದು, ಸ್ವಾತಂತ್ರ್ಯೋತ್ಸವದ ತಯಾರಿ ನಮ್ಮ ಮನೆಯಲ್ಲೂ ಜೋರಾಗಿ ನಡೆಯುತ್ತಿತ್ತು. ಬೆಳಿಗ್ಗೆ ನಾಲ್ಕಕ್ಕೆ ಎಬ್ಬಿಸುತ್ತಿದ್ದರು. ಸ್ನಾನ ಪೂರೈಸಿದ ಮೇಲೆ ಉದ್ದವಿದ್ದ ನನ್ನ ಕೂದಲನ್ನು ಸೇರಿಸಿ, ಜಡೆ ಹೆಣೆಯುತ್ತಿದ್ದರು. ಜಡೆ ಹೂವಿನಿಂದ ಸಿಂಗಾರಗೊಳ್ಳುತ್ತಿತ್ತು. ಶಾಲೆಯಿದ್ದ ದಿನಗಳಲ್ಲಿ ಎರಡು ಜಡೆಗಳನ್ನು ಕಟ್ಟಿಕೊಂಡು ಹೋಗುತ್ತಿದ್ದೆವು. ಆದರೆ ಇದೊಂದು ದಿನ ಮಾತ್ರ ಒಂದೇ ಜಡೆಯಲ್ಲಿ ನಾನಂತೂ ಊರಿಡೀ ಮಿಂಚುತ್ತಿದ್ದೆ. ಹಾಂ, ಹೌದು… ಇದ್ದದ್ದರಲ್ಲೇ ಚಂದದ ಬಟ್ಟೆ, ಹೂವೇ ತುಂಬಿದ ನನ್ನ ಜಡೆ ಬಿಟ್ಟು, ಬಿಂಕದ ನಡಿಗೆ ಇಟ್ಟು ಸಾಗುತ್ತಿದ್ದೆ. ಅದೂ ಅಲ್ಲದೆ, ಧ್ವಜಾರೋಹಣಕ್ಕೆ ಬೇಕಾದ ಹೂಗಳನ್ನು ನಾನೇ ಕೊಂಡೊಯ್ಯಬೇಕಿತ್ತು. ಅದಕ್ಕಾಗಿ ಐದೂವರೆ ಹೊತ್ತಿಗೆಲ್ಲ ನಾ ಶಾಲೆಗೆ ಹೊರಡುತ್ತಿದ್ದೆ. ಹಾಗೆ ನಡೆದುಕೊಂಡು ಹೋಗುವಾಗ, ಊರಿನ ಪಡ್ಡೆ ಹುಡುಗರೆಲ್ಲ ‘ಸೋಗಲಾಡಿ ಸುಬ್ಬಿ, ಸೋಗಲಾಡಿ ಸುಬ್ಬಿ’ ಎಂದು ತಮಾಷೆ ಮಾಡುತ್ತಿದ್ದರು. ಆರು ವರ್ಷದವಳಾಗಿದ್ದ ನಾನು, ಇವ್ಯಾವ ಮಾತು ನನಗೆ ಬೇಕಿಲ್ಲವೆಂಬಂತೆ ಅವರೆಡೆಗೆ ಕಣ್ಣು ಹಾಯಿಸಿ, ಹುಬ್ಬೇರಿಸಿ ಮುಂದೆ ಹೆಜ್ಜೆ ಹಾಕುತ್ತಿದ್ದೆ. ಶಾಲೆಗೆ ಬಂದರೆ ಕೇಳಬೇಕೇ! ಕೆಲವರು ‘ನೀನು ಮಲ್ಲವ್ವನೋ ಸಿಂಗಾರವ್ವನೋ?’ ಎಂದರೆ, ಎಲ್ಲ ಟೀಚರ್ ಸೇರಿ ‘ನಿಮ್ಮವ್ವಗ ಕೆಲ್ಸ ಇಲ್ಲ, ನಿಂಗ್ ಬ್ಯಾಸರಿಲ್ಲ ತಗ’ ಎಂದು ನಾನು ಮಾಡಿಕೊಂಡ ಸಿಂಗಾರದ ಬಗ್ಗೆಯೇ ಚರ್ಚೆ ನಡೆಸುತ್ತಿದ್ದರು.
*****
ನನ್ನ ತಮ್ಮ ಹುಟ್ಟುವುದಕ್ಕೂ ಮುನ್ನ ಅವ್ವ, ಅಪ್ಪನಿಗೆ ನಾನೇ ಪ್ರಾಣವಾಗಿದ್ದೆ. ಈಗ ಹೇಳುವ ಘಟನೆ ನಡೆದಾಗ ತಮ್ಮ ಅವ್ವನ ಬಸುರಿನಲ್ಲಿದ್ದ. ಅವ್ವ ಹಂಪಿಗೆ ಹೋಗಬೇಕೆಂದಳು. ಅದೂ ಕಾಲ್ನಡಿಗೆಯಲ್ಲಿ ಬೇರೆ. ಕುಕನೂರಿನಿಂದ ಹಂಪಿಗೆ ಅಂತಹ ದೂರವೇನಿಲ್ಲ. ಅಪ್ಪನ ಹೆಗಲ ಮೇಲೆ ಕೂತುಕೊಂಡೆ. ಪಯಣ ಶುರುವಾಯಿತು. ಹಂಪಿಯ ಕಲ್ಲಿನ ರಥದ ಸುತ್ತ ಆಡಿದ ನೆನಪಿದೆ. ಅಲ್ಲಿರುತ್ತಿದ್ದ ಹುಡುಗಿಯ ಜೊತೆ ಬಳೆಚೂರಿನ ಆಟ ಆಡಿದ್ದೆ. ಅವಳು ಸ್ವಲ್ಪ ದೂರದಲ್ಲಿ ನಿಂತಿರುತ್ತಿದ್ದಳು. ಸಂಖ್ಯೆ ಎಣಿಸುತ್ತಿದ್ದಳು. ಅಷ್ಟರೊಳಗೆ ನಾನು ಮಣ್ಣು ಕೊರೆದು, ಬಳೆಚೂರನ್ನು ಅಡಗಿಸಿಡಬೇಕಿತ್ತು. ಅವಳು ಬರುವುದರೊಳಗೆ ಒಂದು ಗೆರೆ ಎಳೆದು ನಿಂತಿರುತ್ತಿದ್ದೆ. ಬಳೆಚೂರು ಗೆರೆಯ ಎಡಕ್ಕಿದೆಯೋ ಬಲಕ್ಕಿದೆಯೋ ಎಂದಷ್ಟೇ ಹೇಳಬೇಕಿತ್ತು. ಸರಿ ತಪ್ಪಿನಲ್ಲಿ ಸೋಲು ಗೆಲುವು ನಿರ್ಧಾರವಾಗುತ್ತಿತ್ತು. ಅವಳು ಗೆದ್ದ ಮೇಲೆ ನನ್ನ ಸರದಿ. ಹೀಗೆ ಆಡುತ್ತಿರುವಾಗ ಅಲ್ಲೇ ಇದ್ದ ಪೊಲೀಸರೊಬ್ಬರು ಬಂದು ಆಡುವಂತಿಲ್ಲ ಎಂದು ಗದರಿಸಿದರು. ಅವಳು ಹೊರಟೇಬಿಟ್ಟಳು. ನಾನು ಪೇಚುಮೋರೆ ಹಾಕಿಕೊಂಡು ಬರುತ್ತಿದ್ದೆ. ಅಪ್ಪ ಹೋಗಿ ಪೊಲೀಸರಲ್ಲಿ ಗದರಿಸಿದ್ದಕ್ಕೆ ಕಾರಣ ಕೇಳುತ್ತಿದ್ದರು. ಆಗವರು ಈ ಪ್ರದೇಶದಲ್ಲಿ ಮಣ್ಣು ಗೀರಿ ಉತ್ಖನನ ಮಾಡುವಂತಿಲ್ಲ. ಹಿರಿಯ ಅಧಿಕಾರಿಗಳು ಕಂಡರೆ ನಮ್ಮನ್ನು ಶಿಕ್ಷಿಸುತ್ತಾರೆ. ಕಾವಲಿಗಾಗಿಯೇ ನಮ್ಮನ್ನು ನೇಮಿಸಿದ್ದಾರೆ ಎಂದು ತಿಳಿಸಿದರು.
ಹಾಂ, ಹಂಪೆಯ ವಿರೂಪಾಕ್ಷನಿಗೆ ಹಂಪಮ್ಮ ಮತ್ತೆ ಪಂಪಾವತಿಯನ್ನು ವಿವಾಹ ಮಾಡಿಸುವ ಸಂಪ್ರದಾಯವಿತ್ತು. ಈಗಲೂ ಇದೆಯಾ ಎಂಬುದು ತಿಳಿದಿಲ್ಲ. ವಧುವರರು ತೊಡುವ ಒಡವೆ, ವಸ್ತ್ರವನ್ನು ಒಪ್ಪಿಗೆ ಮಾಡಿಕೊಳ್ಳುವವರು ಮತ್ಯಾರೂ ಅಲ್ಲ, ಕೋತಿಗಳು. ನಿಗದಿತ ದಿನದಂದು ದೇವಸ್ಥಾನದ ಎದುರಿಗಿರುವ ವಿಶಾಲ ಅಂಗಳದ ಒಂದು ಕಡೆ ದೊಡ್ಡ ಜಮಖಾನ ಹಾಸಿ, ಒಡವೆ, ವಸ್ತ್ರ, ಪೇಟಗಳನ್ನೆಲ್ಲ ರಾಶಿ ಹಾಕಿಡುತ್ತಿದ್ದರು. ಎಲ್ಲವನ್ನೂ ಮುಟ್ಟಿ, ಮುಟ್ಟಿ, ಇದು ಬೇಡ, ಇದು ಪರವಾಗಿಲ್ಲ, ಇದು ಚೆನ್ನಾಗಿದೆ ನೋಡಿ ಎಂಬಂತೆ ಪಕ್ಕದಲ್ಲಿದ್ದ ಕೋತಿಗೆ ತೋರಿಸಿ, ಮತ್ತೆ ಹುಡುಕಾಡಿ, ಮದುವೆಗೆ ಬೇಕಾದ ವಸ್ತುಗಳನ್ನು ಅವುಗಳೇ ಆರಿಸುತ್ತಿದ್ದವು. ಜಾತ್ರೆಯ ಸಂದರ್ಭದಲ್ಲಿ ನಡೆಯುತ್ತಿದ್ದ ಈ ಅಪರೂಪದ ದೃಶ್ಯ ನೋಡುವುದಕ್ಕೆ ಊರೂರುಗಳಿಂದ ಜನ ಸೇರುತ್ತಿದ್ದರು.
ಹೀಗೆ ನೋಡಲು ಹೋದಾಗೊಮ್ಮೆ ಕಣ್ಮರೆಯಾಗಿದ್ದೆ. ಮಾತಂಗಿ ಬೆಟ್ಟವೋ ಏನೋ ಸರಿಯಾಗಿ ನೆನಪಿಗೆ ಬರುತ್ತಿಲ್ಲ. ಆಡುತ್ತಾ, ಓಡುತ್ತಾ ಆ ಬೆಟ್ಟದ ಪಕ್ಕದಲ್ಲಿದ್ದ ಗುಹೆಯೊಳಕ್ಕೆ ಹೋಗಿದ್ದೆ. ದಾರಿ ನಡೆದಷ್ಟೂ ಮುಗಿಯುತ್ತಲೇ ಇಲ್ಲ. ಇದ್ಯಾವುದೋ ಅನೂಹ್ಯ ಜಗತ್ತಿನೊಳಕ್ಕೆ ಹೋಗುತ್ತಿದ್ದೆನಲ್ಲಾ ಎಂದು ಅರೆಕ್ಷಣ ಬೆಚ್ಚಿದೆ. ಸರಿಯಲ್ಲವೆಂದು ಬೆನ್ನು ಹಾಕಿ ಓಡತೊಡಗಿದೆ. ಅಷ್ಟರಲ್ಲಾಗಲೇ ಅವ್ವ ಅಪ್ಪರಿಬ್ಬರೂ ನನ್ನನ್ನೇ ಹುಡುಕುತ್ತಾ ಅಲೆಯುತ್ತಿದ್ದರು. ಈ ಗುಹೆಗೆ ಹೋದವರು ಮತ್ತೆ ಮರಳಿ ಬರುವುದಿಲ್ಲ ಎಂದು ಆ ಊರಿನವರು ಬೆಟ್ಟದ ಹಿನ್ನೆಲೆ ಹೇಳುತ್ತಿದ್ದರು. ಮಗಳು ‘ಯವ್ವಾ… ಯಪ್ಪಾ…’ ಎಂದು ಕೂಗಿ ಬರುತ್ತಿದ್ದದ್ದನ್ನು ಕಂಡದ್ದೇ ಎಲ್ಲರಿಗೂ ನಿರಾಳವಾಯಿತು.
ನಾವಿದ್ದ ಮನೆಯ ಪಕ್ಕದಲ್ಲಿ ದೊಡ್ಡವ್ವನ ಮನೆಯೂ ಇತ್ತು. ದೊಡ್ಡವ್ವನ ಮಗ ಬಸಣ್ಣ ನೋಡನೋಡುತ್ತಿದ್ದಂತೆ ಬಂದು ನನಗೆ ಚಿವುಟಿ ಓಡುತ್ತಿದ್ದ. ನಾನಾಗ ಥೇಟ್ ಮಗುವಿನಂತೆ ಅಳುತ್ತಿದ್ದೆ. ಮನೆಯೊಳಗಿದ್ದ ದೊಡ್ಡವ್ವ ‘ಹೆರಿಗೆ ಆತೆನೋ’ ಎಂದುಕೊಂಡು ಊರಿನ ಹೆಂಗಸರನ್ನೆಲ್ಲ ಕರೆದುಕೊಂಡು ಬರುತ್ತಿದ್ದರು. ‘ಅವ್ವ ಕೂಸು ಹಡೆದಾಳೇನೊ’ ಎಂದು ನನ್ನನ್ನೇ ಕೇಳುತ್ತಿದ್ದರು. ಇಲ್ಲ ಎಂದು ಸುಮ್ಮನಾಗುತ್ತಿದ್ದೆ. ಮತ್ತೆ ಅಳೊ ಸದ್ದು ಬಂತಲ್ಲಾ ಎಂದರೆ, ಅಣ್ಣ ಬಂದು ಚಿವುಟಿದ. ಅದಕ್ಕೆ ನಾನೇ ಅತ್ತಿದ್ದು ಎಂದು ಮಿಮಿಕ್ರಿ ಮಾಡಿತೋರಿಸುತ್ತಿದ್ದೆ. ಅಲ್ಲಿದ್ದವರೆಲ್ಲ ನನ್ನ ಚೂಟುತನಕ್ಕೆ ನಗುತ್ತಾ, ಕೆನ್ನೆ ಮುದ್ದಾಡಿ ಹೋಗುತ್ತಿದ್ದರು.

ದಿನ ಕಳೆಯುತ್ತಿತ್ತು. ಅದೊಂದು ದಿನ ನನ್ನನ್ನು ಬೆಳ್ಳಿ, ಬಂಗಾರ ಎಂದು ಮುದ್ದಾಡುತ್ತಿದ್ದ ಅಪ್ಪ ವ್ಯಾಪಾರಕ್ಕೆ ಹೋಗಿದ್ದಾಗ ಬಳ್ಳಾರಿಯ ಹುಡುಗಿಯ ಜೊತೆಗೆ ನಾಪತ್ತೆಯಾಗಿಬಿಟ್ಟಿದ್ದರು. ಅವ್ವ ಇಡೀ ಊರನ್ನೇ ಸುತ್ತಿದ್ದಳು, ಮನೆಮನೆಯನ್ನು ಹುಡುಕಾಡಿದ್ದಳು. ಒಂದು ದಿನ, ವಾರ ಕಳೆದು ಮೂರು ತಿಂಗಳಾದರೂ ಅಪ್ಪನ ಬಗ್ಗೆ ಸುಳಿವೇ ಸಿಗಲಿಲ್ಲ.
(ಹಿಂದಿನ ಕಂತು: ನಾನೊಬ್ಬಳು ಚಾಣಾಕ್ಷ ಹುಡುಗಿಯೇ ಆಗಿದ್ದೆ!)


