ಪುಸ್ತಕಗಳ ಓದು ಎಕನಾಮಿಕ್ಸ್ ನಲ್ಲಿ ಬರುವ ಉಪಭೋಗ ಸಿದ್ಧಾಂತಕ್ಕೆ ವಿರುದ್ಧ! ಒಂದು ಪುಸ್ತಕವನ್ನೋದಿದರೆ ಇನ್ನಷ್ಟು ಓದಬೇಕು, ಅದು ಕಟ್ಟಿಕೊಡುವ ಅದರದೇ ಪ್ರಪಂಚದಲ್ಲಿ ಸ್ವಲ್ಪ ಹೊತ್ತಾದರೂ ಕಳೆದುಹೋಗಬೇಕು ಎನ್ನುವ ಪಾಸಿಟಿವ್ ಹಪಾಹಪಿ ಹೆಚ್ಚಾಗುತ್ತದೆಯೇ ವಿನಃ ಸಾಕು ಎನಿಸುವುದಿಲ್ಲ. ಹಾಗಾಗಿ ಖೋ ಕೊಟ್ಟಂತೆ ಒಂದು ಪುಸ್ತಕ ಮುಗಿಯುತ್ತಿದ್ದಂತೆ ಮತ್ತೊಂದು ಕೈಗೆ ಬಂದು ಓದಿನ ಸರಣಿ ಮುಂದುವರೆಯಿತು. ಒಂದಕ್ಕಿಂತ ಒಂದು ಭಿನ್ನವಾದ ಇಷ್ಟು ಪುಸ್ತಕಗಳ ಓದು ಕೊಟ್ಟ ಎಕ್ಸೈಟ್‍ಮೆಂಟ್, ಪರಿಚಯಿಸಿದ ಹೊಸಾ ಜಗತ್ತು, ಅದರಲ್ಲಿ ಗಮನಸೆಳೆದ, ಕಾಡಿದ ಅಂಶಗಳು ಟಿಪ್ಪಣಿ ರೂಪದಲ್ಲಿ ಈ ಬರಹದಲ್ಲಿವೆ.
ಶ್ವೇತಾ ಹೊಸಬಾಳೆ ಬರಹ

 

2020 ರ ದೊಡ್ಡ ದುರಂತ ಕೋವಿಡ್ 19 ಇಡೀ ಜಗತ್ತನ್ನು ಆಕ್ರಮಿಸಿಕೊಂಡು ಮನುಷ್ಯನ ನಾಗಾಲೋಟಕ್ಕೆ ಬ್ರೇಕ್ ಹಾಕಿದ್ದು. ತನ್ನನ್ನು ಬಿಟ್ಟರಿಲ್ಲ ಎಂದು ಮೆರೆಯುತ್ತಿದ್ದ ಆತನ ಗರ್ವಭಂಗವಾಗಿ ಮನುಷ್ಯ ತನ್ನ ಆಲೋಚನಾಲಹರಿ ದಿನಚರಿ ಎರಡನ್ನೂ ಬದಲಾಯಿಸಿಕೊಳ್ಳುವಂತಾಯಿತು. ಜಗತ್ತಿನ ಆರ್ಥಿಕತೆಯೇ ಕುಸಿದುಬಿದ್ದು ನಷ್ಟ ಅನುಭವಿಸುವಂತಾದರೂ ನನ್ನ ಅರಿವಿನ ಜಗತ್ತು ಬದಲಾಗಲು, ವಿಸ್ತಾರವಾಗಲು ಸಹಾಯ ಮಾಡಿದ್ದು ಇದೇ ಕೊರೋನಾ ವೈರಸ್ ತಂದಿಟ್ಟ ಪರಿಸ್ಥಿತಿಗಳು!

ಯುಗಾದಿ ಹಬ್ಬಕ್ಕೆಂದು ಊರಿಗೆ ಹೋದವಳು ಅನಿರೀಕ್ಷಿತ ಲಾಕ್‍ಡೌನ್‍ ನಿಂದಾಗಿ ಬೆಂಗಳೂರಿಗೆ ವಾಪಾಸ್ ಬರಲಾಗದೆ, ಹೆಚ್ಚಿನ ವೈರಸ್ ಹಾವಳಿಯಿಂದಾಗಿ ನಂತರವೂ ಆರು ತಿಂಗಳು ಊರಲ್ಲೇ ಉಳಿಯುವಂತಾಗಿದ್ದು ನನ್ನ ಪಾಲಿಗೆ ಹಲವು ದೃಷ್ಟಿಯಲ್ಲಿ ಲಾಭದಾಯಕ. ದಿನಾ ಬೆಳಿಗ್ಗೆ ಒಂದೊಂದು ಕಡೆ ಸುತ್ತುತ್ತಾ ಕಾಡು ಗದ್ದೆ ಅಲೆಯುತ್ತಾ ಪ್ರಕೃತಿಯೊಡನೆ ಹೆಚ್ಚಿದ ಒಡನಾಟ ಇನ್ನೊಂದು ಜೀವಜಗತ್ತು – ವೈವಿಧ್ಯತೆಯನ್ನು ಪರಿಚಯಿಸಿ ನನ್ನಲ್ಲಿ ಚೈತನ್ಯ ತುಂಬಿದ್ದಲ್ಲದೆ ನೋಡುವ ದೃಷ್ಟಿಯನ್ನು ವಿಶಾಲಗೊಳಿಸಿತು. ನನ್ನ ಮಗನಿಗೂ ಹಳ್ಳಿಯ ವಾಸ, ಮಣ್ಣಿನ ವಾಸನೆ, ಮರಗಳ ಸಹವಾಸ ಲಭಿಸಿ ನನ್ನ ಬಾಲ್ಯದ ರುಚಿಗಳನ್ನು ಕೆಲಕಾಲ ಅವನೂ ಅನುಭವಿಸುವಂತಾಯಿತು.

ನನಗೆ ಇನ್ನೂ ಒಂದು ಖುಷಿಕೊಟ್ಟಿದ್ದು, ಈಗ ಬರೆಯಹೊರಟಿದ್ದು, ಮಗ ಹುಟ್ಟಿದ ನಂತರ ಗಂಭೀರವಾಗಿ ನಿರಾಳವಾಗಿ ಓದುವುದನ್ನೇ ಮರೆತಿದ್ದ ನಾನು ಈ ವರ್ಷ ಹಲವು ಪುಸ್ತಕಗಳನ್ನೋದಿ ಓದಿನ ಸುಖ ಅನುಭವಿಸಿದ್ದರ ಬಗ್ಗೆ. ವರ್ಷಕ್ಕೆ ಒಂದು ಪುಸ್ತಕವನ್ನೂ ಓದಲಿಕ್ಕಾಗದೆ ಅಪರಾಧೀಪ್ರಜ್ಞೆಯಲ್ಲಿ ಬಳಲುತ್ತಿದ್ದ ನಾನು ಈ ಬಾರಿ ಎರಡು ದೊಡ್ಡ ಕಾದಂಬರಿಗಳನ್ನೂ ಸೇರಿಸಿ ಒಟ್ಟು ಹದಿಮೂರು ಪುಸ್ತಕಗಳನ್ನೋದಿದ್ದು 2020 ರಲ್ಲಿ ವಿಪರೀತ ಖುಷಿಕೊಟ್ಟ ಸಂಗತಿ. ಈ ವರ್ಷದ ಆರಂಭದಲ್ಲಿ ವಿದ್ಯಾಭೂಷಣರ ‘ನೆನಪೇ ಸಂಗೀತ’ಪುಸ್ತಕದಿಂದ ಶುರುವಾದ ಓದಿನ ಯಾತ್ರೆ ಇತ್ತೀಚೆಗೆ ಬಿಡುಗಡೆಯಾದ ಸಹನಾ ಹೆಗಡೆ ಅನುವಾದಿಸಿದ ‘ಫಾಲೋಯಿಂಗ್ ಫಿಶ್’ ವರಗೆ ಬಂದಿತು.

ಪ್ರತೀವರ್ಷ ಅವರಿವರು ಓದಿದ ಪುಸ್ತಕಗಳ ಪಟ್ಟಿಯನ್ನೋದಿ ಮನಸ್ಸಲ್ಲೇ ಮಂಡಿಗೆ ತಿನ್ನುತ್ತಿದ್ದ ನಾನು ಈ ವರ್ಷ ಅದು ಹೇಗೋ ಪರಿಸ್ಥಿತಿಯ ಲಾಭ ಪಡೆದು ಒಂದಷ್ಟು ಪುಸ್ತಕಗಳನ್ನೋದಿ ನನ್ನದೂ ಒಂದು ಪಟ್ಟಿ ಕೊಡುತ್ತಿದ್ದೇನೆ.

ಪ್ರಪಂಚದಲ್ಲಿ ಸ್ವಲ್ಪ ಹೊತ್ತಾದರೂ ಕಳೆದುಹೋಗಬೇಕು ಎನ್ನುವ ಪಾಸಿಟಿವ್ ಹಪಾಹಪಿ ಹೆಚ್ಚಾಗುತ್ತದೆಯೇ ವಿನಃ ಸಾಕು ಎನಿಸುವುದಿಲ್ಲ. ಹಾಗಾಗಿ ಖೋ ಕೊಟ್ಟಂತೆ ಒಂದು ಪುಸ್ತಕ ಮುಗಿಯುತ್ತಿದ್ದಂತೆ ಮತ್ತೊಂದು ಕೈಗೆ ಬಂದು ಓದಿನ ಸರಣಿ ಮುಂದುವರೆಯಿತು. ಒಂದಕ್ಕಿಂತ ಒಂದು ಭಿನ್ನವಾದ ಇಷ್ಟು ಪುಸ್ತಕಗಳ ಓದು ಕೊಟ್ಟ ಎಕ್ಸೈಟ್‍ಮೆಂಟ್, ಪರಿಚಯಿಸಿದ ಹೊಸಾ ಜಗತ್ತು, ಅದರಲ್ಲಿ ಗಮನಸೆಳೆದ, ಕಾಡಿದ ಅಂಶಗಳು ಟಿಪ್ಪಣಿ ರೂಪದಲ್ಲಿ ಈ ಬರಹದಲ್ಲಿವೆ.

ನೆನಪೇ ಸಂಗೀತ

ಚಿಕ್ಕಂದಿನಿಂದಲೂ ವಿದ್ಯಾಭೂಷಣರ ಸಂಗೀತ, ಹಾಡುಗಾರಿಕೆಯನ್ನು ಇಷ್ಟಪಡುತ್ತಿದ್ದ ನಾನು ಅವರ ಜೀವನದ ಕಥೆಯನ್ನು ಅವರೇ ಹೇಳಿಕೊಂಡಿದ್ದು ಪುಸ್ತಕ ರೂಪದಲ್ಲಿ ಬಂದಿದ್ದು ಗೊತ್ತಾದಾಗ ಓದಲೇಬೇಕಾದ ಪುಸ್ತಕಗಳ ಪಟ್ಟಿಯಲ್ಲಿ ಸೇರಿಸಿಕೊಂಡಿದ್ದೆ. ಹಾಗಾಗಿ ಈ ವರ್ಷದ ಆರಂಭದಲ್ಲಿ ಓದಲು ಹಿಡಿದಿದ್ದೇ ‘ನೆನಪೇ ಸಂಗೀತ’. ಇನ್ನೂ ಜಗತ್ತನ್ನು ಕಣ್ಣರಳಿಸಿ ನೋಡುತ್ತಿದ್ದ ಐದಾರು ವರ್ಷದ ಬಾಲಕನಿಗೆ ಮಠದ ಮುಂದಿನ ಸನ್ಯಾಸಿಯ ಪಟ್ಟ ಕಟ್ಟಿದ್ದು, ಆ ಬಾಲಕ ಭಯ, ದಿಗಿಲುಗಳಿಂದ ಒಪ್ಪಿಕೊಂಡಿದ್ದು, ಬೇರೆ ಸಣ್ಣ ಮಕ್ಕಳ ದಿನಚರಿಗಳಿಗಿಂತ ಭಿನ್ನವಾದ, ಸನ್ಯಾಸತ್ವ ಸ್ವೀಕರಿಸಿದ ಬಾಲಕನ ದಿನಚರಿ, ತಳಮಳಗಳು; ಅದೇ ಒಲ್ಲದ ಸನ್ಯಾಸತ್ವದ ಒತ್ತಡ ಮುಂದೆ ಹೆಮ್ಮರವಾಗಿ ಬೆಳೆದು ಬಿಡುವ ಹಂಬಲ ಬಲವಾಗುತ್ತಾ ಹೋದಾಗಿನ ಚಡಪಡಿಕೆ, ಸನ್ಯಾಸಿ-ಮಠದ ಉತ್ತರಾಧಿಕಾರಿ ಎಂಬ ಗುರುತು ಅಸ್ತಿತ್ವವನ್ನು ಕಳಚಿಕೊಂಡು ಸಾಮಾನ್ಯರಂತೆ ಬದುಕುವ ಇಂಗಿತವನ್ನು ಈಡೇರಿಸಿಕೊಳ್ಳುವ ಹಂತದಲ್ಲಿನ ಅಂತರಂಗದ ಹೋರಾಟ, ಬಹಿರಂಗದಲ್ಲಿ ಇಡೀ ವ್ಯವಸ್ಥೆಯ ಪ್ರಶ್ನೆಗಳಿಗೆ ಮುಖಾಮುಖಿಯಾಗಿ ನಿಲ್ಲಬೇಕಾದ ದಿಟ್ಟತನ, ಎಷ್ಟೋ ವರ್ಷಗಳವರೆಗೆ ಅವರದಲ್ಲದ ಬದುಕನ್ನು ಬದುಕಬೇಕಾಗಿ ಬಂದಿದ್ದರ ಅನಿವಾರ್ಯತೆ, ಬೇಡವಾಗಿದ್ದೇ ಆದರೂ ಬಿಡುವ ಕಷ್ಟ, ಮಾಡಲೇಬೇಕಾದ ಕರ್ತವ್ಯಗಳು, ಪ್ರಕ್ರಿಯೆಗಳನ್ನು ವಿವರಿಸಿದ್ದಾರೆ ವಿದ್ಯಾಭೂಷಣರು. ಜೊತೆಗೆ ಆ ಕಾಲದ ಕುಕ್ಕೆ ಸುಬ್ರಹ್ಮಣ್ಯದ ಪರಿಸರ, ಮಠದ ವಾತಾವರಣ, ಸನ್ಯಾಸತ್ವದ ಪರಂಪರೆ, ಸಂಗೀತದ ಸೆಳೆತ ಎಲ್ಲದರ ಬಗ್ಗೆಯೂ ಹೊಸಾವಿಷಯವಾಗಿ ಓದಿಸಿಕೊಳ್ಳುತ್ತದೆ.

ಬಹುಷಃ, ಸನ್ಯಾಸತ್ವ ಸ್ವೀಕರಿಸಿ ನಂತರ ಸಾಮಾನ್ಯ ಜೀವನಕ್ಕೆ ಮರಳಿದ ಮಠದ ಸ್ವಾಮೀಜಿಯಾಗಿದ್ದವರ ಅಂತರಂಗದ ಜಗತ್ತು ಅಕ್ಷರಲೋಕಕ್ಕೆ ತೆರೆದುಕೊಂಡಿದ್ದು ಇದೇ ಮೊದಲಿರಬೇಕು. ಸನ್ಯಾಸತ್ವವನ್ನು ಸ್ವೀಕರಿಸಿಯೂ ತಮಗೂ ಹೊರಜಗತ್ತಿಗೂ ಮೋಸ ಮಾಡಿಕೊಂಡು ಬದುಕುವ ಅಪ್ರಾಮಾಣಿಕ ಸ್ವಾಮೀಜಿಗಳ ಮಧ್ಯೆ ವಿದ್ಯಾಭೂಷಣರ ಅಪ್ಪಟ ಪ್ರಾಮಾಣೀಕತೆ, ಆತ್ಮಕ್ಕೆ ನಿಷ್ಠ‌ ಆಗಿರುವ ನಿಯತ್ತು ಬಹಳ ಇಷ್ಟವಾಗುತ್ತದೆ. ಒಬ್ಬ ಮಹಿಳಾ ಓದುಗಳಾಗಿ ಮತ್ತೊಂದು ಅಂಶ ನನ್ನನ್ನು ಕಾಡಿದ್ದು, ನಾನು ಹೈಸ್ಕೂಲು ಓದುತ್ತಿದ್ದ ದಿನಗಳಲ್ಲಿರಬೇಕು: ಮಠದ ಸ್ವಾಮೀಜಿಯೊಬ್ಬರು ಸನ್ಯಾಸತ್ವ ತೊರೆದು ಮತ್ತೆ ಮದುವೆಯಾಗುವ ವಿಷಯ ದೊಡ್ಡ ಸುದ್ದಿಯಾಗಿ ಎಲ್ಲಾ ಪತ್ರಿಕೆಗಳಲ್ಲಿ ಬಂದಿತ್ತು. ಅವರು ಸನ್ಯಾಸತ್ವ ಬಿಡಲು ಅವರು ಮದುವೆಯಾಗಲಿರುವ ಹುಡುಗಿಯೇ ಕಾರಣ, ಮಠದ ಸ್ವಾಮೀಜಿಯನ್ನೇ ಮರುಳು ಮಾಡಿದವಳು ಎಂಬ ಆರೋಪ, ದೂಷಣೆ ಕೇಳಿ ಬಂದಿದ್ದು ಅಸ್ಪಷ್ಟವಾಗಿ ನೆನಪಿದೆ. ಅವರ ಕಥನವನ್ನೋದಿದಾಗ ಆಕೆಯದೇನೂ ಪಾತ್ರವಿಲ್ಲ, ಇವರೇ ಮೊದಲು ಪ್ರಸ್ತಾಪಿಸಿದ್ದು ಎನ್ನುವ ಸ್ಪಷ್ಟನೆಯೂ ದೊರಕಿ ಆಗುವ ಅವಘಡಗಳಿಗೆಲ್ಲಾ ಹೆಣ್ಣನ್ನೇ ಹೊಣೆಯಾಗಿಸಿ ಗಂಡನ್ನು ಬಚಾವ್ ಮಾಡುವ ಸಮಾಜ-ವ್ಯವಸ್ಥೆಯ ಪೂರ್ವಾಗ್ರಹ ಮನೋಭಾವ, ಪುರುಷ ಪರ ಧೋರಣೆಯೇ ಅಂಥ ಹೇಳಿಕೆಗಳ ಹಿಂದಿರುವುದು ಎಂದೂ ಗೊತ್ತಾಗುತ್ತದೆ.

ನೀ ಮಾಯೆಯೊಳಗೋ

‘ಜಯನಗರದ ಹುಡುಗಿ’ ಮೇಘನಾ ಸುಧೀಂದ್ರರ ಬಾಲ್ಯದ ಅನುಭವಗಳ ಜೊತೆ ಹಳೆಯ ಬೆಂಗಳೂರಿನ ಚಿತ್ರಗಳನ್ನು ನಮ್ಮ ಮುಂದೆ ತರುವ ಲವಲವಿಕೆಯ, ಜೀವನಪ್ರೀತಿಯನ್ನು ಹೆಚ್ಚಿಸುವ ಚಿಕ್ಕಚಿಕ್ಕ ಬರಹಗಳ ಗುಚ್ಛ. ಜಯನಗರದ ಹುಡುಗಿಯ ಲೈಟ್ ಬರಹಗಳ ನಂತರ ನಾನು ಆಯ್ದುಕೊಂಡಿದ್ದು ತುಸು ಗಂಭೀರವಾದ ವಿಷಯಗಳನ್ನೊಳಗೊಂಡ ಓದುವುದಕ್ಕೆ ಆಸಕ್ತ ಮನಸ್ಥಿತಿಯನ್ನು ಬೇಡುವ ವಿಕ್ರಮ ಹತ್ವಾರರ ‘ನೀ ಮಾಯೆಯೊಳಗೋ’ ಸಾಹಿತ್ಯ ಸಂಸ್ಕೃತಿ ಸ್ಪಂದನ ಲೇಖನಗಳ ಸಂಗ್ರಹ. ಅದರಲ್ಲಿ ನನಗೆ ತುಂಬಾ ಇಷ್ಟವಾದದ್ದು ‘ಮಾತಿನ ಕುಲುಮೆಯೊಳಗೆ ಕಾಲದ ಪರೀಕ್ಷೆ’ ಎನ್ನುವ ಲೇಖನ. ಭಾರತದಲ್ಲಿ ಸಾರ್ವಜನಿಕ ಸಂವಾದವನ್ನು ಹುಟ್ಟುಹಾಕಿದವರು ಮಹಾತ್ಮ ಗಾಂಧಿ ಎನ್ನುವ ಮಾಹಿತಿಯೊಂದಿಗೆ ದಿನನಿತ್ಯದ ಜೀವನದ ವ್ಯವಹಾರಗಳಲ್ಲಿ ಮಾತುಕತೆಯ ಮೂಲಕ ಸಂವಾದ ಹೇಗೆ ನಡೆಯುತ್ತಿರುತ್ತದೆ? ಸಂವಾದದಲ್ಲಿ ತರ್ಕ, ಚರ್ಚೆಯು ಹೇಗೆ ಬಳಸಲ್ಪಡುತ್ತದೆ ಎನ್ನುವುದನ್ನು ವಿವರಿಸಲಾಗಿದೆ. ಸತ್ಯಾನ್ವೇಷಣೆಗಿಂತ, ಜನರಿಗೆ ಸುದ್ದಿ-ಘಟನೆಯ ನಿಜವಾದ ಸಾಧ್ಯಾಸಾಧ್ಯತೆಗಳನ್ನು ಅರುಹುವ ತುರ್ತಿಗಿಂತ ಅರಚುವಿಕೆಯೇ ಪ್ರಧಾನವಾಗಿರುವ ಇಂದಿನ ಸುದ್ದಿಮಾಧ್ಯಮಗಳ ಚರ್ಚೆಯ ವೈಖರಿಯ ಹಿಂದಿನ ಹುನ್ನಾರವನ್ನು ಬಯಲಿಗೆಳೆದಿದ್ದಾರೆ ಲೇಖಕರು – “ಕ್ಷಣಕ್ಕೊಂದು ಸುದ್ದಿ, ದಿನಕ್ಕೊಂದು ಚರ್ಚೆ, ಆ ಕ್ಷಣ ಅನಿಸಿದ್ದನ್ನು ಹೇಳಿಬಿಡುವ ಇಂಪಲ್ಸಿವ್‍ನೆಸ್, ಯಾವ ಸಂಗತಿಯನ್ನೂ ಧಾರಣ ಮಾಡಲು ಸಾಧ್ಯವಾಗದಂತ ಆತುರತೆ, ವಿಷಯಜ್ಞಾನ ವಿವೇಚನೆಯ ಕೊರತೆ, ಈ ಎಲ್ಲದರಿಂದ ವಿಷಯವೊಂದು ಬುಗ್ಗೆಯೊಡೆದು ಜನಮಾನಸವನ್ನು ವ್ಯಾಪಿಸಿ ಅದರ ಅವಲೋಕನದಲ್ಲಿ ಬುದ್ಧಿಯನ್ನು ಬೆಳಗಿಸುವ ಸುದೀರ್ಘವಾದ ಮಂಥನಗಳೇ ಇಲ್ಲವಾಗಿದೆ. ನಾಳೆ ಮತ್ತೊಂದು ವಿಷಯ ಸಿಗುವವರೆಗೆ ಇಂದಿನ ವಿಷಯದ ಕುರಿತು ತನ್ನ ಧ್ವನಿಯನ್ನು ಛಾಪಿಸುವ ಲೋಲುಪತೆ ರೋಚಕತೆಯೇ ಮಾಧ್ಯಮಗಳ ಹಾಗೂ ಅಭಿಪ್ರಾಯ ಶೂರರ ಹವ್ಯಾಸವಾಗಿದೆ.

ಆರ್ಭಟಗಳಿಲ್ಲದೆ ಯಾವ ಚರ್ಚೆಗೂ ಅರ್ಥವಿಲ್ಲ ಎಂಬುದೇ ಇಂದಿನ ಮಾಧ್ಯಮದ ಖಚಿತವಾದ ನಂಬಿಕೆ….. ಕೃತಕ ಚರ್ಚೆಯೊಂದನ್ನು ರೂಪಿಸುವುದು, ನಿರಾಧಾರ ಆರೋಪ ಪ್ರತ್ಯಾರೋಪದ ಕಿರುಚಾಟದಲ್ಲಿ ತೊಡಗುವುದು ಬಹುಷಃ ತರ್ಕದ ಆಭಾಸಗಳೆಲ್ಲವನ್ನೂ ಮೀರಿದ ಈ ಕಾಲದ ಟಿ.ಆರ್.ಪಿ ಪೋಷಿತ ಸದ್ದಿ ಮಾಧ್ಯಮಗಳ ಹೊಸ ಅನ್ವೇಷಣೆಯೇ ಇರಬೇಕು”. ಈ ಖಡಕ್ ಮಾತುಗಳು ನಿಜವಾಗಿಯೂ ಇಂದಿನ ಸುದ್ದಿ ಮಾಧ್ಯಮಗಳು ಮುಟ್ಟಿ ನೋಡಿಕೊಳ್ಳುವಂತಿವೆ. ಸಂವಾದದಲ್ಲಿ ಚರ್ಚೆ, ತರ್ಕಗಳಲ್ಲದೆ ವಿತಂಡವಾದ ಹೇಗೆ ವಿಜೃಂಭಿಸುತ್ತದೆ? ಅದರ ಮೂಲಕ ಆರೋಗ್ಯಕರ ಸಂವಹನದ ದಾರಿಯನ್ನೇ ಬಂದ್ ಮಾಡುವ ಬುದ್ಧಿವಂತಿಕೆಯ ಬಗ್ಗೆಯೂ ಹೇಳಲಾಗಿದೆ. ಲೇಖಕರು ಹೇಳುವ ಈ ವಿತಂಡವಾದ ಕೌಟುಂಬಿಕ ಜಗಳ ಅದರಲ್ಲೂ ಗಂಡ ಹೆಂಡತಿಯ ವಾಗ್ವಾದದಲ್ಲಿ ವಿತಂಡವಾದ ಸುಲಭವಾಗಿ ಪಲಾಯನ ಮಡುವ ದಾರಿಯಾಗಿಯೂ ನನಗೆ ಹಲವು ಬಾರಿ ಗೋಚರಿಸಿದೆ.

ಈ ಲೇಖನವನ್ನು 2015 ರಲ್ಲಿ ಅಂದರೆ ಐದುವರ್ಷಗಳ ಹಿಂದೆ ಬರೆದಿದ್ದಾದರೂ ಈಗಲೂ ಪ್ರಸ್ತುತತೆ ಹೊಂದಿ ಆಳವಾದ ಅಧ್ಯಯನದಿಂದ ರೂಪುಗೊಂಡಿದ್ದಾದರೂ ಸರಳವಾಗಿ ನನ್ನಂಥವರಿಗೂ ಅರ್ಥವಾಗುವಂತೆ ಹೇಳಿದ್ದರಿಂದ ಹೊಸವಿಷಯನ್ನು ತಿಳಿದುಕೊಂಡಂತಾಗುತ್ತದೆಯೇ ಹೊರತು ಓದಲು ತೊಡಕಾಗುವುದಿಲ್ಲ.

ಮುಂದಿನ ಎರಡು ಲೇಖನಗಳಲ್ಲಿ ದಿನನಿತ್ಯದ ವ್ಯವಹಾರದಲ್ಲಿ ಕನ್ನಡವನ್ನು ಭಾಷೆಯಾಗಿ ಬಳಸುವ ವಾತಾವರಣವೇ ಮರೆಯಾಗುತ್ತಿರುವ ಬಗ್ಗೆ ಕಳವಳವಿದ್ದರೂ “ಮಾತೃಭಾಷೆಯೆನ್ನವುದು ನಮ್ಮ ಜೈವಿಕ ಸಂರಚನೆಯ ಭಾಗವೇ ಅನ್ನುವಷ್ಟು ನಮ್ಮೊಳಗೆ ಸೇರಿಕೊಂಡಿರುತ್ತದೆ, ಭಾಷೆಯಿಂದ ನಮ್ಮ ಜೈವಿಕ ಸಂರಚನೆಯನ್ನು ಬಿಡಿಸಿಕೊಳ್ಳುವುದು ಅಷ್ಟು ಸುಲಭವಿಲ್ಲ” ಎನ್ನುವಂತಹ ಕನ್ನಡ ಭಾಷೆಯ ಉಳಿವಿನ ಬಗ್ಗೆ ಅಪರೂಪದ ಒಳನೋಟಗಳಿವೆ. ಕೆಲಸ ಮಾಡುವ ಸ್ಥಳಗಳಲ್ಲಾಗಲೀ ಹೊರಗಿನ ವ್ಯಾವಹಾರಿಕ ಪ್ರಪಂಚದಲ್ಲಾಗಲೀ ನಮ್ಮ ಭಾಷೆ ಎನ್ನುವುದು ಹೃದಯದ ಭಾಷೆಯಾಗಿ ಹೇಗೆ ಕೆಲಸವನ್ನು ಸರಾಗವಾಗಿಸುತ್ತದೆ ಎನ್ನುವುದನ್ನೂ ಹೇಳಿದ್ದಾರೆ.

ಈ ಪುಸ್ತಸಕದಲ್ಲಿ ಇನ್ನೊಂದು ತುಂಬಾ ಇಷ್ಟವಾದದ್ದು ‘ತಂತ್ರಜ್ಞಾನದ ಕಲಿಗಾಲ’ ಎನ್ನುವ ಲೇಖನ. ಶೀರ್ಷಿಕೆಯೇ ತುಂಬಾ ಅರ್ಥವತ್ತಾದದ್ದು. ಕಲಿಗಾಲ ಎನ್ನುವುದನ್ನು ಕೇಡು, ಸಂಕಷ್ಟ, ಅಧೋಗತಿ ಎನ್ನುವುದಕ್ಕೆ ರೂಪಕವಾಗಿ ಬಳಸುತ್ತೇವೆ. ಇಲ್ಲಿ ಬದುಕಿನ ಎಲ್ಲಾ ಕ್ಷೇತ್ರಗಳಲ್ಲಿಯೂ ತಂತ್ರಜ್ಞಾನವೆನ್ನುವುದು ಮೇಲ್ನೋಟಕ್ಕೆ ಭಾರೀ ಅನುಕೂಲ ಒದಗಿಸಿದೆ ಎಂಬಂತೆ ಕಂಡುಬಂದರೂ ಆಳದಲ್ಲಿ ತಂದೊಡ್ಡುವ ಅಪಾಯಗಳು, ಮನಸ್ಥಿತಿಯಲ್ಲಾದ ಬದಲಾವಣೆಗಳಿಂದ ಬದುಕು ಭಾವದ ಮೇಲಾಗುವ ಪರಿಣಾಮಗಳನ್ನು ಸೂಕ್ಷ್ಮಮತಿಯಾಗಿ ಗ್ರಹಿಸಿದ್ದಾರೆ. ಪ್ರತಿದಿನವೂ ತಂತ್ರಜ್ಞಾನ ಬದಲಾಗುತ್ತಾ ಅಪ್ಡೇಟ್ ಆಗಲೇಬೇಕಾದ ಅನಿವಾರ್ಯತೆ, ನಿರಂತರ ಕಲಿಕೆಯ ಒತ್ತಡ ಹೆಚ್ಚಾಗುತ್ತಾ ಹೋಗುವುದನ್ನೇ ಕಲಿಗಾಲ ಎಂದು ಕರೆದಿರುವುದು ಸಮಂಜಸವೆನಿಸುತ್ತದೆ.

ಹೀಗೆ ಪುಸ್ತಕದಲ್ಲಿರುವ ವಿಷಯಗಳ ಬಗ್ಗೆ ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ! ಆಧುನಿಕತೆ ತಂದೊಡ್ಡುವ ಮಾನಸಿಕ ಇಬ್ಬಂದಿತನದಿಂದ ಹಿಡಿದು ಬೇಂದ್ರೆ, ಅಡಿಗರು, ತಿರುಮಲೇಶರ ಕಾವ್ಯದ ಬಗ್ಗೆ, ನರಸಿಂಹ ಸ್ವಾಮಿಯವರ ಕವನಗಳು ಈ ಕಾಲಕ್ಕೆ ಹಳೆಯದು ಎನಿಸಿದರೂ ನಮ್ಮೊಳಗಿನ್ನೂ ಜೀವಂತವಾಗಿರುವ ಬಯಕೆಗಳನ್ನೂ, ಕೆಲವೊಂದು ಮೂಲಭೂತ ಸಂವೇದನೆಗಳನ್ನು ಉದ್ದೀಪಿಸುವ ಬಗ್ಗೆ, ಜಯಂತ, ಚಿತ್ತಾಲರ ಕತೆಗಳ ಬಗ್ಗೆ ತೋಳ್ಪಾಡಿ ಕುಮಾರವ್ಯಾಸರ ಕೃತಿರಚನೆಯ ಹಿಂದಿರುವ ತಂತ್ರಗಳ ಬಗ್ಗೆ ಒಟ್ಟಾರೆ ಈ ಕಾಲದಲ್ಲಿ ಉದ್ಭವಿಸಿದ ಸಮಸ್ಯೆಗಳ ಜೊತೆ ಪರಂಪರೆಯಲ್ಲಿ ಸಂದುಹೋದ ಕವಿ ಕಾವ್ಯ ಕಥೆಗಾರರ ಬಗ್ಗೆ ಆಳವಾದ ಗ್ರಹಿಕೆಗಳನ್ನೊಳಗೊಂಡ ಲೇಖನಗಳ ಮಾಲೆ ‘ನೀ ಮಾಯೆಯೊಳಗೋ’.

ಪ್ರಪಂಚದಲ್ಲಿ ಸ್ವಲ್ಪ ಹೊತ್ತಾದರೂ ಕಳೆದುಹೋಗಬೇಕು ಎನ್ನುವ ಪಾಸಿಟಿವ್ ಹಪಾಹಪಿ ಹೆಚ್ಚಾಗುತ್ತದೆಯೇ ವಿನಃ ಸಾಕು ಎನಿಸುವುದಿಲ್ಲ. ಹಾಗಾಗಿ ಖೋ ಕೊಟ್ಟಂತೆ ಒಂದು ಪುಸ್ತಕ ಮುಗಿಯುತ್ತಿದ್ದಂತೆ ಮತ್ತೊಂದು ಕೈಗೆ ಬಂದು ಓದಿನ ಸರಣಿ ಮುಂದುವರೆಯಿತು.

ಘಾಚರ್ ಘೋಚರ್ ಮತ್ತು ಊರುಭಂಗ

ಕಥೆ ಕಟ್ಟುವುದು ಹೆಣೆಯುವುದೆಂದರೇ ಸಣ್ಣ ಸಣ್ಣ ವಿವರಗಳನ್ನೂ ದಾಖಲಿಸುತ್ತಾ ಇಡೀ ಘಟನೆ ಸನ್ನಿವೇಶವನ್ನು ದೃಶ್ಯ ರೂಪದಲ್ಲಿ ನಮ್ಮ ಕಣ್ಣ ಮುಂದೆ ಬರುವ ಹಾಗೆ ಮಾಡುವುದು; ಓದುತ್ತಾ ಓದುತ್ತಾ ಓದುಗನೇ ಕಲ್ಪಸಿಕೊಳ್ಳಲು ಸಹಾಯವಾಗುವಂತೆ ಸಶಕ್ತವಾಗಿ ಆಪ್ತವಾಗಿ ವಿವರಿಸುವುದು. ಈ ದೃಷ್ಟಿಯಿಂದ ನನಗೆ ತುಂಬಾ ಇಷ್ಟವಾದ ಕಾಡಿದ ಬರಹಗಾರ ಎಂದರೆ ವಿವೇಕ ಶಾನಭಾಗ. ಘಾಚರ್ ಘೋಚರ್ ಕಥಾಸಂಕಲನ ಮತ್ತು ಊರುಭಂಗ ಕಾದಂಬರಿಯನ್ನೋದಿ ಅವರ ಬರವಣಿಗೆಯ ಶೈಲಿಗೆ ಅಕ್ಷರಶಃ ಫಿದಾ ಆಗಿದ್ದೇನೆ, ಮರುಳಾಗಿದ್ದೇನೆ. ಈ ಎರಡು ಪುಸ್ತಕಗಳಲ್ಲಿ ಮನುಷ್ಯನ ಅಂದ್ರೆ ಪಾತ್ರಗಳ ಮನಸ್ಸಿನೊಳಗಿನ ಯೋಚನೆಗಳು, ಮಾತುಗಳು, ವರ್ತನೆಗಳು, ಪರಿಸರ ಸನ್ನಿವೇಶಗಳು ಅದೆಷ್ಟು ಕನೆಕ್ಟ್ ಆಗುತ್ತವೆ ಎಂದರೆ ಒಬ್ಬ ಕಥೆಗಾರ ಗೆಲ್ಲುವುದು, ಆಪ್ತವಾಗುವುದು ಈ ಕನೆಕ್ಟ್ ಆಗುವ ಗುಣದಿಂದಲೇ ಎನಿಸುತ್ತದೆ.

ಘಾಚರ್ ಘೋಚರ್ ಕತೆ ನಿರೂಪಕ ಹೇಳುವ ಕಾಫಿ ಹೌಸಿನ ವೇಟರ್ ನ ಪರಿಚಯದೊಂದಿಗೆ ಆರಂಭವಾಗಿ ತನ್ನ ಕುಟುಂಬದ ಸದಸ್ಯರೆಲ್ಲರ ಬಗ್ಗೆ ಹೇಳುತ್ತಾ ಕಥೆ ಬೆಳೆಯುತ್ತಾ ಮುಂದುವರೆಯುವ ವಿಶಿಷ್ಟ ನಿರೂಪಣೆಯಿದೆ. “ಅನಿವಾರ್ಯತೆಯನ್ನು ಬಯಕೆಯಂತೆ ತೋರಿಸಿಕೊಳ್ಳುವುದು ಕುಟುಂಬದ ಶಕ್ತಿಗಳಲ್ಲೊಂದು” ಎನ್ನುವ ವಾಕ್ಯವೋ, ಕುಟುಂಬದಲ್ಲಿ ಏನೋ ಆಗಬಾರದ್ದು ಜಗಳವೋ, ಅನಿರೀಕ್ಷಿತ ಘಟನೆಯೋ ನಡೆದ ನಂತರ ಆವರಿಸಿಕೊಳ್ಳುವ ಮೌನ, ಅದರ ಹರಿತ, ಅದು ಮನಸ್ಸನ್ನು ಆವರಿಸಿಕೊಂಡು ಚುಚ್ಚುವ ರೀತಿ, ಆ ಮೌನವನ್ನು ನೆಲೆಗೊಳಿಸಲು ಬಿಡದೆ ತನ್ನ ಅಮ್ಮ ಬೇಕೆಂದೇ ದನಿ ಎತ್ತರಿಸಿ ಮಾತಾಡುತ್ತಾ ಏಕಾಂಗಿಯಾಗಿ ಎದುರಿಸಿ ಹೋರಾಡುತ್ತಿದ್ದಳು ಎನ್ನುವುದೋ, ತನ್ನ ಅಕ್ಕ, ಅಮ್ಮ ಮತ್ತು ಹೆಂಡತಿ ಹೇಗೆ ಒಬ್ಬರಿಗಿಂತ ಒಬ್ಬರು ಭಯಾನಕರು ಎಂದು ಹೇಳುತ್ತಾ ಜಗಳದ ಕಿಡಿ ಹೇಗೆ ಹೊತ್ತಿಸುತ್ತಾರೆ, ಹೊತ್ತಿಕೊಂಡು ಉರಿಯಲು ಸಹಾಯಕವಾಗುವ ಮಾತಿನ ತಿವಿತ, ಅದರ ಹಿನ್ನೆಲೆಯನ್ನು ವಿವರಿಸುವ ರೀತಿಯೋ ಅವರು ಬರೆದ ಪ್ರತಿಯೊಂದು ಸಾಲನ್ನೂ ತುಂಬಾ ಎಂಜಾಯ್ ಮಾಡಿಕೊಂಡು ಓದಿದ್ದೇನೆ. ಈ ಮನುಷ್ಯ ಎಷ್ಟೆಲ್ಲಾ ಸೂಕ್ಷ್ಮವಾಗಿ ಯೋಚಿಸುತ್ತಾನೆ! ಏನೆಲ್ಲಾ ಗ್ರಹಿಸುತ್ತಾನೆ ಎಂದು ಅಚ್ಚರಿಪಟ್ಟಿದ್ದೇನೆ!

ನಿರೂಪಕನ ಕುಟುಂಬ ಮೊದಲು ಕಿಷ್ಕಿಂಧೆಯಂಥ ಚಿಕ್ಕ ಮನೆಯಲ್ಲಿ ಇದ್ದಿದ್ದು, ಆ ಮನೆಯ ಪರಿಸರ, ಇರುವೆಗಳ ಕಾಟ, ಅವುಗಳನ್ನು ಕಂಡಕಂಡಲ್ಲಿ ಹೊಸಕಿ ಹಾಕುವ ನಿಷ್ಕಾರಣ ಹಿಂಸೆ ರೂಪುಗೊಂಡಿದ್ದರ ಹಿಂದಿನ ಕಥೆ, ಮೊತ್ತ ಮೊದಲು ಗ್ಯಾಸ್ ಸ್ಟವ್ ತಂದಾಗಿನ ಸಂಭ್ರಮ, ಅವನ ಚಿಕ್ಕಪ್ಪ ಸೋನಾ ಮಸಾಲಾ ಬ್ಯುಸಿನೆಸ್ ಆರಂಭಿಸಿ ಅದು ಬೆಳೆಯುತ್ತಾ ಅವರು ಮೇಲ್ದರ್ಜೆಗೇರಿದ್ದು, ಕೈಯ್ಯಲ್ಲಿ ದುಡ್ಡು ಆಡುತ್ತಾ ಹೋದ ಹಾಗೆ ಮನುಷ್ಯ ಸಂಬಂಧ ಸ್ವಭಾವಗಳಲ್ಲಿ ಆಗುವ ಬದಲಾವಣೆ ಈ ಎಲ್ಲವನ್ನೂ ಲೇಖಕರು ಬರೆದ ಅದದೇ ಸಾಲುಗಳಲ್ಲಿ ಓದಿಯೇ ಅನುಭವಿಸಬೇಕು. ದುಡ್ಡಿದ್ದವನಿಗೆ, ದುಡಿಯುವವರಿಗೆ ಕುಟುಂಬದಲ್ಲಿ ಸಿಗುವ ಗೌರವ, ಅವನ ಮರ್ಯಾದೆಯನ್ನು ಕಾಪಾಡುವಲ್ಲಿ ಮನೆ ಸದಸ್ಯರೆಲ್ಲರ ಒಗ್ಗಟ್ಟನ್ನು ನಿರೂಪಕನ ಚಿಕ್ಕಪ್ಪ ವೆಂಕಟಾಚಲ ಪಾತ್ರದ ಮೂಲಕ, ಸಂಬಂಧವನ್ನೇ ಹರಿದುಕೊಳ್ಳುವವರೆಗೂ ಧೈರ್ಯ ಮಾಡಲು ಪ್ರೇರೇಪಿಸುವ ದುಡ್ಡು ತಂದುಕೊಡುವ ದಾಷ್ಟ್ರ್ಯವನ್ನು ನಿರೂಪಕನ ಅಕ್ಕ ಮಾಲತಿ ಪಾತ್ರದ ಮೂಲಕ, ಕುಟುಂಬದ ಒಳಗೇ ಇರುವ ಸದಸ್ಯರ ಹೊಂದಾಣಿಕೆ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ರೀತಿಗೂ, ಹೊರಗಿನಿಂದ ಬಂದು ಆ ಕುಟುಂಬಕ್ಕೆ ಸೇರ್ಪಡೆಯಾದ ವ್ಯಕ್ತಿ ಸ್ಪಂದಿಸುವ ರೀತಿಗೂ ಎಷ್ಟು ವ್ಯತ್ಯಾಸವಿರುತ್ತದೆ ಎಂದು ನಿರೂಪಕನ ಹೆಂಡತಿ ಅನಿತಾ ತಳೆಯವ ನಿಲುವುಗಳ ಮೂಲಕ ನಿರೂಪಕನಿಗೆ ಅನಿಸಿದಂತೆ ನಮಗೂ ಅನಿಸುವುದು ಈ ಎಲ್ಲವೂ ಕಥೆಯನ್ನು ನಿರೂಪಿಸುವ ಕೊಂಡೊಯ್ಯುವ ರೀತಿಯಲ್ಲಿ ಎಷ್ಟು ಸಶಕ್ತವಾಗಿ ಮಿಳಿತವಾಗಿದೆಯೆಂದರೆ ಓದುವ ಖುಷಿ, ಓದುವ ಸುಖ ಎನ್ನುತ್ತಾರಲ್ಲ ಅದು ಓದುತ್ತಾ ಓದುತ್ತಾ ಓದುಗರಿಗೆ ದಕ್ಕಿ ಅವರು ಎಕ್ಸೈಟ್ ಆಗದೇ ಇರಲಾರರು ಎನಿಸುತ್ತದೆ.

ಈ ನೀಳ್ಗತೆಯಲ್ಲಿ ಇನ್ನೊಂದು ನನ್ನನ್ನು ತುಂಬಾ ಇಂಪ್ರೆಸ್ ಮಾಡಿದ್ದು ನಿರೂಪಕನೇ ಹೇಳುವ ಅವನ ಮೊದಲ ರಾತ್ರಿಯ ವಿವರಣೆ. ಅದು ಎಷ್ಟೂ ಸಹಜವಾಗಿದೆ, ಸರಳವಾಗಿದೆ, ಚೆನ್ನಾಗಿದೆ ಎಂದರೆ ಅಂಥಾ ಒಂದು ರೋಚಕ ಘಟನೆಯನ್ನು ಅಷ್ಟು ಶಾಂತವಾಗಿ ಅಷ್ಟು ಪ್ರಾಮಾಣಿಕವಾಗಿ ಹೇಳಬಹುದಾ ಎಂದು ಅಚ್ಚರಿ! ಆ ಥರದ ಸನ್ನಿವೇಶವನ್ನು ಇಷ್ಟು ಮನಸ್ಸಿಗೆ ಹತ್ತಿರವಾಗುವ ದಾಟಿಯಲ್ಲಿ ಎಲ್ಲಿಯೂ ಓದಿರಲಿಲ್ಲ. ಮದುವೆಯಾದ ಹೊಸತರಲ್ಲಿದ್ದ ಗಂಡ-ಹೆಂಡತಿಯ ಸಂಬಂಧದಲ್ಲಿನ ಉತ್ಸಾಹ, ಉದ್ವೇಗ, ಲವಲವಿಕೆ ಕ್ರಮೇಣ ಬದುಕಿನ ಬೇರೆ ಬೇರೆ ಸ್ಥಿತಿ ಗತಿಗಳ ಒತ್ತಡಕ್ಕೆ ಹಳತಾಗುವ ಪ್ರಕ್ರಿಯೆ ಇಲ್ಲಿ ನಿರೂಪಿತವಾಗಿರುವ ರೀತಿಯೇ ಅಪ್ರತಿಮ.

ದೇವರ ಪಟಕ್ಕೆ ಹಚ್ಚಿಟ್ಟ ದೀಪದ ಬತ್ತಿ ಕ್ಷೀಣಿಸಿ ಆರಿದಾಗ ಹೊರಡುವ ತೆಳ್ಳನೆಯ ಹೊಗೆಯ ವಿಶಿಷ್ಟ ವಾಸನೆಯ ಪ್ರಸ್ತಾಪ, ಮನಮೋಹನ ಬೆಳಗಿನ ಜಾವ ಹೆಂಡತಿಗೆ ಎಚ್ಚರವಾಗದಂತೆ ಬಟ್ಟೆ ಬದಲಾಯಿಸಿ ಹೊರಡುವಾಗ ಬರುವ ಸಣ್ಣ ಸರಪರ ಶಬ್ದದ ಪ್ರಸ್ತಾಪ, ಗಂಡ ಮಾತಾಡುತ್ತಿರುವಾಗಲೇ ಹೆಂಡತಿ ಫೋನ್ ಇಟ್ಟು ಅವಳಿಗೆ ಸಾಧ್ಯವಾಗುವ ಇಂಥಾ ಕ್ರೌರ್ಯಗಳೆಲ್ಲಾ ತನಗೇಕೆ ಸಾಧ್ಯವಾಗುವುದಿಲ್ಲ ಎಂದು ಯೋಚಿಸುವ ಪಾತ್ರ ಇಂಥವುಗಳೆಲ್ಲಾ ಲೇಖಕರ ಸೂಕ್ಷ್ಮಜ್ಞತೆಯ ಬಗ್ಗೆ ವಾವ್ಹ್ ಎನಿಸುವಂತೆ ಮಾಡುತ್ತವೆ.

ಗಂಡ ಹೆಂಡತಿಯ ಸಂಬಂಧದಲ್ಲಿ ವಿಶೇಷ ಅನುಭೂತಿಯೇನೂ ಇಲ್ಲದೆ ಮಗ ಚಿಪ್ಸ್ ತಿನ್ನುತ್ತಾ ಟಿವಿ ನೋಡುತ್ತಾ ಬೆಳೆಯುವ ರೂಪಕ ಮತ್ತು ಹೋಟೆಲ್ ಚೆಕ್ ಔಟ್ ಮಾಡುವಾಗ ಸೋಪು ಶಾಂಪು ಎತ್ತಿಟ್ಟುಕೊಳ್ಳುವ ಇಂಡಿಯನ್ ಮೆಂಟಾಲಿಟಿಯ ಬಗ್ಗೆ ಹೇಳಿದ್ದು ತುಂಬಾ ಕನೆಕ್ಟ್ ಆಗಿ ವಿಷಾದ, ನಗೆ ಎರಡನ್ನೂ ಹುಟ್ಟಿಸುತ್ತವೆ. ಇನ್ನು ಸುಧೀರನ ತಾಯಿ ಕತೆಯಲ್ಲಿನ ಸರೋಜಿನಿ ಪಾತ್ರ ವೈದೇಹಿಯವರ ಅಮ್ಮಚ್ಚಿಯನ್ನು ನೆನಪಿಸುತ್ತದೆ. ಇಷ್ಟವಿಲ್ಲದಿದ್ದರೂ ಬದಕಿನಲ್ಲಿ ಅನಿವಾರ್ಯ ಕಾರಣಗಳಿಂದಾಗಿ ಬೆಂಕಿಯಿಂದ ಬಾಣಲೆಗೆ ಬಿದ್ದಂತೆ ವಿಚಿತ್ರ ಸ್ವಭಾವದ ಗಂಡಸರನ್ನು ಕಟ್ಟಿಕೊಂಡು ಒದ್ದಾಡುವ ಬದುಕಿನೆಲ್ಲಾ ಕಠೋರತೆಗೆ ಕಲ್ಲಾಗಿ ಪ್ರತಿಕ್ರಿಯಿಸುವ ಸರೋಜಿನಿಯಂಥಾ ಪಾತ್ರ ಕಷ್ಟವನ್ನೇ ಉಣ್ಣುವ ಉಸಿರಾಡುವ ಬಹುತೇಕ ಹೆಂಗಸರ ಬದುಕಿಗೆ ರೂಪಕವಾಗಬಲ್ಲದು.

ತನ್ನೊಳಗೆ ಹಲವು ಉಪಕಥೆಗಳನ್ನೊಳಗೊಂಡಿರುವ ಊರುಭಂಗ ಕಾದಂಬರಿಯ ಆತ್ಮ ಕಥೆ ಹೇಳುತ್ತಾ ಸಾಗುವ ನಿರೂಪಕ ಮಧ್ಯವಯಸ್ಸಿನ ಗಂಡಸು ಮನಮೋಹನನ ಪಾತ್ರ. ಚಿಕ್ಕ ಹುಡುಗಿ ಶಮಿಯೊಂದಿಗೆ ಆಕಸ್ಮಿಕವಾಗಿ ಆಗುವ ಅವನ ಸ್ನೇಹ-ಒಡನಾಟ-ಸಂಬಂಧವೇ ಕಥೆಯ ತಿರುಳು. ಅವಳ ಸ್ನೇಹಕ್ಕಾಗಿ ಕಾತರಿಸುವ, ಮೆಚ್ಚಿಸಲು ಒದ್ದಾಡುವ ಅವನ ಚಡಪಡಿಕೆ, ತಳಮಳ, ಒದ್ದಾಟದ ಸೂಕ್ಷ್ಮ ವಿವರಗಳು ತುಂಬಾ ಮಜಾ ಕೊಡುತ್ತವೆ. ಹಾಗೇ ಮನಮೋಹನನ ಪಾತ್ರಪೋಷಣೆಯನ್ನು ಓದುತ್ತಾ ಓದುತ್ತಾ ಗಂಡಸರೆಷ್ಟು ಅಪ್ರಾಮಾಣಿಕರು ಎನಿಸುವುದೂ ಸುಳ್ಳಲ್ಲ!

ಹೊರಜಗತ್ತು ಅನೈತಿಕವೆಂದು ಕರೆಯುವ ನೋಡುವ ಇಂಥಾ ಸಂಬಂಧಗಳ ಬಗ್ಗೆ ನನ್ನಂಥವರಿಗೆ ಕೇಳಿ ಗೊತ್ತಿರುತ್ತದೆಯೇ ವಿನಃ ತೀರಾ ಹತ್ತಿರದಿಂದ ನೋಡಿ ಗೊತ್ತಿರುವುದಿಲ್ಲ. ಅಂಥಹದ್ದು ವಾಸ್ತವ ಜಗತ್ತಿನ ಒಂದು ಭಾಗವೇ ಆಗಿದ್ದರೂ ಒಬ್ಬ ಓದುಗಳಾಗಿ ಅದಕ್ಕೆ ಸಂಬಂಧಿಸಿದ ವಿವರಗಳನ್ನು ಓದುವಾಗ ಒಂಥರಾ ಅಚ್ಚರಿ, ಕತೂಹಲ, ಬೆಚ್ಚಿಬೀಳುವುದು ಎನ್ನುತ್ತಾರಲ್ಲಾ ಈ ಎಲ್ಲವನ್ನೂ ಅನುಭವಿಸುತ್ತಾ ಓದಿದೆ. ಹಾಗೆ ಓದುವಾಗ ಮನಮೋಹನ್ ಮತ್ತು ಶಮಿಯ ನಡುವಿನ ಸಂಬಂಧವನ್ನು ಸರಿ-ತಪ್ಪು, ನೈತಿಕ-ಅನೈತಿಕ ಎನ್ನುವುದನ್ನು ಬದಿಗಿಟ್ಟು ಹೀಗೊಂದು ಸಂಬಂಧ, ಘಟಿಸಿದ ಘಟನೆಯಾಗಷ್ಟೇ ನೋಡುತ್ತಾ ಅದಕ್ಕೆ ಸಂಬಂಧಿಸಿದ ಪ್ರತಿಯೊಂದು ವಿವರವನ್ನೂ ಎಂಜಾಯ್ ಮಾಡುತ್ತಾ ಓದಲು ಸಾಧ್ಯವಾಗುವುದೇ ವಿಶೇಷ ಮತ್ತು ಅದೇ ಲೇಖಕರ ಶಕ್ತಿ. ಹೀಗೆ ಹೇಗೋ ಆಕಸ್ಮಿಕವಾಗಿ ಹುಟ್ಟಿಕೊಳ್ಳುವ ವಿವಾಹಿತ ವ್ಯಕ್ತಿ ಮತ್ತು ಹುಡುಗಿಯ ಸಂಬಂಧ, ಗಂಡು ಹೆಣ್ಣಿನ ಸಂಬಂಧಗಳಲ್ಲಿ ಗೊತ್ತುಗುರಿ ಇರುವುದಿಲ್ಲ, ತೀರಾ ಹತ್ತಿರಕ್ಕೆ ಹೋದರೆ ಗಂಡಸು ಜವಾಬ್ದಾರಿಯನ್ನೂ ತೆಗೆದುಕೊಳ್ಳಲಿಚ್ಛಿಸುವುದಿಲ್ಲ, ಆದರೆ ಅವಕಾಶ ಸಿಕ್ಕಿದರೆ ಬಳಸಿಕೊಳ್ಳದೆ ಬಿಡುವುದಿಲ್ಲ, ಮತ್ತು ಈಗಿನ ಕಾಲದಲ್ಲಿ ಹೀಗೆ ಹುಟ್ಟಿಕೊಳ್ಳುವ ಸೆಕ್ಷುವಲ್ ಸಂಬಂಧವನ್ನು ಇದಮ್ಮಿಥ್‍ಂ ಎನ್ನಲಾಗದ, ಪೂರ್ತಿ ತಪ್ಪು ಎಂದೂ ಹೇಳಲಾಗದ ಮನಃಸ್ಥಿತಿ, ಕಾಲಘಟ್ಟದಲ್ಲಿದ್ದೀವಿ, ಮತ್ತು ಅಂಥ ಸಂಬಂಧಕ್ಕೆ ಒಂದೇ ಆಯಾಮವೂ ಇರುವುದಿಲ್ಲ – ಇದೆಲ್ಲವನ್ನೂ ಲೇಖಕರು ನಿರ್ವಹಿಸಿದ ರೀತಿ ಇಷ್ಟವಾಗುತ್ತದೆ. ಈ ಬಗ್ಗೆ ಅವರೊಡನೆ ಮಾತಾಡುತ್ತಾ ಅವರು ಹೇಳಿದ್ದು “ನೈತಿಕ ಅನೈತಿಕತೆಯ ಕಂಪಾಸ್ ನಮ್ಮ ಒಳಗಿರಬೇಕು. ಕಾಂಟೆಕ್ಸ್ಟ್ ಇಲ್ಲದೆ ಯಾವುದನ್ನೂ ಗ್ರಹಿಸಲು ಆಗುವುದಿಲ್ಲ. ನಮಗೆ ಗೊತ್ತಾಗದ ಹಾಗೆ ನಾವು ಜಡ್ಜ್ ಮೆಂಟಲ್ ಆಗಿಬಿಡುತ್ತೇವೆ. ಈವತ್ತಿನ ಕಾಲದ ಸಂಕೀರ್ಣತೆಯನ್ನು ಸೃನಶೀಲ ಬರವಣಿಗೆ ಮಾತ್ರ ಗ್ರಹಿಸಬಲ್ಲುದು ಎಂದು ನನಗೆ ಅನಿಸುತ್ತದೆ” ಎಂದಿದ್ದೂ ತುಂಬಾ ಕನ್‍ವಿನ್ಸಿಂಗ್ ಆಗಿದೆ.

ವಿಪರೀತ ಕಟ್ಟುನಿಟ್ಟಿನ, ಮೌಲ್ಯಗಳ ಬಗ್ಗೆ ಅಪಾರ ಗೌರವ ಹೊಂದಿದ್ದ ಕೀಮಾನಿ ವಕೀಲರ ಖಡಕ್ ವ್ಯಕ್ತಿತ್ವ, ದೇಶಾಭಿಮಾನ ಕಾಲ ಸರಿದಂತೆ ಹಾಸ್ಯಕ್ಕೊಳಗಾಗಿ ಮೂಲೆಗುಂಪಾಗುವ ಪರಿ ತಲೆಮಾರುಗಳ ನಡುವಿನ ವ್ಯತ್ಯಾಸ, ಕಾಲ ಕಾಲಕ್ಕೆ ಮೌಲ್ಯಗಳು, ಅವುಗಳನ್ನು ಗುರುತಿಸುವಿಕೆಯಲ್ಲಾಗುವ ಪಲ್ಲಟವನ್ನು ಸೂಚಿಸುತ್ತದೆ. ಕೊನೆಗೆ ಎಲ್ಲರ ವಿರೋಧ ಕಟ್ಟಿಕೊಂಡು ಆದರ್ಶದ ಪ್ರತೀಕವಾಗಿ ತಾವೇ ಹೆಸರಿಟ್ಟ ಮಗನಿಂದಲೂ ತಿರಸ್ಕೃತರಾಗುವುದು ವಿಪರ್ಯಾಸ. ತಮ್ಮ ಪಾಡಿಗೆ ತಾವು ಶಾಲೆಯಲ್ಲಿ ಪಾಠ ಮಾಡಿಕೊಂಡಿದ್ದ ಬಡಪಾಯಿ ಸುಂಕಾಪುರ ಮೇಷ್ಟ್ರು ಆತ್ಮಚರಿತ್ರೆ ಬರೆಯುತ್ತೇನೆ ಎಂದಾಗ ಇದ್ದಕ್ಕಿದಂತೆ ಅವರಿಗೆ ಸಿಗುವ ಪ್ರಾಮುಖ್ಯತೆ, ಹಳ್ಳಿಯಲ್ಲಿ ಆಗುವ ಅಲ್ಲೋಲಕಲ್ಲೋಲ ಜಯಂತರ ಸುಗ್ಗಿ ಕಥೆಯಲ್ಲಿನ ಮೇಷ್ಟ್ರು ಪಾತ್ರವನ್ನು ನೆನಪಿಸಿತು. ಇಂದಿನ ಆಧುನಿಕ ಬದುಕಿನ ಕೊಳ್ಳುಬಾಕ ಸಂಸ್ಕೃತಿಯಲ್ಲಿ ಅಗತ್ಯವಿದ್ದಷ್ಟೇ ಉಣ್ಣುವ ಉಡುವ ಬದುಕಿನಲ್ಲಿ ಮಿತವ್ಯಯಿಯಾಗಿರುವ ಸರೋಜಿನಿಯ ಸ್ವಭಾವವೇ ಸಮಸ್ಯೆಯಾಗಿ ಕಾಣುವುದೂ ಮತ್ತೊಂದು ಆಯಾಮ.

ಹೀಗೆ ಎಷ್ಟೊಂದು ಬಗೆಯ ಪಾತ್ರಗಳು, ವ್ಯಕ್ತಿತ್ವಗಳು, ವಿಚಿತ್ರ ಸನ್ನಿವೇಶಗಳು! ಓದಿ ಎಷ್ಟೋ ದಿನಗಳವರೆಗೂ ಘಾಚರ್ ಘೋಚರ್ ನ ನಿರೂಪಕ, ಮನಮೋಹನ, ಶಮಿ, ಕೀಮಾನಿ ವಕೀಲರು, ಸುಂಕಾಪುರ ಮೇಷ್ಟ್ರು, ಸರೋಜಿನಿ ಪಾತ್ರಗಳು ನೆನಪಿನಿಂದ ಮರೆಯಾಗುವದೇ ಇಲ್ಲ! ಇಂಥಾ ಕಾಡುವ ಪಾತ್ರಗಳನ್ನು ಸನ್ನಿವೇಶಗಳನ್ನು ಸೃಷ್ಟಿಸಿದ ವಿವೇಕ ಶಾನಭಾಗರು ನನ್ನ ಅಚ್ಚುಮೆಚ್ಚಿನ ಲೇಖಕರಾಗಿ ಅವರೆಲ್ಲಾ ಪುಸ್ತಕಗಳನ್ನೂ ಓದುವ ಹಂಬಲ ಮೂಡಿಸಿದ್ದಾರೆ.

ತೇಜೋತುಂಗಭದ್ರಾ ಮತ್ತು ಪುನರ್ವಸು

ಈ ವರ್ಷ ಓದಿದ ಎರಡು ದೊಡ್ಡ ಕಾದಂಬರಿಗಳು ತೇಜೋ ತುಂಗಭದ್ರಾ ಮತ್ತು ಪುನರ್ವಸು ತಮ್ಮ ವಸ್ತುವಿಶಿಷ್ಟತೆ ಮತ್ತು ಅಗಾಧತೆಯಿಂದ ಗಮನಸೆಳೆದವು. ಹೀಗೆಲ್ಲಾ ಇತ್ತೇ!? ಎಂದು ಅಚ್ಚರಿಯಿಂದ ಕಣ್ಣರಳಿಸುವಂತೆ ಮಾಡಿ ಆಳದಲ್ಲಿ ವಿಷಾದದ ನಿಟ್ಟುಸಿರನ್ನು ಹೊರಡಿಸಿದವು. ಎರಡೂ ಕಾದಂಬರಿಗಳು ನಮಗಿಂತ ಹಲವು ಮತ್ತು ಕೆಲವೇ ವರ್ಷಗಳ ಹಿಂದಿದ್ದ ನಮ್ಮದೇ ಪ್ರಪಂಚದ ಆದರೆ ನಮಗೆ ಗೊತ್ತಿರದ ಎಷ್ಟೋ ವಿಷಯಗಳ ಹೊಸಾ ಲೋಕವನ್ನೇ ತೆರೆದಿಡುವುದು ವಿಶೇಷ.

ತೇಜೋತುಂಗಭದ್ರಾ ವಿಜಯನಗರ ಸಾಮ್ರಾಜ್ಯದ ಕಾಲದ ಕಥೆಯನ್ನು ಪೋರ್ಚುಗೀಸ್ ವಸಾಹತುಶಾಹಿ ಇತಿಹಾಸದೊಂದಿಗೆ ಬೆಸೆದ ವಿಶಿಷ್ಟ ಕಥಾಹಂದರವನ್ನೊಳಗೊಂಡ ಕಾದಂಬರಿ. ಆ ಕಾಲದ ಜನಸಾಮಾನ್ಯರ ಬದುಕು, ನೋವು ನಲಿವು, ಜೀವನದ ಕಥೆಯನ್ನು ಹಲವು ಪಾತ್ರಗಳ ಒಳತೋಟಿಗಳು ಸಂದಿಗ್ಧಗಳ ಮೂಲಕ ನಮ್ಮ ಮುಂದಿಡುತ್ತಾ ಸಾಗುತ್ತದೆ. ಕಾದಂಬರಿಯ ಆರಂಭದಲ್ಲಿ ಮತ್ತು ನಂತರವೂ ಓದುತ್ತಾ ಓದುತ್ತಾ ಇದೇ ಲೇಖಕರ ‘ಹರಿಚಿತ್ತ ಸತ್ಯ’ದಷ್ಟು ಭಾವನಾತ್ಮಕವಾಗಿ ತಟ್ಟಲಿಲ್ಲ. ಆ ಕಾಲದಲ್ಲಿದ್ದ ಸತಿಪದ್ಧತಿ, ಮಹಾರಾಜರಿಗೆ ಲೆಂಕನಾಗುವ ಸಂಪ್ರದಾಯದ ಆಚರಣೆಗಳು, ಮತಾಂತರ ಪ್ರಕ್ರಿಯೆಯಲ್ಲಿ ಜರುಗುವ ಕ್ರೌರ್ಯ, ಸಮುದ್ರಯಾನದ ಭೀಕರತೆ ಇವನ್ನೆಲಾ ಓದುವಾಗ ಭಾವುಕತೆಗಿಂತ ರೌದ್ರ, ಭೀಭತ್ಸ ರಸದ ಅನುಭವವಾಯಿತು. ವೀರಗಲ್ಲು, ಮಹಾಸತಿ ಕಲ್ಲನ್ನು ನೋಡಿದ್ದೆನಾದರೂ ಕಲ್ಲನ್ನು ನೆಡುವುದರ ಹಿಂದಿನ ಹಿನ್ನೆಲೆಯನ್ನು ಕೇಳಿದ್ದೆನಾದರೂ ಅದರಲ್ಲಿ ಬಿಡಿಸುವ ಚಿತ್ರಗಳ ಔಚಿತ್ಯ, ಸತಿ ಹೋಗುವಾಗ ಮಾಡುವ ವಿಧಿವಿಧಾನಗಳನ್ನು ಇಲ್ಲಿ ವಿವರಿಸಿದಷ್ಟು ವಿವರವಾಗಿ ಎಲ್ಲಿಯೂ ಓದಿರಲಿಲ್ಲ. ಹಂಪಮ್ಮ ಸತಿ ಹೋಗುವ ಸನ್ನಿವೇಶವಂತೂ ಎಳೆಎಳೆಯಾಗಿ ವಿಪರೀತ ಕುತೂಹಲಕಾರಿಯಾಗಿ ಉಸಿರುಬಿಗಿಹಿಡಿದು ಓದುವಂತಾಗುತ್ತದೆ. ಹಂಪಮ್ಮನ ಗಂಡ ಕೇಶವ ಲೆಂಕನಾಗುವ ಸನ್ನಿವೇಶವೂ ಮೈ ನಡುಗಿಸುತ್ತದೆ.

ಸಾಮ್ರಾಜ್ಯದ ದಾಹ, ಧರ್ಮದ ಮೋಹ ಮನುಷ್ಯನನ್ನು ಹೇಗೆ ರಕ್ಕಸನನ್ನಾಗಿಸುತ್ತದೆ ಎನ್ನುವುದಕ್ಕೆ ಕಾದಂಬರಿಯಲ್ಲಿ ಹಲವಾರು ಘಟನೆಗಳು ಸಾಕ್ಷಿಯಾಗಿವೆ. ಮತಾಂತರಗೊಳ್ಳಲು ನಿರಾಕರಿಸಿದವರಿಗೆ ಕೊಡುವ ಶಿಕ್ಷೆ ಮೈ ಝುಂ ಎನಿಸುತ್ತದೆ. ಕೇವಲ ಆರುನೂರು-ಏಳುನೂರು ವರ್ಷಗಳ ಹಿಂದೆ ಬದುಕು ಇಷ್ಟು ಕಷ್ಟವಿತ್ತೇ ಎಂದು ಆಶ್ಚರ್ಯಪಡುವಂತಾಗುತ್ತದೆ!

ಮತ್ತೊಂದು ಈ ಕಾದಂಬರಿಯಲ್ಲಿ ನನ್ನನ್ನು ಕಾಡಿದ್ದು, ಕನೆಕ್ಟ್ ಆಗಿದ್ದು ಮನುಷ್ಯನ ಬದುಕಿನಲ್ಲಿ ಕಾಮ ವಹಿಸುವ ಪಾತ್ರ. ಯಾವಾಗಿನಿಂದಲೂ ತಮ್ಮ ಬಯಕೆಗಳನ್ನು ತೀರಿಸಿಕೊಳ್ಳುವ ವಿಚಾರದಲ್ಲಿ ಗಂಡಿಗಿರುವ ಉದಾರತೆ, ಸ್ವಾತಂತ್ರ್ಯ ಹೆಂಗಸರಿಗಿರುವುದಿಲ್ಲ. “ಕಾಮ ಅನ್ನೋದು ಮನುಷ್ಯನ್ನ ದೈನ್ಯಕ್ಕೆ ತಳ್ಳಿಬಿಡ್ತದೆ” ಎನ್ನುವ ಮಾತು ಹೆಂಗಸರಿಗೇ ಹೆಚ್ಚು ಅನ್ವಯವಾಗುತ್ತದೆ. ಹೆಂಡತಿಯೊಂದಿಗೆ ಕೂಡಿದರೆ ಅವಳ ಜೀವಕ್ಕೆ ಅಪಾಯ ಎಂದು ಅವಳೊಂದಿಗೆ ಅಂತರ ಕಾಯ್ದುಕೊಳ್ಳುವ ತ್ಯಂಬಕ್ಕಮ್ಮನ ಗಂಡ ಮಾಪಳನಾಯಕ ಹೊರಗಡೆ ತನ್ನ ಬಯಕೆ ತೀರಿಸಿಕೊಳ್ಳುತ್ತಾನೆ. ಗಂಡನ ಸಾಮೀಪ್ಯ, ಕಾಮಸುಖಕ್ಕಾಗಿ ಕಾತರಿಸುವ ತ್ಯಂಬಕ್ಕಮ್ಮ ಕೊನೆಗೂ ಅದು ದಕ್ಕದೆ ಗಂಡನ ಸಾವಿಗೆ ಮುಖಾಮುಖಿಯಾಗಿ ಸತಿ ಹೋಗುವ ದುರಂತಕ್ಕೆ ತನ್ನನ್ನು ಒಡ್ಡಿಕೊಳ್ಳಬೇಕಾಗುತ್ತದೆ. ಇಷ್ಟಪಟ್ಟವನನ್ನು ಮದುವೆಯಾಗಿಯೂ ಸುಖ ಮರೀಚಿಕೆಯಾದ ಹಂಪಮ್ಮನ ಬದುಕೂ ಇದಕ್ಕೆ ಹೊರತಲ್ಲ. “ನಾವೇನೂ ತಪ್ಪು ಮಾಡಿಲ್ಲದಿದ್ದರೂ ಶಿಕ್ಷೆ ಅನುಭವಿಸೋ ಹಂಗೆ ಮಾಡ್ತಾರಲ್ಲೇ” ಎನ್ನುವ ಅವಳ ಪ್ರಶ್ನೆ ಇಡೀ ಹೆಣ್ಣುಕುಲದ ಸ್ಥಿತಿಯನ್ನು ಪ್ರತಿನಿಧಿಸುತ್ತದೆ.

ಯುದ್ಧಗಳಿಗೆ ಹೋಗಬೇಕಾದ ಸಂದರ್ಭದಲ್ಲಿ ಮತ್ತು ಬೇರೆ ಯಾವುದೇ ಕಾರಣಕ್ಕೆ ತಿಂಗಳಾನುಗಟ್ಟಲೆ ಮನೆಯಿಂದ, ಹೆಂಡತಿಯಿಂದ ದೂರವಿರುವ ಗಂಡಸರಿಗೆ ತಮ್ಮ ಬಯಕೆ ತೀರಿಸಿಕೊಳ್ಳಲು ಅವಕಾಶ ಮತ್ತು ಸೌಲಭ್ಯ ಎರಡೂ ಇರುತ್ತವೆ. ಅದೇ ಅವರಿಂದ ದೂರವಾಗಿ ದಾರಿ ಕಾಯುತ್ತಿರುವ ಹೆಂಗಸರು ಹೇಗೆ ತಮ್ಮ ಕಾಮಾಸಕ್ತಿಯನ್ನು ಹತ್ತಿಕ್ಕಿಕೊಂಡು ಬದುಕಬೇಕು ಎಂಬುದಕ್ಕೆ ತ್ಯಂಬಕಮ್ಮ, ಹಂಪಮ್ಮರ ಬದುಕೇ ಉದಾಹರಣೆ. ಸಮುದ್ರಯಾನದಲ್ಲಿ ಸೆರೆಸಿಕ್ಕ ಹೆಣ್ಣನ್ನು ಬಂಧಿಸಿ ಪ್ರಯಾಣಿಸುವ ನಾವಿಕರೆಲ್ಲಾ ಬೇಕಾದಾಗ ಅನುಭವಿಸುವುದೂ ಲಾಗಾಯ್ತಿನಿಂದಲೂ ಕಾಮದ ವಿಷಯದಲ್ಲಿ ಹಾಗೂ ಹೀಗೂ ಹೆಂಗಸರೇ ಬಲಿಪಶುಗಳು ಎನ್ನುವುದನ್ನು ಹೇಳುತ್ತದೆ.

ಕಾದಂಬರಿಯ ಕೊನೆಯ ಘಟ್ಟಕ್ಕೆ ಬರುವ ಹೊತ್ತಿಗೆ ಭಾವನಾತ್ಮಕವಾಗಿ ತಟ್ಟಲಿಲ್ಲ ಎಂದು ನನ್ನ ಮನಸ್ಸಿನಲ್ಲಿ ಮೂಡಿದ್ದ ಅಭಿಪ್ರಾಯ ಮರೆಯಾಗಿ ಹಂಪಮ್ಮ ಮತ್ತು ಗೇಬ್ರಿಯಲ್ ಪಾತ್ರಗಳ ದುರಂತಮಯ ಬದುಕು ಇನ್ನಿಲ್ಲದಂತೆ ಕಾಡುವುದಕ್ಕೆ ಶುರುವಾಯಿತು. ಕೊನೆಯ ಸನ್ನಿವೇಶ ಕಣ್ಣಲ್ಲಿ ನೀರನ್ನು ತರಿಸುವಲ್ಲಿಯೂ ಯಶಸ್ವಿಯಾಯಿತು.

ತನ್ನ ಪ್ರೀತಿಗಾಗಿ ಸಮುದ್ರಯಾನದ ಸಾಹಸಕ್ಕೆ ಮುಂದಾದ ಗೇಬ್ರಿಯಲ್‍ ನ ಬದುಕಿನ ಯಾನ ಪೋರ್ಚುಗಲ್‍ ನ ಲಿಸ್ಬನ್ ನಗರದಿಂದ ಶುರುವಾಗಿ ಅನಿರೀಕ್ಷಿತ ತಿರುವುಗಳನ್ನು ಪಡೆದು ವಿಜಯನಗರಕ್ಕೆ ಬಂದು ಹಂಪಮ್ಮನೊಂದಿಗೆ ಕನೆಕ್ಟ್ ಆಗುವವರೆಗಿನ ಮತ್ತು ನಂತರದ ಪ್ರಯಾಣ ರೋಚಕ ಮತ್ತು ಆಸಕ್ತಿಕರ. ಹೀಗೆ ಎಲ್ಲಿಂದ ಎಲ್ಲಿಗೋ ಬೆಸೆದುಕೊಳ್ಳುವ ಕಥೆಯನ್ನು ಸೃಷ್ಟಿಸಿದ ಲೇಖಕ ವಸುಧೇಂದ್ರರ ಕಥನ ಕಲೆಯ ಬಗ್ಗೆ ಹೆಮ್ಮೆ ಮತ್ತು ಮೆಚ್ಚುಗೆ ಏಕಕಾಲಕ್ಕೆ ಮೂಡುತ್ತದೆ. ಇಷ್ಟೊಂದು ವಿವರವಾದ ಕಾದಂಬರಿ ರಚನೆಯ ಹಿಂದಿರುವ ಶ್ರಮ ಮತ್ತು ಅಧ್ಯಯನಕ್ಕೂ ಶರಣು.

ಮತ್ತೊಂದು ಕಾದಂಬರಿ ನನ್ನನ್ನು ತುಂಬಾ ಕಾಡಿದ್ದು, ಇಷ್ಟವಾಗಿದ್ದು ಪುನರ್ವಸು. ಜೋಗದಲ್ಲಿ ಶುರುವಾದ ವಿದ್ಯುತ್ ಯೋಜನೆಗಳಿಂದ ಮುಳುಗಡೆಯಾದ ಹಳ್ಳಿಗಳು, ಅಲ್ಲಿನ ಸಮೃದ್ಧ ಬದುಕು, ಪರಂಪರೆ, ಜನರ ತಲ್ಲಣ ನೋವಿನ ಕಥೆ. ಅಭಿವೃದ್ಧಿಯ ದೊಡ್ಡ ದೊಡ್ಡ ಯೋಜನೆಗಳು, ಕನಸಿನ ನಾಗಾಲೋಟದ ಮುಂದೆ ತಮ್ಮ ನೆಲದೊಂದಿಗೆ ಬದುಕನ್ನು ಬೆಸೆದುಕೊಂಡ ಜನರ ಭಾವನೆಗಳು, ಯೋಚನೆಗಳು ತೀರಾ ನಗಣ್ಯವಾಗಿ ಕಾಣುವ ವಿಚಿತ್ರ ದ್ವಂದ್ವದ ಕಥೆ. ವಿದ್ಯುತ್ ಯೋಜನೆಗಳಿಂದ ಜಲಪಾತದ ಸುತ್ತ ಇದ್ದ ದಟ್ಟ ಕಾಡು, ಜೀವವೈವಿಧ್ಯದ ಜಗತ್ತು ನಾಶವಾಗಿದ್ದು, ಒಂದೊಂದೇ ಪ್ರಾಜೆಕ್ಟ್ ಗಳು ವಿಸ್ತಾರವಾಗುತ್ತಾ ಹೋದ ಹಾಗೆ ಬರೀ ಭೌತಿಕ ಪರಿಸರದಲ್ಲಿ ಮಾತ್ರ ಬದಲಾವಣೆಗಳಾಗಿದ್ದಲ್ಲದೆ ಜನರ ಬದುಕು, ಸ್ವಭಾವಗಳಲ್ಲಿ ಅಂದ್ರೆ ಒಂದಿಡೀ ಸಮುದಾಯದಲ್ಲಿ ಆದ ಪಲ್ಲಟಗಳನ್ನು, ಸ್ಥಿತ್ಯಂತರಗಳನ್ನು ಹೃದಯಕ್ಕೆ ತಾಕುವಂತೆ ವಿವರಿಸಿದ್ದಾರೆ.

ವಿದ್ಯುತ್ ಯೋಜನೆಗಳು ಶುರುವಾಗುವ ಮುನ್ನ ಇದ್ದ ಶಾಂತ ಪರಿಸರ ನೋಡುನೋಡುತ್ತಿದ್ದಂತೆ ಕೆಲಸ ಮಾಡುವ ಸಾವಿರಾರು ಜನರ ಕಾಲೊನಿಗಳಾಗಿ, ಪೇಟೆಯಾಗಿ ಪರಿವರ್ತನೆಯಾಗಿದ್ದು, ಸುತ್ತಮುತ್ತಲಿನ ಹಳ್ಳಿಗಳಲ್ಲಿನ ಜನರು ತಮ್ಮದೇ ನೆಲದಲ್ಲಿ ತಾವೇ ಪರಕೀಯರಾಗಿದ್ದು, ಅಧಿಕಾರಶಾಹಿಯ ದರ್ಪ, ದುರ್ವರ್ತನೆ, ಇಂಥಾ ವ್ಯಾಪಕ ಬದಲಾವಣೆಗಳಿಗೆ ಸಾಕ್ಷಿಯಾದ ದತ್ತಪ್ಪ ಹೆಗಡೆಯಂಥ ಸೂಕ್ಷ್ಮ ಸಹೃದಯೀ ವ್ಯಕ್ತಿಯ ಮನಸ್ಸಿನ ತಳಮಳ, ಆಘಾತ ನಮ್ಮದೂ ಆಗಿ ಮನಸ್ಸನ್ನು ಹಿಂಡುತ್ತದೆ. “ವ್ಯಕ್ತಿಯೊಬ್ಬನ ವೈಯಕ್ತಿಕ ಬದುಕು ಅನೂಹ್ಯ ತಿರುವು ಅನಿಶ್ಚಿತ ಏರಿಳಿತಗಳಿಗೆ ಒಳಗಾಗುವುದು ಅಪರೂಪವಾಗಿರಲಿಲ್ಲ. ಆದರೆ ಇಡೀ ಸಮುದಾಯ ಇಷ್ಟೊಂದು ಕ್ಷಿಪ್ರಗತಿಯಲ್ಲಿ ತನ್ನ ಆದ್ಯತೆ, ಅಭಿರುಚಿ, ವರ್ತನೆ, ವ್ಯವಹಾರವೆಲ್ಲದರಲ್ಲೂ ಈ ಮಟ್ಟದ ಪಲ್ಲಟಕ್ಕೆ ಒಳಗಾಗುವುದೆಂಬುದನ್ನು ಅವರಂತೂ ಊಹಿಸಿರಲಿಲ್ಲ”. ಅಲ್ಲಾದ ಬದಲಾವಣೆಗಳನ್ನು ಕಂಡು ಇದು ಉನ್ನತಿಯೋ, ಅವನತಿಯೋ ಎನ್ನುವ ವಸುಧಾ ಪಾತ್ರದ ಯೋಚನೆ ನಮ್ಮ ತಲೆಯನ್ನೂ ಕೊರೆಯುತ್ತದೆ. ನಿಜವಾಗಿಯೂ ಅಭಿವೃದ್ಧಿಯೆಂದರೆ ಏನು? ಯಾವುದು? ಎಂಬ ಪ್ರಶ್ನೆಯನ್ನು ಮುಂದಿಡುತ್ತದೆ.

ಇನ್ನು ಲಿಂಗನಮಕ್ಕಿಯಲ್ಲಿ ಧುಮ್ಮಿಕ್ಕುತ್ತಿದ್ದ ಶರಾವತಿ ಗೆ ಅಣೆಕಟ್ಟು ಕಟ್ಟುವ ಕಾರ್ಯದ ಹಿಂದಿದ್ದ ಎಂಜಿನಿಯರ್ ಗಳ, ಕಾರ್ಮಿಕ ವರ್ಗದ ಪರಿಶ್ರಮದ ವಿವರಗಳು, ಅಂಕಿಅಂಶಗಳು, ಅಂಥಾ ದೈತ್ಯ ಯೋಜನೆಯನ್ನು ಕಾರ್ಯಗತಗೊಳಿಸುವಾಗ ಆದ ಅನಾಹುತಗಳು, ಅಡಚಣೆಗಳಿಗೆ ಸುಮಾರು ಕಾರ್ಮಿಕರು ಬಲಿಯಾಗಿದ್ದರು ಎನ್ನುವುದು ಆ ಬಗ್ಗೆ ಏನೂ ಗೊತ್ತಿರದ ಈಗಿನ ನನ್ನ ಪೀಳಿಗೆಯವರಿಗೆ ಬೆರಗು, ದಿಗ್ಭ್ರಮೆ ಹುಟ್ಟಿಸುವುದರ ಜೊತೆಗೆ ಹೊಸ ವಿಷಯಗಳನ್ನೂ ತಿಳಿದುಕೊಂಡಂತಾಗುತ್ತದೆ. ಸಾಗರ ಪೇಟೆ, ಮೆಣಸಗಾರು, ಕಾರ್ ಗಲ್ಲು, ತಲಕಳಲೆ ಊರುಗಳು ಹೀಗೆಲ್ಲಾ ಓದುವಾಗ ನಾನು ಹುಟ್ಟಿ ಬೆಳೆದ ಊರಿನ ಸಮೀಪ ಹಲವು ವರ್ಷಗಳ ಹಿಂದೆ ನಡೆದ ಕಥೆ ಅಂಥ ವಿಶೇಷ ಅಭಿಮಾನ ಪುಳಕ ಹುಟ್ಟಿದ್ದೂ ಸುಳ್ಳಲ್ಲ. ವಿಶ್ವ ಪ್ರಸಿದ್ಧ ಜೋಗ ಜಲಪಾತ ಅಂಥ ಹುಟ್ಟಿದಾಗಿನಿಂದ ಕೇಳಿರ್ತೀವಿ, ನೋಡಿರ್ತೀವಿ; ಅಂಥಾ ಜಲಪಾತದ ಹಿನ್ನೆಲೆಯ ಕಥೆ, ನಾಡಿಗೆ ಬೆಳಕು ಕೊಟ್ಟ ಯೋಜನೆಯ ವಿವರಗಳನ್ನು ತಿಳಿದುಕೊಳ್ಳುವ ಸಹಜ ಕುತೂಹಲ, ಆಸಕ್ತಿಯೂ ಈ ಕಾದಂಬರಿಯಿಂದ ತಣಿಯಿತು. ನಾ.ಡಿಸೋಜ ಅವರ ಮುಳುಗಡೆ, ದ್ವೀಪ ಕಾದಂಬರಿಗಳು ಬಂದು ಎಷ್ಟೋ ವರ್ಷಗಳ ನಂತರ ಇಂಥಾ ಒಂದು ವಿಷಯದ ಬಗ್ಗೆ ಇಷ್ಟೆಲ್ಲಾ ಸವಿವರಗಳೊಂದಿಗೆ ಪುಸ್ತಕ ಬರೆದು, ಮುಳುಗಡೆಯ ನೋವನ್ನು ಮುನ್ನೆಲೆಗೆ ತಂದು ಪ್ರಸ್ತುತವಾಗಿಸಿದ ಲೇಖಕರು ಡಾಕ್ಟರ್ ಗಜಾನನ ಶರ್ಮ ಅವರ ಆಸಕ್ತಿ ಶ್ರಮಕ್ಕೆ ಶರಣು.

ಶರಾವತಿಗೆ ಅಣೆಕಟ್ಟು ಕಟ್ಟಿ ನಾಡಿಗೆ ವಿದ್ಯುತ್ ಹರಿಸಿದ ಹಿಂದಿನ ವ್ಯಥೆ, ಕಸರತ್ತು, ತಾಂತ್ರಿಕ ವಿವರಗಳಿಗೆ ಭಾವನಾತ್ಮಕ ನೆಲೆಯ ಕಥೆಯ ಚೌಕಟ್ಟನ್ನು ಒದಗಿಸಿ, ಮಲೆನಾಡಿನ ಬದುಕು ಸಂಸ್ಕೃತಿ ಯ ವಿವರಗಳನ್ನು ಹದವಾಗಿ ಮಿಶ್ರಗೊಳಿಸಿ ಈ ಕಾಲಕ್ಕೆ ಮರೆಯಾಗಿದ್ದ ವಿಭಿನ್ನ ವಸ್ತುವಿನ ಕಾದಂಬರಿ ಪುನರ್ವಸು ಈ ಕಾಲದ ಓದಲೇಬೇಕಾದ ಕಾದಂಬರಿಗಳಲ್ಲೊಂದು. “ಮುರಾರಿ, ನಾವು ಸೋತಿದ್ದು ಸರ್ಕಾರದ ಎದುರಲ್ಲ. ನಮ್ಮದೇ ಜನರೆದುರು, ಅವರ ಮನಸ್ಸುಗಳ ಎದುರು, ಅವರ ಆಶೋತ್ತರಗಳ ಎದುರು. ಎಲ್ಲರಿಗೂ ಯಾವುದೋ ಹೊಸತನ್ನು ಪಡೆಯುವ ಕಾತರ; ನಾವಿನ್ಯದ ಕನವರಿಕೆ; ಸುಖಗಳನ್ನು ಮೊಗೆದು ಕುಡಿಯುವ ಚಪಲ. ಇತ್ತೀಚೆಗೆ ಮನುಷ್ಯನ ಯೋಜನೆಗಳು ದೊಡ್ಡದಾಗ್ತಿದ್ದು, ಯೋಚನೆಗಳು ಸಣ್ಣದಾಗ್ತಿದ್ದು” ಎನ್ನುವ ದತ್ತಪ್ಪ ಹೆಗಡೆಯ ಕಾಳಜಿ, ಕಳಕಳಿ ನಮ್ಮೆಲ್ಲಾ ಆಧುನಿಕ ಅಭಿವೃದ್ಧಿ ಯೋಜನೆಗಳಿಗೂ ನಿಸ್ಸಂದೇಹವಾಗಿ ಅನ್ವಯಿಸುತ್ತದೆ.

ಈ ಬೃಹತ್ ಕಾದಂಬರಿಯನ್ನು ಓದಿ ಮುಗಿಸಿದಾಗ ರಾತ್ರಿ ಎರಡು ಗಂಟೆ! ಎಲ್ಲರೂ ಮಲಗಿದ್ದಾರೆ, ರಾತ್ರಿಯ ನಿಶ್ಯಬ್ಧ, ನನ್ನ ಕಣ್ಣಿಂದ ಧಾರಾಕಾರ ನೀರು ಸುರಿಯುತ್ತಿದೆ! ಹೀಗೆ ನಮ್ಮ ವಿದ್ಯೆ, ವಯಸ್ಸು, ವಿವೇಚನೆ ಇರುವಿಕೆ, ನಾವಿರುವ ಪರಿಸರ, ಕಾಲ ಎಲ್ಲವನ್ನೂ ಕ್ಷಣಕಾಲ ಮರೆಸಿ ಕಾದಂಬರಿಯ ಕಥೆ, ಪರಿಸರ, ಪಾತ್ರಗಳು ನಮ್ಮನ್ನಾವರಿಸಿ ಹೃದಯವನ್ನು ಆದ್ರ್ರಗೊಳಿಸಿ ಅಲ್ಲಿನ ನೋವು, ಸಮಸ್ಯೆಗಳು ನಮ್ಮದೂ ಆಗಿ ಅದಕ್ಕಾಗಿ ಮಿಡಿಯುತ್ತೇವಲ್ಲ, ಕಾದಂಬರಿಯ, ಕಥೆಯ ಕಟ್ಟುವಿಕೆಯ ಶಕ್ತಿಯೇ ಅದು. ಈ ಕಾದಂಬರಿಯನ್ನೋದಿದ ನನ್ನ ಪರಿಚಿತ ಮಿತ್ರರೊಬ್ಬರು ತಾವು ಇಡೀ ದಿನ ಮಂಕಾಗಿದ್ದುದಾಗಿ ಹೇಳಿದರು!

ಈ ದೃಷ್ಟಿಯಿಂದ ಈ ವರ್ಷ ಓದಿದ ತೇಜೋತುಂಗಭದ್ರಾ ಮತ್ತು ಪುನರ್ವಸು ಕಾದಂಬರಿಗಳು ಓದಿದ ಎಷ್ಟೋ ದಿನಗಳವರೆಗೂ ಅವುಗಳ ಗುಂಗಲ್ಲಿಯೇ ಇರುವಂತೆ ಮಾಡಿದವು. ಓದಿನ ರುಚಿ ಹತ್ತಿಸಿ ಕಾದಂಬರಿ ಎನ್ನುವ ಸಾಹಿತ್ಯಪ್ರಕಾರದ ಬಗ್ಗೆಯೇ ಆಸಕ್ತಿ ಪ್ರೀತಿ ಹೆಚ್ಚಿಸಿ ಕನ್ನಡದಲ್ಲಿ ಇದುವರೆಗೂ ಬಂದಿರುವ ನಾ ಓದಿರದ ಕ್ಲಾಸಿಕ್ ಕಾದಂಬರಿಗಳ ಓದಿನ ಹುಚ್ಚನ್ನು ಹಿಡಿಸಿದವು.

ಕರ್ಮ

ಈ ಎರಡು ದೊಡ್ಡ ಕಾದಂಬರಿಗಳ ಜೊತೆಗೆ ವಿಭಿನ್ನ ಓದಿನ ಅನುಭವ ನೀಡಿದ ಮತ್ತೊಂದು ಪುಟ್ಟ ಕಾದಂಬರಿ ಕರಣಂ ಪವನ್ ಪ್ರಸಾದರ ‘ಕರ್ಮ’. ಈ ಲೇಖಕರ ನನ್ನಿ ಕಾದಂಬರಿಯ ಬಗ್ಗೆ ಫೇಸ್ ಬುಕ್ಕಿನಲ್ಲಿ ತುಂಬಾ ಮೆಚ್ಚುಗೆಯ ಮಾತುಗಳನ್ನು ಕೇಳಿದ್ದೆನಾದರೂ ಕರ್ಮದ ಬಗ್ಗೆ ಎಲ್ಲಿಯೂ ಓದಿರಲಿಲ್ಲ. ಆದರೆ ಓದ್ತಾ ಓದ್ತಾ ಅದೆಷ್ಟು ಇಷ್ಟವಾಯಿತೆಂದರೆ ಒಂಥರಾ ಅದೇ ಪರಿಸರದಲ್ಲಿರುವ ಫೀಲ್; ಪಾತ್ರಗಳೂ ಜೀವಂತವಾಗಿ ನಮ್ಮ ನಡುವೆಯೇ ಇರುವಂತೆ. ಬ್ರಾಹ್ಮಣ ಕುಟುಂಬದ ರೀತಿ ರಿವಾಜುಗಳು, ಪರಿಸರ, ನಿರೀಕ್ಷೆಗಳು, ಅದರೊಡನೆ ತೀರಾ ಆಧುನಿಕ ಜೀವನದ ಮುಖಾಮುಖಿ, ಅದರಿಂದುಂಟಾಗುವ ಸಂಘರ್ಷಗಳು, ಪಾತ್ರಗಳ ಒಳತೋಟಿಗಳು ವಿಪರೀತ ಸಹಜ ಎನಿಸಿತು. ಕಾದಂಬರಿಯ ವಸ್ತುವೂ ಇದುವರೆಗೂ ಎಲ್ಲಿಯೂ ಓದಿರದ ವ್ಯಕ್ತಿಯೊಬ್ಬ ಸತ್ತ ನಂತರ ಬ್ರಾಹಣ ಕುಟುಂಬದಲ್ಲಿ ಮಾಡುವ ಅಪರ ಕ್ರಿಯೆಗಳು, ಶ್ರಾದ್ಧದ ಆಚರಣೆಗಳ ಬಗ್ಗೆ ಇದ್ದು ವಿಶೇಷವೆನಿಸಿತು. ಕಮೋಡ್ ಮೇಲೆ ಕುಳಿತುಕೊಂಡು ನಿರಾಳರಾಗುವ ಇಂದಿನ ಯುವಪೀಳಿಗೆಯ ಸ್ವಭಾವದ ಬಗ್ಗೆ ಬಂದಿದ್ದಂತೂ ಲೇಖಕರ ಸೂಕ್ಷ್ಮ ಗಮನಿಸುವಿಕೆಯ ಬಗ್ಗೆ ಮೆಚ್ಚುಗೆ ಮೂಡಿಸಿತು. ಕೆಲವೊಂದು ಸನ್ನಿವೇಶಗಳಲ್ಲಿ ಮನುಷ್ಯನ ಮೂಲಭೂತ ಗುಣ-ಸ್ವಭಾವಗಳನ್ನು ನಿರ್ವಹಿಸಿದ ಪರಿ ಸಿಕ್ಕಾಪಟ್ಟೆ ಇಷ್ಟ ಆಗಿ ಕರಣಂ ಪವನ್ ಪ್ರಸಾದರ ಇನ್ನಷ್ಟು ಪುಸ್ತಕಗಳನ್ನೋದಲು ಉತ್ಸುಕಳನ್ನಾಗಿಸಿತು.

ಫೇಸ್‍ಬುಕ್ಕಿನಲ್ಲಿ ಫೋಟೋ ಹಾಕಬೇಕು, ವಾಟ್ಸಪ್ ಮೆಸೇಜ್ ಚೆಕ್ ಮಾಡಬೇಕು, ಸ್ಟೇಟಸ್ ಅಪ್ ಡೇಟ್ ಮಾಡಬೇಕು ಎನ್ನುವ ಸಾಮಾಜಿಕ ಜಾಲತಾಣಗಳ ಭರಾಟೆಯಲ್ಲಿ, ಆಫೀಸ್ ಕೆಲಸಕ್ಕೆ ಹೋಗುವವರಾಗಿದ್ದರೆ ಅದರ ಡೆಡ್ ಲೈನ್, ಮೀಟಿಂಗ್ ಗಳ ಒತ್ತಡ, ಮನೆಯಲ್ಲೇ ಇರುವವರಿಗೆ ಮನೆಕೆಲಸ ಮುಗಿಸುವ ತರಾತುರಿ, ಗಂಡ ಮಕ್ಕಳ ಅಗತ್ಯಗಳನ್ನು ಪೂರೈಸುವ ತುರ್ತು, ನನ್ನಂಥ ಚಿಕ್ಕ ಮಕ್ಕಳ ತಾಯಂದಿರಿಗೆ ಮನೆಕೆಲಸದ ಜೊತೆ ಮಕ್ಕಳ ಹಠ, ರಗಳೆಗಳನ್ನು ನಿಭಾಯಿಸುತ್ತಾ ಅವುಗಳನ್ನು ಎಂಗೇಜ್ ಆಗಿಡುವ ಸವಾಲು, ಧಾವಂತದ ಬದುಕಿನ ಇನ್ನಿತರೆ ಸಮಸ್ಯೆಗಳ ಜೊತೆ ಪುಸ್ತಕಗಳನ್ನು ಓದುವ ಪುರುಸೊತ್ತು, ತಾಳ್ಮೆ, ಆಸಕ್ತಿಯನ್ನು ಕಾಪಿಟ್ಟುಕೊಳ್ಳುವುದು ಕಷ್ಟವೇ ಹೌದಾದರೂ ಅವೆಲ್ಲವನ್ನೂ ಮೀರಿ ಚೂರು ಸಮಯ ಮಿಗಿಸಿ ದಿನಕ್ಕೆ ಕೊನೇಪಕ್ಷ ಐವತ್ತು ಪೇಜುಗಳನ್ನೋದುವ ಪಟ್ಟು ಹಿಡಿದರೆ ಪುಸ್ತಕಗಳು ಕಟ್ಟಿಕೊಡುವ ಅವುಗಳದೇ ಹೊಸ ಆವರಣದಲ್ಲಿ ಮುಳುಗುತ್ತಾ ಪಾತ್ರಗಳ ಪ್ರಪಂಚದಲ್ಲಿ ಕಳೆದು ಹೋಗುತ್ತಾ ಓದು ಕೊಡುವ ಸುಖ ಎಕ್ಸೈಟ್ ಮೆಂಟ್ ನಮ್ಮದಾಗಿಸಿಕೊಳ್ಳಬಹುದು.