1. ಪುಸ್ತಕ ಸಖ್ಯ

ಹಾಗೇ ಬೆರಳಿನಿಂದ ಪುಟಗಳ ಪಟಪಟ
ಬಿಟ್ಟಾಗಲೆಲ್ಲ
ಮೂಗಿನೊಳಗೆ ಹೊಕ್ಕ ಕಂಪು ಪುಸ್ತಕವ
ಪ್ರೀತಿಸಲು ಕಲಿಸಿತು
ಅವಳು ಒಮ್ಮೆ ಹೀಗೆ ಹಾದು ಹೋದಾಗ
ಆಗಿದ್ದು ಹೀಗೆ
ಆ ತಿರುವಿನ ಪ್ರತಿ ನೋಟದಲ್ಲೂ
ಮತ್ತೆ ಮತ್ತೆ ಸಿಗುವ ಜೀವವೊಂದು
ಪುಸ್ತಕವಾಗೇ ಬೆಳೆದುಬಿಟ್ಟಿದೆ.

ಬೆರಳ ದಾರಿಗಳು ಎದೆಯ ಕಪಾಟಿನ
ಇದೇ ಪುಸ್ತಕಕೆ ಮುನ್ನುಗ್ಗುತ್ತವೆ
ತಿರುವಿನಲಿ ಕಂಡ ಮುಖವೊಂದು
ಬದುಕನ್ನೇ ತಿರುಗಿಸಿದ್ದು ಈಗ
ಪರಿಮಳದ ಪುಸ್ತಕ
ಕಿರು ತಿರುವೇ ಹೆದ್ದಾರಿಯಾದ
ಒಂದು ಪುಟವೇ ಪರಿವಿಡಿಯಾದ
ಕಥೆಯಲ್ಲಿ
ನಾನು ಈಗ ಕೇವಲ ಒಂಟಿ ಓದುಗ

ಸಾವಿರಾರು ದಾರಿಗಳಲಿ ಹಾದುಹೋದೆ
ಗಲ್ಲಿಗಳಲ್ಲಿ ಅಲೆದಾಡಿದೆ
ಬೆಟ್ಟ ಬಯಲು ನದಿ ಪಾತ್ರಗಳಗುಂಟ
ರಾಶಿ ರಾಶಿ ಪುಸ್ತಕಗಳಲಿ ಮುಳುಗಿದೆ
ಪುಟಗಳನ್ನು ಮಡಚಿಟ್ಟೆ
ಗೆರೆಗಳ ದೋಣಿಯ ಮೇಲೆ ಸಾಲುಗಳ ಹರಿಯಬಿಟ್ಟೆ
ಆದರೆ
ಆ ತಿರುವನ್ನು ಮರೆಯಲಾರೆ.

ಮುಟ್ಟಿ ಮುಟ್ಟಿ ತುಸುವೂ ಮಾಸಿಹೋಗದ ಆ ಪುಟ
ಹಾದು ಹಾದು ತುಸುವೂ ಸವೆಯದ ಆ ತಿರುವು
ನಾನೆಂಬ ಪುಸ್ತಕಕೆ ಮುನ್ನುಡಿಯಾಗಿ ನಿಂತಿದೆ.

 

 

 

 

 

 

 2. ಕೆಲವರು ಹಾಗೇನೆ

ಥೇಟ್ ಗುಲ್ ಮೊಹರಿನ ನೆಂಟರ ಹಾಗೆ
ಬಿರುಬಿಸಿಲ ಭೂಮಿಯನೂ ಸೀಳಿ ಹೊಕ್ಕ ಬೇರು
ಕೆಂಡ ಬಣ್ಣದ ಹೂ ಬಟ್ಟೆ ತೊಟ್ಟು ನಗುತ್ತಾರೆ
ಉಂಡ ಬೆಂಕಿಯ ನೋವುಗಳಿಗೆಲ್ಲ ನಗೆ ಮುಡಿಸುತ್ತಾರೆ
ಮುಖದ ಮೇಲೆ ತೋರಗೊಡದ ನಿತ್ರಾಣಗಳ ನಿವಾಳಿಸಿ ಎಸೆದು
ಅಪಶೃತಿಯ ಸಾಲುಗಳನ್ನು ಪಲ್ಲವಿಯ ಲಯದಲಿ ಮುಳುಗಿಸುತ್ತಾರೆ

ಕೆಲವರು ಹಾಗೇನೆ
ನದಿಯನ್ನು ಕಳೆದುಕೊಂಡ ಪಾತ್ರಬಿರುಕಿನಲ್ಲಿ ಚಿಗುರಿದ ಹುಲ್ಲು
ಆಳ ಆಳದ ಪಸೆಯನ್ನು ಅರಸುವ ಸುಖದಲ್ಲಿ ಚಲಿಸುತ್ತಾರೆ
ಮಹಲುಗಳಲಿನ ಮೌನ ಜೋಪಡಿಯ ಮಾತುಗಳ
ಅಂತರಕ್ಕೆ ಸೇತುವಾಗುತ್ತಾರೆ ಬತ್ತಿದ ಬಾವಿತಳದಲ್ಲಿ ಕಣ್ಣ ನೆಡುತ್ತಾರೆ
ಪದಗಳನ್ನು ಸೋಲಲು ಬಿಡದ ಇವರ ಮಾತುಗಳಲ್ಲಿ

ಕೆಲವರು ಹಾಗೇ
ಮುಳ್ಳ ಕಂಟಿ ಕೊರಕಲುಗಳಲೂ ಮೈತರಚಿ ಕೊಳ್ಳದೇ ಸರಿಯುತ್ತಾರೆ
ಸಲೀಸಾಗಿ ಸಾಗಿ ನಿಂತು ಪಾಠವಾಗುವ ಇವರು ಕೊರಗುವುದಿಲ್ಲ
ನಕ್ಷತ್ರಗಳ ತೋರಣ ಕಟ್ಟಿ ಇರುಳುಗಳನ್ನು ಸ್ವಾಗತಿಸುತ್ತಾರೆ
ಹಗಲ ಬೆಳಕನ್ನು ಎದೆಯೆ ಹಣತೆಗೆ ಜೋಡಿಸಿ ಕತ್ತಲ ಪ್ರೀತಿಸುತ್ತಾರೆ
ಇವರ ಎದೆಕೋಶದಲ್ಲಿ ನೇಯ್ದ ವಸ್ತ್ರಗಳೆಲ್ಲ ಎದೆಗವಚ

 

ವಾಸುದೇವ ನಾಡಿಗ್ ಶಿವಮೊಗ್ಗ ಮೂಲದವರು.
ಸದ್ಯ ಜವಾಹರ ನವೋದಯ ವಿದ್ಯಾಲಯ ಕನಕಪುರ ರಾಮನಗರ ಜಿಲ್ಲೆಯಲ್ಲಿ ಕನ್ನಡ ಶಿಕ್ಷಕ.
ವೃಷಭಾಚಲದ ಕನಸು, ಹೊಸ್ತಿಲು ಹಿಮಾಲಯ ದ ಮಧ್ಯೆ, ಅಲೆತಾಕಿದರೆ ದಡ ಸೇರಿದಂತೆ ಒಟ್ಟು ಆರು ಕವನ ಸಂಕಲನಗಳು ಪ್ರಕಟವಾಗಿವೆ.
(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)