”ಬ್ರಿಟನ್ನರು ತಮ್ಮ ಬರ್ಬರ ಬಾಲ್ಯವನ್ನೂ, ಬಡತನವನ್ನೂ ಹೇಳಿಕೊಳ್ಳುವಾಗಲೆಲ್ಲ ಕಡು ಬಡತನದ ಭಾರತದ ಜನರ ಕಷ್ಟಗಳ ಬಗ್ಗೆ ತಿಳಿದಿರುವ ನನಗೆ ನಗು ಬರುತ್ತದೆ. ಯಾಕೆಂದರೆ ಭಾರತದ ಜನರ ಕಷ್ಟಗಳ ಬಗ್ಗೆ ಇವರಿಗೆ ಬಿ.ಬಿ.ಸಿ. ತೋರಿಸುವ ಕಾರ್ಯಕ್ರಮಗಳ ಹೊರತು ಬೇರೆ ಗೊತ್ತಿಲ್ಲ. ಬರುವ ಹಣವನ್ನೆಲ್ಲ ಸೌಂದರ್ಯಕ್ಕೆ, ಪ್ರವಾಸಗಳಿಗೆ, ಸುಖಗಳಿಗೆ, ಸಿದ್ಧ ಊಟ ತಿಂಡಿಗಳಿಗೆ, ಶೋಕಿ ಕಾರುಗಳ ಮೇಲೆ ಖರ್ಚು ಮಾಡುವ ಈ ಜನರಿಗೆ ಹಣ ಕೂಡಿಡುವ ಅಭ್ಯಾಸವಿಲ್ಲ. ಹಾಗಂತ ಬಹುತೇಕರ ಬಳಿ ಕೊಳ್ಳೆಹೊಡೆವಷ್ಟು ದುಡ್ಡೂ ಇರುವುದಿಲ್ಲ”
ಡಾ. ಪ್ರೇಮಲತ ಬರೆಯುವ ಬ್ರಿಟನ್ ಬದುಕಿನ ಕಥನ.
ಈ ದೇಶದ ಒಂದು ನಿಯಮ ಹೀಗಿದೆ. ಕೆಲಸದ ಜಾಗಗಳಲ್ಲಿ ವೈದ್ಯರುಗಳು ತಮ್ಮ ಕುಟುಂಬದವರಿಗೆ ಪ್ರಾಶಸ್ತ್ಯ ನೀಡಿ ತಾವೇ ಚಿಕಿತ್ಸೆ ಮಾಡುವಂತಿಲ್ಲ. ವಶೀಲಿ ಉಪಯೋಗಿಸಿ ಬೇರೆ ರೋಗಿಗಳಿಗಿಂತ ಹೆಚ್ಚಿನ ಆದರ ತೋರಿದಂತಹ ದೂರು ನಿಮಗೆ ಬರದಿರಲಿ ಎಂಬುದು ಉದ್ದೇಶ. ಹಾಗೇನಾದರೂ ಬಂದಲ್ಲಿ ಅದು ಬಹಳ ಗಹನ ದೂರಾಗುವ ಸಾಧ್ಯತೆಗಳಿವೆ. ಈ ಕಾರಣ ಕುಟುಂಬದ ಸದಸ್ಯರಾಗಲಿ, ಸ್ನೇಹಿತರಾಗಲಿ ನನ್ನ ಚಿಕಿತ್ಸೆ ಮಾಡುವಂತಿರಲಿಲ್ಲ. ಎಲ್ಲರಂತೆ ನನ್ನ ಸರದಿಗಾಗಿ ಕಾದ ನಂತರವೇ ಇನ್ಯಾರೋ ವೈದ್ಯರ ಮೂಲಕ ನನ್ನ ಚಿಕಿತ್ಸೆ ನಡೆಯುತಿತ್ತು. ಇದೊಂದು ಸಾಮಾಜಿಕ ಮತ್ತು ವೃತ್ತಿಪರ ನಿಯಮ. ಸ್ವತಃ ವೈದ್ಯ ಕೂಡ ತನ್ನ ಖಾಯಿಲೆಯನ್ನು ಇನ್ನೊಬ್ಬ ವೈದ್ಯನ ಬಳಿ ತೋರಿಸಿಕೊಳ್ಳುತ್ತಾನೆ. ತಮಗೆ ತಾವೇ ಬೇಕಾದ ಔಷಧಗಳನ್ನು ಬರೆದುಕೊಳ್ಳುವ ಹಾಗಿಲ್ಲ. ಮತ್ತೋರ್ವ ವೈದ್ಯ ಅಗತ್ಯವಿದೆಯೆಂದು ತೀರ್ಮಾನ ಮಾಡಿದರೆ ಚಿಕಿತ್ಸೆ ದೊರೆಯುತ್ತದೆ. “ಇದೇನಪ್ಪಾ ವೈದ್ಯರಿಗಿರುವ ವೃತ್ತಿಗತ ಅತ್ಯಲ್ಪ ವಿಶೇಷ ಅನುಕೂಲಗಳನ್ನು ಕೂಡ ಇಲ್ಲಿ ಮುರುಟಿಹಾಕಿದ್ದಾರಲ್ಲ” ಅಂತ ಮೊದಲು ಅನ್ನಿಸಿತಾದರೂ ನಂತರ ಯಾಕೆ ಈ ನಿಯಮಗಳಿವೆ ಎಂಬುದು ನಿಧಾನವಾಗಿ ತಿಳಿಯುತ್ತ ಹೋಯಿತು.
ಒಮ್ಮೆ ಆಸ್ಪತ್ರೆಯ ಲೈಬ್ರರಿಯಲ್ಲಿ ಕುಳಿತು ಸ್ವಲ್ಪ ಕಾಲ ಓದಿಕೊಂಡು ಹಿಂತಿರುಗಿ ನಡೆದು ಬರುತ್ತಿದ್ದೆ. ನಡುವೆ, ಒಂದು ಹೆಜ್ಜೆಯಿಟ್ಟ ನಂತರ ಇನ್ನೊಂದು ಹೆಜ್ಜೆಯಿಡಲಾಗಲೇ ಇಲ್ಲ. ಏನು ಮಾಡಬೇಕೆಂದು ತಿಳಿಯದೆ ವಿಚಿತ್ರ ಭಂಗಿಯಲ್ಲಿ ಸ್ಥಂಭಿತಳಾಗಿ ನಿಂತ ನನ್ನ ಪರಿಸ್ಥಿತಿಯನ್ನು ಯಾರೂ ನೋಡದಿರಲಿ ಎಂದು ಮನಸ್ಸಿನಲ್ಲೇ ಬೇಡಿಕೊಂಡೆ. ಹೆಜ್ಜೆಯಿಟ್ಟ ಭಂಗಿಯಲ್ಲಿ ಹಾಗೆಯೇ ನಿಂತಿರುವುದನ್ನು ಸುತ್ತ ಮುತ್ತಲ ಮನೆಯವರು ತಮ್ಮ ದೊಡ್ಡ ಗಾಜಿನ ಕಿಟಕಿಗಳ ಮೂಲಕ ನೋಡಿ ಏನೆಂದುಕೊಳ್ಳುವರೋ ಎಂದು ಆತಂಕವಾಯ್ತು. ಆಕ್ಸಿಡೆಂಟಿನಲ್ಲಿ ಸೊಂಟದ ಅತಿ ಸಣ್ಣ ಮೂಳೆಯೊಂದು ಮುರಿದಿದ್ದುದೇ ಅದಕ್ಕೆ ಕಾರಣವಾಗಿತ್ತು. ಬಹಳ ಪ್ರಯತ್ನ ಪಟ್ಟ ನಂತರ ಮತ್ತೆ ನಡೆಯಲು ಸಾಧ್ಯವಾಯ್ತು. ಈ ದಿನಗಳಲ್ಲಿ ನೋವು ಮತ್ತು ಚಲನೆಗಳು ಹೀಗೆ ಆಗೀಗ ತನ್ನ ಬೆದರಿಕೆಯನ್ನು ಒಡ್ಡಿದರೂ ಬದುಕು ತನ್ನ ಅದಮ್ಯ ಚೇತನವೇ ಶಕ್ತಿಶಾಲಿಯೆಂದು ಸಾರಿಹೇಳುತ್ತಿತ್ತು.
ಹೀಗೊಂದು ದಿನ ಮಗುವನ್ನು ಸರಳೇ ಇಲ್ಲದ ದೊಡ್ಡ ಗಾಜಿನ ಕಿಟಕಿಯಲ್ಲಿ ನಿಲ್ಲಿಸಿಕೊಂಡು ಆಡಿಸುತ್ತ ನಿಂತಿದ್ದೆ. ಒಂದೇ ಕಾಂಪೌಂಡಿನಲ್ಲಿ ಮೂರು ಅಂತಸ್ತಿನ ಹಲವು ಕಟ್ಟಡಗಳಿದ್ದವು. ನಮ್ಮದು ನೆಲದ ಮೇಲಿದ್ದ ಮನೆ. ಕಾಂಪೌಂಡಿನ ಮುಖ್ಯ ದ್ವಾರ ನಮ್ಮ ಮನೆಯ ಎದುರಿಗೇ ಇತ್ತು. ತಟ್ಟನೆ ಯಾರೋ ಓಡಿ ಒಳಬಂದ ಹಾಗಾಯ್ತು. ಮತ್ತೆಲ್ಲ ನಿಶ್ಯಬ್ದ. ಮರುಕ್ಷಣಗಳಲ್ಲಿ ಹಿಂದೆಯೇ ರೊಯ್ಯನೆಂದು ನಾಲ್ಕು ಪೋಲೀಸು ಕಾರುಗಳು ಕಾಂಪೌಂಡಿನ ಒಳ ತೂರಿ ಬಂದು ನಿಂತವು. ರಸ್ತೆಗೆ ಅಡ್ಡಡ್ಡಲಾಗಿ ನಿಲ್ಲಿಸಿಕೊಂಡ ಒಂದು ಕಾರಿನ ಬಾಗಿಲು ತೆಗೆದುಕೊಂಡು ಪೋಲೀಸನೊಬ್ಬ ಕಾರಿನ ಬಾಗಿಲಿನ ಮರೆಯಲ್ಲಿ ಕುಸಿದು ಕುಳಿತು ತನ್ನ ಪಿಸ್ತೂಲನ್ನು ತೆಗೆದು ನಮ್ಮ ಕಟ್ಟಡದ ಮುಂಭಾಗದ ಕಟ್ಟಡದ ಕಡೆ ಗುರಿಹಿಡಿದ. ನನಗೆ ಥ್ರಿಲ್ಲರ್ ಮೂವಿಗಳನ್ನು ನೋಡುವ ಹುಚ್ಚಿದೆ. ಆದರೆ ಇದು ನನ್ನ ಕಣ್ಮುಂದೆಯೇ ನಡೆಯುತ್ತಿದ್ದ ವಿದೇಶೀ ಸಿನಿಮಾವಾಗಿತ್ತು! ಅವರು ಗುರಿಹಿಡಿದ ಕಡೆಯ ಕಟ್ಟಡದ ಭಾಗ, ಕಿಟಕಿಯಿಂದ ನನಗೆ ಕಾಣುತ್ತಿರಲಿಲ್ಲ. ಜೊತೆಗೆ ಮತ್ತೊಬ್ಬ ಪೇದೆ ಕಿಟಕಿಯ ಕಡೆ ಕೈ ಮಾಡಿ ಮರೆಯಾಗಲು ಸೂಚಿಸಿದ. ಮಗುವನ್ನು ತಕ್ಷಣ ಕಿಟಕಿಯಿಂದ ಇಳಿಸಿ ನಾನು ಮರೆಯಾದೆ. ಮತ್ತೆ ಹಲವು ನಿಮಿಷ ಬಿಟ್ಟು ಇಣುಕಿ ನೋಡುವಷ್ಟರಲ್ಲಿ ಎಲ್ಲರೂ ಮರೆಯಾಗಿದ್ದರು. ಆಗಿದ್ದಿಷ್ಟೆ. ಅವರು ಹಿಡಿಯಬೇಕೆಂದಿದ್ದ ಯಾವುದೋ ವ್ಯಕ್ತಿ ಪೋಲೀಸರಿಂದ ತಪ್ಪಿಸಿಕೊಳ್ಳಲು ನಮ್ಮ ಕಟ್ಟಡಗಳ ಕಡೆಗೆ ಓಡಿ ಬಂದಿದ್ದ. ಪೋಲೀಸರೂ ಹಿಂಬಾಲಿಸಿ ಬಂದಿದ್ದರು. ಅಟ್ಟಿಸಿಕೊಂಡು ಬಂದ ವ್ಯಕ್ತಿ ನಿಧಾನವಾದ ಎಂದು ಪೋಲೀಸರು ಹೊರಬರುವಷ್ಟರಲ್ಲಿ ಆತ ಬಹುಶಃ ಮತ್ತೆ ಓಡಿಹೋಗಿದ್ದ. ಅವನನ್ನು ಅನುಸರಿಸಿ ಅವರು ಬಂದ ವೇಗದಲ್ಲೇ ಮರೆಯಾಗಿದ್ದರು.
ಇಂತದೇ ಮತ್ತೊಂದು ಘಟನೆಗೂ ನಾವು ಸಾಕ್ಷಿಗಳಾದೆವು. ಇಂಗ್ಲೆಂಡಿನ ‘ಹೈ ವೇ‘ ಗಳನ್ನು ‘ಮೋಟಾರು ವೇ’ ಗಳು ಎಂದು ಕರೆಯುತ್ತಾರೆ. ಇಲ್ಲಿ ವಾಹನಗಳು ಸರಿಸುಮಾರಿ ನೂರು ಕಿ.ಮೀ. ವೇಗದಲ್ಲಿ ಹೋಗುತ್ತಿರುತ್ತವೆ. ಮೂರು ನಾಲ್ಕು ಲೇನುಗಳಿದ್ದರೂ ಎಡಗಡೆಯ ಕೊನೆಯ ಲೇನನ್ನು ‘ಹಾರ್ಡ್ ಶೋಲ್ಡರ್’ ಎಂದು ಕರೆಯುತ್ತಾರೆ. ಇದನ್ನು ನಾವು ಉಪಯೋಗಿಸುವಂತಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಇದನ್ನು ಬಳಸಲಾಗುತ್ತದೆ. ಅವತ್ತು ನಿಗಿ ನಿಗಿ ಬೆಳಕಿದ್ದ ಹಾಡುಹಗಲು. ಯಾವ ತೊಂದರೆಯೂ ಇರಲಿಲ್ಲ. ತಟ್ಟನೆ ಹಿಂದಿನಿಂದ ಪೋಲೀಸರ ಕಾರಿನ ಹಾರನ್ನುಗಳು ಕೇಳಿಸತೊಡಗಿತು. ಒಂದಲ್ಲ ಅಂತ ಎರಡು ಕಾರುಗಳು ನಾಗಾಲೋಟದಲ್ಲಿ ಹಾರ್ಡ್ ಶೋಲ್ಡರಿನ ಮೂಲಕ ವೇಗವಾಗಿ ಬಂದವು. ಒಂದು ಕಾರು ಬಂದಷ್ಟೇ ವೇಗದಲ್ಲಿ ಮುಂದೆ ಹೋಯಿತು. ಇನ್ನೊಂದು ನೇರ ನಮ್ಮ ಲೇನಿನ ಕಾರುಗಳ ಮುಂದೆಯೇ ಬಂದು ನಿಧಾನಗೊಳಿಸಿತು. ಅದರ ಹಿಂದಿನ ಎಲ್ಲ ಲೇನುಗಳಲ್ಲಿದ್ದವರೂ ತಮ್ಮ ಕಾರುಗಳನ್ನು ನಿಧಾನಗೊಳಿಸಿದರು. ಮತ್ತೊಮ್ಮೆ ಸಿನಿಮಾ ದೃಶ್ಯದಂತಹ ಘಟನೆ! ಮುಂದೆ ನಿಧಾನವಾಗಿ ಚಲಿಸುತ್ತಿದ್ದ ಒಂದೇ ಒಂದು ಪೋಲೀಸು ಕಾರು. ಅದರ ಹಿಂದೆ ನಾಲ್ಕು ಲೇನುಗಳಲ್ಲಿ ವಿಧೇಯವಾಗಿ, ನಿಧಾನವಾಗಿ ಅನುಸರಿಸಿ ಹೋಗುತ್ತಿದ್ದ ನೂರಾರು ಕಾರುಗಳು. ತಟ್ಟನೆ ನನ್ನ ಮುಖದಲ್ಲಿ ಇಷ್ಟಗಲದ ನಗೆ. ನೀರವವಾಗಿದ್ದ ಪ್ರಯಾಣದಲ್ಲಿ ಪೂರ್ತಿ ಮಸಾಲೆ! ದೇಹದ ತುಂಬ ರೋಮಾಂಚನ. ಮುಂದೇನಾಗುತ್ತದೆಯೋ ಎಂಬ ಕುತೂಹಲ.
ಕಾರುಗಳನ್ನು ನಿಲ್ಲಿಸುವಂತೆಯೂ ಇರಲಿಲ್ಲ, ಜೋರಾಗಿ ಓಡಿಸುವಂತೆಯೂ ಇರಲಿಲ್ಲ. ಹೀಗೇ ಒಂದೂವರೆ ಮೈಲಿ ದೂರ ಸಾಗಿದೆವು. ಅಷ್ಟರಲ್ಲಿ ನಮ್ಮ ಮುಂದಿನ ಕಾರಿಗೆ ಸಂದೇಶ ಬಂದಿತೆಂದು ಕಾಣುತ್ತದೆ. ಅದರಲ್ಲಿದ್ದ ಪೋಲೀಸರು ಹೆಬ್ಬೆರಳೆತ್ತಿ ಸಹಕರಿಸಿದ್ದಕ್ಕೆ ಧನ್ಯವಾದ ಹೇಳಿ ವೇಗ ಹೆಚ್ಚಿಸಿಕೊಂಡು ಹೊರಟುಹೋದರು. ನಾವುಗಳು ಕೂಡ ವೇಗ ಹೆಚ್ಚಿಸಿ ಏನಾದರೂ ಕಾಣಸಿಗುತ್ತದೇನೋ ಎಂದು ನೋಡುತ್ತ ನಡೆದವು. ಸ್ವಲ್ಪ ದೂರ ಹೋಗುವ ವೇಳೆಗೆ ಎಡಗಡೆಯ ಮೂಲೆಯಿಂದ ರಸ್ತೆ ಬಿಟ್ಟಿಳಿದ ಕಪ್ಪು ಕಾರೊಂದರ ಸುತ್ತ ಕನಿಷ್ಠ ನಾಲ್ಕು ಪೋಲೀಸು ಕಾರುಗಳು ನಿಂತಿದ್ದವು. ಪೋಲೀಸರು ಯಾರನ್ನೋ ಅಟ್ಟಿಸಿಕೊಂಡು ಹೋಗಿ ಹಿಡಿದಿದ್ದರು! ನಮ್ಮ ದೇಶದಲ್ಲಿ ಬದುಕಿದ ದಶಕಗಳಲ್ಲಿ ಯಾವ ಪೋಲೀಸರನ್ನೂ ಈ ರೀತಿಯ ದೃಶ್ಯಗಳಲ್ಲಿ ನೋಡಿರಲಿಲ್ಲ. ಎಲ್ಲಿಯೋ ಟ್ರಾಫಿಕ್ ಪೋಲೀಸನೊಬ್ಬ ಮೋಟಾರು ಬೈಕೊಂದರ ಸವಾರನನ್ನೋ, ರಸ್ತೆ ಬದಿಯ ವ್ಯಾಪಾರಿಯನ್ನೋ ಗೋಳು ಹುಯ್ದುಕೊಂಡು ದುಡ್ಡು ಕೀಳುತ್ತಿರುವುದಕ್ಕಿನ್ನ ಹೆಚ್ಚಿನ ಸಾಹಸದಲ್ಲಿ ಅವರು ಕಾಣಸಿಕ್ಕಿರಲಿಲ್ಲ. ನಮ್ಮ ದೇಶದಲ್ಲಿ ಹಗಲು ಕಳ್ಳರು ಬೇರೆ, ರಾತ್ರಿ ಕಳ್ಳರು ಬೇರೆ ಇದ್ದಾರೆಂದೂ, ಪೋಲೀಸರ ಮುಖ್ಯ ಆದಾಯಮೂಲ ಬಹುಶಃ ಜನಸಾಮಾನ್ಯರೇ ಅನ್ನುವುದು ನನ್ನ ಅರಿವು.
ಹೀಗೊಂದು ದಿನ ಮಗುವನ್ನು ಸರಳೇ ಇಲ್ಲದ ದೊಡ್ಡ ಗಾಜಿನ ಕಿಟಕಿಯಲ್ಲಿ ನಿಲ್ಲಿಸಿಕೊಂಡು ಆಡಿಸುತ್ತ ನಿಂತಿದ್ದೆ. ಒಂದೇ ಕಾಂಪೌಂಡಿನಲ್ಲಿ ಮೂರು ಅಂತಸ್ತಿನ ಹಲವು ಕಟ್ಟಡಗಳಿದ್ದವು. ನಮ್ಮದು ನೆಲದ ಮೇಲಿದ್ದ ಮನೆ. ಕಾಂಪೌಂಡಿನ ಮುಖ್ಯ ದ್ವಾರ ನಮ್ಮ ಮನೆಯ ಎದುರಿಗೇ ಇತ್ತು. ತಟ್ಟನೆ ಯಾರೋ ಓಡಿ ಒಳಬಂದ ಹಾಗಾಯ್ತು. ಮತ್ತೆಲ್ಲ ನಿಶ್ಯಬ್ದ. ಮರುಕ್ಷಣಗಳಲ್ಲಿ ಹಿಂದೆಯೇ ರೊಯ್ಯನೆಂದು ನಾಲ್ಕು ಪೋಲೀಸು ಕಾರುಗಳು ಕಾಂಪೌಂಡಿನ ಒಳ ತೂರಿ ಬಂದು ನಿಂತವು. ರಸ್ತೆಗೆ ಅಡ್ಡಡ್ಡಲಾಗಿ ನಿಲ್ಲಿಸಿಕೊಂಡ ಒಂದು ಕಾರಿನ ಬಾಗಿಲು ತೆಗೆದುಕೊಂಡು ಪೋಲೀಸನೊಬ್ಬ ಕಾರಿನ ಬಾಗಿಲಿನ ಮರೆಯಲ್ಲಿ ಕುಸಿದು ಕುಳಿತು ತನ್ನ ಪಿಸ್ತೂಲನ್ನು ತೆಗೆದು ನಮ್ಮ ಕಟ್ಟಡದ ಮುಂಭಾಗದ ಕಟ್ಟಡದ ಕಡೆ ಗುರಿಹಿಡಿದ. ನನಗೆ ಥ್ರಿಲ್ಲರ್ ಮೂವಿಗಳನ್ನು ನೋಡುವ ಹುಚ್ಚಿದೆ. ಆದರೆ ಇದು ನನ್ನ ಕಣ್ಮುಂದೆಯೇ ನಡೆಯುತ್ತಿದ್ದ ವಿದೇಶೀ ಸಿನಿಮಾವಾಗಿತ್ತು!
ಕಳೆದ ವರ್ಷ ರೋಗಿಯೊಬ್ಬಳು ನನ್ನ ದಿನದ ಪಟ್ಟಿಯಲ್ಲಿದ್ದಳು. ಆದರೆ ಅವಳು ಬಂದೇ ಬರುತ್ತಾಳೆಂಬ ನಂಬಿಕೆ ನನಗಿರಲಿಲ್ಲ. ಯಾಕೆಂದರೆ ಅವಳು ಬಹಳ ಬಾರಿ ಚಿಕಿತ್ಸೆಗೆಂದು ಸಮಯ ನಿಗದಿಪಡಿಸಿಕೊಂಡು ತಪ್ಪಿಸಿಕೊಂಡಿದ್ದನ್ನು ನಮ್ಮ ಕಂಪ್ಯೂಟರ್ ದಾಖಲೆಗಳು ಸಾರುತ್ತಿದ್ದವು. ಬಂದರೆ ಒರಟಾಗಿ ನಡೆದುಕೊಳ್ಳುವುದು, ಬಾಯ ತುಂಬ ಸಮಸ್ಯೆಗಳಿದ್ದರೂ ಚಿಕಿತ್ಸೆಗೆ ಹಾಜರಾಗದಿರುವುದು ಇದೆಲ್ಲ ಅವಳ ಓದು, ಅರಿವು ಮತ್ತು ಧೋರಣೆಗಳನ್ನು ಸಾರುತ್ತಿದ್ದವು. ಬಹುಶಃ ಮಾದಕ ದ್ರವ್ಯ ವ್ಯಸನಿಯೆಂದು ಅನ್ನಿಸಿದರೂ ಖಚಿತವಾಗಿ ಗೊತ್ತಿರಲಿಲ್ಲ. ಆದರೆ ಅವತ್ತು ಚಿಕಿತ್ಸೆಗಾಗಿ ಆಕೆ ಬಂದೇಬಿಟ್ಟಳು. ಅವಳು ಒಳಬರುತ್ತಿದ್ದಂತೆ ಅವಳ ಹಿಂದೆಯೇ ಅವಳನ್ನು ಹಿಡಿಯಲು ಕಾಯುತ್ತಿದ್ದ ಪೋಲೀಸರೂ ಅವಳನ್ನು ಹಿಂಬಾಲಿಸಿ ಸ್ವಾಗತ ಕೋಣೆಗೆ ಬಂದರು. ಬಹಳಷ್ಟು ಬೇರೆ ರೋಗಿಗಳೂ ಅದೇ ಕೋಣೆಯಲ್ಲಿದ್ದ ಕಾರಣ, ಬಹಳ ಮೆಲ್ಲ ದನಿಯಲ್ಲಿ ಅವಳು ನನ್ನನ್ನು ನೋಡಬಹುದೆಂದೂ ನಂತರ ಅವರ ಜೊತೆ ಠಾಣೆಗೆ ಹೊರಡಬೇಕೆಂದೂ ಒಪ್ಪಂದ ಮಾಡಿಕೊಂಡರು. ಮಾದಕ ದ್ರವ್ಯಗಳ ಸರಬರಾಜಿನ ದೂರು ಹೊತ್ತ ಅವಳು ಅರೆಬರೆ ವ್ಯಸನಿ ಕೂಡ. ಹುಳುಕಲ್ಲಿನಿಂದ ದಪ್ಪಗೆ ಊದಿಕೊಂಡಿದ್ದ ಅವಳ ಕೆನ್ನೆ ಅವಳು ಯಮ ಯಾತನೆಯಲ್ಲಿದ್ದದ್ದನ್ನು ಸಾರುತ್ತಿತ್ತು. ನಾನೊಂದಿಷ್ಟು ಮಾತ್ರೆ ಬರೆದುಕೊಡುವ ತನಕ ನನ್ನ ಕೋಣೆಯೊಳಗೂ ಬರದೆ ಹೊರಗೆ ನಿಂತು ಕಾದು ಅವಳನ್ನು ಕರೆದುಕೊಂಡು ಹೊರಟರು. ಈ ದೇಶಗಳಲ್ಲಿ ರೋಗಿಗಳ ಆರೋಗ್ಯವೆನ್ನುವುದು ಅವರ ಖಾಸಗೀ ವಿಚಾರ. ಅವರ ಸಮ್ಮತಿಯಿಲ್ಲದೆ, ಕಾರಣಗಳಿಲ್ಲದೆ ಇನ್ನೊಬ್ಬರಿಗೆ ಅದನ್ನು ತಿಳಿಯುವ ಹಕ್ಕಿಲ್ಲ. ಅಪರಾಧಿ ಸಿಕ್ಕಳೆಂದು ಅವಳನ್ನು ತಕ್ಷಣ ಹಿಡಿಯದೆ ಮಾನವೀಯತೆಯ ದೃಷ್ಟಿಯಲ್ಲಿ ಅವಳ ನೋವು ಕಡಿಮೆಯಾಗುವಂತೆ ಮಾತ್ರೆಗಳನ್ನು ಕೊಡಿಸಿಕೊಂಡೇ ಒಯ್ಯುತ್ತಾರೆ ಎಂಬ ಬಗ್ಗೆ ಕೂಡ ನನಗೆ ಅನುಮಾನವಿರಲಿಲ್ಲ.
ಇಂಗ್ಲೆಂಡಿನ ವಿಮಾನ ನಿಲ್ದಾಣಗಳಲ್ಲಿ, ಇಲ್ಲಿನ ರೈಲು ನಿಲ್ದಾಣಗಳಲ್ಲಿ, ಜನ ತುಂಬಿದ ಶಾಪಿಂಗ್ ಮಾಲ್ ಗಳಲ್ಲಿ, ರಸ್ತೆಗಳಲ್ಲಿ, ಮುಖ್ಯ ಪ್ರವಾಸೀ ತಾಣಗಳಲ್ಲಿ ಸಂಪೂರ್ಣ ಶಸ್ತ್ರಸಜ್ಜಿತ ಪೋಲೀಸರು ಓಡಾಡುವುದನ್ನು ನೋಡುತ್ತಲೇ ಇರುತ್ತೇವೆ. ಸಮವಸ್ತ್ರದ ಮೇಲೆ ಕ್ಯಾಮರಾ, ವಾಕಿ-ಟಾಕಿಗಳು, ಗನ್ನು, ಲಾಟಿಗಳು , ಟೇಸರ್ ಗಳು ಮುಂತಾದ ಎಲ್ಲವನ್ನು ಹೊತ್ತು ಇವರು ಓಡಾಡುತ್ತಿದ್ದರೆ ‘ಯಾಕೆ?’ಎನ್ನುವ ಭಯವೂ, ಜೊತೆಗೆ ಇವರು ಇದ್ದಾರಲ್ಲ ಏನಾದರೂ ಆದರೆ ಸಹಾಯವಿದೆ ಎಂಬ ನೆಮ್ಮದಿಯೂ ಒಟ್ಟಿಗೇ ಉಂಟಾಗುತ್ತದೆ. ಇನ್ನು ಲಂಡನ್ನಿನಲ್ಲಿ ಎರಡಾಳೆತ್ತರದ ಕುದುರೆಗಳ ಮೇಲೇರಿ ಓಡಾಡುವ ಶಸ್ತ್ರಸಜ್ಜಿತ ಪೋಲೀಸರನ್ನು ನೋಡುವುದೇ ಒಂದು ಆನಂದ. ಭಯೋತ್ಪಾದಕರಿಗೆ ಬಲುಪ್ರಿಯವಾದ ಈ ದೇಶದಲ್ಲಿ ಆಗೀಗ ಘಟಿಸುತ್ತಲೇ ಇರುವ ಘಟನೆಗಳು, ಸಾವು, ನೋವುಗಳ ಕಾರಣ ಪೋಲೀಸರು ಜನರಿರುವ ಸಾಮಾನ್ಯ ಸ್ಥಳಗಳಲೆಲ್ಲ ಗಸ್ತು ತಿರುಗುತ್ತಲೇ ಇರುತ್ತಾರೆ.
ಮೊಟ್ಟ ಮೊದಲ ಸುಸಜ್ಜಿತ ಬ್ರಿಟಿಷ್ ಪೋಲಿಸು ಪಡೆಯನ್ನು 1829 ರಲ್ಲಿ ಸರ್ ರಾಬೆರ್ಟ್ ಪೀಲ್ ಎಂಬ ವ್ಯಕ್ತಿ ಕಟ್ಟಿದನಂತೆ. ಹಾಗಾಗಿ ಇವರನ್ನು ‘ಪೀಲರ್’ ಗಳೆಂದು ಕರೆದವರೂ ಉಂಟು. ಇದಕ್ಕಿಂತ ಮೊದಲು ಆಯಾ ಸ್ಥಳಗಳ ಸಮುದಾಯಗಳು ಮಾಡಿಕೊಂಡ ನೈಟು ವಾಚ್ ಮ್ಯಾನ್ ಗಳು ಮತ್ತು ಪೇದೆಗಳಷ್ಟೇ ಇದ್ದದ್ದು. 1800 ರಲ್ಲಿ ಸ್ಚಾಟ್ಲ್ಯಾಂಡಿನ ಗ್ಲಾಸ್ಗೋ ನಗರದಲ್ಲಿ ಮೊದಲ ಪೋಲೀಸರ ಪರಿಚಯವಾಯ್ತಾದರೂ ರಾಬರ್ಟ್ ಪೀಲ್ ಇದನ್ನು ವ್ಯವಸ್ಥಿತ ನೀತಿ ಮತ್ತು ನಿಯಮಗಳಿಗೊಳಪಡಿಸಿದ. ಈತನ ಪ್ರಕಾರ ಪೋಲೀಸರ ಅತ್ಯಂತ ಮುಖ್ಯ ಅರ್ಹತೆ ನಂಬಿಕೆ ಮತ್ತು ಹೊಣೆಗಾರಿಕೆ. 1990 ರವರೆಗೂ ಗಂಡಸರು 5.8 ಅಡಿ ಮತ್ತು ಹೆಂಗಸರು 5.4 ಅಡಿ ಎತ್ತರವಿದ್ದಲ್ಲಿ ಮಾತ್ರ ಪೋಲೀಸರಾಗಬಹುದಿತ್ತು. ಈಗ ಅಂತಹ ನಿರ್ಭಂದಗಳೇನಿಲ್ಲ. ಭಯೋತ್ಪಾದಕರ ಮತ್ತು ಚಾಕು –ಚೂರಿಗಳ ಅಪರಾಧ ಗಗನ ಮುಟ್ಟಿರುವ ಈ ವರ್ಷಗಳಲ್ಲಿ ಲಂಡನ್ನಿನ ಮೆಟ್ರೊಪೋಲಿಟನ್ ಪೋಲೀಸರ ಮುಖ್ಯಸ್ಥೆಯಾಗಿ ಇದೇ ಮೊದಲ ಬಾರಿಗೆ ಕ್ರೆಸ್ಸಿಡ ಡಿಕ್ ಎನ್ನುವ 58 ವರ್ಷದ ಮಹಿಳೆ ಆಯ್ಕೆಯಾಗಿರುವುದು ಇನ್ನೂ ವಿಶೇಷ. ಲಂಡನ್ನಿನಲ್ಲೇ ಸುಮಾರು 43000 ಜನ ಪೋಲೀಸರಿದ್ದರೆ ಇಡೀ ದೇಶದಲ್ಲಿ 125000 ಜನ ಪೋಲೀಸರಿದ್ದಾರೆಂಬ ಗಣಿಕೆಯಿದೆ. ಇದು ಸದಾ ಬದಲಾಗುವ ಗಣನೆ.
ಯಾಕೆಂದರೆ ಇಂಗ್ಲೆಂಡಿನಲ್ಲಿ ಪೋಲೀಸು ವ್ಯವಸ್ಥೆಯೆನ್ನುವುದು ಹಣಕಾಸಿನ ಕಾರಣ ಸದಾ ನಲುಗುತ್ತಲೇ ಇರುವ ಸಂಸ್ಥೆ. ಕಡಿಮೆ ಸಂಬಳ, ಶಿಸ್ತಿನ ನಿಯಮಗಳು, ಅತಿ ಹೆಚ್ಚಿನ ನಿರೀಕ್ಷೆ, ಕೆಲಸದ ಒತ್ತಡ, ಸಾರ್ವಜನಿಕರ ದೂರುಗಳು ಎಲ್ಲದರ ಜೊತೆಗೆ ಸದಾ ಕಾಲ ಹಣಕಾಸಿನ ಮುಗ್ಗಟ್ಟಿನಿಂದ ನಲುಗುವ ಕಾರಣ ಪೋಲೀಸು ಇಲಾಖೆ ಕೆಲಸಗಾರರನ್ನು ಕಡಿಮೆಮಾಡಿಕೊಳ್ಳುತ್ತಲೇ ಇರುತ್ತದೆ. ತಟ್ಟನೆ ಕೆಲಸ ಹೋಗುವ ಭಯವೂ ಇವರನ್ನು ಕಾಡುತ್ತಲೇ ಇರುತ್ತದೆ. ಹಲವು ಪೋಲೀಸರಲ್ಲಿ ಖಿನ್ನತೆ, ಪಿ.ಟಿ.ಎಸ್. ಡಿ. ( ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸಾರ್ಡರ್ ) ಸಾಮಾನ್ಯ. ಸಂಬಳದ ಹೊರತು ಮತ್ತೊಂದು ಆದಾಯವಿಲ್ಲದ ಈ ಘನವೃತ್ತಿಯಲ್ಲಿ ಜನರು ನಿರೀಕ್ಷಿಸುವುದು ಕೂಡ ಅಗಾಧ. ಜನನಿಂದನೆಯಿಂದ ದೂರವಿರಲು, ದೂರುಗಳಿಂದ ಮುಕ್ತವಾಗಿರಲು ಇವರು ತಾವು ಮಾಡುವ ಕೆಲಸಗಳನ್ನು, ಅರೆಷ್ಟುಗಳನ್ನು ಕೂಡ ಪೂರ್ತಿ ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಕ್ಷಿ ಸಮೇತ ವರದಿ ಒಪ್ಪಿಸುತ್ತಾರೆ. ವೇಗದ ಮಿತಿಯನ್ನು ಮೀರಿ ನಡೆದವರ ಬೆನ್ನಟ್ಟಿ ಹಿಡಿಯುವುದು, ಪ್ರತಿ ಬಾರಿ ಜನ ಸೇರುವ ಸ್ಥಳಗಳ ಮೇಲೂ ಜವಾಬುದಾರಿ, ಡ್ರಗ್ಸ್ ದಂಧೆಯವರನ್ನು , ಕಳ್ಳರನ್ನು, ಭಯೋತ್ಪಾದಕರ ಚಟುವಟಿಕೆಗಳನ್ನು ಹತ್ತಿಕ್ಕುವುದು, ಶಾಲೆಗಳಿಗೆ ಹೋಗಿ ಮಕ್ಕಳಿಗೆ ರಸ್ತೆಯ ನಿಯಮಗಳನ್ನು ಕಲಿಸುವುದು, ಪೋಲೀಸರು ಸ್ನೇಹಿತರು ಎಂದು ಸಾರುವುದು, ವ್ಯಾಜ್ಯಗಳನ್ನು ಬಿಡಿಸುವುದು, ಕಳವಾದವರನ್ನು ಹುಡುಕಿ ತರುವುದು, ಪತ್ತೇದಾರಿಕೆ , ಅಪಘಾತದ ಸ್ಥಳಗಳ ನಿರ್ವಹಣೆ, ಸಂಚಾರ ವ್ಯವಸ್ಥೆ , ಗಡಿ ಕಾಯುವಿಕೆ…. ಹೀಗೆ ನಾನಾ ಚಟುವಟಿಕೆಗಳಲ್ಲಿ ಅವಿರತ ತೊಡಗಿರುವ ಇವರಲ್ಲಿ ಮಹಿಳೆಯರು ಕೂಡ ಬಹಳ ಮಂದಿ ಇದ್ದಾರೆ. ಇಡೀ ಪ್ರಪಂಚದಲ್ಲಿಯೇ ಒಂದು ಅತ್ಯುತ್ತಮ ಪೋಲೀಸು ಪಡೆಯನ್ನು ಹೊಂದಿರುವ ಈ ದೇಶ ಅತ್ಯಂತ ಸುರಕ್ಷತೆಯಿರುವ ಒಂದು ದೇಶವಾಗಿರಲು ಪೋಲೀಸರು ನೀಡುವ ಕೊಡುಗೆಗಳು ಅಪಾರ.
ಮಾದಕ ದ್ರವ್ಯಗಳ ಸರಬರಾಜಿನ ದೂರು ಹೊತ್ತ ಅವಳು ಅರೆಬರೆ ವ್ಯಸನಿ ಕೂಡ. ಹುಳುಕಲ್ಲಿನಿಂದ ದಪ್ಪಗೆ ಊದಿಕೊಂಡಿದ್ದ ಅವಳ ಕೆನ್ನೆ ಅವಳು ಯಮ ಯಾತನೆಯಲ್ಲಿದ್ದದ್ದನ್ನು ಸಾರುತ್ತಿತ್ತು. ನಾನೊಂದಿಷ್ಟು ಮಾತ್ರೆ ಬರೆದುಕೊಡುವ ತನಕ ನನ್ನ ಕೋಣೆಯೊಳಗೂ ಬರದೆ ಹೊರಗೆ ನಿಂತು ಕಾದು ಅವಳನ್ನು ಕರೆದುಕೊಂಡು ಹೊರಟರು. ಈ ದೇಶಗಳಲ್ಲಿ ರೋಗಿಗಳ ಆರೋಗ್ಯವೆನ್ನುವುದು ಅವರ ಖಾಸಗೀ ವಿಚಾರ. ಅವರ ಸಮ್ಮತಿಯಿಲ್ಲದೆ, ಕಾರಣಗಳಿಲ್ಲದೆ ಇನ್ನೊಬ್ಬರಿಗೆ ಅದನ್ನು ತಿಳಿಯುವ ಹಕ್ಕಿಲ್ಲ. ಅಪರಾಧಿ ಸಿಕ್ಕಳೆಂದು ಅವಳನ್ನು ತಕ್ಷಣ ಹಿಡಿಯದೆ ಮಾನವೀಯತೆಯ ದೃಷ್ಟಿಯಲ್ಲಿ ಅವಳ ನೋವು ಕಡಿಮೆಯಾಗುವಂತೆ ಮಾತ್ರೆಗಳನ್ನು ಕೊಡಿಸಿಕೊಂಡೇ ಒಯ್ಯುತ್ತಾರೆ ಎಂಬ ಬಗ್ಗೆ ಕೂಡ ನನಗೆ ಅನುಮಾನವಿರಲಿಲ್ಲ.
ನನ್ನ ವೃತ್ತಿಯಲ್ಲಿ ಮಹಿಳಾ ಪೇದೆಗಳಿಂದ ಹಿಡಿದು ಪೋಲೀಸು ಕಮಿಷನ್ನರುಗಳವರೆಗೆ ಎಲ್ಲರನ್ನೂ ನೋಡಿದ್ದೇನೆ. ಬಹಳ ಸಾಧಾರಣವಾಗಿ ನಡೆದುಕೊಳ್ಳುವ ಇವರನ್ನು ಕಂಡು ಸಾಮಾನ್ಯರ್ಯಾರೂ ಹೆದರುವುದಿಲ್ಲ. ವೈದ್ಯರುಗಳು ಹೇಗೆ ತಾವೇ ದೇವರೆಂದು ಇಲ್ಲಿ ಮೆರೆಯಲು ಅವಕಾಶಗಳಿಲ್ಲವೋ ಹಾಗೆಯೇ ಪೋಲಿಸರು ಕೂಡ ಯಾವುದೇ ದರ್ಪಗಳನ್ನು ಜನಸಾಮಾನ್ಯರ ಮುಂದೆ ತೋರಿಸುವುದಿಲ್ಲ. ಸರಳವಾಗಿ ಮನಬಿಚ್ಚಿ ಮಾತಾಡುತ್ತಾರೆ.
ಇಂಗ್ಲೆಂಡಿನ ಮೇರು ಹಬ್ಬ ಕ್ರಿಸ್ಮಸ್ ಸಮಯದಲ್ಲಿ ಇಲ್ಲಿ ವ್ಯಾಪಾರ ಬಹಳ ಜೋರು. ಅದಕ್ಕಾಗಿ ವಿಶೇಷ ಮಾರುಕಟ್ಟೆಗಳು ನಡೆಯುತ್ತವೆ. ಇಂತಹ ಮಾರುಕಟ್ಟೆಗಳನ್ನು ಗುರಿಯಾಗಿಟ್ಟುಕೊಂಡು ಜರ್ಮನಿ, ಫ್ರಾನ್ಸ್ ದೇಶಗಳಲ್ಲಿ ಭಯೋತ್ಪಾದಕರ ದಾಳಿಗಳು ನಡೆದವು, ಹಾಗಾಗಿ ಇಲ್ಲಿ ಕೂಡ ವಿಶೇಷ ಬಂದೋಬಸ್ತುಗಳನ್ನು ಮಾಡುತ್ತಾರೆ. ಇತ್ತೀಚೆಗೆ ಕ್ರಿಸ್ಮಸ್ ಹಬ್ಬದ ಆಸುಪಾಸಿನಲ್ಲಿ ಹೀಗೊಬ್ಬ ಪೋಲೀಸು ಆಫೀಸರ್ ರೋಗಿಯಾಗಿ ಬಂದಿದ್ದ. ಇನ್ನೂ ತರುಣನಾಗಿದ್ದ ಆತನಿಗೆ
“ಈ ಸಮಯದಲ್ಲಿ ನೀವೆಲ್ಲ ಪೋಲಿಸರಿಗೆ ಭಾರೀ ಕೆಲಸವೇನೋ?”- ಅಂತ ಕೇಳಿದೆ.
ಅದಕ್ಕಾತ “ಹೌದು, ವಿಶೇಷ ಸಿದ್ಧತೆಗಳು ನಡೆದಿವೆ, ಶ್ವಾನದಳಗಳನ್ನು ಕರೆಸಿದ್ದೇವೆ, ಮುಫ್ತಿಯಲ್ಲಿಯೂ, ಸಮವಸ್ತ್ರದಲ್ಲಿಯೂ ಇರುವ ಪೋಲೀಸರು ಇದ್ದೇವೆ; ಜೊತೆಗೆ ಅಲ್ಲಲ್ಲಿ ಹೆಚ್ಚುವರಿ ಕ್ಯಾಮರಾಗಳನ್ನು ಇರಿಸಿದ್ದೇವೆ. ಜೊತೆಗೆ ಡ್ರೋನ್ ಗಳು ಆಕಾಶದಲ್ಲಿ ಗಸ್ತು ತಿರುಗುತ್ತಿವೆ” ಅಂತ ಚಿತ್ರಗಳನ್ನು ನೀಡಿದ. ನಂತರ “ನನಗಂತು ಈ ಸಮಯದಲ್ಲಿ ಬಿಡುವೇ ಇಲ್ಲ, ಯಾವಾಗಲೂ ಟಿವಿಗೆ ಸಂದರ್ಶನ ಕೊಡುವುದೇ ಕೆಲಸವಾಗಿದೆ. ಹಾಗಾಗಿ ನನ್ನ ಹಲ್ಲುಗಳನ್ನು ಬಿಳಿಯಾಗಿಸಿಕೊಳ್ಳಬೇಕು. ಎಷ್ಟಾಗುತ್ತದೆ” ಎಂದು ವಿಚಾರಿಸಿಕೊಂಡ. ಬ್ರಿಟನ್ನರು ತಮ್ಮ ರೂಪಿಗಾಗಿ ಖರ್ಚುಮಾಡುವುದು ಬಹಳ. ಹಾಗಾಗಿ ಅದೇನೂ ಅಚ್ಚರಿಯೆನಿಸಲಿಲ್ಲ. ಒಂದೆರಡು ಬಾರಿ ಹೀಗೆ ಭೇಟಿ ಮಾಡುವಷ್ಟರಲ್ಲಿ “ತನ್ನ ತಂದೆ ತಾಯಿಗಳಿಗೆ ಹೇಗೆ ಬಾಯಿಯ ಆರೋಗ್ಯದ ಬಗ್ಗೆ ಅರಿವಿರಲಿಲ್ಲವೆಂದೂ, ಅವರು ಯಾವತ್ತೂ ಆತನನ್ನು ಸರಿಯಾಗಿ ದಂತವೈದ್ಯರ ಬಳಿ ಕರೆದುಕೊಂಡು ಹೋಗದೆ ಆತನ ಹಲ್ಲುಗಳು ವಕ್ರವಾದವೆಂದೂ ಹೇಳಿಕೊಂಡ. ಜೊತೆಗೆ ತನ್ನ ಬಾಲ್ಯವೆಲ್ಲ ಹೇಗೆ ಒರಟು ಮತ್ತು ಬಡ ಜನರಜೊತೆ ಕಳೆಯಿತೆಂದೂ, ಆಗಿಂದಲೂ ಪೋಲೀಸಾಗಬೇಕೆಂದು ಆತ ಆಸೆಪಟ್ಟು ತರಬೇತಿ ಗಳಿಸಿದೆನೆಂದೂ ಹೇಳಿಕೊಂಡ. ತಾನು ನೀಡುವ ಟಿವಿಯ ಕಾರ್ಯಕ್ರಮದ ವಿವರಗಳನ್ನು ನೀಡಿದ. ನಂತರದ ದಿನಗಳಲ್ಲಿ ನನ್ನ ನರ್ಸ್ ಆತನನ್ನು ಟಿವಿಯಲ್ಲಿ ನೋಡಿದೆನೆಂದು ಹೇಳಿದಳು.
ಬ್ರಿಟನ್ನರು ತಮ್ಮ ಬರ್ಬರ ಬಾಲ್ಯವನ್ನೂ, ಬಡತನವನ್ನೂ ಹೇಳಿಕೊಳ್ಳುವಾಗಲೆಲ್ಲ ಕಡು ಬಡತನದ ಭಾರತದ ಜನರ ಕಷ್ಟಗಳ ಬಗ್ಗೆ ತಿಳಿದಿರುವ ನನಗೆ ನಗು ಬರುತ್ತದೆ. ಯಾಕೆಂದರೆ ಭಾರತದ ಜನರ ಕಷ್ಟಗಳ ಬಗ್ಗೆ ಇವರಿಗೆ ಬಿ.ಬಿ.ಸಿ. ತೋರಿಸುವ ಕಾರ್ಯಕ್ರಮಗಳ ಹೊರತು ಬೇರೆ ಗೊತ್ತಿಲ್ಲ. ಬರುವ ಹಣವನ್ನೆಲ್ಲ ಸೌಂದರ್ಯಕ್ಕೆ, ಪ್ರವಾಸಗಳಿಗೆ, ಸುಖಗಳಿಗೆ, ಸಿದ್ಧ ಊಟ ತಿಂಡಿಗಳಿಗೆ, ಶೋಕಿ ಕಾರುಗಳ ಮೇಲೆ ಖರ್ಚು ಮಾಡುವ ಈ ಜನರಿಗೆ ಹಣ ಕೂಡಿಡುವ ಅಭ್ಯಾಸವಿಲ್ಲ. ಹಾಗಂತ ಬಹುತೇಕರ ಬಳಿ ಕೊಳ್ಳೆಹೊಡೆವಷ್ಟು ದುಡ್ಡೂ ಇರುವುದಿಲ್ಲ. ಸಾಲ ಸೋಲ ಮಾಡಿ ಬಂಗಾರ ಕೊಳ್ಳುವ ನಮ್ಮ ದೇಶದ ಜನರಂತೆಯೇ ಇವರು ಕೂಡ ಸಾಲ ಸೋಲ ಮಾಡಿ ಐಷರಾಮವಾಗಿ ಬದುಕಿಬಿಡುತ್ತಾರೆ. ಇವತ್ತಿನ ಖರ್ಚು, ಸುಖ ಇವತ್ತಿಗೆ. ನಾಳೆಯದು ನಾಳೆಗೆ ಎನ್ನುವ ಇವರ ಕರುಣ ಕಥೆಗಳಿಗೆ ಮರುಗದಿರುವ ನನ್ನ ಈ ಸ್ಥಿತಿಗೆ ನಗಬೇಕೋ –ಅಳಬೇಕೋ ಎಂದು ಕೂಡ ಎಷ್ಟೋಬಾರಿ ತಿಳಿಯುವುದಿಲ್ಲ.
ಬ್ರಿಟನ್ನರು ತಮ್ಮ ರೂಪಿಗಾಗಿ ಖರ್ಚುಮಾಡುವುದು ಬಹಳ. ಹಾಗಾಗಿ ಅದೇನೂ ಅಚ್ಚರಿಯೆನಿಸಲಿಲ್ಲ. ಒಂದೆರಡು ಬಾರಿ ಹೀಗೆ ಭೇಟಿ ಮಾಡುವಷ್ಟರಲ್ಲಿ “ತನ್ನ ತಂದೆ ತಾಯಿಗಳಿಗೆ ಹೇಗೆ ಬಾಯಿಯ ಆರೋಗ್ಯದ ಬಗ್ಗೆ ಅರಿವಿರಲಿಲ್ಲವೆಂದೂ, ಅವರು ಯಾವತ್ತೂ ಆತನನ್ನು ಸರಿಯಾಗಿ ದಂತವೈದ್ಯರ ಬಳಿ ಕರೆದುಕೊಂಡು ಹೋಗದೆ ಆತನ ಹಲ್ಲುಗಳು ವಕ್ರವಾದವೆಂದೂ ಹೇಳಿಕೊಂಡ. ಜೊತೆಗೆ ತನ್ನ ಬಾಲ್ಯವೆಲ್ಲ ಹೇಗೆ ಒರಟು ಮತ್ತು ಬಡ ಜನರಜೊತೆ ಕಳೆಯಿತೆಂದೂ, ಆಗಿಂದಲೂ ಪೋಲೀಸಾಗಬೇಕೆಂದು ಆತ ಆಸೆಪಟ್ಟು ತರಬೇತಿ ಗಳಿಸಿದೆನೆಂದೂ ಹೇಳಿಕೊಂಡ. ತಾನು ನೀಡುವ ಟಿವಿಯ ಕಾರ್ಯಕ್ರಮದ ವಿವರಗಳನ್ನು ನೀಡಿದ. ನಂತರದ ದಿನಗಳಲ್ಲಿ ನನ್ನ ನರ್ಸ್ ಆತನನ್ನು ಟಿವಿಯಲ್ಲಿ ನೋಡಿದೆನೆಂದು ಹೇಳಿದಳು.
ಬದುಕೆನ್ನುವುದು ಬರೀ ಹೋಲಿಕೆ ಮಾತ್ರ ಅಲ್ಲವಾಗಿದ್ದರೆ ಅದರ ಕಥೆಯೇ ಬೇರೆಯಾಗಿಬಿಡುತ್ತದಲ್ಲವೇ? ಹಾಗೆಯೇ ನಾನು ಇವರಿಗೆ ನಿಜವಾಗಿ ಸ್ಪಂದಿಸುತ್ತಿದ್ದೆನೇನೋ? ಆದರೆ, ಈ ಹಾಳಾದ ಹೋಲಿಕೆ ಆಗಾಗ ಹೆಗಲ ಮೇಲಿಂದ ಇಣುಕಿ ತಾನೂ ಜೊತೆಗೆ ಸೇರಿ ವಿಚಾರಗಳನ್ನು ಮಂಥಿಸಲು ಮುಂದಾಗುತ್ತದೆ. ವೃತ್ತಿಪರವಾಗಿ ಹೀಗೆ ಮಾಡುವುದು ದೊಡ್ಡ ತಪ್ಪು. ಇಲ್ಲಿಯದೇ ಸಮಸ್ಯೆಗಳನ್ನು ಹೋಲಿಕೆಯ ಯಾವ ಬೆರಕೆಯೂ ಇಲ್ಲದೆ ನೋಡುವ ಅನುಭವ ಬಂದಿದೆಯಾದರೂ, ಬಡತನದ ವಿಚಾರ ಬಂದಾಗ ಸುಭಿಕ್ಷವಾಗಿರುವ ಇಂದಿನ ಈ ದೇಶಕ್ಕೂ, ಭಾರತಕ್ಕೂ ಮನಸ್ಸು ಒಂದು ಸೇತುವೆಯನ್ನು ಹೆಣೆದು ಬಿಡುವ ದುಸ್ಸಾಹಸಕ್ಕೆ ಇಳಿಯುತ್ತದೆ.
ಈ ದೇಶಕ್ಕೆ ಮೊದಲು ಬಂದಾಗ ಎಲ್ಲ ಇಂಗ್ಲಿಷರೂ ನನ್ನ ಕಣ್ಣಿಗೆ ಒಂದೇ ರೀತಿಯಲ್ಲಿ ಕಾಣುತ್ತಿದ್ದರು. ಇದೀಗ ಪ್ರತಿ ದಿನ ಹಲವು ಮಂದಿಯೊಂದಿಗೆ ಬೆರೆಯುವ ಕಾರಣ ಈ ಸಮಾಜದ ವಿವಿಧ ಸ್ತರದ ಜನರನ್ನು ಬಹುತೇಕ ನೋಟದಿಂದಲೇ ವಿಂಗಡಿಸುವ ಅನುಭವ ಬಂದಿದೆ. ಶ್ರೀಮಂತರು, ವಿದ್ಯಾವಂತರು, ದಡ್ಡರು, ನೊಂದವರು, ಅರಿಸ್ಟೋಕ್ರಾಟ್ ಗಳು, ಸಂಪ್ರದಾಯಸ್ಥರು, ಹಣವಿಲ್ಲದವರು ಹೀಗೆ ಬಹುತೇಕರನ್ನು ಶೀಘ್ರ ಗುರುತಿಸಲು ಸಾಧ್ಯವಾಗಿದೆ. ಮೊದ ಮೊದಲು “ನಾನು ಈ ದೇಶಕ್ಕೆ ಹೊಸಬಳು, ಇಲ್ಲಿನವರೇ ನನ್ನನ್ನು ಅನುನಯಿಸಿ ಮಾತನಾಡಿಸಲಿ” ಎಂದು ಬಯಸುತ್ತಿದ್ದ ಮನಸ್ಸು, ಇದೀಗ ಪರದೇಶದ ವೈದ್ಯರೊಡನೆ ಸಾಮಾನ್ಯ ಸಹನೆಯಿಂದಲೇ ವರ್ತಿಸುವ ಇಂಗ್ಲಿಷರನ್ನು ಅಂತಹ ಯಾವ ಅಪೇಕ್ಷೆಗಳೂ ಇಲ್ಲದೆ, ಪೂರ್ವಾಗ್ರಹಗಳನ್ನು ಮೀರಿದ ಮನುಷ್ಯರನ್ನಾಗಿ ನಿರ್ವಂಚನೆಯಿಂದ ಸ್ವೀಕರಿಸುತ್ತದೆ. ಪ್ರಪಂಚದ ಎರಡನೇ ಯುದ್ಧದ ನೇರ ನೆನಪಿರುವ ತಲೆಮಾರುಗಳು ಬಹಳ ಕಷ್ಟಗಳನ್ನು ಸಹಿಸಿ ಬದುಕಿದಂತಹ ಜನ. ಆ ಕಾಲ ಇವರಿಗೆ ಕಷ್ಟ ಸಹಿಷ್ಣತೆಯನ್ನು ಸಂದರ್ಭನುಸಾರವಾಗಿ ಕಲಿಸಿದೆ. ಇಂದಿನ ಪೀಳಿಗೆಯ ಜನರಲ್ಲಿ ಕಷ್ಟಗಳಿಲ್ಲದಿದ್ದರೂ ಬದುಕು ಇನ್ನಿಲ್ಲದ ಒತ್ತಡಗಳಿಗೆ ತುತ್ತಾಗಿದೆ. ಅತ್ಯಲ್ಪ ನೋವಿಗೂ ಇವರು ಅಂಜಿ ಓಡುತ್ತಾರೆ. ಇಡೀ ದೇಶದ ಅರ್ಧ ಜನರಿಗೆ ಜೇಡಗಳು, ಜೇನ್ನೊಣಗಳನ್ನು ಕಂಡರೆ ಅತ್ಯಂತ ಹೆದರಿಕೆ. ಅದರಂತೆಯೇ ದಂತವೈದ್ಯರೆಂದರೆ ಮೈಯೆಲ್ಲ ನಡುಕ! ಬಹುತೇಕರು ಹಾಗಂತ ಹೇಳಿದ ನಂತರವೇ ‘ಹಲೋ’ ಎನ್ನುವುದು. ಅಜೈವಿಕ ಭಯಗಳಿಂದ ದಂತ ವೈದ್ಯರಲ್ಲಿ ಮೂರ್ಛೆಹೋಗುವ ಮಂದಿ ಪೋಲೀಸರು, ಫೈರ್ ಪೈಟರ್ ಗಳು ಇಲ್ಲವೇ ಮಿಲಿಟರಿ ಗಂಡಸರೇ ಆಗಿರುವ ಕಾರಣ ನಮ್ಮಲ್ಲಿ ಇಂತಹ ಗಂಡಸರ ಬಗ್ಗೆ ಹಲವು ಜೋಕುಗಳು ಕೂಡ ಚಾಲ್ತಿಯಲ್ಲಿವೆ.
ಕೆಲವು ಜನರು ಇದನ್ನು ನೇರವಾಗಿ ಹೇಳಲಾಗದೆ, ಹತ್ತಿಕ್ಕಿಕೊಳ್ಳಲಾಗದೆ ಅತಿಯಾಗಿ ಮಾತನಾಡುವುದು, ವ್ಯಗ್ರರಾದಂತೆ ಕಾಣುವುದು, ಒರಟಾಗಿ ನಡೆದುಕೊಳ್ಳುವುದು ಸಾಮಾನ್ಯ. ಮೊದಲೆಲ್ಲ “ನಾನೆಷ್ಟು ಚೆನ್ನಾಗಿ ನಡೆಸಿಕೊಂಡರೂ ಈ ಬ್ರಿಟಿಷರಿಗೆ ಏನೆಲ್ಲ ಕೊಬ್ಬು” ಎಂದು ನನ್ನ ಮನಸ್ಸಿಗೆ ಖೇದವಾಗುತ್ತಿತ್ತು. ಇದೀಗ ಇಂತಹ ಜನರನ್ನು ನೋಡಿದ ಕೂಡಲೇ ಅವರ ಭಯಗಳಿಗೆ ಶಮನ ನೀಡಬಲ್ಲಂತ ಮಾತುಗಳನ್ನು ಆಡುವ ಅಗತ್ಯದ ಅರಿವು ಮೂಡಿದೆ. ಇವರ ಬಗ್ಗೆ ಈಗ ಅನುಕಂಪವಿದೆಯೇ ಹೊರತು ಬೇಸರವಾಗುವುದಿಲ್ಲ. ಇಂತಹ ಇಂಗ್ಲೆಂಡಿನಲ್ಲಿ ಕನ್ನಡಿಗಳಾದ ನನ್ನ ಹೊಸ ಬದುಕಿನ ಪ್ರಯಾಣ ಆರಂಭವಾಗಿತ್ತು.
( ಮುಂದುವರೆಯುವುದು)
ಡಾ. ಪ್ರೇಮಲತಾ ಲೇಖಕಿ ಮೂಲತಃ ತುಮಕೂರಿನವರು, ಕಳೆದ ೨೧ ವರ್ಷಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ‘ಐದು ಬೆರಳುಗಳುʼ, ‘ತಿರುವುಗಳುʼ, ‘ನಂಬಿಕೆಯೆಂಬ ಗಾಳಿಕೊಡೆʼ ಇವರ ಪ್ರಕಟಿತ ಕಥಾಸಂಕಲನಗಳು. ‘ಕೋವಿಡ್ ಡೈರಿʼ ಎಂಬ ಅಂಕಣ ಬರಹಗಳ ಪುಸ್ತಕ ಮತ್ತು ‘ಬಾಯೆಂಬ ಬ್ರಮ್ಹಾಂಡʼ ಇವರ ಇತರೆ ಪುಸ್ತಕಗಳು. ‘ಐದು ಬೆರಳುಗಳುʼ ಕಥಾ ಸಂಕಲನಕ್ಕೆ ಡಾ.ಹೆಚ್. ಗಿರಿಜಮ್ಮ ಪ್ರಶಸ್ತಿ ದೊರಕಿದೆ.
Nice article Madam.. ನಮಗೂ ಅವರಿಗೂ ತುಂಬಾನೇ ವ್ಯತ್ಯಾಸ ಅಲ್ಲ್ವಾ …
ಖಂಡಿತ ನಿಜ ಸರ್