ನಗ್ನ ನಕ್ಷತ್ರ
ತುಟಿಯಂಚಿನ ಜೊಲ್ಲಲಿ
ನಕ್ಷತ್ರಗಳ ನಗ್ನಚಿತ್ರ
ಮಾಯಕದ ದಂಡೆಯೇ ಮುಡಿಗೇರಿದೆ.
ಬೆರಳಿಂದ ಬೆರಳಿಗೆ
ಹೊಕ್ಕಳಿಂದ ಹೊಕ್ಕಳಿಗೆ
ಬೆಸೆದುಕೊಂಡ ಸ್ಮೃತಿಗೆ ಸಾವಿಲ್ಲ.
ಇರುಳ ಹೊಳಪಿಗೆ
ರೆಕ್ಕೆ ಜೋಡಿಸುತ್ತ ಮುಚ್ಚಿದ ನಯನಗಳು
ಕಪ್ಪುರಂಧ್ರದ ಒಳಹೊಕ್ಕವು
ಕಾಲದ ಅರಿವಿಲ್ಲ
ಕನ್ನಡಿಯಲ್ಲಿ ಅಮೋಘ ಘಮ ಘಮದ
ಹೂಗಳು.
ಗಾಳಿಯನ್ನೆ ಹೊದ್ದ ಹಾದಿ
ಜೀವ ಉಸಿರ ಚೆಲುವಿಗೆ
ನಿತಾಂತ ನಡೆಯುತ್ತಲೇ ಇದೆ.
ಲೋಕದ ನಿನಾದಗಳನ್ನೆಲ್ಲಾ
ಆ ನುಡಿವಣ್ಣನ ನಾಸಿಕದ ತುದಿಯಲ್ಲಿದೆ.
ಮಂದ್ರ ಸ್ಥಾಯಿಯಲ್ಲಿ ಎದೆಗೋಡೆಯ
ಕವಾಟ ಸರಿಸಿ ಗುನುಗುತ್ತಿದ್ದಾಳೆ ಆಕೆ.
ಹೇ… ಕೃಷ್ಣಾ.. ಮುರಾರಿ..
ಓ ಸಾವೇ
ನಿನ್ನ ಹಂದರದ ಪರದೆಯನ್ನೊಮ್ಮೆ
ಕಳಚಿಟ್ಟುಬಿಡು.
ಲೋಕದ ಮೋಹ
ಮಮಕಾರಗಳು ಚಿಗುರುತಿವೆ.
ದೆಸೆದಿಕ್ಕುಗಳು ಚೈತ್ರಚಿಗುರ
ಮೀಯುತಿವೆ
ಮನದ ಬನಿ ಕೆನೆಗಟ್ಟಿದೆ.
ಓ..ಸಾವೇ ಕನಿಕರಿಸು
ಕಾಡಿಗೆಯ ಕಣ್ಣು
ಕಪೋಲದ ಕೆಂಪು
ಕೆಂದಾವರೆ ತುಟಿಗಳು ಅರಳಿ ನಗುತ್ತಿವೆ.
ಮರಗಿಡ ನದಿ ಬನದ
ಚಿತ್ರಕಾರನೊಬ್ಬ
ಹಸ್ತಾಕ್ಷರವ ಮೂಡಿಸುತ್ತಲೇ ಇದ್ದಾನೆ.
ದೃಗ್ಗೋಚರ ಶ್ರಾವ್ಯ ಕಿವಿ ತುಂಬುತ್ತಿದೆ.
ತುರುಬಿಗೆ ನಿನ್ನೆಯಷ್ಟೇ
ಗುಲಾಬಿಯೊಂದ ಮುಡಿಸಿದ ಕೈ
ಕರೆಯುತ್ತಿದೆ ಕಾಣದ ಕಡಲಿನ
ತಟದಿ ಉಯ್ಯಾಲೆಗೆ
ಓ ಸಾವೇ
ಸುಮ್ಮನಿದ್ದು ಬಿಡು ಸ್ವಲ್ಪಕಾಲ
ಕೆದರು ತಲೆಯ ಮರಗಳ
ನೆತ್ತಿ ಹಸಿರ ಮುಪ್ಪುರಿಗೊಳ್ಳುವವರೆಗಾದರೂ
ಆ ನೆರಳಬುಡದಲ್ಲಿ
ನನ್ನಿನಿಯನಎದೆಯ
ನಿಬಿಡ ಕೇಶದ ಗೂಡಲ್ಲಿ ನಾ
ಬೆರಳಾಡಿಸಿ ಬರುವವರೆಗಾದರೂ.
ಶೂನ್ಯದ ಮೋಹ
ಅದೆಷ್ಟೋ ಸಣ್ಣದೊಡ್ಡ ಚಿತ್ರ ವಿಚಿತ್ರ
ಆಕಾರದ ಸಂಖ್ಯೆಗಳು ಮುಖಬಲೆಗಳು,
ಸ್ಥಾನ ಬೆಲೆಗಳು ಗೋಜಲಿನ ಗೂಡನ್ನು
ಕಂಡಾಗಲೆಲ್ಲಾ ವರ್ತುಲಾಕಾರದ ಭೂಮಿತೂಕದ
ಶೂನ್ಯಕ್ಕೆ ಶರಣಾಗುತ್ತದೆ ಮನ.
ಅಸ್ಮಿತೆಯ ಹಂಗೇ ಇಲ್ಲದೇ
ಮನೆಯಂಗಳದ ಮೂಲೆಯಲ್ಲಿ
ಅಡಿಕೆ ಸಿಪ್ಪೆ ಸುಲಿಸುಲಿದು
ಒಟ್ಟುಮಾಡುವ ಪಾರೋತಿ,
ನೆನಪಾಗುತ್ತ ನೆಲದಚಿಗುರೇ
ಅವಳಾದಂತೆ ಕನಸು
ಅಪ್ಪಟ ಮುಖವನ್ನೊಮ್ಮೆ ಮುದ್ದಿಸಬಯಸುತ್ತದೆ ಮನ.
ತ್ರಿಕರಣ ಶುದ್ಧತೆ ಪದ ಕೇಳದೆಯೂ
ಅದರ ತಾದ್ಯಾತ್ಮ ಸ್ವರೂಪಿಯೇ
ಆದ ಮಾದ
ತೆಂಗಿನಕಾಯಿ ಸಿಪ್ಪೆ ಸುಲಿಸುಲಿದು
ತೆಗೆಯುತ್ತಾ ಆಗಾಗ ಹೂಂಕರಿಸುತ್ತಾ
ಕತ್ತಿಯ ಸಿದ್ಧಿಯಲ್ಲಿ ತನ್ಮಯನಾಗುತ್ತಿದ್ದುದು
ನೆನಪಾಗುತ್ತ
ಅವನೆಂದರೆ ಬೆಳಕಿನ ಪುಂಜ ಎನ್ನಿಸುತ್ತದೆ.
ಆ ಕತ್ತಿಯ ಸಿದ್ಧಿಯ ಕರಗತಕ್ಕೆಳೆಸುತ್ತದೆ ಮನ
ಕೊಡಲೇನೂ ಇಲ್ಲ,
ಕಣ್ಣ ಮಧುರ ಮೈತ್ರಿಯ ಕಂಪು ಬಿಟ್ಟು
ಇಲ್ಲದ ಕಡೆಗಳಲ್ಲಿ ಅರಳುವ ಹೃದಯದ ಪರಿಮಳ
ಚಕ್ಷುವಿನ ಕಾಂತಿಗೆ ಬೆರಗಾಗುತ್ತದೆ ಮನ.
ತಳತಳಿಸುವ ಬೂಟು ಶೂಗಳ
ತೊಟ್ಟ ಫಾರಿನ್ ರಿಟರ್ನ್ಡ್ ಗಳ
ವಿಚಿತ್ರ ಅಕ್ಸೆಂಟ್ ಗಳ ಭಯಂಕರ ಹಾವಭಾವದ
ಮೈಕುಣಿತದ ಭಾಷೆಗಳ ನೋಡುತ್ತಾ
ಸುಖಾತೀಸುಖದ ಸಂಭ್ರಮ ಹೊತ್ತ
ಮುಖಗಳ ಒಳಮುಖದ ಅಡಿಯಲ್ಲಿ
ಮೂಡುವಜಂಬದ ಬೀಜ
ಬೃಹದಾಕಾರವಾಗುತ್ತ
ಸಹನೆಯಕಟ್ಟೆ
ಒಡೆದುಹೋದ ಆಣೆಕಟ್ಟಾಗುತ್ತದೆ.
ಅವರವರ ಭಂಗಿಯ
ಭಂಗಿತನಕ್ಕೆ ಕೆರಳುತ್ತಲೇ
ಅಪ್ಪಟ ದೇಸಿ, ದೈನೇಸಿಗಾಗಿ ಹಂಬಲಿಸುತ್ತದೆ ಮನ
ನಾಗರೇಖಾ ಗಾಂವಕರ ದಾಂಡೇಲಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿ.
‘ಏಣಿ’, ‘ಪದಗಳೊಂದಿಗೆ ನಾನು (ಕವನ ಸಂಕಲನಗಳು), ಪಾಶ್ಚಿಮಾತ್ಯ ಸಾಹಿತ್ಯ ಲೋಕ- (ಪರಿಚಯಾತ್ಮಕ ಲೇಖನಗಳ ಅಂಕಣ ಬರಹ)
(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ