“ನಾವು ಕಪ್ಪಗೆ ಇದ್ದೇವೆ ನೋಡಿ. ಅದೂ ದೇವರ ಕೊಟ್ಟ ವರಾ. ಆ ಬಣ್ಣ ಹೋಗಬಾರದು ಅಂತಲೇ ದೇವರು ನಮಗೆ ಅಡವಿಯೊಳಗ ಇಟ್ಟಿದಾರೆ. ನಾವೂ ನಿಮ್ಮಂಗ ಪೇಟೆ ಒಳಗ ತಿರುಗಾಡಿದರ ನಮ್ಮ ಬಣ್ಣ ಕಳದು ಹೋಗತೈತಿ. ಆಮೇಲೆ ನಮಗೂ ಇತರರಿಗೂ ಏನು ವ್ಯತ್ಯಾಸ ಹೇಳ್ರಿ,” ಎಂದು ಕೈತಾನ್ ಅನ್ನುತ್ತಿದ್ದ.ಅದು ಗೂಢ ತತ್ವ ದರ್ಶನದ ಮಾತಾಗಿ ನನಗೆ ಕೇಳಿಸುತ್ತಿತ್ತು. `ಅಸ್ಮಿತೆ’ ಅಂತ ಒಂದಿದೆ ಅಂತ ಕೈತಾನನಿಗೆ ಗೊತ್ತಿರಲಿಕ್ಕಿಲ್ಲ. ಆದರೆ ಅವನಿಗೆ ಅದು ಇತ್ತು”
ಅಡವಿಯಲ್ಲಿ ಹುಟ್ಟಿದ ಸಿದ್ದಿ ಜನಾಂಗದ ನಾಯಕ ಕೈತಾನ್ ಕುರಿತು ಒಂದು ಆತ್ಮೀಯ ಬರಹ.
ಮಿತಾನ್ ಗೋಪಿಕೃಷ್ಣ ಅವರಿಗೆ ಮೊನ್ನೆ ಯಾಕೋ ಫೋನು ಮಾಡಿದ್ದೆ. ಮಾತು ಮುಗಿಯುವ ಹೊತ್ತಿಗೆ ಅವರು “ಏ ಹೃಷೀ, ನಮ್ಮ ಕೈತಾನ್ ಸಿದ್ಧಿ ತೀರಿಕೊಂಡನಪ್ಪಾ, ನಿನ್ನೆ,” ಅಂದರು. “ಅಯ್ಯೋ ಯಪ್ಪಾ. ಎಂಥಾ ಸುದ್ದೀ ಹೇಳಿದಿರಿ. ಮೊನ್ನೆ ಮೊನ್ನೆ ಅಷ್ಟ ಭೇಟಿ ಆಗಿದ್ವಿ. ಛೇ ಛೇ” ಅಂದೆ. ಮಾತು ಮುಗಿಯಿತು. ಮನಸ್ಸಿನ ಕಿರಿಕಿರಿ ಹಾಗೇ ಉಳಿಯಿತು.
ಹಳ್ಳಿಗಾಡಿನ ಕಲಾವಿದರನ್ನು ಗುರುತಿಸಿ ಪೋಷಿಸುವ ಮಿತಾನ್ ಸಂಸ್ಥೆ ಕಟ್ಟಿ ಬೆಳೆಸಿದ ಗೋಪಿಕೃಷ್ಣ ಅವರ ಜೊತೆಗೆ ಅಂದೊಂದು ದಿನ ಕರ್ನಾಟಕ – ಗೋವಾ ಗಡಿಯ ಅಡವಿ ಅಂಚಿನ ಹಳ್ಳಿಗಳನ್ನು ನೋಡಲು ಹೋಗಿದ್ದೆವು. ಅಲ್ಲಿ ಸಿಕ್ಕವನು ಕೈತಾನ್ ಸಿದ್ಧಿ. ಕೈತಾನ್ ಕರ್ನಾಟಕ ಸಿದ್ಧಿ ವಿಕಾಸ ಸಂಘದ ಸಂಸ್ಥಾಪಕ ಅಧ್ಯಕ್ಷ. ಅವನ ಜೀವನ ಕತೆ ಬಹಳ ಆಸಕ್ತಿ ಹುಟ್ಟಿಸಿತು. ಅವನ ಆತ್ಮ ಚರಿತ್ರೆ ಎಂದರೆ ಸಿದ್ಧಿ ಸಮುದಾಯದ ಜೀವನ ಚರಿತ್ರೆ ಎನ್ನಿಸುವಷ್ಟು ಅದು ಪ್ರಾತಿನಿಧಿಕವಾಗಿತ್ತು.
ಅವನು ತನ್ನ ಸಮುದಾಯದ ಕಲ್ಯಾಣಕ್ಕಾಗಿ ಜೀವನದುದ್ದಕ್ಕೂ ಶ್ರಮಿಸಿದ. ಹೆಚ್ಚಿನ ದುಡ್ಡಿಲ್ಲದೇ, ಅವನು ತನ್ನ ಸಮಾಜವನ್ನು ಸಂಘಟಿಸುತ್ತಿದ್ದ. ಅವರಿಗೆ ಒಳ್ಳೆಯದಾಗಲೆಂದು ಹೆಂಗಸರಿಗೆ ಸ್ವಸಹಾಯ ಸಂಘ, ಗಂಡಸರಿಗೆ ಜೇನು ಉತ್ಪಾದಕರ ಸಂಘ, ಹುಡುಗರಿಗಾಗಿ ಫುಟಬಾಲ್ ಕ್ಲಬ್ ಎಲ್ಲ ಕಟ್ಟಿದವನು. ಹುಡುಗ- ಹುಡುಗಿಯರಿಗೆ ಶಿಕ್ಷಣ ದೊರಕುವಂತೆ ಮಾಡಿ, ಅವರಿಗೆ ಮೀಸಲಾತಿ ಮುಂತಾದ ಸರಕಾರಿ ಸವಲತ್ತು ಸಿಗಬೇಕೆಂದು ಓಡಾಡಿಕೊಂಡಿದ್ದವನು. ನಿವೃತ್ತಿ ಹೊಂದಿದ ನಂತರವೂ ಊರೂರು- ಹಾಡಿ ಹಾಡಿ ತಿರುಗುತ್ತ ತಮ್ಮ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದವನು. ಅವನಿಗೆ ರಾಜಕೀಯ ಬೆಂಬಲವಾಗಲೀ, ಮಹತ್ವಾಕಾಂಕ್ಷೆಯಾಗಲೀ ಇರಲಿಲ್ಲ.
ಅವನು ನನಗಿಂತ ವಯಸ್ಸಿನಲ್ಲಿ ಹಿರಿಯ. ಆದರೆ ಅವನ ಸರಳತೆ, ಆತ್ಮೀಯತೆ, ನಗುನಗುತ್ತಾ ಮುಗ್ಧತೆಯಿಂದ ಮಾತಾಡುವ ಶೈಲಿ ನನ್ನನ್ನು ಸೆಳೆಯಿತು. ನಾಗರಿಕರೆಂದು ಅನ್ನಿಸಿಕೊಳ್ಳುವ ನಗರವಾಸಿಗಳ ಕಪಟ ಅವನಲ್ಲಿ ಇಲ್ಲದೇ ಇರುವುದು ಇದು ನನಗೆ ಬಹಳ ಹಿಡಿಸಿತು. ಹತ್ತು ನಿಮಿಷ ಮಾತಾಡುವುದರೊಳಗೆ ನಾವು ಎಷ್ಟೋ ವರ್ಷಗಳಿಂದ ಒಬ್ಬರನ್ನೊಬ್ಬರು ಬಲ್ಲವರೇನೋ, ಹಳೆಯ ಕಳ್ಳುಬಳ್ಳಿಯವರೇನೋ ಎನ್ನಿಸುವಷ್ಟು ಹಚ್ಚಿಕೊಂಡುಬಿಟ್ಟೆವು. ಮುಂದಿನ ಕೆಲವು ತಿಂಗಳುಗಳಲ್ಲಿ ನಾವು ಅನೇಕ ಸಾರಿ ಮಾತಾಡಿದ್ದೇವೆ. ಪ್ರತಿ ಸಾರಿ ನನಗೆ ಇಂತಹಾ ಮನುಷ್ಯರು ಇನ್ನೂ ಇದ್ದಾರಲ್ಲಾ ಅಂತ ಅನ್ನಿಸಿದೆ. ಇಂತಹವರಿಂದಾಗಿಯಾದರೂ ಮಾನವ ಜಾತಿಯ ಬಗ್ಗೆ ಆಶಾಭಾವ ಇಟ್ಟುಕೊಳ್ಳಬಹುದು, ಅಲ್ಲವೇ? ಎಂದು ಅನೇಕ ಬಾರಿ ನನಗೆ ನಾನೇ ಸಮಾಧಾನ ಹೇಳಿಕೊಂಡಿದ್ದೇನೆ.
ಅಂದು ಅವನು ನಮಗೆ ಖಾನಾಪುರ ತಾಲೂಕಿನ ಕಾಡಿನಲ್ಲಿ ಭೇಟಿಯಾಗಿದ್ದು ತಮ್ಮ ಸಮುದಾಯದ ಜನರ ಸಭೆಯೊಂದರಲ್ಲಿ. “ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿದ್ಧಿಗಳನ್ನು ಪರಿಶಿಷ್ಟ ಪಂಗಡದವರೆಂದು ಪರಿಗಣಿಸಲಾಗಿದೆ. ಆದರೆ ಬೆಳಗಾವಿಯಲ್ಲಿ ಹಾಗೆ ಮಾಡಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ನಮ್ಮ ಸಮಾಜದ ಸದಸ್ಯರ ಸಂಖ್ಯೆ ಕಡಿಮೆ. ನಮ್ಮವರು ಕೇವಲ 600-700 ಜನರಿದ್ದಾರೆ. ಇಲ್ಲಿ ಸರಕಾರದವರನ್ನು ಹಿಡಿದು ಕೇಳುವವರು ಯಾರೂ ಇಲ್ಲ. ನಾಯಕತ್ವದ ಕೊರತೆಯಿಂದಾಗಿ ನಾವು ಈ ಪರಿಸ್ಥಿತಿಯಲ್ಲಿ ಇದ್ದೇವೆ. ಉತ್ತರ ಕನ್ನಡದಲ್ಲಿ ಸಿದ್ಧಿಗಳು ಉನ್ನತ ಶಿಕ್ಷಣ ಪಡೆದು ಕಾಲೇಜು ಶಿಕ್ಷಕರಾಗಿದ್ದಾರೆ, ಸರಕಾರಿ ಅಧಿಕಾರಿಗಳಾಗಿದ್ದಾರೆ. ಆದರೆ ಇಡೀ ಬೆಳಗಾವಿ ಜಿಲ್ಲೆಯಲ್ಲಿ ಹೈಸ್ಕೂಲು ಓದಿದ ಸಿದ್ಧಿಗಳೂ ಸಿಗುವುದಿಲ್ಲ’’ ಎಂದು ಅವನು ಆ ದಿನ ಆ ಸಭೆಯಲ್ಲಿ ಹೇಳಿದ.
“ಬೆಳಗಾವಿ ಜಿಲ್ಲೆಯ ಸುಮಾರು ನೂರು ಕುಟುಂಬಗಳಲ್ಲಿ ಯಾರಿಗೂ ಒಂದು ತುಂಡು ಭೂಮಿಯೂ ಇಲ್ಲ. ಇಲ್ಲಿನ ಗಂಡಸರೆಲ್ಲ ವರ್ಷದ ಆರು ತಿಂಗಳು ಗೋವಾದ ಇಟ್ಟಂಗಿ (ಇಟ್ಟಿಗೆ) ಭಟ್ಟಿಗಳಲ್ಲಿ ದುಡಿಯಲು ಹೋಗುತ್ತಾರೆ. ಹೆಂಗಸರೆಲ್ಲ ಕೃಷಿ ಜಮೀನಿನಲ್ಲಿ ಕೂಲಿಗೆ ಹೋಗುತ್ತಾರೆ. ಗಂಡು ಮಕ್ಕಳು ಪ್ರಾಥಮಿಕ ಶಾಲೆಯ ನಂತರ ಓದು ನಿಲ್ಲಿಸಿ, ಮುಂಬೈ- ಗೋವಾಗಳಲ್ಲಿ ಕಟ್ಟಡ ಕಾರ್ಮಿಕರಾಗಲೋ, ಬಂದರುಗಳಲ್ಲಿ ಕೂಲಿಯಾಗಲೋ ಹೋಗಿಬಿಡುತ್ತಾರೆ. ಹೆಣ್ಣು ಮಕ್ಕಳು ಹದಿನಾರು ವಯಸ್ಸಿನ ತನಕ ಮನೆಯಲ್ಲಿ ಇರುತ್ತಾರೆ. ಒಂದೆರಡು ವರ್ಷದಲ್ಲಿ ಅವರ ಮದುವೆಯ ತಯಾರಿ ನಡೆಯುತ್ತದೆ. ಆ ವರ್ಷದ ಸೂಟಿಯಲ್ಲಿ ಇಟ್ಟಂಗಿ ಭಟ್ಟಿಯಿಂದ ಬಂದ ಪುಣ್ಯಾತ್ಮನೊಬ್ಬನಿಗೆ ಅವಳನ್ನು ತೋರಿಸಿ ಮದುವೆ ಮಾಡುತ್ತಾರೆ. ಮತ್ತೆ ಇವರ ಜೀವನ ಚಕ್ರ ಸುತ್ತಿದ್ದಲ್ಲಿಯೇ ಸುತ್ತುತ್ತದೆ. ಕಣ್ಣಿಗೆ ಕಾಣುವ ಯಾವ ಬದಲಾವಣೆಗಳೂ ಇಲ್ಲದಂತೆ ಇವರ ಜೀವನ ನಡೆಯತೊಡಗುತ್ತದೆ. ಇದು ಶತಮಾನಗಳಿಂದ ನಡೆಯುತ್ತ ಬಂದಿದೆ. ಈಗ ನಾವು ಏನೂ ಮಾಡದಿದ್ದರೆ ಅದು ಮುಂದಿನ ಹಲವು ಶತಮಾನಗಳಿಗೂ ಹೀಗೆಯೇ ಮುಂದುವರೆಯುತ್ತದೆ” ಎಂದು ಕೈತಾನ ಅಂದಿನ ಸಭೆಯಲ್ಲಿ ಹೇಳಿದ.
ಕಣ್ಣಿಗೆ ಕಾಣುವ ಯಾವ ಬದಲಾವಣೆಗಳೂ ಇಲ್ಲದಂತೆ ಇವರ ಜೀವನ ನಡೆಯತೊಡಗುತ್ತದೆ. ಇದು ಶತಮಾನಗಳಿಂದ ನಡೆಯುತ್ತ ಬಂದಿದೆ. ಈಗ ನಾವು ಏನೂ ಮಾಡದಿದ್ದರೆ ಅದು ಮುಂದಿನ ಹಲವು ಶತಮಾನಗಳಿಗೂ ಹೀಗೆಯೇ ಮುಂದುವರೆಯುತ್ತದೆ” ಎಂದು ಕೈತಾನ ಅಂದಿನ ಸಭೆಯಲ್ಲಿ ಹೇಳಿದ.
ಕೇರಳದಿಂದ ಹಿಡಿದು ಗುಜರಾತಿನ ತನಕ ಇರುವ ಸಿದ್ಧಿಗಳ ಬಗ್ಗೆ ಅವನು ಜನರಿಗೆ ವಿವರಿಸಿದ. ಅವರ ಸಾಮ್ಯ- ವೈವಿಧ್ಯ, ಜೀವನ ಮಟ್ಟ, ಬದುಕುವ ಶೈಲಿ, ಇವೆಲ್ಲದರ ಬಗ್ಗೆ ಹೇಳಿದ. ಕೆಲವು ಸಿದ್ಧಿಗಳು ಮುಸ್ಲೀಮರಾಗಿಯೂ, ಕ್ರಿಶ್ಚಿಯನ್ನರಾಗಿಯೂ ಬದಲಾಗಿದ್ದು, ಇನ್ನುಕೆಲವರು ಹಿಂದೂ ಆಚರಣೆಗಳನ್ನು ಮೈಗೂಡಿಸಿಕೊಂಡಿರುವುದನ್ನೂ ತಿಳಿಸಿದ. ಕೆಲವೇ ಕೆಲವು ಜನ ತಮ್ಮ ಮೂಲದ ಆಫ್ರಿಕನ್ ಬುಡಕಟ್ಟುಗಳ ಆಚರಣೆಗಳಾದ ಹಿರಿಯರ ಹಬ್ಬ ಇತ್ಯಾದಿಗಳನ್ನು ಉಳಿಸಿಕೊಂಡಿದ್ದಾರೆಂದೂ ಬೇಜಾರು ಮಾಡಿಕೊಂಡ. ನೀವು ಯಾವ ಧರ್ಮದವರಾಗಿದ್ದರೇನು, ನಮ್ಮ ಸಂಘಟನೆಗೆ ಸಂಬಂಧವಿಲ್ಲವೆಂದೂ, ನೀವೆಲ್ಲ ತಮ್ಮ ಸಂಘಟನೆಯ ಸಹಾಯ ಪಡೆಯಬಹುದೆಂದೂ ಘೋಷಿಸಿದ.
ಅವರಿಗೆ ಬೇರೆ ಬೇರೆ ಕಡೆಗಳಲ್ಲಿ ಸಿದ್ಧಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿಹೇಳಿದ. ಮುಂಬೈ- ದೆಹಲಿಯಲ್ಲಿ ಸಿದ್ಧಿಗಳನ್ನು `ವೆಸ್ಟ್ ಇಂಡೀಸ್’ ನವರೆಂದು ತಿಳಿಯುವುದು, ಕುರಿತೋದದೆಯಂ ಕುಷಾಗ್ರಮತಿಗಳಾದ ಕರ್ನಾಟಕದ ಜನ ಸಿದ್ಧಿಗಳಾರಿಗೂ ಕನ್ನಡ ಬರುವುದೇ ಇಲ್ಲವೆಂದು ತಿಳಿಯುವುದು, ಇವರೊಂದಿಗೆ ಇಂಗ್ಲೀಷು ಮಾತಾಡಲು ಪ್ರಯತ್ನಿಸುವುದು, ಹಿರಿಯ ಅಧಿಕಾರಿಯೊಬ್ಬ ನೀವು ಆಫ್ರಿಕಾದಿಂದ ಯಾವಾಗ ಬಂದಿರಿ ಎಂದು ಕೇಳಿದಾಗ ಈಗ ಜಸ್ಟ್ ಸರ್, ಒಂದು ಮೂರು ನೂರು ವರ್ಷದ ಹಿಂದಿನ ಬಸ್ಸಿಗೆ ಬಂದೆ, ಎಂದು ಹೇಳಿ ಗಂಭೀರ ಸಭೆಯೊಂದನ್ನು ತಿಳಿಯಾಗಿಸಿದ್ದನ್ನು ನೆನೆದ. “ಇವೆಲ್ಲ ನಡೆಯುತ್ತಿರುತ್ತದೆ, ನಾವು ಮುಂದೆ ಹೋಗ್ತಾ ಇರಬೇಕು” ಎಂದು ಹೇಳಿ ಅವರನ್ನು ಹುರಿದುಂಬಿಸಿದ.
ಕೈತಾನ ಕತೆ:
ಆಫ್ರಿಕಾ ಮೂಲದ ಸಿದ್ಧಿ ಜನಾಂಗದ ಕೈತಾನ್ ಅಡವಿಯಲ್ಲಿ ಹುಟ್ಟಿದವನು. ಹೈಸ್ಕೂಲು ಏಳನೇ ಈಯತ್ತೆ ಕಲಿಯುತ್ತಿದ್ದಾಗ ಒಂದು ಮಜಾ ಘಟನೆ ನಡೆಯಿತು. ಒಂದು ದಿನ ಬಿಹಾರಿ ಐ ಎ ಎಸ್ ಅಧಿಕಾರಿಯೊಬ್ಬ ಕಾರವಾರದ ಅಡವಿಯ ಕ್ಯಾಂಪಿಗೆ ಬಂದಿದ್ದ. ಅವನಿಗೆ ಕಾಡಿನಲ್ಲಿ ಟ್ರೆಕ್ಕಿಂಗ್ ಮಾಡುವ ಆಸೆ. ಅವನಿಗೆ ಜಂಗಲ್ ತೋರಿಸಲು ಹೋಗುವಾಗ ಅಲ್ಲಿಯೇ ಇದ್ದ ರೇಂಜ್ ಅಧಿಕಾರಿಯೊಬ್ಬ ಕೈತಾನನನ್ನು ಜೀಪಿಗೆ ಹತ್ತಿಸಿಕೊಂಡ. ಹಿಂದಿನ ಸೀಟಿನಲ್ಲಿ ಮುದುಡಿಕೊಂಡು ಕೂತ ಹುಡುಗ ಅಡವಿಯನ್ನು ತನ್ನ ಮನೆ ಅಂಗಳದಂತೆ ತೋರಿಸುತ್ತಾ ನಡೆದಿದ್ದು ನೋಡಿ ಮೇಲಧಿಕಾರಿಗೆ ಭಾರಿ ಖುಷಿಯಾಯಿತು. ತಾವು ದಿನಾಲೂ ನೋಡುವ ಮಂಗ- ಹಕ್ಕಿ- ಉಡಗಳನ್ನು ಈ ಸಾಹೇಬ ಕಂಡೇನೋ ಇಲ್ಲೊ ಎನ್ನುವರಂಗೆ ನೋಡುತ್ತಾನಲ್ಲಾ ಎಂದು ಕೈತಾನನಿಗೆ ಅನ್ನಿಸುತ್ತಿತ್ತು. ಅವನು ಒಂದೆರಡು ಹಕ್ಕಿ – ಚಿಟ್ಟೆಗಳ ಫೋಟೋ ಹೊಡೆಯಲು ಸಹ ಕೈತಾನ್ ನೆರವಾದ.
“ಇಸ್ ಛೋಟೆ ಕಾ ನಾಮ್ ಕ್ಯಾ ರೆ”, ಎಂದು ಬಡೆ ಬಾಬು ಆ ರೇಂಜರ್ ನನ್ನು ಕೇಳಿದ. ಹಿಂದಿ ಮಾತಾಡಿದ ಸಾಹೇಬನಿಗೆ ಕೈತಾನನೇ ಉತ್ತರ ಕೊಟ್ಟ. ಪಕ್ಕದ ಮನೆಯ ಸಾಬರ ಹುಡುಗರ ಹತ್ತಿರ ಆಟವಾಡುತ್ತ ಉರ್ದು ಕಲೆತಿದ್ದ ಕೈತಾನ ಅವನೊಂದಿಗೆ ಸಲೀಸಾಗಿ ಮಾತಾಡಿದ. ಎಷ್ಟು ಸಾರಿ ಹೇಳಿದರೂ ಆ ಸಾಹೇಬನಿಗೆ ಇವನ ಹೆಸರು ತಿಳಿಯದೇ ಹೋಗಿ, ಅವನು ತಾನು ರಿಟೈರ್ ಆಗುವವರೆಗೂ ಇವನನ್ನು `ಖೇತಾನ್ ಫ್ಯಾನ್’ ಎಂದೇ ಕರೆದ. ಹಾಗೆ ಕರೆದಾಗೊಮ್ಮೆ ಇವನು ಹಾಂ ಸಾಬ್, ಹಾಂ ಸಾಬ್ ಎಂದ. ನಗುನಗುತ್ತಾ ಅವನ ಮುಂದೆ ಹೋಗಿ ನಿಂತ.
ಹೀಗೆ ಯಾವುದೋ ಹಿಂದಿ ಮಾತಾಡುವ- ತಂದೂರಿ ರೋಟಿ ತಿನ್ನುವ ಸಾಹೇಬರಿಂದಾಗಿ ಈತ ನಾಲ್ಕನೇ ದರ್ಜೆ ನೌಕರನಾಗಿ ಅರಣ್ಯ ಇಲಾಖೆ ಸೇರಿದ. ನಂತರ ತನ್ನ ಪ್ರಾಮಾಣಿಕ ಕಸಬುದಾರಿಕೆಯಿಂದ ಹೆಸರು ಪಡೆದ. ಗಿಡ ಮರ, ಪ್ರಾಣಿ ಪಕ್ಷಿಗಳ ನಡುವೆ ಬೆಳೆದು ದೊಡ್ಡವನಾದ ಇವನಿಗೆ ಅರಣ್ಯ ಇಲಾಖೆಯ ಕೆಲಸ ಉಸಿರಾಡುವಷ್ಟೇ ಸಹಜವಾಯಿತು. ತನ್ನ ನೌಕರಿಯನ್ನು ಬದುಕಿನುದ್ದದ ಪಿಕ್ ನಿಕ್ಕಿನಂತೆ ಮುಗಿಸಿದ. ಜಿಲ್ಲೆಗೆ ವರ್ಗವಾಗಿ ಬಂದ ಎಲ್ಲ ಸಾಹೇಬರಿಗೆ ವಿಧೇಯನಾಗಿ ಕೆಲಸ ಮಾಡಿದ. ಕೆಳ ಹಂತದಲ್ಲಿ ಇಲಾಖೆ ಸೇರಿದವನು ಸೇವಾವಧಿಯ ಕೊನೆಗೆ ಮುಂಬಡ್ತಿ ಪಡೆದು ಗುಮಾಸ್ತನಾಗಿ ನಿವೃತ್ತಿ ಹೊಂದಿದ. ತನ್ನ ಹಿತಕ್ಕಿಂತ ತನ್ನ ಜನಾಂಗದ ಬಡವರ ಹಿತವೇ ಮುಖ್ಯವೆನ್ನುವಂತೆ ನಡೆದುಕೊಂಡಿದ್ದರಿಂದ ಒಳ್ಳೆ ಹೆಸರು ಗಳಿಸಿದ. ತನಗೆ ಸಮಯ ದೊರೆತಾಗ, ತಮ್ಮ ಜನರಿಗೆ ಸಾಧ್ಯವಾದಷ್ಟು ಸಹಾಯ ಮಾಡುತ್ತಿದ್ದ ಕೈತಾನ್, ನಿವೃತ್ತಿಯ ನಂತರ ಪೂರ್ಣಾವಧಿ ಅವರ ಸೇವೆ ಮಾಡಿದ. ಸಿದ್ಧಿ ಜನಾಂಗದವರು ಯಾರಿಗಾದರೂ ತೊಂದರೆಯಾದರೆ, ತನ್ನ ಕುಟುಂಬದವರಿಗೆ ತೊಂದರೆ ಅಂತಂದರೆ ಮುಂದಾಗಿ ಸಹಾಯ ಮಾಡುತ್ತಿದ್ದ. ತನಗೆ ದಕ್ಕಿದಷ್ಟು ಶಿಕ್ಷಣದಿಂದ ಅವನು ತನ್ನ ಸುತ್ತಲಿನ ಜೀವನವನ್ನು ಗ್ರಹಿಸುತ್ತಿದ್ದ. ಇತರರಿಗೆ ತಿಳಿಸುತ್ತಿದ್ದ. ಹೈದರಾಬಾದಿನ ಹಬಷೀಗಳು, ಗುಜರಾತಿನ ಸೀಧೀ ಜನಾಂಗದವರ ಜೀವನದಲ್ಲಿ ಏನು ನಡೆಯುತ್ತಿದೆ ಎಂದು ಪತ್ರಿಕೆ- ನಿಯತಕಾಲಿಕಗಳನ್ನು ಓದಿ ತಿಳಿದುಕೊಳ್ಳುತ್ತಿದ್ದ. ಅಲ್ಲಿನ ತಮ್ಮ ಜನರ ಸಂಘಟನೆಗಳೊಂದಿಗೆ ಸಂಪರ್ಕ ಬೆಳೆಸಲು ಪ್ರಯತ್ನಿಸುತ್ತಿದ್ದ.
ಕೈತಾನನ ಗಂಡು ಮಕ್ಕಳು ಚೆನ್ನಾಗಿ ಓದಿ ಒಳ್ಳೆಯ ಕೆಲಸದಲ್ಲಿ ಇದ್ದರು, ಮದುವೆಯಾದರು. ಐದಾರು ವರ್ಷ ತನ್ನ ಸಂಘದ ಚಟುವಟಿಕೆ ನಡೆಸಿದ ನಂತರ ಅವನು ಅಪಘಾತಕ್ಕೆ ಈಡಾದ. ಒಬ್ಬರ ಬೈಕಿನಲ್ಲಿ ಹಿಂದೆ ಕೂತುಕೊಂಡು ಹೋಗುತ್ತಿದ್ದಾಗ ಅದು ಕಾರೊಂದಕ್ಕೆ ಡಿಕ್ಕಿ ಹೊಡೆದು ಗಾಯಗೊಂಡ. ಸುಮಾರು ಒಂದು ತಿಂಗಳು ಆಸ್ಪತ್ರೆ- ಮನೆಯಲ್ಲಿ ಜೀವ ಸವೆಸಿ, ಕೊನೆಗೊಂದು ದಿನ ತೀರಿಕೊಂಡ. ನನಗೆ ಅವನ ಬಗ್ಗೆ ಗೌರವ ಇರುವುದು ಕೇವಲ ಅವನು ಮಾಡುತ್ತಿದ್ದ ಸಾಮಾಜಿಕ ಸೇವೆಗಾಗಿ ಅಲ್ಲ. ಅದಕ್ಕೆ ಅವನನ್ನು ಪ್ರೇರೇಪಿಸಿದ ಅಸ್ಮಿತೆಗಾಗಿ. ತಾನು ಸಿದ್ಧಿ ಎನ್ನುವ ವಿಷಯವನ್ನು ಅವನು ಹೆಮ್ಮೆಯಿಂದ ಅಪ್ಪಿಕೊಂಡಿದ್ದಕ್ಕಾಗಿ. “ನಾವು ಕರ್ರಗೆ ಇದ್ದೇವೆ, ಸಾಹೇಬರೆ. ಅದೂ ಒಂದು ಸಿದ್ಧೀನ,” ಎಂದು ಅವನು ಕಾವ್ಯಾತ್ಮಕವಾಗಿ ಮಾತಾಡುತ್ತಿದ್ದ. “ನಾವೇನು ರಾತ್ರೋ ರಾತ್ರಿ ಊರಿಗೆ ಬಂದು ಗೌಡರು – ಕುಲಕರ್ಣಿಯವರು ಆಗಲಿಕ್ಕೆ ಆಗ್ತದಾ,” ಅನ್ನುತ್ತಿದ್ದ. ಹಂಗಾಗೋ ಹಂಗಿದ್ದರೆ ಎಷ್ಟು ಮಜಾ ಇರುತ್ತಿತ್ತಲ್ಲಾ ಎಂದು ನನಗೆ ಅನ್ನಿಸುತ್ತಿತ್ತು.
ಕಾರವಾರ-ಬೆಳಗಾವಿಯ ಅಂಚಿನ ಕನ್ನಡದ ಶೈಲಿಯಲ್ಲಿ ಮಾತಾಡುತ್ತಿದ್ದ ಅವನು ತನ್ನ ವಾಕ್ಯ ಮುಗಿಯುವುದರಳಗೊಮ್ಮೆ ಕಿರುನಗೆ ಬೀರುತ್ತಿದ್ದ. “ನಾವು ಕರ್ರಗೆ ಇದ್ದೇವೆ ನೋಡಿ. ಅದೂ ದೇವರ ಕೊಟ್ಟ ವರಾ. ಆ ಬಣ್ಣ ಹೋಗಬಾರದು ಅಂತಲೇ ದೇವರು ನಮಗೆ ಅಡವಿಯೊಳಗ ಇಟ್ಟಿದಾರೆ. ನಾವೂ ನಿಮ್ಮಂಗ ಪೇಟೆ ಒಳಗ ತಿರುಗಾಡಿದರ ನಮ್ಮ ಬಣ್ಣ ಕಳದು ಹೋಗತೈತಿ. ಆಮೇಲೆ ನಮಗೂ – ಇತರರಿಗೂ ಏನು ವ್ಯತ್ಯಾಸ ಹೇಳ್ರಿ,” ಅನ್ನುತ್ತಿದ್ದ. ತಾನು ದೊಡ್ಡ ಜೋಕು ಹೇಳಿದವರಂತೆ ನಕ್ಕು ಬಿಡುತ್ತಿದ್ದ. ಆದರೆ ಅದು ಗೂಢ ತತ್ವ ದರ್ಶನದ ಮಾತಾಗಿ ನನಗೆ ಕೇಳಿಸುತ್ತಿತ್ತು. `ಅಸ್ಮಿತೆ’ ಅಂತ ಒಂದಿದೆ ಅಂತ ಕೈತಾನನಿಗೆ ಗೊತ್ತಿರಲಿಕ್ಕಿಲ್ಲ. ಆದರೆ ಅವನಿಗೆ ಅದು ಇತ್ತು. ಅದೇ ಮುಖ್ಯವಾದದ್ದು. ನಮ್ಮಲ್ಲಿ ಅನೇಕ ಲೇಖಕ- ಚಿಂತಕ- ಹೋರಾಟಗಾರರಿಗೆ ತಮ್ಮಲ್ಲಿ ಇರಲಾರದ ಗುಣಗಳ ಬಗ್ಗೆ ಮಾತಾಡುವ ಚಟವಿದೆ. ಕೈತಾನನಿಗೆ ಅಂತಹ ಚಟ ಇರಲಿಲ್ಲ. ಆತ ಮಾತಾಡದೇ ಮಾಡಿ ತೋರಿಸಿದವನು. ತಾನು ಸಿದ್ಧಿ ಎನ್ನುವುದನ್ನು, ತನಗೆ ದೇವರು ಅನುಕೂಲ ಮಾಡಿಕೊಟ್ಟಾಗ ತನ್ನ ಜನಾಂಗದ ಇತರರಿಗೆ ತಾನು ಅನುಕೂಲ ಮಾಡಿಕೊಡಬೇಕು ಎನ್ನುವ ಮೂಲ ಸೂತ್ರವನ್ನು ಅವನು ಅರಿತಿದ್ದ. ಅದರಂತೆ ನಡೆದ. ತಾನು ಕರ್ರಗೆ ಇರುವುದಕ್ಕೆ, ಸಿದ್ಧಿಯಾಗಿರುವುದಕ್ಕೆ, ಅವನಿಗೆ ಅಸಹ್ಯವಾಗಲಿಲ್ಲ. ಕೊನೆಯವರೆಗೂ ತನ್ನ ಜನರ ನಡುವೆಯೇ ಆತ ಬದುಕಿದ.
ವ್ಯವಹಾರ ಕುಶಲಿಗಳಾದ ನಗರವಾಸಿಗಳು ತಮ್ಮ ಎದುರಿಗೆ ನಸುನಕ್ಕು ಮಾತಾಡಿ ಬೆನ್ನಹಿಂದೆ `ಹಬ್ಷಿ’, `ಜಂಗಲೀ,’ `ಗಾಂವಟಿ’, ಎಂದು ಗೇಲಿ ಮಾಡುವುದು ಅವನಿಗೆ ಗೊತ್ತಿತ್ತು. ಅವನು ಅಂಥವರನ್ನು ನೋಡಿ `ನಮ್ಮ ಸುಖ ನಿಮಗೇನು ಗೊತ್ತು’ ಎಂದುಕೊಂಡು ಒಳಗೊಳಗೆ ನಕ್ಕು ಬಿಡುತ್ತಿದ್ದ. ತನ್ನ ಜನರನ್ನು ಅವನು ಕೊನೆಗೂ ಬಿಟ್ಟು ಕೊಡಲಿಲ್ಲ. ಅವರಿಗಾಗಿ ಸಾಧ್ಯವಿದ್ದಷ್ಟೂ ದುಡಿದ. ಸಹಾಯ ಮಾಡಲಾಗದಾಗ `ಅವರಿಗೆ ಒಳ್ಳೆಯದಾಗಲಿ’ ಎಂದು ಹಾರೈಸಿದ. (ನಗರವಾಸಿಗಳನ್ನು ನನ್ನ ಅಜ್ಜಿ `ಆ ಶಹರದ ಮೂಳಗಳು’, ಎನ್ನುತ್ತಿದ್ದಳು. ಬದುಕು ತನಗೆ ಕೊಟ್ಟ ಸೀಮಿತ ಅವಕಾಶಗಳನ್ನು ಬಳಸಿ, ತನ್ನ ಜೀವನಾನುಭವದ ಹಿನ್ನೆಲೆಯಲ್ಲಿ ಅತೀವ ಆತ್ಮ ಜ್ಞಾನಗಳಿಸಿದವಳು ಅವಳು. ಅವಳ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ.)
ನಾವು ಯಾರು ಎನ್ನುವುದು ನನ್ನ ಪ್ರಕಾರ ತುಂಬ ದೊಡ್ಡ ಪ್ರಶ್ನೆ. ಎಲ್ಲ ಇದ್ದವರಿಗೆ ಇರಲಿಕ್ಕಿಲ್ಲ. ಆದರೆ ಏನೂ ಇಲ್ಲದವರಿಗಂತೂ ಅದು ದೊಡ್ಡದು. ನಾವು ಯಾರು ಎನ್ನುವುದನ್ನು ನಾವು ಅನೇಕರು ಒಪ್ಪಿಕೊಳ್ಳುವುದಿಲ್ಲ. ನಾವು ಯಾರಾಗಬೇಕೆಂದು ಕನಸುತ್ತೇವೆಯೋ ಅವರಾಗಿಬಿಟ್ಟಂತೆಯೇ ಆಡುತ್ತೇವೆ. ನಮ್ಮ ಇಂದಿನ ಸಮಾಜದ ಅತಿ ಪ್ರಮುಖ ಸಮಸ್ಯೆಗಳಿಗೆ ಇದೂ ಒಂದು ಕಾರಣ. ಅವಕಾಶ ವಂಚಿತ ವಾತಾವರಣದಲ್ಲಿ, ಕಡುಬಡತನದಲ್ಲಿ ಬೆಳೆದ ಅನೇಕರು ತಮ್ಮ ಸಮಾಜದ, ವರ್ಗದ ಬಗ್ಗೆ ಅಸಡ್ಡೆ, ನಿರಾಸಕ್ತಿ ಬೆಳೆಸಿಕೊಂಡಿದ್ದನ್ನು ನೋಡಿದ್ದೇನೆ. ತಮಗೆ ಅನುಕೂಲ ಸಿಕ್ಕಾಗ ತನ್ನ ಸಮಾಜಕ್ಕೆ ಹೋಗಲಿ, ತನ್ನ ಕುಟುಂಬದವರಿಗೂ ಸಹ ಸಹಾಯ ಮಾಡಲಾರದವರನ್ನೂ ನಾನು ನೋಡಿದ್ದೇನೆ. ಸಮಾಜ, ಸರಕಾರ ಒದಗಿಸಿದ ಸಕಲ ಸೌಲಭ್ಯಗಳನ್ನು ಬಳಸಿಕೊಂಡ ಕೆಲವರು. ತನಗೆ ಈ ಸೌಲಭ್ಯಗಳೆಲ್ಲ ಸಿಕ್ಕಿದ್ದು ತನ್ನ ಸ್ವಂತದ ಬೆಳವಣಿಗೆಗೆ ಮಾತ್ರ, ಇವೆಲ್ಲ ತನ್ನ ಬಾಲ್ಯದ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು ಉಪಯೋಗಿಸಿಕೊಳ್ಳಬೇಕಾದ ಪರಿಕರಗಳು ಎನ್ನುವಂತೆ ನೊಡುತ್ತಾರೆ. ತಮ್ಮದೇ ಜನಾಂಗದ ಬಗ್ಗೆ ಗೇಲಿ ಮಾಡುತ್ತಾರೆ. `ಯು ನೋ ಹೌ ಅವರ್ ಪೀಪಲ್ ಆರ್ ನೋ,’ ಅಂತೆಲ್ಲಾ ಕಾಕ್ ಟೇಲ್ ಪಾರ್ಟಿಗಳಲ್ಲಿ ಹಾಸ್ಯ ಮಾಡಿ ಇತರರನ್ನು ನಗಿಸುತ್ತಾರೆ. ತಮ್ಮ ಮಕ್ಕಳನ್ನು ತಮ್ಮ ಹಳ್ಳಿಗೆ, ಕರೆದುಕೊಂಡು ಹೋಗದೇ, ತಮ್ಮ ಜನಾಂಗದ ಇತರರೊಂದಿಗೆ ಬೆಳೆಸುತ್ತಾರೆ. ಅಂಥವರನ್ನು ನೋಡಿದಾಗ ನನಗೆ ನೆನಪಾಗುವುದು ಉತ್ತರ ಭಾರತದ ಹಿಂದುಳಿದ ರಾಜ್ಯಗಳ ಖಾಪು ಪಂಚಾಯಿತಿಗಳಿಂದ ತಪ್ಪಿಸಿಕೊಳ್ಳಲೆಂದೇ ಕಷ್ಟ ಪಟ್ಟು ಓದಿ, ದೆಹಲಿಗೆ ಬಂದು, ಬೆಂಗಳೂರಿನಲ್ಲಿ ಸೆಟಲ್ ಆಗುವ ಐ ಎ ಎಸ್ ಅಧಿಕಾರಿಗಳು
ತನ್ನ ಪ್ರಾಮಾಣಿಕ ಕಸಬುದಾರಿಕೆಯಿಂದ ಹೆಸರು ಪಡೆದ. ಗಿಡ ಮರ, ಪ್ರಾಣಿ ಪಕ್ಷಿಗಳ ನಡುವೆ ಬೆಳೆದು ದೊಡ್ಡವನಾದ ಇವನಿಗೆ ಅರಣ್ಯ ಇಲಾಖೆಯ ಕೆಲಸ ಉಸಿರಾಡುವಷ್ಟೇ ಸಹಜವಾಯಿತು. ತನ್ನ ನೌಕರಿಯನ್ನು ಬದುಕಿನುದ್ದದ ಪಿಕ್ ನಿಕ್ಕಿನಂತೆ ಮುಗಿಸಿದ. ಜಿಲ್ಲೆಗೆ ವರ್ಗವಾಗಿ ಬಂದ ಎಲ್ಲ ಸಾಹೇಬರಿಗೆ ವಿಧೇಯನಾಗಿ ಕೆಲಸ ಮಾಡಿದ. ಕೆಳ ಹಂತದಲ್ಲಿ ಇಲಾಖೆ ಸೇರಿದವನು ಸೇವಾವಧಿಯ ಕೊನೆಗೆ ಮುಂಬಡ್ತಿ ಪಡೆದು ಗುಮಾಸ್ತನಾಗಿ ನಿವೃತ್ತಿ ಹೊಂದಿದ.
“ನನ್ನ ಮಕ್ಕಳಿಗೆ ನನ್ನ ಊರಿನ ಗಂಧವೇ ಇಲ್ಲದಂತೆ ಬೆಳೆಸಿದ್ದೇನೆ. ಅವರಿಗೆ ಆ ಗರೀಬಿ, ಬರಗಾಲ, ಹೆಣ್ಣು ಮಕ್ಕಳ ಸಮಸ್ಯೆ, ಜಮೀನು- ಮನೆ ಗಿರವಿ ಇಟ್ಟ ಬಡವರ ಸಾಲಬಾಧೆ, ರಾಜ ಮಹಾರಾಜರ ಹತ್ತಿರ ಕೂಲಿಗೆ ಹೋಗುವ ಸಮಾಜದವರು ಕಷ್ಟ, ಇವೆಲ್ಲಾ ಏನೂ ಗೊತ್ತಿಲ್ಲ. ಅವರಿಗೆ ಗೊತ್ತಿರುವುದೆಂದರೆ ಬ್ಯಾಂಗ್ಲೋರ್ ಸೌತ್, ಎಂಜೀ ರೋಡಿನ ಗುಡ್ ಲೈಫ್ ಅಷ್ಟೇ. ಯು ನೋ,” ಅಂತ ನನಗೆ ರಾಜಸ್ಥಾನ ಮೂಲದ ಒಬ್ಬ ಹಿರಿಯ ಅಧಿಕಾರಿ ಒಮ್ಮೆ ಹೇಳಿದ್ದರು. “ಆ ರೋಡಿಗೆ ಹೆಸರಿಟ್ಟಿದ್ದಾರಲ್ಲಾ ಆ ಎಂಜೀ ಮಹಾತ್ಮನ ಗುಡ್ ಲೈಫ್ ಬಗ್ಗೆ ಅವರಿಗೆ ಒಮ್ಮೆ ಹೇಳಿ ನೀವು” ಅಂತ ನಾನು ಅವರಿಗೆ ಹೇಳಬೇಕಿತ್ತು. ಹೇಳಲಿಲ್ಲ. ಮೊದಲೇ ಕೆಂಪಗಿದ್ದ ಸಾಹೇಬರ ಮುಖ ಇನ್ನೊಂದಿಷ್ಟು ರೆಡ್ಡಾತಿ ರೆಡ್ಡು ಆಗುವುದನ್ನು ನೋಡುವ ಅವಕಾಶ ಕಳೆದುಕೊಂಡೆ.
ಇತ್ತೀಚೆಗೆ ನಾನು ಹುಬ್ಬಳ್ಳಿ ಮೂಲದ ವೈದ್ಯರೊಬ್ಬರ ಬಗ್ಗೆ ಬರೆದೆ. ಅವರ ಹೆಸರು ಡಾ. ಅಯ್ಯಯ್ಯಪ್ಪ ಅಂತ ಇಟ್ಟುಕೊಳ್ಳೋಣ (ಅಯ್ಯಪ್ಪ ಅಲ್ಲ. ಖಂಡಿತ ಅಲ್ಲ). ಅಖಂಡ ಭಾರತದ ಎಲ್ಲ `ಗುಡ್ ಬಾಯ್’ ಡಾಕ್ಟರುಗಳಂತೆ ಅವರೂ ಕೂಡ ವೈದ್ಯರೊಬ್ಬರನ್ನು ಮದುವೆಯಾಗಿದ್ದಾರೆ. ಅವರಿಬ್ಬರೂ ಈಗ ಅಮೇರಿಕೆಯಲ್ಲಿ ಸೇವಾ ಸಂಸ್ಥೆ ನಡೆಸುತ್ತಾರೆ. ಆ ಸಂಸ್ಥೆ ನಿಜವಾಗಿಯೂ ನಿಸ್ವಾರ್ಥ ಸೇವೆ ಮಾಡುತ್ತಿದೆ. ಅಮೇರಿಕೆಯಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಚಿಂತನಾ ಗೋಷ್ಠಿ, ಮ್ಯಾರಾಥಾನ್ ಓಟ, ಲೇಖನ ಸ್ಪರ್ಧೆ, ಇತ್ಯಾದಿ ನಡೆಸುತ್ತಿದೆ. ಭಾರತದಲ್ಲಿ ಸಹ ಆ ವೈದ್ಯ ದಂಪತಿಯ ಸೇವೆ ನಡೆಯುತ್ತಿದೆ. ತಮ್ಮ ಸಂಘಟನೆ ಮೂಲಕ ಅಮೇರಿಕಾದ ಖ್ಯಾತ ಮಕ್ಳಳ ತಜ್ಞರನ್ನು ಕರೆಸಿ ಇಲ್ಲಿನ ವೈದ್ಯ ಕಾಲೇಜುಗಳಲ್ಲಿನ ಶಿಕ್ಷಕರಿಗೆ ವೃತ್ತಿ ತರಬೇತಿ ಕೊಡಿಸುತ್ತಾರೆ. ಹುಬ್ಬಳ್ಳಿ- ಬಿಜಾಪುರ, ಬೆಳಗಾವಿಯ ವೈದ್ಯರನೇಕರಿಗೆ ತಮ್ಮ ಸ್ವಂತ ಖರ್ಚಿನಲ್ಲಿ ತರಬೇತಿ ನೀಡಿದ್ದಾರೆ. ಹುಬ್ಬಳ್ಳಿಯ ಸರಕಾರಿ ವೈದ್ಯ ಕಾಲೇಜಿಗೆ ಲಕ್ಷಾನುಗಟ್ಟಲೇ ಬೆಲೆಬಾಳುವ ಉಪಕರಣ ಕೊಡಿಸಿದ್ದಾರೆ.
ನಮ್ಮ ಸ್ನೇಹಿತರೊಬ್ಬರಿಂದ ಅವರ ಕೆಲಸದ ಬಗ್ಗೆ ತಿಳಿದಾಗ ನನಗೆ ತುಂಬ ಖುಷಿಯಾಯಿತು. ಅವರ ಹಿನ್ನೆಲೆ ತಿಳಿಯಲು ನಾನು ಡಾಕ್ಟರಿಗೆ ಫೋನು ಮಾಡಿದೆ. ಎಲ್ಲ ಹೇಳಿದ ನಂತರ ಅವರು “ನಮ್ಮಪ್ಪ ಸಣ್ಣ ಬಂಗಾರದ ಅಂಗಡಿಯೊಂದರಲ್ಲಿ ಅಕ್ಕಸಾಲಿಗರ ಕೆಲಸ ಮಾಡಿಕೊಂಡಿದ್ರು. ಆವಾಗೆಲ್ಲಾ ತುಂಬಾನೇ ಬಡತನ ನಮ್ಗೆ. ಆದರೆ ಅದೆಲ್ಲಾ ನೀವೇನು ಬರೀಯಕ್ ಹೋಗಬೇಡಿ. ಸುಮ್ಮನೇ ಇಷ್ಯೂ ಆಗುತ್ತೆ” ಅಂದರು. ಮೈಸೂರಿನ ಹೆಂಡತಿ ಸಿಕ್ಕ ಮೇಲೆ ಅವರು ಹುಬ್ಬಳ್ಳಿ ಭಾಷೆ ಬಿಟ್ಟು ಮೈಸೂರು ಸೀಮೆಯ ಮಾತು ಆಡಲು ಕಲಿತವರು. `ಇಬ್ಬಿಬ್ರಿಗೇ ಮಾತಾಡಕ್ ಚೆನ್ನಾಗಿರತ್ತೇಂತಾ’ ಇರ್ಬೇಕು.
“ನಾನೇನು ಅದನ್ನು ಬರೆಯೋದಿಲ್ಲ. ನನಗ ನಿಮ್ಮ ಕೆಲಸ ಮುಖ್ಯ. ನೀವೇನೂ ಚಿಂತೆ ಮಾಡಬೇಡ್ರಿ,” ಅಂದೆ ನಾನು. “ಆದರೆ ಒಂದು ಮಾತು. ಈ ವಿಷಯ ನೀವು ನಾಚಿಕೆ ಪಟ್ಟುಕೊಳ್ಳುವಂತಹದೇನೂ ಅಲ್ಲ. ಖರೇ ಹೇಳಬೇಕೆಂದರೆ, ಹೆಚ್ಚಾಗಿ ಓದದ ಮನುಷ್ಯ, ತನ್ನ ಬಡತನದಲ್ಲಿಯೂ ನಿಮ್ಮನ್ನು ಈ ಮಟ್ಟಕ್ಕ ಬೆಳೆಸಿದಾ ಅಂತ ನೀವು ಖುಷಿಯಾಗಬೇಕು. ಅದನ್ನು ನಾಕು ಮಂದಿ ಮುಂದ ಗರ್ವದಿಂದ ಹೇಳಬೇಕು,” ಎಂದೆ. “ಅಮೇರಿಕಾದಲ್ಲಿ ಬೆಳೆಯುತ್ತಿರುವ ನಿಮ್ಮ ಮಕ್ಕಳು ನಾಳೆ ರಾಕ್ ಸ್ಟಾರುಗಳೋ, ಹಾಲಿವುಡ್ ಹಿರೋಯಿನ್ ಗಳೋ, ಎಮ್ ಎನ್ ಸಿ ಕಂಪನಿ ಮಾಲಿಕರೋ ಆಗಿ ಬಿಲಿಯನ್ ಗಟ್ಟಲೆ ಡಾಲರ್ ಗಳಿಸಿ, ತಮ್ಮಂಥವರನ್ನೇ ಮದುವೆಯಾಗಿ, ಖಾಸಗಿ ವಿಮಾನದಲ್ಲಿ ಓಡಾಡಿ, ನೂರು ವರ್ಷ ವಿಂಟೇಜಿನ ವೈನು ಕುಡಿಯುತ್ತಾ, ವಜ್ರದ ವಾಚ್ ಕಟ್ಟಿಕೊಂಡದ್ದನ್ನು ತೋರಿಸುತ್ತಾ ಪತ್ರಕರ್ತರಿಗೆ ಇಂಟರ್ ವ್ಯೂ ಕೊಟ್ಟರ, “ನಮ್ಮಪ್ಪ ಬರೇ ಒಂದ ಸಾದಾ ಡಾಕ್ಟರ್ ಆಗಿದ್ದ. ಆದರ ನೀವು ಅದನ್ನೇನು ಬರೀಬ್ಯಾಡಿ. ಸುಮ್ಮನೇ ಇಷ್ಯೂ ಆಗ್ತದ,” ಅಂತ ಹೇಳಿದರೆ ಏನು ಮಾಡ್ತೀರಿ,” ಅಂತ ನಕ್ಕೆ. ಅವರೂ ನಕ್ಕರು. ನಾನು ಯಾಕೆ ನಕ್ಕೆ, ಅವರು ಯಾಕೆ ನಕ್ಕರು ಎನ್ನುವುದು ಅವರಿಗೆ ಅರ್ಥ ಆಗಿರಲಿಕ್ಕಿಲ್ಲ ಅಂತ ನನಗೆ ಅನ್ನಿಸಿತು. ಈ ಮನುಷ್ಯನ ಹೆಸರು ಮಾತ್ರ ಅವರಪ್ಪ ಸರಿಯಾಗಿ ಇಟ್ಟಾನ. ಅಯ್ಯಯ್ಯಪ್ಪಾ, ಅಂದುಕೊಂಡು ಮಾತು ಮುಗಿಸಿದೆ. ನಮ್ಮಲ್ಲಿ ಸುದ್ದಿ ಬಂತು. ಆ ಇಷ್ಯೂ ಬರಲಿಲ್ಲ.
“ನಾನು ಜಾತಿ-ಧರ್ಮ ಬಿಡಬೇಕು ಅಂತ ಮಾಡೀನಿ. ಇನ್ನು ಮುಂದೆ ಯಾರು ಕೇಳಿದರೂ ನಾನು ಹೇಳಂಗಿಲ್ಲ,” ಅಂತ ಶಿಶುನಾಳ ಷರೀಫರಲ್ಲಿ ಯಾವುದೋ ಯುವಕ ಹೇಳಿದನಂತೆ. ಅದಕ್ಕವರು ಉತ್ತರವಾಗಿ, “ನಾವು ಬಿಡಬೇಕೆಂದರೂ ಇವು ನಮ್ಮನ್ನು ಬಿಡೋದಿಲ್ಲೋ ತಮ್ಮಾ” ಎಂದು ಹೇಳಿದರಂತೆ. “ಇದು ಹೆಂಗಂದರ, ಮನುಷ್ಯಾನ ಮೈ ಮ್ಯಾಲಿನ ತೊಗಲು ಇದ್ದಂಗ. ಹೊಲದಲ್ಲಿ ರಾತ್ರಿ ಮಲಗಿದಾಗ ಹುಳಾ ಕಡದರ ಚರ್ಮ ಕಿತ್ತಿ ಬರತೈತಿ. ಆದರ ಮತ್ತ ಅದೇ ಜಾಗದಾಗ ಮತ್ತೆ ಬೆಳೀತೈತಿ. ಮತ್ತ ಕಿತ್ತಿದರೂ ಮತ್ತ ಬರತೈತಿ. ಹಂಗ ಇದೂ. ಇದನ್ನು ಬಿಟ್ಟು ಬಿಡಲಿಕ್ಕೆ ಬರಂಗಿಲ್ಲ. ಅದು ಇರತೈತಿ, ಆದರ ಅದು ನಮ್ಮ ಕಡೆ ಕೆಟ್ಟ ಕೆಲಸಾ ಮಾಡಿಸಬಾರದು. ಹಂಗ ಇರಬೇಕು’’ ಎಂದರಂತೆ.
ಕೈತಾನನಿಗೆ ಷರೀಫರ ಹಾಡು ಬರುತ್ತಿತ್ತೋ ಏನೋ. “ಏ ಮಾರಾಯಾ ಷರೀಫರದೊಂದು ಹಾಡು ಹೇಳೋಪಾ,” ಅಂತ ನಾನು ಕೇಳಲೇ ಇಲ್ಲ. ನಮ್ಮಂಥ ಸಾವ- ಕೆಡುವವರಿಗಾಗಿ ಅವನು ಹಾಡ್ತಾ ಇರಲಿಕ್ಕಿಲ್ಲ ಅಂತ ಕಾಣುತ್ತದೆ. ಈಗೇನಿದ್ದರೂ ಅವನ ಜೋಕು- ಹಾಡುಗಳು ಅಮರರಿಗಾಗಿ ಮಾತ್ರ ಅಂತ ಖಾತ್ರಿಯಾಗಿ ಅನ್ನಿಸುತ್ತದೆ.
ಮೂಲ ಊರು ಅಗಡಿ.ಹುಟ್ಟಿದ್ದು ಹುಬ್ಬಳ್ಳಿಯಲ್ಲಿ. ಅಗಡಿ, ಹಾನಗಲ್ಲು, ಪಣಜಿ, ಹುಬ್ಬಳ್ಳಿ ಹಾಗೂ ಬೆಂಗಳೂರು ಗಳಲ್ಲಿ ಓದು. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೀದರ್ ನ ನಂತರ ಈಗ ಕೆಲಸ ಮಾಡುತ್ತಿರುವುದು ಬೆಳಗಾವಿಯಲ್ಲಿ. ಓದಿದ್ದು ಆಂಗ್ಲ ಸಾಹಿತ್ಯ. ಜಾಹಿರಾತು ಕಂಪನಿಗಳಲ್ಲಿ ಕಾಪಿ ರೈಟಿಂಗ್ ಮಾಡಬೇಕೆಂದು ಹೊರಟವನು ಪತ್ರಕರ್ತ ನಾಗಿದ್ದು ಅಚಾನಕ್.
ಯಾವ ಆಡಂಬರವಿಲ್ಲದೇ ಆಡಂಬರ ರಹಿತ ವ್ಯಕ್ತಿಗಳ ಜೀವನವನ್ನು ಆಡುಮಾತಿನಲ್ಲಿ… ಕೇಶವ