”ನಾಲ್ಕಾರು ದಿನಗಳು ಪ್ರಹ್ಲಾದ್ ಸರ್ ಕಾಲೇಜಿನಲ್ಲಿ ಕಾಣಲಿಲ್ಲ. ಒಳ್ಳೆಯದೇ ಆಯ್ತೆಂದುಕೊಂಡೆ. ಮದುವೆಯ ಕಾರಣ ಓದು ಹಾಳಾಗುವುದು ನನಗೆ ಬೇಕಿರಲಿಲ್ಲ. ಆದರೆ ನನಗನ್ನಿಸಿದ್ದೆಲ್ಲಾ ಆಗೋದೆಂದರೇನು! ಅವರು ತಿರುಗಿ ಬಂದರು. ಜೊತೆಗೆ ತನ್ನ ಜಾತಕವನ್ನೂ ಹಿಡಿದು ತಂದಿದ್ದರು. ಸಂಜೆ ಮನೆಗೆ ಬಂದವರು ಮಾವನ ಕೈಗೆ ಜಾತಕ ಕೊಟ್ಟು ಅದೇನೇನೋ ಮಾತಾಡಿ ಒಳಕ್ಕೊಮ್ಮೆ ದೃಷ್ಟಿ ಹರಿಸಿ ನಡೆದುಬಿಟ್ಟರು. ನಾನು ಅಟ್ಟದ ಮೇಲಿದ್ದುದು ಅವರ ಗಮನಕ್ಕೆ ಬರಲಿಲ್ಲ”
‘ಸದ್ದು ಮಾಡಿ ಹ್ಯಾಂಗ ಹೇಳಲಿ?’ ಲೇಖಕಿ ಮಧುರಾಣಿ ಬರೆಯುವ ಹೆಣ್ಣೊಬ್ಬಳ ಅಂತರಂಗದ ಪುಟಗಳ ಒಂಬತ್ತನೆಯ ಕಂತು.
ಆಗ ತಾನೇ ಯಾರೋ ನನ್ನ ಕಣ್ಣಂಚಲ್ಲೇ ಮೆಚ್ಚಿಕೊಳ್ಳುತ್ತಿರುವ, ನನ್ನ ಇರುವಿಕೆಗೆ ಹೆಮ್ಮೆಯ ನಿಟ್ಟುಸಿರಿಡುತ್ತಿರುವ, ನಾನೊಮ್ಮೆ ತಿರುಗಿ ನೋಡಿದರೆ ಜನ್ಮ ಸಾರ್ಥಕವಾದ ಮಿನುಗೊಂದನ್ನು ನೋಟದಲ್ಲೇ ತೇಲಿಬಿಡುತ್ತಿರುವ ಹೊಸ ಪ್ರಪಂಚವೊಂದು ತೆರೆದುಕೊಳ್ಳುತ್ತಿತ್ತು. ಸುಮ್ಮನೇ ನಡೆದು ಹೋಗುತ್ತಿರುವಾಗಲೂ ಯಾರೋ ಹಿಂದಿನಿಂದ “ರೀ… ಒಂದ್ನಿಮಿಷ..” ಎಂದಂತೆ ಕೇಳಿ ಉಸಿರು ಗಕ್ಕೆನ್ನುತ್ತಿತ್ತು. ಎದೆಗವಚಿದ ಪುಸ್ತಕಗಳೇ ಏನೋ ಹೇಳಿದಂತಾಗಿ, ಹೊದ್ದ ದಾವಣಿ ಎತ್ತಿ ಮರ್ಯಾದೆ ತೆಗೆಯುವ ಸುತ್ತಲ ಗಾಳಿಯ ಪುಂಡಾಟಿಕೆಗೆ ಮೈನವಿರೆದ್ದು ಹಾರುವ ಮುಂಗುರುಳೇ ನನ್ನ ಮುಖದ ಮೇಲಿನ ತುಂಟುನಗೆಗೆ ಪರದೆಯಾಗುತ್ತಿದ್ದ ಪರ್ವಕಾಲ. ಆಗಿನ್ನೂ ಬಿಳೀ ಮೊಗದ ಮೇಲೆ ದಪ್ಪ ಪೊದೆಮೀಸೆ ಮೆರೆಸುತ್ತಿದ್ದ ಹುಡುಗನೊಬ್ಬ ಯಾಕೋ ಮನೆಗೆ ಹೋದ ಮೇಲೂ ನೆನಪಾಗುತ್ತಿದ್ದ. ಬರುತ್ತಿದ್ದ ಗಂಡುಗಳಲ್ಲಿ ಒಬ್ಬನೂ ಅವನನ್ನು ಹೋಲದಿದ್ದದ್ದು ಬೇಸರವೆನಿಸುತ್ತಿತ್ತು. ಇವೆಲ್ಲವೂ ನನ್ನ ಬದುಕಲ್ಲಿ ಯಾವುದೇ ಅರ್ಥ ತರುವುದಿಲ್ಲವೆಂದು ತಿಳಿದಿದ್ದರೂ ಎಲ್ಲವನ್ನೂ ಆಸ್ವಾದಿಸಲು ಏನು ಕಷ್ಟ? ಎಂಬ ಹಠವೂ ಸಣ್ಣಗೆ ಮೂಡುತ್ತಿತ್ತು.
ಅಷ್ಟರಲ್ಲಿ ಕಾಲೇಜಿಗೆ ನಾಲ್ಕು ತಿಂಗಳ ಕೆಳಗೆ ಹೊಸದಾಗಿ ಬಂದು ಸೇರಿದ್ದ ಕಿರಿಯ ಉಪನ್ಯಾಸಕ ಪ್ರಹ್ಲಾದ್ ಒಂದು ಸಂಜೆ “ಹುಡುಗೀ.. ನಿನ್ನ ಮನೆಯೆಲ್ಲಿ? ಯಾವಾಗ ಬಂದರೆ ನಿನ್ನ ಅಪ್ಪ ಅಮ್ಮ ಮಾತಾಡೋಕೆ ಸಿಗ್ತಾರೆ?” ಅಂತ ಕೇಳಿದರು. ಏನು ಗ್ರಹಚಾರವಪ್ಪಾ ಎಂದು ನಡುಗಿಹೋಗಿದ್ದೆ. ಒಂದು ಸಣ್ಣ ಹೊಯಿಲೂ ನನ್ನ ಭವಿಷ್ಯ ಅಲ್ಲಾಡಿಸುವ ಸ್ಥಿತಿಯಿತ್ತು ಮನೆಯಲ್ಲಿ. ಬೆದರಿದ ನನ್ನ ನೋಡಿ “ಹೆದರಬೇಡವೇ… ನಿನ್ನ ಒಪ್ಪಿಗೆಯಿದ್ದರೆ ನಮ್ಮಪ್ಪ ಅಮ್ಮನ್ನೂ ಕರ್ಕೊಂಡೇ ಬರ್ತೀನಿ” ಅಂದು ಹುಬ್ಬು ಹಾರಿಸಿ ಅವರು ನಕ್ಕ ನಗೆಗೆ ನಾನು ಅರೆಕ್ಷಣ ಶೀತಲಮೂರ್ತಿಯಾಗಿಹೋದೆ. ಅವರು ಮುಂದುವರೆದು “ನೋಡಮ್ಮಾ ನಮ್ಮನೇಲಿ ನನ್ನ ಮದುವೆಗೆ ಅಂತ ಹೆಣ್ಣು ನೋಡ್ತಿದಾರೆ. ನಂಗೆ ನೀನು ಇಷ್ಟ ಆಗಿದೀಯ. ನಿಂಗೂ ನಾನಿಷ್ಟ ಅಂದ್ರೆ ಮನೇಲಿ ಮಾತಾಡೋಣ” ಅಂತ ಕ್ಲಾಸಿನಲ್ಲಿ ಪಾಠ ಮಾಡುವಷ್ಟು ಸುಲಭವಾಗಿ ಬದುಕಿನ ಮುಂದಿನ ದಿನಗಳ ಬಗ್ಗೆ ತಮ್ಮ ನಿಲುವನ್ನು ಹೇಳಿಕೊಂಡುಬಿಟ್ಟರು.
ಈಗ ನಾನೇನು ಮಾಡಲಿ? ಕ್ಲಾಸಿನಲ್ಲಿ ತಲೆಯಾಡಿಸುವಂತೆಯೇ ಆಡಿಸಿ ಹೂಂಗುಟ್ಟಿಬಿಡಲೇ? ಮಾಡಬಹುದಿತ್ತು! ಹುಡುಗ ನೋಡಲು ಚೆನ್ನಿದ್ದ,ಚುರುಕಾಗೂ ಇದ್ದ. ಹೊಸದಾಗಿ ಕಾಲೇಜಿಗೆ ಬಂದಿದ್ದರೂ ಒಂಥರಾ ಹೀರೋ ಇಮೇಜ್ ಇದ್ದವನು. ಆದರೆ ಈ ಅಮ್ಮನ ಜಾತಕದ ಹುಚ್ಚು..!? ದೊಡ್ಡವರೆದುರು ಕೂತು ಕೂಡಾ ಮಾತಾಡದ ಪರಿಸರದಲ್ಲಿ ಬೆಳೆದ ನನಗೆ ಅಪ್ಪನ ಮನೆ ಹಾಗೂ ಅಮ್ಮನ ತವರು ಎರಡೂ ಸುಮಾರು ಉಸಿರುಗಟ್ಟಿಸುವ ಪರಿಸರಗಳೇ! ಅಪ್ಪನ ಮನೆಯಲ್ಲಿ ಹೆಣ್ಣೆಂಬ ಮೂದಲಿಕೆಯಾದರೆ ಅಮ್ಮನ ತವರಲ್ಲಿ ಮನೆತನದ ಘನತೆಯ ಹುಚ್ಚು! ಅಷ್ಟು ಚಂದದ ಮದುವೆ ಪ್ರಸ್ತಾಪ..!! ಆದರೂ ಮನೆಯಲ್ಲಿ ಹೇಳಿ ನನ್ನ ವಿದ್ಯಾಭ್ಯಾಸಕ್ಕೆ ನಾನೇ ಕಲ್ಲು ಹಾಕಿಕೊಳ್ಳುವುದಕ್ಕಿಂತ ಸುಮ್ಮಗಿದ್ದು ಕಾಲೇಜು ಮುಂದುವರೆಸುವುದೇ ಜಾಣ್ಮೆ ಅಂತ ತೀರ್ಮಾನಿಸಿ ಸುಮ್ಮನಾಗಿಬಿಟ್ಟೆ. ನಾನು ಬಿಟ್ಟೆ, ಆದರೆ ಆ ಪುಣ್ಯಾತ್ಮ ಬಿಟ್ಟನಾ..? ಅಲ್ಲಿಂದ ಒಂದು ವಾರಕ್ಕೆ ಒಂದು ಭಾನುವಾರದ ಸಂಜೆ ಮಾವನ ಮನೆಯ ಅಂಗಳದಲ್ಲಿ ನನ್ನ ಕಾಲೇಜು ಹೀರೋ ಪ್ರತ್ಯಕ್ಷನಾಗಿದ್ದ.
ನಾಲ್ಕು ತಿಂಗಳ ಕೆಳಗೆ ಹೊಸದಾಗಿ ಬಂದು ಸೇರಿದ್ದ ಕಿರಿಯ ಉಪನ್ಯಾಸಕ ಪ್ರಹ್ಲಾದ್ ಒಂದು ಸಂಜೆ “ಹುಡುಗೀ.. ನಿನ್ನ ಮನೆಯೆಲ್ಲಿ? ಯಾವಾಗ ಬಂದರೆ ನಿನ್ನ ಅಪ್ಪ ಅಮ್ಮ ಮಾತಾಡೋಕೆ ಸಿಗ್ತಾರೆ?” ಅಂತ ಕೇಳಿದರು. ಏನು ಗ್ರಹಚಾರವಪ್ಪಾ ಎಂದು ನಡುಗಿಹೋಗಿದ್ದೆ. ಒಂದು ಸಣ್ಣ ಹೊಯಿಲೂ ನನ್ನ ಭವಿಷ್ಯ ಅಲ್ಲಾಡಿಸುವ ಸ್ಥಿತಿಯಿತ್ತು ಮನೆಯಲ್ಲಿ.
ನಾನು ಒಳಮನೆಯಿಂದ ಹೊರಬಂದು ನೋಡುವ ಹೊತ್ತಿಗಾಗಲೇ ನಡುಮನೆಯ ಕುರ್ಚಿಯಲ್ಲಿ ಆಸೀನನಾಗಿ ಮಾವನೊಟ್ಟಿಗೆ ಮಾತಿಗಿಳಿದಾಗಿತ್ತು. ಊರು-ಮನೆಗಳ ವಿಚಾರ ವಿನಿಮಯ ಜೋರು ಸಾಗಿತ್ತು. ಮಾವನೂ ಬಹಳ ಖುಷಿಯಲ್ಲಿರುವಂತೆ ತೋರಿತು. ಆದರೆ ಒಳಮನೆಯ ಬಾಗಿಲಲ್ಲಿ ನಿಂತಿದ್ದ ಅಮ್ಮನ ಬಿಗಿದ ಮುಖ ಸಡಿಲಗೊಳ್ಳಲೇ ಇಲ್ಲ. ಅಂದು ರಾತ್ರಿ ಅಂಗಳದಲ್ಲಿ ಕುಳಿತು ಅಮ್ಮನೂ ಮಾವನು ಬಹಳ ಹೊತ್ತಿನವರೆಗೆ ಮಾತಾಡುತ್ತಲೇ ಇದ್ದರು. ನನಗೂ ತಮ್ಮನಿಗೂ ಅತ್ತೆ ಬಡಿಸಿದ ಅತಿಖಾರದ ಹುರುಳಿಕಾಳು ಗೊಜ್ಜು ತಿಂದು ವಾಂತಿ ಬರುತ್ತಿತ್ತು. ತಮ್ಮ ಈಗೇನು ಮಾಡೋಣವೇ? ಅಂತ ಕೇಳಿದ. ‘ಬಾ, ಸಕ್ಕರೆ ಬಾಯಿಗೆ ಹಾಕಿಕೊಂಡು ಮಲಗೋಣ’ ಅಂದು ಅಡಿಗೆಮನೆಗಲ್ಲದೇ ಕೊಟ್ಟಿಗೆಗೆ ಕರೆದೊಯ್ದೆ. ಅಡಿಗೆಮನೆಯಿಂದ ಸಕ್ಕರೆಯೋ ಬೆಲ್ಲವೋ ಕದಿಯಲು ಶಶಾಂಕನ ಸಹಾಯ ಬೇಕಿತ್ತು.
ಅತ್ತೆ ಮೊಸರು ಸಕ್ಕರೆ ಇತ್ಯಾದಿಗಳನ್ನು ಯಾರಿಗೂ ಬಡಪೆಟ್ಟಿಗೆ ಸಿಗದಂತೆ ಬಚ್ಚಿಡುತ್ತಿದ್ದಳು. ಫ್ರಿಡ್ಜು ಇರದ ಕಾಲ, ಆದರೂ ಅಡುಗೆಮನೆ ಒಂಥರಾ ನಿಗೂಢ ಜಾಗ. ಹಲವು ಮೂಲೆಗಳ, ಒಲೆ ಬಿಸಿ ಹರಡಿಕೊಂಡಿರುತ್ತಿದ್ದ, ಸೌದೆ ಹೊಗೆಯ ಘಮಕ್ಕೆ ಮತ್ತು ಬರಿಸುವಂತಿರುತ್ತಿದ್ದ ಜಾಗ. ಅಲ್ಲೇನಾದರೂ ಸದ್ದಾದರೂ ಸ್ವಲ್ಪ ಅಲುಗಿದರೂ ಜಾಗ ತಪ್ಪಿದರೂ ಅವಳಿಗೆ ಗೊತ್ತಾಗಿಬಿಡುತ್ತಿತ್ತು. ಜೋರು ಜಗಳವಲ್ಲದಿದ್ದರೂ ಅಡುಗೆಮನೆ ಹೊಕ್ಕ ಬೆಕ್ಕನ್ನೇ ನೆಪ ಮಾಡಿಕೊಂಡು ಅತ್ತೆ ಬೆಳಗಿಂದ ರಾತ್ರಿಯವರೆಗೂ ಗೊಣಗುವಳು. ಇದು ಅಮ್ಮನ ಸ್ವಾಭಿಮಾನಕ್ಕೆ ಭಂಗ ತಂದು ಆಮೇಲೆ ಅವಳು ನಮ್ಮನ್ನು ಸಿಕ್ಕಾಪಟ್ಟೆ ಬೈದೋ ಸಮಾಧಾನವಾಗದಿದ್ದರೆ ಹೊಡೆದೋ ತಣ್ಣಗಾಗುವಳು. ಇದೆಲ್ಲ ರಗಳೆಯನ್ನು ದಾಟುವ ಒಂದೇ ಮಾರ್ಗವೆಂದರೆ ಅಡುಗೆಮನೆ ಹೊಗುವಾಗಲೆಲ್ಲಾ ಶಶಾಂಕನನ್ನು ಅಡ್ಡ ಹಿಡಿಯುವುದು. ಅವನು ಏನೇ ಮುಟ್ಟಿದ ಆರೋಪ ಬಂದರೂ ಅವನ ಮೇಲೇ ಹಾಕಿಕೊಳ್ಳುತ್ತಿದ್ದ. ಎಲ್ಲೋ ಒಂದೆಡೆ ಅವನ ನಮ್ಮೊಂದಿಗಿನ ಈ ನಿಕಟವರ್ತನೆ ಅತ್ತೆಗೆ ನುಂಗಲಾರದ ತುತ್ತಾಗಿ ಮಾವನನ್ನು ದುರುದುರು ನೋಡಿ ಮೂತಿ ತಿರುಗಿಸಿ ಒಳನಡೆಯುವಳು. ಮಾವನೋ ಶಾಂತಮೂರ್ತಿ!! ತಾಂಬೂಲ ತಂಬಾಕಿನ ಜೊತೆ ಒಂದು ಕುಹುಕದ ನಗೆಯನ್ನೂ ಜಗಿದು ಉಗುಳುವನು.
ನಾಲ್ಕಾರು ದಿನಗಳು ಪ್ರಹ್ಲಾದ್ ಸರ್ ಕಾಲೇಜಿನಲ್ಲಿ ಕಾಣಲಿಲ್ಲ. ಒಳ್ಳೆಯದೇ ಆಯ್ತೆಂದುಕೊಂಡೆ. ಮದುವೆಯ ಕಾರಣ ಓದು ಹಾಳಾಗುವುದು ನನಗೆ ಬೇಕಿರಲಿಲ್ಲ. ಆದರೆ ನನಗನ್ನಿಸಿದ್ದೆಲ್ಲಾ ಆಗೋದೆಂದರೇನು! ಅವರು ತಿರುಗಿ ಬಂದರು. ಜೊತೆಗೆ ತನ್ನ ಜಾತಕವನ್ನೂ ಹಿಡಿದು ತಂದಿದ್ದರು. ಸಂಜೆ ಮನೆಗೆ ಬಂದವರು ಮಾವನ ಕೈಗೆ ಜಾತಕ ಕೊಟ್ಟು ಅದೇನೇನೋ ಮಾತಾಡಿ ಒಳಕ್ಕೊಮ್ಮೆ ದೃಷ್ಟಿ ಹರಿಸಿ ನಡೆದುಬಿಟ್ಟರು. ನಾನು ಅಟ್ಟದ ಮೇಲಿದ್ದುದು ಅವರ ಗಮನಕ್ಕೆ ಬರಲಿಲ್ಲ. ಅಮ್ಮನೂ ಮಾವನೂ ಜಾತಕದ ಸಲುವಾಗಿ ಅಂದು ರಾತ್ರಿ ಮತ್ತಷ್ಟು ಮಾತಾಡಿದರು. ನನಗೆ ಸರಿಯುವ ದಿನರಾತ್ರಿಗಳನ್ನು ಎಣಿಸುವಂತಾಗುತ್ತಿತ್ತು. ಎಷ್ಟು ದಿನ ಕಳೆದರೆ ಅಷ್ಟು ಬೇಗ ಪರೀಕ್ಷೆ ಹತ್ತಿರವಾಗುತ್ತಿತ್ತು. ನನ್ನ ಮೊದಲ ಪಿಯುಸಿ ಮುಗಿಯುವುದರಲ್ಲಿತ್ತು.
ಸುಬ್ರಹ್ಮಣ್ಯ ಜೋಯಿಸರು ಜಾತಕ ಸುಮಾರಾಗಿ ಹೊಂದುತ್ತವೆಂದು ಹೇಳಿ ಕಳಿಸಿದ್ದರು. ಮಾವ ಸಂತಸದಲ್ಲಿದ್ದ. ಅಮ್ಮನಿಗೆ ಸ್ವಲ್ಪ ಅಸಮಾಧಾನವಿದ್ದಂತೆ ತೋರಿತು. ಈ ಬ್ರಹ್ಮಾಂಡದ ಮೇಲಿನ ಯಾವ ವಿಚಾರ ಅವಳಿಗೆ ಸಮಾಧಾನ ತರುವುದೋ, ಒಪ್ಪಿಗೆಯಾಗುವುದೋ ನನಗೆ ತೋಚಲಿಲ್ಲ. ಕಾಲೇಜಿಗೆ ಎಂದಿನಂತೆ ಹೋಗಲು ಅವಳು ಯಾವ ತಕರಾರೂ ತೆಗೆಯದ್ದು ಕೊಂಚ ಆಶ್ಚರ್ಯವೆನಿಸಿತು. ಏನಾದರಿರಲಿ, ಸದ್ಯ ನನ್ನ ಓದಿನ ಸುದ್ದಿಗೆ ಯಾರೂ ಬರದಿದ್ದರೆ ಸಾಕೆನಿಸಿ ನೆಮ್ಮದಿಯಾಗಿತ್ತು.
ಅಮ್ಮನೂ ಮಾವನೂ ಜಾತಕದ ಸಲುವಾಗಿ ಅಂದು ರಾತ್ರಿ ಮತ್ತಷ್ಟು ಮಾತಾಡಿದರು. ನನಗೆ ಸರಿಯುವ ದಿನರಾತ್ರಿಗಳನ್ನು ಎಣಿಸುವಂತಾಗುತ್ತಿತ್ತು. ಎಷ್ಟು ದಿನ ಕಳೆದರೆ ಅಷ್ಟು ಬೇಗ ಪರೀಕ್ಷೆ ಹತ್ತಿರವಾಗುತ್ತಿತ್ತು. ನನ್ನ ಮೊದಲ ಪಿಯುಸಿ ಮುಗಿಯುವುದರಲ್ಲಿತ್ತು.
ಅದೊಂದು ಮಧ್ಯಾಹ್ನ ಕ್ಲಾಸುಗಳು ಬೇಗನೇ ಮುಗಿದುಹೋದವು. ನಮ್ಮ ತರಗತಿಗಳ ಪಕ್ಕದ ಡಿಗ್ರಿ ಕಾಲೇಜಿನ ಹಿರಿಯ ಪ್ರೊಫೆಸರ್ ಒಬ್ಬರು ಬಿಡುವಿದ್ದಾಗ ನನ್ನೊಟ್ಟಿಗೆ ಸ್ವಲ್ಪ ಮಾತಾಡುವರು. ಸಾಹಿತ್ಯ ಹಾಗೂ ಸಾಮಾಜಿಕ ಕಳಕಳಿಯ ವಿಚಾರಗಳನ್ನು ಹಂಚಿಕೊಳ್ಳುವರು. ‘ನೀನು ವಯಸ್ಸಿಗೆ ಮೀರಿದ ವಿಚಾರವಂತೆ. ನಿಮ್ಮಂತಹ ಸ್ಟೂಡೆಂಟ್ಸ್ ಸಮಾಜಕ್ಕಾಗಿ ಏನಾದರೂ ಮಾಡಬೇಕು.’ ಅನ್ನುವರು. ಆದರೆ ಇದಾವುದೂ ಅಷ್ಟಾಗಿ ಅರಿವಿಗೆ ಬರದ ನನಗೆ ಅವರೊಟ್ಟಿಗೆ ಮಾತಾಡುವುದು ನನ್ನ ಓರಗೆಯವರ ಎದುರು ಪ್ರೆಸ್ಟೀಜು ಪ್ರಶ್ನೆಯಾಗಿತ್ತು. ನಮ್ಮ ಲೆಕ್ಚರರ್ಸ್ ಕೆಲವರು ಸಹಾ ‘ಸೈನ್ಸ್ ಹುಡುಗಿಗೆ ಆ ಜರ್ನಲಿಸಮ್ ಅವ್ರ ಹತ್ರ ಏನ್ ಕೆಲ್ಸಾ ತಾಯೀ..’ ಅನ್ನೋರು. ಆಗೆಲ್ಲಾ ಒಳಗೊಳಗೇ ಖುಷಿಯಾಗೋದು. ಅಂದು ಅದೇ ಜರ್ನಲಿಸಮ್ ಸರ್, ‘ಕಂಗ್ರಾಟ್ಸ್ ಪುಟ್ಟಾ.. ನಮ್ಮ ಯಂಗ್ ಬಾಯ್ ಪ್ರಹ್ಲಾದ್ ಜೊತೆ ನಿನ್ನ ಮದುವೆ ಫಿಕ್ಸ್ ಆದ ವಿಚಾರ ತಿಳಿದು ಸಂತೋಷ ಆಯ್ತು. ದೇವ್ರು ನಿಮ್ಮಿಬ್ರನ್ನೂ ಚೆನ್ನಾಗಿಟ್ಟಿರ್ಲಿ’ ಅಂದರು. ನನಗೆ ಪ್ರತಿಕ್ರಿಯಿಸುವ ಚುರುಕಾಗಲೀ ತಾಕತ್ತಾಗಲೀ ಎರಡೂ ಒಗ್ಗೂಡಲಿಲ್ಲ. ಅವರಿಗೆ ನಮಸ್ಕರಿಸಿ ಡಿಗ್ರಿ ವಿಭಾಗದ ಕಾರಿಡಾರ್ ದಾಟಿ ನಡೆದುಬಂದೆ.
ಕಣ್ಣೆದುರು ಎಲ್ಲವೂ ತೇಲುತ್ತಿರುವಂತೆ ಭಾಸವಾಯ್ತು. ಅದು ಅಚಾನಕ್ ಆಘಾತವೋ, ಅತೀವ ಸಂತಸವೋ ಅಥವಾ ಒಟ್ಟಾರೆ ಶೂನ್ಯವೋ ಗೊತ್ತಾಗಲಿಲ್ಲ. ಅಂತೂ ನಡೆಯುತ್ತಾ ಬಂದು ಆಡಿಟೋರಿಮ್ ಪಕ್ಕದ ಹುಲ್ಲುಹಾಸಿನ ಬದಿಗೆ ಒಂದು ಪುಟ್ಟ ಕೋಡುಗಲ್ಲಿನ ಮೇಲೆ ಕೂತೆ. ಪುಟ್ಟ ಪೊದೆಯಂಥಾ ಹೂಗಿಡಗಳ ಮೇಲೆ ಚಿಟ್ಟುಗುಬ್ಬಿಗಳು ಹಾರುತ್ತಿದ್ದುದು ಇಂದೂ ಕಣ್ಣಿಗೆ ಕಟ್ಟಿದಂತಿದೆ. ಕೈಯೊಂದು ನನ್ನ ಬಲಭುಜವನ್ನು ಹಿತವಾಗಿ ಸ್ಪರ್ಶಿಸಿತು. ಅದು ಪ್ರಹ್ಲಾದನೇ ಅನ್ನಿಸಿ ಹೆದರಿ ಗಕ್ಕನೆ ತಿರುಗಲಿಲ್ಲ. ಊಹೆ ನಿಜವಾಯಿತು. ಮೆಲ್ಲಗೆ ಮೈ ಮುದುರಿಕೊಂಡು ಎದ್ದು ಪಕ್ಕಕ್ಕೆ ಸರಿದು ನಿಂತೆ. ಅವರಿನ್ನೂ ನನ್ನ ಮಟ್ಟಿಗೆ ನನ್ನ ‘ಸರ್’ ಮಾತ್ರವೇ ಆಗಿದ್ದರು. ಮೌನವು ನಮ್ಮಿಬ್ಬರ ಮಧ್ಯೆ ಬಹಳ ಕಾಲ ಸಂಭ್ರಮಿಸಿತು. ನಿಜ ಹೇಳಬೇಕೆಂದರೆ ಅಂದಿನ ಆ ಭಾವುಕ ಕ್ಷಣಗಳನ್ನು ನಾನೂ ಅಕ್ಷರಶಃ ಆಸ್ವಾದಿಸಿದ್ದೆ. ಎದುರುಬದುರು ನಿಂತರೂ ಬೆರೆಯದ ಕಣ್ಣೋಟ, ಎಲ್ಲ ಗೊತ್ತಿದ್ದೂ ಏನೂ ಮಾತಾಡದೇ ನಿಭಾಯಿಸುವ ಮೌನ, ಹೇಳಬೇಕಾದ್ದು ಹೇಳದೆಯೂ ಸಂವಹಿಸಿದ ಸಿಹಿತನ… ನಾನು ಒಳಗೇ ನಕ್ಕು ಹೂವಾಗುತ್ತಿದ್ದೆ. ಅವನು ಏನೋ ಹೇಳಬೇಕೆಂದು ಗೊತ್ತಿದ್ದೂ ಹೇಳಲಾರದೇ ತಳಮಳಿಸುತ್ತಿದ್ದ. ಅಂದು ಹೆಚ್ಚು ಜನದಟ್ಟಣೆಯಿಲ್ಲದ ಆ ಜಾಗ ನಮ್ಮಿಬ್ಬರಿಗೂ ಅನುಕೂಲವಾಗಲೆಂದು ಕಣ್ಮುಚ್ಚಿ ಕುಳಿತಂತೆ ಸ್ಥಂಭೀಭೂತವಾಗಿತ್ತು.
ಕಡೆಗೂ ದನಿ ಮೂಡಿಸಿದ ಅವನು “ನೋಡು ಇವಳೇ.. ಕಳೆದ ವಾರದಿಂದ ಏನಾಯ್ತೆಂದರೆ… ನಿಮ್ಮನೇಲಿ ನಿಂಗೆ ಹೇಳಿದಾರೋ ಇಲ್ಲವೋ… ” ಎಂದು ಶುರುವಿಟ್ಟು ನಡೆದದ್ದೆಲ್ಲಾ ವಿವರಿಸುತ್ತಾ ಸಾಗಿದ. ನನಗೆ ಕಿವಿಯ ಮೇಲೆ ಶಬ್ದಗಳು ಬಿದ್ದುವಾಗಲೀ ಅವು ಅರ್ಥವತ್ತಾಗಿ ಮೆದುಳು ಸೇರಲಿಲ್ಲ. ಕಡೆಗೆ ಅರಿಯುವ ವ್ಯರ್ಥಪ್ರಯತ್ನ ಬಿಟ್ಟು ‘ಏನಾದರೂ ಹೇಳಿಕೊಳ್ಳಲಿ, ಸುಮ್ಮನೆ ಇವನೆದುರು ನಿಂತುಬಿಡುವ’ ಎಂದು ಮನಸು ತೀರ್ಮಾನಿಸಿತ್ತು. ಅರೆಗಂಟೆ ಕಳೆದು ಅವನು ‘ಬಾ.. ಕ್ಯಾಂಟೀನು ಕಡೆ ಹೋಗುವ’ ಅಂದಾಗ ಎಚ್ಚೆತ್ತು ಚಕ್ಕನೆ ಮನೆಯ ‘ಮರ್ಯಾದೆ ರಾಮಾಯಣ’ ನೆನಪಾಗಿ ‘ಬೇಡ ಸರ್, ಮನೆಗೆ ಹೋಗ್ತೀನಿ’ ಎಂದು ಪುಸ್ತಕ ಎದೆಗವಚಿ ಸರಸರನೆ ಹೆಜ್ಜೆ ಕಿತ್ತಿಟ್ಟೆ. ಹೃದಯ ಅವನಿಂದ ದೂರಾಗಿ ಹೆಜ್ಜೆಹಾಕಲು ಕೊಂಚ ಹಟ ಮಾಡಿತ್ತು. ಆ ಕ್ಷಣ ಕೈಹಿಡಿದು ಸರಸರ ನಡೆಸಿಕೊಂಡು ಹೋಗಲು ಗೆಳತಿಯೊಬ್ಬಳು ಬೇಕೆನಿಸಿತ್ತು. ನಾಲ್ಕು ಹೆಜ್ಜೆ ಮುಂದೆ ಸಾಗಿದವಳ ಕೈಯೊಳಗೆ ಕೈಹಾಕಿ ತಬಸ್ಸುಮ್ ನಡೆದುಬಂದಳು. ಆಶ್ಚರ್ಯ!! ಎಲ್ಲಿದ್ದಳು ಈ ಮೋಸಗಾತಿ ಈವರೆಗೆ! ಈಗ ಬಂದಳಲ್ಲಾ.. ಎಂದೆನಿಸಿ ತಲೆತಗ್ಗಿಸಿ ನಸುನಕ್ಕು ಅವಳ ಕೈ ಗಟ್ಟಿ ಹಿಡಿದು ಸಾಗಿದೆ. ಎಲ್ಲ ಅರಿತವಳಂತೆ ಮುಗುಳುನಕ್ಕು ‘ನಡಿಯೇ ಸುಂದ್ರೀ..’ ಅಂದಳು ತಬಸ್ಸುಮ್. ಮನೆಯ ಮಾಮೂಲಿ ದಾರಿಗೆ ಅವತ್ತು ನೂರಾರು ಬಣ್ಣಗಳ ಓಕುಳಿ ಚೆಲ್ಲಿದಂತಿತ್ತು. ಇಟ್ಟ ಹೆಜ್ಜೆಯೆಲ್ಲಾ ಪರಿಮಳದ ತನನವಾಗಿತ್ತು.
ಕವಯಿತ್ರಿ, ಕಥೆಗಾರ್ತಿ ಮತ್ತು ಇಂಗ್ಲಿಷ್ ಅಧ್ಯಾಪಕಿ. ‘ನವಿಲುಗರಿಯ ಬೇಲಿ’ ಇವರ ಕವನ ಸಂಕಲನ.