ಯಾವುದೇ ಪುಸ್ತಕ, ಗೈಡ್ ಬೇಕಿದ್ದರೂ ನಾವು ಮೊದಲು ಓಡುತ್ತಾ ಇದ್ದದ್ದು ಆತ್ಮ ಸ್ಟೋರ್ಸ್ ಕಡೆಗೆ. ಸುಮಾರು ಐದಾರು ದಶಕಗಳ ಕಾಲ ಅದು ವಿದ್ಯಾರ್ಥಿಗಳ ಬೇಕು ಬೇಡ ನೋಡಿಕೊಂಡಿತು ಮತ್ತು ಈಗಲೂ ತನ್ನ ಕಾಯಕ ಮುಂದುವರೆಸಿದೆ. ಮತ್ತೊಂದು ಸಂಗತಿ ಅಂದರೆ ಈ ರಸ್ತೆಯಲ್ಲಿ ಅಂಡರ್ ಪಾಸ್ ಆಗುತ್ತಿದ್ದ ಸಮಯದಲ್ಲಿ ಅಲ್ಲಿನ ರಸ್ತೆಯ ನಿವಾಸಿಗಳು ಪಟ್ಟ ಪಾಡು ಹೇಳ ತೀರದು! ಇಲ್ಲಿನ ಒಬ್ಬ ಖ್ಯಾತ ಸಿನಿಮಾ ತಾರೆ ಅಂಡರ್ ಪಾಸ್‌ನಿಂದ ಸಾರ್ವಜನಿಕರಿಗೆ ಆಗುವ ತೊಂದರೆ ವಿವರಿಸಿ ಒಂದು ಅರ್ಜಿ ಸಹಾ ಕೊಟ್ಟಿದ್ದರು. ಆದರೆ ಸರ್ಕಾರ ಸರ್ಕಾರವೇ, ಅದಕ್ಕೆ ಯಾರ ಮಾತು ಪಥ್ಯ ಇಲ್ಲ!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಇಪ್ಪತ್ತೊಂಭತ್ತನೆಯ ಕಂತು ನಿಮ್ಮ ಓದಿಗೆ

ರಾಜಾಜಿನಗರದ ನಂತರ ನನ್ನ ತುಂಬಾ ಮೆಚ್ಚಿನ ಸ್ಥಳ ಅಂದರೆ ಮಲ್ಲೇಶ್ವರ. ಇದು ತೊಂಬತ್ತರ ದಶಕದವರೆಗೆ. ಮಲ್ಲೇಶ್ವರದ ಟೋಪೋಗ್ರಫಿ ಎಷ್ಟು ಸುಲಭ ಅಂದರೆ ಆರೋ ಅಥವಾ ಏಳು ಗೆರೆ ಉದ್ದುದ್ದ ಗೀಚಿ, ಅದರ ಮೇಲೆ ಹದಿನೆಂಟು ಅಡ್ಡ ಗೆರೆ ಎಳೆಯಿರಿ. ಈಗ ಮಲ್ಲೇಶ್ವರ ರೆಡಿ. ಉದ್ದನೆ ಗೆರೆಗಳು ಮೇನ್ ರೋಡ್ ಅಂದರೆ ಮುಖ್ಯ ರಸ್ತೆ ಆದರೆ ಅಡ್ಡ ಗೆರೆಗಳು ಕ್ರಾಸ್ ರೋಡುಗಳು. ಇಡೀ ಬೆಂಗಳೂರಿನಲ್ಲಿ ಇಷ್ಟೊಂದು ಸುಲಭವಾದ, ಸಂಕೀರ್ಣ ಅಲ್ಲದ ಎಲ್ಕೇಜಿ ಕೂಸುಗಳಿಗೂ ಸಹ ಅರ್ಥವಾಗುವ ಒಂದು ಮ್ಯಾಪು ಯಾವುದಾದರೂ ಪ್ರದೇಶಕ್ಕೆ ಇದೆ ಅಂದರೆ ಅದು ಮಲ್ಲೇಶ್ವರ ಮತ್ತು ಮಲ್ಲೇಶ್ವರ ಮತ್ತು ಮಲ್ಲೇಶ್ವರ ಅಷ್ಟೇ.. ಇಷ್ಟು ಸುಲಭವಾದ ಮ್ಯಾಪ್ ನಮ್ಮ ಬೆಂಗಳೂರಿನ ಜಯನಗರಕ್ಕೆ, ಜೆಪಿ ನಗರಕ್ಕೆ, ಶಿವಾಜಿ ನಗರಕ್ಕೆ, ಈವನ್ ವಿದ್ಯಾರಣ್ಯಪುರಕ್ಕೇ……. ಯಾವ ನಗರಕ್ಕೂ ಈ ಮ್ಯಾಪ್ ಇಲ್ಲ, ಇಲ್ಲ ಮತ್ತು ಇಲ್ಲ!

ಮಲ್ಲೇಶ್ವರ ಎನ್ನುವ ಅಚ್ಚ ಕನ್ನಡದ ಹೆಸರು ತಮಿಳರ, ಇಂಗ್ಲಿಷರ ಬಾಯಿಗೆ ಸಿಕ್ಕಿ ಮಲ್ಲೇಶ್ವರಂ ಆಗಿದೆ. ಸರಾಸರಿ ಪ್ರತಿವಾರ, ಎರಡು ಬಾರಿ ಕನ್ನಡದ ಹುಡುಗರು, ಹುಡುಗಿಯರು ಫೇಸ್‌ಬುಕ್‌ನಲ್ಲಿ ಮಲ್ಲೇಶ್ವರಂ ಅನ್ನುವುದು ತಪ್ಪು, ನಮ್ಮ ಭಾಷೆ ಹೀಗೆ ಅಪಭ್ರಂಶ ಆಗ ತಕ್ಕದ್ದಲ್ಲ, ಮಲ್ಲೇಶ್ವರ ಅಂತಲೇ ಇರಬೇಕು ಅಂತ ಹೈ ಇಂಗ್ಲಿಷ್‌ನಲ್ಲಿ ಬರೀತಾ ಇರ್ತಾರೆ. ಇದು ಸುಮಾರು ಫೇಸ್ ಬುಕ್ ಶುರು ಆದಾಗಲಿಂದ ಬರುತ್ತಲೇ ಉಂಟು!

ದೇವಯ್ಯ ಪಾರ್ಕ್ ಹತ್ತಿರದ ಓವರ್ ಬ್ರಿಡ್ಜ್ ದಾಟಿ ಮುಂದೆ ಬಂದರೆ ನೀವು ಮಲ್ಲೇಶ್ವರದ ಹೊಸಿಲು ಮೆಟ್ಟಿದ ಹಾಗೆ. ಬ್ರಿಡ್ಜ್ ದಾಟಿದ ಕೂಡಲೇ ಬಲ ಭಾಗಕ್ಕೆ ಮಹಮದನ ಬ್ಲಾಕ್ ಬಂದರೆ ಅದರ ಎದುರು ಹಳ್ಳದಲ್ಲಿ ಒಂದು ಮೈದಾನ ಇತ್ತು. ಈಗ ಅಲ್ಲಿ ಮನೆಗಳು ಬಂದಿವೆ. ಇನ್ನೂ ಮುಂದೆ ಅದೇ ರಸ್ತೆಯಲ್ಲಿ ಬನ್ನಿ ಬಲಕ್ಕೆ ಕೆ ಸಿ ಜನರಲ್ ಆಸ್ಪತ್ರೆ. ಕೆ ಸಿ ಅಂದರೆ ಕೆಂಪು ಚಲುವರಾಜಮ್ಮಣ್ಣಿ ಅಂತ. ಇವರು ಮೈಸೂರು ಸಂಸ್ಥಾನದ ರಾಜಕುಮಾರಿ. ೧೯೧೦ ರಲ್ಲಿ ಮೈಸೂರು ಮಹಾರಾಜರು ಈ ಆಸ್ಪತ್ರೆಯನ್ನು ರಾಜಕುಮಾರಿ ಹೆಸರಲ್ಲಿ ಕಟ್ಟಿಸಿದರು. ರಾಜ್ಯದ ಅತ್ಯಂತ ಹಳೆಯ ಆಸ್ಪತ್ರೆಗಳಲ್ಲಿ ಇದೂ ಒಂದು. ನನಗೂ ಈ ಆಸ್ಪತ್ರೆಗೂ ಒಂದು ಅತ್ಯಂತ ನಿಕಟವಾದ ನಂಟು. ಮೊದಲ ಸಲ ಈ ಆಸ್ಪತ್ರೆ ಭೇಟಿ ಸಹ ಇನ್ನೂ ಹಸಿರು ಹಸಿರು. ಈಗ ಅದರ ಬಗ್ಗೆ….

೧೯೭೩ ಅಂತ ಕಾಣುತ್ತೆ. ನವರಂಗ್ ಟಾಕೀಸ್ ಕಡೆಯಿಂದ ಫಸ್ಟ್ ಶೋ ಮುಗಿಸಿಕೊಂಡು ಮನೆಗೆ ಬರುತ್ತಿದ್ದೆ. ರಾತ್ರಿ ಒಂಬತ್ತರ ಸಮಯ, ಮಳೆ ಬಂದಿತ್ತು, ನೆತ್ತಿ ಮೇಲೆ ಛತ್ರಿ ಹಿಡಿದು ಬರ್ತಾ ಇದ್ದೆ. ಹಿಂದೆ ಬೆನ್ನಿನ ಕೆಳಭಾಗಕ್ಕೆ, ಸೊಂಟಕ್ಕೆ ಏನೋ ಬಲವಾಗಿ ಬಡಿದ ಹಾಗಾಯಿತು. ಕೆಳಗೆ ಬಿದ್ದೆನೋ ಏನೋ ಗೊತ್ತಾಗಲಿಲ್ಲ…. ಎಚ್ಚರ ಆದಾಗ ಯಾವುದೋ ಆಟೋದಲ್ಲಿ ಕೂತಿದ್ದೆ. ಡ್ರೈವರು ದಾರಿ ಉದ್ದಕ್ಕೂ ನನ್ನ ಮಾತನಾಡಿಸಿಕೊಂಡು ಒಂದೆರಡು ಗಂಟೆ ಸುತ್ತು ಹೊಡೆದ. ರಸ್ತೇಲಿ ನೀವು ಬಿದ್ದಿದ್ರಿ, ನಿಮ್ಮನ್ನ ಆಟೋದಲ್ಲಿ ಕೂಡಿಸಿದೆ. ನಿಮ್ಮನ್ನ ಕೂಡಿಸಿಕೊಂಡು ನಾನೇ ಆವಾಗಲಿಂದ ಸುತ್ತುಸ್ತಾ ಇದೀನಿ, ನಿಮ್ಮ ಛತ್ರಿ ನೋಡಿ ನಿಮ್ಮ ಪಕ್ಕದಲ್ಲೇ ಇದೆ… ಅಂದ. ಪಕ್ಕದಲ್ಲಿ ಒದ್ದೆ ಛತ್ರಿ ಮಲಗಿತ್ತು. ಆಟೋ ಡ್ರೈವರು ತುಂಬಾ ಆಪ್ತವಾಗಿ ಮಾತಾಡ್ತಾ ಇದ್ದ. ನಾನೂ ಖುಷಿಯಿಂದ ಅವನ ಜತೆ ಮಾತಾಡಿ ಮಾತಾಡಿ ಸುತ್ತು ಹೊಡೆಸಿದೆ, ಹೊಡೆದೆ. ಬಿಟ್ಟೀ ರೌಂಡ್ ಹೊಡಿಸ್ತಾ ಇದ್ದಾನೆ, ನನ್ಮಗ…. ಹೊಡೆಸಲಿ. ಅಪರೂಪಕ್ಕೆ ಅದೆಷ್ಟೋ ಜನ್ಮಗಳಲ್ಲಿ ಒಮ್ಮೆ ಮಾತ್ರ ಸಿಗುವ ಲಾಕೊಮೆ ಏಕ್ ಅವಕಾಶ ಇದು, ಮ್ಯಾಕ್ಸಿಮಮ್ ಮಜಾ ಉಡಾಯಿಸಿ ಬಿಡು, ಯಾವ ಜನ್ಮದ ಪುಣ್ಯವೋ ಇದು… ಅಂತ ನನ್ನ ಮನಸು ಹೇಳುತ್ತಿತ್ತು. ಮನಸಿನ ಮಾತು ಕೇಳದಿದ್ದರೆ ಹೇಗೆ? ಸುಮಾರು ರೌಂಡ್ ಆಯಿತು. ರೌಂಡ್ ಸಾಕು ಅನಿಸಿದ ಮೇಲೆ ಮನೆಯಿಂದ ಎರಡು ರಸ್ತೆ ಮೊದಲೇ ಇಳಿದೆ. ಮನೆಗೆ ಆಟೋದಲ್ಲಿ ಹೋದರೆ ಮನೇಲಿ ಅಪ್ಪ, ಅಮ್ಮ, ಅಕ್ಕ ಅಣ್ಣಂದಿರು… ಯಾಕೆ ಏನು ಅಂತ ಪ್ರಶ್ನೆ ಕೇಳಿ, ಕೋರ್ಟ್ ಮಾರ್ಷಲ್ ಆಗಬಹುದು ಅನಿಸಿ, ಅವುಗಳಿಂದ ತಪ್ಪಿಸಿಕೊಳ್ಳಲು ಮನೆಯಿಂದ ದೂರವೇ ಇಳಿದೆ. ಇಳಿದು ಆಟೋ ಹಿಂಭಾಗ ಸುತ್ತಿ ಮನೆಗೆ ಹೋಗುವ ರಸ್ತೆಗೆ ಹೊರಳಬೇಕಾದರೆ ಆಟೋ ರಿಕ್ಷಾ ಹಿಂಭಾಗಕ್ಕೆ ಕಣ್ಣು ನೋಡಿತು ಮತ್ತು ಅದರ ನಂಬರು ಮನಸಿನೊಳಗೆ ಇಳಿಯಿತು.

ಮರುದಿನ ಬೆಳಿಗ್ಗೆ ಭುಜ ನೋವು. ಭುಜ ನೋವು ಯಾಕಿರಬಹುದು ಅಂತ ಹಿಂದಿನ ದಿವಸದ ಆಟೋ ನ್ಯೂಸ್ ಮನೆಯಲ್ಲಿ ಹೇಳಿದೆ. ಒಂದಷ್ಟು ಪೂಜೆ ಪುನಸ್ಕಾರ, ಸಹಸ್ರ ನಾಮದ ನಂತರ ಆಸ್ಪತ್ರೆಗೆ ಹೋಗಿ ತೋರಿಸು, ಫ್ರ್ಯಾಕ್ಚರ್ ಆಗಿದ್ದರೆ… ಅಂತ ಮನೇಲಿ ಹೆದರಿಸಿಬಿಟ್ಟರು. ಸರಿ ಕೆ ಸಿ ಜಿ ಗೆ ಹೋದೆ. opd ಯಲ್ಲಿ ಡಾಕ್ಟರ ಹತ್ತಿರ ಭುಜ ನೋವು ಹೇಳಿ ಆಟೋ ಪ್ರಸಂಗ ವಿವರಿಸಿದೆ. ಆಕ್ಸಿಡೆಂಟ್ ಕೇಸು ಇದು ಅಂತ ಅವರು ಪಕ್ಕದ ರೂಮಿನಲ್ಲಿ ಇದ್ದ ಪೊಲೀಸರನ್ನು ಕರೆದರು. ಆಗ ಆಕ್ಸಿಡೆಂಟ್ ಕೇಸುಗಳು ಬಂದರೆ ಅದನ್ನು ಅಟೆಂಡ್ ಮಾಡಲು ಪೊಲೀಸರು ಆಸ್ಪತ್ರೆಯ ಒಂದು ಕೋಣೆಯಲ್ಲಿ ಇರುತ್ತಿದ್ದರು. ಅವರು ಸುಮಾರು ಪ್ರಶ್ನೆ ಕೇಳಿ ಕೇಳಿ ನಿನ್ನನ್ನ ರೌಂಡ್ ಹೊಡೆಸಿದನಲ್ಲ ಅವನ ಆಟೋ ನಂಬರು ಕೊಡು ಅಂದರು. ಅವನಿಗೆ, ರೌಂಡ್ ಹೊಡೆಸಿ ಮನೆಗೆ ಹುಷಾರಾಗಿ ಬಿಟ್ಟ ಅಂತ ಪೊಲೀಸಿನವರು ಸನ್ಮಾನ ಮಾಡಿ ಅದೇನೋ ರಿವಾರ್ಡ್ ಕೊಡಬಹುದು ಅನಿಸಿ ಆಟೋ ನಂಬರು ಹೇಳಿದೆ… ಅವನಿಗೆ ಸನ್ಮಾನಕ್ಕೆ ಬದಲು ಆಗಿದ್ದೇ ಬೇರೆ!

ಆಟೋದ ಡ್ರೈವರು ಸಂಜೆ ಮನೆಗೆ ಹಾಜರು! ನೀವು ಆಟೋ ಇಳಿದು ಮನೆಗೆ ಸೇರೋಗಂಟ ನಿಮ್ಮ ಹಿಂದೆ ಬಂದು ಮನೆ ನೋಡ್ಕೊಂಡೆ. ಸ್ಟೇಶನ್‌ಗೆ ಬನ್ನಿ ಆಟೋ ಸೀಜ್ ಮಾಡವ್ರೆ ಅಂತ ಕಣ್ಣಲ್ಲಿ ನೀರು ಸುರಿಸಿದ. ಆಕ್ಸಿಡೆಂಟ್ ನಾನೇ ಮಾಡಿದ್ದೀನಿ ಅಂತ ಪೊಲೀಸು ಗಾಡಿ ಮಡಕ್ಕೊಂಡವರೆ ಬನ್ನಿ ಅಂದ. ಪೊಲೀಸ್ ಹತ್ರ ಹೋಗಿ ಇವನದ್ದೇನು ತಪ್ಪಿಲ್ಲ ಬಿಡಿ ಅಂತ ಗೋಗರೆದೆ. ಎರಡು ದಿವಸ ಆದಮೇಲೆ ಆಟೋ ಬಿಟ್ಟರು. ಅದೆಷ್ಟು ಕೊಟ್ಟನೋ ತಿಳಿಯದು. ಒಟ್ಟಿನಲ್ಲಿ ಕೇಸ್ ಆಗಲಿಲ್ಲ ಅಂತ ಕಾಣುತ್ತೆ. ಅವತ್ತಿಂದ ಆಟೋದ ಡ್ರೈವರು ಎಲ್ಲೇ ಸಿಗಲಿ ಕೈ ಮುಗೀತಾ ಇದ್ದ! ಇದು ಕೇ ಸಿ ಜನರಲ್ ಆಸ್ಪತ್ರೆಯ ಮೊಟ್ಟ ಮೊದಲ ನೆನಪು.

ಕೇಸಿ ಜನರಲ್ ಆಸ್ಪತ್ರೆಗೆ ನಮ್ಮ ಮೂರನೇ ಅಣ್ಣ ಶಾಮ್ ಕರ್ನಾಟಕದ ಹಲವು ಊರು ಸುತ್ತಿ ಟ್ರಾನ್ಸ್ಫರ್ ಆಗಿ ಬಂದ. ಅವನು ಡಾಕ್ಟರು, ಹಲ್ಲಿನ ಡಾಕ್ಟರು. ಅವನಿಗೆ ಸಿಕ್ಕಾಪಟ್ಟೆ ಅಂದರೆ ಸಿಕ್ಕಾಪಟ್ಟೆ ಕಾಂಟ್ಯಾಕ್ಟ್ಸ್. ಎಲ್ಲರಿಗೂ ಸ್ನೇಹಿತ. ಹೀಗಾಗಿ ಆಸ್ಪತ್ರೆಯ ವೈದ್ಯರು ನನಗೂ ಪರಿಚಯವಾಗಿ ಸ್ನೇಹಿತರು ಆದರು. ಸರ್ಕಾರಿ ಆಸ್ಪತ್ರೆ ಡಾಕ್ಟರು ಫ್ರೆಂಡು ಅಂದರೆ ಕೇಳಬೇಕೆ? ಅಲ್ಲಿನ ಸವಲತ್ತು ಪಡೆಯಲು ನಮಗಿನ್ನ ಬೇರೆ ಯಾರು ಅರ್ಹರು?

ನನ್ನ ಮಗಳು ಅಲ್ಲೇ ಹುಟ್ಟಿದ್ದು. ನನ್ನ ಮಗನಿಗೆ ಅಪೆಂಡಿಕ್ಸ್ ಆಪರೇಶನ್ ಆಗಿದ್ದು ಸಹ ಇಲ್ಲೇ. ನನ್ನ ಲೈಫಿನ ಮೊದಲನೇ ಇಸಿಜಿ ECG ತೆಗೆದದ್ದು ಸಹ ಇಲ್ಲೇ…! ಜತೆಗೆ ನಮ್ಮ ಮನೆಯಲ್ಲಿ ಹಾಗೂ ಸ್ನೇಹಿತರಲ್ಲಿ ಯಾರಿಗೇ ಏನೇ ವೈದ್ಯಕೀಯ ಸಮಸ್ಯೆ ಬಂದರೂ ಇಲ್ಲಿಗೆ ನಮ್ಮ ಮೊದಲ ಭೇಟಿ. ಅತ್ಯಂತ ನುರಿತ ವೈದ್ಯರ ಸಲಹೆ ಮತ್ತು ಅತ್ಯುತ್ತಮ ಚಿಕಿತ್ಸೆ, (ಅತಿ ಕಡಿಮೆ ಫೀಸು) ಇಲ್ಲಿ ನಮಗೆ ಖಾತ್ರಿ. ಅಣ್ಣ ಈಗಿಲ್ಲ, ಆಗಿದ್ದ ವೈದ್ಯರೂ ಇಲ್ಲ ಆದರೂ ಈಗಲೂ ಕೆಸಿ ಆಸ್ಪತ್ರೆ ಮುಂದೆ ಹಾದರೇ ಸಾಕು, ಒಂದು ನಿಮಿಷ ನಿಂತು ಅಲ್ಲಿನ ಆಗಿನ ವೈದ್ಯರು ಹಾಗೂ ಸಿಬ್ಬಂದಿಯನ್ನು ನೆನೆಯುವ ಮನಸಾಗುತ್ತೆ. ಎರಡು ಮೂರು ತಿಂಗಳ ಹಿಂದೆ ಅಲ್ಲೊಂದು ಡಯಾಲಿಸಿಸ್ ಕೇಂದ್ರ ಶುರುವಾಗಿದೆ ಮತ್ತು ಚಿಕಿತ್ಸೆ ಉಚಿತ. ನನಗೆ ಗೊತ್ತಿರುವ ಒಬ್ಬರು ಅಲ್ಲಿ ಡಯಾಲಿಸಿಸ್‌ಗೆ ಹೋಗುತ್ತಾರೆ.

ಇನ್ನೊಂದು ನನ್ನಂತಹವರ ಮನಸ್ಸಿಗೆ ನೋವು ಕೊಡುವ ಹಾಗೂ ಘಾಸಿ ಮಾಡುವ ಸಂಗತಿ ಒಂದಿದೆ. ಆಸ್ಪತ್ರೆ ಮುಂಭಾಗದಲ್ಲಿ ಅದು ಆರಂಭವಾದ ಇಸವಿ, ಜಾಗ ನೀಡಿದ ಮಹಾರಾಜರ ಬಗ್ಗೆ ಒಂದೆರೆಡು ಮಾತು ಗ್ರಾನೈಟ್ ಕಲ್ಲಿನಲ್ಲಿ ಬರೆಸಿ ಮಹಾರಾಜರ ಒಂದು ಪುಟ್ಟ ಅಥವಾ ದೊಡ್ಡ ಪ್ರತಿಮೆ ಮಾಡಿಸಿ ಇಡಬೇಕು. ಇದಕ್ಕೇನು ಅಂತಹ ಅಗಾಧ ಪ್ರಮಾಣದ ಹಣವೂ ಬೇಕಿಲ್ಲ. ಇದು ಸರ್ಕಾರ ಮೊದಲೇ ಮಾಡಬೇಕಿತ್ತು. ಈಗಲಾದರೂ ನಮ್ಮ ಕನ್ನಡ ಸಂಘಗಳು ಒತ್ತಡ ತಂದು ಈ ಕೆಲಸ ಮಾಡಿಸಬೇಕು. ಬಡ ಜನರಿಗೆ ಎಂದು ನೂರಾ ಹದಿನೈದು ವರ್ಷಗಳ ಹಿಂದೆಯೇ ಸ್ಥಳ ನೀಡಿ ಜನರ ನೋವಿಗೆ ಸ್ಪಂದಿಸಿದ ಮಹಾರಾಜ ಇಡೀ ವಿಶ್ವದಲ್ಲಿ ಯಾರಾದರೂ ಇದ್ದರೆ ಅದು ನಮ್ಮ ಮಹಾರಾಜ ಒಬ್ಬರೇ ಇರಬೇಕು. ನಾವು ಅವರನ್ನು ನೆನೆಯದಿರುವಷ್ಟು ಕಟುಕರಾಗಬಾರದು ಮತ್ತು ಸಂವೇದನಾ ಮನೋಭಾವ ಬೆಳೆಸಿಕೊಳ್ಳಬೇಕು. ಮುಂದಿನ ಪೀಳಿಗೆ ನಮ್ಮನ್ನು ಕೃತಘ್ನರು ಎಂದು ಕರೆಯುವ ಅವಕಾಶ ಖಂಡಿತ ಕೊಡಬಾರದು. ಅವನೇನು ಮಾಡಿದ ನಮ್ಮ ಕಾಸು ನಮಗೆ ಕೊಟ್ಟ ಎನ್ನುವ ಉಡಾಫೆ ಮಾತು ಖಂಡಿತ ಬರಲೇಬಾರದು.

ಈ ಆಸ್ಪತ್ರೆ ಎದುರು ರಸ್ತೆಯೇ ಮಾರ್ಗೊಸ ರಸ್ತೆ. ಇದಕ್ಕೆ ಸಮಾನಾಂತರ ರಸ್ತೆ ಸಂಪಿಗೆ ರಸ್ತೆ. ಮಾರ್ಗೊಸ ಎಂದರೆ ಬೇವಿನ ಮರ. ನಾವು ಪುರ ಪ್ರವೇಶ ಮಾಡಿದಾಗ ಈ ರಸ್ತೆಯ ಸುಮಾರು ಬಂಗಲೆಗಳಲ್ಲಿ ಬೇವಿನ ಮರ ನೋಡಿದ ನೆನಪು. ಅದಕ್ಕೂ ಮೊದಲು ಸಹ ಈ ರಸ್ತೆಯಲ್ಲಿ ಬೇವಿನ ಮರ ಇದ್ದವೇನೋ. ಯಾರನ್ನಾದರೂ ಕೇಳೋಣ ಅಂದರೆ ಅಷ್ಟು ಹಿರಿಯರು ಯಾರೂ ಈಗ ಇಲ್ಲ! ಈಗ ಬೇವಿನ ಮರ ರಸ್ತೆಯಲ್ಲಿ ಎಲ್ಲೂ ಕಾಣದು. ಇನ್ನು ಸಂಪಿಗೆ ರಸ್ತೆಗೆ ಬಂದರೆ ಅರವತ್ತರ ದಶಕದಲ್ಲಿ ಎಣಿಸಿದ ಹಾಗೆ ಹಲವಾರು ಸಂಪಿಗೆ ಮರಗಳು ಈ ರಸ್ತೆಯಲ್ಲಿ ಇದ್ದವು. ಈಗ ಔಷಧಿಗೆ ಬೇಕು ಅಂದರೂ ಒಂದೂ ಕಾಣಿಸದು. ಆದರೂ ಹೆಸರು ಮುಂದುವರೆದಿದೆ ಮತ್ತು ಈ ರಸ್ತೆಯ ತುದಿಯಲ್ಲಿ ನ್ಯೂ ಕೃಷ್ಣಭವನದ ಎದುರು ಸಂಪಿಗೆ ಥಿಯೇಟರ್ ಬಂದಿತು ಮತ್ತು ಅದರ ಅವಳಿ, ಇದು ಮಿನಿ, ಸವಿತಾ ಸಹ ಬಂದಿತು.

ಆಸ್ಪತ್ರೆ ಬಲಕ್ಕೆ ತಿರುಗಿದರೆ ಆಗ ಅಂದರೆ ತೊಂಬತ್ತರ ದಶಕದವರೆಗೆ ಎಡಗಡೆ ಒಂದು ಜಟಕಾ ಸ್ಟಾಂಡ್ ಇತ್ತು. ಗಾಂಧಿ ಬಜಾರ್‌ನ ಟ್ಯಾಕ್ಸಿ ಸ್ಟಾಂಡ್ ಹೇಗೆ ಫೇಮಸ್ಸೋ ಹಾಗೆ ಮಲ್ಲೇಶ್ವರದ ಜಟಕಾ ಸ್ಟ್ಯಾಂಡ್ ಸಹ ಫೇಮಸ್. ಸುಮಾರು ಜಟಕಾಗಳು ಒಂದು ಕಡೆ ಕುದುರೆ ರಹಿತವಾಗಿ ಮುಂದಕ್ಕೆ ಬಾಗಿ ನಿಂತಿರುತ್ತಾ ಇದ್ದವು. ಕುದುರೆಗಳು ಮತ್ತೊಂದು ಮೂಲೆಯಲ್ಲಿ ಕೊರಳಿಗೆ ಒಂದು ಗೋಣಿ ಬ್ಯಾಗು ನೇತು ಹಾಕಿಸಿಕೊಂಡು ಅದರಲ್ಲಿನ ಅರೆ ಒಣಗಿದ ಹುಲ್ಲು ಮೇಯುತ್ತಾ ಸ್ವರ್ಗ ಸುಖ ಅನುಭವಿಸುತ್ತಾ ಇದ್ದವು. ಇದರ ಓನರ್ ಮತ್ತು ಡ್ರೈವರುಗಳು ಎಲ್ಲರೂ ಮುಸ್ಲಿಮರು. ಒಂದು ಸಲ ಈ ರಸ್ತೆಯಲ್ಲಿ ಹಾದರೆ ಕುದುರೆ ಲದ್ದಿ, ಗಂಜಲ ಮತ್ತು ಕುದುರೆಗಳು ಜಗಿಯುತ್ತಿದ್ದ ಒಣ ಹಸಿರು ಹುಲ್ಲು ಇವೆಲ್ಲದರ ಮಿಶ್ರಣ ವಾಸನೆ ಗಮಲು ಮೂಗಿಗೆ ಅಡರುತ್ತಿತ್ತು. ಅರವತ್ತರ, ಎಪ್ಪತ್ತರ ದಶಕದ ಉತ್ತರಾರ್ಧದ ತನಕ ಬೆಂಗಳೂರು ಮಧ್ಯಮ ವರ್ಗದ ಜನರ ಮುಖ್ಯ ಸಾರಿಗೆ ಎಂದರೆ ಜಟಕಾಗಳು. ಸ್ವಲ್ಪ ಸಾಹುಕಾರರು ಅಂಬಾಸೆಡರ್ ಕಾರು ಇಟ್ಟುಕೊಂಡಿದ್ದರು. ಜನ ಸಾಮಾನ್ಯರು ಜಟಕಾ ಮತ್ತು bts ಬಸ್ ಅವಲಂಬಿಸಿದ್ದರು. ಕೆಲವರು ಜಟಕಾ ಗಾಡಿಗಳನ್ನು ವರ್ತನೆ ಅಂದರೆ ಕಾಂಟ್ರಾಕ್ಟ್ ರೀತಿ ಅವಲಂಬಿಸಿದ್ದರು. ಸರಕು ಸಾಗಾಣಿಕೆ, ಮನೆ ಸಾಮಾನು ಸಾಗಾಣಿಕೆ, ಬಸುರಿ ಹೆಂಗಸರನ್ನು ಹೆರಿಗೆಗೆ ಆಸ್ಪತ್ರೆಗೆ ಒಯ್ಯಲು ಅಲ್ಲದೆ ಹೆಣ ಸಾಗಾಣಿಕೆ ಸಹ ಈ ವಾಹನದಲ್ಲೇ ಆಗುತ್ತಿತ್ತು. ಸಿನಿಮಾ ನಾಟಕಗಳ ಜಾಹೀರಾತು ಮತ್ತು ಭಾಷಣ ಗೀಷಣದ ಪ್ರಚಾರ ಸಹ ಜಟಕಾಗಳ ಮೂಲಕ ಸ್ಪೀಕರ್ ಕಟ್ಟಿ ಮೈಕ್ ಮೂಲಕ ಮಾಡುತ್ತಿದ್ದರು ಮತ್ತು ಸೈಡಿನಿಂದ ಕರಪತ್ರ ತೂರಿ ಎಸೆಯುತ್ತಿದ್ದರು.

ಗಾಂಧಿ ಬಜಾರ್‌ನಲ್ಲಿನ ಟ್ಯಾಕ್ಸಿ ಸ್ಟ್ಯಾಂಡ್ ಹಾಗೆ ನಗರದ ಬೇರೆ ಬಡಾವಣೆಗಳಲ್ಲಿ (ಕಂಟ್ರೋ ಮೇಂಟ್ ಬಿಟ್ಟು) ಟ್ಯಾಕ್ಸಿ ಸ್ಟ್ಯಾಂಡ್ ಇರಲಿಲ್ಲ. ಅದು ಗಾಂಧಿ ಬಜಾರ್‌ಗೆ ಮಾತ್ರ ವಿಶಿಷ್ಠವಾಗಿತ್ತು. ಇದರ, ಜಟಕಾ ಸ್ಟ್ಯಾಂಡ್ ಹಿಂಭಾಗದಲ್ಲಿ ಮಲ್ಲೇಶ್ವರ ಮೈನ್ ಮಿಡಲ್ ಸ್ಕೂಲ್ ಇತ್ತು. (ಮಲ್ಲೇಶ್ವರದ ಈಗಿನ ಅಂಡರ್ ಪಾಸ್‌ಗೆ ಮೊದಲೇ ಜಟಕಾ ಸ್ಟ್ಯಾಂಡ್ ಕಣ್ಮರೆ ಆಗಿತ್ತು. ಈಗಂತೂ ಆ ಸ್ಟಾಂಡ್ ಯಾರ ನೆನಪಲ್ಲಿಯೂ ಇರುವ ಹಾಗೆ ಕಾಣೆ.) ಅದರ ಮುಂದೆ ಒಂದು ವಿಶಾಲ ಬಯಲು. ಬಹುಶಃ ಆ ಕಾಲದಲ್ಲಿ ಈ ವಲಯಕ್ಕೆ ಈ ಶಾಲೆ ಮೈನ್ ಆಗಿತ್ತು ಎಂದು ಕಾಣುತ್ತೆ. ಮೂರು ನಾಲ್ಕು ದಶಕದ ಹಿಂದೆ ಇಲ್ಲಿ ಶಿಕ್ಷಣ ಇಲಾಖೆ ತನ್ನ ಕಚೇರಿ ಶುರು ಹಚ್ಚಿತು, ಮೈನ್ ಮಿಡಲ್ ಸ್ಕೂಲ್ ಕಾಲಗರ್ಭ ಸೇರಿತು.(ಈ ಕಚೇರಿಯಲ್ಲಿ ಏನೂ ಕೆಲಸವೇ ಇಲ್ಲದೇ ಅರ್ಧ ದಿವಸ ಒಬ್ಬರ ಹಿಂದೆ ಸುತ್ತಿ ಸುತ್ತಿ ಅವರನ್ನು ಕಾವಲು ಕಾದ ಅಪೂರ್ವ ಅನುಭವ ನನ್ನದು. ಅದನ್ನು ಮುಂದೆ ಯಾವಾಗಲಾದರೂ ಹೇಳುತ್ತೇನೆ, ಜ್ಞಾಪಿಸಿ). ಈ ಸ್ಕೂಲಿನ ಹಿಂಭಾಗದ ರಸ್ತೆಯಲ್ಲಿ ಗಾಂಧಿವಾದಿ, ಹಲವು ಗಾಂಧಿ ಅಧ್ಯಯನ ಕೇಂದ್ರಗಳ ಸಂಸ್ಥಾಪಕ, ಪ್ರಕೃತಿ ಚಿಕಿತ್ಸಾ ಪದ್ಧತಿಯ ಪ್ರೇರಕ ಹಾಗೂ ಹಲವು ನೂರು ಚಟುವಟಿಕೆಗಳ ಜೇನು ಗೂಡು, ಸಾಹಿತಿ ಶ್ರೀ ಹೊ. ಶ್ರೀನಿವಾಸಯ್ಯ ಅವರ ಮನೆ. ನನಗೂ ಅವರಿಗೂ ೧೯೮೯ ರಿಂದ ಅವರು ನಿಧನರಾಗುವವರೆಗೆ (೨೦೧೭) ಸ್ನೇಹ ಇತ್ತು. ಸರಳ ಮತ್ತು ಸಜ್ಜನ ಅವರು. ಅವರ ಪರಿಚಯ ಆದ ದಿವಸ ಅವರ ಒಂದು ವಿಸಿಟಿಂಗ್ ಕಾರ್ಡ್ ಕೊಟ್ಟಿದ್ದರು. ಸುಮಾರು ಇಪ್ಪತ್ತು ಸಲ ಮಡಚಿದ್ದ ಅಂದರೆ ಫೋಲ್ಡ್ ಮೇಲೆ ಫೋಲ್ಡ್ ಮಾಡಿದ್ದ ವಿಸಿಟಿಂಗ್ ಕಾರ್ಡ್ ಅದು. ಎರಡೂ ಬದಿಗೆ ಅವರು ಅಧ್ಯಕ್ಷ, ಕಾರ್ಯದರ್ಶಿ, ಕೋಶಾಧಿಕಾರಿ ಮೆಂಬರು, ನಿರ್ದೇಶಕ…. ಹೀಗೆ ಹಲವು ಗೌರವ ಹುದ್ದೆ ನಿರ್ವಹಿಸುತ್ತಿದ್ದ ಸಂಘ ಸಂಸ್ಥೆಗಳ ಹೆಸರು, ವಿಳಾಸ. ಮೊಟ್ಟ ಮೊದಲ ಬಾರಿಗೆ ಇಂತಹ ಅಪೂರ್ವವಾದ ಮತ್ತು ಏಕ ಕಾಲಕ್ಕೆ ಇಷ್ಟೊಂದು ಹುದ್ದೆ ಅಲಂಕರಿಸಿದ್ದವರ ವಿಸಿಟಿಂಗ್ ಕಾರ್ಡ್ ನೋಡಿದ್ದೆ ಮತ್ತು ಈಗಲೂ ಸಹ ಅದು ನನ್ನ ಖಜಾನೆಯಲ್ಲಿ ಎಲ್ಲೋ ಇದೆ! ಮುಂದೆ ಎಂದಾದರೂ ನಾನೂ ಸಹ ಈ ರೀತಿಯ ಹುದ್ದೆ ಅಲಂಕರಿಸಿದರೆ ನನ್ನ ವಿಸಿಟಿಂಗ್ ಕಾರ್ಡ್ ಸಹ ಹೀಗೇ ಮಾಡಿಸಬೇಕು ಅಂದುಕೊಂಡಿದ್ದೆ! ಆ ಕಾಲ ಬರಲೇ ಇಲ್ಲ. ಈಗ ಅವರಿದ್ದ ಮನೆಯ ರಸ್ತೆಗೆ ಅವರ ಹೆಸರು ಕೊಟ್ಟಿದೆ ನಗರ ಪಾಲಿಕೆ. ಇನ್ನು ಮುಂದೆ ಪ್ರತಿ ರಸ್ತೆಯಲ್ಲೂ ಸಾಹಿತಿಗಳು, ಸಾಹಿತಿಗಳು, ಸಾಹಿತಿಗಳು ಮತ್ತು ಸಾಹಿತಿಗಳು!

ಅಪರೂಪಕ್ಕೆ ಅದೆಷ್ಟೋ ಜನ್ಮಗಳಲ್ಲಿ ಒಮ್ಮೆ ಮಾತ್ರ ಸಿಗುವ ಲಾಕೊಮೆ ಏಕ್ ಅವಕಾಶ ಇದು, ಮ್ಯಾಕ್ಸಿಮಮ್ ಮಜಾ ಉಡಾಯಿಸಿ ಬಿಡು, ಯಾವ ಜನ್ಮದ ಪುಣ್ಯವೋ ಇದು… ಅಂತ ನನ್ನ ಮನಸು ಹೇಳುತ್ತಿತ್ತು. ಮನಸಿನ ಮಾತು ಕೇಳದಿದ್ದರೆ ಹೇಗೆ? ಸುಮಾರು ರೌಂಡ್ ಆಯಿತು. ರೌಂಡ್ ಸಾಕು ಅನಿಸಿದ ಮೇಲೆ ಮನೆಯಿಂದ ಎರಡು ರಸ್ತೆ ಮೊದಲೇ ಇಳಿದೆ. 

ಕೆಸೀ ಆಸ್ಪತ್ರೆ ಎದುರು ಎಡ ಮೂಲೆಗೆ ಒಂದು ಆಟದ ಮೈದಾನ. ಆಗ ಅದು ಓಪನ್ ಫೀಲ್ಡ್. ಈಗ ಕೆಲವು ವರ್ಷಗಳ ಹಿಂದೆ ಅದು ಅದು ಒಂದು ಸುಸಜ್ಜಿತ ಕ್ರೀಡಾಂಗಣವಾಯಿತು. ಕ್ರೀಡಾಂಗಣದ ಎದುರು ಬಲ ಪಕ್ಕದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಶ್ರೀ ಸಾಗರ್ ಹೋಟಲ್ಲು. ಬೆಂಗಳೂರಿನ ಮಸಾಲೆ ದೋಸೆ ಹೋಟೆಲುಗಳ ಪಟ್ಟಿಯಲ್ಲಿ ಇದಕ್ಕೆ ಮೊದಲ ಸ್ಥಾನ ಅಂತ ಹೆಸರು. ೧೯೨೦ ರ ಸುಮಾರಿನಲ್ಲಿ CTR Central Tiffin Room ಎನ್ನುವ ಹೆಸರಿನಲ್ಲಿ ಪ್ರಾರಂಭವಾದ ಈ ಹೋಟೆಲ್ ಮಾಲೀಕತ್ವ ಹಲವು ಬಾರಿ ಕೈ ಬದಲಾಯಿಸಿದೆ. ಈಗೊಂದು ಅಥವಾ ಎರಡು ದಶಕದ ಹಿಂದೆ ಹೆಸರು ಶ್ರೀ ಸಾಗರ್ ಎಂದು ಬದಲಾಯಿಸಿಕೊಂಡಿತು. ಆದರೂ ಒಂದು ಪಕ್ಕದಲ್ಲಿ ಹಳೇ ಹೆಸರೂ ಮುಂದುವರೆದಿದೆ. ಇಲ್ಲಿನ ಮಸಾಲೆ ದೋಸೆ, ಮಂಗಳೂರು ಬಜ್ಜಿ ಭಾರೀ ಫೇಮಸ್. ಎಂಬತ್ತರ ದಶಕದಲ್ಲಿ ಇಲ್ಲಿ ಅಷ್ಟು ರಶ್ ಇರುತ್ತಿರಲಿಲ್ಲ. ಇಲ್ಲಿನ ದೋಸೆ ಫೇಮಸ್ ಆದ ಹಾಗೆ ಸಂದಣಿ ಹೆಚ್ಚಿತು ಮತ್ತು ಹೋಟೆಲ್ ಮುಂದೆ ಕ್ಯೂ ಸಹ ಶುರು ಆಯಿತು. ಮಲ್ಲೇಶ್ವರದಲ್ಲಿ ಎಂಬತ್ತರ ದಶಕದಲ್ಲಿ ಬೆಂಗಳೂರಿನ ಈ ಭಾಗದ ಯುವಕರಾದ ನಮಗೆ ಕೆಲವು ವಿಶೇಷ ಆಕರ್ಷಣೆಗಳಿದ್ದವು. ಒಂದು ಈ ಶ್ರೀ ಸಾಗರ್ ಹೋಟೆಲ್, ಜನತಾ ಹೋಟೆಲ್, ಕಾಡು ಮಲ್ಲೇಶ್ವರ ಗುಡಿ ಹತ್ತಿರದ ಬೋಂಡಾ ಅಂಗಡಿ ಮತ್ತು ಇನ್ನೊಂದು ಈ ಹೋಟೆಲ್‌ನಿಂದ ಮೂರು ನಿಮಿಷದಲ್ಲಿ ಸೇರಬಹುದಾದ ಎಂಟನೇ ಕ್ರಾಸಿನ ಗಾಂಧಿ ಸಾಹಿತ್ಯ ಸಂಘ. ಮೊದಲು ಶ್ರೀ ಸಾಗರ್ ಬಗ್ಗೆ ನೆನಪು ಹಂಚಿಕೊಂಡು ನಂತರ ಗಾಂಧಿ ಸಾಹಿತ್ಯ ಸಂಘಕ್ಕೆ ಹಾರೋಣ. ಅದಕ್ಕೆ ಮೊದಲು ನಮ್ಮ ವಿದ್ಯಾರ್ಥಿ ಜೀವನದಲ್ಲಿ ಮಲ್ಲೇಶ್ವರ ಸರ್ಕಲ್‌ನ ಆತ್ಮಾ ಸ್ಟೋರ್ಸ್ ಪುಸ್ತಕದ ಅಂಗಡಿ ಬಹು ಮುಖ್ಯ.

ಯಾವುದೇ ಪುಸ್ತಕ, ಗೈಡ್ ಬೇಕಿದ್ದರೂ ನಾವು ಮೊದಲು ಓಡುತ್ತಾ ಇದ್ದದ್ದು ಆತ್ಮ ಸ್ಟೋರ್ಸ್ ಕಡೆಗೆ. ಸುಮಾರು ಐದಾರು ದಶಕಗಳ ಕಾಲ ಅದು ವಿದ್ಯಾರ್ಥಿಗಳ ಬೇಕು ಬೇಡ ನೋಡಿಕೊಂಡಿತು ಮತ್ತು ಈಗಲೂ ತನ್ನ ಕಾಯಕ ಮುಂದುವರೆಸಿದೆ. ಮತ್ತೊಂದು ಸಂಗತಿ ಅಂದರೆ ಈ ರಸ್ತೆಯಲ್ಲಿ ಅಂಡರ್ ಪಾಸ್ ಆಗುತ್ತಿದ್ದ ಸಮಯದಲ್ಲಿ ಅಲ್ಲಿನ ರಸ್ತೆಯ ನಿವಾಸಿಗಳು ಪಟ್ಟ ಪಾಡು ಹೇಳ ತೀರದು! ಇಲ್ಲಿನ ಒಬ್ಬ ಖ್ಯಾತ ಸಿನಿಮಾ ತಾರೆ ಅಂಡರ್ ಪಾಸ್‌ನಿಂದ ಸಾರ್ವಜನಿಕರಿಗೆ ಆಗುವ ತೊಂದರೆ ವಿವರಿಸಿ ಒಂದು ಅರ್ಜಿ ಸಹಾ ಕೊಟ್ಟಿದ್ದರು. ಆದರೆ ಸರ್ಕಾರ ಸರ್ಕಾರವೇ, ಅದಕ್ಕೆ ಯಾರ ಮಾತು ಪಥ್ಯ ಇಲ್ಲ!

ಮತ್ತೆ ಶ್ರೀ ಸಾಗರ್‌ಗೆ….
ಶ್ರೀ ಸಾಗರ್ ಹೋಟೆಲ್ ದೋಸೆ ಆಕರ್ಷಣೆ ಹೇಗಿತ್ತು ಅಂದರೆ ಮಲ್ಲೇಶ್ವರದ ಭೇಟಿ ಇದಕ್ಕೋಸ್ಕರ ಆಗುತ್ತಿತ್ತು. ಗಾಂಧಿ ಸಾಹಿತ್ಯ ಸಂಘದಲ್ಲಿ ನಮ್ಮ ಯಾವುದೇ ಸಭೆ ನಡೆದರೂ ಇದರ ಭೇಟಿ ಒಂದು ಮಸ್ಟ್. ಜತೆಗೇ ಮನೆಯವರು ನಂಟರು ಇಷ್ಟರು ಎಲ್ಲರಿಗೂ ಈ ಶ್ರೀ ಸಾಗರ್ ರುಚಿ ಹತ್ತಿ ಬಿಟ್ಟಿತ್ತು. ಗಾಂಧಿ ಸಾಹಿತ್ಯ ಸಂಘದಲ್ಲಿ ನಡೆಯುತ್ತಿದ್ದ ನಮ್ಮ ಯಾವುದೇ ಸಭೆಯನ್ನು ತಪ್ಪಿಸದೇ ಹೋಗುತ್ತಿದ್ದದ್ದು ಈ ಶ್ರೀ ಸಾಗರ್ ಸೆಳೆತ ಸಹ ಪ್ರಬಲವಾದ ಕಾರಣ. ಇನ್ನೊಂದು ಸಂಗತಿ, ನೆಂಟರು ಇಷ್ಟರಿಗೂ ಇದರ ರುಚಿ ಹತ್ತಿಸಿದ್ದೆ ಅಂತ ಹೇಳಿದೆ. ಅದರ ಒಂದು ನೆನಪು.

ನಾನು ಕೆಲಸಕ್ಕೆ ಸೇರಿದಾಗ ಪರಿಚಯವಾಗಿ ನಂತರ ನನ್ನ ಆಪ್ತ ವಲಯಕ್ಕೆ ಸುಮಾರು ಸ್ನೇಹಿತರು ಸೇರಿದರು. ಅದರಲ್ಲಿ ಅಲ್ತಾಫ್ ಅಹಮದ್ ಒಬ್ಬ. ಇವನ ತರಹವೇ ಅಹ್ಮದ್ ಖಾನ್, ಅಮಾನುಲ್ಲಾ, ಅನಂತ ಪೂಜಾರ್, ಕಾಶಿ ಮುಂತಾದವರು. ಕೊನೇ ಇಬ್ಬರೂ ಅಲ್ತಾಫ್ ಮೇಲೆ ಎಷ್ಟು ಪ್ರಭಾವ ಬೀರಿದ್ದರು ಎಂದರೆ ಆಗ ಅವನ ಕಮ್ಯುನಿಟಿಯ ಯಾರೂ ಊಹಿಸದ ಫ್ಯಾಮಿಲಿ ಪ್ಲಾನಿಂಗ್ ಆಪರೇಶನ್ ಅವನು ಮಾಡಿಸಿಕೊಂಡಿದ್ದ. ಇವರಿಬ್ಬರೂ ಸೇರಿ ನನ್ನ ಹಾಳುಮಾಡಿದರು ಅಂತ ಆಗಾಗ ತಮಾಷೆಯಾಗಿ ಅಲ್ತಾಫ್ ಹೇಳುತ್ತಿದ್ದ.

ಒಮ್ಮೆ ಇವನ ಸಂಗಡ ಸಿಟಿ ಮಾರ್ಕೆಟ್‌ಗೆ ಕೆಲಸದ ಮೇಲೆ ಹೋಗಬೇಕಾಗಿ ಬಂತು. ಸಿಟಿ ಮಾರ್ಕೆಟ್ ಸುತ್ತಿ ಕೆಲಸ ಮುಗಿಸಿದೆವು. ಮಸೀದಿ ಎದುರು ಬಂದೆವು. ಅಲ್ಲಿ ಆಳೆತ್ತರ ಬುಟ್ಟಿಯಲ್ಲಿ ಸಮೋಸಗಳನ್ನು ಒಬ್ಬ ಜೋಡಿಸಿ ಇಟ್ಟುಕೊಂಡು ಮಾರಾಟ ಮಾಡ್ತಾ ಇದ್ದ. ಅಲ್ತಾಫ್ ಅದನ್ನ ನೋಡಿದ. ಬಾ ಸಮೋಸ ತಿನ್ನಾನಾ.. ಅಂದ. ರಸ್ತೆಯಲ್ಲಿ ಮಾರುವ ಸಮೋಸ ಅದುವರೆಗೂ ತಿಂದಿರಲಿಲ್ಲ. ಅದೂ ಮಸೀದಿ ಮುಂದೆ, ಹಿಂದೇಟು ಹಾಕಿದೆ. ಬಾ ತುಂಬಾ ಚೆನ್ನಾಗಿರತದೆ, ವೆಜಿಟೇರಿಯನ್ ಅದು.. ಅಂತ ಸಮೋಸದವನ ಹತ್ತಿರ ದಬ್ಬಿಕೊಂಡೆ ಹೋದ. ಎರಡು ಸಮೋಸ ಕೊಂಡ. ಪೇಪರ್ ತುಂಡಿನ ಮೇಲೆ ಸಮೋಸ ಬಂತು. ತಿಂದೆವು. ಇನ್ನೊಂದು ಅಂದ. ಬೇಡ ಅಂದೆ. ಮತ್ತೆರೆಡು ಕೊಂಡು ತಿಂದ. ಕೆತ್ತಾ ಅಂತ ಕೇಳಿ ದುಡ್ಡು ಅವನೇ ಕೊಟ್ಟ. ನಾನೂ ತಿಂದನಾ. ಹೆಂಗಿದೆ ಅಂದ. ಸಮೋಸ ತಿನ್ನುವಾಗ ಅದರಿಂದ ಸೋರಿದ ಕರಿದ ಹಳದಿ ಬಣ್ಣದ ಎಣ್ಣೆ ಶರ್ಟ್ ಎದೆ ಭಾಗದಲ್ಲಿ ಹರಡಿತ್ತು. ಅದನ್ನ ನೋಡಿ ಬಿದ್ದು ಬಿದ್ದು ನಕ್ಕ. ಸಮೋಸ ತಿನ್ನಾಕೆ ಬರಾಕಿಲ್ಲ ಅಂತ ಮತ್ತೆ ನಕ್ಕ. ವಾಪಸ್‌ ಬರಬೇಕಾದರೆ ಮಲ್ಲೇಶ್ವರ ಮೇಲೆ ಬಂದೆವು. ಬಾ ದೋಸೆ ತಿನ್ನೋಣ ಅಂತ ಶ್ರೀ ಸಾಗರ್ ಒಳಹೊಕ್ಕೆವು. ದೋಸೆ ಆರ್ಡರ್ ಆಯಿತು ಅದಕ್ಕೆ ಮೊದಲು ಮಂಗಳೂರು ಬಜ್ಜಿ….

ಅವತ್ತು ಅಲ್ತಾಫ್ ಮೂರು ದೋಸೆ ತಿಂದ. ಕೆಲವೇ ದಿವಸದಲ್ಲಿ ಅವನ ಹೆಂಡತಿ ಮಕ್ಕಳು, ಅವನ ಏರಿಯಾದ ಸಮಸ್ತರಿಗೂ ದೋಸೆ ರುಚಿ ಹತ್ತಿಸಿಬಿಟ್ಟ. ರಾಮಚಂದ್ರಪುರದ ಒಂದು ಮಸೀದಿ ಇವನೇ ಕಟ್ಟಿಸಿ ಅದರ ಉಸ್ತುವಾರಿ ನೋಡುತ್ತಿದ್ದ. ಬಂಧು ಬಳಗದವರ ಸಂಗಡ ದೋಸೆ ತಿಂದ ಮಾರನೇ ದಿನ ನನ್ನೆದುರು ಕೂತು ದೋಸೆ ತಿನ್ನಲು ಯಾರು ಯಾರು ಹೋಗಿದ್ದು, ಅವರು ದೋಸೆ ಬಗ್ಗೆ ಏನು ಹೇಳಿದರೂ…. ಮೊದಲಾದ ವರದಿ ಕೊಡುತ್ತಿದ್ದ. ನಿವೃತ್ತಿ ನಂತರ ಕಾರ್ಖಾನೆಯ ವೋಟಿಂಗ್ ಮೆಷಿನ್ ಉಸ್ತುವಾರಿಗೆ ನಿಯೋಜಿತ ಆದ. ಭಾರತದ ಎಲ್ಲೆಡೆ ಸಂಚರಿಸುವ ಕೆಲಸ ಅದು. ಒಮ್ಮೆ ಸಿಕ್ಕಿದಾಗ ಇಬ್ಬರೂ ctr ಪ್ಲಾನ್ ಹಾಕಿದೆವು. ಊರಿಂದ ಬಂದ ಮೇಲೆ ctr ಗೆ ಭೇಟಿ ಅಂತ ಡಿಸೈಡ್ ಆಯಿತು.. ಮರು ವಾರ ಹೀಗೇ ಒಂದು ಕಡೆ (ಉತ್ತರ ಭಾರತ)ಕೆಲಸ ಮುಗಿಸಿ ರೈಲ್ವೆ ಸ್ಟೇಶನ್ ಗೆ ಬಂದ. ಎದುರುಗಡೆ ATM ಕಾಣಿಸಿತು. ದುಡ್ಡು ಡ್ರಾ ಮಾಡಲು ಹೆಜ್ಜೆ ಮುಂದಿಟ್ಟ, ಎಡವಿದ ಹಾಗೆ ಆಗಿ ಮುಗ್ಗರಿಸಿದ. ಅವನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ನಮ್ಮ ctr ಯೋಜನೆ ಮುಂದಿನ ಜನ್ಮಕ್ಕೆ post pone ಆಯಿತು!

CTR ಬಗ್ಗೆ ಮತ್ತೊಂದು ಶ್ರೀ ಜಿ ಪೀ ರಾಜರತ್ನಂ ಅವರಿಗೆ ಸಂಬಂಧ ಪಟ್ಟಿರುವುದು. ಶ್ರೀ ಜಿ ಪೀ ರಾಜರತ್ನಂ ಅವರು ಸೆಂಟ್ರಲ್ ಕಾಲೇಜಿನಲ್ಲಿ ಮೇಷ್ಟರು. ಅಲ್ಲಿ ಕಾಲೇಜು ಮುಗಿದ ನಂತರ ಅಲ್ಲಿನ ಕ್ಯಾಂಟೀನ್‌ನಲ್ಲಿ ಎರಡು ದೋಸೆ ತಿಂದು ಮನೆಗೆ ಹೆಜ್ಜೆ ಹಾಕುತ್ತಿದ್ದರು. ಅವರಿದ್ದದ್ದು ಹದಿನೇಳನೇ ಕ್ರಾಸ್. ಈ CTR ಪಕ್ಕದಲ್ಲೇ ಹಾದು ಮನೆಗೆ ಹೋಗಬೇಕು. CTR ಹೊಕ್ಕು ಇಲ್ಲೂ ಎರಡು ಬೆಣ್ಣೆ ಮಸಾಲೆ ಸವಿದು ಮುಂದಕ್ಕೆ ಹೋಗುತ್ತಿದ್ದರು! ನಾವು CTR ಬಗ್ಗೆ ಹೇಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೋ ಅಷ್ಟೇ ಹೆಮ್ಮೆಯಿಂದ ಮೈಸೂರಿಗರು ಮೈಲಾರಿ ಹೋಟೆಲ್ಲಿನ ದೋಸೆ ಬಗ್ಗೆ ಹೆಮ್ಮೆ ತೋರಿಸುತ್ತಾರೆ. ಕಳೆದ ಬಾರಿ ಮೈಸೂರಿಗೆ ಹೋಗಿದ್ದಾಗ ಮೈಲಾರಿ ದೋಸೆ ಸೇವನೆ ಆಯಿತು. ಮೈಲಾರಿ ಮೈಸೂರಿಗೆ, CTR ನಮಗೆ!

CTR ಎದುರು ಕೆಲವು ವರ್ಷದ ಹಿಂದೆ ಟೆಂಪಲ್ ಫುಡ್ ಎನ್ನುವ ಊಟದ ಹೋಟೆಲ್ ಶುರು ಆಯಿತು. ಆಗಾಗ ಗಂಟೆ ಬಾರಿಸುವುದು ಇಲ್ಲಿನ ವಿಶೇಷ. ಮಲ್ಲೇಶ್ವರದ ಕತೆ ಎಲ್ಲಿಂದ ಎಲ್ಲಿಗೋ ಎಳೆದುಕೊಂಡು ಹೋಗ್ತಾ ಇದೆ ಅಲ್ಲವೇ… CTR ಎದುರು ಮಲ್ಲೇಶ್ವರ ಮೈದಾನ, ಅದರ ಎಡ ಪಾರ್ಶ್ವ ರಸ್ತೆ, ನಂತರ ಮಲ್ಲೇಶ್ವರದ ಹೆಮ್ಮೆಯ ಮಲ್ಲೇಶ್ವರಂ ಕ್ಲಬ್. ಇದಕ್ಕೂ ತೊಂಬತ್ತು ವರ್ಷದ ಇತಿಹಾಸ ಮತ್ತು ಒಂದು ಕ್ಲಬ್ ನೀಡಬೇಕಿರುವ ಎಲ್ಲಾ ಸೌಲಭ್ಯಗಳು ಇಲ್ಲಿ ಲಭ್ಯ. ನಾವು ಓದಿದ ಹೈಸ್ಕೂಲ್ ಸ್ನೇಹಿತರ ಗುಂಪು ಆಗಾಗ ಇಲ್ಲಿ ಸೇರುತ್ತೇವೆ, ಊಟ ಮಾಡುತ್ತೇವೆ, ಕೆಲ ಗಂಟೆ ಕಳೆಯುತ್ತೇವೆ, ಫೋಟೋ ತೆಗೆದು ಫೇಸ್ ಬುಕ್‌ಗೆ ಮತ್ತು ವಾಟ್ಸಾಪ್‌ಗೆ ಹಾಕಿ ಖುಷಿ ಹಂಚಿಕೊಳ್ಳುತ್ತೇವೆ..! ಈ ಕ್ಲಬ್ ಏಳನೇ ಕ್ರಾಸ್‌ನಲ್ಲಿದೆ.

ಇದರ ಹಿಂಭಾಗವೆ ಎಂಟನೇ ಅಡ್ಡ ರಸ್ತೆ. ಇಲ್ಲಿನ ನಮ್ಮ ಬಹು ಮುಖ್ಯ ಆಕರ್ಷಣೆ ಎಂದರೆ ಗಾಂಧಿ ಸಾಹಿತ್ಯ ಸಂಘ. ಬೆಂಗಳೂರಿನ ಯಾವುದೇ ಸಾಹಿತಿ ಮಿತ್ರರನ್ನು ಬಹುವಾಗಿ ಆಕರ್ಷಿಸಿರುವ ಸ್ಥಳಗಳಲ್ಲಿ ಇದೂ ಸಹ ಒಂದು, ಪ್ರಮುಖವಾದದ್ದು. ಗಾಂಧಿ ಸಾಹಿತ್ಯ ಸಂಘ ಮತ್ತು ನಮ್ಮ ನಂಟು ಸುಮಾರು ಐದು ದಶಕದ ಇತಿಹಾಸದ್ದು. ಇದರ ಬಗ್ಗೆ ಮುಂದೆ ತಿಳಿಸುತ್ತೇನೆ.

ಗಾಂಧಿ ಸಾಹಿತ್ಯ ಸಂಘ ದಾಟಿ ಮುಂದೆ ಬಂದು ಬಲಕ್ಕೆ ತಿರುಗಿ ಹತ್ತು ಹೆಜ್ಜೆ ಹಾಕಿದರೆ ಅಲ್ಲಿ ನಿಮಗೆ ಶ್ರೀಮತಿ ಪಂಕಜಾ ಅವರು ಸಿಗುತ್ತಿದ್ದರು. ಅವರ ಮನೆ ಅಲ್ಲೇ ಇತ್ತು. ಶ್ರೀಮತಿ ಪಂಕಜಾ ಅವರು ನುಗ್ಗೇಹಳ್ಳಿ ಪಂಕಜಾ ಹೆಸರಲ್ಲಿ ಕತೆ ಕಾದಂಬರಿ ಹಾಸ್ಯಲೇಖನ ಬರೆಯುತ್ತಾ ಬಂದವರು. ಸಿಪಾಯಿ ರಾಮು ಸಿನಿಮಾ ಇವರ ಕಾದಂಬರಿ, ಇನ್ನು ಬರಲೇ ಯಮುನೆ ಆಧಾರಿತ. ಕನ್ನಡದ ಜತೆಗೆ ಇಂಗ್ಲಿಷ್ ಭಾಷೆಯ ಮೇಲೂ ಪ್ರಭುತ್ವ ಹೊಂದಿದ್ದರು. ಡೆಕ್ಕನ್ ಹೆರಾಲ್ಡ್ ಪತ್ರಿಕೆಗೆ ಇಂಗ್ಲಿಷ್ ಮಿಡಲ್ ಬರೀತಾ ಇದ್ದರು. ಮಿಡಲ್ ಪಬ್ಲಿಷ್ ಆದ ದಿವಸ ಅದರ ಬಗ್ಗೆ ಮಾತು ಇರುತ್ತಿತ್ತು. ೨೦೧೪ ರಲ್ಲಿ ಹಾಸ್ಯಬ್ರಹ್ಮ ಸಂಘಟನೆ ಒಂದು ಬೃಹತ್ ಪ್ರಬಂಧ ಸಂಕಲನ ಹೊರ ತಂದಾಗ ಲೇಖನ ಕೇಳಲು ಅವರ ಮನೆಗೆ ಹೋಗಿದ್ದೆ, ಗೆ. ಕೃಷ್ಣನ ಸಂಗಡ. ಆಗಲೇ ಅವರಿಗೆ ಎಂಬತ್ತು ಆಗಿತ್ತು. ಮರು ವರ್ಷ ಗಾಂಧಿ ಸಾಹಿತ್ಯ ಸಂಘದಲ್ಲಿ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಬಂದಿದ್ದರು.

ಇತ್ತೀಚೆಗೆ ಅವರ ಬಗ್ಗೆ ಫೇಸ್ ಬುಕ್‌ನಲ್ಲಿ ಗೆಳೆಯರೊಬ್ಬರು ಒಂದು ಲೇಖನ ಹಾಕಿದ್ದರು. Old age home ಒಂದರಲ್ಲಿ ಅವರು ಇದಾರೆ. ಈಗ ೯೨, ೯೩ವರ್ಷ ಅವರಿಗೆ. ಆರೋಗ್ಯವಾಗಿದ್ದಾರೆ ಅಂತ. ಇವರನ್ನು ಮುಕ್ತ ಪ್ರಬಂಧ ಸಂಕಲನ ಹೊರ ತಂದಾಗ ಭೇಟಿ ಮಾಡಿದ, ಅವರ ಸಂಗಡ ಲಂಚ್ ಮಾಡಿದ, ಫೋಟೋ ಹಿಡಿಸಿಕೊಂಡ ನೆನಪುಗಳು ಇನ್ನೂ ಮನಸಿನ ಆಳದಲ್ಲಿ ಹುದುಗಿದೆ.

ಇದೇ ಏರಿಯಾದ ಒಂದು ಒಂದೂವರೆ ಕಿಮೀ ಅಂತರದಲ್ಲಿ ಕನ್ನಡದ ಶ್ರೇಷ್ಠ ಸಾಹಿತಿಗಳು ಇದ್ದರು ಅನ್ನುವುದು ವಿಶೇಷ. ಶ್ರೀಯುತ ರಾಜರತ್ನಂ, ಶ್ರೀರಂಗ ಮೊದಲಾದ ಹಿರಿಯರು ಶ್ರೀ ರಾ. ಶಿ (ಡಾ. ಎಂ. ಶಿವರಾಂ) ಅವರ ಮನೆಯಲ್ಲಿ ಸೇರುತ್ತಿದ್ದರು ಎಂದು ಕೇಳಿದ್ದೆ. ಅಂತಹ ಪರಿಸರ ಹೇಗಿದ್ದಿರಬಹುದು ಅಂತ ಸುಮಾರು ಸಲ ಅನಿಸಿತ್ತು. ನನಗೂ ಅಪರಂಜಿ ಪತ್ರಿಕೆಗೂ ನಂಟು ಶುರು ಆದನಂತರ ಅದೆಷ್ಟೋ ನೂರು ಬಾರಿ ರಾಶಿ ಅವರು ಕಾಲವಾದ ನಂತರ ಅವರ ಮನೆಗೆ ಹೋಗುವ ಸಂದರ್ಭಗಳು ಬಂದಿವೆ. ರಾಶಿ ಅವರ ಮನೆಯ ಒಂದು ಭಾಗದಲ್ಲಿ ಕೊರವಂಜಿ ಪತ್ರಿಕೆ ನಡೆಯುತ್ತಿತ್ತು. ೨೫ ವರ್ಷ ನಡೆದು ಅದು ನಿಂತು ಹೋದನಂತರ ರಾಶಿ ಅವರ ಮಗ ಶ್ರೀ ಶಿವಕುಮಾರ್ ಅವರು ಅಪರಂಜಿ ಪತ್ರಿಕೆ ಆರಂಭಿಸಿದರು. ಕೊರವಂಜಿ, ಅಪರಂಜಿ ನಂಟು ಬೆಳೆದದ್ದು ಮತ್ತೊಂದು ಕತೆ. ಈ ಕತೆಗೆ ಬರುವ ಮೊದಲು ಗಾಂಧಿ ಸಾಹಿತ್ಯ ಸಂಘದ ನಂಟು ಹೇಳುತ್ತೇನೆ.

ಸಾಹಿತ್ಯ ಸೇವೆ ಗವರ್ಮೆಂಟ್ ಕಾಲೇಜಿನ ಕೊನೆ ಬೆಂಚಿನಲ್ಲಿ ಕೂತು ಮಾಸ್ತಿ ಅವರನ್ನು ಭೇಟಿ ಮಾಡಿದ್ದ ಪ್ರಸಂಗದ ವರ್ಣನೆ ಯಿಂದ ಆರಂಭವಾಯಿತು ಅಂತ ಹಿಂದೆ ಹೇಳಿದ್ದೆ ಅಲ್ಲವೇ. ಇದು ನಡೆದದ್ದು ೧೯೬೮ ರಲ್ಲಿ. ಕೆಲಸಕ್ಕೆ ಸೇರಿದ ಮೇಲೆ ಕೆಲಸ ತುಂಬಾ ಬೇಸರ ಹುಟ್ಟಿಸಿ ಬಿಡ್ತು. ನಾನು ಓದಿರುವ ಓದಿಗೂ ಮಾಡುತ್ತಿರುವ ಕೆಲಸಕ್ಕೂ ಯಾವುದೇ ಸಂಬಂಧ ಇರಲಿಲ್ಲ. ಅದರ ಜತೆಗೆ ನಾನು ಮಾಡುತ್ತಿರುವ ಕೆಲಸದಿಂದ ನಾನು ಏನೂ ಹೊಸದನ್ನು ಕಲಿಯಲು ಆಗದು ಎನ್ನುವ ಫ್ರಸ್ಟ್ರೇಶನ್ ಆವರಿಸಿಕೊಂಡು ಬಿಟ್ಟಿತು. ಕೆಲಸ ಬಿಟ್ಟು ಬೇರೆ ಹುಡುಕುವುದು ಅಂದರೆ ಆಗ ಕೆಲಸ ಸಿಗೋದೇ ಕಷ್ಟ ಮತ್ತು ಸಿಕ್ಕಿರೋ ಕೆಲಸ ಬಿಟ್ಟರೆ ಬೀದಿಯಲ್ಲಿ ಭಿಕ್ಷೆ ಬೇಡಬೇಕು ಅನ್ನುವ ಸಂದರ್ಭ. ಇದಕ್ಕೆ ಪರ್ಯಾಯ ಏನು ಅಂದರೆ ಇನ್ನೂ ಏನಾದರೂ ಓದಿ ಹೊಸಾ ಕೆಲಸ ಹುಡುಕಿ ಇದನ್ನು ಬಿಡುವುದು! ಈ ದಿಕ್ಕಿನಲ್ಲಿ ತಲೆ ಓಡಿತಾ? ರೆಗ್ಯುಲರ್ ಸಮಯದಲ್ಲಿ ಕಾಲೇಜಿಗೆ ಹೋಗಲು ಕೆಲಸದ ಸಮಯ ಆಗ್ತಾ ಇರ್ಲಿಲ್ಲ. ಬೇರೆ ಆಪ್ಷನ್ ಅಂದರೆ ಸಂಜೆ ಕಾಲೇಜು ಸೇರುವುದು. ಸಂಜೆ ಕಾಲೇಜಿನಲ್ಲಿ ಆಗ ಇದ್ದದ್ದು BA, B.Com ಮತ್ತು LL.b ಇಷ್ಟೇ. ನಾನು ಓದಿದ ಡಿಗ್ರಿಯ ಮುಂದಿನ ಹಂತ ಅಂದರೆ LL.b…!

ಅದೂ ಒಂದೆರೆಡು ಕಾಲೇಜಿನಲ್ಲಿ ತರಗತಿ ಬೆಳಿಗ್ಗೆ ಸಂಜೆ ಎರಡೂ ಹೊತ್ತು ನಡೆಯುತ್ತಿತ್ತು. ನನಗೋ ಕಾರ್ಖಾನೆಯಲ್ಲಿ ಎರಡು ಶಿಫ್ಟು. ಒಂದು ಬೆಳಿಗ್ಗೆ ಆರೂವರೆ ಇಂದ ಮಧ್ಯಾಹ್ನ ಎರಡೂವರೆ ಮತ್ತೊಂದು ಎರಡೂವರೆ ಇಂದ ರಾತ್ರಿ ಹನ್ನೊಂದು. ಲಾ ಓದುವುದೇ ಸರಿ ಅಂತ ನಿರ್ಧರಿಸಿದೆ. ನನ್ನ ಕೆಲವು ಗೆಳೆಯರು ಆಗಲೇ ಲಾ ಕೋರ್ಸ್‌ಗೆ ಸೇರಿದ್ದರು. ಲಾ ಮುಗಿದ ಮೇಲೆ ಕೆಲವು ವರ್ಷ ಯಾರಹತ್ತಿರ ಆದರೂ ಜ್ಯೂನಿಯರ್ ಆಗೋದು, ನಂತರ ನನ್ನದೇ ಸ್ವಂತ ಆಫೀಸು ತೆಗೆಯೋದು ಇದು ನನ್ನ ಯೋಜನೆಯ ಸ್ಥೂಲ ರೂಪ. ಈ ಯೋಚನೆಯ ಹಿನ್ನೆಲೆಯಲ್ಲಿ ಜಗದ್ಗುರು ಶ್ರಿ ರೇಣುಕಾಚಾರ್ಯ ಕಾಲೇಜ್ ಆಫ್ ಲಾ ಗೆ ನನ್ನ ಪ್ರವೇಶ ಆಯಿತು. ಇದು ಆನಂದ ರಾವ್ ಸರ್ಕಲ್ ನಲ್ಲಿತ್ತು. ಇಲ್ಲಿಯವರೆಗಿನ ನನ್ನ ವಿದ್ಯಾಭ್ಯಾಸದ ಖರ್ಚು ವೆಚ್ಚ ನನ್ನ ದೊಡ್ಡಣ್ಣ ಭರಿಸುತ್ತಿದ್ದ. ಈಗ ಮೊಟ್ಟ ಮೊದಲ ಬಾರಿಗೆ ನನ್ನ ಗಳಿಕೆಯ, ನನ್ನ ಸಂಬಳದ ಹಣ ನನ್ನ ವಿದ್ಯಾಭ್ಯಾಸಕ್ಕೆ ಅಂದರೆ ಅದಕ್ಕಿಂತ ಖುಷಿ ಮತ್ತೇನಿದೆ?
ಕಾಲೇಜು ಸೇರಿದೆನಾ? ಮಧ್ಯಾಹ್ನ ಶಿಫ್ಟ್ ಇದ್ದರೆ ಬೆಳಿಗ್ಗೆ ಕಾಲೇಜು, ಬೆಳಿಗ್ಗೆ ಶಿಫ್ಟ್ ಇದ್ದರೆ ಸಂಜೆ ಕಾಲೇಜು ಹೀಗೆ ಸಮಯ ಅಡ್ಜಸ್ಟ್ ಆಯಿತಾ…..

(ಮುಂದುವರೆಯುವುದು..)