ಜನಾರ್ಧನನ ಸಹೋದ್ಯೋಗಿ, ಆಪ್ತ ಮಿತ್ರ ಅಸಿಸ್ಟೆಂಟ್ ಶ್ರೀನಿವಾಸ ಅಸಂಖ್ಯ ಬಾರಿ ಅವನ ಪತ್ನಿಯ ಜೊತೆ ಮಾತನಾಡುತ್ತಲೇ ಇರುತ್ತಿದ್ದ. ಜೊತೆಯಾಗಿ ದಿನಗಳು ರಾಶಿಗಟ್ಟಲೆ ಕಳೆದರೂ, ಆಷಾಢದ ಮಳೆಯಂತೆ ಇವರ ಸಂವಾದ ಮುಗಿಯುವುದಿಲ್ಲ, ಈ ಪ್ರೀತಿಯ ಬಣ್ಣಿಸುವ ಪರಿಯೆಂತು ಎಂದು ಜನಾರ್ಧನ ಅಂದುಕೊಳ್ಳುತ್ತಿದ್ದ. ಒಂದು ಬಾರಿ ಶ್ರೀನಿವಾಸನ ಮನೆಗೆ ಹೋಗುವ ಜನಾರ್ಧನನಿಗೆ ಅವನ ಪತ್ನಿಗೆ ಮಾತು ಬರುವುದಿಲ್ಲ ಎಂದು ತಿಳಿಯುತ್ತದೆ. ಅದೆಷ್ಟು ಅರ್ಥಪೂರ್ಣ, ಭಾವಪೂರ್ಣ ದೃಶ್ಯದ ನೇಯ್ಗೆಯಲ್ಲವೇ ಇದು?
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ರಾಜ್ ಬಿ ಶೆಟ್ಟಿ ನಿರ್ದೇಶನ ಮತ್ತು ನಟನೆಯ ‘ಒಂದು ಮೊಟ್ಟೆಯ ಕಥೆ’ ಸಿನಿಮಾದ ವಿಶ್ಲೇಷಣೆ

 

ಜೀವವೇ ಪ್ರೀತಿಸು ಜೀವ ಹೋಗುವಂತೆ
ಸಂತೆಯ ಮಧ್ಯದಿ ಸ್ವಪ್ನ ತಾಗುವಂತೆ
-ಜಯಂತ ಕಾಯ್ಕಿಣಿ

ಬದುಕೆಂದರೆ ಭರವಸೆ. ಒಂದು ಮರುಭೂಮಿಯಲ್ಲಿ ನಿಂತು ಮೋಡದತ್ತ ಚಿತ್ತ ನೆಟ್ಟು ಮಳೆ ಬರಬಹುದು ಎಂಬ ನಂಬಿಕೆಯಲ್ಲಿ, ಕೊಡೆಯ ಹಿಡಿದು ಸಾಗುವ ತೆರನಾದದ್ದು. ಈ ಪಯಣ ಕೆಲವರಿಗೆ ಸುಲಭ, ಕೆಲವರಿಗೆ ಕಠಿಣ, ಹಲವರಿಗಂತೂ ದುರ್ಭರ. ಆದರೂ ನಡಿಗೆ ಸಾಗುತ್ತಲೇ ಇರಬೇಕು ಸಾಗರದ ಕಡೆಗೆ ನದಿಯಂತೆ. ಇಂತಿರುವಾಗ ತನ್ನನ್ನು ಕಾಡುವ ನ್ಯೂನ್ಯತೆಯೊಂದರ ನೋವಿನಿಂದ, ಬದುಕು ಮತ್ತು ಪ್ರೀತಿ ಎಂದಿಗೂ ತನ್ನ ಕೈಗೆ ಸಿಗದ ಬೆಟ್ಟದ ಮೇಲಿನ ಹೂವು ಎಂದು ಭಾವಿಸಿ, ಜಪ್ತಿ ಮಾಡಿದ ವಾಹನಗಳಂತೆ ಹೃದಯಕ್ಕೆ ತುಕ್ಕು ಹಿಡಿಸಿಕೊಂಡ ವ್ಯಕ್ತಿಯ ಆಲೋಚನೆಗಳು ಹೂವಿನಂತೆ ಅರಳುವ ಪರಿಯ ಚಿತ್ರಣವೇ ರಾಜ್ ಬಿ ಶೆಟ್ಟಿ ನಟನೆ ಹಾಗೂ ನಿರ್ದೇಶನದ ‘ಒಂದು ಮೊಟ್ಟೆಯ ಕಥೆ’.

ಆತ ಜನಾರ್ಧನ. ಕಾಲೇಜೊಂದರಲ್ಲಿ ಕನ್ನಡ ಪ್ರಾಧ್ಯಾಪಕ. ಮಳೆಯೇ ನಿಂತು ಕಿವಿಯಾನಿಸುವ ತೆರನಾದ ಸೊಗಸಾದ ಮಾತು, ಪಾಠ ಮಾಡುವ ಶೈಲಿಯಿದ್ದರೂ ಆತನನ್ನು ಒಂದು ಸಮಸ್ಯೆ ಕಾಡುತ್ತಿತ್ತು. ಅದೇ ತಲೆಯ ತುಂಬಾ ಅರಳದೇ ನಿಂತು ಸೋಮಾರಿತನ ತೋರಿಸುವ, ವೈರಾಗ್ಯ ತಾಳಿದ ಕೂದಲುಗಳು. ಪರಿಣಾಮ, ತರಗತಿಯಲ್ಲಿಯೂ ‘ಮೊಟ್ಟೆ’ ಯೆoಬ ಅಪಹಾಸ್ಯಗಳ ಕೇಳುವ ಪರಿಸ್ಥಿತಿ. ಈ ಸಮಸ್ಯೆಗೆ ಪೂರಕವಾಗಿ ಅವನನ್ನು ಕಾಡುತ್ತಿರುವ ಇನ್ನೊಂದು ಸಂಗತಿ ಒಲವಿನ ಗೈರು ಹಾಜರಾತಿ. ಪ್ರಾಯ 28 ದಾಟುತ್ತಿದ್ದರೂ, ‘ಪರವಶನಾದೆನು ಅರಿಯುವ ಮುನ್ನವೇ’ ಎನ್ನುವ ಹುಡುಗಿಯ ಪ್ರವೇಶ ಬದುಕಿನ ವೇದಿಕೆಯಲ್ಲಿ ನಡೆದೇ ಇಲ್ಲ. ಹೀಗೆ ಇರುವುದೆಲ್ಲವ ಬಿಟ್ಟು, ಇಲ್ಲದರ ಕಡೆಗೆ ತುಡಿಯುವ ಜನಾರ್ಧನನಿಗೆ ಪ್ರಥಮತಃ ಒಲವು ಮೂಡುವುದು ತನ್ನ ಸಹ ಪ್ರಾಧ್ಯಾಪಕಿಯ ಮೇಲೆ. ಅವರೊಂದಿಗೆ ಅಮ್ಮನ ಕೈರುಚಿ ಅಡಗಿರುವ ಬುತ್ತಿಯ ಪರಿಮಳವ ಹಂಚಿಕೊಳ್ಳುತ್ತಾ, ಪ್ರೀತಿಯ ಅನುಭವ- ಅನುಭಾವದಲ್ಲಿ ಮುಳುಗುತ್ತಾನೆ ಜನಾರ್ಧನ.

ಹೀಗೆ ದೋಣಿ ಸಲೀಸಾಗಿ ಸಾಗುತ್ತಿರಬೇಕಾದರೆ, ಬಿರುಸು ತುಂಬಿದ ಅಲೆಯ ರೂಪದಲ್ಲಿ ಬರುವುದು ಹೊಸ ಆಂಗ್ಲ ಪ್ರಾಧ್ಯಾಪಕ. ಆತನ ಚಂದದ ಮುಂದೆ ಜನಾರ್ಧನನ ಹೃದಯದಲ್ಲಿ ಮೀಸಲಿಟ್ಟ ಖುರ್ಚಿ ಖಾಲಿಯಾಗುತ್ತದೆ. ಕಾಲ ರದ್ದಿಯಾಗುತ್ತಿದಂತೆಯೇ ಬೇಸರ ಮಾಯವಾಗಿ, ಹುಡುಕಾಟ ಪುನರಾರಂಭವಾಗುತ್ತದೆ. ಆಗ ಸಿಗುವ ಹುಡುಗಿ, ಮನಸ್ಸಿಗೆ ಹತ್ತಿರವಾಗುತ್ತಿದ್ದಾಳೆ ಅನ್ನುವಾಗಲೇ, ಅವಳ ನಗು, ತಂಗಾಳಿಯಂತಹ ಮಾತಿನ ಹಿಂದೆ ಅಡಗಿರುವ ಕಾರಣ ಅರಿವಾಗುತ್ತದೆ. ಬೋಳು ತಲೆಯವರಿಗೆ ಕೂದಲು ಮೂಡಿಸುವ ಕಂಪನಿಯೊಂದರ ಉದ್ಯೋಗಿಯಾಗಿ ಈ ಮಾಯಾ ನಾಟಕ ಮಾಡುತ್ತಿರುತ್ತಾಳೆ. ಇದನ್ನು ತಿಳಿದು ಜನಾರ್ಧನ ಇನ್ನು ಈ ಪ್ರೇಮ ಪಕ್ಷಿಗೆ ಕಾಯುವ ವಹಿವಾಟು ನಿಲ್ಲಿಸಿ ಮೋಹವ ತ್ಯಜಿಸುವ ನಿರ್ಧಾರಕ್ಕೆ ಬರುತ್ತಾನೆ. ಮತ್ತದೇ ಲೌಕಿಕ ಚಿಂತನೆಗಳು ಮೂಳೆಗಂಟಿದ ಚರ್ಮದಂತೆ ಸೆಳೆಯುತ್ತದೆ. ಮುಂದೆ ಪರಿಚಯವಾಗುವ ಹುಡುಗಿ ದಪ್ಪಗಾಗಿದ್ದಾಳೆ ಎಂದು ಜನಾರ್ಧನ ಅವಳತ್ತ ತಿರಸ್ಕಾರದ ನೋಟವನ್ನು ಬೀರುತ್ತಾನೆ. ಆ ಕ್ಷಣ ಅವನಿಗೆ ತಾನೂ ಪರಿಪೂರ್ಣನಲ್ಲ ಎನ್ನುವ ಸಂಗತಿ ಗಮನಕ್ಕೆ ತಾಕದೆ ಇರಲು, ಪುರುಷ ಮೇಲರಿಮೆಯೆಂಬ ರೆಪ್ಪೆ ಕಣ್ಣುಗಳಿಗೆ ಅಡ್ಡ ಬಂದಿರುತ್ತದೆ. ಮುಂದೆ ಹೃದಯದ ಮಾತು ಕಿವಿಗೆ ತಲುಪಿ ಪ್ರೀತಿಗೆ ಅನ್ವರ್ಥ ಅವಳು ಎಂಬುದು ಅರಿವಾಗಿ ಆತ್ಮವೆರಡೂ ಬೆಸುಗೆಗೊಳ್ಳುತ್ತದೆ. ಹೀಗೆ, ಬದುಕಿನ ಭಾಗಗಳಿಗೆ ಬಿಡಿಸಿದ ಚಿತ್ತಾರದಲ್ಲಿ ವ್ಯತ್ಯಯಗಳಿದ್ದರೂ, ಅವೆಲ್ಲವನ್ನೂ ದಾಟಿ ಸುಂದರ ರೂಪು ರೇಖೆಯನ್ನು ತಾಳುವ ಚಿತ್ರದ ವಿಸ್ತಾರವೇ ‘ಒಂದು ಮೊಟ್ಟೆಯ ಕಥೆ’.

ಇದು ಹಾಸ್ಯ ಪ್ರಧಾನ ಚಿತ್ರವೆಂದು ಮೇಲ್ನೋಟಕ್ಕೆ ಕಂಡರೂ, ಇದರೊಳು ಹುದುಗಿರುವ ಅನೂಹ್ಯ ಭಾವವ ಮರಕುಟಿಗನಂತೆ ಹೆಕ್ಕಿ ತೆಗೆದಾಗಲೇ ಅದರ ಸೂಕ್ಷ್ಮತೆಯು ಪ್ರಚುರಗೊಳ್ಳುವುದು. ಇದರಲ್ಲೊಂದು ದೃಶ್ಯವಿದೆ. ಜನಾರ್ಧನನ ಸಹೋದ್ಯೋಗಿ, ಆಪ್ತ ಮಿತ್ರ ಅಸಿಸ್ಟೆಂಟ್ ಶ್ರೀನಿವಾಸ ಅಸಂಖ್ಯ ಬಾರಿ ಅವನ ಪತ್ನಿಯ ಜೊತೆ ಮಾತನಾಡುತ್ತಲೇ ಇರುತ್ತಿದ್ದ. ಜೊತೆಯಾಗಿ ದಿನಗಳು ರಾಶಿಗಟ್ಟಲೆ ಕಳೆದರೂ, ಆಷಾಢದ ಮಳೆಯಂತೆ ಇವರ ಸಂವಾದ ಮುಗಿಯುವುದಿಲ್ಲ, ಈ ಪ್ರೀತಿಯ ಬಣ್ಣಿಸುವ ಪರಿಯೆಂತು ಎಂದು ಜನಾರ್ಧನ ಅಂದುಕೊಳ್ಳುತ್ತಿದ್ದ. ಒಂದು ಬಾರಿ ಶ್ರೀನಿವಾಸನ ಮನೆಗೆ ಹೋಗುವ ಜನಾರ್ಧನನಿಗೆ ಅವನ ಪತ್ನಿಗೆ ಮಾತು ಬರುವುದಿಲ್ಲ ಎಂದು ತಿಳಿಯುತ್ತದೆ. ಅದೆಷ್ಟು ಅರ್ಥಪೂರ್ಣ, ಭಾವಪೂರ್ಣ ದೃಶ್ಯದ ನೇಯ್ಗೆಯಲ್ಲವೇ ಇದು? ಬಹುಶಃ ಬದುಕಿನ ಬಗೆಗೆ, ಸಂಬಂಧಗಳ ಸಂಕೀರ್ಣತೆಯ ಬಗ್ಗೆ ತಿರಸ್ಕಾರ ಮೂಡಿದ ಮನಸ್ಸುಗಳಿಗೆ ಜೀವ ದ್ರವ್ಯವಿದು. ಪ್ರೀತಿಯೆಂದರೆ ಮಾತಲ್ಲ, ಕಥೆಯಲ್ಲ, ಅದೊಂದು ಮೌನ-ಧ್ಯಾನ. ಕಡಲೆಷ್ಟು ಕುಣಿದರೂ, ನಿಶ್ಯಬ್ದವಾಗಿ ಕುಳಿತು ಕಾಯುವ, ಕಾಣುವ ತೀರದ ಭಾವ. ಭಾರವಾಗಿ ಒರಗಿದ ತಲೆಯ ಮಾತು ಹರಿಸದೆ ತಾಳುವ ಬಸ್ಸಿನ ಬದಿಯ ಜೀವ. ತನ್ನ ಬಿಸಿ ತಣ್ಣಗಾಗುವ ಭಯವ ತ್ಯಜಿಸಿ, ಅವನೇ ನನ್ನ ಇನಿಯ ಎಂದು ಸಾಗರವ ಆಲಂಗಿಸುವ ನೇಸರನ ಯೋಚನೆಯೇ ಪ್ರೇಮ, ಮಿಗಿಲಾದ ಯಾವ ಪ್ರಲೋಭನೆಗಳು ಒಲವ ತುಂಬುವುದಿಲ್ಲ.

ಇನ್ನು ಬದುಕೆಂದರೆ ಸಮತಟ್ಟು ಪ್ರದೇಶದಲ್ಲಿ ಸಾಗುವ ನದಿಯಂತಿರಬೇಕು, ಕಾನನದ ನಡುವೆ ಕಲ್ಲುಗಳ ನಡುವೆ ತೂರುತ್ತಾ ಹೊರಬರಲು ಕಷ್ಟಪಡುವ ಹೊಳೆಯಂತಿರಬಾರದು ಎಂದು ಭಾವಿಸುವವರ ಮಧ್ಯೆ, ಬೇಸಿಗೆಯಲ್ಲಿ ಸಮತಟ್ಟು ಪ್ರದೇಶದ ನದಿಗಳು ಮೈದಾನದಂತೆ ಖಾಲಿಯಾಗಿ ಕಂಡರೆ, ಕಲ್ಲುಗಳ ಕೋಟೆಯ ಮಧ್ಯೆ ನೀರು ನಗುವುದು ಕಾಣುತ್ತದೆ ಎಂಬ ತಿಳುವಳಿಕೆಯ ಮುಖವಾಗಿ ಚಿತ್ರ ಕಾಣುತ್ತದೆ. ಹಾಸ್ಯವಂತೂ ಮಧ್ಯ ಪ್ರಾಚ್ಯ ದೇಶಗಳ ಭೂಗರ್ಭದಲ್ಲಿ ಯಥೇಚ್ಚವಾಗಿ ಸಿಗುವ ತೈಲದಂತೆ ಚಿತ್ರದ ತುಂಬೆಲ್ಲಾ ಹಬ್ಬಿದೆ. ಸಹ ಪ್ರಾಧ್ಯಾಪಕಿಗೆ ಬರೆದ ಪ್ರೇಮ ಪತ್ರವನ್ನು ತಲುಪಿಸಲು ಜನಾರ್ಧನ ಶ್ರೀನಿವಾಸನನ್ನು ಕೇಳಿಕೊಂಡಾಗ, ಆ ಪತ್ರದಲ್ಲಿದ್ದ ಉತ್ಕೃಷ್ಟ ಕನ್ನಡದ ಬಳಕೆಯ ಕಂಡು ‘ನೀವು ಲೆಟರ್ ಕೊಟ್ರೆ ಸಾಲಲ್ಲ. ಅದ್ರ ಒಟ್ಟಿಗೆ ಒಂದು ಡಿಕ್ಷನರಿ ಸಾ ಕೊಡಿ ಆಯ್ತಾ’ ಎನ್ನುವುದು, ಜ್ಯೋತಿಷ್ಯರು ನಿನ್ನ ಹಿಂದೆ ಶನಿ ಇದೆ ಎಂದಾಗ ಫೋಕಸ್ ಜನಾರ್ಧನನ ತಮ್ಮನತ್ತ ತಿರುಗುವುದು ಹೀಗೆ ಅನೇಕ ಪ್ರಸಂಗಗಳು ನಗು ಚೆಲ್ಲಲು ಕಾರಣವಾಗಿದೆ. ಪ್ರಮುಖವಾಗಿ, ಮಂಗಳೂರು ಕನ್ನಡದ ನೈಜ ಪರಿಮಳವೇ ಚಿತ್ರದ ಅನುಭವ ಇನ್ನೊಂದು ದರ್ಜೆಗೆ ಏರಲು ರಹದಾರಿಯಾಗಿದೆ.

ಈ ಚಿತ್ರದ ಕಥನ ಕಟ್ಟುವಿಕೆ ಮತ್ತು ಚಿತ್ರಿಕೆಗೆ ರಾಜ್ ಬಿ ಶೆಟ್ಟಿಯವರಿಗೆ ಅಭಿವಂದನೆಗಳನ್ನು ತಿಳಿಸಲೇಬೇಕು. ಕಡಿಮೆ ನೋಟುಗಳ ಚಲಾವಣೆ ಮಾಡಿ, ಉತ್ಕೃಷ್ಟ ಉತ್ಪನ್ನವೊಂದನ್ನು ನೀಡಿ ಜನರ ಮನಸ್ಸನ್ನು ಹೇಗೆ ಗೆಲ್ಲಬಹುದು ಎಂಬುವುದಕ್ಕೆ ಸಾದೃಶ್ಯವೇ ಈ ಚಿತ್ರ. ಕಥೆಯೇ ಚಿತ್ರದ ಆತ್ಮ ಎಂಬ ಸತ್ಯದ ದಾರಿ ಹಿಡಿದಾಗ ಗೆಲುವಿನ ಗುರುತು ಬೀಳುವ ಸಾಧ್ಯತೆ ಮಲಯಾಳಂ ಚಿತ್ರರಂಗದಂತೆ ಕನ್ನಡ ಸಿನಿ ಜಗತ್ತಿನಲ್ಲೂ ಇದೆ ಎಂದು ಸಾಬೀತು ಪಡಿಸಿದ ಚಿತ್ರ ಇದು. ಮುಂದೆ ಮಲಯಾಳಂನಲ್ಲಿ ‘ತಮಾಷಾ’ ಎಂದೂ, ಹಿಂದಿಯಲ್ಲಿ ‘ಉಜದಾ ಚಮನ್’ ಎಂದೂ ಮರು ನಿರ್ಮಾಣಗೊಳ್ಳುತ್ತದೆ. ಇನ್ನು ಅಭಿನಯದ ಕಡೆಗೆ ಬರುವುದಿದ್ದರೆ, ಜನಾರ್ಧನನ ಉಸಿರು ರಾಜ್ ಬಿ ಶೆಟ್ಟಿ. ಸಹ ಪ್ರಾಧ್ಯಾಪಕಿಯಾಗಿ ಅಮೃತ ನಾಯ್ಕ್ ಸರಳ ಸಹಜ ಅಭಿವ್ಯಕ್ತಿಯ ಸಿಂಚನ. ಶ್ರೀನಿವಾಸನಾಗಿ ಪ್ರಕಾಶ್ ತುಮಿನಾಡು, ಜ್ಯೋತಿಷಿಯಾಗಿ ದೀಪಕ್ ರೈ ಪಾಣಾಜೆ ಭಾವಪೂರ್ಣ ಅಭಿನಯ . ಉಳಿದೆಲ್ಲಾ ಕಲಾವಿದರು ಅಷ್ಟೇ. ಮಿಥುನ್ ಮುಕುಂದನ್ ಅವರ ಸಂಗೀತ ಮೌನರಾಗವ ಮೀಟುವಂಥದ್ದು. ‘ಚಂದ ಅವಳ ಕಿರುಲಜ್ಜೆ’ ಹಾಡು ನೆನಪಿಸುವುದು ಹರೆಯ ಕಾಲದ, ಸೆಳೆವ ಕಣ್ಣು, ಹಾಡುವ ಕಾಲ್ಗೆಜ್ಜೆ, ಕುಣಿವ ಜುಮುಕಿ ಹೊತ್ತು ಕನಸಲಿ ಬಾಗಿಲು ತಟ್ಟುತ್ತಿದ್ದ ಪ್ರೇಯಸಿಯನ್ನು. ‘ಮಾಡರ್ನು ಲೇಡಿಸ್‌ಗೆ ಮನವಿ’ ಹಾಡು ದರ್ಬಾರಿ ಕಾನಡ ರಾಗವ ಧರಿಸಿ ಶ್ರವಣಗಳೇ ಭವ ತೊರೆಯುವಂತೆ ಮಾಡುತ್ತದೆ. ಪ್ರವೀಣ್ ಶ್ರೀಯಾನ್‌ರ ಕಣ್ಣುಗಳು ಮತ್ತು ಕತ್ತರಿ ಆಜನ್ಮ ಪ್ರೇಮಿಗಳ ನಡುವಿನ ಬಾಂಧವ್ಯದ ರೀತಿ ಸೊಗಸಾಗಿ ಕೆಲಸ ಮಾಡಿದೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಸರ್ವ ಪದಾರ್ಥಗಳು ಸಮಪಾಕಗೊಂಡು ಒಗ್ಗರಣೆಯೊಂದರ ಮೂಲಕ ಘಮಲು ಸೂಸುವಂತೆಯೇ, ಬದುಕಿನ ಬಗೆಗಿನ ಅದಮ್ಯ ಪ್ರೀತಿಯ ಕಥೆಯನ್ನು, ಸಂಕಲನ, ವ್ಯವಕಲನದ ಮೊರೆ ಹೋಗದೆ ಊರ ಮಧ್ಯೆ ತೊಳೆದ ಕನ್ನಡಿಯ ಇಟ್ಟು ತೋರಿಸಿರುವ ನೈಜ ಪರಿಕಲ್ಪನೆಯೇ ಈ ‘ಒಂದು ಮೊಟ್ಟೆಯ ಕಥೆ’.

ಮುಗಿಸುವ ಮುನ್ನ:
ಬದುಕೆಂದರೆ ಶಾಂತ ಸಾಗರವಲ್ಲ. ಅಬ್ಬರ ಮೌನಗಳ ಹೊತ್ತ ಅಲೆಗಳತ್ತಲಿನ ಅಭಿಮುಖ ಚಲನೆ. ಎಲ್ಲರ ಪಯಣ ಒಂದೇ ತೆರನಾದುದಲ್ಲ. ಕೆಲವರಿಗೆ ಚತುಷ್ಪಥ ರಸ್ತೆಗಳೇ ಎದುರಾಗಬಹುದು. ಇನ್ನು ಕೆಲವರಿಗೆ ಕಲ್ಲು ಮುಳ್ಳುಗಳು ತುಂಬಿದ ಹಾದಿ ಸಿಗಬಹುದು. ಆದರೆ ಪಯಣ ಸಾಗಲೇ ಬೇಕು, ಹೊರತು ಹಾದಿಗೆ ಹೆದರಿ ಹಿಮ್ಮುಖ ಹೆಜ್ಜೆ ಇಡುವುದಲ್ಲ. ಪ್ರತಿಯೊಬ್ಬರೂ ಪೂರ್ಣತೆಗೆ ತುಡಿದರೂ ಎಲ್ಲರಲ್ಲೂ, ದೈಹಿಕ ಹಾಗೂ ಮಾನಸಿಕ ಹೀಗೆ ಕೆಲ-ಹಲವು ನ್ಯೂನ್ಯತೆಗಳು ಇರುತ್ತವೆ. ಆದರೆ, ಅವೆಲ್ಲವುಗಳನ್ನು ಮೀರಿ ‘ಮೊದಲು ಮಾನವರಾಗುವುದು’ ಈ ಕಾಲದ ತುರ್ತು. ಅವನು ದಪ್ಪ, ಅವಳು ತೆಳ್ಳಗೆ, ಅವನಿಗೆ ಮಾತು ನಿಧಾನ, ಅವಳು ಕಡಿಮೆ ಲಕ್ಷಣ ಹೀಗೆ ಪ್ರತಿಯೊಬ್ಬರ ಬಗ್ಗೆಯೂ ಅಭಿಪ್ರಾಯದ ಪಟ್ಟಿ ಮಾಡುವ ಮನುಷ್ಯ, ತನ್ನ ಮನವ ತೊಳೆಯಲು ಮರೆತು ಹೋಗುತ್ತಾನೆ. ಪ್ರೀತಿಯೆಂದರೆ ಅದು ದೇಹ ಸಂಬಂಧಿತ ವ್ಯಾವಹಾರಿಕ ವಸ್ತುವಲ್ಲ. ಅದು ಹೃದಯಗಳ ಮಧುರ ಮಾತಿನ ಸಂಗಮ ಎಂಬುದು ತಿಳಿದಾಗಲೇ ಪ್ರತಿ ಉಸಿರಿಗೂ ಒಂದು ಅರ್ಥ….