ಕೊರೆಯುವ ನೆಲದ ಮೇಲೆ ಕಾಲಿಡುತ್ತಿದ್ದ ಆನಾಬೆಲ್‌ಳ ಪಾದಗಳಲ್ಲಿ ಗಾಯವಾಗತೊಡಗಿದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. ಆನೆಗಳಲ್ಲಿ, ಪಾದಗಳೂ ನಮ್ಮ ಕಿವಿಯೊಳಗಿನ ಇಯರ್-ಡ್ರಂಗಳಂತೆ ಕೆಲಸಮಾಡುತ್ತವೆ. ವಿಜ್ಞಾನಿಗಳು ಹೇಳುವಂತೆ, ಆನೆಯ ಗುಂಪೊಂದು ನಡೆಯುತ್ತಿದ್ದರೆ, ಆ ಗುಂಪಿನಿಂದ ಇಪ್ಪತ್ತು ಮೈಲಿ ದೂರದಲ್ಲಿರುವ ಆನೆಯೊಂದು, ಆ ಆನೆಗಳ ನಡೆತದಿಂದಾಗುವ ಕಂಪನಗಳನ್ನು ತನ್ನ ಪಾದದ ಮೂಲಕವೇ ಗುರುತಿಸಬಲ್ಲದಂತೆ. ಹೀಗಾಗಿ, ಆನೆಗಳ ಪಾದಗಳು ಅತ್ಯಂತ ಸೆನ್ಸಿಟೀವ್ ಅಂಗಗಳು ಕೂಡಾ.
ಶೇಷಾದ್ರಿ ಗಂಜೂರು ಬರೆಯುವ ‘ಆನೆಗೆ ಬಂದ ಮಾನ’ ಸರಣಿಯಲ್ಲಿ ಆನಾಬೆಲ್‌ ಎಂಬ ಪುಟ್ಟ ಆನೆಮರಿಯ ಬದುಕಿನ ಕತೆಯೊಂದನ್ನು ಇಲ್ಲಿ ಹಂಚಿಕೊಂಡಿದ್ದಾರೆ

ನಾನು ಇತ್ತೀಚೆಗೆ, ಪ್ರವಾಸಕ್ಕೆಂದು ಕೆಲವು ವಾರಗಳ ಕಾಲ ಅಲಾಸ್ಕಕ್ಕೆ ಹೋಗಿದ್ದೆ. ಅಲಾಸ್ಕ ಅಮೆರಿಕದ ಅತ್ಯಂತ ದೊಡ್ಡ ರಾಜ್ಯ. ಅದರ ವೈಶಾಲ್ಯತೆಯಲ್ಲಿ, ಅದು, ನಮ್ಮ ಕರ್ನಾಟಕಕ್ಕಿಂತ ಸುಮಾರು ಹತ್ತು ಪಟ್ಟು ದೊಡ್ಡದು. ಆದರೆ, ಉತ್ತರ ಧೃವಕ್ಕೆ ಹತ್ತಿರವಿರುವ, ವರ್ಷದ ಬಹು ಕಾಲ ಹಿಮಚ್ಛಾದಿತವಾಗಿರುವ ಅಲ್ಲಿನ ಜನಸಂಖ್ಯೆ ಮಾತ್ರ, ಕರ್ನಾಟಕದ ಜನಸಂಖ್ಯೆಗಿಂತ ಸುಮಾರು ನೂರರಷ್ಟು ಕಡಿಮೆ.

ನಾನು, ಮೇ ತಿಂಗಳ ಆದಿಯಲ್ಲಿ ಅಲ್ಲಿಗೆ ಹೋಗಿದ್ದರಿಂದ, ಅಲ್ಲಿನ ಹಲವು ಪ್ರದೇಶಗಳಲ್ಲಿ ಇನ್ನೂ ಹಿಮ ಬೀಳುತ್ತಲೇ ಇತ್ತು. ಅಲ್ಲಿನ ಅತಿ ದೊಡ್ಡ ನಗರವಾದ ಆಂಕರೇಜ್ (ಜನಸಂಖ್ಯೆ: ಸುಮಾರು ಮೂರು ಲಕ್ಷ) ಬಿಟ್ಟು, ಅಲ್ಲಿನ ಸಣ್ಣ-ಪುಟ್ಟ ಊರುಗಳನ್ನು ಸುತ್ತುತ್ತಿದ್ದ ನನಗೆ, ಅಲ್ಲಿ ಹೆಚ್ಚು ಪ್ರವಾಸಿಗರು ಕಾಣಲಿಲ್ಲ. ಇನ್ನಾರಾದರೂ ಭಾರತೀಯ ಸಂಜಾತರು ಕಾಣಬಹುದೇನೋ ಎಂಬ ಆಸಕ್ತಿಯಿಂದ ಹುಡುಕುತ್ತಿದ್ದವನಿಗೆ, ಅಂತಹವರಾರೂ ಕಾಣಲೇ ಇಲ್ಲ.

(ಅಲಾಸ್ಕ)

ಹೀಗೆ ಸುತ್ತಾಡುತ್ತಿದ್ದಾಗ, ಸ್ಕಾಗ್ವೇ ಎಂಬ ಸಣ್ಣ ಊರಿನಲ್ಲಿ (ಜನಸಂಖ್ಯೆ: ಸುಮಾರು ಒಂದು ಸಾವಿರ) “ಬಾಂಬೇ ಕರಿ” ಎಂಬ ರೆಸ್ಟಾರಂಟ್ ಒಂದು ಕಣ್ಣಿಗೆ ಬಿತ್ತು. ಅದರ ಕಿಟಕಿಯಲ್ಲಿ, ರೆಸ್ಟಾರಂಟಿನ ಮೆನು ಇತ್ತು. ಹಲವು ಭಾರತೀಯ ತಿನುಸುಗಳು ಆ ಮೆನುವಿನಲ್ಲಿ ಇದ್ದವು. ಕಿಟಕಿಯ ಮೂಲಕ ಮತ್ತಷ್ಟು ಹಣಕಿದಾಗ, ಅದು ಬಟ್ಟೆಯಂಗಡಿಯೆಂಬಂತೆ ಕಾಣಿಸಿತು. ನನ್ನ ಹೊಟ್ಟೆ ಆ ಹೊತ್ತಿಗಾಗಲೇ ತುಂಬಿದ್ದರಿಂದ, “ಬಾಂಬೇ ಕರಿ”ಯ ಒಳಗೆ ನಾನು ಕಾಲಿಡಲಿಲ್ಲ. ನಂತರದಲ್ಲಿ, ಹೋಗುವ ಅವಕಾಶ ದೊರೆಯಲೇ ಇಲ್ಲ. ಆಮೇಲೆ, ಅದರ ಬಗೆಗೆ ಮತ್ತಷ್ಟು ವಿಚಾರಿಸಿದಾಗ, ಅದು ಬಟ್ಟೆಯಂಗಡಿ-ಕಮ್-ರೆಸ್ಟಾರೆಂಟ್ ಎಂಬ ಅಚ್ಚರಿಯ ವಿಚಾರ ತಿಳಿಯಿತು.

ಕೆಲವೇ ದಿನಗಳ ಪ್ರವಾಸದಲ್ಲಿ, ಇನ್ನೊಂದು ಭಾರತೀಯ ಮುಖವನ್ನು ಹುಡುಕುತ್ತಿರುವ ನನ್ನ ಮನದ ಬಗ್ಗೆ ಆಲೋಚಿಸುತ್ತಿರುವಾಗ, ಎಂದೋ ಓದಿದ್ದ ಸತ್ಯಕತೆಯೊಂದು ನೆನಪಿಗೆ ಬಂತು. ಅದು ಆನಾಬೆಲ್ ಎಂಬ ಭಾರತೀಯಳ ಕತೆ. ಅತಿ ಸಣ್ಣ ವಯಸ್ಸಿಗೇ, ತನ್ನ ಕುಟುಂಬದಿಂದ ಬೇರ್ಪಟ್ಟು, ಅಲಾಸ್ಕಾದಲ್ಲಿ ಏಕಾಕಿತನದ ಜೊತೆಗೇ ನಾನಾ ಬೇನೆಗಳನ್ನು ಅನುಭವಿಸಿ, ೩೨ನೆಯ ವಯಸ್ಸಿನಲ್ಲೇ ಮೃತಪಟ್ಟವಳ ಕತೆ ಅದು.

***

ಆನಾಬೆಲ್‌ಳ ಕತೆಯ ಪ್ರಾರಂಭವಾಗುವುದು ಟಾಯ್ಲೆಟ್ ಪೇಪರ್‌ನಂತಹ ಕ್ಷುಲ್ಲಕ ವಿಷಯದಿಂದ. ೧೯೬೦ರ ದಶಕದಲ್ಲಿ, ಅಮೆರಿಕದ ಪೇಪರ್ ಕಂಪೆನಿಯೊಂದು “ಷಿಫಾನ್”ನಂತೆ ಮೃದುವಾದ ಹೊಸದೊಂದು ಟಾಯ್ಲೆಟ್ ಪೇಪರ್ ಅನ್ನು ಮಾರುಕಟ್ಟೆಗೆ ತಂದಿತು. ತನ್ನ ಮಾರ್ಕೆಟಿಂಗ್ ಕ್ಯಾಂಪೇನಿನ ಅಂಗವಾಗಿ, ವರ್ತಕರಿಗೆ, ಅದು ಒಂದು ಸ್ಪರ್ಧೆಯನ್ನೂ ಏರ್ಪಡಿಸಿತು. ಈ ಸ್ಪರ್ಧೆಯ ಅಂಗವಾಗಿ, “ಷಿಫಾನ್ ಟಾಯ್ಲೆಟ್ ಪೇಪರ್” ಅನ್ನು ಅತಿ ಹೆಚ್ಚು ಮಾರಿದ ವರ್ತಕರಿಗೆ ೩೦೦೦ ಡಾಲರು (ಇಂದಿನ ಸುಮಾರು ೨೫ ಲಕ್ಷ ರೂಪಾಯಿ) ಬಹುಮಾನ ನೀಡುವುದಾಗಿ ಘೋಷಿಸಿತು. ತಮಾಷೆಗೆಂದು, ೩೦೦೦ ಡಾಲರುಗಳ ಹಣ ಬೇಡವೆನಿಸಿದವರು, ಬದಲಿಗೆ, ಮರಿಯಾನೆಯೊಂದನ್ನು ಬಹುಮಾನವಾಗಿ ಪಡೆಯಬಹುದೆಂದೂ ಹೇಳಿತು.

ಆ ವರ್ಷ ಈ ಟಾಯ್ಲೆಟ್ ಪೇಪರ್ ಮಾರಾಟ ಸ್ಪರ್ಧೆಯಲ್ಲಿ ವಿಜಯಿಯಾದವನು, ಜಾಕ್ ಸ್ನೈಡರ್ ಎಂಬ ವ್ಯಕ್ತಿ. ಈ ಜಾಕ್ ಸ್ನೈಡರ್, ಆಂಕರೇಜ್ ನಗರದಲ್ಲಿ ಎರಡು ದೊಡ್ಡ ದಿನಸಿ ಅಂಗಡಿಗಳನ್ನು ಇಟ್ಟುಕೊಂಡಿದ್ದವನು. ಸ್ಪರ್ಧೆಯಲ್ಲಿ ವಿಜಯಿಯಾದ ಅವನನ್ನು ಸಂಪರ್ಕಿಸಿದ ಟಾಯ್ಲೆಟ್ ಪೇಪರ್ ಕಂಪೆನಿಯವರು, ಬಹುಮಾನದ ಹಣವಾದ ೩೦೦೦ ಡಾಲರುಗಳನ್ನು ಕಳುಹಿಸುವುದಾಗಿ ಅವನಿಗೆ ತಿಳಿಸಿದರು. ಆದರೆ, ಅವನು, ಅದನ್ನು ಒಪ್ಪಲಿಲ್ಲ; ತನಗೆ ಮರಿಯಾನೆಯೇ ಬೇಕೆಂದು ಹಟ ಹಿಡಿದ. ಇದು, ಆ ಪೇಪರ್ ಕಂಪೆನಿಯವರನ್ನು ಪೀಕಲಾಟಕ್ಕೆ ದೂಡಿತು. ತಮಾಷೆಗೆಂದು ಅವರು ಹೇಳಿದ್ದ ಮಾತು, ಮುರಿಯಲಾರದ ವಾಗ್ದಾನವಾಗಿ ಮಾರ್ಪಾಡಾಗಿತ್ತು. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ವಾಪಸಾಗದು ಎಂಬ ಗಾದೆ ಮಾತಿದ್ದರೂ, ತಮ್ಮ ಟಾಯ್ಲೆಟ್ ಪೇಪರಿನ ಮಾನ ಉಳಿಸಲು, ಆ ಕಂಪೆನಿಯವರು ಅವನಿಗೆ ಆನೆ ಕೊಡಲೇ ಬೇಕಾದ ಸಂದರ್ಭ ಎದುರಾಯಿತು.

ಅಮೆರಿಕಾದಲ್ಲಿ, ಬಹಳ ಸುಲಭವಾಗಿ ಏನೇನೋ ದೊರೆಯುತ್ತವಾದರೂ, ಆನೆಗಳನ್ನು ಮಾತ್ರ ಬೇರೆಲ್ಲಿಂದಲೋ ತರಿಸಬೇಕು. ಹೀಗಾಗಿ, ಆ ಕಂಪೆನಿ, ಮರಿಯಾನೆಯೊಂದನ್ನು ಒದಗಿಸುವಂತೆ, ಪ್ರಾಣಿಗಳನ್ನು ವಿದೇಶಗಳಿಂದ ತರೆಸುತ್ತಿದ್ದ ವರ್ತಕನೊಬ್ಬನನ್ನು ಕೇಳಿಕೊಂಡಿತು. ಅವನು ಭಾರತದಿಂದ ಮರಿಯಾನೆಯೊಂದನ್ನು ಅಮೆರಿಕಕ್ಕೆ ತರೆಸಿದ. ಅವನ (ಮಾಜಿ?) ಪತ್ನಿಯ ಹೆಸರು ಆನಾಬೆಲ್. ಅವಳಿಗೆ ಅವಮಾನ ಮಾಡಲೆಂದೋ, ಅಥವಾ ಆ ಮರಿಯಾನೆಗೆ ಅವಮಾನ ಮಾಡಲೆಂದೋ, ಅವನು, ಆ ಮರಿಯಾನೆಗೆ “ಆನಾಬೆಲ್” ಎಂದೇ ಹೆಸರಿಟ್ಟ.

ಹೀಗೆ, ಭಾರತದ ಸಮೃದ್ಧ ಕಾಡೊಂದರಲ್ಲಿ ತನ್ನ ಕುಟುಂಬದೊಂದಿಗೆ ಆಟವಾಡಿಕೊಂಡಿದ್ದ ಎರಡು ವರ್ಷದ ಆನಾಬೆಲ್, ಎಲ್ಲರಿಂದ ದೂರಾಗಿ, ಕೊರೆಯುವ ಚಳಿಯ, ಹುಲ್ಲು ಬೆಳೆಯಲೂ ಕಷ್ಟವೆನಿಸುವ ಅಲಾಸ್ಕಾದಲ್ಲಿ ಬಂದಿಳಿದಳು. ಅವಳು, ಅಲ್ಲಿಗೆ ಬಂದಾಗ ಇನ್ನೂ ಬೇಸಿಗೆಯ ಸಮಯ. ಜಾಕ್ ಸ್ನೈಡರ್ ಅವಳನ್ನು ತನ್ನ ಅಂಗಡಿಗಳ ಮುಂದೆ ಪ್ರದರ್ಶನಕ್ಕೆ ಇಟ್ಟ. ಅಷ್ಟೇ ಅಲ್ಲ, ಪಾರ್ಟಿ ಹಾಗೂ ಇನ್ನಿತರ ಸಮಾರಂಭ ಆಯೋಜಿಸುವವರು ಗಂಟೆಗಿಷ್ಟೆಂದು ಅವಳನ್ನು ಬಾಡಿಗೆಗೆ ಪಡೆಯಲೂ ಬಹುದಿತ್ತು. ಆ ಕಾಲದಲ್ಲಿ, ಅಮೆರಿಕದ ಪ್ರಭಾವಿ ರಾಜಕಾರಣಿಯಾಗಿದ್ದ ಸ್ಪೈರೋ ಆಗ್ನ್ಯೂ, ಅಲಾಸ್ಕಾಕ್ಕೆ ಭೇಟಿ ಮಾಡಿದಾಗ, ಅವನನ್ನು ಏರ್‌ಪೋರ್ಟಿನಲ್ಲಿ ಎದುರುಗೊಳ್ಳಲೂ ಅನಾಬೆಲ್‌ಳನ್ನು ಬಳಸಲಾಯಿತು. (ಸ್ಪೈರೋ ಆಗ್ನ್ಯೂ, ಅಮೆರಿಕದ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಒಂದಾದ ರಿಪಬ್ಲಿಕನ್ ಪಕ್ಷದ ನಾಯಕತ್ವದಲ್ಲಿದ್ದವನು. ಆನೆ, ಅವನ ಪಕ್ಷದ ಚಿಹ್ನೆ. ಇದೇ ಸ್ಪೈರೋ ಆಗ್ನ್ಯೂ, ಮುಂದೆ ಅಮೆರಿಕದ ಉಪಾಧ್ಯಾಕ್ಷ ಪದವಿಗೇರಿದ್ದೂ ಅಲ್ಲದೇ, ಲಂಚದ ಹಗರಣವೊಂದರಲ್ಲಿ ಸಿಲುಕಿ ತನ್ನ ಪದವಿಯನ್ನೂ ಕಳೆದುಕೊಂಡದ್ದು ಬೇರೆಯ ವಿಚಾರ)

ಸ್ಪರ್ಧೆಯಲ್ಲಿ ವಿಜಯಿಯಾದ ಅವನನ್ನು ಸಂಪರ್ಕಿಸಿದ ಟಾಯ್ಲೆಟ್ ಪೇಪರ್ ಕಂಪೆನಿಯವರು, ಬಹುಮಾನದ ಹಣವಾದ ೩೦೦೦ ಡಾಲರುಗಳನ್ನು ಕಳುಹಿಸುವುದಾಗಿ ಅವನಿಗೆ ತಿಳಿಸಿದರು. ಆದರೆ, ಅವನು, ಅದನ್ನು ಒಪ್ಪಲಿಲ್ಲ; ತನಗೆ ಮರಿಯಾನೆಯೇ ಬೇಕೆಂದು ಹಟ ಹಿಡಿದ. ಇದು, ಆ ಪೇಪರ್ ಕಂಪೆನಿಯವರನ್ನು ಪೀಕಲಾಟಕ್ಕೆ ದೂಡಿತು.

ಹೀಗೆ, ತಿಂಗಳುಗಳು ಉರುಳಿದವು. ಅಲಾಸ್ಕಾದಲ್ಲಿ ಚಳಿಗಾಲವೂ ಪ್ರಾರಂಭವಾಯಿತು. ಜಾಕ್ ಸ್ನೈಡರನ ಅಂಗಡಿಗಳ ಮುಂದೆ ಅಥವಾ ಪಾರ್ಟಿಗಳಲ್ಲಿ ಅವಳು ಪ್ರದರ್ಶನಕ್ಕಿರದಿದ್ದಾಗ, ಹೀಟರುಗಳಿಂದ ಬೆಚ್ಚಗಿಡುತ್ತಿದ್ದ ಕುದುರೆ ಲಾಯವೊಂದರಲ್ಲಿ ಆನಾಬೆಲ್‌ಳನ್ನು ಕಟ್ಟಿ ಹಾಕಲಾಗುತ್ತಿತ್ತು.

ಸಣ್ಣ ವಯಸ್ಸಿನ ಮರಿಯಾನೆಯೊಂದು, ವಾರಕ್ಕೆ ಸುಮಾರು ಮೂವತ್ತು ಕೆ.ಜಿ.ಯವರೆಗೆ ಬೆಳೆಯುತ್ತದೆ. ಆನೆಯನ್ನು ಸಾಕುವುದು ರಾಜರಿಗೂ ಕಷ್ಟ. ಅದರಲ್ಲೂ, ಗೆಡ್ಡೆ-ಗೆಣಸೂ ಬೆಳೆಯದ, ಸದಾ ಹಿಮದಿಂದ ಆವೃತವಾಗಿರುವ ಅಲಾಸ್ಕಾದಲ್ಲಿ ಆನಾಬೆಲ್‌ಳಿಗೆ ಸೂಕ್ತ ಆಹಾರ-ವಸತಿ ಒದಗಿಸುವುದು ಜಾಕ್ ಸ್ನೈಡರ್‌ನಿಗೆ ಕಷ್ಟವೆನಿಸಲಾರಂಭಿಸಿತು.

ಆನಾಬೆಲ್‌ಳನ್ನು ಕಟ್ಟಿ ಹಾಕುತ್ತಿದ್ದ ಕುದುರೆ-ಲಾಯದ ಮಾಲೀಕನ ಹೆಂಡತಿ, ಒಂದು ಪ್ರಾಣಿ ಸಂಗ್ರಹಾಲಯ/ಅನಾಥಾಶ್ರಮವೊಂದನ್ನು ನಡೆಸುತ್ತಿದ್ದಳು. ಜಾಕ್ ಸ್ನೈಡರ್, ಆನಾಬೆಲ್‌ಳನ್ನು ಆ ಸಂಗ್ರಹಾಲಯಕ್ಕೆ ದಾನ ಮಾಡಿದ. ಅನಾಥ ಕುದುರೆ, ನಾಯಿ ಇತ್ಯಾದಿಗಳನ್ನು ಸಾಕುತ್ತಿದ್ದ ಅವಳ ಪ್ರಾಣಿ ಸಂಗ್ರಹಾಲಯಕ್ಕೆ, ಆನಾಬೆಲ್ ಹೀಗೆ ಸೇರಿಕೊಂಡಳು. ಕೆಲ ವರ್ಷಗಳ ನಂತರ, ಒಂದು ಅನಾಥ ಕರಡಿಯೂ ಈ ಸಂಗ್ರಹಾಲಯಕ್ಕೆ ಸೇರಿಕೊಂಡು ಮುಂದೆ ಅದು, ಆಂಕರೇಜ್ ಜ಼ೂ ಆಗಿ ಪರಿವರ್ತನೆಯಾಯಿತು.

***

ಆಂಕರೇಜ್ ಜ಼ೂನಲ್ಲಿ ಆನಾಬೆಲ್‌ಳ ಜೀವನ ಸುಗಮವಾಗೇನೂ ಇರಲಿಲ್ಲ. ಅಲಾಸ್ಕಾದಲ್ಲಿ, ಹಿಮವಿರದ ಜಾಗದಲ್ಲೂ, ಚಳಿ ನಮ್ಮ ಪಾದದ ಮೂಲಕ ಒಳಹೊಕ್ಕು ಮೈ-ಮೂಳೆಗಳನ್ನೆಲ್ಲಾ ಕೊರೆಯುತ್ತದೆ. ಇಂತಹ ಕೊರೆಯುವ ನೆಲದ ಮೇಲೆ ಕಾಲಿಡುತ್ತಿದ್ದ ಆನಾಬೆಲ್‌ಳ ಪಾದಗಳಲ್ಲಿ ಗಾಯವಾಗತೊಡಗಿದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. ಆನೆಗಳಲ್ಲಿ, ಪಾದಗಳೂ ನಮ್ಮ ಕಿವಿಯೊಳಗಿನ ಇಯರ್-ಡ್ರಂಗಳಂತೆ ಕೆಲಸಮಾಡುತ್ತವೆ. ವಿಜ್ಞಾನಿಗಳು ಹೇಳುವಂತೆ, ಆನೆಯ ಗುಂಪೊಂದು ನಡೆಯುತ್ತಿದ್ದರೆ, ಆ ಗುಂಪಿನಿಂದ ಇಪ್ಪತ್ತು ಮೈಲಿ ದೂರದಲ್ಲಿರುವ ಆನೆಯೊಂದು, ಆ ಆನೆಗಳ ನಡೆತದಿಂದಾಗುವ ಕಂಪನಗಳನ್ನು ತನ್ನ ಪಾದದ ಮೂಲಕವೇ ಗುರುತಿಸಬಲ್ಲದಂತೆ. ಹೀಗಾಗಿ, ಆನೆಗಳ ಪಾದಗಳು ಅತ್ಯಂತ ಸೆನ್ಸಿಟೀವ್ ಅಂಗಗಳು ಕೂಡಾ.

ಆನಾಬೆಲ್‌ಳ ಪಾದಗಳಿಗೆ ಪದೇ ಪದೇ ಆಗುತ್ತಿದ್ದ ಗಾಯಗಳನ್ನು ಗಮನಿಸಿದ ಆ ಜ಼ೂನ ಮೇಲ್ವಿಚಾರಕರು ಅವಳ ಕಾಲಿಗೆ ವಿಧವಿಧವಾದ ಪಾದರಕ್ಷೆ ಮತ್ತು ಕಾಲ್ಚೀಲಗಳನ್ನು ತೊಡೆಸಲಾರಂಭಿಸಿದರು. ತನ್ನ ಬಣ್ಣ-ಬಣ್ಣದ ಪಾದರಕ್ಷೆ ಮತ್ತು ಕಾಲ್ಚೀಲಗಳಿಂದ, ೧೯೬೦ರ ದಶಕದಲ್ಲಿ, ಕೆಲ-ಕಾಲ, ಅವಳು, ಫ್ಯಾಷನ್-ಐಕಾನ್ ಆಗಿ ಅಮೆರಿಕದಲ್ಲಿ ಪ್ರಸಿದ್ಧಿಯನ್ನೂ ಪಡೆದಳು. ಕೊರೆಯುವ ಚಳಿಯಿಂದ ತಮ್ಮ ಪಾದಗಳನ್ನು ರಕ್ಷಿಸಿಕೊಳ್ಳಲು, ಅಲಾಸ್ಕಾದ ಜನರು, ಹಿಮಸಾರಂಗದ ಚರ್ಮದಿಂದ ಮಾಡಿದ ಮುಕ್ಲುಕ್ ಎಂಬ ಪಾದರಕ್ಷೆಗಳನ್ನು ತೊಡುತ್ತಾರೆ. ಆನಾಬೆಲ್‌ಳಿಗೂ, ಆ ಕಾಲದಲ್ಲಿ ಇಂತಹುದೇ ಪಾದರಕ್ಷೆಗಳನ್ನು ತೊಡೆಸಲಾಯಿತು. (ಆನಾಬೆಲ್‌ಳಿಗೆ ಮುಕ್ಲುಕ್ ತೊಡೆಸುವ ಅಲಾಸ್ಕಾ ಜನರ “ಜಾಣ್ಮೆ ಮತ್ತು ಕಾಳಜಿ”ಯ ಕತೆ ಹೇಳುವ ಪುಸ್ತಕ “Mukluks for Annabelle” ಅಮೆಜ಼ಾನ್‌ನಲ್ಲಿ ದೊರೆಯುತ್ತದೆ.)

ಚಳಿಯ ಕೊರೆತದಿಂದ soleಗೆ ಆಗುವ ಗಾಯಗಳನ್ನು ಪಾದರಕ್ಷೆಗಳಿಂದ ತಡೆಗಟ್ಟಬಹುದಾದರೂ, ಏಕಾಕಿತನದಿಂದ soulಗೆ ಆಗುವ ಗಾಯಗಳನ್ನು ತಡೆಯುವುದು ಅಷ್ಟು ಸುಲಭವಲ್ಲ. ಆನೆಗಳು ಸಂಘಜೀವಿಗಳು. ಕಾಡಿನಲ್ಲಿ, ಆನೆಯೊಂದರ ಕುಟುಂಬ ಬಹಳ ದೊಡ್ಡದು. ಮಗುವಾಗಿ ಕುಟುಂಬ ಸೇರುವ ಆನಾಬೆಲ್‌ಳಂತಹ ಹೆಣ್ಣಾನೆಮರಿ, ಅಕ್ಕ, ಅತ್ತೆ, ಚಿಕ್ಕಮ್ಮ, ಅಮ್ಮ, ಅಜ್ಜಿ-ಮುತ್ತಜ್ಜಿಯಾದರೂ ಅದೇ ಕುಟುಂಬದಲ್ಲೇ ಇರುತ್ತಾಳೆ. ಹೀಗೆ ದೊಡ್ಡ ಕುಟುಂಬವೊಂದರಲ್ಲಿ ಆಡುತ್ತಾ ಬೆಳೆಯುವ ಮರಿ ಆನೆಯೊಂದಕ್ಕೆ ಏಕಾಕಿತನ ಮೂಡಲೂ ಆಸ್ಪದವಾದರೂ ಎಲ್ಲಿ? ಆದರೆ, ಆನಾಬೆಲ್‌ಳನ್ನು ಇವರೆಲ್ಲರಿಂದ ದೂರ ಮಾಡಿ, ಹಿಮದ ಬಿಳುಪಿನಲ್ಲೂ ಸದಾ ಮಬ್ಬಿನಲ್ಲಿರುವ ಅಲಾಸ್ಕಾಗೆ ತರಲಾಗಿತ್ತು. ಆಂಕರೇಜ್ ಜ಼ೂನಲ್ಲಿ ದಿನಗಳೆದಂತೆ, ಅವಳು “ಮೂಡಿ” ಆದಳು. ಜ಼ೂ ಮೇಲ್ವಿಚಾರಕರ ಮೇಲೆ, ಜ಼ೂಗೆ ಬಂದ ವೀಕ್ಷಕರ ಮೇಲೆ ಅವಳು ತನ್ನ ಕೋಪ ಪ್ರದರ್ಶಿಸುವ ಘಟನೆಗಳೂ ನಡೆದವು. ಹೀಗಾಗಿ, ಅವಳನ್ನು ಜನರಿಂದ ಮತ್ತಷ್ಟು ದೂರವಿಡುವ ಸಂದರ್ಭವೂ ಬಂದು, ಅವಳ ಏಕಾಂಗಿತನ ಮತ್ತಷ್ಟು ತೀವ್ರವಾಗುವಂತಾಯಿತು.

ಅವಳ ಬೇಸರವನ್ನು ನೀಗಿಸಲು, ಅವಳಿಗೆ ಪೇಂಟ್ ಮತ್ತು ಬ್ರಶ್‌ಗಳನ್ನು ಒದಗಿಸಲಾಯಿತು. ಅವಳು ಪೇಂಟಿಂಗ್ ಮಾಡಲಾರಂಭಿಸಿದಳು. ಅವಳು, ಆ ಕಾಲದಲ್ಲಿ ರಚಿಸಿದ ಚಿತ್ರಗಳು ಇಂದೂ ಸಹ ಮಾರಾಟಕ್ಕಿವೆ.

ಚಿತ್ರಕಲಾ ರಚನೆ, ಆನಾಬೆಲ್‌ಳ ನೀರಸತನವನ್ನು ಕೊಂಚ ಮಟ್ಟಿಗೆ ಕಡಿಮೆ ಮಾಡಿರಬಹುದಾದರೂ, ಆವಳ ಒಂಟಿತನವನ್ನೇನೂ ಕಡಿಮೆ ಮಾಡಲಿಲ್ಲ. ಆನಾಬೆಲ್, ಆಂಕರೇಜ್ ಜ಼ೂ ಸೇರಿದ ಹಲವು ವರ್ಷಗಳ ನಂತರ, ಅವಳ ಜೊತೆಗಾರ್ತಿಯಾಗಿರಲು ಆ ಜ಼ೂಗೆ ಇನ್ನೊಂದು ಮರಿಯಾನೆಯನ್ನು ತರೆಸಲಾಯಿತು. ಅದೂ ಸಹ ಹೆಣ್ಣಾನೆಮರಿಯೇ. ಅವಳ ಹೆಸರು ಮ್ಯಾಗಿ. ಒಂದು ವರ್ಷದ ಮ್ಯಾಗಿ, ಆಫ್ರಿಕಾದವಳು.

(ಮ್ಯಾಗಿ)

ಮ್ಯಾಗಿ ಆಂಕರೇಜ್ ಜ಼ೂ ತಲುಪುವ ವೇಳೆಗೆ, ಆನಾಬೆಲ್ ತನ್ನ ತಾರುಣ್ಯಕ್ಕೆ ಕಾಲಿಟ್ಟಿದ್ದಳು. ಆದರೂ, ಅವರಿಬ್ಬರ ನಡುವೆ ಸ್ನೇಹ ಬೆಳೆಯಿತು. ಆನಾಬೆಲ್‌ಳ ಬದುಕು ಕೊಂಚ ಮಟ್ಟಿಗೆ ಸುಧಾರಿಸಿತು.

ಆದರೆ, ಗೆಳೆಯ/ಗೆಳೆತಿಯರು ನಮ್ಮ ಮೂಡ್ ಬದಲಾಯಿಸಬಹುದಾದರೂ, ನಾವಿರುವ ಜಾಗದ ಹವಾಮಾನವನ್ನೇನೂ ಬದಲಿಸುವುದಿಲ್ಲವಲ್ಲಾ?! ಅಲಾಸ್ಕಾದ ಚಳಿಯಿಂದಾಗಿ, ಜ಼ೂನಲ್ಲಿ ಹೆಚ್ಚು ಓಡಾಡಲೂ ಸಾಧ್ಯವಿರಲಿಲ್ಲ. ದಿನಗಳುರುಳಿದಂತೆ, ಆನಾಬೆಲ್‌ಳ ಆರೋಗ್ಯ ಕ್ಷೀಣಿಸತೊಡಗಿತು. ಕೊನೆಗೆ, ೧೯೯೬ರಲ್ಲಿ, ತನ್ನ ೩೨ನೆಯ ವಯಸ್ಸಿನಲ್ಲಿ ಆನಾಬೆಲ್ ಮೃತಪಟ್ಟಳು. (ಆನೆಗಳು, ಸಾಧಾರಣವಾಗಿ ೬೫ರಿಂದ ೭೦ ವರ್ಷಗಳವರೆಗೆ ಬದುಕುತ್ತವೆ)

***

(ಆನಾಬೆಲ್‌ ಆನೆಮರಿ ರಚಿಸಿದ ಕಲಾಕೃತಿ)

ಆನಾಬೆಲ್‌ಳ ಮರಣದ ನಂತರ, ಹಲವು ವರ್ಷಗಳ ಕಾಲ ಆಂಕರೇಜ್ ಜ಼ೂನಲ್ಲಿ ಅವಳ ಗೆಳತಿಯಾಗಿದ್ದ ಮ್ಯಾಗಿಯ ಆರೋಗ್ಯವೂ ಕ್ಷೀಣಿಸಲಾರಂಭಿಸಿತು. ಇದನ್ನು ಕುರಿತು – ಮತ್ತು ಆನಾಬೆಲ್‌ಳ ಆಕಾಲಿಕ ಮರಣದ ಕುರಿತು ಯೋಚಿಸಿದ ತಜ್ಞರು ಒಂದು ನಿರ್ಧಾರಕ್ಕೆ ಬಂದರು: “ಆಂಕರೇಜ್ ಜ಼ೂ ಆನೆಗಳಿಗೆ ತಕ್ಕ ಜಾಗವಲ್ಲ. ಸದಾ ಕಾಲ ಚಳಿಯಿಂದ ಕೊರೆಯುವ ಅಲಾಸ್ಕಾದ ಮೃಗಾಲಯವೊಂದರಲ್ಲಿ, ಆನೆಗಳು ಓಡಾಡಿಕೊಂಡು, ಅವುಗಳ ಆರೋಗ್ಯಕ್ಕೆ ಬೇಕಿರುವ ದೈನಂದಿನ ಎಕ್ಸರ್ಸೈಸ್ ಮಾಡಲು ವ್ಯವಸ್ಥೆಯನ್ನು ನಿರ್ಮಿಸುವುದು ಸಾಧ್ಯವಿಲ್ಲ. ಹೀಗಾಗಿ, ಮ್ಯಾಗಿಯನ್ನು, ಅಮೆರಿಕದ ಬೆಚ್ಚನೆಯ ರಾಜ್ಯವೊಂದರಲ್ಲಿರುವ ಮೃಗಾಲಯಕ್ಕೆ ಕಳುಹಿಸುವುದೇ ಸೂಕ್ತ”

ಆದರೆ, ಕರ್ನಾಟಕದ ಹತ್ತು ಪಟ್ಟು ವಿಶಾಲವಾದ ಅಲಾಸ್ಕಾ ರಾಜ್ಯದಲ್ಲಿರುವ ಒಂದೇ ಒಂದು ಆನೆಯನ್ನು ಇನ್ನೆಲ್ಲಿಗೋ ಕಳುಹಿಸುವುದೇ?! ಅಲ್ಲಿನ ಜನ ಅದಕ್ಕೆ ಸುತರಾಂ ಒಪ್ಪಲಿಲ್ಲ. ಬದಲಿಗೆ, ಮ್ಯಾಗಿಯ ಎಕ್ಸರ್ಸೈಸ್‌ಗಾಗಿ, ಅಲಾಸ್ಕಾ ಸರ್ಕಾರ ಸುಮಾರು ೮ ಕೋಟಿ ರೂಪಾಯಿ ಖರ್ಚು ಮಾಡಿ ಒಂದು Treadmill ನಿರ್ಮಿಸಿತು!

ಮ್ಯಾಗಿಗಾಗಿ Elephant Treadmill ನಿರ್ಮಿಸಿದ ಅಲ್ಲಿನ ಸರ್ಕಾರ ಮತ್ತು ಜನರ “ಜಾಣ್ಮೆ ಮತ್ತು ಕಾಳಜಿ”ಯ ಕುರಿತು ಪುಸ್ತಕವೊಂದು ಪ್ರಕಟವಾಯಿತೋ ಇಲ್ಲವೋ ತಿಳಿಯದು. ಆದರೆ, ಮ್ಯಾಗಿ ಮಾತ್ರ, ಜಪ್ಪಯ್ಯಾ ಎಂದರೂ ಅದನ್ನು ಹತ್ತಲೇ ಇಲ್ಲ.

ಮ್ಯಾಗಿಯ ಆರೋಗ್ಯ ಕ್ಷೀಣಿಸುತ್ತಲೇ ಹೋಯಿತು. ಕೊನೆಗೆ, ೨೦೦೭ರಲ್ಲಿ, ಅವಳನ್ನು ಆಂಕರೇಜ್ ಜ಼ೂನಿಂದ ಕ್ಯಾಲಿಫೋರ್ನಿಯಾದಲ್ಲಿರುವ ಅಭಯಾಶ್ರಮವೊಂದಕ್ಕೆ ಕಳುಹಿಸಲಾಯಿತು. ಮುಂದಿನ ಹದಿನಾಲ್ಕು ವರ್ಷ, ಆ ಅಭಯಾಶ್ರಮದಲ್ಲಿದ್ದ ಹಲವಾರು ಆನೆಗಳೊಂದಿಗೆ ಕಾಲ ಕಳೆದ ಅವಳು, ಕಳೆದ ವರ್ಷದ ಆಗಸ್ಟಿನಲ್ಲಿ ಮರಣವನ್ನಪ್ಪಿದಳು.

(ಹಲವು ಮೂಲಗಳ ಪ್ರಕಾರ ಆನಾಬೆಲ್ ಭಾರತದವಳು. ಆದರೆ, ಕೆಲವೊಂದು ಡೇಟಾಬೇಸ್‌ಗಳಲ್ಲಿ ಆಕೆ ಥಾಯ್ಲೆಂಡಿನವಳೆಂಬ ಉಲ್ಲೇಖವೂ ಇದೆ. ನಮ್ಮವರೆನಿಸಿಕೊಂಡವರ ನೋವಷ್ಟೇ ನಮಗೆ ತೀವ್ರವೆನಿಸುವುದು ನಿಜವಾದರೂ, ಆನಾಬೆಲ್ ಯಾವ ದೇಶದವಳಾದರೇನು, ಅವಳು ಅನುಭವಿಸಿದ ಯಾತನೆಗಳು ಮಾತ್ರ ಅವೇ ಅಲ್ಲವೇ? ಇದು, ಅವಳೊಬ್ಬಳ ಕತೆಯೂ ಅಲ್ಲ. ಕೆನಡಾದ ಎಡ್ಮಂಡ್‌ಟನ್ ನಗರದ ಜ಼ೂನಲ್ಲಿ, ಲೂಸಿ ಎಂಬ ಆನೆ ಕಳೆದ ೪೫ ವರ್ಷಗಳಿಂದ ಕೊರೆಯುವ ಚಳಿಯಲ್ಲಿ ಒಂಟಿ ಜೀವನ ನಡೆಸುತ್ತಿದ್ದಾಳೆ.)