ಕುಮಾರ ಬೇಂದ್ರೆ ಅವರ ಕತೆಗಳ ವಿಶೇಷತೆ ಎಂದರೆ ಬಹಳ ಸುಲಭವಾಗಿ ಓದಿಸಿಕೊಳ್ಳುವಂತಹ ಗುಣ. ಓದುಗನಿಗೆ ಸಂವಹನದ ದೃಷ್ಟಿಯಿಂದ ಹೆಚ್ಚು ಸರಾಗವಾಗಿ, ಹೆಚ್ಚು ತೊಂದರೆ ಕೊಡದೇ ಓದಿಸಿಕೊಳ್ಳುವ ಗುಣ ಅವರ ಎಲ್ಲ ಕತೆಗಳಲ್ಲೂ ಇದೆ. ಇದನ್ನು ಒಂದು ಗುಣ ಎಂದೇ ಹೇಳಲು ನಾನು ಬಯಸುತ್ತೇನೆ. ಯಾಕೆಂದರೆ ಸರಳತೆ ಎನ್ನುವಂಥದ್ದು ಸುಲಭವಲ್ಲ, ಅದನ್ನು ಎಟಕಿಸಿಕೊಳ್ಳುವುದೂ ಕೂಡ ಸುಲಭವಲ್ಲ. ಸರಳವಾಗಿ ಬರೆಯುವುದು ಮತ್ತು ಸರಳವಾಗಿ ಸಂವಹನ ಮಾಡುವುದು ಯಾವಾಗಲೂ ಒಂದು ಸವಾಲು. ಅವರು ವೃತ್ತಿಯಿಂದ ಪತ್ರಕರ್ತರಾಗಿರುವುದರಿಂದ ಈ ಸುಲಭ ಸಂವಹನ ಅವರಿಗೆ ಸಾಧ್ಯವಾಗಿರಬಹುದು.
ಕುಮಾರ ಬೇಂದ್ರೆಯವರ “ಪರವಶ” ಕಥಾಸಂಕಲನದ ಕುರಿತು ರಘುನಾಥ ಚ.ಹ. ಅವರ ಮಾತುಗಳು

ʻಪರವಶʼ ಕುಮಾರ ಬೇಂದ್ರೆ ಅವರ ಐದನೇ ಕಥಾಸಂಕಲನ. ಐದನೇ ಸಂಕಲನ ಎಂಬುದು ಒಬ್ಬ ಕತೆಗಾರನ ಕಥನ ಜೀವನದ ಸಂದರ್ಭದಲ್ಲಿ ಒಂದು ದೊಡ್ಡ ಮೈಲಿಗಲ್ಲು. ಒಂದು ಕಥಾ ಸಂಕಲನದ ಕತೆಗಾರನಾದ ನನಗೆ ಐದನೇ ಸಂಕಲನ ಎಂಬುದು ಬೆರಗು ಹುಟ್ಟಿಸುವ ದೊಡ್ಡ ಸಾಧನೆಯಾಗಿ ಕಾಣುತ್ತದೆ.

ಕುಮಾರ ಬೇಂದ್ರೆ ಅವರ ಕತೆಗಳ ವಿಶೇಷತೆ ಎಂದರೆ ಬಹಳ ಸುಲಭವಾಗಿ ಓದಿಸಿಕೊಳ್ಳುವಂತಹ ಗುಣ. ಓದುಗನಿಗೆ ಸಂವಹನದ ದೃಷ್ಟಿಯಿಂದ ಹೆಚ್ಚು ಸರಾಗವಾಗಿ, ಹೆಚ್ಚು ತೊಂದರೆ ಕೊಡದೇ ಓದಿಸಿಕೊಳ್ಳುವ ಗುಣ ಅವರ ಎಲ್ಲ ಕತೆಗಳಲ್ಲೂ ಇದೆ. ಇದನ್ನು ಒಂದು ಗುಣ ಎಂದೇ ಹೇಳಲು ನಾನು ಬಯಸುತ್ತೇನೆ. ಯಾಕೆಂದರೆ ಸರಳತೆ ಎನ್ನುವಂಥದ್ದು ಸುಲಭವಲ್ಲ, ಅದನ್ನು ಎಟಕಿಸಿಕೊಳ್ಳುವುದೂ ಕೂಡ ಸುಲಭವಲ್ಲ. ಸರಳವಾಗಿ ಬರೆಯುವುದು ಮತ್ತು ಸರಳವಾಗಿ ಸಂವಹನ ಮಾಡುವುದು ಯಾವಾಗಲೂ ಒಂದು ಸವಾಲು. ಅವರು ವೃತ್ತಿಯಿಂದ ಪತ್ರಕರ್ತರಾಗಿರುವುದರಿಂದ ಈ ಸುಲಭ ಸಂವಹನ ಅವರಿಗೆ ಸಾಧ್ಯವಾಗಿರಬಹುದು.

(ಕುಮಾರ ಬೇಂದ್ರೆ)

ಕುಮಾರ ಬೇಂದ್ರೆ ಅವರು ತಮ್ಮ ಕತೆಗಳಲ್ಲಿ ಬಹಳ ಸುಂದರವಾದ ಚಿತ್ರಕ ಶಕ್ತಿಯನ್ನು ಸಾಧಿಸಿದ್ದಾರೆ. ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ಮೋಹಕವಾಗಿ ಚಿತ್ರಿಸುವಲ್ಲಿ ಅವರ ಎಲ್ಲ ಕತೆಗಳು ಯಶಸ್ವಿಯಾಗಿವೆ. ಈ ಕತೆಗಳ ಮತ್ತೊಂದು ವಿಶೇಷವೇನೆಂದರೆ ಅವುಗಳ ವಸ್ತು. ಸಾಮಾನ್ಯವಾಗಿ ಇಂದು ಕತೆಗಳನ್ನ ಬರೆಯುತ್ತಿರುವ ಕತೆಗಾರರಿಗೆ ಯಾವುದು ವರ್ಜವೋ ಅಥವಾ ಯಾವುದು ಮುಖ್ಯವಲ್ಲ ಎಂದು ಅವರು ಭಾವಿಸಿದ್ದಾರೋ ಅಂತಹ ವಸ್ತುಗಳನ್ನು ಕುಮಾರ ಬೇಂದ್ರೆ ಅವರು ಬಹಳ ಆಸಕ್ತಿಯಿಂದ ಮತ್ತು ಕುತೂಹಲದಿಂದ ಚಿತ್ರಿಸಿದ್ದಾರೆ. ಸಾಮಾನ್ಯವಾಗಿ ಕತೆಗಾರರು ಸಾಮಾಜಿಕ ತವಕ-ತಲ್ಲಣಗಳ ಬಗ್ಗೆ ಬರೆಯುವುದು ಅವರ ಪ್ರಧಾನ ಆಸಕ್ತಿ ಆಗಿರುತ್ತದೆ. ಅಂದರೆ ವರ್ತಮಾನದ ವಿದ್ಯಮಾನಗಳಿಗೆ ಸ್ಪಂದಿಸುವುದು ಒಬ್ಬ ಲೇಖಕನ ಕರ್ತವ್ಯ ಎಂದು ಲೇಖಕನೇ ಅಂದುಕೊಂಡಿರುವುದರಿಂದ; ಸಮಾಜ ಅದನ್ನು ಬಯಸುತ್ತದೋ ಇಲ್ಲವೊ ಅದು ಎರಡನೇ ವಿಷಯ. ಆದರೆ ಲೇಖಕನೇ ಅದನ್ನು ನಂಬಿಕೊಂಡಿರುವುದರಿಂದ ಅದು ತನ್ನ ಕರ್ತವ್ಯ ಎನ್ನುವ ನೆಲೆಗಟ್ಟಿನಲ್ಲಿ ಸ್ಪಂದಿಸುತ್ತ ಹೋಗುತ್ತಾನೆ. ಅಂದರೆ ಒಬ್ಬ ಲೇಖಕ ಸಮಾಜಮುಖಗಿಯಾಗಲು ಬಯಸುತ್ತಾನೆ. ಆದರೆ ಕುಮಾರ ಬೇಂದ್ರೆ ಅವರು ಸಮಾಜಮುಖಿಯೂ ಹೌದು, ಅದಕ್ಕಿಂತ ಮುಖ್ಯವಾಗಿ ಅವರ ಎಲ್ಲ ಕತೆಗಳ ಕೇಂದ್ರ ಇರುವುದು ವ್ಯಕ್ತಿ ಕೇಂದ್ರಿತವಾಗಿ. ಅಂದರೆ ವ್ಯಕ್ತಿಗತ ತವಕ-ತಲ್ಲಣಗಳ ಬಗ್ಗೆ ಅವರಿಗೆ ಹೆಚ್ಚು ಆಸಕ್ತಿ ಎಂದು ʻಪರವಶʼ ಸಂಕಲನದ ಕತೆಗಳನ್ನು ಓದಿದಾಗ ಅನಿಸುತ್ತದೆ. ಬರಹಗಾರರು ಸಾಮಾನ್ಯವಾಗಿ ಪ್ರಸ್ತಾಪ ಮಾಡಲು, ಬರೆಯಲು ಹಿಂಜರಿಯುವ ಪ್ರೀತಿ ಪ್ರೇಮ ಪ್ರಣಯಗಳ ವಿಷಯವಾಗಿ ಈ ಎಲ್ಲ ಕತೆಗಳು ಬೇರೇ ಬೇರೆ ರೀತಿಯಲ್ಲಿ ಶೋಧನೆ ನಡೆಸುತ್ತವೆ. ಪ್ರೇಮದ ಮೂಲಕವೇ ಜೀವನದ ದ್ರವ್ಯ, ಸೌಂದರ್ಯ ಮತ್ತು ಸಾಧ್ಯತೆಗಳ ಬಗ್ಗೆ ಹುಡುಕಾಟ ಮಾಡುವುದು ಈ ಎಲ್ಲ ಕತೆಗಳ ಭಿತ್ತಿಯಲ್ಲಿದೆ.

ಪ್ರೇಮವನ್ನು ನಾವು ಜೀವನದ ಜೀವನಾಡಿಯ ರೂಪದಲ್ಲಿ ನೋಡುವುದಾದರೆ ಇವತ್ತಿಗೆ ಬಹಳ ಅಗತ್ಯವಾದ ಸಂಗತಿಯ ಬಗ್ಗೆಯೇ ಕುಮಾರ ಬೇಂದ್ರೆ ಅವರು ಮಾತನಾಡುತ್ತಿದ್ದಾರೆ ಎಂದು ಭಾವಿಸಬೇಕಾಗುತ್ತದೆ. ಆದರೆ ಈ ಜೀವನಾಡಿಯಾದ ಪ್ರೇಮವನ್ನು ಹಿಡಿದಿಡಲು ಈ ಕತೆಗಾರರು ಬಳಸಿಕೊಂಡಿರುವ ವೇದಿಕೆ ಭಿನ್ನವಾದದ್ದು. ಈ ಕತೆಗಳು ಘಟಿಸುವುದು ಸಾಮಾಜಿಕ ಜಾಲತಾಣಗಳ ಆಧುನಿಕ ಸಲಕರಣೆಗಳ ಮುಖಾಂತರ. ಬಹಳ ಹಿಂದೆ ಪತ್ರಗಳು ಮತ್ತು ದೂರವಾಣಿ ಮಾಡುತ್ತಿದ್ದ ಪ್ರೇಮಧೂತರ ಕೆಲಸವನ್ನು ಇಲ್ಲಿ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ವಾಟ್ಸ್‌ಆಪ್‌ಅಂತಹ ಮಾಧ್ಯಮಗಳು ಮಾಡುತ್ತವೆ. ದೇವಸ್ಥಾನ, ಕೆರೆಯ ಅಂಗಳ, ಸಂತೆ, ಜಾತ್ರೆ, ಉದ್ಯಾನವನಗಳ ಜಾಗದಲ್ಲಿ ಕುಮಾರ ಬೇಂದ್ರೆ ಅವರು ಮಾಲ್‌ಗಳನ್ನು ಮಲ್ಟಿಫ್ಲೆಕ್ಸ್‌‌ ರೆಸಾರ್ಟ್‌ಗಳನ್ನು ತಂದು ನಿಲ್ಲಿಸಿದ್ದಾರೆ. ಮೆಟ್ರೋ ರೈಲಿನ ನಿಲ್ದಾಣಗಳನ್ನು ಕೂಡ ಈ ಪ್ರೇಮದ ಪರವಶತೆ ಘಟಿಸುವಂತಹ ತಾಣವಾಗಿ ನಾವು ಈ ಕತೆಗಳಲ್ಲಿ ನೋಡಲು ಸಾಧ್ಯವಿದೆ.

ಈ ಸಂಕಲನದ ಮುಖ್ಯ ಕತೆಗಳಲ್ಲಿ ಒಂದಾದ ʻಶೂನ್ಯʼ ಕತೆಯಲ್ಲಿ ಒಂದು ವಿಶೇಷ ತಂತ್ರವನ್ನು ಕುಮಾರ ಬೇಂದ್ರೆ ಬಳಸಿದ್ದಾರೆ. ಅಲ್ಲಿ ಒಬ್ಬ ಮನೋವೈದ್ಯ ಮತ್ತು ಒಬ್ಬಳು ಕತೆಗಾರ್ತಿ ಇಬ್ಬರೂ ಒಟ್ಟಿಗೇ ಕುಳಿತು, ಈಗಾಗಲೇ ಘಟಿಸಿರುವ ಒಂದು ಪ್ರೇಮ ಕತೆಯ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಪ್ರೇಮದ ಮನೋವ್ಯಾಪಾರದ ಬಗ್ಗೆ ಮನೋವಿಜ್ಞಾನದ ನೆಲೆಗಟ್ಟಿನಲ್ಲಿ ಮತ್ತು ಕಥನ ಪ್ರಜ್ಞೆಯ ಹಿನ್ನೆಲೆಯಲ್ಲಿ ಈ ಕತೆಯಲ್ಲಿ ಚರ್ಚೆಯಾಗುತ್ತದೆ. ಈ ಚರ್ಚೆಯನ್ನು ಅಥವಾ ತಂತ್ರವನ್ನು ಕತೆಗಾರರಾಗಿ ಕುಮಾರ ಬೇಂದ್ರೆ ಅವರಿಗೇ ನಾವು ಆರೋಪಿಸಲು ಸಾಧ್ಯವಿದೆ. ಹೀಗೆ ಇವರ ಎಲ್ಲ ಕತೆಗಳಲ್ಲಿ ಇವರೊಬ್ಬ ಮನೋವಿಶ್ಲೇಷಕರ ರೂಪದಲ್ಲಿ ಮತ್ತು ಕತೆಗಾರರ ರೂಪದಲ್ಲಿದ್ದು ವಿಶ್ಲೇಷಣೆಯನ್ನು ಮಾಡಿ ಈ ಎಲ್ಲ ಕತೆಗಳನ್ನು ಬರೆದಿದ್ದಾರೆ. ಏಕಕಾಲಕ್ಕೆ ಅವರು ಮನಃಶಾಸ್ತ್ರದ ವಿದ್ಯಾರ್ಥಿಯಾಗಿಯೂ ಮತ್ತು ಕತೆಗಾರರಾಗಿಯೂ ಎರಡೂ ಪಾತ್ರಗಳನ್ನು ಸಾಕಷ್ಟು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ವರ್ತಮಾನದ ವಿದ್ಯಮಾನಗಳಿಗೆ ಸ್ಪಂದಿಸುವುದು ಒಬ್ಬ ಲೇಖಕನ ಕರ್ತವ್ಯ ಎಂದು ಲೇಖಕನೇ ಅಂದುಕೊಂಡಿರುವುದರಿಂದ; ಸಮಾಜ ಅದನ್ನು ಬಯಸುತ್ತದೋ ಇಲ್ಲವೊ ಅದು ಎರಡನೇ ವಿಷಯ. ಆದರೆ ಲೇಖಕನೇ ಅದನ್ನು ನಂಬಿಕೊಂಡಿರುವುದರಿಂದ ಅದು ತನ್ನ ಕರ್ತವ್ಯ ಎನ್ನುವ ನೆಲೆಗಟ್ಟಿನಲ್ಲಿ ಸ್ಪಂದಿಸುತ್ತ ಹೋಗುತ್ತಾನೆ. ಅಂದರೆ ಒಬ್ಬ ಲೇಖಕ ಸಮಾಜಮುಖಗಿಯಾಗಲು ಬಯಸುತ್ತಾನೆ.

ಪ್ರೇಮದ ವಿವಿಧ ಆಯಾಮಗಳನ್ನು ವಿಶ್ಲೇಷಣೆ ಮಾಡುವುದರ ಜೊತೆಗೆ ಈ ಆಧುನಿಕ ಸಂದರ್ಭದಲ್ಲಿ ಪ್ರೇಮವೆಂಬುದು ಜೀವನಕ್ಕೆ ಎಷ್ಟು ಮುಖ್ಯ ಎಂಬುದರ ಬಗ್ಗೆ ಇಲ್ಲಿನ ಕತೆಗಳು ಚರ್ಚಿಸುತ್ತವೆ. ಪ್ರೇಮದ ಔನ್ನತ್ಯದ ಜೊತೆಗೆ ಅವನತಿಯ ಚಿತ್ರಗಳು ಕೂಡ ಈ ಕತೆಗಳಲ್ಲಿದೆ. ʻಬಣ್ಣಗಳಿಗೆ ನಿಲುಕದ ಸೌಂದರ್ಯʼ ಎನ್ನುವಂತಹ ಒಂದು ಕತೆಯನ್ನು ಉದಾಹರಣೆಯಾಗಿ ತೆಗೆದುಕೊಳ್ಳುವುದಾದರೆ; ಸೌಂದರ್ಯವನ್ನು ಅದರ ಆತ್ಯಂತಿಕ ಸ್ಥಿತಿಯಲ್ಲಿ ಕಲ್ಪಿಸಿಕೊಳ್ಳಲು ಸಾಧ್ಯವಾಗದ ಒಬ್ಬ ಚಿತ್ರಕಲಾವಿದ ಇಲ್ಲಿನ ಕಥಾನಾಯಕ. ಅವನಿಗೆ ಅರ್ಥವಾಗದಿರುವಂತಹ ಸೌಂದರ್ಯದ ಔನ್ನತ್ಯವನ್ನು ಈ ಕಥಾನಾಯಕಿ ಅವನಿಗೆ ಮನದಟ್ಟು ಮಾಡಿಸುತ್ತಾಳೆ. ನಿಜವಾದ ಸೌಂದರ್ಯವೆಂದರೆ ಏನು? ಅದರ ಸಾಧ್ಯತೆಗಳು ಏನು ಎಂಬುದನ್ನು ಒಬ್ಬ ಕಲಾವಿದನಿಗೆ ಕಥಾನಾಯಕಿ ಮನದಟ್ಟು ಮಾಡಿಸುವಂತಹ ಕತೆ ಇದು.

ʻಒಲವು ಅರಸಿ ಬಂದವಳುʼ ಹೆಸರಿನ ಕತೆಯೊಂದು ಇರದಲ್ಲಿದೆ. ಈ ಕತೆಯ ನಾಯಕಿ ರಮ್ಯ, ರಕ್ಷೀತ್‌ಎನ್ನುವಂತಹ ಒಬ್ಬ ಪ್ರಾಮಾಣಿಕ ವ್ಯಕ್ತಿಯ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾಳೆ. ಎಷ್ಟರ ಮಟ್ಟಿಗೆ ಒಪ್ಪಿಕೊಳ್ಳುತ್ತಾಳೆಂದರೆ ಅವಳಿಗೆ ಆ ಕಥಾನಾಯಕನ ಸಾಮಾನ್ಯ ಹಿನ್ನೆಲೆ, ಸಾಧಾರಹಣ ರೂಪ ಯಾವುದೂ ಮುಖ್ಯ ಅನಿಸುವುದಿಲ್ಲ ಅವನ ಪ್ರಾಂಜನಲ ಪ್ರೀತಿಯ ಮುಂದೆ. ಅಷ್ಟೇ ಅಲ್ಲ ಅವರಿಬ್ಬರ ನಡುವಿನ ವಯಸ್ಸಿನ ಅಂತರ ಕೂಡ ರಮ್ಯಾಳಿಗೆ ಮುಖ್ಯ ಅನಿಸುವುದಿಲ್ಲ. ಪ್ರಾಮಾಣಿಕ ಪ್ರೀತಿಯ ಮುಂದೆ ಉಳಿದದ್ದೆಲ್ಲ ಕ್ಷುಲ್ಲಕ ಅನಿಸುತ್ತದೆ ಅವಳಿಗೆ. ʻಮನಸು ಮಾಯೆಯ ಬೆನ್ನೇರಿʼ ಎನ್ನುವ ಕತೆಯಲ್ಲಿ ಕೂಡ ಕಥಾ ನಾಯಕಿ ಮೇಧಿನಿ ಇದೇ ರೀತಿ ಮೋಹನ ಎನ್ನುವ ಕಥಾನಾಯಕನನ್ನು ಅವನ ಪ್ರಾಮಾಣಿಕ ಪ್ರೀತಿಯ ಕಾರಣಕ್ಕಾಗಿಯೇ ಒಪ್ಪಿಕೊಳ್ಳುತ್ತಾಳೆ. ಈ ಕತೆಯಲ್ಲಿ ಒಂದು ಮಾತು ಬರುತ್ತದೆ. ʻಸ್ನೇಹ ಅನ್ನೋದು ಒಂದು ನಿಷ್ಕಲ್ಮಶ ಪವಿತ್ರವಾದ ಸಂಬಂಧ. ಅದರಲ್ಲೂ ಗಂಡು ಹೆಣ್ಣಿನ ಸಂಬಂಧ ತುಂಬಾ ಸೂಕ್ಷ್ಮವಾದದ್ದು. ಅದನ್ನು ಎಷ್ಟು ವಿವೇಕದಿಂದ ನಿಭಾಯಿಸುತ್ತೇವೆಯೋ ಅಷ್ಟು ಸ್ವಸ್ಥವಾಗಿರುತ್ತದೆʼ ಎಂದು. ಈ ಮಾತು ಬೇರೆ ಬೇರೆ ರೂಪದಲ್ಲಿ ಅನೇಕ ಕತೆಗಳಲ್ಲಿ ಮತ್ತೆ ಮತ್ತೆ ಪುನರಾವರ್ತನೆಯಾಗುತ್ತದೆ. ಕುಮಾರ ಬೇಂದ್ರೆ ಅವರು ಪ್ರೇಮದ ನೆಪದಲ್ಲಿ ಒಂದೇ ಕತೆಯನ್ನು ಬೇರೆ ಬೇರೆ ಕತೆಗಳ ರೂಪದಲ್ಲಿ ಮತ್ತೆ ಮತ್ತೆ ಬರೆಯಲು ಪಯತ್ನಿಸಿದ್ದಾರೆ.

ʻಪರವಶʼ ಎನ್ನುವ ಶೀರ್ಷಿಕೆಯ ಕತೆ ಕೂಡ ಪ್ರೇಮದ, ಸೌಂದರ್ಯದ ಔನ್ನತ್ಯವನ್ನು ಚಿತ್ರಿಸುವ ಕತೆಯಾಗಿದೆ. ಈ ಸಂಕಲನದ ಇನ್ನೊಂದು ತುದಿಯಲ್ಲಿ ಪ್ರೇಮದ ಅವನತಿಯನ್ನು ಕೂಡ ಇವರು ಚಿತ್ರಿಸಿದ್ದಾರೆ. ʻಶೂನ್ಯʼ ಎನ್ನುವ ಕತೆಯಲ್ಲಿ ರಂಜನಿ ಎಂಬ ಯುವತಿ ಪ್ರೇಮಿಸಿ ಮದುವೆಯಾದರೂ ಕೂಡ ತನ್ನ ಗಂಡನ ಗೆಳೆಯನಿಗೆ ಮನಸೋಲುತ್ತಾಳೆ. ಕೊನೆಗೆ ಪಾಪಪ್ರಜ್ಞೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ʻಸರ್ಪಸಹವಾಸʼ ಎನ್ನುವ ಕತೆಯಲ್ಲಿ ಬರುವ ರಂಜನಿಗೆ ಅದಾಗಲೇ ಮದುವೆಯಾಗಿದ್ದರೂ ಕೂಡ ಹಣದ ಮೋಹದಿಂದ ಬೇರೆ ಬೇರೆ ಸಂಬಂಧಗಳನ್ನು ಬೆಳೆಸುತ್ತಾಳೆ. ಹೀಗೆ ಇಲ್ಲಿನ ಎಲ್ಲ ಕತೆಗಳ ಬಗ್ಗೆ ಬಿಡಿಬಿಡಿಯಾಗಿ ಹೇಳುವುದು ಕಷ್ಟ; ಕಷ್ಟ ಎಂದು ಹೇಳುವ ಬದಲಾಗಿ ಈ ಸಂಕಲನದ ಕತೆಗಳನ್ನು ಹೆಚ್ಚು ವಿಶ್ಲೇಷಣೆ ಮಾಡುವುದಕ್ಕಿಂತ ಓದಿ ಸವಿಯಬೇಕು. ಅಥವಾ ಓದಿ ಅನುಭವಿಸಬೇಕು.

(ರಘುನಾಥ ಚ.ಹ.)

ಈ ಕತೆಗಳ ಮತ್ತೊಂದು ವಿಶೇಷ ಏನೆಂದರೆ, ಈ ಕತೆಗಳಲ್ಲಿ ಬರುವ ಪುರುಷ ಪಾತ್ರಗಳಿಗಿಂತ ಸ್ತ್ರೀ ಪಾತ್ರಗಳು ಹೆಚ್ಚು ಗಟ್ಟಿಯಾಗಿರುವಂತಹವು. ಸಾಮಾನ್ಯವಾಗಿ ಇಲ್ಲಿನ ಎಲ್ಲ ಕಥಾನಾಯಕರು ಬೋಳೇತನದಿಂದ ಕೂಡಿದವರಾಗಿದ್ದು, ಭಾವುಕತೆಗೆ ಜೋತುಬಿದ್ದು ವಸ್ತುಸ್ಥಿತಿಯಿಂದ ದೂರವಿರುವವರು. ಇಲ್ಲಿನ ನಾಯಕಿಯರು ಹೆಚ್ಚು ಗಟ್ಟಿಯಾದ ವ್ಯಕ್ತಿತ್ವವನ್ನು ಕೆಲವೊಮ್ಮೆ ದಿಟ್ಟತನವನ್ನು ಪ್ರದರ್ಶಿಸುವಂಥವರು ಆಗಿದ್ದಾರೆ. ಪುರುಷರು ಅವಕಾಶವಾದಿಗಳ ಹಾಗೆ ಇದ್ದರೆ ಸ್ತ್ರೀಯರು ತಮಗೆ ಯಾವುದು ಬೇಕು ಅಥವಾ ಯಾವುದು ಬೇಡ ಎನ್ನುವುದರ ಬಗ್ಗೆ ಸ್ಪಷ್ಟತೆ ಇರುವವರಾಗಿದ್ದಾರೆ. ʻಅಜ್ಞಾತ ಸೆಳೆದ ಸುತ್ತʼ ಕತೆಯ ನಂದಿನಿ ಪಾತ್ರವನ್ನು ಉದಾಹರಣೆಯಾಗಿ ತೆಗೆದುಕೊಳ್ಳುವುದಾದರೆ ಆಕೆ ಗಂಡನಿಂದ ಬೇರೆಯಾಗಿ ಬ್ಯೂಟಿ ಪಾರ್ಲರ್‌ನಡೆಸುವ ಮುಖಾಂತರ ಒಂದು ಸ್ವತಂತ್ರ ಬದುಕನ್ನು ಕಟ್ಟಿಕೊಂಡಿದ್ದಾಳೆ. ಈಗ ವೈದ್ಯರೊಬ್ಬರ ಮದುವೆ ಪ್ರಸ್ತಾಪವನ್ನು ಒಪ್ಪಿಕೊಂಡು ವಿದೇಶದಲ್ಲಿ ನೆಲೆಸುವ ಚಿಂತನೆ ಇರುತ್ತದೆ. ಅವಳಿಗೆ ಶಶಿ ಎನ್ನುವ ಒಬ್ಬ ಗೆಳೆಯ ಇದ್ದಾನೆ. ಅವರಿಬ್ಬರ ನಡುವೆ ಸಂಬಂಧ ಕೂಡ ಇದೆ. ಅವನು ಹೇಳುತ್ತಾನೆ ʻದುಡ್ಡಿನ ಹಿಂದೆ ಹೋಗಿ ಜೀವನ ಹಾಳು ಮಾಡಿಕೊಬೇಡʼ ಅಂತ. ಈ ಶಶಿಗೆ ತಾನು ತನ್ನ ಹೆಂಡತಿಗೆ ಮೋಸ ಮಾಡುತ್ತಿದ್ದೇನೆ ಎಂಬ ಸಣ್ಣ ಅಳುಕು ಕೂಡ ಇಲ್ಲ. ಪಾಪಪ್ರಜ್ಞೆ ಕೂಡ ಇಲ್ಲ. ಇವನು ತನ್ನ ಜೊತೆ ಇರುವ ಗೆಳತಿಗೆ ನೀತಿ ಬೋಧನೆ ಮಾಡುವಂತಹ ಒಂದು ವಿಪರ್ಯಾಸ ಇಲ್ಲಿದೆ. ಇಬ್ಬರೂ ಕೂಡ ಸಮಾಜದ ಒಪ್ಪಿತ ಸಂಬಂಧಗಳ ಆಚೆಯ ಇನ್ನೊಂದು ರೀತಿಯ ಸಂಬಂಧವನ್ನು ಹೊಂದಿದರುವವರು. ಆದರೆ ಪ್ರೇಮದ ಬಗೆಗೆ ಆಥವಾ ಗಂಡು ಹೆಣ್ಣಿನ ಸಂಬಂಧದ ಬಗೆಗೆ ನಂದಿನಿಗೆ ಇರುವಂತಹ ಸ್ಪಷ್ಟತೆ, ಜೀವನದ ಬಗೆಗಿನ ಪ್ರಾಮಾಣಿಕತೆ ಅವನಲ್ಲಿ ಇಲ್ಲ.

ʻಕೆಂಪು ಚೇಳಿನ ನಿಗೂಢ ಹುತ್ತʼ ಕತೆಯಲ್ಲಿ ಕೂಡ ಸ್ವಪ್ನಾಳಿಗೆ ಇರುವಂತಹ ಜೀವನದ ಸ್ಪಷ್ಟ ಅರಿವು ಅಲ್ಲಿನ ಗಂಡು ಪಾತ್ರಕ್ಕೆ ಇಲ್ಲ. ಈ ಕತೆಗಾರರ ಬಗ್ಗೆ ನನ್ನದೊಂದು ಆಕ್ಷೇಪ ಏನೆಂದರೆ, ಕತೆಗಾರರಾಗಿ ಅವರು ಗಂಡು ಪಾತ್ರಗಳಿಗೆ ಹೆಚ್ಚಿನ ಸಹಾನುಭೂತಿ ವ್ಯಕ್ತಪಡಿಸುತ್ತಿದ್ದಾರೇನೊ ಅನಿಸುತ್ತದೆ. ಇಲ್ಲಿ ನೈತಿಕತೆಯ ರೇಖೆಯಿಂದ ಹೊರಗೆ ಬಂದ ಸ್ತ್ರೀಯರನ್ನು ಚೇಳಿನ ರೂಪದಲ್ಲಿ, ಸರ್ಪದ ರೂಪದಲ್ಲಿ ಅವರು ಚಿತ್ರಿಸಿದ್ದಾರೆ. ಅಥವಾ ಆ ಕತೆಗಳು ನಮಗೆ ಆ ರೀತಿಯ ಆ ಇಮೇಜ್‌ಗಳನ್ನು ಕಟ್ಟಿಕೊಡುತ್ತವೆ. ಆದರೆ ಇಲ್ಲಿ ಹೆಚ್ಚು ಸೋಗಲಾಡಿಗಳು ಆಗಿರುವುದು ಪುರುಷರೆ! ಸಂಬಂಧಗಳ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು, ಅವಕಾಶವಾದಿಗಳಾಗಿರುವುದು ಪುರುಷರೆ. ನಿಜವಾದ ಸಹಾನುಭೂತಿ ಸಲ್ಲಬೇಕಾದದ್ದು ಸ್ತ್ರೀಯರಿಗೆ. ಆ ಕತೆಯಲ್ಲಿ ರಂಜನಿ ಎನ್ನುವ ಯುವತಿ ಹಣ ಕೇಳಿದ ತಕ್ಷಣ ಅವಳ ಬಗ್ಗೆ ಅವನಿಗೆ ಅಸಹ್ಯವಾಗುತ್ತದೆ. ಅವಳ ಗಂಡನಿಗೆ ತಾನು ಮೋಸ ಮಾಡುತ್ತಿದ್ದೇನೆ ಎನ್ನುವ ಪಾಪಪ್ರಜ್ಞೆ ಉಂಟಾಗುತ್ತದೆ. ಹಣ ಕೇಳದೇ ಇದ್ದಿದ್ದರೆ ಈ ಪಾಪಪ್ರಜ್ಞೆಯ ಪ್ರಶ್ನೆಯೇ ಬರುತ್ತಿರಲಿಲ್ಲ.

ಒಟ್ಟಾರೆ ಕುಮಾರ ಬೇಂದ್ರೆ ಅವರ ಕತೆಗಳ ಚೌಕಟ್ಟು ತುಂಬಾ ವಿಸ್ತಾರವಾಗಲು ಸಾಧ್ಯವಿದೆ. ಈ ಕುರಿತು ಮುನ್ನುಡಿಯಲ್ಲಿ ಎಸ್‌. ದಿವಾಕರ್‌ಅವರು ಅರ್ಥವತ್ತಾಗಿ ಮತ್ತು ಮಾರ್ಮಿಕವಾಗಿ ಹೇಳಿದ್ದಾರೆ. ಪ್ರೇಮದ ಹಲವು ಸಾಧ್ಯತೆಗಳನ್ನು ಒಳಗೊಳ್ಳಲು ಸಾಧ್ಯವಿದೆ ಎಂದು ಮತ್ತು ಪ್ರೀತಿ, ಪ್ರೇಮ, ಪ್ರಣಯದ ಇನ್ನೊಂದು ಪ್ರೌಢ ಸಾಧ್ಯತೆಗಳ ಬಗ್ಗೆ, ದೈಹಿಕ ಸಂಬಂಧದ ಆಚೆಗಿನ ವಿಮರ್ಶೆಗಳ ಬಗ್ಗೆ ಕೂಡ ದಿವಾಕರ್‌ಅವರು ಹೇಳಿದ್ದಾರೆ. ಆ ಪ್ರಯತ್ನಗಳನ್ನು ಇಲ್ಲಿನ ಕತೆಗಳಲ್ಲಿ ಕೂಡ ಕತೆಗಾರರು ಮಾಡಿದ್ದಾರೆ. ಪ್ರೇಮದ ಆಚೆಗೆ ಪ್ರಕೃತಿ ಸೌಂದರ್ಯದ ಬಗ್ಗೆ; ಈ ಲೋಕದ ಸೌಂದರ್ಯದ ಆಚೆಗೆ ಇರುವಂತಹ ಇನ್ನೊಂದು ಸೆಳೆತವನ್ನು ಹುಡುಕಿಕೊಂಡು ಹೋಗುವುದರ ಬಗ್ಗೆ ಕೂಡ ಇಲ್ಲಿನ ಕತೆಗಳಲ್ಲಿದೆ. ಹಾಗಾಗಿ ಅದರ ಆಚೆಗೆ ಕೂಡ ಜೀವನದ ಅನೇಕ ಸಾಧ್ಯತೆ, ಸಂಕೀರ್ಣತೆ, ಸಂಘರ್ಷಗಳನ್ನು ಒಳಗೊಳ್ಳುವ ಶಕ್ತಿ ಈ ಕತೆಗಾರರಿಗೆ ಇದೆ ಎಂದು ನನಗನಿಸುತ್ತದೆ. ಐದು ಕಥಾಸಂಕಲನಗಳ ಮುಖಾಂತರ ಅವರು ಈಗಾಗಲೇ ಅನುಭವಿ ಕತೆಗಾರರಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಆರನೇ ಸಂಕಲನ ಹೊಸ ಸವಾಲುಗಳಿಗೆ ತೆರೆದುಕೊಳ್ಳುವಂತಹದಾಗಿರಲಿ. ಅಂದರೆ ಈವರೆಗಿನ ಜಾಡು ಅಥವಾ ನಮಗೆ ನಾವೇ ಹಾಕಿಕೊಳ್ಳುವ ಚೌಕಟ್ಟುಗಳನ್ನು ಮೀರಿ; ನಾವೇ ಕಂಡುಕೊಂಡಿರುವಂತಹ ಸುಲಭದ ಸೂತ್ರಗಳನ್ನು ಸಂಕಲನದಿಂದ ಸಂಕಲಕ್ಕೆ ಮೀರುವಂತಹದು ಪ್ರತಿಯೊಬ್ಬ ಕತೆಗಾರನೂ ಹಾಯಲೇಬೇಕಾದ ಅಗ್ನಿದಿವ್ಯ ಎಂದು ನಾನು ಅಂದುಕೊಂಡಿದ್ದೇನೆ. ಆ ಅಗ್ನಿದಿವ್ಯದಲ್ಲಿ ಗೆಳೆಯ ಕುಮಾರ ಬೇಂದ್ರೆ ಜಯಿಸಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚೆಚ್ಚು ಉತ್ತಮ ಕತೆಗಳನ್ನು ಬರೆಯಲಿ, ಯಶಸ್ಸು ಸಾಧಿಸಲಿ ಎಂದು ಆಶಿಸುತ್ತೇನೆ.

(ʻಪರವಶʼ ಕಥಾಸಂಕಲನ ಬಿಡುಗಡೆ ಸಮಾರಂಭದಲ್ಲಿ ಹಿರಿಯ ಪತ್ರಕರ್ತರು ಹಾಗೂ ಕತೆಗಾರರಾದ ರಘುನಾಥ ಚ.ಹ. ಅವರು ಕೃತಿ ಪರಿಚಯಿಸಿದ ಉಪನ್ಯಾಸದ ಪಠ್ಯರೂಪ ಇಲ್ಲಿದೆ.)

(ಕೃತಿ: ಪರವಶ (ಕಥಾ ಸಂಕಲನ), ಲೇಖಕರು: ಕುಮಾರ ಬೇಂದ್ರೆ, ಪ್ರಕಾಶಕರು: ಅಂಕಿತ ಪುಸ್ತಕ, ಪುಟಗಳು: 160, ಬೆಲೆ: 175/-)