ಕಾಗದವನ್ನು ನಾರಾಯಣ ಉಪಾಧ್ಯಾಯರಿಗೆ ಹಿಂದಿರುಗಿಸಿದೆ. ನಾನು ಓದುವುದನ್ನೇ ಗಮನಿಸುತ್ತಿದ್ದ ನಾರಾಯಣ ಉಪಾಧ್ಯಾಯರು, “ಅರ್ಥವಾಗುವುದಿಲ್ಲ ಅಲ್ವಾ?” ಎಂದು ಅದು ತಮಗೆ ಗೊತ್ತೇ ಇತ್ತು ಎಂಬ ಭಾವದಿಂದ ಕೇಳಿ ಕಾಗದವನ್ನು ಮಡಚಿ ತಮ್ಮ ಅಂಗಿಯ ಕಿಸೆಯೊಳಗೆ ಇಟ್ಟುಕೊಂಡರು. ನಂತರ ಒಂದು ಸಿಗರೇಟು ಹಚ್ಚಿ ಕಣ್ಣುಮುಚ್ಚಿ ಎರಡು ದಂ ಎಳೆದರು. ದೀರ್ಘವಾದ ಕತೆಯೊಂದನ್ನು ಹೇಳಲು ಹೀಗೆ ಸಿದ್ಧತೆ ಮಾಡಿಕೊಂಡ ನಾರಾಯಣ ಉಪಾಧ್ಯಾಯರು ಆ ರಿಜಿಸ್ತ್ರಿ ಕಾಗದದ ಕತೆಯನ್ನು ಹೇಳುವ ಮೂಲಕ ಹಿಂದಿನ ರಾತ್ರಿ ಬಾಗಿಲು ಒದೆಯುತ್ತಿದ್ದ ಶಬ್ದದ ಹಿಂದಿನ ರಹಸ್ಯವನ್ನು ಅನಾವರಣಗೊಳಿಸಿದರು.
ಡಾ. ಬಿ. ಜನಾರ್ದನ ಭಟ್ ಸಾದರಪಡಿಸುತ್ತಿರುವ ‘ಓಬೀರಾಯನ ಕಾಲದ ಕತೆಗಳು’ ಸರಣಿಯ ಹದಿಮೂರನೆಯ ಕಥಾನಕ ಈ ಭಾನುವಾರದ ನಿಮ್ಮ ಓದಿಗಾಗಿ.

 

ನಾನು ಒಂದು ದಿನ ಗಂಪದಬೈಲು ನಾರಾಯಣ ಉಪಾಧ್ಯಾಯರ ಮನೆಗೆ ಹೋಗಿದ್ದೆ. ಉಪಾಧ್ಯಾಯರ ತಾಯಿ ಲಕ್ಷ್ಮಕ್ಕ ಮಾಡಿದ ಹಳ್ಳಿಯ ಅಪೂರ್ವ ಖಾದ್ಯಗಳು; ಚೆನ್ನಾಗಿ ಬೆಂದ ಬೆಳ್ತಿಗೆ ಅನ್ನ ಕಲಸಿಕೊಳ್ಳಲು ಒಂದರ ನಂತರ ಒಂದರಂತೆ ಬರುತ್ತಿದ್ದ ರುಚಿಕಟ್ಟಾದ ಬಿಸಿಬಿಸಿ ಸಾರು, ಕೊದ್ದೆಲು, ತಂಬುಳಿ, ಉದ್ದಿನಿಟ್ಟು, ಬಾಳಕದ ಮೆಣಸು, ಪಲ್ಯಗಳು ಇವುಗಳನ್ನೆಲ್ಲ ಸುರಿದು ಊಟ ಮಾಡಿದ ನಂತರ ನಾನೂ, ನಾರಾಯಣ ಉಪಾಧ್ಯಾಯರೂ ಸ್ವಲ್ಪ ಹೊತ್ತು ಮನೆಯ ಹಿಂಭಾಗದ ತೋಟದಲ್ಲಿ ಅಡ್ಡಾಡಿ ಬಂದೆವು.

ಆ ತೋಟದಲ್ಲಿ ಒಂದಷ್ಟು ಮಾವಿನಮರಗಳು, ಕೆಲವು ಹಲಸಿನ ಮರಗಳು ಮತ್ತು ಕೆಲವು ತೆಂಗಿನಮರಗಳು ಯಾವ ಯೋಜನೆಯೂ ಇಲ್ಲದಂತೆ ಬೆಳೆದು ಫಲಕೊಡುತ್ತಿದ್ದವು. ಹಿಂದಿನ ಕಾಲದವರು ಬೆಳೆಸಿದ ತೋಟ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತಿತ್ತು. ಅಲ್ಲಿಗೆ ಹೋಗಿ, ಮನೆಯ ಯಾವ ಕಿಟಕಿಗೂ ಕಾಣದಂತೆ ಒಂದು ಕಡೆ ನೆಲಕ್ಕೆ ಸಮಾನಾಂತರವಾಗಿ ಹರಡಿದ್ದ ಕಸಿ ಮಾವಿನಮರದ ಗೆಲ್ಲಿನಲ್ಲಿ ಕುಳಿತುಕೊಂಡು ನಾರಾಯಣ ಉಪಾಧ್ಯಾಯರು ಸಿಗರೇಟು ಸೇದಿದ ಮೇಲೆ ನಾವು ಮತ್ತೆ ಮನೆಯೊಳಗೆ ಬಂದೆವು. ಅಷ್ಟರಲ್ಲಿ ಅವರ ಹೆಂಡತಿ ಮನೆಯ ಅಂತರದಲ್ಲಿ (ಪಡಸಾಲೆಯ ಎದುರಿನ ನೀಳವಾದ ಕೋಣೆ) ನಮಗಿಬ್ಬರಿಗೂ ಅಕ್ಕಪಕ್ಕದಲ್ಲಿ ಚಾಪೆ ಹಾಸಿದ್ದುದನ್ನು ಕಂಡು ಅವುಗಳ ಮೇಲೆ ಮೈಚೆಲ್ಲಿ ಹರಟೆ ಮುಂದುವರಿಸಿದೆವು. ನಾರಾಯಣ ಉಪಾಧ್ಯಾಯರ ತಂದೆ ವೇದವ್ಯಾಸ ಉಪಾಧ್ಯಾಯರೂ, ಅವರ ಮಡದಿಯೂ ಒಳಗೆ ಪಡಸಾಲೆಯಲ್ಲಿ ಮಲಗಿಕೊಂಡಿದ್ದರು. ಮಕ್ಕಳು ಮರಿಗಳು, ಹೆಂಗಸರೆಲ್ಲ ಮೇಲೆ ಮಾಳಿಗೆಯಲ್ಲಿ ಮಲಗಿದ್ದರು.

ಮಾತಾಡುತ್ತಾ ಮಾತಾಡುತ್ತಾ ನನಗೆ ಮೊದಲು ನಿದ್ದೆ ಆವರಿಸಿಕೊಂಡಿತೋ, ಉಪಾಧ್ಯಾಯರನ್ನು ಮೊದಲು ಸೆಳೆಯಿತೋ ಹೇಳಲಾರೆ. ನನಗೆ ನಡುರಾತ್ರಿ ಬೆಚ್ಚಿಬಿದ್ದು ದಡಕ್ಕೆಂದು ಎದ್ದು ಕುಳಿತದ್ದೇ ಗೊತ್ತು. ಏನು ಎತ್ತ ಯಾವುದೂ ತಿಳಿಯದೆ ಗವ್ವೆಂದು ಭಯವೊಂದೇ ಆವರಿಸಿಕೊಂಡಂತಿದ್ದ ನನ್ನ ಮನಸ್ಸನ್ನು ಸ್ಥಿಮಿತಕ್ಕೆ ತಂದುಕೊಂಡು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ. ಮನೆಯ ಬಾಗಿಲನ್ನು ಯಾರೋ ಬಲವಾಗಿ ಒದೆಯುತ್ತಿದ್ದರು. ಇಡೀ ಮನೆಯೇ ಗಡಗಡನೆ ಅಲ್ಲಾಡುವಂತೆ ಅನಿಸುತ್ತಿತ್ತು. ನಾರಾಯಣ ಉಪಾಧ್ಯಾಯರ ತಂದೆ ವೇದವ್ಯಾಸ ಉಪಾಧ್ಯಾಯರು ಮಹಾ ಸಾತ್ವಿಕ. ಅದಕ್ಕಿಂತಲೂ ಮುಖ್ಯವಾಗಿ ಗಂಪದಬೈಲಿನ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರು. ಅಂತಹ ಉಪಾಧ್ಯಾಯರ ಮನೆಗೆ ಹೀಗೆ ದಾಳಿ ಮಾಡುವ ಧೈರ್ಯ ಯಾವ ದುಷ್ಕರ್ಮಿಗೆ ಅಥವಾ ರೌಡಿಗೆ ಇರಬಹುದು ಎಂದು ನಾನು ಆತಂಕದಿಂದ ನಾರಾಯಣ ಉಪಾಧ್ಯಾಯರತ್ತ ನೋಡಿದೆ. ಅವರಿಗೆ ಕೂಡಾ ಎಚ್ಚರಾಗಿತ್ತು. ಅವರು ಕಣ್ಣರಳಿಸಿ ಆತಂಕದಿಂದ ನನ್ನನ್ನೇ ನೋಡುತ್ತಿದ್ದರು – ನನಗೇನಾದರೂ ಎಚ್ಚರವಾದರೆ ಹೆದರಿಕೊಳ್ಳುತ್ತೇನೋ ಎಂದು ಕಾಯುತ್ತಿದ್ದರು. ನಾನು ಅವರನ್ನು ನೋಡಿದ ತಕ್ಷಣ ‘ಏನೂ ಆಗದು, ಸುಮ್ಮನಿರಿ’ ಎಂಬಂತೆ ಸನ್ನೆ ಮಾಡಿದರು. ‘ವಿಚಾರವನ್ನು ನಾಳೆ ಹೇಳುತ್ತೇನೆ’ ಎಂದು ಕೂಡಾ ಹಾವಭಾವದಲ್ಲೇ ಸೂಚಿಸಿದರು.

ಸ್ವಲ್ಪ ಹೊತ್ತಿನಲ್ಲಿಯೇ ಬಾಗಿಲು ಒದೆಯುವ ಶಬ್ದ ನಿಂತುಹೋಗಿ ನೀರವತೆ ಆವರಿಸಿಕೊಂಡಿತು. ಅಷ್ಟು ದೊಡ್ಡ ಶಬ್ದವಾಗಿದ್ದರೂ ಮನೆಯ ಯಾರೂ ಎದ್ದಂತೆ ಕಾಣಲಿಲ್ಲ. ನಾನು ಆ ಶಬ್ದದ ಬಗ್ಗೆಯೇ ಯೋಚನೆ ಮಾಡುತ್ತಾ ಮಲಗಿಕೊಂಡೆ. ಬಹಳ ಹೊತ್ತು ನನ್ನ ಬಳಿ ನಿದ್ದೆ ಸುಳಿಯಲಿಲ್ಲ. ಮರುದಿನ ಎದ್ದು ಪ್ರಾತರ್ವಿಧಿಗಳನ್ನು ತೀರಿಸಿದ ಮೇಲೆ ನಾರಾಯಣ ಉಪಾಧ್ಯಾಯರ ಹೆಂಡತಿ ಸರೋಜಕ್ಕ ಮಾಡಿಕೊಟ್ಟ ಕಾಫಿ ಕುಡಿದು, ಉಪಾಧ್ಯಾಯರ ಸೂಚನೆಯಂತೆ ಅವರ ಜತೆಗೆ ಪಕ್ಕದ ಬೈಲು ಗದ್ದೆಯತ್ತ ಹೆಜ್ಜೆ ಹಾಕಿದೆ. ಹಿಂದಿನ ರಾತ್ರಿ ಬಾಗಿಲು ಒದ್ದವರ ವಿಷಯ ಹೇಳುವುದಕ್ಕೆ ಅವರು ಹಾಗೆ ಕರೆದುದು ಎಂದು ತಿಳಿದಿದ್ದ ನಾನು ವಿಷಯ ತಿಳಿಯುವ ಉತ್ಸಾಹದಿಂದಲೇ ಹೆಜ್ಜೆ ಹಾಕಿದೆ. ನಾರಾಯಣ ಉಪಾಧ್ಯಾಯರು ಹೇಳಿದ ಕತೆ ಕೇಳಿ ನನ್ನ ಭಯ ಕಡಿಮೆಯಾಗುವ ಬದಲು ಇನ್ನೂ ಹೆಚ್ಚಾಯಿತು.

ನಾನು ಕನಿಷ್ಠ ಎರಡು ದಿನವಾದರೂ ನಾರಾಯಣ ಉಪಾಧ್ಯಾಯರ ಮನೆಯಲ್ಲಿ ನಿಂತು ಸುತ್ತಲಿನ ಹಳ್ಳಿಗಳಿಗೆ ಹೋಗಿ ಅಲ್ಲಿನ ಐತಿಹ್ಯಗಳ ಕುರಿತು ಮಾಹಿತಿ ಸಂಗ್ರಹಿಸಬೇಕೆಂದಿದ್ದೆ. ಆದರೆ ನನಗೆ ಹುಡುಕಾಡದೆಯೇ ಕಾಲಿಗೆ ತೊಡರಿಕೊಂಡದ್ದು ಒಂದು ಹೃದಯವಿದ್ರಾವಕವಾದ ಐತಿಹ್ಯ.

ಅವರು ಕಣ್ಣರಳಿಸಿ ಆತಂಕದಿಂದ ನನ್ನನ್ನೇ ನೋಡುತ್ತಿದ್ದರು – ನನಗೇನಾದರೂ ಎಚ್ಚರವಾದರೆ ಹೆದರಿಕೊಳ್ಳುತ್ತೇನೋ ಎಂದು ಕಾಯುತ್ತಿದ್ದರು. ನಾನು ಅವರನ್ನು ನೋಡಿದ ತಕ್ಷಣ ‘ಏನೂ ಆಗದು, ಸುಮ್ಮನಿರಿ’ ಎಂಬಂತೆ ಸನ್ನೆ ಮಾಡಿದರು. ‘ವಿಚಾರವನ್ನು ನಾಳೆ ಹೇಳುತ್ತೇನೆ’ ಎಂದು ಕೂಡಾ ಹಾವಭಾವದಲ್ಲೇ ಸೂಚಿಸಿದರು.

ನಾರಾಯಣ ಉಪಾಧ್ಯಾಯರು ನನ್ನನ್ನು ಮೈಲುಗಟ್ಟಲೆ ಉದ್ದಗಲಕ್ಕೆ ಹಬ್ಬಿದ ವಿಸ್ತಾರವಾದ ಹಸಿರು ಗದ್ದೆಗಳ ಬಯಲಿನ ನಡುವೆ ಗದ್ದೆಗಳಿಗೆ ಕಟ್ಟುಹಾಕಿದಂತಿದ್ದ ಹುಣಿಗಳೆಂಬ ದಂಡೆಗಳ ಮೇಲೆ ನಡೆಯಿಸಿಕೊಂಡು, ಅಲ್ಲಲ್ಲಿ ರಕ್ತನಾಳಗಳಂತೆ ಹರಿಯುತ್ತಿದ್ದ ಸಣ್ಣ ದೊಡ್ಡ ತೋಡುಗಳನ್ನು ಹಾಯಿಸಿ ನಡುವೆ ಒಂದು ಕಡೆ ಬೋಗುಣಿ ಕವುಚಿ ಹಾಕಿದಂತಿದ್ದ ಬಂಡೆಗಲ್ಲಿನ ಹಾಸಿನ ಮೇಲೆ ಕುಳ್ಳಿರಿಸಿದರು. ನಂತರ ತಾವು ತಂದಿದ್ದ ಒಂದು ಹಳೆಯ ಕಾಗದವನ್ನು ನನಗೆ ಕೊಟ್ಟು, “ಇದನ್ನು ಓದಿ” ಎಂದರು. ಅದೊಂದು ಹಳೆಯ ರಿಜಿಸ್ತ್ರಿ ದಾಖಲೆಯ ಪ್ರತಿಯಾಗಿತ್ತು. 1905 ನೆಯ ಇಸವಿಯಲ್ಲಿ ರಾಮಪ್ಪ ಭಟ್ಟ ಎನ್ನುವವರು ತಮ್ಮ ಮಗ ಅನಂತ ಭಟ್ಟ ಎಂಬವನು ತೀರಿಕೊಂಡ ಕಾರಣ ತಮ್ಮ ಆಸ್ತಿಯನ್ನು ತಮ್ಮ ಮಗಳ ಮಗ ವಾಸುದೇವ ಉಪಾಧ್ಯಾಯ ಎಂಬವನಿಗೆ ಬರೆದುಕೊಟ್ಟ ಪತ್ರ. ಅದರಲ್ಲಿ ನನಗೆ ಅರ್ಥವಾಗದ ಆಸ್ತಿ ಗಡಿ ವಿವರಗಳು, ಕರಾರುಗಳು ಇತ್ಯಾದಿ ಇದ್ದವು. ಆದರೆ ವಿಶೇಷವೇನೂ ಕಾಣಲಿಲ್ಲ.

ಕಾಗದವನ್ನು ನಾರಾಯಣ ಉಪಾಧ್ಯಾಯರಿಗೆ ಹಿಂದಿರುಗಿಸಿದೆ. ನಾನು ಓದುವುದನ್ನೇ ಗಮನಿಸುತ್ತಿದ್ದ ನಾರಾಯಣ ಉಪಾಧ್ಯಾಯರು, “ಅರ್ಥವಾಗುವುದಿಲ್ಲ ಅಲ್ವಾ?” ಎಂದು ಅದು ತಮಗೆ ಗೊತ್ತೇ ಇತ್ತು ಎಂಬ ಭಾವದಿಂದ ಕೇಳಿ ಕಾಗದವನ್ನು ಮಡಚಿ ತಮ್ಮ ಅಂಗಿಯ ಕಿಸೆಯೊಳಗೆ ಇಟ್ಟುಕೊಂಡರು. ನಂತರ ಒಂದು ಸಿಗರೇಟು ಹಚ್ಚಿ ಕಣ್ಣುಮುಚ್ಚಿ ಎರಡು ದಂ ಎಳೆದರು. ದೀರ್ಘವಾದ ಕತೆಯೊಂದನ್ನು ಹೇಳಲು ಹೀಗೆ ಸಿದ್ಧತೆ ಮಾಡಿಕೊಂಡ ನಾರಾಯಣ ಉಪಾಧ್ಯಾಯರು ಆ ರಿಜಿಸ್ತ್ರಿ ಕಾಗದದ ಕತೆಯನ್ನು ಹೇಳುವ ಮೂಲಕ ಹಿಂದಿನ ರಾತ್ರಿ ಬಾಗಿಲು ಒದೆಯುತ್ತಿದ್ದ ಶಬ್ದದ ಹಿಂದಿನ ರಹಸ್ಯವನ್ನು ಅನಾವರಣಗೊಳಿಸಿದರು. “ಈ ರಿಜಿಸ್ತ್ರಿ ಪತ್ರದಲ್ಲಿ ಹೇಳಿರುವ ವಾಸುದೇವ ಉಪಾಧ್ಯಾಯರು ನನ್ನ ಅಜ್ಜನ ತಂದೆ” ಎಂದು ನಾರಾಯಣ ಉಪಾಧ್ಯಾಯರು ಪ್ರಾರಂಭಿಸಿದರು. ಆಗ ನನಗೆ ಅವರು ತಂದು ನನ್ನ ಕೈಯಲ್ಲಿಟ್ಟ ಪತ್ರಕ್ಕೂ ನಿನ್ನೆ ರಾತ್ರಿ ಕೇಳಿಸಿದ ಶಬ್ದಕ್ಕೂ ಸ್ವಲ್ಪವಾದರೂ ಸಂಬಂಧ ಇರಬಹುದು ಎಂದು ಖಚಿತವಾಯಿತು. “ನಾವು ಮೂಲತಃ ನಡುಕಣಿಯವರು. ನಮ್ಮ ಹಿರಿಯರು ಗಂಪದಬೈಲಿಗೆ ಬಂದು ನೆಲೆಸಿದ್ದೇ ಒಂದು ಕತೆ” – ಹೀಗೆ ಕಥಾನಕದ ಪ್ರಾರಂಭವಾಯಿತು. ಇಲ್ಲಿ ಬರುವ ಹೆಸರುಗಳು, ಸಂಬಂಧಗಳು ನೆನಪಿಡಲು ಕಷ್ಟವಾದರೆ ನೆನಪಿಡಬೇಕಾದಿಲ್ಲ. `ಇದರಲ್ಲಿ ಕತೆಯೇ ಪ್ರಧಾನ ಹೊರತು ಹೆಸರುಗಳಲ್ಲ’ ಎಂಬ ಸೂಚನೆಯನ್ನೂ ಉಪಾಧ್ಯಾಯರು ನೀಡಿದ ಕಾರಣ ನಾನು ಕತೆಯನ್ನು ಸುಮ್ಮನೆ ಕೇಳುತ್ತಾ ಹೋದೆ.

ಗಂಪದಬೈಲಿನಲ್ಲಿ ಬಹಳ ಗೌರವವಿದ್ದ ಕುಟುಂಬ ರಾಮಪ್ಪ ಭಟ್ಟರದು. ರಾಮಪ್ಪ ಭಟ್ಟರ ಮಗಳ ಮಗ ವಾಸುದೇವ ಉಪಾಧ್ಯಾಯರು ನಮ್ಮ ವಂಶದ ಹಿಂದಿನ ತಲೆ. ರಾಮಪ್ಪ ಭಟ್ಟರ ಮಗ ಅನಂತ ಭಟ್ಟನು ತೀರಿಕೊಂಡ ವಿಷಯವೇ ನಾನು ಹೇಳಬೇಕಾದ ಮುಖ್ಯ ಕತೆ. ಅಂತಹ ಕತೆಗಳನ್ನು ರಿಜಿಸ್ತ್ರಿ ದಾಖಲೆಗಳು ಹೇಳುವುದಿಲ್ಲ. ಅದನ್ನು ನಾವೇ ತಲೆಮಾರಿನಿಂದ ತಲೆಮಾರಿಗೆ ದಾಟಿಸಬೇಕು.

ಈ ರಿಜಿಸ್ತ್ರಿ ಪತ್ರದ ಮೂಲಕ ತಮ್ಮೆಲ್ಲ ಆಸ್ತಿಯನ್ನು ಮತ್ತು ಮಹಾಲಿಂಗೇಶ್ವರ ದೇವಸ್ಥಾನದ ಪೂಜೆಯ ಹಕ್ಕನ್ನು ನಮ್ಮ ಕುಟುಂಬಕ್ಕೆ – ಅಂದರೆ ತಮ್ಮ ಮಗಳ ಮಗನಿಗೆ – ಬರೆದುಕೊಟ್ಟ ರಾಮಪ್ಪ ಭಟ್ಟರು ಈ ಊರಿನ ಮುಖ್ಯ ಪುರೋಹಿತರಾಗಿದ್ದರು. ರಾಜಪುರೋಹಿತ ಎಂಬ ಬಿರುದು ಅವರ ಕುಟುಂಬಕ್ಕೆ ಇತ್ತು. ಆ ಬಿರುದು ಅವರ ಅಪ್ಪ ಲಕ್ಷ್ಮೀನಾರಾಯಣ ಭಟ್ಟರಿಂದಾಗಿ ರಾಮಪ್ಪ ಭಟ್ಟರಿಗೂ ಬಂದಿತ್ತು. ಲಕ್ಷ್ಮೀನಾರಾಯಣ ಭಟ್ಟರು ತಿರುವಾಂಕೂರು ಸಂಸ್ಥಾನದಲ್ಲಿ ಪುರೋಹಿತರಾಗಿದ್ದರೆಂದೂ, ಆಗ ಅವರಿಗೆ ಅಲ್ಲಿನ ಅರಸ ‘ರಾಜಪುರೋಹಿತ’ ಎಂಬ ಬಿರುದು ನೀಡಿದ್ದನೆಂದೂ ಹೇಳುತ್ತಿದ್ದರು.

ರಾಜಪುರೋಹಿತ ಲಕ್ಷ್ಮೀನಾರಾಯಣ ಭಟ್ಟರು ಕೇರಳದಿಂದ ಹಿಂದಿರುಗಿ ಬಂದು ಗಂಪದಬೈಲಿನಲ್ಲಿ ನೆಲೆನಿಂತ ಮೇಲೆ ಅವರನ್ನು ಇಲ್ಲಿನ ಬ್ರಾಹ್ಮಣ ಸಮುದಾಯ ತಮ್ಮ ಪುರೋಹಿತರೆಂದು ಸ್ವೀಕರಿಸಿತು. ಅದುವರೆಗೆ ಇಲ್ಲಿ ಪುರೋಹಿತರು ಯಾರೂ ಇರಲಿಲ್ಲ. ಇಲ್ಲಿನವರ ಶುಭಾಶುಭ ವೈದಿಕ ಕಾರ್ಯಗಳಿಗೆ ನಡುಕಣಿಯ ಒಬ್ಬರು ಪುರೋಹಿತರು ಬಹಳ ಕಷ್ಟಪಟ್ಟುಕೊಂಡು ಬರಬೇಕಾಗಿತ್ತಂತೆ. ಇಂತಹ ಸಂದರ್ಭದಲ್ಲಿ ರಾಜಪುರೋಹಿತ ಲಕ್ಷ್ಮೀನಾರಾಯಣ ಭಟ್ಟರು ಕೇರಳದಿಂದ ಹಿಂದಿರುಗಿ ಬಂದದ್ದು. ಅವರ ವಿದ್ವತ್ತಿಗೆ ಗಂಪದಬೈಲಿನ ಜನ ಶರಣಾಗಿಬಿಟ್ಟರು. ಕೆಲವೇ ದಿನಗಳಲ್ಲಿ ಯಾವ ಆತಂಕವೂ ಇಲ್ಲದೆ ಇಲ್ಲಿನ ಜನತೆ ರಾಜಪುರೋಹಿತ ಲಕ್ಷ್ಮೀನಾರಾಯಣ ಭಟ್ಟರನ್ನು ತಮ್ಮ ಕುಲಪುರೋಹಿತರನ್ನಾಗಿಸಿಕೊಂಡಿತು. ರಾಜಪುರೋಹಿತ ಲಕ್ಷ್ಮೀನಾರಾಯಣ ಭಟ್ಟರಿಗೆ ಕೆಲವೇ ಸಮಯದಲ್ಲಿ ಗಂಪದಬೈಲು ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರ ಕೆಲಸವೂ ಸಿಕ್ಕಿತು.

ರಾಜಪುರೋಹಿತ ಲಕ್ಷ್ಮೀನಾರಾಯಣ ಭಟ್ಟರು ಯಾವ ಊರಿನವರಾಗಿದ್ದರು ಎಂಬುದು ಬಹಳ ಮುಖ್ಯ ವಿಷಯ. ಅವರ ಅಜ್ಜ ಸುಬ್ರಾಯ ಭಟ್ಟರೆಂಬವರು ಕುಟುಂಬಸಮೇತ ಬಂಟ್ವಾಳದ ಸಮೀಪದ ಒಂದು ಹಳ್ಳಿ ನೂತಬೆಟ್ಟಿನಿಂದ ಗಂಪದಬೈಲಿಗೆ ವಲಸೆ ಬಂದುದಾಗಿತ್ತು. ಅವರು ಗಂಪದಬೈಲಿನಲ್ಲಿ ಹಲವಾರು ಆಸ್ತಿಗಳನ್ನು ಖರೀದಿಸಿ ಅವುಗಳನ್ನು ಚಾಲಗೇಣಿ ಆಧಾರದಲ್ಲಿ ನಾಲ್ಕೈದು ಒಕ್ಕಲುಗಳಿಗೆ ಕೃಷಿ ಮಾಡಲೆಂದು ಹಂಚಿಕೊಟ್ಟಿದ್ದರು. ಬಹಳ ದೊಡ್ಡ ಮೂರುಪ್ಪರಿಗೆಯ ಎರಡು ಸೀಳಿನ ಮನೆಯೊಂದನ್ನು ಕಟ್ಟಿಸಿ ಅದರಲ್ಲಿ ಹೆಚ್ಚುಸಮಯ ವಾಸಮಾಡದೆ ಯಾವುದೋ ನಿಗೂಢ ಕಾರಣದಿಂದಾಗಿ, ಗೇಣಿ ವಸೂಲಿಗೆ ವ್ಯವಸ್ಥೆ ಮಾಡಿ ತಾವು ಸಂಸಾರ ಸಮೇತ ಕೇರಳಕ್ಕೆ ವಲಸೆ ಹೋದರು. ಸುಬ್ರಾಯ ಭಟ್ಟರ ಮರಣಾನಂತರ ಅವರ ಮಗ ರಾಮಚಂದ್ರ ಭಟ್ಟರು ಹಲವಾರು ವರ್ಷಗಳ ಕಾಲ ಕೇರಳದಲ್ಲಿಯೇ ರಾಜಪುರೋಹಿತರಾಗಿ ಕೆಲಸ ಮಾಡಿ ಅಲ್ಲೇ ತೀರಿಕೊಂಡರು. ಸಾಯುವ ಮುನ್ನ ತಮ್ಮ ತಂದೆಯ ನಿಗೂಢ ರಹಸ್ಯವನ್ನು ತಮ್ಮ ಪುತ್ರ ಲಕ್ಷ್ಮೀನಾರಾಯಣ ಭಟ್ಟರಿಗೆ ಹೇಳಿದರು. ಲಕ್ಷ್ಮೀನಾರಾಯಣ ಭಟ್ಟರು ಆ ರಹಸ್ಯವನ್ನು ಹಾಗೆಯೇ ಹೊತ್ತುಕೊಂಡು ಗಂಪದಬೈಲಿಗೆ ಹಿಂದಿರುಗಿ ಬಂದರು.

ಸುಬ್ರಾಯ ಭಟ್ಟರು ನೂತಬೆಟ್ಟು ಎಂಬಲ್ಲಿಯವರು ಎಂದೆನಲ್ಲ. ಅವರು ಮೂವರು ಅಣ್ಣತಮ್ಮಂದಿರು. ಸುಬ್ರಾಯ ಭಟ್ಟರು ದೊಡ್ಡವರು; ಎರಡನೆಯವರು ವಿಠಲ ಭಟ್ಟರು ಅಣ್ಣನ ಜತೆಯಲ್ಲಿಯೇ ಊರು ಬಿಟ್ಟು ಬಂದು ಸಮೀಪದ ಮಾದಯ ಕುಮೆರಿಯಲ್ಲಿ ಸ್ವಲ್ಪ ಆಸ್ತಿ ತೆಗೆದುಕೊಂಡು ವಾಸವಾಗಿದ್ದರು. ಅವರಿಬ್ಬರ ಕೊನೆಯ ತಮ್ಮ ರಘುಪತಿ ಭಟ್ಟರು ನೂತಬೆಟ್ಟಿನಲ್ಲಿಯೇ ಉಳಿದುಕೊಂಡರೆಂದು ಹೇಳುತ್ತಾರೆ. ಗಂಪದಬೈಲಿಗೆ ಬಂದ ಸುಬ್ರಾಯ ಭಟ್ಟರು ಸ್ವಲ್ಪವೇ ಕಾಲದಲ್ಲಿ ಊರುಬಿಟ್ಟು ಕೇರಳಕ್ಕೆ ಹೋಗಿ, ಅವರ ಮೊಮ್ಮಗ ತಿರುಗಿ ಊರಿಗೆ ಬಂದರೆಂದು ಹೇಳಿದೆ. ಮಾದಯಕುಮೆರಿಯ ವಿಠಲ ಭಟ್ಟರ ಕವಲಿನವರು ಎಲ್ಲಾ ದುಶ್ಚಟಗಳನ್ನು ಅಂಟಿಸಿಕೊಂಡು ಸಾಲಗಾರರಾಗಿ ಎಲ್ಲಿ ಹಣ ಸಿಗುತ್ತದೆ ಎಂದು ಬಾಯಗಲಿಸಿಕೊಂಡು ಹುಡುಕುತ್ತಿದ್ದರು. ಆಗ ಅವರ ಗಮನ ತಮ್ಮ ದಾಯಾದಿಗಳತ್ತ ಅಂದರೆ ರಾಜಪುರೋಹಿತ ಲಕ್ಷ್ಮೀನಾರಾಯಣ ಭಟ್ಟರ ಮಗ ರಾಮಪ್ಪ ಭಟ್ಟರತ್ತ ಹೋಯಿತು.

ರಾಜಪುರೋಹಿತ ಲಕ್ಷ್ಮೀನಾರಾಯಣ ಭಟ್ಟರಿಗೆ ಒಳ್ಳೆಯ ಹೆಸರೂ ಆದಾಯವೂ ಇತ್ತು. ಅವರ ಮಗ ರಾಮಪ್ಪ ಭಟ್ಟರು ತಂದೆಯ ಹೆಸರು, ಆಸ್ತಿ, ಸಂಪತ್ತು, ಉದ್ಯೋಗ ಎಲ್ಲದಕ್ಕೂ ಉತ್ತರಾಧಿಕಾರಿಯಾಗಿ ಸುಖವಾಗಿಯೇ ಬದುಕುತ್ತಿದ್ದರು. ಅವರಿಗೆ ಇಬ್ಬರು ಮಕ್ಕಳು – ದೊಡ್ಡವರು ರುಕ್ಮಿಣಿ ಅಂತ. ನಮ್ಮ ಅಜ್ಜನ ಅಜ್ಜ ಅನಂತರಾಮ ಉಪಾಧ್ಯಾಯರನ್ನು ಮದುವೆಯಾಗಿ ನಡುಕಣಿಯಲ್ಲಿದ್ದರು. ಎರಡನೆಯವನೇ ನಮ್ಮ ಕತೆಯ ಅನಂತ ಭಟ್ಟ; ಇಪ್ಪತ್ತೆರಡನೆಯ ವಯಸ್ಸಿಗೆ ಹೆಂಡತಿಯನ್ನು ವಿಧವೆಯಾಗಿಸಿ ಮಕ್ಕಳಿಲ್ಲದೆ ಸತ್ತುಹೋದ. ಅವನು ಸತ್ತುಹೋದಾಗ ತನ್ನ ವಂಶ ನಿರ್ವಂಶ ಆದಕಾರಣ ರಾಮಪ್ಪ ಭಟ್ಟರ ಮಗಳ ಮಗನಿಗೆ ತನ್ನೆಲ್ಲಾ ಆಸ್ತಿ ಹಾಗೂ ಅಧಿಕಾರಗಳನ್ನು ಬರೆದುಕೊಟ್ಟುಬಿಟ್ಟರು.

ಅನಂತ ಭಟ್ಟನು ಸತ್ತುದೆಂದರೆ ಸತ್ತುದಲ್ಲ; ಆತ್ಮಹತ್ಯೆ ಮಾಡಿಕೊಂಡದ್ದು. ಅದಕ್ಕೆ ಕಾರಣ ಅನಂತ ಭಟ್ಟನಿಗೆ ಚಿಕ್ಕಪ್ಪನಾಗಬೇಕಾದ ಮಾದಯ ಕುಮೆರಿಯ ದಾಯಾದಿ – ಅವನ ಹೆಸರು ಶ್ರೀಪತಿ ಭಟ್ಟ ಎಂದಾಗಿತ್ತು. ಶ್ರೀಪತಿ ಭಟ್ಟನೆಂದರೆ ನೂತಬೆಟ್ಟಿನಿಂದ ಅಣ್ಣನ ಜತೆಗೆ ಊರುಬಿಟ್ಟು ಮಾದಯ ಕುಮೆರಿಯಲ್ಲಿ ನೆಲೆನಿಂತ ಸುಬ್ರಾಯ ಭಟ್ಟರ ತಮ್ಮ ವಿಠಲ ಭಟ್ಟರ ಮೊಮ್ಮಗ. ವಿಠಲ ಭಟ್ಟರು ಮಾದಯ ಕುಮೆರಿಯಲ್ಲಿ ಸಣ್ಣದೊಂದು ಆಸ್ತಿ ಖರೀದಿಸಿ ಅಲ್ಲಿ ನೆಲೆನಿಂತರು ಎಂದೆನಲ್ಲ – ಅವರು ಯಾವ ಕೆಲಸವನ್ನೂ ಮಾಡದೆ ದಿನ ಕಳೆಯುತ್ತಿದ್ದರು ಎಂದು ಹೇಳುತ್ತಾರೆ. ವಿಠಲ ಭಟ್ಟರು ಮದರಾಸಿಗೆ ಹೋಗುತ್ತ ಬರುತ್ತಾ ಇದ್ದರು. ಅವರು ಅಲ್ಲಿಗೆ ಹೋಗುತ್ತಿದ್ದುದು ವೇಶ್ಯಾ ಸಹವಾಸ ಮಾಡಲಿಕ್ಕೆ ಹಾಗೂ ಜುಗಾರಿ ಆಡಲಿಕ್ಕಂತೆ. ಅಲ್ಲಿಗೆ ಹೋಗುವಾಗ ಸಾಕಷ್ಟು ಹಣ ತೆಗೆದುಕೊಂಡು ಹೋಗಿ, ಅಲ್ಲಿ ಒಂದು ಹೋಟೆಲಿನಲ್ಲಿ ನಿಂತು ಮಜ ಮಾಡಿ ದುಡ್ಡು ಖರ್ಚಾದ ಮೇಲೆ ಊರಿಗೆ ಹಿಂದಿರುಗುತ್ತಿದ್ದರಂತೆ.

ವಿಠಲ ಭಟ್ಟರ ಮಗ ಮತ್ತು ಮೊಮ್ಮಗನ ಹೆಸರು ನನಗೆ ಗೊತ್ತಿಲ್ಲ. ಅವರು ಅಡಿಗೆಯ ಕೆಲಸಕ್ಕೆ ಹೋಗುತ್ತಿದ್ದರಂತೆ. ಅಲ್ಪ ಸ್ವಲ್ಪ ವೈದಿಕ ಕೆಲಸವೂ ಗೊತ್ತಿದ್ದಿರಬಹುದು. ಅಂತೂ ಸ್ವಲ್ಪ ಮಟ್ಟಿಗೆ ಪ್ರಾಮಾಣಿಕ ಗೃಹಸ್ಥರಾಗಿ ಅವರು ಬದುಕಿರಬಹುದು ಅಂತ ಅನಿಸುತ್ತದೆ. ಹೆಸರು ಉಳಿಯಬೇಕಾದರೆ ಒಂದೋ ತುಂಬಾ ಒಳ್ಳೆಯ ಕೆಲಸ ಮಾಡಿರಬೇಕು, ಇಲ್ಲವೇ ತುಂಬಾ ಕೆಟ್ಟ ರೀತಿಯಲ್ಲಿ ಬದುಕಿರಬೇಕು. ಎಲ್ಲರ ಹಾಗೆ ಬದುಕಿದರೆ ಮುಂದಿನವರಿಗೆ ಉದಾಹರಣೆಯಾಗಿ ಉಳಿಯುವುದಿಲ್ಲ ಎನ್ನುವುದಕ್ಕೆ ಈ ವ್ಯಕ್ತಿಯೇ ಒಂದು ಉದಾಹರಣೆಯಾಗಬಹುದು!

ವಿಠಲ ಭಟ್ಟರ ಮರಿಮಗನೇ ಈ ಶ್ರೀಪತಿ ಭಟ್ಟನೆಂಬವ. ಇವನಿಗೆ ಮುತ್ತಜ್ಜನ ದುರ್ಬುದ್ಧಿ ಎಲ್ಲ ಇತ್ತಂತೆ. ಹಾಗಾಗಿ ಅವನಿಗೆ ಇನ್ನೂ ಹೆಚ್ಚು ದುಡ್ಡು ಬೇಕು ಅಂತ ಅನಿಸುತ್ತಿದ್ದಿರಬೇಕು. ಅವನ ಕಣ್ಣು ಸುಖವಾಗಿದ್ದ ತನ್ನ ದಾಯಾದಿಗಳಾದ ರಾಮಪ್ಪ ಭಟ್ಟರ ಮೇಲೆ ಬಿತ್ತು. ಅದಕ್ಕಾಗಿ ಅವನು ಸುಳ್ಳು ಸಾಕ್ಷಿಗಳನ್ನು ಸೃಷ್ಟಿ ಮಾಡಿ ತಾನು ರಾಮಪ್ಪ ಭಟ್ಟರ ಖಾಸ ತಮ್ಮ, ತನಗೆ ಕೂಡಾ ಲಕ್ಷ್ಮೀನಾರಾಯಣ ಭಟ್ಟರ ಆಸ್ತಿಯಲ್ಲಿ ಮತ್ತು ದೇವಸ್ಥಾನದ ಪೂಜೆಯಲ್ಲಿ ಪಾಲು ಬೇಕು ಎಂದು ಮಂಗಳೂರು ಕೋರ್ಟಿನಲ್ಲಿ ಕೇಸು ಹಾಕಿದನಂತೆ.
ಕೇಸು ಹಲವಾರು ವರ್ಷಗಳ ಕಾಲ ನಡೆಯಿತು. ಎರಡೂ ಕಡೆಯವರು ಮಂಗಳೂರಿನ ಕೋರ್ಟಿಗೆ ಅಲೆದಾಡುತ್ತಾ ಇದ್ದರು. ಪ್ರಾಯವಾದ ಕಾರಣ ರಾಮಪ್ಪ ಭಟ್ಟರಿಗೆ ಕೋರ್ಟು ಕಛೇರಿ ಅಂತ ಅಲೆದಾಡಲು ಸಾಧ್ಯವಿರಲಿಲ್ಲ. ಅವರು ಮಗ ಅನಂತ ಭಟ್ಟನನ್ನು ಇದಕ್ಕೆಲ್ಲ ಕಳಿಸುತ್ತಿದ್ದರು. ಅನಂತ ಭಟ್ಟ ಮುಗ್ಧ ಮತ್ತು ಸಣ್ಣ ಪ್ರಾಯದವ. ಶ್ರೀಪತಿ ಭಟ್ಟನಾದರೋ ಹಲವು ಊರುಗಳ ನೀರು ಕುಡಿದ ಖದೀಮ.

ಅನಂತ ಭಟ್ಟ ಕೋರ್ಟಿನ ವ್ಯವಹಾರಗಳಿಗೆ ಓಡಾಡುವಾಗ ಒಂದು ಎತ್ತಿನ ಗಾಡಿಯನ್ನು ಕಟ್ಟಿಸಿಕೊಂಡು ಅದರಲ್ಲಿ ಹೋಗುತ್ತಿದ್ದದ್ದು ಕ್ರಮ. ಅವನ ಜತೆಗೆ ಅವರ ಕಡೆಯ ಸಾಕ್ಷೀದಾರನಾದ ಸೀನಪ್ಪಟ್ರು (ಶೀನಪ್ಪ ಅಥವಾ ಶ್ರೀನಿವಾಸ ಭಟ್ಟರು) ಇರುತ್ತಿದ್ದರು. ಮಧ್ಯಾಹ್ನದ ಹೊತ್ತು ಊಟಕ್ಕೆ ಬದಲಾಗಿ ಅವರಿಬ್ಬರೂ ಅನಂತ ಭಟ್ಟ ಮನೆಯಿಂದ ತರುತ್ತಿದ್ದ ಅವಲಕ್ಕಿ ಮೊಸರು ತಿನ್ನುತ್ತಿದ್ದರು. ಚಿಕ್ಕಪ್ಪ ಶ್ರೀಪತಿ ಭಟ್ಟ ಕೋರ್ಟಿಗೆ ಹೋಗುವಾಗಿನ ವೈಭವವೇ ಬೇರೆ. ಅವನು ಅಲ್ಲಿನ ಹೋಟೆಲಿನಲ್ಲಿ ತನ್ನ ಜತೆಗೆ ಸಾಕ್ಷೀದಾರರಾಗಿ ಬರುತ್ತಿದ್ದವರಿಗೆ ಕಾಫಿ ಕುಡಿಸುತ್ತಿದ್ದನಂತೆ. ಹಾಗೆ ಕಾಫಿ ಕುಡಿಯಲಿಕ್ಕಾಗಿಯೇ ಸಾಕ್ಷಿ ಹೇಳಲು ನಾನು ಬರುತ್ತೇನೆ ತಾನು ಬರುತ್ತೇನೆ ಎಂದು ಹಲವರು ದುಂಬಾಲು ಬೀಳುತ್ತಿದ್ದರಂತೆ. ಸಾಕ್ಷೀದಾರರು ಕೋರ್ಟಿನಲ್ಲಿ “ಶ್ರೀಪತಿ ಭಟ್ಟರು ರಾಜಪುರೋಹಿತ ಲಕ್ಷ್ಮೀನಾರಾಯಣ ಭಟ್ಟರ ಸ್ವಂತ ಮಗ, ರಾಮಪ್ಪ ಭಟ್ಟರ ಖಾಸಾ ತಮ್ಮ ಎನ್ನುವುದನ್ನು ನಾನು ಇಂತಿಂಥ ಕಾರಣದಿಂದ ಬಲ್ಲೆ; ಅದನ್ನು ಪ್ರಮಾಣೀಕರಿಸಿ ಹೇಳುತ್ತೇನೆ” ಎಂದಷ್ಟೇ ಹೇಳಬೇಕಾಗಿದ್ದುದು. ರಾಮಪ್ಪ ಭಟ್ಟರ ಕಡೆಯಿಂದ ಅದನ್ನು ಅಲ್ಲಗಳೆಯಬೇಕಾದವರು ಸೀನಪ್ಪಟ್ರು.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

ಎರಡೂ ಕಡೆಯವರು ಮಂಗಳೂರಿನ ಕೋರ್ಟಿಗೆ ಅಲೆದಾಡುತ್ತಾ ಇದ್ದರು. ಪ್ರಾಯವಾದ ಕಾರಣ ರಾಮಪ್ಪ ಭಟ್ಟರಿಗೆ ಕೋರ್ಟು ಕಛೇರಿ ಅಂತ ಅಲೆದಾಡಲು ಸಾಧ್ಯವಿರಲಿಲ್ಲ. ಅವರು ಮಗ ಅನಂತ ಭಟ್ಟನನ್ನು ಇದಕ್ಕೆಲ್ಲ ಕಳಿಸುತ್ತಿದ್ದರು. ಅನಂತ ಭಟ್ಟ ಮುಗ್ಧ ಮತ್ತು ಸಣ್ಣ ಪ್ರಾಯದವ. ಶ್ರೀಪತಿ ಭಟ್ಟನಾದರೋ ಹಲವು ಊರುಗಳ ನೀರು ಕುಡಿದ ಖದೀಮ.

ಈ ಜಿಗುಟನ್ನು ಬಿಡಿಸಲಾರದೆ ಕೋರ್ಟಿನಲ್ಲಿ ಲಿಖಿತ ಸಾಕ್ಷಿ ಕೇಳಿದರು ಅಂತ ಕಾಣುತ್ತದೆ. ಆಗ ಜನನ ಪ್ರಮಾಣಪತ್ರಗಳು ಎಲ್ಲಿ ಸಿಗುತ್ತವೆ? ಶ್ರೀಪತಿ ಭಟ್ಟ ಒಂದು ಜಾತಕವನ್ನು ಲಿಖಿತ ಸಾಕಿಯಾಗಿ ಕೋರ್ಟಿಗೆ ಹಾಜರುಪಡಿಸಿದ. ಅದರಲ್ಲಿ ‘ರಾಜಪುರೋಹಿತ ಲಕ್ಷ್ಮೀನಾರಾಯಣ ಭಟ್ಟರ ದ್ವಿತೀಯ ಪುತ್ರ ಶ್ರೀಪತಿಯ ಶುಭಜನನ’ ಎಂದು ಬರೆದಿತ್ತಂತೆ. ಈ ವಿಷಯವನ್ನು ಅನಂತ ಭಟ್ಟ ತಂದೆಗೆ ವರದಿ ಮಾಡುವಾಗ ಅವರಿಗೆ ಶ್ರೀಪತಿಯ ಕುತಂತ್ರವನ್ನು ಹೇಗೆ ಎದುರಿಸುವುದು ಎಂದು ತಿಳಿಯದೆ ಎರಡು ದಿನ ಅನ್ನ ನೀರು ಬಿಟ್ಟು ಯೋಚಿಸುತ್ತ ಕುಳಿತಿದ್ದರಂತೆ. ಕೊನೆಗೆ ಇದ್ದಕ್ಕಿದ್ದಂತೆ ಎದ್ದು, “ಇದಕ್ಕೆ ಮಹಾಲಿಂಗೇಶ್ವರನೇ ಪರಿಹಾರ ತೋರಿಸಿದ” ಎಂದು ಹಳೆಯ ಟ್ರಂಕಿನಲ್ಲಿ ತನ್ನ ಜಾತಕ ಹುಡುಕಿದರಂತೆ. ಅದು ಸಿಕ್ಕಿತು. ಆ ಜಾತಕ ಇದ್ದುದು ತುಳು ಅಥವಾ ಮಲಯಾಳೀ ಲಿಪಿಯಲ್ಲಿ, ಕನ್ನಡದಲ್ಲಿ ಅಲ್ಲ. ಅಪ್ಪ ಲಕ್ಷ್ಮೀನಾರಾಯಣ ಭಟ್ಟರಿಗೆ ಕನ್ನಡ ಲಿಪಿಯಲ್ಲಿ ಬರೆಯಲು ಬರುತ್ತಿರಲಿಲ್ಲ ಎನ್ನುವ ಸತ್ಯ ಶ್ರೀಪತಿಗೆ ಗೊತ್ತಿಲ್ಲ ಎನ್ನುವುದು ರಾಮಪ್ಪ ಭಟ್ಟರಿಗೆ ಹೊಳೆಯಿತು. ಅವರು ಮಗನ ಕೈಯಲ್ಲಿ ತನ್ನ ಹಳೆಯ ಜಾತಕದ ಪ್ರತಿಯನ್ನು ಕೊಟ್ಟು, “ಇದನ್ನು ನಮ್ಮ ವಕೀಲರ ಕೈಯಲ್ಲಿ ಗುಟ್ಟಿನಲ್ಲಿ ಕೊಡು. ಸೀನಪ್ಪುವಿಗೆ ಕೂಡಾ ಹೇಳಬೇಡ. ಕೋರ್ಟಿನಲ್ಲಿ ನಮ್ಮ ವಕೀಲರು ಈ ಜಾತಕವನ್ನು ಹಾಜರುಪಡಿಸಿದರೆ ಎದುರು ಕಡೆಯವರ ಮೋಸವೆಲ್ಲ ಬಯಲಾಗಿಹೋಗುತ್ತದೆ. ಇನ್ನು ಈ ಸುಳ್ಳು ಕೇಸು ಹೆಚ್ಚು ಎಳೆಯಲಿಕ್ಕಿಲ್ಲ” ಎಂದು ಧೈರ್ಯ ಹೇಳಿದರು.
ಇತ್ತ ಶ್ರೀಪತಿ ಭಟ್ಟನೂ ಅಂತಿಮ ಪ್ರಹಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದುದು ಸತ್ಯವಂತರಾದ ರಾಮಪ್ಪ ಭಟ್ಟರಿಗೆ ಗೊತ್ತೇ ಇರಲಿಲ್ಲ. ಈ ಶ್ರೀಪತಿ ಭಟ್ಟನಿಗೆ ಗಂಪದಬೈಲಿನಲ್ಲಿ ತರಂಬೆ ಎನ್ನುವ ಸೂಳೆಯಿದ್ದಳು. ಅವಳು ಭಾರೀ ಚೆಂದವಂತೆ. ಶ್ರೀಪತಿ ಭಟ್ಟನ ರಸಿಕತೆಗೋ, ಪ್ರೀತಿಗೋ ಒಲಿದು ಅವನನ್ನೇ ನೆಚ್ಚಿಕೊಂಡಿದ್ದವಳು ತರಂಬೆ. ಈ ಶ್ರೀಪತಿ ಭಟ್ಟ ಒಮ್ಮೆ ಸೀನಪ್ಪಟ್ರನ್ನು ಅವಳ ಬಳಿಗೆ ಕಳುಹಿಸಿ ಸ್ವರ್ಗ ತೋರಿಸಿದ. ಆಗ ಸೀನಪ್ಪಟ್ರಿಗೆ ಎಷ್ಟು ವರ್ಷ ವಯಸ್ಸು ಎನ್ನುವುದು ನನಗೆ ತಿಳಿಯದು. ಆದರೆ ಮನುಷ್ಯ ಆ ಒಂದು ಆಸೆಗೆ ಏನು ಬೇಕಾದರೂ ಮಾಡಲು ಸಿದ್ಧನಾಗುತ್ತಾನಲ್ಲ! ಇದಾದ ನಂತರ ಸೀನಪ್ಪಟ್ರು ಅಂತಿಮ ಹಿಯರಿಂಗಿನಲ್ಲಿ ತನ್ನ ಕಡೆಗೆ ಸಾಕ್ಷಿ ಹೇಳುವಂತೆ ತಿರುಗಿಸಿಕೊಂಡ. ಇದಲ್ಲದೆ ಅವನಿಗೆ ರಾಮಪ್ಪ ಭಟ್ಟರ ಮಲಯಾಳಿ ಲಿಪಿಯ ಜಾತಕದ ವಿಷಯ ಹೇಗೋ ಗೊತ್ತಾಗಿ ಹೋಯಿತು. ಅನಂತನೇ ಸೀನಪ್ಪಟ್ರ ಬಳಿ ಆ ರಹಸ್ಯವನ್ನು ಹೇಳಿ, ಅವರು ಶ್ರೀಪತಿಗೆ ಅದನ್ನು ಹೇಳಿರಬಹುದು. ಶ್ರೀಪತಿ ಭಟ್ಟ ರಾಮಪ್ಪ ಭಟ್ಟರ ಕಡೆಯ ವಕೀಲರಿಗೆ ಲಂಚ ನೀಡಿ ಆ ಜಾತಕ ಕೋರ್ಟಿಗೆ ಬಾರದ ಹಾಗೆ ನೋಡಿಕೊಂಡ.

ಕೋರ್ಟಿನಲ್ಲಿ ಅನಂತ ಭಟ್ಟ ತಮ್ಮ ವಕೀಲರ ಬಳಿ, “ಜಾತಕ” “ಜಾತಕ” ಎಂದು ಅದನ್ನು ಹಾಜರು ಪಡಿಸಲು ನೆನಪಿಸುತ್ತಲೇ ಇದ್ದನಂತೆ. ವಕೀಲರು, “ಇದೇನೂ ಅಂಥ ಮುಖ್ಯ ಸಾಕ್ಷಿ ಅಲ್ಲ, ನೀವೇನೂ ಹೆದರಬೇಡಿ. ನಾನು ಕೇಸು ಗೆಲ್ಲಿಸಿಕೊಟ್ಟರೆ ಆಯಿತಲ್ಲ” ಎಂದು ಬೊಗಳೆ ಬಿಡುತ್ತಲೇ ಇದ್ದರು. ಅಷ್ಟರಲ್ಲಿ ಸೀನಪ್ಪಟ್ರು ತಾನು ಇದುವರೆಗೆ ಹೇಳಿದ್ದೆಲ್ಲ ಸುಳ್ಳು, ಶ್ರೀಪತಿ ಭಟ್ಟ ರಾಜಪುರೋಹಿತ ಲಕ್ಷ್ಮೀನಾರಾಯಣ ಭಟ್ಟರ ಮಗನೇ ಎನ್ನುವುದು ನನಗೆ ಈಗ ಸ್ಪಷ್ಟವಾಗಿದೆ ಎಂದು ಹೇಳಿಕೆ ನೀಡಿದರು. ಜಡ್ಜಿ ಹಾಗೆಯೇ ತೀರ್ಪು ಕೊಟ್ಟು ಎದ್ದುಹೋದ. ಅನಂತ ಭಟ್ಟನಿಗೆ ಅಲ್ಲೇ ನೆಲ ಕುಸಿದ ಹಾಗಾಯಿತು. ಎಲ್ಲರೂ ಅವನನ್ನು ಬಿಟ್ಟು ಅವರಷ್ಟಕ್ಕೆ ಹೊರಟು ಹೋದರು. ಸೀನಪ್ಪಟ್ರು ಕೂಡಾ ಅವನ ಕಡೆ ನೋಡದೆ ಶ್ರೀಪತಿ ಭಟ್ಟನ ಜತೆಗೆ ಹೋಟೆಲಿನಲ್ಲಿ ಕಾಫಿ ಕುಡಿಯಲು ಸಂಭ್ರಮದಿಂದ ಹೊರಟರು.

ಅನಂತ ಭಟ್ಟ ತನ್ನ ಗಾಡಿಯನ್ನೇರಿ ಕುಳಿತ. ಗಾಡಿ ಹೊಡೆಯುವವನ ಬಳಿ ಏನೂ ಹೇಳದೆ, ಅವನು ಏನು ಮಾತಾಡಿದರೂ ಉತ್ತರಿಸದೆ ಮೌನವಾಗಿ ಕುಳಿತಿದ್ದ. ಗಾಡಿ ಗಂಪದಬೈಲಿನ ಕಡೆಗೆ ಸಾಗತೊಡಗಿತು. ದಾರಿಯಲ್ಲಿ ಎಲ್ಲೋ ತನ್ನ ಕೈಯಲ್ಲಿದ್ದ ಉಂಗುರದಲ್ಲಿದ್ದ ವಜ್ರದ ಹರಳನ್ನು ನುಂಗಿ ಪ್ರಾಣ ಕಳೆದುಕೊಂಡದ್ದು ಗಾಡಿಯವನಿಗೆ ಗೊತ್ತೇ ಆಗಲಿಲ್ಲ. ಗಾಡಿಯನ್ನು ಮನೆಯಂಗಳಕ್ಕೆ ತಂದು ನಿಲ್ಲಿಸಿದಾಗಲೇ ಅನಂತ ಭಟ್ಟ ಆತ್ಮಹತ್ಯೆ ಮಾಡಿಕೊಂಡ ವಿಚಾರ ಗಾಡಿಯವನಿಗೂ ತಿಳಿದದ್ದು. ತಮ್ಮ ಮಗ ಒಳ್ಳೆಯ ಸುದ್ದಿ ತರುತ್ತಾನೆಂಬ ಆತುರದಿಂದ ಹೊರಗೆ ಬಂದ ರಾಮಪ್ಪ ಭಟ್ಟರು ಗಾಡಿಯತ್ತ ಧಾವಿಸಿ ನೋಡಿದಾಗ ಅವರಿಗೆ ತಮ್ಮ ಏಕೈಕ ಪುತ್ರನ ಹೆಣದ ದರ್ಶನವಾಯಿತು. ಅವರು ‘ಹಾ!’ ಎಂದು ಎದೆ ಹಿಡಿದುಕೊಂಡು ಕುಸಿದುಬಿದ್ದರು.

ರಾಮಪ್ಪ ಭಟ್ಟರು ಆಮೇಲೆ ಪರಶುರಾಮ ಅವತಾರವನ್ನೇ ತಾಳಿ ತಾವೇ ಮಂಗಳೂರಿಗೆ ಹೋಗಿ, ಅಪೀಲು ಹಾಕಿ ಕೇಸು ಗೆದ್ದರಂತೆ. ತನ್ನ ಆಸ್ತಿಯ ಮೇಲೆ ಶ್ರೀಪತಿ ಭಟ್ಟನ ಸಂತಾನದ ಕಣ್ಣು ಕೂಡ ಬೀಳದಂತೆ ಮಾಡುತ್ತೇನೆ ಎಂದು ಘೋಷಿಸಿ ತಮ್ಮ ಆಸ್ತಿ ಮತ್ತು ದೇವಸ್ಥಾನದ ಪೂಜೆಯ ಹಕ್ಕನ್ನು ಮಗಳ ವಂಶಕ್ಕೆ ಬರೆದುಕೊಟ್ಟರು. ಅದೇ ರಿಜಿಸ್ತ್ರಿ ದಾಖಲೆಯ ಪ್ರತಿ ಇದು.

ಈಗ ನಿನ್ನೆ ನೀವು ಕೇಳಿದ ಶಬ್ದದ ವಿಷಯಕ್ಕೆ ಬರುತ್ತೇನೆ. ಆ ರೀತಿ ನೊಂದುಕೊಂಡು ಜೀವಕಳೆದುಕೊಂಡ ಅನಂತ ಭಟ್ಟನ ಆತ್ಮಕ್ಕೆ ಇನ್ನೂ ಮುಕ್ತಿ ಸಿಕ್ಕಿಲ್ಲ ಅಂತ ಹೇಳುತ್ತಾರೆ. ಆಗಾಗ ನಡುರಾತ್ರಿ ಬಂದು ನಮ್ಮ ಮನೆಯ ಬಾಗಿಲಿಗೆ ಒದ್ದು ಹೋಗುವುದು ಅನಂತ ಭಟ್ಟನ ಪ್ರೇತವೇ ಎಂದು ಜ್ಯೋತಿಷಿಗಳಲ್ಲಿ ಕೇಳಿದಾಗ ಹೇಳಿದ್ದಾರೆ. ಶ್ರೀಪತಿ ಭಟ್ಟನ ಕುಟುಂಬದ ಮನೆಯಲ್ಲಿ ಅನಂತ ಭಟ್ಟನ ಪ್ರೇತದ ಉಪದ್ರವ ನಿತ್ಯವೂ ಇದೆಯಂತೆ. “ನನಗೆ ಏನಾದರೂ ನಿವೃತ್ತಿ ಮಾಡಿ” ಎಂದು ಕೇಳುವುದಕ್ಕೆ ಇರಬಹುದು, ನಮ್ಮ ಮನೆಗೂ ಆಗಾಗ ಅದರ ಭೇಟಿ ಇರುತ್ತದೆ. ನಾವೂ ಏನಾದರೂ ಮಾಡಬೇಕೆಂದಿದ್ದೇವೆ.

ನಾರಾಯಣ ಉಪಾಧ್ಯಾಯರು ಕತೆ ಮುಗಿಸಿದಾಗ ನನ್ನಲ್ಲಿ ಒಂದು ಗಾಢವಾದ ವಿಷಾದ ಭಾವನೆ ಮೂಡಿತು. ನಾನು ತುಂಬಾ ಹೊತ್ತು ಮಾತಾಡಲಿಲ್ಲ. ಮನುಷ್ಯ ಕ್ಷಣಿಕವಾದ ಸುಖಕ್ಕಾಗಿ ಎಷ್ಟು ಜನರಿಗೆ ಶಾಶ್ವತವಾದ ನೋವನ್ನು ಕೊಡುತ್ತಾನೆ ಎನ್ನುವುದನ್ನೇ ಯೋಚಿಸುತ್ತಾ ಕುಳಿತೆ.

(……ಮುಂದುವರೆಯುವುದು)
ಟಿಪ್ಪಣಿ:
ಕಲ್ಯಾಣಪ್ಪನ ಕಾಲದಲ್ಲಿ ನಡೆದ ಘಟನೆಗಳು ಇನ್ನೂ ಕೂಡಾ ನಮ್ಮ ಜನಪದರಿಗೆ ನೆನಪಿದೆ ಎನ್ನುವುದು ವಿಚಿತ್ರ, ಆದರೂ ಸತ್ಯ ಎನ್ನುವಂತಹ ಸಂಗತಿ. ನಾನು ಬರೆದ ‘ಕಾಟಕಾಯಿ’ ಎಂಬ ಕತೆಯಲ್ಲಿ ಇದರ ಒಂದು ಉದಾಹರಣೆಯಿದೆ. ಇದು ಕೇವಲ ಕತೆಯಲ್ಲ, ನಾನು ಹಳ್ಳಿಯ ಜನಗಳಿಂದ ಸಂಗ್ರಹಿಸಿದ ವಿಷಯಗಳನ್ನಾಧರಿಸಿ ರಚಿಸಿದ ಕಥಾನಕ ಎಂದಷ್ಟೇ ಇಲ್ಲಿ ದಾಖಲಿಸಬಯಸುತ್ತೇನೆ. ಈ ಕತೆಯಲ್ಲಿ ಕಲ್ಯಾಣಪ್ಪನ ಕಾಲದ ಕತೆ ಈ ಕಾಲದವರೆಗೂ ತನ್ನ ಸಂಬಂಧವನ್ನು ಬೆಳೆಸಿಕೊಂಡುಬಂದಿರುವುದನ್ನು ಕಾಣಬಹುದು.
ಕಲ್ಯಾಣಪ್ಪನ ಕಾಲದಲ್ಲಿ ಇಡೀ ಜಿಲ್ಲೆಯ ಜನತೆ ಯಾವ ಮಟ್ಟದಲ್ಲಿ ಭಯಭೀತರಾಗಿದ್ದರೆನ್ನುವುದನ್ನು ನನಗೆ ಇನ್ನೂ ಕೆಲವು ಅಧ್ಯಯನಕಾರರು ತಿಳಿಸಿದ್ದಾರೆ. ಉದಾಹರಣೆಗೆ ಬಂಟ್ವಾಳದ ಸಾಹಿತಿ – ಸಂಘಟಕ ಬಿ. ತಮ್ಮಯನವರು ಇತರ ವಿದ್ವಾಂಸರ – ಅಧ್ಯಯನಕಾರರ ಜತೆಗೆ ಬಿಲ್ಲವರ ಗುತ್ತುಗಳ ಅಧ್ಯಯನಕ್ಕೆಂದು ಹಳ್ಳಿಗಳಲ್ಲಿ ತಿರುಗಾಡುತ್ತಿದ್ದಾಗ ಕಲ್ಯಾಣಪ್ಪನ ಕಾಟಕಾಯಿಯ ಭಯದಿಂದ ಆ ಕಾಲದವರು ಚಿನ್ನಾಭರಣಗಳನ್ನು ಅಡಗಿಸಿಡಲು ಬಳಸುತ್ತಿದ್ದ ಹಲವಾರು ಬಾವಿಗಳನ್ನು ಕಂಡೆವೆಂದು ನನಗೆ ತಿಳಿಸಿದರು. ಆ ಮಾಹಿತಿ ನಾನು ನಿರೂಪಿಸಿರುವ ಬೇರೊಂದು ಗ್ರಾಮದ ಕಥೆಯ ವಿವರಗಳಿಗೆ ಸರಿಹೊಂದುವಂತೆ ಇದ್ದುದು ಆಶ್ಚರ್ಯಕರವಾಗಿದೆ. ‘ಕಾಟಕಾಯಿ’ ಕತೆಯಲ್ಲಿ ಕಲ್ಯಾಣಪ್ಪನಿಗೆ ಸಂಬಂಧವಿಲ್ಲದವರು ನಡೆಸಿದ ದರೋಡೆಗಳು, ಹಾಗೂ ಕಲ್ಯಾಣಪ್ಪನ ಪತನದ ನಂತರ ಬ್ರಿಟಿಷರು ಅಂಥವರನ್ನು ಹುಡುಕಿ ಶಿಕ್ಷೆ ಕೊಟ್ಟದ್ದು ಎರಡೂ ದಾಖಲಾಗಿದೆ.
ಈ ಕತೆ ‘ಉತ್ಥಾನ’ದ ವಾರ್ಷಿಕ ಕಥಾಸ್ಪರ್ಧೆಯಲ್ಲಿ ಬಹುಮಾನಪಡೆದ ಕತೆ. ಇದರ ಹೊರಚೌಕಟ್ಟಿನ ಕತೆ ಪ್ರಸ್ತುತದಲ್ಲಿ ನಡೆಯುವುದಾದರೂ ಒಳಗಿನ ಕತೆ 1837 ರ (ಅಂದರೆ ಕಲ್ಯಾಣಪ್ಪನ ಕ್ರಾಂತಿಯ) ಹಿಂದೆಮುಂದೆ ನಡೆಯುವಂಥದು. ಇದೇ ರೀತಿ ಮುಂದಿನ ಕತೆ ಡಾ. ಪ್ರಭಾಕರ ಶಿಶಿಲರ ‘ಬೇಟೆ’ಯಲ್ಲಿಯೂ ಹೊರಾವರಣದ ಕತೆ ವರ್ತಮಾನದಲ್ಲಿ ನಡೆಯುವುದಾದರೂ ಮುಖ್ಯ ಕಥೆ ಕಲ್ಯಾಣಪ್ಪನ ಹೋರಾಟದ ಕಾಲದ್ದೇ. ಈ ಮಾದರಿಯನ್ನು ಹೋಲುವ ಕೆಲವು ಕತೆಗಳು ‘ಹಿಂದಿರುಗಿ ನೋಡಿದಾಗ’ ಎನ್ನುವ ಕೊನೆಯ ಭಾಗದಲ್ಲಿ ಸೇರಿವೆ. ಆದರೆ ಆ ಕತೆಗಳಲ್ಲಿ ಇತಿಹಾಸ ಅನ್ನುವುದು ವರ್ತಮಾನ ಕಾಲದ ಬದುಕನ್ನು ಪರಿಶೀಲಿಸಲು ಬಳಕೆಯಾದ ಸಾಮಗ್ರಿ. ಈ ಎರಡು ಕತೆಗಳಲ್ಲಿ (‘ಕಾಟಕಾಯಿ’ ಮತ್ತು ‘ಬೇಟೆ’) ಇತಿಹಾಸದ ಅಥವಾ ಐತಿಹ್ಯದ ಕತೆಗಳನ್ನು ಹೇಳಲು ವರ್ತಮಾನ ಕಾಲದ ಚೌಕಟ್ಟನ್ನು ಬಳಸಿಕೊಳ್ಳಲಾಗಿದೆ. ವರ್ತಮಾನ ಕಾಲದ ಹೊರಾವರಣದ ಕತೆಗಳು ಈ ಎರಡೂ ಕತೆಗಳಲ್ಲಿ ಮುಖ್ಯವಲ್ಲ.