ಬ್ರಿಟನ್ನಿನ ಈ ಕಥೆ, ಎಲ್ಲ ದೇಶಗಳ ಕನ್ನಡ ಅನಿವಾಸಿಗಳಿಗೂ ಸಣ್ಣ ಮಟ್ಟದಲ್ಲೋ, ದೊಡ್ಡ ಪ್ರಮಾಣದಲ್ಲೋ ಅನ್ವಯವಾಗುವ ವಿಚಾರವೇ ಆಗಿದೆ. ಸಮುದಾಯ ಒಕ್ಕೂಟಗಳು ಪ್ರತಿ ದೇಶದಲ್ಲಿ ಪ್ರತಿ ಸಮುದಾಯಕ್ಕೂ ಅತ್ಯಂತ ಅಗತ್ಯ ಅಂತ ನನಗೆ ಅರಿವಾದ್ದೇ ವಿದೇಶಿವಾಸಿಯಾದ ನಂತರ. ವರ್ಷದಲ್ಲಿ ಇಂತಹ ಒಂದೆರಡು ದಿನಗಳಿಂದ ಕಾಲ, ದೇಶ ಮತ್ತು ಗತಿಗಳಲ್ಲಿ ಕಳೆದುಹೋಗಿಬಿಡಬಹುದಾದ ನನ್ನಂತ ವಿದೇಶಿಗಳು ಮತ್ತೆ ಮಾನಸಿಕವಾಗಿ ನಮ್ಮ ವೈಯಕ್ತಿಕತೆಯನ್ನು ಗುರುತಿಸಿಕೊಳ್ಳಲು ಸಾಧ್ಯವಾಗಿದೆ.
ಡಾ.ಪ್ರೇಮಲತ ಬರೆಯುವ ಬ್ರಿಟನ್ ಬದುಕಿನ ಕಥನ.
ಇದೀಗ ಬ್ರಿಟನ್ನಿನಲ್ಲಿ ಶರದೃತುವಿನ ಬಣ್ಣದೋಕುಳಿ!
ಹಸಿರು, ಹಳದಿ, ಕೇಸರಿ, ಕೆಂಪು ಬಣ್ಣದ ಎಲೆಗಳು ರಸ್ತೆಯುದ್ದಕ್ಕೂ ಉದುರಿ ವರ್ಷದ ಅಂತ್ಯ ಹತ್ತಿರವಾದದ್ದನ್ನು ನೆನಪಿಗೆ ತರುತ್ತಿವೆ. ಶರತ್ಕಾಲದ ಅರೆ ಬರೆ ಬೆಳಕು, ಗಾಳಿ, ಮಳೆ, ಚಳಿಗಳ ಸಮ್ಮಿಶ್ರಣದ ಪುಂಡಾಟಕ್ಕೆ ಬಸವಳಿದು, ಶರಣಾಗಿ ಹಣ್ಣೆಲೆಗಳು ನಿಟ್ಟುಸಿರಿಟ್ಟು ಉರುಳುತ್ತಿವೆ. ಹಾಡುವ ಹಕ್ಕಿಗಳ ಗೂಡುಗಳು ಬೆತ್ತಲಾಗಿ ಬರಿದಾಗುತ್ತಿವೆ. ಎಲೆಗಳಿಲ್ಲದೆ ನಗ್ನವಾಗಿ ಒಡಲನೊಡ್ಡಿ ನಿಂತ ಮರಗಳಿಗೆ ಒಳಗೊಳಗೇ ಮತ್ತೆ ಚಿಗುರುವ ಬಯಕೆಯ ನಸು ಪುಳಕ ಕಾಡುತ್ತಿರುವ ಕಾಲವಿದು. ಅದೇ ಕನವರಿಕೆಗೆ ಜಾರಿ ಚಳಿ, ಕತ್ತಲೆ, ಹಿಮಕ್ಕೆ ಮೈಯೊಡ್ಡಿ, ಹಸಿರ ಉಸಿರಿನ, ಹಕ್ಕಿ ಹಾಡಿನ ಕನಸ ಕೌದಿಗೆಯ ಮುಸುಕನ್ನೊತ್ತು ನಿಂತ ಮರಗಳು ‘ಎಲೆಗಳು ಉದುರಿದರೇನು, ಬೇರುಗಳು ಗಟ್ಟಿಯಾಗಿರುವವರೆಗೆ ನಾವು ನಿಲ್ಲುವವರೇ’ ಎಂದು ತಮ್ಮ ರೆಂಬೆ ಕೊಂಬೆಗಳ ಡೊಂಕಿನಲ್ಲೆಲ್ಲ ಕವನ ಬರೆದು ಮುಗಿಲೆಡೆ ಕೈ ಚಾಚಿ ತೂರಿದಂತೆ ಮಾಡಿ,ದಿಟ್ಟವಾಗಿ ನಿಂತು ಅಚ್ಚರಿಹುಟ್ಟಿಸುತ್ತವೆ! ಚಿಗುರ ವಸ್ತ್ರವನ್ನು ಹೊತ್ತು ತಮ್ಮ ಒಡಲನೆಲ್ಲ ಮರಳಿ ಅಲಂಕರಿಸುತ್ತ ಅಪ್ಪುವ ಪುರುಷ ಮನ್ಮಥ ’ವಸಂತ ’ ಮರಳಿ ಬಂದೇ ಬರುವನೆಂಬ ಈ ನಂಬುಗೆಯಲ್ಲೇ ಹೊಸ ಬದುಕಿನ ಭರವಸೆಗೆ ನಾಂದಿ ಹಾಡುತ್ತ, ಹಳೆ ಬದುಕಿಗೆ ವಿದಾಯ ಹೇಳುವ ಈ ಪ್ರಕೃತಿ ಪಾಠಗಳು ಸಾಮಾಜಿಕವಾಗಿಯೂ ಪ್ರತಿವರ್ಷ ಈ ಕಾಲದಲ್ಲಿ ಕಾಣತೊಡಗುತ್ತವೆ.
ನೈಸರ್ಗಿಕವಾಗಿ ಇದೀಗ ಬ್ರಿಟನ್ನಿನಲ್ಲಿ ಬೆಳಕಿನ ಕಾರುಬಾರು ಕಡಿಮೆಯಾಗುತ್ತಿರುವ ಕಾಲ. ಅಂದರೆ ಚಳಿಗಾಲದ ಆರಂಭ ಮತ್ತು ಶರತ್ಕಾಲದ ಮುಕ್ತಾಯ. ಬ್ರಿಟನ್ನಿನಲ್ಲಿ ಬಹಳ ನಾಟಕೀಯವಾಗಿ ಋತುಮಾನಗಳು ಬದಲಾಗುತ್ತವೆ. ಹಸಿರನ್ನೇ ಎರಚಿದಂತಿರುವ ದೃಶ್ಯಗಳು ಕಣ್ಮರೆಯಾಗುತ್ತ ಅಷ್ಟೂ ಎಲೆಗಳು ನಮ್ಮ ಕಾಲಡಿ ಹಳದಿ ಹಾಸಾಗಿ ಹಾಸಿಕೊಂಡು ಮರೆಯಾಗಿಬಿಡುತ್ತವೆ. ಬದುಕು ಹೊಸವರ್ಷಕ್ಕೆ ತಯಾರಾಗಲು ಒಂದಷ್ಟು ವಿಶ್ರಾಂತಿ ಬೇಡುವಂತೆ ಎಲ್ಲವೂ ಸ್ತಬ್ದವಾಗಿ, ಚಳಿಗೆ ಹೆದರಿ ನಿದ್ರೆಗೆ ಜಾರಿದಂತೆ ಕಾಣುತ್ತದೆ. ಬೆಳಕು ಕೂಡ ದಿನವೊಂದರಲ್ಲಿ ಕೆಲಗಂಟೆಗಳ ಕಾಲ ಮಾತ್ರ ಪಿಳಕ್ ಪಿಳಕ್ ಅಂದು ಮರೆಯಾಗಿಬಿಡುತ್ತದೆ. ಇದು ಬ್ರಿಟನ್ನಿಗೆ ಬಂದಾಗಿನಿಂದ ನಮ್ಮನ್ನು ಕಾಡಿರುವ ಕಷ್ಟದ ಸಮಯ. ಆದರೆ ಕೆಲ ವರ್ಷಗಳಲ್ಲೇ ಇಲ್ಲಿನ ಜನರು ಇಂತಹ ಕಾಲವನ್ನು ಎದುರಿಸಲು ಮಾಡಿಕೊಂಡಂಥ ಸಂಧಾನಗಳು ನಮಗೂ ಇಷ್ಟವಾಗತೊಡಗಿವೆ. ಅದರಲ್ಲಿನ ಜೀವನ ಪ್ರೀತಿ, ಸಂಧಾನಗಳಲ್ಲಿ ನಮಗೀಗ ಚಳಿಗಾಲವನ್ನು ಸುಲಭವಾಗಿ ಕಳೆಯಲು ಸಾಧ್ಯವಾಗಿದೆ.
ಮರಗಟ್ಟಿಸುವ ಚಳಿ ಮತ್ತು ಕತ್ತಲೆ ನಿಧಾನವಾಗಿ ಬಿಸಿಲು ಮತ್ತು ಬೆಳಕನ್ನು ನುಂಗತೊಡಗಿದಂತೆಯೇ ಇಲ್ಲಿನ ಸಾಮಾಜಿಕ ಸಂಪ್ರದಾಯಗಳು, ಹಬ್ಬಗಳು ಮಾನವ ನಿರ್ಮಿತ ಬೆಳಕಿನ ಮಿಣ ಮಿಣವನ್ನು ಜಗಮಗಿಸುವ ಕಾಲವಾಗುತ್ತದೆ. ಹಳೆಯ ವರ್ಷವೊಂದಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಸ್ವಾಗತಿಸಲು ಜನರು ಸಜ್ಜಾಗುತ್ತಿದ್ದಾರೆ. ಹಾಗಾಗಿ ಈ ಕತ್ತಲೆಯ ಕಾಲದಲ್ಲಿ ಚಳಿಯ ಶೀತಲತೆಗೆ ಬೆಳಕಿನ ಶೃಂಗಾರ ಕೂಡಿಕೊಂಡು ಬದುಕು ಸಹ್ಯವಾಗುತ್ತ ಕಳೆಯುತ್ತದೆ. ಚಳಿಗಾಲದಲ್ಲಿ ನಮ್ಮವರಿಗೆ ಭಾರತದ ಬೆಚ್ಚಗಿನ ದಿನಗಳು ಬಹುವಾಗಿಯೇ ಕಾಡುತ್ತವೆ. ಇದನ್ನು ಮರೆಸಲೋ ಎನ್ನುವಂತೆ ಬ್ರಿಟನ್ನಿನ ಹಬ್ಬಗಳ ಜೊತೆ ಜೊತೆಗೆ ನಮ್ಮ ಭಾರತೀಯ ಹಬ್ಬಗಳೂ ಸೇರಿ ಈ ಕತ್ತಲೆಯ ಚಳಿಗಾಲವನ್ನು ಕಳೆಯುವುದನ್ನು ಅಲ್ಪ ಸ್ವಲ್ಪ ಸುಲಭಗೊಳಿಸುತ್ತವೆ. ಅಕ್ಟೋಬರಿನ ಕೊನೆಯಲ್ಲಿ ಶುರುವಾಗುವ ವಿಜಯದಶಮಿಯಿಂದಲೇ ಇದಕ್ಕೆ ಶುರುವಾತು ಸಿಗುತ್ತದೆ. ಹಲವು ರಸ್ತೆಗಳಲ್ಲಿ ಹೊಸ ದೀಪಗಳು ಹೊತ್ತಿಕೊಳ್ಳುತ್ತವೆ.
ನವೆಂಬರಿನಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಇಲ್ಲಿನ ನಾನಾ ಕನ್ನಡ ಸಂಘ ಸಂಸ್ಥೆಗಳು ಆಚರಿಸುತ್ತಾರೆ. ಕನ್ನಡಿಗರು, ಯು.ಕೆ. ಎನ್ನುವ ಸಂಘ ಈ ಆಚರಣೆಯನ್ನು ಅತಿ ದೊಡ್ಡ ಹಬ್ಬವನ್ನಾಗಿ ಹತ್ತಾರು ವರ್ಷಗಳಿಂದ ಆಚರಿಸುತ್ತ ಬಂದಿದೆ. ಇದೇ ನವೆಂಬರ್ ತಿಂಗಳ ಮೊದಲಲ್ಲಿ ಕಡುಕೇಸರಿ ಬಣ್ಣದ, ಭಯಾನಕ ರೂಪಿನಲ್ಲಿ ಕೆತ್ತಿದ ಕುಂಬಳಗಳ ಒಳಗೆ ದೀಪಗಳನ್ನು ಇಟ್ಟು ಆಚರಿಸುವ ಹಾಲ್ಲೋವೀನ್ ಎನ್ನುವ ಹಬ್ಬ ಬರುತ್ತದೆ. ಮಕ್ಕಳು, ಹಿರಿಯರು ಘೋರ ರೂಪುಗಳ ಧಿರಿಸನ್ನು ಧರಿಸಿ ಈ ಹಬ್ಬವನ್ನು ಆಚರಿಸುತ್ತಾರೆ. ಮಕ್ಕಳು ಮನೆ ಮನೆಗೆ ತೆರಳಿ ಟ್ರಿಕ್ ಆರ್ ಟ್ರೀಟ್ ಎಂದು ಕೇಳುತ್ತ ಕ್ಯಾಂಡಿ/ಸಿಹಿಯನ್ನು ಸಂಗ್ರಹಿಸುತ್ತಾರೆ.
ಈ ಹಬ್ಬದ ಹಿಂದೆಯೇ ಕಡುಕಪ್ಪಿನ ಚಳಿರಾತ್ರಿಗಳ ತುಂಬೆಲ್ಲ ದೀಪಗಳ ಬೆಳಕಿನ ಬೆಡಗು ತುಂಬುವ ದೀಪಾವಳಿಯ ಆಚರಣೆ ಪಾಶ್ಚಾತ್ಯ ಕನ್ನಡಿಗರ ಬದುಕಿನಲ್ಲಿ ಮುದವನ್ನು ಬೆರೆಸುತ್ತದೆ. ನರಕಾಸುರನನ್ನು ಕೊಂದು ಜಗತ್ತಿನ ಕತ್ತಲೆಯನ್ನು ನಿವಾರಿದ ಕಥೆ ದೀಪಾವಳಿಗಿದೆ. ಇದು ಅಂಧಕಾರದ ಮೇಲೆ ಬೆಳಕಿನ ಜಯ ಹೇಗೋ ಅದೇ ರೀತಿಯ ತತ್ವ ಇರುವ ಇಂಗ್ಲೀಷ್ ಹಬ್ಬ ‘ಬಾನ್ ಫೈರ್ ನೈಟ್’ ಇದೇ ಸಮಯಕ್ಕೆ ಬರುತ್ತದೆ. ಈ ಇಂಗ್ಲೀಷರ ಹಬ್ಬದಲ್ಲಿ ಎತ್ತರಕ್ಕೆ ಚಟ್ಟ ಕಟ್ಟಿ ಅದರ ಮೇಲೆ ಇಂಗ್ಲೆಂಡಿನ ಪಾರ್ಲಿಮೆಂಟನ್ನು ಸಿಡಿಮದ್ದು ಇಟ್ಟು ಸಿಡಿಸಲು ಯತ್ನಿಸಿದ ‘ಗೈ ಫಾಕ್ಸ್’ ಎಂಬಾತನನ್ನು ಸಾಂಕೇತಿಕವಾಗಿ ಸುಡುವ ಆಚರಣೆ ಪ್ರತಿ ನಗರ-ಹಳ್ಳಿಗಳಲ್ಲಿ ನಡೆಯುತ್ತದೆ. ಸ್ಥಳೀಯ ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು ಆಯಾ ನಗರಗಳ ಜನರನ್ನು ಒಂದೆಡೆ ಒಟ್ಟುಗೂಡಿಸಿ ನಡೆಸುವ ಬಾನ್ ಫೈರ್ ರಾತ್ರಿಯ ಖುಷಿಗಾಗಿ ಪಟಾಕಿಯ ಪ್ರದರ್ಶನಗಳು ನಡೆಯುತ್ತವೆ. ಇದು ಭಾರತೀಯರಾದ ನಮಗೆ ವರದಾನ. ಯಾಕೆಂದರೆ ದೀಪಾವಳಿಗೆ ಬೇಕಾಗುವ ಪಟಾಕಿಗಳು ಇಂಗ್ಲೀಷರ ಈ ಹಬ್ಬದ ಸಲುವಾಗಿ ನಮಗೆ ಸುಲಭವಾಗಿ ಸಿಗುತ್ತವೆ.
ಭಾರತದ ಹೊರಗಡೆ ನಡೆವ ದೊಡ್ಡ ದೀಪಾವಳಿಗಳಲ್ಲಿ ಇಂಗ್ಲೆಂಡಿನ ಲೆಸ್ಟರ್ ನಗರದಲ್ಲಿ ನಡೆವ ದೀಪಾವಳಿಯೂ ಒಂದು. ಪ್ರತಿ ಅಕ್ಟೋಬರ್ 28 ರಂದು ಸುಮಾರು 35000 ಜನರು ಒಂದೆಡೆ ಸೇರಿ ನಗರದ ಭಾರತೀಯ ಜನರ ಮಳಿಗೆಗಳಿರುವ ಮುಖ್ಯ ರಸ್ತೆಯೊಂದನ್ನು 6000 ಚಿತ್ತಾಕರ್ಷಕ ದೀಪಗಳೊಂದಿಗೆ ಅಲಂಕರಿಸುತ್ತಾರೆ. ಸಂಗೀತ, ನೃತ್ಯ, ಸಾಂಸ್ಕೃತಿಕ ಆಚಾರ ವಿಚಾರಗಳೊಂದಿಗೆ ನಗು, ಖುಶಿ ಸಂಭ್ರಮದಲ್ಲಿ ಎರಡು ವಾರಗಳ ಅವಿರತ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುತ್ತಾರೆ. ನಾನಾ ವಿಧದ ಸಿಹಿ ಮಿಠಾಯಿಯ ಹಂಚಿಕೆಯ ಹೊಂಚಲ್ಲೇ ಕುಟುಂಬದ ಸದಸ್ಯರೆಲ್ಲ ಸಮುದಾಯದವರೊಡನೆ ಸೇರಿ ನರ್ತಿಸಿ ಆನಂದಿಸುತ್ತಾರೆ. ಅಕ್ಟೋಬರಿನಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಹೊತ್ತುವ ಈ ದೀಪಗಳನ್ನು ಮತ್ತೆ ಕೆಳಗಿಳಿಸುವುದು ಹೊಸವರ್ಷದ ಆಚರಣೆ ಕಳೆದಮೇಲೆಯೇ. ನಡುವೆ ಈ ರೀತಿ ಅಲಂಕೃತಗೊಂದು ಕಂಗೊಳಿಸುವ ಈ ನಗರಕ್ಕೆ ಸಹಸ್ರಾರು ಭಾರತೀಯರು ಭೇಟಿ ಕೊಡುತ್ತಾರೆ.
ಇದಲ್ಲದೆ ಬ್ರಿಟನ್ನಿನ ನಾನಾ ಭಾಗದ ಕನ್ನಡಿಗರು ದೊಡ್ಡ ನಗರಗಳಲ್ಲಿ ಒತ್ತಟ್ಟಿಗೆ ಸೇರಿ ದೀಪಾವಳಿಯನ್ನು ಆಚರಿಸುತ್ತಾರೆ. ತಾಯ್ನಾಡಿನ ಕಂಪನ್ನು ಬೀರಬಲ್ಲ ಹಾಡುಗಾರರು, ಕಲಾವಿದರು,ಸಾಹಿತಿಗಳನ್ನು, ಸಿನಿಮಾ ತಾರೆಗಳನ್ನು ತವರು ಮನೆಯಿಂದ ಕರೆಸಿ ‘ಕನ್ನಡ ದೀಪಾವಳಿ’ಯ ಸಡಗರದಲ್ಲಿ ಸಂಭ್ರಮಿಸುತ್ತಾರೆ. ಬಂದ ಕಲಾವಿದರುಗಳು ಇಲ್ಲಿನ ಚಳಿಯನ್ನು ಶಪಿಸುತ್ತಲೇ ಅನಿವಾಸಿ ಕನ್ನಡಿಗರ ಬೆಚ್ಚಗಿಯ ಆತಿಥ್ಯದಲ್ಲಿ ಮೀಯುತ್ತಾರೆ. ಪಟಾಕಿಗಳ ಚಿತ್ತಾಕರ್ಷಕ ಪ್ರದರ್ಶನಗಳು ಕಪ್ಪಗಿನ ಆಗಸದಲ್ಲಿ ಬೆಳಕಿನ ಚಿತ್ತಾರಗಳನ್ನು ಬಿಡಿಸಿ ಕತ್ತಲೆ ತುಂಬಿದ ಮನಸ್ಸಲ್ಲಿ ದೇದಿಪ್ಯಮಾನವಾದ ಹರ್ಷದ ಹಣತೆ ಹೊತ್ತಿಸುತ್ತವೆ. ಈ ಬೆಳಕಿನ ಜಗಮಗ ಬ್ರಿಟನ್ನಿನ ಭಾರತೀಯರಿಗೆ ಮುಗಿಯುವುದು ಕ್ರಿಸ್ ಮಸ್ ಮತ್ತು ಹೊಸವರ್ಷದ ಪಟಾಕಿಗಳೊಂದಿಗೇ.
ಈ ಕತ್ತಲೆಯ ಕಾಲದಲ್ಲಿ ಚಳಿಯ ಶೀತಲತೆಗೆ ಬೆಳಕಿನ ಶೃಂಗಾರ ಕೂಡಿಕೊಂಡು ಬದುಕು ಸಹ್ಯವಾಗುತ್ತ ಕಳೆಯುತ್ತದೆ. ಚಳಿಗಾಲದಲ್ಲಿ ನಮ್ಮವರಿಗೆ ಭಾರತದ ಬೆಚ್ಚಗಿನ ದಿನಗಳು ಬಹುವಾಗಿಯೇ ಕಾಡುತ್ತವೆ. ಇದನ್ನು ಮರೆಸಲೋ ಎನ್ನುವಂತೆ ಬ್ರಿಟನ್ನಿನ ಹಬ್ಬಗಳ ಜೊತೆ ಜೊತೆಗೆ ನಮ್ಮ ಭಾರತೀಯ ಹಬ್ಬಗಳೂ ಸೇರಿ ಈ ಕತ್ತಲೆಯ ಚಳಿಗಾಲವನ್ನು ಕಳೆಯುವುದನ್ನು ಅಲ್ಪ ಸ್ವಲ್ಪ ಸುಲಭಗೊಳಿಸುತ್ತವೆ.
ಕನ್ನಡಿಗರು ವರ್ಷದಲ್ಲಿ ಯುಗಾದಿ, ದೀಪಾವಳಿಯ ಮತ್ತು ಕರ್ನಾಟಕ ರಾಜ್ಯೋತ್ಸವವನ್ನು ಬ್ರಿಟನ್ನಿನಲ್ಲಿ ತಪ್ಪದೆ ಆಚರಿಸುತ್ತ ಬಂದಿದ್ದಾರೆ. ಕನ್ನಡ ಸಮುದಾಯದ ಜನರೆಲ್ಲ ಒಂದೆಡೆ ಕೂಡಿ ನಡೆಸುವ ಈ ಸಮುದಾಯ ಚಟುವಟಿಕೆಗಳು ಮಾನಸಿಕವಾಗಿ ಒಂದಷ್ಟು ಹಿತವನ್ನು ತರುತ್ತವೆ. ಹಬ್ಬದ ದಿನಗಳಂದೇ ನಮಗೆ ರಜೆಯಿರದಿದ್ದರೂ ಮುಂದಿನ ವಾರಾಂತ್ಯಗಳಲ್ಲಿ ಒಂದೆಡೆ ಸೇರಿ ನಾಡಹಬ್ಬ ಮತ್ತು ಇತರೆ ಹಬ್ಬಗಳನ್ನು ಆಚರಿಸಲು ಬ್ರಿಟನ್ನಿನಲ್ಲಿ ಮುಕ್ತ ಅವಕಾಶಗಳಿವೆ.
ಹದಿನಾರು ವರ್ಷಗಳ ಹಿಂದೆ ಬಂದಾಗ ಪಶ್ಚಿಮ ದೇಶಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿತ್ತು. ಆ ಸಂಭ್ರಮದ ಜೊತೆಯಲ್ಲೇ ಇಂತಹ ವಿಶೇಷ ಹಬ್ಬದ ದಿನಗಳು ಬಂದಾಗೆಲ್ಲ ನಮ್ಮ ತವರೂರುಗಳನ್ನು ನೆನೆದು ಸಪ್ಪಗಾಗುತ್ತಿದ್ದ ನಾವು, ನಮ್ಮಂತವರ ಒಡನಾಟದಲ್ಲಿ ಆ ಒಂಟಿತನವನ್ನು ಮರೆಯುವುದನ್ನು ಕಲಿತಿದ್ದೇವೆ. ಸಾಹಿತ್ಯಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಈ ಹಬ್ಬಗಳ ಸಂದರ್ಭಗಳಲ್ಲಿ ಹಮ್ಮಿಕೊಳ್ಳುವುದರಿಂದ ನಮ್ಮ ಕೆಲಸ ಮತ್ತು ವೈಕ್ತಿಕ ಹವ್ಯಾಸಗಳನ್ನು ಹೊರತುಪಡಿಸಿ ಸಮುದಾಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಸಾಧ್ಯವಾಗಿದೆ.
ಯುಗಾದಿ, ದೀಪಾವಳಿಯ ಆಚರಣೆಯ ಸಂಧರ್ಭಗಳಲ್ಲಿ ನಿಸಾರ್ ಅಹಮದ್, ಎಸ್. ಎಲ್. ಭೈರಪ್ಪ, ಹೆಚ್. ಎಸ್. ವೆಂಕಟೇಶ ಮೂರ್ತಿ, ಬಿ. ಆರ್. ಲಕ್ಷ್ಮಣರಾವ್, ಡುಂಡಿರಾಜ್, ನಾಗತಿಹಳ್ಳಿ ಚಂದ್ರಶೇಖರ ಮೇಷ್ಟ್ರು, ಇನ್ನಿತರ ಬರಹಗಾರರು, ಸಿನಿಮಾ ನಟ/ನಟಿಯರು, ಖ್ಯಾತ ಹಾಡುಗಾರರು, ಚಲನಚಿತ್ರ ನಿರ್ದೇಶಕರುಗಳು, ಹಾಸ್ಯ ವಾಗ್ಮಿಗಳಾದ ಪ್ರಾಣೇಶ್, ಸುಧಾ ಬರಗೂರು, ಇನ್ನಿತರರು ಇತ್ತೀಚೆಗಿನ ಸಮಾರಂಭಗಳಲ್ಲಿ ನಮ್ಮೊಡನೆ ಮತ್ತು ನಮ್ಮ ಸಾಹಿತ್ಯ ಕಮ್ಮಟಗಳಲ್ಲಿ ಭಾಗವಹಿಸಿ ಕನ್ನಡನಾಡನ್ನು ಹತ್ತಿರವಾಗಿಸಿದ್ದಾರೆ. ಬ್ರಿಟನ್ನಿನ ಈ ಕಥೆ, ಎಲ್ಲ ದೇಶಗಳ ಕನ್ನಡ ಅನಿವಾಸಿಗಳಿಗೂ ಸಣ್ಣ ಮಟ್ಟದಲ್ಲೋ, ದೊಡ್ಡ ಪ್ರಮಾಣದಲ್ಲೋ ಅನ್ವಯವಾಗುವ ವಿಚಾರವೇ ಆಗಿದೆ. ಸಮುದಾಯ ಒಕ್ಕೂಟಗಳು ಪ್ರತಿ ದೇಶದಲ್ಲಿ ಪ್ರತಿ ಸಮುದಾಯಕ್ಕೂ ಅತ್ಯಂತ ಅಗತ್ಯ ಅಂತ ನನಗೆ ಅರಿವಾದ್ದೇ ವಿದೇಶಿವಾಸಿಯಾದ ನಂತರ. ವರ್ಷದಲ್ಲಿ ಇಂತಹ ಒಂದೆರಡು ದಿನಗಳಿಂದ ಕಾಲ, ದೇಶ ಮತ್ತು ಗತಿಗಳಲ್ಲಿ ಕಳೆದುಹೋಗಿಬಿಡಬಹುದಾದ ನನ್ನಂತ ವಿದೇಶಿಗಳು ಮತ್ತೆ ಮಾನಸಿಕವಾಗಿ ನಮ್ಮ ವೈಯಕ್ತಿಕತೆಯನ್ನು ಗುರುತಿಸಿಕೊಳ್ಳಲು ಸಾಧ್ಯವಾಗಿದೆ. ನಮ್ಮ ಹಲವು ಹವ್ಯಾಸಗಳಲ್ಲಿ ಮತ್ತೆ ತೊಡಗಿಕೊಳ್ಳಲು ಪ್ರೇರೇಪಣೆ ಸಿಕ್ಕಿದೆ. ಹೆಚ್ಚು ಹೆಚ್ಚು ಜನರ ಪರಿಚಯವಾಗಿದೆ.
ವರ್ಷಕ್ಕೆ ಕೆಲವು ಬಾರಿಯಾದರೂ ಹೀಗೆ ಸೇರುವುದು ಇದೀಗ ನಮ್ಮ ಜೀವನದ ಅವಿಭಾಜ್ಯ ಅಂಶಗಳಾಗಿವೆ. ಸಿಂಗಪುರ್, ಅಮೆರಿಕಾದಂತಹ ದೇಶಗಳಿಗೆ ಹೋಲಿಸಿದರೆ ಬ್ರಿಟನ್ನಿನಲ್ಲಿರುವ ಕನ್ನಡಿಗರ ಸಂಖ್ಯೆ ಬಹಳ ಕಡಿಮೆ. ಒಟ್ಟಾರೆ ಯು.ಕೆ ಯಲ್ಲಿ ಸುಮಾರು ಹದಿನೈದು ಸಾವಿರ ಕನ್ನಡಿಗರು ಇರಬಹುದೆಂಬ ಅಂದಾಜಿದೆ. ದೇಶದ ಉದ್ದಗಲಕ್ಕೂ ಇವರು ಹಂಚಿ ಹರಡಿ ಹೋಗಿದ್ದಾರೆ. ಆಯಾ ಪ್ರಾಂತ್ಯಗಳಿಗೆ ಸಂಬಂಧಿಸಿದಂತೆ ಹಲವಾರು ಕನ್ನಡ ಸಂಘ-ಸಂಸ್ಥೆಗಳಿವೆ. ಇವರಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಸಾಹಿತ್ಯ ಮತ್ತು ಬರವಣಿಗೆಯಲ್ಲಿ ಆಸಕ್ತಿಯಿರುವವರು. ಇಂತಹ ಹಲವು ಬ್ರಿಟನ್ ಕನ್ನಡಿಗರು ಒಂದಾಗಿ ‘ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಚಾರ ವೇದಿಕೆ’ ಎನ್ನುವ ಹೆಸರಲ್ಲಿ ಒಂದು ಸಣ್ಣ ಸಂಘವನ್ನು ಮಾಡಿಕೊಂಡು ದೀಪಾವಳಿ ಮತ್ತು ಯುಗಾದಿಗೆ ಒಂದು ಸಾಹಿತ್ಯ ಗೋಷ್ಠಿಯನ್ನು ನಡೆಸುತ್ತಿದ್ದೇವೆ. 35 ವರ್ಷಗಳಿಗೂ ಹೆಚ್ಚಿನ ಚರಿತ್ರೆಯಿರುವ ಹಿರಿಯ ಕನ್ನಡ ಸಂಘವಾದ “ಕನ್ನಡ ಬಳಗ”ದ ಆಶ್ರಯದಲ್ಲಿ ಪ್ರತಿ ದೀಪಾವಳಿ ಮತ್ತು ಯುಗಾದಿಯಲ್ಲಿ ಸಾಹಿತ್ಯದ ಬಗ್ಗೆ ಒಂದಿಷ್ಟು ವಿಚಾರ ವಿನಿಮಯ ನಡೆಸುತ್ತೇವೆ. ಆಗೀಗ ಈ ಸಾಹಿತ್ಯ ಗೋಷ್ಠಿಗಳ ಪೂರ್ವ ತಯಾರಿಯಾಗಿ ಯಾರಾದರೊಬ್ಬರ ಮನೆಯಲ್ಲೋ ಇಲ್ಲದಿದ್ದರೆ ಟೆಲಿಕಾನ್ಫೆರೆನ್ಸ್ ಮೂಲಕವೋ ಮಾತು ಕತೆ ನಡೆಯುತ್ತದೆ.
ಬ್ರಿಟನ್ನಿನಲ್ಲಿದ್ದುಕೊಂಡು ಕನ್ನಡದಲ್ಲಿ ಬರೆಯುವ ಹಂಬಲವಿರುವವರಿಗೆ ನೆರವಾಗಲು, ಆ ಮೂಲಕ ತಾಯ್ನಾಡಿನ ಮತ್ತು ಅದರ ಭಾವನೆಗಳನ್ನು ಜೀವಂತವಾಗಿಡಲು ‘ಅನಿವಾಸಿ’ (anivaasi.com) ಎನ್ನುವ ಸಾಹಿತ್ಯಕ ಜಾಲ ಜಗುಲಿಯನ್ನು ಮಾಡಿಕೊಂಡಿದ್ದೇವೆ. ದೂರದ ವಿದೇಶಗಳಲ್ಲಿ ಬೆಳೆಯುತ್ತಿರುವ ನಮ್ಮ ಮಕ್ಕಳಿಗೆ ಕನ್ನಡಿಗರು ಹೆಚ್ಚಿರುವ ಊರುಗಳಲ್ಲಿ ‘ಕನ್ನಡ ಕಲಿ’ ಶಾಲೆಯನ್ನು ಹಲವು ಉತ್ಸಾಹೀ ಕಾರ್ಯಕರ್ತರು ಮಾಡುತ್ತಿದ್ದಾರೆ. ಕನ್ನಡಕ್ಕಾಗಿ ಕನ್ನಡಿಗರು ನಡೆಸುವ ಇಂತ ಕಾರ್ಯಗಳೆಲ್ಲ ಧರ್ಮಾರ್ಥವಾಗಿ ನಡೆಯುವಂತವು. ಇದರಲ್ಲಿ ಲಾಭದ ಯಾವುದೇ ಉದ್ದೇಶವಿರುವುದಿಲ್ಲ. ಸಮಯ, ಹಣ ಮತ್ತು ಪರಿಶ್ರಮವನ್ನು ಬಳಸಿ ತೊಡಗಿಸಿಕೊಂಡ ಹಲವು ಕನ್ನಡಿಗ ಮುಂದಾಳುಗಳು ಇಂತಹ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಬರೀ ತವರೂರಿನ ನೆನಪಿನಲ್ಲಿ ಒಂದೆಡೆ ಸೇರಿ ಸಂತೋಷಪಡುವುದರ ಜೊತೆಯಲ್ಲಿ ಕನ್ನಡನಾಡಿನ ಹಲವು ಧರ್ಮಾರ್ಥ ಕಾರ್ಯಗಳಿಗೆ ಹಣವನ್ನೆತ್ತಿ ಕೊಡುವುದು ಪ್ರತಿ ಸಾರಿಯೂ ನಡೆಯುತ್ತದೆ. ಉದಾಹರಣೆಗೆ ಕೊಡಗಿನಲ್ಲಿ ದುರಂತ ಸಂಭವಿಸಿದರೆ ಇಲ್ಲಿನ ಸಂಘ ಸಂಸ್ಥೆಗಳು ದೇಣಿಗೆ ನೀಡುತ್ತಾರೆ. ಮತ್ತು ಧರ್ಮಾರ್ಥ ಕಾರ್ಯಕ್ರಮಗಳನ್ನು ಏರ್ಪಡಿಸಿ ಹಣ ಸಂಗ್ರಹಿಸಿ ಕಳಿಸುತ್ತಾರೆ.
ಇಂಥದ್ದೇ ಕೆಲಸಗಳನ್ನು ಬ್ರಿಟನ್ನಿನ ಮತ್ತು ಪ್ರಪಂಚದ ಇತರೆ ಹಲವು ಭಾರತೀಯ ಸಮುದಾಯಗಳೂ ಮಾಡುತ್ತಿವೆ. ಪರಸ್ಪರರ ಕಾರ್ಯಕ್ರಮಗಳಿಗೆ ಹೋಗಿ ನೆರವಾಗುವ ಔದಾರ್ಯವೂ ನಡೆಯುತ್ತದೆ. ಆಗೀಗ ಜಗಳಗಳು, ಒಬ್ಬರನ್ನೊಬ್ಬರು ದೂರುವುದೂ ಎಲ್ಲವೂ ನಡೆಯುತ್ತವಾದರೂ ದೊಡ್ಡ ಮನಸ್ಸಿನ ವರ್ತನೆ ಮತ್ತು ನಿಸ್ವಾರ್ಥವಾಗಿ ಹಲವರು ಸೇರಿ ದುಡಿಯುವುದರಿಂದಲೇ ಇಂತಹ ಕಾರ್ಯಕ್ರಮಗಳು ದಶಕಗಳಿಂದಲೂ ನಡೆಯುತ್ತಿವೆ. ಇಲ್ಲಿ ಬೆಳೆಯುತ್ತಿರುವ ಕನ್ನಡದ ಮಕ್ಕಳು ಭಾರತೀಯ ಸಂಗೀತ, ನೃತ್ಯ ಮತ್ತಿತರ ಕಲೆಗಳನ್ನು ಕಲಿತಿದ್ದರೆ ಅವುಗಳನ್ನು ಪ್ರದರ್ಶಿಸಲು ಕೂಡ ಇಂತಹ ವೇದಿಕೆಗಳು ನೆರವಾಗುತ್ತವೆ. ಇವೆಲ್ಲದರ ಜೊತೆ ಇಲ್ಲಿನ ಬ್ರಿಟನ್ನಿಗರು ಕೆಲವರು ನಮ್ಮ ಕಾರ್ಯಕ್ರಮಗಳಿಗೆ ಬರುತ್ತಾರೆ. ನಾವೇನು ಮಾಡುತ್ತೇವೆ ಎಂದು ನೋಡುವ ಕುತೂಹಲ ಅವರಿಗೆ. ಇದು ಬ್ರಿಟನ್ನಿಗರಿಗೆ ನಮ್ಮ ಹಬ್ಬಗಳನ್ನು ತಿಳಿಯುವ ಅವಕಾಶವಾದರೆ, ದೀಪಾವಳಿಯ ಹಿಂದೆಯೇ ಬರುವ ಬ್ರಿಟನ್ನಿಗರ ಕ್ರಿಸ್ಮಸ್ ಹಬ್ಬ ನಮಗೇ ಅರಿವಿಲ್ಲದಂತೆ ನಮ್ಮ ಬದುಕುಗಳ ಅವಿಭಾಜ್ಯ ಅಂಗವಾಗಿಬಿಟ್ಟಿದೆ.
ಚಿಕ್ಕವಳಿದ್ದಾಗ ನಮ್ಮ ಮನೆಯ ಮುಂದೆ ಒಂದು ಕ್ರೈಸ್ತರ ಕುಟುಂಬವಿತ್ತು. ಕ್ರಿಸ್ಮಸ್ ಹಬ್ಬಕ್ಕೆ ರಜೆ ಬರುವುದರ ಸಂಭ್ರಮ ಒಂದೆಡೆಯಾದರೆ ಅವರು ತಪ್ಪದೆ ನಮ್ಮನೆಗೆ ಕಳಿಸುತ್ತಿದ್ದ ಸಿಹಿ ತಿಂಡಿಗಳನ್ನು ತಿನ್ನಲು ನಾವು ಎದುರುನೋಡುತ್ತಿದ್ದುದು, ಅವರ ಅಲಂಕಾರ ಮತ್ತು ಚರ್ಚ್ ನಲ್ಲಿ ನಡೆಯುತ್ತಿದ್ದ ಸಂಭ್ರಮ, ಹಾಡುಗಳು ನನಗೀಗಲೂ ಖುಷಿ ನೀಡುವ ನೆನಪುಗಳಾಗಿ ಉಳಿದಿವೆ. ಬ್ರಿಟನ್ನಿಗೆ ಬಂದ ನಂತರ ಕ್ರಿಸ್ಮಸ್ ಹಬ್ಬ ನಾವು ಆಚರಿಸುವ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬಕ್ಕೆ ಹಲವರಿಗೆ ಉಡುಗೊರೆಗಳನ್ನು ನೀಡುವ ಕಾರ್ಯಕ್ರಮದ ತಯಾರಿಯನ್ನು ತಿಂಗಳುಗಳ ಮೊದಲೇ ನಡೆಸುತ್ತೇವೆ.
ವಿದೇಶಿ ಕನ್ನಡಿಗರ ಬ್ರಿಟನ್ನಿನ ಬದುಕು ಇಂಗ್ಲಿಷ್ ಭಾಷೆ, ಸಂಸ್ಕೃತಿ ಮತ್ತು ಜೀವನ ಶೈಲಿಯ ಜೊತೆ ಒಳ್ಳೆಯ ಸಂಬಂಧವನ್ನು ಹೊಂದಿದೆ. ಕೆಲವೊಮ್ಮೆ ಎಲ್ಲವೂ ಮೇಲ್ನೋಟಕ್ಕೆ ಎನ್ನುವಂತಿದ್ದರೂ ಇಂತಹ ಕೊಂಡಿಗಳು ಯಾವತ್ತೂ ಬದುಕನ್ನು ಸಹ್ಯಗೊಳಿಸುತ್ತವೆ. ನಮ್ಮ ಮತ್ತು ಬ್ರಿಟನ್ನಿಗರ ನಡುವಿನ ಸಹಿಷ್ಣುತೆ ಉತ್ತಮ ಸಂಬಂಧಗಳನ್ನು ಸೃಷ್ಟಿಸುತ್ತಿವೆ. ಸಂಸ್ಕೃತಿಗಳನ್ನು ಬೆಸೆಯುತ್ತಿವೆ. ಅಂತೆಯೇ ಭಾರತದ ಯುವ ಜನತೆಯ ಮಿಡಿತ ವಿದೇಶೀ ಬದುಕಿನ ಬಗ್ಗೆಯಾದರೂ ಅವರು ಒಮ್ಮೆ ವಿದೇಶಿಗರಾದನಂತರ ತಾಯ್ನೆಲದ ಬಗ್ಗೆ ಅವರು ತುಡಿಯಲು ಶುರುಮಾಡುವುದು ಎಷ್ಟು ಸೋಜಿಗವೋ ಅಷ್ಟೇ ನಿಜ. ಇರುವುದೆಲ್ಲವ ಬಿಟ್ಟು ಇರದುದರೆಡೆ ತುಡಿಯುವುದೇ ಜೀವನವಿರಬೇಕು.
ಇಂಥದ್ದೇ ಕೆಲಸಗಳನ್ನು ಬ್ರಿಟನ್ನಿನ ಮತ್ತು ಪ್ರಪಂಚದ ಇತರೆ ಹಲವು ಭಾರತೀಯ ಸಮುದಾಯಗಳೂ ಮಾಡುತ್ತಿವೆ. ಪರಸ್ಪರರ ಕಾರ್ಯಕ್ರಮಗಳಿಗೆ ಹೋಗಿ ನೆರವಾಗುವ ಔದಾರ್ಯವೂ ನಡೆಯುತ್ತದೆ. ಆಗೀಗ ಜಗಳಗಳು, ಒಬ್ಬರನ್ನೊಬ್ಬರು ದೂರುವುದೂ ಎಲ್ಲವೂ ನಡೆಯುತ್ತವಾದರೂ ದೊಡ್ಡ ಮನಸ್ಸಿನ ವರ್ತನೆ ಮತ್ತು ನಿಸ್ವಾರ್ಥವಾಗಿ ಹಲವರು ಸೇರಿ ದುಡಿಯುವುದರಿಂದಲೇ ಇಂತಹ ಕಾರ್ಯಕ್ರಮಗಳು ದಶಕಗಳಿಂದಲೂ ನಡೆಯುತ್ತಿವೆ.
ಏನಾದರಾಗಲಿ ಪ್ರಪಂಚದ ರಾಜಕೀಯ ಬದಲಾಗುತ್ತಿರುವಂತೆ ತೋರುತ್ತಿರುವ ಕಾಲವಿದು. ಅಮೆರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಅಮೆರಿಕಾದ ಜನರಲ್ಲಿ ಬಿಳಿಯ ಅಮೆರಿಕನ್ನರು ಮಾತ್ರ ಹೆಚ್ಚಿನ ಅಮೆರಿಕನ್ನರು ಎಂದು ಹೇಳುತ್ತಿದ್ದಂತೆ ಕಾಣುತ್ತಿದೆ. ಅಲ್ಲಿನ ಹುಟ್ಟು ನೀಡುವ ಅಮೆರಿಕಾದ ಪೌರತ್ವವನ್ನು ಬದಲಿಸಲು ಆತ ಸಿದ್ದತೆ ನಡೆಸಿದ್ದಾನೆ. ಆದರೆ ರಾಜಕೀಯವಾಗಿ ಬ್ರಿಟನ್ನಿಗೆ ಹೊಸವರ್ಷದ ಹೊಸಬದುಕಿನ ಬಗ್ಗೆ ಬ್ರೆಕ್ಸಿಟ್ ನ ಕಾರಣವಾಗಿ ಇತರೆ ವರ್ಷಗಳಂತೆ ಈ ಬಾರಿ ಯಾವುದೇ ನಿರ್ದಿಷ್ಟತೆ ಮತ್ತು ಸ್ಪಷ್ಟತೆ ಇಲ್ಲವಾಗಿದೆ!
ಬ್ರಿಟನ್ನಿನಲ್ಲಿನ ಸಂಪ್ರದಾಯವಾದೀ ಬ್ರಿಟನ್ನರು ಯೂರೋಪಿನಿಂದ ವಿಚ್ಚೇದನದ ಮಾತುಕತೆಯನ್ನು ಅಂತಿಮ ಮಟ್ಟಕ್ಕೆ ತರಲು ಹೆಣಗುತ್ತಿದ್ದಾರೆ. ದಿನಬೆಳಗಾದರೆ ಬ್ರೆಕ್ಸಿಟ್ ನ ಗಲಾಟೆ ಜೋರಾಗಿ ಕೇಳುತ್ತಿದೆ. ನಾನು ಈ ಲೇಖನವನ್ನು ಬರೆಯುತ್ತಿರುವಾಗಲೇ ಈ ಸಂಬಂಧ ಹಲವು ಸಚಿವರು ಪ್ರಧಾನಿ ಥೆರೆಸಾ ಮೇ ಬ್ರೆಕ್ಸಿಟ್ ನ ಬಗ್ಗೆ ತೆಗೆದುಕೊಳ್ಳುತ್ತಿರುವ ನಿರ್ಧಾರ ಸರಿಯಿಲ್ಲವೆಂದು ರಾಜೀನಾಮೆ ನೀಡಿದ್ದಾರೆ. ಆಕೆಯನ್ನೇ ಪದಚ್ಯುತಿಗೊಳಿಸುವ ಮಾತುಗಳು ಗಟ್ಟಿಯಾಗಿ ಕೇಳಿಬರುತ್ತಿವೆ. ಬ್ರಿಟನ್ ಈ ವಿಚಾರವಾಗಿ ಬಸವಳಿದು ಹೋಗಿದ್ದು, ದೊಡ್ಡ ಜಗಳಗಳನ್ನು, ದ್ವಂದ್ವಗಳನ್ನು ಹುಟ್ಟು ಹಾಕಿದೆ. ಸಹಜವಾಗಿಯೆ ಯೂರೋಪನ್ನು ಹೊರತುಪಡಿಸಿ ಬ್ರಿಟನ್ನಿನ ಈ ಅವಸ್ಥೆಯ ಬಗ್ಗೆ ಇತರರು ತಲೆ ಕೆಡಿಸಿಕೊಳ್ಳದೆ ತಮ್ಮ ವ್ಯವಹಾರಗಳನ್ನು ಮುಂದುವರಿಸಿದ್ದಾರೆ.
ಅಧಿಕಾರ ಮತ್ತು ಸಂಪತ್ತು ಎಲ್ಲಿ ಚೀನಾ ಕಡೆ ವಾಲುತ್ತದೋ ಎಂಬ ದಿಗಿಲಲ್ಲಿ ಅಮೆರಿಕಾ-ಚೀನಾ ವಾಣಿಜ್ಯ ಯುದ್ಧಗಳು ನಡೆಯುತ್ತಿವೆ. ರಶಿಯನ್ನರ ರಾಯಭಾರತ್ವದಲ್ಲಿ ಇನ್ನು ಹಲವು ದೇಶಗಳು ತಮ್ಮ ಪಟ್ಟನ್ನು ಭದ್ರಪಡಿಸಲು ಹಾತೊರೆಯುತ್ತಿವೆ. ಜಾಗತಿಕ ಮಟ್ಟದಲ್ಲಿ ಪ್ರಕೃತಿಯ ಮೇಲಿನ ಮಾನವನ ದಾಳಿಯ ಫಲಿತಾಂಶದ ಬಗ್ಗೆ ಎಚ್ಚರಿಕೆಯ ಘಂಟೆಗಳನ್ನು ಹಲವರು ಜೋರಾಗಿ ಹೊಡೆಯುತ್ತ ಎಚ್ಚೆತ್ತುಕೊಳ್ಳಲು ಕರೆ ನೀಡುತ್ತಿದ್ದಾರೆ. ಭಾರತದಲ್ಲಿ ಹಿಂದೂವಾದ ರಾಷ್ಟ್ರ, ಹಿಂದುತ್ವ ಮತ್ತು ಹಿಂದು ಧರ್ಮಗಳು ಅರೆಬರೆ ಯಾಮಾರಿದಂತೆ ಕಾಣುತ್ತಿರುವ ಈ ಕಾಲ ಘಟ್ಟದಲ್ಲಿ ಎಲ್ಲಿಯೂ ಹೆಚ್ಚು ಮಾತಾಡಲು ಸಾಧ್ಯವಿಲ್ಲದ ಸ್ವದೇಶೀಯ ಮನಸ್ಸಿನ ವಿದೇಶಿವಾಸಿ ನಮ್ಮಂತವರು ಮೂಕ ಪ್ರೇಕ್ಷಕರಾಗಿ ಮುಂದುವರೆದಿದ್ದೇವೆ.
ಹದಿನಾರು ವರ್ಷಗಳ ಹಿಂದೆ ನಾನು ಬಿಟ್ಟು ಬಂದ ಭಾರತ, ಹಲವು ರೀತಿ ಬದಲಾಗಿದೆ. ಅರಿವು, ಹಣ, ಮಾಹಿತಿ, ಯುವ ಜನರ ಹೊಸ ಬಗೆಯ ಆಲೋಚನಾ ಕ್ರಮಗಳು ನಮ್ಮನ್ನು ಅಚ್ಚರಿಗೊಳಿಸುತ್ತವೆ. ಆದರೆ ಇಲ್ಲಿರುವ ಅವೇ ಹದಿನಾರು ವರ್ಷಗಳಲ್ಲಿ ಬ್ರಿಟನ್ನಿನಲ್ಲಿ ಆ ಬಗೆಯ ತ್ವರಿತ ಬದಲಾವಣೆಗಳಾಗಿಲ್ಲ. ಆದರೆ ಯೂರೋಪಿನಿಂದ ಹೊರಗೆ ಬಂದ ನಂತರ ಬ್ರಿಟನ್ನಿನ ಸ್ವರೂಪ ಬದಲಾಗುವುದು ಯಾವ ರೀತಿ ಎಂಬುದರ ಬಗ್ಗೆ ಊಹೆಮಾಡುವುದು ಸುಲಭ ಸಾಧ್ಯವಲ್ಲ. ಯೂರೋಪಿನ ಹೊರಗಿನ ದೇಶದಿಂದ ಬಂದ ಕಾರಣ ವಲಸಿಗ ವಿದೇಶಿಗಳಾಗಿ ನಮ್ಮ ಬದುಕನ್ನು ಬ್ರೆಕ್ಸಿಟ್ ಅಷ್ಟಾಗಿ ತಟ್ಟಲು ಸಾಧ್ಯವಿಲ್ಲ ಎಂಬ ಅಂಬೋಣಗಳಿವೆ. ಆದರೆ ಹೆಚ್ಚಿನ ಬದಲಾವಣೆಗಳಾದಲ್ಲಿ ಹಲವಾರು ವಿಚಾರಗಳು ನಮ್ಮನ್ನು ತಟ್ಟದೆ ಇರಲು ಸಾಧ್ಯವೇ ಇಲ್ಲ.
ಬ್ರಿಟನ್ನಿನಲ್ಲಿ ಆಗಬಹುದಾದ ಬದಲಾವಣೆಗಳ ಬಗ್ಗೆ ಭಾರತಕ್ಕೆ ಚಾರಿತ್ರಿಕವಾಗಿ ಆಸಕ್ತಿಯಿದೆ. ಹೀಗಿರುವಾಗ ಭಾರತದಲ್ಲಿಲ್ಲದ ಅನಿವಾಸೀ ಭಾರತೀಯರಿಗೆ ಭಾರತದ ವಿದ್ಯಮಾನಗಳ ಬಗ್ಗೆ ತಿಳಿದಿಲ್ಲ ಎಂಬುದು ತಪ್ಪು ನಂಬಿಕೆ. ಸಣ್ಣ ಪುಟ್ಟ ವಿವರಗಳು ಮತ್ತು ತತ್ ಕ್ಷಣದ ಮಾಹಿತಿಗಳು ನಮಗೆ ತಿಳಿದಿರುವುದಿಲ್ಲ. ಆದರೆ ಅಲ್ಲಿಯೇ ಇರುವವರಿಗಿಂತ ಹೊರಗೆ ನಿಂತಿರುವವರಿಗೆ ಭಾರತದ ಒಟ್ಟಾರೆ ಚಿತ್ರಣ ಚೆನ್ನಾಗಿ ದೊರಕಿರುತ್ತದೆ. ಇನ್ನು ಬ್ರಿಟನ್ನಿನಲ್ಲೇ ಬದುಕಿದ್ದರೂ ಈ ದೇಶವನ್ನು ನಾವು ಹೊರಗಿನವರಂತೆಯೇ ನೋಡುವುದನ್ನು ಬಿಡುವುದಿಲ್ಲ ಎನಿಸುತ್ತದೆ. ಹಾಗಾಗಿ ಬ್ರಿಟನ್ನಿನ ಬಗೆಗಿನ ನನ್ನ ಬರಹದ ಬಹುತೇಕ ಭಾಗ ವಿದೇಶೀಯ ಕಣ್ಣುಗಳಿಂದಲೇ ವ್ಯಕ್ತವಾಗಿದ್ದರೆ ಅಚ್ಚರಿಯೇನಿಲ್ಲ!
ಏನಾದರಾಗಲಿ, ಈ ಸರಣಿಯನ್ನು ಬರೆಯಲು ಅವಕಾಶವನ್ನು ನೀಡಿದ ‘ಕೆಂಡಸಂಪಿಗೆ’ಗೆ ಮಾತ್ರ ನಾನು ಚಿರಋಣಿ.
(ಮುಗಿಯಿತು)
ಡಾ. ಪ್ರೇಮಲತಾ ಲೇಖಕಿ ಮೂಲತಃ ತುಮಕೂರಿನವರು, ಕಳೆದ ೨೧ ವರ್ಷಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ‘ಐದು ಬೆರಳುಗಳುʼ, ‘ತಿರುವುಗಳುʼ, ‘ನಂಬಿಕೆಯೆಂಬ ಗಾಳಿಕೊಡೆʼ ಇವರ ಪ್ರಕಟಿತ ಕಥಾಸಂಕಲನಗಳು. ‘ಕೋವಿಡ್ ಡೈರಿʼ ಎಂಬ ಅಂಕಣ ಬರಹಗಳ ಪುಸ್ತಕ ಮತ್ತು ‘ಬಾಯೆಂಬ ಬ್ರಮ್ಹಾಂಡʼ ಇವರ ಇತರೆ ಪುಸ್ತಕಗಳು. ‘ಐದು ಬೆರಳುಗಳುʼ ಕಥಾ ಸಂಕಲನಕ್ಕೆ ಡಾ.ಹೆಚ್. ಗಿರಿಜಮ್ಮ ಪ್ರಶಸ್ತಿ ದೊರಕಿದೆ.
ತಾಯ್ನಾಡಿನ ಸೆಳೆತ ನಿಮ್ಮ ದೀರ್ಘವಾದ ಮತ್ತು ಅಷ್ಟೇ ಆಸಕ್ತಿಯಿಂದ ಬರೆದ ನಿಮ್ಮ ಈ ಲೇಖನದ ಮೂಲಕ ತಿಳಿದು ಬರುತ್ತದೆ. ಚೆಂದದ ನಿಮ್ಮ ಈ ಬರಹಕ್ಕೆ ಧನ್ಯವಾದ.
ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು S.P. Gadag ಅವರೆ. ಧನ್ಯವಾದಗಳು