”ಉರಿಯುತ್ತಿರುವ ಒಲೆ, ಕುದಿಯುತ್ತಿರುವ ಸಾರು, ತಯಾರುಗುತ್ತಿದ್ದ ಮುದ್ದೆ, ಕಮಾಂಡಿಂಗ್ ಪೊಸಿಷನ್ ನಲ್ಲಿ ಬೇಬಿಯಣ್ಣ, ಹತ್ತಿರ ಕೂತು ಸಹಾಯ ಮಾಡುತ್ತಿರುವ ಅಪ್ಪ, ದೂರ ನಿಂತು ಎಲ್ಲಾ ನೋಡುತ್ತಿರುವ ಅಜ್ಜ, ಆಗೊಮ್ಮೆ ಈಗೊಮ್ಮೆ ಇಣುಕಿ ಹೋಗುವ ಚೆನ್ನಕ್ಕ. ನಮಗೆ ಪ್ರಪಂಚದ ಪರಮಾದ್ಭುತವೊಂದು ನಮ್ಮೆದುರಲ್ಲಿ ಘಟಿಸುತ್ತಿರುವ ಅನುಭವ. ಮೋಡ ಸೀಳಿ ಬಂದ ಸಿಡಿಲೊಂದು ನಮ್ಮ ಸಂಭ್ರಮವನ್ನು ನೋಡಿ ಮತ್ತೆ ಮೋಡದೊಳಗೇ ಸೇರಿಕೊಂಡ ಭಾವ”
ಫಾತಿಮಾ ರಲಿಯಾ ಬರೆಯುವ ಪಾಕ್ಷಿಕ ಅಂಕಣ.
ಅಂಗಳದ ಒಂದು ಮೂಲೆಯಲ್ಲಿ ಹಾಕಿದ ಚಪ್ಪರದ ಅಡಿಯಲ್ಲಿ ಚೆನ್ನಪ್ಪಣ್ಣನನ್ನೂ, ಅವರು ಕೂತಿದ್ದ ಮಟ್ಟುಗತ್ತಿಯನ್ನೂ, ಸಲೀಸಾಗಿ ಸುಲಿದು ಬೀಳುತ್ತಿದ್ದ ಅಡಕೆಗಳನ್ನೂ, ಪಕ್ಕದಲ್ಲಿ ದೊಡ್ಡ ರಾಶಿಯೇ ಆಗಿದ್ದ ಅದರ ಸಿಪ್ಪೆಗಳನ್ನೂ, ನಡು ನಡುವೆ ಒಂದು ಲಯದಲ್ಲಿ ವೀಳ್ಯದೆಲೆ ಹಾಕಿಕೊಂಡು ಬಾಯಾಡಿಸುತ್ತಿದ್ದ ಅವರ ಬಾಯನ್ನೂ ಒಂದು ರೀತಿಯ ಅಚ್ಚರಿ ಮತ್ತು ಏಕಾಗ್ರತೆಯಿಂದ ದಿಟ್ಟಿಸುತ್ತಿದ್ದ ನಮ್ಮ ಮಕ್ಕಳ ಸೈನ್ಯದ ಗಮನವನ್ನು ಅಜ್ಜನ ಹೆಜ್ಜೆ ಸದ್ದು ನಿಧಾನವಾಗಿ ತಪ್ಪಿಸಿತ್ತು. ತುಸು ಅಸಹನೆಯಿಂದ ಮತ್ತು ಹೆಚ್ಚೇ ಗೌರವದಿಂದ, ಅಜ್ಜ ನಮಗೆ ಯಾವ ಹೆಚ್ಚುವರಿ ಕೆಲಸವೂ ನೀಡದಿರಲಿ ಎಂದು ಕಾಣದ ದೇವರಲ್ಲಿ ಬೇಡಿಕೊಳ್ಳುತ್ತಾ ಅವರಿಗೆ ಜಾಗ ಮಾಡಿಕೊಡಲು ಸರಿದು ಕೂತೆವು. ಅಜ್ಜ ಕೂರುತ್ತಿದ್ದಂತೆ ವೀಳ್ಯದೆಲೆ ಉಗುಳಿ ತನ್ನ ಕೆಂಪು ಬಾಯನ್ನು ತೊಳೆದು ಬಂದ ಚೆನ್ನಪ್ಪಣ್ಣ “ತೋಟದ ಕೆಲಸಕ್ಕೆ ಹೆಚ್ಚುವರಿ ಆಳು ಬೇಕು ಅಂದಿದ್ರಲ್ಲಾ, ನಾಳೆ ಚಿಕ್ಕಮಗಳೂರಿನಿಂದ ‘ಬೇಬಿ’ ಅಂತ ಹೊಸ ಆಳು ಬರ್ತಿದ್ದಾನೆ” ಅಂದರು.
ಅದುವರೆಗೂ ಚೆನ್ನಪ್ಪ, ವೆಂಕಪ್ಪ, ಸಂಕು, ಗೀತಕ್ಕ, ರತ್ನ, ಚೆನ್ನಿ ಇವೇ ಮುಂತಾದ ಹೆಸರುಗಳನ್ನು ಕೇಳಿದ್ದ ನಮಗೆ ಈ ‘ಬೇಬಿ’ ಅನ್ನುವುದು ನಮ್ಮ ಪ್ರಪಂಚದಲ್ಲಿ ಎಲ್ಲೂ ಇಲ್ಲದ ಹೆಸರು ಅನ್ನಿಸುತ್ತಿತ್ತು. ಇಂಗ್ಲಿಷಿನ ಬೇಬಿಗೂ, ಈ ಬೇಬಿಗೂ ಬಾದರಾಯಣ ಸಂಬಂಧ ಕಲ್ಪಿಸಿ, ಕಂಡೇ ಇರದ ಆ ವ್ಯಕ್ತಿಯನ್ನು ನಮ್ಮ ಮನಸ್ಸು ಇಂಗ್ಲಿಷಿನವನಾಗಿ ತೀರ್ಮಾನಿಸಿಬಿಟ್ಟಿತು. ಎಷ್ಟು ಬೇಡ ಬೇಡ ಅಂದರೂ ಬಿಳಿ ಚರ್ಮ, ಕೆಂಚು ಕೂದಲು, ತಿಳಿ ಹಸಿರು ಅಥವಾ ನೀಲಿ ಬಣ್ಣದ ಕಣ್ಣುಗಳುಳ್ಳ ಮನುಷ್ಯನ ಚಿತ್ರವೇ ಕಣ್ಣ ಮುಂದೆ ಓಡಾಡುತ್ತಿತ್ತು. ಬಿಳಿ ಟಿ ಷರ್ಟ್, ನೀಲಿ ಜೀನ್ಸ್ ಧರಿಸುವ ‘ಬೇಬಿ’ ನಮ್ಮ ತೋಟದಲ್ಲಿ ಬಂದು ಮಾಡುವುದಾದರೂ ಏನು ಎಂಬ ಪ್ರಶ್ನೆಯೂ ಕಾಡುತ್ತಿತ್ತು. ಅದಕ್ಕಿಂತಲೂ ದೊಡ್ಡ ಸಮಸ್ಯೆ, ಇನ್ನೂ ಎ.ಬಿ.ಸಿ.ಡಿಯೇ ಕಲಿತಿಲ್ಲದ ನಾವು ಈ ಇಂಗ್ಲಿಷಿನ ಬೇಬಿಯ ಬಳಿ ಹೇಗೆ ಸಂವಹನ ಮಾಡುವುದು ಎಂಬುವುದಾಗಿತ್ತು.
ಆ ರಾತ್ರಿಯಿಡೀ ನಮಗೆ ಬೇಬಿಯದೇ ಚಿಂತೆ. ಬೆಳಗಾಗುತ್ತಿದ್ದಂತೆ ನಾವು ಬೇಬಿಗಾಗಿ ಗೇಟು ಕಾಯುತ್ತಾ ಕೂತೆವು. ಒಮ್ಮೆ ರಸ್ತೆಯತ್ತ ಮತ್ತೊಮ್ಮೆ ಭರ್ರೆಂದು ಧೂಳೆಬ್ಬಿಸುತ್ತಾ ಬರುವ ಬಸ್ಸಗಳತ್ತ, ಅಂಬಾಸಿಡರ್ ಕಾರುಗಳತ್ತಾ ದಿಟ್ಟಿಸುತ್ತಾ ನಮ್ಮ ಪಾಲಿಗೆ ಅವತಾರ ಪುರುಷನೇ ಆಗಿದ್ದ ಬೇಬಿಯ ಬರವನ್ನು ನಿರೀಕ್ಷಿಸುತ್ತಿದ್ದೆವು. ಗಂಟೆ ಹತ್ತಾಗುತ್ತಿದ್ದಂತೆ ಹೊಟ್ಟೆ ಚುರುಗುಟ್ಟಲಾರಂಭಿಸಿತು, ಇನ್ನು ಈ ಇಂಗ್ಲಿಷಿನವ ಬರಲಾರ ಎಂದು ನಿರ್ಧರಿಸಿಕೊಂಡು ಮನೆಗೆ ವಾಪಾಸಾದೆವು. ಕೈ ತೊಳೆದು ಮಣೆ ಎಳೆದು ನಾಸ್ಟಾ ಮಾಡಲು ಕೂರಬೇಕು ಅನ್ನುವಷ್ಟರಲ್ಲಿ, “ಬೇಬಿ ಬಂದಿದ್ದಾನೆ, ಇಲ್ಲೇ ಕೂರಲು ಹೇಳಿದ್ದೇನೆ” ಅನ್ನುವ ಚೆನ್ನಪ್ಪಣ್ಣನ ಮಾತು ಕೇಳಿತು. ಒಂದೇ ಉಸಿರಿಗೆ ನಾವು ಮನೆಯ ಅಂಗಳದಲ್ಲಿದ್ದೆವು.
ಎಷ್ಟು ಬೇಡ ಬೇಡ ಅಂದರೂ ಬಿಳಿ ಚರ್ಮ, ಕೆಂಚು ಕೂದಲು, ತಿಳಿ ಹಸಿರು ಅಥವಾ ನೀಲಿ ಬಣ್ಣದ ಕಣ್ಣುಗಳುಳ್ಳ ಮನುಷ್ಯನ ಚಿತ್ರವೇ ಕಣ್ಣ ಮುಂದೆ ಓಡಾಡುತ್ತಿತ್ತು. ಬಿಳಿ ಟಿ ಷರ್ಟ್, ನೀಲಿ ಜೀನ್ಸ್ ಧರಿಸುವ ‘ಬೇಬಿ’ ನಮ್ಮ ತೋಟದಲ್ಲಿ ಬಂದು ಮಾಡುವುದಾದರೂ ಏನು ಎಂಬ ಪ್ರಶ್ನೆಯೂ ಕಾಡುತ್ತಿತ್ತು. ಅದಕ್ಕಿಂತಲೂ ದೊಡ್ಡ ಸಮಸ್ಯೆ, ಇನ್ನೂ ಎ.ಬಿ.ಸಿ.ಡಿಯೇ ಕಲಿತಿಲ್ಲದ ನಾವು ಈ ಇಂಗ್ಲಿಷಿನ ಬೇಬಿಯ ಬಳಿ ಹೇಗೆ ಸಂವಹನ ಮಾಡುವುದು ಎಂಬುವುದಾಗಿತ್ತು.
ಸೂಟು-ಬೂಟು ಧರಿಸಿದ ಇಂಗ್ಲಿಷಿನವನ ನಿರೀಕ್ಷೆಯಲ್ಲಿದ್ದ, ಅವನಿಗೋಸ್ಕರವೇ ‘ಹಲೋ ಮೈ ನೇಮ್ ಈಸ್…. ಯುವರ್ ಗುಡ್ ನೇಮ್ ಪ್ಲೀಸ್’ ಉರು ಹೊಡೆದಿದ್ದ ನಮಗೆ ಒಂದು ದೊಡ್ಡ ಶಾಕ್! ಮಾಸಲು ಅಂಗಿ, ಚೌಕುಳಿ ಲುಂಗಿ, ಕೈಯಲ್ಲೊಂದು ಗೋಣಿಯಂತಹ ಕಟ್ಟು ಹಿಡಿದು ಪೆಕರು ಪೆಕರಾಗಿ ನಿಂತಿದ್ದ ಬೇಬಿ ನಮ್ಮ ಕುತೂಹಲಕ್ಕೆಲ್ಲಾ ಒಂದೇ ಏಟಿಗೆ ತಣ್ಣೀರೆರಚಿದ್ದರು. ಬೇಬಿ ನಮ್ಮಂತೆಯೇ ಸಾಮಾನ್ಯ ಭಾರತೀಯ ಅನ್ನುವುದು ಗೊತ್ತಾಗುತ್ತಿದ್ದಂತೆ ‘ನಮ್ಮನೆಯಲ್ಲೂ ಒಬ್ಬ ಫಾರಿನರ್ ಇದ್ದಾರೆ’ ಅಂತ ಶಾಲೆಯಲ್ಲಿ ಕೊಚ್ಚಿಕೊಳ್ಳಲು ಇದ್ದ ಒಂದು ಅಪೂರ್ವ ಅವಕಾಶ ತಪ್ಪಿಸಿದರು ಎಂದು ಅವರ ಮೇಲೆ ಅಕಾರಣ ಸಿಟ್ಟು ನಮಗೆ.
ಚಿಕ್ಕಮಗಳೂರಿನಿಂದ ಬಂದಿದ್ದರೂ ಬೇಬಿ ಮೂಲತಃ ಹಾಸನದವರು. ಅವರ ಸಂಸಾರ ಪೂರ್ತಿ ಹಾಸನದಲ್ಲೇ ನೆಲೆಸಿತ್ತು. ಹೊಟ್ಟೆಪಾಡಿಗಾಗಿ ಕೆಲಸ ಹುಡುಕುತ್ತಾ ಶೃಂಗೇರಿ ತಲುಪಿದ್ದವರು ಅಲ್ಲಿಂದ ಘಟ್ಟ ಇಳಿದು ನಮ್ಮನೆ ತಲುಪಿದ್ದರು. ಅವರ ಮಾತು, ಕನ್ನಡ ಭಾಷೆ ನಮಗೆ ವಿಚಿತ್ರ ಅನ್ನಿಸುತ್ತಿತ್ತು. ಇಡೀ ಪ್ರಪಂಚದಲ್ಲಿ ತುಳು ಮತ್ತು ಬ್ಯಾರಿ ಭಾಷೆ ಬಿಟ್ಟು ಉಳಿದ ಯಾವ ಭಾಷೆಗಳೂ ‘ಸರಿ’ ಇಲ್ಲ ಎಂದು ತೀರ್ಮಾನಿಸಿಕೊಂಡ ವಯಸ್ಸದು. ಸಾಲದೆಂಬಂತೆ, ಉಳಿದ ಕೆಲಸಗಾರರೆಲ್ಲಾ ಬೇಬಿಯ ಹಿಂದೆ ಆಡಿಕೊಳ್ಳುತ್ತಾ ‘ಘಟ್ಟದಾಯೆ (ಘಟ್ಟದವನು)’ ಎಂದು ನಗುತ್ತಿದ್ದರೆ ನಮಗೆ ಈತ ಬೇರೆಯದೇ ಪ್ರಪಂಚದವನು ಅನ್ನುವುದು ಕನ್ಫರ್ಮ್ ಆಗಿತ್ತು. ಹಾಗಾಗಿಯೇ ಬಂದು ವಾರ ಕಳೆದಿದ್ದರೂ ನಮ್ಮ ಮಧ್ಯೆ ಒಂದು ಬಂಧ ಬೆಳೆದಿರಲಿಲ್ಲ.
ಆದರೆ ಅಜ್ಜ, ಒಂದು ಭಾನುವಾರ ಕೊಯ್ಯಿಸಿದ ಅಡಕೆ ಹೆಕ್ಕಲು ನಮ್ಮನ್ನು ಬೇಬಿಯ ಜೊತೆ ಕಳುಹಿಸಿದ್ದರು. ಆಟದ ಅಮೂಲ್ಯ ಸಮಯ ಹಾಳಾದ ಸಿಟ್ಟು ಒಂದು ಕಡೆಯಾದರೆ, ಮಾತೇ ಆಡದ ಬೇಬಿಗೆ ಸಹಾಯ ಮಾಡಬೇಕಲ್ಲಾ ಅನ್ನುವ ದುಃಖ ಮತ್ತೊಂದು ಕಡೆ. ಸಾಲದಕ್ಕೆ “‘ಬೇಬಿಯಣ್ಣ’ ಅಂತಲೇ ಕರೆಯಬೇಕು, ಬೇಬಿ ಅಂತ ಎಲ್ಲಾದರೂ ಏಕವಚನದಲ್ಲಿ ಮಾತಾಡಿಸಿದರೆ ಬೆನ್ನಿನ ಚರ್ಮ ಸುಲಿದು ಕೈಯಲ್ಲಿ ಕೊಡಬೇಕಾಗುತ್ತದೆ” ಎಚ್ಚರಿಕೆ ಬೇರೆ ಕೊಟ್ಟಿದ್ದರು. ಹಿಂದೊಮ್ಮೆ ಯಾರನ್ನೋ ಏಕವಚನದಲ್ಲಿ ಮಾತಾಡಿಸಿದ್ದಕ್ಕೆ ಅಜ್ಜ ನಮ್ಮಲ್ಲೊಬ್ಬರ ಕಣ್ಣಿಗೆ ಹಸಿ ಮೆಣಸು ಹಾಕಿ ಚೆನ್ನಾಗಿ ಹೊಡೆದ ಘಟನೆ ಇನ್ನೂ ಹಸಿಹಸಿಯಾಗಿಯೇ ಇದ್ದ ಕಾರಣ ಅಜ್ಜ ಚರ್ಮ ಸುಲಿಯಲು ಹಿಂದೆ ಸರಿಯುವವರಲ್ಲ ಅನ್ನುವ ಸ್ಪಷ್ಟ ನಂಬಿಕೆ ನಮ್ಮದು.
ಚೆನ್ನಪ್ಪ, ಸಂಕು, ವೆಂಕಪ್ಪ ಎಲ್ಲರನ್ನೂ ಅಣ್ಣ ಎಂದೇ ಕರೆಯುತ್ತಿದ್ದ ನಾವು ಈ ಬೇಬಿಯನ್ನು ಮಾತ್ರ ಅಣ್ಣ ಎಂದು ಕರೆಯಲು ಯಾಕೆ ತಕರಾರು ಮಾಡುತ್ತಿದ್ದೆವು? ತುಳುವನೋ, ಬ್ಯಾರಿಯೋ ಆಗಿಲ್ಲದ ಕಾರಣಕ್ಕಾ? ‘ಘಟ್ಟದಾಯೆ’ ಎಂದೋ? ಅದಾಗಲೇ ನಮ್ಮ ಮನಸ್ಸಿನಲ್ಲಿ ಮೇಲರಿಮೆಯ ಬೀಜ ಮೊಳಕೆಯೊಡೆದಿತ್ತೇ? ಅಥವಾ ಬೇಬಿ ಇಂಗ್ಲಿಷಿನವನಲ್ಲದೇ ಹೋದ ‘ಹಳೆಯ’ ಸಿಟ್ಟು ಇನ್ನೂ ನಮ್ಮ ಮನಸ್ಸಿನಲ್ಲಿ ಉಳಿದಿತ್ತೇ? ಕಾರಣವೇನೇ ಇದ್ದರೂ, ತೋರಿಕೆಗಾದರೂ ನಾನು ಅವರನ್ನು ‘ಅಣ್ಣಾ’ ಎಂದೇ ಕರೆಯಬೇಕಿತ್ತು.
ಅಜ್ಜನ ಆಣತಿಯಂತೆ ಆ ಭಾನುವಾರ ಬೇಬಿ ಅಧಿಕೃತವಾಗಿ ಬೇಬಿಯಣ್ಣ ಆದರು. ಆಮೇಲೆ ಅವರೊಂದಿಗಿನ ನಮ್ಮ ಬಾಂಧವ್ಯ ಸುಧಾರಿಸಿತು ಅಂದರೆ ತಪ್ಪಾಗುತ್ತದೆ. ಉಳಿದವರೊಂದಿಗೆ ಬೆರೆತಷ್ಟು ಸಹಜವಾಗಿ, ಸಲೀಸಾಗಿ ನಾವು ಅವರ ಜೊತೆ ಬೆರೆಯಲಾಗುತ್ತಲೇ ಇರಲಿಲ್ಲ.
ಆದರೆ ನಮ್ಮ ಬಾಲ್ಯದ ಹುಚ್ಚಾಟಗಳಿಗೆ ಲೈಟಾಗಿ ಅವರು ನೀಡುತ್ತಿದ್ದ ಬೆಂಬಲ, ನಮ್ಮ ಅಧಿಕಪ್ರಸಂಗಿತನಗಳನ್ನು ಅಜ್ಜನವರೆಗೆ ತಲುಪಲು ಬಿಡದೇ ಇದ್ದದ್ದು… ಮುಂತಾದ ಸಂಗತಿಗಳಿಂದಾಗಿ ನಿಧಾನವಾಗಿ ಅವರು ನಮಗೆ ಹತ್ತಿರವಾಗತೊಡಗಿದರು. ಅಷ್ಟು ಹೊತ್ತಿಗಾಗುವಾಗ ‘ಘಟ್ಟದಾಯೆ’ಯೂ ನಮ್ಮಂತಹ ಸಾದಾ ಮನುಷ್ಯ, ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಉಳಿದೆಲ್ಲರಿಗಿಂತಲೂ ಹೆಚ್ಚಿನ ಅಂತಃಕರಣ ಉಳ್ಳ ಮನುಷ್ಯ ಅನ್ನುವುದು ಅರ್ಥವಾಗಿತ್ತು. ಮತ್ತು ಅಷ್ಟು ಹೊತ್ತಿಗಾಗುವಾಗ ಎಲ್ಲರೂ ಅಚ್ಚರಿಪಡುವಷ್ಟು ತುಳು ಮತ್ತು ಬ್ಯಾರಿ ಭಾಷೆ ಕಲಿತಿದ್ದರು. ಅವರು ಎಷ್ಟು ನಿರರ್ಗಳವಾಗಿ ಮಾತನಾಡುತ್ತಿದ್ದರೆಂದರೆ, ಕರಾವಳಿಗರಲ್ಲ ಅಂತ ಅನ್ನಿಸುತ್ತಲೇ ಇರಲಿಲ್ಲ.
ಅಜ್ಜನಿಗಂತೂ ಆತ ನಂಬುಗೆಯ ಬಂಟ. ತೋಟಕ್ಕೆ ಗೊಬ್ಬರ ಹಾಕಿಸುವುದಾದರೂ, ತೆಂಗಿನಕಾಯಿ ಕೀಳಿಸುವುದಾದರೂ, ದನಗಳಿಗೆ ಹುಲ್ಲು ತರಬೇಕಾದರೂ ಬೇಬಿಯ ಸಲಹೆ ಅವರಿಗೆ ಬೇಕೇ ಬೇಕು. ಅಜ್ಜನ ಪ್ರೀತಿಯ ದನ ‘ಕೆಂಪಿ’ ಸತ್ತಾಗ ಬೇಬಿಯಣ್ಣ ಮೂರು ದಿನ ಊಟ ಬಿಟ್ಟಿದ್ದರು. ನಾಲ್ಕನೇ ದಿನ ತೀರಾ ನಿತ್ರಾಣಗೊಳ್ಳುತ್ತಾರೇನೋ ಅಂತ ಅಜ್ಜನೇ ಬಯ್ದು ಊಟ ಮಾಡಿಸಿದ್ದರು. “ಸೂತಕ ಕಳೆಯಿತಾ?” ಅಂತ ನೆರಮನೆಯವರು ಕಿಚಾಯಿಸಿದಾಗ “ಒಂದಿಡೀ ಬದುಕು ಸೂತಕ ಆಚರಿಸಿದರೂ ಕೆಂಪಿಯ ಸಾವಿನ ಸೂತಕ ಕಳೆಯುವಂಥದ್ದಲ್ಲಾ” ಎಂದು ವೇದಾಂತಿಯಂತೆ ಮಾತಾಡಿದ್ದರು.
ಅಷ್ಟು ಹೊತ್ತಿಗಾಗುವಾಗ ‘ಘಟ್ಟದಾಯೆ’ಯೂ ನಮ್ಮಂತಹ ಸಾದಾ ಮನುಷ್ಯ, ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಉಳಿದೆಲ್ಲರಿಗಿಂತಲೂ ಹೆಚ್ಚಿನ ಅಂತಃಕರಣ ಉಳ್ಳ ಮನುಷ್ಯ ಅನ್ನುವುದು ಅರ್ಥವಾಗಿತ್ತು. ಮತ್ತು ಅಷ್ಟು ಹೊತ್ತಿಗಾಗುವಾಗ ಎಲ್ಲರೂ ಅಚ್ಚರಿಪಡುವಷ್ಟು ತುಳು ಮತ್ತು ಬ್ಯಾರಿ ಭಾಷೆ ಕಲಿತಿದ್ದರು. ಅವರು ಎಷ್ಟು ನಿರರ್ಗಳವಾಗಿ ಮಾತನಾಡುತ್ತಿದ್ದರೆಂದರೆ, ಕರಾವಳಿಗರಲ್ಲ ಅಂತ ಅನ್ನಿಸುತ್ತಲೇ ಇರಲಿಲ್ಲ.
ನಾನ್-ವೆಜ್ ಪ್ರಿಯ ಬೇಬಿ, ಒಂದು ಶನಿವಾರ ಅಂಜುತ್ತಾ ಅಳುಕುತ್ತಾ ಅಜ್ಜನ ಹತ್ತಿರ ಒಂದು ಊರ ಕೋಳಿ ಬೇಕೆಂದು ಕೇಳಿದರು. ವಾರಕ್ಕೊಮ್ಮೆ ತಪ್ಪದೆ ಕೆಲಸದವರಿಗೆಲ್ಲರಿಗೂ ತುಪ್ಪದೂಟ ಕೋಳಿ ಕರಿ ನೀಡುತ್ತಿದ್ದರೂ ಬೇಬಿಯಣ್ಣನಿಗೆ ಯಾಕೆ ಊರ ಕೋಳಿ ಬೇಕು ಅನ್ನುವ ಕುತೂಹಲ ನಮಗೆ. ಕೋಳಿ ಸಾಕಣಿಕೆ ಮಾಡುತ್ತಾರೇನೋ ಅಂತ ಅನ್ನಿಸಿ ಅವರನ್ನು ಕೇಳಿಯೇ ಬಿಟ್ಟೆ.
“ಸಂಜೆ ನಾಟಿ ಕೋಳಿ ಸಾರು, ರಾಗಿ ಮುದ್ದೆ ಮಾಡೋಕೆ ಇದೆ” ಅಂದರು. ನಮಗೆ ಮುದ್ದೆ ನೋಡಿಯೇ ಗೊತ್ತಿಲ್ಲ. ಸಾವಿರದ ಪ್ರಶ್ನೆಗಳನ್ನು ತಲೆಯಲ್ಲಿಟ್ಟುಕೊಂಡೇ ಶಾಲೆಗೆ ಹೋದೆವು. ಶಾಲೆಯಲ್ಲಿದ್ದ ಅಷ್ಟೂ ಹೊತ್ತು ಬೇಬಿಯಣ್ಣ, ನಾಟಿ ಕೋಳಿ, ರಾಗಿ ಮುದ್ದೆಯ ಬಗ್ಗೆ ಯೋಚನೆ. ಒಮ್ಮೆ ಕೊನೆಯ ಬೆಲ್ ಹೊಡೆಯಬಾರದಾ ಅನ್ನಿಸುತ್ತಿತ್ತು. ಅಂತೂ ಶಾಲೆ ಬಿಟ್ಟು ಮನೆಗೆ ಬಂದು ಬ್ಯಾಗ್ ಎಸೆದು ನೇರ ಬೇಬಿಯಣ್ಣನನ್ನು ಕಾಣಲು ಹೊರಟರೆ ಅವರು ಮುದ್ದೆಯ ತಯಾರಿಯಲ್ಲಿದ್ದರು.
ಒಲೆಯಲ್ಲಿ ಕುದಿಯುತ್ತಿದ್ದ ಕೋಳಿ ಸಾರಿನ ಘಮ ಆ ಪರಿಸರಕ್ಕೆ ಒಂದು ವಿಶೇಷ ಮೆರುಗು ನೀಡಿತ್ತು. ಒಂದು ಸೌಟು ಕೊಟ್ಟರೆ ಈಗಲೇ ಸಾರು ಕುಡಿದು ಮುಗಿಸುತ್ತೇವೆ ಎನ್ನುವ ಉಮೇದು ಹುಟ್ಟಿಸುವಂತಹ ಪರಿಮಳವದು. ಕೋಳಿ ಕೊಯ್ದು, ಕ್ಲೀನ್ ಮಾಡಿಕೊಟ್ಟ ಅಪ್ಪ ಪಕ್ಕದಲ್ಲಿ ಕೂತಿದ್ದರು.
ಉರಿಯುತ್ತಿರುವ ಒಲೆ, ಕುದಿಯುತ್ತಿರುವ ಸಾರು, ತಯಾರುಗುತ್ತಿದ್ದ ಮುದ್ದೆ, ಕಮಾಂಡಿಂಗ್ ಪೊಸಿಷನ್ ನಲ್ಲಿ ಬೇಬಿಯಣ್ಣ, ಹತ್ತಿರ ಕೂತು ಸಹಾಯ ಮಾಡುತ್ತಿರುವ ಅಪ್ಪ, ದೂರ ನಿಂತು ಎಲ್ಲಾ ನೋಡುತ್ತಿರುವ ಅಜ್ಜ, ಆಗೊಮ್ಮೆ ಈಗೊಮ್ಮೆ ಇಣುಕಿ ಹೋಗುವ ಚೆನ್ನಕ್ಕ. ನಮಗೆ ಪ್ರಪಂಚದ ಪರಮಾದ್ಭುತವೊಂದು ನಮ್ಮೆದುರಲ್ಲಿ ಘಟಿಸುತ್ತಿರುವ ಅನುಭವ. ಮೋಡ ಸೀಳಿ ಬಂದ ಸಿಡಿಲೊಂದು ನಮ್ಮ ಸಂಭ್ರಮವನ್ನು ನೋಡಿ ಮತ್ತೆ ಮೋಡದೊಳಗೇ ಸೇರಿಕೊಂಡ ಭಾವ.
ಎಲ್ಲಾ ತಯಾರಾದ ಮೇಲೆ ಮಕ್ಕಳೆಲ್ಲರನ್ನು ಹತ್ತಿರ ಕರೆದು ಕೂರಿಸಿ ಬಾಳೆ ಎಲೆ ಹಾಕಿ ಮುದ್ದೆ ಮತ್ತು ಸಾರು ಬಡಿಸಿದರು. ಆ ರುಚಿಯನ್ನು ಇವತ್ತು ಎಷ್ಟು ಪದಗಳನ್ನು ಎರವಲು ಪಡೆದುಕೊಂಡರೂ ವಿವರಿಸಲಾಗದು, ಯಾವ ಮಲ್ಟಿ ಸ್ಟಾರ್ ಹೋಟೆಲ್ ಗಳೂ ಒದಗಿಸದ ರುಚಿ ಅದು. ಹದವಾಗಿ ಬೆರೆತ ಖಾರ, ರುಚಿಗೆ ತಕ್ಕಷ್ಟು ಉಪ್ಪು, ಧಾರಾಳವಾಗಿ ಬೆರೆಸಿದ ಅಕ್ಕರೆ…. ಮನಸ್ಸಿಗೆ ತೃಪ್ತಿಯಾಗಲು ಮತ್ತೇನು ಬೇಕು? ಇಷ್ಟು ವರ್ಷ ಕಳೆದಾದಮೇಲೆ ಬಾಲ್ಕನಿಯ ಮೂಲೆಯಲ್ಲಿ ಕೂತು ಇದನ್ನು ಬರೆಯುವಾಗ ನನಗೆ ಪ್ರಪಂಚದಲ್ಲಿ ಜರುಗುವ ಯಾವ ಸಂಗತಿಯೂ ಆತ್ಯಂತಿಕವಲ್ಲ, ಪ್ರತಿಯೊಂದೂ ಒಂದಕ್ಕೊಂದು ಸಂಬಂಧಿಸಿದ್ದೇ ಆಗಿವೆ, ಯಾವುದೂ ಯಾವುದನ್ನೂ ಅಳಿಸುವುದಿಲ್ಲ, ಎಲ್ಲವೂ ರೂಪಾಂತರಗೊಳ್ಳುತ್ತಲೇ ಇರುತ್ತದೆ ಅನಿಸುತ್ತದೆ. ಆ ರೂಪಾಂತರದ ಒಂದು ಭಾಗವೇ ಅಜ್ಜ, ಕೆಂಪಿ, ಬೇಬಿಯಣ್ಣ, ಅಪ್ಪ, ಚೆನ್ನಕ್ಕ, ನಾನು, ನೀವು… ಎಲ್ಲರೂ.
ಇನ್ನೂ ಅರ್ಥವಾಗದ ಬದುಕಿನ ಬಗ್ಗೆ ತೀರದ ಬೆರಗನ್ನಿಟ್ಟುಕೊಂಡೇ ಕರಾವಳಿಯ ಪುಟ್ಟ ಹಳ್ಳಿಯಲ್ಲಿ ಬೆಳೆಯುತ್ತಿರುವವಳು ನಾನು, ಬದುಕು ಕಲಿಸುವ ಪಾಠಗಳನ್ನು ಶ್ರದ್ಧೆಯಿಂದ ಕಲಿಯುವಷ್ಟು ವಿಧೇಯ ವಿದ್ಯಾರ್ಥಿನಿ. ಪುಸ್ತಕಗಳೆಂದರೆ ಪುಷ್ಕಳ ಪ್ರೀತಿ. ಓದು ಬದುಕು, ಬರಹ ಗೀಳು ಅನ್ನುತ್ತಾರೆ ಫಾತಿಮಾ.
ಮೋಡ ಸೀಳಿ ಬಂದ ಸಿಡಿಲೊಂದು ನಮ್ಮ ಸಂಭ್ರಮವನ್ನು ನೋಡಿ ಮತ್ತೆ ಮೋಡದೊಳಗೇ ಸೇರಿಕೊಂಡ ಭಾವ.