ಭೋಜ ಶೆಟ್ಟಿಗೆ ಸಾಂತೇರುಗುತ್ತಿನ ಗೌರವಕ್ಕೆ ಚ್ಯುತಿ ಬರುವ ಪ್ರಸಂಗ ಏನಾದರೂ ನಡೆಯಬಾರದೇ ಎಂಬ ದುರಾಲೋಚನೆ ಸದಾ ಕಾಡುತ್ತಿತ್ತು. ಅದಕ್ಕಾಗಿ ಅವನು ಕಾಯುತ್ತಿದ್ದನೆನ್ನುವಂತೆ ಇದ್ದಾಗ, ಮಂಗಳೂರಿಗೆ ಹೊಸತಾಗಿ ರೈಲು ಸರ್ವಿಸ್ ಪ್ರಾರಂಭವಾಗುವ ಸುದ್ದಿ ಬಂತು. ನಾಡಿದು ಸೋಮವಾರ ಪ್ರಾರಂಭವಾಗುತ್ತದಂತೆ ಎಂದಿದ್ದದ್ದು, ಮತ್ತೂ ಎರಡು ಸೋಮವಾರ ಕಳೆದು ಮೂರನೇ ಸೋಮವಾರದಂದು, ಮಂಗಳೂರು ರೈಲ್ವೆ ನಿಲ್ದಾಣಕ್ಕೆ ಮದ್ರಾಸಿನಿಂದ ರೈಲು ಬಂದು ನಿಲ್ಲುವುದು ಖಾತ್ರಿ ಎಂಬ ಸುದ್ದಿ ಬಂತು.
ಡಾ. ಬಿ. ಜನಾರ್ದನ ಭಟ್ ಸಾದರಪಡಿಸುತ್ತಿರುವ ‘ಓಬೀರಾಯನ ಕಾಲದ ಕತೆಗಳು’ ಸರಣಿಯಲ್ಲಿ ಡಾ.ನಾ.ಮೊಗಸಾಲೆಯವರ ಕಾದಂಬರಿಯ ಕೆಲವು ಪುಟಗಳು.
ಸಾಂತೇರುಗುತ್ತು ಎನ್ನುವುದು ಸೀಮೆಯ ಗುತ್ತು ಎನ್ನುವ ನಂಬಿಕೆ ಅಂಬಕ್ಕೆಯದ್ದು. ಅಲ್ಲ ಅದು ಮಾಗಣೆ ಗುತ್ತು ಎಂದು, ಆಕೆಯ ಎದುರಲ್ಲದಿದ್ದರೂ, ಹಿಂಬದಿಯಿಂದ ‘ಕದ್ದು ಮುಚ್ಚಿ’ ಆಡಿಕೊಳ್ಳುವ ‘ಮಿತ್ತಗುತ್ತು’ ಎಂಬ ಗ್ರಾಮ ಗುತ್ತೊಂದು-ಒಂಬತ್ತುಕೆರೆಯಲ್ಲಿ ಇತ್ತು. ಅಪ್ಪಿತಪ್ಪಿ ಈ ಮಿತ್ತಗುತ್ತಿನವರು ಇಂಥ ಮಾತು ಆಡುತ್ತಾರೆ ಎಂದು ಯಾರಾದರೂ ಅದನ್ನು ಅಂಬಕ್ಕೆಯ ಕಿವಿಗೆ ಹಾಕಿದರೆ “ಮಂಗ! ಅವನಿಗೇನು ಗೊತ್ತು ನಮ್ಮ ಗುತ್ತಿನ ಹಿನ್ನೆಲೆ? ಆ ಗುತ್ತಿನವರಿಗೆ ನಮ್ಮ ಸೋದರಮಾವನ ಕಾಲದಿಂದಲೂ ಸಾಂತೇರುಗುತ್ತು ಅಂದರೆ ಅಷ್ಟಕ್ಕಷ್ಟೇ. ಒಂಥರಾ ನಂಜು! ಯಾಕೆನ್ನುತ್ತೀರಾ? ನಮ್ಮ ಗುತ್ತಿನ ಒಬ್ಬಾಕೆಯನ್ನು ಈ ಮಿತ್ತಗುತ್ತಿನ ಒಬ್ಬ ಪಡಪೋಸಿ ಮಾಲಿಂಗ ಎಂಬವನಿಗೆ ವಿವಾಹವಾಗಬೇಕೆಂಬ ಆಸೆ ಮೂಗಿನ ತನಕ ಇತ್ತಂತೆ. ಎಲ್ಲಾದರೂ ಸೀಮೆಗುತ್ತಿನ ಹೆಣ್ಣನ್ನು ಗ್ರಾಮ ಗುತ್ತಿನ ಮನೆಗೆ ವಿವಾಹ ಮಾಡಿಕೊಡುವುದು ಸಾಧ್ಯವೇ? ನಮ್ಮ ಅಜ್ಜ ‘ಎಷ್ಟು ಧೈರ್ಯವೋ ನಿನಗೆ?’ ಎಂದು ಮಾಲಿಂಗನಿಗೆ ಹೆಣ್ಣು ಕೇಳಲು ಪರೋಕ್ಷವಾಗಿ ಬಂದವರ ಮುಖಕ್ಕೆ ಉಗಿದು ಕಳುಹಿಸಿದ್ದರಂತೆ. ತಕ್ಕೊಳ್ಳಿ ಆ ದಿನದಿಂದ ಈ ಮಿತ್ತಗುತ್ತಿನವರಿಗೆ ಸಾಂತೇರುಗುತ್ತು ಅಂದರೆ, ಕಂಡರೆ ಆಗದಷ್ಟು ನಂಜು! ಎನ್ನುತ್ತಿದ್ದುದುಂಟು. ಇಂತ ಮಾತುಗಳನ್ನು ವರುಷಕ್ಕೆ ಒಂದು ಹತ್ತು ಬಾರಿಯಾದರೂ ಅಂಬಕ್ಕೆ ಅವರಿವರಿಗೆ ಹೇಳದೇ ಇರುತ್ತಿರಲಿಲ್ಲ – ಅದು ಯಾರಿಗೂ ಮರೆತು ಹೋಗಬಾರದು ಎನ್ನುವ ಹಾಗೆ. ಆದರೆ ಹಾಗೆ ಅವರ ಬಾಯಿಯಿಂದ ಅದನ್ನು ಕೇಳಿಸಿಕೊಳ್ಳುವವರೂ ಬೇರೆ ಯಾರೂ ಇದ್ದಿಲ್ಲ. ಅದು ಗುತ್ತಿನ ಮೂಲದಾಳುಗಳಿಗೋ ಅಥವಾ ಕೂಲಿಯಾಳುಗಳಿಗೋ ಮಾತ್ರ ಸೀಮಿತವಾಗಿತ್ತು.
ಸಾಂತೇರ್ ಗುತ್ತಿನ ಹೆಣ್ಮಕ್ಕಳು ಯಾವತ್ತೂ ಸುಂದರಾಂಗಿಯರೇ. ಅವರ ನಡೆಯಲ್ಲಿ ನುಡಿಯಲ್ಲಿ, ಗುತ್ತಿನ ಛಾಪು ಇರುವಂಥಾದ್ದೇ. ಅಂಗ ಸೌಷ್ಠವವೂ ಅಷ್ಟೇ. ತಿದ್ದಿ ತೀಡಿದ ಹಾಗಿರುವ ಹುಬ್ಬು, ಉರುಟಾಗಿರುವ ಮುಖ, ತುಸು ದೊಡ್ಡದೇ ಎನ್ನಬಹುದಾದ ಮೂಗು, ತೊಂಡೆ ತುಟಿ, ಸೊಂಟದ ತನಕ ಇಳಿಯುವ ತಲೆಗೂದಲು, ಗೋಧಿನಾಗರ ಮೈಬಣ್ಣ, ಆಕರ್ಷಕವಾದ ಕಣ್ಣು, ಉದ್ದ ತೋಳು, ಎದ್ದು ತೋರುವ ಎದೆ, ಹದವಾದ ಸಿಂಹ ಸೊಂಟ! ಸಾಮಾನ್ಯವಾಗಿ ಗುತ್ತಿನ ಎಲ್ಲ ಹೆಣ್ಮಕ್ಕಳೂ ಹೀಗೆಯೇ. ಹಿಂದೆ ಕೋಚ್ ಮೆನ್ ದೊರೆ – ಒಪ್ಪಿ ಕೈ ಹಿಡಿದ ಅಂಬಕ್ಕೆಯ ಅಜ್ಜಿಯ ತಂಗಿ ಕೊರಪೊಲುಗೆ ಈ ಎಲ್ಲ ಲಕ್ಷಣಗಳಿದ್ದೂ ಫಕ್ಕನೆ ಎಂತಹ ಗಂಡಸೂ ಒಮ್ಮೆ ನಿಂತು ನೋಡುವಷ್ಟು ಆಕರ್ಷಕವಾಗಿದ್ದಳಂತೆ. ಗಂಡಸು ಏನು, ಹೆಂಗಸರೂ ಸಹ ಆಕೆಯನ್ನು ನೋಡಿ ಕಣ್ಣು ಕೀಳದೆ ಇರುತ್ತಿದ್ದರಂತೆ ಎಂದು ಮೂಸಬ್ಬ ವರ್ಣಿಸುವಾಗ ಕೇಳುಗರಿಗೆ ಪ್ರತ್ಯಕ್ಷ ಆಕೆಯನ್ನು ಕಾಣುತ್ತಿದ್ದೇನೆ ಎಂಬ ಹಾಗೆ ಚಿತ್ರ ಕಣ್ಮುಂದೆ ಮೂಡಿ ಬಂದಿದ್ದರೆ ಅದರಲ್ಲಿ ಆಶ್ಚರ್ಯ ಪಡುವಂಥದ್ದೇನೂ ಇಲ್ಲ.
ಉಳ್ಳಾಲದಲ್ಲಿ ರಾತ್ರೆ ಕ್ಯಾಂಪ್ ಹೂಡಿದ್ದ ಕೋಚ್ ಮೆನ್ ಎಂಬ ದೊರೆಯೊಬ್ಬ ಒಂದು ಬೆಳಗ್ಗೆ ಒಂಬತ್ತು ಕೆರೆಯ ಗುತ್ತಿನ ಅಂಗಳದ ಮುಂಬದಿಯಲ್ಲಿ ಕುದುರೆ ಏರಿ ಹೋಗುತ್ತಿದ್ದಾಗ ತೋಡಿನ (ಹಳ್ಳದ) ಆಚೆ ಬದಿಯಲ್ಲಿ ಹೊನ್ನೆಮರಕ್ಕೆ ಹಗ್ಗ ತೂಗ ಹಾಕಿ ಕೊರಪೊಲು ನಾಲ್ಕಾರು ಕೂಲಿಯಾಳುಗಳ ಮಕ್ಕಳೊಂದಿಗೆ ಜೋಕಾಲಿ ಯಾಡುತ್ತಿದ್ದಳಂತೆ. ದೊರೆ ಒಂದು ಕ್ಷಣ, ಜೋಕಾಲಿಯಾಡುವ ಈ ಕೊರಪೊಲನ್ನು ನೋಡಿ ‘ಎಂಥ ಚೆಂದುಳ್ಳಿ ಚೆಲುವೆ ಈ ಹುಡುಗಿ, ಓ ದೇವರೇ!’ ಎಂದು ಕುದುರೆಯನ್ನು ನಿಲ್ಲಿಸಿ ‘ಇಲ್ಲಿ ಬಾ’ ಎಂದು ಆಕೆಯನ್ನು ಕರೆದನಂತೆ. ಅದಕ್ಕೆ ಆಕೆ ‘ಬರಲಾರೆ’ ಎಂದು ಕೈಸನ್ನೆಯಿಂದ ಪ್ರತ್ಯುತ್ತರ ನೀಡಿದಳಂತೆ. ಅಷ್ಟಕ್ಕಾದರೆ, ದೊರೆ ಹೊರಟು ಹೋಗುತ್ತಿದ್ದನೇನೋ. ಆಕೆ ತನ್ನನ್ನು ಗಣನೆಗೆ ತೆಗೆದುಕೊಳ್ಳದೇ ಜೋಕಾಲಿಯಾಡುವುದನ್ನು ಮುಂದುವರಿಸಿದ್ದು ನೋಡಿದ ದೊರೆ, ಈ ದಿಟ್ಟೆ ಯಾರು? ಕುಲ ಗೋತ್ರ ಯಾವುದು? ಎಂಬುದನ್ನೆಲ್ಲಾ ವಿಚಾರಿಸುವಂತೆ ತನ್ನ ಕೈ ಕೆಳಗಿನವರಿಗೆ ಆಜ್ಞಾಪಿಸಿ, ವಿಟ್ಲದಾಚೆ ಹೊರಟ ತನ್ನ ಪ್ರಯಾಣವನ್ನು ರದ್ದುಪಡಿಸಿ ಮತ್ತೆ ಉಳ್ಳಾಲದ ಕ್ಯಾಂಪಿಗೆ ಮರಳಿದನಂತೆ. ಆ ಹುಡುಗಿ ಸಾಂತೇರ್ ಗುತ್ತಿಗೆ ಸೇರಿದವಳೆಂದು ಮಧ್ಯಾಹ್ನದ ಒಳಗೆ ತಿಳಿದುಕೊಂಡ ಕೋಚ್ ಮೆನ್ ದೊರೆ, ಅಂದಿನ ಗುತ್ತಿನ ಯಜಮಾನ ವೆಂಕಪ್ಪ ಹೆಗ್ಡೆಯವರನ್ನು ತನ್ನ ಕ್ಯಾಂಪಿಗೆ ಬರಲು ಹೇಳಿಕಳಿಸಿದನಂತೆ.
ದೊರೆಯ ಅನಿರೀಕ್ಷಿತ ಕರೆಯಿಂದ ಕಂಗಾಲಾದ ವೆಂಕಪ್ಪ ಹೆಗ್ಡೆ ಅಂಜುತ್ತಾ ಅಳುಕುತ್ತಾ ಹೋಗಿ ದೊರೆಯನ್ನು ಕಂಡರೆ, ದೊರೆ ಬೇರೆ ಏನನ್ನೂ ಹೇಳದೆ “ನಿಮ್ಮ ಮನೆಯ ಕಿಶೋರಿಯನ್ನು ನೋಡಿದೆ. ಬಲು ಫಸಂದು ಅನಿಸಿದೆ. ನಾನಿನ್ನೂ ಇಪ್ಪತೈದರ ಹುಡುಗ. ಅವಿವಾಹಿತ. ನಿಮ್ಮ ಹುಡುಗಿಯನ್ನು ನನಗೆ ಮದುವೆ ಮಾಡಿಕೊಡಬೇಕು!’’ ಎಂದನಂತೆ.
ವೆಂಕಪ್ಪ ಹೆಗ್ಡೆಯವರಿಗೆ ಈ ಕೋಚ್ ಮೆನ್ ದೊರೆಯ ಬೇಡಿಕೆ ಕೇಳಿ ದಿಗಿಲಾಯಿತು. ಇನ್ನೂ ಹದಿನಾರು ತುಂಬದ ತನ್ನ ಸೊಸೆಯನ್ನು ಯಾರು ಏನು ಎಂದು ತಿಳಿಯದೆ ಈ ದೊರೆಗೆ ಕೊಟ್ಟರೆ, ಹುಲಿಯ ಬಾಯಿಗೆ ಕುರಿಯನ್ನು ಕೊಟ್ಟಂತಾಗದೇ? ಎಂಬ ಭಯವೂ ಹುಟ್ಟಿತು. ಇಷ್ಟಕ್ಕೂ ಈತ ಈಗ ಈಕೆಯ ಕೈ ಹಿಡಿದರೂ, ನಾಳೆ ಇನ್ನೊಬ್ಬಳನ್ನು ಮೋಹಿಸಿ ‘ನೀನು ನಿನ್ನ ತವರಿಗೆ ಹೋಗು’ ಎಂದು ಹಿಂದೆ ಕಳುಹಿಸಿದರೆ, ಇವಳನ್ನು ಗುತ್ತಿನ ಮನೆ ಮತ್ತೆ ಹೇಗೆ ಸ್ವೀಕರಿಸುವುದು? ಎಂಬ ಆತಂಕವೂ ಕಾಡಿತಂತೆ. ಆದರೆ ಆಗಿನ ಸರಕಾರ ಇಂಗ್ಲಿಷ್ ದೊರೆಗಳದ್ದು. ಅವರ ಬೇಕು ಬೇಡಗಳನ್ನು ತಿರಸ್ಕರಿಸುವುದೆಂದರೆ ಗಂಡಾಂತರವನ್ನು ಬೇಕಂತಲೇ ಕರೆದು ಎದೆಗೆಳೆದುಕೊಂಡ ಹಾಗೆ. ಹಾಗಂತ ಗುತ್ತಿನ ಮನೆಯ ಹಸುಳೆಯನ್ನು ಬಲಿಕೊಟ್ಟು ಗುತ್ತನ್ನು ಉಳಿಸಿಕೊಳ್ಳುವುದು ಎಷ್ಟು ಸರಿ?
ಹೀಗೆಲ್ಲಾ ಯೋಚಿಸಿದ ವೆಂಕಪ್ಪ ಹೆಗ್ಡೆ ಕೈ ಮುಗಿದು “ಈ ವಿಚಾರದಲ್ಲಿ ದಿಢೀರ್ ನಿರ್ಧಾರಕ್ಕೆ ಬರುವುದು ಕಷ್ಟ. ಎರಡು ದಿನದ ಅವಧಿ ಕೊಡಿ’ಎಂದರಂತೆ. ‘ಆಲ್ರೈಟ್, ಅಷ್ಟರ ತನಕ ನಾನೂ ಈ ಕ್ಯಾಂಪ್ ನಲ್ಲೇ ಇರುತ್ತೇನೆ’ ಎಂದನಂತೆ ದೊರೆ.
ವೆಂಕಪ್ಪ ಹೆಗ್ಡೆಯವರು ಗುತ್ತಿನ ಮನೆಗೆ ಬಂದವರೇ, ಮನೆಮಂದಿಯನ್ನಲ್ಲದೇ ಊರವರನ್ನೂ ಚಾವಡಿಗೆ ಕರೆಸಿ ದೊರೆಯ ಅಪೇಕ್ಷೆ ಮುಂದಿಟ್ಟರು. ಇಡೀ ಮನೆಯ ಮಂದಿ, ಒಂದು ಕ್ಷಣ ಮಾತಿಲ್ಲದೆ ಮೂಕರಾಗಿ ಒಬ್ಬರ ಮುಖವನ್ನು ಇನ್ನೊಬ್ಬರು ದಿಟ್ಟಿಸುತ್ತಾ ಯಾರಿಗೆ ಯಾರು ಏನು ಹೇಳುವುದು? ಎಂದು ತಿಳಿಯದೇ ಉಳಿದವರಂತೆ. ಕೊರೆಪೊಲುವಿನ ತಾಯಿ ತುಂಗಕ್ಕೆ ‘ಅಯ್ಯೋ ದೇವರೇ. ನನ್ನ ಮಗಳಿಗೆ ಈ ಗತಿ ಬಂತೇ?’ ಎಂದು ಎದೆ ಬಡಿದುಕೊಂಡು ಅಳಲು ಹತ್ತಿದರಂತೆ. ಅವರನ್ನು ಹೇಗೆ ಸಮಾಧಾನಪಡಿಸುವುದೆನ್ನುವುದು ಯಾರಿಗೂ ಹೊಳೆಯಲಿಲ್ಲವಂತೆ. ಊರ ಸುತ್ತುಮುತ್ತಿನವರನ್ನೆಲ್ಲ ಕರೆಸಿ ಅಭಿಪ್ರಾಯ ಕೇಳಿದರಾಯಿತೇ ಎಂದು ವೆಂಕಪ್ಪ ಹೆಗ್ಡೆ ಮುಂದಾಗುವಷ್ಟರಲ್ಲಿ ತುಂಗಕ್ಕ ತನ್ನನ್ನೂ ತನ್ನ ಮಗಳನ್ನೂ ದೂರಕ್ಕೆ ಕಳುಹಿಸಿ ಎಂದು ಬೇಡಿಕೊಂಡರಂತೆ. ಸೇರಿದ ಊರ ಮಂದಿ ತಲೆಗೊಬ್ಬರ ಹಾಗೆ ಮಾತನಾಡಿದರೆ, ತುಂಗಕ್ಕೆಯ ಮೊರೆ ಒಂದೇ. “ಎಷ್ಟಕ್ಕೂ ಈ ಮದುವೆ ಸಾಧ್ಯವಿಲ್ಲ. ದೊರೆಗೆ ಮಗಳನ್ನು ಕೊಡುವುದಕ್ಕಿಂತ ಹಳ್ಳಕ್ಕೆ ತಮ್ಮನ್ನು ನೂಕುವುದೇ ವಾಸಿ!’’ ಎಂದು.
ಕೊನೆಗೂ ವೆಂಕಪ್ಪ ಹೆಗ್ಡೆಯವರೇ ಸ್ವಂತ ನಿರ್ಧಾರ ತೆಗೆದುಕೊಳ್ಳಬೇಕಾಯಿತು. ಕೊರಪೊಲುವಿನಲ್ಲೇ ಅಭಿಪ್ರಾಯ ಕೇಳುವುದು, ಆಕೆ ಒಪ್ಪಿದರೆ ಮದುವೆ, ಒಪ್ಪದಿದ್ದರೆ ತಲೆದಂಡ ಕೊಟ್ಟಾದರೂ ದೊರೆಯನ್ನು ಎದುರು ಹಾಕಿಕೊಳ್ಳುವುದು. ‘ಸರಿ’ ಎಂದರು ಎಲ್ಲರೂ. ಆದರೆ ಕೊರಪೊಲುವನ್ನು ನೀನು ಮದುವೆಗೆ ಒಪ್ಪುತ್ತೀಯಾ ಎಂದು ಕೇಳುವುದು ಯಾರು? ಮದುವೆ ಎಂದರೆ ಏನೆಂದು ತಿಳಿಯದ ಅವಳು ‘ಹ್ಞೂಂ’ ಎಂದರೂ ಕಷ್ಟ. ಊಹ್ಞೂಂ ಎಂದರೆ ಇನ್ನೂ ಸಂಕಷ್ಟ. ಆದರೆ ಬೇರೆ ಉಪಾಯವೇ ಇಲ್ಲ ತಾನೆ?
ಈ ಎಲ್ಲಾ ರಾದ್ಧಾಂತ ನಡೆಯುವಾಗ ಕೊರಪೊಲು ಎಲ್ಲಿದ್ದಾಳೆ ಎಂದು ಯಾರೂ ತರ್ಕಿಸಿಯೇ ಇರಲಿಲ್ಲ. ಹುಡುಗಿ ಎಲ್ಲಿ ಎಲ್ಲಿ ಎಂದು ಹುಡುಕಿದರೆ, ಎಲ್ಲವನ್ನೂ ಕೇಳಿಸಿಕೊಂಡ ಕೊರಪೊಲು, ಉಪ್ಪರಿಗೆ ಹತ್ತಿ ನಿಶ್ಚಿಂತೆಯಿಂದ ಮಲಗಿ ನಿದ್ದೆ ಹೊಡೆಯುತ್ತಿದ್ದಳಂತೆ. ಅವಳ ಅಭಿಪ್ರಾಯವನ್ನು ಯಾರು ಕೇಳುವುದು, ತಾಯಿಯೋ ಮಾವನೋ ಅಥವಾ ಅವಳ ತಂದೆಯನ್ನು ಕರೆಸಿ ಅವರಿಂದಲೋ ಎಂದು ಚರ್ಚೆ ಪ್ರಾರಂಭವಾಗಿ ಎರಡು ವರುಷದ ಹಿಂದೆ ಮದುವೆಯಾದ ಅಂಬಕ್ಕೆಯ ಅಜ್ಜಿ ತುಂಬಪ್ಪೆಯಲ್ಲೇ ಕೇಳಿಸುವುದೆಂದು ನಿಶ್ಚಯಿಸಿದರಂತೆ. ತುಂಬಪ್ಪೆ ಕೊರಪೊಲುವಿನಲ್ಲಿ ನಿಧಾನವಾಗಿ ವಿಷಯವನ್ನೆಲ್ಲ ಪ್ರಸ್ತಾಪಿಸಿ ‘ನಿನ್ನೆ ನಿನ್ನನ್ನು ಮಾತನಾಡಿಸಿದ ಆ ಕೋಚ್ ಮೆನ್ ದೊರೆಯನ್ನು ಮದುವೆಯಾಗಲು ಸಿದ್ಧಳಿದ್ದೀಯಾ?’ ಎಂದು ಬಹಳ ನೋವಿನಿಂದ ಪ್ರಶ್ನಿಸಿದರಂತೆ.
ಕೊರಪೊಲು – ಮೊದಲು ಏನೂ ಮಾತನಾಡದೆ ಸುಮ್ಮನಿದ್ದಳಂತೆ. ಆ ಮೇಲೆ ‘ಬೇಡ ಅಂದರೆ ಬೇಡ ಅನ್ನು ಆಗಬಹುದಾದರೆ ಹ್ಞೂ ಅನ್ನು’ ಅಂದದ್ದಕ್ಕೆ ಒಂದರ್ಧ ತಾಸು ಸುಮ್ಮನಿದ್ದು, ಮೊದಲು ‘ಊಹ್ಞೂಂ’ ಅಂದು, ಆಮೇಲೆ ‘ಹ್ಞೂಂ’ ‘ಹ್ಞೂಂ’ ಅಂದಳಂತೆ. ತುಂಬಪ್ಪೆಗೆ – ಒಪ್ಪಲಿಲ್ಲ ಅನ್ನುವುದೋ, ಒಪ್ಪಿದಳು ಅನ್ನುವುದೋ ತಿಳಿಯದೆ ಚಡಪಡಿಸುತ್ತಿದ್ದಾಗ ಕೊರಪೊಲು ‘ಒಪ್ಪಿದ್ದೇನೆ’ ಎಂದು ಬಾಯಿ ಬಿಟ್ಟು ಹೇಳಿದಾಗ, ಒಮ್ಮೆ ಎದೆ ಧಸಕ್ ಎಂದರೂ, ಜುಮಾದಿಯ ಮೇಲೆ ಭಾರ ಹಾಕಿ ಕೋಚ್ ಮೆನ್ ದೊರೆಗೆ ಇವಳನ್ನು ಒಪ್ಪಿಸುವುದೇ ಸರಿ ಎಂದು, ಇಡೀ ಗುತ್ತಿನ ಮನೆ ಮದುವೆಗೆ ಒಪ್ಪಿಗೆ ನೀಡಿತಂತೆ.
ಮರುದಿನ ಗುತ್ತಿನಾರ್ ವೆಂಕಪ್ಪ ಹೆಗ್ಡೆ ದೊರೆ ಇದ್ದಲ್ಲಿಗೆ ಹೋಗಿ ‘ಹುಡುಗಿ ಒಪ್ಪಿದ್ದಾಳೆ. ನಾವು ಮದುವೆಯೂ ಮಾಡಿಕೊಡುತ್ತೇವೆ. ಆದರೆ ನಮ್ಮ ಸಂಪ್ರದಾಯಗಳನ್ನು ನೀವು ಪಾಲಿಸಬೇಕು’ ಎಂದು ಭಿನ್ನವಿಸಿದ್ದಕ್ಕೆ ‘ಸರಿ’ ಎಂದರಂತೆ ಕೋಚ್ ಮೆನ್ ದೊರೆ. ರಾತ್ರೋರಾತ್ರಿ – ಒಂಬತ್ತು ಕೆರೆಯ ಎಲ್ಲ ವರ್ಗದ ಮಂದಿಯೂ ಗುತ್ತಿನ ಮನೆಯ ಅಂಗಳದಲ್ಲಿ ಜಮಾಯಿಸಿ, ದೊಡ್ಡ ಚಪ್ಪರ ನಿರ್ಮಾಣ ಮಾಡಿದರಂತೆ. ಉಳ್ಳಾಲದ ಪೇಟೆಯಿಂದ ಮದುವೆಯ ಊಟಕ್ಕೆ ಬೇಕಾದ ಬೆಲ್ಲ, ಬೇಳೆ ಕಾಳುಗಳೂ ಬಂದುವಂತೆ. ಊರಿನ ಮನೆ ಮನೆಗಳ ತೋಟಗಳಲ್ಲಿ ಬೆಳೆದಿದ್ದ ತರಕಾರಿಗಳ ರಾಶಿಯೇ ಗುತ್ತಿನ ಅಂಗಳಕ್ಕೆ ಬಂತಂತೆ. ಮಂಗಳೂರಿನಿಂದ ಕೋಚ್ ಮೆನ್ ದೊರೆಯ ಊಟ ಉಪಾಹಾರಕ್ಕೆ ಬೇಕಾದ ಆಹಾರವಸ್ತುಗಳನ್ನು ಮಾಂಸವನ್ನು ಅವರೇ ತರಿಸಿಕೊಳ್ಳುವ ವ್ಯವಸ್ಥೆಯನ್ನು ಅವರೇ ಮಾಡಿಕೊಂಡರಂತೆ. ತುಳುನಾಡಿನ ವೈಶಿಷ್ಟ್ಯದ ಕೋರಿ ಕೊದ್ದೆಲು, ಕೋರಿ ಗಸಿ ಮಾಡಲು – ತಿಮ್ಮಂಗೂರು ಗುತ್ತಿನ ಬಾಣಸಿಗ ಅಮ್ಮುವಿಗೆ ಜನ ಹೋಯಿತಂತೆ.
ಆ ಕಾಲದಲ್ಲಿ ತೀರ ಅಪರೂಪವಾಗಿದ್ದ ಬೆಡಿ ಗರ್ನಾಲುಗಳ ಸದ್ದಿನೊಂದಿಗೆ, ಮಂಗಳೂರಿನಿಂದ ದೊರೆಯೇ ತರಿಸಿದ ಪೋಲೀಸ್ ಬ್ಯಾಂಡಿನ ಗೌಜಿಯೊಂದಿಗೆ ದೊರೆಯ ದಿಬ್ಬಣ ಕೊನೆಗೂ ಗುತ್ತಿನ ಅಂಗಳಕ್ಕೆ ಬಂತು. ಊರಿಗೆ ಊರೇ ಅಲ್ಲಿ ನೆರೆದಿತ್ತು. ಆಮಂತ್ರಣ ಅಧಿಕೃತವಾಗಿ ಇದ್ದವರೂ ಇಲ್ಲದವರೂ ಈ ವಿಶಿಷ್ಟ ಮದುವೆಯನ್ನು ನೋಡಲಿಕ್ಕಾಗಿ ನಾಮುಂದು ತಾಮುಂದು ಎಂಬಂತೆ ಬಂದು ಭಾಗವಹಿಸಿದರು. ಕೋಚ್ಮೆನ್ ದೊರೆಗೆ ಈ ಗುತ್ತಿನ ಮನೆಯೂ ಒಂದು ಪುಟ್ಟ ಅರಸೊತ್ತಿಗೆಯ ಮನೆ ಎಂಬ ಅನುಭವವಾಗಿ ತುಂಬಾ ಖುಷಿಯಾಯಿತು.
ಕೋಚ್ ಮೆನ್ ದೊರೆ ತನ್ನ ಪತ್ನಿ ಕೊರಪೊಲನ್ನು ‘ಕೋರ್ ಪಲ್’ ಎಂದು ಕರೆಯುತ್ತಾ ಪ್ರೀತಿಯಿಂದ ತಬ್ಬಿಕೊಂಡು, ತನ್ನ ಕುದುರೆಯ ಮೇಲೆ ಕುಳ್ಳಿರಿಸಿಕೊಂಡು ಉಳ್ಳಾಲದ ಕ್ಯಾಂಪ್ ಗೆ ಕರೆದೊಯ್ಯುವುದನ್ನು, ಒಂಬತ್ತು ಕೆರೆ ಮತ್ತು ಸುತ್ತಮುತ್ತಲ ಮಂದಿ, ಮತ್ತು ಗುತ್ತಿನ ಮನೆಯ ಬಂಧು ಬಾಂಧವರು ತೆರೆದ ಕಣ್ಣನ್ನು ಮುಚ್ಚದೇ ನೋಡಿದರಂತೆ. ಕೊರಪೊಲಿನ ತಾಯಿ ಮಾತ್ರ ಆಘಾತಕ್ಕೊಳಗಾದವಳಂತೆ ಮೌನಿಯಾಗಿ ಇದ್ದಳಂತೆ ಎಂದು ಅಂಬಕ್ಕೆ ಈಗಲೂ ಹೇಳುವಾಗ ಆಕೆಯ ಕಂಠ ಗದ್ಗದವಾಗುತ್ತದೆ.
ಕೊರಪೊಲು ಚಿಕ್ಕವಳಿದ್ದರೂ ತೀರ ಅಪರಿಚಿತ ವಿದೇಶೀಯನೊಂದಿಗೆ ನವವಧುವಾಗಿ ಕೈ ಹಿಡಿದು ಹೊರಟು ನಿಂತಾಗ ಆಕೆ ಅಳಬಹುದು ಎಂದು ಎಲ್ಲರೂ ಅಂದುಕೊಂಡಿದ್ದರೆ ಆಕೆ ಏನೂ ಆತಂಕ ಇಲ್ಲದವಳ ಹಾಗೆ ನಗುನಗುತ್ತಾ ಹೊರಟಿದ್ದಳಂತೆ. ಅದನ್ನು ನೋಡಿ ಮನದೊಳಗೆ ನೋವಿದ್ದರೂ ಗುತ್ತಿನ ಮನೆಯವರು ಏನೂ ತೋರ್ಪಡಿಸದೇ ಕುಳಿತರಂತೆ. ಕುತ್ತಿಗೆ ಮತ್ತು ಕೈತುಂಬ ಬಂಗಾರದ ಒಡವೆಗಳಿಂದ ಶೋಭಿಸುತ್ತಿದ್ದ ಕೊರಪೊಲು ಜುಮಾದಿ ದೈವಕ್ಕೆ ಕೈ ಮುಗಿದು ಹಿರಿಯರ ಕಾಲಿಗೆ ಅಡ್ಡ ಬಿದ್ದು, ಗುತ್ತಿನ ಅಂಗಳಕ್ಕೆ ಕಾಲಿಟ್ಟಾಗ ಅವಳನ್ನು ಬೀಳ್ಕೊಡಲು ಬಂದ ವೆಂಕಪ್ಪ ಹೆಗ್ಡೆಯವರ ಕೈ ಕುಲುಕಿದ ದೊರೆ, ತನ್ನ ಪತ್ನಿಯ ಮೈಮೇಲಿದ್ದ ಎಲ್ಲ ಒಡವೆಗಳನ್ನು ತೆಗೆದು ಅವರ ಕೈಯಲ್ಲಿ ಇಟ್ಟರಂತೆ. ಆಮೇಲೆ ತನ್ನ ಕೋಟಿನ ಕಿಸೆಯಲ್ಲಿದ್ದ ಚಿನ್ನದ ಚೈನಿನಲ್ಲಿ ತೂಗು ಹಾಕಿದ್ದ ಕೈ ಗಡಿಯಾರವನ್ನು ಹೆಗ್ಡೆಯವರಿಗೆ ಉಡುಗೊರೆಯಾಗಿ ನೀಡಿದರಂತೆ. ಕೊರಪೊಲು ತನ್ನ ಮೈ ಕೈ ಬರಿದಾದ್ದನ್ನು ನೋಡಿ ಆತಂಕಿತಳಾದಾಗ, ಹೆಗ್ಡೆಯವರ ಕೈ ತುಂಬಿ ತುಳುಕುತ್ತಿದ್ದ ಆಕೆಯದ್ದಾದ ಚಿನ್ನದ ಸರಗಳಲ್ಲಿ – ಅವಲಕ್ಕಿ ಸರವೊಂದನ್ನು ಎತ್ತಿ ತೆಗೆದು, ಅದನ್ನು ಕೊರಪೊಳಿಗೆ ದೊರೆಯೇ ತೊಡಿಸಿ ‘ದೆಟ್ ಈಸ್ ಫೈನ್ ಎಂಡ್ ಇನಫ್’ ಎಂದರಂತೆ. ಆಮೇಲೆ ದುಬಾಷಿಯಲ್ಲಿ “ಹೆಗ್ಡೆಯವರಿಗೆ ಬ್ರಿಟಿಷ್ ಸರಕಾರವು ಈ ಗ್ರಾಮದ ಪಠೇಲಿಕೆಯ ಗೌರವ ಮತ್ತು ಅದರ ಸಂಕೇತವಾಗಿ ಒಂದು ತೋಟೆಯ ಕೋವಿಯನ್ನು ದಯಪಾಲಿಸುವುದು ಎಂದು ಹೇಳು’ಎಂದು ಆದೇಶಿಸಿದರಂತೆ.
ಕೋಚ್ ಮೆನ್ ದೊರೆ, ಗುತ್ತಿನ ಅಂಗಳದಲ್ಲಿ ಏನು ಹೇಳಿದರೋ ಹಾಗೆಯೇ ನಡಕೊಂಡರು. ತಿಂಗಳೊಳಗೆ ವೆಂಕಪ್ಪ ಹೆಗ್ಡೆಯವರಿಗೆ ಬ್ರಿಟಿಷ್ ಸರಕಾರದಿಂದ ಗ್ರಾಮ ಪಠೇಲಿಕೆಯ ಆದೇಶದ ಸನದು ಬಂತು. ಜೊತೆಗೆ ಕೋವಿಯ ಲೈಸನ್ಸ್ ಮತ್ತು ತೋಟೆಯ ಕೋವಿಯೂ ಬಂತು. ಕೊರಪ್ಪಲು – ಕೋಚ್ ಮನ್ ದೊರೆ ಮಂಗಳೂರಿಗೆ ಬಂದಷ್ಟು ಸಲವೂ ಅವರ ಜೊತೆ ಬರುತ್ತಿದ್ದಳು. ಹಾಗೆ ಬಂದವಳನ್ನು ದೊರೆ ಕುದುರೆ ಸಾರೋಟ್ ನಲ್ಲಿ ಗುತ್ತಿನ ಮನೆಗೆ ಕಳುಹಿಸುತ್ತಿದ್ದರು. ಗುತ್ತಿನ ಹೆಣ್ಣು ಮಗಳು – ದೊರೆಯ ಕೈ ಹಿಡಿದು ಸುಖದಲ್ಲಿರುವುದನ್ನು ನೋಡಿ, ಗುತ್ತಿನ ಮನೆ ಮಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಸಾಂತೇರ್ ಗುತ್ತು ಅಂದರೆ ಏನು ಅಂತ ತಿಳಿದುಕೊಂಡಿದ್ದೀರಿ, ಬ್ರಿಟಿಷ್ ದೊರೆಗೇ ಹೆಣ್ಣು ಕೊಟ್ಟ ಮನೆತನ! ಎಂದು ಊರ ಮಂದಿ ಆಡಿಕೊಂಡರು. ಇದರಿಂದ ಗುತ್ತಿನ ಪ್ರತಿಷ್ಠೆಯೂ ಹೆಚ್ಚಿತು.
ವೆಂಕಪ್ಪ ಹೆಗ್ಡೆಯವರಿಗೆ ಈ ಕೋಚ್ ಮೆನ್ ದೊರೆಯ ಬೇಡಿಕೆ ಕೇಳಿ ದಿಗಿಲಾಯಿತು. ಇನ್ನೂ ಹದಿನಾರು ತುಂಬದ ತನ್ನ ಸೊಸೆಯನ್ನು ಯಾರು ಏನು ಎಂದು ತಿಳಿಯದೆ ಈ ದೊರೆಗೆ ಕೊಟ್ಟರೆ, ಹುಲಿಯ ಬಾಯಿಗೆ ಕುರಿಯನ್ನು ಕೊಟ್ಟಂತಾಗದೇ? ಎಂಬ ಭಯವೂ ಹುಟ್ಟಿತು. ಇಷ್ಟಕ್ಕೂ ಈತ ಈಗ ಈಕೆಯ ಕೈ ಹಿಡಿದರೂ, ನಾಳೆ ಇನ್ನೊಬ್ಬಳನ್ನು ಮೋಹಿಸಿ ‘ನೀನು ನಿನ್ನ ತವರಿಗೆ ಹೋಗು’ ಎಂದು ಹಿಂದೆ ಕಳುಹಿಸಿದರೆ, ಇವಳನ್ನು ಗುತ್ತಿನ ಮನೆ ಮತ್ತೆ ಹೇಗೆ ಸ್ವೀಕರಿಸುವುದು? ಎಂಬ ಆತಂಕವೂ ಕಾಡಿತಂತೆ.
ಸಾಂತೇರ್ ಗುತ್ತಿನ ಮನೆಗೆ ಬ್ರಿಟಿಷ್ ಸರಕಾರ ಹೀಗೆ ನೀಡಿದ ‘ಪಠೇಲಿಕೆಯ ಸನದು’ನ್ನು ಸ್ವತಃ ವೆಂಕಪ್ಪ ಹೆಗ್ಡೆಯವರೇ, ಮಂಗಳೂರಿಗೆ ಹೋಗಿ ಕಟ್ಟು ಹಾಕಿಸಿ ತಂದು, ಗುತ್ತಿನ ಚಾವಡಿಯ ಬಾಗಿಲನ ಬಲಬದಿಯಲ್ಲಿ ಅದನ್ನು ತೂಗು ಹಾಕಿದರು. ಬ್ರಿಟಿಷ್ ಸರಕಾರ ನೀಡಿದ ತೋಟೆಯ ಕೋವಿಯನ್ನು ಗುತ್ತಿನ ಚಾವಡಿಯ ಗೋಡೆಯಲ್ಲಿ ಅಲಂಕರಿಸಿ ಇಡಲು, ತಿಮ್ಮಯಾಚಾರಿಯನ್ನು ಕರೆಸಿದರು. ಆತ ಒಂದು ವಾರ ಕೆಲಸಮಾಡಿ ಬೀಟಿಮರದಿಂದ ಬಹಳ ಸುಂದರವಾದ ಒಂದು ಸ್ಟೇಂಡನ್ನು ಮಾಡಿಕೊಟ್ಟ. ಕೋವಿ ಅದರ ಮೇಲೆ ರಾರಾಜಿಸಿತು.
ಈ ಎಲ್ಲ ಘಟನೆಗಳಿಂದ ಗುತ್ತಿನ ಪ್ರತಿಷ್ಠೆ ಇನ್ನಷ್ಟು ಹೆಚ್ಚಿತು. ವೆಂಕಪ್ಪ ಹೆಗ್ಡೆಯವರು ಗುತ್ತಿನ ಅಂಗಳದಿಂದ ಹೊರಗೆ ಕಾಲಿಟ್ಟ ಕೂಡಲೇ ಆಳುಕಾಳುಗಳೆಲ್ಲ ಸದಾ ಹಿಂಬಾಲಿಸಲು ಪ್ರಾರಂಭಿಸಿದರು. ಅವರಿಗೆ ಬಿಸಿಲು ಬೀಳದ ಹಾಗೆ, ಮಳೆ ಬೀಳದ ಹಾಗೆ ಕೊಡೆ ಹಿಡಿಯಲೂ ಒಬ್ಬ ಆಳು ನೇಮಕಗೊಂಡ. ಆ ದಾರಿಯಲ್ಲಿ ಈ ದಾರಿಯಲ್ಲಿ ಅವರು ನಡೆದು ಬರುತ್ತಿದ್ದರೆ ಜನರು ಮಾರುದ್ದ ದೂರ ನಿಂತು ನಮಸ್ಕರಿಸಲು ಸನ್ನದ್ಧರಾದರು. ಆದರೆ ಇದನ್ನೆಲ್ಲ ನೋಡಿದ ಮಿತ್ತಗುತ್ತಿನ ಭೋಜ ಶೆಟ್ಟಿಗೆ ತಡೆಯಲಾರದಷ್ಟು ಹೊಟ್ಟೆ ಉರಿ ಪ್ರಾರಂಭವಾಯಿತು. ಮಿತ್ತಗುತ್ತು ಎನ್ನುವುದು ಸಾಂತೇರ್ ಗುತ್ತಿನ ಕೈಕೆಳಗಿನ ಗುತ್ತು. ಈ ಗುತ್ತಿನ ಉತ್ಪತ್ತಿ ಸಾಂತೇರ್ ಗುತ್ತಿನ ಎದುರು ಏನೂ ಅಲ್ಲ. ಆದರೆ ಭೋಜ ಶೆಟ್ಟಿಯನ್ನು ಕೇಳಿದರೆ, ಎರಡು ಮೂರು ತಲೆಮಾರುಗಳ ಹಿಂದೆ ಮಿತ್ತಗುತ್ತಿನ ಹಿರಿಯರ ಒಂದು ಪಾಲು ಈ ಸಾಂತೇರ್ ಗುತ್ತಿನಲ್ಲಿ ಬಂದು ಕೆಲಸಕ್ಕೆ ಬಂಟರಾಗಿ ನಿಂತವರು. ಅಲ್ಲಿದ್ದ ಜೈನರು ನಿರ್ವಂಶವಾಗುತ್ತಿದ್ದ ಹಾಗೆ ಇದು ತಮ್ಮದೆಂದು ಮಾಡಿಕೊಂಡವರೂ ಅವರೇ. ನಿಜ ಹೇಳುವುದಾದರೆ ಎರಡೂ ಗುತ್ತಿನ ಬಳಿ (ಗೋತ್ರ) ಒಂದೇ. ಕುಲನಾಮ ಕೂಡಾ ಶೆಟ್ಟಿಯೇ. ಆದರೆ ಸಾಂತೇರ್ ಗುತ್ತಿನ ಯಜಮಾನನಾಗುವವನಿಗೆ ‘ಗಡಿ ಪತ್ತು’ನ ಧಾರ್ಮಿಕ ವಿಧಿ ಇರುವುದರಿಂದ ಆತನ ಕುಲನಾಮ ಮರೆಯಾಗಿ ಗಡಿ ಹಿಡಿದ ನಂತರ ಆತ ‘ಹೆಗ್ಡೆ’ ಎಂದು ಆಗುತ್ತಾನೆ. ಅದು ಬಿಟ್ಟರೆ ಎರಡೂ ಮನೆತನಗಳ ಸ್ಥಾನಮಾನ ಒಂದೇ. ಅಷ್ಟೇ ಅಲ್ಲ, ರಕ್ತ ಸಂಬಂಧವೂ ಪರಸ್ಪರ ನಿಷಿದ್ಧ. ಹಾಗಾಗಿ ಈಗ ಸಾಂತೇರ್ ಗುತ್ತಿನವರು ಆರೋಪಿಸುವ ಹಾಗೆ, ಮಿತ್ತಗುತ್ತಿನವರು ಸಾಂತೇರ್ ಗುತ್ತಿನ ಹೆಣ್ಣನ್ನು ಕೇಳಿದ್ದೂ ಇಲ್ಲ. ಕೇಳುವ ಸಂಭವವೂ ಇರಲಿಲ್ಲ. ಇದೆಲ್ಲ ಸುಮ್ಮನೇ ಆ ಅಂಬಕ್ಕೆ ಹೊತ್ತು ಕಳೆಯಲಿಕ್ಕೆ ಹೇಳುವ ಕಂತೆ ಪುರಾಣಗಳು ಅಷ್ಟೇ.
ಆದರೆ, ಹೀಗೆ ಹೇಳುವ ಮಿತ್ತಗುತ್ತಿನ ಭೋಜ ಶೆಟ್ಟಿಯನ್ನು, ಊರ ಮಂದಿ ‘ಆ ಶೆಟ್ಟರ ಮಾತೊ, ಬಿಡಿ. ಸಾಂತೇರ್ ಗುತ್ತೆಲ್ಲಿ? ಮಿತ್ತಗುತ್ತೆಲ್ಲಿ? ಇದೆಲ್ಲ ಇವರ ಪಟಾಕಿ!’ ಎಂದು ಹೇಳುವುದಷ್ಟೇ ಅಲ್ಲ, ಭೋಜ ಶೆಟ್ಟರನ್ನು ‘ಮಡೆಂಜಿ’ ಎಂದು ಹಿಂಬದಿಯಿಂದ ಕರೆಯುತ್ತಾರೆ. ಮಡೆಂಜಿ ಎನ್ನುವುದು ಒಂದು ಜಾತಿಯ ಮೀನಿನ ಹೆಸರು. ಆ ಮೀನು ಇದ್ದಲ್ಲಿ , ಕೆರೆನೀರು ತಿಳಿಯಾಗಿರುವುದು ಸಾಧ್ಯವಿಲ್ಲ. ಭೋಜ ಶೆಟ್ಟರಿದ್ದಲ್ಲೂ ಅಷ್ಟೆ. ಏನಾದರೊಂದು ತರಲೆ, ತಕರಾರು ಇರುತ್ತದೆ ಎಂಬರ್ಥದ ಮಾತು ಅದು.
ಇಂಥ ಭೋಜ ಶೆಟ್ಟಿಗೆ ಸಾಂತೇರ್ ಗುತ್ತಿಗೆ – ಪಠೇಲಿಕೆ ಮತ್ತು ತೋಟೆಯ ಕೋವಿ ಸಿಕ್ಕಿದ ಮೇಲೆ, ತನ್ನ ಮಾತನ್ನು ಕೇಳುವವರೇ ಇಲ್ಲ ಅನಿಸಿತು. ಹಾಗೆಂದು, ಗುತ್ತಿನವರನ್ನು ನಿಷ್ಠುರ ಮಾಡಿಕೊಂಡರೂ ಸುಖವಿಲ್ಲ. ಅವರನ್ನು ಹೆಚ್ಚು ಹಚ್ಚಿಕೊಳ್ಳುವುದರಿಂದ ಲಾಭವಂತೂ ಇಲ್ಲವೇ ಇಲ್ಲ. ಈಗ ಏನಾದರೂ ಉಪಾಯ ಹೂಡಿ, ಸಂದರ್ಭ ಸೃಷ್ಟಿಸಿ ಈ ಗುತ್ತಿನ ಗೌರವ ತಗ್ಗಿಸುವ ಕೆಲಸ ಮಾಡಬೇಕೆಂದು ಯೋಚಿಸಹತ್ತಿದ.
ಆದರೆ ಅಂತಹ ಸಂದರ್ಭಗಳು ಫಕ್ಕನೆ ಸೃಷ್ಟಿಯಾಗುವ ಹಾಗೆ ಇರಲಿಲ್ಲ. ಒಂದು ತಿಂಗಳಾಯಿತು, ಎರಡು ತಿಂಗಳಾಯಿತು. ಭೋಜ ಶೆಟ್ಟಿ ಕಾದದ್ದೇ ಬಂತು. ಊಹ್ಞೂಂ. ಏನೂ ಸಂದರ್ಭಗಳೇ ಒದಗಿ ಬರಲಿಲ್ಲ. ಈ ನಡುವೆ, ದೊರೆ ಉಡುಗೊರೆ ನೀಡಿದ ಕೋವಿ, ಮತ್ತು ಪಠೇಲಿಕೆ ಸನದುಗಳನ್ನು ಕಣ್ಣಲ್ಲಾದರೂ ನೋಡಬೇಕು, ಆನಂದಿಸುವುದಕ್ಕಲ್ಲ, ಕರುಬಲಾದರೂ ಎಂಬಂತೆ ಶೆಟ್ಟಿ ಕಾಯುತ್ತಿದ್ದ. ಸುಮ್ಮನೆ ಹೋಗಿ ಕೋವಿ ನೋಡುವುದು, ಸನದು ಓದುವುದು ಅಂದರೆ ಅದು ತನಗೇ ಅಗೌರವ. ಅದರ ಬದಲು ಏನಾದರೂ ಉದ್ದೇಶ ಇಟ್ಟುಕೊಂಡು ಹೋಗಿ ನೋಡಿಕೊಂಡು ಬರಬೇಕು ಎಂದುಕೊಂಡ ಭೋಜ ಶೆಟ್ಟಿ. ಆದರೆ ಅವನ ದುರದೃಷ್ಟ – ಅಂತಹ ಅವಕಾಶವೂ ಫಕ್ಕನೇ ಒದಗಿ ಬರಲಿಲ್ಲ.
ಕೊನೆಗೊಮ್ಮೆ ಸುಮ್ಮನೇ ಸಾಂತೇರ್ ಗುತ್ತಿನ ಚಾವಡಿಗೆ ಹೋದ. ವೆಂಕಪ್ಪ ಹೆಗ್ಡೆಯವರು ‘ಬನ್ನಿ ಶೆಟ್ಟರೇ ಬನ್ನಿ. ಬಹಳ ದಿನಗಳಾಯ್ತು ನಿಮ್ಮನ್ನು ನೋಡದೇ. ನಮ್ಮ ಮನೆಯ ಮದುವೆಯ ನಂತರ ನೀವು ಬರಲೇ ಇಲ್ಲ. ಈ ಕಡೆ ಬರುವಿರಿ ಎಂದುಕೊಂಡಿದ್ದೆ’ ಎಂದೆಲ್ಲಾ ಹೇಳಿ ಸ್ವಾಗತಿಸಿ ‘ಏನು ಮತ್ತೆ ವಿಶೇಷ?’ ಎಂದು ಪ್ರಶ್ನಿಸಿದರು.
ಭೋಜ ಶೆಟ್ಟಿ “ಗುತ್ತಿಗೆ ಒಂದು ದೊಡ್ಡ ಗೌರವ ಬಂತಲ್ಲ! ಅದನ್ನು ನೋಡಿ ನಿಮ್ಮನ್ನು ಅಭಿನಂದಿಸಿ ಹೋಗೋಣ ಎಂದಿದ್ದೆ. ಯಾವ್ಯಾವುದೋ ಸುಡುಗಾಡು ಕೆಲಸಗಳು ಕೈತುಂಬ ಇದ್ದವು. ಬರಲಾಗಲೇ ಇಲ್ಲ. ಹ್ಹಿ ಹ್ಹಿ!” ಎಂದು ನಗುತ್ತಾ ‘ಇದೇ ಏನು ಪಠೇಲಿಕೆಯ ಸನದು?’ ಎಂದು, ಕಟ್ಟು ಹಾಕಿಟ್ಟ ಸನದನ್ನು ಕೈಯಲ್ಲಿ ಎತ್ತಿ ಹಿಡಿದು ಓದಿ ನೋಡುವ ಹಾಗೆ ನೋಡಿದ. ಆಮೇಲೆ ಬಹಳ ಜಾಗರೂಕವಾಗಿ ತೋಟೆಯ ಕೋವಿಯನ್ನು ತೆಗೆದು, ‘ಎಷ್ಟು ಭಾರ ಹೆಗ್ಡೇರೆ ಇದು!’ ಎಂದು ಎತ್ತಿ ಅದನ್ನು ತನ್ನ ತೊಡೆಯ ಮೇಲಿಟ್ಟು ನಯವಾಗಿ ನೀವಿದ. ಆಮೇಲೆ ಗುಂಡು ಹೇಗೆ ತುಂಬುವುದು, ಈಡು ಹೇಗೆ ಮಾಡುವುದು ಎಂಬುದನ್ನೆಲ್ಲ ವಿವರವಾಗಿ ಕೇಳಿ ಅದು ಎಲ್ಲಿತ್ತೋ ಅಲ್ಲಿಯೇ ಇರಿಸಿ, ತಮ್ಮ ಮನೆಯಲ್ಲಿರುವ ನಾಡಕೋವಿಯನ್ನು ನೆನಪಿಸಿಕೊಂಡ. ತಾನು ಆ ಕೋವಿಯನ್ನು ವರುಷಕ್ಕೆ ಒಂದೋ ಎರಡೋ ಬಾರಿ, ಮದ್ದು ತುಂಬಿ, ತೆಂಗಿನ ನಾರನ್ನು ಹಾಕಿ ಜಡಿದು ಹೆಗಲ ಮೇಲಿಟ್ಟುಕೊಂಡು ನಾಲ್ಕು ಜನ ಓಡಾಡುವಲ್ಲಿ ಆತ ಕಾಣಿಸಿಕೊಳ್ಳುವುದುಂಟು. ಯಾವುದಾದರೂ ಕಾಡು ಪ್ರಾಣಿಯ ಹೆಸರು ಹೇಳಿ “ಎಂಥ ಉಪದ್ರವ ಮಾರಾಯರೇ, ಈ ದಿನ ರಾತ್ರೆ ಈಡು ಮಾಡುತ್ತೇನೆ ನೋಡಿ!” ಎಂದು ಜನರ ಗಮನವನ್ನು ತನ್ನೆಡೆಗೆ ಸೆಳೆದು, “ಭೋಜ ಶೆಟ್ರು ಈ ರಾತ್ರೆ ಖಂಡಿತ ಈಡು ಮಾಡುತ್ತಾರೆ” ಎನ್ನುವಂಥ ಅಭಿಪ್ರಾಯವನ್ನು ಜನರಲ್ಲಿ ಬಿತ್ತುವುದುಂಟು. ಆಮೇಲೆ, ಈಡು ಆಗಿದೆ ಎಂದು ಆಗಬೇಕಲ್ಲ! ಅದಕ್ಕಾಗಿ ಆತ ಒಂದರ್ಧ ಗಂಟೆ ಕಾಡಿನಲ್ಲೋ ಹೊಲದ ಬದಿಯಲ್ಲೋ ಓಡಾಡುವುದು ರೂಢಿ. ಪ್ರಾಣಿ ಸಿಗದಿದ್ದರೂ, ಆಕಾಶಕ್ಕೊಂದು ಈಡು ಮಾಡಿ ಢಂ ಎಂದು ನಾಲ್ಕೂ ಕಡೆ ಶಬ್ದ ಕೇಳಿಸಿದ ಮೇಲೆಯೇ ಆತ ಮನೆಗೆ ಮರಳುವುದು. ಮನೆ ಮಂದಿ ಈಡಾಯಿತೇ ಏಂದು ಕೇಳಿದರೆ- ‘ಒಂದೇ ಗೇಣದಲ್ಲಿ ತಪ್ಪಿಹೋಯಿತು ನೋಡಿ!’ ಎಂದು ಹೇಳುವನು. ಊರ ಮಂದಿ ‘ಈಡಾಗಿತ್ತೇ ಶೆಟ್ಟರೇ ನಿನ್ನೆ ರಾತ್ರಿ?’ ಎಂದರೆ ‘ಹ್ಞೂ. ಒಂದು ಬರಿಂಕ ಬಿತ್ತು’ ಎಂದೋ ಅಥವಾ “ಹಂದಿಗೆ ಈಡಾಗಿತ್ತು ಮಾರಾಯ, ಅರ್ಧ ಪೆಟ್ಟಾಗಿರಬೇಕು ಅದಕ್ಕೆ. ಆದರೆ ಅದು ಎಲ್ಲಿ ಓಡಿಹೋಯಿತೋ ಏನೋ. ನಾಲ್ಕು ದಿನದ ಮೇಲೆ ಅದು ಸತ್ತ ವಾಸನೆಯಿಂದ ಗೊತ್ತಾಗಬೇಕು!’ ಎನ್ನುತ್ತಿದ್ದುದೇ ಹೆಚ್ಚು.
ಇಂಥ (ಮಡೆಂಜಿ) ಭೋಜ ಶೆಟ್ಟಿಗೆ ಸಾಂತೇರುಗುತ್ತಿನ ಗೌರವಕ್ಕೆ ಚ್ಯುತಿ ಬರುವ ಪ್ರಸಂಗ ಏನಾದರೂ ನಡೆಯಬಾರದೇ ಎಂಬ ದುರಾಲೋಚನೆ ಸದಾ ಕಾಡುತ್ತಿತ್ತು. ಅದಕ್ಕಾಗಿ ಅವನು ಕಾಯುತ್ತಿದ್ದನೆನ್ನುವಂತೆ ಇದ್ದಾಗ, ಮಂಗಳೂರಿಗೆ ಹೊಸತಾಗಿ ರೈಲು ಸರ್ವಿಸ್ ಪ್ರಾರಂಭವಾಗುವ ಸುದ್ದಿ ಬಂತು. ನಾಡಿದು ಸೋಮವಾರ ಪ್ರಾರಂಭವಾಗುತ್ತದಂತೆ ಎಂದಿದ್ದದ್ದು, ಮತ್ತೂ ಎರಡು ಸೋಮವಾರ ಕಳೆದು ಮೂರನೇ ಸೋಮವಾರದಂದು, ಮಂಗಳೂರು ರೈಲ್ವೆ ನಿಲ್ದಾಣಕ್ಕೆ ಮದ್ರಾಸಿನಿಂದ ರೈಲು ಬಂದು ನಿಲ್ಲುವುದು ಖಾತ್ರಿ ಎಂಬ ಸುದ್ದಿ ಬಂತು. ಜೂನ್ 1907ರ ಮೂರನೇ ಸೋಮವಾರ ಮಂಗಳೂರಿಗೆ ಬೆಳಗ್ಗೆ ಬರುವ ರೈಲು ಅದೇ ದಿನ ಸಂಜೆ ಮೂರು ಗಂಟೆಗೆ ಮತ್ತೆ ಮದ್ರಾಸಿಗೇ ಹೊರಡುತ್ತದಂತೆ. ಆ ರೈಲು ಉಳ್ಳಾಲ ಮಂಜೇಶ್ವರ ಕುಂಬ್ಳೆ ಕಾಸರಗೋಡುಗಳಲ್ಲೂ ನಿಲ್ಲುವುದಂತೆ ಎಂಬ ಸುದ್ದಿಯೂ ಹಬ್ಬಿತು. ರೈಲನ್ನೇ ನೋಡಿರದ ಈ ಪ್ರದೇಶದ ಮಂದಿ ಆ ದಿನ ರೈಲಿನಲ್ಲಿ ಪ್ರಯಾಣಿಸಲು ಇಲ್ಲವೇ ರೈಲನ್ನು ನೋಡಲು ಅದು ಪ್ರಾರಂಭವಾಗುವ ಮುನ್ನಾದಿನದ ರಾತ್ರೆಯಿಂದಲೇ ಕುತ್ತಿಗೆ ಉದ್ದ ಮಾಡಿ ಕಾಯತೊಡಗಿದರು. ಕೆಲವರಂತೂ ರೈಲು ತಮ್ಮ ಮನೆಯಂಗಳಕ್ಕೆ ಬರುತ್ತದೆನ್ನುವ ಹಾಗೆ ಸಂಭ್ರಮಪಟ್ಟರು.
ಭೋಜ ಶೆಟ್ಟಿ ಈ ತನಕ ರೈಲನ್ನು ನೋಡಿರದಿದ್ದರೂ ಅದು ಹಾಗೆ ಉಂಟು, ಹೀಗೆ ಉಂಟು ಎಂದು ಖುದ್ದಾಗಿ ತಾನೇ ನೋಡಿ ಬಂದ ಹಾಗೆ ದಾರಿಯಲ್ಲಿ ಹೋಗುವವರನ್ನು ಕರೆದು ಇಲ್ಲವೇ ತಡೆದು ತನಗೆ ಗೊತ್ತಿರುವುದನ್ನು ಗೊತ್ತಿರುವುದಕ್ಕಿಂತಲೂ ಹೆಚ್ಚಾಗಿ ವರ್ಣಿಸತೊಡಗಿದ. “ನಾನು ರೈಲು ಮಂಗಳೂರಿಗೆ ಬರುವ ದಿನವೇ ಹೋಗಬೇಕೆಂದಿದ್ದೇನೆ. ನೀವು ಬರುವುದಾದರೆ ಬನ್ನಿ” ಎಂದು ಮೀನಿನ ವ್ಯಾಪಾರಿ ಶೇಕಬ್ಬನನ್ನು, ಕಟ್ಟಿಗೆ ವ್ಯಾಪಾರಿ ಮೋಂತು ಪರ್ಬುವನ್ನು, ಅಲ್ಲದೆ ಇನ್ನು ನಾಲ್ಕಾರು ಮಂದಿಯನ್ನೂ ಭೋಜ ಶೆಟ್ಟಿ ಆಹ್ವಾನಿಸಿದ್ದ. ಆದರೆ ಅವರೆಲ್ಲ ಬಿಡಿ, ಇವನು ಆಹ್ವಾನಿಸಿದ ಯಾರೊಬ್ಬರೂ “ಶೆಟ್ಟರೇ, ನಿಮಗೇನು ಅವಸರ? ಒಮ್ಮೆ ಮಂಗಳೂರಿಗೆ ರೈಲು ಬರುವುದು ಪ್ರಾರಂಭವಾಯಿತೋ, ಆಮೇಲೆ ದಿನಾ ಅದು ಬಂದು ಹೋಗುತ್ತದಲ್ಲ? ಹೊಸತಾಗಿ ರೈಲು ಬರುವುದು ಪ್ರಾರಂಭವಾಯಿತೋ, ಆಮೇಲೆ ದಿನಾ ಅದು ಬಂದು ಹೋಗುತ್ತದಲ್ಲ? ಹೊಸತಾಗಿ ರೈಲು ಮಂಗಳೂರಿಗೆ ಬರುವ ದಿನ ಎಷ್ಟು ಜನ ಸೇರುತ್ತಾರೋ ಏನೋ. ಆ ಗಲಾಟೆಯಲ್ಲಿ ಯಾರ ಯಾರ ಕಾಲಡಿಗೆ ಬಿದ್ದು ನಮ್ಮ ಕೈಕಾಲು ಮುರಿಸಿಕೊಳ್ಳುವುದಕ್ಕಿಂತ ನಿಧಾನವಾಗಿ ಒಮ್ಮೆ ನಾವು ಹೋದರಾಯಿತು ಬಿಡಿ! ಎಂದು ಪ್ರತಿಯಾಡಿ, ಶೆಟ್ಟಿಯ ಜೊತೆಗೂಡಲು ನಿರಾಕರಿಸಿದರು. ‘ಹೌದಲ್ಲ?’ ಎಂದು ಭೋಜ ಶೆಟ್ಟಿಯೂ ರೈಲು ಮಂಗಳೂರಿಗೆ ಬರುವ ಮೊದಲೇ ದಿನವೇ ತಾನು ಮಂಗಳೂರಿಗೆ ಹೋಗಬೇಕೆಂಬ ನಿರ್ಧಾರದಿಂದ ಹಿಂದೆ ಸರಿದ.
ರೈಲು ಮಂಗಳೂರಿಗೆ ಬಂದು ಹೋದ ಸುದ್ದಿ, ಮಂಗಳೂರಿನಲ್ಲಿ ಜನವೋ ಜನ ಎಂಬ ವಿಷಯ, ಆ ದಿನಗಳಲ್ಲಿ ಯಾವ ವಾರ್ತಾಪತ್ರಿಕೆಗಳೂ ಇಲ್ಲದ್ದರಿಂದ ಒಬ್ಬರಿಂದ ಮತ್ತೊಬ್ಬರಿಗೆ ನಿಧಾನವಾಗಿ ಹಬ್ಬಿತು. ‘ಎಷ್ಟು ಜನರಿದ್ದರಂತೆ ಅಲ್ಲಿ?’ ಎಂದು ಒಬ್ಬರು ಕೇಳಿದರೆ, ಇನ್ನೊಬ್ಬರು ನಮ್ಮ, ‘ಉಳ್ಳಾಲದ ದರ್ಗಾದ ಜಾತ್ರೆಗಿಂತಲೂ ಹೆಚ್ಚು’ ಎಂದರು. ಮಗದೊಬ್ಬರು ‘ಮಂಜೇಶ್ವರದ ತೇರಿಗಿಂತ ಹೆಚ್ಚೇ?’ ಎಂದು ಪ್ರಶ್ನಿಸಿದರು. ಭೋಜ ಶೆಟ್ಟಿ ಇದಕ್ಕೆಲ್ಲ ತಲೆಕೆಡಿಸಿಕೊಳ್ಳದೆ, ರೈಲು ಸರ್ವಿಸ್ ಪ್ರಾರಂಭವಾಗಿ ವಾರ ಕಳೆದ ಮೇಲೆ, ಮಂಗಳೂರಿಗೆ ಹೋಗಿ ರೈಲ್ವೇ ಸ್ಟೇಶನಿನಲ್ಲಿ ಇಳಿದಾಗ, ಅದೇ ರೈಲಿನಿಂದ ತನ್ನ ದೂರದ ಬಂಧು ಉಪ್ಪಳದ ಸೀನಪ್ಪ ರೈಗಳೂ ಇಳಿಯುವುದು ಕಂಡಿತು. ‘ಏನು ಭಾವ?’ (ದಾನೆ ಭಾವ?) ಎಂದು ಇಬ್ಬರೂ ಕುಶಲ ವಿಚಾರಿಸಿಕೊಂಡ ಮೇಲೆ, ಇಬ್ಬರೂ ರೈಲಿನ ಪ್ರಯಾಣದ ಅನುಭವ ಹೇಗಿದೆ ಎಂದು ನೋಡಲಿಕ್ಕಾಗಿಯೇ ಮಂಗಳೂರಿಗೆ ಹೊರಟಿದ್ದು ಎಂದರೆ ತಾವು ಸಣ್ಣವರಾಗುತ್ತೇವೆ ಎಂದುಕೊಂಡು ಹೇಳದೇ ಉಳಿದರು. ಪರಸ್ಪರ ತಾವು ಬಂದ ಉದ್ದೇಶವನ್ನು ಮರೆ ಮಾಚಿದ ಹಾಗೆ ಬೇರೆ ಏನನ್ನೋ ಹೇಳಿಕೊಂಡರು. ‘ನನಗೆ ಬಂದರಿನಲ್ಲಿ ಕೆಲಸ’ ಎಂದು ರೈಗಳು ಹೇಳಿದರೆ ‘ನನಗೆ ರಥಬೀದಿಯಲ್ಲಿ’ ಎಂದ ಭೋಜಶೆಟ್ಟಿ. ಆದರೂ ಇಬ್ಬರೂ ಒಟ್ಟಿಗೆ – ಒಂದು ಕಾಫಿ ಕುಡಿಯುವುದು ಒಳ್ಳೆಯದು ಎಂಬ ಸಹಮತಕ್ಕೆ ಬಂದರು. ಆ ದಿನಗಳಲ್ಲಿ ಹಂಪನಕಟ್ಟೆಯಲ್ಲಿ, ಹಂಚು ಹೊದೆಸಿದ್ದ (ಉಳಿದ ಅನೇಕ ಕಟ್ಟಡಗಳಿಗೆ ಮುಳಿಹುಲ್ಲಿನ ಮಾಡು ಇತ್ತು). ವೆಂಕಟೇಶ ಪೈಗಳ (ಮಂಗಳೂರಿನಲ್ಲೇ ಮೊದಲನೆಯದೆನ್ನಬಹುದಾದ) ಕಾಫಿ ಹೋಟೇಲಿನೊಳಗೆ ಇಬ್ಬರೂ ಹೊಕ್ಕರು.
ಇಬ್ಬರೂ ಕಾಫಿ ತಿಂಡಿ – ಸ್ವೀಕರಿಸುತ್ತಿದ್ದ ಹಾಗೆ, ಸೀನಪ್ಪ ರೈ ‘ನಿಮ್ಮ ಸಾಂತೇರ್ ಗುತ್ತಿನ ಹುಡುಗಿಯೊಬ್ಬಳನ್ನು ಕೋಚ್ ಮನ್ ದೊರೆಯೊಬ್ಬ ಮದುವೆಯಾದರಂತೆ ಅಲ್ವಾ? ಆಮೇಲೆ ಗುತ್ತಿನ ಮನೆಗೆ ಪಠೇಲಿಕೆಯ ಸನದು, ತೋಟೆಯ ಕೋವಿಯ ಲೈಸನ್ಸ್ ಎಲ್ಲವೂ ಬಂತಂತೆ, ನಿಜವಾ?’ ಎಂದು ಪ್ರಶ್ನಿಸಿದರು, ಭೋಜ ಶೆಟ್ಟಿಯನ್ನು.
‘ಹೌದಪ್ಪಾ ಹೌದು!’ ಎಂದು ತುಸು ವಿಷಾದದಿಂದ, ಆಮೇಲೆ ವ್ಯಂಗ್ಯದಿಂದ ಭೋಜಶೆಟ್ಟಿ ಮಾತಿಗೆ ಪ್ರಾರಂಭಿಸಿದ. “ಹೊಳೆಯ ನೀರು ಬೆಟ್ಟಕ್ಕೆ ಹರಿಯುತ್ತಾ? ಸಮುದ್ರಕ್ಕಲ್ಲವೇ ಹೋಗುವುದು! ಗುತ್ತಿನ ಹುಡುಗಿಗಿಂತ ಎರಡು ಪಟ್ಟು ಚೆಂದದ ಹುಡುಗಿ ನಮ್ಮ ಮನೆಯಲ್ಲಿದ್ದಾಳೆ, ಅಂದರೆ ಯಾರು ಕೇಳುತ್ತಾರೆ? ಆದರೆ ನಾವು ಅದನ್ನು ಟಂಟಂ ಮಾಡಲಾಗುತ್ತದಾ? ಆ ದೊರೆ – ದಾರಿಯಲ್ಲಿ ಹೋಗುತ್ತಾ ಹೊನ್ನೆ ಮರದಲ್ಲಿ ಜೋಕಾಲಿ ಆಡುತ್ತಾ ಕುಳಿತಿದ್ದ ಆ ಕರಿ ಹುಡುಗಿಯನ್ನು ನೋಡಿ ಯಾಕೆ ಮರುಳಾದನೋ! ದೇವರಿಗೇ ಗೊತ್ತು. ಆಕೆ ಮರದಿಂದ ಜಿಗಿದು ಓಡಿದ್ದನ್ನು ನೋಡಿ ಆತ ‘ಶಹಭಾಸ್’ ಎಂದು ಅವಳನ್ನು ಮದುವೆಯಾಗಲು ಹೊರಟ ಅಂದರೆ ಹುಚ್ಚ ಎಂದೇ ಅರ್ಥ. ಗುತ್ತಿನ ಮನೆಯ ಹುಡುಗಿಗೆ ಗುತ್ತಿನಲ್ಲಿ ಮಾಡಲು ಏನೂ ಕೆಲಸ ಇರಲಿಲ್ಲ ಎಂದೇ ಜೋಕಾಲಿ ಆಡುತ್ತಾ ಕುಳಿತಿದ್ದಳು ಆಕೆ! ನಮ್ಮಂಥವರ ಮನೆಯ ಹುಡುಗಿಯರಿಗೆ ಇದಕ್ಕೆಲ್ಲ ಬಿಡುವೆಲ್ಲಿದೆ ಹೇಳಿ? ಅದೂ ಅಲ್ಲದೆ ಹಾಗೆಲ್ಲ ಜೋಕಾಲಿ ಆಡಿದರೂ, ಊರ ಮಂದಿ ಏನು ಹೇಳಿಯಾರು ಎಂಬ ಗೊಡವೆ ಬೇಡವೇ ಆಕೆಗೆ? ಗಂಡು ಬೀರಿ ಆಕೆ. ನಾಲ್ಕು ಜನ ಹೋಗುವ ದಾರಿಗೆ ಎದುರಾಗಿ ಪ್ರಾಯಕ್ಕೆ ಬಂದ ಮೇಲೆ ಜೋಕಾಲಿಯಾಡುವುದು ಎಷ್ಟು ಸರಿ ಹೇಳಿ? ಶ್ರೀಮಂತರ ಮನೆಯವರು ಏನು ಮಾಡಿದರೂ ನಡೆಯುತ್ತದೆ. ನಮ್ಮಂಥವರು ಮಾಡಿದರೆ, ‘ಹುಡುಗಿಯನ್ನು ಮಾರಾಟಕ್ಕೆ ಇಟ್ಟಿದ್ದಾರೆ ನೋಡಿ!’ ಎನ್ನುತ್ತಿರಲಿಲ್ಲವೇ ಜನ?’ ಎಂದು ಭೋಜ ಶೆಟ್ಟ ಆಡುತ್ತಿರುವಷ್ಟರಲ್ಲಿ,
‘ನೋಡಿ ಭಾವ, ಅದೆಲ್ಲ ಆ ಹುಡುಗಿಯ ಯೋಗ! ಇಷ್ಟಕ್ಕೂ ನಾವು ‘ಸಂಭ್ರಮ’ ಪಡುವಂಥಾದ್ದು ಏನು ಇದೆ ಇದರಲ್ಲಿ?’ ಎಂದು ಸೀನಪ್ಪ ರೈಗಳು ‘ಥತ್’ ಎಂದು ಎರಡು ಸಲ ಸೀನಿ, ಎಡದ ಕೈಯಿಂದ ಮೂಗನ್ನು ಒರಸಿಕೊಂಡು ತುಸು ತಗ್ಗಿದ ಸ್ವರದಲ್ಲಿ ಹೇಳಿದರು. “ಈ ದೊರೆಗಳ ಮರ್ಜಿ ನಿಮಗೆ ಗೊತ್ತುಂಟಾ? ಹೆಣ್ಣು ಅಂದರೆ ಅವರಿಗೆ ಬರೇ ಭೋಗದ ವಸ್ತು ಮಾರಾಯ! ನಾಲ್ಕು ದಿನ ರಾತ್ರೆ ಹಗಲು ಜೊತೆಯಲ್ಲಿ ಮಲಗಿಸಿಕೊಂಡು ಸಾಕು, ಇನ್ನು ನಡಿ ನಿನ್ನ ಮನೆಗೆ!” ಎನ್ನಲೂ ಹೇಸದ ಮಂದಿ ಅವರು. ಪ್ರತಿಭಟಿಸಲಿಕ್ಕಾಗುತ್ತದಾ ನಮಗೆ? ಬ್ರಿಟಿಷ್ ದೊರೆಗಳಲ್ಲವೇ ಅವರು!” ಎಂದು. ಆಮೇಲೆ ಒಂದು ನಿಮಿಷ ತಡೆದು, “ಚಿಕ್ಕಮಗಳೂರಿನಲ್ಲಿ ಒಬ್ಬ ದೊರೆ ಅಲ್ಲಿಯ ಗೌಡರ ಹುಡುಗಿಯನ್ನು ಹೀಗೆಯೇ ಮದುವೇ ಆಗಿ, ಆರೇ ತಿಂಗಳಲ್ಲಿ ಕೈ ಕೊಟ್ಟನಂತೆ. ಗೌಡರ ತೋಟಕ್ಕೆ ಆಳುಕಟ್ಟುವ, ನಮ್ಮ ಕಾರ್ಕಳದ ನಂಟನೊಬ್ಬ ಮೊನ್ನೆ ನಮ್ಮ ಮನೆಗೆ ಬಂದವನು ಹೇಳಿದ್ದು!” ಎಂದರು ಭೋಜಶೆಟ್ಟಿಯಲ್ಲಿ ಇಲ್ಲದ ಕುತೂಹಲ ಕೆರಳುವ ಹಾಗೆ.
‘ಹೌದಾ?’ ಎಂದು ಹೌಹಾರಿದ ಭೋಜ ಶೆಟ್ಟಿಗೆ ಒಳಗೊಳಗೇ ‘ಹಾಗಾಗದಿರಲಿ, ದೇವರೇ!’ ಎಂದೂ ಅನಿಸಿತು. ವಾಸ್ತವವಾಗಿ ಅವನಿಗೆ ಗುತ್ತಿನ ಮನೆಯ ಬಗ್ಗೆ ದ್ವೇಷ ಇದ್ದ ಹಾಗೆ ಇರಲಿಲ್ಲ. ತಾನು ಗುತ್ತಿನ ಮನೆಯ ಹೆಗ್ಡೆಯವರಿಗೆ ಸಮಾನ ಎಂಬ ಅಹಂಭಾವವೋ; ಅಥವಾ ಗುತ್ತಿನ ಮನೆಯವರು ಆಗಾಗ ತನ್ನನ್ನು ಕರೆದು, ಊರ ವಿಚಾರದಲ್ಲಿ “ಅದು ಹೇಗೆ? ಇದು ಹೇಗೆ?” ಎಂದು ಕೇಳುತ್ತಿಲ್ಲವಲ್ಲ ಎಂಬ ನೋವೋ ತನ್ನ ಅಸಹನೆಗೆ ಕಾರಣವಾಗಿರಬಹುದು, ಎನ್ನುವುದನ್ನು ಆತನೇ ತಿಳಿದಿರಲಿಲ್ಲ. ‘ಈ ಸೀನಪ್ಪ ರೈಗಳ ಮಾತನ್ನೇ ಊರಲ್ಲಿ ಒಂದಿಷ್ಟು ಟಾಂ ಟಾಂ ಮಾಡಿದರೆ ಗುತ್ತಿನ ಮನೆಯವರು ಹೆದರಿ ಕಂಗಾಲಾಗುತ್ತಾರೆ, ಮಾತ್ರವಲ್ಲ ಅದು ಎಂತದ್ದು ಭೋಜ?’ ಎಂದು ಅಲ್ಲಿಂದ ತನಗೆ ಕರೆಯೂ ಬಂದು ತನ್ನನ್ನು ಮತ್ತೆ ಆಗಾಗ ಮತ್ತೆ ಗುತ್ತಿನ ಮನೆಗೆ ಕರೆಸಿಕೊಳ್ಳುತ್ತಾರೆ, ಎಂಬ ಖುಶಿ ಆಯಿತು ಭೋಜ ಶೆಟ್ಟಿಗೆ.
ಇಬ್ಬರೂ ಹೊಟೇಲಿನಿಂದ ಹೊರಟು ನಿಂತರು. ಸೀನಪ್ಪ ರೈಗಳು, ತಾನು ಓದಿದ್ದ ಇಂಗ್ಲಿಷ್ ದೈನಿಕವನ್ನು (ದಿ ಹಿಂದೂ) ಮಡಚಿ ಕಂಕುಳಲ್ಲಿ ಇಟ್ಟುಕೊಂಡಿದ್ದನ್ನು ನೋಡಿದ ಭೋಜ ಶೆಟ್ಟಿಗೆ ತಾನೂ ಈ ಇಂಗ್ಲಿಷ್ ಪತ್ರಿಕೆಯನ್ನು ಕೈಯಲ್ಲಿ ಹಿಡಿದುಕೊಂಡರಾದೀತು ಅಂತಲೂ ಅನಿಸಿತು. ‘ನೀವು ಓದಿ ಆಯ್ತೇನು ಆ ಪೇಪರು?’ ಎಂದು ಭೋಜ ಶೆಟ್ಟಿ ಸೀನಪ್ಪ ರೈಗಳಿಗೆ. ರೈಗಳೂ ಹ್ಞೂ ಎಂದು ಪತ್ರಿಕೆಯನ್ನು ಭೋಜ ಶೆಟ್ಟಿಯೆಡೆಗೆ ಚಾಚಿ ತುಸು ಮುಜುಗರದಲ್ಲೇ ‘ನಿಮಗೆ ಇಂಗ್ಲಿಷ್ ಓದಲು ಬರುತ್ತದೇನು?’ ಎಂದು ಪ್ರಶ್ನಿಸಿದರು.
ಭೋಜ ಶೆಟ್ಟಿಗೆ ಮುಜುಗರವಾಯಿತು. ಅವನು ಆ ದಿನಗಳಲ್ಲಿ ಐದನೇ ಈಯತ್ತೆ ತನಕವಷ್ಟೇ ಶಾಲೆಗೆ ಹೋದದ್ದು. ಇಂಗ್ಲಿಷ್ ಪತ್ರಿಕೆ ಓದುವಷ್ಟು ಇಂಗ್ಲಿಷ್ ಜ್ಞಾನ ಇಲ್ಲದಿದ್ದರೂ ಅಲ್ಪಸ್ವಲ್ಪ ಇಂಗ್ಲಿಷಿನ ಶಬ್ದಗಳ ಜ್ಞಾನ ಅವನಿಗೆ ಇತ್ತು. ಏನೂ ಇಂಗ್ಲಿಷ್ ಜ್ಞಾನ ಇಲ್ಲದ ಮಂದಿಯ ಎದುರು ಅವನು ‘ಇಂಗ್ಲಿಷ್ ಮೆನ್’ (ಇಂಗ್ಲಿಷ್ ಬಲ್ಲವರೆಂದು) ಎಂದು ಮಾನ್ಯವಾಗಿದ್ದ. ಒಂದು ಇಂಗ್ಲಿಷ್ ಪತ್ರಿಕೆಯನ್ನು ವೃಥಾ ಬಿಸಾಕುವುದಕ್ಕಿಂತ, ಬಿಡುವಿದ್ದಾಗ ವಾರವೋ ಹದಿನೈದು ದಿನವೋ ಸ್ವಲ್ಪಸ್ವಲ್ಪ ಓದಿ ಇಂಗ್ಲಿಷ್ ಜ್ಞಾನ ಹೆಚ್ಚಿಸಿಕೊಳ್ಳಬಹುದೆಂಬ ಇರಾದೆ ಶೆಟ್ಟಿಯದ್ದು. ರೈಗಳು ನೇರವಾಗಿ ತನಗೆ ಇಂಗ್ಲಿಷ್ ಓದಲು ಬರುತ್ತದೇನು ಎಂದು ಕೇಳಿದ್ದು ಸರಿಯಲ್ಲ ಅನಿಸಿದರೂ ಉತ್ತರಿಸುವುದು ಅನಿವಾರ್ಯವಾದ್ದರಿಂದ ‘ಹ್ಞೂಂ ಸ್ವಲ್ಪ’ ಎಂದಷ್ಟೇ ಹೇಳಿ, ಅಲ್ಲಿಂದ ‘ಜಾರಿ’ಕೊಂಡ ಭೋಜ ಶೆಟ್ಟಿ.
ಸಂಜೆ ಉಳ್ಳಾಲದ ಕಮ್ತೀರ ಅಂಗಡಿಗೆ ಮಂಗಳೂರಿನಿಂದ ಬಂದಿಳಿದ ಭೋಜ ಶೆಟ್ಟಿಯನ್ನು ಕಮ್ತೀರು (ಕಾಮತರು) ಶೆಟ್ಟರ ಸವಾರಿ ಎತ್ತಲಿಂದ? ಎಂದು ಕೇಳುವಷ್ಟರಲ್ಲೇ ಭೋಜ ಶೆಟ್ಟ, ತನ್ನ ಮೊದಲ ರೈಲು ಪ್ರಯಾಣದ ಅನುಭವಗಳನ್ನೆಲ್ಲ ಅಲ್ಲಿದ್ದವರು ಕಣ್ಣು ಬಾಯಿ ಬಿಟ್ಟು ಕೇಳುವ ಹಾಗೆ ವಿವರಿಸಿದ. ಆಮೇಲೆ ‘ನೋಡಿ ಇಂಗ್ಲಿಷ್ ಪೇಪರು ಮದ್ರಾಸಿನಿಂದಲೇ ಬರುವುದು. ಇದರಲ್ಲೂ ಮಂಗಳೂರಿಗೆ ರೈಲು ಬಂದ ಸುದ್ದಿ ಬಂದಿದೆ!’ ಎಂದ. ಅಲ್ಲೇ ಇದ್ದು ಇದನ್ನೆಲ್ಲ ಗರಬಡಿದ ಹಾಗೆ ನಿಂತು ಕೇಳುತ್ತಿದ್ದ ಅಡಿಗೆ ಗೋವಿಂದಣ್ಣ ‘ನನಗೂ ಒಮ್ಮೆ ರೈಲಿನಲ್ಲಿ ಹೋಗಬೇಕು ಹಾಗಾದರೆ!’ ಎಂದು ಎದ್ದು ನಿಂತು ಸ್ವಲ್ಪ ಉಮೇದು ತೋರಿಸಿದನು.
‘ಖಂಡಿತ ಹೋಗಬೇಕು ಭಟ್ರೇ. ನೀವು! ಅಡಿಗೆಗೆ ಹೋಗುವವರಾದರೇನಾಯಿತು? ನಿಮ್ಮಂಥವರಿಗೂ ಈ ಅನುಭವ ಇರಲೇಬೇಕು. ನೀವು ಇನ್ನು ಮುಂದೆ ಮಂಗಳೂರಿಗೆ ಅಡಿಗೆಗೆ ಹೋಗುವುದಾದರೆ ಮುನ್ನಾದಿನವೇ ಹೋಗಬೇಕಾಗಿಲ್ಲ. ಬೆಳಗ್ಗಿನ ಎಂಟು ಗಂಟೆಯ ರೈಲಲ್ಲಿ ಹೋದರೆ ಸಾಕು!’ ಎಂಬ ಪುಕ್ಕಟೆ ಸಲಹೆ ಗೋವಿಂದಣ್ಣನಿಗೆ ಭೋಜ ಶೆಟ್ಟಿ ನೀಡಿದ.
‘ಹೌದಲ್ಲ. ಬರೋಬ್ಬರಿ. ಶೆಟ್ಟರೇ ತುಂಬ ಒಳ್ಳೇದಾಯ್ತು ಹಾಗಾದರೆ ನನಗೆ!’ ಎಂದು ಅಡಿಗೆ ಗೋವಿಂದಣ್ಣ ಕುತೂಹಲದಲ್ಲಿ ‘ರೈಲಲ್ಲಿ ಹೋಗಬೇಕಾದರೆ ಏನು ಮಾಡಬೇಕು?’ ಎಂದರು. ‘ಮಾಡಲಿಕ್ಕೆ ಎಂತದ್ದುಂಟು ಮಣ್ಣು? ರೈಲಿನಲ್ಲಿ ಹತ್ತಿ ಕುಳಿತರಾಯಿತು. ಆದರೆ ಮಂಗಳೂರು ಬಂತು ಅಂತ ಯಾರೂ ಹೇಳುವುದಿಲ್ಲ. ಅದು ನಿಂತ ಕೂಡಲೇ ನೀವು ಇಳಿದು ನಿಮ್ಮಷ್ಟಕ್ಕೇ ಹೋದರಾಯ್ತು ; ಅಷ್ಟೇ!’ ಎಂದ.
ಆ ದೊರೆ – ದಾರಿಯಲ್ಲಿ ಹೋಗುತ್ತಾ ಹೊನ್ನೆ ಮರದಲ್ಲಿ ಜೋಕಾಲಿ ಆಡುತ್ತಾ ಕುಳಿತಿದ್ದ ಆ ಕರಿ ಹುಡುಗಿಯನ್ನು ನೋಡಿ ಯಾಕೆ ಮರುಳಾದನೋ! ದೇವರಿಗೇ ಗೊತ್ತು. ಆಕೆ ಮರದಿಂದ ಜಿಗಿದು ಓಡಿದ್ದನ್ನು ನೋಡಿ ಆತ ‘ಶಹಭಾಸ್’ ಎಂದು ಅವಳನ್ನು ಮದುವೆಯಾಗಲು ಹೊರಟ ಅಂದರೆ ಹುಚ್ಚ ಎಂದೇ ಅರ್ಥ. ಗುತ್ತಿನ ಮನೆಯ ಹುಡುಗಿಗೆ ಗುತ್ತಿನಲ್ಲಿ ಮಾಡಲು ಏನೂ ಕೆಲಸ ಇರಲಿಲ್ಲ ಎಂದೇ ಜೋಕಾಲಿ ಆಡುತ್ತಾ ಕುಳಿತಿದ್ದಳು ಆಕೆ! ನಮ್ಮಂಥವರ ಮನೆಯ ಹುಡುಗಿಯರಿಗೆ ಇದಕ್ಕೆಲ್ಲ ಬಿಡುವೆಲ್ಲಿದೆ ಹೇಳಿ?
ಅಡಿಗೆ ಗೋವಿಂದಣ್ಣ – ವಾರದ ಮೇಲೆ ತಾನು ಹೋಗಬೇಕಾಗಿರುವ ಮಂಗಳೂರಿನ ವಕೀಲರ ಮನೆಯ ಅಡಿಗೆಗೆ ರೈಲು ಹತ್ತಿ ಹೋಗುವುದೆಂದು ಖುಶಿಯಿಂದ ಕನಸು ಕಾಣುತ್ತಾ ಹೊರಟು ಹೋದರು. ಇತ್ತ ಭೋಜ ಶೆಟ್ಟಿ ತುಸು ತಗ್ಗಿದ ಸ್ವರದಲ್ಲಿ ‘ಕಮ್ತಿಯವರೇ, ನಿಮಗೊಂದು ವಿಷಯ ಗೊತ್ತುಂಟಾ?’ ಚಿಕ್ಕಮಗಳೂರಿನಲ್ಲಿ, ಕೋಚ್ ಮೆನ್ ದೊರೆಯೊಬ್ಬ ಇಲ್ಲಿ ನಮ್ಮ ಗುತ್ತಿನ ಹುಡುಗಿಯನ್ನು ಮದುವೆಯಾದ ಹಾಗೆ, ಅಲ್ಲಿನ ಗೌಡರ ಹುಡುಗಿಯೊಬ್ಬಳನ್ನು ಮದುವೆಯಾಗಿ ಆರೇ ತಿಂಗಳಲ್ಲಿ ‘ಬೇಡ ನೀನು ಮನೆಗೆ ಹೋಗು!’ ಎಂದು ಕಳುಹಿಸಿದ್ದಾರಂತೆ. ನೋಡಿ, ಈ ಪೇಪರಿನಲ್ಲಿ ಆ ಸುದ್ದಿ ಬಂದಿದೆ! ಬೇಕಾದರೆ ಓದಿನೋಡಿ’ ಎಂದ.
ಕಾಮತರು – ನೀರುಳ್ಳಿ ಗಡ್ಡೆಗಳನ್ನು ಎತ್ತಿ ತ್ರಾಸಿನಲ್ಲಿ (ತಕ್ಕಡಿ) ಹಾಕಿ ತೂಗಲು ಹೊರಟಿದ್ದರು. ಒಂದು ಕ್ಷಣ ಬೆಪ್ಪಾಗಿ ನಿಂತು ‘ಹೌದಾ?’ ಎಂದು ಬಾಯಿ ಬಿಟ್ಟು ದೇವರೇ, ನಮ್ಮ ಗುತ್ತಿನ ಹುಡುಗಿಯ ಬಾಳು ಹಾಗಾಗದಿರಲಿ! ಎಂದು ತಾವು ನಂಬಿರುವ ಮುಲ್ಕಿ ವೆಂಕಟ್ರಮಣ ದೇವರನ್ನು ಮನಸ್ಸಿನಲ್ಲೇ ಒಂದು ನಿಮಿಷ ಧ್ಯಾನಿಸಿದರು. ‘ಈ ಬ್ರಿಟಿಷ್ ದೊರೆಗಳ ಮರ್ಜಿ ಹೇಳಲಿಕ್ಕಾಗುವುದಿಲ್ಲ ಮಾರಾಯರೇ. ನಿಜವೇ ಇರಬಹುದು. ತಪ್ಪಿಯೂ ಈ ಸುದ್ದಿಯನ್ನು ಗುತ್ತಿನವರ ಕಿವಿಗೆ ಹಾಕಬೇಡಿ. ಆ ಕೊರಪೊಲಿನ ತಾಯಿ ತುಂಗಕ್ಕೆ ಇದನ್ನೆಲ್ಲ ಕೇಳಿದರೆ ಎದೆ ಬಡಿದು ಸತ್ತಾರು ಜೋಕೆ!’ ಎಂದು ಭೋಜ ಶೆಟ್ಟಿಯನ್ನು ಎಚ್ಚರಿಸಿದರು.
‘ಅದಕ್ಕೇ ನಾನು ಯಾರಿಗೂ ಈ ವಿಚಾರ ಹೇಳಬಾರದು ಅಂತ ಮಾಡಿದ್ದೇನೆ’ ಎಂದ ಭೋಜಶೆಟ್ಟಿ ಅಂಗಡಿಯಲ್ಲಿ, ಜಿನಸಿ ಸಾಮಾನಿಗಾಗಿ ಬಂದು ಕಾದು ಕುಳಿತ ನಾಲ್ಕೈದು ಮಂದಿ ಗಿರಾಕಿಗಳನ್ನು ಉದ್ದೇಶಿಸಿ ಸ್ವಲ್ಪ ಗತ್ತಿನಲ್ಲಿ ‘ಬಾಯಿ ಬಿಟ್ಟರೆ ಜಾಗ್ರತೆ!’ ಎಂದು ಸಣ್ಣಗೆ ಗರ್ಜಿಸಿದ. ಆಮೇಲೆ ‘ನೀನು ಮೋಂಟನಲ್ವಾ? ನಿನ್ನ ಹೆಸರೇನು. ಬಿರ್ಕುಲನಾ? ಸರಿ’ ಎಂದು ಎಲ್ಲರ ಕುಲಗೋತ್ರ ವಿಚಾರಿಸಿದ ಹಾಗೆ ಮಾಡಿ, ಎಲ್ಲರೂ ‘ಇಲ್ಲ ಧನಿಗಳೇ, ನಮಗೆ ಯಾಕೆ ಗುತ್ತಿನ ಮನೆಯ ವಿಚಾರ?’ ಎಂದು ಕೈ ಮುಗಿದರು. ಭೋಜ ಶೆಟ್ಟಿ ಹಾಗೆ ಕೈಮುಗಿಸಿಕೊಂಡ ಖುಷಿಯಲ್ಲಿ ‘ನಾನು ಬರ್ತೇನೆ ಕಮ್ತೀರೇ’ ಎಂದು ಹೊರಟುಹೋದ.
ವಾರದ ಮೇಲೆ ಮಂಗಳೂರಿಗೆ ರೈಲಿನಲ್ಲೇ ಹೋಗಲು ನಿಶ್ಚಯಿಸಿದ್ದ ಅಡಿಗೆ ಗೋವಿಂದಣ್ಣ ‘ಸರಿ’ ಎಂದು ಹೊರಟೇಬಿಟ್ಟರು. ಹಾಗೇ ಹೋಗಿ ಮರಳಿ ಬರುತ್ತಾ “ಈ ರೈಲಿನ ಸಹವಾಸವೇ ಬೇಡ” ಎಂದು ಮರುದಿನ ನಡೆದುಕೊಂಡೇ ಬಂದರು. ಬಂದವರೇ ಕಮ್ತೀರ ಭಂಡಸಾಲೆಗೆ ಬಂದು ‘ಉಸ್ಸಪ್ಪ’ ಎಂದು ಕುಳಿತುಕೊಂಡರು. ಕಮ್ತೀರು ‘ಅರೇ, ನೀವು ರೈಲಿನಲ್ಲೇ ಹೋಗಬೇಕು ಎಂದವರು ನಡೆದುಕೊಂಡು ಬಂದ ಹಾಗೆ ಇದೆಯಲ್ಲ!’ ಎಂದು ಆಶ್ಚರ್ಯವ್ಯಕ್ತಪಡಿಸಿ ಕೇಳಿದಾಗ, ಗೋವಿಂದಣ್ಣ “ಕಾಮತರೇ, ಆ ಭೋಜ ಶೆಟ್ಟರ ಮಾತು ಕೇಳಿ ನಾನು ರೈಲಿನಲ್ಲಿ ಹೋದದ್ದು ಹೌದು. ಹೋಗುವಾಗ ತುಂಬಾ ಖುಶಿಯೂ ಆಯ್ತು. ಜುಗ್ ಬುಗ್ ಅಂತ ಅದು ಮುಂದೆ ಮುಂದೆ ಹೋಗುವಾಗ ನಾವು ಸಣ್ಣದಿರುವಾಗ ನಮ್ಮ ಅಮ್ಮ ತೊಟ್ಟಿಲು ತೂಗಿದ ಹಾಗೂ ಆಯ್ತು. ಅಷ್ಟೇ ಅಲ್ಲ – ಎಂತಹ ವೇಗ ಮಾರಾಯರೇ ಅದಕ್ಕೆ. ನೋಡುತ್ತಾ ನೋಡುತ್ತಾ ಇದ್ದ ಹಾಗೆ ನೇತ್ರಾವತಿ ಹೊಳೆ ಒಂದೇ ಕ್ಷಣದಲ್ಲಿ ಬಂತು! ಇಷ್ಟರವರೆಗೂ – ನದಿಯನ್ನು ದೋಣಿಯಲ್ಲೇ ದಾಟಿ ಗೊತ್ತಿರುವ ನಮಗೆ ಈಗ ರೈಲಿನಲ್ಲಿ – ನದಿಯ ಮೇಲೆ ಹೋಗುವಾಗ ಆದ ಮಜಾವೇ ಬೇರೆ. ಅಹ್ಹಾ ಅಹ್ಹಾ ಎಂದುಕೊಂಡೆ ನಾನು! ಅಷ್ಟೇ ಅಲ್ಲ. ರೈಲಿನಲ್ಲಿ ನಾವು ಹೋಗುವಾಗ, ರೈಲು ಮುಂದೆ ಮುಂದೆ ಹೋದ ಹಾಗೆ ಆಗದೇ ಮರ ಗಿಡ ಗುಡ್ಡ ಹೊಲಗಳೆಲ್ಲ ಹಿಂದೆ ಹಿಂದೆ ಹೋದ ಹಾಗೆ ಆಗುತ್ತದೆ ನೋಡಿ!’’ ಎಂದರು.
‘ಒಳ್ಳೇದಾಯ್ತು ಬಿಡಿ; ಹಾಗಾದರೆ! ನನಗೂ ಒಮ್ಮೆ ಹೋಗಬೇಕು’ ಎಂದರು ಕಾಮತರು. ಅಷ್ಟರಲ್ಲಿ ಗೋವಿಂದಣ್ಣ ಮುಖ ಸಪ್ಪೆ ಮಾಡಿಕೊಂಡು, “ಆದರೆ ನೋಡಿ, ರೈಲು ಇಳಿದು, ಅದೇನು ಸ್ಟೇಶನ್ನೋ ಗೀಶನ್ನೋ ಅಂತಾರಲ್ಲ ಸುಡುಗಾಡು, ಅದರಲ್ಲಿ ಉದ್ದಕ್ಕೂ ನಡೆದು ನಾನು ದೊಡ್ಡ ಗೇಟಿನಲ್ಲಿ ಹೊರಹೋಗಬೇಕು ಎನ್ನುವಾಗ ಪೋಲೀಸರ ಹಾಗೆ ಖಾಕಿ ಅಂಗಿ ಚಡ್ಡಿ ಹಾಕಿದವನೊಬ್ಬ ತಡೆದು ನಿಲ್ಲಿಸಿ ಎಲ್ಲಿ ಟಿಕೇಟು? ಅಂದ. ನನಗೇನು ಗೊತ್ತು ಟಿಕೇಟು ಬೇಕು ಎಂದು? ಭೋಜ ಶೆಟ್ರು ಹೇಳಲಿಲ್ಲ ಅಂದೆ!” ಅದಕ್ಕೆ ಅಂವ, ಇಂಗ್ಲಿಷೋ ಎಂಥದೋ ಒಂದು ಭಾಷೆಯಲ್ಲಿ ನನಗೆ ಬೈದು, “ನಿಲ್ಲಿ ಹೀಗೆ” ಎಂದು ನನ್ನನ್ನು ತಡೆದು ನಿಲ್ಲಿಸಿದ. ಬೆನ್ನುಹಾಕಿ ನಿಲ್ಲಿಸಿ ಆಮೇಲೆ ಬಲವಾಗಿ ಕುಂಡೆಗೆ ಒದ್ದು ಬಿಟ್ಟ. ಆ ಒದೆ ಎಷ್ಟು ಜೋರಿತ್ತೆಂದರೇ, ನಾನು ಮುಂದೆ ಹೋಗಿ ಮುಗ್ಗರಿಸಿ ಬಿದ್ದೆ!’’ ಎಂದರು.
ಕಾಮತರಿಗೆ ನಗಬೇಕು ಅನಿಸಿದರೂ, ನಗಲಾಗಲಿಲ್ಲ. ಪಾಪ ಅನಿಸಿ, ‘ಛೇ, ಭೋಜ ಶೆಟ್ರು – ಟಿಕೇಟ್ ತೆಗೆದುಕೊಂಡು ಹೋಗಬೇಕು ಎಂದು ನಿಮಗೆ ಅನ್ನದೇ ಇದ್ದದ್ದು ದೊಡ್ಡ ತಪ್ಪಾಯಿತು ಭಟ್ರೇ’ ಎಂದು, ರೈಲ್ವೇ ಪ್ರಯಾಣದ ಮಾಹಿತಿಗಳನ್ನೆಲ್ಲ ವಿವರಿಸಿ ಹೇಳಿದರು. ಆಮೇಲೆ ‘ಟಿಕೇಟು ತೆಗೆಯದೆ ಹೋಗಬೇಡಿ’ ಎಂದೂ ಎಚ್ಚರಿಸಿದರು.
ಗೋವಿಂದಣ್ಣ ರೈಲು ಪ್ರಯಾಣದಲ್ಲಿ ಕುಂಡೆಗೆ ತುಳಿಸಿಕೊಂಡ ವಾರ್ತೆ ನಿಧಾನವಾಗಿ ಒಂಬತ್ತುಕೆರೆಯಲ್ಲಿ ಹಬ್ಬಿತು, ಕೆಲವರು ಬಿದ್ದು ಬಿದ್ದು ನಕ್ಕರೆ, ಇನ್ನು ಕೇಲವರು ‘ಹೌದಾ?’ ಎಂದು ಅಚ್ಚರಿಪಟ್ಟರು. ಒಬ್ಬಿಬ್ಬರು ರೈಲು ಬಂದ ಮಾತ್ರಕ್ಕೆ, ಅದರಲ್ಲಿ ಹೋಗುವ ಮರುಳು ಯಾಕೆ ಬೇಕಿತ್ತು ಈ ಭಟ್ಟರಿಗೆ ಕೈಕಾಲು ಗಟ್ಟಿ ಇರುವಾಗ? ಎಂದದ್ದೂ ಆಯಿತು.
ಈ ಸುದ್ದಿಯ ಬೆನ್ನಿಗೇ ಭೋಜ ಶೆಟ್ಟಿ ಯಾರಿಗೂ ಹೇಳಬೇಡಿ ಎಂದು ಹೇಳಿದ ರಹಸ್ಯ ವಾರ್ತೆಯೂ ಕೂಡಾ ‘ಯಾರಿಗೂ ಹೇಳಬೇಡಿ’ ಎಂಬಂತೆ ಒಬ್ಬರಿಂದ ಇನ್ನೊಬ್ಬರಿಗೆ ಹಬ್ಬಿತು. ಗುತ್ತಿನ ಅಂಗಳದಲ್ಲೂ ಅದು ಗುಜುಗುಜು ಅಂತ ಸದ್ದು ಮಾಡಿತು. ಶ್ಯೂ, ಹೇಳಬೇಡಿ, ಆ ವಿಚಾರ ಮಾತನಾಡಬೇಡಿ ಎಂದು ಗುತ್ತಿನ ಅಂಗಳದಲ್ಲಿ ಸೇರುತ್ತಿದ್ದವರೆಲ್ಲ ಪರಸ್ಪರ ಎಚ್ಚರಿಸಿದ್ದನ್ನು ಮೀರಿಯೂ ಅದು ತುಂಗಕ್ಕೆಯ ಕಿವಿಗೂ ಗರ್ನಾಲಿನ ಸದ್ದಿನ ಹಾಗೆ ಬಂದು ಅಪ್ಪಳಿಸಿತು.
ತುಂಗಕ್ಕೆಗೆ ಅನ್ನ ನೀರು ಸೇರಲಿಲ್ಲ. ಸುಮ್ಮನೇ ಹೋಗಿ ತನ್ನ ಕೋಣೆಯಲ್ಲಿ ಮಲಗಿಕೊಂಡರು. ಏನು? ಎಂದು ಮನೆಮಂದಿ ಬಂದು ಕೇಳಿದರೆ, ಮೊದಲಿಗೆ ‘ಏನೂ ಇಲ್ಲ!’ ಎಂದರು. ಆಮೇಲೆ ಬರೀ ಕಣ್ಣೀರು ಹರಿಸತೊಡಗಿದರು. ಇದು ಗುತ್ತಿನ ಯಜಮಾನ ವೆಂಕಪ್ಪ ಹೆಗ್ಡೆಯವರ ಕಿವಿಗೂ ಮುಟ್ಟಿತು. ಖುದ್ದಾಗಿ ಅವರೇ ಹೋಗಿ ‘ಅಪ್ಪೆ ತುಂಗಕ್ಕೆ’ (ತಾಯಿ ತುಂಗಮ್ಮ) ಎಂದು ಪ್ರೀತಿಯಿಂದ ಸಂಬೋಧಿಸಿ ತಲೆ ನೇವರಿಸಿ ‘ಗಡಿಪತ್ತಿನಾರರಲ್ಲೂ ಹೇಳದ ಕಷ್ಟವೇನಮ್ಮ ನಿನಗೆ?’ ಎಂದು ಕೇಳಿದಾಗ ತುಂಗಕ್ಕೆಯ ಕೊರಗೆಲ್ಲ ಕಟ್ಟೆ ಒಡೆದು ಬಂತು. ‘ಕೋಚ್ ಮೆನ್ ದೊರೆಯೊಬ್ಬ ತಾನು ವರಿಸಿದ ನಮ್ಮ ಜಾತಿಯ ಹುಡುಗಿಯನ್ನು ಮೊನ್ನೆ ಬೇಡ ಎಂದು ತಿರಸ್ಕರಿಸಿ ಬಿಟ್ಟನಂತಲ್ಲ? ಅದು ನಮ್ಮ ಕೊರಪೊಲೇ ಆಗಿದ್ದರೇ?’ ಎಂದು ತನ್ನ ಕೊರಗನ್ನು ವ್ಯಕ್ತಪಡಿಸಿ ಗೋಳೋ ಎಂದು ಅಳಲು ಪ್ರಾರಂಭಿಸಿದರು. ಮೊದಲಿಗೆ, ‘ಎಲ್ಲಾದರೂ ಉಂಟೇ?’ ಎಂದ ವೆಂಕಪ್ಪ ಹೆಗ್ಡೆ ಹಾಗೇನಾಗಿರಲು ಸಾಧ್ಯವಿಲ್ಲ ಎಂದುಕೊಂಡರೂ, ಕೆಲಸದಾಳುಗಳನ್ನೆಲ್ಲ ಕರೆಸಿ, ‘ಯಾರು ಹೇಳಿದ್ದು ನಿಮಗೆ, ಎಲ್ಲಿ ಕೇಳಿದಿರಿ?’ ಎಂದೆಲ್ಲ ವಿಚಾರಿಸಿದರು.
ಮೊದಲಿಗೆ ಯಾರು ಯಾರಿಗೆ ಹೇಳಿದರು ಎಂಬುದು ಖಚಿತವಾಗದಿದ್ದರೂ ವೆಂಕಪ್ಪ ಹೆಗ್ಡೆಯವರು ಒಬ್ಬೊಬ್ಬರನ್ನೇ ಕರೆದು ಕೇಳಿದಾಗ, ಅದು ಕಮ್ತೀರ ಅಂಗಡಿಯಿಂದ ತಿಳಿದು ಬಂದದ್ದು ಎಂದಾಯಿತು. ‘ಸರಿ, ಅವರನ್ನೇ ಕರೆಸಿ ಖಚಿತ ಮಾಡೋಣ’ ಎಂದು ಮೂಲದಾಳನ್ನು ಕಮ್ತೀರ ಅಂಗಡಿಗೆ ಕಳುಹಿಸಿದರು. ಖುದ್ದಾಗಿ ಒಮ್ಮೆ ಗುತ್ತಿನ ಮನೆಗೆ ಬಂದು ಹೋಗಬೇಕಂತೆ ಎಂಬ ಆದೇಶದೊಂದಿಗೆ.
ತನ್ನ ಅಂಗಡಿಯಲ್ಲಿ ಉಳ್ಳಾಲದ ಬೆಲ್ಲದಚ್ಚುಗಳನ್ನು ಗೋಣಿಯಿಂದ ತೆಗೆದು ಗುಡಾಣಕ್ಕೆ ತುಂಬುತ್ತಿದ್ದ ಕಮ್ತೀರು, ಗುತ್ತಿನ ಮನೆಯ ಕರೆಬಂದ ತತ್ ಕ್ಷಣ, ಬೆಲ್ಲದ ಅಂಟು ಬೆರಳುಗಳಲ್ಲಿ ಇದ್ದರೂ ಅದನ್ನು ತೊಳೆಯದೇ ಉಟ್ಟಬಟ್ಟೆಗೆ ಕೈ ಒರಸಿಕೊಂಡು ಹಕ್ಕಿ ಹಾರಿಬಂದ ಹಾಗೆ ಗುತ್ತಿನ ಮನೆಯ ಚಾವಡಿಯಲ್ಲಿ ಹಾಜರಾದರು.
ತಲೆಗೆ ಕೈ ಇಟ್ಟು ಕುಳಿತಿದ್ದ ವೆಂಕಪ್ಪ ಹೆಗ್ಡೆಯವರು ಕಮ್ತೀರನ್ನು ನೋಡಿದವರೇ ಕಣ್ಣಂಚಿನಲ್ಲಿ ನೀರು ತುಂಬಿಕೊಂಡು ವಿಷಯವನ್ನೆಲ್ಲ ಬಿಡಿಸಿ ಹೇಳಿ, “ಆ ಭೋಜ ಶೆಟ್ಟಿ ನಿಮ್ಮ ಅಂಗಡಿಯಲ್ಲಿ ಇಂಗ್ಲಿಷ್ ಪೇಪರಿನಲ್ಲಿ ಇದ್ದುದನ್ನು ಓದಿ ಹೇಳಿದ್ದು ಹೌದಾ?” ಎಂದರು ಆತಂಕದಲ್ಲಿ.
“ಓದಿ ಹೇಳಿದ್ದು ಹೌದು. ಆದರೆ ಅದು ಕೊರಪೊಲಿನ ವಿಷಯ ಅಲ್ಲ. ಬೇರೆ ಯಾರದ್ದೋ ಕತೆ. ಅದಕ್ಕೆ ನೀವು ಇಷ್ಟು ಚಿಂತಿಸುವುದು ಏಕೆ? ಇಷ್ಟಕ್ಕೂ ನನಗೆ ಇಂಗ್ಲಿಷ್ ಬರುವುದಿಲ್ಲ. ನಾನು ನೋಡಿದ್ದೂ ಇಲ್ಲ. ಓದಿದ್ದೂ ಇಲ್ಲ. ಆ ಪಟಾಕಿ ಭೋಜ ಶೆಟ್ಟಿಯ ಮಾತು ಕೇಳಿ ನೀವು ಯಾಕೆ ಇಷ್ಟು ಕೊರಗಬೇಕು?’’ ಎಂದು ವೆಂಕಪ್ಪ ಹೆಗ್ಡೆಯವರಿಗೆ ಕಮ್ತೀರು ಸಾಂತ್ವನ ಹೇಳಿದರು.
ಕಮ್ತೀರ ಮಾತಿಗೆ ಪ್ರತಿಕ್ರಿಯೆ ವ್ಯಕ್ತಪಡಿಸದ ಹೆಗ್ಡೆಯವರು ಕಮ್ತೀರನ್ನು ಎಳನೀರು ಕೊಟ್ಟು ಕಳುಹಿಸಿದರೂ, “ಭೋಜ ಶೆಟ್ಟಿ ಮಾತಿನಲ್ಲಿ ಪಟಾಕಿ ಇರಬಹುದು. ಆದರೆ ಸುಮ್ಮನೇ ಹೇಳಲಾರ” ಎಂದುಕೊಂಡರು. ರಾತ್ರೆ ಊಟ ಮಾಡದೆ, ಬರೇ “ಒಂದು ಲೋಟ ಹಾಲು ಕೊಡು” ಎಂದು, ಎಂದೂ ಹಾಲು ಕುಡಿಯದ ಹೆಗ್ಡೆಯವರು, ಹಾಲು ಕುಡಿದು ಅಷ್ಟರಲ್ಲೇ ತೃಪ್ತರಾದವರಂತೆ ಹೋಗಿ ತಮ್ಮ ಕೋಣೆಯಲ್ಲಿ ಮಲಗಿಕೊಂಡರು.
ಮರುದಿನ ಬೆಳಿಗ್ಗೆ ಎದ್ದ ವೆಂಕಪ್ಪ ಹೆಗ್ಡೆಯವರು ನಿತ್ಯ ಕರ್ಮಗಳನ್ನೆಲ್ಲ ತೀರಿಸಿ ಜುಮಾದಿ ದೈವಕ್ಕೆ ಹೂನೀರು ಇಟ್ಟು ಕೈ ಮುಗಿದರು. ಆಮೇಲೆ ಅಲ್ಲೇ ನಿಂತು ತುಂಗಕ್ಕೆ ಎಂದು ಕೂಗಿ ಕರೆದರು. ತುಂಗಕ್ಕೆ ರಾತ್ರಿ ನಿದ್ದೆಗೆಟ್ಟು ಆಗ ತಾನೇ ಎದ್ದು ಬಂದಿದ್ದರಷ್ಟೆ. ಆಕೆಗೆ ಅದು ಕೇಳಿಸಲ್ಲಿಲ. ‘ಗುತ್ತಿನಾರ್ ಕೂಗುತ್ತಿದ್ದಾರೆ ನೋಡಿ’ ಎಂದು ಗುತ್ತಿನ ಮನೆಯ ಹಿಂಬದಿಯಲ್ಲಿ ಮಾತನಾಡಿಕೊಂಡಿದ್ದವರು ಆಕೆಯನ್ನು ಕೂಗಿ ಹೇಳಿದರು. ಚಾವಡಿಗೆ ಮನೆಮಂದಿ ಎಲ್ಲಾ ಧಾವಿಸಿ ಬರುತ್ತಿದ್ದಂತೆ, ಗುತ್ತಿನಾರು ಕೋಚ್ ಮೆನ್ ದೊರೆ ಉಡುಗೊರೆಯಾಗಿ ನೀಡಿದ್ದ ಕೋವಿಯನ್ನು ಕೈಯಲ್ಲಿ ಹಿಡಿದು ಅದರ ನಡುಮುರಿದು ಗುಂಡು ತುಂಬುತ್ತಿದ್ದರು. ಅದನ್ನು ನೋಡಿದವರೇ, ‘ಅಯ್ಯೋ ದೇವರೇ, ಓ ತುಂಗಕ್ಕಾ, ಬನ್ನಿ ಬೇಗ’ ಎಂದು ಎಲ್ಲರೂ ಕೂಗಿಕೊಳ್ಳುತ್ತಿರುವಷ್ಟರಲ್ಲಿ ಗುತ್ತಿನಾರ್, ನಾಲ್ಕೂ ಸುತ್ತ ನೋಡಿ ‘ಎಲ್ಲಿ ತುಂಗಕ್ಕೆ?’ ಎಂದು ಆವೇಶಭರಿತರಾದರು. ಚಾವಡಿಗೆ ಕಾಲಿಡುತ್ತಿದ್ದ ತುಂಗಕ್ಕೆಯನ್ನು ಕಂಡ ಅವರು “ನಾನು ಕುಟುಂಬ ದ್ರೋಹಿ ತುಂಗಕ್ಕ! ಇನ್ನು ಬದುಕಿರಬಾರದು. ಸಾಯಲೇಬೇಕು. ನೀನು ಗುಂಡು ಹೊಡಿ, ಇಲ್ಲವೇ ನಾನೇ ಈಡು ಮಾಡಿಕೊಂಡು ಸಾಯುತ್ತೇನೆ” ಎಂದು ಕೋವಿಯನ್ನು ತುಂಗಕ್ಕೆಯತ್ತ ಚಾಚಿದರು. ತುಂಗಕ್ಕೆಯೂ ಸೇರಿದಂತೆ ಗುತ್ತಿನ ಚಾವಡಿಯಲ್ಲಿದ್ದವರೆಲ್ಲ ‘ಇದೇನು ಗುತ್ತಿನಾರ್ ಮಾಡುತ್ತಿರುವುದು?’ ಎಂದು ತರ್ಕಿಸುವಷ್ಟರಲ್ಲಿ, ಗುತ್ತಿನಾರ್ ರ ದೇಹವಿಡೀ ಕಂಪಿಸಿದಂತಾಯಿತು. ಕೋವಿ ಹಿಡಿದುಕೊಂಡಿದ್ದ ಅವರು ಹಾಗೆಯೇ ದಿಢೀರಾಗಿ ಕುಸಿದುಬಿದ್ದರು. ಗುತ್ತಿನ ಚಾವಡಿಯಲ್ಲಿ ಬೊಬ್ಬೇಯೇ ಬೊಬ್ಬೆ. ‘ಅಯ್ಯೋ, ಇದೇನು? ಏನಾಯಿತು ಹೆಗ್ಡೆಯವರಿಗೆ?’ ಎನ್ನುವವರು ಕೆಲವರಾದರೆ, ಒಮ್ಮೆ ಬನ್ನಿರೋ – ಎಲ್ಲರೂ ಎನ್ನುವವರು ಇನ್ನು ಹಲವರು. ಆಗಲೇ ಅಂಗಳದಲ್ಲಿದ್ದ ಆಳುಕಾಳುಗಳು, ಅಡಿಗೆ ಮನೆಯಲ್ಲಿದ್ದ ಅಡಿಗೆಯಾಳುಗಳು ಎಲ್ಲರೂ ಚಾವಡಿಗೆ ಓಡಿ ಬಂದರು. ಮೂಲದಾಳುಗಳು ಚಾವಡಿಯೊಳಗೆ ಕಾಲಿಡಲಾರದೆ ಅಂಗಳದಲ್ಲೇ ನಿಂತು ಕುತ್ತಿಗೆ ಉದ್ದ ಮಾಡಿ ‘ದೇವರೇ ಉಳ್ಳಾಯ (ಯಜಮಾನ)ನನ್ನು ಕಾಪಾಡಿ’ ಎಂದು ಮೊರೆ ಇಡಹತ್ತಿದರು.
ಯಾರಿಗೂ ಏನೂ ಮಾಡಬೇಕು ಎಂದು ತಿಳಿಯದ ಸ್ಥಿತಿಯಲ್ಲಿ ಒಬ್ಬರು ಹೆಗ್ಡೆಯವರ ಮುಖಕ್ಕೆ ನೀರು ಚಿಮುಕಿದರೆ, ಇನ್ನೊಬ್ಬರು ಅವರ ತಲೆಯನ್ನು ತಮ್ಮ ತೊಡೆಯ ಮೇಲಿಟ್ಟುಕೊಂಡರು. ಗುತ್ತಿನ ಕೆಲಸಗಾರರಲ್ಲೇ ಹಿರಿಯವನಾದ ಮುದ್ದು ಪೂಜಾರಿ ತನ್ನ ಹೆಗಲಿನಲ್ಲಿದ್ದ ಶಲ್ಯದಿಂದ ಗಾಳಿ ಹಾಕತೊಡಗಿದ. ಇದೆಲ್ಲದರಿಂದ ನಿಧಾನವಾಗಿ ಕಣ್ಣು ತೆರೆದ ಹೆಗ್ಡೆಯವರು ಮಾತನಾಡಲು ಎಂಬಂತೆ ಬಾಯಿ ತೆರೆದರು. ಆದರೆ ಮಾತು ಬರಲಿಲ್ಲ. ಎದ್ದು ಕುಳಿತುಕೊಳ್ಳಲೂ ಪ್ರಯತ್ನಿಸಿ ನೋಡಿದರು. ಆಗಲಿಲ್ಲ. ಸುಮ್ಮನೇ ಮಿಕಮಿಕ ಕಣ್ಣು ಬಿಟ್ಟು ಮಲಗಿದ ಅವರನ್ನು ನೋಡಿದ ಗುಂಪಿನಲ್ಲಿದ್ದವರೊಬ್ಬ ‘ಅವರ ಎಡಕೈ ಎತ್ತಿ ನೋಡಿ’ ಎಂದ. ತುಂಗಕ್ಕೆ ಎತ್ತಲು ಹೋದರೇ, ಆ ಕೈಯಲ್ಲಿ ಶಕ್ತಿ ಇಲ್ಲದ ಹಾಗೇ ಆಗಿ ಹೋಗಿತ್ತು. ಅಷ್ಟರಲ್ಲಿ ಆತನೇ ಮುಂದೆ ಬಂದು ಹೆಗ್ಡೆಯವರ ಎಡದ ಕಾಲನ್ನು ಎತ್ತಲು ಪ್ರಯತ್ನಿಸಿದ. ಅದನ್ನೂ ಆತನಿಗೆ ಎತ್ತಲಾಗಲಿಲ್ಲ. ಆತ ನಿಧಾನವಾಗಿ ಹಿಂದೆ ಸುರಿದು ‘ತುಂಗಕ್ಕೆ ಸ್ವಲ್ಪ ಇಲ್ಲಿ ಬನ್ನಿ’ ಎಂದು ಕರೆದು ‘ಗುತ್ತಿನಾರಿಗೆ ಕಡಪ್ಪು (ಪಕ್ಷಾಘಾತ) ಆದ ಹಾಗಿದೆ’ ಎಂದ ಮೆತ್ತಗೆ.
ಡಾ. ಬಿ. ಜನಾರ್ದನ ಭಟ್ ಟಿಪ್ಪಣಿ:
‘ಕೋಚ್ ಮೆನ್ ದೊರೆಗಳ ಮದುವೆ’ ಎನ್ನುವ ಕಥಾಭಾಗ ಡಾ. ನಾ. ಮೊಗಸಾಲೆ ಅವರ ‘ಉಲ್ಲಂಘನೆ’ (2008) ಕಾದಂಬರಿಯಿಂದ ಆಯ್ದ ಭಾಗ. ಅವರ ಇನ್ನೊಂದು ಬೃಹತ್ ಕಾದಂಬರಿ ‘ಮುಖಾಂತರ’ದಲ್ಲಿ ಗಾಂಧೀಜಿಯವರ ಅನುಯಾಯಿ ‘ಟೊಪ್ಪಿ ಶಂಭಟ್ಟ’ ಪಾತ್ರ ಬರುತ್ತದೆ. ಮಂಗಳೂರಿನಲ್ಲಿ ಸ್ವಾತಂತ್ರ್ಯ ಹೋರಾಟದ ಚಿತ್ರಗಳು ಬರುತ್ತವೆ. ಆ ಭಾಗದಲ್ಲಿ ‘ಮುಖಾಂತರ’ ಕಾದಂಬರಿಯ ಕೆಲವು ಪುಟಗಳನ್ನು ಕೊಡಲಾಗುವುದು. ಪ್ರಸ್ತುತ ಭಾಗ ದೇಶದಲ್ಲಿ ಯಾವುದೇ ಸ್ವಾತಂತ್ರ್ಯ ಹೋರಾಟ ರೂಪುಗೊಳ್ಳದೆ ಇದ್ದ ‘ಅಂಧಕಾರ’ ಯುಗದ ಕತೆ.
ಉಡುಪಿ ಜಿಲ್ಲೆಯ ಕಾಂತಾವರದಲ್ಲಿ ನೆಲೆಸಿರುವ ಡಾ. ನಾ. ಮೊಗಸಾಲೆ (1944) ಅಲ್ಲಿ ಸರಕಾರಿ ವೈದ್ಯಾಧಿಕಾರಿಯಾಗಿದ್ದರು, ಈಗ ನಿವೃತ್ತರು. ಸಮಗ್ರ ಕತೆಗಳು ಸೇರಿ 7 ಕಥಾ ಸಂಕಲನಗಳು, ಸಮಗ್ರ ಕಾವ್ಯ ಸಂಪುಟಗಳು ಸೇರಿ 13 ಕವನ ಸಂಕಲನಗಳು, 17 ಕಾದಂಬರಿಗಳು, 6 ಸಂಪಾದಿತ ಕೃತಿಗಳು ಮತ್ತು 6 ವೈದ್ಯಕೀಯ ಕೃತಿಗಳನ್ನು ಅವರು ಪ್ರಕಟಿಸಿದ್ದಾರೆ. ಕಾಂತಾವರ ಕನ್ನಡ ಸಂಘದ ಸ್ಥಾಪನೆ ಮತ್ತು ಅದರ ಮೂಲಕ ಅವರು ನಡೆಸಿದ ಚಟುವಟಿಕೆಗಳು ಉಡುಪಿ ಜಿಲ್ಲೆಯ ಸಾಹಿತ್ಯ ಚಟುವಟಿಕೆಗಳ ಇತಿಹಾಸದ ಒಂದು ಉಜ್ವಲ ಅಧ್ಯಾಯವಾಗಿದೆ.
ಈ ಕಥಾಭಾಗದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ರಿಟಿಷ್ ಸರಕಾರದ ‘ಸ್ಥಿರವಾದ’ ಆಳ್ವಿಕೆಯ ಕಾಲದ ಚಿತ್ರಣ ಪ್ರಾರಂಭವಾಗುತ್ತದೆ. (ಹುರುಳಿ ಭೀಮರಾಯರ ‘ಮುರುಕು ದಂಬೂಕು’ ಕೂಡ ಈ ಭಾಗಕ್ಕೆ ಸೇರಬಹುದಾದ ಕಥನ). ಕಲ್ಯಾಣಪ್ಪನ ಕ್ರಾಂತಿಯ ಕಾಲದಲ್ಲಿ ಸರಿಯಾದ ಶಸ್ತ್ರಗಳಿಲ್ಲದೆ ಮಂಗಳೂರಿನತ್ತ ಧಾವಿಸಿದ ರೈತರ ಸೇನೆಯನ್ನು ಕಂಡು ಬ್ರಿಟಿಷರು ಗಾಬರಿಬಿದ್ದು ಓಡಿಹೋದರೆಂದರೆ ಅವರ ಆಳ್ವಿಕೆ ಅಲ್ಲಿಯವರೆಗೆ ದುರ್ಬಲವೇ ಆಗಿತ್ತು ಎನ್ನುವುದು ಸ್ಪಷ್ಟ. ಅಥವಾ ಈ ಜಿಲ್ಲೆ ಶಾಂತಿಪ್ರಿಯರ ಜಿಲ್ಲೆ ಎಂದು ಅಂದಾಜಿಸಿ ನಿರ್ಲಕ್ಷಿಸಿರಲೂ ಬಹುದು.
ಬ್ರಿಟಿಷ್ ಸರಕಾರದಡಿ ದಕ್ಷಿಣ ಕನ್ನಡ ಜಿಲ್ಲೆ : 1837 ರ ನಂತರ 1857 ರ ಭಾರತದ ಮೊದಲನೆಯ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಜಿಲ್ಲೆಯಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಆಡಳಿತ ಗಟ್ಟಿಯಾಯಿತು. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯಿಂದ ಬ್ರಿಟಿಷ್ ಸರಕಾರಕ್ಕೆ ಅಧಿಕಾರ ಹಸ್ತಾಂತರವಾದದ್ದು ಈ ಜಿಲ್ಲೆಯಲ್ಲಿ ಮಹತ್ತರವಾದ ಬದಲಾವಣೆಯನ್ನು ತರಲಿಲ್ಲ. ಹಾಗಾಗಿ ಈ ಜಿಲ್ಲೆಯ ಮಟ್ಟಿಗೆ 1800 ರಿಂದ 1947 ರವರೆಗೆ ಒಂದೇ ಬಗೆಯ ವಸಾಹತುಶಾಹಿ ಆಡಳಿತ ಇತ್ತು ಎನ್ನಬಹುದು.
ಬ್ರಿಟಿಷರು ಜಿಲ್ಲೆಯನ್ನು ಎರಡು ಡಿವಿಷನ್ ಗಳಾಗಿ ವಿಂಗಡಿಸಿದ್ದರು. ತಾಲೂಕು, ಮಾಗಣೆ, ಗ್ರಾಮ ಮತ್ತು ವರ್ಗ – ಇವುಗಳು ಉಪವಿಭಾಗಗಳು. ಜಿಲ್ಲಾಧಿಕಾರಿಯ ಕಛೇರಿಯಲ್ಲಿ ಶಿರಸ್ತೇದಾರ, ಗುಮಾಸ್ತ, ಮುನ್ಷಿ, ಎಕೌಂಟೆಂಟ್ ಇತ್ಯಾದಿ ಸಿಬ್ಬಂದಿಗಳಿರುತ್ತಿದ್ದರು. ತಾಲೂಕು ಕಛೇರಿಗಳಲ್ಲಿ ತಹಶೀಲ್ದಾರರ ನಂತರ ಡೆಪ್ಯುಟಿ ತಹಶೀಲ್ದಾರ್, ಪೇಷ್ಕಾರ್, ಶಿರಸ್ತೇದಾರ್, ಗುಮಾಸ್ತ ಮುಂತಾದ ಸಿಬ್ಬಂದಿಗಳಿರುತ್ತಿದ್ದರು. ಹಳ್ಳಿಗಳಲ್ಲಿ ಪಟೇಲ, ಶಾನುಭೋಗ ಮತ್ತು ಉಗ್ರಾಣಿಗಳಿರುತ್ತಿದ್ದರು. ಮಣೆಗಾರರು ಶಾನುಭೋಗರ ಕೆಲಸದ ಮೇಲುಸ್ತುವಾರಿ ವಹಿಸುತ್ತಿದ್ದವರು.
ಬ್ರಿಟಿಷರ ಆಡಳಿತ ಬಹಳ ಶಿಸ್ತಿನಿಂದ ಕೂಡಿತ್ತು. ಪೋಲೀಸರು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದರು. ಗ್ರಾಮದಲ್ಲಿ ಪಟೇಲರೇ ಸರಕಾರದ ಪ್ರತಿನಿಧಿಯಾಗಿದ್ದುದರಿಂದ ಊರಿನಲ್ಲಿ ಏನೇ ಅಪರಾಧ ನಡೆದರೂ ಅವನು ಸರಕಾರಕ್ಕೆ ವರದಿ ಸಲ್ಲಿಸಬೇಕಿತ್ತು. ಆಗ ಪೋಲೀಸರು ಅಗತ್ಯವಿದ್ದರೆ ಬಂದು ಅಪರಾಧದ ತನಿಖೆ ನಡೆಸುತ್ತಿದ್ದರು. ಪಟೇಲ, ಶಾನುಭೋಗರಿಗೆ ಸಹಾಯಕನಾಗಿ ಉಗ್ರಾಣಿ ಎಂಬ ಡಿ ದರ್ಜೆಯ ನೌಕರನಿರುತ್ತಿದ್ದ. ಅವನು ಅಟೆಂಡರನಾಗಿಯೂ, ಗ್ರಾಮ ಪೋಲೀಸನಾಗಿಯೂ, ಹಿಂದಿನ ಕಾಲದ ಕೊತವಾಲನಂತೆಯೂ ಕಾರ್ಯನಿರ್ವಹಿಸುತ್ತ ಸರಕಾರ ಮತ್ತು ಜನರ ನಡುವಿನ ಕಟ್ಟ ಕಡೆಯ ಕೊಂಡಿಯಾಗಿರುತ್ತಿದ್ದ.
ಭೂಮಿ ಹಕ್ಕು ಹಾಗೂ ಕಂದಾಯ ವಸೂಲಿ : ದಕ್ಷಿಣ ಕನ್ನಡದಲ್ಲಿ ಮನ್ರೋ ಆಡಳಿತ ವಹಿಸಿಕೊಂಡಾಗ ಎಲ್ಲ ಕಡೆಗಳಲ್ಲಿಯೂ ಸಣ್ಣ ಸಣ್ಣ ರೈತರು ಇದ್ದರು. ಭೂಮಿಹಕ್ಕುಗಳ ದಾಖಲೆಗಳೂ ಅವರಲ್ಲಿದ್ದವು. ಆ ಹಕ್ಕುಗಳು ಅವರಿಗೆ ಹೇಗೆ ಬಂದವೆಂದು ಹೇಳಲಾಗದಷ್ಟು ಜಟಿಲತೆ ಇತ್ತು, ಐತಿಹಾಸಿಕ ಆಧಾರಗಳಿರಲಿಲ್ಲ. ಈ ಹಕ್ಕುಗಳನ್ನು ವರ್ಗ ಎಂದು ಕರೆಯುತ್ತಿದ್ದರು (ತ್ಯಾಂಪಣ್ಣ ವರ್ಗ, ಸುಬ್ರಾಯ ವರ್ಗ ಇತ್ಯಾದಿ ಹೆಸರುಗಳ ವರ್ಗಗಳಿದ್ದವು). ಸುಮಾರು 14 ನೆಯ ಶತಮಾನದಲ್ಲಿ ಕೃಷಿ ಹಿಡುವಳಿಗಳನ್ನು ವರ್ಗಗಳಾಗಿ ವಿಂಗಡಿಸಲಾಗಿತ್ತು ಎಂದು ತಿಳಿದುಬರುತ್ತದೆ. ಮನ್ರೋ ಆ ಹಕ್ಕುಗಳನ್ನು ಊರ್ಜಿತಗೊಳಿಸಿ ಅವರವರಿಗೆ ಭೂಮಿಯ ಪಟ್ಟಾ ನೀಡಲು ಆದೇಶಿಸಿದ್ದ.
ಬ್ರಿಟಿಷರು ಹಣದ ರೂಪದಲ್ಲಿ ತೆರಿಗೆ ನೀಡಬೇಕೆಂದು ವಿಧಿಸಿದ ಕಾರಣ ಮತ್ತು ತೆರಿಗೆ ಅತಿಯಾಗಿದ್ದ ಕಾರಣ ಸಣ್ಣ ಸಣ್ಣ ರೈತರಿಗೆ ಅದನ್ನು ತೆರುವುದು ಕಷ್ಟವಾಗುತ್ತಿತ್ತು. ಆಗ ಹುಟ್ಟಿಕೊಂಡ ಒಂದು ಪ್ರಭಾವೀ ವರ್ಗವೇ ಬಡ್ಡಿಗೆ ಹಣ ಕೊಡುವ ಲೇವಾದೇವಿಗಾರರದ್ದು. ತೆರಿಗೆ ವಸೂಲಿ ನಡೆಯುವ ಸ್ಥಳಗಳಲ್ಲಿ ಆಸ್ತಿಯನ್ನು ಅಡವಿಟ್ಟುಕೊಂಡು ಬಡ್ಡಿಗೆ ಸಾಲ ಕೊಡುವ ಬಡ್ಡಿವ್ಯಾಪಾರಿಗಳು ಅಥವಾ ಅವರ ಶಾನುಭೋಗರು ಹಾಜರಿರುತ್ತಿದ್ದರು. ಕೆಲವೊಮ್ಮೆ ತೆರಿಗೆ (ಇದಕ್ಕೆ ಕಿಸ್ತ್ / ಕಿಸ್ತು ಎಂದು ಹೆಸರು) ವಸೂಲಿ ಮಾಡುವ ಪಟೇಲ, ಶಾನುಭೋಗರೇ ಹಣವನ್ನು ಸಾಲವಾಗಿ ಕೊಡುತ್ತಿದ್ದುದುಂಟು.
ಸಾಲದ ಉರುಳಿಗೆ ಸಿಕ್ಕಿದ ರೈತರು ಕೆಲವೇ ವರ್ಷಗಳಲ್ಲಿ ತಮ್ಮ ಆಸ್ತಿಗಳನ್ನು ಕಳೆದುಕೊಂಡು ಗೇಣಿದಾರರಾಗಿಬಿಡುತ್ತಿದ್ದರು. ಹೀಗಾಗಿ ಶ್ರೀಮಂತ ವರ್ತಕರ, ಲೇವಾದೇವಿಗಾರರ ಮತ್ತು ಜಮೀನುದಾರರ ಕೈಯಲ್ಲಿ ಅಗಾಧ ಗಾತ್ರದ ಆಸ್ತಿಗಳು ಸಂಗ್ರಹವಾದವು. ಬಡ್ಡಿವ್ಯಾಪಾರಿ ಕುಟುಂಬಗಳಿಗೆ (ಹೆಚ್ಚಾಗಿ ಗೌಡ ಸಾರಸ್ವತ ವ್ಯಾಪಾರಿಗಳು, ನಂತರ ಶ್ರೀಮಂತ ಬಂಟರು, ಜೈನರು, ಬ್ರಾಹ್ಮಣರು – ಇವರು ಹಣವನ್ನು ಬಡ್ಡಿಗೆ ನೀಡುತ್ತಿದ್ದರು) ದೂರ ದೂರದ ಊರುಗಳಲ್ಲಿಯೂ ಆಸ್ತಿ ದೊರಕಿದುದಕ್ಕೆ ಇದೇ ಕಾರಣ. ಈ ರೀತಿ ಗುತ್ತಿನವರೂ, ಪಟೇಲರೂ, ಶಾನುಭೋಗರೂ ಇತರ ಶ್ರೀಮಂತರೂ ದೊಡ್ಡ ದೊಡ್ಡ ಹಿಡುವಳಿಗಾರರಾದರು. ದೊಡ್ಡ ಗುತ್ತಿನವರು ಮತ್ತು ಕೃಷಿಕ ಜಮೀನುದಾರರನ್ನು ಬಿಟ್ಟರೆ ಆಸ್ತಿಗಳ (ಇದರ ಮೂಲ ‘ಅಸೆಟ್’ ಎಂಬ ಇಂಗ್ಲಿಷ್ ಶಬ್ದ) ಒಡೆಯರಾದ ವರ್ತಕರು ಮತ್ತು ಶ್ರೀಮಂತರು (ಇವರು ಹೊಂದಿದ್ದ ಆಸ್ತಿ ಬೇರೆ ಊರುಗಳಲ್ಲಿರುತ್ತಿದ್ದುದು ಸಾಮಾನ್ಯವಾಗಿತ್ತು) ಸ್ವತಃ ಕೃಷಿ ಮಾಡುತ್ತಿರಲಿಲ್ಲ ಅಥವಾ ಮಾಡಿಸುತ್ತಿರಲಿಲ್ಲ. ಅವರು ತಮ್ಮ ಗದ್ದೆಗಳನ್ನು ರೈತರಿಗೆ ಬೇಸಾಯ ಮಾಡಲು ಗೇಣಿಗೆ (ವರ್ಷಂಪ್ರತಿ ಧಾನ್ಯ ಮತ್ತಿತರ ಕೃಷ್ಯುತ್ಪನ್ನಗಳ ಮೂಲಕ ಸಂದಾಯ ಮಾಡಬೇಕಾದ ಪ್ರತಿಫಲ) ಕೊಡುತ್ತಿದ್ದರು. ಆಗ ಮೂಲಗೇಣಿ ಮತ್ತು ಚಾಲಗೇಣಿ ಎಂಬ ಎರಡು ಬಗೆಯ ಗೇಣಿ ಹಕ್ಕುಗಳು ಪ್ರಧಾನವಾಗಿ ಚಾಲ್ತಿಗೆ ಬಂದವು.
ಮೂಲ ಗೇಣಿ : ಜಮೀನಿನ ಮೂಲ ಒಡೆಯರು ಸಾಲ ಪಡೆದು ಹಿಂದಿರುಗಿಸಲಾಗದೆ ಆಸ್ತಿಯ ಒಡೆತನವನ್ನು ಕಳೆದುಕೊಂಡ ಸಂದರ್ಭಗಳಲ್ಲಿ, ಸಾಲ ನೀಡಿದವರು ಜಮೀನನ್ನು ಮಾರಾಟ ಮಾಡುವ ಹಕ್ಕನ್ನು ಬಿಟ್ಟು ಉಳಿದ ಎಲ್ಲಾ ಒಡೆತನ, ವಂಶಪಾರಂಪರ್ಯ ಹಕ್ಕುಗಳನ್ನು ಮೂಲ ಒಡೆಯರಿಗೆ ಬಿಟ್ಟುಕೊಟ್ಟು, ವರ್ಷಂಪ್ರತಿ ಗೇಣಿಯನ್ನು ಮಾತ್ರ ಸ್ವೀಕರಿಸುತ್ತಿದ್ದ ಪದ್ಧತಿ ಇದು. ಮೂಲಗೇಣಿ ಆಧಾರದಲ್ಲಿ ಆಸ್ತಿಗಳನ್ನು ಹೊಂದಿದ್ದವರು ತಾವೇ ಕೃಷಿ ಮಾಡದೆ ಗದ್ದೆಗಳನ್ನು ಮಾತ್ರ ಚಾಲಗೇಣಿಗೆ ರೈತರಿಗೆ ವಹಿಸಿಕೊಡುತ್ತಿದ್ದುದೂ ಉಂಟು.
ಚಾಲಗೇಣಿ : ತಾತ್ಕಾಲಿಕವಾದ, ಯಾವಾಗ ಬೇಕಾದರೂ ಗೇಣಿದಾರ ರೈತನನ್ನು ಹೊರಡಿಸಬಹುದಾದ ಗೇಣಿ ಪದ್ಧತಿಯಿದು. ಸಾಮಾನ್ಯವಾಗಿ ವರ್ಷ ವರ್ಷವೂ ಗೇಣಿಚೀಟು ಎಂಬ ಒಪ್ಪಂದ ಪತ್ರದ ಆಧಾರದಲ್ಲಿ ರೈತರಿಗೆ ಆಸ್ತಿಯನ್ನು ಕೃಷಿ ಮಾಡಲು ನೀಡಬೇಕಾಗಿತ್ತು. ಅವರು ನಿರ್ದಿಷ್ಟ ಗೇಣಿಯನ್ನು ಧನಿಗೆ ಕೊಡಬೇಕಾಗಿತ್ತು. ಸರಕಾರದ ದಾಖಲೆಗಳಲ್ಲಿ ಧನಿಯ ಹೆಸರೇ ಇರುತ್ತಿತ್ತು ಹೊರತು ಗೇಣಿದಾರ (ಅಥವಾ ಸ್ಥಳೀಯ ಪರಿಭಾಷೆಯಲ್ಲಿ ‘ಒಕ್ಕಲಿನವನು’) ಯಾವುದೇ ಭದ್ರತೆ ಅಥವಾ ದಾಖಲೆಗೆ ಅರ್ಹನಾಗಿರಲಿಲ್ಲ. ಗೇಣಿಚೀಟು ಒಂದೇ ಅವನ ಬಳಿ ಇರುತ್ತಿದ್ದ ದಾಖಲೆ.
ಗುತ್ತುಗಳ ಸ್ಥಿತಿ : ಮೊದಲು ಊರುಗಳಲ್ಲಿ ಪ್ರಬಲವಾಗಿದ್ದ ಗುತ್ತುಗಳಿಗೆ ಸರಕಾರದ ಮಾನ್ಯತೆ ಇರಲಿಲ್ಲ. ಆದರೆ ಗುತ್ತಿನವರನ್ನೇ ಪಟೇಲರನ್ನಾಗಿ ಮಾಡಿದ ಉದಾಹರಣೆಗಳೇ ಹೆಚ್ಚಾಗಿದ್ದುದರಿಂದ ಅಂತಹ ಗುತ್ತಿನವರು ಆಡಳಿತಾತ್ಮಕವಾಗಿಯೂ ಪ್ರಭಾವಶಾಲಿಗಳಾಗಿ ಉಳಿದುಕೊಂಡರು. (ಟಿಪ್ಪುಸುಲ್ತಾನನ ಕಾಲದಲ್ಲಿದ್ದ ಪಟೇಲರು ತಮಗೆ ನಿಷ್ಠಾವಂತರಾಗಿರಲು ಒಪ್ಪಿದರೆ ಅವರನ್ನೇ ಪಟೇಲರನ್ನಾಗಿ ಬ್ರಿಟಿಷರು ನೇಮಕ ಮಾಡಿದ್ದರು). ಅಲ್ಲದೆ ಗುತ್ತಿನವರು ತಮ್ಮ ಹಿಡುವಳಿಗಳನ್ನು ಹಿಗ್ಗಿಸಿಕೊಂಡು ದೊಡ್ಡ ದೊಡ್ಡ ಜಮೀನುದಾರರಾಗಿ ಬೆಳೆದುದರಿಂದ ಅವರ ವೈಭವ ಹಿಂದಿನಂತೆಯೇ ಉಳಿದುಕೊಂಡು ಬಂತು. ದೈವ ದೇವರುಗಳ ಆರಾಧನೆಯಲ್ಲಿ, ಕಟ್ಟು ಕಟ್ಟಳೆಗಳಲ್ಲಿ ಗುತ್ತಿನವರ ಸ್ಥಾನಮಾನಕ್ಕೆ ಸಾಮಾಜಿಕವಾಗಿ ಇದ್ದ ಪ್ರಾಧಾನ್ಯ ಕಡಿಮೆಯಾಗಲಿಲ್ಲ.
ನಾಲ್ಕು ಬಗೆಯ ರೈತರು : ಎನ್. ಶ್ಯಾಮ ಭಟ್ ಅವರು ವಸಾಹತು ಕಾಲದಲ್ಲಿ ನಾಲ್ಕು ಬಗೆಯ ರೈತರಿದ್ದುದನ್ನು ಗುರುತಿಸಿದ್ದಾರೆ. 1. ತಾವು ಕೆಲಸ ಮಾಡದೆ ಕೃಷಿ ಕಾರ್ಮಿಕರಿಂದ ಕೆಲಸ ಮಾಡಿಸುವ ಜಮೀನುದಾರರು 2. ಶ್ರೀಮಂತ ಕೃಷಿಕರು. ಇವರು ಕೃಷಿ ಕಾರ್ಮಿಕರ ಜತೆಗೆ ತಮ್ಮ ಮನೆಯವರನ್ನು ಕೂಡಾ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. 3. ಸಣ್ಣ ರೈತರು ಮತ್ತು ಗೇಣಿದಾರರು. 4. ಭೂರಹಿತ ಕೃಷಿ ಕಾರ್ಮಿಕರು. ಇವರು ಹೆಚ್ಚಾಗಿ ಕೆಳವರ್ಗದವರಾಗಿರುತ್ತಿದ್ದರು.
ಅರ್ಥ ವ್ಯವಸ್ಥೆ : ಬ್ರಿಟಿಷರು ಜಿಲ್ಲೆಯ ಕೃಷಿ ವ್ಯವಸ್ಥೆ ಮತ್ತು ಭೂಕಂದಾಯವನ್ನು ಸಂಗ್ರಹಿಸುವುದೇ ತಮ್ಮ ಪರಮಗುರಿ ಎಂದು ಆಡಳಿತವನ್ನು ನಡೆಸಿದರು. ಅವರ ಆಡಳಿತ ಯಂತ್ರವೇ ತೆರಿಗೆ ಸಂಗ್ರಹಕ್ಕಾಗಿ ದುಡಿಯುತ್ತಿತ್ತು. ಆನುಷಂಗಿಕವಾಗಿ ನ್ಯಾಯಾಂಗ, ಪೋಲೀಸ್ ವ್ಯವಸ್ಥೆ, ಶಿಕ್ಷಣ, ರಸ್ತೆ ಮುಂತಾದ ಮೂಲಭೂತ ಸೌಕರ್ಯಗಳ ವೃದ್ಧಿ ಮುಂತಾದವುಗಳಿಗೆ ಅವರು ಅಗತ್ಯವಿದ್ದಷ್ಟು (ಅಷ್ಟೇ) ಗಮನವನ್ನು ಕೊಡುತ್ತಿದ್ದರು. ಬಾಸೆಲ್ ಮಿಷನ್ ಮತ್ತು ರೋಮನ್ ಕೆಥೋಲಿಕರ ಮುತುವರ್ಜಿಯಿಂದ ಇಲ್ಲಿ ಶಿಕ್ಷಣ ವ್ಯವಸ್ಥೆ ಉತ್ತಮವಾಗಿ ಬೆಳೆಯಿತು ಹೊರತು ಸರಕಾರದ ಶ್ರಮ ಅದರಲ್ಲಿ ಕಡಿಮೆಯೇ. ಕೃಷಿಯನ್ನು ಹೊರತು ಪಡಿಸಿದ ಇತರ ಉದ್ದಿಮೆಗಳಿಗೆ ಕೂಡಾ ಸರಕಾರ ಗಮನಕೊಟ್ಟದ್ದಿಲ್ಲ. ಬಾಸೆಲ್ ಮಿಷನ್ ಮತ್ತು ಖಾಸಗಿ ವ್ಯಕ್ತಿಗಳ ಸಾಧನೆಯಿಂದ ಇಲ್ಲಿ ಉದ್ಯಮಗಳು ನಿಧಾನವಾಗಿ ಬೆಳೆದವು.
ಬ್ರಿಟಿಷರ ಕಾಲದಲ್ಲಿ ಕೃಷಿಯೇ ಪ್ರಧಾನವಾಗಿತ್ತು. ಈ ಕ್ಷೇತ್ರ ಬಹಳ ಸಮೃದ್ಧವಾಗಿದ್ದರೂ ಇದರಲ್ಲಿ ದುಡಿಯುತ್ತಿದ್ದವರು ಬಡವರು ಹಾಗೂ ಅನಕ್ಷರಸ್ಥರಾಗಿಯೇ ಉಳಿಯುತ್ತಿದ್ದರು.
ಸರಕಾರದ ಭಯ : ಒಟ್ಟಿನಲ್ಲಿ ಬ್ರಿಟಿಷರ ಆಡಳಿತ ವ್ಯವಸ್ಥೆ, ನ್ಯಾಯಾಂಗಗಳು ತಪ್ಪಿತಸ್ಥರನ್ನು ಬಹಳ ಕಠಿಣವಾಗಿ ಶಿಕ್ಷಿಸುತ್ತಿದ್ದುದರಿಂದ ‘ಸರಕಾರದ ಭಯ ಸರ್ವರಿಗೂ’ ಇತ್ತು. ಜನರಿಗೆ ನೆಮ್ಮದಿಯಿಂದ ಬದುಕಬಹುದಾದ ಭದ್ರತೆಯನ್ನು ಸರಕಾರ ನೀಡುತ್ತಿತ್ತು. ಜನರ ಆರ್ಥಿಕ ಪರಿಸ್ಥಿತಿ ಬಹಳ ಕಡಿಮೆ ಮಟ್ಟದಲ್ಲಿದ್ದರೂ ಜನರಿಗೆ ಅದಕ್ಕೆ ಕಾರಣ ಪರಕೀಯ ಸರಕಾರ ಎಂದು ಗೊತ್ತಾಗುವ ಸಾಧ್ಯತೆ ಇರಲಿಲ್ಲ.
ಬ್ರಿಟಿಷ್ ದೊರೆಗಳ ಮರ್ಜಿ : ಅಂತೂ ಬ್ರಿಟಿಷರು ಈ ಜಿಲ್ಲೆಯನ್ನು ಆಳಲು ಬಂದರು. ಇಲ್ಲಿನ ದೊರೆಗಳೇ ಆದರು. ಬ್ರಿಟಿಷ್ ಅಧಿಕಾರಿಗಳನ್ನು ‘ದೊರೆಗಳು’ ಎಂದೂ, ಅವರ ಪತ್ನಿಯರನ್ನು ‘ಧೊರೆಸಾನಿ’ ಎಂದೂ ಕರೆಯುವುದು ವಾಡಿಕೆಯಾಗಿತ್ತು. ಅವರನ್ನೇ ಪಾತ್ರವಾಗುಳ್ಳ ಕತೆ ಕಾದಂಬರಿಗಳನ್ನು ಕೂಡಾ ಈ ಜಿಲ್ಲೆಯ ಕತೆಗಾರರು ಬರೆದಿದ್ದಾರೆ. ಬ್ರಿಟಿಷ್ ಅಧಿಕಾರಿಗಳು ಈ ಜಿಲ್ಲೆಯ ಜನರಲ್ಲಿ ಭಯ ಭಕ್ತಿಯನ್ನು ಪ್ರೇರೇಪಿಸುವಂತೆ ಗತ್ತು ಗೈರತ್ತುಗಳನ್ನು ಪ್ರದರ್ಶಿಸುತ್ತಿದ್ದುದು, ಅವರ ಒಳ್ಳೆಯತನ, ದುಷ್ಟತನ, ಅಹಂಕಾರ, ಸ್ಥಳೀಯ ದೈವದೇವರುಗಳನ್ನು ಧಿಕ್ಕರಿಸಿ ಕಷ್ಟಕ್ಕೆ ಒಳಗಾದುದು – ಇಂತಹವುಗಳೆಲ್ಲ ಇಲ್ಲಿನ ಕತೆಗಳಲ್ಲಿ ದಾಖಲಾಗಿವೆ. ದೊರೆಗಳು ಮತ್ತು ದೊರೆಸಾನಿಗಳ ಮರ್ಜಿಗಳನ್ನು ಚಿತ್ರಿಸಿರುವ ಕೆಲವು ಕತೆಗಳನ್ನು ಉಲ್ಲೇಖಿಸುವುದಾದರೆ ಡಾ. ನಾ. ಮೊಗಸಾಲೆಯವರ ‘ಉಲ್ಲಂಘನೆ’ ಕಾದಂಬರಿಯಲ್ಲಿ ಕೋಚ್ ಮೆನ್ ಎಂಬ ದೊರೆಗಳ ಮದುವೆ ಸಾಂತೇರ್ ಗುತ್ತಿನ ಒಬ್ಬಳು ಹೆಣ್ಣುಮಗಳೊಂದಿಗೆ ಆಗುತ್ತದೆ, ಮತ್ತು ಆ ಕಾರಣದಿಂದ ಗುತ್ತಿನವರಿಗೆ ಪಟೇಲಿಕೆ ಸಿಗುತ್ತದೆ. ಈ ಕಥಾನಕವು ಸಾಂಕೇತಿಕವೂ ಅರ್ಥಪೂರ್ಣವೂ ಆಗಿದೆ.
ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82.