ಅಸಾವರಿ ತೋಡಿ ಎಂಬ ರಾಗವ ಪಾಡಿ

ಬಗೆ ಬಗೆ ಮೊಗೆ ಮೊಗೆ
ಯಾವ ತಡುವಾಟ ಎಂಥ ಮಿಡಿವಾಟ
ತಳ ತರವ ಬಗೆವ ಒಳಗ ಬೆಡಗಾಟ
ಒದ್ದೆಗೊಂಡ ಮಗು ನೆನೆನೆನೆದು ದುಃಖಿಸುವ ಪರಿಯಲ್ಲಿ
ಅಡಗು ದುರಿತಗಳೆಲ್ಲ ತಡವಿಸಿಕೊಂಡು ಉಸಿರ ಪಡೆವಂತೆ
ಕರುಳ ಮುಟ್ಟುವ ದನಿಗೆ ಜಗದ ಜೀವ ಪಸೆ

ಯಾಕೆ ನಿಲ್ಲುವವೋ ದಿಕ್ಕುಗಾಣದೆ ಸ ರಿ ದಕ್ಷರಗಳು
ಆರ್ದ್ರ ಎದೆಯನೊತ್ತಿಬಿಟ್ಟರೆ ಎಂಬ ಕೋಮಲ ಭಯದಲ್ಲಿ
ಒರಟುಗೊಂಡರೆ ಎಂಬ ದೂರ ದುಗುಡದಲ್ಲಿ
ಇಡುವುದೆಂತು ಹೆಜ್ಜೆ ಅವೇ ಏಳು ಹೆಜ್ಜೆ
ಯಾರ ಅರಿವೊಳಗೆ ಮರೆವೊಳಗೆ ಕರೆಯೊಳಗೆ
ಬರುವುದೆಂತು ಹೊರಗೆ ಅವೇ ಏಳು ಹೆಜ್ಜೆ
ಕರುಳಿಂದ ನೆರಳಿಂದ ಭಾವದೊರಳಿಂದ

ಎಲ್ಲರೊಳಗಿನ ಮಗು ನೋಡುತ್ತಿರುವುದು ಏನು
ಒರೆಸುವ ಬೆರಳುಗಳ ಮುಂದೆ ಊರು ಕಾಯುವುದೇನು
|
ಬೆಳಕಿಗೆ ಬಿದ್ದ ಹನಿ ಮಳೆಯ ಬಿಲ್ಲಾಗಿ ಇಳೆಯ ಬಣ್ಣಗೋಲಾಗಿ
ಬಾಗಿ ನೋವ ತೂಗಿ ಕನಸಾಗಿ ಮಾಯಕಾರ ಮಿಂಚಾಗಿ
ನಿಂದು ನಿಂದಲ್ಲದ ಜಗವ ನೀಗಲು ಸಜ್ಜಾಗಿ ಇರುವಲ್ಲಿ
ಆಗಸದಲ್ಲಿ
ಎಲ್ಲಿಂದ ಬಂದ ಈ ಜೋಗಿ
ಮಳೆಬಿಲ್ಲನೇರುವ ಯೋಗಿ ಯಾಕಾಗಿ
ಕರುಣೆಯೂ ಬಾಗುವಂತೆ ತಲೆಬಾಗಿ ದನಿಬಾಗಿ
ನಮ್ಮ ತೋಲಕೆ ತನ್ನ ಲಯವಿಟ್ಟು
ಅವೇ ಅಕ್ಷರಗಳ ನೇವರಿಸಿ ಹಿಡಿದು ದಾಟಿಸಬಂದವನಂತೆ
ಅನಂತದೇಣಿಯನು ಏಳರ ಮಗ್ಗಿಗೆ ಪೋಣಿಸಿದವನಂತೆ
ಏಳು ಮಗುವೇ ಏಳು
ಏಳು ಮನವೇ ಏಳು
ಕೂಡಿ ಕಳೆಯಲೇಳು ಗುಣಿಸಿ ಭಾಗಿಸಲೇಳು
ಏಳು ಮಲೆಯ ದಾಟುವಲ್ಲಿ ಎದೆಯ ದೈವವೂ ಏಳು ಬೀಳುವುದೇನು
|
ಯಾರ ಕಣ್ಣೀರು ಜಾರದಂತೆ ಕೈ ನೀಡಿ
ಜೀವ ಜಾಡಿನ ಜೋಡಿ ಹಾಡಿಕೊಂಡು ತೋಡಿ
ಕಣ್ಣುಮುಚ್ಚಿ ನಡೆಯುವಲ್ಲಿ ಅವನು ಕಿಂದರಿ ಜೋಗಿ
ಸಾವರಿಸಿಕೊಂಡು
ಅಸಾವರಿಸಿಕೊಂಡು ಜಗದ ಸಂತೆಯು ಸಾಗಿ

ಕನಸ ತಲ್ಲಣದ ಬಿಲ್ಲಲ್ಲಿ ಸಾವ ನೊಗ ಹೊತ್ತು
ಯಾವಾಗ ಏರುವುದೋ ಯಾವಾಗ ಇಳಿಯುವುದೋ
ತೇವಗಣ್ಣಿನ ರೆಪ್ಪೆ ತುಂಬಿ ನಿಂದಿರಲು
ನಡೆಸ ಬಂದ ಗುರುವ ಕೈಯಲ್ಲಿ ಸ್ವರದ ಕಡ್ಡಿ
ಹಿಡಿದು ಉಳಿಯಬಹುದೇ
ಅಳಿದು ಹಿಡಿಯಬಹುದೇ

ಹತ್ತಿದ ಮಳೆಬಿಲ್ಲ ಇಳಿವಲ್ಲಿ
ಇಳೆಗೆ ಅಷ್ಟು ಮಳೆ ಇಷ್ಟು ಬಣ್ಣ
ಜೀವದೂಗಲು ಈಗ ಅಷ್ಟು ಸಾಕು

( ಈ ಕವಿತೆ ಓದಿದ ನಂತರ ಅಥವ ಓದುವ ಮೊದಲು ೧೯೯೨ರಲ್ಲಿ ಪುಣೆಯ ಸವಾಯಿ ಗಂಧರ್ವ ಸಂಗೀತೋತ್ಸವದ ಮುಕ್ತಾಯದ ಜಾವದಲ್ಲಿ ಭೀಮಸೇನ ಜೋಷಿಯವರು ಧ್ಯಾನಿಸಿದ
ಅಸಾವರಿ ತೋಡಿ ರಾಗ ಕೇಳಬೇಕಾಗಿ ವಿನಂತಿ. ಇದೊಂದು ವಿರಳಾತಿ ವಿರಳ ಪ್ರಸ್ತುತಿ )
ಚಿತ್ರದುರ್ಗ ಜಿಲ್ಲೆಯವರಾದ ಜಿ.ಕೆ.ರವೀಂದ್ರಕುಮಾರ್ ಶಿಕ್ಷಣಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು.
ರಾಜ್ಯದ ಹಲವಾರು ಆಕಾಶವಾಣಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಿರುವ ಇವರು ಪ್ರಸ್ತುತ ಆಕಾಶವಾಣಿಯ ಬೆಂಗಳೂರು ನಿಲಯದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
‘ಸಿಕಾಡ’, ‘ಪ್ಯಾಂಜಿಯ’, ‘ಕದವಿಲ್ಲದ ಊರಲ್ಲಿ’, ‘ಒಂದುನೂಲಿನ ಜಾಡು’ ಇವರ ಕವನ ಸಂಕಲನಗಳಲ್ಲದೇ, ಕೆಲವು ಸಂಪಾದಿತ ಕೃತಿಗಳೂ ಪ್ರಕಟಗೊಂಡಿವೆ.ಬಾನುಲಿಯಲ್ಲಿ ‘ಸಿರಿಗನ್ನಡಂಗೆಲ್ಗೆ’, ‘ರಾಗಮಾಲ’ದಂತಹ ಜನಪ್ರಿಯ ಸರಣಿಗಳೂ ಸೇರಿದಂತೆ ಹಲವಾರು ಸೃಜನಶೀಲ ಕಾರ್ಯಕ್ರಮಗಳನ್ನು ರಚಿಸಿ, ನಡೆಸಿಕೊಟ್ಟಿದ್ದಾರೆ.