ಸ. ರಘುನಾಥ ಹಿರಿಯ ಕವಿ ಮತ್ತು ಅನುವಾದಕ. ತೆಲುಗಿನಿಂದ ಕನ್ನಡಕ್ಕೆ ಕೊಡುಕೊಳ್ಳುವಲ್ಲಿ ಅವರ ಪಾತ್ರ ಬಹಳ ಮುಖ್ಯವಾದುದು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಕಳೆದ ಸಾಲಿನ ಪುಸ್ತಕ ಅನುವಾದ ಬಹುಮಾನ ಪಡೆದ ಕೃತಿ ‘ಇಲಾ ಒಕ ಜೀವಿತಂ’ ಮೂಡ್ನಾಕೂಡು ಚಿನ್ನಸ್ವಾಮಿಯವರ ಕವಿತೆಗಳ ತೆಲುಗು ಅನುವಾದ.

ಈಚೆಗೆ ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯ ಪ್ರಕಟಿಸಿದ ತೆಲುಗಿನ ಕವಿ ಅಡಿಗೋಪುಲ ವೆಂಕಟರತ್ನಂ ಅವರ ಕಾವ್ಯದ ಅನುವಾದ ಮುಂದಡಿ ಸ. ರಘುನಾಥ ಅವರ ಈಚಿನ ಪ್ರಕಟಣೆ.

‘ಮುಂದಡಿ’ ಬಗ್ಗೆ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಈ ಸತ್ಯನಾರಾಯಣ ಅವರು, “ವೃತ್ತಿಯಿಂದ ಅಭಿಯಂತರರಾಗಿ ಪ್ರವೃತ್ತಿಯಿಂದ ಕವಿಯಾಗಿರುವ ಅಡಿಗೋಪುಲ ವೆಂಕಟರತ್ನಂ ತೆಲುಗು ಸಾಹಿತ್ಯ ಲೋಕಕ್ಕೆ ಈಗಾಗಲೇ ಇಪ್ಪತ್ತು ಕವನ ಸಂಕಲನಗಳನ್ನು ನೀಡಿದ್ದಾರೆ. ಈ ಸಂಕಲನದಲ್ಲಿನ ಕವಿತೆಗಳು ವರ್ತಮಾನದ ತವಕ ತಲ್ಲಣಗಳಿಗೆ ಹಿಡಿದ ಕನ್ನಡಿಯಂತಿವೆ. ಕವಿ ತನ್ನ ವೈಯಕ್ತಿಕಾನುಭವಗಳಿಗೆ ಸಾರ್ವತ್ರಿಕ ಸ್ವರೂಪವನ್ನು ನೀಡಿ ಅದನ್ನು ಕವಿತ್ವೀಕರಣಗೊಳಿಸುವ ಕಾವ್ಯ ಶೈಲಿ ಬೆರಗು ಮೂಡಿಸುವಂತಹದ್ದು. ಗತವನ್ನು ವರ್ತಮಾನವನ್ನು ಮುಖಾಮುಖಿಯಾಗಿಸಿ ಅನುಸಂಧಾನಗೊಳಿಸುವ ಇಲ್ಲಿಯ ಕವಿತೆಗಳು ಕಾವ್ಯಾನಂದದ ಜೊತೆ ಬದುಕಿನ ಅಂದವನ್ನು ಉಣಬಡಿಸುತ್ತವೆ. ಸರಳ ಭಾಷೆಯ ಮೂಲಕ ಆಕರ್ಷಕವಾಗಿ ಕವಿತೆಯನ್ನು ಕಟ್ಟುವಲ್ಲಿ ಅಡಿಗೋಪುಲ ವೆಂಕಟರತ್ನಂ ಪರಿಣಿತರು. ಅವರ ಕವಿತೆಯ ಓದು ಮೈಗೆ ತಾಕುವ ಮಂದಾನಿಲದಂತಹುದು” ಎಂದಿದ್ದಾರೆ.

ಕವಿ – ಅನುವಾದಕ ಸ. ರಘುನಾಥ ಅವರೇ ಕೃತಿಗೆ ಪ್ರವೇಶಿಕೆಯನ್ನು ಬರೆದಿದ್ದಾರೆ. ಅದರಲ್ಲಿ ಅಡಿಗೋಪುಲ ವೆಂಕಟರತ್ನಂರವರ ಕಾವ್ಯದ ಸೂಕ್ಷ್ಮ ಪರಿಶೀಲನೆಯಿದೆ. ಆ ಮುನ್ನುಡಿ ಮತ್ತು ಕೆಲವು ಕವಿತೆಗಳನ್ನು ತಮ್ಮ ಓದಿಗೆ ಕೊಡಲಾಗಿದೆ.

(ಸ. ರಘುನಾಥ)

ಕಾವ್ಯವೆನ್ನುವುದು ಭಾವ, ಅನುಭವ, ಅನುಭಾವ, ಕಲ್ಪನೆ, ವಾಸ್ತವ, ಚರಿತ್ರೆ, ವ್ಯಷ್ಟಿ, ಸಮಷ್ಟಿ ಇವುಗಳ ಮೈಯೊಳಗೇ ಕಟ್ಟಿಕೊಳ್ಳುತ್ತಾ ಅನೇಕ ಮಜಲುಗಳನ್ನು ಮುಟ್ಟಿ ಹರಿಯುತ್ತಿರುವ ಸ್ರವಂತಿ. ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ, ದಲಿತ, ಸ್ತ್ರೀವಾದ ಇಂಥವು ಯಾವುದಾದರೂ ಅದರ ಟಿಸಿಲುಗಳು ಮಾತ್ರವೇ! ಯಾರು ಯಾವುದನ್ನು ಮಾದರಿಯಾಗಿ ಸ್ವೀಕರಿಸಿ ಬರೆದರೂ ಅದು ಮೊದಲಿಗೆ ಕಾವ್ಯವೇ ಆಗಿರಬೇಕು. ವಿಭಜನೆ ಆಯಾ ‘ವಾದಮುಖಧ್ವನಿ’ ರೂಪಗಳು. ಕನ್ನಡವೇ ಅಲ್ಲ, ಕಾಲದ ಹಿಂದು ಮುಂದಲ್ಲಿ ಎಲ್ಲ ಭಾಷೆಗಳಲ್ಲಿಯೂ ಕಾವ್ಯ ಜೀವನವೆಂಬುದು ಇದೇ ಪರಿ!

ತೆಲುಗು ಈ ಮಾತಿಗೆ ಅಪವಾದವಲ್ಲವೆಂಬಂತೆ ಅನುಭೂತಿ ಕವಿತ, ಭಾವಕವಿತ, ಅಭ್ಯುದಯ ಕವಿತ, ವಿಪ್ಲವ ಕವಿತ, ದಿಗಂಬರ ಕವಿತ, ವಚನ ಕವಿತ, ದಳಿತ ಕವಿತ, ಸ್ತ್ರೀವಾದ ಕವಿತ, ಮೈನಾರಿಟಿ ಕವಿತ ಮುಂತಾಗಿ ಕಾವ್ಯವನ್ನು ಬರೆಯಿಸಿಕೊಂಡು ಬಂದಿದೆ. ಈ ಎಲ್ಲವೂ ಅಂದಂದಿನ ಸಮಷ್ಟಿ ಪ್ರಜ್ಞೆಯ ಭಾಗವಾಗಿ ಬಂದಂಥವು. ಅವರವರ ವೈಚಾರಿಕತೆ, ವಾದ, ಬದ್ಧತೆ, ನಂಬಿಕೆ ಈ ಎಲ್ಲವೂ ಈ ಮಾಡಿನಡಿಯೇ ಅಭಿವ್ಯಕ್ತಗೊಂಡಂಥವು. ಯಾವ ಕಾಲದಲ್ಲಿಯೂ ಯಾವುದೂ ಸ್ಥಗಿತವಲ್ಲ. ಯಾವುದೋ ಒಂದು ರೂಪದಲ್ಲಿ, ಇಡಿಯಾಗಿ, ಖಂಡವಾಗಿ, ಎಳೆಯಾಗಿ ಚಲಿಸಿಕೊಂಡು ಬಂದಂಥವೇ ಆಗಿವೆ. ಈ ಕಾವ್ಯದಲ್ಲಿ ಬದ್ಧ ಛಂದಸ್ಸು ಇರಬಹುದು, ಇಲ್ಲದಿರಬಹುದು. ಇಲ್ಲವೆಂದರೂ ಅದರ ಯಾವುದಾದರೊಂದು ಅಂಶ ಕಾವ್ಯದಲ್ಲಿ ಇದ್ದೇ ಇರುತ್ತದೆ. ಸಮೀಕ್ಷೆ, ವಿಮರ್ಶೆ ಇದನ್ನು ಮುಟ್ಟಿ ಹೋಗುವಾಗ ‘ಪಕ್ಕತಿರುವು’ – ಬೈ ಪಾಸ್ – ಮಾಡಿಕೊಂಡು ಹೋದೀತೇ ಹೊರತು ಇದ್ದದ್ದರ ಇರವನ್ನು ಅದು ಅಳಿಸಿ ಹೋಗಿರದು. ಮುಟ್ಟುವಾಗ ಅದು ಮುಟ್ಟಲು ಇದ್ದೇ ಇರುವುದು ಮಾತ್ರ ಎಲ್ಲ ಸೂಕ್ಷ್ಮಚಕ್ಷುಗಳಿಗೂ ತೋರುವಂಥದ್ದು.

ಅಡಿಗೋಪುಲ ವೆಂಕಟರತ್ನಂ ಅವರ ‘ಮುಂದಡುಗು’ ಸಂಕಲನದ ಕವಿತೆಗಳನ್ನು ಅನುವಾದಿಸಿದಾಗ ಈ ವಿಚಾರ ಕಣ್ಣಮುಂದೆ ಬಂದಿತು. ಅವರ ಈ ಕವಿತೆಗಳ ಓದಿನಲ್ಲಿ ಈ ಎಲ್ಲವೂ ನೆನಪಾಗದಿರವು.

ಅಡಿಗೋಪುಲ ಅವರ ಇಲ್ಲಿನ ಕವಿತೆಗಳಲ್ಲಿ ಕೆಲವು ಕವಿತೆಗಳು ವಾಚ್ಯವೆನ್ನಿಸುವುದುಂಟು. ಕವಿತೆಗಳು ವಾಚ್ಯವೆನ್ನಿಸುವುದೇಕೆಂದರೆ ವಿವರಣಾತ್ಮಕವಾದುದುರಿಂದ. ತೆಲುಗಿನ ‘ವಚನ ಕವಿತ’ ಕಾವ್ಯ ಮಾರ್ಗದ ಲಕ್ಷಣಗಳನ್ನು ಅರಿಯದಿದ್ದರೆ, ತೆಲುಗಿನಲ್ಲಿ ಈ ಶೈಲಿ ಜನಾದರಣೆ, ಮನ್ನಣೆ ಪಡೆದದ್ದು ಎನ್ನುವ ವಿಚಾರವನ್ನು ಗಮನಿಸದಿದ್ದರೆ, ವಾಚ್ಯತೆಯ ಹಿಂದಿನ ಮನೋಧರ್ಮವನ್ನು ತಪ್ಪಾಗಿ ಗ್ರಹಿಸಬೇಕಾಗುತ್ತದೆ. ಕಾವ್ಯದಲ್ಲಿ ವಸ್ತು ಮತ್ತು ಅದರ ಅಭಿವ್ಯಕ್ತಿ ಅಥವಾ ನಿರ್ವಹಣೆ ಮುಖ್ಯವಾದುದು. ಈ ನಿರ್ವಹಣೆಗೆ ತೆಲುಗು ಭಾಷೆಯ ಒಂದು ವರ್ಗ ಆರಿಸಿಕೊಂಡಿದ್ದು ಇಂಥ ಮಾರ್ಗವನ್ನು. ಇದು ಸಮಾಜಮುಖಿ ಒಲವುಗಳನ್ನು ಹೊಂದಿರುವುದನ್ನು ಈ ಮಾರ್ಗದ ಕವಿತೆಯ ಓದು ನಮಗೆ ಅರುಹುತ್ತದೆ. ಇದರಲ್ಲಿಯೇ ಶಿಲ್ಪ ವಿಚಾರವೂ ಇದ್ದು ಮೀಮಾಂಸೆಗೆ ಬಂದಾಗ ಇದರ ಚರ್ಚೆ ನಡೆಯಬೇಕಾಗುತ್ತದೆ. ಮಿಕ್ಕಂತೆ ಕವಿತೆಯ ಸೌಖ್ಯಕ್ಕೆ ಅಡ್ಡಿಯಿಲ್ಲ.

ಅಡಿಗೋಪುಲ ಅವರು ನಿರ್ಮಾಣವಾಗುವ ಸನ್ನಿವೇಶಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಾರೆ. ಸಹಜ ನಿರೂಪಣೆಗೆ ತೊಡಗಿದರೂ ಭಾಷೆ ಮತ್ತು ಅನುಭವಗಳಿಗೆ ಕಾವ್ಯಗಂಧ ಲೇಪನವಾಗುವಂತೆ ಭಾಷೆಯನ್ನು ಬಳಸಿಕೊಳ್ಳುತ್ತಾರೆ. ಇದರಿಂದಾಗಿ ಕಾವ್ಯ ವೈಚಾರಿಕತೆಯೊಂದಿಗೆ ಭಾವ ಬಳುಕುಗಳನ್ನು ಪಡೆದುಕೊಳ್ಳುತ್ತದೆ.

ಈ ಕವಿಯದು ಸಾಮಾಜಿಕ ಧ್ವನಿ. ಇದರಲ್ಲಿ ಸಮಾಜದ ಎಲ್ಲ ವರ್ಗಗಳೂ ಧ್ವನಿ ಪಡೆದುಕೊಳ್ಳುತ್ತವೆ. ಕವಿ ತಾನು ಎಲ್ಲಿಯೂ ಯಾವುದಕ್ಕೂ ಅತೀತನೆಂದು ಬೀಗಿದ್ದಿಲ್ಲ. ತನ್ನ ಪರಿಮಿತಿಯ ಪ್ರಜ್ಞೆಗೆ ಎಚ್ಚರಿಕೆಯ ಬಿಂಬ ಕಟ್ಟುತ್ತಾರೆ.

ಶ್ರೀಶ್ರೀ ತಮ್ಮ ‘ಋಕ್ಕುಗಳು’(ವೇದಮಂತ್ರಗಳು) ಎಂಬ ಕವಿತೆಯಲ್ಲಿ,

‘ಯಾವುದೂ ಅಲ್ಲ ಕವಿತೆಗನರ್ಹ
ಹೌದೌದು ಶಿಲ್ಪ ಅನರ್ಘ್ಯ
….. ಕಣ್ಣಂತೂ ಇದ್ದರೆ ಕಂಡು
ನುಡಿಯಿದ್ದರೆ ಬರೆದು’

ಹೇಳಿರುವುದು ನೆನಪಾಗುವಂತೆ ಅಡಿಗೋಪುಲ ಅವರು ಕಾವ್ಯ ಶಿಲ್ಪವನ್ನು ಗಮನಿಸಿಯೇ ವಸ್ತುವನ್ನು ತಮ್ಮ ಕವಿತೆಗಳಲ್ಲಿ ಕಂಡರಿಸಿದ್ದಾರೆ. ಇಲ್ಲಿ ತಮ್ಮ ‘ಮಲೆಗಳಲ್ಲಿ ಮದುಮಗಳ’ ಕೃತಿಯ ಆರಂಭಕ್ಕೆ ಬರೆದ ಕುವೆಂಪುರವರ ಒಂದು ಮಾತನ್ನು ನೆನಪಿಗೆ ತಂದುಕೊಳ್ಳಬೇಕು: ‘ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ, ಯಾವುದೂ ಯಃಕಶ್ಚಿತವಲ್ಲ.’ ಕುವೆಂಪು ಹಾಗು ಶ್ರೀಶ್ರೀಯವರ ಉಲ್ಲೇಖಿತ ಕವಿತೆಯಲ್ಲಿರುವ ‘ಯಾವುದೂ ಅಲ್ಲ ಕವಿತೆಗನರ್ಹ’ ಎಂಬ ಮಾತಲ್ಲಿರುವ ಸಾಮ್ಯ ಅರ್ಥವಾಗದ್ದೇನೂ ಅಲ್ಲ.

ಇನ್ನು ಇಲ್ಲಿಯ ಭಾವಗಳನ್ನು, ಭಾವನೆಗಳನ್ನು ಬಿಡಿಬಿಡಿಯಾಗಿ, ಬಿಡಿಸಿ ಬಿಡಿಸಿ ಹೇಳುವ ಅಗತ್ಯವಿಲ್ಲ. ಓದುತ್ತಿದ್ದರೆ ಕವಿತೆಗಳು ತಮ್ಮರ್ಥ, ವಿಚಾರಗಳನ್ನು ತಾವೇ ನಿವೇದಿಸಿಬಿಡುತ್ತವೆ. ಅವುಗಳ ಶೈಲಿ, ಸರಳತೆಯೇ ಹಾಗಿವೆ. ಸರಳತೆ ಎಂಬುದು ಇದ್ದರೂ ಈ ಕಾವ್ಯ ಸೂಕ್ಷಗಳನ್ನು ಬಿಟ್ಟುಕೊಟ್ಟಿಲ್ಲ, ಹಾಗೆಯೆ ಕಾವ್ಯ ಗುಣವನ್ನೂ.

***

ಒಟ್ಟು ೬೦ ಕವಿತೆಗಳ ಸಂಕಲನದಲ್ಲಿ ನನಗೆ ಇಷ್ಟವಾದ ಕೆಲವು ಕವಿತೆಗಳು ಇಲ್ಲಿವೆ. ಈ ಕವಿತೆಗಳ ಓದು ಕಾವ್ಯ ಶಿಲ್ಪವನ್ನು ಕುರಿತಂತೆ ಒಂದಿಷ್ಟು ಜಿಜ್ಞಾಸೆಯನ್ನು ಉಂಟುಮಾಡಬಲ್ಲವು. ವಸ್ತುವಿನ ನಿರ್ವಹಣೆಯೂ ಕನ್ನಡ ಕಾವ್ಯಕ್ಕಿಂತ ಭಿನ್ನ. ಈ ಮಾತು ಪ್ರಯೋಗಗಳ ಕುರಿತ ಕನ್ನಡ ಕಾವ್ಯದ ಸಾಧನೆಯ ಕುರಿತ ಮಾತಲ್ಲ. ಸೋದರ ಭಾಷೆಗಳ ಕಾವ್ಯೋಧ್ಯಮದ ಬಗ್ಗೆ ಅದರಲ್ಲೂ ತೆಲುಗು ಕಾವ್ಯದ ಬಗ್ಗೆ ಆಸಕ್ತಿಯಿರುವ ಎಲ್ಲರೂ ಸ್ರವಂತಿ, ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ, ದಲಿತ, ಸ್ತ್ರೀವಾದದ ಕವಿತೆಗಳ ಪರಿಚಯ ಮಾಡಿಕೊಳ್ಳಬೇಕಿದೆ. ಆ ಮೂಲಕ ಕನ್ನಡ ಕಾವ್ಯದ, ತೆಲುಗು ಕಾವ್ಯದ ತೌಲನಿಕ ಅಧ್ಯಯನಕ್ಕೆ ನಾಂದಿ ಹಾಕಬೇಕಿದೆ. ಹೀಗೆ ಮಾಡುವಲ್ಲಿ ಅಡಿಗೋಪುಲ ವೆಂಕಟರತ್ನಂರವರ ಕಾವ್ಯವನ್ನು ನೋಡಿಯೇ ಮುಂದುವರಿಯುವ ಅಗತ್ಯವಿದೆ.

ಹೀಗೆಯೇ ಬೇರೆ ಬೇರೆ ಭಾಷೆಯಿಂದ ಕನ್ನಡಕ್ಕೆ ಬಂದ ಸಂಕಲನಗಳ ಪರಿಚಯದ ಅಗತ್ಯವೂ ಇದೆ. ಬರದಿದ್ದರೆ ಅನುವಾದಿಸುವ ಕಾರ್ಯದ ಬಗ್ಗೆ ಗಾಢವಾಗಿ ಚಿಂತಿಸಿ ಮುಂದುವರಿಯುವ ಅಗತ್ಯವಂತೂ ಇದ್ದೇ ಇದೆ.

ಅಡಿಗೋಪುಲ ವೆಂಕಟರತ್ನಂರವರ ಕೆಲವು ಕವಿತೆಗಳು

ಬೆಳಕಿನ ಸೇತುವೆಗಳು

ಸ್ವರ ವ್ಯಂಜನಗಳ ಕೂಡು ಕುಟುಂಬದಲ್ಲಿ
ಕಣ್ತೆರದ ಕವಿತೆ
ಸಂಧಿ ಸಮಾಸಗಳು ಛಂದಸ್ಸು ವ್ಯಾಕರಣ ಕಲಿಸಿ
ಸಂಪ್ರದಾಯ ಸಾಹಿತ್ಯದ ಪಾಲನೆಯಲ್ಲಿ ಪದ್ಯ
ಅಶ್ವಮೇಧಯಾಗವಾಯಿತು
ಪಂಚಭಕ್ಷ್ಯ ಪರಮಾನ್ನಗಳ
ತಾಂಬೂಲಗಳ ಸೇವಿಸಿ
ಸುಗಂಧ ಪರಿಮಳಗಳ ನಡುವೆ
ತೂಗುಯ್ಯಾಲೆಯ ಮೇಲೆ ಸಲ್ಲಾಪವಾಗಿ
ನವರಸ ಅಭಿನಯವಾಗಿ
ಅಂಗಾಂಗ ಸೌಂದರ್ಯವಾಗಿ
ಕವಿತೆ ಸಂತಸಗೊಳಿಸಿತು.

ಭಾವಕವಿಗಳ ಭಾವನೆಯಲ್ಲಿ
ಜೀವ ಪಡೆದ ಕವಿತೆ
ಈರುಳ್ಳಿ ಪೊರೆಯ ವಸ್ತ್ರದಲ್ಲಿ
ಆಕಾಶದಲ್ಲಿ ನರ್ತಿಸಿ
ಆನಂದಗಳ ಎಲ್ಲೆ ತಾಕಿ
ಮೇಘಗಳ ಪಲ್ಲಕ್ಕಿಯಲ್ಲಿ ಮೆರವಣಿಗೆ ಹೊರಟು
ಬಾನಿಂದ ಬುವಿಗೆ ಇಳಿದು ಬಂದ
ಪಾರಿಜಾತವಾಯಿತು.
ಮಲಯ ಮಾರುತವ ಕರೆತಂದು
ಹುಲ್ಲುಗಾವಲುಗಳ ಸೌಗಂಧವಾಗಿ
ಮನಸ ಉಯ್ಯಾಲೆದೂಗುವ ಕಲ್ಪನಾ ಲೋಕವನ್ನು
ಭಾವಗೀತೆ ಕಟ್ಟಿತು

ಪ್ರಗತಿಶೀಲ ಕವಿಗಳ ಚೇತನದಲ್ಲಿ
ಕವಿತೆ ದಮನಿತರ ದಮನಕಾರರ
ಪಾಲಕರ ಪಾಲಿತರ ತಾಕಿ
ದರೋಡೆ ದೌರ್ಜನ್ಯಗಳು
ಹಿಂಸೆ ಅಹಿಂಸೆಗಳು
ಧರ್ಮಾರ್ಧಮಗಳು ನೇತು ಹಾಕಿ ಜಾಗೃತಿಯ ಹಾಡುತ್ತದೆ

ಕವಿತೆ ಕಲ್ಲ ಮೂರ್ತಿಯಲ್ಲ ಮುಗ್ಧ ಮೋಹನ ಲಾವಣ್ಯವಲ್ಲ
ಸಂಕೋಲೆಗಳಿರದ ರಚನೆಯೆಂದು ಸಂಪೂರ್ಣ ಆವಿಷ್ಕರಣೆಯಾಗಿ
ಮನುಷ್ಯರ ನಡುವೆ ನಡೆಯುತ್ತ ಮನುಷ್ಯರನ್ನು ನಡೆಸುತ್ತದೆ.

ಕವಿತೆ ಸೂರ್ಯೋದಯಕ್ಕೆ
ಎದುರು ಹೋಗಿ ಆಹ್ವಾನಿಸಲಿಲ್ಲ
ಸೂರ್ಯನಾಗಿ ಉದಯಿಸಲು ಕವಿ
ಸಾರಿ
ನಿನ್ನೆ ಇಂದು ನಾಳೆಗೆ, ಎಲ್ಲ ಕಾಲಗಳಿಗೂ ಒಂದಾಗಿ
ನಿಲ್ಲುತ್ತ ಸೇತುವೆಗಳ ನಿರ್ಮಿಸುತ್ತ –

ಹೆರಿಗೆ ನೋವು

ಆತುರ ಪಡಬೇಡ
ನೆಟ್ಟ ಬೀಜ ಮಣ್ಣೊಡನೆ ಹೇಳಿತು
ತೇವದೊಂದಿಗೆ ಸಹವಾಸ ಮಾಡಿತು
ಗಾಳಿಯನ್ನು ಕರೆಯಿತು
ಬೀಜ ಮೊಳಕೆಯೊಡೆಯಿತು
ಹೇಗೋ.
ಅಂಗೈ ಅಡ್ಡವಿರಿಸುವಿಯೋ
ಬದುವಿನ ಮೇಲೆ ಕುಳಿತು
ಸಂರಕ್ಷಣೆ ಮಾಡುವಿಯೋ
ಅಟ್ಟಣಿಗೆ ಏರಿ ಕಾವಲು ಕಾಯುವೆಯೋ

ಅವಸರಿಸಬೇಡ
ಕೆರೆಯ ತುಂಬಿಸಿದೆ ಚಿತ್ತೆ ಮಳೆ
ತೂಬು ಬಾಯಿ ತೆರೆದಿದೆ
ಹರಿದೋಡುವ ಕಾಲುವೆಗೆ ಸೆನಿಕೆ ಅಡ್ಡವಿಟ್ಟು
ಗದ್ದೆಗೆ ತಿರುಗಿಸು,
ಆತುರದಿಂದ ಅಗತ್ಯ ಮೀರಿ
ನೀರು ನಿಲ್ಲಿಸಿದರೆ ಕೊಳೆಯುತ್ತೆ ಪೈರು.

ಅವಸರಿಸಬೇಡ
ಊಹಿಸಿರದ ರೀತಿಯಲ್ಲಿ ಬೆಳೆಯ
ಇಳುವರಿ ಇದೆ
ತೆನೆ ಉದುರುವ ಸ್ಥಿತಿಯಿಲ್ಲ
ಕಂಕಿ ಹಸುರಾಗಿದೆ
ಈಗಲೇ ಕುಡುಗೋಲಿಗೆ ಕೆಲಸ ಹೇಳಿದರೆ
ಜೊಳ್ಳು ಉದುರುವ ಅಪಾಯವಿದೆ.

ಅವಸರಿಸಬೇಡ
ಕಣದಲ್ಲಿ ಕಾಳು ರಾಶಿಗಟ್ಟಿದೆ
ಬೆಂಬಲ ಬೆಲೆ ಪಾತಾಳದಲ್ಲಿದೆ
ಮಾರಿ-ಕೊಳ್ಳುವುದರ ನಡುವೆ ದಳ್ಳಾಳಿ
ಎಲ್ಲ ಅವನೇ ಆಗಿರುವ
ನಿದ್ದೆಯಲ್ಲಿದೆ ಸರಕಾರ
ಹಾಡಬೇಡ ಸುಪ್ರಭಾತ
ಘೋಷಣೆಯಾಗಿ ನಿದ್ದೆಯೆಬ್ಬಿಸು.

ಎರಡೆರಡಲ ಆರು

ಕೃತಯುಗ ನ್ಯಾಯವನ್ನರಸುತ್ತ
ತ್ರೇತಾಯುಗಕ್ಕೆ ಅಡಿಯಿಟ್ಟಿತು
ಸೀತಾದೇವಿಯ ವನವಾಸ ಕಂಡಿತು
ತ್ರೇತಾಯುಗ ದ್ವಾಪರಯುಗಕ್ಕೆ ಬಂದಿತು
ದ್ರೌಪದಿ ವಸ್ತ್ರಾಪಹರಣವ ಪರಿಕಿಸಿತು
ದ್ವಾಪರಯುಗ ಕಲಿಯುಗಕ್ಕೆ ಪ್ರವೇಶ ಮಾಡಿತು
ನಿರ್ಭಯ ಅತ್ಯಾಚಾರವನ್ನು ವೀಕ್ಷಿಸಿತು
ಯುಗಗಳು ಲಜ್ಜೆಯಿಂದ ತಲೆ ಬಾಗಿದವು
ಕಲಿಯುಗ ನಾಳಿನ ಆಸೆಯೊಂದಿಗೆ ಸಾಗುತ್ತಿದೆ.
ನ್ಯಾಯ ಅಳೆಯಲಾಗುತ್ತದೆ
ಅಳತೆಯಂತೆ ಕೊಳ್ಳಲಾಗುತ್ತದೆ
ತೂಕ ಹಾಕಲಾಗುತ್ತದೆ
ತೂಕದಂತೆ ಬೆಲೆ ಕಟ್ಟಲಾಗುತ್ತದೆ.
ನ್ಯಾಯಕ್ಕೆ ನ್ಯಾಯವೇ ದಳ್ಳಾಳಿಯಾದಾಗ
ಕೊಳ್ಳುವಿಕೆ ರಹಸ್ಯಮಯವಾಗಿಬಿಟ್ಟಿದೆ
ನ್ಯಾಯಕ್ಕೆ ನ್ಯಾಯವೇ ವಿತರಣೆಯಾದಾಗ
ಕೊಳ್ಳುದಾರಿಕೆ ಬಟ್ಟಬಯಲು
ಭಾರಿ
ಮಧ್ಯಮ
ಲಘು ನ್ಯಾಯಗಳಾಗಿ
ನ್ಯಾಯ ವಿಭಜನೆ.

ಒಂದು ಕಡೆ ನ್ಯಾಯ ಶರವೇಗ
ಒಂದು ಕಡೆ ಮಂದಗಮನ
ಒಂದು ಕಡೆ ಅರಳೆ
ಒಂದು ಕಡೆ ಬಂಡೆಗಲ್ಲು.

ನ್ಯಾಯಕ್ಕೆ ಋತುಗಳಿಲ್ಲ
ಎಲ್ಲ ಋತುಗಳೂ ಬೇಸಾಯವೇ
ಎಲ್ಲ ಋತುಗಳೂ ಬೆಳೆಕೊಯ್ಲೇ
ಅಲ್ಲಿಯವರೆಗೆ ಏಕಪಾತ್ರಾಭಿನಯದೊಂದಿಗೆ
ಸಂತೋಷಪಡಿಸಿದ ನ್ಯಾಯ
ಅಷ್ಟರಲ್ಲಿಯೇ ದ್ವಿಪಾತ್ರಾಭಿನಯವಾಗಿ
ರಕ್ತಿ ಹುಟ್ಟಿಸುತ್ತದೆ.
ಹೆಣ್ಣಿಗೊಂದು ನ್ಯಾಯ
ಗಂಡಿಗೊಂದು ನ್ಯಾಯ
ನ್ಯಾಯ ಬೇಡುತ್ತ ಹೆಣ್ಣು
ಪ್ರಸಾದಿಸುತ್ತ ಗಂಡು

ಧನವಂತನಿಗೆ ನ್ಯಾಯ ಭಯ ಪಡುತ್ತದೆ
ಬಲಶಾಲಿಗೆ ಶರಣಾಗುತ್ತದೆ
ಜಾತಿಗೆ ಸಲಾಮು ಮಾಡುತ್ತದೆ
ಮತಕ್ಕೆ ಗುಲಾಮವಾಗುತ್ತದೆ
ಎರಡೆರಡ್ಲ ನಾಲ್ಕಾಗುತ್ತದೆ
ಒಮ್ಮೆ ಭಯದಿಂದ
ಎರಡೆರಡಲ ಆರಾಗುತ್ತದೆ
ಒಮ್ಮೆ ಧೈರ್ಯವಾಗಿ ನ್ಯಾಯ
ಎಲ್ಲ ಕಾಲ ಬದಲಾಗದ ಮಾತಾಗಬೇಕಾಗಿದೆ.

ಹಿಂಬಾಲಿಸುವ ಒಂಟಿತನ

ಒಂಟಿತನವೆನ್ನ ಹಿಂಬಾಲಿಸುತ್ತಲಿದೆ
ಕೋಣೆಯಲ್ಲಿ ಗುಂಡಿಯೊತ್ತಿದೆ
ಕೋಣೆಯ ಹಿಡಿದು ಜೋತಾಡುವ ಕತ್ತಲು
ವಿಕ್ರಮಾರ್ಕನ ಬೆನ್ನು ಹತ್ತಿದ ಬೇತಾಳನಂತೆ
ಕಿಟಕಿಯಿಂದ ಮಾಯವಾಯಿತು.
ಅಲಮೆರಾದಲ್ಲಿ ಪುಸ್ತಕಗಳು
ವಂದನೆಗಾಗಿ ಸೈನಿಕರಂತೆ ಸಾಲುಗಟ್ಟಿದೆ
ನನ್ನ ಸ್ಪರ್ಶಕ್ಕೆ ಸ್ಪಂದಿಸಿದ ಪುಸ್ತಕಗಳು
ಅಂತರಂಗ ತೆರೆದವು.

ನಗೆಗೆ ಕಾರಣಗಳು ಬಹಳ
ನಾನಾರ್ಥಗಳು ಅನೇಕ
ಮಕ್ಕಳಂತೆ ತಂಪಿನ ಬೊಚ್ಚುನಗೆ
ಯೌವ್ವನದ ತುಂಟು ಕಿರುನಗೆ
ವೃದ್ಧಾಪ್ಯದ ಮಾಗು ನಗೆ
ವಿಜ್ಞಾನ ವಿನೋದ ಸಂಕೇತಗಳು.

ಕೋಟೆಯ ಮೇಲೆ ಶತ್ರು ಸೇನೆ ದಾಳಿಯಿಟ್ಟಿತು
ಫಿರಂಗಿಗಳು ಮುಗಿಬಿದ್ದು ವಿಧ್ವಂಸವಾಯಿತು ನೆಲ
ಸೈನಿಕರ ತಲೆಗಳು ಕಡಿದುರುಳಿದವು
ಕುದುರೆ ಆನೆಗಳು ನೆಲಕ್ಕೊರಗಿದವು
ನೆತ್ತರೆಲ್ಲ ಏಕವಾಗಿ ಪ್ರವಾಹವಾಯಿತು
ಸೋತ ಪಕ್ಷದೊಂದಿಗೆ ಗೆದ್ದ ಪಕ್ಷದ್ದೂ ಸೋಲೇ.

ನಿಧನಿಧಾನವಾಗಿ ಧ್ವನಿಯೆತ್ತಿದ ಶಾಂತಿ ಗೀತೆ
ಆಕಾಶದಲ್ಲಿ ಪ್ರತಿಧ್ವನಿಸುತ್ತದೆ
ನೆಲದ ಮೇಲೆ ಓಡಾಡುವ ಪಾರಿವಾಳಗಳು
ಆಕಾಶಕ್ಕೆ ಬಿಡುಗಡೆಯಾದವು
ನಮ್ಮೊಂದಿಗೆ ನಿಮ್ಮ ಹೃದಯಗಳ ಹಾರಿಸಿರಿ
ಅಲ್ಲಿಯವರೆಗೆ ನಮ್ಮನ್ನು ನೆಲದ ಮೇಲೆಯೇ
ಬದುಕಲು ಬಿಡಿರೆಂದವು ಪಾರಿವಾಳಗಳು.

ಚಂದ್ರನ ಕಂಡ ನೈದಿಲೆ
ಬೆಳಕಿನ ಬೆಳದಿಂಗಳಲ್ಲಿ ಚೆಲುವು ಬೀರಿತು
ಕಮಲಸಖನ ಕಿರಣಗಳು ಹೊದ್ದ ಕಮಲ
ದಳದಳವೂ ಶಾಂತಿ ಚಿಮ್ಮಿತು
ಒಬ್ಬರಿಗಾಗಿ ಒಬ್ಬರು ಕಾಯುವ
ವೇದನೆಯಲ್ಲಿ ಸಂತಸರಳಿತು.

ಕೆಂಪು ಕೆಂಪಿನ ಸೂರ್ಯ ಕಾದುಕಾದು
ಕಪ್ಪುಕಪ್ಪಾಗಿ ನೆಲ್ಸನ್ ಮಂಡೇಲನಂತಾಗಿ
ಕೈಗೊಂಡ ಹೋರಾಟದ ಧೀಕ್ಷೆ
ಗೆರಿಲ್ಲ ಯುದ್ಧ ಯೋಧ ಫಿಡಲ್ ಕ್ಯಾಸ್ಟ್ರೋ
ವಿಶ್ವ ಭೂಪಟದಲ್ಲಿ ನಿಂತ ಕ್ರಾಂತಿ ಜ್ಯೋತಿ ಕಂಡವು
ನಾನು ಒಂಟಿಯಲ್ಲ
ಸಮೂಹಗಳ ನಡುವೆ ಇರುವೆ
ವಿಶ್ವ ಪ್ರದಕ್ಷಿಣೆ ಮಾಡಿಸಿ ಜ್ಞಾನ ಹಂಚಿ
ಜಾಗೃತಿ ಹಾಡಿದ ಪುಸ್ತಕಗಳು
ನನ್ನ ಪಕ್ಕ ಇರಿಸಿಕೊಂಡಿವೆ
ರಹಸ್ಯ ಭೇಧಿಸುವೆ
ಮನುಷ್ಯ ಪುಸ್ತಕವಾದ ಮೇಲೆ
ಗ್ರಂಥಾಲಯ ಮನುಷ್ಯನಾಯಿತು.

ಹೊಸ ದುಃಖಗಳು

ನವರಸಗಳ ಬದಿಯಲ್ಲಿ
ನವದುಃಖಗಳ ಭೂಮಿಕೆ
ಸುಖದುಃಖಗಳ ಪರಿಧಿಯಲ್ಲಿ
ಸಿಂಹಪಾಲು ದುಃಖದ್ದೇ

ಸ್ತಂಭಿಸಿದ ನರನಾಡಿಗಳು
ಬಿಗಿಹಿಡಿದ ಉಸಿರೊಂದಿಗೆ
ಮಗುವನ್ನು ಭೂದೇವಿಗಿಯ್ಯುತ್ತ
ಪ್ರಸವ ವೇದನೆಗಳ
ತಾಯಿಯ ದುಃಖ

ಬಸಿರಲ್ಲಿ ತೂಗುಯ್ಯಾಲೆ ತೂಗಿ
ಪಟ್ಟೆ ಮಂಚದ ಮೇಲೆ ಪವಡಿಸಿ
ಭುವಿಗೆ ಸೇರಿದ ಭಯದಿಂದ
ಹಸುಗೂಸಿನ ದುಃಖ

ಹಾಲನ್ನೇ ಕೊಡದ
ಬತ್ತಿದ ಮೊಲೆ ಚೀಪುತ್ತ
ಹಸಿವೆ ತಂದ ಅಳು
ಎಳೆಗೂಸಿನ ದುಃಖ

ಹಗಲಿರುಳು
ಸರಸ್ವತಿಯ ಸೇವೆಯಲ್ಲಿ
ಪಾಠಗಳ ಭಟ್ಟಿಯಿಳಿಸಿ
ಪರೀಕ್ಷೆಯಲ್ಲಿ ಫೇಲಾದ
ವಿದ್ಯಾರ್ಥಿಯ ದುಃಖ

ನಾನೇ ನೀನು
ನೀನೇ ನಾನೆಂದು
ಒಬ್ಬರಲ್ಲೊಬ್ಬರಾದ ಪ್ರೇಮಿಗಳು
ಪ್ರಿಯನ ಮರಣಕ್ಕೆ
ಪ್ರೇಯಸಿಯ ದುಃಖ

ಏರಿದ ಮೆಟ್ಟಿಲು
ಇಳಿದ ಮೆಟ್ಟಿಲು ಅಪಹಾಸ್ಯದಲ್ಲಿ
ಉದ್ಯೋಗದ ಪ್ರಯತ್ನದಲ್ಲಿ
ವಿದ್ಯಾವಂತನ ವೈಫಲ್ಯ
ನಿರುದ್ಯೋಗಿಯ ದುಃಖ

ಕೈಯ ಮೇಲಾಡುವ ಮಕ್ಕಳು
ಹದಿವಯದಲ್ಲಿ ಅಲ್ಲ
ಬೆಳೆದು ದೊಡ್ಡವನಾದ ಮಗನ ಮನೆಯಲ್ಲಿ
ಹಿಡಿ ಅನ್ನಕ್ಕಾಗಿ
ತಾಯಿಯ ದುಃಖ

ಕಾಲಿದ್ದು ನಡೆಯಲಾಗದ
ಕಣ್ಣಿದ್ದು ನೋಡಲಾಗದ
ಬಾಯಿದ್ದು ಮಾತಿರದ
ಗಂಡನ ಬದುಕಿಗೆ
ನೆರವಾದ ಹೆಂಡತಿಯ ಮರಣ
ಗಂಡನ ದುಃಖ

ಆಸ್ತಿಕರ ನಡುವೆ ನಾಸ್ತಿಕರು ಬೆಳೆದು
ದೇವರ ಅಸ್ತಿತ್ವ ಪ್ರಶ್ನಾರ್ಥಕ
ಕ್ಷೋಭೆಗೊಂಡ ದೈವದ ದುಃಖ.

ಅಕ್ಷರಜ್ಞಾನ

ನನ್ನ ಮನಸ್ಸು ಚಿಗುರಿಟ್ಟಾಗ
ರವೀಂದ್ರರ ಸಾಹಿತ್ಯಕ್ಕೆ ನವೀನ ರಂಗುಗಳು
ಚಿಗುರು ಹೀಚಾದಾಗ
ಕಾಯಿ ಪರಿಣಮಿಸುವ ದೆಸೆಗೆ ಬಂದಾಗ
ಹಣ್ಣಾಗಿ ಉದುರಿದಾಗ
ಹಾಕಿದ ಬಣ್ಣಗಳು ಅಸಂತೃಪ್ತಿ ತೋರಿದರೆ
ಕನಸುಗಳನ್ನು ಬಿಗಿಯಾಗಿ ಹಿಡಿಯುತ್ತ
ಹೊಸ ಬಣ್ಣಗಳ ಸಮೂಹಗಳ ಬಳಿಯುತ್ತೇನೆ.

ಶರಶ್ಚಂದ್ರರ ಕಾದಂಬರಿಗಳಿಗೆ
ಕಟ್ಟು ಹಾಕುತ್ತಿರುತ್ತೇನೆ
ನನ್ನ ಮನಸ್ಸು ನನ್ನನ್ನು ಸೋಲಿಸಿ
ಪಾತ್ರಗಳಿಗೆ ಕಟ್ಟುಗಳು ಸರಿಹೊಂದದಿದ್ದಾಗ
ಹೊಸ ಕಟ್ಟುಗಳನ್ನು ಹೊಂದಿಸಿ
ಅನುರಕ್ತಿ ಪ್ರದರ್ಶಿಸುತ್ತೇನೆ.

ಪ್ರೇಮಚಂದರ ಕೃತಿಗಳನ್ನು
ಗೀತಾಲಾಪನೆ ಮಾಡುತ್ತಿರುತ್ತೇನೆ.
ಆಲಾಪನೆ ಅಸಂಪೂರ್ಣವೆಂದುಕೊಂಡಾಗ
ಜನಹಿತವಾಗಿ ಧ್ವನಿಯೆತ್ತುತ್ತೇನೆ

ಅಕ್ಷರ ಚಿತ್ರ
ಅಕ್ಷರ ಪ್ರಾಣ
ಅಕ್ಷರ ನಡಿಗೆ
ಅಕ್ಷರ ರಾಗ
ಹೆಣ್ಣನ್ನು ಅಡುಗೆ ಮನೆಗೆ ಅರ್ಪಿಸಿ
ರಾಜ್ಯಾಧಿಕಾರ ನಿನ್ನದೇ ಎಂದು
ಮನೆಯನೆಲ್ಲ ತನ್ನ ತೀರ್ಮಾನಕ್ಕೆ ಬಗ್ಗಿಸಿ
ಕಿಟಕಿ ಬಳಿ ನಿಂತು
ಹಾರುವ ಹಕ್ಕಿಯನ್ನು ನೋಡಿ
ಗೊಳ್ಳನೆ ನಗುತ್ತಾಳೆ ಹೆಣ್ಣು!

ದೊಡ್ಡ ಕ್ಯಾನ್ವಾಸಿನ ಮೇಲೆ ಬರೆದ
ಕುಟುಂಬದ ಚಿತ್ರ.
ಒಂದನೊಂದು ಬಂಧಿಸಿಕೊಳ್ಳುತ್ತ
ಒಂದನೊಂದು ವೇಧಿಸಿಕೊಂಡು
ಜೀವನ ಸಾಗಿಸುತ್ತವೆ.

ಬಂಗಾರದ ಪಂಜರದಲ್ಲಿ ಬಂಧಿಸಿ
ಕೋಗಿಲೆಯನ್ನು ಹಾಡೆಂದರೆ
ಅದೆಷ್ಟು ವೇದನಾಭರಿತವೋ
ಮತ್ತೆಷ್ಟು ದುಃಖಪೂರಿತವೋ
ಕೊನೆಗೊಂಬೆಯಲ್ಲಿ ಕುಳಿತು
ಕೋಗಿಲೆ ಮುಕ್ತವಾಗಿ ಧ್ವನಿತೆಗೆದರೆ
ಸಾವಿರ ವೀಣೆಗಳು ತಲೆಬಾಗುತ್ತವೆ.
ತಂತಿಗಳು ಶ್ರುತಿಗೊಳ್ಳುತ್ತವೆ.