ನೀಲಹಕ್ಕಿಗೇನು ಗೊತ್ತು
ಪುಟ್ಟ ನೀಲಹಕ್ಕಿಗೆ ಏನು ಗೊತ್ತು
ಜಾಮದ ಹಿಂದೆ ನೀನು ಉಸುರಿದ
ಆ ಬಿಸಿಯಾದ ಮಾತು..
ನನ್ನ ನಾಚಿಕೆ ನರಳು..
ಮಗ್ಗುಲು ಬದಲಿಸಿ ನಿಡುಸುಯ್ದ
ಸುಖದ ಒಡಲಿಗೆ
ಹತ್ತಿದ್ದ ಕಾಮದ ನೋವು
ಚಿಟಪಟ ಹಾರುವ ನಿರಾತಂಕದ ನೀಲಹಕ್ಕಿಗೆ
ಏನು ಗೊತ್ತು..
ಕಿಟಕಿಯ ಆಚೆಬದಿ ನಿಂತ
ಸುಂದರಾಂಗನೊಬ್ಬ
ಮುಚ್ಚಿಡಲು ಹವಣಿಸುತ್ತಿದ್ದ ನನ್ನ
ವೈಯ್ಯಾರವನ್ನೇ ದಿಟ್ಟಿಸಿ
ಹುಟ್ಟಿಸಿದ ಇರುಸುಮುರುಸು
ಇನ್ನೂ ಬೆಳಗದ ಹಗಲು
ಕಾಡಿದ ಇರುಳು
ಜುಳುಜುಳು ಹರಿದ ತೊರೆಯ
ನಿಲುವು
ಆ ನೀಲಹಕ್ಕಿಗೇನು ಗೊತ್ತು
ಬಿಗುಮಾನಕ್ಕೂ ಲಜ್ಜೆಗೂ
ಬಸಿದ ಬೆವರ ಬೆರಗು
ಸೋತ ಕಂಗಳ ಒಳಗೂ ಹರಡಿ
ನಕ್ಕ ಗಿರಗಿರನೆ ನಾಟ್ಯವಾಡಿದ
ಧೂಮ, ಧೂಪದ ಮರ್ಮ..
ನನಗೂ ನಿನಗೂ ಹತ್ತಿದ್ದು
ಹರಿಯದಂತಹ ಮುನಿಸು
ಅಲ್ಲೂ ಒಂದು ಕನಸು..
ಪಾಪ ಮುದ್ದು ನೀಲಹಕ್ಕಿಗೇನು ಗೊತ್ತು
ನೋವೂಡಿದ ಕಂಗಳು
ಕಾಲ ಕೆಳಗಿನ ರಂಗೋಲಿ
ಚಾದರದೊಳಗಿನ ಕಣ್ಣಹನಿ
ನಿದ್ದೆಯಲೂ ನಕ್ಕ ತೃಪ್ತಿ
ಜೊತೆಗಿದ್ದು ಇನಿತೂ ತಾಗದ ಮುಂಗೈ
ಕಾಡಿದರೂ ಎಟುಕದ
ಕಾಡು ಹಣ್ಣು ,
ಒಂದು ಖಾಲಿ ಹೆಣ್ಣು…
ಆ ನೀಲಹಕ್ಕಿಗೆ ಗೊತ್ತೋ ಇಲ್ಲವೋ…
ಕೇವಲ ವೈಯ್ಯಾರವೋ…
* * * *
ಸೋಗಲಾಡಿಗೆ ಬರೆದದ್ದು
ಬೆಟ್ಟ ತೊರೆದು ಹರಿದ ತೊರೆಯಂಥಾ ನಾನು
ಬೆತ್ತಲೆ ಮೈಚೆಲ್ಲಿದ ಅಗಾಧ ಭೂಮಿ ನೀನು
ಎಷ್ಟು ತಿಂದರೂ ಮುಗಿಯದ
ಅಕ್ಷಯದ ಹಾಡಿನಂಥಾ ದೀರ್ಘ
ಪ್ರಣಯ ತೇರು
ಇನ್ನೂ ಸ್ವಲ್ಪ ಇರಬೇಕಿತ್ತು
ಕಹಿಗೆ ಹತ್ತಿದ ಬೆಲ್ಲದಂತೆ
ನಿನ್ನ ಸೋಗಿನ ಒಳ್ಳೆಯತನದ ಸುಳ್ಳೇ ನಗು
ಮತ್ತೂ ಮುಂದುವರೆಯಬೇಕಿತ್ತು
ನಾನು ಪೆದ್ದಾಗಿಯೇ ನಟಿಸಿ
ಬಯಲನ್ನೇ ಆಲಯವೆಂದು ಸಂಭ್ರಮಿಸಬೇಕಿತ್ತು
ಮಾತಿಗೆ ರೆಕ್ಕೆ ಬರುವ ಮೊದಲಿನ
ಮೌನದ ಮೊಟ್ಟೆಯೇ ಚೆನ್ನಿತ್ತು
ನದಿಯಲ್ಲಿ ಮಿಂದ ಬೆಳಕಿನಂತೆ
ಹಿತವಾಗಿತ್ತು..
ಈ ಕತ್ತಲ ಹಾಗೆ ಆಗ
ಸುಮ್ಮನೇ ನಕ್ಕರೂ ಅರ್ಥವಿತ್ತು
ಕೇಳಿ ಪಡೆವ ಗಮ್ಮತ್ತಿತ್ತು
ಕತ್ತಿ ಮೊನೆಯಂಥಾ ಮಾತುಗಳಿಗೂ
ದೀರ್ಘ ಚುಂಬನದ ಬೆತ್ತಲೆ ಬೆನ್ನಿತ್ತು
ಕಾಡಿ ಬೇಡಿ ಸೇರಿದ ಸಮಯಕ್ಕೂ
ನೀನು ಕದ್ದು ಹೆಕ್ಕಿ ಪೋಣಿಸಿದ ಮುತ್ತಿದ್ದವು
ಇದಾವುದೂ ಒಪ್ಪತಕ್ಕದ್ದಲ್ಲವೆಂಬ
ಸುಳ್ಳೇ ಸರಳುಗಳ ಒಳಗೆ
ನಾನೂ ನೀನೂ ಖೈದಿಗಳಾಗಿಯೂ
ಮೀಟಿದ ನೀರವತೆಗೆ ಮುಗಿಲೆತ್ತರ ನಲುಮೆಯುತ್ತು
ಈಗ ನೋಡು
ಎಲ್ಲ ಮುಗಿಯುವ ಹೊತ್ತು ಬಂದೇ ಬಿಟ್ಟಿತು
ಮುಗಿಯುವ ಮುನ್ನ
ಇನ್ನಷ್ಟಾದರೂ ನೋವು ತುಂಬಿಕೊಳ್ಳಬೇಕಿತ್ತು
ಕವಯಿತ್ರಿ, ಕಥೆಗಾರ್ತಿ ಮತ್ತು ಇಂಗ್ಲಿಷ್ ಅಧ್ಯಾಪಕಿ. ‘ನವಿಲುಗರಿಯ ಬೇಲಿ’ ಇವರ ಕವನ ಸಂಕಲನ.
ಇಷ್ಟವಾಯಿತು ಪದ್ಯಗಳು