1 ಯೂ ವರ್ ಬ್ಲಾಕ್ಡ್…
ಗಿಡವೂ ಹೂವನ್ನು ತೊರೆಯುತ್ತದೆ
ಹೂವೂ ಗಿಡವನ್ನು ತೊರೆಯುತ್ತದೆ
ಇಂಥವೆಲ್ಲ ಯಕ್ಷಪ್ರಶ್ನೆಗಳೇನಲ್ಲ
ಲೆಕ್ಕವಿಡಲು
ಎಣಿಸಿ ಮುಗಿಸುವಂಥವೂ ಅಲ್ಲ
ಆದರೆ ತೊರೆಯುವ ತೊರೆಯನ್ನು
ಸಣ್ಣ ಹನಿ ನೀರಾವರಿಯಿಂದ
ಜೀವಂತವಿರಿಸುವ ಸಲುವಾಗಿ
ಇಬ್ಬರೂ ಒಬ್ಬರ ಹಸ್ತದ ಮೇಲೊಬ್ಬರು
ಇಟ್ಟು ಹರಿಸಿದ ನೀರು
ಇಂದಿಗೆ ಖಾಲಿಯಾಯಿತಾ…
ಆದರೆ
ಅವನು ನನ್ನನ್ನು ಬ್ಲಾಕ್ ಮಾಡಿದ್ದು
ತಿಳಿಯಿತು
ಕೊನೇ ಬೀದಿಯ ತಿರುವಿನಲ್ಲಿ
ಅವನು ಮೂಡಿಸಿ ಮರೆತು ಹೋದ
ಅವನ ಹೆಜ್ಜೆಗಳ ಗುರುತನ್ನು
ಮತ್ತಾರೋ ತಮ್ಮ ಪಾದಗಳಿಗೆ
ತೊಡಿಸಿಕೊಂಡು ನಡೆಯಲು
ಸನ್ನದ್ಧರಾಗಿದ್ದಾರೆ
ಅವನನ್ನು ಹಿಂಬಾಲಿಸುತ್ತಾ
ಅರೆ
ಈ ಹೆಜ್ಜೆಗಳಾದರೂ ಎಷ್ಟು
ಸಮಯಸಾಧಕ…
ಯಾವುದನ್ನು ಯಾರನ್ನು ಯಾವಾಗ
ಹೇಗೆ ಬ್ಲಾಕ್ ಮಾಡಬೇಕೆನ್ನುವ
ಎಲ್ಲ ಪಾಠಗಳನ್ನೂ
ಅದೆಲ್ಲಿ ಕಲಿತುಬರುತ್ತವೋ
ನನ್ನ ನಗ್ನ ಪಾದಗಳಿಗೆ
ತುರಿಕೆ
ಯಾವ ಶಕುನ?!
ಅವನ ಹಿಂಬಾಲಿಸಲು
ದಾರಿ ಕಾಣದೆ
ಹೆಜ್ಜೆಗುರುತುಗಳ ತೊಟ್ಟು
ಹೊರಟ ಪಾದಗಳ ಬೈಯುತ್ತಾ
ಬೈಗಾಗಿಸುವ ನನಗೆ
ಅವನ ನೆನಪೆಷ್ಟು ಸಕಾರಣವೋ
ಮರೆವೂ ಅಷ್ಟೇ….
2 ಪ್ರಾರ್ಥಿಸುತ್ತಿವೆ
ಈ ಶಾಖ ಮತ್ತೇನನ್ನೋ
ಹೇಳುತ್ತದೆ
ಕಾವು ಕೊಡುವ
ಕಾವೇರುವ
ಕ್ರಿಯೆಯೊಂದು
ಪೂರಕವಾಗಿ ಪರಸ್ಪರ
ತಿರುಗುವ
ಈ ಬುಗುರಿಯನ್ನು
ಪೊರೆಯುತ್ತಿದೆ
ಒಲೆಯ ಶಾಖ ನೆಲೆಗೆ
ಅಂಟುವುದು
ಸಾಂಕ್ರಾಮಿಕವಾಗುವಾಗ
ಕೊಂಚ ನಿಂತು ಸುಧಾರಿಸಿಕೊಳ್ಳುತ್ತದೆ
ಬುಗುರಿ
ಮತ್ತೆ ಆ ವಿಶ್ರಾಂತಿಯಲ್ಲಿ
ಸಾವಿರ ಹೆಣಗಳು
ಹೆಸರು ಮರೆಯುತ್ತವೆ
ಸದಾ ಆ ಬೋಳು ಮರದ
ಮೇಲೆ ಬಂದು ಕೂತು
ಯಾವುದೋ ಹಳೆ ಗೀತೆಯ
ಸಾಲೊಂದಕ್ಕೆ ತನ್ನೆಲ್ಲ
ನೋವು ತುಂಬಿ ಹಾಡುವ
ಗುಬ್ಬಿ ಮರಿಗೆ
ನಿರಾಳವಾಗದ ಜಗತ್ತಿನ
ಏರುವ ಕಾವು
ತಟ್ಟುತ್ತದೆ…
ಮೊಳಕೆಯೊಡೆಯದ
ಸಾಸಿವೆಯೊಂದು
ಸಾವು ಕಾಣದ
ಆತ್ಮವನ್ನು
ಹುಡುಕಿ
ಹೊರಡುತ್ತದೆ
ಬೋಳುಮರ
ಗುಬ್ಬಿ ಮರಿ
ತಿರುಗುವ ಬುಗುರಿ
ಆತ್ಮವಿಲ್ಲದ ದೇಹಗಳು
ದೇಹದ ಹಂಗು ತೊರೆದ
ಆತ್ಮಗಳು…
ಯಾವ ಮುಲಾಜಿಗೂ ಸಿಕ್ಕದ
ಕಾವು..
ಪ್ರಾರ್ಥಿಸುತ್ತಿವೆ
ನಿರಾಕಾರವನ್ನು….
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿ. ಕತೆ, ಕವಿತೆ, ಪ್ರಬಂಧ ಬರೆಯುವುದು ಇವರ ಆಸಕ್ತಿಯ ವಿಷಯ.ಮೊದಲ ಕವನ ಸಂಕಲನ “ಮೌನ ತಂಬೂರಿ.”
ಮೊಳಕೆಯೊಡೆಯದ ಸಾಸಿವೆಯೊಂದು……
ತುಂಬಾ ಇಷ್ಟವಾಯಿತು ಈ ಸಾಲುಗಳು