ಋತು
ಮುಂಗಾರಿನ ರಾತ್ರಿಗೆ
ಹೊಳೆಯುವ ಕೋಟಿ ಕಣ್ಣುಗಳು
ಉರಿಯುವ ಹಸಿವಿನ
ಮಂಪರಿನ ನಿದ್ದೆಯಲ್ಲಿ
ಕರಗದ ಇರುಳು
ನಾಳೆಗಳನ್ನು ಬೆಳಗಿಸದ
ಸ್ವಾಗತವೇ ಇಲ್ಲದೆ
ಅವತರಿಸುವ ಬೆಳಗುಗಳು
ಮೋಡದ ವ್ಯಾಮೋಹವಿಲ್ಲದ
ಕಾಡು – ಕಡಲು
ಕೋಟೆ – ಕಟ್ಟಡಗಳು
‘ಇಲ್ಲ’ ಎನ್ನುವ
ಸಾಧ್ಯತೆಯಲ್ಲಿ
ಅಸಾಧ್ಯ ಆಕರ್ಷಣೆ
ಕಾದು ನೋಡುವ ಅನಿವಾರ್ಯತೆ
ಕಾಯುವಿಕೆಯ ಅವಧಿಯಲ್ಲಿ
ಕುಸಿಯುವ ಭರವಸೆಗಳಲ್ಲಿ
ಯಾರಿಗೆ ಯಾರು
ಅನುಕಂಪ ಹಂಚುವುದು?
ಉಳುಮೆಯಿಲ್ಲದ ನೆಲಕ್ಕೋ
ಕಾಯಿಲ್ಲದ ಮರಕ್ಕೋ
ಅಮಾನ್ಯವಾಗುವ ವರಕ್ಕೋ?!
ಅಲ್ಲಲ್ಲಿ ಮಳೆನೀರು
ಅಲ್ಲಲ್ಲಿ ಕಣ್ಣೀರು
ಮುಳುಗುವುದೆಲ್ಲೋ?
ಮುಗಿಯುವುದೆಲ್ಲೋ?!
ಲವ್ @44
ಇಷ್ಟವಾಗುವವನ ಬಗ್ಗೆ
ಬೆಟ್ಟದಷ್ಟು ಕನಸು ಕಾಣಲು
ಸಮಯವಿದೆ; ಆದರೆ
ಈಗ ಕನಸುಗಳ ಕಾಲವಿಲ್ಲ.
ಬಾಗಿಲು ತೆರೆದಿಟ್ಟು
ಗಹಗಹಿಸಿ ನಗುವ ಕಲ್ಪನೆಗಳಲ್ಲಿ
ಗಹನ ಯೋಚನೆಗಳಿಲ್ಲ;
ಆದರೆ
ತಣ್ಣನೆ ನಿರಾಳವಿದೆ.
ಉಸಿರಾಟದಷ್ಟೇ ಸಲೀಸು
ಚೌಕಟ್ಟಿನೊಳಗಿನ
ಚಿತ್ರವಾಗಿಬಿಡುವುದು;
ಆದರೆ ಹಾಗಿದ್ದೂ
ಚಿತ್ತಕ್ಕೆ ಬಿಡುವಿಲ್ಲ.
ಮನೆಯ ಹತ್ತು ಜನರಲ್ಲಿ ನಾನೊಬ್ಬಳು
‘ನಾನು’ ಬರೀ ಇಷ್ಟೇ ಅಲ್ಲ;
ಹಲವು ಪಾತ್ರಗಳು
ಒಳಗೇ ಹುದುಗಿವೆ.
ಗಮನವಿಟ್ಟು ನೋಡಲು
ಎಲ್ಲರಿಗೂ ಅವರದೇ ಆದ
ಆಕಾಶಗಳಿವೆ;
ನನ್ನ ಕಿಟಕಿಯೂ
ಪುಟ್ಟ ಆಕಾಶವನ್ನು ತೋರಿಸುತ್ತದೆ.
ಈ ಆಕಾಶದ ಬಗೆಗೊಂದು
ಪ್ರೀತಿ ಹುಟ್ಟಿಕೊಂಡಿದೆ.
ಈ ವಯಸ್ಸಿನಲ್ಲಿ
ಇನ್ನೇನನ್ನು ಪ್ರೀತಿಸುವುದು?
ಈ ವಯಸ್ಸಿನಲ್ಲಿ
ಏನನ್ನೂ ಪ್ರೀತಿಸಬಹುದು.
ಲವ್ @44
ಶ್ರೀಕಲಾ ಹೆಗಡೆ ಕಂಬ್ಳಿಸರ ಹುಟ್ಟಿದ್ದು, ಬೆಳೆದದ್ದು ಸಿರಸಿಯ ಪುಟ್ಟ ಹಳ್ಳಿಯೊಂದರಲ್ಲಿ.
ಓದಿದ್ದು ವಾಣಿಜ್ಯಶಾಸ್ತ್ರ.
ಐದು ವರ್ಷಗಳು ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡಿ
ಈಗ ಊರಲ್ಲಿ ಗೃಹಿಣಿ ಮತ್ತು ಬ್ಲಾಗರ್.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ