ಒಂದು ನಿರಂತರ ಗುನುಗು
ಯಾರ ಭಾಗ್ಯವದು ಈ ನಿಶ್ಯಬ್ದ ಸಂಗೀತ ಯಾನವು?
ಈ ಮೆಳೆಗಳ ನೋಡು
ಆ ಅಧರಗಳು ಮೆಲ್ಲನೆ ನಿನ್ನ ತುಟಿಗಳ ತಾಗುತ್ತವೆ
ಪಲುಕೊಂದ ಮೆಲುನುಡಿಯಲು
ಈ ಜೊಂಡುಮೆಳೆಗಳು, ಅದೋ ಅದರಲ್ಲೂ
ಆ ಕಬ್ಬಿನ ಜಲ್ಲೆಗಳ ಮೇಳ… ಅವೂ ಸಹಾ
ನೋಡಿಲ್ಲಿ ಹಗುರಾಗಿ ನರ್ತಿಸಿವೆ
ತಮ್ಮದೇ ಹೆಜ್ಜೆಗಳ ತನನದಲಿ
ನೀನಿಲ್ಲದೇ ಈ ಗಾನಗೋಷ್ಠಿಯು ಮರಣಿಸುವುದು
ವಾದ್ಯಗಳು ನಿನ್ನ ತೆಕ್ಕೆಯಲಿ ನಲಿಯುವುವು
ಅದೊಂದು ಸುದೀರ್ಘ ಮುತ್ತನೀಯುವುದು
ಮದ್ದಳೆಯು ಬೇಡುವುದು
ಮುಟ್ಟು ನನ್ನ, ನಾನು ನಾನಾಗಬೇಕಿದೆ
ಇಳಿದುಬಿಡು ನನ್ನ ಮೂಳೆ ಮಾಂಸ ಮಜ್ಜೆಗಳೊಳು
ಕಳೆದ ಇರುಳಿನಲಿ ಸಾವನ್ನಪ್ಪಿದ ಸಖ್ಯವು
ಇಂದು ಪರಿಪೂರ್ಣವಾಗಿಬಿಡಲಿ
ಅದೇಕೆ ಅಳುತ್ತಾ ನಿನ್ನ ಅಧೋಗಮನದೊಟ್ಟಿಗೆ
ಹೀಗೆ ಬದುಕುವುದು?
ನನ್ನಿಂದ ಇನ್ನು ಸಹಿಸಲಾಗದು
ನನ್ನ ಹೀಗೇ ಒಂಟಿ ಬಿಟ್ಟುಬಿಡು
ಇಲ್ಲವೇ ಎದೆ ತುಂಬಾ ನಶೆಯ ತುಂಬಿಬಿಡು
ಈಗ ಗೊತ್ತಾಗಿದೆ ನನಗೆ
ನಿನ್ನ ಜೊತೆ ನಿರಂತರ ಗುನುಗಿನಲಿ ಇದ್ದುಬಿಡುವುದು ಹೇಗೆಂದು…
ಕವಯಿತ್ರಿ, ಕಥೆಗಾರ್ತಿ ಮತ್ತು ಇಂಗ್ಲಿಷ್ ಅಧ್ಯಾಪಕಿ. ‘ನವಿಲುಗರಿಯ ಬೇಲಿ’ ಇವರ ಕವನ ಸಂಕಲನ.