ಒಮ್ಮೊಮ್ಮೆ ಮೆಲ್ಲನೆ ಚಲಿಸುವ ಮತ್ತೊಮ್ಮೆ ಕಿಂಚಿತ್ತೂ ಅಲುಗದ ಚಿತ್ರಪಟದಂತೆ ಕಾಣುವ ಕವಿತೆಯಂತಹ ಈ ಲೋಕದಲ್ಲಿ ಕವಿತೆಗಳು ಯಾವಾಗ ಆದವು ಎಲ್ಲಿಂದ ಉದುರಿದವು ಎಲ್ಲಿಗೆ ಹೋದವು ಎನ್ನುವುದಕ್ಕಿಂತ ಋತದಂತೆ ಅವು ಎಂದೆಂದಿಗೂ ಇರುವವು ಮತ್ತು ಹಾಗೆ ಕಾಣುವ ನಿಜ ಮಾತ್ರವೆಂದು ಅನ್ನಿಸುತ್ತದೆ. ಇನ್ನೂ ನಿಲ್ಲದ ನನ್ನ ಎದೆಬಡಿತದಂತೆ ನಿರಂತರವಾಗಿ ಅನಿಶ್ಚಿತವಾಗಿ, ಅವಿಚ್ಛಿನ್ನವಾಗಿ ಅವೂ ಇವೆಯಷ್ಟೆ. ಹಾಗೆ ಇರುವುವ ಕೆಲವೇ ಕೆಲವನ್ನು ನಾನು ಯಾವುದೋ ಮಂಪರಿನಲ್ಲಿ ಹೇಳಿಬಿಟ್ಟಿರುವೆನಷ್ಟೇ. ಇರುವುದನ್ನೇ ಮತ್ತೆ ಹೇಳಿಕೊಳ್ಳುವಾಗ ಸುಮ್ಮಗೆ ಕಣ್ಮುಚ್ಚಿ ಒಂದೇ ಧೀರ್ಘ ಉಸಿರಿನಲ್ಲಿ ಹೇಳಿರುವ, ಒಂದು ಹಾಡು ಮುಗಿಯುವುದರೊಳಗೆ ಹೇಳಿರುವ, ಒಂದು ಅನ್ಯಮನಸ್ಕತೆಯಲ್ಲೇ ಮುಗಿದಿರುವ ಈ ಕವಿತೆಗಳೆಲ್ಲಾ ಈಗ ಬರೆಯ ನನ್ನದು ಎಂದು ಹೇಗೆ ಹೇಳಲಿ ಎಂದು ಕೇಳುತ್ತಿದ್ದಾಳೆ ನಕ್ಷತ್ರ
1
ನೀನೊಂದು ಅಲುಗಾಡದ ಗೊಂಬೆಯ ಹಾಗೆ ನಿಂತು ಬಿಡು
ನಿನ್ನ ಕಣ್ಣಿಂದ ನನ್ನ ಕಣ್ಣನ್ನು ಹೆಕ್ಕಿ ನಿನ್ನ ನೋಡುತಾ
ನಾನು ನಿಂತಿಬಿಡುವೆ
ಮರಳಿಸು ನನಗೆ ಮತ್ತೆ ನಿನ್ನ ಕಲ್ಲು ದೇಹವನ್ನು
ನಿನ್ನ ಗಡಸು ಕೈಯ್ಯ ಗೆರೆಗಳು, ಅಡ್ಡಾದಿಡ್ಡಿ ಕತ್ತರಿಸಿದ
ಸಣ್ಣ ಉಗುರುಗಳಿಗೆ ನಾನು ಹಾತೊರೆದು
ಮುತ್ತುಗಳು ತುಂಬಿದ ನಿನ್ನ ತುಟಿಗಳು, ಎಂದೋ
ನಕ್ಕ ನಗು ನಿನಗೆ ಮಾತ್ರ ಕೇಳುವ ನನ್ನ ದನಿ
ನಿನ್ನ ಆತ್ಮದ ಒಸರುವಿಕೆಯಿಂದ
ಪಡೆದ ಜೀವ ನನ್ನದು
ಹೋಗದಿರು ಒಂದಿರುಳೂ
ಅಲುಗಾಡದ ಮೌನದ ಹಾಗೆ ನಿಂತುಬಿಡು
ನೀನು ಅಲ್ಲಿ ಇರುವುದಿಲ್ಲ ನಿನ್ನ ದನಿ ನನಗೆ ಕೇಳುವುದಿಲ್ಲ
ಇದೆಲ್ಲಾ ಇಲ್ಲದಿದ್ದರೂ
ಮಹಾಪ್ರಸಾದದ ಹಾಗೆ ನಿನ್ನ ಕಣ್ಣಿಗೆ ಒತ್ತಿಕೊಳ್ಳುವುದು
ಇಷ್ಟೇ ಸಾಕು ನನಗೆ
ನಾನು ಪ್ರೇಮಿಸುವುದನ್ನು ಮರೆತಿರುವೆ
ಪ್ರೇಮಿಸಲು ದಿನಗಳು ಬರುವುದಿಲ್ಲ
ನಾವು ಇರುವೆವು ಎಂದರೆ ಚಿಟ್ಟೆಗಳ ಕನಸು
ಒಂದಿರುಳೂ ಬಿಡದೆ ಜೊತೆಗಿರುವುದು ಇತ್ಯಾದಿ
ನಾನು ಕೂಗಿ ಕರೆಯಲು ನಿನಗೊಂದು ಹೆಸರೇ ಇಲ್ಲಾ
ನಾನು ಕರೆದಾಗ ನಿನಗೆ ಬರಲು
ದಾರಿಯೂ ಇಲ್ಲ
ಇನ್ನೂ ಬೇಕಾದಷ್ಟು ಇದೆ ಹೇಳಲು
ಬರುತ್ತಿಲ್ಲ ನನಗೆ
2
ನೀನು ಒಳಗೆ ಸೀಳಿಕೊಂಡು
ನನ್ನ ಗಂಟಲಿನವರೆಗೂ
ಬಂದಿರಬೇಕು
ನನ್ನ ಹಣೆಯ ಮೇಲೆ
ನಿನಗೆ ಕಾಣಿಸುವ ನನ್ನ
ಒಂದೇ ಕಣ್ಣು, ಮತ್ತು
ನೀನು ಯಾರಿರಬಹುದೆಂದು
ನನಗೆ ಹೊಸದಾಗಿ ಅನಿಸುವುದು
ಅದೇ ಹೊತ್ತಲ್ಲಿ
ಈಗ ನಿನ್ನ ಮೆದು ಮೈಯ್ಯ ಏಕಾಂತ
ನಿನ್ನ ಅಂದರೆ ನನ್ನ…
ಏನೋ ಒಂದು
ಮುಗಿಸಿದ ಹಾಗಿದೆ, ಮುಗಿಸಿಯೂ
ಇಲ್ಲೇ ಇರುವೆ ನೀನು
ನನ್ನೆದೆಯಲ್ಲಿ, ತೊಟ್ಟಿಕ್ಕುತ್ತಿರುವ ನೋವಿನಲ್ಲಿ
ಹಾಗೂ ನನ್ನ ಕೇಳದೆಯೇ
ದೂಡಿ ಬರುವ ನಿಟ್ಟುಸಿರಿನಲ್ಲಿ
ಏನಾದರೂ ಮಾತಾಡು..
ಕಾಲ ಉಗುರಿಂದ ನೆತ್ತಿಯ
ತನಕ ನಾನು ನಿನ್ನ ಹಾಗೆಯೇ
ನೀನು ಏನೋ ಒಳಗಿಟ್ಟುಕೊಂಡು ಚೂಪಾಗಿ
ನಗುವುದು ನನ್ನ ಹಾಗೆಯೇ
ಮಾತಾಡು ಏನಾದರೂ
ಬಂದಿಲ್ಲಿ ಮಡಿಲಲ್ಲಿ ಮಲಗು
ನಿನ್ನ ಕೂದಲು ಸವರಿಕೊಂಡು
ಬೇಕೆಂದಾಗ ಚುಂಬಿಸಿಕೊಂಡು
ನೀನು ಏನೇನೋ ನೆನೆಸಿಕೊಂಡು
ಹೇಳುವುದನ್ನು ಅಷ್ಟೊಂದು
ಸುಖವಿಲ್ಲದೆಯೇ ಕೇಳುವೆ
ಅಷ್ಟು ಹೊತ್ತಿನಿಂದ ಹೀಗೆಯೇ ಇರುವೆವು
ಇನ್ನು ತಬ್ಬಿಕೊಳ್ಳದೆ ಇರುವುದಾದರೂ ಹೇಗೆ
ಮಾತಾಡು ನೀನು,
ಆಗಾಗ ನಿನ್ನ ಮುಖ ನೋಡಿಕೊಂಡು
ನಿನ್ನ ಎದೆಯಲ್ಲಿ ಮೂಗು ಉಜ್ಜಿಕೊಂಡು
ಸುಖವಾಗಿಯೇ ಕೇಳುವೆ
ನಾವು ಮತ್ತೆ ಮಾತಾಡುವುದೇ ಹಾಗೆ
ಉದ್ದದ ಮೆರವಣಿಗೆಯ ಹಾಗೆ
ಎಲ್ಲಾ ಮರೆತು ಮಾತಾಡುವುದು
ಏನೋ ಸಿಗುವುದು ಇನ್ನೇನೋ
ಕಳೆದುಹೋಗುವುದು
ನಡುವೆ ನಿನ್ನ ಕಚಕುಳಿಗಳಿಗೆ
ಮರಳಿನ ರಾಶಿಯ ಮೇಲೆ
ನಿನ್ನನ್ನು ದರದರ ಎಳೆದುಕೊಂಡು
ನಿನ್ನ ಹೊಟ್ಟೆಯ ಮೇಲೆ ಕೂತು ಮರಳು ಸುರಿದು
ಹೊರಳಾಡಿಸುವೆ
ಇಷ್ಟಾದ ಮೇಲೆ ಉಳಿಯುವುದಾದರೂ ಏನು
ಕಳೆಯುವ ಒಂದು ರಾತ್ರಿಯಷ್ಟೇ
3
ನನ್ನ ಮುದ್ದು ಮತಿಭ್ರಮಣೆಗೆ
ನೀನೇ ಏನಾದರೂ ಕೊಡಬೇಕಷ್ಟೇ
ಏನಿಲ್ಲದಿದ್ದರೂ ಯಾರೋ
ಚುಂಬಿಸಿದ ತುಟಿಯನ್ನಾದರೂ!
ಗೊತ್ತು ನನಗೆ
ಎಲ್ಲಾ ಮುಗಿಸಿದ ಹೊತ್ತು
ಆ ದ್ವೀಪದಲ್ಲಿ ಬೇಕಂತಲೇ
ಬೆನ್ನು ಮಾತ್ರ ಒದ್ದೆಯಾಗುವಂತೆ
ಮಲಗಿ ಮೇಲೆ ನೋಡುವುದು
ಮತ್ತು ಈ ತಡರಾತ್ರಿಯಲ್ಲಿ
ನಿನ್ನ ನೋಡಿ ತಡೆಯಲಾರದೆ
ನಿನ್ನ ಕಣ್ಣಲ್ಲೇ ನನಗೆ ಮುಕ್ತಿ
ದೊರೆಯುವುದು
ಹೊಸ ಬೆಳಕಿಗೆ ನೀನು
ಕಾಲುದಾರಿ ಅಡ್ಡಹಾದಿಯಲ್ಲಿ
ಹೇಳದೆ ನಡೆವಾಗ, ನಿನ್ನ ಬಗಲಲ್ಲಿ
ಜೋಳಿಗೆಯಂತೆ ಸುಸ್ತಾಗಿ
ಜೋಲಾಡಿಕೊಳ್ಳುತ್ತೇನೆ
ತುಂಬಿಸಿಕೊಂಡಷ್ಟು
ಹೆಗಲು ಭಾರವಾದರೆ
ನಾನು ಹಗುರಾಗುವುದು
ನೀನು ತಬ್ಬಿಬ್ಬುಗೊಳಿಸುವ ರೀತಿಗೆ
4
ಯಾರೂ ಏಳಬಾರದ ಸಮಯ
ಓಣಿಗಳಲ್ಲಿ ಯಾರೂ ಬರದಂತೆ
ಗಿಡದ ನೆರಳು ಅಡಗಿಸಿದೆ
ತಿರುವುಗಳು ದಾರಿ ಮಾಡುತ್ತಿದೆ
ಮೇಲೆ ತುದಿಯ ಬಾಗಿಲಿಲ್ಲದ ಕೋಣೆಗೆ
ಈಗಷ್ಟೇ ತಿಳಿಗಾಳಿ ಪರಿಮಳದ
ಸುಳಿವು ಹತ್ತಿದೆ
ನಾವು ಕೂಡುವುದನ್ನು ಹೇಗೆ
ಎಲ್ಲಿಂದ ಎಂದರೆ ಏನನ್ನುವುದು?
ಒಂದಷ್ಟು ಆಕಾಶವಾದರೆ ಸಾಕು
ನಾನು ಹೂವಾಗುವೆ
ಹರಿದು ಹೋಗುವ ಹಾಲು
ನಮ್ಮ ನೆರಳಿನ ಓಣಿಯಲ್ಲಿ
ಹೊರಳಿ ಹೊರಳಿ ಬಾ ನನ್ನ
ಪಕಳೆಯೊಳಗೆ ಮತ್ತೆ ಮೊಗ್ಗಾಗುವೆ
ತಿಂದು ತೇಗಿ ಕುಡಿದು
ಭಾರದ ಒಂಟಿತನ
ಹೇಗೆ ಬಂದಿತ್ತು ನಿನಗೆ?
ಇಲ್ಲಿ ಹೀಗೆ ಗಲಿಬಿಲಿಯಾಗಿ
ಎಲ್ಲಾ ಎಸೆದು ದಬ್ಬಿ ಹೊರ ಹಾಕಿರುವೆ
ನೀನು ಎಂದರೆ ಏನು ನನಗೆ?
ಒಂದು ಚಂದದ ಮಳೆ, ದೂರದ ಮೋಡ
ದೀರ್ಘ ಅಲೆದಾಟ, ಅರ್ಧ ಮರೆತ ಕನಸು?
ಅಥವಾ ನಿನ್ನ ಪಕ್ಕದಲ್ಲಿ ಕವಿತೆಯಾಗಿ
ಕುಳಿತಿರುವುದೇ?
5
ಓ ನನ್ನ ಜೀವವೇ
ಬರೆಯುವುದೇನೆಂದು
ತಿಳಿದಿಲ್ಲ ನನಗೆ
ಒಂದು ಸಲ ಹುದುಗಿ ಬಿಡುತ್ತೇನೆ
ಎಲ್ಲಾದರೂ
ನಿನ್ನ ದೇಹದ ಒಳಗೆ
ಅದೇನೋ ತಿಳಿಯುತ್ತಿಲ್ಲ
ಹಾಯಾಗಿ ಮಲಗಿದ್ದೇನೆ
ನೀನು ಬಿಟ್ಟು ಹೊರಟ
ಕಂಪನದ ಮಂಪರಿನಲ್ಲಿ
ನಿನ್ನ ದೇಹದ ಕೂದಲಿನ
ಕಚಗುಳಿಗೆ ನನ್ನ ಮೈಯ್ಯೆಲ್ಲಾ
ನುಂಗಿಕೊಳ್ಳುತ್ತಿದೆ
ನಿನ್ನ ಮೈಯ್ಯ ಹೊಳಪಿಗೆ
ನಿನ್ನ ಮೈಯ್ಯ ಸದ್ದಿಗೆ
ಬೆವರಿ ಸವೆದು, ಒಣಗಿ
ಕಣ್ಣಿನಿಂದ ಕಾಲಿನವರೆಗೆ
ಒದ್ದೆಯಾಗಿದ್ದೇನೆ
ಈ ಕ್ಷಣದ ಅಕ್ಷರಗಳು, ಈ ಪದಗಳು. ಹಾಡು
ಏನೂ ಹೇಳಲಾರವು ಸುಮ್ಮನೆ
ನಾನೀಗ ಸತ್ತಂತೆ, ಮತ್ತೆ ಹುಟ್ಟಿದಂತೆ
ಕಂಗಾಲಾಗಿದ್ದೇನೆ
ನನ್ನನ್ನು ನಾನೇ ನೋಡಲಾಗದಷ್ಟು
ಕರುಣೆ ನನಗೆ
ಒಂದು ಸಲ ಹೊಕ್ಕಿ ಬಿಡುತ್ತೇನೆ
ಹೇಗಾದರೂ
ಮತ್ತೆ ಇತ್ತ ಈ ಕನಸಿಗೆ
ಬರಲಾರೆ
ಒಂದು ಸಲ ಹುದುಗಿ ಬಿಡುತ್ತೇನೆ
ಎಲ್ಲಾದರೂ
ನಿನ್ನ ದೇಹದ ಒಳಗೆ
ಮೈದೊಗಲು ಮುಚ್ಚುವುದೂ ಬೇಡ
ನಿನ್ನ ರಕ್ತ ಮಾಂಸ, ಹೆಂಗರುಳು
ಆ ಮುಖದ ಇಷ್ಟು ಹತ್ತಿರ
ಒತ್ತಿ ಬಿಡುವ ಉಸಿರು, ಹಸಿವು
ವಾಕರಿಕೆ, ಆಕಳಿಕೆ
ನಾನಿನ್ನೂ ನೋಡದ ಕಾಲ
ಬೆರಳಿನ ನೆಟಿಕೆ
ಒಂದು ಸಲ ಹುದುಗಿ ಬಿಡುತ್ತೇನೆ
ಎಲ್ಲಾದರೂ
ನಿನ್ನ ದೇಹದ ಒಳಗೆ
6
ಹಂಬಲದ ಹೊತ್ತು ಕಾಣುವ ಸುಖ
ನೀನಿರಬಹುದು
ಈ ಮಿಂದ ಕೂದಲುಗಳು
ಎಷ್ಟು ಹಾಯಾಗಿ ಹಾರಾಡುತ್ತಿದೆ
ಅಲ್ಲೇ ಇರುವೆ ನೀನು
ಒದ್ದೆ ಮಣ್ಣಿನ ಮುದ್ದೆಯಲ್ಲಲ್ಲ
ಒಂದು ರಾಶಿ ಬಿಳಿ ಮರಳಿನ
ಏಕಾಂತದಲ್ಲಿ
ಈಗ ನೋಡು ನನ್ನೊಳಗೆ ಹೊರಗೆ
ನೀನಿಲ್ಲ; ಒಡನೆ ಬೀಸುವ ಗಾಳಿಗೂ ಹದವಿಲ್ಲ
ಕೈಹಿಡಿದು ನಿನ್ನೊಡನೆ ನಡೆವ
ನಮ್ಮ ನೆರಳಿನಷ್ಟು
ಇಲ್ಲಿರುವ ಬಣ್ಣಗಳು ಚಂದವಿಲ್ಲ
ಹಾಡಿಗೆ ಮೂಡುವ ಜೀವವೇ
ವಿಸ್ಮಯಕ್ಕೆ ಕುದಿಯುವ ಮೌನವೇ
ಅತೀ ದೂರದವರೆಗಿನ ಸಂಕಟವೇ
ಸೊಬಗೆಂದರೆ ನೀನೇ ಇರಬೇಕು
ನಾನಿರುವ ತೀರವೇ
ಹೇಗೆ ಪ್ರೀತಿಸಲಿ ನಿನ್ನ
ನನ್ನ ನೀನುಗಳೆಲ್ಲಾ ನೀನಾಗು
ಕತ್ತು ಕೊಂಕಿಸಿ ಕಾಲು ಚಾಚಿ ಕೈ ನೀಡಿ
ಒಂದಿಷ್ಟೂ ಕಾರಣವಿರದೆ ನಕ್ಕು
ನನ್ನನ್ನು ಸುಮ್ಮನೆ ಹಾಗೆ ಒಡ್ಡಿಕೊಳ್ಳಲು ಬಿಡು
7
ಅದೊಂದು ಮಧ್ಯಾಹ್ನ. ಹಾಗೆಂದುಕೊಂಡರೆ ರಣ ಬಿಸಿಲಲ್ಲ
ನಿನ್ನ ಕಪ್ಪನೆಯ ಗಡ್ಡ, ಆಹಾ ಮಧ್ಯಾಹ್ನದ ಬೆಳ್ಳಗಿನ ಬೆಳಕು
ಮಣ್ಣಾದ ಎಲೆ ಕಿತ್ತುಕೊಂಡು ನಾನು ನಿನ್ನೊಡನೆ ನಡೆಯುತ್ತಿದ್ದೆ.
ನನಗೆ ಮೀಯುವ ಹುಚ್ಚು.
ಮಿಂದು ಬಂದು ಒದ್ದೆ ತಲೆಯ ನೀರು ಹನಿಯುತ್ತಾ
ಅಲ್ಲಿ ಕುಳಿತುಕೊಳ್ಳ ಬೇಕು. ಅದೇ
ಅಲ್ಲಿ ನನ್ನೊದೊಂದು ಹೊಳೆಯ ತೀರವಿದೆ
ಹಾಗೇ ಗಾಳಿಗೆ ಮೈಯ್ಯೊಡ್ಡಿಕೊಂಡು
ಆ ತಂಪಿನಲ್ಲಿ ಕುಳಿತುಕೊಳ್ಳುವೆ
ನೀನು ಅಲ್ಲಿ ಇರದಿದ್ದರೂ ಹಾಗೇ ಇರುವೆ
ಒಂದು ರಾತ್ರಿಯ ಹೊತ್ತು
ಬೆಳದಿಂಗಳು, ಚಂದ್ರ,
ಇವೆಲ್ಲವೂ ಇರಲಿ ಒಂದು ಮೂಲೆಯಲ್ಲಿ
ಅಳುತ್ತೇನೆ ನಗುತ್ತೇನೆ, ಏನೋ ಒಂದು ಅನುಭವಿಸುತ್ತೇನೆ.
ನಂತರ ಹೊರಗಿನ ಸದ್ದಿಗೆ ಯಾರೋ ಬಂದರೆಂದು
ನೀನು ಹೆದರಿ ಒಳಗೆ ಬಚ್ಚಿಡುತ್ತೀಯ
.
ಎಷ್ಟು ಚಂದ. ಚಂದವೆಂದರೆ ಹೀಗೇ.. ಕಳ್ಳತನ.
ಇಷ್ಟಕ್ಕೂ ನಿನ್ನನ್ನು ಗಂಡೆಂದು ನಾನು ಬಯಸಲಿಲ್ಲ
ನಿನ್ನ ಹಾಗೆ….ನೀನು ಹಾಗೇ..
ಹಣೆಗೆ ಮುತ್ತಿಕ್ಕಿದ ಹಾಗೆ
ಚಿಕ್ಕವನಿದ್ದಿರಬೇಕು ಅಂದು
ನಾನು ಕಣ್ಣು ಮುಚ್ಚಿದರೆ ಸಾಕು ಎಲ್ಲಾ ಕಾಣುವೆ
ಮರುಕ್ಷಣ ಕಣ್ಣು ಬಿಡುವೆ ದೊಡ್ಡವನಾಗುತ್ತೀಯ
ಈ ಬೆಳಗು..ನೋಡು
ತಡರಾತ್ರಿಗೆ ಬೇಡವೆಂದರೂ ಕಣ್ಣು ಮುಚ್ಚಿ
ನಿನ್ನ ಮೈಯ್ಯ ಯಾವುದೋ ಮೂಲೆಯಲ್ಲಿ
ಮುದುಡಿ ಮಲಗಿದ್ದೆ; ಮಲಗಿ ಮರುಳಿದ್ದೆ
ಈ ಝಾವಕ್ಕೆ ನಿನ್ನ ತಟ್ಟಿ ಎಬ್ಬಿಸಿ ಬೆಸೆದದ್ದು
ಹೊರಡುವ ಮುಂಚಿನ ಸನ್ನಹಕ್ಕೆ
ಹೊತ್ತು ಸಾಗುವಾಗ ನೀನಿತ್ತ ಬೆನ್ನಿನ
ತಾಪವೊಂದು ಸಾಕು ಸಾವಿನ ತನಕ
ನನಗೆ ಮರುಳಲ್ಲ
ನಾನೇ ಹೇಳುವ ನಿನ್ನದೇ ಮಾತುಗಳು
ನನಗೆ ಕೇಳುತ್ತದೆ,
ನಾನು ಹೇಳುವುದು ನೀನು ಕೇಳುವುದು
ಈ ಇಬ್ಬರ ಮುಂದೆ ಕುಳಿತು ಸುಖಿಸುತ್ತೇನೆ
ಹೇಳುವುದನ್ನು ಹೇಳಬೇಕಲ್ಲ ನನಗಾದರೂ
ಕಣ್ಣು ಮುಚ್ಚಿ ನೀನು ಏನೋ ಬೆಚ್ಚಗೆ ಕಾಣುವುದು
ಮಾತುಗಳು ನಗು ಬಿನ್ನಾಣ ಬೈಗುಳ ಎಲ್ಲವೂ ಹಾಗೇ
ಮರೆತೇ ಬಿಡುವೆ ನೀನು ಎದುರಿಗಿರುವುದನ್ನು
8
ನಿನ್ನೆಯದೇ ಪರಿಮಳದ ಬಟ್ಟೆ
ಬಾಚಿಕೊಳ್ಳದ ಮುಂಗುರುಳು
ಹೊಟ್ಟೆಯೊಳಗೆ ಅವುಚಿಟ್ಟುಕೊಂಡ
ಒಂದಿಷ್ಟು ಅದೇ ಉಸಿರುಗಳು…
ನೀನು ಅವಸರದಲ್ಲಿ ತುಳುಕಿಸಿ
ಚೆಲ್ಲಿಹೋಗಿದ್ದನ್ನು ಹೆಕ್ಕಿ ಪೋಣಿಸಿ
ಅದೇ ಅಂದಿನಂತೆ ಕುಳಿತಿರುವೆ
ಎಷ್ಟೆಂದು ಬಾರಿಸಲಿ
ಮೌನದ ಕೊರಳ ಘಂಟೆ
ಆಹಾ ಎಂತಹ ಇರುಳು
ಆ ಹೆಗಲ ಮಚ್ಚೆ
ಮತ್ತು ನಿನ್ನ ತುಟಿಗಳು
ಏನು ಮಾಡುತ್ತಿರಬಹುದು
ಈ ಹೊತ್ತಲ್ಲಿ?
ನಾನು ಮತ್ತು ನನ್ನ ನೆರಳು
ಒಬ್ಬರಿಗೊಬ್ಬರು
ಸುಖಿಸುತ್ತಿದ್ದೇವೆ
9
ನಡು ರಾತ್ರಿ ಎಷ್ಟು ಹೊತ್ತಿಗೋ
ಚಾದರದ ಒಳಗೆ ನುಸುಳಿ
ತಬ್ಬಿಕೊಂಡಾಗ ನಿನ್ನೊಡನೆ
ಹಾದರ ಮಾಡಬೇಕೆನಿಸುತ್ತದೆ
ಆದರೆ ನೀನು ನನ್ನ
ಕೈ ಹಿಡಿದ ಗಂಡ
ನಿನ್ನ ಬೆಣ್ಣೆ ಬೆಣ್ಣೆ ಮುಖದಲ್ಲಿ
ಉರಿವ ಕೆಂಡದ ನೀರು ಬರಿಸಿ
ನಾನು ಆವಿಯಾದೆ
ಕರಗಿದ ಹೆಜ್ಜೆಯನ್ನು ಮೂಡಿಸಿ
ನೀನು ಮುದ್ದೆಯಾಗುವುದನ್ನು
ನೋಡಲಾಗದೆ
ಕದ್ದು ಹಾಲೂಡಿಸುತ್ತೇನೆ
ನಿನ್ನ ಜೊತೆ ಕಣ್ಣಮುಚ್ಚಾಲೆಗೆ
ಕಣ್ಣಿಗೆ ಕಾಣುವ ಗಂಡಸರೆಲ್ಲಾ
ನನ್ನ ಗಂಡಂದಿರು
ನಾನು ತುಂಬಿಸಿಕೊಳ್ಳಲು
ಹಂಬಲಿಸುವುದು ನಿನ್ನನ್ನು ಮಾತ್ರ
ಕಣ್ಣು ತಪ್ಪಿಸಿ ಉಗುಳು ನುಂಗಿ
ಓಡಿ ಹೋಗುವ ದಿನ
ನನ್ನದೊಂದು ಬಿನ್ನಹ
ನೀನು ಗಂಡನಾಗ ಬೇಡ
ನಾನು ಜಾರೆಯಾಗುತ್ತೇನೆ
ನೀರವತೆಯ ಜೀರುಂಡೆ ಸದ್ದಿಗೆ
ನೀನು ಹೂಂ ಗುಡುತಿದ್ದೀಯ.
ಅಸಲಿಗೆ ನಾನೇನೂ
ಮಾತಾಡುತ್ತಿಲ್ಲ
ಹಾದರ ಮಾಡ ಬೇಕೆನಿಸುತ್ತದೆ
ಆದರೆ ನೀನು ನನ್ನ
ಕೈ ಹಿಡಿದ ಗಂಡ.
10
ಹೇ ನಡೆದು ಹೋಗುತ್ತಿರುವವನೇ ಎಂದರೆ
ತಿರುಗಿ ನೋಡಿರುವೆ
ಅವಸರದಲ್ಲಿ ಹಾಗೇ ಓಡಿ ಬಂದವನೇ
ಇರು ಕಾಲಿಗೆ ಕಲ್ಲು ಚುಚ್ಚುತ್ತಿದೆ ಎಂದು
ಚಪ್ಪಲಿ ಸಿಕ್ಕಿಸಿ ಬರುವಷ್ಟರಲ್ಲಿ
ಏನೋ ಅರ್ಥ ಬರುವಂತೆ ನಕ್ಕು
ಒಂದು ಹಳ್ಳ ದಾಟಿ ಹೋದೆ
ಗುಟ್ಟುಗಳೇ ಇಲ್ಲದಷ್ಟು ಖಾಲಿಯಾಗುವ
ದಡ್ಡಿ ಹುಡುಗಿ ನಾನು
ಮೂರು ಹೊತ್ತು ಧ್ಯಾನಿಸದಿದ್ದರೂ
ಮುಸ್ಸಂಜೆಗೆ ತಲ್ಲಣಿಸುವವ ನೀನು
ನೆನಪಾಗಿದ್ದರೆ ತಾನೆ ಈ ಜಂಜಡಗಳು
ಠಕ್ಕು ವಂಚನೆ ಪ್ರಾರ್ಥನೆ ನಿವೇದನೆ
ಹೀಗೆಂದರೇನು?
ಮೈತುಂಬಾ ನಿನ್ನ ಹೊದ್ದು ಮಲಗಿ
ಬೆಳಕು ಹರಿಯುವಾಗ
ನಿರ್ಮಲ ಮೌನದ ಹೊಸ
ಮದುವಣಿಗ ನೀನು
ಅಷ್ಟೇ…………….
ಇನ್ನೆಷ್ಟೇ ಅಂದರೂ ಅಷ್ಟೇ
ಹೊರಗೆ ಕಾಲಿಡುವ ಮುನ್ನ
ಒಂದು ಸಲ ಕೇಳಲೇ?
ಮತ್ತೆ ಸಿಗದಿರು ಎಂದು!
ಚೂಪು ಹುಣಿಗಳಲ್ಲಿ ನಡೆದು ಹೋಗುವಾಗ
ಬೇಕೆಂದರೂ ಕಣ್ತುಂಬದೆ
ದೊಡ್ಡ ಹೆಂಗಸಾಗುತ್ತಿರುವೆ
11
ಬಣ್ಣಗಳ ಮೇಲೆ ಕುಳಿತವನೇ
ಹಾರಿ ನಡುವೇರಿ ಮೈಯ್ಯ
ರಂಗು ಕೊಡವಿದವನೇ
ಕವಿತೆಯಲ್ಲಿ ಹರಿದವನು ನೀನು
ಮಡಚಿದ್ದ ಮೆಟ್ಟಲೇರಿ ಎಲ್ಲಿಂದ ಬಂದೆ
ಬಂದರೂ ನಗಬಾರದಿತ್ತು
ಸುಡುಗಾಡಲ್ಲಿ ನಾನು ನಕ್ಕರೆ
ಅರ್ಥವೇನಿರಬಹುದು?
ಏನಾನಂದ! ಹೀಗೇ ಇರಲಿ
ಮುಸ್ಸಂಜೆಯ ಸುಡುಗಾಡು
ಬೇಡುವ ಬೊಗಸೆಯೂ ಕರಕಲಾಗಿದೆ
ಏನೆಂದರೆ ಏನೂ ಇಲ್ಲವಾಗಿ,
ಈ ಹೊಗೆಯೊಂದು ಕಣ್ತಪ್ಪಿಸಿ
ಮೇಲೇರಿ ಏನನ್ನೋ
ಹುಡುಕುತ್ತಿದೆ
ಕರೆಸಿಕೋ ನಿನ್ನ ಚಂದದ
ಆಕಾಶಕ್ಕೆ
ಇನ್ನೊಮ್ಮೆ ನದೀ ತೀರಕ್ಕೆ ಬರುವೆ
ನಿನ್ನ ಒದ್ದೆ ಕಂಗಳ ಹರವಿಗೆ
ಉದ್ದನೆ ಕಾಲು ನೀಡಿಕೊಂಡು
ಸದಾ ಅಲ್ಲಿರುವ ನಿನ್ನನ್ನೂ
ಹರಿದು ಹೋಗುವ ನಿನ್ನ
ಆಳದ ಸುಖವನ್ನೂ
ಬೇನೆಯಲ್ಲೇ ನೋಡುವೆ
ಈ ನನ್ನ ಸುಡುವ ತೀರದ ನೆರಳೂ
ಸುಳಿಯದಿರಲಿ
ಕಣ್ಣು ಹೃದಯ ಪರಿಮಳ
ಯಾವುದೂ ಅಂಟಿಸಿಕೊಳ್ಳಬೇಡ
ಮಗುವೇ, ಈ ಇರುಳಗಂಬಕೆ
ಒರಗಿ ಕಾಣುವ ಬಯಕೆಗಳು ಇಲ್ಲಿವೆ
ನನ್ನ ಈ ಕರುಳೊಳಗೆ ನಿನ್ನದೂ
ಸುತ್ತಿಕೊಂಡಿದೆ
ಆದರೂ….
ಕಳೆದ ದಿನಗಳು
ಯಾಕೆ ಬರಬೇಕಿತ್ತು??
12
ದೇವರೇ,
ಇಷ್ಟು ಹೇಳದಿರಲು, ನಾನು ನಿನ್ನ ಹಾಗಲ್ಲ
ರಾತ್ರಿಯಾದರೂ ಇಲ್ಲಿ
ಕಿಟಕಿಯಲ್ಲಿ ಬೆಳಕು ಮಾತಾಡುತ್ತಿದೆ
ಕವುಚಿ ಕಣ್ಣುಮುಚ್ಚಿ ಮಲಗಿ.
ಈ ಹೊತ್ತಿಗೆ ಬರಬೇಕಿದ್ದ ನಿದ್ದೆಯೂ
ಬರುತ್ತಿಲ್ಲ
ದೇವರೇ, ಯಾರಿರುವರು ಇಲ್ಲಿ
ನೀನೊಬ್ಬ ಇರುವೆ
ಬೇಕು ಬೇಕೆಂದಾಗ ಬರಲು ಮಾತನಾಡಲು
ಮೂರು ಸುತ್ತು ಮಡಚಿ ಹೋಗಿದ್ದೆ
ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ
ಹೊರಳಾಡಿಕೊಂಡು
ಕೈಕಾಲುಗಳು ಈಗ ತುಸು
ನೆಟ್ಟಗಾಗುತ್ತಿದೆ, ಏನು ಹೇಳಲಿ!
ದೇವರೇ ಯಾರಿರುವರು ಇಲ್ಲಿ? ಈ ಹೊತ್ತಲ್ಲಿ
ಬಾ ಹೊತ್ತು ಮೂಡುವವರೆಗೆ
ಇದ್ದು ಹೋಗು
ಅವನು ಇಲ್ಲಿಂದ ಹೋಗಿಯಾಗಿತ್ತು
ಅದೂ ಎಷ್ಟು ಹೊತ್ತಾಗಿತ್ತು?
ನೀನು ಪೂರ್ವದಿಂದ ಹೊರಟವನು
ಪಶ್ಚಿಮದ ತುದಿಗೂ ಕಾಲಿಡಲಿಲ್ಲ
ಹೋದವನಿಗೆ ಸೆಖೆಯಾಗುತ್ತಿದೆಯಂತೆ
ಏನೂ ಅನಿಸುತ್ತಿಲ್ಲವಂತೆ ಪಾಪ ಒಳ್ಳೆಯವನು,
ಆದರೂ ಬುದ್ಧಿ ಕಲಿಸದೆ ಇರಬೇಡ
ಇಷ್ಟೂ ಹೇಳದೆ ಸುಮ್ಮನಿರಲು
ನಾನು ನಿನ್ನ ಹಾಗೆ ದೇವರೇನಲ್ಲ
ಹೋಗಿರುವನು, ಹೀಗೆ ಹೋಗುತ್ತಿರಲಿ
ಕೈಕಾಲು ಚಾಚಿ ನಿರಾಳವಾಗಿ
ಮಲಗಿರುವೆ, ತುಂಬಾ ಹತ್ತಿರ
ಇಲ್ಲೇ ತೊಡೆಯ ಮೇಲೆ ಕುಳಿತಂತಿದೆ
ಬೇಕು ಬೇಕೆಂದಾಗ ನಗುವನು
ಬೇಡವೆಂದರೂ ತಿರುಗಿ ಬರುವನು
ಹೀಗೆ ಇದ್ದಿದ್ದರೆ ಜೊತೆಗಿರುವುದೇ
ಬೇಡವಿತ್ತು
ಆಗಾಗಾ ಬೇಡುವ ಈ ಸುಖ
ಮತ್ತೆ ಮತ್ತೆ ಕೊಡದೇ ಇರಬೇಡ
ದೇವರೇ,
ಇಷ್ಟು ಹೇಳದಿರಲು, ನಾನು ನಿನ್ನ ಹಾಗಲ್ಲ
13
ಏನೋ ಆಗುತ್ತಿದೆ ಅಲ್ಲಿ ನಿನಗೆ
ಹಾಗೆಂದೇ ಆಕಾಶ ಬಣ್ಣಗಳು
ಬದಲಾಗಿ ನನಗೆ ತೋರಿಸುತ್ತಿದೆ
ನಿನ್ನ ಕಣ್ಣಿನ ಬೊಂಬೆ ಚಲಿಸಿದಂತೆ
ಇಲ್ಲಿ ಚಿತ್ರಗಳು ಕದಲುತ್ತಿವೆ
ಮುರುಟಿಕೊಂಡ ಈ ಸಂಜೆಗೆ
ಅಂಗಾತ ಮಲಗಿ ಕಣ್ಣ ಎರಡು
ತುದಿಗಳಲ್ಲಿ ನೀರು ಹರಿದು
ಕಿವಿಯ ಆಳಕ್ಕೆ ಇಳಿಯುತಿದೆ
ಮತ್ತೆ ನೀನು ಮೈತುಂಬಿಕೊಳ್ಳ ಬೇಕಾದರೆ
ದಿನವಿಡೀ ನಿನ್ನ ಕರುಳ ಸಂಕಟದಲ್ಲಿ
ಇರಬೇಕು ನಾನು
ನೀ ಬಂದೆಯೆಂದು, ಇಲ್ಲಿರುವೆಯೆಂದು
ಸ್ವಲ್ಪ ಹೊರಗೆ ಅಡ್ಡಾಡಿ ಬಂದರೆ
ಬಣ್ಣ ಇರದ ಖಾಲಿ ಕಣ್ಣಿರೊಂದು
ಹುಡುಕಿ ಬಿಗಿಯಾಗಿ ಎದೆಗಪ್ಪುವುದು
ಈ ಹೊತ್ತಲ್ಲದ ಹೊತ್ತಲ್ಲಿ
ಮೂರು ಹಾದಿ ಕೂಡುವಲ್ಲಿ
ನೀ ಯಾಕೆ ಬರಬಾರದು?
ನಮ್ಮದೊಂದು ಕಲ್ಲು ಬೆಂಚು
ಇನ್ನೂ ಹಾಗೇ ಇರುವುದು
ಯಾರಿಟ್ಟರೋ! ಯಾರಿಗೆ ಕೇಳಲಿ
ನನಗೆ ಉಸಿರು ತುಂಬಿಸಿದವನು
ಇದ್ದರೆ ಅವನೇ ಇಟ್ಟಿರಬಹುದು
ತಪ್ಪಿಸಲಾರದ ನಡೆದಾಡುವ
ಗಡಿಯಾರಗಳು ನಾವು
ಗಂಟೆ ಹೊಡೆದರೆ
ಹಕ್ಕಿಗಳೂ ಮನೆಗೆ ನಡೆಯಬೇಕು
ಈ ಕಲ್ಲ ಬೆಂಚಿಗೂ
ಕತ್ತಲಾವರಿಸುತ್ತದೆ, ಅದಿರಲಿ,
ಈ ಕೇಳದ ಮನಸ್ಸಿಗೂ ಹೇಳದೆ
ಗಾಳಿಯ ಬುಡಕ್ಕೆ ಸಿಕ್ಕಿಸಿ ಅದನ್ನು
ಅಲ್ಲಿಗೆ ಕಳಿಸಿರುವೆ
ತೇಲಿಕೊಂಡು ಬಿಸಿಲಿನ ಮೈಮುಟ್ಟಿ
ಎದ್ದ ಧೂಳಿಗೆ ಇದ್ದಲ್ಲೇ ತಿರುಗಿಕೊಂಡಿ
ಹಾರುವ ತರಗೆಲೆಗಳನ್ನು ಸಿಕ್ಕಿಸಿಕೊಂಡು
ಹಾರುತ್ತಿದೆ
ಎಲ್ಲಾ ಸಾಕೆಂದು,
ಕಡಲ ಎದುರಿಗೆ ಕುಳಿತುಬಿಟ್ಟೆ
ಹುಟ್ಟಿಸಿ ನಡೆದು ಹೋಗಿರುವ
ನಿನ್ನ ಸಾವಿರ ಹೆಜ್ಜೆಯಲ್ಲಿ
ಒಂದೆರಡನ್ನಾದರೂ ಹುಡುಕುತ್ತಾ
ಏನು ಸುಖ
ಒಂದಿಲ್ಲಿದೆ. ಎರಡು ದಿನ
ನಡೆದ ಮೇಲೆ ಇನ್ನೊಂದು ಸಿಗುವುದು
ಅಲ್ಲಿಯತನಕ ಅಪ್ಪಿ ನಿನ್ನಲ್ಲಿಗೆ
ಮರಳುವ ಅಲೆಗಳು ಕನ್ನಡಿಯಲ್ಲಿ
ನಿನ್ನನ್ನು ಕಾಣಿಸುತ್ತಿದೆ.
14
ಈಗ ಕೇಳುವ ಮಂಕು ಮಂಕು ಹಾಡಿಗೆ
ಆ ದಿನಗಳೆಲ್ಲಾ ಮೆಲ್ಲಗೆ ನಡೆದು ಬರುತ್ತಿವೆ
ಏನೆಲ್ಲಾ ಕಿವಿಗೆ ಕೇಳಿಸುವುದು,
ನೀಲಿ ಬಣ್ಣದ ಬಟ್ಟೆಯ ಗುಂಡಿ
ಬೆನ್ನು ಹಾಕಿ ನಿಂತು, ಎಡ ಕೆನ್ನೆ, ತುಟಿ
ಕಾಣುವಷ್ಟು ಮಾತ್ರ ತಿರುಗಿ ನಕ್ಕಿದ್ದು,
ನೋಡಿದಾಗಲೆಲ್ಲಾ
ಬೇರೆಯದೇ ಕಾಣುವ ಕಣ್ಣಿನ ಬಣ್ಣ…
ಕೆನ್ನೆಗೆ ಕೈಇಟ್ಟುಕೊಂಡು ಬೇಕಂತಲೇ
ಏನೋ ನೋಡುತ್ತಿಲ್ಲ.
ನಾನು ಜೊತೆಗಿಲ್ಲದ ಹೊತ್ತಲ್ಲಿ
ಮೈಗೆಲ್ಲಾ ತಬ್ಬಿ ಹಿಡಿದ ಚಳಿಯನ್ನು
ರಾತ್ರಿಯ ಆಕಾಶವನ್ನು
ನೀನು ಹೇಗೆ ನೋಡುತ್ತಿರಬಹುದು,
ಅಯ್ಯೋ ಬೇಡವೆಂದರೂ ಈ ಹೊತ್ತಿನ ಸಂಗೀತ,
ಅದನ್ನು ಇನ್ನೂ ಚಂದವಾಗಿಸುತ್ತಿದೆ.
ನಿನ್ನ ಹೆಗಲುಗಳೂ ಕುಣಿಯುತ್ತಿವೆ
ಇದನ್ನು ದುಃಖವೆಂದರೆ ನನ್ನ ಕಣ್ಣೀರು
ಬತ್ತಿಹೋಗಲಿ
ಹಾಡು ಮುಗಿಯುವುದರೊಳಗೆ
ಈ ಬಿಕ್ಕುಗಳು ಏನನ್ನೂ ಆಲಿಸದು
ಮೈಯೆಲ್ಲಾ ಹಿಂಡುವ ಹಾಗೆ ಕುಣಿಯುವವು
ಇನ್ನೇನು, ಈ ನೆತ್ತಿಗೇರಿದ ಹೊತ್ತಲ್ಲಿ
ಇಲ್ಲಿಗೇ ಇದ್ದ ಹಾಗೇ ಕಾಣುವ
ನಿನ್ನ ಬಿಟ್ಟಕಣ್ಣುಗಳಿಂದ ನಾಲ್ಕು ಸಾಲುಗಳನ್ನು
ಕಿತ್ತು ಹಚ್ಚುವೆ.
ಹೋಗುವುದೆಲ್ಲಾ ಹೋಗಲಿ ಇರುವವೆಲ್ಲಾ ಇರಲಿ
ಹಿಂದೆ ಉರುಳುವುದೆಲ್ಲಾ ಉರುಳಲಿ…
ಹಾಡು ಮುಗಿಯುವ ಹೊತ್ತಿಗೆ
ಬಂಧಿಸಿದರೂ ಹಾರುವುದನ್ನು ಕಲಿತ
ನಿನ್ನ ತೋಳ ಹಕ್ಕಿಗಳು ಹಾರಿ ಹೋಗುವವು.
15
ನನಗೂ ಅರ್ಥವಾಗಬಾರದೆಂದು
ಬರೆಯುತ್ತೇನೆ
ಗಡಿಯಾರದ ಮುಳ್ಳಿನ ಲಯಬದ್ದ ಚಲನೆಗೆ
ಎದೆ ಬಡಿತವನ್ನು ಹೊಂದಿಸಲು ಹವಣಿಸಿ
ಗದ್ದಲವೆನಿಸಿ, ಕಣ್ಣು ಬಿಟ್ಟು
ಧ್ಯಾನಸ್ಥ ಸ್ಥಿತಿಯಲ್ಲಿ ಬಂಡೆಯಲ್ಲ
ಕೆತ್ತನೆಯಾಗುತ್ತೇನೆ
ದಿನ ಉದುರುವ ತಲೆಗೂದಲು
ಕಳಚಿ ತುಂಬಿಕೊಂಡು,
ಕಿವಿ ಹಿಂಡಿದರೆ
ನೋವು ದೂರದಿಂದ ತಲೆದೂಗಿತ್ತು
ಕರೆದರೆ ಓ ಗೊಡದೆ
ಧ್ವನಿ ನನಗೆ ಮಾತ್ರ ಕೇಳಿಸಿತು
ಆಚೆ ಕೇಳಲಿಲ್ಲವೆಂಬ ಸುಖದಗ್ನಿಯೇ
ಒಂದು ಸುಖ
ನನಗೂ ತುಂಬಿ ತುಂಬಿ ಬರುತ್ತಿದೆ
ಎದೆ ಹೊಟ್ಟೆಯೊಳಗೆ ಚೇಳು ಕಚ್ಚಿ
ಹೆಪ್ಪುಗಟ್ಟಿದ ಕೆಂಪು ಬಂಡೆಯಲ್ಲ ಕೆತ್ತನೆಗೆ
ನೀಲಿ ಚರ್ಮದ ಕವಚ…
ಇನ್ನೂ ಬಡಿತವಿದೆ
ಮುಗಿದ ಗಳಿಗೆಯ ಕಣ್ಣ ಕೆಂಪು ಹನಿಯಲ್ಲಿ
ಯಾರನ್ನ ನೋಡಲಿ?
ಪಾರದರ್ಶಕಲ್ಲವದು
ಬಣ್ಣದ ಬದುಕಿನ ಕೊಂಕು ಹನಿಯಲ್ಲಿ
ಯಾರ ಬಿಂಬವೂ ಕಾಣುವುದಿಲ್ಲ
ಮತ್ತೊಮ್ಮೆ ಬದುಕಿಬಿಟ್ಟೆ
16
ನನ್ನ ಖಾಲಿ ಕುರ್ಚಿಗಳು
ಈ ನಡುವೆ
ಎಷ್ಟು ಮಾತಾಡಲು ಕಲಿತುಬಿಟ್ಟಿವೆ
ನನ್ನ ಪ್ರಯಾಣದ ಎಲ್ಲಾ ಹೆಜ್ಜೆಯ
ಆತ್ಮಗಳು ಇಲ್ಲೇ ಸುಧಾರಿಸಿಕೊಳ್ಳುತ್ತಿವೆ
ಹಳೆಯ ಆಟದ ಮನೆಗಳು ಮೌನದಲ್ಲಿ
ನನಗೆ ಕಾಗದ ಬರೆದಿವೆ
ತುಂಬಾ ವರುಷದ ನಂತರ
ಅದೇ ಅದೇ
ನೆನಪುಗಳು ಸಾಕೆಂದು
ಈ ಮಳೆ
ಹೊಸ ನೆನಪುಗಳನ್ನು
ಕೊಡುವಂತೆ ಹೇಳಿದೆ
ಕಿಟಕಿಯ ಕಂಬಿಯಲ್ಲೇ
ನನ್ನ ಕರೆಯುತ್ತಿದ್ದ ಗಾಳಿಗೆ
ಒಳ ಬರುವಂತೆ ಹೇಳಿರುವೆ
17
ಅದೆಷ್ಟು ಹರಿದು ಹೋಗಿರುವೆ
ತುದಿ ಮೊದಲಿಲ್ಲದೆ
ಅದೆಷ್ಟು ಕೆದರಿಕೊಂಡಿರುವೆ…
ಎಲ್ಲವೂ ದೊಡ್ಡ ನೂಲಿನುಂಡೆ
ಹೊಲಿದುಕೋ ಕತ್ತರಿಸಿಕೋ
ಇಲ್ಲವಾದರೆ ಸುತ್ತಿ ಮಲಗಿಕೋ..
ಮನ್ನಿಸು ತಾಯಿ
ನೀನು ಹಾಲೂಡಿದ ಶಿಶುವೆಂದು
ಒಂದು ಮರುಳಷ್ಟೇ ಇದು
ಗಾಂಚಾಲಿಯಾದರೂ ಏಕೆ ಸುಮ್ಮನೆ
ಹೃದಯವಿರುವುದು
ಎಲ್ಲೋ ನಡುವಲ್ಲಿ
ಒಂದು ನೆರಳಷ್ಟೇ ಇದು
ನಾಳೆಗೆ ದೊಡ್ಡ ಪ್ರೇಮದ ಗಂಟು
ನಾನಾದರೂ ಏನು ಮಾಡಲಿ
ಉಸಿರಿನಷ್ಟೇ ನಿಜ ನನಗೆ
ನಿನಗೆ ಎಂದೋ ಚುಚ್ಚಿರುವ
ಸಾವಿರ ಸೂಜಿಗಳು
ತುಕ್ಕುಹಿಡಿದಿರ ಬೇಕು
ಮನ್ನಿಸು ತಾಯಿ
ನಿನ್ನ ಕಂಕುಳದ ಕೂಸೆಂದು
ನನ್ನ ಪಾಪದ ಮುಖಕ್ಕೆ
ನಿನ್ನ ಸಂಕಟಕ್ಕೆ
ನನಗೆ ಕುರುಡು ಹತ್ತಬಾರದಿತ್ತು
18
ತನ್ನ ಪಾಡಿಗೆ ತಾನಿತ್ತು ಅರೆ ತಲೆನೋವು
ಅತ್ತು ಕರೆದರೂ ಈ ಬದಿಗೆ ಬಾರದೆ
ಸುಮ್ಮನೆ ಕುಳಿತುಕೊಂಡು ಏನೂ ತೋಚದೆ
ಆಲಸ್ಯವೂ ಬಾರದೆ ಹಾಗೆ ತೆಳ್ಳನೆ
ಬೆಳೆದ ತಿಳಿ ಬೆಳ್ಳನೆಯ ಪಾಚಿಯಂತೆ
ನೆಲದ ಧೂಳಿನಲ್ಲಿ ನಾಲ್ಕು ಬೆರಳಾಡಿಸಿ
ನಾಲ್ಕು ಹೆದ್ದಾರಿಗಳು ಮಧ್ಯದಲ್ಲಿ ಕತ್ತರಿಸಿ ಹೋಗಿ
ಒಣ ಸೀನಿಗೆ ಮೂಗು ಕಟ್ಟಿತು
ತಿಂದದ್ದನ್ನೇ ತಿಂದು, ಕುಡಿದು ಜೀರ್ಣಿಸಿಕೊಂಡು
ಕಂಡರಿಯದ ಹಸಿವು ಒಂದೊಮ್ಮೆ
ಹೋದ ವರ್ಷ, ಮೊನ್ನೆ, ನಿನ್ನೆ ಇಂದು ಮುಂಜಾನೆ
ಸಿಕ್ಕಾಗ ಅವೇ ‘ಹೇಗಿರುವೆ’ ಮಾತುಗಳು
ವಠಾರ ಹೆಂಗಸರ ಅವವೇ ಹರಟೆಗಳು
ಕೊಳಕು ಹಲ್ಲಿನ ಕಸ ತೆಗೆಯುವ ಮುದುಕನ
ಅಪರೂಪಕ್ಕೆ ನಾಲ್ಕು ಹೊಲಿಗೆ ಕಾಣುವ ಚಪ್ಪಲಿ
ಸುಮ್ಮನೆ ಕೂಗಿಕೊಳ್ಳುವುದು ಪ್ರೀತಿ ನೀತಿಯೆಂದು
ನಡೆಯಲಾಗದಿದ್ದರೆ ಕೂರುವುದು,
ಅದಾಗದಿದ್ದರೆ ಮಲಗುವುದು
ಹೊತ್ತು ಮೀರಿದ ನಿದ್ದೆಯ ವೈರಾಗ್ಯ ಶುದ್ಧ ಬೊಗಳೆ
ಅವನು ಹಾಳಾಗಿ, ಇವನು ಮೂರ್ಛೆ ಹೋಗಿ
ಮತ್ತೊಬ್ಬ ಸತ್ತು ಎಲ್ಲರೂ ಬುದ್ಧರಾದರು
ಸಾಸಿವೆ ಸುಖದ ಹುಡುಕಾಟದಲ್ಲಿ
ಹೊಳೆ ಬದಿ ಬಿಂಬ ನೋಡಿಕೊಂಡು ಬಿಕ್ಕುವುದು
ಇಲ್ಲೇ ಪಬ್ಬು ಮಾಲ್ ಗಳಲ್ಲಿ ಸೊಕ್ಕಿ ನೆಕ್ಕುವುದು
ಉಗುರು ಕಚ್ಚುವುದು, ಕಡಲು, ಮಳೆ
ಕಾಡು ಬೆಟ್ಟವೆಂದು ನೆಚ್ಚುವುದು
ಮೆತ್ತಗೆ ಮಂಕುಬಡಿದಂತೆ ಮುಗುಳ್ನಗು ಚೆಲ್ಲುತ್ತಾ
ಒಳಗೆ ನೃತ್ಯ ಮಾಡುತ್ತಾ ಹುಡುಕಿದ್ದು ಅದನ್ನೇ
ಈ ಹೊತ್ತಿಗೆ ಅವಳು, ಮರು ಹೊತ್ತಿಗೆ ಇವನು
ಆ ಕ್ಷಣ ಅಲ್ಲಿ, ಈ ಕ್ಷಣ ಇಲ್ಲಿ
ಮಿಸುಕಾಡದ ಎಷ್ಟು ಸ್ತಬ್ಧ ಗಳಿಗೆಗಳು
ಅವವೇ ಜಗತ್ತು, ಅವವೇ ಮನುಷ್ಯರು
ಎಲ್ಲರೂ ವೇದಾಂತಿಗಳು
ಸುಮ್ಮಗಿರುವುದೇ ಲೇಸು
19
ಈಗ ಮೂಗು ತುರಿಸುವಾಗ
ಯಾವುದೋ ಒಂದು ಗುಂಗಿನಲ್ಲಿ
ನನ್ನದಿರಬಹುದು ಅನ್ನಿಸುತ್ತದೆ
ನನಗೆ ಕೇಳಿಸುವ ಉಸಿರು
ಪುರಾತನ ಕಾಲದ
ಗುಹೆಯ ಬೂದಿಯಲ್ಲಿ
ಇನ್ನೂ ಅವರೆಲ್ಲರೂ ನಗುತ್ತಿದ್ದಾರೆ
ನನ್ನ ಅಕ್ಕಪಕ ಗೊಂಬೆಗಳೂ
ಕೀಲು ಕೊಟ್ಟರೆ ಚಪ್ಪಾಳೆ ತಟ್ಟಿ
ನಗುವಂತಾಗಿದೆ
ಆಚೆ ಊರಿನಲ್ಲಿ ಚಪ್ಪಲಿ ಸಂದಿಗೆ
ಸಿಲುಕಿದ ಒಂದು ಕಲ್ಲು
ಇಷ್ಟು ದಿನ ಮಾತಾಡದೆ
ಈಚೆ ಊರಿನ ದೊಡ್ಡ ಬಂಡೆಯ
ಕೆಳಗೆ ಕೆಸರಿನಲ್ಲಿ ಉದುರಿತು
ಒಂದೂ ಅರ್ಥವಾಗದೆ ಹೋದರೆ ಋಣವೋ ಮತ್ತೊಂದೋ ಎಂದು
ಮಣಮಣ ಎನ್ನುತ್ತೇನೆ
ಅದೇನೋ ನೆನಪು ಇಬ್ಬರದು
ಹಳೆಯ ಗೆಳೆಯರಂತೆ
ನಾನೀಗ ಮೂಗು ತುರಿಸುವುದು
ಬೂದಿ, ಬಂಡೆಯ ತಪಸ್ಸಿನ ಫಲವಿರಬೇಕು
ನನ್ನ ಮತ್ತು ಅವರೆಲ್ಲರ
ನಗು ಉಸಿರಾಟಗಳು ಮತ್ತು
ಗೊಂಬೆ, ಕೀಲು ಚಪ್ಪಾಳೆಗಳು
ಮರೆಸುತ್ತಿದೆ ಎಲ್ಲದನ್ನೂ
ಬಹುಷಃ ನಾನಿರುವುದನ್ನೂ
20
ಇದೇ ಹೊತ್ತಿಗೆ ಅಲ್ಲಿಇಲ್ಲಿ ಏನೇನೋ ನಡೆಯುತ್ತಿದೆ
ಮರೆತೇ ಹೋದ ಗೆಳೆಯನ ಹಳೆಯ ಬ್ಯಾಗು
ಮನೆಯ ಜಂತಿಯ ಗುಬ್ಬಿಗೂಡು
ಎಲ್ಲೋ ನಡೆಯುವ ಮೈಥುನಗಳು
ಕುಡಿದವರ
ವೇದಾಂತಗಳು,
ನನಗೇ ಸಂಬಂಧಿಯೇ ಅಲ್ಲದ
ಪಾಪದ ನಾಯಿ,
ಇಬ್ಬರಿಗೂ ಕಾಣಿಸುವ ಒಂದೇ ಚಂದ್ರ
ಮತ್ತು ನಾವಿಬ್ಬರೂ ಕುಳಿತು
ಬೆರಳು
ಲೆಕ್ಕವಿಟ್ಟು ಎಣಿಸಿದ ಹಳೆಜೀವಗಳು
ಈ ಹೊತ್ತು ಏನು ಮಾಡುತ್ತಿರಬಹುದೋ
ಈ ಹಗುರ ಲೋಕವನ್ನೇ ತಬ್ಬಿ
ಎಲ್ಲರನ್ನೂ
ಏನೋ ಸಂತೈಸಬೇಕು
ಇವರೆಲ್ಲಾ ಯಾರೋ
ನನ್ನ ಪದ್ಮಾಸನದಲ್ಲಿ ನೆನಪಾಗುವವರು
ಈ ಕಾರುಣ್ಯವೂ ಸುಮ್ಮನೆ
ಯಾವ ಮೋರೆಯೂ ಕಾಣದ ಹಾಗೆ
ಗಂಟಲೊಳಗೆ ಬೇನೆಯ ಹಾಗಿನದ್ದೊಂದು
ಹರಿಯುತಿದೆ
ನನ್ನನ್ನು ಅಡ್ಡಾದಿಡ್ಡಿ ಬಗೆದರೂ
ನನ್ನ ಹಂಗಿಲ್ಲದೆ ದುಃಖಿಸುವ
ಸುಖದ ಸುಳಿವೂ ಸಿಗದ ಹಾಗೆ
ಬೆಚ್ಚಗೆ ದುಃಖಗಳು ಹಾರುತ್ತಿವೆ
21
ಈಗ ತಾನೆ ಮಳೆ ನಿಂತ ಹಾಗಿದೆ
ಹನಿಯೊಂದು
ಭಾರ ಭಾರ ದುಂಡು ದುಂಡಗೆ
ಜಾರಿ, ಇನ್ನೇನು ಒಡೆಯುವ
ಕಡೆ ಗಳಿಗೆಯ ಹನಿ
ತುಂಬಿದ ಲತೆಗಳು ಉಂಡು
ಮುಗಿಸಿ ನೂಕುತ್ತಿದೆ
ಅಲ್ಲೇ ತರಗೆಲೆಗಳ ನಡುವೆ
ಆವಿಯಾಗಿ, ಅಂಟಂಟು
ಕದಪುಗಳು ದಾರಿಯಾಗಿ
ಒಂದಷ್ಟು ಕೆಂಪು ನೆಲ ಇಣುಕುತಿತ್ತು
ಮುಖಗಳಿಲ್ಲದ ದೇಹಗಳು
ಜಾರುತ್ತಿದೆ
ಮುಖವಾದರೂ ಏಕೆ ಬೇಕು
ನೆನೆದು ಜಾರುವುದಕ್ಕೆ!!
ಅದೇ, ಕಳೆದ ಸಲ ಕಡಲಲ್ಲಿ
ಹನಿ ಮಣಿಯಾಗಿ,
ಬಿಸಿ ಮುತ್ತಾಗಿದ್ದು, ತುತ್ತಾಗಿದ್ದು
ಮುಪ್ಪಾಗಿದ್ದು …..
ಏನಿದ್ದರೂ ಮುಖದ ಕೆಳಗೆ
ಹನಿ ಜಪಿಸುತ್ತಿದೆ
ಹೇ ದಿನಮಣಿಯೇ?
ಬೇಡ ಮುತ್ತು ಮಣಿಗಳ ಸಂಗ
ಅರೆ ಬರೆ ಧರೆಗಿಂತ ಲೇಸು
ತುಣುಕು ಮೋಡ
ಹನಿ ಜಾರಲಿ
ನೆಲ ಕಚ್ಚುವ ಮುನ್ನ
ಕಾಲದ ಬಡಿತ ಒಂದು
ಕ್ಷಣ ನಿಲ್ಲಲಿ
ಮದ್ಯ ನಿಂತ ಸ್ತಬ್ದ ಹನಿಗೆ
ಮುಖವಿಲ್ಲ
22
ಇಲ್ಲಿ ಯಾವುದೂ ಸರಿ ಇಲ್ಲ
ನೀನು ರಾತ್ರಿ ಒಂದಷ್ಟು ಹೊತ್ತು
ನಿದ್ದೆ ಮಾಡುವುದು,
ನಾನು ನನ್ನ ತೋಳಲ್ಲೇ
ಗಲ್ಲವಿಟ್ಟು ಏನನ್ನೋ ದಿಟ್ಟಿಸಿ
ಕಣ್ಮುಚ್ಚುವುದು ಮತ್ತು
ಈ ಬೇಗೆಯಲ್ಲಿ ಎರಡೇ ಹನಿಗಳು
ಕಚ್ಚಿ ಮರೆಯಾಗುವುದು
ಈ ಹುಚ್ಚು ಹಿಡಿಸುವ ರಾಗ
ನೀನು ಸೆಣೆಸಿದ ರಾತ್ರಿಗಳನ್ನು
ಕನವರಿಸಿ ಇಲ್ಲವಾಗುತ್ತಿದೆ
ಹೇ ಇವನೇ ಬಿಟ್ಟುಬಿಡು,
ಇನ್ನೇನಿದೆ ನಿನ್ನೊಳಗೆ
ಈಸಿಕೊಂಡಿರುವೆ
ಹೇ ಪ್ರಳಯಾಂತಕನೇ
ನಿನ್ನ ಕಟು ನುಡಿಗಳಿಗೆ
ಬೆಣ್ಣೆ ಸವರಿ ಗರ್ಭದೊಳಗೆ
ಕರಗಿಸಿರುವೆ
ಈ ಮರದ ಬಿಳಲುಗಳಡಿ
ಮಲಗು ಬಾ, ತಣ್ಣಗಿರು
ಮಗುವೇ,
ನಿನ್ನ ಮೈಯ್ಯಲ್ಲಿರುವ ರೋಮದಷ್ಟು
ಸುರತಿಯರು ನಿನಗಿರಲಿ
ನಿನ್ನ ಮುಕುಟದ
ಬೆಗಡೆಗಳ ಮಿಣುಕೊಂದು
ನನಗಿರಲಿ
ಹೇ ಸುಡುವವನೇ ಎಲ್ಲಾ ನಿನಗಾಗಿ
ನನಗೆಂದು ಏನೂ ಇರದು
ಮಗುವೇ
ದಣಿದಿರುವೆ, ತಣಿಯದ ತೋಳುಗಳಿವೆ
ಮಲಗು ಬಾ
23
ನಾನು ಹಬೆಯಾಡುವುದನ್ನು
ನೋಡದೆ ತಿರುಗದೆ ನಡೆದು ಹೋಗು
ಅಲ್ಲೇ ನನ್ನ ಕೈಕಾಲುಗಳು
ಊರಿಕೊಂಡಿದೆ
ಪಾಪದ ಮುಂಗುರುಳೊಂದು
ಏನೂ ಅರಿಯದೆ ಅಡ್ಡತಿಡ್ಡ
ಹಾರಿಕೊಂಡು ನಿನ್ನ ಬೆನ್ನಟ್ಟುತ್ತಿದೆ
ನಾನು ಕುಸಿದಿರುವುದಾದರೂ ಎಲ್ಲಿ
ನಿನ್ನ ಪಾದದ ಅಡಿಯಲ್ಲಿ
ನೀನಿಡುವ ಒಂದೊಂದು
ಹೆಜ್ಜೆಗಳಡಿ ನಿನ್ನನ್ನು
ಭರಿಸಿಕೊಂಡು ಲಾಸ್ಯವಾಡಿ
ಗತಿಸಿಬಿಡುವೆ
ಹೋಗಿಬಿಡು ಎಲ್ಲವನ್ನೂ ಮುರಿದು
ಗೆಲುವೆಂದರೆ ಇದೇ ನನಗೆ
24
ಮಲಗಿಕೊಂಡಿರುವೆ ನಾನು
ಎಲ್ಲ ಅವಷ್ಟಕ್ಕೆ ಅವು ಸುಖವಾಗಿರುವಾಗ
ನನ್ನಷ್ಟಕ್ಕೆ ನಾನು
ಹೀಗೆಲ್ಲ ಯಾಕಾಗಬೇಕು
ಎಲ್ಲಾ ಕೊಟ್ಟು ಏನೂ ಉಳಿಸದೆ ಬಿಟ್ಟು
ಹೇಗೆ ಬಂದೆನೋ ಹಾಗೇ ಹೋಗುವೆ
ಇವೆಲ್ಲ ಇರುವುದೇ ಹೀಗೆ
ಸೌಖ್ಯವಿರಲಿ ಎಲ್ಲವಕ್ಕೂ
ಮುಂದೆ ಏನೋ ಇರಬಹುದು
ಕನಸಲ್ಲಿ ಬಂದ ದ್ವೀಪ
ಕೋಮಲ ಕವಿತೆಗಳು, ಹೋಲಿಕೆಗಳು
ಹೀಗೆ ಮತ್ತೆ ಬೇಕಿರಲಿಲ್ಲ
ಈ ಒರಟು ಪದಗಳು
ತಲೆನೇವರಿಸುವುದು
ಒಂದು ದೊಡ್ಡ ಹಾಳೆಯಲ್ಲಿ
ಚಿತ್ರಗಳು ಕುಳಿತಿವೆ ಅಲುಗಾಡದೆ
ಗಂಡು ಹೆಣ್ಣು ಅದು ಇದು ಎಲ್ಲವೂ
ಗಾಳಿಬೀಸಿದರೂ ಯಾರೂ
ಕದಲುತ್ತಿಲ್ಲ ಹಾಗೆಯೇ ಇದ್ದ ಹಾಗೆಯೇ
ಅಲ್ಲಿಂದ ಎದ್ದು ಬಂದಿರುವೆ ನಾನು
ಜೀವಂತವಾಗಿ
25
ನಮ್ಮ ಮಾತನ್ನು ಆಚೆಗೆ ಕೇಳಿಸದಂತಹ
ಬಿರುಗಾಳಿ
ಮತ್ತು ದಾರಿಯೇ ಇಲ್ಲದ
ಅಥವಾ ನೂರು
ದಾರಿಯ ಹಾಗಿರುವ
ನನ್ನ ಕುತ್ತಿಗೆಯಂತಹ ಬಟಾಬಯಲಲ್ಲಿ,
ನಿನ್ನ ಪಕ್ಕದಲ್ಲಿ ಕುಳಿತಿರುವೆ
ಸುಖವೆಂದರೆ ಹೀಗೆ,
ಎತ್ತರದ ದಂಡೆಯ ಮೇಲೆ
ಕಾಲು ಅಲ್ಲಾಡಿಸಿಕೊಂಡು
ಇಡೀ ನಿನ್ನ ಜೀವ ಕಡೆದು
ನೀನು ಬಿಡುವ ಉಸಿರನ್ನು
ನಾನು ಒಳಗೆಳೆದುಕೊಳ್ಳುವುದು
ಹೆಸರು ತಿಳಿಯದ ಹಕ್ಕಿಯೊಂದು
ನಿನ್ನ ಪರಿಮಳವನ್ನು ರಪರಪನೆ ಹಾರಿಸಿ
ಇಷ್ಟು ಅಗಲಕೆ ಚದುರಿಸಿದೆ
ಅಷ್ಟು ದಿನದಿಂದ ಹಿಡಿದಿಟ್ಟ
ಚೆಂಡಿನಂತಹ ನೋವೊಂದು
ಈಗಷ್ಟೇ ಉರುಳಿ ಹೋದ ಹಾಗಿದೆ
ನಾನು ಮೈಯ್ಯ ಮೇಲೆ ಒಂದು ದೊಡ್ಡ
ಗರಿ ಹೊದ್ದುಕೊಂಡಿರುವೆ
ಬಯಲಿನ ಮೇಲೆ ನೀನು ಮಲಗು
ನಿನ್ನ ಮೇಲೆ ನಾನು ಮಲಗಿ
ಆಕಾಶ ನೋಡುವೆ
ನಿನ್ನ ಮುಖದ ಮೇಲೆ ಕಚಕುಳಿ ಇಡುವ
ನನ್ನ ಕೂದಲಿಗೆ, ನೀನು ಗರಿ ಸರಿಸಿ
ಈ ಕೊನೆಯಿರದ ನೆಲದ ತುಂಬಾ ಉರುಳಿಬಿಡು
ಒಂದು ಸಲ ನೀನು ಒಂದು ಸಲ ನಾನು
ಕನ್ನಡಿಯ ಹಾಗಿರುವ ಆಕಾಶಕ್ಕೆ
ಬೆನ್ನು ತೋರಿಸಿ
ಮಳೆ ಸುರಿದರೆ ನಾವೂ ಮಳೆ
ಬಿಸಿಲಿ ಬಂದರೆ ನಾವೂ ಬಿಸಿಲು
ಆದರೆ
ಬಯಲಿನ ತುಂಬಾ ದಾರಿಮಾಡಿಕೊಂಡು
ನಡೆದು ಹೋಗುವವನು ನೀನು
ಅಲ್ಲೇ ನಿಂತು ನೋಡುವವಳು ನಾನು
26
ಕಾಡು ಕಾಡು ನನ್ನ ಕಾಡು
ಕಣ್ಣು ಮುಚ್ಚಿದರೆ
ಕಾಣುವ ಸುಖವೇ….
ತಬ್ಬಿ ಹಬ್ಬಿದ ಪೊದೆಗಳು
ಸೀಳು ದಾರಿಗಳು
ಕೈ ಎಳೆಯುತಿದೆ
ಈ ಹರಿವ ತೊರೆಯ ತಂಪು
ನನಗೇನಾಗಬೇಕು?
ಮೈಚೆಲ್ಲಿ ಮಲಗಿದ ಕಾಡು ಹೂವಿಗೆ
ಹೆಸರಿಡಲೇ?
ಮುದ್ದೆ ಮಿಂಚುಳ್ಳಿ ಇರುಳ ಇಬ್ಬನಿಯೇ
ಮುಗಿಲ ಸನ್ನಿಧಿಗೆ
ಚುಂಬಿಸುವ ಮಲೆಯೇ
ನಾ ಯಾರು ನಿನಗೆ?
ಹೇಳ ಹೆಸರಿಲ್ಲದ
ಕಾಡ ಬಾಲೆಗೆ
ಕಾಡು ಕಾಡು
ನೀ ನನ್ನ ಕಾಡು
27
ಕತ್ತಲಾಗಿದೆ ಆಗಲೇ
ನನಗೇನೋ ಮಂಕು ಬಡಿದಿದೆ
ಮುದ್ದೇ ಮುದ್ದು ಮೇಲೇರಿ
ಬರುತಿದೆ ನನ್ನ ಹೊಸಿಲಿಗೆ
ಇರು ಸ್ವಲ್ಪ ಈ ಮರವ ಹತ್ತಿ
ನೆತ್ತಿಯ ಮೇಲೆ ಕುಳಿತು
ಮತ್ತೆಗೆ ನಗುವನ್ನು
ಇಟ್ಟು ಬರುವೆ
ನೀನು ಮನೆಯ ಮಗುವಿನ ಹಾಗೆ
ಜೋಕಾಲಿ ಜೀಕಿದ್ದು
ನಿನ್ನ ತೂಗಿ ಏರಿಸಿದ್ದು
ಇಲ್ಲೇ ಕಾಣಿಸುತಿದೆ
ಎಲ್ಲವೂ ನಿಜ
ಅದುರಿ ಅಣಕಿಸುತಿದೆ
ಅದೇ ದಾರಿಯ ಒಳ
ತರಗೆಲೆಗಳು ಚರ ಚರ
ಸದ್ದುಮಾಡುವುದು
ಆಮೇಲೆಗೆ ಬಚ್ಚಿಟ್ಟ ನಗುವೂ…
ಎಲ್ಲವೂ ನಿಜ
ನಿನ್ನನ್ನು ನೀನು ಇಲ್ಲೇ ಬಿಟ್ಟಿರುವೆ
ಅಲೆದಾಟ ಮುಗಿದರೆ ಬಾ
ಈ ಗೂಗೆಗಳಾದರೂ ನಿನ್ನನ್ನೇ
ಕರೆಯುತ್ತಿದೆ
ನನ್ನ ಬೆಳದಿಂಗಳ ನೋವು ನೀನು
ನಿನ್ನ ಹೇಗೆ ಬಿಟ್ಟುಕೊಡಲಿ
ಕತ್ತಲಾಗಿದೆ ಆಗಲೇ
ಮನೆಯ ಮಗುವಿನ ಹಾಗೆ
ಜೋಕಾಲಿ ಜೀಕಿ ಬಾ
28
ನನ್ನದೆಲ್ಲಾ ನಿನ್ನದೆಂದು
ನೀ ಬರುವ ಮೊದಲೇ ಅನಿಸಿತ್ತು
ನಿನಗೊಬ್ಬನಿಗೆಂದೇ ಚಿಪ್ಪಿನಲ್ಲಿ
ಒಡೆಯದ ಮುತ್ತುಗಳಿವೆ
ಕುತ್ತಿಗೆಗೆ ಆರದ ಪರಿಮಳವಿದೆ
ನಿನ್ನ ಮರುಳು ಕರಗಿಸುವ ಕರುಳಿದೆ
ನನ್ನ ಸುಖದ ಮಾಳಿಗೆಯ
ಮೇಲೆ ಇರುವವನೆ, ನಿನ್ನದೇ ಇದು
ಎಲ್ಲಾ ಕೊಟ್ಟು, ಕಳುಹಿಸುವೆ
ಈ ಕತ್ತಲು, ಮೋಡ, ಸುರಿಯುವ
ಮಳೆಗೆ ನಾವಿನ್ನೆಷ್ಟೋ
ನಿಗೂಢವಾಗುವುದಿದೆ
ಬೆಳಗಿನ ಇಬ್ಬನಿಗೆ
ಬರೀ ಮೈಗೆ ಏನೋ
ಸೋಕಿದಂತೆನಿಸಿ
ಮತ್ತೆಷ್ಟು ಗಾಢವಾಗುವುದಿದೆ
ಇನ್ನೂ ಅದೆಲ್ಲಾ ಆಗುವುದಿದೆ.
ನೋಡು, ನಮ್ಮ ಹಾಗೆಯೇ,
ಆ ಮೋಡಗಳು ತಬ್ಬಿಕೊಂಡಿರುವುದು
ನಮ್ಮ ಉಸಿರಿನ ಹಬೆಯಾಗಿರುವುದು
ಒಂದೇ ಲಯದಲ್ಲಿ ಹರಿಯಲು
ನನ್ನ ಸುಖದ ಮಾಳಿಗೆಯ
ಮೇಲೆ ಇರುವವನೇ
ನಾಳೆ ಬರುವೆನೆಂದವನೇ
ನಿನ್ನ ಕಣ್ಣ ಹೊಳಪು ಕಂಡು
ನಾನು ಸುಖಿಸುವೆ
29
ನೀನೊಬ್ಬ ಋಷಿ
ಕುರುಚಲು ಗಡ್ಡದಲ್ಲಿ ಇಣುಕುವ ತಾರುಣ್ಯದಲ್ಲಿ
ಶೂನ್ಯ ನೋಟದ ಆಂತರ್ಯದ ಸೌಖ್ಯದಲ್ಲಿ
ಸಮಾಧಿಯೊಳಗಿನ ಧಾವಂತದ ಹರಿವಿನಲ್ಲಿ
ತುಕ್ಕು ಹಿಡಿದ ದರ್ಶನ ಅನುಭಾವಗಳಲ್ಲಿ
ನೀ ಅನಿಕೇತನ.. ಯಾರದೋ ಪಾದಗಳಲಿ
ಗೂಡುಕಟ್ಟಿಲ್ಲ
ನೀ ಪರಮಾತ್ಮ… ನನ್ನ
ಕಣ್ಣ ಸೊಡರಿನಲ್ಲಿ
ಯಾರಿಗೆ ನೀನು?
ನಿನ್ನ ತೇವದಲ್ಲಿ ಒಣಗಿ ಪುಡಿಯಾಗಲಾರದ
ನೀ ಅನಂತ.. ಮೀರಿದ ಸಂತ
30
ಇಷ್ಟು ದಿನ ಕಾಣಿಸದೇ ಇರುವುದಕ್ಕೆಇಲ್ಲೇ ಇದ್ದೆ
ಕೈ ಕಾಲು, ಕಣ್ಣು ಕಿವಿ…..
ಮತ್ತೆ ಒಂದೊಂದೇ ಹುಟ್ಟುತ್ತಿದೆ
ಕಳೆದು ಹೋಗು ಒಮ್ಮೆ ನನ್ನ ತಿಕ್ಕಲುತನವೇ
ನರಳದ ಸಾವ ನೆರಳನ್ನು ನೋಡಿಬಿಡುವೆ
ಅದರೆ ಕೇಳು
ಆ ತುತ್ತ ತುದಿಯ ನಿರಾಕಾರ ಸಾಕ್ಷಾತ್ಕಾರ
ಕೇವಲ ನನ್ನದು.. ನನ್ನೊಬ್ಬಳದೇ
ನೀ ಬೇಡವೆಂದರೂ ನನ್ನದೇ
ಪ್ರಖರ ಬೆಳಕಲ್ಲೇ ನಿನ್ನ ಮಿಂಚು
ತುಂಬಿಕೊಂಡು ಇನ್ನು ಬಿಡಲಾರೆ ಕಣ್ಣು
ನನ್ನ ಗೋರಿಯ ಮೇಲೆ ನೆಟ್ಟ ಗಿಡದ ಆಹ್ಲಾದಕ್ಕೆ
ನಿನ್ನ ತಣ್ಣಗಿನ ನೋಟಕ್ಕೆ, ನನ್ನೊಡನೆ ಮಗುವಾಗಿದ್ದಕೆ
ನಿನ್ನ ಮರುಳು ಧೈರ್ಯ, ತೊದಲಿ ಇಲ್ಲವಾಗುವುದಕ್ಕೆ
ಯಾವುದೂ ಬೇಡ ಇದೆಲ್ಲಾ
ಬರಬಾರದಿತ್ತು ನೀನು ಇರುವಾಗಲೇ ನೆನಪಾಗಲು
31
ಇನ್ನು ಉಳಿದಿರುವುದು
ನನಗಿರುವ ಬೆರಳಿನಷ್ಟೇ ದಿನಗಳು
ನಿನ್ನ ನೋಡಲು
ಮತ್ತೆ ಕೂಡಿಟ್ಟಿರುವೆ, ತುಂಬಿಕೊಂಡಿರುವೆ
ಎಂದಿನಂತೆ ಇಂದೂ ಮರೆತಿರುವೆ ಕೂಡಾ
ಇಲ್ಲೊಂದು ಎಲೆ ಗಾಳಿಯಲ್ಲಿ ಬಳುಕಿಕೊಂಡು,
ಏನೋ ಬೇಕೆಂಬಂತೆ ನಾಚುತ್ತಿದೆ
ಒಂದೇ ಒಂದು ಧೀರ್ಘ ಉಸಿರು
ಈ ಚಲಿಸುವ ರಸ್ತೆ, ಮರ, ಬೆಳಗಿನ
ಮುದ್ದು ಆಕಾಶ, ಓಡಿ ಓಡಿ
ನನ್ನನ್ನು ಅಲ್ಲಿಗೆ ತಲುಪಿಸುತ್ತದೆ
ಮುಂದೆ.. ಏನೆಂದು ಗೊತ್ತಿಲ್ಲದಂತೆ
ನೀನು ಬೀಗಿಕೊಂಡು ತಣ್ಣಗೆ ನಗುತ್ತಿರುವೆ
ಇರು, ಈಗಷ್ಟೇ ಬಂದಿರುವೆನೆಂದೇ?
ಮೊದಲು ಎಲ್ಲಿ ಮುತ್ತಿಡಲಿ ಮೆತ್ತಗೆ?
ಹೇ ಪರಮಾತ್ಮ! ಎಲ್ಲಿಂದ ಹೇಗೆ ನುಸುಳಿದೆ
ಮೈಯ್ಯಲ್ಲಿ ಬಚ್ಚಿಟ್ಟ ಚಿಟ್ಟೆಗಳನ್ನು ಹಾರಿಸಿ
ಕಣ್ಣು ಹೇಗೆ ತೆರೆಯಲಿ, ಕಿವಿಯ ಆಳದಲ್ಲಿ
ಮೂಗು, ಕುತ್ತಿಗೆ ಕಚ್ಚಿ ನಿನ್ನ ನಾಲಗೆ, ಎಂಜಲು
ಸಣ್ಣಗೆ ಬೆವರಿ, ಬೆಚ್ಚಗಾಗಿ ಏದುಸಿರು ಬಿಡುತ್ತಿರುವ ನನ್ನ ಎದೆ
ಅಷ್ಟೇ ಗೊತ್ತು ನನಗೆ
ಎಣಿಸಿದ ಬೆರಳುಗಳನ್ನು ಅಮುಕಿ ಮುರಿದು ಬಿಡು
ಕಾಣುವ ಹೂಗಳೇ ಮುಷ್ಟಿ ಹಿಡಿದುಹಾಗೇ ನಗುತ್ತಿರಿ,
ಹರಿಯುವ ಹಾವಾಗಿರುವೆ, ಹಾ.. ಸುಖಿಸುತ್ತಿರುವೆ
ಹೇ ಪರಮಾತ್ಮ! ಇನ್ನು ತಡೆಯಬೇಡ
ಕಿಬ್ಬೊಟ್ಟೆಗೆ ಸರಿಯಾಗಿ ತಲೆಯಿಡು
ಕೈತುಂಬಾ ಹಿಡಿದು ಒತ್ತಿಕೋ
ತೊಟ್ಟಿಗೆ ತೊಟ್ಟು ತಾಗಿಸಿ
ಮೆತ್ತಗೆ ಆಡುವಷ್ಟು ಕಾಲವಿದೆ ನಮಗೆ
ನನ್ನ ಸಂಧಿ ಸಂಧಿಗಳಲ್ಲಿ ನಿನ್ನನ್ನು ಹಡೆದೇ ತೀರುವೆ
ತೊಡಿಸಿ ಬಿಡು ನಿನ್ನ ಆಭರಣ
ಒಳಗೆ ಏನಾದರು ಪರಿಮಳದ ಮಾತಾಡು
ನನಗೆ ಅವಸರಿಲ್ಲ.. ನಿನಗೂ?
ನಮ್ಮ ಉಸಿರು ಇನ್ನಷ್ಟು ದೂರ ಓಡುವುದಿದೆ
ಮತ್ತೆ ನಾ ಅಳುವುದೇಕೆ?
ಬಿಡಿಸಿಕೊಳ್ಳಲು ಹೆಣಗಾಡುವುದೇಕೆ?
ಮುಂದೆ,
ಒಂದು ಊರು, ಒಂದೇ ಮನೆ
ಮತ್ತು ಅಲ್ಲಿ ನಿಗೂಢವಾಗಿ
ಕಳೆದುಹೋಗಿರುವ ನಾನು
ಅದೊಂದು ಮಗುವೋ, ನೀನೋ
ಗಾಢ ನಿದ್ದೆಯಲ್ಲಿ ಮುಖ ಹುದುಗಿಸಿ
ಸವರುತ್ತಿದೆ
ಇನ್ನು ಉಳಿದಿರುವುದು
ನನಗಿರುವ ಬೆರಳಿನಷ್ಟೇ ದಿನಗಳು
ನಿನ್ನ ನೋಡಲು
32
ಮರೆತು ನಡೆವೆನೆಂದರೆ ಇನ್ನೇನು ಮಾಡಲಿ
ಇಷ್ಟು ಹಾಲನ್ನಾದರೂ ಕುಡಿದು ಹೋಗು
ಒಂದು ದಳ ಶ್ರೀ ತುಳಸಿ ನಿನ್ನ ಸಮರ್ಪಣೆಗೆ
ಪಾರಿಜಾತದ ಗಂಧ ಇಷ್ಟೇ ಸಾಕು
ಒತ್ತಿ ಹಿಡಿದಿರುವ ನಿತ್ಯ ಬೆಳಗಿನ ದನಿಗೆ
ಗಿಳಿ ಗುಬ್ಬಚ್ಚಿ, ಕೋಗಿಲೆ ಕಣಗಿಲೆ
ಮಂಜು ಮಳೆಯ ಹನಿಗೆ,
ಬೆಚ್ಚನೆಯ ಮಾತು ಮಂದ ಮಾರುತಗಳು
ಸಂದ ಕವಿತೆಗಳು ಬೆರಳೆಣಿಕೆಯಷ್ಟೆಯೇ?
ಕಿತ್ತ ನೆನಪುಗಳ ಜಡೆಕಟ್ಟಿ ತುರುಬಿಟ್ಟು
ಬಿಚ್ಚಲಾರೆನು ಕಡೆಗೆ ಬಚ್ಚಿಡಲೂ ಬಾರೆನು
ಅದೆಂತಹ ಕಂಬನಿ, ಮನದಣಿಯೇ ನೋಡಿ
ಮಣಿ ಮಣಿದು, ಕುಣಿ ಕುಣಿದು
ನೂಪುರದ ಕಿಣಿಕಿಣಿಗೆ ಮತ್ತೆ ತರಂಗಿಣಿ
ಹಬ್ಬುವುದು, ಉಬ್ಬುವುದು
ಅಡಗುವುದು ಗುನುಗುವುದು
ಮೌನ ಸಮ್ಮಾನ ಬಿಗುಮಾನ
ಯಾವ ಹೊಸ ಗಳಿಗೆಯೂ ಬರದೆ
ಕಡಲು ಬಿರಿದು ಹೋಗುವುದು
ಯಾವ ಪರಿಷೆಯೊಳಿರುವೆ, ಪಲ್ಲಕಿಯಲಿ?
ನನ್ನ ಗರ್ಭ ಗುಡಿಯಲ್ಲಿ?
ಸಾಲು ಹಕ್ಕಿಗಳಲಿ? ಮೈಲುದ್ದ ಮೋಡದಲಿ
ಕಟ್ಟಡವಿಯೇ ಕಂಡಿರದ ಸ್ಪಟಿಕ ಜಲರಾಶಿಯಲಿ?
ಸಂಜೆ ಐದರ ಬಾನಿಗೆ
ಚಂದಿರ ತೀರಿದ ನೆರಳು
ತುಂಟ ಹುಡುಗನೇ ಒಮ್ಮೆ ಅಳಿಸಿಹೋಗು
ನಿನ್ನ ಒದ್ದೆ ರೋಮಗಳು, ಕಿವಿ ಸಂದಿಯ ಹನಿಗಳು
ನಿನ್ನ ಮರುಳು ನನ್ನೊಳಗಿದೆ ಕಳೆದು ಹೋಗು
33
ಅನಿಸುತಿದೆ ಹೀಗೆಲ್ಲಾ ಒಂದು ಆಲಸ್ಯದ ಹಗಲು
ಮುಖವಿಲ್ಲದ ಮಾತು, ದನಿಯಿಲ್ಲದ ಹಾಡು
ಎಂದಾದರೂ ಸಿಗುವ ಸಿರಿಮುತ್ತು
ಒಳಗೆ ಪರಮಾತ್ಮನಂತೆ ಏನೋ ಸುಳಿದಂತೆ
ಕಡಲು ಕಾಣುವುದು ಒಡಲು ಹೆಜ್ಜೆಇಕ್ಕುವುದು
ಹೊಳೆಯದಿದ್ದರೂ ಹೊಳೆದಂತೆ
ನಡೆದಿರುವುದು ಕಂಡಂತೆ
ಕಳೆದ ಮಳೆಯ ಆಕಾಶ ಇಂದು ಧೋ ಸುರಿವುದು
ದೂರದೂರದ ಮೋಡದ ಮೇಲೆ ಹಾರಿ ನಡೆವುದು
ಬೆನ್ನು ತಾಕಿಸಿ ಕಳೆದ ತಂಪು ಸಂಜೆಯ ಹೊತ್ತು
ಮರದ ಮರೆಯಲ್ಲಿ ಹಕ್ಕಿಗಳ ಜೋರು ಮಾತು
ಸಾಯುವ ಇರುಳು ದೇವರಂತಹ ನಾವು
ಹೊಳೆಯದಿದ್ದರೂ ಹೊಳೆದಂತೆ
ನಡೆದಿರುವುದು ಕಂಡಂತೆ, ಮೌನದಿಬ್ಬಗಳು ಹರಸಿದಂತೆ
ಅನಿಸುತಿದೆ ಹೀಗೆಲ್ಲಾ ಒಂದು ತುಂಬು ನಕ್ಷತ್ರದ ಇರುಳು
34
ಬರುವುದಿಲ್ಲ ಎನುತಿರುವನು
ಶಿಶುವಿನ ಹಸಿ ನಶೆಯಂತವನು
ಇಲ್ಲಿ ನನ್ನ ವಿರಾಮದ ಹೊತ್ತು
ಆತ್ಮಕ್ಕೆ ಇಳಿಯುವ
ವ್ಯಂತರ ದೇವತೆಯಂತಹ ವೈನೊಂದು
ದೂರದಲ್ಲಿ ಕೇಳಿಸುವ ಇರುಳ ಸಂಗೀತ
ನಿನ್ನ ಒಂಟಿ ಗುಟುರು
ನಮ್ಮ ಪ್ರಿಯ ಹುಚ್ಚಿನ ಆಳದ ಅರಿವು
ಇನ್ನೂ ಬಾರದು ನಿನಗೆ
ಪ್ರಿಯ ಸೈತಾನರ ಕಾರುಣ್ಯಕ್ಕೆ
ನಾವು ಹೊಸದಾಗಿ ಪ್ರೇಮಿಸುವುದು
ನಿನ್ನಿಂದ.. ಮಗು
ಎಲ್ಲಿಯೋ ಕಳೆದು ಹೋಗಿರುವೆ ನೀನು
ಎಳೆಯ ಹಸಿ ನಶೆಯಂತವನು
ದಿನವಿಡೀ ನಾನು ನಿನ್ನ ಕುಡಿದ
ತೇಲುಗಣ್ಣಿನ ನಿಜಗಳು
ಕಾಣುವುದು ಬೇಕಿಲ್ಲ ನನಗೆ
ನಾನು ಕಿರುಚಿದ. ಗಂಟಲಲ್ಲಿ
ಅಳುವ ಬುಗ್ಗೆಯಲ್ಲಿ ನಿಮಿಷಗಳನ್ನು ಕೊಂದು
ಎಲ್ಲಿಯೋ ಕುಳಿತ ಒಂದು ಓರೆಯಲ್ಲಿ
ನಿನ್ನ ಬಲಗೆನ್ನೆಯ ಗುಳಿ ಕಾಣಿಸಿ
ನೆಗೆದು ಬರುವ ಕಪಿಣಿಯಂತವಳು
ನನ್ನ ನಿಜ ಗೊತ್ತು ನಿನಗೆ
ನನ್ನ ಸುಖದ ಬಾಗಿಲ ಒಳಗೆ ನೀ ಬರುವಾಗ
ನನ್ನ ಏಕಾಂತ ಅಡಿ ಇಡುವ
ದೂರದ ನಾನು ಚಂದ ಕಾಣುವ
ಎಲ್ಲವೂ ಗೊತ್ತು ನಿನಗೆ
ನಿನ್ನ ತಂಪು ಊರಲ್ಲಿ
ನನ್ನ ಹೊಸ ರಾಜಿ ಮಾತು
ಒದ್ದೆ ಕನಸು ಮತ್ತೆ ಬರುವ
ಹೊಸ ಮಳೆಗೆ ಆಲಸಿ ಪ್ರಿಯಕರ ನೀನು
ಕಾವ್ಯ ನಮ್ಮನ್ನು ಕುಡಿವುದೋ
ನಾವು ಕಾವ್ಯವನ್ನು ಕುಡಿವೆವೋ
ಯಾರು ಯಾರೆಂದು ತಿಳಿಯದ ಹೊತ್ತು
ಸುಳ್ಳು ಸುಳ್ಳೇ ಎಂದು ತಿಳಿದ ನಿಜದ ಹೊತ್ತು
ನಮ್ಮ ಒಂಟಿ ತೇರನೆಳೆವುದು ನಮಗೆ ಗೊತ್ತು.
35
ಏನೋ ಒಂದು ಸಿಗಬಾರದು
ಮೌನ ಕಲ್ಲೊಳಗೆ
ಚಲಿಸುವ ಕತ್ತಲಲ್ಲಿ
ಸುಖದ ಎಳೆಗಳು
ತಣ್ಣಗೆ ಕುಳಿತಿದೆ
ಸುತ್ತ ಓಡುವ
ಮೋಹದ ಸುಗಂಧಗಳು
ಎದೆಯ ಸಂಕಟವೊಂದಕ್ಕೆ
ಸಂತೈಸುತಿದೆ
ಬೇಡ ಹೋಗಿರೆ ಎಂದರೆ
ಯಾರಿಗೋ ಕುಣಿಯುತಿರುವ
ಸಮ್ಮೋಹಿನಿಯರು
ಹಾ.. ಸುಖದ ಎಳೆಗಳು
ತಣ್ಣಗೆ ಕುಳಿತಿದೆ
ನಾನು ಯಾರೋ ನೀನು ಯಾರೋ
ಯಾವುದೋ ಕೋಶದ
ಹಕ್ಕಿಯ ಹಾಡುಗಾರರು
ಈಗಷ್ಟೆ ಎಲ್ಲಿಂದಲೋ ಬಂದ ಗಾಳಿಗೆ
ಅಲ್ಲಲಿ ಕುಳಿತು ಕಾಯುವ ಮೋಡಗಳು
ಮತ್ತೆ ಪ್ರೇಮಿಸುತಿದೆ
ಇನ್ನೂ ಯಾವುದೂ ಮರೆತಿಲ್ಲ
ಬರುವಾಗ ಬರುವ ಅಳು, ಬೇಕೆಂದರೆ
ಒಂದೊಂದೇ ಮೆತ್ತಗೆ ಇಳಿಸಿ ಹೊರಡುವುದು
ಭಾಗ್ಯವಿದ್ದರೆ ಇನ್ನೊಮ್ಮೆ ಹುಟ್ಟುವುದು
ಯಾರೋ ಗೊತ್ತಿಲ್ಲದವನ ಸೆರೆಯಲ್ಲಿ
ನಿದ್ದೆ ಹೋಗುವುದು
ಎಲ್ಲಾ ದುಃಖಗಳು ಮುಗಿದಿದೆ
ಎದೆಯ ಸಂಕಟವೊಂದು ಹಾ ಮೇಲೇಳುತಿದೆ
36
ಈಗ ಖಾಲಿಯಾಗಿದ್ದೇನೆ
ನೆತ್ತಿಯಾಚೆಗೆ ದೇವರಂತಹ ಆಕಾಶ
ಕಾಲ ಬೆರಳ ಕೆಳಗೆ ದೈವದಂತಹ ಪಾತಾಳ
ಹಾರಿ ನುಸುಳುವ ಪ್ರೇಮದ ಹಿಕ್ಕೆಗಳಿಂದ
ಖಾಲಿಯಾಗಿದ್ದೇನೆ
ಒಮ್ಮೊಮ್ಮೆ ಉದ್ದ ಮಲಗುವ ನನ್ನ ಮೈಯ್ಯ ನದಿ
ಅದರ ಹರಿವು
ನನ್ನ ದೇವರು..
ಬೇಕಂತಲೇ ಜಡವಾಗುತ್ತೇನೆ
ಹಾಗೆಯೇ ತಪ್ಪಿಸಿಕೊಳ್ಳುತ್ತೇನೆ
ಒಂದೊಮ್ಮೆ ನನ್ನ ಕಣ್ಣುಗಳು
ತೆರೆಯಲಾರವು
ಎಲ್ಲಿಯೊ ಕವುಚಿರುವ ದೇಹ ಉರುಳಲಾರದು
ಏನೂ ಅರಿವಾದಂತೆ ತುಟಿಗಳು ಮಾತ್ರ ನಗುತ್ತಿರುವವು
ಒಂದು ಪ್ರಬಲ ಗಾಳಿಯಂತೆ
ನಾನು ಆಗೊಮ್ಮೆ ತುಂಬಿಕೊಳ್ಳುತ್ತೇನೆ
37
ನಮ್ಮ ಸಲುವಾಗಿ ಏನೋ ಒಂದು ನಡೆಯುತ್ತಿರಬೇಕು
ನಿರಂತರವಾಗಿ
ನಮ್ಮ ಪೊರೆಯುವ ಬೆಟ್ಟಗಳೇ ಕರೆಸಿಕೊಳ್ಳಿ ಅಲ್ಲಿಗೆ
ಇನ್ನೂ ಅಲ್ಲಿಯೇ ಉಳಿದು ಹೋಗಿರುವ ನಮ್ಮನ್ನು
ಒಂದು ಬಾರಿ ಕರೆದು ತೋರಿಸಿ…
ಮತ್ತೆ ತೊರೆದು ಹೋಗುವ ಪರಿತಾಪವನ್ನು ಮನ್ನಿಸಿ ಒಂದು ಬಾರಿ
ಎಲ್ಲಿಯ ದೇಹ ಎಲ್ಲಿಯ ಕಾವು ಎಲ್ಲಿಯ ಉಸಿರು?
ಇಲ್ಲಿ ಯಾವುದೂ ಇಲ್ಲವೋ ಮಾಯೆ ಈ ಬೆಟ್ಟದ ತುದಿಯಲ್ಲಿ
ಸುಮ್ಮನೆ ಏನೂ ಅರಿಯದ ಮಳೆ ಎಲ್ಲೋ ಹತ್ತಿದ ಚಳಿ
ನನ್ನ ಬರಲಿರುವ ದುಃಖದ ಹಾಗಿನ ಮೋಡದ ಎಲೆಗಳು ಮದಿರೆ ಮಾರುತ
ಹೇಗಿರಬಹುದು ಎಲ್ಲಾ?
ಗುಟ್ಟು ಬಿಚ್ಚುತ್ತಾ ವೇಗವಾಗಿ ಕಳೆಯುವ ಹಾದಿಗಳು
ನಾವು ನಮಿಸಿ ನಮಗೆ ಉಪಕರಿಸುವ ತಿರುವುಗಳು
ನೆನಪು, ಹಸಿರು, ನಗು, ಮಾವಿನ ಮರ
ಬೇಗ ಹಾದು ಹೋಗುವ ಮನೆಯ ಹೆಂಚಿನ ಅವಸರ
ಸುಳಿವ ಗಾಳಿಗಳೇ ತೋರಿಸಿ ಒಂದು ಸಲ…
ಹೋಗಲಿ ಬೇರೇನು ಬೇಡ
ನಿನ್ನ ಕೈಮುಗಿದು ಬೇಡುವೆ ಬಾಲಕ
ನಿನ್ನ ಬೆಚ್ಚಗಿನ ಮೆತ್ತನೆ ಕೊರಳ ಮೂಸುವ ಸುಖವ ನೀಡು
ಒಮ್ಮೆ ನಮ್ಮನ್ನು ಕರೆಸಿಕೊಳ್ಳಲು ಹೇಳು
ಇಲ್ಲಿ ಮಳೆ ಬಂದು ನನಗೆ ಅಳುಬರಿಸುತಿದೆ
ಚಳಿಗಾಳಿ ನನ್ನ ಮೈಕೊಡವಿ ಎಬ್ಬಿಸುತಿದೆ
ಬರಿಯ ಪದ್ಯ ಬರೆಯುವುದೂ ಸಾಕಾಗಿದೆ
ಒಮ್ಮೆ ಬರಿದೆ ಬಂದು ಹೊಗುವೆ ಹೇಳು
ನಾಲ್ಕು ದಿನ ನಿನಗಾಗಿ ಬದುಕಲು
ನನ್ನ ಉಸಿರಿನ ಪೊಟ್ಟಣವನ್ನು ಪುನಃ ತುಂಬಿಸಿಕೊಳ್ಳಲು
ಒಮ್ಮೆ ಬರಿದೆ ಬಂದು ಹೋಗುವೆ ಹೇಳು
38
ನೀನೊಂದು ಪ್ರಭೆ
ನನ್ನ ತೂತುಗಳಿಗೆ ತೇಪೆ ಹಚ್ಚುವ ಬಣ್ಣದ ಬೆಳಕು
ಯಾವುದು ಸರಿ ಇರದಾಗ ಕಾಣಿಸುವ ಮಾಂತ್ರಿಕ
ನೀನು ನಿಜ
ನಿಜವಲ್ಲವೆಂದರೂ ನಿಜ
ಹೆಕ್ಕಿಕೊಳ್ಳಲಾಗದು ನಿನ್ನ ಅವು ಇವು
ಸರಿ ತಪ್ಪು ಒಳಗು ಹೊರಗು
ಎಲ್ಲಾ ಇರುವ ಹಾಗೆಯೇ ಇರಬೇಕು
ನಾವು ಕುಡಿದ ಮಧ್ಯವೂ
ನದಿ ಕಲ್ಲ ಹಾವಸೆಯಲ್ಲಿ
ಸಣ್ಣಗೆ ಪಾದ ಜಾರಿದ ಪದ್ಯವೂ
ನನ್ನ ಹಿಡಿದಿರುವ ನಿನ್ನ ಬಿಗು
ಈ ಹೊತ್ತಲ್ಲಿ ನನ್ನ ಮಾತ್ರ ಪ್ರೀತಿಸುವೆ
ಎಂದು ನಂಬಿರುವ ನೀನು
ಎಲ್ಲವೂ ಹಾಯಾಗಿ ಇರಬೇಕು ಹೀಗೆ
ಪರವಶ ನಾವೀಗ
ಎಣಿಸದ ಹಾಗೆ ಬಂದ ಪ್ರಳಯದಂತ ಅಳುವಿಗೆ
ಒರೆಸಲು ಇರುವುದು ನನ್ನ ಎರಡು ಕೈಗಳು
ಈ ಜಗದ ಒಲವನ್ನು,
ದೇವತೆಯ ಮೂಗುತಿಯ ಹೊಳಪಂತ ಚಂದವನ್ನು
ವಿಶಾಲ ಹಸಿರ ಮೇಲಿನ ಕನಸನ್ನು
ನನ್ನ ಬೊಗಸೆಗೆ ತರಿಸಿ ಕಣ್ಣು ಮುಚ್ಚಿ ಕುಡಿಸುವೆ
ಹೇ ಇವನೇ
ಮತ್ತಿನಂತಹ ಮತ್ತನ್ನು ಹೊತ್ತು
ನಿನ್ನ ಕಣ್ಣಲ್ಲಿ ಹೊರಿಸುವೆ
ಅಳಬೇಡ ನಾನಿರುವಾಗ
ನೀನು ನನ್ನ ಕತ್ತಲಿನ ಮಿಂಚುಹುಳ
ಒಂದಿಷ್ಟು ಹೊತ್ತು ನನ್ನ ಒಂಟಿಯಾಗಿಸಿ ಹೋಗುವಾಗ
ನಿನ್ನ ಅಳುವೊಂದಿರರುವುದು ನನ್ನ ಬಳಿ
ನನಗೂ ಅರಿವಾಗದ ಹಾಗೆ
ಮೆತ್ತಗೆ ಯಾವಾಗಲೋ ನುಸುಳಿದ ನೋವು
ತಿಳಿಯುವ ಮೊದಲೇ ಬಂದು ಬಿಡುವ ನೀನು
ಏನೋ ಒಂದು ಬೇಸರ, ದಿವ್ಯತೆ
ಯಾವ ಪರಿವಿರದ ಏನೆಂದು ತಿಳಿಯದ ಮುಗ್ಧ ಹೊತ್ತು
ಇಳಿವುದಾದರೂ ಹೇಗೆ ಇವು ಈ ಜಗದ ಭಾರದ ಹೃದಯಕ್ಕೆ
ಒಂದು ರಾಗಕ್ಕೆ ಮುಗಿಯದೆ ಚುಂಬಿಸಿರುವುದನ್ನು
ಹೇಳುವುದಾದರೂ ಯಾರಿಗೆ
ಅಳಬೇಡ ನಾನಿರುವಾಗ
ನೀನು ಬೇಡುವ ನದಿಯೊಳಗೆ ನಿನ್ನ ಬಿಟ್ಟು ಬರುವೆ
ನೀನು ಈಜುವುದನ್ನು ಶುಭ್ರ ಮುಗುಳು ನಗುವನ್ನು ಕಾಣುವೆ
ಬಿಸಿಲು ಮಳೆಗೆ ಇರುಳ ಕೆಳಗೆ ಕಾಣುವೆ
ಗೋಧೂಳಿಗೂ ಕಂಡರೆ ಕಾಣುವೆ
ದೈವ ನೀಡಿದರೆ, ಕಣ್ಣುಗಳಿಗೆ ಕಂಡರೆ
ಒಂದು ಇಡಿಯ ಹಗಲು ನಿನ್ನ ಮಡಿಲಲ್ಲಿ ಮಲಗಿ ಹೋಗುವೆ
ನನ್ನ ಮನ್ನಿಸು ಕರುಣಿಸು ಮರಣಿಸು
ಅಳುವೊಂದು ಬೇಡ ನಾನಿರುವಾಗ
39
ನಾನು ನಿದ್ರಿಸುತಿರುವೆ
ಹೇಳಲಾರದೆ ಬರೆಯಲಾರದೆ ಕೊನೆಗೆ ಮೈಯನ್ನು ಹೊರಳಿಸಲಾರದೆ
ಮತ್ತೆ ಮತ್ತೆಆಗುತಿರುವ ಅತೀವ ಸುಖ ತಡೆಯಲಾಗದೆ
ಸಣ್ಣ ಜಗದ ಮೇಲೆ ನನ್ನ ದೊಡ್ಡ ಹೆಜ್ಜೆಗಳಲ್ಲಿ
ನಿನಗೂ ನಾನು ಕಾಣದಾಗಿರುವೆ
ನನ್ನ ಕಾಲಿನ ಥಂಡಿ, ಮಳೆ, ಮೌನ
ಈಗ ಹೊರಗೆ ಎಲ್ಲವೂ
ಚಂದವಿದ್ದಿರಬೇಕು ನನ್ನಂತೆ ಮಂಕು ಮರುಳು ಆಕಳಿಕೆ ಎದೆಯುಬ್ಬಿ ಒಂದು ಉಸಿರು
ಬೇಡ ಯಾವುದೂ ಈ ಜಗತ್ತು, ಪರಿವೆ ಸೌಂದರ್ಯ..
ಕೇಳಿಸಿಕೊಳ್ಳಲು ನೀನೂ.. ನನ್ನ ಅತೀವ ಸುಖಕ್ಕೆ
ನೀ ನನ್ನೊಳಗೆ ಇದ್ದಾಗಲೂ ಜಗತ್ತು ಹೀಗೆ ಚಂದವಿದ್ದಿರಬೇಕು
ಅದೆಲ್ಲಾ ನಮ್ಮ ಸಲುವಾಗಿಯೇ ಎಂದು ನಿನ್ನ ಮೇಲೆ ನಾನು ಗುನುಗುನಿಸಿರಬೇಕು
ನೀನು ಸುಮ್ಮನಿದ್ದರೂ ಒಂದು ಕಾರಣವಿದೆ
ನಿನ್ನ ಕಿರುಬೆರಳ ತುದಿ ಸೋಕಿದರೂ ಹಾಡು ಕೇಳಿಸುತಿದೆ
ಒಳಗೆ ಇರಬೇಡ ಹೊರಗೆ ಬರಬೇಡ
ಹೋಗಿ ಬರುವ ನಿನ್ನ ಸುಖದ ಸುಡುವಿಗೆ ಪುನಃ ಪುನಃ
ಜೊಲ್ಲು ಒದ್ದೆ ಜಾರಿ ಸಿಗದೆ ಸಿಗುವ ನಮ್ಮ ಕೇಳದೆ ಬೆಸೆಯುವ ತುಟಿಗಳಿಗೆ
ಹರಿಯುತಿದೆ ಹಾಲು ನಿನ್ನ ಎದೆಯ ಮೇಲೆ ತುಳುಕುತಿದೆ
ನನ್ನ ಪರಿಮಳದ ಹಾಲು ನಮಗರಿವಿಲ್ಲದೆ
ಯಾರೋ ಇಟ್ಟ ಕನ್ನಡಿಯಲ್ಲಿ ನಾನು ಕಂಡಿರುವೆ
ಇವೆಲ್ಲಾ ಏನೆಂದು ತಿಳಿಯದೆ ಅತ್ತು ಮತ್ತೆ ಹಾಲು ನೀಡಿರುವೆ
ಜಗವೂ ಸುಖಿಸಿದೆ ನಾವು ಸಿಕ್ಕಿರುವುದಕ್ಕೆ
ನನ್ನ ನೆತ್ತಿಯ ಮೇಲೆ ನೀನು ಹರಸಿ ಹೋಗಿರುವುದಕ್ಕೆ
ನಾನು ನನ್ನನ್ನು ಈ ಕ್ಷಣವೂ ಬಿಟ್ಟಿರಲಾರೆ
ನನ್ನ ಅತೀವ ಸುಖ ತಡೆಯಲಾರೆ
40
ಒಂದು ನಡು ಹಗಲ ಹೊತ್ತು
ತಂಪು ಆರದ ನಾವು ಮತ್ತು ಅನ್ಯಮನಸ್ಕ ಆಕಾಶ
ಹಕ್ಕಿ ಹೇಳುತಿದೆ ಇಲ್ಲಿ ಮೋಡ ಕವಿದಿದೆ
ಏನೂ ತಿಳಿಯುತ್ತಿಲ್ಲ
ಏನೂ ಕೊಡಲಿಲ್ಲ ಮಗೂ ನಿನಗೆ ಬರಿಯ ಕರುಳ ಹಾಲು
ಎಣಿಸಿ ಕೂಡಿಟ್ಟ ಮಾತಿಗೆ ಮುತ್ತಿಟ್ಟು ಮರೆಸಿಬಿಟ್ಟೆ
ಹುಸಿ ಕಳ್ಳ ನಿನ್ನ ತುಟಿಯ ಸೆರೆಯಲ್ಲಿ ನನ್ನ ಹಸಿಯ ಹಾಲು
ನಿನ್ನ ಒಡಲ ತುಂಬಾ ನನ್ನದೇ ಪರಿಮಳದ ಹಸಿ ಹಾಲು
ನಾನೀಗ ತಾಯಿ ಪ್ರೇಯಸಿ ದೇವತೆ ಹಾತೆ ತುಂಬು ಹಾಲ ಕನ್ಯೆ
ಇದೆಲ್ಲಾ ಸೇರಿದ ಏನೋ ಒಂದು
ಆಗಾಗ ನಿನ್ನ ಬೇಡಿ ಮುಖ ನೋಡುವೆ
ಅಯ್ಯೋ ಬೇಡವಿತ್ತು
ಬೇಡ, ನೋಡದಿರು
ನಿನ್ನ ತೆರೆದ ಬಾಯಿ ಮುಚ್ಚಿದ ಮುದ್ದು ಕಣ್ಣು ಮುಗಿಯದ ಉಸಿರು
ತೊಟ್ಟು ತುಂಬಾ ಬೆಳ್ಳಿ ಕೆನೆಯ ಹಾಲು, ನೋಡಬೇಡ
ಹಿಂಡಿ ಕುಡಿ ಒಸರಿದ ಹಸಿ ಹಾಲು ಮೂಗು ಕಣ್ಣು ತುಂಬಾ
ಏನೂ ತಿಳಿಯುತ್ತಿಲ್ಲ
ಕ್ಷಮಿಸಿಬಿಡು ಮಗೂ
ನಿನಗೆ ನೀಡಿರುವುದು ಬರಿಯ ಪರಿಮಳದ ಹಾಲು
41
ನಿನ್ನ ಹೊರಡಿಸಿದ ಆಣೆಗಳಿಗೆ
ಯಾಚಿಸುತಿರುವೆ ನಾನು
ಎಂದು ಬರುವೆ ಮತ್ತೆ?
ಹೇ ಕರುಣಾಮಯಿ, ನೀ ಕರುಣಿಸುವ ಮತ್ತಿನ ಘಳಿಗೆಗೆ
ಎಂದೋ ಬರಿದಾಗಿದೆ
ಬಟಾಬಯಲಿಗೆ ನೀ ಕೊಟ್ಟ
ಮಾತು ಮುತ್ತುಗಿತ್ತು
ನಡೆದಿಲ್ಲ ಅಂತಹದ್ದೇನು
ನಮ್ಮ ಕಾಯಿಸಿದ ಕ್ಷಣಗಳೂ ಕಾಯುತಿವೆ ನಮಗೆ
ದಿನವೂ ಕೊನೆಯ ಬಾರಿ ಅಯ್ಯೋ ಎಂಬ ದಿಗಿಲು
ಮುಗಿದ ಪುಷ್ಕಳ ಹೊತ್ತುಗಳೂ ಮುಗಿದಿಲ್ಲ ಇನ್ನು
ಕೊನೆಯಾದರೂ ಹೇಗೆ
ಒಂದು ಕತೆ ಮುಗಿವ ರಾತ್ರಿ ಹತ್ತುವ ಕೇದಗೆಯ ಹುಚ್ಚಿಗೆ
ಮುಗಿಸುವ ಪರಿಯ ಕಾಣಿಸದ ಭಗವತಿಗೆ
ಹತ್ತಿ ಹರಿವ ನಮ್ಮ ಭಕ್ತಿಗೆ
ಬಾ ಬಾಗಿ ಕಣ್ಮುಚ್ಚಿ ಭಗವತಿಯ ಬೆಳಗಿ
ಹರಿಯೆ ತಪ್ಪೊಪ್ಪಿಕೋ
ಸಾಲದು ಸಣ್ಣ ಬಾಯೊಳಗೆ
ನಿನ್ನ ಉದ್ದ ಆಳುದ್ದದ ಜಗತ್ತು
ತಡರಾತ್ರಿ ಯಾವಗಲೋ ಒಸರುವ ಹಾಲು
ಏನೂ ತಿಳಿಯದ ಬಾಲೆ ಸುಲಿದ ಬಾಳೆ ನಾನು
ಕಳ್ಳ ಕವಿತೆಯ ಸಾಲು
ಇರಲಿ,
ಹೆಣೆದ ಬೆರಳುಗಳ ಅಲ್ಲೇ ಬಿಡುವ ನಾವು
ಏರುತೇರುತ ಏರುವ ಆಕಾಶ ನನಗೆ
ತಳಸಿಗದ ಬಿರುಕಿರದ ಭೂಮಿ ನಿನಗೆ
ಎಲ್ಲಿಯ ಕೊನೆ? ಇರುವುದು ಇದೆಲ್ಲಾ ಹೀಗೆ
ನನ್ನೊದೊಂದು ಪುರಾತನ ದುಃಖ ಮತ್ತು
ನನ್ನ ಬೆತ್ತಲಿನಷ್ಟೇ ನನ್ನ ಒಂಟಿತನ
42
ನಾನು ಇರುವುದು ಸುಳ್ಳು ಎನಿಸುತ್ತಿದೆ
ನಿನ್ನ ಹಾಡುವ ಧ್ವನಿಗಳು
ನನ್ನನ್ನು ಇಲ್ಲವಾಗಿಸಿದೆ
ಯಾವುದೋ ನೀರ ಆಳದಿಂದ,
ಆಕಾಶದ ಹೊಕ್ಕುಳಿಂದ ಮಿಂಚೊಂದು
ಸುಮ್ಮನೆ ಸುತ್ತ ಹರಡಿಕೊಂಡಿದೆ
ನಿನ್ನ ತರಾನಗಳು
ನನ್ನ ಸುಖದ ಕಣ್ಣೀರಲ್ಲಿ
ಹರಿಯುತಿದೆ
ಹಾಡಬೇಡ ಸಂತನೇ
ಏನೂ ಕೇಳಿಸುತಿಲ್ಲ
ಮಲಗಿರುವೆ ನಿನ್ನ ಮಾಯದ ಮಡಿಲಲ್ಲಿ
ಸಾಯುವ ಕಡೆಯ ಘಳಿಗೆಯ
ಸುಖದ ಕೊನೆಯಲ್ಲಾದರೂ
ನಿಲ್ಲಿಸಿಬಿಡು
ಹಾಡಬೇಡ ಗಂಧರ್ವನೇ
ಬೆಟ್ಟದ ಕೆಳಗೆ
ಯಾವುದೋ ನದಿಯ ಸುಳಿಯ ಒಳಹೊಕ್ಕಿರುವೆ
ನಿಲ್ಲಿಸು ಒಮ್ಮೆ
ದುಃಖದ ಕೊನೆಯ ತುಂಡೊಂದು
ಉಳಿದು ಹೋಗಿದೆ
ಮತ್ತೆ ಬೇಡ
ಬೇಡ ಈ ಲೋಕದ ಪ್ರೇಮದೆಳೆಗಳು
ಇಲ್ಲೇ ಮುಗಿದು ಬಿಡಲಿ ಎಲ್ಲವೂ
ಕರಗಿ ಹೋಗಿರುವೆ
ನಟ್ಟ ನಡುವೆ ಒಂದು ಕಡೆ
ಸಣ್ಣ ಬೆಳಕಾಗಿಸು
ನಾನು ಇರುವ ಭ್ರಮೆಯನ್ನೇ
ಕಳಚಿಬಿಡು
43
ನನಗೆ ಹೀಗೇ ನಿನ್ನನ್ನು ಕುಡಿದು
ಸಾಯಬೇಕೆನಿಸುತ್ತಿದೆ
ನನ್ನ ಮಧ್ಯದ ನಶೆಯಲ್ಲಿ
ಇದೊಂದು ಹಳೆಯ ಸಂತನ ಕಾಲದ
ನೆಲದ ಸೊಗಡು
ನಾನು ಕುಡಿದ
ಗಂಧಗಳನ್ನು ನಿನ್ನ ಸಂಗೀತದ ಸಣ್ಣ
ಗಾಂಧಾರದಲ್ಲಿ ಸೇರಿಸಿಕೋ
ನಾನು ಸೋಲುತ್ತಿಲ್ಲ, ನಿನ್ನ ಜೀವದ ಒಳಗಿನ
ತೆಳ್ಳಗಿನ ಏನೂ ಕಾಣದ ಮೆದುವಲ್ಲಿ
ಜೀವವಿರಿಸಿಕೊಂಡಿರುವೆ
ನನ್ನನು ಪೊರೆ ಹೊತ್ತುಕೋ
ನಿನ್ನ ಭಾರದ ಧ್ವನಿಯ
ನಡುವೆ ಹುದುಗಿಸು
ಏನೂ ಬೇಡದ ನಿನಗೆ ನನ್ನ ಭಿಕ್ಷುಕಿಯ
ಹಳೆಯ ಕಟು ಚೊಗರೊಂದಿದೆ
ನಿನಗೇ ನೀನು ಯಾರೆಂದು ತಿಳಿಯದಾಗ
ನಾನೇ ನಿನ್ನನ್ನು ತಡವಿ ಈಚೆ ಕರೆಸಿಕೊಳ್ಳುವೆ
ಆ ಹೊತ್ತು ನನಗೆ ಹುಚ್ಚು
ಕೆಡವುವ ಹುಚ್ಚು
ಇನ್ನೊಮ್ಮೆ ನಿನ್ನನ್ನು ಮುಟ್ಟುವ
ನೀನು ನನ್ನ ಮರೆಯುವ ದಿಗಿಲು
ನಾನು ಹೀಗೇ ಇಲ್ಲಿ ಸತ್ತರೆ ಇನ್ನೆಲ್ಲಿಯ ನೀನು?
ಗಾಳಿಗಂಧ ಉಸಿರು ನೋವು ಮಾಟ ಹಸಿವು
ಮರೆವು ಏನೂ ಆಗದ ಈ ಹೊತ್ತು
ತಿಳಿಯುವುದಾದರೂ ಹೇಗೆ ನಿನಗೆ
ನೀನಾಗಲೇ ಗತಿಸಿರುವೆ
ಯಾಕೆಂದರೆ ನಾನು ಇನ್ನೂ ಇರುವೆ
ನಿಲ್ಲಿಸಬೇಡ ಈಗ
ಈ ರಾಗವನ್ನು
ಇನ್ನಷ್ಟು ಹೊತ್ತು ಬದುಕಿಸಿ
ಎಲ್ಲವನ್ನು ಮನ್ನಿಸಿಬಿಡು
44
ಹೇ ಕೋಲ್ಮಿಂಚೇ
ನಿನ್ನ ತೇಜಸ್ಸನ್ನು ತಡೆಯಲಾರದೆ
ನನ್ನ ಕಣ್ಣುಗಳು ತುಂಬಿಕೊಳುತಿದೆ
ನನ್ನ ನಿಷ್ಕಾರುಣ ಹೆಜ್ಜೆಗಳು ತೊದಲುತಿದೆ ಯಾಕೋ
ನನ್ನ ಆತ್ಮ ನಿನ್ನ ಬೆಳಕನ್ನು ಕುಡಿದಿದೆ
ಹೊಳೆವ ನದಿಯಂತಹ ಮುಗಿಯದ
ಸುಳ್ಳು ದಿವ್ಯ ಘಳಿಗೆಗಳು ಘಟಿಸುತಿದೆ, ಕೇಳು
ಓ ನನ್ನ ಹುಂಬ ಪ್ರಾಣವೇ,
ನಾನಿನ್ನೂ ನಿನ್ನನ್ನು ಚಕಿತಗೊಳಿಸುವುದಿದೆ
ಮುಗಿದಿಲ್ಲ ನನ್ನ ಹುಚ್ಚಿನ ದಿನಗಳು ಇನ್ನೂ
ಸೆಟೆದು ಗಹಗಹಿಸುವಾಗ
ಬೆನ್ನಲ್ಲಿ ಈಗಲೂ ಮೆಲ್ಲಗೆ ಇಣುಕುವ ಹುಚ್ಚುಗಳು
ನನ್ನ ಕೊಂಕು ನಗೆಯ ತುಟಿಗಳಲ್ಲಿ ಮೇಲೇಳುವವು
ಮಾತಾಡುವವು; ಕುಣಿಯುವವು
ಜೀವದ ಹಾಗಿನ
ಪ್ರೇಮಮಯಿ ಹುಳವೊಂದು
ಕೆಲವೊಮ್ಮೆ ಹಾಡುತ್ತಾ ಬರಿಯ ಚಲಿಸುತ್ತಾ
ಏನೆಲ್ಲಾ ಕತೆಗಳ ತೋರುತ್ತಾ
ನನ್ನ ಪಾದ ಸವರುತ್ತಾ ಮುರುಟಿಕೊಳುವಾಗ
ನಾನು ಗಹಗಹಿಸಿ ಮೆತ್ತಗೆ ಉಸುರುವೆ..
ನೋಡು, ನನ್ನ ಚೈತನ್ಯವೇ,
ನನ್ನ ಹುಚ್ಚಿನ ದಿನಗಳು ಮುಗಿದಿಲ್ಲ ಇನ್ನೂ
ಒಂದು ಘನ ದಿವ್ಯ ಘಳಿಗೆಯಷ್ಟೇ ಇಷ್ಟೆಲ್ಲಾ
ಕಣ್ಮುಚ್ಚಿದರೆ ಕತ್ತಲು ಮಂದ ಬೆಳಕು
ಕ್ಷೀಣಗಾಳಿ ಎಲ್ಲಿಂದಲೋ ಬರುವ ಯಾರದೋ ಉಸಿರು
ಸುಮ್ಮನೆ ಬರುವವರು ತೆರಳುವವರು
ಮಾತು ಮಂಥನ ಕನಸು ಮರೆವು
ಉರಿವ ನನ್ನ ಕಣ್ಣುಗಳನ್ನು ಮತ್ತೆ ತೆರೆವೆ
ನನ್ನದೇ ಭಯ, ಪ್ರೇಮ ಕಾರುಣ್ಯಕ್ಕೆ ಬೆಚ್ಚಿ
ತೆರೆದುಕೊಳ್ಳುವವು ಅವು
ಮತ್ತೆ ಬೆಳಗುವವು; ಸುಮ್ಮನೆ ನೇರ ದಿಟ್ಟಿಸುವವು ಏನನ್ನೋ
ಒಂದು ಘನ ದಿವ್ಯ ಘಳಿಗೆಯಷ್ಟೇ ಇಷ್ಟೆಲ್ಲಾ
ಇಷ್ಟೆಲ್ಲಾ ಬಿಡಿಸಿ ಹೇಳಬೇಕಾದ
ಯಾರದೋ ಹುಸಿ ತವಕಗಳು
ನನ್ನ ಅನಾಥ ದೇವರಾಗಿಸಿದ ಎಲ್ಲ ಮಹಾತ್ಮರ ಸಂಕಟಗಳು
ಇಲ್ಲಿ ಕತ್ತಲಲ್ಲಿ ನನಗೆಂದೇ ನಡೆಯುತಿರುವ
ಬೆಳಗು ಬಿಸಿಲು ಸಂಜೆಯ ನೆರಳು, ಇರುಳು ಮತ್ತು
ಎಲ್ಲವನ್ನೂ ಎಡಗಾಲಲ್ಲಿ ಬಿಸುಟಿ
ನನ್ನೊಳಗೇ ನಾನು ಕುಣಿದು ಹಾಡುವೆ, ನನ್ನ ಬೆರಗೇ ,
ಯಾಕೋ ನನ್ನ ಕಣ್ಣುಗಳು ತುಂಬಿಕೊಳುತಿದೆ
ಇಲ್ಲ ಸೆಟೆದು ಗಹಗಹಿಸುತಿದೆ
ಮತ್ತೆ ಮತ್ತೆ ಘನ ದಿವ್ಯ ಘಳಿಗೆ
ನಾನು ಬರಿಯ ಉಸಿರಾಡುತ್ತಿದ್ದ ಸುದೀರ್ಘ ಕ್ಷಣಗಳು
ಕೈ ಮುಗಿದು ತೋರಿಸುತಿದೆ ಎಲ್ಲವನ್ನು
ನನ್ನ ಚಲಿಸದ ಕಾಲುಗಳನ್ನು ಹೊತ್ತ ಈ ಭೂಮಿಗೆ
ನನ್ನೊಳಗೆ ನನಗರಿಯದೆ ಸಂಚು ನಡೆಸುತಿರುವ
ನನ್ನ ಮುದ್ದಿನ ಮರಿಕೋಶಗಳಿಗೆ
ಮುಗಿಯದ ನನ್ನ ಹುಚ್ಚಿನ ದಿನಗಳಿಗೆ
ಬೆಂಕಿಯಿಂದ ಬಂದವಳನ್ನು ನೀನು
ಆವರಿಸಿದ ಒಂದು ದಿವ್ಯ ಘಳಿಗೆಗೆ
ಕೇಳು,
ಓ ನನ್ನ ಹುಂಬ ಪ್ರಾಣವೇ,
ನಾನಿನ್ನೂ ನಿನ್ನನ್ನು ಚಕಿತಗೊಳಿಸುವುದಿದೆ
45
ನಾನು ಧ್ಯಾನದಲ್ಲಿ ಕಾಣುವುದು
ನಿನ್ನದೇ ಕಣ್ಣುಗಳನ್ನು
ಸುಮ್ಮನೆ ಉಮ್ಮಳಿಸ ಬೇಡ
ಅತ್ತುಬಿಡು ಅಳುವಷ್ಟು, ಕುಸಿದು
ಇನ್ನೂ ಆಳಕ್ಕೆ ಚಲಿಸು
ಏನೋ ಕೇಳಿಸುವುದು ನಿನಗೆ
ಮೌನ-
ಮೌನದೊಳಗಿನ ಮೌನ
ಮತ್ತೂ ಮೌನ
ತೆವಳು-
ಕಡು ಕತ್ತಲ ಕಪ್ಪು ಕಾವಳದೊಳಗೆ
ಕಾಣು-
ನಿಗಿನಿಗಿ ಸುಡುವ ನಿನ್ನ
ಧೂಪವನ್ನು
ಕರಗಲಾರೆ
ಇನ್ನು ಯಾರಿಗೂ ಸಿಗಲಾರೆ
ಕೆಂಡ ಪರಿಮಳ ಧೂಪ; ಪ್ರೇಮದೊಳಗಿನ ಪ್ರೇಮ
ನನ್ನ ಧ್ಯಾನದ ಹುಣ್ಣಿಮೆ
ನೀನು ಈ ಜಗದ ಪ್ರಾಣ
46
ಪ್ರಿಯ ನೀಲಿ ಹಕ್ಕಿಯೇ
ನಿನ್ನ ರೆಕ್ಕೆಗಳಿಗೆ ಆತುಕೊಂಡಿರುವೆ
ಎಲ್ಲಾದರೂ ಹಾರಿ ಹೋಗು
ಈ ಜಗದ ಅರಿವನ್ನು ಸಣ್ಣ ಬೆಳಕಾಗಿಸು
ನನಗಾದರೂ ಯಾರು
ನೀನು ತೋರಿಸುವ ಆಕಾಶ
ಕಂಡರೆ ಬಿಸಿಲು ಎಲ್ಲಿಯದೋ ಕಾಮನಬಿಲ್ಲು
ಸುಮ್ಮನೆ ಹಾರುವ ಗಾಳಿಗೆ ಅವನು
ಮತ್ತೆ ನೀನು ಇವೆಲ್ಲದರ ನಿಜ ಕಾಣಿಸು
ಮಳೆಗೆ ಕುಣಿವ ಹಕ್ಕಿಯೇ
ನಿನ್ನೊಳಗೆ ಎಲ್ಲವೂ ಅಡಗಿದೆ
ನಿನಗೆ ಎಲ್ಲವೂ ತಿಳಿದಿದೆ
ನನ್ನ ಒಳಗಿನ ಅಳು, ಹರಿವು
ಸೆಳೆತ, ಅವನ ಸಂಚು
ನನಗೆ ಕಾಣುವ ಸುಳಿಮಿಂಚು
ಕೇಳು ಹಕ್ಕಿಯೇ ಕೇಳು
ಒಂದು ಶುಭ್ರ ಮುಂಜಾವು
ಬರಿಯ ಹಾಡು ಕೇಳಿಸುವ
ಮೆಲ್ಲಗೆ ಗುನುಗುವ ಬೆಳಗಿಗೆ
ನಾನು ಮಲಗಿದ್ದೆ;
ಮತ್ತೆ ಮಲಗಿದರೆ
ಇನ್ನೂ ಮುಗಿಯದ
ನಿನ್ನೆಯ ಇರುಳು
ಮರಳಿ ಬರಬಹುದು
ಎಂದು ಕೊಡವಿ ಹೊರಟಿದ್ದೆ
ಹಕ್ಕಿಯೇ, ಎಂತಹಾ ಇರುಳದು!
ಗುಡಿಯ ಒಳ ಕತ್ತಲಿಗೆ
ಮಲಗಿದ ದೇವರು ಕಣ್ತೆರೆದಿರಬಹುದು
ದೇವರ ಬೀದಿಯ
ಕನಸಿನ ದೇವತೆಯರು
ಎದ್ದು ಸಂಚರಿಸುತಿರಬಹುದು
ಪ್ರಿಯ ಹಕ್ಕಿಯೇ,
ಅವನು ಮಲೆಯ ಎತ್ತರಕ್ಕೆ
ನನ್ನ ಎತ್ತಿ ಮುಟ್ಟಿಸಿದ ನಕ್ಷತ್ರ
ನನ್ನ ಕಣ್ಣಾಳಕ್ಕೆ ಸಿಗುವುದು
ಸಾಕೆಂದು ತಬ್ಬಿ ಕುಳಿತ ಕಲ್ಲುಬಂಡೆ
ನಮ್ಮ ಜೊತೆ ನಡೆವುದು
ಯಾರೂ ಇಲ್ಲದ
ಎಳೆಯ ರಾತ್ರಿಯ ರಾಣಿಗೆ
ನಾವು ಬೆಳ್ಳಗಿನ ಮಿಂಚಂತೆ ನಡೆವುದು
ದುರುಳ ಕಡು ಕತ್ತಲೆಗೆ
ಬೆಳಕು ಕೋರೈಸುವುದು
ಯಾತರದೋ ಘಮಘಮ ಧೂಪದ
ಸುರುಳಿ ಮತ್ತೆ ಮಲೆ ಹತ್ತುತಿದೆ
ಮತ್ತೆ ಜಗದ ಭಾಗ್ಯದ
ಬಾಗಿಲು ತೆರೆಯುತಿದೆ
ಕೃಷ್ಣಯ್ಯನ ರಥ ಬೀದಿಯ
ತೆರೆದ ಬಾಗಿಲುಗಳಲ್ಲಿ
ಬಾಲಿಕೆಯರ ನಡು ದುಂಡಗೆ
ಕುಣಿಯುತಿದೆ
ಮತ್ತೆ ಬೆಳಗಾಗಿದೆ
ನನ್ನ ಬೆಳಗೇ!! ನಿನ್ನ ಪದತಲದಲ್ಲಿ
ನನ್ನ ನವಿರು ಭಕುತಿಗೆ
ಇರುವೆ ನಾನು ಹಾಗೆಯೇ
ಬೇಕಾದರೆ ಈ ರಾತ್ರಿಯ ಆಣೆ
ಆ ಕೃಷ್ಣಯ್ಯನ ಆಣೆ
ಅವನು ಹಾರಿಸಿದ ಸಖಿಯರ ಆಣೆ
ನನ್ನ ಭೂಮಂಡಲದ ಸಂದುಗಳು
ತಿಳಿದಿರುವ ನಿನ್ನ ಕೊಳಲಿನ ಮೇಲಾಣೆ
ನಿನ್ನ ರಥದ ತುದಿಯಲ್ಲಿ
ನಾನು ನೋಡುವ ನನ್ನ ಒಳ ಬೆಳಕು
ನಿನ್ನ ಹೊಳೆಯುವ ದೊಂದಿಗೆ
ನಿನಗೇ ಹೆಣೆದ ನನ್ನ ಕರುಳಿದೆ
ಎಂದು ನಾನು ರಮಿಸಿ ಬೇಡಿರುವೆ
ನನಗೆ ಯಾರೂ ಅಲ್ಲದ ನನ್ನ ಹಕ್ಕಿಯೇ
ಈ ಸುಖದಲ್ಲಿ ನಾನು ಕರಗಿ ಮಾಯವಾಗುವೆ
ಎಲ್ಲವೂ ನನಗಾಗಿ, ನಿನಗಾಗಿ
ನನ್ನ ಪ್ರಿಯ ದುಷ್ಟನಿಗಾಗಿ,
ಹೇಗೋ ಇಳಿಸಿಬಿಡು ಎಲ್ಲೋ
ಜಗದ ಕಡೆಯ ತುದಿಯಲ್ಲಿ
ತಳವಿರದ ನಡು ಹಾದಿಯಲ್ಲಿ
ಯಾವುದೂ ಉಳಿಯದ ಹಾಗೆ
ನಿನ್ನಂತವೇ ರೆಕ್ಕೆಗಳ ಹಚ್ಚಿಕೊಡು
47
ಈಗ ನನ್ನ ಚಿದಾಕಾಶದಲ್ಲಿ ಮನುಷ್ಯರ ವಾಸನೆಗಳು ತೇಲಿಹೋಗುತ್ತಿವೆ
ಅದು ಬರಿಯ ಕಪ್ಪೆಂದು, ಬರಿಯ ಬೆಳಗೆಂದು ನನಗೆ ಎಂದೂ ಅನ್ನಿಸಿಯೇ ಇರಲಿಲ್ಲ
ಎಲ್ಲಿಂದಲೋ ಕೆನೆದು ಬರುಬ ಜಂತು ಜೀವಗಳು
ನಾಳೆಯೂ ಇರುವವು, ಆದರೆ
ನಿನ್ನೆ ಹುಟ್ಟದೆ ಮಾಯಕದಲ್ಲಿದ್ದವು
ದಿನಾಲೂ ನನ್ನೊಳಗೆ ನಡೆಯುವ
ನಿರ್ಮಲ ಹರಟೆಯಲ್ಲಿ
ಮತ್ತೆ ಮತ್ತೆ ಏನೋ ಒಂದು ಆನಂದ ಹುಟ್ಟಿಸುವವು
ತುಮುಲವನ್ನು ನೆನಪಿಸಿಯೇ ಮರಳುವವು
ಇಲ್ಲಿನ ಸದ್ದುಗಳಿಗೆ ರಾಗಗಳು ಒಗ್ಗುತ್ತಿಲ್ಲ; ಅಥವಾ ಅಂತಹದ್ದೊಂದು ಇರಲೇ ಇಲ್ಲ.
ಯಾಕೆಂದರೆ ಇಲ್ಲಿನ ಋತಗಳು ಎಂದಿಗೂ ನಾಶವಾಗವೆಂದು
ಅವು ಹೇಳುವುದೇ ಇಲ್ಲ
ಕಮಲದ ಮೇಲೆ ನೀರ ಹನಿಯು ಅಂಟಿಕೊಂಡಿಲ್ಲ
ಆದರೆ ಅದು ಎಲ್ಲೂ ಹೋಗದೆ ತುಯ್ದಾಡುವುದನ್ನು
ನಿಲ್ಲಸಲೂ ಆಗುತ್ತಿಲ್ಲ
ಇಲ್ಲಿ ಎಲ್ಲವೂ ಹೀಗೇಕೆಂದು ಕೇಳುವ
ಪುಟ್ಟ ಮಗುವೊಂದು ಉತ್ಸಾಹದಲ್ಲಿದೆ
ಆದರೆ ಅದು ತಂತಾನೇ ಎಲ್ಲಾ ತಿಳಿದುಕೊಳ್ಳಬೇಕಿದೆ
ಉತ್ತರ ಹೇಳಲು ತೊನೆದು ನಿಲ್ಲುವವರ
ಸೋಲು ಅವರಿಗೂ ಅರಿವಾಗುತ್ತಿಲ್ಲ.
ಯಾಕೆಂದರೆ ಇಲ್ಲಿನ ಋತಗಳು ಎಂದಿಗೂ ನಾಶವಾಗವೆಂದು
ಅವು ಹೇಳುವುದೇ ಇಲ್ಲ
48
ಯಾವುದೋ ಕಾಲದ ಕರಂಡಿಕೆಯ ವಿಸ್ಮಯದಲ್ಲಿ
ಅಡಗಿದ್ದೆ
ನನ್ನ ಉಷೆಯೇ, ಎಂತಹ ಅನುರಾಗ ನಿನ್ನದು!
ಒಂದು ಪ್ರಾತಃಕಾಲ,
ಅನಂತ ಅಭೂತಪೂರ್ವ ಸದ್ದಿಲ್ಲದ ಸಣ್ಣ ಎಚ್ಚರವಷ್ಟೇ,
ನನಗೆ ದೇಹವಿಲ್ಲ, ಕಾಲವಿಲ್ಲದವಳೇ,
ನನ್ನ ಧಾತುವೆಂಬುದು ಇರುವ ಅನುದಿನದಲ್ಲಿ
ಈಗ ಎಲ್ಲಿರುವೆ ನಾನು? ಯಾವ ದಿಕ್ಕಿನ ಯಾವ ಹೊತ್ತಲ್ಲಿ
ಚಲಿಸುತಿರುವೆ?
ನಿನ್ನ ಸೂರ್ಯನೆಂಬವನು ಇನ್ನು ಇರುವನಾದರೆ
ಇಲ್ಲಿ ನಡೆಯುವುದೆಲ್ಲವೂ ಸುಳ್ಳಲ್ಲ!
ಕೋರೈಸುವವಳೇ,
ಈ ಜಡ್ಡು ಕಾಲವೆಂಬುದಕ್ಕೆ ನಾನು ತಲೆಯೊಡ್ಡುತ್ತಿಲ್ಲ
ಇಲ್ಲಿ ದೀನ ದನಿಗಳು ಸ್ಪೋಟಿಸುವವು
ನೀರ ಹನಿಯಂತೆ ಟಪಟಪಿಸುವವು
ಬಿಸಿಲೊಳಗಿನ ಅಭೇದ್ಯ ಕಸ್ತಲೆಯಂತೆ
ಎಲ್ಲಕಣ್ಣುಗಳು ಅವರ ಒಡಲೊಳಗಿರುವವು
ಪುಟಿದು ಹಾರಿದ ಹೃದಯದಂತೆ ವಿಮಾನಗಳು ಚಲಿಸುತಿವೆ ನೋಡು, ವಜ್ರದಂತವಳು ನೀನು
ಇದ್ದರೆ ಇಲ್ಲಿ ನೆರಳಿಗೆ ಹೃದಯವಿರಬಹುದು!
ಹುಟ್ಟುವ ಮಾಗಿಯ ಚಳಿ ಯಾರನ್ನು ಕೇಳಿ ಬರುವುದಿಲ್ಲ
ಜೋಂಪು ಹತ್ತಿಸುವ ಹಾಡಿಗೆ ಇಲ್ಲಿ
ಹಾಡುಗಾರ ಕಾಣುವುದಿಲ್ಲ
ರಾತ್ರಿಯ ಅಂತಿಮ ಪ್ರಹರದಲ್ಲಿ ಬೆಳಗುವವಳೇ
ಇದೆಲ್ಲಾ ಎಂತಹ ಚೆಲುವು ಹೇಳು!?
ಸೆಟೆದ ಬೆನ್ನಲ್ಲಿ ಹುತ್ತಗಟ್ಟಿಸಿಕೊಂಡ ಶ್ರಾವಕಿಗೆ
ಇದು ಯಾವ ಬಂಡೆಯ ನೆಳಲು ಹೇಳು?
49
ಮನುಷ್ಯರ ಪ್ರಲಾಪಗಳೆಲ್ಲಾ ಮುಗಿದು
ಆಕಾಶ ನಿರಾಳವಾಗುತಿದೆ,
ಮನ್ನಿಸುತಿದೆ ಎಲ್ಲವನ್ನು, ಮಲಗಿರುವವರನ್ನು,
ಬೆಳಗಿಗೆ ಪುಟ್ಟ ಮಗುವಂತೆ ಏಳುವವರನ್ನು
ನಭದಿಂದ ನದಿಯವರೆಗೆ ನದಿಯಿಂದ ನೆಲದವರೆಗೆ…
ಇಲ್ಲೆಲ್ಲೋ ಸೂಜಿಮೊನೆಯಂತಿರುವ
ನಿನ್ನ ಕ್ರೋಧವಲ್ಲದ ಕ್ರೋಧವನ್ನು
ಪ್ರೇಮಿಸುತಿದೆ ಈ ಇರುಳು
ಶಹರಿಗಿರುವ ಒಂದೇ ಕಿಟಕಿಯಲ್ಲಿ
ಬೇಕಾದರೆ ನೋಡಬೇಕು ಇರುಳನ್ನು
ಮೆಲ್ಲಗೆ ಉಸಿರಾಡುವ ಈ ಮಸಣದಲ್ಲಿ
ತಾರೆಗಳು ತುಂಬಿಸುವ ಮಮತೆಯನ್ನು ನೋಡಬೇಕು
ಅಲ್ಲೆಲ್ಲೋ ನಿನ್ನ ಆಲಸ್ಯವು ಇನ್ನೂ ಚುರುಕುಗೊಂಡು
ಇರಿಯುವಂತೆ ಉಸಿರಾಡುವುದನ್ನು ಕೇಳಬೇಕು
ಮಲಗಿರುವ ತಪಿತ ಅಸುಖಿಗಳು
ದುಃಖವೆಂಬ ಸುರೆಯನ್ನು ಅರಿಯದವರು
ಬಾಣ ಚುಚ್ಚಿದ ಹಕ್ಕಿಯಂತಿರುವವರು
ನಾಳೆ ಹೊಸಕೋಶದಿಂದ ತಡಬಡಿಸುವವರು
ನಿನ್ನ ಹಾಗೆ ಕನ್ನಡಿಯೊಳಗೆ ಹೆಬ್ಬಂಡೆ ಕಾಣದವರು
ಆದರೆ ಆಗೊಮ್ಮೆ ಕಡಲು ಮೊರೆಯುತಿದೆ
ಬೆಳಕು ಕ್ಷೀಣಿಸುತಿದೆ
ಕತ್ತಲು ಬೆಳಗುತಿದೆ
ತಾರೆಗಳು ಪೊರೆಯುತಿದೆ
ಶಬ್ಧಗಳು ಮಾತಾಗುತಿದೆ
ನೀನು ರಾತ್ರಿಯ ಕೊಳದ ಹಾಗಿರುವೆ
ಇನ್ನೂ ಬೆಳಗಾಗಲಿಲ್ಲ
ಬೆಳಗೇ ಇಲ್ಲದ ಈ ಇರುಳು
ಮುಗಿಯುವುದೂ ಇಲ್ಲ
50
ನಾನು, ಅವನು ಮತ್ತು ಕಡಲು
ಎಂದೂ ಗತಿಸುವ
ಈ ಇಳಿಸಂಜೆಯ ಮಿನುಗಿನಂತವನನ್ನು
ಮರಳಿ ಒಪ್ಪಿಸಿಕೋ ಕಡಲೇ
ಬಂದು ತೆರಳುವ ನಿನ್ನ ಬೆಳ್ನೊರೆಗಳು
ತನ್ನ ಮೂಲಮನೆಗೆ ಹಾತೊರೆವಂತೆ
ನಿನ್ನ ಹುರಿಯಲ್ಲಿ ಹೆಣೆದುಕೋ
ಅವನು, ಬರಿಯ ಬೆಳಕಲ್ಲದ ಕೊರೆವ ಬೆಳಕು
ಏಕಾಂತದ ಕಡೆಯ ಸುಖದಂತವನು
ನಿನ್ನ ಮೊರೆಯುವ ಅಲೆಗಳು ಕಬಳಿಸಲಾರವು ಕಡಲೇ
ಎಲ್ಲಿಗೂ ಹೋಗಲಾರವು
ನಿನ್ನ ಒದ್ದೆ ಮರಳು ತಟವು
ಅವನ ಹೆಜ್ಜೆಗಳನ್ನು ಮೂಡಿಸಲಾರವು
ನೀನಿರುವುದಾದರೆ ನಿಜವಿರಬಹುದು ಅವನು
ಈ ಬಂಡೆಯ ಧಾತುವಿನಲ್ಲಿ ಧ್ಯಾನಿಸುತಿರಬಹುದು
ನಡುಗಡಲ ಮೇಲೆ ಹೊಳೆದರೆ
ಅವನ ಕಣ್ಣುಗಳಿರಬಹುದು
ನನ್ನ ಕಿವಿಯೊಳಗೆ ಉಸುರುವ ಮಾತುಗಳು
ನಿಜವಿರಬಹುದು
ನೀನೇ ಕರುಣಿಸಿರುವೆ ಈ ನಿಜವನ್ನು
ಈ ಎಲ್ಲವನ್ನೂ, ಅವನನ್ನೂ
ಈಗ ಮುಗಿಯುವ ಇಳಿಸಂಜೆಯನ್ನೂ
ಅವನ ಎದೆಯ ಮಚ್ಚೆಯಂತಹ ಆಕಾಶವನ್ನು
ಒಂದೊಂದು ಹಕ್ಕಿಯಂತೆ ಹಾರುವ ಕೂದಲುಗಳು
ಎಲ್ಲಿಗೋ ಹಾತೊರೆಯುವುದನ್ನು
ನನ್ನೊಳಗೆ ಚಿಟ್ಟೆಗಳು ನರಳಿ ಈ ಮರಳೊಳಗೆ
ಪ್ರಜ್ವಲಿಸುವಾಗ ಅವನನ್ನು
ನೀನೇ ಕರುಣಿಸಿರುವೆ ಕಡಲೇ
ಎಲ್ಲವನ್ನೂ ಈ ಅನುಭೂತಿಯನ್ನು
ಈಗ ಈ ಸಂಜೆ
ನಾನು ಹೊರಟ ಮೇಲೆ
ನಿನಗೆಂದೇ ಇಂದು ಬರಬಹುದಾದ ನಿಶಿಯನ್ನು
ನೀನು ಅಳಿಸಲಾರೆ ಮತ್ತು ಕೊಡಲಾರೆ ಎಂದೂ
ಈ ಅಗಾಧ ಕಡಲ ಗಾಳಿಯ ಮೇಲೆ ನಡೆಯುವವನಂತವನನ್ನು
ಹಿಡಿಯಲಾರೆ ಎಂದೂ
51
ನಾ ಯಾರು ನೀ ಯಾರು
ಎಂದು ಕೇಳದಿರು ಇನ್ನು
ದೇವರೆಂಬ ವಿವೇಕಿ
ಅಲ್ಲೆಲ್ಲೋ ನಗುತಿರಬಹುದು
ಅಲ್ಲಿ ಕಡಲೊಳಗೆ
ಮುತ್ತುಗಳಾಗುತಿದೆ
ಇಲ್ಲಿ ತಟದಲ್ಲಿ ಮರಳು
ಜ್ವಲಿಸುತಿದೆ
ಅಲ್ಲಿ ಯಾರೋ ಕಟುಕನೊಬ್ಬ
ಕೈ ಎತ್ತಿ ಆರ್ತನಾಗುತ್ತಿದ್ದಾನೆ
ಇಲ್ಲಿ ಆಕಾಶವು ಜಗ್ಗನೆ ಮಿನುಗುತ್ತಿದೆ
ಅಲ್ಲಿ ನಿನಗೇನೂ ಆಗುತ್ತಿಲ್ಲ
ನಗುವಿಲ್ಲ ಅಳುವಿಲ್ಲ ಮಾತಿಲ್ಲ
ಮತ್ತೆ ನೀನೇ ಇರಲಿಲ್ಲ
ಯಾಕೆಂದರೆ ನಾನು ಅಲ್ಲೇ ಬಂದಿರುವೆ
52
ನೀನು ನನ್ನ ಯೋಚಿಸದ ನಿಮಿಷಗಳಲ್ಲಿ
ನಾನು ಎಲ್ಲಿ ಹೋಗಿರ ಬಹುದು?
ನನಗೆ ಏನಾಗುತ್ತಿರಬಹುದು?
ಹೋಗುವವರು ಹೋಗುವುದಾದರೂ ಯಾತಕ್ಕೆ?
ಮತ್ತೆ ಮತ್ತೆ ಬರುವುದಕ್ಕೆ?
ನಾಳೆಯ ಇಬ್ಬನಿಗೆ
ಇನ್ನೊಂದು ಹೂವು ಅರಳುವುದಕ್ಕೆ?
ಈವರೆಗೆ ಕೇಳದ
ಹಾಡಿಗೆ ನರ್ತಿಸುವುದಕ್ಕೆ?
ನೀನು ಸೆಳೆಯುವುದಿಲ್ಲ
ನಾನು ಬರುವುದಿಲ್ಲ
ಏನೂ ಆಗದೆಯೂ
ಘಟಿಸುವ ಲಾಸ್ಯಗಳನ್ನು
ಕೇಳುವುದಕ್ಕೆಂದೇ
ಇಲ್ಲಿ ಯಾವುದೂ ಮುಗಿಯುವುದಿಲ್ಲ
ಏನೆಂದರೆ ಏನೂ ಅರಿಯದೆ
ನೀನು ಮಗುವಂತೆ
ಮರೆತು ಮಲಗಿದ ಹೊತ್ತು
ನನ್ನ ಪ್ರೇಮದ ನೊರೆಗಳು ಇನ್ನಿಲ್ಲದ ಹಾಗೆ
ಜಿನುಗುವವು
ನೀನು ಯೋಚಿಸದ ಈ ಹೊತ್ತು
ನಾನು ಎಲ್ಲಿರಬಹುದು
ಮತ್ತೆ ಏನು ಮಾಡುತ್ತಿರಬಹುದು
ಕಾಲ ಕೊಡುವ ಒಂದೊಂದು
ಗುಟುಕುಗಳನ್ನು ನಿರಂತರವಾಗಿ
ಕುಡಿಯುತ್ತಿರಬಹುದು
ಇನ್ನೂ ಆರಂಭವೇ ಇಲ್ಲದ
ಅಂತ್ಯವೊಂದರ ಬಿಳಿ ಮೊನಚಿನಂತಿರಬಹುದು
53
ಕಳಚುತಿರಬೇಕು ಏನಾದರೊಂದು
ಎಷ್ಟೋ ನಿನ್ನೆಗಳ ಎಳೆ ಆಕಾಶದೊಳಗಿನ
ತೆಳ್ಳಗಿನ ತೆಳುವಂತದ್ದು ಮಾತ್ರ
ನಿಜವೆಂದು ತಿಳಿವ ತನಕ
ಸುಲಿಯ ಬೇಕು ಪ್ರೇಮವನ್ನು
ತಿಳಿಯದಿದ್ದರೆ
ಮತ್ತೆ ಮತ್ತೆ ಸುಲಿದು
ನಿರ್ಮಲವಾದದ್ದು ತುಂಬುವ ತನಕ
ಪ್ರತಿ ಘಳಿಗೆ ಗುಂಯ್ ಗುಡುವ ಅಚ್ಚರಿಯೊಂದು
ಕೆರಳಬೇಕು ಕಿವಿಯೊಳಗೆ
ಎಲೆಯ ಪರಿಮಳದಲ್ಲಿ ನಗುವ
ನೆಲದ ಬೇರಂತೆ ಸುಮ್ಮನಿರಬೇಕು
54
ತುಂಬಾ ಹಳೆಯ ಮಾವಿನ ಮರದ
ಹೊಸ ಹಣ್ಣುಗಳು ಹೊಸತಲ್ಲವೆಂದು
ಹೇಳುತಿವೆ
ನನ್ನದಲ್ಲದ ಬೀದಿಯ ರಸ್ತೆಗಳು
ಹೊಸದಾಗಿ ಕಾದು ಕುಳಿತಿವೆ
ಒಂದು ಸುಡು ಧಗೆಯ ದಿನ
ಮೆಲ್ಲಗೆ ಅದುರುವ ಕಪ್ಪು ಮೋಡ,
ನಡೆಯುವವರ ಕಾಲ ಧೂಳು,
ರಸ್ತೆಯ ಮೇಲೆ ಎದ್ದಂತಹ ಸಣ್ಣಗಿನ ದುಗುಡ…
ಆದರೆ
ಇವು ಯಾವುದೂ ನನ್ನವಲ್ಲದ
ಮಂದ ಬೆಳಕಿನ ಮುಂದೆ
ನಾನು ಏನನ್ನೂ ಬೇಡುತ್ತಿಲ್ಲ
ಬೇಡವೆನ್ನುತ್ತಲೂ ಇಲ್ಲ
ಯಾರದೂ ಅಲ್ಲದ ಕತ್ತಲೊಂದು
ತುಂಬಾ ಹಳೆಯದರಂತೆ
ಹಾದುಹೋಗುತಿದೆ
55
ಸಣ್ಣ ಜಗತ್ತು
ಭೂಮಿ ಆಕಾಶದ ನಡುವೆ ನಿಂತ
ಎಳಸು ಹುಡುಗಿ
ಏನೂ ಅರಿಯದವಳು
ಇಲ್ಲಿ ಹರಡಿ ಚೆಲ್ಲಾಪಿಲ್ಲಿಗೊಂಡಿರುವವಳು
ಆದರೇನು!
ಕಲ್ಲುಗಳು ನೀರಿನೊಳಗೆ ಸಾಂತ್ವನಗೊಳುತಿದೆ
ಕಾರಣವಿದೆ ಎಲ್ಲವಕ್ಕೂ
ನಾನು ಇರುವೆ ಎಂದರೆ ಇಲ್ಲವಾಗುವೆ
ಇಲ್ಲದಿರುವಿಕೆ ಎಂಬುದು ನಿಜದ ಕೊನೆಯ ಆಸರು
ಎಂದು ತಿಳಿದಿರುವೆ
ಕಾಲ ಕೆಡುವಾಗ
ನಿಜಕ್ಕೂ ಇಲ್ಲದಿರುವ ಮಡಿಲಲ್ಲಿ ಮಲಗಿಬಿಡುವೆ
ನನ್ನ ಬೆಳಗಿನ ಆರಂಭವೆನ್ನುವುದು
ಶೂನ್ಯದ ಆಳದಲ್ಲಿ ಎಂದು
ಆಕಳಿಸಿರುವೆ
ನನ್ನ ಉತ್ಕಟತೆಯಲ್ಲಿ ಕೋಟಿ
ಜೀವಗಳು ಪ್ರಾಣ ಒಂದು
ಪ್ರಾಣವೆಂದರೆ ಏನು
ಕರಗುವುದು
ಕರಗಿ ಲಯಗೊಳ್ಳುವುದು
ಏನೂ ಇಲ್ಲದ ಮೇಲೆ
ಏನೂ ಉಳಿಯದ ಮೇಲೆ
ಈ ಶಬ್ದಗಳ ಭಾರ ಯಾತಕ್ಕೆ
ಇದೆಲ್ಲವನ್ನೂ ಅರಿಯುವ
ಸಣ್ಣ ಮೋಹ ಪ್ರವಹಿಸುವುದು ಯಾತಕ್ಕೆ
ಮೌನವಾಗು ಅನುಭಾವಿ
ಸುಮ್ಮನಿರು
ಇಲ್ಲಿ ಹೇಳುವುದಕ್ಕೇನೂ
ಉಳಿದಿಲ್ಲ
ಎಳಸು ಹುಡುಗಿ
ಏನೂ ಅರಿಯದವಳು
56
ಇಷ್ಟಿಷ್ಟೇ ಕುಸಿದಂತೆ
ನಿರಾಳವಾಗುತಿರುವೆ
ನನ್ನ ಹತ್ತಿರದ ನಿಟ್ಟುಸಿರು,
ತೇಲುವ ನಿಶ್ಯಬ್ಧ ಬಿಂಕ
ಎಲ್ಲವೂ ಭ್ರಮೆ ಎನ್ನುತ್ತಾ
ಅಡರುವ ನನ್ನ ಕಳೆಗೆ
ನಾನೇ ಬೆಚ್ಚಿಬೀಳುತಿರುವೆ
ನಾನು ಈಗಲೇ ಸಾಯದಿರಬಹುದು
ಇನ್ನು ಬರಲಿರುವ ಕೋಟಿ ಗಂಟೆಗಳು
ಚಲಿಸದ ಮೀನಂತಹ ಹೊತ್ತುಗಳು
ಸೃಷ್ಟಿ ಸಂಕಲ್ಪ ಬೆರಗು ತಾಪ
ಭ್ರಮೆಯ ಹುಡಿ ಹಾರಿಸುವ ಬಣ್ಣಗಳು
ಒಮ್ಮೊಮ್ಮೆ ಬೂದಿಯಾಗುವವು
ಒಡಲು ಸೃಜಿಸುವ ಬಿಗಿ ಸಡಿಲ ಉಸಿರು
ಹದಗೊಂಡು
ನನಗೆ ಕಳೆ ತುಂಬುವವು
ಮತ್ತೆ ಇದನ್ನೆಲ್ಲಾ ಹೇಳುವುದು
ಹೇಳದಿರುವುದು
ಏನನ್ನೂ ಮಾಡದೆ ನನ್ನ
ಕಾಯದ ಕಿವಿಗಳಲ್ಲಿ ಕೇಳಿಸಿಕೊಳ್ಳುವುದೂ
ಒಂದು ಭ್ರಮೆ
ನಗು ಸುಮ್ಮಗೆ ಒಂದು ನಗು
ಅರಿಯಬೇಕು ನೀನು ನಾನು ಏನನ್ನೂ ಹೇಳದಿರುವಾಗ
ಅಲೆಗಳು ಓಡಿ ಬಂದು ನಿನ್ನ ಕಾಲು ತಾಕುವಾಗ
ನಾನು ಇರುವಾಗ ಇರದಿದ್ದಾಗ
ನನ್ನ ಸಮಯವೆಲ್ಲಾ ನನ್ನ ಮೌನದಲ್ಲಿ
ಲೀನಗೊಳ್ಳುವಾಗ
ನಾ ನಿನ್ನ ಭಕ್ತೆ ನನ್ನ ಭ್ರಮೆಯೇ
ಆಗಾಗ ಹುಟ್ಟಿಸಿ ತೆರಳುವ
ನನ್ನ ಮುಕ್ತಿ ನೀನು
ನನ್ನ ದಾಪುಗಾಲಿನ ಆನಂದ
ಎಚ್ಚರವಿರುವ ಸುಧೀರ್ಘ ನಿದ್ರೆ
57
ನಿಮ್ಮ ಮೋಹಕ್ಕೆ ನಾನು ಋಣಿಯಾಗಿರುವೆ ಸೈತಾನರೇ,
ಆದರೆ ನಾನು ಎಂದೋ ಹೊರಟಾಗಿತ್ತು
ನಿಮಗೆ ನಿಲುಕದಷ್ಟು ಹಿಂದೆ
ನನ್ನ ಪುಣ್ಯವೆಂಬ ಹೊಳಹು ನನ್ನ ಕೈಹಿಡಿದಾಗಿತ್ತು
ಈಗ ಇದೆಲ್ಲಾ ಸುಮ್ಮನೆಯೆಂದು
ನಾನೇನು ನಿಮ್ಮನ್ನು ಹತಾಶಿಸುವುದಿಲ್ಲ
ನೀವಿದ್ದರೂ ಇಲ್ಲವಾದರೂ
ನಾನು ಅಳಿಸಿ ಹೋಗುವುದಿಲ್ಲ
ಮತ್ತೆ ಕಾಣ ಸಿಗುವುದೂ ಇಲ್ಲ
ನೋಡಿ ಇಲ್ಲಿ ನೀರಿನೊಳಗೆ
ನುಣುಪು ಕಲ್ಲಿನ ಹಾಗೆ
ಪವಡಿಸಿರುವೆ
ಮಹಾಬೆಟ್ಟದ ಮಡಿಲಿಗೊರಗಿ
ಮರಣಿಸಿದವರ ನೆನೆದು
ಆಕಾಶ ನಗುವಷ್ಟು
ಹುಯಿಲೆಬ್ಬಿಸಿರುವೆ
ಜಗದ ಪಾಪಗಳೆಲ್ಲಾ
ಇಲ್ಲಿ ಮಣ್ಣ ಮೆದುವಲ್ಲಿ ಕರಗುವುದನ್ನು
ನೋಡುತಿರುವೆ
ನನ್ನ ಮೌನದೊಳಗೆ ನಡೆವ
ಮಹಾಕಥೆಯ ಸಾಲುಗಳು ಸಿಕ್ಕರೆ
ಹೆಕ್ಕಿಕೊಳ್ಳಿ
ಘೋರ ದಳ್ಳುರಿಯೊಳಗೆ ನಾನು ಸುಮ್ಮನಿದ್ದರೆ
ಸಹಿಸಿಕೊಳ್ಳಿ
ನಗುವವರು ನಗುವರು, ಆಕಳಿಸಿ ತೆರಳುವರು
ಮರೆತೂ ಬಿಡುವರು
ಕಷ್ಟವಾದರೆ ಮೌನವಾಗಿರಿ
ಅಲ್ಲೇ ಏನಾದರೂ ಸಿಕ್ಕರೆ ತಿಂದುಕೊಳ್ಳಿ
ನಾನೀಗ ಇಲ್ಲೇ ಒಂದು
ಕ್ಷುದ್ರ ಕಲ್ಲ ಕಣದೊಳಗಿರುವೆ
ಕಾಣುವವರು ಸುಳ್ಳೆಂಬರು
ಆದರೆ ನನ್ನ ಪುಣ್ಯವೆಂಬ ನಶೆ
ಇಳಿಯಲಾರದೆಂದು
ನೀವಾದರೂ ತಿಳಿದುಕೊಳ್ಳಿ
(ರೇಖಾಚಿತ್ರಗಳು: ರೂಪಶ್ರೀ ಕಲ್ಲಿಗನೂರು)
ಬೆಳದಿಂಗಳಲ್ಲಿ ಕಂಡು ಬರುವ ಕಾಡು ಹೂ.
ಕಂಡೂ ಕಾಣಿಸದಂತಿರುವ ಕನ್ನಡದ ಕವಯಿತ್ರಿ.
ಒಮ್ಮೊಮ್ಮೆ ವಿರಾಗಿಣಿ. ಕೆಲವೊಮ್ಮೆ ಲಾವಾಗ್ನಿ!