ಕವಿಯೊಬ್ಬ ಯಾವ ಭಾಗಕ್ಕೆ ಪ್ರಾಶಸ್ತ್ಯ ಕೊಟ್ಟು ರಚನೆ ಮಾಡುವನೋ ಅದನ್ನು ನಡೆಸಲು ಬಹಳ ಸೂಕ್ಷ್ಮ ಮತಿಯಾಗಿರಬೇಕು ಅನ್ನುವುದಕ್ಕೆ ಪಂಪನ ಈ ಭಾಗ ಉದಾಹರಣೆ ಅನಿಸುತ್ತದೆ. ಇಲ್ಲಿ ವಿಪ್ರಲಂಭ ಶೃಂಗಾರದ ವರ್ಣನೆಯೇ ಮುಖ್ಯವಾಗಿ ಇರುವಾಗ, ಅದರ ಮುಂದಿನ ಭಾಗವಾದ ಸಂಭೋಗವನ್ನು ವರ್ಣಿಸುವುದು ಅಥವಾ ಶೃಂಗಾರದೊಂದಿಗೆ ಕರುಣಾ ರಸವನ್ನು ಸೃಜಿಸಿಬಿಟ್ಟು ಓದುಗನ ಗ್ರಹಿಕೆಯನ್ನು ಅಳತೆಮಾಡಲು ಪಂಪ ನಿಂತುಬಿಡುತ್ತಾನೆ. ಮುಖ್ಯ ಭಾಗದ ರಸವನ್ನು ನೋಡದೆ ಅಲ್ಲಿಂದ ನುಸುಳಿ ವರ್ಣನೆಗಳ ಹಿಂದೆ ಬಿದ್ದು ಇದನ್ನು ಕಡೆಗಣಿಸಿ ಮುಂದೆ ಹೋಗಿಬಿಟ್ಟರೆ ಕಾವ್ಯದ ಮೂಲ ಆಸ್ವಾದ ನಡೆಯದೆ ಕಾವ್ಯ ಅಲ್ಲೆ ನಿಲ್ಲುತ್ತದೆ.
ಆರ್. ದಿಲೀಪ್ ಕುಮಾರ್ ಬರೆಯುವ ಅಂಕಣ

 

ಗುಣಾರ್ಣವಂ ನೆಱೆಯೆ ನಿಟ್ಟಿಸಿದಂ ಬೆಳಗಪ್ಪ ಜಾವಮಂ
(ಪಂಪನ ಕಾವ್ಯದಲ್ಲಿ ಸಂಭೋಗ ಶೃಂಗಾರ ವರ್ಣನೆ)

ಅಷ್ಟಾದಶ ವರ್ಣನೆಗಳಲ್ಲಿ ಶೃಂಗಾರ ವರ್ಣನೆಯೂ ಒಂದು. ಅದರಲ್ಲಿಯೂ ವಿಪ್ರಲಂಭಕ್ಕೆ ಅತೀ ಹೆಚ್ಚು ಪ್ರಾಧಾನ್ಯತೆಯಂತೂ ಕಾವ್ಯಗಳಲ್ಲಿ ಇದ್ದೇ ಇದೆ. ಕೆಲವು ಭಾವಗಳು ಮನುಷ್ಯನ ಮೇಲೆ ಅಪಾರವಾದ ಪರಿಣಾಮ ಬೀರಿದ್ದು, ಅದು ಈಡೇರದೆ ಉಳಿದರೆ ಅದರ ಬಗೆಗಿನ ಅವನ ಚಿಂತೆ ಸಾಮಾನ್ಯ. ಅಂತಹದ್ದರಲ್ಲಿ ವಿಪ್ರಲಂಭ ಬಹಳ ಮುಖ್ಯ. ನಲ್ಲ ನಲ್ಲೆಯರ ಸಮಾಗಮವಾಗದೆ, ಕೇವಲ ನೋಟದಲ್ಲೆ ಪ್ರಾರಂಭವಾಗಿ ಮನಸ್ಸಿನಲ್ಲಿ ಕೊರಗಾಗಿ ಕಾಡುತ್ತಾ ಅತೀ ಹೆಚ್ಚು ಸಮಯ ಉಳಿದರದು ವಿಪ್ರಲಂಭ ಶೃಂಗಾರ. ಅದರಂತೆಯೇ ಕ್ಷಣಿಕದಲ್ಲಿ ನಡೆದ, ನಡೆವ ಘಟನೆಯೂ ಶಾಶ್ವತವಾಗಿ ಉಳಿವುದು. ಹೀಗೆ ಉಳಿವುದರಲ್ಲಿ ಸಂಭೋಗ ಶೃಂಗಾರವೂ ಒಂದು.

ಮನುಜಕುಲದ ಮುಂದುವರಿಕೆಗೆ ಸಂಭೋಗ ಅಗತ್ಯತೆ ಇದ್ದೇ ಇದೆ. ಅದನ್ನು ಕಾವ್ಯದಲ್ಲಿ ತರುವಾಗ ಎಲ್ಲೂ ಅಸಹ್ಯ ಅನಿಸದೆ ಬದುಕಿನ ಘಟನೆಗಳಿಗೆ ಸಮಾನವಾಗಿ ಸಂಬಂಧ ಇರುವ ಹಾಗೆ ತಂದರೆ ಅದು ಶಾಶ್ವತವಾಗಿ ಉಳಿವ ಹಾಗೆ ಇರುತ್ತದೆನ್ನುವುದನ್ನು ಅರಿತ ಹಿಂದಿನ ಕವಿಗಳು ಮೀಮಾಂಸೆಯ “ಸಾಮಾನ್ಯೀಕರಣ ತತ್ವ” ದ ಅಡಿಯಲ್ಲಿ ಎಲ್ಲಾ ರಸಗಳನ್ನು ತಂದಂತೆ ಇದನ್ನೂ ತಂದಿದ್ದಾರೆ. ಬಹಳ ಮುಖ್ಯವಾಗಿ ಪಂಪನ ವಿಕ್ರಮಾರ್ಜುನ ವಿಜಯದಲ್ಲಿನ ನಾಲಕ್ಕನೆಯ ಆಶ್ವಾಸದ ಎರಡು ವೃತ್ತದ ಮೂಲಕ ಅವನು ಸೃಜಿಸುವ ದೊಡ್ಡ ತತ್ವವನ್ನು ನೋಡಬಹುದು. ಪಂಪ ಸಾಮಾನ್ಯೀಕರಣವನ್ನ ಮಾಡುವ ಕ್ರಮ ಮತ್ತು ಅದರ ನಂತರ ಕಾವ್ಯ ಭಾಗಗಳು ಸೃಜಿಸಿಕೊಳ್ಳುವ ಅರ್ಥ ಸ್ಥರ ಬಹಳ ಮುಖ್ಯವಾದದ್ದು ಅನಿಸುವ ಕಾರಣದಿಂದ ಈ ಭಾಗ ಯಶಸ್ವಿ ಭಾಗವಾಗುತ್ತದೆ.

ನಾಲಕ್ಕನೆಯ ಆಶ್ವಾಸದ ಈ ಭಾಗದಲ್ಲಿ ವಿಕ್ರಮಾರ್ಜುನನು ಸುಭದ್ರೆಯನ್ನು ನೋಡಿ ಅವಳಿಂದ ಮೋಹಗೊಂಡು ವಿರಹ ಭಾರ ತಾಳಲಾರದೆ ಊರೆಲ್ಲಾ ಅಲೆವ ಸಮಯದಲ್ಲಿನ ವರ್ಣನೆಗಳಲ್ಲಿ ಇದೂ ಒಂದು. ಇಲ್ಲೊಂದು ಬಹಳ ಮುಖ್ಯ ಅಂಶವನ್ನು ಪಂಪ ಸೂಕ್ಷ್ಮವಾಗಿ ತಂದಿದ್ದಾನೆ. ವಿರಹ ಭಾರದಲ್ಲಿ ಬಳಲುವ ಸಮಯದಲ್ಲಿ ಅವನು ಆ ರಾತ್ರಿ ಕಳೆಯಲು ಊರೆಲ್ಲಾ ಅಲೆವಾಗ ಒಂದು ಸಂಭೋಗದ ಜೋಡಿಯು ಇವನ ಕಣ್ಣಿಗೆ ಬೀಳುತ್ತದೆ. ಯಾವ ಭಾವವನ್ನ ಕಾವ್ಯದಲ್ಲಿ ಶಾಶ್ವತಗೊಳಿಸಬೇಕೋ ಅದರ ಮುಂದುವರೆದ ಅಥವಾ ಅದಕ್ಕೆ ವಿರುದ್ಧವಾದ ಭಾವವನ್ನು ತರುತ್ತಲೇ ವರ್ಣಿತವಾಗುತ್ತಿರುವ ಮೂಲ ಭಾವವನ್ನು ಶಾಶ್ವತಗೊಳಿಸುವ ಕ್ರಮ ಪಂಪನಲ್ಲಿ ಬಹಳ ವಿಶೇಷ ಅನಿಸುತ್ತದೆ.

ಕವಿಯೊಬ್ಬ ಯಾವ ಭಾಗಕ್ಕೆ ಪ್ರಾಶಸ್ತ್ಯ ಕೊಟ್ಟು ರಚನೆ ಮಾಡುವನೋ ಅದನ್ನು ನಡೆಸಲು ಬಹಳ ಸೂಕ್ಷ್ಮ ಮತಿಯಾಗಿರಬೇಕು ಅನ್ನುವುದಕ್ಕೆ ಪಂಪನ ಈ ಭಾಗ ಉದಾಹರಣೆ ಅನಿಸುತ್ತದೆ. ಇಲ್ಲಿ ವಿಪ್ರಲಂಭ ಶೃಂಗಾರದ ವರ್ಣನೆಯೇ ಮುಖ್ಯವಾಗಿ ಇರುವಾಗ, ಅದರ ಮುಂದಿನ ಭಾಗವಾದ ಸಂಭೋಗವನ್ನು ವರ್ಣಿಸುವುದು ಅಥವಾ ಶೃಂಗಾರದೊಂದಿಗೆ ಕರುಣಾ ರಸವನ್ನು ಸೃಜಿಸಿಬಿಟ್ಟು ಓದುಗನ ಗ್ರಹಿಕೆಯನ್ನು ಅಳತೆಮಾಡಲು ಪಂಪ ನಿಂತುಬಿಡುತ್ತಾನೆ. ಮುಖ್ಯ ಭಾಗದ ರಸವನ್ನು ನೋಡದೆ ಅಲ್ಲಿಂದ ನುಸುಳಿ ವರ್ಣನೆಗಳ ಹಿಂದೆ ಬಿದ್ದು ಇದನ್ನು ಕಡೆಗಣಿಸಿ ಮುಂದೆ ಹೋಗಿಬಿಟ್ಟರೆ ಕಾವ್ಯದ ಮೂಲ ಆಸ್ವಾದ ನಡೆಯದೆ ಕಾವ್ಯ ಅಲ್ಲೆ ನಿಲ್ಲುತ್ತದೆ ಅಥವಾ ಮುಂದಿನ ಭಾಗದ ಮೇಲೆ ಹೆಚ್ಚು ಗಮನಕೊಟ್ಟು ನಡೆದರೆ ಈ ಕ್ಷಣ ಪಂಪ ಕಟ್ಟಿ ನಿಲ್ಲಿಸುವ ಸೂಕ್ಷ್ಮತೆ ಕೈ ಜಾರಿ ಹೋಗುತ್ತದೆ. ಈ ಎರಡೂ ಅಪಾಯಗಳನ್ನು ತಿಳಿದೂ ಯಾವುದಕ್ಕೂ ಸಿಕ್ಕಿಬಿಳದೆ ಸಹಜ ನಡೆದರೆ ಕಾವ್ಯ ಗ್ರಹಿಕೆ ಸಾಧ್ಯ ಅನಿಸುತ್ತದೆ.

ಈ ಪದ್ಯ ಭಾಗಕ್ಕೂ ಮುಂಚಿನದಾಗಿ ಪ್ರಣಯ ಕೋಪದಲ್ಲಿನ ಒಂದು ಜೋಡಿಯನ್ನು ತಂದು ಆ ನಂತರ ಪ್ರಣಯದ ಜೋಡಿಯನ್ನು ತರುತ್ತಾನೆ. ಈ ಉದ್ದೇಶಿತ ರಸದ ತೀವ್ರತೆಯ ಉತ್ಪಾದನೆಗೆ ಓದುಗನನ್ನು ಅಣಿಗೊಳಿಸುವ ಪಂಪನ ಜಾಣ್ಮೆಯನ್ನು ಮೆಚ್ಚಲೇಬೇಕು. ಇಲ್ಲೆಲ್ಲಾ ಪಂಪ ತರುವ ಒಂದು ರಸದ ಬೇರೆ ಬೇರೆ ಭಾವಗಳನ್ನು ಆ ವಿಪ್ರಲಂಭ ಶೃಂಗಾರದ ಪರಿಣಾಮವನ್ನು ಗಟ್ಟಿಗೊಳಿಸುವ ಕ್ರಮ ಇದು. ಪ್ರಕೃತ ಪದ್ಯದ ಪ್ರಾರಂಭಕ್ಕೂ ಮುನ್ನ ಒಂದು ವಚನದಲ್ಲಿ ಮುಂದಿನ ವೃತ್ತದ ಅಷ್ಟೂ ಚಿತ್ರದ ನಡೆಯನ್ನು ಸ್ಪಷ್ಟವಾಗಿ ಹೇಳಿಬಿಡುತ್ತಾನೆ.

ವಚನ – ಮತ್ತಮೊಂದೆಡೆಯೊಳೊಂದು ಕಾಳಾಗರು ಧೂಪ ಧೂಮ ಮಲಿನ ಶ್ಯಾಮಲಾಲಂಕೃತ ವಿಚಿತ್ರ ಭಿತ್ತಿ ವಿರಾಜಿತ ರಮ್ಯ ಹರ್ಮ್ಯತಳದೊಳ್ ಪಲಕಾಲ ಮಲಲ್ದು ನಲ್ಲರಿರ್ವರುಮೊಂದೆಡೆಯೊಳ್ ಕೂಡಿ…

ಒಂದು ಚಿತ್ರ ರಚನೆಯ ಪ್ರಾರಂಭದ ಗೆರೆಯಾಗಿ ಕೆಲವು ಮಾತುಗಳನ್ನು ಪಂಪ ಇಲ್ಲಿ ಬರೆಯುತ್ತಾನೆ. ಕಪ್ಪಾದ ಹೊಗೆಯಿಂದ ಕೂಡಿದ ಒಂದು ಉಪ್ಪರಿಗೆಯ ಮೇಲೆ ಹಲವು ಕಾಲದಿಂದ ದೂರವಿದ್ದ ಒಂದು ಜೋಡಿ ಇಂದಿಗೆ ಒಟ್ಟಿಗೆ ಕೂಡಿದೆ. (ನೋಡಿ ಆದಿಪುರಾಣದ ಶ್ರೀಮತಿ ಮತ್ತು ವಜ್ರಜಂಘರ ಸಂದರ್ಭದಲ್ಲೂ ಬರುವ ಧೂಪ ಧೂಮ ನಿವಹಂ)

ಸಮ ಸಂದೞ್ಕರ್ ಅಲಂಪನೀಯೆ
ಶಯನಂ ಘರ್ಮಾಂಭುವಿನಂ ನಾನೆ
ಮುನ್ನಮೆ ನಾಣ್ ಒೞ್ಕುಡಿವೋಗಿ ಸೂಸುವ ಪದಂ
ಗಂಗಾಂಭುವಂ ಪೋಲೆ
ವಿಭ್ರಮಮಂ ಕಂಠರವಕ್ಕೆ ತಾಡನರವಂ ತಂದೀಯೆ
ತಚ್ಛಯ್ಯೆಯೊಳ್
ಸಮಹಸ್ತಂ ಪಿಡಿವಂತುಟಾಯ್ತು
ಸುರತ ಪ್ರಾರಂಭ ಕೋಳಾಹಳಂ (೪.೧೦೯)

ಇಲ್ಲಿನ ಕ್ರಿಯೆ ಪಂಪನೇ ಚಿತ್ರಿಸಿರುವಹಾಗೆ ಇದೊಂದು ಸಂಭೋಗ ವರ್ಣನೆಯದಾಗಿದೆ. ಆ ಸಮಯದ ಕೆಲವು ಕ್ರಿಯೆಗಳನ್ನ ವರ್ಣಿಸುತ್ತಾನೆ. ಹರಿವ ಬೆವರು, ಸೂಸುವ ಪದಂ, ಅದು ಹೋಲುವುದು ಗಂಗಾಜಲಕ್ಕೆ, ಅದರೊಂದಿಗೇ ಬರುವ ಹಸ್ತಂಬಡಿವ ಸದ್ದು..… ಹೀಗೆ. ಕೊನೆಯಲ್ಲದು ಕೋಲಾಹಲವೆನ್ನುವುದು ಸಾಮಾನ್ಯ ವರ್ಣನೆಯಾದರೂ ಅದನ್ನು ವರ್ಣಿಸಿರುವುದರಿಂದ ಪರಿಣಾಮದಲ್ಲಿ ಮಹತ್ತೆನೆಸುತ್ತದೆ.

ನಾಲಕ್ಕನೆಯ ಆಶ್ವಾಸದ ಈ ಭಾಗದಲ್ಲಿ ವಿಕ್ರಮಾರ್ಜುನನು ಸುಭದ್ರೆಯನ್ನು ನೋಡಿ ಅವಳಿಂದ ಮೋಹಗೊಂಡು ವಿರಹ ಭಾರ ತಾಳಲಾರದೆ ಊರೆಲ್ಲಾ ಅಲೆವ ಸಮಯದಲ್ಲಿನ ವರ್ಣನೆಗಳಲ್ಲಿ ಇದೂ ಒಂದು. ಇಲ್ಲೊಂದು ಬಹಳ ಮುಖ್ಯ ಅಂಶವನ್ನು ಪಂಪ ಸೂಕ್ಷ್ಮವಾಗಿ ತಂದಿದ್ದಾನೆ. ವಿರಹ ಭಾರದಲ್ಲಿ ಬಳಲುವ ಸಮಯದಲ್ಲಿ ಅವನು ಆ ರಾತ್ರಿ ಕಳೆಯಲು ಊರೆಲ್ಲಾ ಅಲೆವಾಗ ಒಂದು ಸಂಭೋಗದ ಜೋಡಿಯು ಇವನ ಕಣ್ಣಿಗೆ ಬೀಳುತ್ತದೆ.

ಇಲ್ಲಿನ ಕ್ರಿಯೆ ಸಾಮಾನ್ಯವಾಗಿರುವುದು. ಆದರೆ ಆ ಕ್ಷಣದಲ್ಲಿ ನೋಡುತ್ತಿರುವುದು ವಿಕ್ರಮಾರ್ಜುನ. ಅವನಲ್ಲಿ ಇದಕ್ಕಾಗಿ ಹಾತೊರೆವ ಮನಸ್ಸಿದ್ದರೂ ಅಲ್ಲಿ ಅವನೊಡನೆ ಸುಭದ್ರೆ ಇಲ್ಲ. ಇಲ್ಲಿ ನಲ್ಲ ನಲ್ಲೆಯರು ಕೂಡಿರುವ ಚಿತ್ರವಿದ್ದರೆ, ಇದನ್ನು ನೋಡುತ್ತಿರುವ ವಿಕ್ರಮಾರ್ಜುನನಲ್ಲಿ ಅಗಲಿಕೆಯ ತಾಪ ಹೆಚ್ಚಾಗುತ್ತಿದೆ. ಸಂಭೋಗ ವರ್ಣನೆಯಿಂದಲೇ ವಿಪ್ರಲಂಭದ ಒತ್ತಡ ಹೆಚ್ಚಾಗಿಸುವ ಕ್ರಮದಿಂದ ಕಾವ್ಯವೊಂದರ ಯಶಸ್ವಿಗೆ ಹಾದಿ ಮಾಡಿಕೊಡುತ್ತಿದೆ. ಅ ನಂತರದ ವೃತ್ತವನ್ನು ನೋಡಿ

ಸೊಡರ್ಗುಡಿ ಒಯ್ಯನಾಗೆ
ಪೊಸಮಲ್ಲಿಗೆ ಮೆಲ್ಲಗೆ ಕಂಪುನಾಱೆ
ತಣ್ಬಿಡಿದು ಎಲರೊದೆ
ಗಾವರಸಮ್ ಮೆಲ್ವುಲಿ
ತುಂಬಿಯ ಗಾವರಂಗಳಂ ಗೆಡೆಗೊಳೆ
ಚಂದ್ರಿಕಾ ಪ್ರಭೆ ಮೊದಲ್ಗಿಡೆ
ನಾಡೆ ವಿತರ್ಕದಿಂ ಬೆರಲ್ಮಿಡಿದು
ಗುಣಾರ್ಣವಂ ನೆಱೆಯೆ ನಿಟ್ಟಿಸಿದಂ ಬೆಳಗಪ್ಪ ಜಾವಮಂ ( ೪.೧೧೦ )

ದೀಪದಲ್ಲಿರುವ ಎಣ್ಣೆಯು ಕಡಿಮೆಯಾಗುವ ಹಾಗೆ, ಮಲ್ಲಿಗೆ ಹೂವು ಕಂಪನ್ನು ಬೀರುತ್ತಿರೆ, ದುಂಬಿಗಳು ಆ ಹೂವಿನ ಗಾನಕ್ಕೆ ಸಮನಾಗುವಂತೆ ಧ್ವನಿ ಸೇರಿಸಿ ಹಾಡುತ್ತಿದೆ, ಚಂದ್ರನ ಹುಣ್ಣಿಮೆಯ ಬೆಳದಿಂಗಳ ಪ್ರಭೆ ಕಡಿಮೆಯಾಗಿ ಸೂರ್ಯ ಮೂಡಿ, ಅಧಿಕವಾಗಿ ಕಲ್ಪನೆಯಿಂದ ಹೊರಬಂದು ಬೆಳಗಾಯಿತು ಅನ್ನುವ ಚಿತ್ರವನ್ನು ಕೊಡುತ್ತಾನೆ.

ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾಗಿರುವ ಒಂದಷ್ಟು ಅಂಶಗಳಿವೆ. ಒಂದು ವಿರಹದ ತೀವ್ರತೆ ತರುವಲ್ಲಿ ಪಂಪ ಕೊಡುವ ಅದರ ವಿರುದ್ಧದ ಚಿತ್ರ. ಸಂಭೋಗ ಶೃಂಗಾರವನ್ನು ವರ್ಣಿಸುತ್ತಲೇ ವಿಪ್ರಲಂಭ ಶೃಂಗಾರದ ತೀವ್ರತೆ ಹೆಚ್ಚು ಮಾಡುವುದು. ಸಾಮಾನ್ಯನಲ್ಲಿ ಸಾಮಾನ್ಯನಾಗಿ ಒಬ್ಬ ರಾಜನಾಗಿ ಮಾಡಿ. ನಗರದ ರಸ್ತೆಯಲ್ಲಿ ವಿಕ್ರಮಾರ್ಜುನನನ್ನು ನಡೆಯುವ ಚಿತ್ರ, ಅದೂ ಸಾಮಾನ್ಯರ ಹಾಗೇ ರಾಜನೂ ಇರುವ ಅನ್ನುವ ಭಾವವನ್ನ ತೋರಿಸುತ್ತದೆ. ಇಲ್ಲಿ ಭಾವ, ದೇಹ, ದೈಹಿಕ ಕ್ರಿಯೆ ಇದೆಲ್ಲದರಲ್ಲಿಯೂ ರಾಜನೂ ಸಾಮಾನ್ಯನೇ ಅನ್ನುವ ಅರ್ಥ ಹೊರಡುವ ಹಾಗೆ ಮಾಡುವುದು. ಎಲ್ಲಿಯೂ ವಿಕ್ರಮಾರ್ಜುನ ಸಾಮಾನ್ಯರಲ್ಲಿ ಮಾತಾಡದೆ ಅಲ್ಲಿನ ಎಲ್ಲಾ ಘಟನೆಗಳನ್ನು ನೋಡುತ್ತಲೇ ತಾನೂ ಅವರಂತೆ ಅಂದುಕೊಳ್ಳುವ ಭಾವ ಇದೆಯಲ್ಲ ಅದು ಬಹಳ ಮುಖ್ಯ.
ಅರಿಕೇಸರಿಯನ್ನ ಕಥಾ ನಾಯಕನನ್ನಾಗಿ ಮಾಡಿಕೊಂಡು ರಸ್ತೆಯಲ್ಲಿ ನಡೆಸುವ, ಅದೂ ಕಾಮಾತುರನಾಗಿ ಮನದಲ್ಲಿ ಹಲುಬಿ ನಡೆಯುವ ಚಿತ್ರವನ್ನು ಕಟ್ಟಿಕೊಡುವ ಪಂಪ ಪ್ರತಿಯೊಂದು ಕಡೆಯಲ್ಲೂ “ಗುಣಾರ್ಣವ” ಅನ್ನುವ ಪದವನ್ನು ಬಳಸುವಾಗ ಇರುವ ಆ ಪ್ರಭುತ್ವವನ್ನು ನೋಡುವ ಸ್ಪಷ್ಟತೆ ಬಹಳ ಮುಖ್ಯ. ಸಾಮಾನ್ಯವಾಗಿ ಎಲ್ಲರೂ ಪಂಪನು ರಾಜಸತ್ತೆಯನ್ನು ಒಪ್ಪಿ, ಅವನ ಒಲೈಕೆಗೆ ಕಾವ್ಯ ರಚನೆ ಮಾಡಿದ ಕವಿ ಅನ್ನುವ ಹಾಗೆ ನೋಡುವಾಗ ಈ ಚಿತ್ರ ಅವರ ಅಭಿಪ್ರಾಯಕ್ಕೆ ವಿರುದ್ಧವಾಗಿ ಕಡೆದು ನಿಲ್ಲಿಸಿದ ಶಾಸನದ ಹಾಗೆ ಕಾಣುತ್ತದೆ. ಮೇಲಿನ ಆ ಸಮಾಗಮದ ಚಿತ್ರವನ್ನು ವಿಕ್ರಮಾರ್ಜುನನು ಕಾಣುವುದು ಕಪ್ಪಾದ ಧೂಪದ ಹೊಗೆಯ ಪರದೆಯನ್ನುಟ್ಟು ನಿಂತ ಒಂದು ಜಾಗದಲ್ಲಿ ಅನ್ನುವುದು ವಿಶೇಷ.

ಎರಡನೆಯದಾಗಿ ಸುರತದ ಕೋಲಾಹಲವನ್ನು ಹೇಳುವಾಗ ( ೪.೧೦೯ ) ಬಳಸುವ ಎರಡು ಪದಗಳು ಬಹಳ ಮುಖ್ಯ “ತಾಡನ ರವ” ಅನ್ನುವುದನ್ನ ಹೊಡೆದಾಟವಾಗಿ ಕಾಮದ ತೀವ್ರತೆಯನ್ನು ಹಿಂದೆ ಹೇಳಿದ ಕೋಲಾಹಲದ ತೀವ್ರತೆ ಹೆಚ್ಚಿಸಲು ಬಳಸುವಲ್ಲಿ ಅವನ ಕಾವ್ಯ ರಚನೆ ಎದ್ದು ಕಾಣುತ್ತದೆ. ಪಂಪ “ಸಮಹಸ್ತ” ಅನ್ನುವ ಪದವನ್ನು ಬಳಸುತ್ತಾನೆ. ಇಲ್ಲಿ ಸಮಹಸ್ತ ಅನ್ನುವುದಕ್ಕೆ ನರ್ತನವೊಂದಕ್ಕೆ ಹಿಮ್ಮೇಳವಾಗಿ ವಾದ್ಯ ನುಡಿಸುವ ಕ್ರಮದ ಹಿನ್ನೆಲೆಯಲ್ಲಿನ ಪದವಾಗಿ ಅರ್ಥ ಪಡೆವುದರ ಜೊತೆಗೆ, ಸಮಸತ್ವದ ಅನಾವರಣ ಅನ್ನುವ ಎರಡು ಅರ್ಥಗಳಿವೆ. ಇದರೊಂದಿಗೆ ಆಚಾರ್ಯ ಡಿ ಎಲ್ ನರಸಿಂಹಾಚಾರ್ಯರು ತಮ್ಮ ಪಂಪ ಭಾರತ ದೀಪಿಕೆಯಲ್ಲಿ ಪ್ರಶ್ನಾರ್ಥಕ ಚಿಹ್ನೆ ಹಾಕಿ ಅದಕ್ಕೆ ಕ್ರೀಡಾ ಪರಿಭಾಷೆ ಇರಬಹುದು, ಹಾಗೇ ಕುಸ್ತಿ ಪಟುಗಳು ಹಾಕುವ ಒಟ್ಟುಗಳಿರಬಹುದು ಅನ್ನುವುದನ್ನು ತೋರಿಸಿದ್ದಾರೆ.

ಈ ಎರಡೂ ಅರ್ಥಗಳ ಅಡಿಯಲ್ಲಿ ಪಂಪ ಮನುಕುಲದ ನಾಟಕಕ್ಕೆ ಪ್ರಾರಂಭದ ಹಿಮ್ಮೇಳದ ವಾದ್ಯ ಧ್ವನಿಯಾಗಿ ಸಂಭೋಗ ಶೃಂಗಾರವನ್ನು ನಿಲ್ಲಿಸುವ ಹಾಗೂ ಅದರಲ್ಲಿನ ಗಂಡು ಹೆಣ್ಣಿನಲ್ಲಿ ಯಾವುದರಲ್ಲೂ ಹೆಚ್ಚು ಕಡಿಮೆ ಅನ್ನದೆ ಸಮಾನವಾಗಿ ಆಡುವ ಕಾಮ ಕ್ರೀಡೆ ಅನ್ನುವ ಎರಡೂ ಧ್ವನಿಗಳು ಮೂಡುವಂತೆ ಮಾಡುತ್ತಾನೆ. ಇದು ಒಬ್ಬ ಗಟ್ಟಿ ಕವಿ ಅನುಭವದಿಂದ ಜಗವನ್ನು ನೋಡುವ ದಿಕ್ಕನ್ನೇ ಬದಲು ಮಾಡುವ ನವಪದ ನಿರ್ಮಾಣ. “ನಾವೀಗ ಮನುಕುಲದ ತಂದೆ ತಾಯಿ” ಎಂದು ಬಾಯಿಬಿಟ್ಟು ಹೇಳದೇ ಅದನ್ನ ಸಶಕ್ತವಾಗಿ ಕಾವ್ಯ ಧ್ವಾನಿಯಾಗಿ ತಂದಿರುವ ಕ್ರಮ.

ಕೊನೆಯ ಉದಾಹರಣೆಯಾಗಿ ಕೊಟ್ಟಿರುವ ಕಾವ್ಯ ಭಾಗದಲ್ಲಿ ( ೪.೧೧೦ ) ಕಾಮದ ಕೊನೆಯನ್ನು ಹೇಳುತ್ತಲೇ ಅದಕ್ಕೊಂದಷ್ಟು ಬೇರೆ ಬೇರೆ ಅರ್ಥ ಹುಟ್ಟುವ ಹಾಗೆ ಕೊಡುವ ಪ್ರತಿಮೆಗಳು ಬಹಳ ಮುಖ್ಯ ಅನಿಸುತ್ತದೆ. ಎಣ್ಣೆ ಖಾಲಿಯಾಗುವ ಹಣತೆ, ಮಲ್ಲಿಗೆಯ ಕಂಪಿನ ಪ್ರಾರಂಭ, ದುಂಬಿಯ ನಾದ ಅದರೊಂದಿಗೆ ಕೂಡಿಕೊಳ್ಳುವುದು, ಬೆಳದಿಂಗಳು ಕಡಿಮೆಯಾಗಿ ಸೂರ್ಯನ ಉದಯಕ್ಕೆ ಹಾದಿ ಮಾಡಿಕೊಡುವುದು, ಇದೆಲ್ಲವೂ ಒಂದೊಂದು ಸಾಯುಜ್ಯ ಸಂಬಂಧ ಹೊಂದಿರುವ ಪ್ರತಿಮೆಗಳು. ಹಿಂದಿನ ಸಂಭೋಗ ಶೃಂಗಾರದ ಕಡೆಗೆ ಇದನ್ನು ಹೋಲಿಸಿ ನೋಡಿದರೆ ಅದರ ಬೆಳವಣಿಗೆಯಾಗಿ ಇದು ನಿಲ್ಲುತ್ತದೆ. ಕಾಮವೆನ್ನುವುದು ಬೆಂಕಿ, ಉರಿ ಎನ್ನುವ ಪ್ರತಿಮೆಗಳ ಜೊತೆಗೆ ಪಂಪ ಕಟ್ಟಿಕೊಡುವ “ಸೊಡರ್” ಅನ್ನುವುದನ್ನು ನೋಡಿ. ಈ ಹಣತೆ ಕೊಡುವ ಚಿತ್ರವೇ ಅದ್ಭುತವೆನಿಸಿ ಓದುಗನ ಪ್ರಜ್ಞೆಯನ್ನು ಬೆಳಗಿಬಿಡುತ್ತದೆ. ಕಂಪುನಾಱೆ, ಗೆಡೆಗೊೞೆ ಇದೆಲ್ಲವೂ ಹಾದಿ ಮಾಡಿಕೊಡುವುದಕ್ಕೆ ಕ್ರಿಯಾಪದಗಳಾಗಿ ಕಾರ್ಯ ನಿರ್ವಹಿಸಿ ಕೊನೆಯದಾಗಿ ಈ ಎಲ್ಲಾ ಅರ್ಥ ಸ್ಥರಗಳನ್ನು ಓದುಗ ಬಿಡಿಸಿಕೊಂಡು ಅರ್ಥಮಾಡಿಕೊಂಡರೆ ಕೊನೆಗೆ ಗುಣಾರ್ಣವನಷ್ಟೆ ಅಲ್ಲ ನಾವೂ ಬೆಳಗನ್ನ ನಿಟ್ಟಿಸಬಹುದು. (ಗುಣಗಳೇ ಆರ್ಣವದಂತೆ ಇರುವವರು ಮಾತ್ರ ಕಾಣುವ ಬೆಳಗಿದು!)

ಮೇಲಿನ ಎರಡು ವೃತ್ತಗಳಿಂದ ಅದು ಸೃಜಿಸುವ ಅರ್ಥದಿಂದಲೇ ಅಣುವಿನಲ್ಲೆ ಮಹತ್ತನ್ನು ಹೇಳುವ ಪಂಪನ ಧ್ವನಿ ಶಕ್ತಿ, ಪ್ರತಿಮಾ ಶಕ್ತಿಯೇ ಅವನನ್ನು ಇನ್ನೂ ಜೀವಂತವಾಗಿ ನಿಲ್ಲಿಸಿದೆ. ಅದರೊಂದಿಗೆ ಈ ಭಾಗವು ಮನುಜಕುಲದ ಬೆಳವಣಿಗೆಗೆ ಮಹೋಪಮೆಯಾಗಿ ನಿಂತುಬಿಡುತ್ತದೆ. ಜಗದ ಬಹಳ ದೊಡ್ಡ ಸತ್ಯವನ್ನ ಒಂದಷ್ಟು ಕಡಿಮೆ ಸಾಲುಗಳಲ್ಲಿ ಹೇಳಿ ಮುಂದಿನ ಬೆಳಕುಕಾಣುವ ಹಾದಿಯನ್ನು ನಮಗೆ ತೆರೆಯಲು ಹೇಳಿ ಗುಣಾರ್ಣವರಾದವರು ಕಾಣುವ ಬೆಳಗನ್ನು ತೋರಿಸುತ್ತಾನೆ.