ನನಗೆ ಲಖನೊ ನೋಡಬೇಕೆಂಬುದು ಬಹಳ ದಿನಗಳ ಪರಮಾಯಿಶಿ. ಲಖನೊ ಯಾಕೆ, ದೆಹಲಿ, ಬರೋಡ, ಬಿಜಾಪುರ, ಗುಲಬರ್ಗ, ಬೀದರ್, ಅಹಮದ್‌ನಗರ, ಮೈಸೂರು, ಹೈದರಾಬಾದ್, ಔರಂಗಾಬಾದ್, ಉದಯಪುರ- ಪ್ರಭುತ್ವವಿದ್ದ ಎಲ್ಲ ರಾಜನಗರಿಗಳೂ ನನ್ನನ್ನು ಸೆಳೆಯುತ್ತವೆ. ಅಲ್ಲಿನ ವಿಶಾಲ ಬೀದಿಗಳು, ದೊಡ್ಡ ಮಹಲುಗಳು, ಅವುಗಳ ಅಭಿಜಾತ ವಾಸ್ತುಶಿಲ್ಪ, ವಿಲಾಸಿ ಸಂಸ್ಕೃತಿಯ ಪಳೆಯುಳಿಕೆ, ಪ್ರಜೆಗಳಲ್ಲಿರುವ ಕಲಾಸಂಸ್ಕಾರ, ಒಣಹೆಮ್ಮೆ, ರಾಜನಿಷ್ಠೆಯಿಂದ ಬಂದ ದೈನ್ಯ, ಬಳಸಲಾಗದೆ ಧೂಳುತುಂಬಿದ ಕಟ್ಟಡಗಳು, ತನ್ನ ಕೆಲಸವೇನೆಂದರಿಯದೆ ಗೊಂದಲದಲ್ಲಿ ನಿಂತಿರುವ ಕೋಟೆ, ಅದರ ಬಿರುಕುಗಳಲ್ಲಿ ಬೇರಿಳಿಸಿ ಬೆಳೆದ ಅರಳಿ-ಇವೆಲ್ಲವೂ ಕುತೂಹಲ ಹುಟ್ಟಿಸುತ್ತವೆ. ಚೆನ್ನಾಗಿ ಬಾಳಿದ ವ್ಯಕ್ತಿಯೊಬ್ಬ, ಮುಪ್ಪಡರಿದ ಬಳಿಕ ನಿತ್ರಾಣನಾಗಿ ಜಗುಲಿಯಲ್ಲಿ ಒರಗಿ ಕುಳಿತು, ಯೌವನದ ಸಾಹಸಗಳನ್ನು ನೆನಪಿನಾಳದಿಂದ ಹೊರತೆಗೆಯುತ್ತ, ಮೀಸೆಮರೆಯಲ್ಲೇ ಮಂದಸ್ಮಿತನಾಗಿರುವಂತೆ ನನಗಿವು ತೋರುತ್ತವೆ. ಗತವೈಭವದ ಸ್ಮೃತಿಗಳನ್ನಿಟ್ಟುಕೊಂಡು ಬದಲಾದ ವರ್ತಮಾನದಲ್ಲಿ ಬದುಕುವುದು ಅಷ್ಟು ಸಲೀಸಲ್ಲ. ಅಲ್ಲಿ ಅಭಿಮಾನದ ಜತೆಗೇ ಕಳಕೊಂಡ ನೋವು, ಗತವು ಮರಳುವುದಿಲ್ಲವೆಂಬ ಅರಿವಿನಿಂದ ಹುಟ್ಟಿದ ತಲ್ಲಣ, ಪರಿವರ್ತನೆಗೆ ಹೊಂದಿಕೊಳ್ಳಲಾಗದ ಕಷ್ಟ-ಎಲ್ಲವೂ ಸೇರಿ ಗುದುಮುರಿಗೆ ಆಡುತ್ತಿರುತ್ತವೆ. ಚರಿತ್ರೆ ವರ್ತಮಾನದಲ್ಲಿ ರೂಪಾಂತರ ಪಡೆಯುವಾಗ ಹೊರಡಿಸುವ ನರಳಿಕೆ ಶಬ್ದ ಕೇಳಲರ್ಹವಾಗಿರುತ್ತದೆ; ಹೊಂದಾಣಿಕೆ ಮಾಡಿಕೊಂಡು ಸೆಣಸುತ್ತ ತಾನು ಬದುಕಿದ್ದೇನೆಂದು ಮಾಡುವ ನಟನೆ ಪ್ರೇಕ್ಷಣೀಯವಾಗಿರುತ್ತದೆ. ನಮ್ಮಲ್ಲೊಂದು ಮಾತಿದೆ: ‘ಕೆಟ್ಟು ಬದುಕಿದವರನ್ನು ನೋಡಬಹುದಂತೆ; ಬದುಕಿ ಕೆಟ್ಟವರನ್ನು ನೋಡುವುದಕ್ಕೆ ಆಗುವುದಿಲ್ಲವಂತೆ.’
ಲಖನೊ ಒಂದು ಕಾಲಕ್ಕೆ ಅವಧ ಸಂಸ್ಥಾನದ ರಾಜಧಾನಿ. ಮೊಗಲರ ಅಧೀನ ದೊರೆಗಳಾಗಿದ್ದ ಅವಧದ ನವಾಬರು ದೆಹಲಿ ದುರ್ಬಲವಾಗುತ್ತಲೇ ಸ್ವಂತಂತ್ರರಾದರು. ನವಾಬ ಸಿರಾಜುದ್ದೌಲನು ಫೈಜಾಬಾದಿನಿಂದ ಲಖನೊಗೆ ರಾಜಧಾನಿ ವರ್ಗಾಯಿಸಿ, ಅದನ್ನೊಂದು ಸಾಂಸ್ಕೃತಿಕ ನಗರಿಯಾಗಿ ರೂಪಿಸಿದನು. ಕೊನೆಯ ನವಾಬ ವಾಜಿದಲಿಶಾನ ಕಾಲದಲ್ಲಿ ಲಖನೊ ಸಂಗೀತ, ಕಾವ್ಯ ನೃತ್ಯಗಳಿಂದ ಮೆರೆಯಿತು. ಖ್ಯಾತ ನರ್ತಕಿ, ವಿದುಷಿ ಮತ್ತು ವಾರಾಂಗನೆಯಾಗಿದ್ದ ಉಮ್ರಾವ್ ಜಾನ್ ರೂಪುಗೊಂಡಿದ್ದು ಇಂತಹದೇ ಪರಿಸರದಲ್ಲಿ. ಲಖನೊ ನವಾಬರ ವಿಲಾಸ, ಕಲಾಪ್ರೇಮ ಮತ್ತು ಪತನಗಳನ್ನು ನರ್ತಕಿಯೊಬ್ಬಳ ಬಾಳಗನ್ನಡಿಯಲ್ಲಿ ಮಿರ್ಜಾ ರುಸ್ವಾ ಅದ್ಭುತವಾಗಿ ಹಿಡಿಯುತ್ತಾನೆ. ಪ್ರೇಮಚಂದರ ‘ಚದುರಂಗದ ಆಟಗಾರರು’ ಕತೆ ಲಖನೊದ ಪತನವನ್ನು ಬೇರೆ ಮಜಲಿನಲ್ಲಿ ತರುತ್ತದೆ; ಕಂಪನಿ ಫೌಜು ದಂಡೆತ್ತಿ ಬಂದು ರಾಜ್ಯವನ್ನೂ ವಶಪಡಿಸಿಕೊಂಡರೂ, ಸ್ವತಃ ನವಾಬನನ್ನೇ ಬಂಧಿಸಿ ಕಣ್ಣೆದುರು ಎಳೆದೊಯ್ಯುತ್ತಿದ್ದರೂ, ಅರಮನೆಯ ಅಧಿಕಾರಿಗಳಿಬ್ಬರು ಚದುರಂಗದಾಟದಲ್ಲಿ ಗ್ರಸ್ತರಾಗಿರುತ್ತಾರೆ.
ಪೂರ್ವಜರಂತೆ ಗತವೈಭವದಲ್ಲಿ ಬದುಕಲು ಯತ್ನಿಸುವ, ಆದರೆ ಹಾಗೆ ಬದುಕಲಾಗದ, ವರ್ತಮಾನದ ನಿಷ್ಠುರ ವಾಸ್ತವಕ್ಕೆ ಢಿಕ್ಕಿ ಹೊಡೆಯುವ, ಹೊಡೆದರೂ ವಿಭ್ರಮೆಯಿಂದ ಹೊರಬರಲಾಗದ ಜನರ ವರ್ತನೆ ವಿಕ್ಷಿಪ್ತವಾಗಿರುತ್ತದೆ. ದೆಹಲಿಯ ಗಣ್ಯಮನುಷ್ಯರಲ್ಲಿ ಒಬ್ಬನಾಗಿದ್ದ ಕವಿ ಮಿರ್ಜಾ ಗಾಲಿಬನಿಗೆ ತಾನೊಬ್ಬ ರಾಜವಂಶೀಯ ಎಂಬ ಹ್ಯಾಂಗ್ ಓವರಿತ್ತು. ಎಷ್ಟಿತ್ತೆಂದರೆ, ಬ್ರಿಟಿಶ್ ಗವರ್ನರ್ ಏರ್ಪಡಿಸುವ ಸಭೆಗಳಲ್ಲಿ ರಾಜಪೋಷಾಕಿನ ಸಮೇತ ಭಾಗವಹಿಸಲು ಅನುಮತಿ ಪಡೆಯುವುದಕ್ಕಾಗಿ ಅವನು ಜೀವಮಾನವಿಡೀ ಹೋರಾಟ ಮಾಡುತ್ತಾನೆ. ಅವನ ದಿನನಿತ್ಯಖರ್ಚಿಗೆ ಬೇಕಾದ ರೊಕ್ಕ, ಬ್ರಿಟಿಶರು ಕೊಡುವ ವರ್ಷಾಸನದಿಂದ ಬರಬೇಕಿತ್ತು. ಗೌರವಾನ್ವಿತ ಭಿಕ್ಷೆಯಂತಿದ್ದ ಇದನ್ನು ಪಡೆಯಲು ಆತ ಕಲೆಕ್ಟರ್ ಕಛೇರಿಗೆ ಮೇನೆಯಲ್ಲಿ ಕುಳಿತು ಹೋಗುತ್ತಾನೆ. ಹಾಗೆ ಹೋದಾಗ ಅಧಿಕಾರಿಗಳು ಬಂದು ಸ್ವಾಗತಿಸಲಿಲ್ಲವೆಂದು ಅಪಮಾನಿತನಾಗಿ ಮರಳಿ ಬರುತ್ತಾನೆ. ಕೊನೆಯ ಮೊಗಲ್ ದೊರೆ ಬಹಾದೂರಶಾನ ಗೆಳೆತನವು, ಆಂಗ್ಲರಿಗೆ ಮುನಿಸು ತಂದಾಗ, ಅವರನ್ನು ಮೆಚ್ಚಿಸಲು ಕೃತಿಯೊಂದನ್ನು ಬರೆದು, ಅದನ್ನು ಇಂಗ್ಲೆಂಡ್ ರಾಣಿಗೆ ಕಳಿಸಿಕೊಡುತ್ತಾನೆ.
ಚರಿತ್ರೆಯಂತಹ ಕ್ರೂರ ಹಾಸ್ಯಗಾರ ಬೇರೆ ಇರಲಿಕ್ಕಿಲ್ಲ. ಏನೆಲ್ಲ ಮಾಡಿದರೂ, ಚರಿತ್ರೆಯ ಹೊರೆ ಅದರ ಉತ್ತರಾಧಿಕಾರಿಗಳ ಮೊಗದ ಮೇಲೆ ವಿಹ್ವಲವಾದ ಮಂಕುತನದ ಮುದ್ರೆಯನ್ನೊತ್ತಿ ಹೋಗಿಬಿಡುತ್ತದೆ. ಕರ್ನಾಟಕದ ವಾಡೆಗಳಿಗೆ ಹೋದಾಗ ನನಗಿದರ ದರ್ಶನವಾಗಿದೆ. ಕುಂದಗೋಳದ ನಾಡಿಗೇರ ವಾಡೆ, ರಾಯಚೂರಿನ ಖಾಜನಗೌಡರ ವಾಡೆ, ರಾಮದುರ್ಗದ ದೇಸಾಯಿಯವರ ವಾಡೆ- ಎಲ್ಲಕಡೆ ಕಾಲವು ತನ್ನ ನಿಷ್ಕರುಣೆಯ ಕೈಸವರಿರುವುದು ಕಣ್ಣಿಗೆ ರಾಚುತ್ತದೆ.
ಆದ್ದರಿಂದಲೋ ಏನೋ ಆಧುನಿಕ ಸಾಹಿತ್ಯ ಕೃತಿಗಳಿಗೆ ಈ ಬದುಕಿ ಕೆಟ್ಟವರ ಬಾಳು ಮತ್ತೆಮತ್ತೆ ವಸ್ತುವಾಗುತ್ತ ಹೋಗಿದೆ. ಕನ್ನಡದಲ್ಲಿದು ರಾವ್‌ಬಹಾದ್ದೂರರ ‘ಗ್ರಾಮಾಯಣ’ದಲ್ಲಿ, ರಾಘವೇಂದ್ರ ಪಾಟೀಲರ ‘ದೇಸಗತಿ’ಯಲ್ಲಿ, ಕಂಬಾರರ ‘ಸಿಂಗಾರೆವ್ವ ಮತ್ತು ಅರಮನೆ’ಯಲ್ಲಿ ಕಾಣುತ್ತದೆ. ವೈಕಂ ಮಹಮ್ಮದ್ ಬಶೀರ್ ಇದನ್ನು ‘ನನ್ನಜ್ಜನಿಗೊಂದು ಆನೆಯಿತ್ತು’ ಕಾದಂಬರಿಯಲ್ಲಿ ತಮಗೆ ಸಹಜವಾದ ವಿನೋದ ಮತ್ತು ದುರಂತ ಪ್ರಜ್ಞೆಯಲ್ಲಿ ಹಿಡಿಯುತ್ತಾರೆ. ಗಾಂಧೀಜಿಗೂ ಈ ಕಾಮಿಕ್‌ಸೆನ್ಸ್ ಇತ್ತು. ವೈಸರಾಯ್ ಕರೆದ ಸಭೆಗಳಲ್ಲಿ, ನಾಟಕದ ರಾಜಪಾತ್ರಗಳಂತೆ ಪೋಷಾಕು ಧರಿಸಿಕೊಂಡು ಬರುತ್ತಿದ್ದ ಇಂಡಿಯಾದ ಛಪ್ಪನ್ನೈವತ್ತಾರು ರಾಜರು, ಅಧಿಕಾರ ಕಳೆದುಕೊಂಡ ಸೋಲನ್ನು ಮುಚ್ಚಲೋಸುಗ ಮಾಡುತ್ತಿದ್ದ ಆಡಂಬರವನ್ನು ಅವರು ಕರುಣೆಯಿಂದ ಚಿತ್ರಿಸುತ್ತಾರೆ. ಆ ರಾಜನೆರವಿಯಲ್ಲಿ ಲಖನೊ ನವಾಬರೂ ಇದ್ದರೆಂದು ಕಾಣುತ್ತದೆ. ಆದರೆ ಸತ್ಯಜಿತ್‌ರಾಯ್ ಮಾತ್ರ ಬದುಕಿ ಕೆಟ್ಟವರ ಅವಸ್ಥೆಯನ್ನು ವಿನೋದವೇ ಇಲ್ಲದ ದುರಂತ ಪ್ರಜ್ಞೆಯಲ್ಲಿ ಹಿಡಿಯುತ್ತಾರೆ. ವಿನೋದವಿಲ್ಲದ ದುರಂತ ಪ್ರಜ್ಞೆ ಬಹಳ ಕಟುವಾಗಿರುತ್ತದೆ. ಅವರ ‘ಜಲಶಾಘರ್’ ಸಿನಿಮಾ ಗತವೈಭವದ ಸ್ಮೃತಿಗಳು ಶವಭಾರವಾಗಿ ವರ್ತಮಾನದ ಬದುಕನ್ನು ಹೊಸಕಿ ಹಾಕುವ ಕಠೋರಪರಿಯನ್ನು ಒಳಗೊಂಡಿದೆ.
ಹೀಗೆ ಅನೇಕ ಚರಿತ್ರೆಯ ಚಿನ್ನಾಟಕ್ಕೂ ರಾಜಕೀಯ ಕೋಲಾಹಲಗಳಿಗೂ ಹಲವು ಕಲೆಗಳಿಗೂ ಕೇಂದ್ರವಾಗಿದ್ದ ‘ಪುರಾತನ ಲಖನೌ’ಗೆ ಹೊರಟಿದ್ದ ನನಗೆ, ಮುಖ್ಯವಾಗಿ ಅಲ್ಲಿನ ಮೊಹರಂ ಆಚರಣೆಗೆ ಸಂಬಂಧಿಸಿದ ಇಮಾಂಬಾಡಾ ಕಟ್ಟಡಗಳನ್ನು ನೋಡುವುದಿತ್ತು. ಜತೆಗೆ ಲಖನೊ ಜನಸಾಮಾನ್ಯರು ಸೈತ ಆಡುತ್ತಾರೆ ಎನ್ನಲಾಗುವ ಕಾವ್ಯಾತ್ಮಕ ಉರ್ದುವನ್ನು ಕೇಳಿಸಿಕೊಳ್ಳುವುದಿತ್ತು; ಅಲ್ಲಿನ ಮಾಂಸದ ತಿನಿಸುಗಳನ್ನು ಬೀದಿಯ ಮೇಲೆ ನಿಂತು ಸವಿಯುವುದಿತ್ತು; ಚಿಕಣಿ ಬಟ್ಟೆ ಖರೀದಿಸುವುದು; ಗಾಳಿಪಟ ಸ್ಪರ್ಧೆ, ಪಾರಿವಾಳ ಸ್ಪರ್ಧೆ ನೋಡುವುದು, ಸಾಧ್ಯವಾದರೆ ಅಲ್ಲಿನ ಮುಶಾಯಿರದಲ್ಲಿ ಭಾಗವಹಿಸುವುದು, ಕಥಕ್ ನೃತ್ಯ ನೋಡುವುದು -ಹೀಗೆ ಹತ್ತಾರು ಖಾಯಶುಗಳ ಗಂಟಿತ್ತು. ಒಂದೇ ಗುರಿಯಿಟ್ಟುಕೊಂಡು ಬಾಣದಂತೆ ಹೋಗುವ ಪ್ರವಾಸಕ್ಕಿಂತ, ಎಲೆಮೇಯುತ್ತ ಗಿಡದಿಂದ ಗಿಡಕ್ಕೆ ಚಲಿಸುವ ಮೇಕೆಯಂತೆ ಹೋಗುವಲ್ಲಿ ಹೆಚ್ಚು ಖುಷಿ ಸಿಗುತ್ತದೆ.
ಲಖನೊ ಹೋಗುವ ಬಯಕೆ ಈ ವರ್ಷದ ಆದಿಯಲ್ಲಿ ಈಡೇರಿತು. ಜೋಗಿಗೆ ಬೆನ್ನುಹತ್ತಿದ ಜೋಗಿಣಿಯಂತೆ ಬಾನು ಕೂಡ ಜತೆಗೆ ಹೊರಟಳು. ಬೆಂಗಳೂರು-ಗೋರಖಪುರ ರೈಲು ಹತ್ತಿ ಹೊರಟರೆ, ಕಾನ್ಪುರದಲ್ಲಿ ಬೆಳಕು ಹರಿಯುತ್ತದೆ. ಅಲ್ಲಿ ತೊಗಲು ಕಾರ್ಖಾನೆಗಳ ಮಾಲಿನ್ಯ ಹೊತ್ತು ಹರಿವ ಗಂಗೆಯನ್ನು ರೈಲು ದಾಟುತ್ತದೆ ಎಂದು ಕೇಳಿದ್ದೆ. ಕುವೆಂಪು ಹೇಳುವಂತೆ ‘ನೀರೆಲ್ಲವೂ ತೀರ್ಥ’ ಎಂಬುದನ್ನು ನಂಬಿದವನು ನಾನು. ಆದರೂ ಯಾಕೊ ಏನೋ ಗಂಗೆಯನ್ನು ದಾಟುವಾಗ ಒಂದು ಬಗೆಯ ಭಾವುಕತೆ ಪುರಾಣಪ್ರಜ್ಞೆ ಆವರಿಸುತ್ತದೆ. ಆದರೆ ನಮಗವತ್ತು ಗಂಗೆ ಕಾಣಲಿಲ್ಲ. ಮಂಜು ಎಷ್ಟು ದಟ್ಟವಾಗಿ ಆವರಿಸಿತ್ತೆಂದರೆ, ರೈಲ್ವೆ ಸೇತುವೆಗೆ ಹಾಕಿದ ಕಬ್ಬಿಣದ ಪಟ್ಟಿಯಾಚೆ ಏನೂ ಕಾಣುತ್ತಿರಲಿಲ್ಲ. ಬೆಳ್ಳನೆಯ ಹೊಗೆಪ್ರಪಾತದಲ್ಲಿ ಎಲ್ಲವೂ ಮುಳುಗಿಹೋಗಿತ್ತು. ರೈಲು ಸೇತುವೆ ದಾಟುವ ಝಗ್‌ಝಗ್ ಲಯಬದ್ಧ ಶಬ್ದವಿರದಿದ್ದರೆ ನದಿಯಿರುವುದೂ ಗೊತ್ತಾಗುತ್ತಿರಲಿಲ್ಲ.
ಲಖನೊ ತಲುಪುವಾಗ ಬೆಳಗಿನ ಹತ್ತುಗಂಟೆ. ಹೋಟೆಲಿಗೆ ಹೋಗಲು ಒಂದು ಸೈಕಲ್ ರಿಕ್ಷಾ ಹತ್ತಿದೆವು. ಚಾಲಕ ಕೆಂಪಗೆ ಸಣಕಲಾಗಿದ್ದ. ಹೆಸರು ನಸರುಲ್ಲ. ವಯಸ್ಸು ಅರೆಶತಮಾನ. ಶಿವಗೊರಳಿನ ಸರ್ಪದಂತೆ ಕಪ್ಪನೆಯ ಮಫ್ಲರ್ ಅವನನ್ನು ಸುತ್ತಿಕೊಂಡಿತ್ತು. ಅದು ಶಿಯಾಗಳು ಮೊಹರಂ ಸಾಂಸ್ಕೃತಿಕ ನಾಯಕರ ಹೆಸರಲ್ಲಿ ಆಚರಿಸುವ ದು:ಖಸೂಚಕ ವಸ್ತ್ರ. ನಮ್ಮ ಗರೀಬರಥ ಕೊಂಚದೂರ ಚಲಿಸಿ ನಿಂತುಬಿಟ್ಟಿತು. ಕಾರಣ ಅವತ್ತು ಜನವರಿ ೨೬. ರಾಜರಾಳ್ವಿಕೆ ಮುಗಿದು ಸಂವಿಧಾನದ ಆಳ್ವಿಕೆ ಶುರುವಾದದ್ದರ ಸಂಕೇತವಾದ ಗಣರಾಜ್ಯದ ದಿನ. ಮೆರವಣಿಗೆ ನಿಮಿತ್ತ ರಸ್ತೆಗಳೆಲ್ಲ ಬ್ಲಾಕಾಗಿದ್ದವು. ಸ್ಕೂಲ್ ಮಕ್ಕಳು ಬಗೆಬಗೆಯ ಆಟಿಕೆ ಹಿಡಿದು, ಪೋಲೀಸರೆಲ್ಲ ಬಣ್ಣದ ಸಮವಸ್ತ್ರ ಧರಿಸಿ, ರಸ್ತೆತುಂಬ ನಿಂತಿದ್ದರು. ಅದನ್ನು ನೋಡಲು ರೈಲ್ವೆ ನಿಲ್ದಾಣದ ಆಸುಪಾಸಿನ ಸ್ಲಮ್ಮಿಗರು- ಅದೇನೊ ರೈಲುನಿಲ್ದಾಣಗಳಿಗೂ ಸ್ಲಮ್ಮಿಗರಿಗೂ ಜನ್ಮಾಂತರದ ಸಂಬಂಧ-ದಂಡುಕಟ್ಟಿ ನಿಂತಿದ್ದರು. ನವಾಬರ ಊರಲ್ಲಿ ಎಷ್ಟೊಂದು ಬಡವರು! ಸೋಜಿಗವಾಗುತ್ತಿತ್ತು. ಈ ಬಡವರೊ ಮೆರವಣಿಗೆ ನೋಡಲು ಮೇಲೆಬಿದ್ದು ಸಂಭ್ರಮಿಸುತ್ತಿದ್ದರು. ಚಳಿತಡೆಯಲು ಕಾಲಿಗೆ ಕಾಲುಚೀಲ ಹಾಕಿದ್ದ ಹೆಂಗಸರು ತಮ್ಮ ಮರಿಗಳನ್ನು ಹೆಗಲಿಗೇರಿಸಿ ಮೆರವಣಿಗೆ ತೋರಿಸುತ್ತಿದ್ದರು. ಅವರ ಜತೆ ನಿಂತು ಮೆರವಣಿಗೆಗೆ ನಾವೂ ಕಡ್ಡಾಯ ಪ್ರೇಕ್ಷಕರಾದೆವು.
ಮೆರವಣಿಗೆ ಮುಗಿದ ಬಳಿಕ, ರಿಕ್ಷಾಕ್ಕೆ ದಾರಿ ಸಿಕ್ಕಿತು. ಹೋಟೆಲ್ ಬಳಿ ಇಳಿದು ಹಣಕೊಡಲು ಹೋದರೆ, ನಸರುಲ್ಲಾ “ಸಾಹೆಬ್, ಲಖನೊ ನೋಡಲು ಬಂದಿದ್ದೀರಿ. ಊರಿನ ಮೂಲೆಮೂಲೆಯನ್ನ ಚೆನ್ನಾಗಿ ಬಲ್ಲೆ. ನಿಮಗೆ ಸುತ್ತಾಡಿಸಿ ತೋರಿಸುವೆ. ತೋಚಿದಷ್ಟು ಕೊಡಿ’ ಎಂದು ಹೇಳಿದ. ಆತನ ಮಾತು ಆಕರ್ಷಕವಾಗಿತ್ತು. ಆಗಲಿ ಎಂದು ಒಪ್ಪಿದೆವು. ನಂತರ ಗೊತ್ತಾಗಿದ್ದು ಅವನೂ ಒಬ್ಬ ಕವಿಯೆಂದು. ನಸರುಲ್ಲಾ ಅನೇಕ ಮುಶಾಯಿರಗಳಲ್ಲಿ ಭಾಗವಹಿಸಿದ್ದನು; ತನ್ನ ಸರಳವಾದ ರಚನೆಗಳನ್ನು ದನಿ ಅಷ್ಟೊಂದು ಇಂಪಾಗಿರದಿದ್ದರೂ ಸ್ವತಃ ಹಾಡುತ್ತಿದ್ದನು. ಮಾತುಮಾತಿಗೂ ಪ್ರಸಿದ್ಧ ಕವಿಗಳ ಸಾಲನ್ನು ಉಲ್ಲೇಖಿಸುತ್ತಿದ್ದನು. ನಾವಿದ್ದಷ್ಟು ದಿನ ನಮ್ಮ ಕಣ್ಣಜತೆ ಅವನ ಕಣ್ಣು ಸೇರಿಸಿ ಲಖನೊ ನೋಡಿದೆವು.
ಲಖನೊ ಹೆಸರಿಗೆ ನವಾಬರ ನಗರವಾದರೂ ಅದರ ತುಂಬ ಬ್ರಿಟಿಶರ ಛಾಪುಗಳಿವೆ. ಇದಕ್ಕೆ ಕಾರಣ, ನವಾಬರಿಗೂ ಬ್ರಿಟೀಶರಿಗೂ ಏರ್ಪಟ್ಟಿದ್ದ ಗೆಳೆತನ. ಪಶ್ಚಿಮದ ಸಂಸ್ಕೃತಿ ಜನಸಮುದಾಯದ ಮಟ್ಟದಲ್ಲಿ ಒಂದು ತರಹ ಪ್ರಭಾವ ಬೀರಿದ್ದರೆ, ಬ್ರಿಟಿಶ್ ಜೀವನ ಶೈಲಿಯ ಸೆಳೆತವಿದ್ದ ಐಷರಾಮಿ ದೊರೆಗಳ ಮಟ್ಟದಲ್ಲಿ ಇನ್ನೊಂದು ತರಹ ಕೊಡುಕೊಳೆ ನಡೆಸಿತ್ತು. ಈ ಕೊಡುಕೊಳೆತ ಆಟವನ್ನು ಬ್ರಿಟಿಶರ ಸಖ್ಯದಲ್ಲಿದ್ದ ಹೈದರಾಬಾದು, ಮೈಸೂರು, ಬರೋಡೆಯ ಸಂಸ್ಥಾನಗಳಲ್ಲೂ ಕಾಣಬಹುದು. ಮೈಸೂರ ಅರಮನೆ, ಮುಂಬೈನ ತಾಜ್ ಹೋಟೆಲು, ನವಾಬರ ಮಹಲು-ಇವು ದೇಶೀ, ಇಸ್ಲಾಮಿಕ್ ಮತ್ತು ಐರೋಪ್ಯ ವಾಸ್ತುಸಂಕರಕ್ಕೆ ಒಳ್ಳೆಯ ನಿದರ್ಶನಗಳು. ಲಖನೊದ ನವಾಬರು ಬ್ರಿಟಿಶ್ ವಾಸ್ತುಶಿಲ್ಪಿಯೊಬ್ಬನ ದೇಖರೇಖಿಯಲ್ಲಿ ಒಂದು ದೊಡ್ಡ ಗಡಿಯಾರ ಕಂಬವನ್ನು ಖುದ್ದು ನಿಂತು ಕಟ್ಟಿಸಿ, ಅದರ ಮೇಲೆ ಖುರಾನಿನ ಶ್ಲೋಕಗಳನ್ನು ಬಿಡಿಸಿದರು. ಕಂಪನಿ ಸರ್ಕಾರಕ್ಕೆ ಮೊಣಕಾಲೂರಿದ್ದ ಅವರು, ಆಂಗ್ಲರು ತಮ್ಮ ವಸತಿ ಮತ್ತು ಸೈನ್ಯಕ್ಕಾಗಿ, ನಗರ ಮಧ್ಯದಲ್ಲಿ, ಸಕಲ ಸವಲತ್ತಿರುವ ರೆಸಿಡೆನ್ಸಿಯನ್ನು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದರು.
ವಿಚಿತ್ರವೆಂದರೆ, ಬ್ರಿಟಿಶರ ವಿರೋಧ ಕಟ್ಟಿಕೊಂಡು ಟಿಪ್ಪು ಮುಂತಾದವರು ಮಾತ್ರ ನಾಶವಾಗಲಿಲ್ಲ, ಅವರ ಗೆಳೆತನ ಮಾಡಿದವರೂ ಕೆಟ್ಟರು. ನವಾಬರ ಮತ್ತು ಆಂಗ್ಲರ ಮೈತ್ರಿಗೆ ಬಲವಾದ ಹೊಡೆತ ೧೮೫೭ರಲ್ಲಿ ಬಿದ್ದಿತು. ಕಾರಣ, ಹಿಂದೂಸ್ಥಾನದ ಬಹುತೇಕ ಸಂಸ್ಥಾನಗಳೆಲ್ಲ ಬ್ರಿಟಿಶರ ವಿರುದ್ಧ ದಂಗೆಯೆದ್ದಿದ್ದವು. ಆಗ ಭಾರತೀಯ ಬ್ರಿಟಿಶ್ ಸೈನಿಕರು ಲಖನೊದ ರೆಸಿಡೆನ್ಸಿಗೆ ಮುತ್ತಿಗೆ ಹಾಕಿ, ಬಿಳಿಯರ ಮಕ್ಕಳು ಮರಿ ಹೆಂಗಸರಾದಿಯಾಗಿ ಕೊಚ್ಚಿಹಾಕಿದರು. ಇದೊಂದು ತರಹದ ಕರ್ಬಲಾ ಯುದ್ಧದ ಹಾಗೆ ನಡೆಯಿತು. ಬ್ರಿಟಿಶರು ಇದಕ್ಕೆ ಪ್ರತಿಕಾರವಾಗಿ ದೆಹಲಿ, ಲಖನೊ, ಕಾನ್ಪುರಗಳಲ್ಲಿ ಜನರನ್ನು ಬೇಟೆಯಾಡಿದರು. ಅಂದಿನಿಂದ ರೆಸಿಡೆನ್ಸಿ ಭೀಕರ ನೆನಪುಗಳಿಂದ ಕೂಡಿರುವ ಜಾಗವಾಯಿತು.
ನಾವು ಮೊದಲ ದಿನವೇ ರೆಸಿಡೆನ್ಸಿಯನ್ನು ನೋಡಲು ಹೋದೆವು. ರೆಸಿಡೆನ್ಸಿಯು ಒಂದು ಇಂಗ್ಲೆಂಡಿನಿಂದ ಕಿತ್ತುತಂದಿಟ್ಟ ದ್ವೀಪದಂತಿದೆ. ಭಗ್ನಗೊಂಡ ಕಟ್ಟಡಗಳನ್ನು ಚೊಕ್ಕಮಾಡಿ, ಪ್ರವಾಸಿ ತಾಣವಾಗಿಸಿದ್ದಾರೆ. ಒಂದೂವರೆ ಶತಮಾನವಾದರೂ ದಂಗೆಯ ಗಾಯಗಳನ್ನು ನೆನಪಿಸುವಂತೆ ರೆಸಿಡೆನ್ಸಿ ಕಟ್ಟಡಗಳ ತುಂಬ ತೋಪು-ಗುಂಡಿನ ಗುರುತುಗಳಿವೆ. ಯಾವ್ಯಾವ ಜಾಗದಲ್ಲಿ ಯಾರೆಲ್ಲ ಬ್ರಿಟಿಶರು ಹತರಾದರು, ಊಟನೀರಿಲ್ಲದೆ ಅವರು ಹೇಗೆ ನರಳಿದರು ಎಂದು ದುಗುಡ ಉಕ್ಕುವಂತೆ ಸಂಗಮರಮರಿ ಕಲ್ಲಿನಲ್ಲಿ ಕತೆಕೆತ್ತಿ ಸ್ಮಾರಕಗಳನ್ನು ನಿಲ್ಲಿಸಲಾಗಿದೆ. ಹಾಗೆ ಕಂಡರೆ ಆ ದಂಗೆಯಲ್ಲಿ ಸತ್ತ ಬ್ರಿಟಿಶರ ಸಂಖ್ಯೆ ಕಡಿಮೆ. ಅವರ ಊಳಿಗ ಮತ್ತು ರಕ್ಷಣೆಗೆಂದಿದ್ದ ದೇಶೀಯ ಸೈನಿಕರು ಸೇವಕರು ಸತ್ತದ್ದು ಸಹಸ್ರಾರು. ಯುದ್ಧಸಂಸ್ಕೃತಿಯಲ್ಲಿ ದೊಡ್ಡವರ ಜೀವಕ್ಕಿರುವ ಬೆಲೆ ಸೈನಿಕರಿಗಿರುವುದಿಲ್ಲ. ಆದರೂ ಬಿಳಿಯರ ಜೀವವುಳಿಸುತ್ತ ಜೀವಕಳೆದುಕೊಂಡವರೆಲ್ಲರ ಸಾವನ್ನು ಒಂದುಕಡೆ ಸಂಖ್ಯೆಯಲ್ಲಿ ಸೂಚಿಸಿ ಸಂತಾಪಿಸಲಾಗಿದೆ. ಇದೊಂದು ದೊಡ್ಡ ವೈರುಧ್ಯ. ಜನ ತಮ್ಮ ನಾಡನ್ನು ಆಕ್ರಮಿಸಿಕೊಂಡವರ ಪರವಾಗಿ ನಿಂತು, ತಮ್ಮವರ ವಿರುದ್ಧವೇ ಯುದ್ಧ ಮಾಡಿ ಸತ್ತರು. ಈ ವೈರುಧ್ಯ ದೆಹಲಿಯ ಇಂಡಿಯಾ ಗೇಟಿನಲ್ಲೂ ಇದೆ. ಅದರ ತುಂಬ ಕೆತ್ತಿರುವ ಸೈನಿಕರ ಹೆಸರುಗಳು ಬ್ರಿಟಿಶರು ಭೂಗೋಳದ ಮೇಲೆಲ್ಲ ಮಾಡಿದ ವಸಾಹತುಶಾಹಿ ಕದನಗಳಲ್ಲಿ ಜೀವಬಿಟ್ಟ ಭಾರತೀಯ ಸೈನಿಕರವು. ಅವುಗಳಲ್ಲಿ ಮೈಸೂರ ಒಡೆಯರು ಕಳಿಸಿಕೊಟ್ಟ ಕನ್ನಡಿಗ ಸೈನಿಕರ ಹೆಸರುಗಳೂ ಇವೆ. ಇವೊಂದು ತರಹ ಸ್ವಹತ್ಯೆಯ ಸ್ಮಾರಕಗಳೇನು ಎಂದು ನನಗೆ ಕಾಡುತ್ತದೆ.
ಅವಧ ಎಂದರೆ ವಧೆಯಾಗದ ನಾಡೆಂದು ಅರ್ಥವಂತೆ. ಆದರೆ ಈ ಅವಧ ನಾಡಲ್ಲಿ ನಡೆದ ಅವ್ಯಾಹತ ವಧೆಗಳು ಮನುಷ್ಯ ನೆತ್ತರನ್ನು ನೆಲಕ್ಕೆ ಮೂಗುಹಿಡಿದು ಕುಡಿಸಿದವು. ಅಯೋಧ್ಯೆಯು ಇದೇ ಅವಧದಲ್ಲಿ ಬರುತ್ತದೆ. ಅಯೋಧ್ಯೆಯೆಂದರೂ ಯುದ್ಧವಿಲ್ಲದ ಜಾಗವೆಂದರ್ಥ. ಲಖನೊದಲ್ಲಿ ೧೮೫೭ರಲ್ಲಿ ರಾಜಕೀಯ ರಕ್ತಪಾತವು ನಡೆದರೆ, ಧಾರ್ಮಿಕವಾಗಿ ಪ್ರತಿವರ್ಷ ರಕ್ತಪಾತ ಆಗುತ್ತದೆ. ಅದು ಕರ್ಬಲ ಯುದ್ಧವೀರರಾದ ಹುಸೇನ್ ಮತ್ತವರ ಪರಿವಾರದ ನೆನಪಲ್ಲಿ ಆಚರಿಸುವ ಮೊಹರಂ ಶೋಕಾಚರಣೆಯಲ್ಲಿ ಆಗುತ್ತದೆ. ತರುಣರು ಹರಿತವಾದ ಆಯುಧಗಳಿಂದ ತಮ್ಮ ಮೈಮೇಲೆ ಹೊಡೆದುಕೊಳ್ಳುತ್ತಾರೆ. ತಾಜಿಯಾ ಮೆರವಣಿಗೆ ಹೋಗುವ ರಸ್ತೆಗೆ ರಸ್ತೆಯೇ ರಕ್ತದಿಂದ ಕೆಂಪಾಗುತ್ತದೆ. ಲಖನೊ ತುಂಬ ಮೊಹರಂ ಸ್ಮಾರಕಗಳಿವೆ. ಇದಕ್ಕೆ ಒಂದು ಕಾರಣ, ಲಖನೊದ ನವಾಬರು ಸ್ವತಃ ಶಿಯಾಗಳಾಗಿದ್ದುದು. ಊರಲ್ಲಿರುವ ದೊಡ್ಡದೊಡ್ಡ ಕಮಾನುಗಳ ಮೇಲೆ ಕಪ್ಪುಧ್ವಜ ಹಾರಾಡುತ್ತಿರುತ್ತವೆ. ಇಳಿಬಿಟ್ಟ ಕಪ್ಪುಪರದೆಗಳ ಮೇಲೆ ಕವಿಗಳು ಶೋಕಗೀತೆ ಬರೆದು ತೂಗುಹಾಕಿರುತ್ತಾರೆ. ಜನ ಕೃಷ್ಣವಸನಧಾರಿಗಳಾಗಿ ಅಡ್ಡಾಡುತ್ತಿರುತ್ತಾರೆ. ಅರಬಸ್ಥಾನದಲ್ಲಿ ನಡೆದ ವಧೆಯ ನೆನಪುಗಳು ಒಂದು ಸಂಸ್ಕೃತಿಯನ್ನೇ ಹುಟ್ಟುಹಾಕಿವೆ.
ಈ ಸಂಸ್ಕೃತಿಯ ದೊಡ್ಡ ಕುರುಹುಗಳೆಂದರೆ, ಲಖನೊದ ಎರಡು ಇಮಾಂಬಾಡಗಳು. ಇಲ್ಲಿ ಮೊಹರಂ ಪಂಜೆಗಳನ್ನು ಇಡಲಾಗುತ್ತದೆ. ಮಣ್ಣಿನ ಬಣ್ಣದ ಭವ್ಯಕಟ್ಟಡ ಬಡಾ ಇಮಾಂಬಾಡವನ್ನು ನವಾಬ್ ಆಸಿಫುದೌಲನು (೧೭೮೪) ಕಟ್ಟಿಸಿದನು. ದೇಶಕ್ಕೆ ಬರ ಬಿದ್ದಾಗ ಜನರಿಗೆ ಉದ್ಯೋಗ ಕೊಡುವ ನೆಪದಲ್ಲಿ ಇದನ್ನು ಕಟ್ಟಿಸಿದನಂತೆ. ಇದರೊಳಗೆ ಪೈಗಂಬರರ ಅಳಿಯಂದಿರಾದ ಅಲಿ, ಮೊಮ್ಮಕ್ಕಳಾದ ಹಸೇನ್ ಹುಸೇನರ ತೋರು ಸ್ಮಾರಕಗಳಿವೆ. ಇದರ ವಿಶೇಷತೆಯೆಂದರೆ, ಮಾಳಿಗೆಯ ಮೇಲೆ ಭುಲಭುಲಾಯ. ಇದು ಒಂದೇ ನಮೂನೆಯ ೪೭೦ ಬಾಗಿಲುಗಳುಳ್ಳ ಉಪ್ಪರಿಗೆಯ ಸುರಂಗ. ಅದರಲ್ಲಿ ಹೊಕ್ಕರೆ ದಿಕ್ಕೆಟ್ಟುಹೊಗುತ್ತದೆ. ಜೀವಮಾನವಿಡೀ ಸುತ್ತಿದರೂ ಕೆಳಗಿಳಿಯುವ ದಾರಿ ಸಿಗುವುದಿಲ್ಲವೇನೊ ಎಂದು ಗಾಬರಿ ಆಗುತ್ತದೆ. ಇದರ ಸದುಪಯೋಗವನ್ನು ಪ್ರೇಮಿಗಳು ಪಡೆಯಬಾರದು ಎಂದು ಕಡ್ಡಾಯವಾಗಿ ಒಬ್ಬೊಬ್ಬ ಮಾರ್ಗದರ್ಶಕ (ಸ್ತ್ರೀಶೀಲರಕ್ಷಕ?)ನನ್ನು ಕಳಿಸುವ ವ್ಯವಸ್ಥೆಯಿದೆ. ನಾವು ದಂಪತಿಗಳು, ಲಗ್ನವಾಗಿ ಎರಡು ದಶಕ ಎಂದು ಹೇಳಿದರೂ ಕೇಳದೆ ಮಾರ್ಗದರ್ಶಿಯಿಲ್ಲದೆ ಅನುಮತಿಯಿಲ್ಲವೆಂದು ಖಡಕ್ಕಾಗಿ ಹೇಳಿದರು. ಈ ಏಕಾಂತಭಂಗ ಕಾರ್ಯಕ್ರಮಕ್ಕೆ ದುಬಾರಿ ತಿಕೀಟು ಬೇರೆ. ನಾವಿಬ್ಬರೂ ನಿರ್ವಾಹವಿಲ್ಲದೆ ಸಭ್ಯರಂತೆ ಕಟ್ಟಡದ ಸೌಂದರ್ಯವನ್ನಷ್ಟೆ ಸವಿದು ಕೆಳಗಿಳಿದು ಬಂದೆವು. ಆಮೇಲೆ ಗೊತ್ತಾಯಿತು- ಮಾರ್ಗದರ್ಶಿ ಹಿಂಬಾಲಿಸದೆ ಇರಲು ಕೂಡ ಬೇರೆ ವ್ಯವಸ್ಥೆ ಇತ್ತೆಂದು.
ಇಲ್ಲಿಗೆ ಸಮೀಪದಲ್ಲಿ ಛೋಟಾ ಇಮಾಂಬಾಡಾ ಕೂಡ ಇದೆ. ಅದು ಮದುವಣಗಿತ್ತಿ ತರಹ ಸಿಂಗಾರಗೊಂಡಿದೆ. ಗೋಡೆಗಳಿಗೆ ಕನ್ನಡಿ ಹರಳು. ಚಿನ್ನದ ಗುಂಬಜ. ಬೆಲ್ಜಿಯಂ ದೇಶದಿಂದ ತರಿಸಿದ ಮೇಣಬತ್ತಿಯ ದೀಪಾಲೆಯ ಬೆಳ್ಳಿಕಂಬಗಳು. ಪರ್ಶಿಯಾದ ಶಿಯಾ ಸಂಸ್ಕೃತಿಯು ಯೂರೋಪಿನ ಕಲೆ ಸಂಸ್ಕೃತಿಗಳ ಜತೆ ಮಾಡಿರುವ ಈ ಮಿಲನ ವಿಶಿಷ್ಟವಾಗಿದೆ. ಇದನ್ನು ಪಶ್ಚಿಮದ ಮಹಾ ಆರಾಧಕರಾಗಿದ್ದ ಹೈದರಾಬಾದಿನ ನವಾಬರಲ್ಲೂ ಕಾಣಬಹುದು. ಸಾಲಾರ್‌ಜಂಗ್ ಮ್ಯೂಸಿಯಂ ಇದರ ಸಂಕೇತ. ಹೈದರಾಬಾದ್ ನವಾಬರೂ ಶಿಯಾಗಳೇ. ಮುಸ್ಲಿಮರಲ್ಲಿ ಸುನ್ನಿಗಳಿಗೆ ಹೋಲಿಸಿದರೆ ಶಿಯಾಗಳು ಹೆಚ್ವು ತೆರೆದ ಮನಸ್ಸಿನವರು. ಎಂತಲೇ ಶತಮಾನಗಳ ಕಾಲ ಜ್ಞಾನದ ವಿಷಯದಲ್ಲಿ ಪಶ್ಚಿಮದ ಜತೆ ಪರ್ಶಿಯಾ ಕೊಡುಕೊಳ್ಳು ಮಾಡಿತು. ಆದರೀಗ ಅದು ಪಶ್ಚಿಮ ದೇಶಗಳ ಕಣ್ಪಹರೆಗೆ ಸಿಕ್ಕಿದೆ. ಮತ್ತೊಂದು ಕರ್ಬಲಾ ಯಾವಾಗ ಕಾದಿದೆಯೊ ಎಂದು ಅನಿಸುತ್ತದೆ.
ಲಖನೊ ನೆಲ ನವಾಬರ ಆಳ್ವಿಕೆ ಕಂಡಿದೆ; ಕಂಪನಿ ಸರ್ಕಾರ ನೋಡಿದೆ. ರಾಣಿ ಸರ್ಕಾರವನ್ನು ಅನುಭವಿಸಿದೆ. ನಂತರ ಕಾಂಗ್ರೆಸ್ಸಿನವರು ಬಂದರು. ಮಂಡಲವನ್ನು ಇಟ್ಟುಕೊಂಡು ಮುಲಾಯಂ ಬಂದರು. ಅಯೋಧ್ಯೆಯನ್ನು ಇಟ್ಟುಕೊಂಡು ಕಮಲದವರು ಬಂದರು. ಸದ್ಯ ದಲಿತೋಂಕಿ ಬೇಟಿ ಗದ್ದುಗೆ ಏರಿದ್ದಾಳೆ. ಮಾಯಾವತಿ ಸ್ಥಾಪಿಸುತ್ತಿರುವ ಧ್ಯಾನಿಬುದ್ಧನ ಪ್ರತಿಮೆಗಳಿಂದ ಲಖನೊ ತುಂಬಿಕೊಳ್ಳುತ್ತಿದೆ. ಕವಿ ಅಟಲಬಿಹಾರಿ ವಾಜಪೇಯಿ ಸದ್ಯದ ಲಖನೊದ ಸಂಸದರು. ಮುಂದೆ ಇನ್ಯಾವ ಪಲ್ಲಟವೊ ಗೋಮತಿಯೆ ಬಲ್ಲಳು.
ಹ್ಞಾಂ! ಲಖನೊ ನಗರದ ಎದೆಯನ್ನು ಸೀಳಿಕೊಂಡು ಹರಿಯುವ ಗೋಮತಿಗೆ ತನ್ನ ಪಾತ್ರ ಬದಲಿಸುವ ವಿಚಿತ್ರ ಹವ್ಯಾಸವಿದೆ. ಅದು ಕೆಲವೊಮ್ಮೆ ಉಕ್ಕಿ ಅರಮನೆಗಳನ್ನು ಮುಳುಗಿಸಿರುವುದೂ ಉಂಟು. ಅರಮನೆಗಳ ಗೋಡೆಗಳಲ್ಲಿ ಗುರುತು ಹಾಕಿ ಇಂತಿಂಥ ಇಸವಿಯಲ್ಲಿ ನದಿ ಇಂತಿಂಥ ಮಟ್ಟಕ್ಕೆ ನೆರೆ ಬಂದಿತ್ತು ಎಂದು ತೋರಿಸುತ್ತಾರೆ. ಇದಕ್ಕೆ ಪೂರಕವಾಗಿ ನವಾಬರ ರಾಜಚಿಹ್ನೆ ಜೋಡಿಮೀನು. ಲಖನೊದ ತುಂಬ ಇರುವ ಕಮಾನುದ್ವಾರಗಳಲ್ಲಿ, ಇಮಾರತುಗಳ ದ್ವಾರಬಂಧಗಳಲ್ಲಿ ಮುಖಾಮುಖಿಗೊಂಡ ಜೋಡಿಮೀನುಗಳು ಸ್ವಾಗತಿಸುತ್ತವೆ. ಈ ಜೋಡಿಮೀನು ಗೋಮತಿ ನದಿಯಿಂದ ನೆರೆಬಂದ ಕಾಲಕ್ಕೆ ಹತ್ತಿ ಗೋಡೆಗಳ ಮೇಲೆ ಸ್ಥಾಪನೆಯಾದವೇನೊ ಅನಿಸುತ್ತದೆ. ಈ ರಾಜಚಿಹ್ನೆ ಲಖನೊದ ಮಾರುಕಟ್ಟೆ ತುಂಬ ತುಂಬಿಕೊಂಡಿತ್ತು. ಮೀನು ಮಾರುಗರು ಹೆದರಿಕೆ ಹುಟ್ಟಿಸುವಂತಹ ಮೀಟುಗತ್ತಿಗಳನ್ನು ಮೆಟ್ಟಿಕೊಂಡು ಮೀನನ್ನು ಸೀಳಿ ಸ್ವಚ್ಛಮಾಡಿ ಕೊಡುತ್ತಿದ್ದರು.
ಲಖನೊ ಎಲ್ಲ ವಿಲಾಸಪ್ರಿಯ ರಾಜನಗರಿಗಳ ಹಾಗೆ ವಣಿಕಬೀದಿಗಳಿಂದ ಕೂಡಿದೆ. ಅಮೀನಾಬಾದ್, ಚೌಕ, ಹಜರತಗಂಜ್ ಮಾರುಕಟ್ಟೆಗಳು, ಉಪ್ಪಿನಕಾಯಿ, ಕೈಗೆಲಸದ ಚಿಕನಿ ಬಟ್ಟೆ, ಮಾಂಸದ ಅಡುಗೆಗಳು, ಅತ್ತರುಗಳಿಗೆ ಅದು ಹೆಸರಾಗಿದೆ. ನವಾಬಿ ಸಂಸ್ಕೃತಿಯ ತಿನಿಸುಗಳಾದ ಧಮ್‌ಪುಖ್ತ, ಗಲೌಟಿ ಕಬಾಬ್, ಧಂಬಿರಿಯಾನಿ, ರಹೀಂಕುಲ್ಚ, ಶಾಹಿತುಕ್ಡ ಮತ್ತು ಆಫಘನಿ ಪರೋಟ- ಇಲ್ಲಿ ಸಿಗುತ್ತವೆ. ಅನೇಕ ಹೋಟೆಲುಗಳು ನವಾಬರ ಅರಮನೆಯ ಬಾಣಸಿಗರ ಹೆಸರಲ್ಲಿ ಸ್ಥಾಪನೆಯಾಗಿ ಚರಿತ್ರೆಯ ಮುಕುಟ ಧರಿಸಿವೆ. ಬೇರೆಬೇರೆ ತಿಂಡಿಗಳಿಗೆ ಬೇರೆಬೇರೆ ಬಾಣಸಿಗರ ಪರಂಪರೆಯಿದೆ. ನಾವು ನವಾಬರಿಗೆ ಕಬಾಬ್ ತಯಾರಿಸುತ್ತಿದ್ದ ತುಂಡೆ ಎಂಬುವನ ವಂಶಜರು ನಡೆಸುವ ಹೋಟೆಲನ್ನು ಹುಡುಕಿಕೊಂಡು ಹೋದೆವು. ಮಾಂಸವನ್ನು ಮಸಾಲೆ ಜತೆ ನುಣ್ಣಗೆ ಅರೆದು, ಆಂಬೊಡೆಯಂತೆ ಮಾಡಿ, ಕಾದ ಹೆಂಚಿನ ಮೇಲೆ ನಸುಗೆಂಪಗೆ ಹುರಿದುಕೊಡುತ್ತಾರೆ. ಆದರೆ ತುಂಡೆ ಕಬಾಬ್ ತನ್ನ ಕೀರ್ತಿಯಷ್ಟು ರುಚಿಕರವಾಗಿರಲಿಲ್ಲ. ನಮಗೆ ನಿಜವಾಗಿಯೂ ಇಷ್ಟವಾಗಿದ್ದು ಈ ಯಾವ ಚಾರಿತ್ರಿಕ ಹೆಗ್ಗಳಿಕೆಯಿಲ್ಲದೆ ಚಿಕನ್ ಕಬಾಬ್, ಮಟನ್ ಚಾಪ್ ಮಾಡುವ ಬೀದಿಬದಿಯ ಡಬ್ಬಾ ಹೋಟೆಲುಗಳದ್ದು.
ಲಖನೊನಲ್ಲಿ ಗಲ್ಲಿಗೊಂದರಂತೆ ಮಂಜಿಲ್(ಅರಮನೆ)ಗಳಿವೆ. ಅತಿವೈಭವದ ಅರಮನೆ ಖೈಸರ್‌ಬಾಗನ್ನು ಕೊನೇ ನವಾಬ ವಾಜಿದಲಿ ಶಾ ಕಟ್ಟಿಸಿದನು. ಇಲ್ಲಿಂದ ಬ್ರಿಟಿಶರು ಅನೇಕ ಅಮೂಲ್ಯ ವಸ್ತುಗಳನ್ನಲ್ಲ ಕದ್ದು ಲಂಡನ್ನಿಗೆ ಸಾಗಿಸಿದರು ಎಂದು ನಮ್ಮ ಕವಿ-ಮಾರ್ಗದರ್ಶಿ ಹೇಳಿದ. ಗುಮ್ಮಟ ಕಳಸ ಮಿನಾರುಗಳನ್ನು ಕಂಡು ಯಾವುದೋ ಅರಮನೆಯೆಂದು ಎಂದು ಹೊಕ್ಕರೆ, ಅದೊಂದು ಸರ್ಕಾರಿ ಕಛೇರಿಯೊ, ಹೋಟೆಲೂ, ಮ್ಯೂಸಿಯಮ್ಮೊ, ಸಂಗೀತ ಕಾಲೇಜೊ ಆಗಿದೆ. ಛತ್ತರ್ ಮಂಜಿಲ್ ಔಷಧಿ ಸಂಶೋಧನ ಸಂಸ್ಥೆಯಾಗಿದೆ. ನವಾಬರ ಖಾಸಾ ಉದ್ಯಾನ ಸಸ್ಯ ಸಂಶೋಧನ ಸಂಸ್ಥೆಯಾಗಿದೆ. ಅರಮನೆಗಳಿಗೆ ಬಂದಿರುವ ಈ ಸಾರ್ವಜನಿಕ ರೂಪಾಂತರವನ್ನು ಜನಸತ್ತೆಯ ವಿಜಯವೆನ್ನಬಹುದೇ? ಹೇಳುವುದು ಕಷ್ಟ. ಇವುಗಳಲ್ಲಿ ಹೊಸದೊರೆಗಳು ಆಸೀನರಾಗಿದ್ದಾರೆ. ಅವರ ಬಗ್ಗೆ ತಿಳಿಯಲು ನಾನು ಅನೇಕ ರಿಕ್ಷಾವಾಲಾಗಳ ಜತೆ ಚರ್ಚಿಸಿದೆ. ಮುಸ್ಲಿಮರು, ಹಿಂದುಳಿದ ಜಾತಿಗೆ ಸೇರಿದವರು ಮುಲಾಯಂಸಿಂಗರ ಆಳ್ವಿಕೆಯನ್ನು ಮೆಚ್ಚಿ ಮಾತಾಡಿದರು; ದಲಿತರು ಮಾಯಾವತಿಯನ್ನು ಹೊಗಳಿದರು. ಮಾಯಾವತಿ ಬಂದಬಳಿಕ ಅಲ್ಲಿನ ದಲಿತರಲ್ಲಿ ಒಂದು ಬಗೆಯ ಆತ್ಮವಿಶ್ವಾಸ ಬಂದಂತಿದೆ. ಆದರೆ ಇದರಿಂದ ವೈಯಕ್ತಿಕವಾಗಿ ನಿಮಗೇನು ಫಾಯದೆಯಾಗಿದೆ ಎಂದರೆ, ಅವರಲ್ಲಿ ಸ್ಪಷ್ಟ ಉತ್ತರವಿರಲಿಲ್ಲ.
ನಮಗೆ ನವಾಬರನ್ನು ನೋಡುವ ಹುಕಿಯೇನೂ ಇರಲಿಲ್ಲ. ಆದರೆ ಸುಮ್ಮನೆ ಅವರು ಹೇಗೆ ಬದುಕುತ್ತಿದ್ದಾರೆ ಎಂದು ಕವಿಗೆ ಕೇಳಿದೆ. ಅವರೂ ನಮ್ಮಂತೆ ಎಂದನವನು. ಅವರ ಬದುಕಿನ ಝಲಕು ಅವರು ಕಟ್ಟಿಸಿದ ಸ್ಮಾರಕಗಳಲ್ಲಿ ನೋಡುವುದಾದರೆ: ಹುಸೇನಾಬಾದ್ ಸ್ಥಂಬದ ಗಡಿಯಾರ ಕೆಟ್ಟುನಿಂತಿದೆ. ಅರಮನೆಗಳ ಗೇಟುಗಳಲ್ಲಿ ಎರಡೂ ಕಡೆಯಿಂದ ರಾಜಚಿಹ್ನೆ ಹಿಡಿದು ಎಗರಿ ನಿಂತಿರುವ ಸಿಂಹಗಳು ದಣಿದಂತೆ ಕಾಣುತ್ತಿವೆ. ರಾಣಿಯರಿಗೆ ಕಟ್ಟಸಿದ ಸುಂದರ ಸಮಾಧಿಕಟ್ಟಡಗಳಲ್ಲಿ ಅಡನಾಡಿ ಸೋಮಾರಿಗಳು ಮಲಗಿಕೊಂಡಿದ್ದಾರೆ. ಕೆಲವು ಸುಂದರ ಕಟ್ಟಡಗಳು ಕಸದ ತೊಟ್ಟಿಗಳಾಗಿ ಅಲ್ಲಿ ಕತ್ತೆಗಳು ಮೇಯುತ್ತಿವೆ. ಚರಿತ್ರೆಯ ಈ ಎಲ್ಲ ನಾಟಕೀಯ ಅದಲು ಬದಲನ್ನು ಕಂಡೂ ಕಾಣದಂತೆ ನಿರ್ಲಿಪ್ತತೆಯಲ್ಲಿ ಗೋಮತಿ ಹರಿಯುತ್ತಿದ್ದಾಳೆ. ಇಷ್ಟೇ, ಊರೊಳಗೆ ಹರಿಯುವ ತಪ್ಪಿಗಾಗಿ ಕಪ್ಪಾಗಿ ನಾರುತ್ತ ಹರಿಯುತ್ತಿದ್ದಾಳೆ. ಹೈದರಾಬಾದಿನ ಕೋಸಿಯದೂ ದಿಲ್ಲಿಯ ಯಮುನೆಯದೂ ಇದೇ ಅವಸ್ಥೆ ತಾನೇ? ಆದರೇನಂತೆ ಜನ ಗೋಮತಿ ತಟದ ಹುಲ್ಲುಹಾಸಿನಲ್ಲಿ ಗಾಳಿಪಟದಾಟ ಆಡುತ್ತಿದ್ದರು. ನಾವು ಹೋದದಿನ ಲಖನೊ ಆಗಸದಲ್ಲಿ ನೂರಾರು ಗಾಳಿಪಟಗಳು!
ರಾಜನಗರಿಗಳು ಕೇವಲ ಬದುಕಿ ಕೆಟ್ಟಿಲ್ಲ; ಅವು ಕೆಟ್ಟು ಕೂಡ ಬದುಕುತ್ತಿವೆ.
[ಚಿತ್ರಗಳು: ಲೇಖಕರವು]
ಹೊಸ ತಲೆಮಾರಿನ ತೀಕ್ಷ್ಣ ಒಳನೋಟಗಳ ಲೇಖಕರು. ಸಂಸ್ಕೃತಿ ವಿಮರ್ಶೆ ಮತ್ತು ತಿರುಗಾಟ ಇವರ ಪ್ರೀತಿಯ ವಿಷಯಗಳು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ.