ಮಳೆ ಬೀಳದ ಊರಿನಲ್ಲಿ ಕೂಲಿ ನಾಲಿ ಕೆಲಸ ಸಿಗುವುದೂ ಅಷ್ಟರಲ್ಲೇ ಇತ್ತು, ಅಥವ ಇದೊಂದು ನೆಪವೇನೋ.. ಈ ಇಸ್ಪೀಟೆಲೆಗಳನ್ನು ನೀಟಾಗಿ ಯಾರಿಗೂ ಕಾಣದಂತೆ ಅಷ್ಟೇ ಕಲಾತ್ಮಕವಾಗಿ ಮಡಚಿ ಹಿಡಿಯುವುದು, ಮತ್ತೆ ಜೋಕರುಗಳು ಬಂದಾಗ ಒಳಗೊಳಗೇ ಖುಷಿಪಡುವುದು, ತಮಗೆ ಬೇಕಾದ ನಂಬರು ಸಿಗದಿದ್ದಾಗ ಆಕ್ರೋಶಗೊಂಡು ಪಟ್ ಅಂತ ಇಸ್ಪೀಟಿನೆಲೆ ನೆಲಕೆ ಬಡಿಯುವುದು… ಹಾಗೇ ಆಟದ ಮಧ್ಯ ಮಧ್ಯ ಬೀಡಿ ಅಂಟಿಸುವುದು…. ಇವರಲ್ಲೊಬ್ಬ ಬಂಟ ಇವರಿಗೆ ಚಾ ಚುರಮುರಿ ಬೀಡಿ ಎಣ್ಣೆ ತಂದುಕೊಡುವುದು.. ಹೀಗೆ ಆಡ್ತಾ ಆಡ್ತಾ ಯಾವುದೋ ಕ್ಷುಲ್ಲಕ ವಿಚಾರಕ್ಕೆ ಜಗಳ ಆಗಿ ತಲೆ ಒಡೆದುಕೊಂಡವರೂ ಇದ್ದರು. ಮತ್ತು ಇವರ ಹೆಂಡತಿಯರು ತಮ್ಮ ಗಂಡಂದಿರನ್ನ ಹುಡುಕಿಕೊಂಡು ಕೋಲು ಕಸಬರಿಗೆಗಳನ್ನು ತಂದು ಗಂಡನ ಕುಂಡೆ ಮೇಲೆ ಬಾರಿಸುತ್ತಾ ಹೋಗೋರು.
ಡಾ. ಲಕ್ಷ್ಮಣ ವಿ.ಎ. ಅಂಕಣ

 

ವಾರದಲ್ಲಿ ಮೂರುದಿನ ಮೂರು ಊರಿನ ಸಂತೆ ಸುತ್ತಿ, ಬೇಳೆ ಕಾಳು ವ್ಯಾಪಾರ ಮಾಡುತ್ತಿದ್ದ ಅಪ್ಪ ಉಳಿದ ದಿನಗಳಲ್ಲಿ ಇಸ್ಪೀಟಿನ ಅಡ್ಡೆಯಲ್ಲಿ ಖಾಯಂ ಆಗಿರುತ್ತಿದ್ದ. ಬಯಲು ಸೀಮೆಯ ಭೀಕರ ಬರಗಾಲದ ದಿನಗಳವು. ನಮ್ಮೂರಿನಿಂದ ಕೃಷ್ಣೆ ಕೇವಲ ಎರಡು ಮೂರು ಮೈಲಿಯ ಫಾಸಲೆಯಲ್ಲಿ ಹರಿಯುತ್ತಿದ್ದರೂ ನಮ್ಮೂರಿಗೆ ಮಳೆ ಬಂದರಷ್ಟೇ ಬೆಳೆ. ಬಿದ್ದಷ್ಟು ಮಳೆ ಎದ್ದಷ್ಟು ಬೆಳೆ… ಹೀಗಾಗಿ ಊರ ಮಂದಿ ಕೆಲಸ ಹುಡುಕಿ ಕೃಷ್ಣಾ ತಟದ ಹಳ್ಳಿಗಳ ನದೀ ಮುಖದಲ್ಲಿ ಬೆಳೆಯುವ ಕಬ್ಬು ಕಟಾವಿಗೋ ಕಳೆ ತೆಗೆಯಲೋ ಕೂಲಿ ಅರಸಿ ಹೊರಟವರು ಮತ್ತೆ ಊರು ಸೇರುವವರು ರಾತ್ರಿಯಾದ ಮೇಲೆಯೇ….

ಪ್ರತಿ ಊರಿನಲ್ಲಿ ಇರುವಂತೆ ನಮ್ಮೂರಿನಲ್ಲೂ ಸೋಂಭೇರಿಗಳ ಮೈಗಳ್ಳ ಗಂಡಸರ ಒಂದು ತಂಡ ಇಡೀ ಹಗಲು ರಾತ್ರಿ ಇಸ್ಪೀಟು ಎಲೆಗಳ ಮೇಲೆ ಪಂಚೇಂದ್ರಿಯ ಏಕತ್ರಗೊಳಿಸಿ ಯಾರ ಭಕ್ತಿಗೂ ಉಗ್ರ ತಪಸ್ಸಿಗೂ ಮಣಿಯದ ಪುಂಡ ವಿಗ್ರಹಗಳಂತೆ ದುಂಡಾಗಿ ಸ್ಥಾಪಿತವಾಗುವುದು ಮಾಮೂಲಿಯ ಸಂಗತಿಯಾಗಿತ್ತು. ಮತ್ತು ಮಳೆ ಬೀಳದ ಊರಿನಲ್ಲಿ ಕೂಲಿ ನಾಲಿ ಕೆಲಸ ಸಿಗುವುದೂ ಅಷ್ಟರಲ್ಲೇ ಇತ್ತು, ಅಥವ ಇದೊಂದು ನೆಪವೇನೋ ಈ ಇಸ್ಪೀಟೆಲೆಗಳನ್ನು ನೀಟಾಗಿ ಯಾರಿಗೂ ಕಾಣದಂತೆ ಅಷ್ಟೇ ಕಲಾತ್ಮಕವಾಗಿ ಮಡಚಿ ಹಿಡಿಯುವುದು, ಮತ್ತೆ ಜೋಕರುಗಳು ಬಂದಾಗ ಒಳಗೊಳಗೇ ಖುಷಿಪಡುವುದು, ತಮಗೆ ಬೇಕಾದ ನಂಬರು ಸಿಗದಿದ್ದಾಗ ಆಕ್ರೋಷಗೊಂಡು ಪಟ್ ಅಂತ ಇಸ್ಪೀಟಿನೆಲೆ ನೆಲಕೆ ಬಡಿಯುವುದು… ಹಾಗೇ ಆಟದ ಮಧ್ಯ ಮಧ್ಯ ಬೀಡಿ ಅಂಟಿಸುವುದು…. ಇವರಲ್ಲೊಬ್ಬ ಬಂಟ ಇವರಿಗೆ ಚಾ ಚುರಮುರಿ ಬೀಡಿ ಎಣ್ಣೆ ತಂದುಕೊಡುವುದು.. ಹೀಗೆ ಆಡ್ತಾ ಆಡ್ತಾ ಯಾವುದೋ ಕ್ಷುಲ್ಲಕ ವಿಚಾರಕ್ಕೆ ಜಗಳ ಆಗಿ ತಲೆ ಒಡೆದುಕೊಂಡವರೂ ಇದ್ದರು. ಮತ್ತು ಇವರ ಹೆಂಡತಿಯರು ತಮ್ಮ ಗಂಡಂದಿರನ್ನ ಹುಡುಕಿಕೊಂಡು ಕೋಲು ಕಸಬರಿಗೆಗಳನ್ನು ತಂದು ಗಂಡನ ಕುಂಡೆ ಮೇಲೆ ಬಾರಿಸುತ್ತಾ ಹೋಗೋರು.

ಈ ಸೈರಾಟ್ ಸಿನೇಮಾದಲ್ಲಿ ಹಳ್ಳಿ ಟೀಮಿನ್ ಕ್ರಿಕೆಟ್ ಅಂಪೈರ್ ಬಿಲ್ಲಿ ಬೋಡನ್ ನನ್ನ ಅವರಜ್ಜಿ ಕೋಲು ತಗೊಂಡು ಅದೇ ಮೈದಾನದಲ್ಲಿ ಹಿಗ್ಗಾ ಮುಗ್ಗಾ ಥಳಿಸುತ್ತಾಳಲ್ಲ ಅಂತಹದೇ ನೂರಾರು ನಾಟಕಗಳನ್ನು ನಾವು ಆಗಲೇ ನೋಡಿದ್ದೆವು. ಸರಕಾರ ಕೂಡ ಈ ಇಸ್ಪೀಟು ಆಟದವರನ್ನು ಕಂಡ ಕೂಡಲೇ ಕುಳಿತಲ್ಲಿಂದಲೇ ಎತ್ತಾಕಿಕೊಂಡು ಬರಲು ಪೋಲೀಸರಿಗೆ ಆದೇಶ ನೀಡಿದ್ದರು. ಹೀಗಾಗಿ ಯಾವುದಾದರೂ ಹೊಸ ವ್ಯಾನು ಬಂದರೆ ಮೊದಲು ಈ ಊರ ವಾಡೆಯ ತಾಲೀಮು ಮನೆಯಲ್ಲಿ ಇಸ್ಪೀಟು ಆಡುವವರಿಗೆ ಹೇಳುತ್ತಿದ್ದರು. ಹೀಗಾಗಿ ಇವರ ತಂಡದವನೇ ಆದ ಯಾರೋ ಒಬ್ಬರು ಅದು ಹೇಗೋ ಸುದ್ದಿ ಮುಟ್ಟಿಸಿ ಇವರನ್ನು ಜಾಗೃತಗೊಳಿಸುತ್ತಿದ್ದ.

ಊರೀಗ ಬದಲಾಗಿದೆ. ಸೋಂಭೇರಿ ಕಟ್ಟೆಗಳಲ್ಲಿ ಇಸ್ಪೀಟಾಡುವರೇ ಇಲ್ಲ, ಅಲ್ಲಲ್ಲಿ ಬೇವಿನ ಮರದ ಕೆಳಗೋ ಹುಣಸೇ ಮರದ ಕೆಳಗೋ “ಕಣ್ಣಾಪ್ರೆಸನ್” ಮಾಡಿಸಿಕೊಂಡ ಮುದುಕ ಮುದುಕಿಯರು ತಮ್ಮ ಒಂಟಿಗಣ್ಣಿನಲ್ಲೇ ಅಂಗಳದಲ್ಲಿ ಒಣ ಹಾಕಿದ ಹಪ್ಪಳ ಸಂಡಿಗೆ ಕಾಯುತ್ತ ಹದ್ದು, ಹಕ್ಕಿ, ನಾಯಿಗಳಿಗೆ ತಮ್ಮ ಕೋಲುಗಳಿಂದ ಬಡಿಯುತ್ತ ಕುಳಿತಿರುವದ ನೋಡಬಹುದು ಅಷ್ಟೇ.

ಊರ ಯುವಕರೆಲ್ಲ ಪೇಟೆ ಸೇರಿದ್ದಾರೆ, ಹೀಗಾಗಿ ತಾಲೀಮಿನ ಮನೆಗೆ ಬೀಗ ಜಡಿಯಲಾಗಿದೆ. ಉಳಿದ ಮುದುಕ ಮುದುಕಿ ಗರ್ಭಿಣಿ ಬಾಣಂತಿಯರು ತಮ್ಮ ತಮ್ಮ ಯಜಮಾನರು ಕೊಡಿಸಿದ ನೋಕಿಯ ಹ್ಯಾಂಡ್ ಸೆಟ್ಟಿನ ಮೊಬೈಲಿನಲ್ಲಿ ಮಾತನಾಡುತ್ತ ಜಗಳ ಮಾಡುತ್ತಾ ಹಾಯಾಗಿ ದಿನ ದೂಡುತ್ತಿದ್ದಾರೆ.

ಈಗ ಇವರ ಮೊಮ್ಮಕ್ಕಳು ಪೇಟೆಯಲ್ಲಿ ದುಡಿಯುತ್ತ ದುಡಿಯುತ್ತಲೇ ಕೈಯಲ್ಲಿ ಆಧುನಿಕ ಇಸ್ಪೀಟಿನ ಗಾತ್ರದ್ದೇ ಮೊಬೈಲು ಹಿಡಿದುಕೊಂಡು ಶಹರುಗಳಲ್ಲಿ ಅಲ್ಲಲ್ಲಿ ಕುಳಿತಲ್ಲಿ ನಿಂತಲ್ಲೇ ತಟಸ್ಥ ವಿಗ್ರಹಗಳಾಗಿದ್ದಾರೆ. ಇವರಷ್ಟೇ ಅಲ್ಲ, ಇಡೀ ಶಹರು ಯಾವುದೋ ದೇವಿಯ ಶಾಪಗ್ರಸ್ಥ ಕಲ್ಲಾಗಿದ್ದಾರೆ. ಪ್ರಸಿದ್ಧ ಚಿತ್ರಕಲಾವಿದ ವ್ಯಾನ್ ಗೋ ನ ಒಂದು ಪೇಂಟೀಂಗ್ ನಲ್ಲಿ ಇಡೀ ಶಹರು ಯಾವುದೋ ಅಮಲಿನಲ್ಲಿ ತಿಳಿದೋ ತಿಳಿಯದೆಯೋ ಕುಡಿದವರಂತೆ ಅಲ್ಲಲ್ಲೇ ನಿದ್ದೆಗೆ ಜಾರಿದ್ದಾರೆ. ಇವರಿಗೆ ಎಚ್ಚರವಾಗುವುದು ಯಾವ ಯುಗದಲ್ಲೋ?

 ಸೋಂಭೇರಿ ಕಟ್ಟೆಗಳಲ್ಲಿ ಇಸ್ಪೀಟಾಡುವರೇ ಇಲ್ಲ, ಅಲ್ಲಲ್ಲಿ ಬೇವಿನ ಮರದ ಕೆಳಗೋ ಹುಣಸೇ ಮರದ ಕೆಳಗೋ “ಕಣ್ಣಾಪ್ರೆಸನ್” ಮಾಡಿಸಿಕೊಂಡ ಮುದುಕ ಮುದುಕಿಯರು ತಮ್ಮ ಒಂಟಿಗಣ್ಣಿನಲ್ಲೇ ಅಂಗಳದಲ್ಲಿ ಒಣ ಹಾಕಿದ ಹಪ್ಪಳ ಸಂಡಿಗೆ ಕಾಯುತ್ತ ಹದ್ದು, ಹಕ್ಕಿ, ನಾಯಿಗಳಿಗೆ ತಮ್ಮ ಕೋಲುಗಳಿಂದ ಬಡಿಯುತ್ತ ಕುಳಿತಿರುವದ ನೋಡಬಹುದು ಅಷ್ಟೇ.

ಅಂಗೈಯಗಲದ ಮೊಬೈಲಿನಲ್ಲಿ ಕಾಯಕವೂ ಉಂಟು ಕೈಲಾಸವೂ ಉಂಟು, ಇಲ್ಲೇ ಸ್ವರ್ಗ ಇಲ್ಲೇ ನರಕ. ಹಾಕಿ ನಮ್ಮ ದೇಶದ ಆಟ ಅನ್ನುತ್ತಾರೆ. ಅದನ್ನು ಪ್ರೋತ್ಸಾಹಿಸಿ ಎನ್ನುತ್ತಾರೆ. ಹೀಗೆ ಹೇಳುವವರು ಬಹುಶಃ ಇದು ಕ್ರಿಕೆಟ್ ಮೇಲಿನ ದ್ವೇಷಕ್ಕೋ ಅಥವಾ ಕ್ರಿಕೆಟ್ ಪ್ರೇಮಿಗಳು ಕೊಡುವ ಕಾಟಕ್ಕೊ ಗೊತ್ತಿಲ್ಲ.

ಒಂದು ಆಟದ ಜನಪ್ರಿಯತೆಯ ಹಿಂದೆ ಎಷ್ಟೆಲ್ಲಾ ಕಾರಣಗಳಿರುತ್ತವೆ. ಬ್ರೆಜಿಲ್, ಅಮೇರಿಕಾಗೆ ಹೇಗೆ ಫುಟ್ ಬಾಲ್ ಇಷ್ಟವೋ ಹಾಗೆ ಭಾರತ ಬಾಂಗ್ಲಾ ಪಾಕಿಸ್ತಾನ ಶ್ರೀಲಂಕಾ ದೇಶಗಳಿಗೆ ಕ್ರಿಕೆಟ್ ಆಟ….

ಈಗ ಹಾಕಿಯನ್ನೂ ಪ್ರೀತಿಸೋಣ, ಕ್ರಿಕೆಟ್ ಅನ್ನೂ ಕೂಡಾ ನೋಡೋಣ. ಉಹೂಂ… ಹಾಗಲ್ಲ ಕಬಡ್ಡಿ, ಖೋಖೋ, ಜ್ಯೂಡೋ, ಲೂಡೋ… ಹಾಗೆ ನೋಡಿದರೆ ಯಾವ ಆಟವೂ ಆಡುವುದಕ್ಕೆ ನೋಡುವುದಕ್ಕೆ ವರ್ಜ್ಯವಲ್ಲ. ಬದಲಾಗಿ ಇವೆಲ್ಲ ಆಟಗಳು ಬದುಕನ್ನು ಕಲಿಸಲು ಬದುಕಿನ ಸವಾಲುಗಳಿಗೆ ಎದುರಾಗಲು ಒಂದು ಪಾಠವಾಗುತ್ತವೆ. ಹೀಗಾಗಿ ಆಟ-ಪಾಠ ಸರಿಯಾದ ಜೋಡಿ ಪದ. ಆಡಿ ಕಲಿ, ನೋಡಿ ಕಲಿ, ಮಾಡಿ ಕಲಿ… ಎಂಬುದು ಹೊಸ ಶಿಕ್ಷಣ ನೀತಿಯ ಭಾಗವೇ ಆಗಿದೆ. ಜೂಜು, ಇಸ್ಪೀಟು, ಚದುರಂಗ, ಪಗಡೆ, ಇವೆಲ್ಲ ಕೇವಲ ಹೊತ್ತು ಕಳೆಯುವ ಆಟಗಳು ಅಂತ ಯಾಕೆ ಅನ್ನಬೇಕು? ಈ ಆಟಗಳಲ್ಲೊಂದು ಲೆಕ್ಕಾಚಾರ ಇದೆ.. Mathematics ಇದೆ.

ಆದರೆ ದುರ್ದೈವವಶಾತ್ ಕ್ರಿಕೆಟ್ ಗೆ ಇರುವಷ್ಟು ಗ್ಲಾಮರ್ ಬೇರೆ ಯಾವ ಆಟಕ್ಕೂ ನಮ್ಮ ದೇಶದಲ್ಲಿಲ್ಲ. ಈಗೀಗ ಪ್ರೋ ಕಬಡ್ಡಿ ಪ್ರಚಾರವಾಗುತ್ತಿದ್ದರೂ ನಮಗೆ ಯಾವೊತ್ತಿಗೂ ಕ್ರೀಕೆಟ್ ನಮ್ಮ ಧರ್ಮ, ಸಚಿನ್ ನಮ್ಮ ದೇವರು!

ಸುಮ್ಮನೇ ಬಸ್ಸಿನಲ್ಲಿ ಹೋಗಬೇಕಾದ್ರೆ “ಅಣ್ಣಾ ಸ್ಕೋರೆಷ್ಟು?” ಅಂತ ಕೇಳಿದರೆ ಸಾಕು, ಇಡೀ ಒಂಡೇ ಮ್ಯಾಚಿನ ಡಿಟೇಲ್ಸ್ ಹೇಳಿಬಿಡುತ್ತಾರೆ. ಕ್ರಿಕೆಟ್ ದಿನ ಎಷ್ಟೇ ರಶ್ ಇದ್ದರೂ ಬಸವನಗುಡಿಯ ಮಾರವಾಡಿ ಒಬ್ಬರು ತನ್ನ ಅಂಗಡಿಯ ಮುಂದೆ ಎಲ್ ಇ ಡಿ ಪರದೆ ಹಾಕಿ, 2003 ಇಸ್ವಿಯ ಸೆಮೀ ಫೈನಲ್ ನೋಡಿದ್ದೇನೆ. ಬೇರೆ ಬೇರೆ ಧರ್ಮ ಆಚಾರ ವಿಚಾರಗಳ ಬಹುವೈವಿದ್ಯಮಯ ಬಹುತ್ವ ದೇಶದ ನಮ್ಮನ್ನು ಇಂದಿಗೆ ಭಾರತೀಯರನ್ನೆಲ್ಲ ಬೆಸೆದಿದ್ದು ಈ ಕ್ರಿಕೆಟ್ ಅಂದರೆ ಸುಳ್ಳಲ್ಲ.

ಎಲ್ಲ ಆಟಗಳೂ ಬದುಕಿನ ಒಂದಿಲ್ಲೊಂದು ಪಾಠ ಕಲಿಸುತ್ತವೆ. ಹಾಕಿ, ಕ್ರಿಕೆಟ್ ಗಿಂತ ರೋಚಕವಾಗಿದೆ ನಿಜ. ನಮ್ಮ ದೇಶದ ಫುಟ್ ಬಾಲ್ ನ ರಾಷ್ಟ್ರೀಯ ಆಟಗಾರನೊಬ್ಬನ ಹೆಸರೇ ನಮಗೆ ಗೊತ್ತಿರುವುದಿಲ್ಲ.. ಧನರಾಜ್ ಪಿಳ್ಳೈ ನಂತರದ ಹೆಸರುಗಳೇ ಗೊತ್ತಿಲ್ಲ. ಯಾಕೆ ಹೀಗೆ ಇದೊಂದು ಪಿ ಎಚ್ ಡಿ ಮಾಡಲು ಅಧ್ಯಯನ ಯೋಗ್ಯವಾದ ವಿಷಯ.

ಆದರೆ ಅತಿಯಾದರೆ ಅಮೃತವೂ ವಿಷವಂತೆ. ಐಪಿಎಲ್ ಬಂದು ಕ್ರಿಕೆಟ್ ಹಾಳು ಮಾಡಿತು ಅಂತಾರೆ, ಅದು ಭಾಗಶಃ ನಿಜ. ಆದರೆ ಇದೇ ಐಪಿಎಲ್ ವೃಷಭ ಪಂತ್, ಚಾಹಲ್, ಬೂಮ್ರಾನಂತಹ ಯುವ ಪ್ರತಿಭೆಗಳನ್ನು ಗುರುತಿಸಲು ಸಹಾಯ ಮಾಡುತ್ತೆ.

ಅವೇ ಕೆಟ್ಟು ಕೆರಹಿಡಿದ ರಾಜಕಾರಣದ ಹಳಸಲು ಮಾತುಗಳು, ಅತೃಪ್ತಿ, ಬಂಡಾಯ, ಡಂಬಾಯ, ಕಿತ್ತಾಟ, ಕಿರುಚಾಟ, ಮೋದಿ, ದೀದಿ, ರಾಹುಲ್, ಸಿದ್ದು… ದೈನಿಕದ ಗೋಳುಗಳು ಇದರಿಂದ ಕೊಂಚ ಬಿಡುಗಡೆ ಹೊಂದಲು ಕ್ರಿಕೆಟ್ಟಿಗಿಂತ ಬೇರೆ ಆಧ್ಯಾತ್ಮ ನನಗಂತೂ ತಿಳಿದಿಲ್ಲ. ಈ ಸಲ ಸೋತಿರಬಹುದು ಮುಂದೆ ಖಂಡಿತ ಗೆಲ್ಲುತ್ತೇವೆ..