ನಮ್ಮ ಗೆಳೆಯರೆಲ್ಲ ಕಾರಿನಲ್ಲಿ ತಾವು ಸಲ್ಪದರಲ್ಲಿ ಮಾಡುವುದರಿಂದ ತಪ್ಪಿಸಿಕೊಂಡ ಅನಾಹುತದ ಬಗ್ಗೆ ಹರಟತೊಡಗಿದ್ದರು. ನನ್ನ ಮನಸ್ಸು ಇನ್ನೂ ಪೋಸ್ಟರ್ ನಲ್ಲೇ ನೆಟ್ಟಿತ್ತು. ಅದು ನನ್ನ ಜೀವನದ ಮೊಟ್ಟಮೊದಲ ಮತ್ತು ಇಲ್ಲಿಯವರೆಗಿನ ಏಕೈಕ ವೇಶ್ಯಾಗೃಹಕ್ಕೆ ಕಾಲಿಟ್ಟ ಅನುಭವ. ಆದರೆ ಈ ಅನುಭವದ ಬಗ್ಗೆ ನನಗೆ ಬೇಸರವಿಲ್ಲ. ಬಹುಷಃ ಹೆಣ್ಣನ್ನು ನೋಡಬೇಕಾದ ಒಂದು ಹೊಸ ದೃಷ್ಟಿಕೋನದ ಬಗ್ಗೆ ಕಂಡುಕೊಂಡಿದ್ದೆ. ಸಂಪ್ರದಾಯಸ್ಥ ಮನೆತನದ ಗಂಡಸುಗಳು ಮಿಸೋಜಿನಿಸ್ಟ್ ಗಳಾಗಿರುವುದು ಅವರು ಹೆಣ್ಣನ್ನೂ ಸಹ ತಮ್ಮ ಪಾಪಪುಣ್ಯದ ಲೆಕ್ಕಾಚಾರದ ಭಾಗವಾಗಿಯೇ ನೋಡುವುದರ ಕಾರಣದಿಂದ ಇರಬಹುದು.
ಶ್ರೀಹರ್ಷ ಸಾಲಿಮಠ ಅಂಕಣ
ಕುಡುಕರ ಮಧ್ಯೆ ಕುಡಿಯದವರಿಗೆ ವಿಶೇಷ ಮರ್ಯಾದೆ ಇರುತ್ತದೆ. ಮತ್ತೇರಿದವರನ್ನು ಕಾರ್ ಗಳಲ್ಲಿ ಸಾಗಿಸಲು, ಕೊನೆಗೆ ಬಿಲ್ ಪರಾಂಬರಿಸಲು ಆಲ್ಕೋಮೀಟರ್ ಗೆ ಮೂತಿ ತೋರಿಸಲು ಇತ್ಯಾದಿ ಇತ್ಯಾದಿ. ಅದರ ಬದಲಾಗಿ ಬಿಟ್ಟಿಯಾಗಿ ಸೈಡ್ ಗಳನ್ನು ತಿನ್ನುವ ಮತ್ತು ಕೊನೆಗೆ ಊಟ ಮಾಡುವ ಅವಕಾಶವಿರುತ್ತದೆ. ಒಂದು ದಿನ ನನ್ನ ಮನೆಯ ಬಾಲ್ಕನಿಯಲ್ಲಿ ಕುಡಿಯುತ್ತಿದ್ದ ಕುಡುಕರಿಗೆ ಇದ್ದಕ್ಕಿದ್ದಂತೆ ನೈಟ್ ಕ್ಲಬ್ ಗೆ ಹೋಗಬೇಕೆನಿಸಿತು. ಈ ಕುಡುಕರನ್ನು ಹೇರಿಕೊಂಡು ಹೋಗುವ ಜವಾಬ್ದಾರಿ ಎಂದಿನಂತೆ ನನ್ನ ಮೇಲೆಯೇ ಬಿತ್ತು.
ಈ ನೈಟ್ ಕ್ಲಬ್ ಗಳ ಬಗ್ಗೆ ಒಂದು ಚಿಕ್ಕ ನೋಟ್ ಹೇಳಿಬಿಡುತ್ತೇನೆ. ಮೊದಲು ಈ ನೈಟ್ ಕ್ಲಬ್ ಗಳಲ್ಲಿ ಪೋಲ್ ಡ್ಯಾನ್ಸ್ ಗಳು, ಅರೆನಗ್ನ ನರ್ತನಗಳು ಹೆಣ್ಣನ್ನು ಮಾರುಕಟ್ಟೆಯ ವಸ್ತುವಾಗಿ ತೋರಿಸುವ ಮತ್ತೊಂದು ಕೀಳು ವ್ಯಾಪಾರ ಅಂತಲೇ ಎಂದುಕೊಂಡಿದ್ದೆ. ಆದರೆ ಒಂದಿಬ್ಬರು ಪ್ರಸಿದ್ಧ ಅಂಕಣಕಾರರು ಇದು ಬರೀ ಮಾರಾಟದ ನೃತ್ಯವಲ್ಲ, ಅದರಲ್ಲೊಂದು ಕಲಾತ್ಮಕ ಪ್ರತಿಮೆಗಳಿವೆ ಅಂತ ಪತ್ರಿಕೆಗಳಲ್ಲಿ ಬರೆದಾಗ ಇದೊಂದು ಕಲಾಪ್ರಕಾರ ತಪ್ಪಿಹೋಗಬಾರದು ಅಂತ ಹೋಗಿದ್ದೆ. ಬಹುತೇಕರು ಬರಿಯ ಅರೆನಗ್ನ ಹೆಣ್ಣುಗಳನ್ನೂ ಮೈಮಾಟಗಳನ್ನೂ ಕಣ್ಣುಗಳಿಂದ ಸವಿಯಲು ಹೋಗುತ್ತಾರಾದರೂ ನರ್ತನದ ಕಲಾತ್ಮಕತೆಯನ್ನು ಆಸ್ವಾದಿಸಲೂ ಕೆಲವರು ಹೋಗುತ್ತಾರೆ ಎಂಬುದನ್ನು ಕೇಳಿ ಅಚ್ಚರಿಯಾಯಿತು. ಈ ನೃತ್ಯ ಕಲಿಯಲು ನರ್ತಕಿಯರು ಅದೆಷ್ಟು ಕಷ್ಟಪಡುತ್ತಾರೆ ಅದಕ್ಕಾಗಿ ಯಾವ ರೀತಿಯ ವ್ಯಾಯಾಮ ಮಾಡಬೇಕು, ದೈನಂದಿನ ಅಭ್ಯಾಸಗಳು ಹೇಗೆ ಎಂಬುದೇ ಮತ್ತೊಂದು ಪ್ರಬಂಧದ ವಿಷಯ.
ಈ ಕುಡುಕರನ್ನು ಕಾರಲ್ಲಿ ಲೋಡ್ ಮಾಡಿಕೊಂಡು ನೈಟ್ ಕ್ಲಬ್ ನ ಅಂಗಳದಲ್ಲಿ ಗಾಡಿಯನ್ನು ನಿಲ್ಲಿಸಿ ನೈಟ್ ಕ್ಲಬ್ ನೊಳಗೆ ಬಿಜಯಂಗೈಯಲು ಸಿದ್ಧರಾದೆವು. ನಮ್ಮಲ್ಲೊಬ್ಬ ಮುಠ್ಠಾಳ ಕುಡುಕ ಕೈಯಲ್ಲಿ ಬಿಯರ್ ಬಾಟಲಿಯನ್ನು ಹಿಡಿದುಕೊಂಡೇ ಬಂದ. ಹೊರಗಿನಿಂದ ಸ್ವಂತ ಮದ್ಯವನ್ನು ಒಳಗೆ ಬಿಡುವುದಿಲ್ಲವಾದ್ದರಿಂದ ನೈಟ್ ಕ್ಲಬ್ ನ ಕಾವಲುಗಾರ ನಮ್ಮನ್ನು ಒಳಬಿಡಲಿಲ್ಲ. ಮದ್ಯದ ಬಾಟಲಿ ವಾಪಸು ಇಟ್ಟುಬರುತ್ತೇವೆಂದರೂ ಕೇಳಲಿಲ್ಲ. ನಮ್ಮಲ್ಲಿ ನನ್ನೊಬ್ಬನನ್ನು ಹೊರತುಪಡಿಸಿ ಎಲ್ಲರೂ ಕುಡಿದಿರುವುದು ಅವನಿಗೆ ಖಾತರಿಯಾಗಿತ್ತು. ಕುಡಿದುಕೊಂಡೇ ಒಳಹೋದವರು ಮದ್ಯ ಖರೀದಿಸುವುದಿಲ್ಲ. ನೈಟ್ ಕ್ಲಬ್ ಗೆ ಪ್ರವೇಶಧನ ಇಲ್ಲವಾದುದರಿಂದ ಮದ್ಯದ ವ್ಯಾಪಾರವೇ ನೈಟ್ ಕ್ಲಬ್ ನ ಮುಖ್ಯ ಆದಾಯವಾಗಿತ್ತು. ಕುಡಿದವರು ಮತ್ತೆ ಒಳಹೋಗಿ ಕುಡಿಯದಿದ್ದರೆ ಅದು ವ್ಯಾಪಾರಕ್ಕೆ ನಷ್ಟ ಹಾಗೂ ಆದಾಯ ತಂದುಕೊಡುವ ಟೇಬಲ್ ಒಂದು ಅನವಶ್ಯಕವಾಗಿ ತುಂಬಿಹೋಗುತ್ತದೆ ಅಂಬುದು ಅವರ ಲೆಕ್ಕಾಚಾರವಾಗಿತ್ತು.
ಆದರೆ ನಮ್ಮ ಹುಡುಗರಿಗೆ ಆವತ್ತು ಶತಾಯಗತಾಯ ನೈಟ್ ಕ್ಲಬ್ ಗೆ ಹೋಗಲೇಬೇಕಿತ್ತು. ಗೂಗಲ್ ನಲ್ಲಿ ಹುಡುಕಿದರು. ಅಲ್ಲಿಂದ ಸುಮಾರು ಎಂಟು ಕಿಲೋಮೀಟರುಗಳ ದೂರದಲ್ಲಿ ಮತ್ತೊಂದು ನೈಟ್ ಕ್ಲಬ್ ಇರುವುದು ಗೂಗಲ್ ನಲ್ಲಿ ಗೋಚರಿಸಿತು. ಸರಿ. ಅಲ್ಲಿಗೆ ನಮ್ಮ ಕಾರು ಓಡಿತು. ಅಂಗಳದಲ್ಲಿ ಕಾರ್ ಪಾರ್ಕ್ ಮಾಡಿ ಹೋಗುತ್ತಿದ್ದಂತೆ ನನಗೆ ಸಣ್ಣದಾಗಿ ಅನುಮಾನ ಹೊಗೆಯಾಡತೊಡಗಿತು. ಇದು ಎಲ್ಲ ನೈಟ್ ಕ್ಲಬ್ ಗಳಂತೆ ಇರಲಿಲ್ಲ. ಬೌನ್ಸರ್ ಗಳಿರದೆ ಒಂದು ರಿಸೆಪ್ಶನ್ ಇತ್ತು. ರಿಸೆಪ್ಷನ್ ನಲ್ಲಿ ಒಬ್ಬ ಲೆಬನೀಸ್ ಧಡಿಯ ಮತ್ತು ಚೈನೀಸ್ ಸೊಣಕಲ ಕೂತಿದ್ದರು. ನಾವು ಅತ್ತಿತ್ತ ನೋಡುವಾಗ ಇಬ್ಬರು ಒಳುಡುಪುಗಳನ್ನು ಮಾತ್ರ ಧರಿಸಿದ ಬೆಡಗಿಯರು ಬಂದು ಒಂದು ಶಿಷ್ಠಾಚಾರದ ಹೂನಗೆ ಎಸೆದು ನಮಗೆ ಒಂದು ಕೋಣೆಯಲ್ಲಿ ಕೂರುವಂತೆ ಹೇಳಿದರು. ನೈಟ್ ಕ್ಲಬ್ ಗಳಲ್ಲಿರಬೇಕಾದ ಅಬ್ಬರದ ಸಂಗೀತ ಕಣ್ ಕುಕ್ಕುವ ಬಣ್ಣಬಣ್ಣದ ಬೆಳಕು ಇದಾವುದೂ ಇಲ್ಲದೇ ಅಲ್ಲೆಲ್ಲ ಪರಿಸರ ಅತ್ಯಂತ ಶಾಂತವಾಗಿತ್ತು. ಅವರು ಸೂಚಿಸಿದ ಕೋಣೆಗೆ ಹೋಗುವ ಮುಂಚೆ ನನ್ನ ಜೊತೆ ಬಂದಿದ್ದವನೊಬ್ಬ ಚೈನೀಸ್ ಸೊಣಕಲನಿಗೆ
“ಇಲ್ಲಿ ಯಾವ ಯಾವ ಸರ್ವೀಸ್ ಕೊಡುತ್ತೀರಿ? ” ಅಂತ ಕೇಳಿದ.
ಅಲ್ಲಿ ಹೆಂಡ ಸಿಗುತ್ತದೆಯೆ ಎಂದು ಕೇಳುವುದು ಅವನ ಉದ್ದೇಶವಾಗಿತ್ತು.
ಅದಕ್ಕೆ ಸೊಣಕಲ “ಫುಲ್ ಸರ್ವೀಸ್!” ಅಂತ ಕ್ವಚಿತ್ತಾಗಿ ಆದರೆ ಧೃಢವಾಗಿ ಹೇಳಿದ.
ನಮ್ಮ ಗೆಳೆಯ ತೃಪ್ತಿಯಿಂದ ತಲೆಯಾಡಿಸುತ್ತಾ ಕೋಣೆಯ ಕಡೆ ನಡೆದ. ಆ ಕೋಣೆಯನ್ನು ಸ್ವಚ್ಚಗೊಳಿಸುವ ಮಧ್ಯವಯಸ್ಕ ಹೆಂಗಸು ನನ್ನ ಕಡೆ ನೋಡಿ ನಸುನಕ್ಕಳು.
ಒಬ್ಬೊಬ್ಬರಾಗಿ ಅದಾಗಲೇ ಹೋಗಿ ಅವರು ಕೂರಲು ಸೂಚಿಸಿದ ಕೋಣೆಯಲ್ಲಿ ಪವಡಿಸತೊಡಡಗಿದರು. ನನಗೆ ಓದುವ ಹುಚ್ಚು. ಅದು ಬೋಂಡ ಕಟ್ಟಿದ ಕಾಗದವಾಗಿರಲಿ, ಅಂಗಡಿಯ ಬೋರ್ಡ್ ಆಗಿರಲಿ, ಕ್ಯಾಟಲಾಗ್ ಆಗಿರಲಿ, ಒಮ್ಮೊಮ್ಮೆ ಓದಲು ಏನೂ ಸಿಗದಿದ್ದಾಗ ಟೆಲಿಫೋನ್ ಡೈರೆಕ್ಟರಿಯನ್ನೂ ಓದಿದ್ದಿದೆ. ಪುಸ್ತಕಗಳಿಲ್ಲದ ಮನೆಗಳಿಗೆ ನಾನು ಹೋಗುವುದೇ ಇಲ್ಲ. ಹಾಗೆಯೆ ಇಲ್ಲಿ ಕೋಣೆಯ ಗೋಡೆಗಳಿಗೆ ಅಂಟಿಸಿದ್ದ ಪೋಸ್ಟರ್ ಗಳನ್ನು ಓದತೊಡಗಿದೆ.
ಒಂದು ಪೋಸ್ಟರ್ ನಲ್ಲಿ ಹೀಗೆ ಬರೆದಿತ್ತು. ಇಂಗ್ಲೀಷಲ್ಲಿ ಇದ್ದಿದ್ದನ್ನು ಕನ್ನಡಕ್ಕೆ ಅನುವಾದಿಸಿದ್ದೇನೆ.
೧. ನಮ್ಮ ಮಹಿಳೆಯರು (ಲೇಡೀಸ್) ನಿಮ್ಮ ಸಂತೋಷಕ್ಕಾಗಿಯೇ ಇದ್ದಾರೆ. ಅವರೊಂದಿಗೆ ಗೌರವದಿಂದ ವರ್ತಿಸತಕ್ಕದ್ದು.
೨. ಸೇವೆಯ ಮೊದಲು ಮತ್ತು ನಂತರ ಸ್ನಾನ ಮಾಡುವುದು ಕಡ್ಡಾಯ.
೩. ಮಹಿಳೆಯರ ಜೊತೆ ಅನುಚಿತವಾಗಿ, ಅಶ್ಲೀಲವಾಗಿ ವರ್ತಿಸುವುದಾಗಲಿ, ಮೈಮೇಲೆ ಗಾಯ ಮಾಡುವುದಾಗಲಿ ಮಾಡುವುದನ್ನು ಸಹಿಸಲಾಗುವುದಿಲ್ಲ.
೪. ಮಹಿಳೆಯರು ಒಪ್ಪಿದರೆ ಮಾತ್ರ ನಿಮಗೆ ಸೇವೆ ನೀಡಲಾಗುತ್ತದೆ. ಯಾವುದೇ ರೀತಿಯಲ್ಲಿ ನೀವು ಒತ್ತಾಯಪಡಿಸುವಂತಿಲ್ಲ.
೫. ಸೇವೆಯ ಸಮಯದಲ್ಲಿ ಕಡ್ಡಾಯವಾಗಿ ಕಾಂಡಮ್ ಧರಿಸತಕ್ಕದ್ದು. ಧರಿಸದೇ ಮುಂದುವರಿದಲ್ಲಿ ಅದನ್ನು ಅತ್ಯಾಚಾರ ಎಂದು ಪರಿಗಣಿಸಿ ನಿಮ್ಮನ್ನು ಪೋಲೀಸರ ವಶಕ್ಕೆ ಒಪ್ಪಿಸಲಾಗುವುದು ಹಾಗೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಇಷ್ಟು ಓದುತ್ತಿದ್ದಂತೆ ಅದು ನೈಟ್ ಕ್ಲಬ್ ಅಲ್ಲ ಬದಲಾಗಿ ವೇಶ್ಯಾವಾಟಿಕೆ ಕೇಂದ್ರ ಎಂಬುದು ನನಗೆ ಮನದಟ್ಟಾಯಿತು. ನಮ್ಮ ಗೆಳೆಯರಿಗೆ ಹೋಗಿ ಸವಿವರ ಮಾಹಿತಿಯನ್ನು ನೀಡಿದೆ. ದಿಟದ ಅರಿವು ಮೂಡುತ್ತಿದ್ದಂತೆ ಸತ್ತೆನೋ ಕೆಟ್ಟೆನೋ ಎಂದು ಅವರೆಲ್ಲ ಅಲ್ಲಿಂದ ಓಡತೊಡಗಿದರು. ನನಗೆ ನಗು ಬಂತು. ಈ ಸಂಪ್ರದಾಯಸ್ಥ ಮನೆತನದ ಗಂಡಸುಗಳು ಇಲ್ಲಿ ಕಾಲಿಟ್ಟು ಅದಾವುದೋ ಮಹಾಪಾಪ ಮಾಡಿಬಿಟ್ಟಿದ್ದೇವೆ ಅಂತ ಎಗರಾಡಿದ್ದು ನೋಡಲು ಎರಡು ಕಣ್ಣುಗಳೂ ಸಾಲದಾಗಿತ್ತು. ಅವರೆಲ್ಲ ಓಡುತ್ತಿದ್ದಂತೆ ನಾನು ಸಾವಧಾನವಾಗಿ ಹೊರನಡೆಯತೊಡಗಿದೆ. ನಮ್ಮ ಚೈನೀಸ್ ಸೊಣಕಲ ಬಂದು ಏನಾಯಿತು ಎಂದು ಕೇಳಿದ.
ಅದು ಬೋಂಡ ಕಟ್ಟಿದ ಕಾಗದವಾಗಿರಲಿ, ಅಂಗಡಿಯ ಬೋರ್ಡ್ ಆಗಿರಲಿ, ಕ್ಯಾಟಲಾಗ್ ಆಗಿರಲಿ, ಒಮ್ಮೊಮ್ಮೆ ಓದಲು ಏನೂ ಸಿಗದಿದ್ದಾಗ ಟೆಲಿಫೋನ್ ಡೈರೆಕ್ಟರಿಯನ್ನೂ ಓದಿದ್ದಿದೆ. ಪುಸ್ತಕಗಳಿಲ್ಲದ ಮನೆಗಳಿಗೆ ನಾನು ಹೋಗುವುದೇ ಇಲ್ಲ. ಹಾಗೆಯೆ ಇಲ್ಲಿ ಕೋಣೆಯ ಗೋಡೆಗಳಿಗೆ ಅಂಟಿಸಿದ್ದ ಪೋಸ್ಟರ್ ಗಳನ್ನು ಓದತೊಡಗಿದೆ.
ನಾನು “ಏನಿಲ್ಲ” ಎಂದು ಹೇಳಿ ಮುನ್ನಡೆಯತೊಡಗಿದೆ.
“ಗರ್ಲ್ ನಾಟ್ ಗುಡ್?” ಅಂದ.
ನಾನು ಉತ್ತರಿಸಲಿಲ್ಲ. ಕಾರಿನ ಕಡೆಗೆ ನಡೆದೆ.
ನಮ್ಮ ಗೆಳೆಯರೆಲ್ಲ ಕಾರಿನಲ್ಲಿ ತಾವು ಸಲ್ಪದರಲ್ಲಿ ಮಾಡುವುದರಿಂದ ತಪ್ಪಿಸಿಕೊಂಡ ಅನಾಹುತದ ಬಗ್ಗೆ ಹರಟತೊಡಗಿದ್ದರು. ನನ್ನ ಮನಸ್ಸು ಇನ್ನೂ ಪೋಸ್ಟರ್ ನಲ್ಲೇ ನೆಟ್ಟಿತ್ತು. ಅದು ನನ್ನ ಜೀವನದ ಮೊಟ್ಟಮೊದಲ ಮತ್ತು ಇಲ್ಲಿಯವರೆಗಿನ ಏಕೈಕ ವೇಶ್ಯಾಗೃಹಕ್ಕೆ ಕಾಲಿಟ್ಟ ಅನುಭವ. ಆದರೆ ಈ ಅನುಭವದ ಬಗ್ಗೆ ನನಗೆ ಬೇಸರವಿಲ್ಲ. ಬಹುಷಃ ಹೆಣ್ಣನ್ನು ನೋಡಬೇಕಾದ ಒಂದು ಹೊಸ ದೃಷ್ಟಿಕೋನದ ಬಗ್ಗೆ ಕಂಡುಕೊಂಡಿದ್ದೆ. ಸಂಪ್ರದಾಯಸ್ಥ ಮನೆತನದ ಗಂಡಸುಗಳು ಮಿಸೋಜಿನಿಸ್ಟ್ ಗಳಾಗಿರುವುದು ಅವರು ಹೆಣ್ಣನ್ನೂ ಸಹ ತಮ್ಮ ಪಾಪಪುಣ್ಯದ ಲೆಕ್ಕಾಚಾರದ ಭಾಗವಾಗಿಯೇ ನೋಡುವುದರ ಕಾರಣದಿಂದ ಇರಬಹುದು. ಹೆಣ್ಣು ತಮಗಿಷ್ಟವಾದ ಬಟ್ಟೆ ಹಾಕಿಕೊಂಡರೆ ತಮಗಿಷ್ಟವಾದ ಉದ್ಯೋಗ ಮಾಡಿದರೆ ಇವರ ಪಾಪಪುಣ್ಯದ ಸರಬರಾಜು ಸರಪಳಿಯಲ್ಲಿ ಹೇಗೆ ವ್ಯತ್ಯಯವುಂಟಾಗುತ್ತದೆ ಎಂಬುದು ನನಗೆ ಯಾವತ್ತಿಗೂ ಅರಿವಿಗೆ ಬರದ ವಿಚಾರ.
ಮೊದಲನೆಯದಾಗಿ ಅಲ್ಲಿ ಕೆಲಸ ಮಾಡುವವರಿಗೆ “ಲೇಡೀಸ್” ಎಂದು ಸಂಬೋಧಿಸಿದ್ದು. “ಲೇಡೀಸ್” ಸಮಾಜದ ಗೌರವ ಸ್ಥಾನದಲ್ಲಿ ಇರುವ ಮಹಿಳೆಯರಿಗೆ ಸಾಧಾರಣವಾಗಿ ಬಳಸುವಂತದ್ದು. ಇದೂ ಸಹ ಸಮಾಜದಲ್ಲಿ ಗೌರವ ಪಡೆದ ವೃತ್ತಿ ಎಂಬುದನ್ನೇ ಸೂಚಿಸುವುದು ಅವರ ಉದ್ದೇಶವಾಗಿತ್ತೇನೊ. ಆಯ್ಕೆಯ ಅವಕಾಶವನ್ನು ಹೆಣ್ಣುಮಕ್ಕಳಿಗೆ ಕೊಟ್ಟದ್ದು ಒಂದು ಕಡೆಯಾದರೆ ಅಶ್ಲೀಲ ವರ್ತನೆಯ ವ್ಯಾಖ್ಯಾನವನ್ನು ಇಲ್ಲಿ ಬದಲಿಸಿದ್ದಾರೆಯೋ ಎನ್ನಿಸಿತು. ಸಾಧಾರಣ ಲೈಂಗಿಕತೆ ಅಥವಾ ಲೈಂಗಿಕ ಕ್ರಿಯೆ ಅಶ್ಲೀಲತೆ ಅನ್ನಿಸಿಕೊಳ್ಳುವುದಿಲ್ಲ. ಅದು ಸಹಜವಾಗಿ ನಡೆಯುವಂತದ್ದು. ಅದಕ್ಕಿಂತ ಅತೀತವಾಗಿ ಸಹಜವಲ್ಲದ ಕ್ಷುದ್ರ ವರ್ತನೆಯನ್ನು ಅಶ್ಲೀಲತೆ ಅಂತ ಕರೆಯಲಾಗುತ್ತದೆ. ಲೈಂಗಿಕ ಕ್ರಿಯೆ ಎನ್ನುವುದು ಪರಸ್ಪರ ಗೌರವದಿಂದ ನಡೆಯುವಂತಹದ್ದು ಇದರಲ್ಲಿ ಒಬ್ಬರ ಘನತೆಯ ಮೇಲೆ ಮತ್ತೊಬ್ಬರು ಸವಾರಿ ಮಾಡಿದರೆ ಅಲ್ಲಿ ಅಶ್ಲೀಲತೆ ಎಂಬುದಕ್ಕೆ ಅವಕಾಶ ಉಂಟು ಎಂಬುದನ್ನು ಸೂಚ್ಯವಾಗಿ ಹೇಳಿದಂತಿತ್ತು. ಕಾನೂನಿನ ನೆರವೂ ಸಹ ಇಲ್ಲಿನ ಮಹಿಳೆಯರಿಗೆ ಇರುವುದು ಅತ್ಯಂತ ಮುಖ್ಯ ಅಂಶವಾಗಿತ್ತು.
ಎಷ್ಟೋ ಬಾರಿ ಲೈಂಗಿಕ ಕಾರ್ಯಕರ್ತೆಯರನ್ನು ಅವರ ಉದ್ಯೋಗದ ಕಾರಣದಿಂದಾಗಿಯೇ ಅವರ ದೂರುಗಳನ್ನು ಸ್ವೀಕರಿಸಲಾಗುವುದಿಲ್ಲ. ವೇಶ್ಯಾವಾಟಿಕೆ ಬಹುತೇಕ ಮುಂದುವರಿದ ದೇಶಗಳಲ್ಲಿ ಕಾನೂನು ಬದ್ಧವಾಗಿದೆ. ನೆಮ್ಮದಿ ಸೂಚ್ಯಂಕದಲ್ಲಿ (Happiness Index) ಮೇಲ್ತುದಿಯಲ್ಲಿರುವ ನೆದರ್ಲೆಂಡ್ ಮತ್ತಿತರ ನಾರ್ಡಿಕ್ ದೇಶಗಳಲ್ಲಿ ಇದು ಸರಕಾರಕ್ಕೆ ತೆರಿಗೆ ತುಂಬಿಸುವ ಉದ್ಯಮ. ಈ ಉದ್ಯಮದಲ್ಲಿ ಉದ್ಯೋಗಿಗಳ ಆರೋಗ್ಯ, ಸುರಕ್ಷತೆ, ಗೋಪ್ಯತೆ, ಸಾಮಾಜಿಕ ಘನತೆ ಇತ್ಯಾದಿಗಳ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಲಾಗುವುದು. ಸರಕಾರವು ಈ ಉದ್ಯಮಿಗಳ ಮತ್ತು ಕೆಲಸಗಾರರ ಸುರಕ್ಷತೆಗೆ ಎಲ್ಲಾ ರೀತಿಯ ಸೂಕ್ತ ಕ್ರಮಗಳ್ನು ಕೈಗೊಳ್ಳುತ್ತದೆ. ನನಗೆ ನೆನಪಿರುವಂತೆ ಒಂದು ಸುದ್ದಿಯಲ್ಲಿ ಓದಿದ ಹಾಗೆ ಸಿಡ್ನಿಯಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳಲು ಬರುವ ಪ್ರವಾಸಿಗರಿಗಾಗಿ ಬೇರೆ ದೇಶಗಳಿಂದ ಲೈಂಗಿಕ ಕಾರ್ಯಕರ್ತರನ್ನು ಆಹ್ವಾನಿಸಲಾಗಿತ್ತು ಹಾಗೂ ಆಗ ವೇಶ್ಯಾವಾಟಿಕೆ ನಡೆಸುವ ಉದ್ಯಮಿಗಳು ಇಪ್ಪತ್ನಾಲ್ಕು ಪುಟಗಳಷ್ಟು ದೊಡ್ಡ ಬ್ರೌಚರ್ ಗಳನ್ನು ತಯಾರು ಮಾಡಿ ಹಂಚಿದ್ದರು. ಈಗಲೂ ಸಹ ಬ್ರೌಚರ್ ಗಳು ಒಮ್ಮೊಮ್ಮೆ ರೇಲ್ವೇ ಸ್ಟೇಷನ್ ಗಳಲ್ಲಿ ದೊರೆಯುತ್ತವೆ.
ಇಂಡಿಯಾದಂತಹ ದೇಶಗಳಲ್ಲಿ ವೈಶ್ಯಾವಾಟಿಕೆಯನ್ನು ಲೀಗಲೈಸ್ ಮಾಡುವುದು ಎಂದಾಕ್ಷಣ ಅದಕ್ಕೆ ಪ್ರೋತ್ಸಾಹ ಕೊಟ್ಟು ಊರಲ್ಲೆಲ್ಲಾ ಕೇಂದ್ರಗಳನ್ನು ಸ್ಥಾಪಿಸುವುದು ಎಂದುಕೊಂಡಿದ್ದಾರೆ. ಲೀಗಲೈಸ್ ಮಾಡುವುದು ಅಂದರೆ ಕಾನೂನಿನ ಪರಿಧಿಯಲ್ಲಿ ತರುವುದು. ಅಂದರೆ ವೇಶ್ಯಾವಾಟಿಕೆಯಡಿ ನಡೆಯುವ ಚಟುವಟಿಕೆಗಳನ್ನು ಕಾನೂನಿನ ಕಣ್ಗಾವಲುಗಳ ಅಡಿ ತರುವುದು. ಅಲ್ಲಿರುವ ಕಾರ್ಯಕರ್ತೆಯರ ಆರೋಗ್ಯ, ಹಿನ್ನೆಲೆ ಇತ್ಯಾದಿಗಳನ್ನು ದಾಖಲಿಸುವುದು. ಅವರಿಗೆ ಆರೋಗ್ಯ ಮತ್ತಿತರ ಸವಲತ್ತುಗಳನ್ನು ಕೊಡುವುದು. ಕಾನೂನಿನಡಿ ತಂದು ದಾಖಲೆಗಳನ್ನಿಡುವುದರ ದೊಡ್ಡ ಅನುಕೂಲವೆಂದರೆ ಮಾನವ ಕಳ್ಳಸಾಗಣೆಯನ್ನು ತಡೆಯುವುದು. ಕಿರಾಣಿ ಅಂಗಡಿಗಳಲ್ಲಿ ಪರವಾನಗಿ ಪಡೆಯದೆ ಹೊಸ ಅಂಗಡಿಯೇನಾದರೂ ತೆರೆದರ ಹೇಗೆ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಬರುವುದೊ, ಪ್ರತಿ ಕಾರ್ಮಿಕರ ವಿವರಗಳು ಹೇಗೆ ಕಾರ್ಮಿಕ ಇಲಾಖೆಯ ಕಣ್ಗಾವಲಲ್ಲಿ ಇರುವುದೋ ಹಾಗೆಯೆ ದಾಖಲೆಯಿಂದ ಹೊರತಾದವರ ಯಾವುದೇ ಹೊಸಬರ ಮಾನವ ಕಳ್ಳಸಾಗಾಣಿಕೆಯ ವಿವರಗಳು ತಕ್ಷಣ ಕಾನೂನಿನ ಗಮನಕ್ಕೆ ಬರುತ್ತವೆ.
ಇಂಡಿಯಾದಂತಹ ದೇಶಗಳಿಗೆ ಬಾಂಗ್ಲಾದೇಶ ನೇಪಾಳದಂತಹ ದೇಶಗಳಿಂದ ಕಳ್ಳಸಾಗಣೆ ನಡೆಯುತ್ತದೆ. ಟರ್ಕಿಗೆ ಪಕ್ಕದ ಉಕ್ರೇನ್ ನಂತಹ ದೇಶಗಳಿಂದ ಕಳ್ಳಸಾಗಣೆ ನಡೆಯುತ್ತದೆ. ಮದುವೆಯಾಗಿ ಕರೆತಂದು ಹೆಣ್ಣುಮಕ್ಕಳನ್ನು ಮಾರಾಟ ಮಾಡುವ ದೊಡ್ಡ ಜಾಲಗಳೇ ಇಂತಹ ದೇಶಗಳಲ್ಲಿ ಇವೆ.
ಈಗ ಕರೋನಾ ಲಾಕ್ಡೌನ್ ಆಗಿರುವ ಸಂದರ್ಭಗಳಲ್ಲಿ ಯಾವ ಯಾವ ದೇಶಗಳಲ್ಲಿ ವೇಶ್ಯಾವಾಟಿಕೆಯನ್ನು ಕಾನೂನಿನ ಪರಿಧಿಗೆ ತರಲಾಗಿದೆಯೋ ಅಲ್ಲೆಲ್ಲ ನಿರುದ್ಯೋಗಿ ಭತ್ಯೆಯಂತಹ ಸೌಕರ್ಯಗಳು ಇವರಿಗೆಲ್ಲ ಸಿಗುತ್ತದೆ. ತೀರಾ ಬದುಕಲು ಕಷ್ಟಪಡಬೇಕಿಲ್ಲ. ಆದರೆ ಉಳಿದ ದೇಶಗಳಲ್ಲಿ ಇವರ ಸ್ಥಿತಿ ಅತ್ಯಂತ ಚಿಂತಾಜನಕವಾಗಿರುವ ಸಾಧ್ಯತೆಗಳುಂಟು.
ಇದರ ನಡುವೆ ಒಮ್ಮೆ ನಾನು ಸಿಡ್ನಿಯ ಲೋಕಲ್ ರೈಲು ನಿಲ್ದಾಣವೊಂದರಿಂದ ಹೊರಬರುವಾಗ ಒಬ್ಬ ಬೈಬಲ್ ಹಂಚುತ್ತಿದ್ದ. ಅವನ ಪಕ್ಕದಲ್ಲೇ ಇನ್ನೊಬ್ಬ ಇದೇ ರೀತಿಯ ತಮ್ಮ “ಬ್ರಾಥೆಲ್” ನ ಬ್ರೌಚರನ್ನು ಹಂಚುತ್ತಿದ್ದ. ಅವರಿಬ್ಬರು ಹಂಚುತ್ತಿದ್ದ ಸಾಮಗ್ರಿಗಳನ್ನು ಅದಲು ಬದಲು ಮಾಡಿದರೂ ಅವರ ಮುಖಭಾವದಲ್ಲಾಗಲೀ ವೃತ್ತಿಪರತೆಯಲ್ಲಾಗಲೀ ಯಾವುದೇ ಬದಲಾವಣೆ ಬರುತ್ತಿದ್ದಂತೆ ಕಾಣುತ್ತಿರಲಿಲ್ಲ. ನಾನೂ ಎರಡನ್ನೂ ಕೈಲಿ ತೆಗೆದುಕೊಂಡೆ. ಹಂಚುವವರಿಗೆ ಬೇಜಾರಾಗಬಾರದೆಂದು ಬ್ರೌಚರನ್ನು ತೆಗೆದುಕೊಂಡು ಆಮೇಲೆ ಕಸದ ಬುಟ್ಟಿಗೆ ಎಸೆಯುವುದು ನನ್ನ ವಾಡಿಕೆ. ಊಟದ ಹೋಟಲು ಹೊರತುಪಡಿಸಿ ಬೇರೆ ನಾನು ನೋಡುವುದು ಕಡಿಮೆ. ಈ ಬ್ರೌಚರೂ ಸಹ ಹೋಟಲಿನ ಡಿಸೈನ್ ನಂತೆ ಇದ್ದಿದ್ದರಿಂದ ತೆರೆದು ನೋಡಿದೆ. ಅದು ಬರೀ ಬ್ರಾಥೆಲ್ ನ ಬ್ರೌಚರಾಗಿದ್ದರೆ ನನಗೆ ಅಂತಹ ಆಸಕ್ತಿ ಹುಟ್ಟುತ್ತಿರಲಿಲ್ಲ. ಹುಡುಗಿಯರ ಚಿತ್ರಗಳ ಮುಂದೆ ಒಂದು ಕೋಷ್ಟಕವಿತ್ತು. ಮೊದಲನೆಯ ಕಾಲಮ್ಮಿನಲ್ಲಿ ಒಂದು ಗಂಟೆಯ ಸೇವೆಯ ಬೆಲೆ ಎರಡನೆಯ ಕಾಲಮ್ಮಲ್ಲಿ ಅರ್ಧ ಗಂಟೆಯ ಸೇವೆಯ ಬೆಲೆ ಇದ್ದರೆ ಮೂರನೆಯ ಕಾಲಮ್ಮಿನಲ್ಲಿ ಅಸಾಧಾರಣ ವಿವಿಧ ಭಂಗಿಗಳಲ್ಲಿ ಸೇವೆ ಪಡೆಯಬೇಕಿದ್ದರೆ ಯಾವ ಯಾವ ಭಂಗಿಗೆ ಎಷ್ಟು ಹೆಚ್ಚಿನ ಹಣ ಕೊಡಬೇಕಾಗುತ್ತದೆ ಎಂಬುದನ್ನು ನಮೂದಿಸಲಾಗಿತ್ತು. ಪಾವ್ ಭಾಜಿಗೆ ಬೆಣ್ಣೆ ಬೇಕೆಂದರೆ ಹೆಚ್ಚಿನ ಹಣ ಅಂತ ನಮೂದಿಸುತ್ತಾರಲ್ಲ ಹಾಗೆ!
ಹಿಂದೊಮ್ಮೆ ದಕ್ಷಿಣ ಕೊರಿಯಾ ದೇಶಕ್ಕೆ ಹೋಗಿದ್ದ ನನ್ನ ಗೆಳೆಯನೊಬ್ಬ ಆತ ಉಳಿದುಕೊಂಡಿದ್ದ ಹೋಟಲ್ ಗಳಲ್ಲಿ ಕೋಣೆಗೆ ತಿಂಡಿಯ ಮೆನು ಜೊತೆಗೆ ಈ ರೀತಿಯ ಬ್ರೌಚರ್ ಗಳನ್ನು ತಲುಪಿಸುತ್ತಿದ್ದರಂತೆ. ಕಾಲೇಜು ಮುಗಿಸಿ ಕೆಲಸದ ಹುಡುಕಾಟದಲ್ಲಿದ್ದಾಗ ಒಂದು ದಿನ ಬೆಂಗಳೂರಿನ ಕಂಪೇಗೌಡ ಬಸ್ ನಿಲ್ದಾಣದ ಅಂಡರ್ ಪಾಸ್ ನಲ್ಲಿ ಈತ ನಡೆದುಕೊಂಡು ಬರುತ್ತಿದ್ದಾಗ ಯಾರೋ ಒಬ್ಬ ಹೆಂಗಸು ಈತನನ್ನು ನೋಡಿ ಕಣ್ಣು ಮಿಟುಕಿಸಿ ಬಾ ಅಂತ ಕರೆದಳಂತೆ. ಆತ ಒಂದೇ ಸಾರಿಗೆ ಕಂಗಾಲಾಗಿ ಇಂಟರ್ವ್ಯೂ ಗೆ ಹೋಗುತ್ತಿದ್ದವನು ಅಲ್ಲಿಗೆ ಹೋಗದೆ ಬೆವರುತ್ತಾ ಮನೆಗೆ ವಾಪಸು ಬಂದಿದ್ದ. ಈತನೇ ಕೊರಿಯಾದ ಬ್ರೌಚರ್ ಗಳ ವಿಷಯವನ್ನು ನಿರಾತಂಕವಾಗಿ ವಿವರಿಸುವಾಗ ಹುಡುಗ ಪ್ರಬುದ್ಧ ಮನುಷ್ಯನಾಗಿ ಬೆಳವಣಿಗೆ ಹೊಂದಿದಂತೆ ಕಂಡುಬಂತು.
ಕಡೆಗೆ ಶರಣೆ ಸೂಳೆ ಸಂಕವ್ವೆಯ ಒಂದು ವಚನ
ಬತ್ತಿಗಟ್ಟಿದಡೆ ಜಡೆಯೆಂದೆಂಬರಯ್ಯಾ.
ಜಡೆಗಟ್ಟಿರದ ಬಿಳಲು ಕೊಡ…ವರಯ್ಯಾ.
ಬೋಳಾಗಿರಳೆ [ಗಂಡು]ವೇಶಿ.
ಕೋಣನ ಕೊಂಬಿಗೆ ಸುಣ್ಣವ ತೊಡೆದ ತೆರನಂತೆ
ಪರಾಪರ ವೇಷವನಳವಡಿಸಿದಡೇನು,
ಶಬರಜಾತಿ…ನೊದ್ದವಂಗಲ್ಲದೆ
ಸತ್ತ ಕೂದಲ ಹೊತ್ತುಕೊಂಡು,
ಊರ ಮುಂದೆ ಮುಂಡೆದೆಗೆದು,
ಸಂದಿಯಲ್ಲಿ ಕೆಡಹಿದೆಯಲ್ಲಾ , ಜ್ಯೋತಿಸಿದ್ಧೇಶ್ವರಾ.
ಶ್ರೀಹರ್ಷ ಎಂ ಟೆಕ್ ಪದವೀಧರ. ವೃತ್ತಿಯಿಂದ ಸಾಫ್ಟ್ ವೇರ್ ಇಂಜಿನಿಯರ್. ಬಾಲ್ಯ ಮತ್ತು ಇಂಜಿನಿಯರಿಂಗ್ ಪದವಿಯವರೆಗೆ ಓದಿದ್ದು ದಾವಣಗೆರೆಯಲ್ಲಿ. ಸಧ್ಯಕ್ಕೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ವೃತ್ತಿ ಮತ್ತು ವಾಸ.
ಹವ್ಯಾಸಗಳು, ಓದು, ಸುತ್ತಾಟ, ಸಂಗೀತ.