ಫುಟ್ಬಾಲ್ ಲೋಕದ ಹೊರಗೆ ಆಟಕ್ಕೆ ಸಂಬಂಧ ಇರದ ಕಾರಣವೊಂದರಿಂದ ಕಳೆದ ವಾರದಿಂದ ಸುದ್ದಿಯಾಗುತ್ತಿರುವ ರಾಷ್ಫೊರ್ಡ್ ಲಾಕ್ಡೌನ್ ಶುರು ಆದಾಗಿನಿಂದಲೇ ಆಹಾರದ ಕೊರತೆಯ ವಿಚಾರದಲ್ಲಿ ಸೇವೆ ಮಾಡುವ ದಯಾಧರ್ಮ ಸಂಸ್ಥೆಗಳ ಜೊತೆ ಕೆಲಸ ಮಾಡಲು ಆರಂಭಿಸಿದ್ದ. ಮಾರ್ಚ್ ಹದಿನೆಂಟಕ್ಕೆ ಪ್ರಧಾನಿ ಜಾನ್ಸನ್ ಶಾಲೆಗಳನ್ನು ಅನಿರ್ದಿಷ್ಟಾವಧಿಗೆ ಮುಚ್ಚುವ ಘೋಷಣೆ ಮಾಡಿದಾಗ ಈ ದೇಶದ ಬಹುತೇಕ ಹೆತ್ತವರು ಪಾಲಕರು ತಮ್ಮ ಮಕ್ಕಳನ್ನು ಈ ಕಾಲದಲ್ಲಿ ಎಲ್ಲಿ ಆರೈಕೆಗೆ ಬಿಟ್ಟು ತಮ್ಮ ತಮ್ಮ ಕೆಲಸಕ್ಕೆ ಹೋಗುವುದು ಎನ್ನುವ ಯೋಚನೆಯಲ್ಲಿರುವಾಗ ರಾಷ್ಫೊರ್ಡ್ ತಾನು ಕಂಡಂತಹ ಬಾಲ್ಯವನ್ನು ಕಳೆಯುತ್ತಿರುವ ಇಲ್ಲಿನ ಕೆಲವು ಲಕ್ಷ ಮಕ್ಕಳ ಮಧ್ಯಾಹ್ನದ ಊಟದ ವ್ಯವಸ್ಥೆಯ ಬಗೆಗೆ ಯೋಚಿಸುತ್ತಿದ್ದ.
ಯೋಗೀಂದ್ರ ಮರವಂತೆ ಬರೆಯುವ ಇಂಗ್ಲೆಂಡ್ ಲೆಟರ್
ಸದ್ಯದ ಎಲ್ಲ ಯತ್ನಗಳು ಸಾಹಸಗಳು ಇಲ್ಲಿಯ ತನಕದ ಪಯಣ ಪತನ ಎಲ್ಲಿಂದ ಶುರು ಆಯಿತೋ ಅಲ್ಲಿಗೇ ಮರಳುವುದಕ್ಕೆ ತಲುಪುವುದಕ್ಕೆ ಎನ್ನುವ ಸಮಾಧಾನ ಸಮಜಾಯಿಷಿಗಳು ನಮ್ಮ ಸುತ್ತ ಹರಿದಾಡುತ್ತಲೇ ಇವೆ. ಯಾವ್ಯಾವ ಊರು ನಾಡು ದೇಶ ವಿದೇಶಗಳು ಪುನಃ ಆರೋಗ್ಯದಿಂದ ನಳನಳಿಸುತ್ತಿವೆ ಅಥವಾ ಅನಾರೋಗ್ಯದಿಂದ ಬಳಲುತ್ತಿವೆ ಎನ್ನುವ ಸುದ್ದಿಗಳೂ ತಪ್ಪದೆ ನಮ್ಮನ್ನು ಹುಡುಕಿಕೊಂಡು ಬಂದು ಮುಟ್ಟುತ್ತಲೇ ಇವೆ. ಎಲ್ಲೆಲ್ಲಿಯ ತಗಾದೆ ಬಿಡುವ, ಈ ಕಾಲದ ಜಗತ್ತಿನ ಸಾವುನೋವುಗಳ ಪಟ್ಟಿಯ ಮೊದಲ ಕೆಲ ಸಾಲುಗಳಲ್ಲಿ ಹೆಸರು ನಮೂದಿಸಿಕೊಂಡಿರುವ ಬ್ರಿಟನ್ ತನ್ನ ಮಾಮೂಲಿ ಸ್ಥಿತಿಯತ್ತ ಮರಳುತ್ತಿದೆಯೇ ಇಲ್ಲವೇ ಎನ್ನುವ ಪ್ರಶ್ನೆ ಇರುವವರು ಇಲ್ಲಿನ ಪತ್ರಿಕೆಗಳ ಅಂತರ್ಜಾಲ ಪುಟಗಳನ್ನು ತಿರುವಿದರೆ ಉತ್ತರ ಸಿಗಬಹುದು.
ಬಹುಪರಿಚಿತ ಸರ್ವವ್ಯಾಪಿ “ಲಾಕ್ ಡೌನ್” ಯಾವ ಯಾವ ಊರಿನಲ್ಲಿ ಎಂತೆಂತಹ ಲಘು ಬಿಗುಗಳ ಅರ್ಥವ್ಯಾಪ್ತಿಯನ್ನು ಹೊಂದಿದ್ದರೂ ಇಲ್ಲಂತೂ ಸದ್ಯಕ್ಕೆ ಬಹುವೇಗದಲ್ಲಿ ಬಿಗಿ ಕಳೆದುಕೊಳ್ಳುತ್ತಿರುವ ವಿಷಯ ಅದೇ. ಮುಚ್ಚಿದ ಒಂದೊಂದೇ ಕದ ತೆರೆಯುತ್ತಿದೆ, “ಛೆ! ಅಷ್ಟು ಅಂತರ ಖಂಡಿತ ಬೇಕಿಲ್ಲ, ಇಷ್ಟಿದ್ದರೂ ಸಾಕು” ಎನ್ನುವ ತಕರಾರುಗಳೂ ಒಂದಕ್ಕೊಂದು ಕಣ್ಣುಹೊಡೆದು ಸನ್ನೆ ಮಾಡುತ್ತಾ ಹಬ್ಬುತ್ತಿವೆ. ಎಲ್ಲವೂ ಹಿಂದಿನಂತೆ ಆಗಲು ಯಾವ್ಯಾವ ವ್ಯವಹಾರ ಎಂತೆಂತಹ ವ್ಯಾಪಾರಗಳು ತೆರೆಯಲ್ಪಡುತ್ತಿವೆ ಯಾವ ಬಗೆಯ ನಿರ್ಬಂಧ ನಿಷೇಧಗಳು ಎತ್ತಲ್ಪಟ್ಟಿವೆ. ಅದೇ ಸುದ್ದಿಪತ್ರಿಕೆಗಳ ಮೂಲಕ ಲಭ್ಯ ಆಗುತ್ತಿವೆ.
ಎಲ್ಲವೂ ಸಹಜ ಸ್ಥಿತಿಗೆ ಮರಳುವುದರ ಅಥವಾ ಸಹಜ ಸ್ಥಿತಿ ಎಂದರೆ ಹೀಗೇ ಎಂದು ನಂಬಿಸುವ ಕೆಲಸವೂ ಅಚ್ಚುಕಟ್ಟಾಗಿ ಸಾಗುತ್ತಿದೆ. ಕೋವಿಡ್ ಕಾಲಕ್ಕೆ ಸಕಲ ವರದಿ ವಿಶ್ಲೇಷಣೆ ಶೋಧನೆ ಸಂಶೋಧನೆಗಳ ಮಾಹಿತಿಯ ಸರಬರಾಜಿನ ಬಹುದೊಡ್ಡ ಜವಾಬ್ದಾರಿಯನ್ನು ಹೊತ್ತ ದಿನಪತ್ರಿಕೆಗಳು ಸುದ್ದಿಮಾಧ್ಯಮಗಳು ತಮ್ಮ ತಲೆಯ ಮೇಲಿನ ಹೊರೆಯನ್ನು ಕೆಳಗಿಳಿಸಿ ತಮ್ಮ ಎಂದಿನ ಶೈಲಿಯ ಬಾತ್ಮೀದಾರಿಕೆಗೆ ಹೊರಳುತ್ತಿವೆ, ಕೋವಿಡ್ ನಿಂದ ಹೊರಬರುತ್ತಿರುವ ಜಗತ್ತಿನಲ್ಲಿ ಏನೇನು ನಡೆಯುತ್ತಿದೆ ಎಂದು ತಿಳಿಸುವ ಯತ್ನ ಮಾಡುತ್ತಿವೆ.
ಈ ದೇಶದಲ್ಲಿ ಸಾಧಾರಣವಾದ ಯಾವುದೇ ಗಂಡಾಂತರ ಬರಲಿ ಎಂತಹ ಸಡಗರದ ಸಂಭ್ರಮವೇ ಇರಲಿ ಯಾರ ಯಾವುದರ ಹಂಗು ಇಲ್ಲದೆ ಬಹುತೇಕ ಪತ್ರಿಕೆಗಳ ಮುಖಪುಟದಲ್ಲಿ ಠಳಾಯಿಸುವ ಸುದ್ದಿ, ಇಲ್ಲಿನ ಫುಟ್ಬಾಲ್ ಆಟದ ಜಗತ್ತಿನದು. ಕ್ಲಬ್ ಫುಟ್ಬಾಲ್, ಪ್ರೀಮಿಯರ್ ಲೀಗ್ ಹೀಗೆ ಬೇರೆ ಬೇರೆ ಹೆಸರಲ್ಲಿ ಕರೆಸಿಕೊಳ್ಳುವ ಈ ಆಟದ ಮಾದರಿಗಳು ಇಲ್ಲಿನ ಜನಸಾಮಾನ್ಯರ ಹೃದಯದ ಬಡಿತದ ಮೇಲೆ ತೀವ್ರ ಹತೋಟಿ ಇರುವ ಸರಕು ವಸ್ತು. ಮತ್ತೆ ಪತ್ರಿಕೆಗಳಲ್ಲಿ ಫುಟ್ಬಾಲ್ ವಿಚಾರದ ಸುದ್ದಿಗಳ ಆಜುಬಾಜುವಿನಲ್ಲಿ ಎಂತಹ ಭಾವತೀವ್ರತೆಯ ಸುಖದುಃಖದ ಸುದ್ದಿ ಶೀರ್ಷಿಕೆಗಳಿದ್ದರೂ ಅವು ಕಾಲುಚೆಂಡಿನಾಟದ ಸಮಾಚಾರಗಳ ಅಹಮ್ಮಿನ ಮುಂದೆ ಹಿಂಜರಿಕೆಯಲ್ಲೇ ಪ್ರಕಟಗೊಂಡಿರುತ್ತವೆ. ಹೀಗಿರುವ ಫುಟ್ಬಾಲ್ ಮತ್ತದರ ಆಟಗಾರರ ವಾರ್ತೆಗಳು ಕಳೆದ ಮೂರು ತಿಂಗಳುಗಳಲ್ಲಿ ತನ್ನ ಮಾಮೂಲಿ ಜಾಗವನ್ನು ಕೊರೊನ ಎನ್ನುವ ಕ್ಷುದ್ರ ಕ್ರಿಮಿ ಮತ್ತು ಅದು ಉಂಟುಮಾಡಿದ ಸೋಂಕು ಸಂಕಟ ಹತಾಶೆಗಳಿಗೆ ಬಿಟ್ಟುನಡೆದಿದ್ದವು.
ಕ್ರೀಡೆಯೊಂದರ ನಿಷ್ಣಾತ ಆಟಗಾರರ ಕೌಶಲ ಕ್ಷಮತೆ ಅವುಗಳ ಹಿಂದಿನ ತರಬೇತಿ ಅಭ್ಯಾಸ ತನ್ಮಯತೆಗಳು ಅಸಾಧಾರಣವಾದುದಾದರೂ ಎಲ್ಲ ಕ್ರೀಡೆಗಳ ಅಪ್ರತಿಮ ಆಟಗಾರರಿಗೂ ಒಂದೇ ತರಹದ ಆದರಣೀಯತೆ ಪ್ರಸಿದ್ಧಿ ಅಭಿಮಾನಿ ಬೆಂಬಲಿಗರ ಪಡೆ ಇರುವುದಿಲ್ಲ. ಈ ದೇಶದ ಮಟ್ಟಿಗೆ ಫುಟ್ಬಾಲ್ ಕ್ರೀಡಾಭಿಮಾನದ ಹಿಂಬಾಲಿಸುವಿಕೆಯ ತುರೀಯಾವಸ್ಥೆಯ ಆಟ. ಇಲ್ಲಿನ ಕ್ಷೌರದ ಅಂಗಡಿಗಳಲ್ಲಿ ಸಿಗುವ ಸಂಜೆ ಪತ್ರಿಕೆಗಳಿಂದ ಹಿಡಿದು ಮಹಾನ್ ಬದ್ಧತೆಯ ರಾಷ್ಟ್ರೀಕೃತ ಪತ್ರಿಕೆಗಳ ತನಕ ಎಲ್ಲೆಲ್ಲೂ ಕಾಲ್ಚೆಂಡಿನ ಆಟದ ಸುದ್ದಿಗೆ ಮತ್ತೆ ಅದರ ಆಟಗಾರರ ಬದುಕಿನ ಹಸಿಬಿಸಿ ಗುಸುಗುಸುಗಳಿಗೆ ಪತ್ರಿಕೆಯ ಆಯಕಟ್ಟಿನ ಜಾಗ ಮೀಸಲಾಗುತ್ತದೆ. ಇವೆಲ್ಲ ಕಾರಣಗಳಿಗೆ ಸಾಮಾನ್ಯ ಮನುಷ್ಯರ ಕನಸು ಊಹೆ ಅಂದಾಜುಗಳನ್ನು ಮೀರಿ ಹಣದ ಚಲಾವಣೆಯೂ ಈ ಆಟದಲ್ಲಿ ನಡೆಯುತ್ತದೆ.
ಜನಸಾಮಾನ್ಯರು ಎಲ್ಲೆಂದರಲ್ಲಿ ಸುಲಭದಲ್ಲಿ ಆಡಬಹುದಾದ ಕ್ರೀಡೆಯೊಂದು ಪ್ರಚಂಡ ವ್ಯಾಪಾರವೂ ಉಗ್ರ ಉದ್ಯಮವೂ ಆಗಿ ಬೆಳೆದ ಬದಲಾದ ವಿಷಯ ವಸ್ತುಗಳಲ್ಲಿ ಈ ಕಾಲು ಚೆಂಡಿನಾಟ ಕೂಡ ಇದೆ. ಹೀಗೆ ತನ್ನನ್ನು ಅನುಸರಿಸುವ ಓಲೈಸುವ ಪ್ರೇಕ್ಷಕರು ಅಭಿಮಾನಿಗಳಿಂದ ಆಕರ್ಷಣೆ ಅನುರಾಗ ಹುಚ್ಚು ಪ್ರೇಮಗಳನ್ನು ಪಡೆಯುವ ಆಟ ಮತ್ತದರ ಸಮಾಚಾರಗಳು ಕಳೆದ ಮೂರು ತಿಂಗಳುಗಳಲ್ಲಿ ಪತ್ರಿಕೆಗಳ ಮುಖಪುಟದಿಂದ ಮರೆಯಾಗಿದ್ದವು. ಇದೀಗ ಎಲ್ಲವೂ ಮಾಮೂಲಿ ಸ್ಥಿತಿಗೆ ಮರಳುವ ಸಂದರ್ಭದ ಪ್ರಮುಖ ಲಕ್ಷಣವಾಗಿ ಮುಖ್ಯ ಸಾಕ್ಷಿಯಾಗಿ ಫುಟ್ಬಾಲ್ ಸುತ್ತಲಿನ ಸುದ್ದಿಗಳು ಮತ್ತೆ ಎಂದಿನಂತೆ ಮುಖಪುಟದಲ್ಲಿ ಮಿನುಗಲು ಆರಂಭಿಸಿವೆ.
ಕ್ರೀಡಾನುರಾಗದ ಉತ್ಕರ್ಷತೆ, ವ್ಯಾಪಾರದ ಪರಾಕಾಷ್ಠೆಗಳ ಫುಟ್ಬಾಲ್ ಆಟದ ಜಗತ್ತಿನಿಂದ ಎಂದಿನಂತಹ ಸುದ್ದಿ ಸಮಾಚಾರಗಳು ಮತ್ತೆ ವರದಿಯಾಗುತ್ತಿರುವ ನಡುವೆ, ಮಾರ್ಕಸ್ ರಾಷ್ಫೊರ್ಡ್ ಎನ್ನುವ ಯುವ ಫುಟ್ಬಾಲ್ ಆಟಗಾರ ಒಂದು ಮಾಮೂಲಿಯಲ್ಲದ ಸುದ್ದಿ ಚರ್ಚೆ ಸಂಚಲನ ಬದಲಾವಣೆಗೆ ಕಾರಣನಾದ. ಫುಟ್ಬಾಲ್ ಲೋಕದವನ್ನು ಅದರ ವ್ಯಾಪಾರೀಕರಣಕ್ಕಾಗಿ ದಾಂಧಲೆ ಎಬ್ಬಿಸುವ ಹುಚ್ಚು ಅಭಿಮಾನಿಗಳ ವರ್ತನೆಗಾಗಿ ಟೀಕಿಸುವವರು ದ್ವೇಷಿಸುವವರು ಕೂಡ ಈತನ ನಡೆಯ ಬಗೆಗೆ ಕುತೂಹಲ ಮೆಚ್ಚುಗೆ ಮೂಡುವಂತೆ ಮಾಡಿದ.
ಒಬ್ಬ ಪ್ರಸಿದ್ಧ ಜನಪ್ರಿಯ ಆಟಗಾರ ಅಥವಾ ವ್ಯಕ್ತಿ, ಆಟ ಹಾಗು ಆಟವಲ್ಲದ್ದು, ಕ್ರೀಡೆಯ ಒಳಗಣ ಹಾಗು ಹೊರಗಣಗಳನ್ನು ಹೇಗೆ ಗಾಢವಾಗಿ ಬೆಸೆಯಬಹುದು ತನ್ನನ್ನು ಬೆಳೆಸಿದ ಸಮಾಜಕ್ಕೆ ಹೇಗೆ ಪ್ರತ್ಯುಪಕಾರ ಮಾಡಬಹುದು ಎಂದೂ ತೋರಿಸಿದ. ಈತ ತೊಡಗಿಸಿಕೊಂಡ ವಿಷಯಕ್ಕೆ ಅಸಾಮಾನ್ಯವಾದ ಅವಗಾಹನೆ ಸೃಷ್ಟಿಸಿ ಬೆಂಬಲ ಒದಗಿಸಿ ಅರ್ಹವಾದ ಪರಿಹಾರ ಕಂಡುಕೊಳ್ಳುವಲ್ಲಿ ಸಮರ್ಥನಾದ. ಕೀರ್ತಿ ಹಣ ಪ್ರಚಾರಗಳ ಉತ್ತುಂಗದಲ್ಲಿರುವ ಈ ಯುವ ಕ್ರೀಡಾಳು ತನ್ನ ಬಾಲ್ಯದ ಹಸಿವಿನ ನೆನಪುಗಳನ್ನು ಮೆಲಕು ಹಾಕುತ್ತ ಅಂದು ತಾನಿದ್ದಂತೆಯೇ ಇಂದು ಇರುವ ಲಕ್ಷಾಂತರ ಮಕ್ಕಳ ಬಗೆಗೆ ಈ ಕೋವಿಡ್ ಕಾಲದಲ್ಲಿ ಮಾತನಾಡಲು ಕೆಲಸ ಮಾಡಲು ಶುರು ಮಾಡಿದ್ದು ಮತ್ತೆ ಕಳೆದ ವಾರ ಇಲ್ಲಿನ ಸಂಸದರಿಗೆ ಬಹಿರಂಗ ಪತ್ರ ಬರೆದದ್ದು ಮತ್ತೆ ಅಭಿಯಾನ ನಡೆಸಿದ್ದು ಮತ್ತೆ ಕೊನೆಯಲ್ಲಿ ತನ್ನ ಅಭಿಯಾನಕ್ಕೆ ಅಗತ್ಯವಾದ ಜಯ ದೊರಕಿಸಿಕೊಂಡಿದ್ದು ಫುಟ್ಬಾಲ್ ಲೋಕದಿಂದ ಪತ್ರಿಕೆಗಳಲ್ಲಿ ಅಚ್ಚಾಗುವ ಮಾಮೂಲಿಯಲ್ಲದ ವಿಶಿಷ್ಟವಾದ ಸುದ್ದಿಯಾಯಿತು.
ಲೋಕಪ್ರಿಯ ಕ್ರೀಡೆಯ ಜನಪ್ರಿಯ ಆಟಗಾರನೊಬ್ಬ ಬರೆದ ಭಾವನಾತ್ಮಕ ಪತ್ರ ಆಮೇಲೆ ಟಿವಿ ವಾಹಿನಿಗೆ ನೀಡಿದ ಸಂದರ್ಶನ ದೇಶದ ದಿಕ್ಕುದೆಸೆಗಳಲ್ಲಿ ಸುದ್ದಿಯಾಯಿತು ಚರ್ಚೆಯನ್ನು ಹುಟ್ಟು ಹಾಕಿತು. ಹಸಿವಿನ ಪರಿಚಯ ಇಲ್ಲದವರಿಗೆ ಹಸಿವನ್ನು ಪರಿಚಯಿಸುವುದು ಮತ್ತೆ ಪರಿಚಯ ಇದ್ದವರಿಗೆ ಸದ್ಯದ ಸ್ಥಿತಿಯನ್ನು ಪುನರುಚ್ಛರಿಸುವುದು ಆತನ ಉದ್ದೇಶವಾಗಿತ್ತು.
ಹಸಿವು ಎನ್ನುವ ಶಬ್ದಕ್ಕೆ ನಮ್ಮ ನಮ್ಮ ಕಲ್ಪನೆಯ ಅಥವಾ ಅನುಭದ ಲೋಕದಲ್ಲಿ ಬೇರೆ ಬೇರೆ ವ್ಯಾಖ್ಯಾನ ಇದೆ. ಅದು ಬಯಕೆಯೋ ಆಸೆಯೋ ಅಥವಾ ಕೊರತೆಯೋ ಅಥವಾ ಇನ್ನೇನೋ ಆಗಿ ನಮ್ಮ ಕಣ್ಣಿಗೆ ಗೋಚರ ಆಗುವ ಸಾಧ್ಯತೆ ಇದೆ. ಹಸಿವಿನ ಅನುಭವ ಒಮ್ಮೆಯಾದರೂ ಆಗದವರು ಇರಲಿಕ್ಕಿಲ್ಲ. ಆದರೆ ಹಸಿವಿನ ಅನುಭೂತಿ ನಿತ್ಯವೂ ಅನಿವಾರ್ಯ ಆದವರ, ಉಪವಾಸ ಇರುವುದು ಬದುಕಿನ ಕ್ರಮವೇ ಆಗಿರುವವರ ಬಗೆಗೆ ರಾಷ್ಫೊರ್ಡ್ ಬರೆದ ಪತ್ರ ಮತ್ತು ಸಂದರ್ಶನದ ಮಾತುಗಳು ಗಟ್ಟಿಯಾದ ಧ್ವನಿ ನೀಡಿದವು.
ಈ ದೇಶದಲ್ಲಿ ಸಾಧಾರಣವಾದ ಯಾವುದೇ ಗಂಡಾಂತರ ಬರಲಿ ಎಂತಹ ಸಡಗರದ ಸಂಭ್ರಮವೇ ಇರಲಿ ಯಾರ ಯಾವುದರ ಹಂಗು ಇಲ್ಲದೆ ಬಹುತೇಕ ಪತ್ರಿಕೆಗಳ ಮುಖಪುಟದಲ್ಲಿ ಠಳಾಯಿಸುವ ಸುದ್ದಿ, ಇಲ್ಲಿನ ಫುಟ್ಬಾಲ್ ಆಟದ ಜಗತ್ತಿನದು. ಕ್ಲಬ್ ಫುಟ್ಬಾಲ್, ಪ್ರೀಮಿಯರ್ ಲೀಗ್ ಹೀಗೆ ಬೇರೆ ಬೇರೆ ಹೆಸರಲ್ಲಿ ಕರೆಸಿಕೊಳ್ಳುವ ಈ ಆಟದ ಮಾದರಿಗಳು ಇಲ್ಲಿನ ಜನಸಾಮಾನ್ಯರ ಹೃದಯದ ಬಡಿತದ ಮೇಲೆ ತೀವ್ರ ಹತೋಟಿ ಇರುವ ಸರಕು ವಸ್ತು.
ಆಹಾರದ ಕೊರತೆಯ ಬಗೆಗೆ ಅಥವಾ ಊಟವನ್ನು ದುಡಿದು ಪಡೆಯುವ ಅಶಕ್ತತೆ ಅಸಾಮರ್ಥ್ಯತೆಯ ಕುರಿತು ಸ್ವಾನುಭವದ ಬಲದಲ್ಲಿಯೇ ಬರೆದ ಪದಗಳು ಫುಟ್ಬಾಲ್ ಪ್ರೇಮಿಗಳನ್ನು ಹಾಗು ಅಲ್ಲದವರನ್ನು ಎಚ್ಚರಿಸಿದವು, ಸರಕಾರಕ್ಕೆ ತೀಕ್ಷ್ಣ ಸವಾಲಾಗಿ ಕಾಡಿದವು. ಬ್ರಿಟನ್ನಿನಲ್ಲಿ ಅನಾದಿ ಕಾಲದಿಂದ ಹಲವು ಬಗೆಯ ಬಡತನಗಳು ಜೀವಿಸಿಕೊಂಡು ಬಂದಿವೆಯಾದರೂ ಅವುಗಳ ನಡುವೆ ಆಗಾಗ ಚರ್ಚೆಗೆ ಗ್ರಾಸವಾಗುವ ಆಹಾರದ ಬಡತನದ ಕುರಿತು ತನ್ನ ಬಾಲ್ಯವನ್ನೂ ಇನ್ನಿತರ ಮಕ್ಕಳ ವಾಸ್ತವನನ್ನೂ ರಾಷ್ಫೊರ್ಡ್ ಮನದಟ್ಟಾಗುವಂತೆ ತನ್ನ ಪತ್ರದಲ್ಲಿ ವಿವರಿಸುತ್ತಾನೆ.
ಈ ದೇಶದಲ್ಲಿ ಸುಮಾರು ಮೂವತ್ತೆರಡು ಸಾವಿರ ಶಾಲೆಗಳಿವೆ, ಅಲ್ಲಿಗೆ ಹೋಗುವ ಎಂಬತ್ತು ಲಕ್ಷ ಮಕ್ಕಳಲ್ಲಿ ಸುಮಾರು ಹದಿಮೂರು ಲಕ್ಷ ಮಕ್ಕಳು ಅಶಕ್ತ ಕುಟುಂಬದ ಮಕ್ಕಳಿಗೆ ಶಾಲೆಗಳಲ್ಲಿ ದೊರೆಯುವ ಮಧ್ಯಾಹ್ನದ ಉಚಿತ ಊಟದ ಯೋಜನೆಯಲ್ಲಿ ನೋಂದಾಯಿಸಿಕೊಂಡವರು. ಈ ಮಕ್ಕಳ ಹೆತ್ತವರು ಅಥವಾ ಒಂಟಿ ತಂದೆ ಒಂಟಿ ತಾಯಂದಿರು ಅತ್ಯಂತ ಕಡಿಮೆ ಆದಾಯದ ಅಥವಾ ಕನಿಷ್ಠ ವೇತನದ ಉದ್ಯೋಗದಲ್ಲಿ ಇರುವವರು. ಹಿತಕರ ಬದುಕನ್ನು ನಿಭಾಯಿಸಲು ಬೇಕಾಗುವ ವೆಚ್ಚ ಅವರ ಕನಿಷ್ಠ ವೇತನದ ಆದಾಯಕ್ಕಿಂತಲೂ ಮಿಕ್ಕಿದ್ದದ್ದರಿಂದ ಸರಕಾರದಿಂದ ಲಭ್ಯ ಆಗುವ ಊಟದ “ವೋಚರ್” ಗಳ ಬೆಂಬಲದಲ್ಲೇ ಇವರ ಮನೆಯ ಮಕ್ಕಳ ಒಂದು ಹೊತ್ತಿನ ಊಟ ಸಾಗಿಸುವವರು.
ಮಾರ್ಚ್ ತಿಂಗಳ ಕೊನೆಯಲ್ಲಿ ಅಕಸ್ಮಾತ್ ಆಗಿ ಲಾಕ್ಡೌನ್ ಘೋಷಣೆ ಆದಾಗ, ಶಾಲೆಯ ಊಟವನ್ನೇ ನಂಬಿದ ಅಂತಹ ಮಕ್ಕಳಿಗೆ ಶಾಲೆಯಲ್ಲಿ ಊಟ ಸಿಗದ ಕಾರಣ ಊಟದ ಕೂಪನ್ ಗಳನ್ನು ಸರಕಾರ ವಿತರಿಸುವ ವ್ಯವಸ್ಥೆ ಮಾಡಿತ್ತು. ಇಲ್ಲಿ ಜುಲೈ ಹಾಗು ಆಗಸ್ಟ್ ತಿಂಗಳುಗಳು ಒಂದು ತರಗತಿಯನ್ನು ಮುಗಿಸಿ ಬೇಸಿಗೆ ರಜೆ ಕಳೆದು ಮುಂದಿನ ತರಗತಿಗೆ ಹೋಗುವ ನಡುವಿನ ರಜಾಕಾಲ. ಸುಮಾರು ಆರು ವಾರಗಳ ಈ ರಜಾ ಕಾಲದಲ್ಲಿ ಸರಕಾರ ಕಡತದಲ್ಲಿ ನೋಂದಾಯಿತ ಮಕ್ಕಳಿಗೆ ಊಟದ ವೋಚರ್ ಅಥವಾ ಆಹಾರ ದೊರಕಿಸುವ ಚೀಟಿ ನೀಡುವ ಪದ್ಧತಿ ಹಿಂದಿನ ವರುಷಗಳಂತೆಯೇ ಈ ವರುಷವೂ ಇರಲಿಲ್ಲ ಅಥವಾ ಈ ಯೋಜನೆಯನ್ನು ಬದಲಿಸುವ ಯೋಚನೆ ಸರಕಾರಕ್ಕೂ ಇರಲಿಲ್ಲ. ಆದರೆ ಎಲ್ಲ ವರುಷಗಳಂತಲ್ಲದ ಈ ಕೋವಿಡ್ ಯುಗದಲ್ಲಿ ಇಂತಹ ಮಕ್ಕಳ ಪಾಲಕರು ಕನಿಷ್ಠ ಆದಾಯದಲ್ಲಿ ದುಡಿಯುವವರು ಅಥವಾ ಸದ್ಯಕ್ಕೆ ಕೆಲಸ ಕಳೆದುಕೊಂಡವರು ಆದ್ದರಿಂದ ಇದೊಂದು ವರ್ಷದ ಮಟ್ಟಿಗೆ ಬೇಸಿಗೆ ರಜೆಯ ಕಾಲದಲ್ಲಿಯೂ ಅಂತಹ ಮಕ್ಕಳಿಗೆ ಊಟ ಒದಗಿಸುವ ವ್ಯವಸ್ಥೆ ಆಗಬೇಕು ಎನ್ನುವುದು ರಾಷ್ಫೊರ್ಡ್ ನ ವಾದ ಹಾಗು ಆಗ್ರಹವಾಗಿತ್ತು.
ಹಸಿವು, ಉಚಿತ ಊಟ, ಫುಡ್ ಬ್ಯಾಂಕ್ ಇಂತಹವುಗಳಿಗೆ ಅಪರಿಚಿತನಲ್ಲದ ರಾಷ್ಫೊರ್ಡ್ ನ ಕೋರಿಕೆ ಅಂತರ್ಜಾಲ ಮಾಧ್ಯಮ ಸುದ್ದಿ ಪತ್ರಿಕೆಗಳ ಮೂಲಕ ಸಂಚಲನವನ್ನು ಹುಟ್ಟಿಸಿತು. ಈಗ ಇಪ್ಪತ್ತೆರೆಡು ವರ್ಷ ಪ್ರಾಯದವನಾದ ರಾಷ್ಫೊರ್ಡ್ ಹನ್ನೊಂದು ವರ್ಷಗಳ ಹಿಂದಿನವರೆಗೂ ಇಂತಹ ಉಚಿತ ಊಟದ ವ್ಯವಸ್ಥೆಯ ಸಹಾಯ ಪಡೆದೇ ಬೆಳೆದವನು. ಈತನ ಒಂಟಿ ತಾಯಿ ಕನಿಷ್ಠ ವೇತನದ ಮಿತಿಯಲ್ಲೇ ಮಕ್ಕಳನ್ನು ಬೆಳೆಸಿದವಳು. ತನ್ನ ಮಟ್ಟಿಗೇನೋ ಅದೃಷ್ಟ, ಪ್ರತಿಭೆಗಳು ಜೊತೆಯಾಗಿ, ನೆರೆಹೊರೆಯವರ ಬೆಂಬಲ ಒಳ್ಳೆಯ ಕೋಚ್ ಗಳ ಸಹಕಾರ ದೊರಕಿ ಈ ಹಂತವನ್ನು ತಲುಪಲು ಸಾಧ್ಯ ಆಯಿತು, ಆದರೆ ಕನಿಷ್ಠ ವೇತನದಲ್ಲಿ ಜೀವನ ಸಾಗಿಸುವ ಈ ದೇಶದ ಸಾಮಾನ್ಯ ಜನರು ಕೋವಿಡ್ ಕಾಲದಲ್ಲಿ ಹಿಂದಿಗಿಂತಲೂ ತೊಡಕಿನ ಬದುಕನ್ನು ಸಾಗಿಸುತ್ತಿದ್ದಾರೆ ಎಂದು ಹೇಳಿದ. ದೇಶದ ಆರ್ಥಿಕತೆಯ ಚೇತರಿಕೆಗೆ ಹಲವು ನೂರು ಬಿಲಿಯನ್ ಪೌಂಡ್ ಗಳ ಬೆಂಬಲ, ಉದ್ಯೋಗ ಕಳೆದುಕೊಂಡವರಿಗೆ ಐದಾರು ತಿಂಗಳುಗಳ ಕಾಲದ ಸಂಬಳಗಳನ್ನೂ ನೀಡಿ ಸಾಂತ್ವನ ಒದಗಿಸಿದ ಸರಕಾರಕ್ಕೆ ಈ ಹಸಿದ ಮಕ್ಕಳ ಆರು ವಾರಗಳ ಒಂದು ಹೊತ್ತಿನ ಊಟದ ಬಿಲ್ ಪಾವತಿಸುವುದು ಕಠಿಣ ಆಗಲಿಕ್ಕಿಲ್ಲ ಎಂದು ವಾದಿಸಿದ.
ಮೊದಲಿಗೆ ರಾಷ್ಫೊರ್ಡ್ ನ ಕೋರಿಕೆಯನ್ನು ಸರಕಾರ ಅಲಕ್ಷಿಸಿದ್ದರೂ ಆತನ ಅಭಿಯಾನಕ್ಕೆ ದೇಶದ ರಾಜಕೀಯ ಸಾಮಾಜಿಕ ವಲಯಗಳಿಂದ ದೊರೆತ ಪ್ರಬಲ ಬೆಂಬಲವನ್ನು ಕಂಡು ಆಮೇಲೆ ಸ್ವತಃ ಪ್ರಧಾನಿಯೇ ಕರೆ ಮಾಡಿ “ನಿನ್ನ ಕೇಳಿಕೆಯನ್ನು ಒಪ್ಪಿದ್ದೇನೆ” ಎಂದು ಹೇಳುವ ಸಂದರ್ಭ ನಿರ್ಮಾಣವಾಯಿತು.
ಲಾಕ್ಡೌನ್ ಘೋಷಣೆ ಆದಾಗಿನಿಂದಲೇ ಚ್ಯಾರಿಟಿ ಸಂಸ್ಥೆಗಳ ಜೊತೆಗೆ ಕೆಲಸ ಮಾಡುತ್ತಿದ್ದ ರಾಷ್ಫೊರ್ಡ್ ಜೂನ್ ಹದಿನೈದರಂದು ಬರೆದ ಪತ್ರಕ್ಕೆ ಸಿಕ್ಕ ಅಭೂತಪೂರ್ವ ಅನುಮೋದನೆ ಸಮರ್ಥನೆಗಳನ್ನು ಕಂಡು ಜೂನ್ ಹದಿನಾನಾರರಂದೇ ಸರಕಾರ ತನ್ನ ನಿಲುವನ್ನು ಬದಲಾಯಿಸಿಕೊಂಡು ಮಕ್ಕಳಿಗೆ ಬೇಸಿಗೆ ರಜೆಯಲ್ಲೂ ಊಟದ ವೋಚರ್ ನೀಡುವ ವ್ಯವಸ್ಥೆ ಮಾಡುವುದಾಗಿ ಹೇಳಿತು.
ಫುಟ್ಬಾಲ್ ಲೋಕದ ಹೊರಗೆ ಆಟಕ್ಕೆ ಸಂಬಂಧ ಇರದ ಕಾರಣವೊಂದರಿಂದ ಕಳೆದ ವಾರದಿಂದ ಸುದ್ದಿಯಾಗುತ್ತಿರುವ ರಾಷ್ಫೊರ್ಡ್ ಲಾಕ್ಡೌನ್ ಶುರು ಆದಾಗಿನಿಂದಲೇ ಆಹಾರದ ಕೊರತೆಯ ವಿಚಾರದಲ್ಲಿ ಸೇವೆ ಮಾಡುವ ದಯಾಧರ್ಮ ಸಂಸ್ಥೆಗಳ ಜೊತೆ ಕೆಲಸ ಮಾಡಲು ಆರಂಭಿಸಿದ್ದ. ಮಾರ್ಚ್ ಹದಿನೆಂಟಕ್ಕೆ ಪ್ರಧಾನಿ ಜಾನ್ಸನ್ ಶಾಲೆಗಳನ್ನು ಅನಿರ್ದಿಷ್ಟಾವಧಿಗೆ ಮುಚ್ಚುವ ಘೋಷಣೆ ಮಾಡಿದಾಗ ಈ ದೇಶದ ಬಹುತೇಕ ಹೆತ್ತವರು ಪಾಲಕರು ತಮ್ಮ ಮಕ್ಕಳನ್ನು ಈ ಕಾಲದಲ್ಲಿ ಎಲ್ಲಿ ಆರೈಕೆಗೆ ಬಿಟ್ಟು ತಮ್ಮ ತಮ್ಮ ಕೆಲಸಕ್ಕೆ ಹೋಗುವುದು ಎನ್ನುವ ಯೋಚನೆಯಲ್ಲಿರುವಾಗ ರಾಷ್ಫೊರ್ಡ್ ತಾನು ಕಂಡಂತಹ ಬಾಲ್ಯವನ್ನು ಕಳೆಯುತ್ತಿರುವ ಇಲ್ಲಿನ ಕೆಲವು ಲಕ್ಷ ಮಕ್ಕಳ ಮಧ್ಯಾಹ್ನದ ಊಟದ ವ್ಯವಸ್ಥೆಯ ಬಗೆಗೆ ಯೋಚಿಸುತ್ತಿದ್ದ.
ಮಾರ್ಚ್ ಕೊನೆಯ ವಾರದಲ್ಲಿ ಶಾಲೆಗಳು ಮುಚ್ಚಿ ಮಕ್ಕಳು ಮನೆಯಲ್ಲಿ ಕೂರುವಂತಾದಾಗಿನಿಂದ ಇಲ್ಲಿಯೇ ತನಕ ರಾಷ್ಫೊರ್ಡ್ ತನ್ನ ದುಡಿಮೆ, ಫುಟ್ಬಾಲ್ ಕ್ಲಬ್ ಗಳಲ್ಲಿ ಕ್ರೀಡಾ ಆಸಕ್ತರಲ್ಲಿ ತನಗಿರುವ ಪ್ರಭಾವಗಳನ್ನು ಬಳಸಿ ಬಡಮಕ್ಕಳಿಗೆ ಊಟ ಒದಗಿಸಲು ಸಂಘಸಂಸ್ಥೆಗಳ ಜೊತೆಗೂಡಿ ಸುಮಾರು ಇನ್ನೂರು ಕೋಟಿ ರೂಪಾಯಿಗಳ ನಿಧಿ ಸಂಗ್ರಹಿಸಿದ. ಮತ್ತೆ ಇದೀಗ ಬಡತನದಲ್ಲಿರುವ ಮಕ್ಕಳ ಉಚಿತ ಊಟದ ವ್ಯವಸ್ಥೆ ಬೇಸಿಗೆ ರಜೆಗೂ ವಿಸ್ತರಿಸುವಂತೆ ಮಾಡಿದ.
ಫುಟ್ಬಾಲ್ ಮೈದಾನದಲ್ಲಿ ಹಲವು ಗೋಲ್ ಗಳನ್ನು ಹೊಡೆದು ಪ್ರೇಕ್ಷಕರ ಅಭಿಮಾನಿಗಳ ಕೇಕೆ ಹರ್ಷೋದ್ಗಾರ ಪಡೆಯುವ, ಪ್ರತಿವರ್ಷವೂ ಅದೆಷ್ಟೋ ಕೋಟಿ ರೂಪಾಯಿಗಳ ಮೌಲ್ಯದ ಸಂಭಾವನೆ ಸ್ವೀಕರಿಸುವ ಈತ ತನ್ನ ಸುತ್ತಲಿನ ಪ್ರಭಾವಳಿಯನ್ನು ಕೆಲ ಕ್ಷಣಗಳ ಮಟ್ಟಿಗಾದರೂ ಕಳಚಿಟ್ಟು ಸಾಮಾನ್ಯರಲ್ಲಿ ಸಾಮಾನ್ಯರಾದ ಕುಟುಂಬಗಳ ಮಕ್ಕಳಿಗೆ ಸಣ್ಣ ಆಸರೆಯನ್ನು ಒದಗಿಸಿದ್ದು ಕ್ರೀಡೆಯ ಒಳಗಿನ ಹೊರಗಿನ ಲೋಕಗಳು ಗಮನಿಸಬೇಕಾದ ಅನುಸರಿಸಬೇಕಾದ ಸಂಗತಿ; ಅಪ್ರತಿಮ ಖ್ಯಾತಿಯ ಆಟಗಾರನೊಬ್ಬ ನಿರ್ಣಾಯಕ ಘಳಿಗೆಯಲ್ಲಿ ಸಮಾಜವಾದದ ಜಿದ್ದುಬಿಡದ ಚಳವಳಿಕಾರನಂತೆ ತೊಡಗಿಸಿಕೊಂಡದ್ದು, ಒಲ್ಲದ ಮನಸ್ಸಿನಲ್ಲಿದ್ದ ಸರಕಾರವನ್ನೂ ಸಶಕ್ತ ಅಭಿಯಾನದ ಮೂಲಕ ಜನಾನುರಾಗಿಯಾಗಿ ವರ್ತಿಸುವಂತೆ ಮಾಡಿದ್ದು ಒಂದು ಅಪೂರ್ವವಾದ ಘಟನೆ.
ಫುಟ್ಬಾಲ್ ಲೋಕದ ಥಳುಕಿನ ವಿಷಯಗಳು ಮಾಮೂಲಿ ಸ್ಥಿತಿಗೆ ಮರಳುತ್ತಿರುವ ಬ್ರಿಟನ್ನಿನಲ್ಲಿ ಸುದ್ದಿ ಮಾಧ್ಯಮಗಳ ಮುಖಪುಟದ ತಮ್ಮ ಎಂದಿನ ಸ್ಥಾನಕ್ಕೆ ಮತ್ತೆ ಮರಳುತ್ತಿದ್ದರೂ ಅದೇ ಕಾಲಕ್ಕೆ ರಾಷ್ಫೊರ್ಡ್ ನಡೆದ ಹೆಜ್ಜೆಗುರುತುಗಳು ಫುಟ್ಬಾಲ್ ಲೋಕಕ್ಕೆ ಮಾತ್ರವಲ್ಲದೆ ಸುತ್ತಲಿನ ಸಮಾಜದಿಂದ ಅಪರಿಮಿತ ಜನಾಕರ್ಷಣೆ ಜನಾನುರಾಗ ಪಡೆಯುವ ಎಲ್ಲ ಬಗೆಯ ಸೆಲೆಬ್ರಿಟಿಗಳಿಗೂ ತಮ್ಮ ಬದ್ಧತೆ ಬಾಧ್ಯತೆಗಳನ್ನು ನೆನಪಿಸುವ ಪ್ರೇರಣೆ ಪ್ರಚೋದನೆ ಒದಗಿಸುವ ಸಾಧ್ಯತೆಯನ್ನು ಹೊಂದಿದೆ.
ಕ್ರೀಡಾಂಗಣದ ಒಳಗಿನ ಮಿಂಚಿನ ಓಟ ಕಾಲುಗಳ ನಡುವಿನ ಅಪೂರ್ವ ಹೊಂದಾಣಿಕೆ ಕಲೆಗಾರಿಕೆಗಳಿಂದ ಪ್ರಮುಖ ಸ್ಪರ್ಧೆಯೊಂದರಲ್ಲಿ ಗೆದ್ದು ಹೊನ್ನಿನ ಟ್ರೋಫಿ ಎತ್ತಿ ಹಿಡಿದ ಚಿತ್ರದಲ್ಲಿ ಮರುದಿನದ ಪತ್ರಿಕೆಗಳ ಮುಖಪುಟದಲ್ಲಿ ಮಿನುಗುವ ಆಟಗಾರನೊಬ್ಬ ತನ್ನ ಮೂಲಭೂತವಾದ ಜವಾಬ್ದಾರಿಗಳನ್ನು ಮರೆಯದೆ, ಜೀವನಪ್ರೀತಿ, ಹೃದಯವಂತಿಕೆಗಳನ್ನು ಮೆರೆಸಿದ, ಮತ್ತೆ ಅರ್ಥಪೂರ್ಣವೂ ಅಸಾಧಾರಣವೂ ಆದ “ಗೋಲ್” ಹೊಡೆದ ಅಸಾಮಾನ್ಯ ಘಳಿಗೆಯಾಗಿ ಇದೀಗ ಇಲ್ಲಿನ ಕೋವಿಡ್ ಡೈರಿಯಲ್ಲಿ ದಾಖಲಾಗುತ್ತಿದೆ.
ಇಂಗ್ಲೆಂಡ್ ನ ಬ್ರಿಸ್ಟಲ್ ನಗರದ “ಏರ್ ಬಸ್” ವಿಮಾನ ಕಂಪನಿಯಲ್ಲಿ ವಿಮಾನ ಶಾಸ್ತ್ರ ತಂತ್ರಜ್ಞ. ಬರವಣಿಗೆ, ಯಕ್ಷಗಾನ ಆಸಕ್ತಿಯ ವಿಷಯಗಳು. ಮೂಲತಃ ಕನ್ನಡ ಕರಾವಳಿಯ ಮರವಂತೆಯವರು. “ಲಂಡನ್ ಡೈರಿ-ಅನಿವಾಸಿಯ ಪುಟಗಳು” ಇವರ ಪ್ರಕಟಿತ ಬಿಡಿಬರಹಗಳ ಗುಚ್ಛ.