ಮುಖ್ಯಗರ್ಭಗುಡಿಯಲ್ಲಿರುವ ಯೋಗಮಾಧವನ ವಿಗ್ರಹವು ಹೊಯ್ಸಳ ಶಿಲ್ಪಗಳಲ್ಲಿ ಬಹು ಅಪೂರ್ವಮಾದರಿಯ ವಿಗ್ರಹವೆಂದು ಹೇಳಬಹುದು. ಪೀಠದಿಂದ ಅಂದಾಜು ಎಂಟು ಅಡಿಗಳಷ್ಟು ಎತ್ತರವಿರುವ ಈ ವಿಗ್ರಹದ ಸೊಬಗು ಬೆರಗುಮೂಡಿಸುವಂಥದು. ತಾವರೆಯಂತಹ ಪೀಠದ ಮೇಲೆ ಪದ್ಮಾಸನದಲ್ಲಿ ಕುಳಿತ ಮಾಧವ. ಮೇಲುಗೈಗಳಲ್ಲಿ ಚಕ್ರಶಂಖಗಳಿವೆ. ಎಡ ಅಂಗೈಯ ಮೇಲೆ ಬಲ ಅಂಗೈಯನ್ನಿರಿಸಿ ಧ್ಯಾನಸ್ಥನಾಗಿರುವ ಅಪೂರ್ವ ಭಂಗಿಯನ್ನಿಲ್ಲಿ ನೋಡಬಹುದು. ಕಿರೀಟ ಕುಂಡಲಗಳಿಂದ ಮೊದಲುಗೊಂಡು ಸರ್ವಾಭರಣಗಳ ಕೆತ್ತನೆ ವಿಗ್ರಹದ ವೈಭವಕ್ಕೆ ಇಂಬುಗೊಟ್ಟಿವೆ. ಕೀರ್ತಿಮುಖದ ಪ್ರಭಾವಳಿಯ ಹೊರ ಅಂಚಿನಲ್ಲಿ ದಶಾವತಾರಗಳ ಕೆತ್ತನೆಯೂ ಇದೆ. ಪೀಠದ ಮುಂಭಾಗದಲ್ಲಿ ಕೈಮುಗಿದು ಕುಳಿತ ಗರುಡನಿದ್ದಾನೆ.
ಟಿ. ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ನಲ್ವತ್ಮೂರನೆಯ ಕಂತು

 

ಚಿಕ್ಕನಾಯಕನಹಳ್ಳಿ – ತುಮಕೂರು ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲೊಂದು. ಈ ತಾಲ್ಲೂಕಿಗೆ ಸೇರಿದ ಶೆಟ್ಟಿಕೆರೆ ಗ್ರಾಮವು ಕಾಲಭೈರವನ ಸ್ಥಾನವಾಗಿಯೂ, ಹೊಯ್ಸಳರ ಕಾಲದ ಯೋಗಮಾಧವ ದೇವಾಲಯದಿಂದಲೂ ಗಮನಸೆಳೆಯುತ್ತದೆ. ಚಿಕ್ಕನಾಯಕನಹಳ್ಳಿಯಿಂದ ಸುಮಾರು ಎಂಟು ಕಿ.ಮೀ. ದೂರದಲ್ಲಿರುವ ಶೆಟ್ಟಿಕೆರೆ ಗ್ರಾಮಕ್ಕೆ ಬೆಂಗಳೂರು-ಶಿವಮೊಗ್ಗ ಹೆದ್ದಾರಿಯ ಕೆ.ಬಿ. ಕ್ರಾಸ್ ನಿಂದ ಬಲಕ್ಕೆ ತಿರುಗಿ ಸಾಧಾರಣ ರಸ್ತೆಯಲ್ಲಿ ಪಂಕಜನಹಳ್ಳಿ, ಸಾಸಲು ಗ್ರಾಮಗಳ ಮಾರ್ಗವಾಗಿಯೂ ತಲುಪಬಹುದು.

800 ವರುಷಗಳ ಹಿಂದೆ ಪ್ರಸಿದ್ಧ ಅಗ್ರಹಾರವೆನಿಸಿದ್ದ ಶೆಟ್ಟಿಕೆರೆಯಲ್ಲಿ ಗೋಪಾಲ ದಂಡನಾಯಕನೆಂಬುವನು 1261 ರಲ್ಲಿ ಯೋಗಮಾಧವ ದೇವಾಲಯವನ್ನು ಕಟ್ಟಿಸಿದನು. ಈತನು ಹೊಯ್ಸಳ ಅರಸ ಮೂರನೆಯ ನರಸಿಂಹನ ದಳಪತಿಯಾಗಿದ್ದವನು. ತುಮಕೂರು ಜಿಲ್ಲೆಯ ಪ್ರಮುಖ ಹೊಯ್ಸಳ ದೇವಾಲಯಗಳ ಸಾಲಿಗೆ ಸೇರಿರುವ ಯೋಗಮಾಧವನ ದೇವಾಲಯದ ಜೀರ್ಣೋದ್ಧಾರ ಕಾರ್ಯವನ್ನು ಪುರಾತತ್ವ ಇಲಾಖೆಯು ಇತ್ತೀಚೆಗಷ್ಟೆ ಯಶಸ್ವಿಯಾಗಿ ಪೂರೈಸಿದೆ. ಇದೊಂದು ತ್ರಿಕೂಟಾಚಲ ದೇವಾಲಯವಾಗಿದ್ದರೂ ಮುಖ್ಯ ಗರ್ಭಗುಡಿಯ ಮೇಲ್ಭಾಗದಲ್ಲಿ ಮಾತ್ರ ಶಿಖರವಿದೆ.

ಗರ್ಭಗುಡಿಯ ಮುಂಭಾಗದಲ್ಲಿ ಶುಕನಾಸಿ, ನವರಂಗಗಳಿದ್ದು ಎರಡು ಬದಿಯಲ್ಲಿ ಒಂದೊಂದು ಕಿರುಗುಡಿಗಳಿವೆ. ಎಡಭಾಗದ ಗುಡಿಯಲ್ಲಿ ವೇಣುಗೋಪಾಲ ಹಾಗೂ ಬಲಭಾಗದಲ್ಲಿ ಲಕ್ಷ್ಮೀನಾರಾಯಣರ ವಿಗ್ರಹಗಳನ್ನು ಕಾಣಬಹುದು. ದೇವಾಲಯದ ಪ್ರವೇಶದ್ವಾರದೆಡೆ ತೆರೆದ ಮಂಟಪವೊಂದಿದೆ. ಈ ಮಂಟಪಕ್ಕೆ ಯಾರೋ ತಮಗೆ ತೋಚಿದಂತೆ ಬಣ್ಣಬಳಿದಿರುವುದನ್ನು ಬಿಟ್ಟಂತೆ ದೇವಾಲಯ ತನ್ನ ಮೂಲಸ್ವರೂಪವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಿದೆ. ಕೆರೆಯ ಅಂಚಿನ ಬಯಲಲ್ಲಿರುವ ದೇವಾಲಯದ ಕಟ್ಟಡ ಮೂರಡಿ ಎತ್ತರದ ಜಗತಿಯ ಮೇಲಿದ್ದು ದೂರದಿಂದಲೇ ಗಮನಸೆಳೆಯುತ್ತದೆ. ಈ ಜಗಲಿಯೂ ಐದಾರು ಸ್ತರಗಳಲ್ಲಿ ಒಳಹೊರಗೆ ಚಾಚಿಕೊಂಡಂತೆ ವಿನ್ಯಾಸಗೊಂಡಿದೆ. ಸುತ್ತುಗೋಡೆಯ ತಳಭಾಗವೂ ಹೀಗೆಯೇ ಒಳಹೊರಗೆ ಚಾಚಿಕೊಂಡಂತೆ ಪಟ್ಟಿಕೆಗಳ ವಿನ್ಯಾಸಹೊಂದಿದೆ. ಆದರೆ, ಈ ಪಟ್ಟಿಕೆಗಳ ಮೇಲೆ ಇತರ ಹೊಯ್ಸಳ ದೇವಾಲಯಗಳಲ್ಲಿ ಕಾಣುವಂತೆ ಆನೆ, ಕುದುರೆ, ಹೂಬಳ್ಳಿಗಳಂತಹ ಯಾವುದೇ ಅಲಂಕರಣವಿಲ್ಲ. ಗೋಡೆಯ ಮೇಲೂ ಯಾವುದೇ ಭಿತ್ತಿಶಿಲ್ಪಗಳಿಲ್ಲದಿದ್ದರೂ ಕಿರುಗೋಪುರಗಳ ಸರಳ ಶೈಲಿಯೇ ಗಮನಸೆಳೆಯುವಂತಿದೆ.

ಕಂಬಗಳ ವಿನ್ಯಾಸವೂ ನಕ್ಷತ್ರಾಕಾರದಂತೆ ಒಳಹೊರಗೆ ಚಾಚಿಕೊಳ್ಳುತ್ತ ಕಟ್ಟಡದ ಅಂದವನ್ನು ಹೆಚ್ಚಿಸಿದೆ. ಸೂರಿನ ಅಂಚಿನಲ್ಲಿ ಕಳಶಗಳಂತಹ ಅಲಂಕರಣವಿದೆ. ಮೂರು ಸ್ತರಗಳ ಶಿಖರದ ಮೇಲಕ್ಕೆ ಮೊಗುಚಿಟ್ಟ ಹೂವಿನ ಆಕಾರದ ಸ್ತೂಪಿಯೂ ಇತ್ತೀಚೆಗೆ ಇರಿಸಿರಬಹುದಾದ ಲೋಹದ ಕಳಶವೂ ಇವೆ.

ಮುಖ್ಯಗರ್ಭಗುಡಿಯಲ್ಲಿರುವ ಯೋಗಮಾಧವನ ವಿಗ್ರಹವು ಹೊಯ್ಸಳ ಶಿಲ್ಪಗಳಲ್ಲಿ ಬಹು ಅಪೂರ್ವಮಾದರಿಯ ವಿಗ್ರಹವೆಂದು ಹೇಳಬಹುದು. ಪೀಠದಿಂದ ಅಂದಾಜು ಎಂಟು ಅಡಿಗಳಷ್ಟು ಎತ್ತರವಿರುವ ಈ ವಿಗ್ರಹದ ಸೊಬಗು ಬೆರಗುಮೂಡಿಸುವಂಥದು. ತಾವರೆಯಂತಹ ಪೀಠದ ಮೇಲೆ ಪದ್ಮಾಸನದಲ್ಲಿ ಕುಳಿತ ಮಾಧವ. ಮೇಲುಗೈಗಳಲ್ಲಿ ಚಕ್ರಶಂಖಗಳಿವೆ. ಎಡ ಅಂಗೈಯ ಮೇಲೆ ಬಲ ಅಂಗೈಯನ್ನಿರಿಸಿ ಧ್ಯಾನಸ್ಥನಾಗಿರುವ ಅಪೂರ್ವ ಭಂಗಿಯನ್ನಿಲ್ಲಿ ನೋಡಬಹುದು. ಕಿರೀಟ ಕುಂಡಲಗಳಿಂದ ಮೊದಲುಗೊಂಡು ಸರ್ವಾಭರಣಗಳ ಕೆತ್ತನೆ ವಿಗ್ರಹದ ವೈಭವಕ್ಕೆ ಇಂಬುಗೊಟ್ಟಿವೆ. ಕೀರ್ತಿಮುಖದ ಪ್ರಭಾವಳಿಯ ಹೊರ ಅಂಚಿನಲ್ಲಿ ದಶಾವತಾರಗಳ ಕೆತ್ತನೆಯೂ ಇದೆ. ಪೀಠದ ಮುಂಭಾಗದಲ್ಲಿ ಕೈಮುಗಿದು ಕುಳಿತ ಗರುಡನಿದ್ದಾನೆ.

ಈ ದೇವಾಲಯದಲ್ಲಿರುವ ಎಲ್ಲ ವಿಗ್ರಹಗಳೂ ತಮ್ಮ ಶಿಲ್ಪಸೌಂದರ್ಯದಿಂದ ನೋಡುಗರನ್ನು ಸೆಳೆಯಬಲ್ಲವು. ನವರಂಗದ ಮಂಟಪದಲ್ಲಿ ಇರಿಸಿರುವ ಲಕ್ಷ್ಮಿಯ ವಿಗ್ರಹವು ಚತುರ್ಭುಜ ದೇವತೆ. ಎರಡು ಕೈಗಳಲ್ಲಿ ಪದ್ಮಗಳನ್ನೂ ಅಭಯಹಸ್ತ, ದಾನಮುದ್ರೆಗಳನ್ನೂ ಪ್ರದರ್ಶಿಸುವ ಈ ವಿಗ್ರಹದ ಪೀಠದಲ್ಲಿ ಸಿಂಹವಾಹನವಿರುವುದರಿಂದ ಇದು ಪಾರ್ವತಿಯ ವಿಗ್ರಹವಾಗಿರುವ ಸಾಧ್ಯತೆಯೂ ಇದೆಯೆಂದು ಕೆಲವರ ಅಭಿಪ್ರಾಯ.

ಎಡಭಾಗದ ದೇಗುಲದಲ್ಲಿರುವ ವೇಣುಗೋಪಾಲನ ವಿಗ್ರಹವು ಈ ಮಾದರಿಯ ಅನೇಕ ಹೊಯ್ಸಳ ಶಿಲ್ಪಗಳಂತೆಯೇ ಆಕರ್ಷಕವಾಗಿದೆ. ಮರದಡಿಯಲ್ಲಿ ನಿಂತು ಕೊಳಲೂದುತ್ತಿರುವ ಕೃಷ್ಣನದ್ದು ತ್ರಿಭಂಗಿಯ ನಿಲುವು. ಅವನ ಅಕ್ಕಪಕ್ಕ ಗೋಪಿಕೆಯರೂ ಗೊಲ್ಲರೂ ಗೋವುಗಳೂ ನಿಂತು ವೇಣುಗಾನವನ್ನು ಆಲಿಸುತ್ತಿದ್ದಾರೆ. ವಿಗ್ರಹದ ಕೆಳಭಾಗದಲ್ಲಿ ದೇವಿಯರನ್ನೂ ವಿಗ್ರಹದ ಮೇಲಂಚಿನಲ್ಲಿ ದಶಾವತಾರದ ಕೆತ್ತನೆಯನ್ನೂ ಕಾಣಬಹುದು.

(ಚಿತ್ರಗಳು: ಟಿ. ಎಸ್. ಗೋಪಾಲ್)

ಗರ್ಭಗುಡಿಯ ಎರಡು ಪಕ್ಕಗಳಲ್ಲಿ ಗಣೇಶ ಹಾಗೂ ಮಹಿಷಮರ್ದಿನಿಯರ ಶಿಲ್ಪಗಳಿವೆ. ಎತ್ತರವಾದ ಪೀಠದ ಮೇಲೆ ಪಾಶಾಂಕುಶಹಸ್ತನಾಗಿ ಕುಳಿತ ಚತುರ್ಭುಜ ಗಣಪತಿಯಿದ್ದಾನೆ. ಎಮ್ಮೆಯ ದೇಹದಿಂದ ಹೊರಬಂದು ಯುದ್ಧಕ್ಕೆಳಸುವ ಮಹಿಷಾಸುರನ ಜುಟ್ಟುಹಿಡಿದು ತ್ರಿಶೂಲದಿಂದ ಇರಿಯಲು ಸನ್ನದ್ಧಳಾದ ಅಷ್ಟಭುಜಗಳ ದೇವಿಯ ವಿಗ್ರಹವೂ ಶಿಲ್ಪಕಲೆಯ ಅತ್ಯುತ್ತಮಮಾದರಿಗಳಲ್ಲೊಂದು.

ಬಲಭಾಗದ ಗುಡಿಯಲ್ಲಿ ಲಕ್ಷ್ಮೀನಾರಾಯಣ ವಿಗ್ರಹವಿದೆ. ಲಕ್ಷ್ಮೀದೇವಿಯನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಪದ್ಮಗದಾ ಶಂಖಚಕ್ರಧಾರಿಯಾಗಿ ಕುಳಿತ ನಾರಾಯಣ. ಈ ಎಲ್ಲ ಶಿಲ್ಪಗಳೂ ಸುಸ್ಥಿತಿಯಲ್ಲಿ ಕಳೆದ ಎಂಟುನೂರು ವರ್ಷಗಳಿಂದ ಸುಸ್ಥಿತಿಯಲ್ಲಿ ಉಳಿದುಕೊಂಡು ಬಂದಿರುವುದೇ ನಾಡಿನ ಸುದೈವ. ಈ ಅದ್ಭುತ ಶಿಲಾಸಂಪತ್ತನ್ನು ಕಿಂಚಿತ್ತೂ ಮುಕ್ಕಾಗದಂತೆ ಉಳಿಸಿಕೊಂಡು ಬಂದಿರುವುದಕ್ಕಾಗಿ ಶೆಟ್ಟಿಕೆರೆ ಗ್ರಾಮಸ್ಥರನ್ನೂ ಅವರ ಪೂರ್ವಿಕರನ್ನೂ ಹೃತ್ಪೂರ್ವಕವಾಗಿ ಅಭಿನಂದಿಸಲೇಬೇಕು.