ತಿರಿಗಾಡಿದಷ್ಟೂ ಕಾಣುವ ವಿವಿಧ ದೇಶಗಳ ಹಂಗಿಲ್ಲದ ನಂಬಿಕೆಗಳ ಪ್ರಪಂಚ ನನಗೊಂದು ಸೋಜಿಗ ಮತ್ತು ಭರವಸೆಯ ಸ್ಪರ್ಶಮಣಿಯಂತೆ ತೋರುತ್ತದೆ. ಕೆಲವು ವರ್ಷಗಳ ಹಿಂದೆ ಬಾಲ್ಟಿಕ್‌ ದೇಶಗಳಲ್ಲಿ ಅಲೆಯುತ್ತಿದ್ದೆ. ಆಗ ಹೋಗಿ ನೋಡಿದ್ದು ಲಿಥುಯೇನಿಯಾದಲ್ಲಿರುವ ‘ಹಿಲ್‌ ಆಫ್‌ ಕ್ರಾಸ್‌ʼ ಅನ್ನುವ ಗುಡ್ಡ. ಲಿಥೂಯೇನಿಯಾ ಬಾಲ್ಟಿಕ್‌ ಸಾಗರದ ನಡುವಿನ ಒಂದು ದೇಶ. ೧೪ ನೇ ಶತಮಾನದಿಂದ ಸೋವಿಯತ್‌ ರಷ್ಯಾದ ಆಳ್ವಿಕೆಯಲ್ಲಿದ್ದು ೧೯೯೧ ರಲ್ಲಿ ಸ್ವತಂತ್ರವಾದ ದೇಶ. ಈ ದೇಶದ ಸಿಯಾಉಲಿಯೈ ಎಂಬ ನಗರದಿಂದ ೧೨ ಕಿ ಮೀ ದೂರದಲ್ಲಿರುವ ಗುಡ್ಡ ಹಿಲ್‌ ಆಫ್‌ ಕ್ರಾಸಸ್. ಇದೊಂದು ಕ್ರಿಶ್ಚಿಯನ್‌ ಯಾತ್ರಾಸ್ಥಳ.
ಗಿರಿಜಾ ರೈಕ್ವ ಬರೆಯುವ ದೇಗುಲಗಳ ಕುರಿತ ಹೊಸ ಪ್ರವಾಸ ಅಂಕಣ “ದೇವಸನ್ನಿಧಿ” ಇಂದಿನಿಂದ

ಎಷ್ಟು ಸರಳ ಆದರೆ ಗಟ್ಟಿ ಈ ನಂಬಿಕೆಗಳು

ಜಾಗೇಶ್ವರಕ್ಕೆ ಹೋಗುತ್ತಿದ್ದ ನಮ್ಮನ್ನು ಯಕಃಶ್ಚಿತ್‌ ಒಂದು ಮರ ತಡೆದು ನಿಲ್ಲಿಸಿತ್ತು. ಉತ್ತರಾಖಂಡದ ಕುಮಾವೂ ಪ್ರಾಂತ್ಯದ ಅಲ್ಮೊರಾದ ಬಳಿ ಇರುವ ಜಾಗೇಶ್ವರದ ದಾರಿಯಲ್ಲಿದ್ದೆವು. ಎರಡು ದಿನಗಳಿಂದ ಸುರಿಯುತ್ತಿದ್ದ ಮಳೆ ಅನೇಕ ಕಡೆ ರಸ್ತೆಗಳೇ ಬಂದ್‌ ಆಗುವ ಹಾಗೆ ಮಾಡಿತ್ತು. ಆದರೂ ನಾವು ಧೈರ್ಯ ಮಾಡಿ ಹೋಗಿಯೇ ಬರುವ ಎಂದು ಹೊರಟಿದ್ದೆವು. ಇನ್ನು ಆರು ಕಿ ಮೀ ಇರುವಾಗ ಒಂದು ಮರ ಅಡ್ಡಡ್ಡ ಮಲಗಿ ಮುಂದೆ ಹೋಗುವ ಯಾವ ಸಂಭವತೆಯೂ ಕಾಣದೆ ಹಿಂತಿರುಗಬೇಕಾಯಿತು. ಮರವನ್ನು ಹತ್ತಿ ಆಚೆ ಬದಿ ಹೋಗಿ ಮತ್ತೊಂದು ಟ್ಯಾಕ್ಸಿ ಕರೆಯುವ ಯೋಚನೆ ಬಂದಿತಾದರೂ, ಗುಡ್ಡದಿಂದ ನಿಧಾನವಾಗಿ ಸುರಿಯುತ್ತಿದ್ದ ಕಲ್ಲು ಮಣ್ಣುಗಳ ರಾಶಿ ಅಧೀರರನ್ನಾಗಿಸಿತು. ಒಂದು ಪಕ್ಷ ಹೋದರೂ ವಾಪಸ್‌ ಬರುವಾಗ ಗುಡ್ಡ ಪೂರ್ತಿ ಕುಸಿದು ಕೆಲವು ದಿನಗಳ ಕಾಲ ನಮ್ಮ ದಾರಿ ಬಂದ್‌ ಆಗುವ ಸಾಧ್ಯತೆ ಇದ್ದಿದ್ದರಿಂದ ವಾಪಸ್‌ ಹೋಗುವುದೇ ವಿವೇಕ ಅಂತ ಹಿಂತಿರುಗಿದೆವು. ಹಿಮಾಲಯದಲ್ಲಿ ಒಂದು ಮರ ಕೂಡ ನಮ್ಮ ಅಹಂಕಾರಕ್ಕೆ ಪೆಟ್ಟು ಕೊಡಬಲ್ಲದು, ಸವಾಲು ಹಾಕಬಲ್ಲುದು. ಅಲ್ಲಿಂದ ಮತ್ತೆ ಅಲ್ಮೋರಾಗೆ ಹೋಗುವ ದಾರಿಯಲ್ಲಿ ಇನ್ನೇನು ಅಲ್ಮೋರಾ ಒಂಭತ್ತು ಕಿ. ಮೀ ಇದೆ ಅನ್ನುವಾಗ ಸಿಕ್ಕ ದೇವಾಲಯ ಚಿತೈ ಗೋಲು ದೇವಾಲಯ. ಮಳೆ ಸುರಿಯುತ್ತಲೇ ಇತ್ತು. ನಾವು ಮಳೆಯಲ್ಲೇ ಕಾರು ಇಳಿದು ದೇವಾಲಯ ನೋಡಲು ಹೊರಟೆವು.

ಸುತ್ತಲೂ ಪೈನ್‌, ದೇವದಾರು ಮರಗಳ ದಟ್ಟ ಕಾಡು, ಅದರಾಚೆ ಪರ್ವತ ಶ್ರೇಣಿಗಳು, ಸುರಿಯುವ ಮಳೆ, ಮಳೆಯ ಸದ್ದನ್ನು ಮೀರಿ ಕಿವಿಗೆ ಬೀಳುವ ಗಂಟೆಗಳ ನಿನಾದ. ಒಂದು ಸುಂದರ ಅನುಭೂತಿ. ಅವೇನು ಒಂದೆರಡು ಗಂಟೆಗಳೆ?!!, ದೇವಾಲಯದಲ್ಲಿ ಎಲ್ಲಿ ನೋಡಿದರೂ ಗಂಟೆಗಳೇ. ಸಾವಿರಾರು ಗಂಟೆಗಳು. ಚಿಕ್ಕ, ದೊಡ್ಡ, ನೂರಾರು ಕೆಜಿ ತೂಗುವ ಭಾರವಾದ ಗಂಟೆಗಳು, ಪುಟಾಣಿ ಗಂಟೆಗಳು… ಅದೊಂದು ಗಂಟೆಗಳ ಲೋಕ. ಮರ ಅಡ್ಡ ಬಂದರೇನು? ಪ್ರಕೃತಿ ಮತ್ತೊಂದು ಹಬ್ಬವನ್ನು ನಮ್ಮ ಮುಂದಿಟ್ಟಿತ್ತು.

ಗೋಲು ದೇವತೆ ಉತ್ತರಾಖಂಡದ ಕುಮಾವೂ ಪರ್ವತ ಶ್ರೇಣಿಯಲ್ಲಿ ನಂಬಿ ಪೂಜಿಸುವ ದೇವತೆ. ಶಿವನ ಅವತಾರ ಎಂದು ಅಲ್ಲಿನವರು ನಂಬುತ್ತಾರೆ. ಗೌರ ಭೈರವ ಶಿವನನ್ನು ನ್ಯಾಯದ ದೇವತೆಯಾಗಿ ಪೂಜಿಸುತ್ತಾರೆ. ಉತ್ತರಾಖಂಡದ ಅನೇಕ ಕಡೆ ಗೋಲು ದೇವಾಲಯವನ್ನು ನೋಡಬಹುದು. ಆದರೆ ಅಲ್ಮೋರಾದ ಬಳಿ ಇರುವ ಚಿತೈನಲ್ಲಿ ಇರುವ ಗೋಲು ದೇವಾಲಯ ಹೆಚ್ಚು ಪ್ರಸಿದ್ಧವಾದದ್ದು. ಇದನ್ನು ೧೨ನೇ ಶತಮಾನದಲ್ಲಿ ಕಟ್ಟಿಸಿದ್ದು ಅಂತ ಹೇಳಲಾಗುತ್ತದೆ. ಆದರೆ ಈಗಿರುವ ದೇವಾಲಯದ ಕಟ್ಟಡ ನೋಡಿದರೆ ಅಷ್ಟು ಹಳೆಯದು ಅನ್ನಿಸುವುದಿಲ್ಲ. ನಮ್ಮ ದಕ್ಷಿಣದ ದೇವಾಲಯಗಳ ಹಾಗೆ ಮನಸೋಲುವ ವಾಸ್ತುಶಿಲ್ಪವಿಲ್ಲ. ಆದರೆ ಸರಳತೆಯೇ ಅದರ ಮೆರುಗು. ನಮ್ಮಲ್ಲಿಯ ದೇವಾಲಯಗಳ ಹಾಗೆ ವಿಸ್ತಾರವಿಲ್ಲ. ಆದರೆ ಹಿಮಾಲಯದ ಭವ್ಯತೆ ಬೆನ್ನಿಗಿದೆ. ಸರಳ ಶಿವನಿಗೆ ಭಕ್ತರ ಭಕ್ತಿಯೇ ಆಭರಣ, ನಂಬಿಕೆ, ಶ್ರದ್ಧೆಯೇ ನಿತ್ಯ ಪೂಜೆ.

ದೇವಾಲಯ ಅಂದ ಮೇಲೆ ಅದಕ್ಕೊಂದು ಕತೆಯಿರಬೇಕಲ್ಲ! ಇದಕ್ಕೂ ಹಲವಾರು ಕತೆಗಳಿವೆ. ಇದು ಅಲ್ಲಿದ್ದ ಒಬ್ಬರು ಹೇಳಿದ ಕತೆ. ಅದರಲ್ಲಿ ಒಂದು ಇದು ನ್ಯಾಯ ದೇವತೆ ಯಾಕೆ ಅನ್ನುವ ಕತೆ. ಹಿಂದೆ ಒಬ್ಬ ರಾಜ ಒಬ್ಬಳು ಹುಡುಗಿಯನ್ನು ಮದುವೆಯಾಗುತ್ತಾನೆ. ಅವನಿಗಾಗಲೇ ಮದುವೆಯಾಗಿ ಕೆಲವು ರಾಣಿಯರಿರುತ್ತಾರೆ. ಅವರು ಹೊಸ ಹುಡುಗಿಯ ಕಂಡು ಅಸೂಯೆಯಿಂದ ಉರಿದು ಬೀಳುತ್ತಾರೆ. ಅವಳಿಗೆ ಮಗುವಾದಾಗ ಆ ಮಗುವನ್ನು ನೀರಿಗೆ ಬಿಟ್ಟು ಅವಳ ಪಕ್ಕ ಕಲ್ಲನ್ನಿಡುತ್ತಾರೆ. ಆ ಮಗು ಯಾರೋ ಬೆಸ್ತರಿಗೆ ಸಿಕ್ಕು ಬೆಳೆಯುತ್ತದೆ. ಅವನಿಗೆ ತನ್ನ ಹುಟ್ಟಿನ ನಿಜ ಸಂಗತಿ ತಿಳಿದಾಗ ಮರದ ಕುದುರೆಯೊಂದನ್ನು ಮಾಡಿ ಅರಮನೆಯ ಬಳಿ ಬಂದು ಕುದುರೆಗೆ ನೀರು ಕುಡಿಸುವ ಪ್ರಯತ್ನ ಮಾಡುತ್ತಾನೆ. ಇದನ್ನು ಕಂಡ ರಾಜ ನಕ್ಕು ಅಲ್ಲಯ್ಯಾ ಎಂಥಾ ಮೂರ್ಖ ನೀನು. ಮರದ ಕುದುರೆ ಎಲ್ಲಾದರೂ ನೀರು ಕುಡಿಯುತ್ತಾ ಅಂತ ಲೇವಡಿ ಮಾಡುತ್ತಾನೆ. ಆಗ ಆ ಹುಡುಗ ನಿಮ್ಮ ಹೆಂಡತಿ ಕಲ್ಲನ್ನು ಹೆರುವುದಾದರೆ ಮರದ ಕುದುರೆ ನೀರು ಯಾಕೆ ಕುಡಿಯೋದಕ್ಕೆ ಆಗಲ್ಲ ಎಂದು ಪ್ರಶ್ನಿಸುತ್ತಾನೆ. ಆಗ ರಾಜನಿಗೆ ತನ್ನ ತಪ್ಪಿನ ಅರಿವಾಗಿ ಅವನನ್ನು ತನ್ನ ಮಗನಾಗಿ ಸ್ವೀಕರಿಸುತ್ತಾನೆ. ಅಂದಿನಿಂದ ರಾಜ ನ್ಯಾಯಕ್ಕೆ ಪ್ರಸಿದ್ಧಿಯಾಗುತ್ತಾನೆ. ಅವನ ನೆನಪಿಗೆ ಕಟ್ಟಿದ ದೇವಾಲಯ ಗೋಲು ದೇವಾಲಯ. ಕತ್ಯಾರಿ ರಾಜವಂಶದ ಒಬ್ಬ ಸೇನಾಧಿಪತಿಯ ಕತೆ ಇದು ಎಂದು ಕೆಲವರು ಹೇಳುತ್ತಾರೆ. ಕುದುರೆಯ ಮೇಲೆ ಕೂತ ಗೋಲು ದೇವತೆ ಅಲ್ಲಿಯ ಪೂಜಾವಿಗ್ರಹ. ಕಲ್ಕಿಯ ಹಾಗೆ ಒಂದು ಕೈಯ್ಯಲ್ಲಿ ಕತ್ತಿ ಹಿಡಿದು ಕುಳಿತ ಭಂಗಿಯಲ್ಲಿದೆ ಅಮೃತಶಿಲೆಯ ವಿಗ್ರಹ. ಇನ್ನು ದೇವಾಲಯದ ಆವರಣದ ತುಂಬಾ ಅನೇಕ ತ್ರಿಶೂಲಗಳು, ಭಸ್ಮ ಕಾಣಬಹುದು. ಇದೊಂದು ತರಹ ನಮಗೆ ಅನ್ಯಾಯ ಆಗಿದೆ ಅನ್ನಿಸಿದಾಗ ಮಾತಲ್ಲಿ ಹೇಳ್ತಿವಲ್ಲಾ ‘ದೇವರು ನೋಡಿಕೊಳ್ತಾನೆʼ ಅಂತ, ಅದು ಅಕ್ಷರಶಃ ಜಾರಿಯಲ್ಲಿರುವ ಜಾಗ. ರಾಜ್ಯ, ರಾಜರುಗಳು ಬದಲಾಗಬಹುದು. ಆದರೆ ಇಂತಹ ಪದ್ಧತಿಗಳು ಬದಲಾಗುವುದಿಲ್ಲ. ಕೋರ್ಟನ್ನು ಮೀರಿದ ಜಾನಪದ ನ್ಯಾಯ ವ್ಯವಸ್ಥೆ ಇದು. ನಮ್ಮ ಧರ್ಮಸ್ಥಳಕ್ಕೂ ಜನ ನ್ಯಾಯಕ್ಕಾಗಿ ಹೋಗುವುದನ್ನು ನೋಡಬಹುದು. ಹಳ್ಳಿಯಿಂದ ನಗರದ ತನಕ, ಆಗಮೋಕ್ತ ದೇವಾಲಯಗಳಿಂದ ಗೋಲು ದೇವತೆಯಂತಹ ಸಣ್ಣಹಳ್ಳಿಯ ದೇವಾಲಯಗಳ ತನಕ ಧರ್ಮದ ಚೌಕಟ್ಟಿನಲ್ಲಿ ನ್ಯಾಯ ಕೊಡುವ ದೇವಾಲಯಗಳಿದ್ದವು ಮತ್ತು ಈಗಲೂ ಇವೆ.

ಈಗಿರುವ ದೇವಾಲಯದ ಕಟ್ಟಡ ನೋಡಿದರೆ ಅಷ್ಟು ಹಳೆಯದು ಅನ್ನಿಸುವುದಿಲ್ಲ. ನಮ್ಮ ದಕ್ಷಿಣದ ದೇವಾಲಯಗಳ ಹಾಗೆ ಮನಸೋಲುವ ವಾಸ್ತುಶಿಲ್ಪವಿಲ್ಲ. ಆದರೆ ಸರಳತೆಯೇ ಅದರ ಮೆರುಗು. ನಮ್ಮಲ್ಲಿಯ ದೇವಾಲಯಗಳ ಹಾಗೆ ವಿಸ್ತಾರವಿಲ್ಲ. ಆದರೆ ಹಿಮಾಲಯದ ಭವ್ಯತೆ ಬೆನ್ನಿಗಿದೆ. ಸರಳ ಶಿವನಿಗೆ ಭಕ್ತರ ಭಕ್ತಿಯೇ ಆಭರಣ, ನಂಬಿಕೆ, ಶ್ರದ್ಧೆಯೇ ನಿತ್ಯ ಪೂಜೆ.

ಆಗೇನೋ ನ್ಯಾಯ ಸಿಕ್ತು. ಈಗ ಹೇಗೆ? ಇವತ್ತಿಗೂ ಜನ ಇಲ್ಲಿಗೆ ಬಂದರೆ ನ್ಯಾಯ ಸಿಗುತ್ತೆ ಎಂದು ನಂಬುತ್ತಾರೆ. ತಮ್ಮ ಅಹವಾಲನ್ನು ಬರಹದ ರೂಪದಲ್ಲಿ ಸಲ್ಲಿಸುತ್ತಾರೆ. ಕೆಲವರಂತೂ ಸ್ಟ್ಯಾಂಪ್‌ ಪೇಪರ್‌ ಮೇಲೆ ಬರೆದು ಕಟ್ಟಿದ್ದರು. ಅವುಗಳನ್ನು ಓದಿದರೆ ಮನುಕುಲದ ಎಲ್ಲಾಸಂಕಟಗಳ ಬೇರೆ ಬೇರೆ ರೂಪಗಳು ಕಾಣುತ್ತವೆ, ಕಾಡುತ್ತವೆ. ನ್ಯಾಯ ಸಿಗುತ್ತೆ, ಸಂಕಟಗಳಿಗೆ ಪರಿಹಾರ ಇದೆ ಎಂಬ ಇಂತಹ ನಂಬಿಕೆಗಳು ಇಲ್ಲದಿದ್ದರೆ ಹೇಗಿರುತ್ತಿತ್ತು? ಜನ ಬಂದು ಹರಕೆ ಮಾಡಿಕೊಂಡು ತಮ್ಮ ಅಹವಾಲನ್ನು ಬರೆದು ಕಟ್ಟಿಹೋಗುತ್ತಾರೆ. ಆಮೇಲೆ ತಮಗೆ ಬೇಕಾದ್ದು ಸಿಕ್ಕಿದಾಗ ಬಂದು ಗಂಟೆ ಕಟ್ಟಿ ಹರಕೆ ತೀರಿಸಿ ಹೋಗುತ್ತಾರೆ. ನಂಬಿಕೆಗಳಿಗೆ ಗೋಲುದೇವತೆ ಕಿವಿಯಾಗಿದ್ದಕ್ಕೆ ಸಾಕ್ಷಿ ಅಂಗಳದ ತುಂಬೆಲ್ಲಾ ರಿಂಗಣಿಸುವ ಗಂಟೆಗಳು. ಜೋರು ಮಳೆ, ಗಡಗಡ ಚಳಿ, ನಾವು ನೆನೆದು ತೊಪ್ಪೆಯಾಗಿದ್ದವು. ಆದರೆ ಒಂದು ತರಹ ಖುಷಿ ಚಳಿ ಮಳೆಯನ್ನೆಲ್ಲಾ ಓಡಿಸಿತ್ತು. ಜಾಗೇಶ್ವರ ನೋಡಲೆಂದೇ ನಾವು ನಾಲ್ಕು ಜನ ಗೆಳತಿಯರು ಬೆಂಗಳೂರಿನಿಂದ ಬಂದು ಸುರಿಮಳೆಯಲ್ಲಿ ಅಲೆದಾಡಿ ಕಡೆಗೆ ಮರಬಿದ್ದು ಜಾಗೇಶ್ವರನನ್ನು ನೋಡಲಾಗದೆ ನಿರಾಸೆಯಿಂದ ಹೊರಟವರನ್ನು ಗೋಲು ದೇವತೆ ಸಾಂತ್ವನ ಹೇಳಿ, ತಲೆ ನೇವರಿಸಿ ಕಳಿಸಿದಂತೆ ಅಲ್ಲಿಂದ ಹೊರಟಾಗ ತಾಜಾ ತಾಜಾ ಫೀಲಿಂಗ್.

ತಿರುಗಾಡಿದಷ್ಟೂ ಕಾಣುವ ಇಂತಹ ದೇಶಗಳ ಹಂಗಿಲ್ಲದ ನಂಬಿಕೆಗಳ ಪ್ರಪಂಚ ನನಗೊಂದು ಸೋಜಿಗ ಮತ್ತು ಭರವಸೆಯ ಸ್ಪರ್ಶಮಣಿಯಂತೆ ತೋರುತ್ತದೆ. ಕೆಲವು ವರ್ಷಗಳ ಹಿಂದೆ ಬಾಲ್ಟಿಕ್‌ ದೇಶಗಳಲ್ಲಿ ಅಲೆಯುತ್ತಿದ್ದೆ. ಆಗ ಹೋಗಿ ನೋಡಿದ್ದು ಲಿಥುಯೇನಿಯಾದಲ್ಲಿರುವ ‘ಹಿಲ್‌ ಆಫ್‌ ಕ್ರಾಸ್‌ʼ ಅನ್ನುವ ಗುಡ್ಡ. ಲಿಥೂಯೇನಿಯಾ ಬಾಲ್ಟಿಕ್‌ ಸಾಗರದ ನಡುವಿನ ಒಂದು ದೇಶ. ೧೪ ನೇ ಶತಮಾನದಿಂದ ಸೋವಿಯತ್‌ ರಷ್ಯಾದ ಆಳ್ವಿಕೆಯಲ್ಲಿದ್ದು ೧೯೯೧ ರಲ್ಲಿ ಸ್ವತಂತ್ರವಾದ ದೇಶ. ಈ ದೇಶದ ಸಿಯಾಉಲಿಯೈ ಎಂಬ ನಗರದಿಂದ ೧೨ ಕಿ ಮೀ ದೂರದಲ್ಲಿರುವ ಗುಡ್ಡ ಹಿಲ್‌ ಆಫ್‌ ಕ್ರಾಸಸ್. ಇದೊಂದು ಕ್ರಿಶ್ಚಿಯನ್‌ ಯಾತ್ರಾಸ್ಥಳ. ಒಂದು ಗುಡ್ಡದ ಮೇಲೆ ಬರೀ (ಕ್ರಾಸ್‌ ) ಶಿಲುಬೆಗಳೋ ಶಿಲುಬೆಗಳು. ಎನಿಲ್ಲಾ ಅಂದ್ರೂ ಒಂದು ಎರಡು ಲಕ್ಷಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಶಿಲುಬೆಗಳಿವೆ. ಮರದ ದೊಡ್ಡ ಶಿಲುಬೆಗಳು, ಲೋಹದ್ದು, ಪ್ಲ್ಯಾಸ್ಟಿಕ್ಕಿನದ್ದು, ಕಲಾತ್ಮಕವಾಗಿ ಕೆತ್ತಿದ್ದು, ಬೆಲೆ ಬಾಳುವ ವಸ್ತುವಿನಲ್ಲಿ ಮಾಡಿದ್ದು, ಸರಳಾತಿ ಸರಳವಾದ ಎರಡು ಕಡ್ಡಿಯಲ್ಲಿ ಮಾಡಿದ್ದು, ಕಡೆಗೆ ಹಾಳಾಗಿರುವ ಸೆಮಿಕಂಡಕ್ಟರ್‌ ಚಿಪ್‌ ನಲ್ಲಿ ಮಾಡಿದ್ದಂತ ಶಿಲುಬೆಗಳೂ ಇವೆ. ಒಟ್ಟಿನಲ್ಲಿ ಜನ ಅವರವರ ಶಕ್ತ್ಯಾನುಸಾರ, ಭಕ್ತ್ಯಾನುಸಾರ, ಭಾವಾನುಸಾರ ಶಿಲುಬೆ ನೆಟ್ಟು ಹೋಗುತ್ತಾರೆ. ತಮ್ಮ ಕುಟುಂಬದ ಯಾರದೋ ನೆನಪಿಗೋ, ಅಥವಾ ಹರಕೆಗೋ ಶಿಲುಬೆ ನೆಡುವುದು ಅವರ ನಂಬಿಕೆ. ಇದಂತೂ ನಿಜಕ್ಕೂ ರಷ್ಯಾದ ವಿರುದ್ಧ ಸೆಣೆಸುತ್ತಿದ್ದ ಲಿಥುವೇನಿಯನ್ನರಿಗೆ ಭರವಸೆಯ ಬೆಳಕಾಗಿತ್ತು. ಗುಡ್ಡದ ಮೇಲೆ ಶಿಲುಬೆ ನೆಡುವುದು ಯಾವಾಗ ಶುರುವಾಯ್ತು ಅಂತ ಯಾರಿಗೂ ಖಚಿತವಾಗಿ ತಿಳಿದಿಲ್ಲ.

೧೯೮೦ ರಲ್ಲಿ ಲಿಥುವೇನಿಯ ತನ್ನ ಸ್ವಾತಂತ್ಯ್ರಕ್ಕಾಗಿ ರಷ್ಯಾದ ವಿರುದ್ಧ ಬಂಡೆದ್ದ ಕಾಲ. ಈ ಗುಡ್ಡದ ಮೇಲೆ ಜನ ಪ್ರಾರ್ಥನೆಯನ್ನು ಸಲ್ಲಿಸಿ ಶಿಲುಬೆಯನ್ನು ನೆಡುತ್ತಿದ್ದರು. ಧರ್ಮ ವಿರೋಧಿ ಕಮ್ಯುನಿಸ್ಟ್‌ ರಷ್ಯಾಗೆ ಇದು ಹಿಡಿಸಲಿಲ್ಲ. ಅದು ಇದನ್ನೆಲ್ಲಾ ವಿರೋಧಿಸಿತು, ಅಲ್ಲಿಗೆ ಬರುವವರನ್ನು ಹಿಂಸಿಸಲು ಶುರು ಮಾಡಿತು. ಜನ ಸುಮ್ಮನಾಗಲಿಲ್ಲ. ಕಡೆಗೆ ರಷ್ಯಾ ಸರ್ಕಾರ ಹಲವಾರು ಬಾರಿ ಗುಡ್ಡವನ್ನು ಧ್ವಂಸ ಮಾಡಿತು. ಆಗಲೂ ಜನ ಸುಮ್ಮನಾಗಲಿಲ್ಲ. ಇನ್ನೂ ಹೆಚ್ಚು ಹೆಚ್ಚು ಭಕ್ತಿಯಿಂದ ಬರಲಾರಂಭಿಸಿದರು. ಜನರ ನಂಬಿಕೆ, ಶ್ರದ್ಧೆಯು ರಷ್ಯಾದ ಕಟುಕತನಕ್ಕೆ ಮಣಿಯಲಿಲ್ಲ. ಆಮೇಲೆ ೧೯೯೧ ರಲ್ಲಿ ಲಿಥುವೇನಿಯಾಕ್ಕೆ ಸ್ವಾತಂತ್ರ್ಯ ಸಿಕ್ಕಮೇಲೆ ಇದು ಅವರ ಭರವಸೆ, ಶಾಂತಿಯ ದ್ಯೋತಕವಾಗಿ ಉಳಿಯಿತು. ಈಗ ಅದು ದೊಡ್ಡ ತೀರ್ಥಕ್ಷೇತ್ರ.

ಲಿಥುವೇನಿಯಾದ ಕೊರೆಯುವ ಚಳಿಗಾಳಿ ಮುಖದ ಮೇಲೆ ಹಾದು ಹೋದಂತೆ ನಾನು ಯೋಚಿಸುತ್ತಿದ್ದೆ. ಇದೆಲ್ಲಾ ನಮ್ಮಿಂದ ಇಲ್ಲಿಗೆ ವಲಸೆ ಬಂದ ಪದ್ಧತಿಗಳಾ ಅಥವಾ ನಾವು ಬೇರೆಲ್ಲಿಂದಲೋ ಕಲಿತದ್ದಾ? ಎಲ್ಲಿ ಹೋದರೂ ಮನುಷ್ಯರು ಕೇವಲ ಮನುಷ್ಯರೇ. ನಂಬಿಕೆಗಳು ದೇಶ ದೇಶಗಳ ಸರಹದ್ದನ್ನು ದಾಡಿದಂತಹವು. ಅಂತರಂಗದಲ್ಲಿ ನಾವೆಲ್ಲರೂ ಒಂದೇ. ಕೇವಲ ಮನುಷ್ಯರು.

ಜಪಾನಿಗೆ ಹೋಗಿದ್ದಾಗ ಅಲ್ಲಿನ ಬೌದ್ಧ ಮತ್ತು ಶಿಂಟೋ ದೇವಾಲಯಗಳಲ್ಲಿ ಮರದ ಹಲಗೆಗಳ ಮೇಲೆ ತಮ್ಮ ಕೋರಿಕೆಗಳನ್ನು ಬರೆದು ಕಟ್ಟುವ ಅಲ್ಲಿನ ಹರಕೆ ಪದ್ಧತಿಯನ್ನು ನೋಡಿದ್ದೇನೆ. ಅದನ್ನು ಎಮ ಎಂದು ಕರೆಯುತ್ತಾರೆ. ಇದೇ ರೀತಿ ನಮ್ಮ ಸುತ್ತಮುತ್ತ ಹಲವಾರು ಮೂಢನಂಬಿಕೆ ಎಂದು ತೋರುವ ಆದರೆ ನಂಬಿಕೆಯ ಬೇರಿನಲ್ಲಿ ಚಿಗುರುವ ಅನೇಕ ಆಚರಣೆಗಳನ್ನು ನೋಡಬಹುದು. ಕೆಲವು ಕಡೆ ತೆಂಗಿನಕಾಯಿ ಕಟ್ಟುವುದಿದ್ದರೆ, ಮತ್ತೆ ಕೆಲವು ಕಡೆ ದಾರ ಕಟ್ಟುವುದು, ಮತ್ತೆ ಕೆಲವು ಕಡೆ ಕೆಂಪು ಬಟ್ಟೆ ಕಟ್ಟುವುದು, ಹಿಮಾಲಯ ಪ್ರಾಂತಗಳಲ್ಲಿ ಕಲ್ಲಿನ ಮೇಲೆ ಕಲ್ಲಿಡುವುದು, ಮಂತ್ರಗಳನ್ನು ಬರೆದ ಬಣ್ಣ ಬಣ್ಣದ ಬಟ್ಟೆಯ ತೋರಣಗಳು…. ಅದೆಷ್ಟು ವೈವಿಧ್ಯ ಆಚರಣೆಗಳು.

ಗಾಂಧೀಜಿ ಮನುಷ್ಯನನ್ನು ಆಲೋಚನೆಗಳ ಒಂದು ಗೊಂಚಲು ಎಂದಿದ್ದರು. ನನ್ನ ಪಾಲಿಗೆ ಮನುಷ್ಯರು ಭರವಸೆಯ ಒಂದು ಸಂಕೀರ್ಣ ರೂಪ. ಸಂಕಟ ಬಂದಾಗ ಒಂದು ರೂಪದಲ್ಲಿ ಅದನ್ನು ಹೊರಹಾಕುತ್ತೇವೆ. ಸಂಕಟ ಪರಿಹಾರವಾದ ಮೇಲೆ ನಿಸರ್ಗಕ್ಕೆ ದೈವಕ್ಕೆ ಕೃತಜ್ಞತೆ ರೂಪದಲ್ಲಿ ಕಾಣಿಕೆ ಸಲ್ಲಿಸುತ್ತೇವೆ. ಅನಿಶ್ಚಿತತೆಯ ಅಲ್ಲಾಡುವ ಸೇತುವೆಯ ಮೇಲೆ ನಮ್ಮ ಭರವಸೆಯ ಈ ಸವಾರಿ ಶತಮಾನಗಳಿಂದ ನಡೆದಿದೆ.

ದಿಲ್ಲಿಯಿಂದ ಅಲ್ಮೋರಾಕ್ಕೆ ೩೮೦ ಕಿ. ಮೀಗಳು. ೧೦ ಗಂಟೆಗಳ ಪ್ರಯಾಣ. ಡೆಹ್ರಾಡೂನ್‌ ನಿಂದಲೂ ಹೋಗಬಹುದು. ಬೆಂಗಳೂರಿನಿಂದ ಡೆಹ್ರಾಡೂನಿಗೆ ನೇರ ವಿಮಾನವಿದೆ.ಅಲ್ಲಿಂದ ಅಲ್ಮೋರಾ ೩೫೦ ಕಿ.ಮೀ. ಅಲ್ಮೋರಾದಿಂದ ೧೨೦ ಕಿ ಮೀ ದೂರದಲ್ಲಿ ಪಂತ್‌ ನಗರದಲ್ಲಿ ಕೂಡ ಏರ್ಪೋರ್ಟ್‌ ಇದೆ. ಸಾಮಾನ್ಯವಾಗಿ ಬೆಲೆ ಜಾಸ್ತಿ ಇರುತ್ತದೆ. ಅಲ್ಮೋರ ಇಂದ ೯ ಕಿ ಮೀ ಪಿತೋಡಗಡ್‌ ದಾರಿಯಲ್ಲಿ ಹೋದರೆ ಗೋಲು ದೇವಾಲಯ ಸಿಗುತ್ತದೆ. ಅಲ್ಮೋರಾದಲ್ಲಿ ಅನೇಕ ಒಳ್ಳೆಯ ಹೋಟೆಲ್ಗಳು, ಹೋಂ ಸ್ಟೇ ಗಳು ದೊರೆಯುತ್ತವೆ.

(ಚಿತ್ರಗಳು: ಲೇಖಕರವು)