ದಾವಣಗೆರೆ ಮುಟ್ಟುತ್ತಿದ್ದಂತೆ ನನಗೆ ಅತಿ ದೊಡ್ಡ ಅಚ್ಚರಿ ಕಾದಿತ್ತು. ನನ್ನ ರಣಭೀಕರ ಕೆಚ್ಚೆದೆಯ ಹೋರಾಟದ ಫಲವಾಗಿ ಬೈಪಾಸ್ ಬದಲು ನಿಲ್ದಾಣಕ್ಕೆ ಬಂದು ನಿಂತಿತ್ತಷ್ಟೇ. ನಾವು ನೋಡುತ್ತಿದ್ದಂತೆ ಒಳಗೆ ಏಳೋ ಎಂಟೋ ಜನರನ್ನು ಬಿಟ್ಟು ಉಳಿದವರೆಲ್ಲಾ ದಾವಣಗೆರೆಯಲ್ಲೇ ಇಳಿದುಕೊಂಡರು. ಅಂದರೆ ಬೈಪಾಸ್ ನಲ್ಲಿ ನಿಲ್ಲಿಸಿದ್ದರೆ ಅವರಿಗೂ ತೊಂದರೆ ಆಗುತ್ತಿತ್ತು. ಆದರೆ ನಾನು ಜಗಳ ಆಡುತ್ತಾ ನಿಂತಿದ್ದಾಗ ಅವರೆಲ್ಲ ತಮಾಷೆ ನೋಡುತ್ತಿದ್ದರೇ ಅಥವಾ ಇವನೊಬ್ಬ ಜನಗಳಗಂಟ ಎಂಬ ಅಸಡ್ಡೆಯಿಂದ ನೋಡುತ್ತಿದ್ದರೇ ಹೊರತು ಒಮ್ಮೆಯೂ ನನ್ನ ಪರವಾಗಿ ನಿಲ್ಲಲಿಲ್ಲ. ಆದರೆ ನನ್ನ ಹೋರಾಟದ ಸಿಹಿಫಲವನ್ನು ಮಾತ್ರ ಅವರು ಸುಖವಾಗಿ ಅನುಭವಿಸಿದ್ದರು.
ಶ್ರೀಹರ್ಷ ಸಾಲಿಮಠ ಅಂಕಣ

 

ಬೆಂಗಳೂರಿನಿಂದ ಐರಾವತ ಏರಿಕೊಂಡು ಹೆಂಡತಿ ಮತ್ತು ಮಗುವಿನೊಡನೆ ದಾವಣಗೆರೆಗೆ ಹೊರಟಿದ್ದೆ. ಕರುನಾಡಿಗೆ ಬಂದಾಗೆಲ್ಲಾ ಮುದ್ದಾಂ ನಾನು ಕೆಎಸ್ ಆರ್ ಟಿ ಸಿ ಬಸ್ಸಲ್ಲೇ ಓಡಾಡೋದು. ಸಿಡ್ನಿಯಲ್ಲಿ ಬಸ್ಸಲ್ಲಿ ಊರಿಂದೂರಿಗೆ ಐದಾರು ತಾಸುಗಳ ಪ್ರಯಾಣಕ್ಕೆ ಎಂಬತ್ತು ನೂರು ಡಾಲರುಗಟ್ಟಲೆ ದರ ಇಟ್ಟಿರುವುದನ್ನು ನೋಡಿ ಅದೇ ಗುಣಮಟ್ಟದ ಸೇವೆಯನ್ನು ಕೇವಲ ಹತ್ತು ಡಾಲರುಗಳಿಗೆ ಕೊಡುತ್ತಾರಲ್ಲ ಅಂತ ನನಗೆ ನಮ್ಮ ಕೆಎಸ್ ಆರ್ ಟಿ ಸಿ ಬಗ್ಗೆ ಅದೇನೋ ಅಭಿಮಾನ.

ಹಂಗೆ ಅವತ್ತು ಬೆಳಗ್ಗೆ ಏಳಕ್ಕೆ ಯಶವಂತಪುರ ರೇಲ್ವೇ ನಿಲ್ದಾಣದ ಮುಂದಿನ ಗೋವರ್ಧನ ಥಿಯೇಟರ್ ನ ಎದುರಿನಿಂದ ಹತ್ತಿ ಹೊರಟದ್ದಾಯಿತು. ಬಸ್ ಪೂರ್ತಿ ತುಂಬಿತ್ತು. ಹಿಂಗೆ ಸುಖವಾಗಿ ಪ್ರಯಾಣ ಸಾಗಿರುವಾಗ ನನ್ನ ಪಕ್ಕದಲ್ಲಿ ಕುಳಿತಿದ್ದವರೊಬ್ಬರು ಅದೇನೋ ಕೇಳುವಾಗ ಮಾತನಾಡುವಾಗ ಕಂಡಕ್ಟರ್ “ಬಸ್ ದಾವಣಗೆರೆಯ ಬೈಪಾಸಲ್ಲಿ ನಿಲ್ಲುತ್ತದೆ, ಬಸ್ ಸ್ಟ್ಯಾಂಡ್ ಗೆ ಹೋಗುವುದಿಲ್ಲ.” ಎಂದು ಬಾಯ್ಬಿಟ್ಟ. ನನಗೆ ರೇಗಿ ಹೋಯಿತು. ಅಂತಾ ಬಿರುಬಿಸಿಲಲ್ಲಿ ಯಾವಾಗ ಬೇಕಾದರೂ ಮಳೆ ಬೀಳುವ ಋತುಮಾನದಲ್ಲಿ ಊರ ಹೊರಗೆ ಐದಾರು ಕಿಲೋಮೀಟರು ದೂರ ಆಟೋ ಬಸ್ಸುಗಳು ಸಿಗದೆ ನಿಂತುಕೊಳ್ಳುವುದು ಹೇಗೆ? ನಾನು ಒಂದೇ ಸಾರಿಗೆ ದನಿ ಏರಿಸಿ “ಅದು ಹೆಂಗಯ್ಯಾ ಊರ ಹೊರಗೆ ನಿಲ್ಲಿಸ್ತೀಯಾ? ಬಸ್ ಸ್ಟ್ಯಾಂಡ್ ಗೆ ಬಿಟ್ಟರೆ ಸರಿ. ಇಲ್ಲಾ ಅಂದರೆ ಬಸ್ಸು ದಾವಣಗೆರೆ ದಾಟಿ ಹೆಂಗೆ ಮುಂದೆ ಹೋಗುತ್ತದೋ ನೋಡೇ ಬಿಡ್ತಿನಿ.” ಅಂದೆ.

ನಾನು ಚಿಕ್ಕಂದಿನಲ್ಲಿ ನೋಡಿದ ಕಂಡಕ್ಟರುಗಳಿಗೂ ಈಗಿನ ಕಂಡಕ್ಟರುಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಮೊದಲೆಲ್ಲ ಸಿಡಿಮಿಡಿ ಮಾಡುತ್ತಾ ವಿದ್ವಜ್ಜನರು ಭಿಕ್ಷುಕರನ್ನು ಕಂಡರೆ ದೂರ ಸರಿದು ಜರೆಯುವಂತೆ ಪ್ರಯಾಣಿಕರನ್ನು ಜರೆಯುತ್ತಿದ್ದರು. ಈಗಿನ ಕಂಡಕ್ಟರ್ ಗಳು ಬಹಳ ಸಮಾಧಾನ ಚಿತ್ತರು. ಸಾಧ್ಯವಾದಷ್ಟೂ ಜನಗಳ ಜೊತೆ ಹೊಂದಿಕೊಂಡು ಸರಳವಾಗಿ ಮಾತನಾಡುತ್ತಾರೆ. ಕಂಡಕ್ಟರು ಸಮಾಧಾನದಿಂದಲೇ “ಇಲ್ಲ ಸರ್ ನಮಗೆ ಮೇಲಿಂದ ಆರ್ಡರ್ ಇದೆ. ಹೊರಗಡೆ ನಿಲ್ಲಿಸಿ ಹೋಗಬೇಕು ಅಂತ. ನಮ್ಮ ಕೆಲಸ ನಾವು ಮಾಡ್ತಿದ್ದೇವೆ.” ಅಂದ. ಅದಕ್ಕೆ ನಾನು
“ಅದನ್ನು ಟಿಕೆಟ್ ಬುಕ್ ಮಾಡಿಸಿಕೊಳ್ಳುವಾಗಲೇ ಹೇಳಬೇಕು. ಹಣ ತಗೊಂಡ ಮೇಲೆ ಅಲ್ಲಿ ಬಿಡ್ತೀವಿ, ಇಲ್ಲಿ ಬಿಡ್ತೀವಿ ಅಂದರೆ ಹೆಂಗೆ?” ಅಂತ ನಾನು ಜೋರು ಮಾಡಿದೆ.

“ಇಲ್ಲ ಸರ್ ಒಮ್ಮೆ ನೋಡಿ ದಾವಣಗೆರೆ ಹಾವೇರಿ ಎಲ್ಲಾ ಬೈಪಾಸ್ ಓನ್ಲಿ ಅಂತ ಇದೆ” ಅಂದ ಆತ ಮತ್ತೆ.

ನಾನು ನನ್ನ ಟಿಕೆಟ್ ತೆರೆದು ತೋರಿಸಿದೆ. “ಎಲ್ಲಿದೆ ತೋರಿಸಿ.. ಇಲ್ಲಿ ದಾವಣಗೆರೆ ಅಂತ ಪ್ರಿಂಟಾಗಿದೆ. ದಾವಣಗೆರೆ ಅಂದರೆ ದಾವಣಗೆರೆ ಬಸ್ ಸ್ಟ್ಯಾಂಡ್ ತಾನೆ?” ಅಂತ ಸವಾಲು ಹಾಕಿದೆ.

ಆತ ಒಂದು ಸಾರಿ ಗಲಿಬಿಲಿಗೊಂಡು “ಆದರೆ ನಮಗೆ ಇನ್ಸ್ಟ್ರಕ್ಷನ್ ಇರೋದು ಬೈಪಾಸ್ ಮೇಲೆ ಹೋಗು ಅಂತ ಸಾರ್” ಅಂದ.

“ಇನ್ಸ್ಟ್ರಕ್ಷನ್ ಮನೆ ಹಾಳಾಗ ಬಸ್ ಸ್ಟ್ಯಾಂಡಿಗೆ ಬಿಟ್ಟಿರೋ ಸರಿ. ಇಲ್ಲ ದಾವಣಗೆರೆ ದಾಟಿ ಈ ಬಸ್ಸು ಮುಂದೆ ಹೋಗುವುದಿಲ್ಲ ಅಷ್ಟೇ” ಅಂತ ಮತ್ತೆ ನಾನು ಅದನ್ನೇ ಹೇಳಿದೆ.

ಪಕ್ಕದಲ್ಲಿದ್ದ ಹಿರಿಯರು “ಒಂದು ಸಾರಿ ನಿಮ್ಮ ಮೇಲಧಿಕಾರಿಗೆ ಮಾತಾಡಿ ನೋಡಿರಪ್ಪಾ.. ಅವರು ಪಾಪ ಚಿಕ್ಕ ಮಗುವನ್ನು ಕರೆದುಕೊಂಡು ಬೈಪಾಸಿನಿಂದ ಹೇಗೆ ಹೋಗಬೇಕು” ಅಂತ ಕಂಡಕ್ಟರ್ ಗೆ ಸಲಹೆ ನೀಡಿದರು.

ಅವರು ಹಾಗಂದದ್ದು ನನಗೆ ಇಷ್ಟವಾಗಲಿಲ್ಲ. “ನೋಡಿ ಯಜಮಾನ್ರೆ, ಇಲ್ಲಿ ನನಗೆ ಕರುಣೆಯ ಆಧಾರದ ಮೇಲೆ ಸೇವೆ ಬೇಕಿಲ್ಲ. ಬಸ್ಸು ಬಸ್ ಸ್ಟ್ಯಾಂಡಲ್ಲಿ ನಿಲ್ಲಬೇಕು ಎಂಬುದು ನಿಯಮ, ಅದು ಹಾಗೆಯೇ ಆಗಬೇಕು. ಅವನ ಮೇಲಧಿಕಾರಿ ನಿಲ್ಲಬಾರದು ಅಂತ ಹೇಳಿದರೂ ಸರಿ ಬಸ್ ಮುಂದೆ ಹೋಗಲು ನಾನು ಬಿಡುವುದಿಲ್ಲ ಅಂದೆ.”

ಅಷ್ಟರಲ್ಲಿ ನನ್ನ ಮುಂದಿನ ಸೀಟಿನಲ್ಲಿ ಕುಳಿತಿದ್ದವ “ಸ್ವಾಮಿ ಈ ಟಿಕೆಟ್ ಬುಕಿಂಗ್ ವೆಬ್ ಸೈಟ್ ನೋಡಿ, ಇದರಲ್ಲಿ ಕೆಳಗೆ ಸ್ಟಾರ್ ಹಾಕಿ ಬೈಪಾಸ್ ಅಂತ ಹಾಕಿದಾರೆ.”

ಮೊದಲೇ ನೆತ್ತಿ ಕುದಿಸಿಕೊಂಡು ನಿಂತಿದ್ದ ನನಗೆ ಇವನ ತಲೆಹರಟೆ ನೋಡಿ ನರ ಸಿಡಿದು ಹೋಗುವಷ್ಟು ಸಿಟ್ಟು ಬಂತು.
“ನಿಮ್ಮ ಕೆಲಸ ನೀವು ನೋಡ್ರಿ. ಯಾಕ್ರಿ ಇದರಲ್ಲೆಲ್ಲ ತಲೆ ಹಾಕ್ತಿರಿ? ನನ್ನ ತೊಂದರೆ ನಾನು ನಿವಾರಿಸಿಕೊಳ್ತೀನಿ” ಅಂದೆ.

ಸಿಡ್ನಿಯಲ್ಲಿ ಬಸ್ಸಲ್ಲಿ ಊರಿಂದೂರಿಗೆ ಐದಾರು ತಾಸುಗಳ ಪ್ರಯಾಣಕ್ಕೆ ಎಂಬತ್ತು ನೂರು ಡಾಲರುಗಟ್ಟಲೆ ದರ ಇಟ್ಟಿರುವುದನ್ನು ನೋಡಿ ಅದೇ ಗುಣಮಟ್ಟದ ಸೇವೆಯನ್ನು ಕೇವಲ ಹತ್ತು ಡಾಲರುಗಳಿಗೆ ಕೊಡುತ್ತಾರಲ್ಲ ಅಂತ ನನಗೆ ನಮ್ಮ ಕೆಎಸ್ ಆರ್ ಟಿ ಸಿ ಬಗ್ಗೆ ಅದೇನೋ ಅಭಿಮಾನ.

ಆತ “ನಿಮಗೋಸ್ಕರ ಊರೊಳಗೆ ಬಿಟ್ಟರೆ ನಾವು ಊರು ತಲುಪುವುದು ತಡ ಆಗುತ್ತದೆ. ನಾವಿನ್ನೂ ಬೆಳಗಾಂವ್ ಮುಟ್ಟಬೇಕು” ಅಂದ.

“ಹಾಗಿದ್ದರೆ ಒಂದು ಕೆಲಸ ಮಾಡು. ನಾನು ಬಸ್ ಮುಂದೆ ಹೋಗಲು ಬಿಡುವುದಿಲ್ಲ ಅಂತ ಬಸ್ ಎದುರಿಗೆ ಕುತ್ಗೋತೀನಲ್ಲ ಆಗ ಬಸ್ ಒಳಗೆ ಬಿಡಬಾರದು ಅಂತ ನೀನೂ ಧರಣಿ ಕೂತ್ಕೊ. ಅಲ್ಲೇ ನಿಕಾಲಿ ಆಗಲಿ. ಸರಿಯಾದ ಸಮಯಕ್ಕೆ ಮುಟ್ಟಿಸಿ ಅಂತ ನೀನು ಬಸ್ ನವರನ್ನ ಕೇಳಬೇಕೆ ಹೊರತು ನನ್ನನ್ನ ಹೊರಗೆ ಇಳ್ಕೊ ಅಂತ ಕೇಳೋದಲ್ಲ. ಅಷ್ಟೂ ಕಾಮನ್ ಸೆನ್ಸ್ ಇಲ್ವಾ ನಿನಗೆ. ಸಂಬಂಧ ಇಲ್ಲದ ವಿಷಯಕ್ಕೆ ತಲೆ ಹಾಕಕೆ ಬಂದರೆ ನಿನ್ನೂ ದಾವಣಗೆರೆ ಬಿಟ್ಟು ಆಚೆ ಕಳಿಸಲ್ಲ ಅಷ್ಟೇ” ಅಂತ ಅವನಿಗೂ ಗದರಿಸಿದೆ. ಆತ ಒಮ್ಮೆಲೆ ನಾನು ಏಕವಚನಕ್ಕಿಳಿದದ್ದು ಕಂಡು ಬೆಚ್ಚಿದನಾದರೂ ಸುತ್ತಮುತ್ತಲಿನವರು ಆತನನ್ನು ನೋಡಿ ಕಿಸಕ್ಕನೆ ನಕ್ಕಿದ್ದು ಕಂಡು ಪೆಚ್ಚಗಾಗಿ ಕುಳಿತ. ಅದಾದ ಮೇಲೆ ಬಸ್ ತಿಂಡಿಯ ಬ್ರೇಕ್ ತಗೊಂಡಾಗ ಆತನಿಗೆ ನಾನೊಂದು ಕಾಫಿ ಕೊಡಿಸಿ ನಾವಿಬ್ಬರೂ ಗೆಳೆಯರಾದೆವೆನ್ನಿ!

ನನ್ನ ಗಲಾಟೆ ಹದ್ದು ಮೀರುತ್ತಿರುವುದನ್ನು ನೋಡಿ ಕಂಡಕ್ಟರ್ “ಐದು ನಿಮಿಷ ಸರ್ ಐದು ನಿಮಿಷ ಕೂತ್ಕೊಳಿ ಏನಾರ ಮಾಡಣ” ಅಂದು ಡ್ರೈವರ್ ಕ್ಯಾಬಿನ್ ಬಳಿ ಹೋದ. ಫೋನಲ್ಲಿ ಮಾತಾಡಿ ಬಂದು,
“ಸಾರ್ ನಮ್ಮ ಮೇಲಧಿಕಾರಿ ಬಸ್ ಸ್ಟ್ಯಾಂಡ್ ವರೆಗೆ ಬಿಡಲು ಹೇಳಿದ್ದಾರೆ. ಒಳಗೆ ಬಿಟ್ಟು ಹೋಗ್ತಿವಿ ಸರ್” ಅಂತ ಹೇಳಿದ.
ನಾನು ತಣ್ಣಗಾದೆ. ಸರಿ ಅಂತ ಹೇಳಿ ಕುಳಿತೆ.

ಪಕ್ಕದ ಯಜಮಾನರು “ಜಗತ್ತಲ್ಲಿ ಎಲ್ಲಾ ತೊಂದರೆಗಳಿಗೂ ಪರಿಹಾರ ಇದ್ದಾವೆ. ನಾವು ಪ್ರೀತಿಯಿಂದ ಪರಿಹರಿಸಿಕೊಳ್ಳಬೇಕಷ್ಟೆ” ಅಂತ ಉಪದೇಶಾಮೃತವನ್ನು ಹರಿಸಲು ಶುರುವಿಟ್ಟುಕೊಂಡರು. ಅವರು ಬಹುಷಃ ಸದ್ಗುರುವೋ ರವಿಶಂಕರ ತರಹದ್ದೋ ಯಾವುದೊ ಕಾರ್ಪೊರೇಟ್ ಅಧ್ಯಾತ್ಮಿಕ ಗುರುವಿನ ಶಿಷ್ಯರಾಗಿದ್ದರು. ರಿಟೈರಾಗುವವರೆ ಉರಿದುರಿದು, ಬೂದಿಯಾಗುವ ಕಾಲದಲ್ಲಿ ಶಾಂತಿ ಅರಸಿ ದುಡಿದ ಇಡಗಂಟನ್ನೆಲ್ಲ ಸಮಾಜಕ್ಕೆ ಒಪ್ಪಿಸಿ ಸಾರ್ಥಕ ಬಾಳುವೆ ಮಾಡದೆ ಇಂತಹ ಕಾರ್ಪೊರೇಟ್ ಪರಮಾರ್ಥಕ್ಕೆ ಸುರಿಯುವ ಜನರಿಗೇನೂ ನಮ್ಮಲ್ಲಿ ಕಮ್ಮಿಯಿಲ್ಲವಲ್ಲ! ಆತನಿಗೆ ನಾನು ಉತ್ತರ ಹೇಳಲು ಹೋಗಲಿಲ್ಲ. ಹಿಂಸೆಯ ಮಾರ್ಗ ಹಿಡಿಯುವುದನ್ನು ನಾನೂ ಒಪ್ಪಲಾರೆ, ಆದರೆ ನಮ್ಮ ಪ್ರತಿಭಟನೆ ನಮ್ಮ ಹಕ್ಕಿಗೋಸ್ಕರ ಒಂದು ದಾರ್ಷ್ಟ್ಯವಿಟ್ಟುಕೊಂಡು ಕೇಳಬೇಕೆ ಹೊರತು ಉಪಕಾರ ಪಡೆಯುವ ದೈನ್ಯತೆಯಿಂದಲ್ಲ.

ಇನ್ನೂ ಒಂದು ಗೊತ್ತಾದದ್ದೇನೆಂದರೆ ಈ ಕಾರ್ಪೊರೇಟ್ ಪಾರಮಾರ್ಥಿಗಳು ಸಮಾಜದಲ್ಲಿ ವ್ಯವಸ್ಥೆಯ ವಿರುದ್ಧ ಇರುವ ಒಂದು ಆಕ್ರೋಶವನ್ನು ಸೂಕ್ತವಾಗಿ ಕೇಂದ್ರೀಕೃತಗೊಂಡು ಒಂದು ಪಾತಿಯ ಮೂಲಕ ಬದಲಾವಣೆಯ ಗಮ್ಯವನ್ನು ಮುಟ್ಟಲು ಬಿಡದೆ ಹೇಗೆ ನಡುವೆಯೇ ಶಮನಗೊಳಿಸಿ ಜನರನ್ನು ಯಥಾಸ್ಥಿತಿಗೆ ಒಗ್ಗಿಸುತ್ತಿದ್ದಾರೆ ಎಂಬುದು. ಬಹುಷಃ ಕ್ಯಾಪಿಟಲಿಸ್ಟ್ ಗಳು, ಸರಕಾರಗಳು, ಕೈಗಾರಿಕೋದ್ಯಮದ ಕುಳಗಳು ಈ ಅಧ್ಯಾತ್ಮದ ಮಧ್ಯವರ್ತಿಗಳಿಗೆ ಹಣ ಕೊಡುವುದೇ ಈ ಕಾರಣಕ್ಕಾಗಿ. ಜನ ತಮ್ಮ ವಿರುದ್ಧ ತಿರುಗಿ ಬೀಳದಿರಲಿ ಅಂತ! ಕಂಪನಿಗಳಲ್ಲಿ ನಡೆಸುವ ಸ್ಟ್ರೆಸ್ ಮ್ಯಾನೇಜ್ ಮೆಂಟ್ ಕೋರ್ಸ್ ಗಳು, ಧ್ಯಾನ ತರಗತಿಗಳು ಉದ್ಯಮಿಗಳು ತಮ್ಮ ಕಾರ್ಮಿಕರ ಮೇಲೆ ಎಸಗುವ ಘೋರ ದೌರ್ಜನ್ಯಗಳು! ಜನರ ಆಕ್ರೋಶವನ್ನು ಈ ಆಧ್ಯಾತ್ಮದ ದಲ್ಲಾಳಿಗಳ ಮೂಲಕ ದಿಕ್ಕಾಪಾಲಾಗಿ ಚದುರಿಸಿ ಹೈಫೈ ಕತ್ತೆಗಳಾಗಿ ಬದಲಿಸುತ್ತಾರೆ.

ನಾನು ಯಜಮಾನರ ಬುದ್ದಿವಾದಕ್ಕೆ ಹೆಚ್ಚು ಕಿವಿಗೊಡಲಿಲ್ಲವಾದ್ದರಿಂದ ಮತ್ತೆ ಅವರು ತಮ್ಮ ದೈವಿಕ ಕಲ್ಪನಾ ಲೋಕದಲ್ಲಿ ತೇಲುತ್ತಾ ಮುಳುಗುತ್ತಾ ನಿದ್ದೆಹೋದರು. ದಾವಣಗೆರೆ ಮುಟ್ಟುತ್ತಿದ್ದಂತೆ ನನಗೆ ಅತಿ ದೊಡ್ಡ ಅಚ್ಚರಿ ಕಾದಿತ್ತು.

ನನ್ನ ರಣಭೀಕರ ಕೆಚ್ಚೆದೆಯ ಹೋರಾಟದ ಫಲವಾಗಿ ಬೈಪಾಸ್ ಬದಲು ನಿಲ್ದಾಣಕ್ಕೆ ಬಂದು ನಿಂತಿತ್ತಷ್ಟೇ. ನಾವು ನೋಡುತ್ತಿದ್ದಂತೆ ಒಳಗೆ ಏಳೋ ಎಂಟೋ ಜನರನ್ನು ಬಿಟ್ಟು ಉಳಿದವರೆಲ್ಲಾ ದಾವಣಗೆರೆಯಲ್ಲೇ ಇಳಿದುಕೊಂಡರು. ಅಂದರೆ ಬೈಪಾಸ್ ನಲ್ಲಿ ನಿಲ್ಲಿಸಿದ್ದರೆ ಅವರಿಗೂ ತೊಂದರೆ ಆಗುತ್ತಿತ್ತು. ಆದರೆ ನಾನು ಜಗಳ ಆಡುತ್ತಾ ನಿಂತಿದ್ದಾಗ ಅವರೆಲ್ಲ ತಮಾಷೆ ನೋಡುತ್ತಿದ್ದರೇ ಅಥವಾ ಇವನೊಬ್ಬ ಜನಗಳಗಂಟ ಎಂಬ ಅಸಡ್ಡೆಯಿಂದ ನೋಡುತ್ತಿದ್ದರೇ ಹೊರತು ಒಮ್ಮೆಯೂ ನನ್ನ ಪರವಾಗಿ ನಿಲ್ಲಲಿಲ್ಲ. ಆದರೆ ನನ್ನ ಹೋರಾಟದ ಸಿಹಿಫಲವನ್ನು ಮಾತ್ರ ಅವರು ಸುಖವಾಗಿ ಅನುಭವಿಸಿದ್ದರು.

ಆಗ ನನಗೆ ಗಮನಕ್ಕೆ ಬಂದದ್ದೇನೆಂದರೆ ಐತಿಹಾಸಿಕವಾಗಿ ಇಡಿಯಾಗಿ ಯಾವ ಜನಸಂಖ್ಯೆಯೂ ಹೋರಾಟಕ್ಕೆ ನಿಲ್ಲುವುದಿಲ್ಲ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲೂ ಮೂವತ್ಮೂರು ಕೋಟಿಯಲ್ಲಿ ಕೆಲವು ಲಕ್ಷ ಜನಗಳು ಮಾತ್ರ ಭಾಗವಹಿಸಿದ್ದು. ದೇವದಾಸಿ ಪದ್ಧತಿಯಂತ ಅನಿಷ್ಟಗಳ ಮೇಲೆ ನಿಷೇಧಕ್ಕೆ ಇಡಿಯಾಗಿ ಎಲ್ಲ ಜನಸಂಖ್ಯೆ ನಿಲ್ಲಲಿಲ್ಲ. ಪ್ರತಿ ಹೋರಾಟವೂ ಸಹ ಅಲ್ಪಸಂಖ್ಯೆಯ ಮುನ್ನುಗ್ಗುವಿಕೆಯೇ! ಇವತ್ತಿನ ನನ್ನೊಬ್ಬನ ತಿರುಗಿ ಬೀಳುವಿಕೆ ಮೂವತ್ತು ಜನರಿಗೆ ಉಪಯೋಗವಾಯಿತು. ಆದರೆ ಜನ ಮಾತ್ರ ನೇರವಾಗಿ ತಮಗೇ ಹೊಡೆತ ಬೀಳುತ್ತಿದ್ದರೂ ಬೇರೊಬ್ಬರು ತಮಗಾಗಿ ಹೋರಾಡಬೇಕು ಅಂಥ ಬಯಸುತ್ತಾರಲ್ಲ! ಅದೇ ಹೋರಾಟಗಾರರನ್ನು ಹಂಗಿಸುತ್ತಾರಲ್ಲ. ಆದರೆ ಹೋರಾಟಕ್ಕೆ ಜಯ ಸಿಕ್ಕು ಫಲಪ್ರದವಾದಾಗ ಅದನ್ನು ಅನುಭವಿಸಲು ಮಾತ್ರ ನಾಮುಂದು ತಾಮುಂದು ಎಂದು ನುಗ್ಗಿ ಬರುತ್ತಾರಲ್ಲ! ಈ ವೈಪರೀತ್ಯಗಳನ್ನು ನೋಡಿ ಅಸಮಧಾನ ಪಡಬೇಕೊ, ಮೋಜೆನಿಸಬೇಕೊ, ಸಿಟ್ಟು ಮಾಡಿಕೊಳ್ಳಬೇಕೊ, ಅಸಹ್ಯ ಪಟ್ಟುಕೊಳ್ಳಬೇಕೊ ಒಂದೂ ತೋಚದೇ ಸುಮ್ಮನೆ ನಿಂತಿದ್ದೆ.