ಗರ್ಭಗುಡಿಯ ಅಂದವಾದ ಬಾಗಿಲ ಚೌಕಟ್ಟಿನಲ್ಲೂ ಈ ತ್ರಿಮೂರ್ತಿಗಳ ಸಂಗಮವನ್ನು ಕಾಣಬಹುದು. ಅಂತರಾಳದ ದ್ವಾರದ ಚೌಕಟ್ಟಿನಂತೆಯೇ ಗುಡಿಯ ಇತರ ದ್ವಾರಪಟ್ಟಿಕೆಗಳೂ ವಜ್ರ, ಲತೆ, ಸ್ತಂಭ ಮೊದಲಾದ ವಿನ್ಯಾಸಗಳ ಪಟ್ಟಿಗಳೊಡನೆ ಕಂಗೊಳಿಸುತ್ತವೆ. ದ್ವಾರಪಟ್ಟಿಕೆಗಳ ಲಲಾಟದಲ್ಲಿ ಗಜಲಕ್ಷ್ಮಿಯ ಉಬ್ಬುಶಿಲ್ಪವಿದ್ದರೆ, ಬುಡದ ಭಾಗದಲ್ಲಿ ದೇವಗಣ, ಚಾಮರಧಾರಿಣಿಯರೇ ಮೊದಲಾದವರ ಚಿತ್ರಣವಿದೆ. ಗುಡಿಯ ನಡುಮಂಟಪದಲ್ಲಿರುವ ಸಾಲಂಕೃತ ನಂದಿಯ ವಿಗ್ರಹ ಸುಂದರವಾಗಿದೆ. ನವರಂಗದ ಕಂಬಗಳೂ ಭುವನೇಶ್ವರಿಯೂ ಆಕರ್ಷಕವಾಗಿವೆ. ಕಂಬಗಳ ವಿನ್ಯಾಸ ಒಂದಕ್ಕಿಂತ ಒಂದು ವಿಶಿಷ್ಟವಾಗಿದ್ದು ಗಮನಸೆಳೆಯುವಂತಿವೆ. ಇಲ್ಲಿನ ಕೋಷ್ಠಗಳಲ್ಲಿ ಉಮಾಮಹೇಶ್ವರಿ ಹಾಗೂ ಗಣಪತಿಯ ಪ್ರಾಚೀನವೂ ಸುಂದರವೂ ಆದ ವಿಗ್ರಹಗಳಿವೆ.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಐವತ್ನಾಲ್ಕನೆಯ ಕಂತು

 

ಗದಗಿನ ತ್ರಿಕೂಟೇಶ್ವರ ದೇವಾಲಯವು ನಮ್ಮ ನಾಡಿನ ಪ್ರಾಚೀನ ದೇಗುಲಗಳಲ್ಲೊಂದು. ರಾಷ್ಟ್ರಕೂಟರ ಕಾಲದಲ್ಲಿ ಈ ದೇಗುಲದ ನಿರ್ಮಾಣವಾಗಿರಬೇಕೆಂದೂ ಮುಂದಿನ ಹಲವು ಅರಸುಮನೆತನಗಳು ದೇವಾಲಯದ ವಿಸ್ತರಣೆ, ಜೀರ್ಣೋದ್ಧಾರಗಳಿಗೆ ಕೊಡುಗೆಯಿತ್ತವೆಂದೂ ವಿದ್ವಾಂಸರ ಅಭಿಮತ. ಕ್ರಿ.ಶ.೧೦೦೨ ರ ಕಲ್ಯಾಣದ ಚಾಲುಕ್ಯ ಅರಸರ ಶಾಸನದಿಂದ ಮೊದಲುಗೊಂಡು ಮುಂದಿನ ಶತಮಾನಗಳಲ್ಲಿ ಕಲಚುರ್ಯ, ಹೊಯ್ಸಳ, ಯಾದವ, ವಿಜಯನಗರ ಮೊದಲಾದ ಅರಸುಮನೆತನಗಳವರು ಈ ದೇಗುಲಕ್ಕೆ ದಾನದತ್ತಿ ನೀಡಿದ ಅನೇಕ ಶಾಸನಗಳು ಲಭ್ಯವಿವೆ. ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಪ್ರತಿನಿಧಿಸುವ ಮೂರು ಲಿಂಗಗಳನ್ನು ಇಲ್ಲಿಯ ಗರ್ಭಗುಡಿಯಲ್ಲಿ ಕಾಣುತ್ತೀರಿ. ಹೀಗೆ ತ್ರಿಮೂರ್ತಿಗಳ ಒಕ್ಕೂಟವಿರುವ ಗುಡಿಯಾದುದರಿಂದಲೇ ತ್ರಿಕೂಟೇಶ್ವರನೆಂಬ ಹೆಸರು ಬಂದಿರಬೇಕು.

ಗರ್ಭಗುಡಿಯ ಅಂದವಾದ ಬಾಗಿಲ ಚೌಕಟ್ಟಿನಲ್ಲೂ ಈ ತ್ರಿಮೂರ್ತಿಗಳ ಸಂಗಮವನ್ನು ಕಾಣಬಹುದು. ಅಂತರಾಳದ ದ್ವಾರದ ಚೌಕಟ್ಟಿನಂತೆಯೇ ಗುಡಿಯ ಇತರ ದ್ವಾರಪಟ್ಟಿಕೆಗಳೂ ವಜ್ರ, ಲತೆ, ಸ್ತಂಭ ಮೊದಲಾದ ವಿನ್ಯಾಸಗಳ ಪಟ್ಟಿಗಳೊಡನೆ ಕಂಗೊಳಿಸುತ್ತವೆ. ದ್ವಾರಪಟ್ಟಿಕೆಗಳ ಲಲಾಟದಲ್ಲಿ ಗಜಲಕ್ಷ್ಮಿಯ ಉಬ್ಬುಶಿಲ್ಪವಿದ್ದರೆ, ಬುಡದ ಭಾಗದಲ್ಲಿ ದೇವಗಣ, ಚಾಮರಧಾರಿಣಿಯರೇ ಮೊದಲಾದವರ ಚಿತ್ರಣವಿದೆ. ಗುಡಿಯ ನಡುಮಂಟಪದಲ್ಲಿರುವ ಸಾಲಂಕೃತ ನಂದಿಯ ವಿಗ್ರಹ ಸುಂದರವಾಗಿದೆ. ನವರಂಗದ ಕಂಬಗಳೂ ಭುವನೇಶ್ವರಿಯೂ ಆಕರ್ಷಕವಾಗಿವೆ.

ಕಂಬಗಳ ವಿನ್ಯಾಸ ಒಂದಕ್ಕಿಂತ ಒಂದು ವಿಶಿಷ್ಟವಾಗಿದ್ದು ಗಮನಸೆಳೆಯುವಂತಿವೆ. ಇಲ್ಲಿನ ಕೋಷ್ಠಗಳಲ್ಲಿ ಉಮಾಮಹೇಶ್ವರಿ ಹಾಗೂ ಗಣಪತಿಯ ಪ್ರಾಚೀನವೂ ಸುಂದರವೂ ಆದ ವಿಗ್ರಹಗಳಿವೆ. ಇನ್ನೂ ಕೆಲವು ಪುರಾತನ ಶಿಲ್ಪಗಳಿದ್ದು ವಿವೇಚನಾರಹಿತವಾದ ಸುಣ್ಣಬಣ್ಣಗಳ ಲೇಪನದಿಂದಾಗಿ ರೂಪಮರೆಸಿಕೊಂಡಿವೆ. ತ್ರಿಕೂಟೇಶ್ವರ ದೇವಾಲಯದ ವಿಸ್ತಾರವಾದ ಅಂಗಳದಲ್ಲಿ ಗಾಯತ್ರಿ-ಸಾವಿತ್ರಿ-ಸರಸ್ವತಿಯರ ದೇವಾಲಯವೂ ಇದೆ. ಇಲ್ಲಿನ ಶಿಲ್ಪಗಳು ತೀರಾ ಈಚಿನ ಸೇರ್ಪಡೆಯಾಗಿವೆ.

ದೇವಾಲಯದ ಶಿಖರಭಾಗವು ನಶಿಸಿಹೋಗಿದ್ದು ಇತ್ತೀಚೆಗೆ ಗಾರೆಯಿಂದ ಪುನರ್ನಿರ್ಮಿಸಲಾಗಿದೆ. ಶಿಖರದ ಬುಡದ ವಿನ್ಯಾಸ ಪೂರ್ವಸ್ಥಿತಿಯಲ್ಲಿ ಉಳಿದುಕೊಂಡಿದ್ದು ಹಲವು ಯಕ್ಷ, ದೇವಾದಿಗಳ ವಿಗ್ರಹಗಳು ಅಲ್ಲಲ್ಲಿ ಕಂಡುಬರುತ್ತವೆ. ಗುಡಿಯ ಸುತ್ತಲಿನ ಗೋಡೆಯ ಮೇಲಂಚಿನಲ್ಲಿ ಮೂರು ಸ್ತರಗಳ ಅಲಂಕಾರಪಟ್ಟಿಗಳಿವೆ. ಮೇಲಂಚಿಗೆ ಅಲ್ಲಲ್ಲಿ ಸಿಂಹದ ಪ್ರಭಾವಳಿಯಿರುವ ಕೀರ್ತಿಮುಖಗಳೊಳಗೆ ದೇವಶಿಲ್ಪಗಳನ್ನು ಕಾಣಬಹುದು. ನಡುವಣ ಸ್ತರದಲ್ಲಿ ಹಂಸಗಳ ಸಾಲನ್ನೂ ಕೆಳಭಾಗದಲ್ಲಿ ಕಿರಿಯ ಅಳತೆಯ ಕೀರ್ತಿಮುಖಗಳೊಳಗೆ ದೇವಗಣಶಿಲ್ಪಗಳನ್ನು ಚಿತ್ರಿಸಿದೆ. ಕಾಲಾನುಕಾಲಕ್ಕೆ ಸವೆದು ಹಾಳಾಗಿರುವ ದೆಸೆಯಿಂದಾಗಿ ಈ ಪಟ್ಟಿಕೆಗಳಲ್ಲಿ ನಿರಂತರತೆಯಿಲ್ಲ.

ಹೊರಗೋಡೆಯ ಮೇಲೆ ಹೆಚ್ಚಿನ ಅಲಂಕರಣಗಳಿಲ್ಲವಾದರೂ ಕಿರುಗೋಪುರಗಳು, ಅರ್ಧಕಂಬಗಳು, ಹಾಗೂ ಕೀರ್ತಿಮುಖಗಳ ವಿನ್ಯಾಸದಿಂದ ಸೊಗಸಾಗಿ ರೂಪುಗೊಂಡಿದೆ. ಒರಗುವ ಕಕ್ಷಾಸನ, ಜಾಲಂದ್ರಗಳು ಸೂಕ್ಷ್ಮಕೆತ್ತನೆಯಿಂದ ಬೆರಗುಮೂಡಿಸುತ್ತವೆ. ಮುಖ್ಯವಾಗಿ ಕಕ್ಷಾಸನದ ಹೊರಗೋಡೆಯನ್ನೂ ಜಾಲಂದ್ರದ ಕೆಳಭಾಗವನ್ನೂ ಎರಡು ಸ್ತರದ ಅಲಂಕರಣದಿಂದ ಸಜ್ಜುಗೊಳಿಸಿದೆ. ಮೇಲುಸ್ತರದಲ್ಲಿ ಕಂಬಗಳ ವಿನ್ಯಾಸವಿರುವ ಚೌಕಟ್ಟಿನೊಳಗೆ ಮೂರ್ತಿಶಿಲ್ಪಗಳಿದ್ದರೆ, ಕೆಳಹಂತದಲ್ಲಿ ಗೋಪುರಗಳುಳ್ಳ ಕಿರುಮಂಟಪಗಳೊಳಗೆ ಪ್ರತ್ಯೇಕಶಿಲ್ಪಗಳನ್ನು ಚಿತ್ರಿಸಿದೆ. ಈ ಶಿಲ್ಪಗಳಲ್ಲಿ ದೇವತೆಗಳು, ಯಕ್ಷಗಂಧರ್ವಾದಿ ಪ್ರಮುಖರು, ನರ್ತಕಿಯರು, ಚಾಮರಧಾರಿಣಿಯರು, ಸಂಗೀತವಾದ್ಯಗಾರರು, ರಾಜಪರಿವಾರದವರು, ಅಂತಃಪುರದ ಸ್ತ್ರೀಯರು ಕಂಡುಬರುತ್ತಾರೆ. ಈ ಎಲ್ಲ ಶಿಲ್ಪಗಳೂ ಸವೆದು, ಭಗ್ನಗೊಂಡು ನಶಿಸಿದ್ದರೂ ಒಟ್ಟಂದ ಅಚ್ಚಳಿಯದಂತಿದೆ. ಒಂದಿಂಚೂ ಬಿಡದಂತೆ ಗೋಡೆಯ ಕೆಳಭಾಗವನ್ನು ಬಗೆಬಗೆಯ ಚಿತ್ತಾರ, ಮೂರ್ತಿಶಿಲ್ಪಾದಿಗಳಿಂದ ಅಲಂಕರಿಸಿರುವ ಪರಿ ಅಂದಿನ ಕಲಾಶ್ರೀಮಂತಿಕೆಗೆ ಸಾಕ್ಷಿಯಾಗಿದೆ.

(ಫೋಟೋಗಳು: ಲೇಖಕರವು)

ಮುಖ್ಯದೇಗುಲದ ಹೊರಬದಿಯಲ್ಲಿರುವ ಮಂಟಪದ ಕಡೆಗೆ ನಿಮ್ಮ ದೃಷ್ಟಿಯನ್ನು ಹೊರಳಿಸಿದರೆ ಬೆಡಗಿನ ಇನ್ನೊಂದು ಲೋಕವೇ ತೆರೆದುಕೊಳ್ಳುತ್ತದೆ. ಈ ಮಂಟಪದಲ್ಲಿರುವಂತಹ ಕಂಬಗಳ ಚೆಲುವು, ವಿನ್ಯಾಸ, ಸೂಕ್ಷ್ಮ ಕೆತ್ತನೆಯ ಕುಸುರಿಯ ಸೊಬಗನ್ನು ನೀವು ಮತ್ತೆಲ್ಲೂ ಕಾಣಲಾರಿರಿ. ಈ ಕಂಬಗಳನ್ನು ನೋಡುವುದಕ್ಕೆಂದೇ ನೀವು ಗದಗಕ್ಕೆ ಬಂದಿರುವಿರೆಂದು ಹೇಳಿದರೂ ಯಾರೂ ಅಚ್ಚರಿಪಡಬೇಕಾಗಿಲ್ಲ. ಇದು ಶಿಲ್ಪಕಲಾಪ್ರೌಢಿಮೆಯ ಪರಾಕಾಷ್ಠೆ ಎಂದಮೇಲೆ ಹೇಳುವುದಕ್ಕೇನೂ ಇಲ್ಲ.

ಮಂಟಪದೊಳಗಿನ ದೊಡ್ಡ ಕಂಬಗಳಾಗಲಿ, ಕಿರುಗೋಡೆಗಳು ಆಧರಿಸಿ ಹಿಡಿದ ಕಿರುಗಂಬಗಳೇ ಇರಲಿ, ಒಂದರಂತೆ ಮತ್ತೊಂದಿಲ್ಲ. ಕೆಲವು ಕಂಬಗಳ ಬುಡದ ಚೌಕಟ್ಟಿನಲ್ಲಿ ದೇವತಾಮೂರ್ತಿಗಳ ಉಬ್ಬುಶಿಲ್ಪಗಳು, ಅವುಗಳನ್ನು ಸುತ್ತುವರೆದ ಹೂಬಳ್ಳಿಯ ಚಂದದ ಚೌಕಟ್ಟು; ಇನ್ನು ಕೆಲವು ಕಂಬಗಳ ಮೇಲುಭಾಗದಲ್ಲಿ ಅಡ್ಡತೊಲೆಗಳನ್ನು ಸಂಧಿಸುವಲ್ಲಿ ಕಿರುಚೌಕಟ್ಟುಗಳೊಳಗೆ ಯಕ್ಷಾದಿ ಶಿಲ್ಪಗಳೋ ಹೂಬಳ್ಳಿಗಳ ವಿನ್ಯಾಸದ ಸೊಬಗೋ, ಆನೆಹಂಸಗಳೋ. ನಾಗನಾಗಿಣಿಯರಿಂದ ಮೊದಲುಗೊಂಡು ದಿಕ್ಪಾಲಕರವರೆಗೆ ಎಲ್ಲರಿಗೂ ಈ ಕಂಬಗಳ ಆಶ್ರಯ ಸಿದ್ಧವಾಗಿದೆ. ಸಾವಿರ ವರುಷಗಳಿಗೂ ಮಿಕ್ಕಿ ಇವೆಲ್ಲ ತಮ್ಮ ಕಲಾವೈಭವವನ್ನು ಮೆರೆಸುತ್ತ ಉಳಿದುಬಂದಿರುವುದೇ ನಮ್ಮ ನಾಡಿನ ಸುದೈವ.