ತಂತ್ರಜ್ಞಾನದ ಬಗೆಗಿನ ಭೀತಿ, ಆತಂಕ, ವಿರೋಧದ ಕುರಿತು ಕೆದಕುತ್ತ ಹೋದರೆ, ಅದು ತುಂಬಾ ಪ್ರಾಚೀನ ಕಾಲದವರೆಗೂ ಹೋಗುತ್ತದೆ ಎನ್ನುವುದಕ್ಕೆ ಮೇಲೆ ಉದಾಹರಣೆಗಳನ್ನು ನೋಡಿದೆವು. ಹತ್ತೊಂಬತ್ತನೇ ಶತಮಾನದ ಇನ್ನೊಂದು ಉದಾಹರಣೆಯೊಂದಿಗೆ ಮುಂದುವರಿಯೋಣ. ಅಮೇರಿಕಾದ ಕಾದಂಬರಿಕಾರ ನ್ಯಾಥನಿಯಲ್ ಹಾಥಾರ್ನನ “ದ ಬರ್ಥ ಮಾರ್ಕ್” ಎಂಬ ಕತೆಯಲ್ಲಿ ಒಬ್ಬ ಡಾಕ್ಟರನಿಗೆ ಸ್ಪುರದ್ರೂಪಿ ಹೆಂಡತಿ ಇರುತ್ತಾಳೆ. ಅತೀವ ಚೆಲುವೆಯಾದ ಅವಳ ಮುಖದ ಮೇಲೆ ಹುಟ್ಟಂದಿನಿಂದ ಮಚ್ಚೆ ಒಂದಿದೆ. ಆ ಮಚ್ಚೆ ಇಲ್ಲವಾದರೆ ತನ್ನ ಹೆಂಡತಿ ತ್ರಿಲೋಕ ಸುಂದರಿಯಾಗುತ್ತಾಳೆ ಎಂಬ ಹಂಬಲ ಡಾಕ್ಟರಿನಿಗಿರುತ್ತದೆ.
ಕಮಲಾಕರ ಕಡವೆ ಬರೆಯುವ ‘ಬೆರಗು ಮತ್ತು ಭೀತಿ’ ಹೊಸ ಅಂಕಣ

 

ಯಾಕೋ ಏನೋ ನನ್ನ ಕಾಲೇಜು ದಿನಗಳಿಂದಲೇ ತಂತ್ರಜ್ನಾನವು ನನಗೆ ಭಸ್ಮಾಸುರನ ಪ್ರತೀಕವನ್ನು ಮನಸ್ಸಿನಲ್ಲಿ ಮೂಡಿಸುತ್ತ ಬಂದಿದೆ. ಪ್ರಾಯಶಃ ನನ್ನನ್ನು ನಾನು ತಂತ್ರಜ್ಞಾನದ ವೈರಿಯಾಗಿ ಗುರುತಿಸಿಕೊಂಡು ಬಂದಿದ್ದೇನೆಂದು ಕಾಣುತ್ತದೆ. ನನ್ನ ಕಲ್ಪನೆಯ ಪ್ರಕಾರ ಒಂದಲ್ಲ ಒಂದು ದಿನ ಈ ತಂತ್ರಜ್ಞಾದ ಮರುಳು ಬಲೂನಿನಂತೆ ಒಡೆದು ಹೋಗಿ, ನಾನು ಮನದಲ್ಲಿಯೇ ಅಸ್ಪಷ್ಟವಾಗಿ, ಹೇಳಲು ಬರದ ರೀತಿಯಲ್ಲಿ ಭಾವಿಸಿಕೊಂಡು ಬಂದಿರುವ ನಿಧಾನದ (?), ನಿಸರ್ಗಕ್ಕೆ ಹತ್ತಿರದ (?) ಜೀವನಶೈಲಿಯೇ ಸರಿ ಎಂದು ಎಲ್ಲರೂ ಒಪ್ಪುವ ದಿನ ಬಂದೇ ಬರುತ್ತದೆ. ಬಹುಶಃ ನನ್ನ ಸುಪ್ತ ಪ್ರಜ್ಞೆ ಇಂತಹ ಒಂದು ಅಂತಿಮ ವಿನಾಶಕ್ಕಾಗಿ ಕಾಯುತ್ತ, ಆವರೆಗೆ ತಂತ್ರಜ್ಞಾನವೆನ್ನುವುದು ಮಾನವನ ನೈತಿಕತೆಗೆ ಹಾನಿಕರವಾದದ್ದೆಂದು ಆಡದೆಯೂ ನಂಬಿಕೊಳ್ಳುತ್ತ ಬಂದಿದೆ ಎನಿಸುತ್ತದೆ. ಆದರೆ, ಅದೇ ಸಮಯದಲ್ಲಿ, ನಾನು ಮನಸಾ ವಿರೋಧಿಸಿದ ಪ್ರತಿ ತಂತ್ರಜ್ಞಾನವೂ ನನ್ನ ಜೀವನದ ಅವಿಭಾಜ್ಯ ಭಾಗವಾಗುತ್ತ, ನನ್ನ ಮೇಲೆ ಮುಯ್ಯಿ ತೀರಿಸಿಕೊಳ್ಳುತ್ತ ಬಂದವು. ಪ್ರತಿಸಲವೂ ನಾನು, ಈ ತಂತ್ರಜ್ಞಾನ ಅನಿವಾರ್ಯ ಎಂದು ಬಾಲ ಮುದುರಿಸಿಕೊಂಡು ನನ್ನ ವಿರೋಧವನ್ನು ಇನ್ನಾವುದೋ ಹೊಸ ತಂತ್ರಜ್ಞಾನದ ಕಡೆ ಹೊರಳಿಸುವುದು ನಡೆದೇ ಬಂದಿದೆ. ಭಸ್ಮಾಸುರ ಮಾತ್ರ ಬರ್ತಾನೇ ಇಲ್ಲ.

ವಿಚಿತ್ರವೆಂದರೆ, ನಮ್ಮ ಪುರಾಣಗಳಲ್ಲಿ ಭಸ್ಮಾಸುರ ತಂತ್ರಜ್ಞಾನದ ಪ್ರತೀಕವಾಗಿ ಬರುವುದಿಲ್ಲ. ಹಾಗಾಗಿ, ನನ್ನ ಮನಸ್ಸಿನಲ್ಲಾದ ಈ ಹೋಲಿಕೆ ಸೂಕ್ತವಲ್ಲ ಎಂದು ಯೋಚಿಸುತ್ತಿರುವಾಗ, ಇಂಗ್ಲೀಷ್ ಸಾಹಿತ್ಯದಲ್ಲಿ ಬರುವ ಒಂದು ಭಸ್ಮಾಸುರ ಪಾತ್ರ ನನಗೆ ನೆನಪಾಗುತ್ತದೆ. ಮೇರಿ ಶೆಲ್ಲಿಯ “ಫ್ರಾನ್ಕನ್-ಸ್ಟೀನ್” ಕಾದಂಬರಿಯ ದೈತ್ಯ. ಸಾಹಿತ್ಯದಲ್ಲಿ “ಫ್ರಾನ್ಕನ್-ಸ್ಟೀನನ ದೈತ್ಯ” ಎಂದು ಪ್ರಸಿದ್ಧವಾಗಿರುವ ಈ ಪಾತ್ರವನ್ನು ಹೆಚ್ಚಿನ ವಿಮರ್ಶಕರು ತಂತ್ರಜ್ಞಾನದ ಸಂಕೇತವಾಗಿಯೇ ನೋಡುತ್ತಾರೆ, ಮತ್ತು ಕಾದಂಬರಿಯನ್ನು ಒಂದು ಅನ್ಯೋಕ್ತಿಯ ಕಥನವೆಂದು ಅರ್ಥೈಸಿದ್ದಾರೆ. ಮೇರಿ ಶೆಲ್ಲಿಯ ಕತೆ, ಸೂಚ್ಯವಾಗಿ ಹೀಗಿದೆ: ಫ್ರಾನ್ಕನ್-ಸ್ಟೀನ್ ಎಂಬ ಒಬ್ಬ ವಿಜ್ಞಾನಿ ಒಬ್ಬ ಕೃತಕ ದೈತ್ಯನನ್ನು ತಯಾರಿಸಿ ಅದಕ್ಕೆ ಜೀವವನ್ನೂ ಕೊಡುತ್ತಾನೆ. ಆದರೆ ತಾನು ಸೃಷ್ಟಿಸಿದ ಈ ದೈತ್ಯನನ್ನು ನಿಯಂತ್ರಿಸಲು ಫ್ರಾನ್ಕನ್-ಸ್ಟೀನನಿಗೆ ಸಾಧ್ಯವಾಗುವುದಿಲ್ಲ. ಆ ದೈತ್ಯ ಹಲವಾರು ಜನರನ್ನು ಕೊಂದು, ಫ್ರಾನ್ಕನ್-ಸ್ಟೀನನ ನಿಧನಕ್ಕೂ ಕಾರಣವಾಗುತ್ತದೆ.

ಮೇರಿ ಶೆಲ್ಲಿಯ “ಫ್ರಾನ್ಕನ್-ಸ್ಟೀನನ ದೈತ್ಯ” ಏನನ್ನು ಸಂಕೇತಿಸುತ್ತದೆ ಎನ್ನುವ ಬಗ್ಗೆ ವಿವಾದವಿದ್ದರೂ, ಬಹಳ ಓದುಗರ ಪ್ರಕಾರ ಇದು ತಂತ್ರಜ್ಞಾನವೆಂದರೆ ನಿಸರ್ಗದ ಜೊತೆ ಚೆಲ್ಲಾಟವಾಡಿ ಅಪಾಯವನ್ನು ಸೃಷ್ಟಿ ಮಾಡುವ ಕಲೆ ಎಂಬ ಸಂದೇಶ ಕೊಡುತ್ತದೆ. ೧೮೧೮ರಲ್ಲಿ ಪ್ರಕಟವಾದ ಈ ಕಾದಂಬರಿ ತಂತ್ರಜ್ಞಾನದ ಕುರಿತು ಮಾತ್ರವಲ್ಲ, ಕೈಗಾರಿಕಾ ಕ್ರಾಂತಿಯನ್ನೂ ವಿರೋಧಿಸುತ್ತಿದ್ದ ರೋಮ್ಯಾಂಟಿಕ್ ಮನೋಭಾವದ ಕೃತಿ. ತಂತ್ರಜ್ಞಾನ ಮನುಷ್ಯನಿಗೆ ಹಾನಿಕಾರಕವಾಗಲಿದೆ ಎಂಬ ನನ್ನ ರಹಸ್ಯ ಹಂಬಲದಂತೆಯೇ, ಹಲವು ಓದುಗರ ಪ್ರಕಾರ, ಈ ಕಾದಂಬರಿ ಧ್ವನಿಸುವುದು ಕೂಡ ಇದೇ ಎಚ್ಚರಿಕೆಯನ್ನು – ನನ್ನ ಕಲ್ಪನೆಯ ಭಸ್ಮಾಸುರ ನಿಜದಲ್ಲಿ ಯುರೋಪಿನ ಫ್ರಾನ್ಕನ್-ಸ್ಟೀನನ ದೈತ್ಯನಾಗಿದ್ದ ಎಂದು ನನಗೆ ಬಹಳ ತಡವಾಗಿ ಹೊಳೆಯಿತು.

(ಮೇರಿ ಶೆಲ್ಲಿ)

ಮೇರಿ ಶೆಲ್ಲಿಯ ಕಲ್ಪನೆಯಲ್ಲಿ ಹುಟ್ಟಿದ ಫ್ರಾನ್ಕನ್-ಸ್ಟೀನನ ದೈತ್ಯ ಒಂದು ದೃಷ್ಟಿಯಲ್ಲಿ ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿರುವ ಕೇಡಿನ ಕಲ್ಪನೆಗೆ ಹೊಂದುವ ಪಾತ್ರ. ಎಲ್ಲ ಸಮಾಜಗಳಲ್ಲಿಯೂ, ಎಲ್ಲ ದೇಶಗಳಲ್ಲಿಯೂ ಕಂಡುಬರುವ ಹಾಗೆ, ಪಾಶ್ಚಾತ್ಯ ಸಂಸ್ಕೃತಿಯಲ್ಲಿಯೂ ತಂತ್ರಜ್ಞಾನದ ಕುರಿತು ಭೀತಿ, ಆತಂಕ, ವಿರೋಧ ಪುರಾತನ ಕಾಲದಿಂದಲೂ ಇರುವುದನ್ನು ಕಾಣಬಹುದು. ಅದಕ್ಕೆ ನಾನು ಕೊಡಲಿರುವ ಮೊದಲನೆಯ ಉದಾಹರಣೆ ಗ್ರೀಕ್ ಮಿಥಕಗಳಲ್ಲಿ ಬರುವ ಪ್ರಮೀಥಿಯಸ್-ನ ಕತೆ. ಮೇರಿ ಶೆಲ್ಲಿಯ ಕಾದಂಬರಿಯ ಪೂರ್ಣ ಶೀರ್ಷಿಕೆಯಲ್ಲಿ (Frankenstein; or, The Modern Prometheus) ಬರುವ ಈ ಪ್ರಮೀಥಿಯಸ್ ಗ್ರೀಕ್ ಪುರಾಣಗಳಲ್ಲಿ ಟೈಟನ್ನರ ಅಗ್ನಿ ದೇವತೆ. ಪುರಾಣದ ಪ್ರಕಾರ, ಮಣ್ಣಿನಿಂದ ಮಾನವರನ್ನು ಸೃಷ್ಟಿಸಿದ ಪ್ರಮೀಥಿಯಸ್ ಕದ್ದು ಮಾನವರಿಗೆ ಬೆಂಕಿಯನ್ನು ಕೊಡುತ್ತಾನೆ. ಪುರಾಣದ ಒಂದು ಆವೃತ್ತಿಯ ಪ್ರಕಾರ ಬೆಂಕಿಯೊಂದೇ ಅಲ್ಲದೇ, ಬರಹ, ಕೃಷಿ, ಔಷಧವಿದ್ಯೆ, ಲೋಹವಿದ್ಯೆ ಇತ್ಯಾದಿಗಳನ್ನು, ಅಥವಾ ಸಾಂಕೇತಿಕವಾಗಿ ತಂತ್ರಜ್ಞಾನವನ್ನು, ಪ್ರಮೀಥಿಯಸ್ ಮಾನವರಿಗೆ ಕೊಡುತ್ತಾನೆ. ಇದರಿಂದ ಕೋಪಗೊಂಡ ದೇವರುಗಳ ಬಾಸ್ ಆದ ಝಯಸ್ ಪ್ರಮೀಥಿಯಸನನ್ನು ಪರ್ವತಕ್ಕೆ ಕಟ್ಟಿ ಹಾಕಿ ಶಪಿಸುತ್ತಾನೆ. ಆ ಶಾಪವೆಂದರೆ, ಪ್ರತಿದಿನವೂ ಗಿಡುಗವೊಂದು ಪ್ರಮೀಥಿಯಸನ ಯಕೃತ್ತನ್ನು ಕಿತ್ತು ತಿನ್ನುತ್ತದೆ. ಗಿಡುಗ ಕಿತ್ತು ತಿಂದಂತೆಲ್ಲ ಮತ್ತೆ ಪ್ರಮೀಥಿಯಸನ ಯಕೃತ್ತು ಬೆಳೆಯುತ್ತದೆ. ಹೀಗೆ, ಕೊನೆಯಿಲ್ಲದ ಬಂಧನ ಮತ್ತು ಯಾತನೆಗೆ ಈಡಾಗುತ್ತಾನೆ ಪ್ರಮೀಥಿಯಸ್. ಇದೇ ಪೌರಾಣಿಕ ಕತೆಯನ್ನಾಧರಿಸಿ ಗ್ರೀಕ್ ನಾಟಕಕಾರ, ಎಸ್ಕಲಸ್ ಮೂರು ನಾಟಕಗಳನ್ನು ಬರೆದಿದ್ದಾನೆ. ಅದರಲ್ಲಿ “Prometheus Bound” ಎಂಬ ಒಂದು ಮಾತ್ರ ಉಳಿದುಬಂದಿದ್ದು, ಇನ್ನೆರಡು ನಾಶವಾಗಿ ಹೋಗಿವೆ.

ಪ್ರಮೀಥಿಯಸನ ಪುರಾಣವನ್ನು ಸಾಂಕೇತಿಕವಾಗಿ ಅರ್ಥೈಸುವ ವಿಮರ್ಶಕರು ಇದನ್ನು ಒಂದು ನೀತಿಕತೆಯಾಗಿ ನೋಡುತ್ತಾರೆ. ಇಲ್ಲಿರುವ ನೀತಿಯೆಂದರೆ, ದೇವರು ಸೃಷ್ಟಿಸಿದ / ನಿಸರ್ಗದತ್ತ ಸೃಷ್ಟಿಯನ್ನು ಬದಲಿಸುವ ತಂತ್ರಗಾರಿಕೆ ಮಾಡಿದರೆ ವಿನಾಶ ಕಟ್ಟಿಟ್ಟ ಬುತ್ತಿ. ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಉದ್ದಕ್ಕೂ ಈ ನೀತಿಕತೆಯ ಹಲವಾರು ಆವೃತ್ತಿಗಳನ್ನು ನಾವು ಕಾಣುತ್ತೇವೆ. ಈ ಎಲ್ಲ ಆವೃತ್ತಿಗಳೂ ಕೂಡ ಮೂಲಭೂತವಾಗಿ ತಂತ್ರಜ್ಞಾನವನ್ನು ಅನುಮಾನದಿಂದ ನೋಡುತ್ತವೆ ಮತ್ತು ಅದು ತರುವ ಬದಲಾವಣೆಯನ್ನು ಅಪಾಯವೆಂದು ಬಗೆಯುತ್ತವೆ. ಉದಾಹರಣೆಗೆ, ಫೀಡ್ರಸನ ಜೊತೆಯ ಸಂವಾದದಲ್ಲಿ ಸಾಕ್ರೇಟಿಸನ ಮುಖೇನ ಪ್ಲೇಟೋ ಬರವಣಿಗೆಯ ಕುರಿತಾದ ತನ್ನ ವಿರೋಧವನ್ನು ವ್ಯಕ್ತಪಡಿಸುತ್ತಾನೆ. ಪ್ಲೇಟೋನ ಕತೆಯಲ್ಲಿ, ಈಜಿಪ್ಟಿನ ದೇವತೆ ಥಿಯತ್, ದೊರೆ ದಾಮಸನಿಗೆ ಅಕ್ಷರಗಳನ್ನು ಉಡುಗೊರೆಯಾಗಿ ಕೊಡುತ್ತಾನೆ. ತಾನು ಕೊಟ್ಟ ಉಡುಗೊರೆಗೆ ದೊರೆ ದಾಮಸ್ ಕೃತಜ್ಞತೆ ವ್ಯಕ್ತಪಡಿಸುವನೆಂದು ನಿರೀಕ್ಷಿಸಿದ್ದ ಥಿಯತ್. ಬದಲಿಗೆ, ದೊರೆ ದಾಮಸ ಬರವಣಿಗೆಯಿಂದಾಗಿ ತನ್ನ ಜನರ ಸ್ಮೃತಿ ಕ್ಷೀಣವಾಗಲಿದೆ ಎಂದು ಕೊರಗುತ್ತಾನೆ. ತನ್ನ ಇತರ ಬರವಣಿಗೆಯಲ್ಲಿಯೂ ವಿಧವಿಧವಾಗಿ ಪ್ಲೇಟೋ ಬರವಣಿಗೆಯನ್ನು ಹೀಗಳೆಯುತ್ತಾನೆ. ಮಾನವ ಕುಲದ ಇತಿಹಾಸದಲ್ಲಿ ಮೂಲಭೂತ ಬದಲಾವಣೆ ತಂದ ತಂತ್ರಜ್ಞಾನಗಳಲ್ಲಿ ಒಂದು ಎಂದು ಎಣಿಸಲಾಗುವ ಬರವಣಿಗೆಯನ್ನು ಪ್ಲೇಟೋ ಅಪಾಯಕಾರಿ ಎಂದು ಗಣಿಸಿದ್ದ. ಈ ಕುರಿತು ಹಲವು ಅರ್ಥೈಸುವಿಕೆಗಳಿವೆ, ಇದು ಅವುಗಳಲ್ಲಿ ಒಂದು ಮಾತ್ರ.

ತಂತ್ರಜ್ಞಾನ ಮತ್ತು ಅವುಗಳ ಆವಿಷ್ಕಾರದಲ್ಲಿ ತೊಡಗಿರುವವರ ಕುರಿತು ಇದೇ ತರಹದ ಋಣಾತ್ಮಕ ಚಿತ್ರಣ ನಮಗೆ ಯುರೋಪಿನ ಎಲ್ಲ ಕಾಲಖಂಡದ ಕಥನಗಳಲ್ಲಿಯೂ ಕಾಣುತ್ತದೆ. ಇಂಗ್ಲೀಷಿನ ನವೋದಯ (renaissance) ಕಾಲಖಂಡದಲ್ಲಿ ಅವರನ್ನು ಅಲ್ಕೆಮಿಸ್ಟ್ ಗಳು (alchemist) ಎಂದು ಚಿತ್ರಿಸಲಾಗುತ್ತದೆ ಮತ್ತು ಅವರು ಚಿನ್ನದ ಲೋಭದಿಂದ ಆವಿಷ್ಕಾರದಲ್ಲಿ ತೊಡಗಿದ್ದಾರೆ ಎಂಬ ಚಿತ್ರಣ ಪದೇಪದೇ ಕಂಡು ಬರುತ್ತದೆ. ಉದಾಹರಣೆಗೆ ಶೇಕ್ಸಪಿಯರನ ಸಮಕಾಲೀನನಾದ ಬೆನ್ ಜಾನ್ಸನ್-ನ ನಾಟಕ “ದ ಅಲ್ಕೆಮಿಸ್ಟ್”. ಶೇಕ್ಸಪಿಯರನ ಮುನ್ನ ಬರೆಯುತ್ತಿದ್ದ ನಾಟಕಕಾರ ಕ್ರಿಸ್ಟೊಫರ್ ಮಾರ್ಲೋನ “ಡಾಕ್ಟರ್ ಫಾಸ್ಟಸ್” ಎಂಬ ನಾಟಕದಲ್ಲಿ ಜ್ಞಾನಾಕಾಂಕ್ಷಿ ಫಾಸ್ಟಸ್-ನನ್ನು ಮಾಂತ್ರಿಕ ಶಕ್ತಿಯವನು, ಸೈತಾನನಿಗೆ ಆತ್ಮವನ್ನು ಮಾರಿಕೊಂಡವನು ಎಂದು ಚಿತ್ರಿಸಲಾಗಿದೆ. ಈ ಪುರಾತನ ಕತೆಗಳ ಮಾಂತ್ರಿಕರು, ಮಾಯವಿಗಳೆಲ್ಲ ಬಹುಶಃ ಆಯಾ ಕಾಲದ ವಿಜ್ಞಾನಿ/ತಂತ್ರಜ್ಞಾನಿಗಳೇ ಇದ್ದಿರಬಹುದು. ಹೊಸ ಅವಿಷ್ಕಾರಗಳ ಕುರಿತು ಇದ್ದ ಅತೀವ ಅಸಹನೆಯಿಂದಾಗಿ ಅವರೆಲ್ಲರನ್ನು ಕೇಡಿನ, (ಯುರೋಪಿನ ಸಂದರ್ಭದಲ್ಲಿ ಸೈತಾನನ) ಪ್ರತಿನಿಧಿಗಳು ಎಂದೇ ಬಿಂಬಿಸಲಾಗಿದೆ. ಧರ್ಮದ ಭೃಷ್ಟಾಚಾರವನ್ನು ಪ್ರಶ್ನಿಸಿದವರನ್ನು ಧರ್ಮದ್ರೋಹಿ (heretic) ಎಂದೋ ಅಥವಾ ಮಾಟಗಾತಿ (witch) ಎಂದೋ ಕರೆದು ಹಿಂಸಿಸಿದಂತೆಯೇ ತಂತ್ರಜ್ಞಾನದ ಕುರಿತು ಇದ್ದ ಸಾರ್ವಜನಿಕ ವಿರೋಧದಿಂದಾಗಿ ಅಂದಿನ ನಿರ್ವಚನಗಳಲ್ಲಿ ಎಲ್ಲ ಜ್ಞಾನಾಕಾಂಕ್ಷಿಗಳು ಅಥವಾ ಅಂದಿನ ಕಾಲದ ತಂತ್ರಜ್ಞಾನಿಗಳು ಋಣಾತ್ಮಕವಾಗಿ – ಬಹಳ ಸಲ ಕೇಡಿಗಳಾಗಿ – ಚಿತ್ರಣಗೊಂಡಿದ್ದಾರೆ.

ತಂತ್ರಜ್ಞಾನದ ಬಗೆಗಿನ ಭೀತಿ, ಆತಂಕ, ವಿರೋಧದ ಕುರಿತು ಕೆದಕುತ್ತ ಹೋದರೆ, ಅದು ತುಂಬಾ ಪ್ರಾಚೀನ ಕಾಲದವರೆಗೂ ಹೋಗುತ್ತದೆ ಎನ್ನುವುದಕ್ಕೆ ಮೇಲೆ ಉದಾಹರಣೆಗಳನ್ನು ನೋಡಿದೆವು. ಹತ್ತೊಂಬತ್ತನೇ ಶತಮಾನದ ಇನ್ನೊಂದು ಉದಾಹರಣೆಯೊಂದಿಗೆ ಮುಂದುವರಿಯೋಣ. ಅಮೇರಿಕಾದ ಕಾದಂಬರಿಕಾರ ನ್ಯಾಥನಿಯಲ್ ಹಾಥಾರ್ನನ “ದ ಬರ್ಥ ಮಾರ್ಕ್” ಎಂಬ ಕತೆಯಲ್ಲಿ ಒಬ್ಬ ಡಾಕ್ಟರನಿಗೆ ಸ್ಪುರದ್ರೂಪಿ ಹೆಂಡತಿ ಇರುತ್ತಾಳೆ. ಅತೀವ ಚೆಲುವೆಯಾದ ಅವಳ ಮುಖದ ಮೇಲೆ ಹುಟ್ಟಂದಿನಿಂದ ಮಚ್ಚೆ ಒಂದಿದೆ. ಆ ಮಚ್ಚೆ ಇಲ್ಲವಾದರೆ ತನ್ನ ಹೆಂಡತಿ ತ್ರಿಲೋಕ ಸುಂದರಿಯಾಗುತ್ತಾಳೆ ಎಂಬ ಹಂಬಲ ಡಾಕ್ಟರಿನಿಗಿರುತ್ತದೆ. ಹಾಗಾಗಿ ಅವನು ಅವಳ ಮುಖದ ಮೇಲಿರುವ ಮಚ್ಚೆಯನ್ನು ಶಸ್ತ್ರಕ್ರಿಯೆಯ ಮೂಲಕ ತೆಗೆದು ಹಾಕಬೇಕೆಂದು ನಿರ್ಧರಿಸುತ್ತಾನೆ. ತಾನೇ ಡಾಕ್ಟರನಾದುದರಿಂದ ಪೂರಾ ಭರವಸೆಯೊಂದಿಗೆ ಶಸ್ತ್ರಕ್ರಿಯೆ ಕೈಗೊಳ್ಳುತ್ತಾನೆ. ಕತೆಯ ಅಂತ್ಯದಲ್ಲಿ, ಮಚ್ಚೆಯನ್ನೇನೋ ಡಾಕ್ಟರ್ ತೆಗೆಯುತ್ತಾನೆ, ಆದರೆ ಹೆಂಡತಿಯ ಜೀವ ಉಳಿಸಿಕೊಳ್ಳಲಾಗುವುದಿಲ್ಲ. ಮನುಷ್ಯ ಪ್ರಕೃತಿಯನ್ನು ಬದಲಿಸಲು ಹೊರಟು ಅಪಾಯಗಳನ್ನು ಸೃಷ್ಟಿಸುತ್ತಾನೆ ಎನ್ನುವುದು ಈ ಕತೆಯ ಮೂಲದಲ್ಲಿರುವ ನೀತಿ.

ಮೇರಿ ಶೆಲ್ಲಿಯ “ಫ್ರಾನ್ಕನ್-ಸ್ಟೀನನ ದೈತ್ಯ” ಏನನ್ನು ಸಂಕೇತಿಸುತ್ತದೆ ಎನ್ನುವ ಬಗ್ಗೆ ವಿವಾದವಿದ್ದರೂ, ಬಹಳ ಓದುಗರ ಪ್ರಕಾರ ಇದು ತಂತ್ರಜ್ಞಾನವೆಂದರೆ ನಿಸರ್ಗದ ಜೊತೆ ಚೆಲ್ಲಾಟವಾಡಿ ಅಪಾಯವನ್ನು ಸೃಷ್ಟಿ ಮಾಡುವ ಕಲೆ ಎಂಬ ಸಂದೇಶ ಕೊಡುತ್ತದೆ. ೧೮೧೮ರಲ್ಲಿ ಪ್ರಕಟವಾದ ಈ ಕಾದಂಬರಿ ತಂತ್ರಜ್ಞಾನದ ಕುರಿತು ಮಾತ್ರವಲ್ಲ, ಕೈಗಾರಿಕಾ ಕ್ರಾಂತಿಯನ್ನೂ ವಿರೋಧಿಸುತ್ತಿದ್ದ ರೋಮ್ಯಾಂಟಿಕ್ ಮನೋಭಾವದ ಕೃತಿ.

ಇತಿಹಾಸದುದ್ದಕ್ಕೂ, ಬಹುತೇಕ ಎಲ್ಲ ಸಮಾಜ-ದೇಶಗಳಲ್ಲಿಯೂ ಇಂತಹ ನೀತಿಸೂತ್ರಗಳು ನಮಗೆ ಕಂಡು ಬರುತ್ತವೆ. ಹೊಸ ತಂತ್ರಜ್ಞಾನಗಳ ಆವಿಷ್ಕಾರ ಯಾವತ್ತೂ ಭೀತಿಯನ್ನು ಹುಟ್ಟುಹಾಕಿರುವುದು, ಆತಂಕವನ್ನು ಸೃಷ್ಟಿಸಿರುವುದು ನಿಜವೇ. ಅದು ಎಷ್ಟು ಸಾರ್ವತ್ರಿಕ ಮತ್ತು ಸಾರ್ವಕಾಲಿಕ ಎಂದರೆ ಬರವಣಿಗೆ, ನಗರ, ಮುದ್ರಣ, ಮೋಟಾರು, ವಿದ್ಯುತ್ತು, ಟೆಲಿಗ್ರಾಫ್, ಕಂಪ್ಯೂಟರು, ಮೊಬೈಲು… ಪ್ರತಿಯೊಂದು ಹೊಸ ಆವಿಷ್ಕಾರವನ್ನು ಸಹ, ಹೊಸದರಲ್ಲಿ ಮಾನವಕುಲಕ್ಕೆ ಹಾನಿಕಾರಕ ಎಂದು ವಿರೋಧಿಸಲಾಗಿತ್ತು. ನನ್ನ ಭಸ್ಮಾಸುರ ಕಲ್ಪನೆಯೇ ಇತಿಹಾಸದುದ್ದಕ್ಕೂ ತಂತ್ರಜ್ಞಾನದ ಕುರಿತು ಬಹಳ ಜನರದ್ದೂ ಆಗಿತ್ತು ಎಂದು ತಿಳಿದು ಹೆಮ್ಮೆ ಪಡಬೇಕೋ, ನಾಚಿಕೆಯಾಗಬೇಕೋ ಗೊತ್ತಾಗುತ್ತಿಲ್ಲ.

ತಂತ್ರಜ್ಞಾನದ ವಿರೋಧ ಯಾಕಾಗುತ್ತದೆ ಎನ್ನುವುದರ ಕುರಿತು ಸಂಶೋಧನೆ ಮಾಡಿ ಪುಸ್ತಕ ಬರೆದ ಕೀನ್ಯಾದ ಕೇಲ್ಸಸ್ಟ್ಯೂ ಜೂಮಾ (Calestous Juma) ಹೊಸ ತಂತ್ರಜ್ಞಾನವೆಂದರೆ ಸಮಾಜದಲ್ಲಿ ಉದಯವಾಗುವ ಅಗತ್ಯಗಳ ಪೂರೈಕೆಗಾಗಿ ಮಾಡುವ ಒಂದು ಬಗೆಯ ಆಸ್ಫೋಟಕ ಆವಿಷ್ಕಾರ (disruptive innovation) ಎನ್ನುತ್ತಾರೆ. ಸಾರ್ವಜನಿಕರಿಂದ ಪರೀಕ್ಷೆಗೆ ಒಳಗಾಗುವ ಈ ಆವಿಷ್ಕಾರಗಳು ಕೆಲವು ಗುಂಪುಗಳಿಂದ ಹಲವು ಕಾರಣಗಳಿಗಾಗಿ ವಿರೋಧಿಸಲ್ಪಡುತ್ತವೆ. ಅದು ಸಾಮಾಜಿಕ ರೂಢಿಗಳು, ಆರೋಗ್ಯದ ಕಾಳಜಿಗಳು, ಜೀವನಶೈಲಿಯ ಭಂಗ, ಇತ್ಯಾದಿ ಕಾರಣಗಳಿಗಿರಬಹುದು. ಜೂಮಾ ಅವರ ಪ್ರಕಾರ ತಂತ್ರಜ್ಞಾನಗಳ ಬಗೆಗಿನ ಭೀತಿ ಆತಂಕಗಳಿಗೆ ಬಹುಪಾಲು ಕಾರಣ ಹೊಸ ತಂತ್ರಜ್ಞಾನದ ವಿರೋಧ. ಮತ್ತು, ಈ ವಿರೋಧಕ್ಕೆ ಮುಖ್ಯ ಕಾರಣ ಪಟ್ಟಭದ್ರ ಹಿತಾಸಕ್ತಿಗಳು. ಹೊಸ ತಂತ್ರಜ್ಞಾನಗಳು ಈಗಾಗಲೇ ಇರುವ ವ್ಯವಸ್ಥೆಯನ್ನು ಭಂಗಗೊಳಿಸುತ್ತವೆ, ಈಗಾಗಲೇ ಇರುವ ತಂತ್ರಜ್ಞಾನವನ್ನು ಅನುಪಯೋಗಿಯಾಗಿಸಿ ಅವುಗಳನ್ನು ಅವಲಂಬಿಸಿದ ವಹಿವಾಟುಗಳಿಗೆ ನಷ್ಟ ತರುತ್ತವೆ. ಅದಕ್ಕಾಗಿ ಮೊದಲಾಗುವ ವಿರೋಧ ಹಲವಾರು ಜನೋಪಯೋಗಿ ಬಣ್ಣಗಳನ್ನು ಮೆತ್ತಿಕೊಂಡು ಪ್ರತಿಕೂಲ ಜನಾಭಿಪ್ರಾಯ ಮೂಡಿಸಲು ಕತೆ-ಕಾವ್ಯ-ಪುರಾಣ-ಸಿನೆಮಾ-ಪ್ರವಚನಗಳು ಇತ್ಯಾದಿ ಹಲಬಗೆಯ ನಿರ್ವಚನಗಳನ್ನು ಹುಟ್ಟುಹಾಕುತ್ತದೆ, ಎನ್ನುತ್ತಾರೆ ಜೂಮಾ.

ಪಟ್ಟಭದ್ರ ಹಿತಾಸಕ್ತಿ ಎನ್ನುವುದು ಒಂದು ಬಗೆಯ ವಿವರಣೆಯಾದರೆ, ಇತರ ಹೆಚ್ಚು ಸಂಕೀರ್ಣ ವಿವರಣೆಗಳನ್ನೂ ಕೊಡಲಾಗಿದೆ. ಪ್ರಸಕ್ತ ಇರುವ ತಂತ್ರಜ್ಞಾನ ಒಂದು ಸಮಾಜದ ರೂಢಿ, ಅಸ್ಮಿತೆ, ಸಂಸ್ಕೃತಿಯೊಂದಿಗೆ ಆಳ ಸಂಬಂಧಗಳನ್ನು ಬೆಳೆಸಿಕೊಂಡಿದ್ದಾಗ ಹೊಸ ಆವಿಷ್ಕಾರವನ್ನು ಜನರು ವಿರೋಧಿಸಬಹುದು. ಅಂತೆಯೇ, ಹಳೆಯ ತಂತ್ರಜ್ಞಾನ ಪ್ರಸಕ್ತ ಅಧಿಕಾರ ವ್ಯವಸ್ಥೆಯಲ್ಲಿ ಭಾಗಿಯಾಗಿರುತ್ತದೆ. ಹೊಸ ತಂತ್ರಜ್ಞಾನ ಈ ಸಮತೋಲನವನ್ನು ನಾಶಮಾಡಿ ಬೇರೆ ಅಧಿಕಾರ ವ್ಯವಸ್ಥೆಯನ್ನು ಕಟ್ಟುತ್ತದೆ. ಇದೂ ಕೂಡ ವಿರೋಧಕ್ಕೆ ಕಾರಣವಾಗುತ್ತದೆ. ತಂತ್ರಜ್ಞಾನದ ವಿರೋಧವನ್ನು ಇನ್ನೂ ವಿಧವಿಧವಾಗಿ ವರ್ಗೀಕರಿಸಬಹುದು.

ಖಂಡಿತವಾಗಿ, ಜೂಮಾ ಅವರ ದೃಷ್ಟಿಕೋನ ಏಕಪಕ್ಷೀಯವಾದುದು ಎನ್ನುತ್ತದೆ ನನ್ನ ಹಠಮಾರಿ ಚಳುವಳಿ-ಪ್ರೇರಿತ ಪ್ರಜ್ಞೆ. ಗಾಂಧೀಜಿ ಯಂತ್ರೀಕರಣವನ್ನು ವಿರೋಧಿಸಲು ವಿಸ್ತೃತ ನೈತಿಕ ಸಿದ್ಧಾಂತವನ್ನು ಪರಿಷ್ಕರಿಸಿಕೊಂಡಿದ್ದರು. ತಂತ್ರಜ್ಞಾನ ಒಂದು ಪ್ರದೇಶದ ಮೇಲೆ ಮಾಡಬಹುದಾದ ದುಷ್ಪರಿಣಾಮಗಳ ಕಾರಣದಿಂದ ನಮ್ಮ ನಡುವೆ ನಡೆಯುತ್ತಿರುವ ಹಲವಾರು ಚಳವಳಿಗಳು ಅವುಗಳನ್ನು ವಿರೋಧಿಸುತ್ತಿವೆ. ಅಷ್ಟೇ ಅಲ್ಲ, ಎಲ್ಲಿಯೋ ಒಂದು ಹಂತದಲ್ಲಿ ತಂತ್ರಜ್ಞಾನ ಮಾನವನ ಅಗತ್ಯಗಳ ಪೂರೈಕೆಯ ವಿಧಾನವಾಗುವುದನ್ನು ಬಿಟ್ಟು, ಮಾನವನ ಅತಿ ಆಶೆಯ ಸಾಧನವಾಗುತ್ತಿದೆ. ಸಾಕು ಎನ್ನುವುದಿಲ್ಲದ ಬೇಕುಗಳನ್ನು ಸೃಷ್ಟಿಸಿ, ಈ ಹೊಸ ಹೊಸ ಹಸಿವುಗಳನ್ನು ನೀಗಲು ಇಕೋ ಹೊಸ ತಂತ್ರಜ್ಞಾನ, ಇಕೋ ಹೊಸ ಆವಿಷ್ಕಾರ ಎನ್ನುವ ತರ್ಕವೂ ಮುನ್ನೆಲೆಗೆ ಬಂದಿದೆ.

ವರ್ತಮಾನದಲ್ಲಿ ತಂತ್ರಜ್ಞಾನಗಳು ಮಾನವನನ್ನು ಶ್ರಮಹೀನನಾಗಿಸಿವೆ ಮಾತ್ರವಲ್ಲ, ಕಾಯಕಹೀನನಾಗಿಸಿದೆ ಕೂಡ. ಕೆಲಸವೇ ಮಾಡದೇ ಬದುಕುವ ಮಾನವ ಪೀಳಿಗೆ ಮುಂದೆ ಬರಬಹುದು ಎಂದು ಊಹಿಸಲಾಗಿದೆ. ಸೂಪರ್-ಕಂಪ್ಯೂಟರುಗಳು, ಬಾಟುಗಳ (bot) ಜಾಲಬಂಧಗಳು, ಸೈಬಾರ್ಗ್, ರೋಬೋಟ್, ಚತುರ ಅಲ್ಗಾರಿದಂಗಳು ಭವಿಷ್ಯದ ಸಮಾಜದ ಉಸ್ತುವಾರಿ ನೋಡಿಕೊಳ್ಳಬಹುದು. ಅಂತಹ ಸಮಾಜದಲ್ಲಿ ಮಾನವ ತನ್ನ ಕೌಶಲ್ಯಗಳನ್ನು, ತನ್ನ ಸಂವೇದನೆಗಳನ್ನು, ತನ್ನ ಅಂಗಾಂಗಳ ಸಮತೋಲನವನ್ನು ಸಹ ಕಳೆದುಕೊಂಡ ಅ-ಮಾನವೀಯ ವ್ಯವಸ್ಥೆ ಬರಬಹುದೆಂದು ಹಲವಾರು ಸೈಫ಼ೈಗಳು (ವೈಜ್ಞಾನಿಕ ಕಥನಗಳು) ಊಹಿಸಿವೆ.

ಈವರೆಗೆ ಸೈಫೈಗಳ ಅದೆಷ್ಟು ಊಹೆಗಳು ನಮ್ಮ ಕಣ್ಣೆದುರಿನಲ್ಲಿಯೇ ವಾಸ್ತವವಾಗಿರುವುದನ್ನು ನೆನೆಸಿಕೊಂಡರೆ ಈ ಊಹೆಯೂ ನಿಜವಾಗುವ ಕಾಲ ದೂರವಿರಲಿಕ್ಕಿಲ್ಲವೆನಿಸುತ್ತದೆ. ತಂತ್ರಜ್ಞಾನದ ಜೊತೆಗಿನ ನಮ್ಮ ಸಂಬಂಧದ ಇನ್ನೂ ಕೆಲವು ಮಗ್ಗಲುಗಳನ್ನು ವಿಶ್ಲೇಷಿಸಬೇಕಾಗುತ್ತದೆ. ಅದನ್ನು ಈ ಅಂಕಣದ ಮುಂದಿನ ಕಂತಿನಲ್ಲಿ ಮಾಡುತ್ತೇನೆ.

ಈ ಬರಹದ ಕೊನೆಯಲ್ಲಿ, ಇದನ್ನು ಬರೆಯುತ್ತ ನಾನು ಎದುರಿಸಿದ ಎರಡು ಪ್ರಶ್ನೆಗಳನ್ನು ಓದುಗರ ಮುಂದಿಟ್ಟು, ನಿಮ್ಮಿಂದ ಉತ್ತರಗಳ ನಿರೀಕ್ಷೆಯಲ್ಲಿರುತ್ತೇನೆ: ಯಾವ್ಯಾವ ಕನ್ನಡ ಸಾಹಿತ್ಯ ಕೃತಿಗಳು ತಂತ್ರಜ್ಞಾನದ ಕುರಿತು ಭೀತಿ, ವಿರೋಧಗಳನ್ನು ಅಭಿವ್ಯಕ್ತಿಸುತ್ತವೆ? ಭಾರತೀಯ ಪುರಾಣಗಳ, ಸಾಹಿತ್ಯ ಕೃತಿಗಳಲ್ಲಿ ಬರುವ ಯಾವ್ಯಾವ ಪಾತ್ರಗಳು ಅಥವಾ ಘಟನೆಗಳು ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಾಂಕೇತಿಕತೆ ಅರ್ಥಬಾಹುಳ್ಯ ಹೊಂದಿವೆ?

******

tellkamalakar@gmail.com