“ಚೀನಾದ ಕಾವ್ಯ ಪರಂಪರೆಯಲ್ಲಿ ಹಳೆಯ ಕವಿತೆ ಹತ್ತೊಂಬತ್ತು ಬಹಳ ಮುಖ್ಯ ಸ್ಥಾನವನ್ನು ಪಡೆದಿವೆಯಾದರೂ ಇವುಗಳ ಕವಿ, ಕಾಲದ ಬಗ್ಗೆ ಇಂದಿಗೂ ವಾಗ್ವಾದ, ಚರ್ಚೆಗಳು ನಡೆದೇ ಇವೆ. ಪ್ರಾಚೀನ ಸಂಕಲನಕಾರರು ಸರಳವಾಗಿ ಇವನ್ನು ಗುಶಿ ಅಥವಾ ಹಳೆಯ ಕವಿತೆಗಳು ಎಂದು ಕರೆದಿದ್ದರೆ ಆನಂತರದ ವಿದ್ವಾಂಸರು ಇವನ್ನು ಒಬ್ಬನಲ್ಲ ಇನ್ನೊಬ್ಬ ಕವಿಯ ರಚನೆಗಳು ಎಂದು ವಾದ ಮಾಡುತ್ತ ಬಂದಿದ್ದಾರೆ. ಆಧುನಿಕ ವಿದ್ವಾಂಸರು ಇವೆಲ್ಲ ಒಬ್ಬ ಕವಿಯ ರಚನೆಯಲ್ಲ ಅನಾಮಧೇಯ ಕವಿಗಳು ಹಲವರು ಬರೆದವು ಎಂಬ ತೀರ್ಮಾನಕ್ಕೆ ಬಂದಿದ್ದಾರೆ “
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಬರೆದ ಪ್ರಸ್ತಾವನೆ ಮತ್ತು ಕವಿತೆಗಳ ಅನುವಾದ
ಹಳೆಯ ಕವಿತೆ ಹತ್ತೊಂಬತ್ತು
“ಗುಶಿ ಶಿಜಿಯು ಶೌ” ಹತ್ತೊಂಬತ್ತು ಹಳೆಯ ಕವಿತೆಗಳು ಹಾನ್ ರಾಜವಂಶದ ಆಳ್ವಿಕೆಯ ಅವಧಿಯಲ್ಲಿ, ಸಾಮಾನ್ಯ ಪೂರ್ವ ಶಕೆ 206 ರಿಂದ ಸಾಮಾನ್ಯ ಶಕೆ 220ರ ಅವಧಿಯಲ್ಲಿ ರಚನೆಯಾದವು. ವಿರಹ, ಸಂಚಾರಿಯ ಅಳಲು, ಪ್ರೀತಿ, ಹಳೆಯ ವೇಶ್ಯೆಯನ್ನು ಮದುವೆಯಾದವನ ಕಥೆ, ಮೇಲ್ವರ್ಗದವರಾಗಲು ನಡೆಸಿದ ಹತಾಶ ಪ್ರಯತ್ನ, ಸಾವು, ಬದುಕಿನ ನಶ್ವರತೆ ಹೀಗೆ ಹಲವು ಸಂಗತಿಗಳನ್ನು ಕುರಿತ ರಚನೆಗಳು ಇವು. ಭಾವಗೀತೆಯ ಗುಣ, ಗೇಯತೆ, ಪ್ರಾಮಾಣಿಕ ಭಾವನೆಗಳ ಅಭಿವ್ಯಕ್ತಿ ಇವು ಗಮನ ಸೆಳೆಯುತ್ತವೆ. ಈ ಕವಿತೆಗಳ ಸರಳತೆ ಪರಿಷ್ಕೃತವಾದ ಸರಳತೆ. ಜಾನಪದ ಸಾಹಿತ್ಯವು ಶಿಷ್ಟ ಸಾಹಿತ್ಯವಾಗಿ ಬದಲಾಗುತ್ತಿದ್ದ ಅವಧಿಯದ್ದು ಈ ಕವಿತೆಗಳು; ಪ್ರತಿ ಸಾಲಿಗೆ ಐದು ಅಕ್ಷರ ಚಿತ್ರಗಳ ಕ್ಲಾಸಿಕ್ ಶೈಲಿ ಸ್ಥಿರಗೊಂಡ ಉದಾಹರಣೆಗಳು ಇಲ್ಲಿವೆ. ಈ ರಚನೆಗಳನ್ನು ಐದು ಅಕ್ಷರ ಚಿತ್ರಗಳ ಛಂದಸ್ಸಿನ ಪೂರ್ವಜರೆಂದು ಹೇಳುವುದುಂಟು ಇದು ಅಭ್ಯಾಸವಾದಂತೆ ನಾಲ್ಕು ಅಕ್ಷರ ಚಿತ್ರಗಳ ಶೈಲಿ ಕಣ್ಮರೆಯಾಯಿತು ಎನ್ನುತ್ತಾರೆ ವಿದ್ವಾಂಸರು. ಚೀನಾದ ಕಾವ್ಯ ಪರಂಪರೆಯಲ್ಲಿ ಹಳೆಯ ಕವಿತೆ ಹತ್ತೊಂಬತ್ತು ಬಹಳ ಮುಖ್ಯ ಸ್ಥಾನವನ್ನು ಪಡೆದಿವೆಯಾದರೂ ಇವುಗಳ ಕವಿ, ಕಾಲದ ಬಗ್ಗೆ ಇಂದಿಗೂ ವಾಗ್ವಾದ, ಚರ್ಚೆಗಳು ನಡೆದೇ ಇವೆ. ಪ್ರಾಚೀನ ಸಂಕಲನಕಾರರು ಸರಳವಾಗಿ ಇವನ್ನು ಗುಶಿ ಅಥವಾ ಹಳೆಯ ಕವಿತೆಗಳು ಎಂದು ಕರೆದಿದ್ದರೆ ಆನಂತರದ ವಿದ್ವಾಂಸರು ಇವನ್ನು ಒಬ್ಬನಲ್ಲ ಇನ್ನೊಬ್ಬ ಕವಿಯ ರಚನೆಗಳು ಎಂದು ವಾದ ಮಾಡುತ್ತ ಬಂದಿದ್ದಾರೆ. ಆಧುನಿಕ ವಿದ್ವಾಂಸರು ಇವೆಲ್ಲ ಒಬ್ಬ ಕವಿಯ ರಚನೆಯಲ್ಲ ಅನಾಮಧೇಯ ಕವಿಗಳು ಹಲವರು ಬರೆದವು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ರಚನೆಗಳು, ಇವು ಮೂಲತಃ ಹಾಡುಗಳು, ಗಾಯಕರು, ಸಂಗೀತಗಾರರು ಇವನ್ನು ಸೃಷ್ಟಿಸಿ ಹಾಡುತ್ತಿದ್ದರು, ಆನಂತರ ಅವು ಮೇಲ್ವರ್ಗದ ಹಲವು ಕವಿಗಳಿಂದ ಪರಿಷ್ಕಾರಗೊಂಡು ಈಗಿರುವ ರೂಪಕ್ಕೆ ಬಂದಿರಬಹುದು ಅನ್ನುವ ಊಹೆಯೂ ಇದೆ. ಬಹಳಷ್ಟು ರಚನೆಗಳು ನಾನು ಎಂಬ ನಿರೂಪಕರ ಮಾತುಗಳಾಗಿವೆ. ಒಂದೊಂದು ಕವಿತೆಯೂ ಒಂದೊಂದು ಘಟನೆಯನ್ನು ನಿರೂಪಿಸುತ್ತದೆ. ಆದರೆ ಘಟನೆಗಳಿಗೆ, ಕವಿತೆಯ ಪಾತ್ರಗಳಿಗೆ ನಿರ್ದಿಷ್ಟತೆ ಇಲ್ಲ. ಉದಾಹರಣೆಗೆ, ಇಲ್ಲಿ ವಿರಹ ಚಿತ್ರಣವಿರುವ ಹಲವು ರಚನೆಗಳಿವೆ ಆದರೆ ವಿರಹದ ನಿರ್ದಿಷ್ಟ ಕಾರಣ ತಿಳಿಯುವುದಿಲ್ಲ ಇವು ಜಾನಪದದ ಲಕ್ಷಣಗಳು. ಚೀನಾದ ಈ ಪ್ರಾಚೀನ ರಚನೆಗಳು ಹಾಲನ ಗಾಥಾ ಸಪ್ತಶತಿಯ, ಸಂಗಂ ಕಾಲದ ಕವಿತೆಗಳ ನೆನಪು ತರುವಂತೆ ಇವೆ. ರಾಜಕೀಯ ತಳಮಳಗಳ ಕಾಲದಲ್ಲಿ ಚೀನಾದ ಮಧ್ಯಮ ಮತ್ತು ಕೆಳವರ್ಗಗಳ ಜನ ತಮ್ಮ ಊರಿನಿಂದ ತಮ್ಮವರಿಂದ ಬೇರ್ಪಟ್ಟು, ಅಲೆಮಾರಿಗಳಾಗಿ ಅನುಭವಿಸಿದ, ಪ್ರಯಾಣದ ಕಷ್ಟ. ಬೀಳ್ಕೊಡುವ ಸಂಕಟ, ಕಾಯಿಲೆ, ವಿಷಾದ, ವಿರಹ, ಸಾವು, ಪ್ರಣಯ ಕಿರಿದಾಗಿರುವ ಬದುಕು, ಇಂಥ ವಿಶ್ವಾತ್ಮಕ ಆಶಯಗಳು ಇಲ್ಲಿವೆ. ಕೆಲವು ಕವಿತೆಗಳಲ್ಲಿ ಶ್ರೀಮಂತರ ಬದುಕಿನ ಚಿತ್ರವೂ ಇದೆ. ಇನ್ನು ಕೆಲವು ಹೆಣ್ಣು ನೋಟದಿಂದ ರಚನೆಗೊಂಡ ಕವಿತೆಗಳೂ ಇವೆ. ಆಪ್ತವಾದ, ತೀವ್ರವಾದ ಸೌಂದರ್ಯ ಈ ರಚನೆಗಳಲ್ಲಿದೆ. ಅಂತರ್ಜಾಲದಲ್ಲಿ ದೊರೆತ ಆರು-ಏಳು ಬೇರೆ ಬೇರೆಯ ಇಂಗ್ಲಿಶ್ ಅನುವಾದಗಳನ್ನು ಆಧಾರವಾಗಿಟ್ಟುಕೊಂಡು ಯಾವುದೊಂದನ್ನೂ ಅನುಸರಿಸದೆ ಚೀನೀ ಕವಿತೆಯ ಭಾವವನ್ನು ನಾನು ಗ್ರಹಿಸಿದ ರೀತಿಯಲ್ಲಿ ಕನ್ನಡಗೊಳಿಸಿದ್ದೇನೆ. ಆಕರಗಳ ವಿವರ ಕೊನೆಯಲ್ಲಿದೆ. ಈ ಕವಿತೆಗಳಲ್ಲಿ ಮತ್ತೆ ಮತ್ತೆ ಬಳಕೆಯಾಗುವ ಮರ, ಹಕ್ಕಿಗಳ ಚಿತ್ರ ಸೇರಿಸಿದ್ದೇನೆ. ೧
ಹೋಗುತ್ತ ಹೋಗುತ್ತ ಇನ್ನೂ ಮುಂದೊತ್ತಿ ಮುಂದೆ
ನಾನಿರುವೆ ನಿನ್ನ ಬದುಕಿನಿಂದ ದೂರವಾಗುತ್ತ
ಸಾವಿರಾರು ಮೈಲು ದೂರ ನಮ್ಮ ನಡುವೆ
ಆಕಾಶದ ಈ ದಡದಲ್ಲಿ ನಾನು
ಆಕಾಶ ಆ ದಡದಲ್ಲಿ ನೀನು
ಕಲ್ಲಿನ ಹಾದಿ ಮುಳ್ಳಿನ ಹಾದಿ ಧೂಳಿನ ಹಾದಿ
ಹಳ್ಳಬಿದ್ದ ಹಾದಿ ಏರುವ ಇಳಿಯುವ ಹಾದಿ
ಮತ್ತೆ ಸೇರುತ್ತೇವೋ ಇಲ್ಲವೋ ಗೊತ್ತು ಯಾರಿಗೆ
ಬಡಗಲ ಗಾಳಿಗೆ ಮುಖ ಮಾಡಿದೆ ಬಡಗಲ ಟರ್ಕರ ಕುದುರೆ
ತೆಂಕಣದ ಯೂ ಹಕ್ಕಿ ಮರದ ತೆಂಕಣ ಕೊಂಬೆಯಲ್ಲಿ ಗೂಡು ಕಟ್ಟಿದೆ
ದಿನವು ದಿನವು ದೂರ ಹೆಚ್ಚಿದೆ ದಿನವು ದಿನವು ಬೆಳೆದಿದೆ ವಿರಹ
ದಿನವು ದಿನವು ನನ್ನ ಅಂಗಿ ಸೊಂಟ ಪಟ್ಟಿ ಆಗಿವೆ ಸಡಿಲ
ತೇಲುವ ಮೋಡ ಹೊಳೆವ ಸೂರ್ಯನ ಮರೆಮಾಡಿದೆ
ಮರಳುವ ಮನಸಿಲ್ಲ ಸಂಚಾರಿಗೆ
ನಿನ್ನ ನೆನೆದು ನೆನೆದು ಅಡರಿದೆ ಮುಪ್ಪು
ತಿಂಗಳು ತಿಂಗಳು ಉರುಳಿ ವರ್ಷ ಮುಗಿದಿದೆ
ನನಗೆ ದಿಕ್ಕಿಲ್ಲ ಇನ್ನು ಮಾತಿಲ್ಲ
ಚಿಂತೆ ಬೇಡ ಮಾತು ಆಡಬೇಡ ಹುಷಾರು
ಊಟ ಮಾಡು ದಮ್ಮಯ್ಯ
ಹುಟ್ಟಿದ ಊರನ್ನು ಬದುಕು ಊರಿಕೊಂಡ ಸ್ಥಳವನ್ನು ಬಿಟ್ಟು ಹೋಗುವ ಕಷ್ಟವನ್ನು ಹೇಳುವ ರಚನೆ. ಕವಿತೆ ಹೇಳುತ್ತಿರುವುದು ಸಂಚಾರಿ ಪುರುಷನೋ ಮನೆಯಲ್ಲಿ ಉಳಿದ ಹೆಣ್ಣೋ ಅಸ್ಪಷ್ಟವಾಗಿದೆ. ಪೂರ್ವ ಚೀನಾದ ಹಾನ್ ವಂಶಸ್ಥರ ಆಳ್ವಿಕೆಯ ದಿನಗಳಲ್ಲಿ ಯುದ್ಧ, ಸಾಮಾಜಿಕ ಕ್ಷೋಭೆ ಇದ್ದವು. ಆ ದಿನಗಳಲ್ಲಿ ಹೆಣ್ಣೊಬ್ಬಳ ಅಳಲನ್ನು ಈ ಜಾನಪದ ಕವಿತೆ ಹೇಳುತ್ತದೆ. ಕೊನೆಯ ಸಾಲನ್ನು ಕವಿತೆ ನುಡಿಯುತ್ತಿರುವ ವ್ಯಕ್ತಿ ಹಂಬಲವನ್ನು ಅದುಮಿಟ್ಟು ತನ್ನ ಕಾಪಾಡಿಕೊಳ್ಳುವ ಅಪೇಕ್ಷೆ ವ್ಯಕ್ತಪಡಿಸುವ ಹಾಗೆ ಕಾಣುತ್ತದೆ. ಅಥವಾ ಊರು ಬಿಟ್ಟು ಅಲೆಯುತ್ತಿರುವಾತ ತನ್ನೂರಿಗೆ ಮರಳುವ ಆಸೆ, ಮರಳಲಾಗದ ಸಂಕಟ ಹೇಳಿಕೊಳ್ಳುತ್ತಿರಬಹುದು. ಟರ್ಕರ ಕುದುರೆ, ದಕ್ಷಿಣದ ಹಕ್ಕಿ ಕೂಡ ತಮ್ಮೂರಿನ ದಿಕ್ಕಿಗೆ ತಿರುಗುವುದನ್ನು ಗಮನಿಸಬಹುದು. ಪರಿತ್ಯಕ್ತ ಹೆಣ್ಣು ಅನ್ನುವುದೊಂದು ಕುರುಹಾಗಿ ಬಳಕೆಯಾಗಿದೆ, ಅರಸನ ಅಥವ ಆಶ್ರಯದಾತನ ಆಸರೆ ತಪ್ಪಿದ ಕವಿ, ವಿದ್ವಾಂಸ ಅಥವ ಅಧಿಕಾರಿ ತನ್ನನ್ನು ಪರಿತ್ಯಕ್ತ ಹೆಣ್ಣಿನ ಹಾಗೆ ಬಿಂಬಿಸಿಕೊಂಡಿರುವ ಚೀನೀ ಕವಿತೆಗಳಿವೆ ಎನ್ನುತ್ತಾರೆ ವಿದ್ವಾಂಸರು. ಈ ಕವಿತೆ ಹೆಣ್ಣು ಮಾತಾಗಿ ಕೇಳಿಸಿ ಮೊದಲು ಮಾಡಿದ್ದ ಅನುವಾದ ಹೀಗಿದೆ:
೧ [ಅ] ದೂರ
ಇನ್ನೂ ಇನ್ನೂ ಮತ್ತೂ ಮತ್ತೂ ದೂರ ದೂರಾ
ನಿನ್ನಿಂದ ನಾನು ನನ್ನಿಂದ ನೀನು
ಸಾವಿರವಲ್ಲ ಹತ್ತು ಸಾವಿರ ಮೈಲು ಅಂತರ
ಉತ್ತರದ ತುದಿಯ ಬಾನು ನೀನು ದಕ್ಷಿಣ ತುದಿಯ ನೆಲ ನಾನು
ನನ್ನ ಹಾದಿ ಬಲು ಕಡಿದು ನಡೆದಷ್ಟೂ ಮುಗಿಯದು
ನಾವೆಂದು ಸೇರುವೆವೋ ಯಾರಿಗೆ ಗೊತ್ತು
ಉತ್ತರದ ಗಾಳಿಯ ಮೂಸುತ್ತ ಕುದುರೆ ಮುಂದೆ ಸಾಗಿದೆ
ದಕ್ಷಿಣದ ಊರ ಮರಗಳಲ್ಲಿ ಹಕ್ಕಿ ಗೂಡು ಕಟ್ಟಿವೆ
ದಿನವೂ ದಿನವೂ ಪ್ರತಿ ದಿನವೂ ಹೆಚ್ಚುತಿದೆ ಈ ದೂರ
ದಿನವೂ ದಿನವೂ ಸಡಿಲವಾಗುತಿವೆ ಉಡುಪು ಒಡ್ಯಾಣ
ಅಲ್ಲಿಂದ ಇಲ್ಲಿಂದ ಬಂದ ಕಪ್ಪು ಮೋಡ ಸೂರ್ಯನ ಮುತ್ತಿವೆ
ಹೋದನವನು ಬರುವ ಸುಳಿವೇ ಇಲ್ಲ ಇನ್ನೂ
ನಿನ್ನ ನೆನೆಯುತ್ತ ನೆನೆಯುತ್ತ ಮುದಿಯಾದೆ ನಾನು
ವಾರ ತಿಂಗಳು ವರ್ಷ ಉರುಳಿ ಹೋದವು ಹೀಗೇ
ತೊರೆದಿರುವೆ ನೀನು ನನ್ನನ್ನು ಮಾತಾಡೆನು ನಾನು ಇನ್ನು
ಬದುಕಬೇಕಲ್ಲ ಎದೆ ಗಟ್ಟಿಮಾಡಿ ಉಂಡು ದಿನ ದೂಡುವೆ ಹೀಗೇ ಇನ್ನೂ
೨
ಹಸಿರು ಹಸಿರು ಹೊಳೆಯ ದಡದ ಹುಲ್ಲು
ದಟ್ಟ ದಟ್ಟ ತೋಪಿನ ವಿಲ್ಲೋ ಮರ
ಚೆಲುವೆ ಚೆಲುವೆ ಮಹಡಿಯ ಮನೆಯ ಹೆಣ್ಣು
ಥಳ ಥಳ ಮಿಂಚು ಕಿಟಕಿಯ ಪಕ್ಕ
ರಂಗು ರಂಗು ಅವಳ ಮುಖ ತುಟಿ
ತೆಳುವು ತೆಳುವು ಅವಳ ಉದ್ದ ಬೆರಳು
ಅಂದು ಅವಳು ಗೀಶಾದ ಹಾಡು ಹುಡುಗಿ
ಇಂದು ದಿಕ್ಕಿಲ್ಲದವನ ಹೆಂಡತಿ
ಊರೂರು ಸುತ್ತುವ ಗಂಡ ಅಪರೂಪ ಮನೆಗೇ
ಕಷ್ಟ ಕಷ್ಟ ಒಬ್ಬಳೇ ಮಲಗುವುದು ದಿನವೂ
೩
ಮಸಣದಲ್ಲಿ ಗೋರಿ ಗುಡ್ಡೆಯ ಮೇಲೆ ಬೆಳೆದ ಸೈಪ್ರಸ್ ಹಸಿರು ಹಸಿರು ಹಸಿರು
ಬೆಟ್ಟದಿಂದ ಧುಮುಕಿ ಹರಿಯುವ ನದಿಯಲ್ಲಿ ಬಂಡೆ ರಾಶಿ ಇವೆ ಹಾಗೇ ಹಾಗೇ ಹಾಗೇ
ನೆಲ ಮುಗಿಲ ನಡುವೆ ಹುಟ್ಟಿದವರು ನಮಗೆ ಮಾತ್ರ
ದೂರ ದಾರಿಯ ಪಯಣಿಗರ ಹಾಗೆ ಆತುರ ಆತುರ
ನಮ್ಮ ಖುಷಿ ಇಷ್ಟು ಮಧು ಪಾತ್ರೆಯ ಮಧುವಿನಷ್ಟು
ಬೇಸರ ಬೇಡ ಮನದುಂಬಿ ಹೀರೋಣ ನಾವು
ಕಟ್ಟು ಗಾಡಿಗೆ ಬೀಸು ಚಾಟಿ ಓಡಲಿ ಸೋಮಾರಿ ಕುದುರೆ
ಸುತ್ತಿ ಖುಷಿಪಡೋಣ ಹಾನ್ ಊರಿನ ಲೂ ಊರಿನ ಬೀದಿ ಬೀದಿ
ಲೋ ಪಟ್ಟಣ ಎಷ್ಟು ಚಂದ ಎಲ್ಲೆಲ್ಲೂ ದೊಡ್ಡ ಅಧಿಕಾರಿಗಳು
ಅವರ ಬೆನ್ನು ಹತ್ತಿ ಇವರು ಇವರ ಬೆನ್ನು ಹತ್ತಿ ಅವರು
ದೊಡ್ಡ ದೊಡ್ಡ ರಾಜಮಾರ್ಗ ಸಿರಿವಂತರ ಮಹಲು ಸಾಲು ಸಾಲು
ಅತ್ತ ಇತ್ತ ಟಿಸಿಲು ಸಂದಿ ಗೊಂದಿ ಜಾಲ
ಬಡಗಲು ದಿಕ್ಕಿಗೆ ರಾಜ ಅರಮನೆ
ತೆಂಕಣದಲ್ಲಿ ಕುಮಾರನ ನಿವಾಸ
ಹೆಜ್ಜೆ ಹಾಕಿದರೆ ನೂರಡಿ ದೂರ
ದುರು ದುರು ದಿಟ್ಟಿಸುವ ಅರಮನೆಗಳ ಕಾವಲು ಗೋಪುರ
ಬೇಸರದ ದುಃಖದ ಒತ್ತಡ ಯಾಕೆ ಬೇಕು ಹೇಳು
ಕುಡಿಕುಡಿದು ಸಂತೋಷಪಡಲಿ ಮನಸು
(ಸೈಪ್ರಸ್: ಚೀನಾದ ಸಾಹಿತ್ಯದಲ್ಲಿ ಸೈಪ್ರಸ್ ಮರ ದೀರ್ಘ ಬದುಕಿನ ಅಥವ ಬದಲಾಗದೆ ಸ್ಥಿರವಾಗಿರುವುದರ ಕುರುಹಾಗಿ ಬಳಕೆಯಾಗುತ್ತದೆ. ಸೈಪ್ರಸ್ ಮರ ಮತ್ತು ಬಂಡೆ ಮನುಷ್ಯನ ಬದಲಾಗುವ ಕಿರು ಬದುಕಿಗಿಂತ ಭಿನ್ನ ಅನ್ನುವುದನ್ನು ಸೂಚಿಸುತ್ತಿರಬಹುದು. ಮೂಡಲ ಹಾನ್ ಪಟ್ಟಣವು ಲೋ-ಯಾಂಗ್ ನ ರಾಜಧಾನಿ. ವೈಭವಪೂರ್ಣವಾಗಿತ್ತು. ಚಕ್ರವರ್ತಿ ಕುಆಂಗ್ ವೂನ ಹುಟ್ಟೂರು. ಆ ಊರಿನಲ್ಲಿ ರಾಜ ಮತ್ತು ಅವನ ಉತ್ತರಾಧಿಕಾರಿ ರಾಜಪುತ್ರನ ಅರಮನೆಗಳು ಪ್ರತ್ಯೇಕವಾಗಿದ್ದವು. )
೪
ಹಬ್ಬ ಮಾಡೋಣ ಹಬ್ಬ
ನುಡಿಯು ಬಣ್ಣಿಸಲಾಗದ ಖುಷಿಯ ಹಬ್ಬ
ಮಿಡಿಯಲಿ ತಂತಿ
ಸ್ವರ ಪಡಿನುಡಿಯಲಿ ನಮ್ಮೆದೆಯ ಖುಷಿಯ
ಹೊಮ್ಮುವ ನಾದ ಕೇಳುವ ಬಲ್ಲವರು
ಅರಿಯುವರು ನಮ್ಮೆದೆಯ ಆಸೆ
ನಾದದ ಹಾಗೆ ಸರಾಗ ಹೊಮ್ಮದು
ಮಾತಿನಲಿ ಎಂದೂ ನಮ್ಮ ಬಯಕೆ
ನಮಗಿರುವುದೊಂದು ಬದುಕು
ಅದೋ ಸುಂಟರಗಾಳಿಗೆ ಸಿಕ್ಕ ಧೂಳಿನ ಕಣ
ರಸ್ತೆಗೆ ಇಳಿ ಕುದುರೆ ಏರು
ಹೊಳೆಯ ದಂಡೆಗೆ ಹೋಗು ಮೊದಲಿಗನಾಗು
ಗಡಿ ದಾಟು ಪಡೆದುಕೋ ಪಡೆಯಬೇಕಾದದ್ದು
ಬಡವರಿಗೆ ಬೆಲೆಯಿಲ್ಲ ಘನತೆ ಇಲ್ಲ
ಇರುವುದೆಲ್ಲ ಬರಿಯ ನಿಟ್ಟುಸಿರು ಕಹಿ
೫
ಬಡಗು-ಪಡುವಣ ಮೂಲೆಯಲ್ಲಿ ಗೋಪುರ
ತೇಲುವ ಮೋಡ ತಾಗುವಷ್ಟು ಎತ್ತರ
ಮೂರು ಮಹಡಿಯ ಮೇಲಿನ ಕೋಣೆ
ಜಾಲಂಧ್ರದ ಕಿಟಕಿಗೆ ರೇಶಿಮೆಯ ಪರದೆ
ಕೇಳುವುದು ಅಲ್ಲಿಂದ ಮೀಟುವ ತಂತಿ ಜೊತೆಗೆ ಹಾಡು
ಆ ರಾಗದಲ್ಲೆಷ್ಟು ದುಃಖ ಎಷ್ಟು ಕಹಿ ಎಷ್ಟು ನೋವು
ಹಾಡುತಿರುವರು ಯಾರು ಹಾಡನ್ನು ಹೀಗೆ
ಮತ್ತಿನ್ನು ಯಾರು ಸತ್ತ ಸೈನಿಕನ ಹೆಂಡತಿ
ಮಂದ್ರ ಮಧ್ಯಮ ಗಾಳಿಯನೆಲ್ಲ ತುಂಬಿದೆ
ಶರತ್ ಋತುವಿನಂಥ ಸ್ವಚ್ಛ ಸ್ವರಗಳ ಪಲ್ಲವಿ
ಮುಗಿದು ಹಾಡಿನೊಂದು ಚರಣದ ಮಧ್ಯದಲ್ಲಿ
ತಟ್ಟನೆ ಒಂದು ಮೀಟಿಗೆ ಎರಡು ಬಿಕ್ಕು ಮತ್ತೆ ಮತ್ತೆ
ಅಲ್ಲೇ ಸುತ್ತಿ ಸುಳಿಯುವ ಅಳಲಿನ ಒತ್ತಡ
ದುಃಖದ ಚಿಂತೆಯಿಲ್ಲ ಅವಳಿಗೆ
ಹಾಡು ಅರಿಯುವವರಿಲ್ಲವೆಂಬ ನೋವು
ಅಗೋ ಚೀರುತ್ತ ಹಾರುವ ಚಕ್ರವಾಕದ
ಜೋಡಿಯಾಗಿ ರೆಕ್ಕೆ ಬಡಿದು ಮುಗಿಲಿಗೇರುವ ಬಯಕೆ
[ಸತ್ತ ಸೈನಿಕ: ಚಿ’ಲಿಯಾಂಗ್, ಚಿ ಪ್ರಾಂತ್ಯದವನು. ಕ್ರಿಪೂ 550ರ ಕದನದಲ್ಲಿ ತೀರಿಕೊಂಡ. ಹೊಳೆಗೆ ಹಾರಿ ಅವನ ಹೆಂಡತಿಯೂ ತೀರಿಕೊಂಡಳೆಂಬ ಐತಿಹ್ಯವಿದೆ. ಅನೇಕ ಪ್ರಾಚೀನ ಗೀತೆ, ಕಥೆಗಳಲ್ಲಿ ಅವಳ ಪ್ರಸ್ತಾಪ ಬಂದಿದೆ, ಅವಳ ದುಃಖದ ಹಾಡಿನ ಪರಿಣಾಮವಾಗಿ ಗೋಡೆ ಕುಸಿಯಿತು ಎಂಬ ಇನ್ನೊಂದು ಕಥನವೂ ಇದೆ.]
೬
ಹೊಳೆಯ ದಾಟಿ ದಾಸವಾಳ ಬಿಡಿಸಿಕೊಂಡೆ
ಕೆಸರು ನೆಲ ದಾಟಿದರೆ ಇದ್ದವು ಬಗೆ ಬಗೆಯ ಸೀತಾಳ
ಬಿಡಿಸಿದ ಹೂ ಕೊಡಲಿ ಯಾರಿಗೆ
ನನ್ನ ಹುಡುಗಿ ಇದ್ದಾಳೆ ನೂರಾರು ಮೈಲು ದೂರದಲ್ಲಿ
ಮನೆಯ ದಿಕ್ಕಿಗೆ ತಿರುಗಿದೆ
ಕಣ್ಣೆದುರಿಗಿದೆ ನಡೆದಷ್ಟೂ ಮುಗಿಯದ ದಾರಿ
ನಮ್ಮಿಬ್ಬರದೂ ಮನಸು ಒಂದೇ ಮನೆ ಬೇರೆ ಬೇರೆ
ತಪ್ಪದು ಚಡಪಡಿಕೆ ಹೀಗೇ ನಾವು ಮುದಿಯಾಗುವವರೆಗೆ
೭
ನಿಚ್ಚಳ ಚಂದಿರ ಬೆಳಕು ಸುರಿದಿದ್ದಾನೆ ರಾತ್ರಿಯಾಕಾಶದಲ್ಲಿ
ಮೂಡಲ ಗೋಡೆಯಲ್ಲಿ ಚಿಮ್ಮಂಡಿ ಹುಳದ ಕಿಟಿಕಿಟಿಕಿಟಿ
ದೊಡ್ಡ ಸೌಟು ನಕ್ಷತ್ರ ಪುಂಜದ ಹಿಡಿ ನುಡಿದಿದೆ- ಚಳಿಗಾಲ ಬೇಗ ಬಂದಿದೆ
ಕಾಲಕ್ಕೆ ತಕ್ಕ ಹಾಗೆ ತಿರುಗುವ ಚುಕ್ಕೆಗಳೆಲ್ಲ ಕಿಕ್ಕಿರಿದು ಮಿನುಗಿವೆ
ಕಾಡು ಹುಲ್ಲಿನ ಮೇಲೆ ಇಬ್ಬನಿ ಹನಿ
ಈ ವರ್ಷ ಋತು ಬದಲಿದೆ ಬಲು ಬೇಗ
ಶರತ್ಕಾಲದ ಸಿಕಾಡ ಮರದಲ್ಲಿ ಕೂತು ರೆಕ್ಕೆ ಉಜ್ಜಿ ಸದ್ದು ಮಾಡಿದೆ
ಕಪ್ಪು ಸ್ವಾಲೋ ಎತ್ತ ಹೋದವೋ ವಲಸೆ
ಇದ್ದನೊಬ್ಬ ಗೆಳೆಯನು ನನ್ನೊಟ್ಟಿಗೆ ಓದಿದವನು
ಈರ ರೆಕ್ಕೆ ಬಡಿದು ಆಕಾಶದಲ್ಲಿ ಹಾರಿ ಹೋದವನು
ನನ್ನ ಕೈ ಹಿಡಿದು ಹೆಜ್ಜೆ ಹಾಕಿದ್ದು ಮರೆತನು
ಹೆಜ್ಜೆ ಗುರುತಿನ ಹಾಗೆ ನನ್ನನಿಲ್ಲೇ ಬಿಟ್ಟು ಹೋದನು
ಅಗೋ ಅಲ್ಲಿ ನೇಗಿಲು ಹೂಡಲಾಗದ ಎತ್ತು
ಸುತ್ತುವವು ಯಾವುದೂ ಬಂಡೆಗಲ್ಲಿನ ಹಾಗೆ ಇದ್ದಲ್ಲೆ ಇರುವವಲ್ಲ
ಒಳ್ಳೆತನ ಗಟ್ಟಿಯಾಗದಿದ್ದರೆ ಸ್ನೇಹಿತನೆಂದು ಹೆಸರಿಟ್ಟರೇನು
[ದೂರವಾದ ಗೆಳೆಯನ ಬಗ್ಗೆ. ಬದಲಾಗುವ ಋತು, ಆಕಾಶ: ಬದಲಾದ ಗೆಳೆಯನ ರೂಪಕಗಳು ದೊಡ್ಡ ಸೌಟು (ಸಪ್ತ ಋಷಿ), ಬುಟ್ಟಿ, ಎತ್ತು (ವೃಷಭ): ನಕ್ಷತ್ರ ಪುಂಜಗಳ ಹೆಸರು ಸಿಕಾಡ: ಚಳಿಗಾಲ ತೊಡಗಿದಾಗ ಸದ್ದು ಮಾಡುವ ಕೀಟವೆಂದು ಚೀನೀ ಕಾವ್ಯದ ಕವಿಸಮಯ ಕನ್ನಡದ ಕೂಪಮಂಡೂಕ ಕವಿತೆ ಅಸ್ಪಷ್ಟವಾಗಿ ನೆನಪಾಗುತ್ತದೆ]
೮
ಕಸುವಿಲ್ಲ ಬೆಟ್ಟದಿಳಿಜಾರಿನಲ್ಲಿ ಬೇರು ಬಿಟ್ಟು
ಬೆಳೆದ ಒಂಟಿ ಬಿದಿರ ಗಿಡಕ್ಕೆ
ನಿನ್ನ ಮದುವೆಯಾದ ಹೊಸ ಹೆಣ್ಣು ನಾನು
ಬೇಲಿಗೇ ಹಬ್ಬಿ ಬೆಳೆದು ಹರಡುವ ಬಳ್ಳಿ
ಬೆಳೆವ ಕಾಲದಲ್ಲಿ ಬೆಳೆದು ಹಬ್ಬಬೇಕು ಬಳ್ಳಿ
ಇರಬೇಕು ಗಂಡ ಹೆಂಡತಿ ಒಟ್ಟಿಗೆ
ಮದುವೆಯಾದ ಮೇಲೆ ನೀನು ಸಾವಿರಾರು ಮೈಲು ದೂರ
ನಿನ್ನ ನನ್ನ ನಡುವೆ ಬೆಟ್ಟ ಸಾಲಿನ ಕಣಿವೆಗಳು ನೂರು ನೂರು
ಹಂಬಲಿಸಿ ಹಂಬಲಿಸಿ ಮುದಿಯಾಗುತಿರುವೆ
ನಿನ್ನ ಸವಾರಿ ಬಂಡಿ ಬೆಟ್ಟವೇರಿ ಬರುವುದೇಕಿಷ್ಟು ನಿಧಾನ
ಅರಳಿ ಕಂಪು ಬೀರಿ ನಗುವ
ಬಣ್ಣ ಬಣ್ಣದ ಹೂವು ಕಂಡರೆ ನೋವು
ಹೂವೆತ್ತದಿದ್ದರೆ ದಿನವುರುಳಿ ಒಣಗುವುದು
ಉದುರಿದ ಹೂವು ಒಣ ಹುಲ್ಲಿನ ಪಾಲು
ಮದುವೆಯಲಿ ಕೊಟ್ಟ ಮಾತು ಮೀರದವ ನೀನು
ವಿನೀತ ಹೆಣ್ಣು ಸುಳ್ಳಾಗಲಿ ಹೇಗೆ ನಾನು
೯
ಅಂಗಳದಲ್ಲೊಂದು ಅಪರೂಪದ ಮರ
ಹಸಿರೆಲೆ ನಡುವೆ ಪರಿಮಳದ ಮಾದಕ ಹೂ ರಾಶಿ
ಕೊಂಬೆ ಹಿಡಿದು ಜಗ್ಗಿ ಬಗ್ಗಿಸಿ ಹೂಗೊಂಚಲು ಕಿತ್ತೆ
ಕಳಿಸುವ ಆಸೆ ಅದನ್ನು ನನ್ನ ಪ್ರಿಯನಿಗೆ
ನನ್ನ ಉಡುಪಿಗೆ ಎದೆಗೆ ಮಡಿಲಿಗೆ ಮೈಗೆ ಮನಸಿಗೆ ಪರಿಮಳ ತುಂಬಿ
ಕಳಿಸಲಾಗದಷ್ಟು ದೂರ ಅಯ್ಯೋ ನೀನು
ಬಲುದೊಡ್ಡ ಉಡುಗೊರೆಯಲ್ಲ ಈ ಹೂ ಗೊಂಚಲು
ದೂರ ರಸ್ತೆ ಮುಗಿದು ತಲುಪದು ನಿನಗೆ
ನೆನಪಾದೀತು ನಿನಗೆ ನಾವು ಅಗಲಿ ಎಷ್ಟು ಕಾಲವಾಯಿತೆಂದು ಅನ್ನುವ ಆಸೆ ಅಷ್ಟೆ
೧೦
ಆಕಾಶದ ಹಾಲು ಹೊಳೆಯ ಆಚೆ ದಡದಲ್ಲಿ ಕುರಿ ಕಾಯುವ ಹುಡುಗ ಥಳ ಥಳ
ಈಚೆ ದಡ ಈ ತುದಿಯಲ್ಲಿ ಹಿಮ ಬೆರಳಲ್ಲಿ ಮಗ್ಗದ ಲಾಳಿ ಆಡಿಸುತ್ತ ಹುಡುಗಿ
ನಿಧಾನ ನಿಧಾನ ಅವಳ ಕೈಯಾಡಿದ ಹಾಗೆ ಮಗ್ಗದ ಟಕ ಟಕಾ ಟಕ
ಬೆಳಕು ಹರಿದರೂ ಇರುಳು ಕವಿದರೂ ಕೆಲಸ ಮುಗಿದಿಲ್ಲ
ಮಳೆ ಹನಿಯ ಹಾಗೆ ಉದುರಿವೆ ಕಾಮನಬಿಲ್ಲಿನಂಥ ಬಣ್ಣಗಳ ಕಂಬನಿ
ಆಳವಿರದೆ ಉಕ್ಕಿ ಹರಿವ ದೇವನದಿಯ ದಡದಲ್ಲಿ ದಾಟಲಾಗದೆ ಒಬ್ಬಳೇ ಕೂತು
ಮಾತಿಲ್ಲದೆ ದೂರದಲ್ಲಿರುವ ಅವನ ನೋಡುನೋಡುತಲೇ ಇರುವಳು
ಈ ಲೋಕ ಸೃಷ್ಟಿಯಾದಾಗ ಕುರಿಕಾಯುವ ಹುಡುಗ ಬಟ್ಟೆ ನೇಯುವ ಹುಡುಗಿ ಪ್ರೀತಿ ಮಾಡುತ್ತಿದ್ದರು. ಅವಳು ದೇವಲೋಕದ ಒಡೆಯನ ಮೊಮ್ಮಗಳು. ಮೋಡಗಳ ಬಟ್ಟೆ ನೇಯ್ದು ಕಸೂತಿ ಹಾಕುವುದು ಅವಳ ಕೆಲಸ. ಪ್ರೀತಿಯ ಹುಡುಗನ ಮದುವೆಯಾದಮೇಲೆ ಅವಳಿಗೆ ತಾನು ಮಾಡಬೇಕಾದ ಕೆಲಸ ಮರೆತೇ ಹೋಯಿತು. ದೇವಲೋಕದ ಒಡೆಯ ಅವರನ್ನು ನಕ್ಷತ್ರಗಳನ್ನಾಗಿ ಮಾಡಿ ಕ್ಷೀರ ಪಥದ ಅಕ್ವಿಲಾ ಮತ್ತು ಲೈರಾ ನಕ್ಷತ್ರ ಪುಂಜಗಳಲ್ಲಿ ಇರಿಸಿದ. ವರ್ಷಕ್ಕೆ ಒಂದು ಸಲ, ಏಳನೆಯ ತಿಂಗಳ ಏಳನೆಯ ದಿನ, ಮ್ಯಾಗ್ ಪೈ ಹಕ್ಕಿಗಳು ರೆಕ್ಕೆ ಹರಡಿ ಹಾಲು ಹೊಳೆಗೆ ಸೇತುವೆ ಕಟ್ಟಿದಾಗ ಅವರು ಹೊಳೆ ದಾಟಿ ಒಬ್ಬರನ್ನೊಬ್ಬರು ಭೇಟಿ ಮಾಡುತ್ತಾರೆ ಅನ್ನುವ ಕಥೆ.
೧೧
ವಾಪಸು ಹೋಗಲು ಗಾಡಿ ತಿರುಗಿಸಿ ನೊಗ ಹೂಡಿ ಕುದುರೆ ಕಟ್ಟಿದೆ
ಮೆಲ್ಲಗೆ ಮೆಲ್ಲಗೆ ಶುರುವಾಯಿತು ದೂರ ದೂರದ ಪಯಣ
ಕೊನೆಯಿರದ ದಾರಿ ನೂರಾರು ಹೊಳೆ ತೊರೆ ಕೊಳ್ಳ
ನಾಕು ದಿಕ್ಕಿನಲ್ಲೂ ಬಟಾ ಬಯಲು ಮೂಡಲ ಗಾಳಿಗಾಡುವ ಹುಲ್ಲುಗಾವಲು
ದಾರಿ ಸಾಗುತ್ತ ಕಂಡುದೆಲ್ಲ ಹೊಸತೇ ಗೊತಿದ್ದದ್ದು ಏನೂ ಇಲ್ಲ
ಮುಪ್ಪಾಗದಿರುವುದೇ ಬಲು ಬೇಗ ನನಗೆ ಹೀಗೇ
ಅರಳುವೊಂದು ಕಾಲ ಮಾಗುವುದೊಂದು ಕಾಲ
ತೀರ ತಡವಾಗಿ ದೊರೆತ ಗೆಲುವಿನ ಕಹಿ ತಿಂದು ಸಾಯುವುದೊಂದು ಕಾಲ
ಶಾಶ್ವತವಾಗಿರುವುದಕ್ಕೆ ಬದುಕು ಕಲ್ಲೂ ಅಲ್ಲ ಬಂಗಾರವೂ ಅಲ್ಲ
ಎಲ್ಲ ಬದಲಾಗುವ ಹಾಗೆ ಬದಕೂ ತಟ್ಟನೆ ಇಲ್ಲವಾಗುವುದು
ಇರಬೇಕಾದರೆ ಶಾಶ್ವತವಾಗಿ ಏನು ಮಾಡಬೇಕು
ಹೆಸರು ಮಾಡಿ ಉಜ್ವಲ ಕೀರ್ತಿ ಗಳಿಸಬೇಕು
೧೨
ಉದ್ದಾನುದ್ದ ಮೂಡಲ ಗೋಡೆ ಅಲ್ಲಿ ಇಲ್ಲಿ ಹೊರಳಿ
ಮೊದಲಿಗೇ ಮತ್ತೆ ಬಂದು ಮುಟ್ಟುವ ಕೋಟೆ
ಗಾಳಿ ಬೀಸಿ ಧೂಳು ಉದುರಿದೆಲೆಗಳನೆತ್ತಿ ಈಡಾಡಿ
ಋತುಗಳು ಹೊರಳಿ ವರುಷದ ಕೊನೆ ಬಂದಿರುವುದು
ಬೆಳಗಿನ ಹಕ್ಕಿಯೆದೆಯ ತುಂಬ ಕಹಿ ನೋವು
ನನ್ನೆದೆಯಲ್ಲಿ ಚಿಮ್ಮಂಡಿ ಕೀಟದ ಕಿಟಿಕಿಟಿ
ಯಾಕೆ ಈ ಇಕ್ಕಟ್ಟು ಕಗ್ಗಂಟು ಬಿಗಿ ಬಂಧನ
ಯಾನ್ ಊರಿನಲ್ಲಿ ಚಾವೋ ಊರಿನಲ್ಲಿ
ಚೆಲುವೆಯರು ಪಚ್ಚೆ ಮರಕತದಂಥವರು ರೇಶಿಮೆ ತೊಟ್ಟವರು
ನಿಂತಿದ್ದಾಳೆ ಬಾಗಿಲಲ್ಲಿ ನೋವಿನ ರಾಗ ಪಲುಕುತ್ತಾ
ಹಾಡು ಕಟ್ಟುತ್ತಾ ತಂತಿಯನಿನ್ನೂ ಬಿಗಿ ಮಾಡಿ ಮೀಟುತ್ತಾ
ಅತ್ತ ಇತ್ತ ಹೆಜ್ಜೆ ಹಾಕಿದೆ ನನ್ನ ಮನಸು
ನಿನ್ನ ಮನೆಗೆ ಗೂಡು ಕಟ್ಟಲು ಹಾರುವ
ಉಡುಪು ತೊಟ್ಟೆ ಸೊಂಟಪಟ್ಟಿ ಬಿಗಿದೆ
ಜೋಡಿ ಸ್ವಾಲೋಗಳ ಜೊತೆ ಗೂಡಿ ಹಾರಿದೆ
೧೩
ಬಂಡಿಯೇರಿ ಮೂಡಲ ಕೋಟೆ ಗೋಡೆ ದಾಟಿದೆ
ಊರಾಚೆ ಬಡಗಣ ಮಸಣದ ಗೋರಿ ದಿಬ್ಬಗಳ ಕಂಡೆ
ದಾರಿಯೊತ್ತಿಗೆ ದೇವದಾರು ಸೈಪ್ರಸ್ ಮರ ಸಾಲು
ಗೋರಿ ಬದಿಯಲ್ಲಿ ನಿಟ್ಟುಸಿರು ಬಿಡುವ ಪಾಪ್ಲಾರ್
ಅದರಡಿಯಲ್ಲಿ ಒರಗಿದ್ದಾರೆ ಇನ್ನಿರದ ಹಿರೀಕರು
ಕೊನೆಯೆ ಇರದ ಇರುಳ ಕತ್ತಲಲ್ಲಿ
ಹಳದಿ ಜಲಪರಿಗೆಯ ತಳದ ಲೋಕದಲ್ಲಿ
ಸಾವಿರ ಋತುಗಳು ಉರುಳಿದರೂ ಏಳದೆ ಮಲಗಿರುವರು
ನಮ್ಮ ಆಯುಸ್ಸು ಚಿನ್ನದ ಹಾಗೆ ಕಲ್ಲಿನ ಹಾಗೆ ಶಾಶ್ವತವಲ್ಲ
ಮುಂಜಾವದಲ್ಲಿ ಗರಿಕೆ ಮೇಲೆ ಬಿದ್ದ ಇಬ್ಬನಿ ನಮ್ಮ ಬದುಕು
ಹತ್ತು ಸಾವಿರ ತಲೆಮಾರು ಸಾಗಿ ಹೋಗಿದೆ
ಸಾಯದೆ ಉಳಿದಿರಲು ತಿಂದ ಮದ್ದೆಲ್ಲ ವಿಷವಾಗಿ ಸತ್ತರು ರಾಜರು ಋಷಿಗಳು
ಒಳ್ಳೆಯ ಮಧು ಹೀರುವುದೊಳ್ಳೆಯದು
ನಯ ರೇಶಿಮೆ ತೊಟ್ಟು ನಲಿವುದೊಳ್ಳೆಯದು
[ಹಳದಿ ಜಲಪರಿಗೆ-‘ಹಳದಿ ಚಿಲುಮೆ’ ಯೆಲ್ಲೋ ಸ್ಪ್ರಿಂಗ್, ಹಾಂಗ್ ಕ್ವಾನ್: ಪ್ರಾಚೀನ ಚೀನದ ಧರ್ಮದ ನಂಬಿಕೆಯ ಪ್ರಕಾರ ಹಳದಿ ಜಲಪರಿಗೆ ಸತ್ತವರ ಆತ್ಮಗಳು ಇರುವ ಅಧೋಲೋಕ. ಅನ್ನು ಬಹುಶಃ ಚೀನಾದ ಪ್ರಮುಖ ‘ಹಳದಿ ನದಿ’ ‘ಹ್ವಾಂಗ್ ಹಿ’ ಯ ಇನ್ನೊಂದು ರೂಪವಾಗಿ ಕಲ್ಪಿಸಿಕೊಂಡಿರಬಹುದು ಎಂಬ ಊಹೆ ಇದೆ.]
೧೪
ಹೋದವರು ಸತ್ತು ಆಗಿದ್ದಾರೆ ದೂರ ದೂರ
ಇರುವವರು ಆಗಬೇಕು ನಮಗೆ ಹತ್ತಿರ ಹತ್ತಿರ
ಉರಾಚೆ ಹೋಗಿ ಕಣ್ಣಾಡಿಸಿ ನೋಡಿದರೆ
ಕಾಣುವುದು ಸತ್ತವರ ಹೂಳಿದ ಮಣ್ಣು ಗುಡ್ಡೆ ಸಾಲು
ಹಳೆಯ ಸಮಾಧಿಗಳಿದ್ದ ಜಾಗ ಈಗ ಆಗಿದೆ ಉಳುಮೆ ಮಾಡುವ ಹೊಲ
ಪೈನು ಸೈಪ್ರಸು ಕಡಿದು ಆಗಿವೆ ಹಲಗೆ ಸೌದೆ ಮೇಜು ಕುರ್ಚಿ ಚೌಕಟ್ಟು
ಗಾಳಿ ಬೀಸಿದಾಗ ಪಾಪ್ಲಾರು ನಿಡುಸುಯ್ವುದು
ಆ ಮರ್ಮರ ಕೇಳಿದರೆ ಎದೆ ಭಾರವಾಗುವುದು
ಹೋಗಬೇಕು ನಮ್ಮೂರಿಗೆ ನನ್ನ ಮನೆಗೆ
ವಾಪಸು ಹೋಗಲು ದಾರಿ ಇಲ್ಲ ನನಗೆ
೧೫ ಮನುಷ್ಯ ನೂರು ವರ್ಷವೂ ಬದುಕುವುದಿಲ್ಲ
ಎದೆಯೊಳಗೆ ಸಾವಿರ ವರ್ಷದ ದುಃಖ ಇರುವುದಲ್ಲಾ
ಬದುಕಿನ ಹಗಲು ಕಿರಿದು ಇರುಳು ಹಿರಿದು
ದೀಪ ಹಿಡಿದು ಕತ್ತಲಲ್ಲಿ ನಡೆವುದು ಒಳಿತು
ಬಂದಾಗ ಬಂದ ಸುಖ ಅನುಭವಿಸಬೇಕು
ಸುಖ ನಾಳೆಗೆ ಎಂದು ಯಾಕನ್ನಬೇಕು
ದುಡ್ಡು ಕೂಡಿಡುವ ಮೂರ್ಖರ ಕಂಡು ನಗುವರು ಜನ ನಾಳೆಯ ದಿನ ಅಮರತ್ವ ಪಡೆದೂ ಕೊಕ್ಕರೆ ಏರಿ ಹಾರಿ ಹೋದ ವಾಂಗ್ ಝಿಕ್ವಿಯೋನನ್ನು ಅನುಸರಿಸುವವರ ಕಾಣೆನಲ್ಲ ವಾಂಗ್ ಝಿಕ್ವಿಯೋ: ಚೌ ವಂಶದ ಅರಸ (ಕ್ರಿಪು 571-544 ), ಇಪ್ಪತ್ತು ವರುಷ ಪ್ರಯತ್ನಪಟ್ಟು ಅಮರತ್ವವನ್ನುಪಡೆದ, ಕೊನೆಗೆ ಹಂಸವನ್ನೇರಿ, ಮೌತ್ ಆರ್ಗನ್ ನುಡಿಸುತ್ತ ಈ ಲೋಕವನ್ನು ಬಿಟ್ಟು ತೆರಳಿದ ಎಂಬ ಕಥೆ ಇದೆ.
೧೬
ಚಳಿಯ ಕಾಲದ ಮೊದಲ ತಿಂಗಳು ತಣ್ಣನೆ ಗಾಳಿ
ಮುಸ್ಸಂಜೆಯಲ್ಲಿ ಚಿಮ್ಮಂಡಿಗಳ ಹಾಡಿನ ಗೋಳು
ಇರಿವ ಗಾಳಿ ಕೊರೆವ ಗಾಳಿ ಮೊರೆವ ಗಾಳಿ
ಅಲೆಮಾರಿ ಪ್ರಿಯನ ಬಳಿ ಬೆಚ್ಚನೆ ಅಂಗಿಯಿಲ್ಲ
ಕಸೂತಿ ಹಾಕಿ ಕೊಟ್ಟ ಹೊದಿಕೆ ಲೂ ಪೋ ಊರಿನಲ್ಲೆ ಬಿಟ್ಟ
ನನ್ನ ಜೊತೆ ನನ್ನ ಕಂಬಳಿ ಹೊದೆಯುವವನಲ್ಲ ಈಗ
ನಕ್ಷತ್ರ ನೋಡುತ್ತ ತುಂಬು ಚಂದಿರನ ಬೆಳಕಲ್ಲಿ ನೆನೆಯುತ್ತ
ಕೊನೆಯಿರದ ರಾತ್ರಿ ಮಲಗಿರುವೆ ನಾನೊಬ್ಬಳೇ
ನಿನ್ನ ಹೊಳೆವ ಮೊಗ ಕಂಡೆ ಕನಸಿನಲ್ಲಿ
ರಥವೇರಿ ಬಂದಿದ್ದೆ ನಮ್ಮ ಗೆಳೆತನ ನೆನೆದಿದ್ದೆ
ಮದುವೆ ಉಡುಗೊರೆ ನೀಡಿದ್ದೆ ಮರೆಯುವುದಿಲ್ಲ
ಬರುವೆನು ಮತ್ತೆ ಎಂದದ್ದು ನನ್ನ ಕಿವಿಯಾರೆ ಕೇಳಿದ್ದೆ
ಕನಸಿನ ಕೋಣೆಯಲ್ಲಿ ನಿಲ್ಲದೆ ಒಂದರೆ ಗಳಿಗೆ
ನನ್ನ ಬಿಟ್ಟೆ ನೀನು ಹೊರಟು ಬಿಟ್ಟೆ
ಮುಂಜಾನೆ ಗಾಳಿಯಲ್ಲಿ ತೇಲಿ ಬರಲು ರೆಕ್ಕೆಯಿಲ್ಲ ನನಗೆ
ಗಾಳಿ ಹೇಗೆ ತಂದೀತು ನನ್ನ ನಿನ್ನಲ್ಲಿಗೆ
ಕತ್ತು ಚಾಚಿ ನೋಡುವೆ ಕಂಡೀತು ನಿನ್ನ ಮುಖ ದೂರದಲ್ಲಿ
ಬಾಗಿಲಲ್ಲೆ ನಿಂತು ಕಾಯುತ್ತ ಅಳುತ್ತ ಹೊಸ್ತಿಲೆಲ್ಲ ವದ್ದೆ
೧೭
ಚಳಿ ಹೆಚ್ಚಿದೆ ತಣ್ಣಗೆ ಕೊರೆವ ಗಾಳಿ ಬೀಸಿದೆ
ಈ ದುಃಖ ರಾತ್ರಿಯ ಮತ್ತಷ್ಟು ಹಿಗ್ಗಿಸಿದೆ
ಹುಣ್ಣಿಮೆಯ ಚಂದಿರನ ಬೆಳಕು ಕಳೆದು
ಐದನೆಯ ದಿನ ಚಂದಿರನ ಮೊಲ ಕಪ್ಪೆಗಳು ಮಸುಕಾಗಿವೆ
ದೂರದಿಂದ ಬಂದ ಸಂಚಾರಿ ಪತ್ರವ ಕೊಟ್ಟ
ಮೊದಲು ಬರೆದಿದ್ದ ನೀನಿರದೆ ಬೇಸರವೆಂದು
ಆಮೇಲೆ ಬರೆದಿದ್ದ ವಿರಹದ ದುಃಖ ಬಹಳವೆಂದು
ನನ್ನೆದೆಗೆ ತಾಗುವ ಹಾಗೆ ಅವಿಸಿಟ್ಟೆ ಪತ್ರವನು
ವರ್ಷ ಮೂರು ಕಳೆದವು ಪತ್ರದ ಅಕ್ಷರ
ನನ್ನೆದೆಗೆ ಅವನ ಮಾತು ಉಸಿರಿವೆ
ನನ್ನೆದೆ ಅವನ ಮಾತು ಭದ್ರವಾಗಿ ಹಿಡಿದಿಟ್ಟಿದೆ
ಅದು ಅಯ್ಯೋ ಅವನಿಗೆ ಅರ್ಥವೇ ಆಗಿಲ್ಲ
೧೮ ದೂರದಿಂದ ಬಂದವನು ಅವನು
ರೇಶಿಮೆಯ ಬಟ್ಟೆ ತಂದಿದ್ದ
ಮೂರು ಸಾವಿರ ಮೈಲು ದೂರವಿದ್ದರೂ
ಬದಲಾಗಿಲ್ಲ ನನ್ನವನ ಮನಸು
ಜೋಡಿ ಮಾಂಡ್ರಿಯನ್ ಬಾತುಗಳ ಕಸೂತಿ ಹಾಕಿದೆ
ಎರಡು ಕೌದಿ ಹೊಲಿದೆ
ನನ್ನೊಡನಿಲ್ಲದವನ ಒಂದರಲ್ಲಿ ತುಂಬಿ
ಗಂಟು ಬಿಗಿದು ಹೊಲಿಗೆ ಹಾಗಿ ಭದ್ರಮಾಡಿದೆ
ಬಣ್ಣಕ್ಕೆ ಅಂಟು ಬೆರೆತರೆ ಬೇರೆ ಮಾಡುವರು ಯಾರು
[ಮಾಂಡ್ರಿಯನ್ ಬಾತು ಜೀವಮಾನ ಪರ್ಯಂತ ಕೂಡಿ ಬಾಳುತ್ತವೆಂಬುದು ಚೀನೀ ನಂಬಿಕೆ]
೧೯
ಶುದ್ಧ ಹಾಲು ಬಿಳುಪಿನ ಪೂರ್ಣ ಚಂದಿರ
ಕಿಟಕಿ ಪರದೆಯ ಹಾಸು ಹೊಕ್ಕು ಬೆಳಗಿದ್ದಾನೆ
ಅತ್ತ ಇತ್ತ ಹೊರಳಾಡಿಸುವ ಬರಿಯ ದುಃಖ
ನಿದ್ರೆ ಇರದೆ ಉಡುಪಿಗೆ ಮೈತೂರಿ ಎದ್ದೆ
ಹೆಜ್ಜೆ ಹಾಕಿದೆ ಅತ್ತ ಇತ್ತ ಅತ್ತ ಅತ್ತ
ಸಂಚಾರವು ಸಂತೋಷ ಅನ್ನುತ್ತಾನೆ ಅವನು
ಬೇಗ ವಾಪಸು ಬರಲಿ ಅವನು ಅಷ್ಟು ಸಾಕು ನನಗೆ
ಅಂಗಳಕ್ಕೆ ಬಂದೆ ಯಾರಿಗೆ ಹೇಳಲಿ ನನ್ನ ತವಕ ತಳಮಳ ಬಯಕೆ
ತಲೆ ಎತ್ತಿ ಆಕಾಶ ನೋಡಿದೆ ಕೋಣೆಗೆ ಮರಳಿದೆ
ನನ್ನ ನಿಲುವಂಗಿಯೆಲ್ಲ ಕಣ್ಣೀರಲ್ಲಿ ತೊಯ್ದಿದೆ
ಆಕರಗಳು
• THE SHAMBHALA ANTHOLOGY of Chinese Poetry Translated and edited by
• J. P. SEATON, Boston & London 2014
• An anthology of Chinese literature: beginnings to 1911 I edited and translated by Stephen Owen. W. W. Norton & Company 1996
• The Shorter Columbia Anthology of Traditional Chinese Literature, Victor H. Mair, editor, Columbia University Press 2000
• An anthology of Chinese literature: beginnings to 1911 I edited and translated by Stephen Owen. Norton, 1996
• The Anchor Book of Chinese Poetry, ed. Tony Barnstone and Chou Ping, Anchor Books, New York, 2005
• Translation of Nineteen Old Poems 古詩十九首 Julie Sullivan https://www.academia.edu/39660835/Translation_of_Nineteen_Old_Poems_%E5%8F%A4%E8%A9%A9%E5%8D%81%E4%B9%9D%E9%A6%96
• http://crockerymockery.blogspot.com/2012/06/nineteen-old-poems.html
• A Hundred and Seventy Chinese Poems, Seventeen Old Poems translated by Arthur Waley https://en.wikisource.org/wiki/A_Hundred_and_Seventy_Chinese_Poems/Seventeen_Old_Poems
• http://www.chinaknowledge.de/Literature/Poetry/tangshi.html
• https://www.shigeku.org/xlib/lingshidao/hanshi/poem19.htm
Secondary Sources, Books and Websites
• How to read Chinese poetry : a guided anthology /
• edited by Zong-qi Cai. Columbia University Press 2008
• Classical Chinese Poetry, An Anthology, David Hinton Macmillan, 2014
• Woman in the Tower: “Nineteen Old Poems” and the Poetics of Un/concealment
• Xiaofei Tian : https://dash.harvard.edu/bitstream/handle/1/11130514/Tian_WomanTower.pdf;sequence=1
• The Origin and Nature of the “Nineteen Old Poems” Daniel Hsieh http://www.sino-platonic.org/complete/spp077_19_han_dynasty_poetry.pdf
• http://www.chinesetolearn.com/nineteen-poem/
ಹೆಸರಾಂತ ವಿಮರ್ಶಕರು, ಭಾಷಾಂತರಕಾರರು ಹಾಗೂ ಇಂಗ್ಲಿಷ್ ಪ್ರಾಧ್ಯಾಪಕರು. ಇದೀಗ ಮೈಸೂರಿನಲ್ಲಿ ನೆಲೆಸಿದ್ದಾರೆ.