ಹೀಗಿರುವಾಗ ಎಲ್ಲೋ ಏನೋ ತಪ್ಪಿದಂತೆ ಕಾಣುತ್ತಿತ್ತು. ಅವನ ಸಣ್ಣಪ್ರಾಯದ ಎರಡನೆಯ ಹೆಂಡತಿ ಅವನಿಗಿಂತ ಹೆಚ್ಚು ಸಮಯವನ್ನು ಅವನ ಪುಟ್ಟ ಅಂಗಡಿಯಲ್ಲಿ ಕಳೆಯಲು ಶುರು ಮಾಡಿದಳು. ಅವಳು ಯಾರು ಬಂದು ಏನು ಮಾತಾಡಿದರೂ ಗಂಡನನ್ನೇ ದಿಟ್ಟಿಸಿ ನೋಡುವಾಗ ಏನೋ ಕಸಿವಿಸಿಯಾಗುತ್ತಿತ್ತು. ಊದುಗೆನ್ನೆಯ, ಉರುಬಿದ ಹೊಟ್ಟೆಯ ಆಸಾಮಿಯ ಮೇಲೆ ಅವನ ಹೆಂಡತಿ ಯಾಕಿಷ್ಟು ನಿಗಾ ಇಡುತ್ತಿದ್ದಾಳೆಂದು ನಮಗೆ ಮೋಜೆನಿಸುತ್ತಿತ್ತು. ಇಷ್ಟೇ ಅಲ್ಲದೆ ತಿಂಗಳುಗಳ ಹಿಂದೆಯೇ ಹೊಲಿಯಲು ಕೊಟ್ಟಿದ್ದರೂ ಗೋಪಾಲಿ ಹೇಳಿದ ದಿನ ಕೊಡದೇ ಮದುಮಗಳೊಬ್ಬಳು ಅತ್ತುಕರೆದು ರಂಪ ಮಾಡಿದಳೆಂದು ಗೊತ್ತಾಯಿತು. ಯಾವತ್ತೂ ಹೀಗೆ ಮಾಡದ ಗೋಪಾಲಿಯ ಬೇಜವಾಬ್ದಾರಿತನ ನಮಗೆಲ್ಲರಿಗೂ ಆಶ್ಚರ್ಯ ಮಾಡಿತು.
ಎಸ್.‌ ಸಿರಾಜ್‌ ಅಹಮದ್‌ ಬರೆಯುವ ಅಂಕಣ

 

ಅವನು ನಮಗೆ ಅಚಾನಕ್ಕಾಗಿ ಸಿಕ್ಕ ವರವಾಗಿದ್ದ. ಅವನ ಕೆಲಸದ ಅಚ್ಚುಕಟ್ಟುತನ, ಶ್ರದ್ಧೆ, ನಿಪುಣತೆ, ಕೆಲಸದಲ್ಲಿ ಮುಳುಗಿದ್ದಾಗ ಆಡುತ್ತಿದ್ದ ಒಂದೊ ಎರಡೋ ಮಾತು, ಚೌಕಾಸಿಗೆ ಅವಕಾಶ ಕೊಡದೆ, ಹೇಳಿದಂತೆಯೇ ಕೆಲಸ- ಕೊಡಬೇಕಾದ ಟೈಮು-ನೀಡಬೇಕಾದ ಹಣ ಎಲ್ಲವೂ ಕರಾರುವಕ್ಕಾಗಿ ಇರುತ್ತಿದ್ದರಿಂದ ಹೆಚ್ಚು ವಾದವಿವಾದದ ಅಗತ್ಯವಿರಲಿಲ್ಲ. ಯಾವ ಬೇಡಿಕೆಗಳನ್ನೂ ಇಡದೆ ಒಲಿಯುವ ವರನೂ, ಚಾಚೂ ತಪ್ಪದೆ ಹೊಲಿಯುವ ಟೈಲರನೂ ಸಿಕ್ಕುವುದು ಪರಮಸಂತೋಷದ ಸಂಗತಿಗಳೆಂದು ನಮಗೆ ನಾವೇ ಹಿಗ್ಗುತ್ತಿದ್ದೆವು.
ಗೋಪಾಲಿ ನಮಗೆ ಇಷ್ಟು ಹತ್ತಿರವಾಗಲು ಇನ್ನೂ ಒಂದು ಕಾರಣವಿದೆ. ಹೇಳಿದ ಟೈಮಿಗೆ ಬಟ್ಟೆ ಕೊಡದ ಇಂಥವನೇ ಇನ್ನೊಬ್ಬ ದರ್ಜಿಯ ಹತ್ತಿರ ಮತ್ತೆ ಮತ್ತೆ ಹೋಗಬೇಕಾಗಿಬರುತ್ತಿತ್ತು.ಅವನು ಹೇಳುವುದು, ನಾವು ಹೋಗುವುದು-ಇದು ನಮ್ಮ ಕತೆ ಮಾತ್ರವಲ್ಲ- ಅಲ್ಲಿಗೆ ಬರುವ ಹಲವು ಜನರ ಅನುಭವವಾಗಿತ್ತು. ಸಂಜೆಯಾದರೆ ಅವನ ಅಂಗಡಿಯ ಮುಂದೆ ನೆರೆಯುವ ಹುಡುಗಿಯರು, ಹೆಂಗಸರು-ಅವರನ್ನು ನೋಡುತ್ತ ಕಣ್ಣುಗಳನ್ನು ಎಲ್ಲ ಕಡೆ ತಿರುಗಿಸುತ್ತ ಠಳಾಯಿಸುವ ಪುಡಿಪೋರರ ಶತಪಥಗಳು. ಇದನ್ನೆಲ್ಲ ನೋಡಿದ ಮೇಲೆ ಇದು ಅವನ ಡಿಮ್ಯಾಂಡು ಹೆಚ್ಚಿಸಿಕೊಳ್ಳುವ ತಂತ್ರಗಾರಿಕೆ ಎಂದು ಗೊತ್ತಾದ ಮೇಲೆ ಅಲ್ಲಿಗೆ ಹೋಗುವುದು ಬೇಡವಾಯಿತು.
ಆದರೆ ಗೋಪಾಲಿಯ ಬಳಿ ಇಂಥ ಯಾವುದೇ ಗೋಳುಗಳಿರಲಿಲ್ಲ. ಅವನು ಮೈಮನಸುಗಳ ಅಳತೆಯನ್ನು ಕಣ್ಣಿನಲ್ಲಿಯೇ ಲೆಕ್ಕಾಚಾರ ಹಾಕುವಂತಿದ್ದು ದೇಹದ ಆಕಾರಕ್ಕೆ ಸರಿಯಾಗಿ ಹೊಲಿಯುತ್ತಿದ್ದ. ಅದರಲ್ಲೂ ವರ್ಷಾನುಗಟ್ಟಲೆ ಉಡುವ ರೇಶ್ಮೆ ಸೀರೆಗಳಿಗೆ ಒಪ್ಪುವ ರವಿಕೆಗಳನ್ನು ಹೊಲಿಯುವುದರಲ್ಲಿ ನಿಷ್ಣಾತನಾಗಿದ್ದ. ಎಲ್ಲರೂ ನೂರು ರೂಪಾಯಿಗೆ ಮಾಡುವ ಕೆಲಸವನ್ನು ಅವನು ಮುನ್ನೂರೈವತ್ತು ರೂಪಾಯಿಗೆ ಮಾಡಿದರೂ ಅವನ ಕೆಲಸದಲ್ಲಿ ಕೂಲಿಗೆ ಮೀರಿದ ಕುಶಲತೆಯಿತ್ತು. ಅವನು ಕೈಯಲ್ಲಿ ಕತ್ತರಿ ಹಿಡಿಯುತ್ತಾನೋ ಕುಂಚವನ್ನು ಆಡಿಸುತ್ತಾನೋ ಏನೆಂದು ಗೊತ್ತಿಲ್ಲದಿದ್ದರೂ ಅವನ ಅಂಗಡಿಗೆ ಬಂದು ಹೋದ ಹುಡುಗಿಯರು, ಹೆಂಗಸರು ಪತಂಗಗಳಂತೆ ಬಗೆಬಗೆಯಾದ ಬಣ್ಣಗಳ ಆತ್ಮವಿಶ್ವಾಸದಿಂದ ಕಂಗೊಳಿಸುತ್ತಿದ್ದರು.
ಗೋಪಾಲಿಯ ಬಳಿ ಬಟ್ಟೆ ಕೊಟ್ಟು ಹೊಲಿಸುವುದೆಂದರೆ ಹೋಟೆಲಿಗೆ ಹೋಗಿ ದೋಸೆ ತಿಂದು ಬರುವಷ್ಟೇ ಸುರುಚಿಯಾದ ಸಂಗತಿಯಾಗಿತ್ತು. ಎಷ್ಟೋ ಸಾರಿ ಅವನ ಬಳಿ ಎಂಟು ಗಂಟೆಗೆ ಹೋಗಿ ರವಿಕೆ ತೆಗೆದುಕೊಂಡು ಬಂದು ಒಂಬತ್ತು ಗಂಟೆಗೆ ಮದುವೆ ಮನೆಗೆ ಸೀದ ಹೋಗಿದ್ದೂ ಇದೆ. ಇದಕ್ಕೆ ಮುಂಚೆ ಇನ್ನಾರೋ ಒಬ್ಬ ಹೊಲಿದುಕೊಟ್ಟದ್ದನ್ನು ಹಾಕಿಕೊಂಡು ನೋಡಿದರೆ ಅದು ತೋಳುಗಳಲ್ಲಿ ಕೈಗಳನ್ನು ಹೇಗೆ ತೂರಿಸಬೇಕೋ ಗೊತ್ತಾಗುವಂತಿರಲಿಲ್ಲ. ಹಾಕಿಕೊಂಡರೆ ಉಸಿರೇ ಆಡುವಂತಿರಲಿಲ್ಲ. ಇಂಥ ದಿರಿಸನ್ನು ಹಾಕಿಕೊಂಡು ಹೋದರೆ ಜೀವವನ್ನೇ ಹಿಂಸೆಯಲ್ಲಿರಿಸಿ ಓಡಾಡುವಂತಿತ್ತು. ಇನ್ನು ನನ್ನ ಗೆಳತಿಯೊಬ್ಬಳು ಹಾಕಿಕೊಂಡು ಬಂದದ್ದನ್ನು ನೋಡಬೇಕಿತ್ತು. ಹಿಂದೆ ಜೋತುಬಿದ್ದಿದೆ-ಮುಂದೆ ಜಗ್ಗುತ್ತಿದೆ. ಒಟ್ಟಿನಲ್ಲಿ ಮೈಮೇಲೆ ಬಟ್ಟೆಯೊಂದು ಮೈಮೇಲೆ ನೇತಾಡುತ್ತಿದೆ. ಅದು ಜಾರಿಹೋಗದಂತೆ ಹಿಂದೆಮುಂದೆ ಪಿನ್ನುಗಳನ್ನು ಚುಚ್ಚಿ ನಿಲ್ಲಿಸಬೇಕಾಗಿದೆ. ಇಂಥ ಪಡಿಪಾಟಲು ಯಾರಿಗೆ ಬೇಕೆಂದು ಅವಳು ಮದುವೆ ಮನೆಯಿಂದ ಹೊರಟೇ ಬಿಟ್ಟಳು.
ಇದಕ್ಕೆ ಹೋಲಿಸಿದರೆ ಗೋಪಾಲಿಯ ಕುಶಲತೆ ಬೇರೆಯೇ ಆಗಿತ್ತು. ಬೆರಳಿಗೆ ಉಂಗುರ ಹೊಂದುವ ಹಾಗೆ ಅವನು ಹೊಲಿಯುವ ಬಟ್ಟೆಗಳು ಆಕಾರಕ್ಕೆ ಅನುಗುಣವಾಗಿ ಹೊಂದಿಕೊಳ್ಳುತ್ತಿದ್ದವು.   ಅವನು ಒಮ್ಮೆ ಕೈಯಲ್ಲಿ ಬಟ್ಟೆ ಹಿಡಿದನೆಂದರೆ ಇನ್ನೊಂದು ಸಾರಿ ಹೋಗಿ ನೋಡುವಷ್ಟರಲ್ಲಿ ಅದರಲ್ಲೊಂದು ಜೀವ ರೂಪ ಪಡೆಯುತ್ತಿತ್ತು. ಇಂಥ ಗೋಪಾಲಿ ಇರುವ ಕಾರಣಕ್ಕೇ ಧರಿಸುವ ಸಂದರ್ಭವಿರಲಿ ಇಲ್ಲದಿರಲಿ ಮನಸಿಗೆ ಹಿತವಾದ ಬಣ್ಣದ ಬಟ್ಟೆಗಳನ್ನು ತಂದು ನಾವು ಇನ್ನಾವಾಗಲೋ ಕೊಳ್ಳುವ ಇನ್ನೊಂದು ಬಟ್ಟೆಗೆ ಸರಿಹೊಂದಿಸಿಕೊಳ್ಳುತ್ತಿದ್ದೆವು.
ನಾವು ತಂದುಕೊಡುವ ಬಟ್ಟೆ ಯಾವ ಬಗೆಯದ್ದೇ ಇರಲಿ ಅದನ್ನು ನಮ್ಮ ಮನಸಿಳತೆಗೆ ಅನುಗುಣವಾಗಿ ಹೊಂದಿಸಿಕೊಡುವ ಜಾಣ್ಮೆ ಅವನಲ್ಲಿ ಇದ್ದುದರಿಂದಲೇ ಯಾವುದೇ ಊರಿನಲ್ಲಿರಲಿ ಏನೇ ಕೆಲಸದಲ್ಲಿರಲಿ ಹುಟ್ಟೂರಿಗೆ ಮರಳಿದಾಗ ಅವನಿಗೆ ಬಟ್ಟೆಗಳ ರಾಶಿಯೊಂದನ್ನು ಒಪ್ಪಿಸಿ ಹೋಗುತ್ತಿದ್ದರು.
ಅವನು ಹೊಲಿದು ಕೊರಿಯರಿಗೆ ಹಾಕಿದನೆಂದರೆ ಅಲ್ಲಿಗೆ ಅವರ ದೈನಂದಿನ ಸಂಭ್ರಮದ ನಾನಾ ಅಧ್ಯಾಯಗಳು ಆರಂಭವಾಗುತ್ತಿದ್ದವು. ಅವನು ಒಪ್ಪವಾಗಿ ಹೊಲಿದುಕೊಟ್ಟ ಬಟ್ಟೆಗಳನ್ನು ಓರಣವಾಗಿ ಜೋಡಿಸಿಕೊಂಡು ನೋಡಿದರೆ ಮುಂದೆ ಬರಲಿರುವ ಸಂತೋಷಗಳ ಬಗ್ಗೆ ಭರವಸೆಯೊಂದು ಮೂಡುತ್ತಿತ್ತು. ಅವನು ಹೊಲಿದು ಕೊಟ್ಟ ಬಟ್ಟೆಗಳನ್ನು ಧರಿಸಿ ಹೋದ ಎಷ್ಟೆಷ್ಟೋ ಶುಭ ಸಮಾರಂಭಗಳಲ್ಲಿ ಗೆಳೆಯ ಗೆಳತಿಯರು ಹಿತೈಷಿಗಳು ಹೇಳಿದ ಅಭಿನಂದನೆಯ ಮಾತುಗಳು ಅವನಿಗೆ ಪರೋಕ್ಷವಾಗಿ ಸಂದ ಹಾರೈಕೆಗಳಂತಿದ್ದವು.

ಸಂಜೆಯಾದರೆ ಅವನ ಅಂಗಡಿಯ ಮುಂದೆ ನೆರೆಯುವ ಹುಡುಗಿಯರು, ಹೆಂಗಸರು-ಅವರನ್ನು ನೋಡುತ್ತ ಕಣ್ಣುಗಳನ್ನು ಎಲ್ಲ ಕಡೆ ತಿರುಗಿಸುತ್ತ ಠಳಾಯಿಸುವ ಪುಡಿಪೋರರ ಶತಪಥಗಳು. ಇದನ್ನೆಲ್ಲ ನೋಡಿದ ಮೇಲೆ ಇದು ಅವನ ಡಿಮ್ಯಾಂಡು ಹೆಚ್ಚಿಸಿಕೊಳ್ಳುವ ತಂತ್ರಗಾರಿಕೆ ಎಂದು ಗೊತ್ತಾದ ಮೇಲೆ ಅಲ್ಲಿಗೆ ಹೋಗುವುದು ಬೇಡವಾಯಿತು.

ಹೀಗಿರುವಾಗ ಎಲ್ಲೋ ಏನೋ ತಪ್ಪಿದಂತೆ ಕಾಣುತ್ತಿತ್ತು. ಅವನ  ಸಣ್ಣಪ್ರಾಯದ ಎರಡನೆಯ ಹೆಂಡತಿ ಅವನಿಗಿಂತ ಹೆಚ್ಚು ಸಮಯವನ್ನು ಅವನ ಪುಟ್ಟ ಅಂಗಡಿಯಲ್ಲಿ ಕಳೆಯಲು ಶುರು ಮಾಡಿದಳು. ಅವಳು ಯಾರು ಬಂದು ಏನು ಮಾತಾಡಿದರೂ ಗಂಡನನ್ನೇ ದಿಟ್ಟಿಸಿ ನೋಡುವಾಗ  ಏನೋ ಕಸಿವಿಸಿಯಾಗುತ್ತಿತ್ತು.  ಊದುಗೆನ್ನೆಯ, ಉರುಬಿದ ಹೊಟ್ಟೆಯ ಈ ಆಸಾಮಿಯ ಮೇಲೆ ಅವನ ಹೆಂಡತಿ ಯಾಕಿಷ್ಟು ನಿಗಾ ಇಡುತ್ತಿದ್ದಾಳೆಂದು ನಮಗೆ ಮೋಜೆನಿಸುತ್ತಿತ್ತು.
ಇದೆಲ್ಲ ಯಾಕೆ ಎಂದು ಸಂಜೆಮುಂಜಾನೆಯ ಅಂಗಳದ ಮಾತುಗಳಲ್ಲಿ ಕೆದಕಿ ನೋಡಿದರೆ, ಗೋಪಾಲಿಯ ನಾನಾ ವ್ಯಾಕುಲಗಳು ತಿಳಿದುಬಂದವು. ಹಾಗೆ ನೋಡಿದರೆ ಈಗ ಬಾಡಿಗೆಗಿರುವ ಅವನಿರುವ ಮನೆಯೂ ಅಂಗಡಿ ಹೆಂಡತಿ ಮಕ್ಕಳು ಹೊಲಿಗೆಯಂತ್ರ ಎಲ್ಲವೂ ಎರಡು ಖೋಲಿಗಳಲ್ಲಿ ಮುಗಿಯುತ್ತಿದ್ದವು. ಆದರೆ ಅವನಿರುವ ಬಾಡಿಗೆ ಮನೆಯು ಎರಡು ವರ್ಷಗಳ ಹಿಂದೆ ಅವನ ಸ್ವಂತವೇ ಆಗಿತ್ತು. ಆದರೆ ಈಚೆಗೆ ಬಂದ ಕಾಯಿಲೆಯಿಂದ ನಾನಾ ಆಸ್ಪತ್ರೆಗಳಿಗೆ ಅಲೆದಾಡಿ ತನಗಿದ್ದ ಮನೆಯನ್ನೂ ಮಾರಿ ಸ್ವಂತ ತನ್ನ ಮನೆಗೇ ತಾನೇ ಬಾಡಿಗೆದಾರನಾಗಿ  ಬದುಕುತ್ತಿದ್ದ. ಕುಸಿದು ಹೋದ ಆರೋಗ್ಯ, ಕಳೆದುಕೊಂಡ ಆಸ್ತಿ ಎಲ್ಲದರ ನಡುವೆಯೂ ಹೊಲಿದು ಜೋಡಿಸಿ ಬದುಕುವ ಉತ್ಸಾಹ ಕಡಿಮೆಯಾಗಿರಲಿಲ್ಲ. ಯಾರೇ ಹೋದರೂ-ನೀವು ಎಲ್ಲಿರುವುದು, ಯಾವ ಊರು ಎಂದು ವಿಚಾರಿಸುತ್ತ ನೀವಿರುವ ಕೇರಿ ಏರಿಯಾದಲ್ಲಿ ಇರುವ ಇನ್ಸ್ ಪೆಕ್ಟರ್ ಮಗಳಿದ್ದಾಳಲ್ಲ ಆಕೆಗೆ ಮೂರು ವರ್ಷದ ಹಿಂದೆ ಒಂದು ಜರಿಯ ಲಂಗ ಹೊಲಿದು ಕೊಟ್ಟಿದ್ದೆ. ಆಕೆಯ ಬರ್ತ್ ಡೇ ದಿವಸ ಆಕೆ ಒಳ್ಳೆ ಸ್ಟಾರ್ ನ ರೀತಿ ಕಾಣುತ್ತಿದ್ದಳು ಎಂದು ಹಳೆಯ ಕತೆ ಹೇಳುತ್ತಿದ್ದ. ಅವನ ಫೋನಿನಲ್ಲಿ ಹಲವು ನಮೂನೆಯ ದಿರಿಸುಗಳಲ್ಲಿ ಮಿಂಚುತ್ತಿರುವ ಹುಡುಗಿಯರ ಹೆಂಗಸರ ಡಿಪಿಯ ಚಿತ್ರಗಳಿದ್ದವು.
ಇಷ್ಟೇ ಅಲ್ಲದೆ ತಿಂಗಳುಗಳ ಹಿಂದೆಯೇ ಹೊಲಿಯಲು ಕೊಟ್ಟಿದ್ದರೂ ಗೋಪಾಲಿ ಹೇಳಿದ ದಿನ ಕೊಡದೇ ಮದುಮಗಳೊಬ್ಬಳು ಅತ್ತುಕರೆದು ರಂಪ ಮಾಡಿದಳೆಂದು ಗೊತ್ತಾಯಿತು. ಯಾವತ್ತೂ ಹೀಗೆ ಮಾಡದ ಗೋಪಾಲಿಯ ಬೇಜವಾಬ್ದಾರಿತನ ನಮಗೆಲ್ಲರಿಗೂ ಆಶ್ಚರ್ಯ ಮಾಡಿತು. ಯಾಕೆಂದು ವಿಚಾರಿಸಿದರೆ ಗೋಪಾಲಿಗೆ ಕಿಡ್ನಿ ಸಮಸ್ಯೆಯಾಗಿ ಆತ ಹದಿನೈದು ದಿನಗಳಿಗೊಮ್ಮೆ ಡಯಾಲಿಸಿಸ್ ಗೆ ಹೋಗುತ್ತಿದ್ದಾನೆಂದೂ ಅದಕ್ಕಾಗಿ ಅವನು ಹೇಳಿದ ದಿನಕ್ಕೆ ಕೆಲಸ ಮುಗಿಸಲಾಗುತ್ತಿಲ್ಲವೆಂದೂ ಗೋಪಾಲಿಯ ಮನೆಯ ಹತ್ತಿರವೇ ಇರುವ ವಿಜಿ ಹೇಳಿದಳು. ಈಗಾಗಲೇ ನಮ್ಮ ಮನಸನ್ನು ಗೆದ್ದಿದ್ದ ಗೋಪಾಲಿಯ ಬಗೆಗೆ ಅನಾರೋಗ್ಯದ ಕಾರಣದಿಂದ ಇನ್ನಷ್ಟು ಕಕ್ಕುಲಾತಿ ಬೆಳೆಯಿತು.
ಹಾಗೆ ನೋಡಿದರೆ ಸುಮಾರು ದಿನಗಳಿಂದ ಕಪ್ಪಿಟ್ಟ ತುಟಿಗಳನ್ನು, ಬುರುಗು ಹೊಟ್ಟೆಯನ್ನು, ಜೋತು ಬಿದ್ದ ಕೆನ್ನೆಗಳನ್ನು ಹೊತ್ತು ಓಡಾಡುತ್ತಿದ್ದ ಗೋಪಾಲಿಗೆ ಈ ಸಮಸ್ಯೆ ಕಾಡುತ್ತಲೇ ಇತ್ತು-ನಮಗೆ ಗೊತ್ತಿರಲಿಲ್ಲವಷ್ಟೇ. ಆದರೆ ನಮಗಾರಿಗೂ ಅದನ್ನು ವಿವರವಾಗಿ ಚರ್ಚಿಸುವಷ್ಟು ಆತ್ಮೀಯತೆಯಿರಲಿಲ್ಲ. ಡಯಾಲಿಸಿಸ್ ಗೆ ಹೋಗಲು ಶುರು ಮಾಡಿದ ಮೇಲೇನೋ ಅವನ ಕೆಲಸದ ಶ್ರದ್ಧೆ ಕಡಿಮೆಯಾಗಲಿಲ್ಲ. ಹಾಗೆಯೇ ನಮ್ಮ ಪಾಲಿಗೆ ಬಟ್ಟೆಗಳಲ್ಲಿ ಜೀವ ತುಂಬುವ ಕಲಾವಿದನಾಗಿದ್ದ ಆತನ ಬಗೆಗೆ ನಮ್ಮ ಅಕ್ಕರೆಯೂ ಕಡಿಮೆಯಾಗಲಿಲ್ಲ.
ಎಲ್ಲರೂ ಸೇರಿ ಅವನ ಡಯಾಲಿಸ್ ವೆಚ್ಚವನ್ನು ತಲಾ ಒಂದಿಷ್ಟು ಹಾಕಿ ನಿಭಾಯಿಸಿದರೆ ಹೇಗೆ ಎಂಬ ಯೋಚನೆಯನ್ನು ಮಾಡಿದೆವು.ಮದುವೆ, ಕೆಲಸ,ಆಸ್ತಿ ಆದಾಯ-ಯಾವುದನ್ನೂ ಸ್ಥಿರವಾಗಿ ರೂಪಿಸಿಕೊಳ್ಳದ ನಾವು ಹೀಗೆ ಯೋಚಿಸುವುದನ್ನು ಮೀರಿ ಹೆಚ್ಚಿನದೇನನ್ನೂ ಮಾಡುವಂತಿರಲಿಲ್ಲ. ಮೊದಲು ಗೋಪಾಲಿಯ ಕರಕುಶಲತೆಗೆ ಮೆಚ್ಚಿ ಅವನಿಗೆ ಕೆಲಸ ಕೊಡುತ್ತಿದ್ದವರು ಈಗವನ ಆರೋಗ್ಯ ಸುಧಾರಿಸಲೆಂದು ಹೆಚ್ಚುಹೆಚ್ಚು ಕೆಲಸ ನೀಡತೊಡಗಿದೆವು.
ವಿಜಿ ಲಲಿತಾ ಸುಮಾ ಸೌಮ್ಯಾ ಎಲ್ಲರೂ ಅವನ ಡಯಾಲಿಸಿಸ್ ಖರ್ಚಿಗಾದರೂ ಆಗಲಿ ಎಂದು ಹೇಳತೊಡಗಿದರು.  ಆತನ ಆರೋಗ್ಯದ ವಿವರಗಳನ್ನು ಕೇಳಿ ಇನ್ನಷ್ಟು ಘಾಸಿ ಮಾಡಬಾರದೆಂದು ಯಾರೂ ಅದರ ಬಗ್ಗೆ ಮಾತನಾಡುತ್ತಿರಲಿಲ್ಲ. ಮೈಯಲ್ಲಿ ಆರಾಮವಿಲ್ಲ ಮೇಡಂ ಮೊದಲಿನಂತೆ ಹೆಚ್ಚು ಕುಳಿತು ಕೆಲಸ ಮಾಡಲು ಆಗುವುದಿಲ್ಲ. ಅದಕ್ಕಾಗಿ ಅವಸರ ಮಾಡಬೇಡಿ ಎಂದು ಹೇಳುತ್ತಿದ್ದ. ಊದಿಕೊಂಡ ಹೊಟ್ಟೆಯನ್ನು ಹೊತ್ತು ಪುಟ್ಟ ಸ್ಟೂಲಿನ ಮೇಲೆ  ಕುಳಿತುಕೊಂಡು ಹೊಲಿಯಲು ಹರಸಾಹಸ ಪಡುತ್ತಿದ್ದ. ಆದರೆ ಅವನ ಕೆಲಸದ ಮೇಲಿನ ಗಮನ ಒಂದಿಷ್ಟೂ ಕಡಿಮೆಯಾದಂತಿರಲಿಲ್ಲ.
ನಮಗೋ ಆತನಿಗೆ ಕೆಲಸ ನೀಡಲು ಕಸಿವಿಸಿ ನೀಡದೇ ಇರಲು ತಳಮಳ.  ಇದನ್ನು ನೋಡಿ ಬೆಂಗಳೂರಿನಿಂದ ತಂದಿದೀನಿ ಮುಂದಿನ ತಿಂಗಳು ಚಿಕ್ಕಮ್ಮನ ಮಗನ ನಿಶ್ಚಿತಾರ್ಥಕ್ಕೆ ಎಂದರೆ – ಕೊಡೋಣ ಎಂದು ಭಾರದ ನಿರ್ಧಾರದ ದನಿಯಲ್ಲಿ ಹೇಳುವಾಗ ಆತನ ಮಾತಿನಲ್ಲಿ ನಿಮ್ಮ ಮನೆಯ ಸಂಭ್ರಮವನ್ನು ಹೆಚ್ಚು ಮಾಡುವುದು ನನ್ನ ಜವಾಬ್ದಾರಿ ಎಂದು ಹೇಳಿದಂತಾಗುತ್ತಿತ್ತು.  ರೇಶ್ಮೆ ಬಟ್ಟೆಗಳನ್ನು ಕೊಟ್ಟರೆ ಇದನ್ನು ತಂದುಬಿಟ್ರಾ ಎಂದು ಇದನ್ನು ಮುಗಿಸಿಕೊಡಲು ಆಗುತ್ತೋ ಇಲ್ಲವೋ ಎಂಬ ಅರೆವಿಷಾದದಲ್ಲಿ ನುಡಿಯುವಾಗ ಅದನ್ನು ನೋಡಲು ಸಂಕಟವಾಗುತ್ತಿತ್ತು.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

ಈ ನಡುವೆ  ಮಿನುಗುವ  ಉದ್ದುದ್ದದ ಮಣಿಗಳನ್ನು ಒತ್ತೊತ್ತಾಗಿ ಪೋಣಿಸಿದ ದಡಿಯಂಥ ಬಟ್ಟೆಯನ್ನು ಕೊಟ್ಟು ಇದನ್ನು ಹೊಲಿಯಲು ಆಗುತ್ತಾ ಎಂದು ಕೇಳಿದೆ. ಅದನ್ನು ಕೈಗೆತ್ತಿಕೊಂಡು ಇದರ ಮೇಲೆ ಹೊಲಿಗೆ ಬಿಡುವುದು ಕಷ್ಟ. ಏನಿದ್ದರೂ ಕೈಯಲ್ಲೇ ಹೆಮ್ಮಿಂಗ್ ಮಾಡಿ ಕೊಡಬೇಕಷ್ಟೆ ಎಂದಿದ್ದ. ವಾರಗಳ ನಂತರ ಹೋದಾಗ ಮೇಡಂ ಇದನ್ನು ಮಾಡಲು ಇನ್ನಿಲ್ಲದ ಕಷ್ಟವಾಯಿತು.  ಮುರಿದು ಹೋಗುವ ಸೂಜಿ, ಪೋಣಿಸಲಾಗದ ದಾರ ಎಲ್ಲವುಗಳ ನಡುವೆಯೇ ನಿಮಗೆ ಸಿಗಬೇಕಾದ ಖುಷಿಯೊಂದನ್ನು ಹೊಂದಿಸಿಕೊಡಬೇಕಲ್ಲಾ ಎಂದು ಅವನು ಹೇಳಿದಂತಿತ್ತು. ಪದೇ ಪದೇ ತುಂಡಾಗುವ ದಾರವನ್ನು ಸೋತ ಕಣ್ಣುಗಳಲ್ಲಿ ಪೋಣಿಸಿಕೊಳ್ಳಲು ಆಗದೆ ಸೂಜಿಯ ಮೇಲಕ್ಕೆ ಪುಟ್ಟ ಲೈಟೊಂದನ್ನು ಹಾಕಿಸಿಕೊಂಡಿದ್ದ. ಮೇಲಿಂದ ಸುರಿಯುವ ಸಣ್ಣ ಬೆಳಕಿನಲ್ಲಿ ಅಂಚುಗಳನ್ನು ಹೊಂದಿಸಿಕೊಂಡು ಹೊಲಿಯುತ್ತ ಸಂದುಗಡಿಯದ ಆನಂದವೊಂದಕ್ಕೆ ಮುನ್ನುಡಿ ಬರೆದಿದ್ದ.
ಅವತ್ತು ಮಿನುಗು ಮಣಿಗಳ ಬಟ್ಟೆಯನ್ನು ಹೊಲಿಸಿ ತಂದ ಮರುದಿನ ಅಕ್ಕನ ಜೊತೆ ಮದುವೆಗೆಂದು ಹೋಗಬೇಕಿತ್ತು. ಮಣಿಗಳ ಹೊಳಪು ಕಸೂತಿಯ ಕುಸುರಿ ಎಲ್ಲವೂ ಸೇರಿ ಉಡುಪಿಗೆ ಹೊಸ ಮೆರುಗೊಂದು ಸೇರಿತ್ತು. ಅದನ್ನು ನೋಡಿದ ಅವಳು ಇವತ್ತು ನನಗೂ ಒಂದಿಷ್ಟು ಬಟ್ಟೆ ಕೊಡಬೇಕಿದೆ ಹೋಗೋಣ ಎಂದಾಗ ಮದುವೆಗೆ ಹೊರಡುವ ತರಾತುರಿಯಲ್ಲೂ ಯಾಕೋ ಗೋಪಾಲಿಯ ನೆನಪಾಗಿ ಕರೆ ಮಾಡಿದೆ. ಇನ್ನೇನು ಬಟ್ಟೆ ಹಾಕಿಕೊಳ್ಳಬೇಕೆನ್ನುವಾಗ  ಅವನ ದಣಿದ ಕೈಗಳ ಚಲನೆ, ಉಬ್ಬಸದ ಉಸಿರು ಮನಸಿಗೆ ಬಂದು ಉಡುಪನ್ನು ಹಿಡಿದ ಕೈಗಳು ಕಂಪಿಸಿದವು.
ಆ ಕಡೆಯಿಂದ ಫೋನೆತ್ತಿದ ಗೋಪಾಲಿಯ ಮಗ  ಅಪ್ಪ ಇಲ್ಲ ರಾತ್ರಿ ಹೊರಟುಹೋದರು ಎಂದ. ಮನೆಯವರ, ಗೆಳತಿಯರ ಎಂತೆಂಥ ಶುಭ ಸಂದರ್ಭಗಳನ್ನು  ಖುಷಿಯ ಕ್ಷಣಗಳನ್ನು  ಗೋಪಾಲಿಯ  ಉಡುಪುಗಳು ಹೇಗೆ ಕಳೆಗಟ್ಟಿಸಿದ್ದವು ಎಂಬುದು ನೆನಪಾಯಿತು.
ಈಗ ಗೋಪಾಲಿ ಹೆಣದ ಬಟ್ಟೆಯಲ್ಲಿ ಮುಖ ಮುಚ್ಚಿಕೊಂಡು ಮಲಗಿರುವ   ಚಿತ್ರ ಕಣ್ಣೆದಿರು ಬಂದು ಅಕ್ಕನಿಗೆ ನೀನೊಬ್ಬಳೇ ಮದುವೆಗೆ ಹೋಗು ಎಂದು ಹೇಳಿ ಬಾಗಿಲು ಹಾಕಿಕೊಂಡೆ.