ರಾಸ್ಕೋಲ್ನಿಕೋವ್‌ ನ ಮನಸ್ಸು ಕದಡಿತ್ತು. ಅದು ಎಲ್ಲ ಯುವಕರೂ ಸಾಮಾನ್ಯವಾಗಿ ಆಡುವಂಥ ಮಾತು, ಮಾಡುವಂಥ ಯೋಚನೆ. ಅವನೇ ಅಂಥ ಮಾತನ್ನ ಎಷ್ಟೋ ಸಾರಿ, ಎಷ್ಟೋ ಸಂದರ್ಭದಲ್ಲಿ, ಎಷ್ಟೋ ವಿಷಯಗಳ ಬಗ್ಗೆ ಕೇಳಿಸಿಕೊಂಡಿದ್ದ. ಆದರೆ, ಸರಿಯಾಗಿ ಇಂಥವೇ ಮಾತು, ಸರಿಯಾಗಿ ಇಂಥದೇ ಹೊತ್ತಲ್ಲಿ, ಅವನ ತಲೆಯಲ್ಲೂ ಸುಮಾರಾಗಿ ಅಂಥದೇ ವಿಚಾರ ಇರುವಾಗ ಯಾಕೆ ಕಿವಿಗೆ ಬೀಳಬೇಕಾಗಿತ್ತು? ಅದರಲ್ಲೂ ಈಗ, ಅದೇ ಮುದುಕಿಯ ಮನೆಯಿಂದ ಬರುತ್ತಿರುವಾಗ ಅದೇ ಮುದುಕಿಯ ಬಗ್ಗೆ ಬೇರೆಯವರು ಆಡುವ ಮಾತು ತನಗೆ ಯಾಕೆ ಕೇಳಬೇಕಾಗಿತ್ತು?
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಆರನೆಯ ಅಧ್ಯಾಯ

 

ವ್ಯಾಪಾರಿಯೂ ಅವನ ಹೆಂಡತಿಯೂ ಲಿಝಾವೆಟಾಳನ್ನು ಮಾರನೆಯ ದಿನ ಬರಲು ಹೇಳಿದ್ದೇಕೆ ಅನ್ನುವುದು ರಾಸ್ಕೋಲ್ನಿಕೋವ್‌ ಗೆ ಆನಂತರದಲ್ಲಿ ಹೇಗೋ ತಿಳಿಯಿತು. ತೀರ ಸಾಮಾನ್ಯ ವಿಚಾರ ಅದು. ಹಳ್ಳಿಯಿಂದ ನಗರಕ್ಕೆ ಬಂದಿದ್ದ ಕುಟುಂಬವೊಂದು ಬಡತನಕ್ಕೆ ಸಿಲುಕಿ ಬಟ್ಟೆ ಬರೆ ಇತ್ಯಾದಿ ಹೆಂಗಸರ ಬಳಕೆಗೆ ಬರುವ ವಸ್ತುಗಳನ್ನೆಲ್ಲ ಮಾರಾಟಮಾಡುತಿತ್ತು. ಮಾರುಕಟ್ಟೆಯಲ್ಲಿ ತಾವೇ ಮಾರಿದರೆ ಅಷ್ಟು ಲಾಭ ಬರದು ಎಂದು ಭಾವಿಸಿ ಆ ಮನೆಯವರು ಮಧ್ಯವರ್ತಿಯನ್ನು ಹುಡುಕುತ್ತಿದ್ದರು. ಲಿಝಾವೆಟಾ ಅಂಥ ಮಧ್ಯವರ್ತಿಯ ಕೆಲಸ ಮಾಡುತಿದ್ದಳು. ವ್ಯವಹಾರ ಕುದುರಿಸಿ ತನ್ನ ಕಮಿಶನ್ ಪಡೆಯುತಿದ್ದಳು. ಅವಳನ್ನೇ ಹುಡುಕಿ ಬರುವ ಗಿರಾಕಿಗಳ ದೊಡ್ಡದೊಂದು ಗುಂಪೇ ಇತ್ತು. ಅವಳು ಪ್ರಾಮಾಣಿಕಳು. ಯಾವಾಗಲೂ ಅವಳು ಹೇಳಿದ ಬೆಲೆಯೇ ಖಾಯಮ್ಮಾಗುತ್ತಿತ್ತು. ಲಿಝಾವೆಟಳ ಮಾತು ಕಡಮೆ. ಸಂಕೋಚ ಸ್ವಭಾವದ, ಯಾವಾಗಲೂ ಹಿಂಜರಿಯುವ, ವಿನಯವಂತ ಹೆಂಗಸು ಅವಳು.

ಇತ್ತೀಚೆಗೆ ರಾಸ್ಕೋಲ್ನಿಕೋವ್ ನಲ್ಲಿ ಮೂಢನಂಬಿಕೆ ಬೆಳೆಯುತ್ತಿತ್ತು. ಮುಂದೆಯೂ ಮೂಢನಂಬಿಕೆಯನ್ನು ಅಳಿಸಲಾಗದ ಗುರುತು ಅವನಲ್ಲಿ ಉಳಿದೇ ಇದ್ದವು. ಎಷ್ಟೋ ವರ್ಷ ಕಳೆದ ಮೇಲೆ ‘ಈ ಇಡೀ ವ್ಯವಹಾರದಲ್ಲಿ ಏನೋ ವಿಚಿತ್ರವಾದದ್ದು, ನಿಗೂಢವಾದದ್ದು ಇದೆ, ಹಲವು ಆಕಸ್ಮಿಕಗಳು, ನನ್ನ ಮೇಲೆ ಪರಿಣಾಮ ಬೀರಿದವು,’ ಅಂದುಕೊಳ್ಳುತಿದ್ದ. ಹೋದ ವರ್ಷ ಚಳಿಗಾಲದಲ್ಲಿ ಅವನು ಖರ್ಕೋವ್ ಬಿಡುವ ಮೊದಲು ಪರಿಚಯದ ಸ್ಟೂಡೆಂಟು ಸಿಕ್ಕಿದ್ದ. ಅವನ ಹೆಸರು ಪೊಕೊರೆವ್. ಹಾಗೇ ಮಾತಾಡುತ್ತ ಅಲ್ಯೋನಾ ಇವಾನೋವ್ನಾ ಎಂಬ ಮುದುಕಿಯ ವಿಳಾಸವನ್ನು ಕೊಟ್ಟು ಏನಾದರೂ ಗಿರವಿ ಇಡುವುದಿದ್ದರೆ ಅವಳ ಹತ್ತಿರ ಹೋಗಬಹುದು ಎಂದು ಹೇಳಿದ್ದ. ಅವಳ ಹತ್ತಿರ ಹೋಗುವ ಸಂದರ್ಭವೇ ಬಂದಿರಲಿಲ್ಲ. ಮನೆ ಪಾಠದಿಂದ ಬರುವ ದುಡ್ಡಿನಲ್ಲಿ ಜೀವನ ಹೇಗೋ ಸಾಗುತ್ತಿತ್ತು. ಒಂದೂವರೆ ತಿಂಗಳ ಹಿಂದೆ ಅವಳ ವಿಳಾಸ ಜ್ಞಾಪಿಸಿಕೊಂಡಿದ್ದ. ಗಿರವಿ ಇಡುವಂಥ ಎರಡು ವಸ್ತುಗಳು ಇದ್ದವು. ಒಂದು, ಅವರಪ್ಪನ ಹಳೆಯ ಬೆಳ್ಳಿಯ ಗಡಿಯಾರ; ಇನ್ನೊಂದು, ಮನೆಯಿಂದ ಬರುವಾಗ ತಂಗಿಯು ನೆನಪಿಗೆಂದು ಕೊಟ್ಟಿದ್ದ ಮೂರು ಹರಳಿನ ಚಿನ್ನದ ಉಂಗುರ. ಉಂಗುರ ಗಿರವಿ ಇಡುವ ತೀರ್ಮಾನ ಮಾಡಿದ್ದ. ಮುದುಕಿಯನ್ನು ಪತ್ತೆಮಾಡಿದ್ದ.

ಅವಳನ್ನು ಕಂಡ ಮೊದಲ ಕ್ಷಣದಿಂದಲೇ ಸಹಿಸಲಾಗದ ಅಸಹ್ಯ ಭಾವ ಹುಟ್ಟಿತ್ತು. ಅವಳು ಕೊಟ್ಟ ಎರಡು ‘ಚಿಕ್ಕ ನೋಟು’ ಹಿಡಿದು ವಾಪಸ್ಸು ಬರುತ್ತಾ ದಾರಿಯಲ್ಲಿ ಯಾವುದೋ ದರಿದ್ರ ಹೆಂಡದಂಗಡಿಗೆ ಹೋದ. ಟೀಗೆ ಹೇಳಿ ಕಾಯುತ್ತ ಕೂತ. ಆಳವಾದ ಯೋಚನೆಯಲ್ಲಿ ಮುಳುಗಿದ. ಅವನ ತಲೆಯಲ್ಲಿ ವಿಚಿತ್ರವಾದೊಂದು ಯೋಚನೆ ಕಾವು ಕೂತ ಮೊಟ್ಟೆಯೊಳಗಿನ ಮರಿಯ ಹಾಗೆ ಮಿಡಿಯುತ್ತಿತ್ತು. ಅದೇ ಯೋಚನೆ ಮನಸ್ಸನ್ನೆಲ್ಲ ತುಂಬಿತ್ತು.

ಅವನ ಪಕ್ಕದಲ್ಲೇ, ಇನ್ನೊಂದು ಟೇಬಲ್ಲಿನಲ್ಲಿ ಯಾರೋ ಸ್ಟೂಡೆಂಟು ಯುವಕ ಆಫೀಸರನ ಜೊತೆಯಲ್ಲಿ ಕೂತಿದ್ದ. ಅವರು ಬಿಲಿಯರ್ಡ್ಸ್ ಆಡುತಿದ್ದರು. ಈಗ ಆಟ ನಿಲ್ಲಿಸಿ ಟೀ ಕುಡಿಯುತಿದ್ದರು. ಆ ಸ್ಟೂಡೆಂಟು ಇದ್ದಕಿದ್ದ ಹಾಗೆ ಅಲ್ಯೋನ ಇವಾನೊವ್ನ ಎಂಬ ವಿಧವೆಯ ಬಗ್ಗೆ, ಆಕೆ ವಸ್ತುಗಳನ್ನು ಗಿರವಿ ಇಟ್ಟುಕೊಂಡು ಸಾಲ ಕೊಡುವ ಬಗ್ಗೆ ಹೇಳುತಿದ್ದದ್ದು ಕಿವಿಗೆ ಬಿತ್ತು. ಈ ಸಂಗತಿಯೇ ವಿಚಿತ್ರವೆಂದು ತೋರಿತು ರಾಸ್ಕೋಲ್ನಿಕೋವ್‌ ಗೆ. ‘ಈಗಿನ್ನೂ ಅವಳನ್ನು ಕಂಡು ಬರುತಿದ್ದೇನೆ, ಆಗಲೇ ಇವರು ಅವಳ ವಿಚಾರ ಮಾತಾಡುತಿದ್ದಾರೆ,’ ಅಂದುಕೊಂಡ. ‘ಇದು ಆಕಸ್ಮಿಕ, ನಿಜ. ಅವಳನ್ನು ಕಂಡು ತನ್ನ ಮನಸ್ಸಿನ ಮೇಲೆ ಆದ ಅಸಾಮಾನ್ಯ ಪರಿಣಾಮ ಇನ್ನೂ ಹಾಗೇ ಇರುವಾಗ ಇಲ್ಲಿ ಯಾರೋ ತನಗಾಗಿಯೇ ಅವಳ ವಿಷಯ ಮಾತಾಡುತಿದ್ದಾರೆ,’ ಅನ್ನಿಸಿತು. ಅಲ್ಯೋನಾ ಇವಾನೋವ್ನಾಳ ಬಗ್ಗೆ ಸ್ಟೂಡೆಂಟು ಒಂದಷ್ಟು ವಿವರಗಳನ್ನು ಅಧಿಕಾರಿಗೆ ಹೇಳುತ್ತಿದ್ದ.

‘ಒಳ್ಳೆಯವಳು, ಯಾವಾಗ ಹೋದರೂ ದುಡ್ಡು ಕೊಡತಾಳೆ. ಯಹೂದಿಗಳ ಥರ ಶ್ರೀಮಂತಳು. ಬೇಕಾದರೆ ಐದು ಸಾವಿರ ರೂಬಲ್ ಕೂಡ ಕೊಡತಾಳೆ. ಆದರೆ ಮಾತ್ರ, ಒಂದು ರೂಬಲ್ ಕೊಡಬೇಕಾದರೂ ಏನೇನೋ ಗಿರವಿ ಇಟ್ಟುಕೊಳ್ಳುತ್ತಾಳೆ. ನಮ್ಮಲ್ಲಿ ಎಷ್ಟೋ ಜನ ಅವಳ ಹತ್ತಿರ ಹೋಗಿದೇವೆ. ಅವಳ ಸ್ವಭಾವ ಮಾತ್ರ ರಾಕ್ಷಸಿ ಥರ…’

ಅವಳು ಎಷ್ಟು ಕೆಟ್ಟವಳು, ಅವಳೇನು ಮಾಡುತ್ತಾಳೆ ಊಹೆ ಮಾಡುವುದಕ್ಕೇ ಆಗದು, ಬಡ್ಡಿ ಕಟ್ಟುವುದು, ಸಾಲ ತೀರಿಸುವುದು ಒಂದೇ ಒಂದು ದಿನ ತಡವಾದರೂ ಗಿರವಿ ಇಟ್ಟ ವಸ್ತು ಕೈ ತಪ್ಪಿತು ಅಂತಲೇ ಲೆಕ್ಕ ಅನ್ನುತಿದ್ದ. ವಸ್ತುವನ್ನು ಗಿರವಿ ಇಟ್ಟರೆ ಅದರ ಬೆಲೆಯಲ್ಲಿ ನಾಲ್ಕನೆ ಒಂದು ಭಾಗ ಮಾತ್ರ ಸಾಲ ಕೊಡತಾಳೆ, ತಿಂಗಳಿಗೆ ಐದರಿಂದ ಏಳು ಶೇಕಡಾ ಬಡ್ಡಿ ವಸೂಲು ಮಾಡತಾಳೆ ಇತ್ಯಾದಿ ಹೇಳುತ್ತಿದ್ದ. ಹಾಗೇ ಹರಟುತ್ತಾ ಆ ಮುದುಕಿಗೆ ಒಬ್ಬ ತಂಗಿ ಇದಾಳೆ, ಲಿಝಾವೆಟ ಅಂತ, ಈ ಹಂದಿಯಂಥ ಮುದುಕಿ ಅವಳನ್ನ ಯಾವಾಗಲೂ ಹೊಡೆಯುತ್ತಾಳೆ, ಆ ತಂಗಿ ಆರಡಿ ಎತ್ತರ ಇದ್ದರೂ ಮಗೂ ಥರ, ಅಕ್ಕನ ಗುಲಾಮಗಿರಿ ಮಾಡಿಕೊಂಡಿದ್ದಾಳೆ… ಅನ್ನುತಿದ್ದ.

‘ಅವಳೇ ಒಂದು ಥರಾ,’ ಅನ್ನುತ್ತಾ ಸ್ಟೂಡೆಂಟು ಜೋರಾಗಿ ನಕ್ಕ.

ಲಿಝಾವೆಟಾ ಬಗ್ಗೆ ಮಾತು ಶುರುವಾಯಿತು. ಅವಳ ವಿಚಾರ ಮಾತಾಡುವುದಕ್ಕೆ ಸ್ಟೂಡೆಂಟಿಗೆ ಖುಷಿಯಾಗುತ್ತಿತ್ತು. ಅಧಿಕಾರಿ ಅವನ ಮಾತನ್ನು ಮನಸ್ಸಿಟ್ಟು ಕೇಳುತ್ತಿದ್ದ. ‘ಮನೆಯ ಪರದೆ, ಬೆಡ್‌ಶೀಟುಗಳನ್ನು ಹೊಲಿದು ಒಗೆದುಕೊಡಲು ಅವಳನ್ನು ಬರುವುದಕ್ಕೆ ಹೇಳು,’ ಅಂದ. ರಾಸ್ಕೋಲ್ನಿಕೋವ್ ಎಲ್ಲ ಮಾತೂ ಗಮನವಿಟ್ಟು ಕೇಳಿ ತಿಳಿದುಕೊಂಡ. ಲಿಝಾವೆಟಾ ಆ ಮುದುಕಿಯ ಮಲತಂಗಿ. ಅಂದರೆ ಒಬ್ಬನೇ ತಂದೆ, ತಾಯಂದಿರು ಬೇರೆ ಬೇರೆ. ಅವಳಿಗೆ ಮೂವತ್ತೆಂಟು ವರ್ಷ. ಹಗಲೂ ರಾತ್ರಿ ಅಕ್ಕನ ಸೇವೆ ಮಾಡುತಿದ್ದಳು. ಅಡುಗೆ ಕೆಲಸ, ಮನೆ ಕೆಲಸ ಮಾಡುತ್ತಾ ಬಟ್ಟೆಯನ್ನೂ ಹೊಲಿದುಕೊಡುತ್ತಿದ್ದಳು. ನೆಲ ಒರೆಸುವ ಕೆಲಸಕ್ಕೂ ಹೋಗುತಿದ್ದಳು. ಬಂದ ದುಡ್ಡಿನಲ್ಲಿ ಒಂದು ಕಾಸೂ ಮುಟ್ಟದೆ ಎಲ್ಲವನ್ನೂ ಅಕ್ಕನಿಗೆ ಕೊಡುತಿದ್ದಳು. ಮುದುಕಿ ಆಗಲೇ ಉಯಿಲು ಮಾಡಿದ್ದಳು. ಮನೆಯಲ್ಲಿದ್ದ ಚರವಸ್ತುಗಳನ್ನು ಬಿಟ್ಟರೆ ಮುದುಕಿಯ ಒಂದೇ ಒಂದು ಕಾಸು ಕೂಡ ಲಿಝಾವೆಟಾಗೆ ಸಿಕ್ಕಿರಲಿಲ್ಲ. ಮುದುಕಿ ತನ್ನ ಎಲ್ಲ ಹಣವನ್ನು ಎನ್-ವೈ ಪ್ರಾಂತದ ಮಠಕ್ಕೆ ದಾನವಾಗಿ ಕೊಟ್ಟು ತನ್ನ ಆತ್ಮದ ಹಿತಕ್ಕೆ ಪ್ರಾರ್ಥನೆ ಸಲ್ಲಿಸಬೇಕು ಎಂದು ಉಯಿಲು ಬರೆದಿದ್ದಳು.

ಲಿಝಾವೆಟಾ ಸಣ್ಣಪುಟ್ಟ ವ್ಯಾಪಾರ ಮಾಡುತಿದ್ದಳು, ಮದುವೆಯಾಗಿರಲಿಲ್ಲ, ತೀರ ಎತ್ತರವಾಗಿದ್ದಳು, ಕಾಲು ಸೊಟ್ಟಗಿತ್ತು, ಯಾವಾಗಲೂ ಕುರಿಯ ಚರ್ಮದ ಹಳೆಯ ಶೂ ತೊಡುತಿದ್ದಳು. ಸದಾ ಸ್ವಚ್ಛವಾಗಿರುತಿದ್ದಳು. ಯಾವಾಗಲೂ ಬಸುರಿಯ ಹಾಗೆ ಕಾಣತಾಳೆ ಅನ್ನುತ್ತ ಸ್ಟೂಡೆಂಟು ಅದೊಂದು ಅಚ್ಚರಿ ಅನ್ನುವ ಹಾಗೆ ನಕ್ಕ.

‘ಅವಳು ವಿಕಾರವಾಗಿದಾಳೆ ಅಂದೆಯಲ್ಲ?’ ಅಧಿಕಾರಿ ಕೇಳಿದ.

‘ಸ್ವಲ್ಪ ಕಂದು ಬಣ್ಣ, ವೇಷ ಮರೆಸಿಕೊಂಡ ಸೈನಿಕನ ಹಾಗೆ ಕಾಣತಾಳೆ, ಆದರೂ ಗೊತ್ತಾ, ವಿಕಾರ ಅಂತಲ್ಲ. ಅವಳ ಮುಖದಲ್ಲಿ, ಕಣ್ಣಲ್ಲಿ ಕರುಣೆ ಇದೆ. ಬಹಳ ಜನ ಅವಳನ್ನ ಇಷ್ಟಪಡತಾರೆ. ಅದಕ್ಕೆ ಸಾಕ್ಷಿಯೂ ಇದೆ. ಅವಳು ಮಾತಾಡುವವಳಲ್ಲ, ಸಾಧು ಸ್ವಭಾವ, ದೂರುವವಳಲ್ಲ, ಹೊಂದಿಕೊಂಡು ಹೋಗತಾಳೆ, ಹೇಳಿದ್ದೆಲ್ಲ ಒಪ್ಪುತ್ತಾಳೆ, ಅವಳ ಮುಖದಲ್ಲಿ ಚೆಂದವಾದ ನಗು ಇರುತ್ತದೆ,’ ಅಂದ ಸ್ಟೂಡೆಂಟು.

‘ಆಹಾ, ನಿನಗೂ ಅವಳನ್ನ ಕಂಡರೆ ಇಷ್ಟ ಅನ್ನು!’ ಅಧಿಕಾರಿ ನಕ್ಕ.

‘ನಿಮಗೆ ವಿಚಿತ್ರ ಅನಿಸಬಹುದು, ಅವಳನ್ನು ಕಂಡರೆ ಇಷ್ಟವಿಲ್ಲ. ಗೊತ್ತಾ ನಿಮಗೆ, ಆ ದರಿದ್ರ ಮುದುಕಿ ಇದಾಳಲ್ಲಾ, ಅವಳ ಮನೆ ದರೋಡೆ ಮಾಡಬೇಕು, ಸಾಯಿಸಬೇಕು. ಅಂಥವಳನ್ನ ಕೊಂದರೂ ತಪ್ಪಿಲ್ಲ, ಪಾಪ ಮಾಡಿದೆ ಅನ್ನಿಸಲ್ಲ.’

ಅಧಿಕಾರಿ ಮತ್ತೆ ಜೋರಾಗಿ ನಕ್ಕ, ರಾಸ್ಕೋಲ್ನಿಕೋವ್ ಬೆಚ್ಚಿಬಿದ್ದ. ಎಷ್ಟು ವಿಚಿತ್ರ!

‘ಕ್ಷಮಿಸಿ ಮುಖ್ಯವಾದ ಪ್ರಶ್ನೆ ಕೇಳಬೇಕು. ನಾನು ಈಗ ಹೇಳಿದ್ದು ಸುಮ್ಮನೆ ತಮಾಷೆಗೆ. ಆದರೂ ನೋಡಿ, ಮೂರ್ಖ, ದುಷ್ಟ, ರೋಗಿಷ್ಟ, ಕೆಲಸಕ್ಕೆ ಬಾರದ ಮುದಿಗೂಬೆ, ಯಾರಿಗೂ ಸಹಾಯ ಮಾಡದವಳು, ಎಲ್ಲರಿಗೂ ಕೇಡು ಮಾಡುವವಳು, ಯಾಕೆ ಬದುಕಿದ್ದೇನೆ ಅಂತ ಗೊತ್ತಿಲ್ಲದವಳು, ನಾಳೆಯೋ ನಾಳಿದ್ದೋ ಸಾಯುವವಳು. ಗೊತ್ತಾಯಿತಾ? ಗೊತ್ತಾಯಿತಾ?’

ಅವನನ್ನೇ ದಿಟ್ಟಿಸಿ ನೋಡುತ್ತಾ ‘ಗೊತ್ತಾಯಿತು,’ ಅಂದ ಅಧಿಕಾರಿ.

‘ಇಲ್ಲಿ ಕೇಳಿ. ಎಷ್ಟೊಂದು ಜನ ಹರೆಯದವರು, ಯುವಕರು ಕೇಳುವವರಿಲ್ಲದೆ ಸವೆದು ಹೋಗುತಿದ್ದಾರೆ. ಸಾವಿರಾರು ಜನ, ಎಲ್ಲೆಲ್ಲೂ! ಅವಳು ಮಠಕ್ಕೆ ಸುಮ್ಮನೆ ಸುರಿದ ದುಡ್ಡಿನಲ್ಲಿ ನೂರಾರು ಒಳ್ಳೆಯ ಕೆಲಸ ಮಾಡಬಹುದಾಗಿತ್ತು. ಸಾವಿರಾರು ಜನರ ಬದುಕು ನೆಟ್ಟಗೆ ಮಾಡಬಹುದಾಗಿತ್ತು. ಹತ್ತಾರು ಮನೆಗಳನ್ನ ಬಡತನದಿಂದ, ರೋಗದಿಂದ ಕಾಪಾಡಬಹುದಾಗಿತ್ತು—ಅವಳೊಬ್ಬಳ ದುಡ್ಡಿನಿಂದ. ಅವಳನ್ನ ಕೊಂದು ದುಡ್ಡು ಎತ್ತಿಕೊಳ್ಳಬೇಕು. ಆಮೇಲೆ ನಿಮ್ಮ ಜೀವನ ಪೂರ್ತಿ ಮನುಷ್ಯ ಕುಲದ ಸೇವೆ ಮಾಡಿಕೊಂಡು, ಒಳ್ಳೆಯ ಕೆಲಸ ಮಾಡಿಕೊಂಡು ಇರಬಹುದು. ಸಾವಿರ ಒಳ್ಳೆಯ ಕೆಲಸ ಆಗುವುದಾದರೆ ಒಂದು ಅಪರಾಧ ಯಾಕೆ ಮಾಡಬಾರದು? ಒಂದು ಜೀವ ತೆಗೆದು ನೂರಾರು ಜೀವ ಯಾಕೆ ಉಳಿಸಬಾರದು? ಸರಳವಾದ ಲೆಕ್ಕಾಚಾರ ಇದು. ಈ ಪೆದ್ದ, ರೋಗಿಷ್ಟ ದುಷ್ಟ ಮುದುಕಿಯ ಜೀವಕ್ಕೆ ಒಟ್ಟು ಮನುಷ್ಯ ಬದುಕಿನಲ್ಲಿ ಯಾವ ಬೆಲೆ ಇದೆ? ಹೇನು, ಜಿರಳೆಗಿಂತ ದೊಡ್ಡದೇನಲ್ಲ ಅವಳ ಜೀವ. ಅಥವಾ ಅಷ್ಟು ಬೆಲೆಯೂ ಇಲ್ಲ. ಈ ದರಿದ್ರ ಮುದುಕಿ ತೀರ ದುಷ್ಟೆ. ಬೇರೆಯವರ ಜೀವ ತಿಂದು ಬದುಕಿದ್ದಾಳೆ. ಮೊನ್ನೆ ಅವಳಿಗೆ ಕೋಪ ಬಂದು ಹೊಡೆದಾಗ ಲಿಝಾವೆಟ ಬೆರಳು ಇನ್ನೇನು ಕತ್ತರಿಸಿ ಬೀಳುತ್ತಿತ್ತಂತೆ!’

‘ಅಂಥವಳು ಬದುಕಿರಬಾರದು, ನಿಜ. ಆದರೆ ಇದಾಳಲ್ಲಾ! ಸೃಷ್ಟಿ ಇರುವುದೇ ಹೀಗೆ.’

‘ಸರಿ, ಅಣ್ಣಾ. ಸೃಷ್ಟಿಯನ್ನ ತಿದ್ದಬೇಕು, ಬದುಕುವುದಕ್ಕೆ ಸರಿಯಾದ ದಾರಿ ತೋರಿಸಬೇಕು. ಇಲ್ಲದಿದ್ದರೆ ಕೇಡು ಹೀಗೇ ನಮ್ಮನ್ನೆಲ್ಲ ಮುಳುಗಿಸಿಬಿಡತ್ತೆ. ಇಲ್ಲದಿದ್ದರೆ ಒಬ್ಬನೇ ಒಬ್ಬ ಮಹಾಪುರುಷನೂ ಹುಟ್ಟುತಿರಲಿಲ್ಲ. ಕರ್ತವ್ಯ, ಪ್ರಜ್ಞೆ ಅಂತೆಲ್ಲ ಹೇಳತಾರೆ. ನಾನೇನೂ ಅವೆಲ್ಲ ತಪ್ಪು ಅನ್ನಲ್ಲ. ಅವನ್ನ ಅರ್ಥಮಾಡಿಕೊಳ್ಳುವುದು ಹೇಗೆ ಅಂತ ಕೇಳತೇನೆ. ತಾಳು, ಇನ್ನೊಂದು ಪ್ರಶ್ನೆ ಇದೆ.’

‘ಇಲ್ಲ. ಸ್ವಲ್ಪ ತಾಳು. ನಾನೊಂದು ಪ್ರಶ್ನೆ ಕೇಳತೇನೆ!’

‘ಏನು?’

‘ಈಗ ನಿನ್ನದು ಬರಿಯ ಮಾತು. ಭಾಷಣ ಬಿಗಿಯುತಿದ್ದೀಯ ಅಷ್ಟೇ. ನೀನೇ ಸ್ವತಃ ಹೋಗಿ ಆ ಮುದುಕಿಯನ್ನ ಕೊಲ್ಲತೀಯಾ? ಹೇಳು.’

‘ಖಂಡಿತ ಇಲ್ಲ! ನ್ಯಾಯದ ವಿಷಯ ಮಾತಾಡತಿದ್ದೆ ನಾನು… ನಾನು ಏನು ಮಾಡತೇನೆ ಅನ್ನುವುದು ಇಲ್ಲಿ ಪ್ರಶ್ನೆ ಅಲ್ಲ…’

‘ನೀನೇ ಅಂಥ ಕೆಲಸ ಮಾಡುವ ಧೈರ್ಯ ಮಾಡಲ್ಲ ಅಂದರೆ ಅದರಲ್ಲಿ ನ್ಯಾಯದ ಪ್ರಶ್ನೆ ಇಲ್ಲ. ಬಿಡು, ಸಾಕು. ಇನ್ನೊಂದು ಆಟ ಆಡೋಣ!’

ರಾಸ್ಕೋಲ್ನಿಕೋವ್‌ ನ ಮನಸ್ಸು ಕದಡಿತ್ತು. ಅದು ಎಲ್ಲ ಯುವಕರೂ ಸಾಮಾನ್ಯವಾಗಿ ಆಡುವಂಥ ಮಾತು, ಮಾಡುವಂಥ ಯೋಚನೆ. ಅವನೇ ಅಂಥ ಮಾತನ್ನ ಎಷ್ಟೋ ಸಾರಿ, ಎಷ್ಟೋ ಸಂದರ್ಭದಲ್ಲಿ, ಎಷ್ಟೋ ವಿಷಯಗಳ ಬಗ್ಗೆ ಕೇಳಿಸಿಕೊಂಡಿದ್ದ. ಆದರೆ, ಸರಿಯಾಗಿ ಇಂಥವೇ ಮಾತು, ಸರಿಯಾಗಿ ಇಂಥದೇ ಹೊತ್ತಲ್ಲಿ, ಅವನ ತಲೆಯಲ್ಲೂ ಸುಮಾರಾಗಿ ಅಂಥದೇ ವಿಚಾರ ಇರುವಾಗ ಯಾಕೆ ಕಿವಿಗೆ ಬೀಳಬೇಕಾಗಿತ್ತು? ಅದರಲ್ಲೂ ಈಗ, ಅದೇ ಮುದುಕಿಯ ಮನೆಯಿಂದ ಬರುತ್ತಿರುವಾಗ ಅದೇ ಮುದುಕಿಯ ಬಗ್ಗೆ ಬೇರೆಯವರು ಆಡುವ ಮಾತು ತನಗೆ ಯಾಕೆ ಕೇಳಬೇಕಾಗಿತ್ತು? ಈ ಆಕಸ್ಮಿಕವೇ ಅವನಿಗೆ ವಿಚಿತ್ರ ಅನ್ನಿಸುತಿತ್ತು. ದರಿದ್ರ ಹೆಂಡದಂಗಡಿಯ ಈ ಕ್ಷುಲ್ಲಕ ಮಾತುಕತೆಯ ಪ್ರಭಾವ ಅವನ ಮುಂದಿನ ಎಲ್ಲ ಕೆಲಸಗಳ ಮೇಲೆ ಗಾಢವಾಗಿ ಇತ್ತು. ಅವನು ಮಾಡಿದ ಎಲ್ಲ ಕೆಲಸವನ್ನು ವಿಧಿಯೇ ನಿರ್ಧಾರ ಮಾಡಿದೆ ಅನ್ನುವ ಸೂಚನೆಯ ಹಾಗಿತ್ತು.

******

ಹೇ ಮಾರ್ಕೆಟ್ಟಿನಿಂದ ಬಂದವನೇ ಸೋಫಾದ ಮೇಲೆ ದೊಪ್ಪನೆ ಕೂತವನು ಒಂದು ಗಂಟೆಯಷ್ಟು ಹೊತ್ತು ಅಲ್ಲಿಂದ ಅಲ್ಲಾಡಲಿಲ್ಲ. ಅಷ್ಟು ಹೊತ್ತಿಗೆ ಕತ್ತಲಾಗಿತ್ತು. ಮೇಣದ ಬತ್ತಿ ಇರಲಿಲ್ಲ. ದೀಪ ಹಚ್ಚಬೇಕು ಅನ್ನಿಸಲೂ ಇಲ್ಲ. ಅವನ ಮನಸ್ಸಿನಲ್ಲಿ ಆಗ ಯಾವ ಯೋಚನೆ ಇತ್ತು ಅನ್ನುವ ನೆನಪು ತಂದುಕೊಳ್ಳಲು ಅವನಿಗೆ ಮುಂದೆ ಎಂದೂ ಸಾಧ್ಯವಾಗಲಿಲ್ಲ. ಇನ್ನೂ ಜ್ವರ ಇದೆ, ಚಳಿ ಇದೆ ಅನ್ನಿಸಿತು. ಆಹಾ, ಸೋಫಾ ಮೇಲೆ ಹೀಗೇ ಮಲಗಬಹುದಲ್ಲ ಅನ್ನುವ ಖುಷಿಯೂ ಆಯಿತು. ಸೀಸದಷ್ಟು ಭಾರವಾದ ನಿದ್ದೆ ಅಮರಿಕೊಂಡಿತು.

ಎಂದೂ ಇಲ್ಲದ ಹಾಗೆ ಸುದೀರ್ಘವಾದ ಕನಸಿಲ್ಲದ ನಿದ್ರೆ ಮಾಡಿದ್ದ. ಮಾರನೆಯ ಬೆಳಗ್ಗೆ ಹತ್ತು ಗಂಟೆಗೆ ಅವನ ಕೋಣೆಗೆ ಬಂದ ನಾಸ್ತಾಸ್ಯಾಗೆ ರಾಸ್ಕೋಲ್ನಿಕೋವನನ್ನು ಎಬ್ಬಿಸುವುದು ಕಷ್ಟವಾಯಿತು. ಟೀ, ಬ್ರೆಡ್ಡು ತಂದಿದ್ದಳು. ಮತ್ತೆ ಅದೇ ಬಳಸಿದ ಪುಡಿ ಹಾಕಿ ಮಾಡಿದ ಟೀ, ಮತ್ತೆ ಅದೇ ಅವಳ ಹಳೆಯ ಕೆಟಲು.

‘ನೋಡು, ಇವನ ನಿದ್ದೇನಾ! ನಿದ್ದೆ ಬಿಟ್ಟು ಇನ್ನೇನೂ ಕೇಳಬೇಡ!’ ಅಂತ ಸಿಡುಕಿದಳು.

ಕಷ್ಟಪಟ್ಟು ಎದ್ದು ಕೂತ. ತಲೆ ನೋಯುತಿತ್ತು. ನಿಂತ. ಸುತ್ತಲೂ ನೋಡಿದ. ಮತ್ತೆ ಸೋಫಾ ಮೇಲೆ ಕುಸಿದ.

‘ಮತ್ತೆ ನಿದ್ದೇ! ಏನು ಹುಷಾರಿಲ್ಲವಾ? ಏನು ಕಥೇ?’
ಉತ್ತರ ಬರಲಿಲ್ಲ.

‘ಟೀ ಬೇಕಾ?

ಮನೆಯಲ್ಲಿದ್ದ ಚರವಸ್ತುಗಳನ್ನು ಬಿಟ್ಟರೆ ಮುದುಕಿಯ ಒಂದೇ ಒಂದು ಕಾಸು ಕೂಡ ಲಿಝಾವೆಟಾಗೆ ಸಿಕ್ಕಿರಲಿಲ್ಲ. ಮುದುಕಿ ತನ್ನ ಎಲ್ಲ ಹಣವನ್ನು ಎನ್-ವೈ ಪ್ರಾಂತದ ಮಠಕ್ಕೆ ದಾನವಾಗಿ ಕೊಟ್ಟು ತನ್ನ ಆತ್ಮದ ಹಿತಕ್ಕೆ ಪ್ರಾರ್ಥನೆ ಸಲ್ಲಿಸಬೇಕು ಎಂದು ಉಯಿಲು ಬರೆದಿದ್ದಳು.

ಬಹಳ ಕಷ್ಟಪಟ್ಟು ‘ಆಮೇಲೇ!’ ಅನ್ನುತ್ತ ಕಣ್ಣು ಮುಚ್ಚಿ ಗೋಡೆಯ ಕಡೆ ಹೊರಳಿದ. ನಾಸ್ತಾಸ್ಯಾ ಅವನನ್ನೇ ನೋಡುತ್ತ ಸ್ವಲ್ಪ ಹೊತ್ತು ನಿಂತಿದ್ದಳು.

‘ನಿಜವಾಗಲೂ ಹುಷಾರಿಲ್ಲ ಅಂತ ಕಾಣತ್ತೆ,’ ಅಂದುಕೊಳ್ಳುತ್ತ ಹೊರಟು ಹೋದಳು.

ಮತ್ತೆ ಮಧ್ಯಾಹ್ನ ಎರಡು ಗಂಟೆಯ ಹೊತ್ತಿಗೆ ಬಂದಳು. ಅವನು ಹಾಗೇ ಮಲಗಿದ್ದ. ಟೀ ಹಾಗೇ ಇತ್ತು. ನಾಸ್ತಾಸ್ಯಾ ಸಿಟ್ಟಿನಿಂದ ಅವನನ್ನು ಹಿಡಿದು ಅಲ್ಲಾಡಿಸಿದಳು.

‘ಇನ್ನೂ ಗೊರಕೆ ಹೊಡೀತಿದೀಯಾ!’ ಅಸಹ್ಯಪಟ್ಟುಕೊಂಡು ಕೇಳಿದಳು. ಸ್ವಲ್ಪ ಹಾಗೇ ಎದ್ದು ಕೂತ. ಏನೂ ಮಾತಾಡದೆ ನೆಲ ನೋಡುತಿದ್ದ.

‘ಏನು ಕಥೆ ನಿಂದು? ಹುಷಾರಿಲ್ಲವಾ?’ ನಾಸ್ತಾಸ್ಯಾ ಕೇಳಿದಳು. ಈಗಲೂ ಉತ್ತರ ಬರಲಿಲ್ಲ.

‘ಹೊರಗೆ ಹೋಗಿ ಸುತ್ತಾಡಿ ಬಾ. ತಾಜಾ ಗಾಳಿಗೆ ಮೈ ಒಡ್ಡಿದರೆ ಚುರುಕಾಗುತ್ತೀಯ. ತಿನ್ನುತೀಯೋ ಇಲ್ಲವೋ?’

ದುರ್ಬಲವಾದ ದನಿಯಲ್ಲಿ ‘ಆಮೇಲೆ!’ ಅಂದ. ‘ಹೋಗು,’ ಅನ್ನುತ್ತ ಬಾಗಿಲ ಕಡೆಗೆ ಕೈ ತೋರಿದ.
ಸ್ವಲ್ಪ ಹೊತ್ತು ಅಲ್ಲೇ ನಿಂತಿದ್ದು, ಅವನನ್ನು ಮರುಕದಿಂದ ನೋಡಿದಳು. ಹೊರಟಳು.

ಸ್ವಲ್ಪ ಹೊತ್ತಾದ ಮೇಲೆ ತಲೆ ಎತ್ತಿದ. ಟೀ ಕೆಟಲು, ಸೂಪ್ ಪಾತ್ರೆಯನ್ನು ಬಹಳ ಹೊತ್ತು ಸುಮ್ಮನೆ ದಿಟ್ಟಿಸಿದ. ಬ್ರೆಡ್ಡು ತೆಗೆದುಕೊಂಡ, ಸ್ಪೂನಿನಲ್ಲಿ ಸೂಪು ಹೀರುತ್ತ ಬ್ರೆಡ್ಡು ತಿನ್ನುವುದಕ್ಕೆ ಶುರು ಮಾಡಿದ.

ಸ್ವಲ್ಪ ತಿಂದು, ಮೂರು ನಾಲ್ಕು ಚಮಚ ಸೂಪ್ ಕುಡಿದ. ಹಸಿವು ಇರಲಿಲ್ಲ. ಯಂತ್ರದ ಹಾಗೆ ಬಾಯಿ ಆಡಿಸಿದ. ತಲೆಯ ನೋವು ಕಡಿಮೆಯಾಗಿತ್ತು. ಊಟ ಮುಗಿಸಿ ಸೋಫಾ ಮೇಲೆ ಮತ್ತೆ ಮೈ ಚೆಲ್ಲಿದ. ನಿದ್ರೆ ಬರಲಿಲ್ಲ. ಅಲ್ಲಾಡದೆ ಹಾಗೇ ಬೋರಲು ಮಲಗಿ ಮುಖವನ್ನು ದಿಂಬಿನಲ್ಲಿ ಹುದುಗಿಸಿದ್ದ. ಹಗಲುಗನಸು. ಕನಸಿನ ಚಕ್ರವ್ಯೂಹದಲ್ಲಿ ಕಳೆದುಹೋದ. ಆಫ್ರಿಕಾದಲ್ಲೋ ಈಜಿಪ್ಟಿನಲ್ಲೋ ಓಯಸಿಸ್‌ ನಲ್ಲಿದ್ದೇನೆ ಅಂದುಕೊಂಡ. ವ್ಯಾಪಾರಿಗಳ ಒಂಟೆ ಸಾಲು ತಣ್ಣಗೆ ಮಲಗಿವೆ. ಸುತ್ತಲೂ ತಾಳೆ ಮರ ಇವೆ. ಊಟ ಮಾಡುತಿದ್ದಾರೆ. ರಾಸ್ಕೋಲ್ನಿಕೋವ್ ತನ್ನ ಪಕ್ಕದಲ್ಲಿದ್ದ ತೊರೆಗೇ ನೇರವಾಗಿ ಬಾಯಿ ಹಾಕಿ ನೀರು ಕುಡಿಯುತಿದ್ದಾನೆ. ಜುಳು ಜುಳು ತೊರೆ. ಗಾಳಿ ತಾಜಾ. ಬೆರಗಾಗುವಷ್ಟು ನೀಲಿಯ ಬಣ್ಣ ನೀರಿಗೆ. ಆಹಾ ತಣ್ಣಗೆ! ಬಣ್ಣ ಬಣ್ಣದ ಕಲ್ಲುಗಳ ಮೇಲೆ, ಬಂಗಾರದ ಹಾಗೆ ಮಿರುಗುವ ಮರಳಿನ ಮೇಲೆ ಹರಿಯುತ್ತಿದೆ. ಇದ್ದಕಿದ್ದ ಹಾಗೆ ಗಡಿಯಾರದ ಗಂಟೆ ಬಾರಿಸಿತು. ಮೆಟ್ಟಿಬಿದ್ದ. ತಲೆ ಎತ್ತಿದ. ಕಿಟಕಿಯಾಚೆ ನೋಡಿ ಎಷ್ಟು ಗಂಟೆಯಾಗಿರಬಹುದು ಅಂದಾಜು ಮಾಡಿದ. ದಿಢೀರನೆ ಎದ್ದ. ಯಾರೋ ಸೋಫಾದಿಂದ ಬಲವಂತವಾಗಿ ಎಳೆದರು ಅನ್ನುವ ಹಾಗೆ. ತುದಿಗಾಲಲ್ಲಿ ನಡೆಯುತ್ತ ಬಾಗಿಲಿಗೆ ಹೋದ. ಒಂದಿಷ್ಟೇ ತೆರೆದ. ಮಹಡಿ ಮೆಟ್ಟಿಲ ಮೇಲೆ ಸದ್ದು ಕೇಳುತ್ತದೋ ಗಮನಿಸಿದ. ಎದೆ ಜೋರಾಗಿ ಬಡಿಯುತಿತ್ತು. ಎಲ್ಲರೂ ಮಲಗಿದ್ದಾರೇನೋ ಅನ್ನುವ ಹಾಗೆ ಪ್ರಶಾಂತವಾಗಿತ್ತು. ನಾಳೆ ಮಾಡಬೇಕಾದ ಕೆಲಸಕ್ಕೆ ಏನೂ ಮಾಡದೆ, ಸಿದ್ಧಮಾಡಿಕೊಳ್ಳದೆ ನಿದ್ದೆ ಹೋಗಿದ್ದೆನಲ್ಲ ಎಷ್ಟು ವಿಚಿತ್ರ ಅನ್ನಿಸಿತು. ಗಡಿಯಾರ ಆರು ಹೊಡೆದಿರಬೇಕು… ನಿದ್ದೆ, ಜಡತ್ವಗಳು ತೊಲಗಿ ಈಗ ಜ್ವರದಂಥ ಗೋಜಲು ಚಡಪಡಿಕೆ ಹುಟ್ಟಿತ್ತು. ಮಾಡಿಕೊಳ್ಳಬೇಕಾದ ಸಿದ್ಧತೆಗಳು ಹೆಚ್ಚಿರಲಿಲ್ಲ. ಎಲ್ಲಾ ಶಕ್ತಿ ಬಳಸಿಕೊಂಡು, ಏನೂ ಮರೆಯಬಾರದು ಎಂದುಕೊಳ್ಳುತ್ತ, ಮನಸ್ಸನ್ನು ಏಕಾಗ್ರ ಮಾಡಿಕೊಂಡು ಯೋಚನೆ ಮಾಡಿದ.

ಎದೆ ಬಡಿದುಕೊಳ್ಳುತಿತ್ತು. ಉಸಿರಾಡುವುದು ಕಷ್ಟವಾಗುತಿತ್ತು. ಹಗ್ಗಕ್ಕೆ ಕುಣಿಕೆ ಹಾಕಿ, ಆ ಹಗ್ಗವನ್ನ ಕೋಟಿನ ಒಳಭಾಗದಲ್ಲಿ ಹೊಲಿದುಕೊಳ್ಳಬೇಕು. ಒಂದು ನಿಮಿಷದ ಕೆಲಸ. ದಿಂಬಿನ ಕೆಳಗೆ ತಡಕಿದ. ಅಲ್ಲಿ ತುರುಕಿದ್ದ ಬಟ್ಟೆಗಳಲ್ಲಿ ಹಳೆಯದೊಂದು ಅಂಗಿ ಸಿಕ್ಕಿತು. ಕೊಳೆಯಾಗಿತ್ತು, ಒಗೆದಿರಲಿಲ್ಲ, ಹರಿದಿತ್ತು. ಅಂಗಿಯನ್ನು ಹರಿದು, ತುಂಡುಗಳನ್ನೆಲ್ಲ ಸೇರಿಸಿ ಹೊಸೆದು ಎರಡು ಅಂಗುಲ ದಪ್ಪ, ಹದಿನೈದು ಅಂಗುಲ ಉದ್ದದ ಹಗ್ಗ ಮಾಡಿ, ಮಡಿಸಿದ. ಬೇಸಗೆಯಲ್ಲಿ ತೊಡುತಿದ್ದ ಸಡಿಲವಾದ ಓವರ್ ಕೋಟಿನ ಎಡ ತೋಳಿನ ಕೆಳಗೆ ಅದರ ಎರಡು ತುದಿಗಳನ್ನು ಸೇರಿಸಿ ಹೊಲಿದ. ಅವನ ಹತ್ತಿರ ಇದ್ದದ್ದು ಅದೊಂದೇ ಹೊರ-ಉಡುಪು. ಹೊಲಿಯುವಾಗ ಕೈ ನಡುಗುತಿತ್ತು. ಆದರೂ ಹೊರಗಿನಿಂದ ಏನೂ ಕಾಣದ ಹಾಗೆ ಹೊಲಿಗೆ ಹಾಕಿದ. ಸೂಜಿ ದಾರವನ್ನು ಬಹಳ ಹಿಂದೆಯೇ ಸಿದ್ಧಮಾಡಿ, ಹಾಳೆಯಲ್ಲಿ ಸುತ್ತಿ, ಮೇಜಿನ ಡ್ರಾದಲ್ಲಿ ಇಟ್ಟಿದ್ದ. ಕುಣಿಕೆಯ ಯೋಚನೆ ಅವನ ಸ್ವಂತದ್ದು. ಅದರಲ್ಲಿ ಕೊಡಲಿಯನ್ನು ಕಟ್ಟಿಕೊಳ್ಳುವುದಿತ್ತು. ಕೊಡಲಿಯನ್ನು ಕೈಯಲ್ಲಿ ಹಿಡಿದು ಜನ ಓಡಾಡುವ ಬೀದಿಯಲ್ಲಿ ಹೋಗಬಾರದು ಅನ್ನಿಸಿತ್ತು. ಕೋಟಿನ ಒಳಗೆ ಅಡಗಿಸುವುದಿದ್ದರೂ ಕೈಗೆ ಸುಲಭವಾಗಿ ಸಿಗಬೇಕು, ಅದು ಇರುವುದು ಹೊರಗಿನಿಂದ ಗೊತ್ತಾಗಬಾರದು. ಎಡ ತೋಳಿನ ಕುಣಿಕೆಗೆ ಕೊಡಲಿ ಸಿಕ್ಕಿಸಿ, ಎಡಗೈಯನ್ನು ಜೇಬಿನಲ್ಲಿಟ್ಟುಕೊಂಡು ಕೊಡಲಿಯ ಕಾವು ಅಲ್ಲಾಡದ ಹಾಗೆ ಹಿಡಿದರೆ ಆಯಿತು.

ಕೋಟು ಹೇಗೂ ದೊಗಲೆಯಾಗಿತ್ತು. ಜೇಬಿನಲ್ಲಿರುವ ಕೈ ಏನನ್ನೋ ಹಿಡಿದುಕೊಂಡಿದೆ ಅನ್ನುವ ಊಹೆ ಕೂಡ ಯಾರಿಗೂ ಬರುತ್ತಿರಲಿಲ್ಲ. ಹೀಗೆ ಕುಣಿಕೆ ಮಾಡುವ ವಿಚಾರ ಹೊಳೆದದ್ದು ಹದಿನೈದು ದಿನದ ಹಿಂದೆ. ಈಗ ಆ ಕೆಲಸ ಪೂರೈಸಿ ತನ್ನ ಟರ್ಕಿಶ್ ಸೋಫಾದ ಅಡಿಯ ಜಾಗದಲ್ಲಿ ಬೆರಳಾಡಿಸಿ, ಎಡ ಮೂಲೆಯ ಹತ್ತಿರ ಬಚ್ಚಿಟ್ಟಿದ್ದ ಅಡವಿಡುವ ವಸ್ತು ತೆಗೆದ. ಬಹಳ ಕಾಲದ ಹಿಂದೆಯೇ ಅದನ್ನು ಸಿದ್ಧಮಾಡಿ ಅಲ್ಲಿ ಬಚ್ಚಿಟ್ಟಿದ್ದ. ಹಾಗೆ ಅದು ಗಿರವಿ ಇಡುವಂಥ ವಸ್ತುವೇ ಅಲ್ಲ. ಅದೊಂದು ಮರದ ತುಂಡು-ಸಿಗರೇಟು ಪ್ಯಾಕಿನ ಅಳತೆಯದ್ದು. ಹೀಗೇ ಸುತ್ತಾಡುತ್ತಿರುವಾಗ ಮರಗೆಲಸ ನಡೆಯುತಿದ್ದ ಕಟ್ಟಡದ ಅಂಗಳದಲ್ಲಿ ಸಿಕ್ಕಿತ್ತು. ಕೆಲವು ಕಾಲದ ನಂತರ ಅದಕ್ಕಿಂತ ಸ್ವಲ್ಪ ಚಿಕ್ಕ ಅಳತೆಯ ತಗಡಿನ ತುಂಡು ಸಿಕ್ಕಿತ್ತು. ಅವರೆಡನ್ನೂ ಒಟ್ಟಿಗೆ ಸೇರಿಸಿ ಗಟ್ಟಿಯಾಗಿ ದಾರ ಸುತ್ತಿ ಬಿಗಿದಿದ್ದ. ಆಮೇಲೆ ಬಿಳಿಯ ಹಾಳೆಯಲ್ಲಿ ಅದನ್ನು ನೀಟಾಗಿ ಸುತ್ತಿ, ಟೇಪು ಕಟ್ಟಿ, ಆ ಟೇಪು ಸುಲಭವಾಗಿ ಬಿಚ್ಚಲು ಬರದ ಹಾಗೆ ಅಡ್ಡತಿಡ್ಡ ಗಂಟು ಹಾಕಿದ್ದ. ಮುದುಕಿ ಆ ಗಂಟು ಬಿಚ್ಚಲು ಹೆಣಗುತ್ತಿರುವಾಗ ಸರಿಯಾದ ಸಮಯಕ್ಕೆ ಕಾದು ಕೆಲಸ ಮುಗಿಸಬೇಕು. ಸ್ವಲ್ಪ ತೂಕ ಕಾಣಲಿ ಎಂದು ತಗಡಿನ ತುಂಡು ಸೇರಿಸಿದ್ದ. ಮೊದಲ ಒಂದೆರಡು ನಿಮಿಷವಾದರೂ ಅದು ಬರಿಯ ಮರದ ತುಂಡು ಅನ್ನಿಸಬಾರದು ಮುದುಕಿಗೆ. ಇದನ್ನು ಹೀಗೆ ಸಿದ್ಧಮಾಡಿ ಸೋಫಾದ ಕೆಳಗೆ ಬಚ್ಚಿಟ್ಟಿದ್ದ. ಅದನ್ನು ತೆಗೆದುಕೊಳ್ಳುತಿದ್ದ ಹಾಗೇ ಯಾರೋ ಕೆಳಗೆ ಅಂಗಳದಲ್ಲಿ ‘ಆಗಲೇ ಆರು ಗಂಟೆ ಆಯಿತು!’ ಅಂದದ್ದು ಕೇಳಿಸಿತು.

‘ಆರು ಗಂಟೆ ಆಗಿ ಹೋಯಿತು! ಅಯ್ಯೋ ದೇವರೇ!’

ಬಾಗಿಲ ಹತ್ತಿರಕ್ಕೆ ಧಾವಿಸಿ, ಹ್ಯಾಟು ಎತ್ತಿಕೊಂಡು, ಹದಿಮೂರು ಮೆಟ್ಟಿಲು ಹುಷಾರಾಗಿ, ಬೆಕ್ಕಿನ ಹಾಗೆ ಸದ್ದಿಲ್ಲದೆ ಇಳಿಯುವುದಕ್ಕೆ ಶುರು ಮಾಡಿದ. ಈಗ ಮುಖ್ಯವಾದ ಕೆಲಸ. ಅಡುಗೆ ಮನೆಯಿಂದ ಕೊಡಲಿ ಕದಿಯುವ ಕೆಲಸ. ಅವನ ಹತ್ತಿರ ಮುಳ್ಳುಕತ್ತಿಗೆ ಇತ್ತು. ಆದರೆ ಅದನ್ನು ಬಳಸಲು ಬೇಕಾದ ಶಕ್ತಿ ಮೈಯಲ್ಲಿ ಇದೆಯೋ ಅನ್ನುವ ಅನುಮಾನವಿತ್ತು. ಕೊನೆಗೆ ಕೊಡಲಿಯೇ ಸರಿ ಅನ್ನುವ ತೀರ್ಮಾನ ಮಾಡಿದ್ದ. ಈ ವ್ಯವಹಾರದಲ್ಲಿ ಅವನು ತೆಗೆದುಕೊಂಡ ಅಂತಿಮ ತೀರ್ಮಾನಗಳಲ್ಲೆಲ್ಲ ಒಂದು ವಿಚಿತ್ರ ಗುಣವಿತ್ತು ಅನ್ನುವುದನ್ನು ಇಲ್ಲೇ ಹೇಳಬಹುದು. ತೀರ್ಮಾನಗಳೆಲ್ಲ ಅಂತಿಮವಾಗುತಿದ್ದ ಹಾಗೆ ಅವೆಲ್ಲ ಅವನಿಗೇ ಅತ್ಯಂತ ಭೀಕರವಾಗಿಯೂ ಅಸಂಬದ್ಧವಾಗಿಯೂ ಕಾಣುತಿದ್ದವು. ಅವನೊಳಗೇ ಇಷ್ಟೆಲ್ಲ ತೊಳಲಾಟ, ಹೋರಾಟ ನಡೆಯುತಿದ್ದರೂ ಒಂದೇ ಒಂದು ಕ್ಷಣದ ಮಟ್ಟಿಗಾದರೂ ಇದೆಲ್ಲ ನಿಜವಾಗಲೂ ನಡೆಯುವ ಕೆಲಸ ಎಂದು ಅವನಿಗೆ ಅನ್ನಿಸಿರಲಿಲ್ಲ. ಆ ಕೆಲಸ ಮಾಡುತ್ತೇನೆಂದು ಸ್ವತಃ ಅವನೇ ನಂಬಿರಲಿಲ್ಲ.

ಯಾವ ಸಂದೇಹವೂ ಇದ್ದಿರದ ತನ್ನ ತೀರ್ಮಾನಗಳನ್ನು, ಯೋಜನೆಯ ವಿವರಗಳನ್ನು ಕೊನೆಗೊಮ್ಮೆಯಾದರೂ ವಿಶ್ಲೇಷಣೆ ಮಾಡಿ ನೋಡಿದ್ದರೆ ಆ ಕ್ಷಣದಲ್ಲೂ ಅದು ಅತ್ಯಂತ ಅಸಂಗತ, ಅಸಾಧ್ಯ, ಅಸಂಬದ್ಧ, ರಾಕ್ಷಸೀ ಯೋಜನೆ ಅನ್ನುವುದು ತಿಳಿದು ಅದನ್ನು ಕೈಬಿಟ್ಟಿರುತಿದ್ದ. ಅವನ ಮನಸ್ಸಿನಲ್ಲಿ ಅನುಮಾನದ ಕಂದರಗಳಿದ್ದವು. ಅನಿಶ್ಚಿತವಾದ ವಿವರಗಳಿದ್ದವು. ಕೊಡಲಿಯನ್ನು ಎಲ್ಲಿ ಸಂಪಾದಿಸಬೇಕು ಅನ್ನುವ ವಿವರ ಅವನನ್ನು ಎಂದೂ ಕಾಡಿರಲಿಲ್ಲ. ಕೊಡಲಿ ಸಂಪಾದಿಸುವುದು ತೀರ ಸುಲಭವಾಗಿತ್ತು. ನಾಸ್ತಾಸ್ಯಾ ಸದಾ ಮನೆಯ ಒಳಗೆ ಹೊರಗೆ ಓಡಾತಿದ್ದಳು. ಅದರಲ್ಲೂ ಸಂಜೆಯ ಹೊತ್ತು ಓಡಾಟ ಹೆಚ್ಚು. ಬಾಡಿಗೆದಾರರು ತಂದುಕೊಡಲು ಹೇಳಿದ ವಸ್ತುಗಳನ್ನು ತರಲು ಅಂಗಡಿಗೆ ಹೋಗುತಿದ್ದಳು. ಹಾಗೆ ಓಡಾಡುವಾಗಲೆಲ್ಲ ಬಾಗಿಲು ಮುಚ್ಚದೆ ತೆರೆದಿಟ್ಟೇ ಹೋಗುತಿದ್ದಳು. ಈ ವಿಷಯವಾಗಿ ಓನರಮ್ಮ ಯಾವಾಗಲೂ ಅವಳನ್ನು ಬೈಯುತಿದ್ದಳು. ಮಾಡಬೇಕಾದದ್ದು ಇಷ್ಟೇ—ಸರಿಯಾದ ಸಮಯ ನೋಡಿಕೊಂಡು ಅಡುಗೆ ಮನೆಗೆ ಹೋಗುವುದು, ಕೊಡಲಿ ಎತ್ತಿಕೊಳ್ಳುವುದು, ಒಂದು ಗಂಟೆಯ ನಂತರ (ಅಥವಾ ಕೆಲಸ ಮುಗಿದ ಮೇಲೆ) ಕೊಡಲಿಯನ್ನು ವಾಪಸ್ಸು ತಂದು ಅಲ್ಲೇ ಇಡುವುದು. ಅನುಮಾನಗಳೂ ಸುಳಿದಾಡುತಿದ್ದವು. ಅವನು ಕೊಡಲಿಯನ್ನು ವಾಪಸ್ಸು ಇಡಲು ಬಂದಾಗ ಅಕಸ್ಮಾತ್ ನಾಸ್ತಾಸ್ಯ ಅಲ್ಲೇ ಇದ್ದರೆ? ಅವಳು ಮತ್ತೆ ಹೊರಕ್ಕೆ ಹೋಗುವವರೆಗೆ ಕಾಯಬೇಕಾಗುತಿತ್ತು. ಅದು ಸರಿ. ಅವಳಿಗೆ ಆ ಹೊತ್ತಿನಲ್ಲಿ ಕೊಡಲಿ ಬೇಕಾಗಿ ಬಂದು ಹುಡುಕಿದರೆ? ಇದು ಯೋಚನೆ ಮಾಡಬೇಕಾದ ವಿಷಯವೇ ಸರಿ.

ಇವೆಲ್ಲ ಕ್ಷುಲ್ಲಕ ಸಂಗತಿಗಳು. ಇವುಗಳ ಬಗ್ಗೆ ಯೋಚನೆ ಕೂಡ ಮಾಡಿರಲಿಲ್ಲ ಅವನು. ಅದಕ್ಕೆ ಸಮಯವೂ ಇರಲಿಲ್ಲ. ಮುಖ್ಯವಾದ ಸಂಗತಿಯೊಂದನ್ನು ಮಾತ್ರ ಯೋಚನೆ ಮಾಡಿ ಮನಸ್ಸು ಗಟ್ಟಿ ಮಾಡಿದರೆ ಸಾಕು. ಚಿಕ್ಕ ಪುಟ್ಟ ವಿಷಯ ಏನಿದ್ದರೂ ಆಮೇಲೆ ನೋಡಿದರಾಯಿತು ಅಂದುಕೊಂಡಿದ್ದ. ಮನಸ್ಸು ಮಾಡುವುದು ಅಸಾಧ್ಯ ಎಂದೇ ತೋರುತ್ತಿತ್ತು. ಒಂದಲ್ಲ ಒಂದು ದಿನ ಯೋಚನೆ ಮಾಡುವುದು ಮುಗಿಸಿ, ಎದ್ದು ಆ ಕೆಲಸಕ್ಕೆ ಹೊರಟೇ ಬಿಡುತ್ತೇನೆ ಎಂದು ಅವನಿಗೆ ಅನ್ನಿಸಿರಲಿಲ್ಲ.

ಇತ್ತೀಚೆಗೆ ಜಾಗವನ್ನು ಕೊನೆಯ ಸಾರಿ ನೋಡಿಕೊಂಡು ಬರೋಣ ಎಂದು ಹೋಗಿದ್ದಾಗ ಕೂಡ, ‘ಇದು ಟ್ರಯಲ್ ಅಷ್ಟೇ. ನಿಜವಾದ ಕೆಲಸ ದೂರದ ಮಾತು,’ ಎಂದುಕೊಂಡಿದ್ದ. ‘ಕನಸು ಕಾಣುವುದು ಸಾಕು, ಒಂದು ಸಾರಿ ಹೋಗಿ ನೋಡಿ ಬರೋಣ,’ ಎಂದುಕೊಂಡವನ ಹಾಗೆ ಹೋಗಿದ್ದ. ಹೋಗಿ ಬರುತಿದ್ದ ಹಾಗೇ ಸಹಿಸಲಾಗದೆ, ಥೂ ಎಂದು ಉಗುಳಿ, ತನ್ನ ಮೇಲೆಯೇ ಸಿಟ್ಟುಮಾಡಿಕೊಂಡು ಓಡಿಬಂದಿದ್ದ. ಆದರೂ ಅವನು ವಿಶ್ಲೇಷಣೆಯ ಎಲ್ಲ ಕೆಲಸ ಮನಸ್ಸಿನಲ್ಲೇ ಮುಗಿಸಿ, ಇದು ಸರಿಯೋ ತಪ್ಪೋ ಅನ್ನುವ ನೈತಿಕ ಅಂಶದ ಬಗ್ಗೆ ನಿರ್ಧಾರಕ್ಕೆ ಬಂದುಬಿಟ್ಟೆ ಅನ್ನಿಸುತಿತ್ತು.

ತರ್ಕ ಸರಣಿ ಕತ್ತಿಯಷ್ಟು ಹರಿತವಾಗಿತ್ತು. ಎಲ್ಲಾ ದಿಕ್ಕಿನಿಂದ ಯೋಚನೆ ಮಾಡಿ ತಡಕಿದರೂ ಯಾವ ಆಕ್ಷೇಪಣೆಗಳೂ ಅವನಿಗೆ ಕಂಡಿರಲಿಲ್ಲ. ಮುಖ್ಯ ಅವನ ಬಗ್ಗೆ ಅವನಿಗೇ ನಂಬಿಕೆ ಇರಲಿಲ್ಲ. ತಡಕಿ ತಡಕಿ ಎಲ್ಲ ಥರದ ಆಕ್ಷೇಪಣೆಗಳನ್ನು ಹುಡುಕಿಕೊಂಡಿದ್ದ. ಈಗ ಇದ್ದಕ್ಕಿದ್ದ ಹಾಗೆ ಆ ದಿನ ಬಂದಿದೆ, ಒಂದೇ ಏಟಿಗೆ ಎಲ್ಲ ನಿರ್ಧಾರ ತನ್ನಷ್ಟಕ್ಕೇ ಆಗಿಬಿಟ್ಟಿದೆ. ಯಾರೋ ಕೈ ಹಿಡಿದು ದರದರ ಎಳೆದುಕೊಂಡು ಹೋಗುತ್ತಿರುವ ಹಾಗೆ, ಒಲ್ಲೆ ಅನ್ನಲಾಗದೆ ತಾನು ಕುರುಡಾಗಿ ಕಾಲೆಳೆಯುತ್ತ ಹೋಗುತ್ತಿರುವ ಹಾಗೆ, ಕೋಟಿನ ತುದಿ ಯಂತ್ರದ ತಿರುಗಣೆಗೆ ಸಿಕ್ಕಿ ತನ್ನನ್ನೂ ಒಳಕ್ಕೆ ಎಳಕೊಳ್ಳುತ್ತಿರುವ ಹಾಗೆ ಅನ್ನಿಸುತ್ತಿದೆ.

ಬಹಳ ಹಿಂದಿನಿಂದಲೂ ಒಂದು ಪ್ರಶ್ನೆ ಅವನ ಮನಸ್ಸಿನಲ್ಲಿ ಇದ್ದೇ ಇತ್ತು: ಯಾಕೆ ಎಲ್ಲ ಅಪರಾಧಗಳೂ ಅಷ್ಟು ಸುಲಭವಾಗಿ ಪತ್ತೆಯಾಗುತ್ತವೆ? ಬಲು ಮಟ್ಟಿಗೆ ಎಲ್ಲ ಅಪರಾಧಿಗಳೂ ಅಂಥ ಎದ್ದು ಕಾಣುವ ಸುಳಿವುಗಳನ್ನು ಯಾಕೆ ಬಿಟ್ಟು ಹೋಗಿರುತ್ತಾರೆ? ನಿಧಾನವಾಗಿ ಯೋಚನೆ ಮಾಡುತ್ತ ಬಗೆ ಬಗೆಯ ವಿಚಿತ್ರ ತೀರ್ಮಾನಗಳಿಗೆ ತಲುಪುತಿದ್ದ. ಅಪರಾಧವನ್ನು ಬಚ್ಚಿಡುವುದು ಅಸಾಧ್ಯ ಎಂಬ ಸಂಗತಿ ಇದಕ್ಕೆ ಕಾರಣವಲ್ಲ, ಬದಲಾಗಿ ಅಪರಾಧಿಯ ಕಾರಣದಿಂದಲೇ ಅಪರಾಧ ಪತ್ತೆಯಾಗುತ್ತದೆ ಅನ್ನಿಸಿತ್ತು ಅವನಿಗೆ. ಅಪರಾಧ ಎಸಗುವ ಕ್ಷಣದಲ್ಲಿ ಅಪರಾಧಿಯ ಬುದ್ಧಿಶಕ್ತಿ, ವಿಚಾರಶಕ್ತಿ, ಇಚ್ಛಾಶಕ್ತಿಗಳು ಸೋತು ಹೋಗುತ್ತವೆ; ಜಾಣತನ, ವಿಚಾರಶಕ್ತಿ ಅಗತ್ಯವಿರುವ ಹೊತ್ತಿನಲ್ಲಿ ಅಗಾಧವಾದ ಬಾಲಿಶವಾದ ವಿಚಾರಹೀನತೆ ಮನಸ್ಸನ್ನು ಆಕ್ರಮಿಸಿರುತ್ತದೆ; ವಿಚಾರಕ್ಕೆ ಬುದ್ಧಿಶಕ್ತಿಗೆ ಗ್ರಹಣ ಹಿಡಿದು ನಿಧಾನವಾಗಿ ಮಂಕು ಅಮರಿ, ಬೆಳೆಯುತ್ತ ಅಪರಾಧ ಎಸಗುವ ಸ್ವಲ್ಪ ಮೊದಲು ತೀವ್ರ ಸ್ಥಿತಿಯನ್ನು ತಲುಪಿ, ಅಪರಾಧ ಮಾಡುವ ಕ್ಷಣದಲ್ಲೂ ಅದೇ ಮಂಕು ಮನಸಿನಲ್ಲಿ ಉಳಿದು, ಆಮೇಲೂ ಒಂದಷ್ಟು ಹೊತ್ತು ಇರುತ್ತದೆ, ಇದು ಆಯಾ ಅಪರಾಧಿಯ ವ್ಯಕ್ತಿತ್ವಕ್ಕೆ ಸಂಬಂಧಿಸಿದ್ದು ಎಂದು ತೀರ್ಮಾನಿಸಿದ್ದ.

ಸ್ವಲ್ಪ ಹೊತ್ತಾದ ಮೇಲೆ ಈ ಮಂಕುತನ ಜ್ವರ ಇಳಿದು ಹೋಗುವ ಹಾಗೆ ಹೋಗಿಬಿಡುತ್ತದೆ. ಈ ಕಾಯಿಲೆಯೇ ಅಪರಾಧವನ್ನು ಹುಟ್ಟಿಸುತ್ತದೆಯೋ ಅಥವಾ ಅಪರಾಧವೇ ತನ್ನ ವಿಚಿತ್ರ ಸ್ವಭಾವದಿಂದ ಕಾಯಿಲೆಯಂಥ ಮಂಕುತನ ತರುತ್ತದೋ ಅದನ್ನು ತೀರ್ಮಾನ ಮಾಡಲು ಅವನಿಗಿನ್ನೂ ಆಗಿರಲಿಲ್ಲ.

‘ನನ್ನ ಪ್ರಸಂಗದಲ್ಲಿ ಇಂಥ ಜಡ್ಡು ಮನಸ್ಸಿಗೆ ಬರಲು ಸಾಧ್ಯವಿಲ್ಲ, ಯಾಕೆಂದರೆ ನಾನು ಮಾಡುತ್ತಿರುವುದು ಅಪರಾಧವಲ್ಲ, ಹಾಗಾಗಿ ಆ ಕೆಲಸ ಪೂರೈಸುವವರೆಗೆ ಬುದ್ಧಿ, ವಿಚಾರಗಳು ನನ್ನ ಕೈ ಬಿಡುವುದಿಲ್ಲ,’ ಎಂದು ಭಾವಿಸಿದ್ದ. ‘ನಾನು ಮಾಡುವುದು ಅಪರಾಧವಲ್ಲ,’ ಅನ್ನುವ ತೀರ್ಮಾನಕ್ಕೆ ಹೇಗೆ ಅವನು ಹೇಗೆ ಬಂದ ಅನ್ನುವ ವಿವರ ಈಗ ಬೇಡ. ಕಥೆಯಲ್ಲಿ ಈಗಾಗಲೇ ತೀರ ಮುಂದೆ ಹೋಗಿಬಿಟ್ಟಿದ್ದೇವೆ. ಸದ್ಯಕ್ಕೆ ಇಷ್ಟು ಹೇಳೋಣ— ‘ಆ ಕಾರ್ಯ ನೆರವೇರಿಸುವುದಕ್ಕೆ ಇರುವ ವಾಸ್ತವವಾದ, ಶುದ್ಧ ಭೌತಿಕ ಕಷ್ಟಗಳು ಮುಖ್ಯವಲ್ಲ,’ ಅನ್ನಿಸಿತ್ತು ಅವನ ಮನಸ್ಸಿಗೆ. ‘ನನ್ನ ಇಚ್ಛಾಶಕ್ತಿ, ವಿಚಾರಶಕ್ತಿಗಳಿಗೆ ಉನ್ನತ ಸ್ಥಾನ ನೀಡಿರುವುದರಿಂದ, ಅತಿ ಸಣ್ಣ ವಿವರವನ್ನೂ ಮನದಟ್ಟು ಮಾಡಿಕೊಂಡಿರುವುದರಿಂದ ಈ ವ್ಯವಹಾರ ನಡೆಸುವಾಗ ಏನೇ ಅಡಚಣೆ ಎದುರಾದರೂ ನೋಡಿಕೊಳ್ಳಬಹುದು,’ ಅಂದುಕೊಂಡಿದ್ದ. ಆ ವ್ಯವಹಾರ ಮಾತ್ರ ಶುರುವೇ ಆಗುತ್ತಿರಲಿಲ್ಲ. ‘ಇದೇ ಕೊನೆಯ ಮಾತು,’ ಎಂದು ಅವನಿಗೆ ಅನಿಸಿದ ಎಲ್ಲ ಸಂಗತಿಗಳ ಬಗ್ಗೆ ಅನುಮಾನ ಹುಟ್ಟುತ್ತಿತ್ತು.

ಕೆಲಸದ ಗಳಿಗೆ ಬಂದಾಗ ಯಾವುದೂ ಅಂದುಕೊಂಡ ಹಾಗೆ ನಡೆಯದೆ, ಆಕಸ್ಮಿಕವಾಗಿ, ತೀರ ಅನಿರೀಕ್ಷಿತವಾಗಿ ನಡೆಯುತ್ತಿವೆ ಅನ್ನಿಸುತ್ತಿತ್ತು.

ಮೆಟ್ಟಿಲು ಪೂರಾ ಇಳಿಯುವ ಮೊದಲೇ ಅವನ ಲೆಕ್ಕಾಚಾರವನ್ನು ಬುಡಮೇಲು ಮಾಡುವಂಥ ಚಿಕ್ಕ ಸಂಗತಿಯೊಂದು ಅವನ ಗಮನಕ್ಕೆ ಬಂದಿತು. ಓನರಮ್ಮನ ಅಡುಗೆಮನೆಯ ಬಾಗಿಲು ಎಂದಿನ ಹಾಗೇ ತೆರೆದಿತ್ತು. ನಾಸ್ತಾಸ್ಯ ಇಲ್ಲದಿರುವಾಗ ಓನರಮ್ಮನೇ ಇದ್ದಾಳೋ ಅನ್ನುವ ಸಂಶಯದಲ್ಲಿ ಅತ್ತ ಇತ್ತ ನೋಡಿದ. ಓನರಮ್ಮನ ಕೋಣೆಯ ಬಾಗಿಲು ಭದ್ರವಾಗಿ ಹಾಕಿದೆಯೋ, ಕೊಡಲಿ ಕದಿಯುವುದನ್ನು ಅವಳು ಅಕಸ್ಮಾತ್ತಾಗಿ ಇಣುಕಿ ನೋಡಲು ಸಾಧ್ಯವೋ ಅನ್ನುವ ಅನುಮಾನ ಹುಟ್ಟಿತ್ತು. ಆಶ್ಚರ್ಯವೆಂದರೆ ನಾಸ್ತಾಸ್ಯ ಮನೆಯಲ್ಲೇ ಅಡುಗೆಮನೆಯಲ್ಲೇ ಇದ್ದಳು. ಒಗೆದ ಬಟ್ಟೆಗಳನ್ನು ಒಂದೊಂದಾಗಿ ಬುಟ್ಟಿಯಿಂದ ತೆಗೆದು ಅಡುಗೆ ಮನೆಯಲ್ಲಿದ್ದ ಹಗ್ಗದ ಮೇಲೆ ನೇತುಹಾಕುತಿದ್ದಳು. ಅವನನ್ನು ಕಂಡು ಒಂದು ಕ್ಷಣ ಕೆಲಸ ನಿಲ್ಲಿಸಿದಳು. ಅವನು ಹೋಗುತ್ತಿರುವುದನ್ನು ನೋಡಿದಳು. ಅವನು ಹಿಂದಿರುಗಿ ಏನೂ ನೋಡಲೇ ಇಲ್ಲ ಅನ್ನುವವನ ಹಾಗೆ ವಾಪಸ್ಸು ಹೊರಟ. ವ್ಯವಹಾರಕ್ಕೆ ಕೊನೆ ಬಂದಿತ್ತು. ಕೊಡಲಿ ಇಲ್ಲ. ಆಘಾತಕ್ಕೆ ಒಳಗಾಗದವನ ಹಾಗೆ ಕುಗ್ಗಿಹೋದ.

ಗೇಟಿನ ಹತ್ತಿರ ಹೋಗುತ್ತಾ ‘ಅವಳು ಇಷ್ಟು ಹೊತ್ತಿನಲ್ಲಿ ಅಲ್ಲಿ ಇರಲ್ಲ ಅಂತ ಯಾಕೆ ಹೇಗೆ ಅಂದುಕೊಂಡೆ? ಯಾಕೆ ಯಾಕೆ ಯಾಕೆ ಅಷ್ಟು ಖಚಿತವಾಗಿ ನಂಬಿದ್ದೆ?’ ಅನ್ನುವ ಯೋಚನೆ ಬಂದಿತು. ಸೋತು ಹೋದೆ ಅನ್ನಿಸಿತು, ತನ್ನನ್ನೇ ಅಪಹಾಸ್ಯ ಮಾಡಿಕೊಂಡು ನಗಬೇಕು ಅನ್ನಿಸಿತು., ಮೃಗೀಯ ಕೋಪ ತಳಮಳಿಸುತಿತ್ತು.

ಗೇಟಿನ ಹತ್ತಿರ ಯೋಚನೆ ಮಾಡುತ್ತ ನಿಂತ. ಸುಮ್ಮನೆ ತೋರಿಕೆಗಾಗಿ ಹೊರಕ್ಕೆ ಹೋಗುವುದು, ಬೀದಿ ಸುತ್ತುವುದು ಯಾಕೆ ಎಂದು ಮನಸ್ಸು ಪ್ರತಿಭಟಿಸಿತು. ಮನೆಗೆ ವಾಪಸ್ಸು ಹೋಗವುದಕ್ಕೆ ಇನ್ನೂ ಜೋರಾಗಿ ಪ್ರತಿಭಟನೆ ಮಾಡಿತು. ‘ಇಂಥಾ ಅವಕಾಶ, ಕಳಕೊಳ್ಳುವುದು ಅಂದರೆ…’ ಗೊಣಗುತ್ತ ಗೊತ್ತು ಗುರಿ ಇಲ್ಲದೆ ಗೇಟಿನ ಹತ್ತಿರವೇ ನಿಂತ. ಕಾವಲುಗಾರನ ಕೋಣೆಯ ಎದುರಿಗೇ ಇದ್ದ. ಅದೂ ಬಾಗಿಲು ತೆಗೆದಿತ್ತು. ಇದ್ದಕಿದ್ದ ಹಾಗೆ ಮೆಟ್ಟಿಬಿದ್ದ. ಕಾವಲುಗಾರನ ಕೋಣೆಯಲ್ಲಿ, ಎರಡೇ ಹೆಜ್ಜೆ ದೂರದಲ್ಲಿ, ಬೆಂಚಿನ ಕೆಳಗೆ, ಬಲಭಾಗದಲ್ಲಿ, ಹೊಳೆಯುತ್ತಿರುವುದೇನೋ ಕಂಡಿತ್ತು. ಸುತ್ತಲೂ ನೋಡಿದ. ಯಾರೂ ಇಲ್ಲ.

ತುದಿಗಾಲಲ್ಲಿ ನಡೆಯುತ್ತ ಕಾವಲುಗಾರನ ಕೋಣೆಗೆ ಹೋದ. ಸಣ್ಣನೆ ದನಿಯಲ್ಲಿ ಅವನನ್ನು ಕೂಗಿದ. ‘ನಿಜ. ಮನೆಯಲ್ಲಿಲ್ಲ. ಇಲ್ಲೇ ಎಲ್ಲೋ ಹೋಗಿರಬೇಕು. ಅಂಗಳದಲ್ಲಿರಬೇಕು. ಬಾಗಿಲು ತೆಗೆದೇ ಇದೆ,’ ಅಂದುಕೊಂಡ. ಖಂಡಿತ ಕೊಡಲಿ ಅದು. ಧಾವಿಸಿದ. ಬೆಂಚಿನ ಕಳಗೆ ಎರಡು ಸೌದೆ ತುಂಡುಗಳ ಮಧ್ಯೆ ಇತ್ತು. ಎತ್ತಿಕೊಂಡ, ಕೋಟಿನೊಳಗಿನ ಕುಣಿಕೆಗೆ ಸಿಕ್ಕಿಸಿಕೊಂಡ, ಲಾಂಗ್ ಕೋಟಿನ ಎರಡೂ ಜೇಬಿನಲ್ಲಿ ಕೈ ಇಟ್ಟುಕೊಂಡ. ಹೊರಟ. ಯಾರೂ ನೋಡಿರಲಿಲ್ಲ! ‘ಬುದ್ಧಿ ಕೈ ಕೊಟ್ಟರೂ ಸೈತಾನ ಸಹಾಯಮಾಡಿದ!’ ಅಂದುಕೊಳ್ಳುತ್ತ ವಕ್ರವಾಗಿ ನಕ್ಕ. ಈ ಘಟನೆಯಿಂದ ಮನಸ್ಸಿಗೆ ಚೈತನ್ಯ ಬಂದಿತ್ತು.

ನಿಶ್ಶಬ್ದವಾಗಿ, ಶಾಂತವಾಗಿ, ಯಾರಲ್ಲೂ ಸಂಶಯ ಹುಟ್ಟದ ಹಾಗೆ, ಆತುರವಿಲ್ಲದೆ ನಡೆದ. ಎದುರಿಗೆ ಬಂದವರ ಮುಖ ನೋಡಲೂ ಇಲ್ಲ. ಯಾರೂ ತನ್ನ ಗುರುತು ಹಿಡಿಯದ ಹಾಗೆ ತಾನೂ ಯಾರ ಮುಖವನ್ನೂ ನೋಡದೆ ಇರುವ ಹಾಗೆ ನಡೆದ. ಇದ್ದಕಿದ್ದ ಹಾಗೆ ಹ್ಯಾಟು ಜ್ಞಾಪಕ ಬಂದಿತು. ‘ಅಯ್ಯೋ ದೇವರೇ! ಎರಡು ದಿನದ ಹಿಂದೆ ದುಡ್ಡಿತ್ತು. ಇದರ ಬದಲಾಗಿ ಟೋಪಿ ತೆಗೆದುಕೊಳ್ಳಬಹುದಾಗಿತ್ತು!’ ತನ್ನನ್ನೇ ಬೈದುಕೊಂಡ.

ಯಾವುದೋ ಅಂಗಡಿಯೊಳಗಿನ ಗಡಿಯಾರ ಏಳುಗಂಟೆ ಹತ್ತು ನಿಮಿಷ ತೋರುವುದನ್ನು ಕಣ್ಣಂಚಿನಲ್ಲೇ ಗಮನಿಸಿದ. ಬೇಗ ಹೋಗಬೇಕು. ಮನೆಯ ಹಿತ್ತಿಲಿನಿಂದ ಹೋಗುವುದಕ್ಕೆ ಇಡೀ ಕಟ್ಟಡ ಸುತ್ತಿ ಬರಬೇಕು.

ಇದನ್ನೆಲ್ಲ ಕಲ್ಪನೆಯಲ್ಲೇ ಚಿತ್ರಿಸಿಕೊಂಡಿದ್ದಾಗ ‘ಇದೆಲ್ಲ ನಡೆಯುವಾಗ ನನಗೆ ಬಹಳ ಭಯವಾಗಿರತ್ತೆ,’ ಅಂದುಕೊಂಡಿದ್ದ. ಈಗ ಬಹಳ ಭಯ ಅಲ್ಲ. ಭಯವೇ ಇರಲಿಲ್ಲ. ಆ ಕ್ಷಣದಲ್ಲಿ ಸಂಬಂಧವೇ ಇರದ ಯೋಚನೆಗಳು ಬರುತಿದ್ದವು. ‘ಯೂಸುಪೋವ್ ಗಾರ್ಡನ್ ದಾಟುತ್ತ, ‘ಇಲ್ಲೆಲ್ಲ ಎತ್ತರದ ಫೌಂಟನ್ ಜೋಡಿಸಿದರೆ ಹೇಗೆ? ಸಾರ್ವಜನಿಕ ರಸ್ತೆಯಲ್ಲೆಲ್ಲ ತಂಪು ಗಾಳಿ ಹರಡೀತು,’ ಅಂದುಕೊಂಡ. ಈ ಬೇಸಗೆ ಗಾರ್ಡನ್ ಅನ್ನು ಫೀಲ್ಡ್ ಆಫ್ ಮಾರ್ಸ್ ನಿಂದ ಮಿಖಾಯ್ಲೋವ್ಸ್ಕಿ ಪ್ಯಾಲೇಸ್‌ ವರೆಗೆ ವಿಸ್ತರಿಸಿದರೆ ಇಡೀ ನಗರಕ್ಕೇ ಒಳ್ಳೆಯದು,’ ಅನ್ನಿಸಿತು. ಆ ಕ್ಷಣದಲ್ಲಿ ಇನ್ನೊಂದು ಯೋಚನೆ. ‘ಎಲ್ಲ ದೊಡ್ಡ ನಗರಗಳಲ್ಲಿ ಜನ ಅದು ಹೇಗೋ ಉದ್ಯಾನ, ಫೌಂಟನ್ನು ಏನೂ ಇಲ್ಲದ ಗಲೀಜು, ವಾಸನೆ ತುಂಬಿದ ಪ್ರದೇಶದಲ್ಲೇ ವಾಸಮಾಡಲು ಬಯಸುತ್ತಾರಲ್ಲಾ ಯಾಕೆ.’ ಅನ್ನುವ ಪ್ರಶ್ನೆ ಮೂಡಿತು. ಹೇ ಮಾರ್ಕೆಟ್ಟಿನಲ್ಲಿ ನಡೆದಾಡುತಿದ್ದ ನೆನಪು ಬಂತು. ಒಂದು ಕ್ಷಣ ಎಚ್ಚರ ಮೂಡಿತು. ‘ನಾನ್ಸೆನ್ಸ್. ಯೋಚನೆ ಮಾಡುವುದಕ್ಕೆ ಬೇರೆ ಏನೂ ಇಲ್ಲ ಅನ್ನುವ ಹಾಗೆ ಇದೇನು ಮಾಡತಿದ್ದೇನೆ!’ ಅಂದುಕೊಂಡ.

‘ಮರಣದಂಡನೆಗೆ ಕರಕೊಂಡು ಹೋಗುವಾಗ ಹೀಗೇ ಅಂತ ಕಾಣತ್ತೆ. ಕಣ್ಣಿಗೆ ಕಂಡದ್ದನ್ನೆಲ್ಲ ಯೋಚನೆ ಮಾಡಿಕೊಂಡು ಹೋಗತಾರೇನೋ!’ ಅನ್ನುವ ವಿಚಾರ ಮಿಂಚಿತು. ಅದನ್ನು ತಕ್ಷಣವೇ ಒರೆಸಿ ಹಾಕಿದ. ಆ ಮನೆಯ ಹತ್ತಿರ ಬಂದಿದ್ದ. ಇಗೋ ಮನೆ, ಇಗೋ ಗೇಟು. ಎಲ್ಲೋ ಗಡಿಯಾರ ಒಂದು ಬಾರಿ ಬಡಿಯಿತು. ‘ಆಗಲೇ ಏಳೂವರೆಯೇ? ಇರಲಾರದು. ಗಡಿಯಾರ ಮುಂದಿರಬೇಕು!’ ಅಂದುಕೊಂಡ.

ಅದೃಷ್ಟ. ಗೇಟಿನ ಹತ್ತಿರ ಎಲ್ಲ ಸುಸೂತ್ರ ಸಾಗಿತು. ರಾಸ್ಕೋಲ್ನಿಕೋವ್ ಕಮಾನಿನ ಅಡಿಯಲ್ಲಿ ಹೆಜ್ಜೆ ಹಾಕುತಿದ್ದಾಗ ಯಾರೋ ಪ್ಲಾನು ಮಾಡಿದ್ದರೋ ಅನ್ನುವ ಹಾಗೆ ಹುಲ್ಲಿನ ಗಾಡಿಯೊಂದು ಅವನಿಗಿಂತ ಮುಂದಾಗಿ ಅದೇ ಗೇಟು ದಾಟುತ್ತ, ಅವನನ್ನು ಪೂರಾ ಮರೆಮಾಡಿತ್ತು. ಗಾಡಿ ಅಂಗಳ ತಲುಪಿದ ತಕ್ಷಣ ಅವನು ಚುರುಕಾಗಿ ಬಲಕ್ಕೆ ಜಾರಿಕೊಂಡ. ಗಾಡಿಯ ಇನ್ನೊಂದು ಬದಿಯಲ್ಲಿ ಕಿರುಚಾಟ, ಮಾತು, ವಾದ ಕೇಳುತಿತ್ತು. ಅವನನ್ನು ಯಾರೂ ಗಮನಿಸಲಿಲ್ಲ. ಅವನ ಎದುರಿಗೂ ಯಾರೂ ಬರಲಿಲ್ಲ. ಅಂಗಳಕ್ಕೆ ಮುಖಮಾಡಿದ್ದ ಎಷ್ಟೋ ಕಿಟಕಿಗಳು ಆ ಹೊತ್ತಿನಲ್ಲಿ ತೆರೆದೇ ಇದ್ದವು. ಅವನು ತಲೆ ಎತ್ತಲಿಲ್ಲ. ಎತ್ತುವ ಶಕ್ತಿ ಇರಲಿಲ್ಲ. ಮುದುಕಿಯ ಮನೆಯ ಮಹಡಿ ಮೆಟ್ಟಿಲು ಹತ್ತಿರದಲ್ಲೇ… ಗೇಟಿನ ಬಲಕ್ಕೆ… ಆಗಲೇ ಮೆಟ್ಟಿಲ ಮೇಲಿದ್ದ…

ಉಸಿರು ಎಳಕೊಂಡ. ಬಡಿದುಕೊಳ್ಳುತಿದ್ದ ಎದೆಯ ಮೇಲೆ ಕೈ ಇಟ್ಟುಕೊಂಡ. ಕೊಡಲಿ ತಡಕಿ ನೋಡಿದ. ಅತ್ತಿತ್ತ ಸರಿಸಿ ನೆಟ್ಟಗೆ ಇರಿಸಿಕೊಂಡ. ಹುಷಾರಾಗಿ, ನಿಶ್ಶಬ್ದವಾಗಿ ಮೆಟ್ಟಿಲು ಏರಿದ. ಆಗಾಗ ನಿಂತು ಆಲಿಸಿದ. ಮಹಡಿ ಮೆಟ್ಟಿಲು ಕೂಡ ಬಲುಮಟ್ಟಿಗೆ ನಿರ್ಜನವಾಗಿದ್ದವು. ಎಲ್ಲ ಬಾಗಿಲೂ ಮುಚ್ಚಿದ್ದವು. ಯಾರೂ ಎದುರಿಗೆ ಬರಲಿಲ್ಲ. ನಿಜ. ಎರಡನೆಯ ಅಂತಸ್ತಿನಲ್ಲಿ ಒಂದು ಖಾಲಿ ಅಪಾರ್ಟ್ಮೆಂಟು ಬಾಗಿಲು ತೆರೆದುಕೊಂಡಿತ್ತು. ಕೆಲಸಗಾರರು ಬಣ್ಣ ಬಳಿಯುತಿದ್ದರು. ಅವರು ತಲೆ ಎತ್ತಿ ಕೂಡ ನೋಡಲಿಲ್ಲ. ನಿಂತ, ಒಂದು ಕ್ಷಣ. ನಡೆದ. ‘ಯಾರೂ ಇಲ್ಲದಿದ್ದರೆ ಚೆನ್ನಾಗಿರುತಿತ್ತು. ಪರವಾಗಿಲ್ಲ. ಇನ್ನೂ ಎರಡು ಮಹಡಿ ಮೇಲಕ್ಕೆ ಹೋಗಬೇಕು,’ ಅಂದುಕೊಂಡ.

ಅದೇ ನಾಲ್ಕನೆ ಮಹಡಿ. ಅದೇ ಬಾಗಿಲು. ಖಾಲಿ ಇದ್ದ ಅಪಾರ್ಟ್ಮೆಂಟಿನ ಮುಂದೆ ನಿಂತಿದ್ದ. ಮುದುಕಿಯ ಮನೆಯ ನೇರ ಕೆಳಗೆ ಮೂರನೆಯ ಮಹಡಿಯಲ್ಲಿದ್ದ ಮನೆಯಲ್ಲಿ ಯಾರಾದರೂ ಇದ್ದ ಸುಳಿವು ಇರಲಿಲ್ಲ. ಬಾಗಿಲಲ್ಲಿದ್ದ ಹೆಸರಿನ ಬೋರ್ಡು ಇರಲಿಲ್ಲ. ಅಂದರೆ ಮನೆ ಖಾಲಿಮಾಡಿದ್ದರು. ಉಸಿರಾಡುವುದು ಕಷ್ಟವಾಗುತಿತ್ತು. ‘ಹೊರಟುಬಿಡಲೇ?’ ಅನ್ನುವ ಯೋಚನೆ ಮನಸ್ಸಿನಲ್ಲಿ ಹಾದು ಹೋಯಿತು. ಆ ಮಾತಿಗೆ ಉತ್ತರಕೊಟ್ಟುಕೊಳ್ಳಲಿಲ್ಲ. ಮುದುಕಿಯ ಮನೆಯ ಬಾಗಿಲಲ್ಲಿ ನಿಂತು ಕೇಳಿಸಿಕೊಂಡ. ಪೂರಾ ನಿಶ್ಶಬ್ದ. ಯಾರಾದರೂ ಮೆಟ್ಟಿಲು ಹತ್ತುತ್ತಿದ್ದಾರೋ? ಗಮನವಿಟ್ಟು ಆಲಿಸಿದ. ಕೊನೆಯ ಸಾರಿ ಸುತ್ತಲೂ ನೋಡಿದ. ನೆಟ್ಟಗೆ ನಿಂತ. ಇನ್ನೊಂದು ಸಾರಿ ಕೊಡಲಿ ಮುಟ್ಟಿ ನೋಡಿದ. ‘ಬಿಳಿಚಿಕೊಂಡಿದ್ದೇನಾ? ತುಂಬಾ?’ ಎಂದು ಕೇಳಿಕೊಂಡ. ‘ತುಂಬ ಉದ್ರೇಕವಾಗಿದ್ದೇನಾ? ಅವಳಿಗೆ ಅನುಮಾನ ಹೆಚ್ಚು… ಇನ್ನೊಂದು ಸ್ವಲ್ಪ ಕಾದು, ಎದೆ ದಬದಬ ಕಡಮೆ ಅಗಲಿ, ತಾಳು!… ಕಡಮೆ ಆಗಲ್ಲ. ಬೇಕೆಂದೇ ಜೋರು ಜೋರಾಗಿ ಬಡಿದುಕೊಳ್ಳುತ್ತಿದೆ. ತಡೆದುಕೊಳ್ಳಲಾರೆ!’ ನಿಧಾನವಾಗಿ ಕರೆಗಂಟೆ ಒತ್ತಿದ. ಗಂಟೆ ಬಾರಿಸಿತು. ಅರ್ಧನಿಮಿಷದ ನಂತರ ಇನ್ನೂ ಜೋರಾಗಿ ಒತ್ತಿದ.

ಸದ್ದಿಲ್ಲ. ಹೀಗೆ ಗಂಟೆ ಬಾರಿಸುತ್ತಲೇ ಇರುವುದು ಅರ್ಥವಿಲ್ಲದ ಕೆಲಸ. ಮುದುಕಿ ನಿಜವಾಗಲೂ ಮನೆಯಲ್ಲಿದಾಳೆ. ಒಬ್ಬಳೇ. ಅನುಮಾನದವಳು. ಅವಳ ಅಭ್ಯಾಸ ತಕ್ಕಮಟ್ಟಿಗೆ ಗೊತ್ತಿತ್ತು ಅವನಿಗೆ. ಬಾಗಿಲಿಗೆ ಕಿವಿ ಇಟ್ಟು ಆಲಿಸಿದ. ಕಿವಿ ಚುರುಕಾಗಿತ್ತೋ (ಇರಲಾರದು) ಅಥವಾ ಸದ್ದೇ ಜೋರಾಗಿತ್ತೋ? ಬಾಗಿಲ ಚಿಲಕ ಹುಷಾರಾಗಿ ತೆಗೆಯುತ್ತಿದ್ದಾಳೆ. ಬಾಗಿಲ ಆ ಬದಿಯಲ್ಲಿ ಬಟ್ಟೆಯ ಸರಬರ. ಹೊರಗೆ ಅವನು ಮಾಡುತಿದ್ದ ಹಾಗೇ ಒಳಗೆ ಅವಳೂ ಬಾಗಿಲಿಗೆ ಕಿವಿ ಇಟ್ಟು ನಿಂತಿದ್ದಾಳೋ…

ಬೇಕೆಂದೇ ಸರಿದಾಡಿದ. ಬಚ್ಚಿಟ್ಟುಕೊಳ್ಳುವವನಲ್ಲ ಅನ್ನುವುದು ತೋರಿಸುವ ಹಾಗೆ ಜೋರಾಗಿ ಏನೋ ಗೊಣಗಿದ. ಮೂರನೆಯ ಬಾರಿ, ಆತುರವಿಲ್ಲದೆ, ಗಂಭೀರವಾಗಿ ಕರೆಗಂಟೆ ಬಾರಿಸಿದ. ಇದನ್ನೆಲ್ಲ ಆಮೇಲೆ ಸ್ಪಷ್ಟವಾಗಿ ವಿವರವಾಗಿ ಮನಸ್ಸಿಗೆ ತಂದುಕೊಳ್ಳುವಾಗ ಅವನಿಗೆ ಆ ಕ್ಷಣವು ಅನಂತಕಾಲದವರೆಗೆ ಹಿಗ್ಗಿದೆ ಅನ್ನಿಸುತಿತ್ತು. ‘ನನ್ನ ಬುದ್ಧಿಗೆ ಮೋಡ ಕವಿಯುತಿದ್ದಾಗ, ನನಗೆ ಮೈಯೇ ಇಲ್ಲ ಅನಿಸುತಿದ್ದಾಗ ಇಂಥ ಜಾಣತನ ಅದೆಲ್ಲಿಂದ ಬಂತು!’ ಅಂದುಕೊಳ್ಳುತಿದ್ದ. ಒಂದು ಕ್ಷಣ ಕಳೆಯಿತು. ಚಿಲಕ ತೆಗೆಯುವ ಸದ್ದು ಕೇಳಿಸಿತು.

(ಸಾರಾಂಶ: ಕೊಲೆಯ ಯೋಚನೆ ಹುಟ್ಟಿದ್ದು)

ರಾಸ್ಕೋಲ್ನಿಕೋವ್ ಮನಸಿಗೆ ಲೇವಾದೇವಿ ಮುದುಕಿ ಅಲ್ಯೋನಾ ಇವಾನೋವ್ನಾಳನ್ನು ಕೊಲ್ಲುವ ಯೋಚನೆ ಬಂದದ್ದು ಹೇಗೆ ಅನ್ನುವುದನ್ನು ನಿರೂಪಕ ಹೇಳುತ್ತಾನೆ. ಅವಳನ್ನು ಕಂಡ ತಕ್ಷಣ ಅವನ ಮನಸಿನಲ್ಲಿ ಅಸಹ್ಯ ಹುಟ್ಟಿತ್ತು, ಆಮೇಲೆ ಹೆಂಡದಂಗಡಿಯಲ್ಲಿರುವಾಗ ಅವಳು ಜನರ ರಕ್ತ ಹೀರುತ್ತಾಳೆ, ಅವಳನ್ನು ಕೊಂದು ಅವಳ ಆಸ್ತಿ ಬಡವರಿಗೆ ಹಂಚಿದರೆ ಒಳ್ಳೆಯದು ಅನ್ನುವ ಮಾತು ಕೇಳಿದ; ಮನಸ್ಸು ಮಾಡಿದ. ಮಾರನೆಯ ದಿನ ಸಂಜೆ ಆರು ಗಂಟೆಯವರೆಗೆ ಎಚ್ಚರವಿರದ ನಿದ್ದೆ ಆವರಿಸುತ್ತದೆ. ತಟ್ಟನೆದ್ದವನು ಆತುರಾತುರವಾಗಿ ಸಿದ್ಧತೆ ಮಾಡಿಕೊಂಡು, ಏಳೂವರೆಯ ಹೊತ್ತಿಗೆ ಮುದುಕಿಯ ಮನೆಯ ಬಾಗಿಲಿಗೆ ಬರುತ್ತಾನೆ.