“ಈ ಪ್ಲ್ಯಾನ್ ಚೆನ್ನಾಗಿಯೇ ಇದೆ, ಮೊನ್ನೆ ಪ್ಲೇ ಗ್ರೌಂಡಿನಲ್ಲಿ ಪದ್ಮ ಸಿಕ್ಕಿದ್ದಳು, ಅವರ ಮಗಳನ್ನು ಕೂಡ ಇಂಡಿಯಾದಲ್ಲೇ ಬಿಟ್ಟು ಬಂದಿದ್ದಾರಂತೆ. ಅವಳು ಯಾವುದೋ ಕೋರ್ಸ್ ಕೂಡ ಮಾಡಿಕೊಂಡು, ಈಗ ಕೆಲಸಕ್ಕೆ ಟ್ರೈ ಮಾಡುತ್ತಿದ್ದಾಳಂತೆ”, ವೆಂಕಟ್ ಕೊಟ್ಟ ಹಾಲಿನ ಲೋಟ ತೆಗೆದುಕೊಳ್ಳುತ್ತ ಮುಂದುವರಿಸಿ “ಮುಂದಿನ ತಿಂಗಳು ನನಗೆ ಪ್ರಮೋಷನ್ ಬರುವುದಿದೆ, ಈಗ ನಾನು ಕೆಲಸ ಬಿಟ್ಟರೆ ಹೇಗೆ ಎಂದು ಯೋಚಿಸುತ್ತ ನಾನೇ ನಿಮಗೆ ಈ ಐಡಿಯಾ ಹೇಳೋಣವೆಂದುಕೊಂಡೆ.”
ಎಂ.ಜಿ. ಶುಭಮಂಗಳ ಅನುವಾದಿಸಿದ ನಕ್ಷತ್ರಂ ವೇಣುಗೋಪಾಲ್ ಬರೆದ ತೆಲುಗು ಕಥೆ ʼವಾತ್ಸಲ್ಯʼ

 

ವೆಂಕಟ್ ಹತ್ತು ವರ್ಷದಿಂದ ಅಮೆರಿಕದಲ್ಲಿ ಬಂದು ನೆಲೆಸಿರುವ ಒಬ್ಬ ಸಾಮಾನ್ಯ ಐ.ಟಿ. ಎನ್.ಆರ್.ಐ. ಪ್ರಸ್ತುತ ವರ್ಜೀನಿಯಾದ ಆಶ್ಬರ್ನ್ ಗ್ರಾಮದಲ್ಲಿ ಉದ್ಯೋಗ. ಕಾಂಟ್ರ್ಯಾಕ್ಟ್ ಉದ್ಯೋಗವಾದ್ದರಿಂದ ಅನಿವಾರ್ಯವಾಗಿ ಮೂರು, ನಾಲ್ಕು ತಿಂಗಳಿಗೊಮ್ಮೆ ಉದ್ಯೋಗ, ಊರು ಬದಲಾಯಿಸಬೇಕಾದ್ದೇ. ಉದ್ಯೋಗಕ್ಕಾಗಿ ಬಹಳ ಸಲ ನ್ಯೂಯಾರ್ಕ್, ಚಿಕಾಗೊ, ಡೆಟ್ರಾಯಿಟ್ ನಗರಗಳಿಗೆ ಅಲೆದಾಡಬೇಕಿತ್ತು. ಸೋಮವಾರ ಹೋದರೆ ಮತ್ತೆ ಶುಕ್ರವಾರ ಮನೆಗೆ ಬರುವುದು, ಕೆಲವೊಮ್ಮೆ ವಾರಾಂತ್ಯದಲ್ಲಿ ಮನೆಗೆ ಬರುವುಕ್ಕೂ ಆಗುವುದಿಲ್ಲ.

ವೆಂಕಟ್ ಹೆಂಡತಿ ರಾಜಿ ವಾಷಿಂಗ್ಟನ್ ಡಿಸಿಯಲ್ಲಿ ಐಟಿ ಉದ್ಯೋಗಿ. ಎಲ್ಲರಂತೆ ಎರಡು, ಮೂರು ಲೋನ್‍ ನಲ್ಲಿ ತೆಗೆದುಕೊಂಡಿರುವ ಒಂದು ದೊಡ್ಡ ಮನೆ. ಒಬ್ಬರ ಸಂಪಾದನೆ ಕೇವಲ ಮನೆಯ ಮಾರ್ಟ್‍ಗೇಜ್ ಕಟ್ಟಲು ಸರಿಹೋಗುತ್ತಿದ್ದರೆ, ಅಕ್ಕಪಕ್ಕದವರ ಮೇಲಿನ ಸ್ಪರ್ಧೆಗೆಂಬಂತೆ ಕೊಂಡ ಬಿಎಂಡಬ್ಲ್ಯೂ ವ್ಯಾನ್, ಇನ್ನೊಂದು ಹೋಂಡ ಕಾರು. ವಾರವಿಡೀ ಇಬ್ಬರದೂ ಒಂಟಿ ಜೀವನವೇ, ಇಬ್ಬರೂ ಶುಕ್ರವಾರಕ್ಕಾಗಿ ಹಾತೊರೆಯುತ್ತಾರೆ. ರಾಜಿ ಈಗ ಎಂಟು ತಿಂಗಳ ಗರ್ಭಿಣಿ. ಅವಳಿಗೀಗ ಮನೆಕೆಲಸ, ಅಡುಗೆಕೆಲಸ ಮಾಡಿಕೊಳ್ಳುವುದು ಕಷ್ಟವಾಗುತ್ತಿದೆ. ಯಾವಾಗ ವೆಂಕಟ್ ಬರುತ್ತಾನಾ ಎಂದು ಕಾಯುತ್ತಿರುತ್ತಾಳೆ.

ಶುಕ್ರವಾರ, ಸಂಜೆ 7 ಗಂಟೆ, ವೆಂಕಟ್ ನ್ಯೂಯಾರ್ಕಿನ ತನ್ನ ಕ್ಲಯಿಂಟ್ ಆಫೀಸಿನಲ್ಲಿ ಲ್ಯಾಪ್‍ಟಾಪ್ ಆಫ್ ಮಾಡಿ 8 ಗಂಟೆ ಫ್ಲೈಟ್‍ ಗೆ ಹೊರಡಲು ಬ್ಯಾಗ್ ಸಿದ್ಧಪಡಿಸಿಕೊಳ್ಳುತ್ತಿದ್ದಾಗ ಮ್ಯಾನೇಜರ್, “ವೆಂಕಟ್, ಕ್ಲಯಿಂಟ್‍ ಗೆ ಕಳೆದ ತಿಂಗಳ ಎಲ್ಲ ಸೇಲ್ಸ್ ರಿಪೋರ್ಟ್ ಮತ್ತು ಪ್ರಾಫಿಟ್ ಸ್ಟೇಟ್‍ಮೆಂಟ್ ಬೇಕಂತೆ, ಬಹಳ ಅರ್ಜೆಂಟ್, ಕ್ಯಾನ್ ಯು ಪ್ಲೀಸ್ ಸೆಂಡ್!” ಎನ್ನುತ್ತ ಇವನ ಉತ್ತರಕ್ಕೂ ಕಾಯದೆ ಫೋನ್ ಕಟ್ ಮಾಡಿದ. ಕನ್ಸಲ್ಟೆಂಟ್ ಜೀವನವೇ ಹಾಗೆ, ನಿಗದಿತ ಸಮಯವೆಂಬುದಿರುವುದಿಲ್ಲ. ಕೇಳಿದ್ದನ್ನು ಕೂಡಲೇ ಸಬ್‍ಮಿಟ್ ಮಾಡಬೇಕಾದ್ದೇ! ಏನೂ ಮಾಡಲಾಗದೆ, ಏರ್‍ಲೈನಿಗೆ ಫೋನ್ ಮಾಡಿ ಫ್ಲೈಟ್ ರೀಶೆಡ್ಯೂಲ್ ಮಾಡಿ, ಅಸಹನೆಯಿಂದ ಬ್ಯಾಗಿನಲ್ಲಿಟ್ಟಿದ್ದ ಲ್ಯಾಪ್‍ಟಾಪ್ ಮತ್ತೆ ತೆಗೆದ. ಹಿಂಜರಿಕೆಯಿಂದಲೇ ರಾಜಿಗೆ ಫೋನ್ ಮಾಡಿ “ಹಾಯ್ ಹನಿ.. ಸಾರಿ, ಮೈ ಫ್ಲೈಟ್ ಗಾಟ್ ಡಿಲೇಡ್, ಸ್ವಲ್ಪ ಲೇಟಾಗುತ್ತದೆ. ಅಷ್ಟರೊಳಗೆ ಸ್ವಲ್ಪ ಆಫೀಸ್ ಕೆಲಸ ಕೂಡ ಮುಗಿಸುತ್ತೇನೆ.. ನಾನು ಡಿನ್ನರ್ ಮುಗಿಸುತ್ತೇನೆ, ನನಗೋಸ್ಕರ ಕಾಯಬೇಡ. ನಿನ್ನ ಆರೋಗ್ಯ ಜೋಪಾನ, ಮುಖ್ಯವಾಗಿ ನಮ್ಮ ಮಗುವಿಗೋಸ್ಕರ”.

ರಾಜಿ ಬಹಳ ಬೇಸರದಿಂದ “ಮತ್ತೆ ಫ್ಲೈಟ್ ಲೇಟಾ? ಈಗ ನೀವು ಇಲ್ಲಿ ಇರಬೇಕಾದ್ದು ಎಷ್ಟು ಅಗತ್ಯ ಗೊತ್ತಾ ವೆಂಕಟ್? ನೀವು ಡಿನ್ನರ್‍ ಗೆ ಹೋಗೋಣ ಎಂದಿದ್ದಕ್ಕೆ ನಾನು ಅಡುಗೆ ಕೂಡ ಮಾಡಲಿಲ್ಲ. ಈಗೇನೋ ಫ್ಲೈಟ್ ಡಿಲೇ, ನೀವು ರಾತ್ರಿ ಹನ್ನೆರಡು ಗಂಟೆಯಾದರೂ ಬರುವುದಿಲ್ಲ!”

“ಸಾರಿ ಚಿನ್ನಾ. ಎಲ್ಲ ಬಂದಮೇಲೆ ಮಾತನಾಡೋಣ, ಯು ನೋ.. ಐ ವಿಲ್ ಆರ್ಡರ್ ಪಿಜ್ಜಾ ಫಾರ್ ಯು. ನಮ್ಮ ಮಗು ಎಂಜಾಯ್ ಮಾಡುತ್ತದೆ. ಕ್ಯಾಬ್ ಬಂದಹಾಗಿದೆ. ಗಾಟ್ ಟು ಗೋ” ಎಂದು ಕಾಲ್ ಎಂಡ್ ಮಾಡಿದ ವೆಂಕಟ್. ರಾಜಿ ಕೋಪದಿಂದ ಕಾಲ್ ಕಟ್ ಮಾಡಿದಳು.

ತನ್ನ ಕೆಲಸ ಮುಗಿಸಿಕೊಂಡು ರಾತ್ರಿ ಹನ್ನೆರಡು ಗಂಟೆಗೆ ವರ್ಜೀನಿಯಾದ ತನ್ನ ಮನೆಗೆ ಸೇರಿದ ವೆಂಕಟ್. ರಾಜಿ ತನ್ನ ಐಪಾಡ್ ಬ್ರೌಸ್ ಮಾಡುತ್ತಿದ್ದಾಳೆ, ಬಹಳ ಕೋಪದಿಂದಿದ್ದಾಳೆ. ವೆಂಕಟ್ ಬಾಲಸುಟ್ಟ ಬೆಕ್ಕಿನಂತೆ ನಿಧಾನವಾಗಿ ರಾಜಿಯತ್ತ ಹೆಜ್ಜೆಯಿಡುತ್ತ “ಇನ್ನೂ ಮಲಗಲಿಲ್ಲವಾ ಚಿನ್ನಾ! ನೀನು ಮಲಗು ಎಂದು ಹೇಳಿದ್ದೆನಲ್ಲವಾ. ಜಸ್ಟ್ ಎ ಮಿನಿಟ್ ನಾನು.. ಬಟ್ಟೆ ಬದಲಾಯಿಸಿಕೊಂಡು ಬರುತ್ತೇನೆ” ಎನ್ನುತ್ತ ಫ್ರೆಶ್‍ ಅಪ್ ಆಗಿ ಬಂದು ಪ್ರೀತಿಯಿಂದ ರಾಜಿಯನ್ನು ಬರಸೆಳೆದು “ಇಷ್ಟು ಹೊತ್ತಾದರೂ ಮಲಗದಿದ್ದರೆ ಹೇಗೆ ರಾಜಿ?” ಮೆಲ್ಲಗೆ ಕೇಳಿದ.

“ಮಲಗು.. ಮಲಗು ಎಂದರೆ ನಿದ್ದೆ ಹೇಗೆ ಬರುತ್ತದೆ? ವಾರವಿಡೀ ಕಾಯುವುದು ಈ ಎರಡು ದಿನಗಳಾದರೂ ಒಟ್ಟಿಗೆ ಇರಬಹುದು ಎಂದೇ ಅಲ್ಲವಾ” ವೆಂಕಟ್ ಕೈಯನ್ನು ದೂರ ತಳ್ಳಿದಳು ರಾಜಿ.

“ಹೌದು. ಆದರೆ, ನೀನು ಇಷ್ಟು ಹೊತ್ತು ಎಚ್ಚರವಾಗಿರುವುದು ನಮ್ಮ ಮಗುವಿಗೆ ಒಳ್ಳೆಯದಲ್ಲ” ರಾಜಿಯ ಹೊಟ್ಟೆಯತ್ತ ನೋಡುತ್ತ ಹೇಳಿದ ವೆಂಕಟ್.

“ಗೊತ್ತು, ಆದರೆ ಕನ್ಸಲ್ಟಿಂಗ್ ಎಂದುಕೊಂಡು ನೀವೊಂದು ಕಡೆ, ನಾನೊಂದು ಕಡೆ”.

“ಅದೇ.. ನಾನೂ ಪ್ರಯತ್ನಿಸುತ್ತಿದ್ದೇನಲ್ಲವಾ, ಇನ್ನೂ ಸಾಕಷ್ಟು ಉದ್ಯೋಗಕ್ಕೆ ಅಪ್ಲೈ ಕೂಡ ಮಾಡಿದ್ದೀನಿ, ಬಿಲ್ಲಿಂಗ್ ರೇಟ್ ಕೂಡ ಸರಿಯಾಗಿರಬೇಕಲ್ಲವಾ” ಸ್ವಲ್ಪ ಮೆಲ್ಲಗೆ ನುಡಿದ ವೆಂಕಟ್.

“ಮಕ್ಕಳು ಬೇಕೆಂದಾಗ ಇಷ್ಟು ದಿನ ಬ್ಯಾಂಕ್ ಬ್ಯಾಲೆನ್ಸ್ ಅಂತಿದ್ದಿರಿ. ಬ್ಯಾಂಕ್ ಬ್ಯಾಲೆನ್ಸ್ ಇರುವಾಗ ಈಗ ಬಿಲ್ಲಿಂಗ್ ಎನ್ನುತ್ತಿದ್ದೀರ. ನನಗೆ ಈ ವರ್ಷದ ಕೊನೆಗೆ ಪ್ರಮೋಷನ್ ಸಿಗುವ ಹಾಗಿದೆ, ಈಗ ಕೆಲಸ ಬಿಟ್ಟರೆ, ಇಷ್ಟು ದಿನಗಳ ಸರ್ವಿಸ್ ಎಲ್ಲ ವೇಸ್ಟ್ ಆಗುತ್ತದೆ” ಕೋಪದಿಂದ ಹೇಳಿದಳು ರಾಜಿ.

“ನೋಡು ರಾಜಿ, ಈಗ ಮೊದಲಿನಂತಲ್ಲ, ಮಕ್ಕಳನ್ನು ಓದಿಸಲು ಸಾವಿರಾರು ಡಾಲರ್ಸ್ ಕಟ್ಟಬೇಕು, ಅದೇ ಇಂಡಿಯಾದಲ್ಲಿ ಓದಿಸಬೇಕೆಂದರೆ ಸೀಟು ಗಿಟ್ಟಿಸಲು ಕೋಟ್ಯಂತರ ಹಣ ಸುರಿಯಬೇಕು”.

“ನೀವು ಹೇಳುವುದೇನೋ ಸರಿ, ಆದರೆ ನೀವೊಂದು ಕಡೆ, ನಾನೊಂದು ಕಡೆ, ನಾಳೆ ಮಗು ಹುಟ್ಟಿದ ಮೇಲೆ..”? ಪ್ರಶ್ನಾರ್ಥಕವಾಗಿ ನೋಡಿದಳು ರಾಜಿ.

“ನೀನೇನು ಯೋಚನೆ ಮಾಡಬೇಡ! ನನ್ನ ಫ್ರೆಂಡ್ ಗಣೇಶ್ ಅವರ ಮಗನನ್ನು ಅವನ ಅಪ್ಪ-ಅಮ್ಮ ಬಂದಿದ್ದಾಗ ಅವರ ಜೊತೆ ಕಳುಹಿಸಿ ಈಗ ಗಂಡ-ಹೆಂಡತಿ ಇಬ್ಬರೂ ಹಾಯಾಗಿ ಕೆಲಸ ಮಾಡುತ್ತಿದ್ದಾರಂತೆ. ಡೆಲಿವರಿ ಟೈಂಗೆ ನಿಮ್ಮ ಅಪ್ಪ ಅಮ್ಮ ಬರುತ್ತಾರಲ್ಲವಾ, ಆ ಆರು ತಿಂಗಳು ಮಗು ನಿಮ್ಮ ಅಮ್ಮನ ಜೊತೆ ಇದ್ದರೆ ಇಬ್ಬರಿಗೂ ಅಭ್ಯಾಸವಾಗುತ್ತದೆ. ಆಮೇಲೆ ಅವರೊಂದಿಗೆ ಇಂಡಿಯಾಕ್ಕೆ ಕಳುಹಿಸಿದರೆ, ನಿನ್ನ ಕೆಲಸ ನೀನು ಮುಂದುವರಿಸಬಹುದು, ನಿನ್ನ ಪ್ರಮೋಷನ್ ನಿನಗೇ ಇರುತ್ತದೆ. ನಾನು ಕನ್ಸಲ್ಟಿಂಗ್ ಮಾಡಿಕೊಳ್ಳಬಹುದು, ಬೇಬಿ ಸಿಟ್ಟಿಂಗ್ ಗೊಡವೆಯೂ ಇರುವುದಿಲ್ಲ” ಒಂದು ಲೋಟದಲ್ಲಿ ಹಾಲು ಮಿಕ್ಸ್ ಮಾಡಿ ಕೊಡುತ್ತ ಹೇಳಿದ.

ವಾರವಿಡೀ ಇಬ್ಬರದೂ ಒಂಟಿ ಜೀವನವೇ, ಇಬ್ಬರೂ ಶುಕ್ರವಾರಕ್ಕಾಗಿ ಹಾತೊರೆಯುತ್ತಾರೆ. ರಾಜಿ ಈಗ ಎಂಟು ತಿಂಗಳ ಗರ್ಭಿಣಿ. ಅವಳಿಗೀಗ ಮನೆಕೆಲಸ, ಅಡುಗೆಕೆಲಸ ಮಾಡಿಕೊಳ್ಳುವುದು ಕಷ್ಟವಾಗುತ್ತಿದೆ. ಯಾವಾಗ ವೆಂಕಟ್ ಬರುತ್ತಾನಾ ಎಂದು ಕಾಯುತ್ತಿರುತ್ತಾಳೆ.

“ಈ ಪ್ಲ್ಯಾನ್ ಚೆನ್ನಾಗಿಯೇ ಇದೆ, ಮೊನ್ನೆ ಪ್ಲೇ ಗ್ರೌಂಡಿನಲ್ಲಿ ಪದ್ಮ ಸಿಕ್ಕಿದ್ದಳು, ಅವರ ಮಗಳನ್ನು ಕೂಡ ಇಂಡಿಯಾದಲ್ಲೇ ಬಿಟ್ಟು ಬಂದಿದ್ದಾರಂತೆ. ಅವಳು ಯಾವುದೋ ಕೋರ್ಸ್ ಕೂಡ ಮಾಡಿಕೊಂಡು, ಈಗ ಕೆಲಸಕ್ಕೆ ಟ್ರೈ ಮಾಡುತ್ತಿದ್ದಾಳಂತೆ”, ವೆಂಕಟ್ ಕೊಟ್ಟ ಹಾಲಿನ ಲೋಟ ತೆಗೆದುಕೊಳ್ಳುತ್ತ ಮುಂದುವರಿಸಿ “ಮುಂದಿನ ತಿಂಗಳು ನನಗೆ ಪ್ರಮೋಷನ್ ಬರುವುದಿದೆ, ಈಗ ನಾನು ಕೆಲಸ ಬಿಟ್ಟರೆ ಹೇಗೆ ಎಂದು ಯೋಚಿಸುತ್ತ ನಾನೇ ನಿಮಗೆ ಈ ಐಡಿಯಾ ಹೇಳೋಣವೆಂದುಕೊಂಡೆ. ಅಷ್ಟರಲ್ಲಿ ನೀವೇ.. ಅಬ್ಬಾ..” ಗಂಡನ ಯೋಚನೆಯನ್ನು ಸಮರ್ಥಿಸುತ್ತ ಮೆಚ್ಚುಗೆಯ ನೋಟ ಬೀರುತ್ತಿರುವಷ್ಟರಲ್ಲಿಯೇ ಗರ್ಭದಲ್ಲಿ ಮಗುವಿನ ಕದಲುವಿಕೆಯಿಂದ ಸ್ವಲ್ಪ ನೋವಾಗಿ “ಅಬ್ಬಾ.. ಎಂದು ಕೂಗಿದಳು” ರಾಜಿ.

“ಏನಾಯಿತು, ಆರ್ ಯು ಓಕೆ?” ರಾಜಿಯನ್ನು ಹತ್ತಿರ ಸೆಳೆದುಕೊಂಡು ಆತಂಕದಿಂದ ಕೇಳಿದ ವೆಂಕಟ್. “ಊಂ, ಮಗು ಒದೆಯಿತು.. ಈಗಲೇ ಸ್ವಲ್ಪ ಹಾಲು ಬಿತ್ತಲ್ಲವಾ” ಹೊಟ್ಟೆಯನ್ನು ಸವರಿಕೊಂಡು ಹೇಳಿದಳು ರಾಜಿ.

“ಮಗು ನಮ್ಮ ಮಾತು ಕೇಳಿದಂತಿದೆ, ಇಂಡಿಯಾಕ್ಕೆ ಕಳುಹಿಸೋಣವೆಂದುದು ಇಷ್ಟವಿಲ್ಲದೆ ಒದ್ದಂತಿದೆ” ನಗುತ್ತ ಹೇಳಿದ ವೆಂಕಟ್.

ಹೊರಗೆ ಹೇಳಲಾಗದಿದ್ದರೂ ಒಂದು ದೊಡ್ಡ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿ, ಇಬ್ಬರೂ ನಿದ್ದೆಗೆ ಜಾರಿದರು.

******

ಹೈದರಾಬಾದ್, ಆಲ್ವಾಲ್ ಪ್ರಾಂತ್ಯದಲ್ಲಿ ರಾಜಿಯ ಅಮ್ಮನ ಮನೆ. ರಾಜಿಯ ಹತ್ತು ತಿಂಗಳ ಮಗಳು ಪುಟ್ಟ ಹೆಜ್ಜೆಯಿಟ್ಟುಕೊಂಡು ಬಿಕ್ಕಿ ಬಿಕ್ಕಿ ಅಳುತ್ತ.. ಎಲ್ಲ ರೂಮುಗಳಲ್ಲಿ ಓಡಾಡುತ್ತಿದ್ದಾಳೆ.

“ಮಮ್ಮಿ, ಮಮ್ಮಿ, ಎಲ್ಲಿದ್ದೀಯಾ ಮಮ್ಮೀ.. ಡ್ಯಾಡಿ.. ಡ್ಯಾಡೀ.. ಎಲ್ಲಿದ್ದೀಯ ಡ್ಯಾಡೀ.. ಇಬ್ಬರೂ ಕಾಣುತ್ತಿಲ್ಲ? ಅಮ್ಮ ನೀನು ಒಂದು ಕ್ಷಣವೂ ನನ್ನನ್ನು ಬಿಡದೆ ನಾನು ಅತ್ತಾಗೆಲ್ಲ ನಿದ್ದೆಗೆಟ್ಟು ಹಾಲು ಕೊಟ್ಟು ಮಲಗಿಸುತ್ತಿದ್ದೆ. ಇವತ್ತು ಏನಾಗಿದೆ ಮಮ್ಮೀ, ನಾನು ಅಳುತ್ತಿದ್ದರೂ ಹತ್ತಿರ ಬರುತ್ತಿಲ್ಲ, ಇಬ್ಬರೂ ಎಲ್ಲಿ ಹೋಗಿದ್ದೀರಿ? ಡ್ಯಾಡಿ, ನಾನು ಅತ್ತಾಗ ಅಮ್ಮ ಬರುವುದು ಒಂದು ನಿಮಿಷ ತಡವಾದರೂ ಓಡಿ ಬಂದು ಎತ್ತಿಕೊಂಡು ಮುದ್ದಾಡುತ್ತ ಅಮ್ಮನನ್ನು ರೇಗುತ್ತಿದ್ದೆ. ಆದರೆ ಇವತ್ತು ನೀನು ಕೂಡ ಬರುತ್ತಿಲ್ಲ, ಅಮ್ಮನನ್ನು ಬೈಯ್ಯುತ್ತಿಲ್ಲ. ನೀವು ನನಗೆ ದೊಡ್ಡ ದೊಡ್ಡ ಬೊಂಬೆ ತರಲು ಹೋಗಿದ್ದೀರೆಂದು ತಾತ ಹೇಳಿದರು. ಪ್ಲೇ ಗ್ರೌಂಡಿನಲ್ಲಿ ಎಲ್ಲರೂ ಅವರ ಅಮ್ಮ ಅಪ್ಪಂದಿರೊಂದಿಗೆ ಆಡುತ್ತಿದ್ದಾರೆ. ನಾನು ತಾತ, ಅಜ್ಜಿಯೊಂದಿಗೆ ಆಡುತ್ತಿದ್ದರೆ ಎಲ್ಲರೂ ನನ್ನನ್ನು ನೋಡಿ ನಗುತ್ತಿದ್ದಾರೆ. ಇನ್ನು ನಾನು ಯಾವಾಗಲೂ ತಾತ ಅವರೊಂದಿಗೇ ಆಡಿಕೊಳ್ಳಬೇಕಾ? ತಾತ ಆಗಾಗ ಯಾವುದೋ ಕಥೆ ಹೇಳುತ್ತಿದ್ದರೆ ಖುಷಿಯಾಗುತ್ತಿತ್ತು. ನೀವು ಪಕ್ಕದಲ್ಲಿ ಇಲ್ಲದಿರುವಾಗ ಈಗ ಕಥೆ ಬೇಡ ಏನೂ ಬೇಡ ಮಮ್ಮೀ!” ಹುಡುಕುತ್ತ ಎಲ್ಲ ರೂಮುಗಳಲ್ಲಿಯೂ ಅಪ್ಪ ಅಮ್ಮ ಎಲ್ಲಿದ್ದಾರೆಂದು ಸುತ್ತಾಡಿ ಕಡೆಗೆ ತನ್ನ ಪ್ಲೇ ರೂಮಿಗೆ ಹೋದಳು..

ಸುತ್ತಲೂ ರಾಶಿ ಬಿದ್ದ ಬೊಂಬೆಗಳನ್ನು ನೋಡಿ “ಮಮ್ಮೀ, ಡ್ಯಾಡೀ, ನನಗೆ ಈ ಬೊಂಬೆಗಳಾವುದೂ ಬೇಡ, ಫ್ರೆಂಡ್ಸ್ ಕೂಡ ಬೇಡ.. ನನಗೆ ನೀವೇ ಬೇಕು! ನೀವು ಹತ್ತಿರವಿದ್ದರೆ ಸಾಕು, ಇನ್ನು ಯಾವಾಗಲೂ ಬೊಂಬೆ ಬೇಕೆಂದು ಕೇಳುವುದಿಲ್ಲ. ನನ್ನ ಬರ್ತ್‍ಡೇಗೆ ಹೊಸ ಫ್ರಾಕ್ ಕೂಡ ಬೇಡ, ನಾನು ನಿಮ್ಮೊಂದಿಗೇ ಆಡಿಕೊಳ್ಳುತ್ತೇನೆ” ಎರಡು ಬೊಂಬೆ ತೆಗೆದುಕೊಂಡು ದೂರ ಎಸೆದಳು.

“ಮಮ್ಮೀ ಡ್ಯಾಡೀ, ನೀವು ಕಾಣಿಸಿದರೆ ಗಟ್ಟಿಯಾಗಿ ತಬ್ಬಿಕೊಂಡು ಯಾವಾಗಲೂ ಬಿಡದೆ ಹಾಗೇ ಗಟ್ಟಿಯಾಗಿ ಹಿಡಿದುಕೊಳ್ಳಬೇಕೆನಿಸುತ್ತಿದೆ. ನಾನು ಗಲಾಟೆ ಮಾಡುವುದಿಲ್ಲ. ಮಮ್ಮೀ, ಎಲ್ಲಿದ್ದೀಯ ಮಮ್ಮೀ.. ಡ್ಯಾಡಿ ಎಲ್ಲಿದ್ದೀಯ ಡ್ಯಾಡೀ.. ನೀನು ಬಾ ಮಮ್ಮೀ.. ನೀನು ಬಾ ಡ್ಯಾಡೀ.. ಊಂ.. ಊಂ.., ನಾನು ಇಲ್ಲಿ ಇರುವುದಿಲ್ಲ ಮಮ್ಮೀ, ನಾನು ನಿಮ್ಮೊಂದಿಗೇ ಇರುತ್ತೇನೆ. ಊಂ.. ಊಂ..” ಜೋರಾಗಿ ಅಳುತ್ತಿದ್ದಾಳೆ.

******

ರಾಜಿ, ವೆಂಕಟ್ ಗಾಢ ನಿದ್ದೆಯಲ್ಲಿದ್ದಾರೆ. ಬೆಡ್ ರೂಮಿನಲ್ಲಿ ಟೇಬಲ್ ಲೈಟ್ ಬೆಳಗುತ್ತಿದೆ, ಮಗುವಿನ ಅಳುವಿನಿಂದ ಥಟ್ಟನೆ ಎಚ್ಚರಗೊಂಡಳು ರಾಜಿ..

“ನೋ, ನೋ, ಡೋಂಟ್ ಕ್ರೈ ಬೇಬಿ, ಡೋಂಟ್ ಕ್ರೈ.. ಮಮ್ಮಿ, ಡ್ಯಾಡಿ ಇಬ್ಬರೂ ನಿನ್ನೊಂದಿಗೇ ಇರುತ್ತಾರೆ. ನಿನ್ನನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ನೋ.. ಅಳುತ್ತ ಕೂಗುತ್ತಿದ್ದಾಳೆ ರಾಜಿ.

“ರಾಜಿ.. ರಾಜಿ, ಏನಾಯಿತು, ಆರ್‍ಯು ಓಕೆ?” ನಿದ್ದೆಯಿಂದೆದ್ದು ಲೈಟ್ ಆನ್ ಮಾಡಿ ತೋಳು ಹಿಡಿದು ಕದಲಿಸುತ್ತ ಕೇಳಿದ ವೆಂಕಟ್.

“ಬೇಬಿ ಎನ್ನುತ್ತಿದ್ದೀಯ, ಅಳಬೇಡ ಎನ್ನುತ್ತಿದ್ದೀಯ? ಏನಾಯಿತು? ನೀರು ಕುಡಿಸಿ ಬೆನ್ನು ನೇವರಿಸಿ ಕೇಳಿದ ವೆಂಕಟ್. ಕೆಟ್ಟ ಕನಸೇನಾದರೂ ಬಿತ್ತಾ” “ನೋ..ನೋ.. ಕನಸಲ್ಲ, ಬೆಳಗಿನಜಾವದ ಕನಸು ನಿಜವಾಗುತ್ತದೆ ಎನ್ನುತ್ತಾರೆ ವೆಂಕಟ್. ಡಾಲರಿನ ಮೋಜಿನಲ್ಲಿ ನಾವೆಲ್ಲರೂ ಮರೆಯುತ್ತಿರುವ ವಾತ್ಸಲ್ಯ, ಪ್ರೀತಿ ಕಳೆದುಕೊಳ್ಳುತ್ತಿರುವ ಮಮತೆ, ಆಪ್ಯಾಯತೆಗಳ ಬೆಲೆಯೇನೆಂದು ತಿಳಿದುಕೊಂಡ ಕನಸು, ಅಲ್ಲ.. ಅಲ್ಲ.. ಸತ್ಯ” ನೀರು ಕುಡಿಯುತ್ತ ಗೋಡೆಯ ಮೇಲೆ ತೂಗುತ್ತಿರುವ ಗಡಿಯಾರ ತೋರಿಸಿ ಗಾಬರಿಯಿಂದ ಹೇಳಿದಳು ರಾಜಿ. ಬೆಳಗಿನ ಜಾವ ಐದು ಗಂಟೆ.

“ಆರ್ ಯು ಓಕೆ? ಏನಾಯಿತು?” ಮತ್ತಷ್ಟು ಆಶ್ಚರ್ಯದಿಂದ ಕೇಳಿದ ವೆಂಕಟ್.

“ಎಸ್, ಐ ಆ್ಯಮ್ ಫೈನ್. ಈಗ ನನ್ನನ್ನೇನೂ ಕೇಳಬೇಡಿ. ನಾವು ಮಾತ್ರ ಮಗುವನ್ನು ಎಲ್ಲಿಗೂ ಕಳುಹಿಸುತ್ತಿಲ್ಲ, ನಮ್ಮೊಂದಿಗೇ ಇರುತ್ತದೆ. ನಾನು ನನ್ನ ಹೆರಿಗ ರಜೆ ಆಗುತ್ತಿದ್ದಂತೆ, ಕೆಲಸಕ್ಕೆ ರಾಜೀನಾಮೆ ನೀಡುತ್ತಿದ್ದೇನೆ, ನನಗೆ ಯಾವ ಪ್ರಮೋಷನ್ ಅಗತ್ಯವಿಲ್ಲ, ಅಮ್ಮನೆಂಬ ಪ್ರಮೋಷನ್‍ ಗಿಂತ ಮಿಗಿಲಾದುದು ಈ ಲೋಕದಲ್ಲಿ ಇನ್ನಾವುದೂ ಇಲ್ಲ, ನಾನು ನನ್ನ ಮದರ್‍ಹುಡ್‍ ಗೆ ನ್ಯಾಯ ಸಲ್ಲಿಸಿದರೆ ಸಾಕು. ನನ್ನ ಪೂರ್ತಿ ಸಮಯ ನಮ್ಮ ಮಗುವನ್ನು ಬೆಳೆಸಲು ವ್ಯಯಿಸುತ್ತೇನೆ” ಉದ್ವೇಗದಿಂದ ಹೇಳಿದಳು ರಾಜಿ.

“ಓಕೆ ಕೂಲ್, ನಿನ್ನಿಷ್ಟ. ಹಾಗೇ ಮಾಡು ರಾಜಿ, ನಾನು ಯಾವುದಕ್ಕಾದರೂ ಫೋರ್ಸ್ ಮಾಡಿದ್ದೀನಾ?”

“ನಾವೀಗ ಒಳ್ಳೆಯ ಸ್ಥಿತಿಯಲ್ಲಿದ್ದೇವೆ ವೆಂಕಟ್. ನಮ್ಮಿಬ್ಬರ ಸಂಪಾದನೆಯಲ್ಲಿ ಎರಡು ಫ್ಲ್ಯಾಟ್‍ಗಳು, ಒಂದು ಪ್ರತ್ಯೇಕ ಮನೆ, ಒಳ್ಳೆಯ ಬ್ಯಾಂಕ್ ಬ್ಯಾಲೆನ್ಸ್, ರಿಟೈರ್ಮೆಂಟ್ ಫಂಡ್ ಇಷ್ಟೆಲ್ಲ ಇದ್ದರೂ, ನೀವೇನೋ ಕನ್ಸಲ್ಟಿಂಗ್ ಎಂದು ವಾರಕ್ಕೆ ಒಮ್ಮೆಯೂ ಮನೆಯಲ್ಲಿರುವುದಿಲ್ಲ. ನಾಳೆ ಮಗುವಾದ ಮೇಲೆ, ಇರುವ ಮೂವರು ಒಬ್ಬೊಬ್ಬರು ಒಂದೊಂದು ಕಡೆ. ನಾವೆಲ್ಲ ಜೊತೆಯಲ್ಲಿ ಇರುವುದು ಯಾವಾಗ? ಅಂತಹ ಈ ಜೀವನಕ್ಕೆ ಅರ್ಥವೇನಿದೆ? ನಮ್ಮ ಮಗುವಿನ ಆಟ, ತುಂಟ ಚೇಷ್ಟೆ, ಗಲಾಟೆ, ಅದು ಬೆಳೆಯುವುದನ್ನು ಕಂಪ್ಯೂಟರಿನಲ್ಲಿ ನೋಡಬೇಕಾ? ಡಾಲರಿನ ಮೋಜಿಗೆ ಬಿದ್ದು ಅವೆಲ್ಲವನ್ನು ನಾವು ಕಳೆದುಕೊಳ್ಳಲಿದ್ದೇವೆನಿಸುತ್ತಿಲ್ಲವಾ? ಬ್ಯಾಂಕ್ ಬ್ಯಾಲೆನ್ಸ್‍ ಗಾಗಿ ಮಕ್ಕಳನ್ನು ಹೆರದೆ ಮುಂದೂಡಿದೆವು. ಈಗ ಮಗುವನ್ನು ಇಂಡಿಯಾದಲ್ಲಿ ಬಿಟ್ಟರೆ, ಮಗುವಿನ ಜೊತೆ ಆ ಸಂತೋಷದ ಕ್ಷಣಗಳನ್ನು ಅನುಭವಿಸುವುದು ಯಾವಾಗ. ಹಿಂದೆ ನಮ್ಮ ಅಪ್ಪ ಅಮ್ಮಂದಿರು ಕೂಡ ಬ್ಯಾಂಕ್ ಬ್ಯಾಲೆನ್ಸ್ ಎಂದು ನೋಡಿದ್ದರೆ ಇಂದು ನಾವ್ಯಾರೂ ಹುಟ್ಟುತ್ತಲೇ ಇರಲಿಲ್ಲ. ಒಂದೊಂದು ಕುಟುಂಬದಲ್ಲಿಯೂ ಹತ್ತಾರು ಮಕ್ಕಳನ್ನು ಹೆತ್ತು ಯಾವ ಡಾಲರ್‌ ಗಳಿಂದ ಬೆಳೆಸಿದರು ನಮ್ಮ ತಂದೆತಾಯಿಯರು?”

“ಕರೆಕ್ಟ್, ಎಸ್ ರಾಜಿ.. ನಾನು ಯಾವತ್ತೂ ಇಷ್ಟು ಗಂಭೀರವಾಗಿ ಯೋಚಿಸಲಿಲ್ಲ. ನೀನು ಹೇಳಿದ್ದು ಸರಿ, ಒಮ್ಮೆ ಹಿಂತಿರುಗಿ ನೋಡಿದರೆ ಈ ಹತ್ತು ವರ್ಷಗಳಲ್ಲಿ ನಾವು ಜೊತೆಗಿದ್ದದ್ದು ಒಟ್ಟಾರೆ ಕೆಲವು ದಿನಗಳಷ್ಟೆ. ಪ್ರಾಜೆಕ್ಟ್ ಕೆಲಸವೆಂದು, ಕನ್ಸಲ್ಟಿಂಗ್ ಎಂದು ವೆಕೇಷನ್ ಕೂಡ ತೆಗೆದುಕೊಳ್ಳದೆ ದುಡಿಯುತ್ತ ಯಾವಾಗಲೋ ಬರುವುದು. ಯಾರೋ ಏನೋ ಹೇಳಿದರೆಂದು ಅದನ್ನೇ ಪಾಲಿಸುವುದು, ಅವರೇನೋ ಕೊಂಡುಕೊಂಡರೆಂದು ಅಗತ್ಯವಿಲ್ಲದಿದ್ದರೂ ನಾವೂ ಕೊಂಡುಕೊಳ್ಳುವುದು. ಸ್ಪರ್ಧೆಗೆ ಬಿದ್ದು, ಅಗತ್ಯವಿಲ್ಲದಿದ್ದರೂ ಪ್ರಿಸ್ಟೀಜ್‍ ಗೋಸ್ಕರ ಕಾರು ಕೊಳ್ಳುವುದು, ಮನೆ ಕೊಳ್ಳುವುದು. ಇದೆಲ್ಲ ಎಲ್ಲಿಗೆ ಕರೆದೊಯ್ಯುತ್ತದೋ? ದೇರ್ ಷುಡ್ ಬಿ ಸಂ ಲಿಮಿಟ್ ರಾಜೀ! ಎಸ್, ನಾವು ಮಗುವನ್ನು ಎಲ್ಲಿಗೂ ಕಳುಹಿಸುತ್ತಿಲ್ಲ. ನಾನು ಕೂಡ ಇಲ್ಲೇ ಕೆಲಸ ಹುಡುಕಿಕೊಳ್ಳುತ್ತೇನೆ. ಬಿಲ್ಲಿಂಗ್ ಎಷ್ಟಾದರೂ ಬರಲಿ, ಇನ್ನು ತಿರುಗಾಡಲು ನನಗಾಗುವುದಿಲ್ಲ. ಮಗುವನ್ನು, ನಿನ್ನನ್ನು ಬಿಟ್ಟು ಇರಲಾರೆ” ಒಂದು ನಿರ್ಧಾರಕ್ಕೆ ಬಂದವನಂತೆ ಹೇಳಿದ ವೆಂಕಟ್.

“ಥ್ಯಾಂಕ್ಸ್ ರೀ, ನೀವು ಇಷ್ಟು ಬೇಗ ನನ್ನನ್ನು ಅರ್ಥ ಮಾಡಿಕೊಳ್ಳುತ್ತೀರೆಂದುಕೊಳ್ಳಲಿಲ್ಲ. ಅಬ್ಬಾ ನನಗೆ ಈಗ ತುಂಬಾ ರಿಲ್ಯಾಕ್ಸ್ ಆಗಿದೆ. ವೆಂಕಟ್‍ ನನ್ನು ತಬ್ಬಿಕೊಂಡಳು ರಾಜಿ.”

“ಸಾರಿ ಬೇಬಿ. ಮಮ್ಮೀ, ಡ್ಯಾಡಿ ಇಬ್ಬರೂ ನಿನ್ನ ಜೊತೆಗೇ ಇರುತ್ತಾರೆ, ನಿನ್ನನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ” ಹೊಟ್ಟೆಯ ಮೇಲೆ ಕೈಯಾಡಿಸುತ್ತ ಹೇಳಿದಳು ರಾಜಿ.

“ಆಗ ಮಗು ಒದ್ದಾಗಲೇ ಅರ್ಥ ಮಾಡಿಕೊಳ್ಳಬೇಕಿತ್ತು, ಸ್ವಲ್ಪ ತಡವಾಯಿತು ಅಷ್ಟೇ” ಎನ್ನುತ್ತ ರಾಜಿಯ ಹೊಟ್ಟೆಗೆ ಮುತ್ತಿಡುತ್ತ
“ನಾಳೆಯಿಂದ ನೀನು ಹೊರಗೆ ಬರುವವರೆಗೂ ನಿಮ್ಮ ಮಮ್ಮಿಯನ್ನು, ನಿನ್ನನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ” ಖುಷಿಯಿಂದ ಹೇಳಿದ ವೆಂಕಟ್.

ಇಬ್ಬರೂ ಮನತುಂಬಿ ನಗುತ್ತ ಸಂತೋಷದಲ್ಲಿ ತೇಲಾಡುತ್ತಿದ್ದಾರೆ. ಆ ನಗುವಿನಲ್ಲಿ ಸಾಕಷ್ಟು ಪ್ರೀತಿ, ವಾತ್ಸಲ್ಯ, ಮಮತೆ ತುಂಬಿದ್ದು ತಮ್ಮ ಕಂದನ ಆಗಮನಕ್ಕಾಗಿ ಹಾತೊರೆಯುತ್ತಿದ್ದಾರೆ.