ಪೌರಾಣಿಕ ರಂಗಗೀತೆಗಳಲ್ಲಿನ ಕಂದಗಳಿಗೆ ಕಿವಿಗೊಡುವುದೆಂದರೆ ಅದರ ಸೊಗಸೇ ಬೇರೆ. ತುಂಬ ಶೃತಿಬದ್ಧವಾಗಿ ಅದರ ಶಾಸ್ತ್ರೀಯ ಶೈಲಿಯಲ್ಲಿ ಕಂದಗಳನ್ನ ಯಾರಾದರೂ ಚೆಂದವಾಗಿ ಹಾಡಿದರೆ ಇಂದಿಗೂ ನಾನು ರೋಮಾಂಚಿತನಾಗುತ್ತೇನೆ. ಯಾಕೆಂದರೆ ಕಂದದ ಫಾರ್ಮ್ಯಾಟ್ ನನಗೆ ಕಂಡಿರುವುದು ಒಂದು ದೊಡ್ಡ ಅಲೆಯ ಏರಿಳಿತದ ಹಾಗೆ. ಅದು ಮೇಲೆದ್ದು ಕೆಳಗಿಳಿಯುವ ರೀತಿಯಲ್ಲಿ ಕಂದಗಳು ಇರುತ್ತವೆ. ತಾರಕದ ಆ ನಿರ್ದಿಷ್ಟ ಪಾಯಿಂಟ್ ವರೆಗೆ ಹಾಡುಗಾರ ‘ಅ’ಕಾರಗಳನ್ನ ತೆಗೆದುಕೊಂಡು ಹೋಗಿ ಮತ್ತೆ ಅಲ್ಲಿಂದ ಜಾರಿಬರುವ ಕಲೆಗಾರಿಕೆಯಲ್ಲಿ ನಾನು ಆನಂದ ಕಂಡಿದ್ದವನು.
ಎನ್.ಸಿ. ಮಹೇಶ್‌ ಬರೆಯುವ ‘ರಂಗ ವಠಾರʼ ಅಂಕಣ

 

ಅಮೆರಿಕದ ಬಾಸ್ಟನ್ ನಗರದಲ್ಲಿ ನೆಲೆಸಿರುವ ಕೆಲ ಕನ್ನಡಿಗರು ‘ರಂಗತರಂಗ’ ಎಂಬ ನಾಟಕ ತಂಡವೊಂದನ್ನು ರೂಪಿಸಿಕೊಂಡಿದ್ದಾರೆ. ಆ ತಂಡಕ್ಕೀಗ ಇಪ್ಪತ್ತನೇ ವರ್ಷದ ವಾರ್ಷಿಕೋತ್ಸವ. ತಮ್ಮ ದೈನಂದಿನ ಕೆಲಸದ ನಡುವೆ ನಾಟಕದ ಬಗೆಗೆ ಗೀಳು ಬೆಳೆಸಿಕೊಂಡು ತಂಡ ಕಟ್ಟಿ ನಾಟಕವಾಡುತ್ತ ಅಲ್ಲಿನವರನ್ನ ರಂಜಿಸುತ್ತಿರುವ ಕೆಲ ಉತ್ಸಾಹಿ ಹಿರಿಯ ನಟರು ಬಾಬು ಹಿರಣ್ಣಯ್ಯ (ಮಾಸ್ಟರ್ ಹಿರಣ್ಣಯ್ಯನವರ ಪುತ್ರ)ನವರಿಗೆ ಪರಿಚಿತ. ‘ನಮಗೆ ಒಂದು ನಾಟಕ ಮಾಡಿಕೊಡಿ ಸರ್. ರೆಕಾರ್ಡ್ ಮಾಡಿ ಕಳಿಸಿ. ಸಂಕ್ರಾಂತಿ ಕಳೆದ ಕೆಲ ದಿನಗಳಿಗೆ ಅದನ್ನ ನಾವು ವರ್ಚುವಲ್ ಮಾಡಿ ಎಲ್ಲರೂ ನೋಡಲಿಕ್ಕೆ ಅವಕಾಶ ಕಲ್ಪಿಸುತ್ತೇವೆ. ಯಾರು ಬೇಕಾದರೂ ನೋಡಬಹುದು. ಫ್ರೀ ಎಂಟ್ರಿ. ಹಾಗೇ ಡೊನೇಷನ್ ಕೊಡಲು ಇಚ್ಛಿಸುವವರು ಕೊಡಬಹುದು. ಸಂಗ್ರಹವಾದ ದುಡ್ಡನ್ನ ಕೊರೋನ ಸಮಯದಲ್ಲಿ ಸಂಕಷ್ಟದಲ್ಲಿರುವ ರಂಗಕಲಾವಿದರಿಗೆ ಅರ್ಪಿಸಲಾಗುವುದು’ ಎಂದು ಬಾಬು ಸರ್ ಬಳಿ ಮನವಿ ಮಾಡಿದರಂತೆ.

ಹಲವರಿಗೆ ಗೊತ್ತಿರುವಂತೆ ಬಾಬು ಸರ್ ವೃತ್ತಿರಂಗಭೂಮಿ ತಂಡವಾದ ‘ಕೆ.ಹಿರಣ್ಣಯ್ಯ ಮಿತ್ರ ಮಂಡಳಿ’ಯಲ್ಲಿ ಅಜ್ಜ ಮಾಸ್ಟರ್ ಹಿರಣ್ಣಯ್ಯನವರ ಜೊತೆಗೂಡಿ ಅನೇಕ ನಾಟಕಗಳಲ್ಲಿ ಅಭಿನಯಿಸಿದವರು. ನಮ್ಮ ತಂಡ ಅವರ ಬಳಿ ಹೋಗಿ ‘ತಾವು ಪಾತ್ರ ನಿರ್ವಹಿಸಬೇಕು..’ ಎಂದು ಮನವಿ ಮಾಡಿದಾಗ ಒಪ್ಪಿ ಜೊತೆಗೂಡಿದರು. ವೃತ್ತಿರಂಗಭೂಮಿ ಕಂಪನಿಗಳಲ್ಲಿನ ಅಭಿನಯ ಕ್ರಮ, ದಿನದಿನದ ವಹಿವಾಟು ಇತ್ಯಾದಿಗಳಿಗೆ ಕಿವಿಗೊಡುತ್ತ, ನಮ್ಮ ತಂಡದ ನಾಟಕಗಳ ಬಗೆಗೆ ಅವರ ಜೊತೆ ಚರ್ಚಿಸುತ್ತ ಮತ್ತು ಅವರನ್ನೂ ಒಳಗುಮಾಡಿಕೊಳ್ಳುತ್ತ ಈಚೆಗೆ ನಾವು ಸಿದ್ಧಪಡಿಸಿದ ನಾಟಕ ‘ಬೀಚಿ ರಸಾಯನ’.

ಬೀಚಿ ಅವರ ಸಟೈರಿಕಲ್ ಪಂಚ್ ಗಳಿರುವ ಮಾತುಗಳನ್ನು ಕ್ರೋಢೀಕರಿಸಿಕೊಳ್ಳುವುದರ ಜೊತೆಗೆ ಅವುಗಳಿಗೆ ಸಂವಾದಿಯಾದ ಆವರಣ ಕಟ್ಟಿ ಅದರಲ್ಲಿ ರೆಟರಿಕ್ ಮಾತು, ಪೌರಾಣಿಕ ರಂಗಗೀತೆಗಳು, ಕೆಲವು ಮಿಥ್ ಗಳನ್ನ ಬಳಸಿ ಕಟ್ಟಿದ ಪ್ರಯೋಗಕ್ಕೆ ಕೊರೋನಾ ಪೂರ್ವಕಾಲದಲ್ಲಿ ಪ್ರೇಕ್ಷಕರಿಂದ ಸ್ಪಂದನೆ ತುಂಬ ಸಕಾರಾತ್ಮಕವಾಗಿತ್ತು. ಹೀಗಾಗಿ ಬಾಬು ಸರ್ ‘ಇದೇ ನಾಟಕ ರೆಕಾರ್ಡ್ ಮಾಡಿ ಕಳಿಸೋಣ’ ಅಂದರು.

ಆಗಲಿ ಎಂದು ರೆಕಾರ್ಡಿಂಗ್, ಎಡಿಟಿಂಗ್, ಇಂಗ್ಲಿಷ್ ಸಬ್ ಟೈಟಲ್ಸ್ ಎಲ್ಲ ಕೆಲಸ ಒಂದರಿಂದೊಂದು ಅನುಕ್ರಮವಾಗಿ ಮುಗಿಸುತ್ತಿದ್ದಾಗ ಕಡೆಗೆ ಒಂದು ಸಣ್ಣ ತೊಡಕು ಎದುರಾಯಿತು. ‘ಬೀಚಿ ರಸಾಯನ’ ನಾಟಕದಲ್ಲಿ ನಾವು ಕೆಲವು ಪೌರಾಣಿಕ ರಂಗಗೀತೆಗಳನ್ನ ಬಳಸಿಕೊಂಡಿದ್ದೆವು. ಯಾವ ಯಾವ ನಾಟಕಗಳಿಂದ ಆರಿಸಿಕೊಂಡ ಗೀತೆಗಳು ಅವು, ಹಾಡಿದವರು ಯಾರು ಯಾರು ಎಂದು ಕೃತಜ್ಞತೆಯ ಸಲುವಾಗಿ ದಾಖಲಿಸಬೇಕಾಗಿತ್ತು. ಈ ಕೆಲಸ ಮಾಡದಿದ್ದರೆ ನಾವು ಕೃತಘ್ನರಾಗುತ್ತೇವೆ ಎಂಬ ಅರಿವು ಇದ್ದದ್ದರಿಂದ ನಾನು ಮುತುವರ್ಜಿವಹಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊರತಂದಿರುವ ರಂಗಗೀತೆಗಳ ಸಿಡಿಗಳಲ್ಲಿದ್ದ ಹಾಡುಗಳನ್ನ ಹಾಡಿರುವ ಗಾಯಕರ ಹೆಸರು ಪತ್ತೆಹಚ್ಚಿ ದಾಖಲಿಸಿದೆ. ಆದರೆ ಕುರುಕ್ಷೇತ್ರ ನಾಟಕದಲ್ಲಿನ ಎರಡು ಹಾಡುಗಳನ್ನ ಹಾಡಿರುವ ಫೀಮೇಲ್ ವಾಯ್ಸ್ ಯಾರದ್ದು ಎಂದು ಎಷ್ಟು ತಡಕಾಡಿದರೂ ಪತ್ತೆಯಾಗಲಿಲ್ಲ.

ಸಿಗದಿದ್ದರೆ ಬೇಡ ಎಂದು ನಿರ್ಲಕ್ಷಿಸಿ ಸುಮ್ಮನಾಗುವುದು ದೊಡ್ಡ ಕೆಲಸವಲ್ಲ. ರಂಗಗೀತೆಗಳ ಆ ಇಡೀ ಯೋಜನೆಯ ನೇತೃತ್ವ ವಹಿಸಿದ್ದವರು ಶ್ರೀ ಪರಮಶಿವನ್ ಎಂದು ನನಗೆ ತಿಳಿದಿತ್ತು. ಗುಬ್ಬಿ ಕಂಪನಿಯನ್ನೂ ಒಳಗೊಂಡಂತೆ ಹಲವು ವೃತ್ತಿ ನಾಟಕ ಕಂಪನಿಗಳಲ್ಲಿ ಹಾರ್ಮೋನಿಯಂ ಮಾಸ್ಟರ್ ಆಗಿ, ನಾಟಕ ಹೇಳಿಕೊಡುವವರಾಗಿ, ನಟರಾಗಿ ಸಾಗಿ ಬಂದವರು ಪರಮಶಿವನ್. ಸರಿಸುಮಾರು ಸಾವಿರದ ಐನೂರಕ್ಕೂ ಹೆಚ್ಚಿನ ರಂಗಗೀತೆಗಳನ್ನ ನೋಡದೆ ಅವುಗಳ ಶಾಸ್ತ್ರೀಯ ಶೈಲಿಯಲ್ಲಿಯೇ ಸರಾಗವಾಗಿ ಹಾಡುತ್ತಿದ್ದ ಏಕೈಕ ಹಾಡುಗಾರರು ಅವರು. ತೀರಾ ಆಪ್ತರು ಅವರನ್ನು ‘ಪಮ್ಮಿ’ ಎಂದು ಕರೆಯುತ್ತಿದ್ದರು.


ಹಿಂದೆ ನಾನು ಪತ್ರಕರ್ತನಾಗಿದ್ದ ದಿನಗಳಲ್ಲಿ ಪರಮಶಿವನ್ ಅವರನ್ನ ಭೇಟಿ ಮಾಡಿ ಮಾತಾಡಿದ್ದೆ. ಪರಿಚಯ ಚೆನ್ನಾಗಿಯೇ ಇತ್ತು. ‘ಕುರುಕ್ಷೇತ್ರ ನಾಟಕದಲ್ಲಿನ ಎರಡು ಹಾಡುಗಳನ್ನ ಹಾಡಿದವರು ಯಾರು ಸರ್?’ ಎಂದು ಅವರನ್ನ ಕೇಳಿ ತಿಳಿದುಕೊಂಡು ದಾಖಲಿಸಿದರಾಯಿತು ಅಂದುಕೊಂಡು ಧ್ವನಿಮುದ್ರಣದ ಕೆಲಸ ಮುಗಿಸಿ ಬಾಬು ಸರ್ ಜೊತೆ ಕಾರಲ್ಲಿ ಸಂಜೆ ವಾಪಸ್ಸು ಬರುತ್ತಿದ್ದಾಗ, ಕಾರಿನ ಡಿಸ್ಪ್ಲೇನಲ್ಲಿ ಒಂದು ನಂಬರ್ ಕಾಣಿಸಿಕೊಂಡು ರಿಂಗ್ ಟೋನ್ ಕೇಳಿಸಿತು. ಸ್ಟೇರಿಂಗ್ನನಲ್ಲಿದ್ದ ಬಟನ್ ಒತ್ತಿ ಬಾಬು ಸರ್ ‘ಹಲೋ’ ಅಂದಾಗ ಆ ಕಡೆಯವರು ಮಾತಾಡಲು ಶುರುಮಾಡಿದರು.

‘ಬಾಬು ಹಿರಣ್ಣಯ್ಯನವರೇ… ನಿಮಗೊಂದು ಸುದ್ದಿ ಇದೆ. ನಮ್ಮ ಪರಮಶಿವು.. ಅದೇ ಪಮ್ಮಿ.. ಇಂದು ಮಧ್ಯಾಹ್ನ ಹೊರಟುಹೋದರು. ಏನಿಲ್ಲ ಚೆನ್ನಾಗೇ ಇದ್ದರು. ಮನೇಲಿ ಮಧ್ಯಾಹ್ನ ಊಟ ಮಾಡುತ್ತಿದ್ದರಂತೆ. ಮೊಸರು ಖಾಲಿ ಆಗಿದೆ ಅಂತ ಆ ಮನೆಯವರು ಮೊಸರು ತರಲು ಹೋಗಿ ಬರೋಷ್ಟರಲ್ಲಿ ಪರಮಶಿವು ಹಾಗೇ ಕೂತು ತಲೆ ವಾಲಿಸಿ ನಿದ್ರಿಸುತ್ತಿದ್ದ ಹಾಗೆ ಕಂಡರಂತೆ. ಇದೇನಾಯ್ತು ಅಂತ ನೋಡಿದರೆ ಎಚ್ಚರ ಇರದಿದ್ದದ್ದು ಗೊತ್ತಾಗಿದೆ. ಸರಿ ಎಂದು ಆಸ್ಪತ್ರೆಗೆ ಕರೆದುಕೊಂಡು ಹೋದರೆ ‘ಇಲ್ಲ ಹೋಗ್ಬಿಟ್ಟಿದ್ದಾರೆ…’ ಅಂದರಂತೆ ಡಾಕ್ಟರ್. ಇಲ್ಲಿ ನನಗೆ ಯಾರೂ ಅಷ್ಟಾಗಿ ಪರಿಚಯವಿಲ್ಲ. ಸುದ್ದೀನ ಚೂರು ಕಪ್ಪಣ್ಣನವರಿಗೆ, ಹಾಗೇ ಶಿವರಾಮಣ್ಣನವರಿಗೆ ತಿಳಿಸ್ತೀರಾ..?’ ಎಂದು ವಿನಂತಿಸಲು ಆರಂಭಿಸಿದರು.

ಸರಿ ಎಂದು ಬಾಬು ಸರ್ ಕಪ್ಪಣ್ಣನವರಿಗೆ ಫೋನ್ ಮಾಡಿದರೆ ಅವರಿಗೆ ವಿಚಾರ ಆಗಲೇ ತಿಳಿದಿತ್ತು.

ನಾನು ಕೊಂಚ ಬ್ಲಾಂಕ್ ಆದವನ ಹಾಗೆ ಕೂತಿದ್ದೆ. ಕೆಲವು ಸಂದರ್ಭಗಳಲ್ಲಿ ಕೆಲವು ಸಂಗತಿಗಳಿಗೆ ರಿಯಾಕ್ಟ್ ಮಾಡುವುದು ಕಷ್ಟ. ಅಜ್ಜ ಮಾಸ್ಟರ್ ಹಿರಣ್ಣಯ್ಯನವರು ತೀರಿಹೋದಾಗ ಪರಮಶಿವನ್ ಅವರು ಬಂದಿದ್ದರು. ನಡಿಗೆಯಲ್ಲಿ ತ್ರಾಣವಿದ್ದಂತೆ ಕಾಣುತ್ತಿರಲಿಲ್ಲ. ಅಥವಾ ನಾನು ಹಾಗೆ ಅಂದುಕೊಂಡೆನೋ ಏನೋ. ಮಾಸ್ಟರ್ ಹಿರಣ್ಣಯ್ಯನವರು ತೀರಿ ಹೋದ ವರ್ಷಕ್ಕೆ ಅವರ ಕುಟುಂಬ ಒಂದು ಕಾರ್ಯಕ್ರಮ ಮಾಡಿದಾಗ ಅದರಲ್ಲಿ ಪರಮಶಿವನ್ ಅವರು ಭಾಗಿಯಾದ್ದನ್ನು ನಾನು ಖುದ್ದು ಕಂಡಿದ್ದೆ. ‘ಹಿರಣ್ಯವಲ್ಲರಿ’ ಎಂಬ ಮಾಸ್ಟರ್ ಹಿರಣಯ್ಯನವರ ಕವನಗಳ ಸಂಕಲನದಲ್ಲಿನ ಕೆಲ ಪದ್ಯಗಳನ್ನ ಆರಿಸಿಕೊಂಡು ಅವುಗಳಿಗೆ ರಾಗ ಸಂಯೋಜನೆ ಮಾಡಿ ಅಂದು ಅವರು ಹಾಡಿದ್ದನ್ನ ಕೇಳಿದ್ದೆ. ಅದೇ ಕಡೇ ಅವರನ್ನ ನಾನು ಕಂಡದ್ದು.

ಕಾರಲ್ಲಿ ಹಾಗೇ ಬ್ಲಾಂಕ್ ಆಗಿ ಕೂತು ‘ಎಷ್ಟಾಗಿದ್ದಿರಬಹುದು ವಯಸ್ಸು ಅವರಿಗೆ..?’ ಎಂದು ಯೋಚಿಸಿದೆ. ತೊಂಭತ್ತು ದಾಟಿರುತ್ತದೆ ಎಂದು ಗೊತ್ತಿತ್ತು. ಹೀಗಿದ್ದರೂ ಅವರು ತೀರಿ ಹೋಗುವ ಎರಡು ದಿನಗಳಿಗೆ ಮುಂಚೆ ಮೈಸೂರಿಗೆ ಹೋಗಿ ರಂಗಗೀತೆಗಳ ಕಾರ್ಯಕ್ರಮ ಕೊಟ್ಟು ಬಂದಿದ್ದರಂತೆ. ಅದೂ ಒಂದೂವರೆ ಗಂಟೆಗಳ ಕಾರ್ಯಕ್ರಮದಲ್ಲಿ ನಿಂತು ಹಾಡಿ ಬಂದಿದ್ದರು ಅಂತ ಅವರ ನಿಧನದ ಸುದ್ದಿ ಹೇಳುತ್ತಿದ್ದವರು ವಿವರಿಸಿದ್ದು ನೆನಪಿಗೆ ಬಂತು.

ವಯಸ್ಸು ತೊಂಭತ್ತು ದಾಟಿದ ಮೇಲೆ ಇನ್ನೂ ಎಷ್ಟೂಂತ ಅವರಿಂದ ನಿರೀಕ್ಷಿಸುವುದು…? ಅವರ ನಿರ್ಗಮನ ಲಾಸು.. ನಷ್ಟ ಖಂಡಿತ ಹೌದು.. ಜೊತೆಗೆ… ಎಂದು ತರ್ಕಿಸುತ್ತಲೇ ಇದ್ದೆ…

ಹಿಂದೆ ನಾನು ಪರಮಶಿವನ್ ಅವರನ್ನ ಭೇಟಿಯಾದ ಸಂದರ್ಭ ಹಾಗೂ ಅದರ ಸುತ್ತಲಿನ ಆವರಣ ನೆನಪಿಗೆ ನಿಲುಕಲು ಆರಂಭಿಸಿದವು.

‘ಸರ್ ಇವತ್ತು ಆ ನಾಟಕಗೃಹದಲ್ಲಿ (ಹೆಸರು ಬೇಡ) ಆ ನಾಟಕ ಇದೆ. ಬರೋದಿಲ್ವೇ..?’ ಎಂದು ಗೆಳೆಯನೊಬ್ಬ ಕೇಳಿದ್ದ. ನಾನು ಸಾರಾಸಗಟಾಗಿ ನೇರಾನೇರಾ ‘ಇಲ್ಲ ಬರಲ್ಲ’ ಅಂದಿದ್ದೆ. ‘ಅಯ್ಯೋ ಯಾಕೆ ಸರ್..?’ ಎಂದು ಅವನು ಮತ್ತೆ ಕೇಳಿದ. ‘ಆ ನಾಟಕಗೃಹದಲ್ಲಿ ಮಾಡುವ ನಾಟಕ ತಂಡಗಳಿಗೆ ಅತಿ ಬೌದ್ಧಿಕತೆಯ ಹುಚ್ಚು ಹತ್ತಿಕೊಂಡಿದೆ. ಸೀರಿಯಸ್ ಡ್ರಾಮಾಗಳು ನಮಗೆ ಅರ್ಥವಾಗದಷ್ಟು, ನಮ್ಮನ್ನ ತಾಕದಷ್ಟು ಸೀರಿಯಸ್ ಆಗಬಾರದು. ನಾಟಕ ಕಾಮಿಡೀನೋ ಸೀರಿಯಸ್ಸೋ ನನ್ನ ಬದುಕಿನ ಮಾಡಿಫೈಡ್ ವರ್ಷನ್ ಹೇಗಿರುತ್ತೆ ಅಂತ ಕಂಡುಕೊಳ್ಳೋದಕ್ಕೆ ನಾನು ನಾಟಕ ನೋಡಲಿಕ್ಕೆ ಹೋಗೋದು. ಅದು ಬಿಟ್ಟು ಪದ್ಮಾಸನ ಹಾಕ್ಕೊಂಡು ಕೂತು ನಾಟಕ ಅರ್ಥ ಮಾಡ್ಕೊ ಅಂದರೆ ನನಗೆ ಅದು ಆಗಲ್ಲ ಮತ್ತು ಬರೋದೂ ಇಲ್ಲ. ಹಾಗೆ ನೋಡಿದರೆ ಈ ನಾಟಕಗಳಿಗಿಂತ ಸಂಗೀತ ನನ್ನನ್ನ ಹೆಚ್ಚು ಕಲಕುತ್ತೆ. ತುಂಬ ಶಾಸ್ತ್ರೀಯವಾಗಿ ಮತ್ತು ಶೃತಿಬದ್ಧವಾಗಿ ಯಾರಾದರೂ ಹಾಡೋದನ್ನ ಕೇಳ್ತಿದ್ರೆ ಮನಸ್ಸು ಅನುಭವಿಸೊ ಆನಂದ ಅಷ್ಟಿಷ್ಟಲ್ಲ. ಈಚಿನವರು ಯಾಕೊ ಲೈಟಿಂಗು ಮತ್ತು ಎಕ್ಸ್ಟ್ರೀಮ್ ಬಾಡಿ ಲ್ವ್ಯಾಂಗ್ವೇಜೇ ನಾಟಕ ಅಂದುಕೊಂಡಂಗೆ ಅನಿಸ್ತಿದೆಯಪ್ಪಾ…’ ಅಂತಂದು ಅವನ ತಲೆ ಕೆಡಿಸಿದೆ. ಅವನು ಕನ್ಫ್ಯೂಸ್ ಆಗಿ ಫೋನ್ ಇಟ್ಟಿದ್ದ.

ಆದರೆ ನಾನು ಹೇಳಿದದ್ದು ನನ್ನ ಮಟ್ಟಿಗಾದರೂ ನಿಜವೇ ಆಗಿತ್ತು. ಸೀರಿಯಸ್ನೆಸ್ಸು, ಸಾಮಾಜಿಕ ಬದ್ಧತೆ ಮತ್ತು ಕಾಳಜಿ ಇವುಗಳು ಹೆಚ್ಚಾದ ನಾಟಕಗಳನ್ನ ಆ ಕಾಲದಲ್ಲಿ ನೋಡಿದ ಪರಿಣಾಮವೋ ಏನೋ ನಾನು ವಿಪರೀತ ದಣಿದಿದ್ದೆ. ಸೀರಿಯಸ್ನೆಸ್ಸು ಮತ್ತು ವಾಚ್ಯ ಎರಡೂ ಅತಿರೇಕವಾದರೆ ಸಹಿಸಿಕೊಳ್ಳುವುದು ಕಷ್ಟ. ನಾಟಕವೊಂದು ಕಟ್ಟಕಡೆಗೆ ನನ್ನ ಅನುಭವ ಲೋಕವನ್ನ ಹೇಗೆ ತಟ್ಟುತ್ತದೆ ಎನ್ನುವುದೇ ಮುಖ್ಯ ಅಂದುಕೊಂಡಿದ್ದ ನನ್ನನ್ನ ಕೆಲ ನಾಟಕಗಳು ವಿಪರೀತ ದಣಿಯುವಂತೆ ಮಾಡಿದ್ದವು. ಪರಿಣಾಮವಾಗಿ ನಾನು ನಾಟಕಗಳನ್ನ ನೋಡುವುದನ್ನೇ ಬಿಟ್ಟು ಹಾಯಾಗಿದ್ದೆ.

ನಿಜದ ಸಂಗತಿ ಅಂದರೆ ಮೊದಲಿನಿಂದಲೂ ನನ್ನದು ನಾಟಕಕ್ಕಿಂತ ಸಂಗೀತಕ್ಕೇ ಹೆಚ್ಚು ಒಲಿದ ಮನಸ್ಸು. ಅದರಲ್ಲೂ ಪೌರಾಣಿಕ ರಂಗಗೀತೆಗಳಲ್ಲಿನ ಕಂದಗಳಿಗೆ ಕಿವಿಗೊಡುವುದೆಂದರೆ ಅದರ ಸೊಗಸೇ ಬೇರೆ. ತುಂಬ ಶೃತಿಬದ್ಧವಾಗಿ ಅದರ ಶಾಸ್ತ್ರೀಯ ಶೈಲಿಯಲ್ಲಿ ಕಂದಗಳನ್ನ ಯಾರಾದರೂ ಚೆಂದವಾಗಿ ಹಾಡಿದರೆ ಇಂದಿಗೂ ನಾನು ರೋಮಾಂಚಿತನಾಗುತ್ತೇನೆ. ಯಾಕೆಂದರೆ ಕಂದದ ಫಾರ್ಮ್ಯಾಟ್ ನನಗೆ ಕಂಡಿರುವುದು ಒಂದು ದೊಡ್ಡ ಅಲೆಯ ಏರಿಳಿತದ ಹಾಗೆ. ಅದು ಮೇಲೆದ್ದು ಕೆಳಗಿಳಿಯುವ ರೀತಿಯಲ್ಲಿ ಕಂದಗಳು ಇರುತ್ತವೆ. ತಾರಕದ ಆ ನಿರ್ದಿಷ್ಟ ಪಾಯಿಂಟ್ ವರೆಗೆ ಹಾಡುಗಾರ ‘ಅ’ಕಾರಗಳನ್ನ ತೆಗೆದುಕೊಂಡು ಹೋಗಿ ಮತ್ತೆ ಅಲ್ಲಿಂದ ಜಾರಿಬರುವ ಕಲೆಗಾರಿಕೆಯಲ್ಲಿ ನಾನು ಆನಂದ ಕಂಡಿದ್ದವನು.

ನನ್ನ ಅಜ್ಜ ಹಳ್ಳಿಯಲ್ಲಿ ಹಾರ್ಮೋನಿಯಂ ಮಾಸ್ಟರ್ ಆಗಿ ಹಳ್ಳಿಗರಿಗೆ ಈ ಕಂದಗಳನ್ನ ಕಲಿಸುತ್ತಿದ್ದಾಗ ಪುಟ್ಟ ಹುಡುಗನಾಗಿದ್ದ ನಾನು ಕಿವಿಗೊಟ್ಟು ಕೇಳುತ್ತಿದ್ದೆ. ಸಂಗೀತದಲ್ಲಿನ ಏರಿಳಿತದ ಮೋಡಿ ಆಗಿನಿಂದಲೇ ನನ್ನ ಮನಸ್ಸು ಹೊಕ್ಕಿಕೊಂಡಿತ್ತು. ಅಲ್ಲಿಂದ ಶುರುವಾದ ಕಂದಗಳ ಬಗೆಗಿನ ಕ್ರೇಜ್ ಇಂದಿಗೂ ಕಡಿಮೆ ಆಗಿಲ್ಲ. ಆದರೆ ಹಾಡುವವರು ಶಾಸ್ತ್ರೀಯವಾಗಿ ಮತ್ತು ಶೃತಿಬದ್ಧವಾಗಿ ಹಾಡಬೇಕು ಅಷ್ಟೇ. ಇಲ್ಲದಿದ್ದರೆ ಕಂದಗಳನ್ನ ಕೇಳಿಸಿಕೊಳ್ಳುವುದು ಕೆಟ್ಟ ಸೀರಿಯಸ್ ನಾಟಕ ನೋಡಿದಷ್ಟೇ ವ್ಯಸನ ಹುಟ್ಟಿಸುತ್ತದೆ.

ಸರಿಸುಮಾರು ಸಾವಿರದ ಐನೂರಕ್ಕೂ ಹೆಚ್ಚಿನ ರಂಗಗೀತೆಗಳನ್ನ ನೋಡದೆ ಅವುಗಳ ಶಾಸ್ತ್ರೀಯ ಶೈಲಿಯಲ್ಲಿಯೇ ಸರಾಗವಾಗಿ ಹಾಡುತ್ತಿದ್ದ ಏಕೈಕ ಹಾಡುಗಾರರು ಅವರು. ತೀರಾ ಆಪ್ತರು ಅವರನ್ನು ‘ಪಮ್ಮಿ’ ಎಂದು ಕರೆಯುತ್ತಿದ್ದರು.

ಹೀಗೇ ಒಂದು ದಿನ ರವೀಂದ್ರ ಕಲಾಕ್ಷೇತ್ರದ ಆವರಣ ಹೊಕ್ಕವನು ಅಲ್ಲಿನ ನಾಟಕಗಳ ಬ್ಯಾನರ್ ಕಡೆಗೆ ಕಣ್ಣು ಹಾಯಿಸುತ್ತಾ ನಿಂತಿದ್ದೆ.

ಮತ್ತೆ ಅವೇ ಸೀರಿಯಸ್ ನಾಟಕಗಳು ಕಂಡವು. ತಲೆಕೊಡವಿ ಕಲಾಕ್ಷೇತ್ರದ ಹಿಂಭಾಗಕ್ಕೆ ನಡೆದೆ. ಸಂಸ ಬಯಲು ರಂಗಮಂದಿರದಲ್ಲೊಂದು ಕಾರ್ಯಕ್ರಮ ಆಯೋಜನೆ ಆಗಿತ್ತು. ಸುಮ್ಮನೆ ಹೋಗಿ ಕಲ್ಲು ಹಾಸಿನ ಮೆಟ್ಟಿಲ ಮೇಲೆ ಕೂತೆ. ‘ರಂಗಸಂಗೀತ’ ಎಂದು ಬೋರ್ಡ್ ನಿಲ್ಲಿಸಿದ್ದರು. ಬೆಟರ್ ಇದನ್ನ ಕೇಳೋಣ.. ಹಿಡಿಸದಿದ್ದರೆ ಕಾರಂತರ ಕ್ಯಾಂಟೀನಲ್ಲಿ ಕಾಫಿ ಕುಡಿದು ನಡೆದರಾಯಿತು ಅಂದುಕೊಂಡು ಕೂತೆ.

ಅದೇ ಸಮಯಕ್ಕೆ ಅಷ್ಟು ಎತ್ತರವಲ್ಲದ ವ್ಯಕ್ತಿಯೊಬ್ಬರು ಮೈಕ್ ಮುಂದೆ ಬಂದರು. ಸಾಕಷ್ಟು ವಯಸ್ಸಾದಂತೆ ಕಾಣುತ್ತಿತ್ತು. ‘ಹೆಚ್ಚೇನಿಲ್ಲ ಒಂದು ಸಾವಿರದ ಐನೂರು ರಂಗಗೀತೆಗಳು ಕಂಠಪಾಠ ಆಗಿವೆ. ನೋಡದೆ ಹಾಡ್ತೀನಿ. ಹಿಂದೆ ಹಳೇ ವೃತ್ತಿನಾಟಕ ಕಂಪನಿಗಳಲ್ಲಿ ಇದ್ದಾಗ ಹಿರಿಯರು ಹಾಡ್ತಿದ್ದನ್ನ ಕೇಳಿ… ಕೇಳ್ಮೆಯಿಂದಲೇ ಬಂದದ್ದು ಇದು ನನಗೆ. ಚೆನ್ನಾಗಿ ಹಾಡಿದ್ರೆ ಸಂತೋಷಪಡಿ.. ತಪ್ಪಾಗಿ ಹಾಡಿದ್ರೆ ಹೊಟ್ಟೆಗೆ ಹಾಕ್ಕೊಳ್ಳಿ… ಈಗ ನಾನು ‘ಸದಾರಮೆ’ ನಾಟಕದ ಹಾಡು ಹಾಡೋಕೆ ಪ್ರಯತ್ನಿಸ್ತೇನೆ..’ ಅಂತಂದು ‘ರಾಮಾಗುಣಾಕರ.. ಶ್ಯಾಮ ಮನೋಹರ..’ ಎಂದು ದನಿ ತೆರೆದರು.

ಅವರ ಹಾಡು ನನ್ನನ್ನ ಎಷ್ಟು ಒಳಗುಮಾಡಿಕೊಂಡಿತು ಅಂದರೆ ನಾನು ತನ್ಮಯನಾಗಿ ಕೂತೆ. ಸಮಯ ಮತ್ತು ಇಹದ ಪರಿವೆ ಮರೆತೇ ಹೋಯಿತು. ಅವರು ಎಷ್ಟು ಹಾಡು ಹಾಡಿದರೊ ನಾನು ಲೆಕ್ಕವಿಟ್ಟುಕೊಳ್ಳುತ್ತ ಕೂರಲಿಲ್ಲ.

ಆ ಮೊದಲೂ ಕೂಡ ನಾನು ಕೆಲವು ಅಮೆಚೂರ್ ಕಲಾವಿದರು ರಂಗಗೀತೆಗಳನ್ನ ಹಾಡುವುದನ್ನ ಕೇಳಿಸಿಕೊಂಡಿದ್ದೆ. ಅವರಿಗೆ ಹಾರ್ಮೊನಿಯಂ ಮಾಸ್ಟರ್ ತಾಳ ಹೊಂದಿಸಿ ನುಡಿಸಬೇಕಾಗಿತ್ತು. ಸ್ವರಗಳ ಏರಿಳಿತಗಳಲ್ಲಿ ಇನ್ನೂ ಸಿದ್ಧಿಕಂಡುಕೊಂಡಿರದ ಕಲಾವಿದರ ಹಾಡುಗಳನ್ನೇ ಕೇಳುತ್ತಿದ್ದನಿಗೆ ಅಂದಿನ ಕಾರ್ಯಕ್ರಮದಲ್ಲಿನ ಅವರ ಹಾಡು ಮತ್ತು ಅವರ ಚಿತ್ರ ಮನಸ್ಸಿನಲ್ಲಿ ಹಾಗೇ ಸ್ಥಾಯಿಯಾಗಿ ಉಳಿದುಬಿಟ್ಟಿತು. ಅವರು ಮತ್ಯಾರೂ ಅಲ್ಲ… ಪರಮಶಿವನ್.

ಆದದ್ದಾಗಲಿ ಅವರನ್ನ ಭೇಟಿಯಾಗಲೇಬೇಕು ಎಂಬ ತುಡಿತ ಅಂದಿನಿಂದ ಶುರುವಾಯಿತು. ಆದರೆ ಅಂದುಕೊಂಡದ್ದೆಲ್ಲ ತರಾತುರಿಯಲ್ಲಿ ನಡೆದುಬಿಡುವುದಿಲ್ಲವಲ್ಲ. ನನ್ನಲ್ಲಿ ಎಷ್ಟೇ ತುಡಿತವಿದ್ದರೂ ಕಾಲ ನನ್ನನ್ನ ಕಾಯಿಸಿತು. ಬಿ. ಜಯಶ್ರೀ ಮೇಡಂರ ‘ಸ್ಪಂದನ’ ತಂಡದಲ್ಲಿ ಲೋಕೇಶ್ ಆಚಾರ್ ಎನ್ನುವವರಿದ್ದಾರೆ. ಬೆಳಗ್ಗೆ ಫ್ಯಾಕ್ಟರಿಯಲ್ಲಿ ಕೆಲಸ (ಅವರ ಪರಿಭಾಷೆಯಲ್ಲಿ ‘ಕೂಲಿʼ) ಹಾಗೂ ಸಂಜೆ ಸ್ಪಂದನ ತಂಡದಲ್ಲಿ ನಟನೆ. ರಂಗದ ಮೇಲೆ ಹಿ ಈಸ್ ಮಾರ್ವಲೆಸ್. ‘ಕರಿಮಾಯಿ’ ನಾಟಕದಲ್ಲಿ ಕಡುಕನ ಪಾತ್ರ, ‘ಸದಾರಮೆ’ಯಲ್ಲಿ ಆದಿಮೂರ್ತಿ ಪಾತ್ರವನ್ನ ಭಾವತುಂಬಿಕೊಡುವಂತೆ ನಟಿಸುವ ನಟ. ನನಗೆ ಪರಿಚಿತರಿದ್ದರು. ಅದೂ ಅಲ್ಲದೆ ಸ್ಪಂದನ ತಂಡದ ಸದಾರಮೆ ನಾಟಕಕ್ಕೆ ಹಾರ್ಮೋನಿಯಂ ನುಡಿಸಲು ಪರಮಶಿವನ್ ಅವರೇ ಸಾಕಷ್ಟು ಸಲ ಬಂದಿದ್ದನ್ನ ಕಂಡಿದ್ದೆ.

ಹೀಗೆ ಒಮ್ಮೆ ಲೋಕೇಶ್ ಆಚಾರ್ ಅವರ ಬಳಿ ‘ಸರ್ ಪರಮಶಿವನ್ ಅವರನ್ನ ಒಮ್ಮೆ ಭೇಟಿ ಮಾಡಬೇಕಲ್ಲ..’ ಅಂದಾಗ ‘ಬನ್ನಿ ಸರ್.. ನನಗೆ ಅವರು ಚೆನ್ನಾಗಿ ಪರಿಚಯವಿದ್ದಾರೆ..’ ಎಂದು ದಿನ ನಿಗದಿ ಮಾಡಿ ಅವರ ಮನೆಗೆ ಕರೆದುಕೊಂಡು ಹೋದರು.

ನನ್ನ ಎದುರಿಗೆ ಖುದ್ದು ಪರಮಶಿವನ್! ಏನು ಕೇಳುವುದು ಏನು ಬಿಡುವುದು..? ಆದರೆ ಆಗ ನಾನಿನ್ನೂ ಜರ್ನಲಿಸ್ಟ್ ಹುದ್ದೆಯಲ್ಲಿದ್ದದ್ದರಿಂದ ಪ್ರಶ್ನೆ ಕೇಳುವುದು ಅಷ್ಟು ಕಷ್ಟವಾಗಲಿಲ್ಲ.

ಹಿರಿಯರಾದ ಪರಮಶಿವನ್ ತುಂಬ ಸಹಜವಾಗಿ ಮಾತು ಆರಂಭಿಸಿದರು. ‘ಮನೆಯಲ್ಲಿ ಬಡತನ. ನಾಟಕದ ಕಂಪನಿಗೆ ಸೇರಿದರೆ ಹೊಟ್ಟೆಪಾಡು ಹೇಗೊ ನಡೆಯುತ್ತೆ ಅಂತ ಕಂಪನಿಗೆ ಸೇರಿದೆ. ಅನಂತರ ಅದೇ ಬದುಕಾಗಲಿಕ್ಕೆ ಆರಂಭ ಆಯ್ತು. ಕಂಪನಿಯಲ್ಲಿ ಘಟಾನುಘಟಿ ನಟರು ಹಾಡ್ತಿದ್ದ ಹಾಡು ಕೇಳಿ ಆ ಕೇಳ್ಮೆಯಿಂದಲೇ ಹಾಡುಗಳನ್ನ ಚೂರು ದಕ್ಕಿಸಿಕೊಂಡೆ. ಚಿಕ್ಕವಯಸ್ಸಲ್ಲೇ ನಾನೂ ಕೊಂಚ ಧೈರ್ಯವಾಗೇ ಹಾಡ್ತಿದ್ದೆ. ಕಂಪನೀಲೇ ಸಂಗೀತಪಾಠ ಆಗ್ತಿತ್ತು ನನಗೆ. ಒಂದು ಸಲ ಕಾರ್ಯಕ್ರಮವೊಂದಕ್ಕೆ ಎಂ.ಎಸ್ ಸುಬ್ಬುಲಕ್ಷ್ಮಿ ಅವರನ್ನ ಕರೆಸಿದ್ದರು. ಸುಬ್ಬುಲಕ್ಷ್ಮಿಯವರು ಕಾರ್ಯಕ್ರಮಕ್ಕೆ ಬರುವುದು ಕೊಂಚ ತಡವಾಯ್ತು. ಅವರು ಬರುವವರೆಗೆ ‘ನೀನು ಹಾಡು…’ ಅಂತ ನನಗೆ ಕೆಲವರು ಹೇಳಿದರು. ನಾನೂ ಹಾಡಲಿಕ್ಕೆ ಶುರುಮಾಡಿದೆ. ಆ ಹೊತ್ತಿಗೆ ನನಗೆ ವಿದ್ವತ್ ಪಾಠ ಆಗಿತ್ತು. ನಾನು ಹಾಡ್ತಿದ್ದ ಅದೇ ಹೊತ್ತಿಗೆ ಸುಬ್ಬುಲಕ್ಷ್ಮಿಯವರು ಬಂದರು. ‘ಪೈಯಾ ನಲ್ಲ ಪಾಡ್ರʼ (ಹುಡುಗ ಚೆನ್ನಾಗಿ ಹಾಡ್ತಾನೆ..) ಅಂತ ಆಶೀರ್ವದಿಸಿ ತಲೆ ಸವರಿದರು.

‘ಆಮೇಲೆ ಮತ್ತೊಂದು ಘಟ್ಟದಲ್ಲಿ ನಾನು ನಾಟಕದಲ್ಲಿ ಹಾಡಿದ್ದನ್ನ ಕೇಳಿಸಿಕೊಂಡು ಕರ್ಣನ ಪಾತ್ರದ ಖ್ಯಾತಿಯ ಕೊಟ್ಟೂರಪ್ಪನವರು ‘ಯಾರು ಆ ಹುಡುಗ ಯಾರು ಆ ಹುಡುಗ…?’ ಅಂತ ಹುಡುಕಿಕೊಂಡು ಬಂದು ವಿಚಾರಿಸಿ ಅವರ ಮನೇಲಿ ನನಗೆ ಸಂಗೀತ ಕಲಿಸಲಿಕ್ಕೆ ಆರಂಭಿಸಿದರು. ರಂಗಸಂಗೀತ ಹೇಗಿರಬೇಕು.. ಹೇಗೆ ಹಾಡಬೇಕು ಅಂತ ಅವರಿಂದ ಸಾಕಷ್ಟು ಕಲಿತೆ. ಬಹಳಷ್ಟು ನಾಟಕದ ಕಂಪನಿಗಳಲ್ಲಿ ಹಾರ್ಮೋನಿಯಂ ನುಡಿಸಿದ್ದೀನಿ. ಹೀಗೇ ಬದುಕು ಸಾಗಿ ಬಂದುಬಿಡ್ತು…’ ಅಂದರು.

‘ಸರ್ ನೀವು ಹಾಡೋದನ್ನ ಕೇಳಿಸಿಕೊಳ್ತಿದ್ರೆ ರಂಗಗೀತೆಗಳಲ್ಲಿ ಶಾಸ್ತ್ರೀಯ ಸಂಗೀತದ ಧಾಟಿ ಇದೆ ಅನಿಸುತ್ತೆ. ಇದು ಹೇಗೆ..?’ ಎಂದು ಕೇಳಿದೆ. ‘ಹೌದು ಹಿಂದೆಲ್ಲ ಶಾಸ್ತ್ರೀಯ ಸಂಗೀತದ ನಿರ್ದಿಷ್ಟ ಕೃತಿ ಅಥವಾ ಕೀರ್ತನೆಯನ್ನೇ ಅನುಕರಿಸಿ ಹಾಡು ಬರೆದು ಹೊಂದಿಸ್ತಿದ್ದರು. ಅದನ್ನ ಹಾಡಬೇಕಾದರೆ ಆ ರಾಗದ ಪರಿಚಯವಿರಬೇಕಿತ್ತು. ಆದರೆ ಕೆಲವು ಸಲ ಶಾಸ್ತ್ರೀಯ ಧಾಟಿ ಬದಲಾಯಿಸಿಕೊಂಡು ರಂಗಸಂಗೀತಕ್ಕೆ ತಿರುಗಿಸಿಕೊಂಡ ಉದಾಹರಣೆಗಳೂ ಇವೆ. ಈಗ ಕಂಜದಳಾಯತಾಕ್ಷಿ ಶಾಸ್ತ್ರೀಯವಾಗಿ ಬೇರೆ ರೀತಿಯಲ್ಲಿ ಹಾಡ್ತಾರೆ… ಅದೇ ಕೃತಿಯನ್ನ ನಾವು ರಂಗಸಂಗೀತವಾಗಿ ಬಳಸಿಕೊಳ್ಳೋವಾಗ ಬೇರೆತರ ಹಾಡ್ತೀವಿ.. ಇದು ನಡೆದಿದೆ. ಜೊತೆಗೆ ಆ ಕಾಲದಲ್ಲಿ ಎಲ್ಲ ಪ್ರಕಾರಗಳಲ್ಲೂ ಪ್ರಯೋಗ ಮಾಡಿ ಹಾಡು ಸಂಯೋಜನೆ ಮಾಡ್ತಿದ್ದರು. ಉದಾಹರಣೆಗೆ ‘ಲಂಕಾಧಿಪನೇ ದೇವಾ..’ ದಲ್ಲಿ ವೆಸ್ಟ್ರನ್ ಶೈಲಿ ಬಳಿಸಿಕೊಂಡ ಬಗೆ ಹೀಗಿತ್ತು..’ ಎಂದು ಹಾಡಿ ತೋರಿಸಿದರು.

ನಾನು ಚೂರು ಉಲ್ಲಸಿತನಾದೆ. ಅಷ್ಟೇ ಅಲ್ಲ ರಂಗಗೀತೆಗಳಲ್ಲೂ ಜನಪದ ಸಂಗೀತದ ಅಳವಡಿಕೆ ಕ್ರಮ ಹೇಗಿತ್ತು ಎಂದು ವಿವರಿಸಿದರು.

ಜೊತೆಗೆ ವರನಟ ರಾಜ್ ಕುಮಾರ್ ರವರು ತಮಗೆ ನಾಟಕದ ಕಂಪನಿಯಲ್ಲಿದ್ದಾಗಿನಿಂದಲೂ ಇದ್ದ ನಂಟು, ರಾಜ್ ಕುಮಾರ್ ಅವರು ತಮ್ಮ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ಹಾಡುತ್ತಿದ್ದ ಪ್ರಸಿದ್ಧ ಹಾಡು ‘ಅನುರಾಗದ ಭೋಗಾ ಸುಖದಾ..’- ಇದನ್ನ ತಮ್ಮಿಂದ ಮತ್ತೆ ಮತ್ತೆ ಹಾಡಿಸಿ ಕೇಳಿಸಿಕೊಳ್ಳುತ್ತಿದ್ದ ಬಗೆ ನೆನಪಿಸಿಕೊಂಡರು.

‘ಅಂದರೆ ಸರ್, ಆಗಿನ ಕಾಲದ ಕಂಪನಿ ನಟರೆಲ್ಲ ಶಾಸ್ತ್ರೀಯ ಸಂಗೀತ ಕಲಿತಿದ್ದರಾ…?’ ಹೀಗೊಂದು ಪ್ರಶ್ನೆ ಕೇಳಿದೆ.

‘ಬಹುತೇಕರು ಕಲಿತಿರಲಿಲ್ಲ. ಆದರೆ ಶಾಸ್ತ್ರೀಯವಾಗೇ ತುಂಬ ಚೆನ್ನಾಗಿ ಹಾಡ್ತಿದ್ದರು. ತಾಳ ಮತ್ತು ಶೃತಿ ಅಷ್ಟು ಕರಾರುವಕ್ಕಾಗಿ ಇರ್ತಿತ್ತು. ಹಾಗೆ ಪ್ರಾಕ್ಟೀಸ್ ಮಾಡಿಸೋವ್ರು..’ ಅಂದರು.

ಸಂಗೀತದ ಬಗ್ಗೆ ಇಷ್ಟು ಶಾಸ್ತ್ರೀಯವಾದ ಜ್ಞಾನವಿರುವವರಿಗೆ ಇಂದಿನ ಸಿನಿಮಾ ಸಂಗೀತ ಹೇಗೆ ಕೇಳಿಸುತ್ತಿರಬಹುದು ಎಂಬ ಕೆಟ್ಟ ಕುತೂಹಲ ನನ್ನಲ್ಲಿ ತಲೆಎತ್ತಿತ್ತು. ಈ ಬಗ್ಗೆ ಪ್ರಶ್ನಿಸಲೊ ಬೇಡವೋ ಎಂದು ಯೋಚಿಸುತ್ತಲೇ ಇದ್ದೆ. ಕಡೆಗೆ ನಿರ್ದಿಷ್ಟವಾಗಿ ಸಿನಿಮಾ ಬಗ್ಗೆ ಅವರ ಬಳಿ ಪ್ರಶ್ನಿಸುವುದು ಸರಿಯಾಗಲಾರದು ಅನಿಸಿ ‘ಸಿನಿಮಾ’ ಪದ ಕಟ್ ಮಾಡಿ ‘ಸರ್ ಇಂದಿನ ಸಂಗೀತ ಕೇಳಿಸಿಕೊಳ್ಳೋವಾಗ ನಿಮಗೆ ಏನನಿಸುತ್ತೆ..?’ ಎಂದು ಕೇಳಿದೆ. ಇಷ್ಟೂ ಕೀಟಳೆ ಮಾಡದಿದ್ದರೆ ಹೇಗೆ?

ಪರಮಶಿವನ್ ಸರ್ ಮೆಲ್ಲಗೆ ಹಣೆ ಚಚ್ಚಿಕೊಳ್ಳಲು ಆರಂಭಿಸಿದರು. ‘ಸಂಗೀತದ ಮನೆ ಹಾಳಾಗೋಗ್ಲಿ. ಅದೇನೂಂತ ಹಾಡು ಬರೀತಾರೆ ಇಂದಿನೋರು? ಗುಂತಾಳೆ ಗುಂ ಗುಂತಾಳೆ… ಗುಂ.. ಗುಂತಾಳೆ… ಅಂತೆ. ಏನ್ ಕರ್ಮಾನ್ರೀ ಇಂಥವನ್ನೆಲ್ಲ ಕೇಳಿಸಿಕೊಳ್ಳೋದು..’ ಅಂದರು.

ನಾನು ಹಾಗೂ ಲೋಕೇಶ್ ಆಚಾರ್ ಮೃದುವಾಗಿ ಚಪ್ಪಾಳೆ ತಟ್ಟುತ್ತಾ ನಗಲು ಆರಂಭಿಸಿದೆವು. ಪರಮಶಿವನ್ ಅವರು ನಮ್ಮ ನಗು ಕಂಡು ತಾವೂ ನಗುತ್ತ ಮತ್ತೆ ಹಣೆ ಚಚ್ಚಿಕೊಳ್ಳಲು ಆರಂಭಿಸಿದರು.

ಪರಮಶಿವನ್ ಇಂದು ಮಧ್ಯಾಹ್ನ ಹೊರಟುಹೋದರು ಅಂತ ಕೇಳಿದಾಗ ನನಗೆ ಅವರು ಹಣೆಚಚ್ಚಿಕೊಳ್ಳುತ್ತಿದ್ದ ದೃಶ್ಯ ಕಣ್ಮುಂದೆ ಸುಳಿಯಿತು. ಪರಮಶಿವನ್ ತಮ್ಮ ನೆನಪು ಮತ್ತು ಅನುಭವಗಳನ್ನ ಕ್ರೋಢೀಕರಿಸಿ ಹೇಳುತ್ತಿದ್ದಾಗ ನನಗೆ ಅದರಲ್ಲೊಂದು ಹರವು ಇದೆ ಅನಿಸಿತ್ತು. ಹಲವು ದಶಕಗಳ ರಂಗಚರಿತ್ರೆ, ಕಂಪನಿಗಳರ ಬದುಕಿನ ಕ್ರಮ, ತಾಲೀಮು, ಮೊಕ್ಕಾಂಗಳು ಇವೆಲ್ಲವೂ ಪರಮಶಿವನ್ ಅವರ ಜೊತೆ ದಾಖಲಾಗುವ ಸರಕಾಗಿದ್ದವು. ಮುಂದೊಂದು ದಿನ ಸಾಧ್ಯವಾದರೆ ಪರಮಶಿವನ್ ಅವರನ್ನ ಮತ್ತೆ ಭೇಟಿ ಮಾಡಿ ಅವರ ಸಾದ್ಯಂತದ ಬದುಕು ಮತ್ತು ಅನುಭವಗಳನ್ನ ಅವರಿಂದ ಕೇಳಿ ದಾಖಲಿಸಿ ಒಂದು ಪುಸ್ತಕ ಮಾಡಬಹುದು ಅಂದುಕೊಂಡಿದ್ದೆ.

ಆದರೆ ಕೆಲವು ವಿಚಾರಗಳಿಗೆ ಸ್ಫುರಣೆ ಎನ್ನುವುದು ಒದಗಿ ಬರುವುದೇ ಇಲ್ಲ. ನೋಡನೋಡುತ್ತಿದ್ದಂತೆ ಕಾಲ ಉರುಳುತ್ತಾ ಪರಮಶಿವನ್ ಕೂಡ ನಿರ್ಗಮಿಸಿಬಿಟ್ಟರು. ಅವರೊಂದಿಗೆ ಹಲವು ದಶಕಗಳ ರಂಗದ ಬಗೆಗಿನ ಚಿತ್ರಗಳೂ ಅಳಿಸಿಹೋದವು.

ಮಿಗಿಲಾಗಿ ಈ ಹೊತ್ತು ಸೀಡಿಯಲ್ಲಿ ಹಾಡಿರುವ ಕುರುಕ್ಷೇತ್ರ ನಾಟಕದಲ್ಲಿನ ಫೀಮೇಲ್ ವಾಯ್ಸ್ ಯಾರದ್ದು ಎಂದು ಯಾರನ್ನ ಕೇಳಲಿ..? ತೀರಾ ಬೆನ್ನುಹತ್ತಿ ಹೋಗಿ ಹುಡುಕಿದರೆ ಸಿಗುತ್ತದೆ. ಆದರೆ ಪರಮಶಿವನ್ ಅವರನ್ನ ಭೇಟಿ ಮಾಡಿ ಮಾತಿಗಿಳಿಯುತ್ತ ಪ್ರಶ್ನೆಗೆ ಉತ್ತರ ದೊರಕಿಸಿಕೊಳ್ಳುವಾಗ ಸಿಗುತ್ತಿದ್ದ ಹತ್ತು ಹಲವು ಚಿತ್ರಗಳನ್ನ ಅವರಲ್ಲದೆ ಯಾರು ತಾನೆ ಕಟ್ಟಿಕೊಡಬಲ್ಲರು..?

ನನ್ನಲ್ಲಿನ್ನೂ ಪ್ರಶ್ನೆಗಳಿದ್ದಾಗ ನೀವು ಹೀಗೆ ನಿರ್ಗಮಿಸಿದ್ದು ಮತ್ತೆ ನನ್ನಲ್ಲಿ ಪ್ರಶ್ನೆಯಾಗಿಯೇ ಉಳಿದಿದೆ ನೋಡಿ ಪರಮಶಿವನ್ ಸರ್… ಏನು ಮಾಡಲಿ ಈಗ..?