ಬಾಲ್ಯ ಯೌವ್ವನದ ದಿನಗಳಲ್ಲಿ ರೂಪುಗೊಳ್ಳುವ ವ್ಯಕ್ತಿತ್ವದಲ್ಲಿ ಭಾಷೆ, ಭವನ, ಭೋಜನ, ಆಚಾರ ವಿಚಾರಗಳ ಒಂದು ಚೌಕಟ್ಟು ರೂಢಿಯಾಗಿರುತ್ತದೆ. ನಂತರದ ದಿನಗಳಲ್ಲಿ ಆ ಚೌಕಟ್ಟಿಗೆ ಹೊಂದುವ ಭಾಷೆ, ಭೋಜನ, ವಾಡಿಕೆಗಳು ಕಂಡಾಗ ಎಷ್ಟೊಂದು ಸಂತೋಷ ಉಕ್ಕುತ್ತದೆ. ಅದರಲ್ಲಿಯೂ ಆಹಾರ ಎನ್ನುವುದು ಬದುಕಿನ ಮೂಲಭೂತ ಅಗತ್ಯಗಳಲ್ಲಿ ಒಂದು. ಕರ್ನಾಟಕ ಬಿಟ್ಟು ಕಾರ್ಯ ನಿಮಿತ್ತ ಇನ್ನೊಂದು ಊರಿಗೆ ಹೋದಾಗ ಪ್ರೀತಿಯ ತಿನಿಸಿಗಾಗಿ ನಡೆಸಿದ ಹುಡುಕಾಟವನ್ನು ರಸವತ್ತಾಗಿ ಬಣ್ಣಿಸಿದ್ದಾರೆ ಸೀಮಾ ಸಮತಲ

 

ಕಳೆದ ವರ್ಷ ಫೆಬ್ರವರಿಯಲ್ಲಿ ಬೆಂಗಳೂರು ಬಿಟ್ಟು, ಚಿಕ್ಕವಳಿದ್ದಾಗ ಒಮ್ಮೆ ನೋಡಿದ್ದ ಹೈದರಾಬಾದ್‍ಗೆ ಗಂಟುಮೂಟೆ ಕಟ್ಟಿಕೊಂಡು ಹೊರಡುವಾಗ ಇನ್ನಿಲ್ಲದ ಸಂಕಟವಾಗಿತ್ತು. ಬಳ್ಳಾರಿ ಜಿಲ್ಲೆಯವಳಾದ ನನಗೆ ಅಲ್ಪಸ್ವಲ್ಪ ತೆಲುಗು ಬರುತ್ತಿತ್ತು. ಭಾಷೆಯ ಚಿಂತೆ ಇರಲಿಲ್ಲ. ಆಪ್ತರ ಸಂಗದಿಂದ ವಂಚಿತರಾಗುತ್ತೇವೆ ಎಂಬುದು ಕೊಂಚ ಕಾಡತೊಡಗಿತ್ತು ಅಷ್ಟೆ. ಆದರೆ ಅದಕ್ಕಿಂತ ಹೆಚ್ಚಿಗೆ ನಾನು ತಲೆಕೆಡಿಸಿಕೊಂಡಿದ್ದು ಅಂದ್ರೆ ಊಟದ ವಿಚಾರವಾಗಿ. ಬೆಂಗಳೂರಿನಲ್ಲಿ ನೂರು ಹೆಜ್ಜೆಗೊಮ್ಮೆ ಸಿಗುವ ಇಡ್ಲಿ ಸಾಂಬಾರಿನ ದರ್ಶಿನಿಗಳು, ಎಡವಿಬಿದ್ದರೆ ಅಲ್ಲಲ್ಲಿ ಸಿಗುವ ಚಾಟ್ ಮತ್ತು ಜ್ಯೂಸ್ ಸೆಂಟರ್‌ಗಳು, ದೂರದಿಂದಲೇ ವಾಸನೆಯಿಂದ ತನ್ನತ್ತ ಸೆಳೆಯುವ ಬೇಕರಿಯ ಬ್ರೆಡ್ಡು ಬನ್ನುಗಳು. ಇಂತಹ ಅವಕಾಶಗಳು ಹೊಸ ಶಹರಿನಲ್ಲಿ ಎಲ್ಲಿ ತಪ್ಪಿಹೋಗುತ್ತವೊ ಎಂಬ ಭಯದಿಂದಲೇ ರೈಲು ಹತ್ತಬೇಕಾಯಿತು. ಕುಟುಂಬ ಸಮೇತ ಹೈದರಾಬಾದ್ ಸೇರುತ್ತಿದ್ದೇವೆ ಎಂಬ ಸುದ್ದಿ ಕೇಳಿದವರೆಲ್ಲಾ ‘ಓಹೋ! ಬಿರಿಯಾನಿ ನಾಡಿಗೆ ಹೋಗುತ್ತಿದ್ದೀರ’ ಎಂದು ಖುಷಿಯಿಂದ ಹರಸಿದರು. ನನಗೆ ನನ್ನದೇ ಪೇಚಾಟ.

ಹೆಜ್ಜೆ ಇಟ್ಟ ಮೊದಲ ದಿನ ತಿಂಡಿಗಾಗಿ ರೋಡ್ ಉದ್ದಕ್ಕೆ ನಡೆದುಕೊಂಡು ಹೋದರೆ ಒಂದೂ ಹೋಟೆಲ್ ಸಿಗಬಾರದೆ? ಅಲ್ಲಿಯೇ ಇದ್ದವರನ್ನು ‘ಇಲ್ಲಿ ಒಳ್ಳೆಯ ನಾಷ್ಟಾ ಎಲ್ಲಿ ಸಿಗುತ್ತದೆ?’ ಎಂದು ಕೇಳಿದಾಗ ಹತ್ತಿರದಲ್ಲೇ ಒಂದು ಇದೆ ಎಂದು ದಾರಿ ತೋರಿಸಿದರು. ಮನೆಗಳಿಂದ ಕಿಕ್ಕಿರಿದ ಓಣಿಯೊಂದರಲ್ಲಿ ದೊಡ್ಡ ಮಾವಿನ ಮರದ ಕೆಳಗೆ ಸಣ್ಣ ಮನೆಯೊಂದರಿಂದ ಬಿಸಿಬಿಸಿ ಇಡ್ಲಿವಡೆಯ ಗಮಗಮ ಪರಿಮಳ ಬರುತ್ತಿತ್ತು. ಒಮ್ಮೆಲೆ ಹೊಗೆ ಏಳುವಂತೆ ಮೂರು ನಾಲ್ಕು ದೋಸೆ ಹಾಕುವ ದೊಡ್ಡ ಹೆಂಚು. ಕೂರುವುದಕ್ಕೆ ಹಾಕಿದ ಅಲುಗಾಡುವ ಸಾಲು ಬೆಂಚು ಮತ್ತು ಚೇರುಗಳು. ಹಳ್ಳಿಯ ಚಿತ್ರಣ ಕಣ್ಣಮುಂದೆ ಬರುವಂತಹ ಉಪಹಾರ ಗೃಹ. ‘ಅಂಕಮ್ಮತಲ್ಲಿ ಟಿಫಿನ್ ಸೆಂಟರ್’. (ಅಂಕಮ್ಮತಲ್ಲಿ ಒಬ್ಬ ಗ್ರಾಮ ದೇವತೆ; ಮಹಾಕಾಳಿಯ ಒಂದು ಸ್ವರೂಪ) ಇಪ್ಪತ್ತು ರೂಪಾಯಿಗೆ ನಾಲ್ಕು ಇಡ್ಲಿ, ಎರಡು ತರಹದ ಚಟ್ನಿಗಳು. ವಡೆ ಅಥವಾ ಬಜ್ಜಿಬೊಂಡ ಬೇಕಾದರೆ ಅದಕ್ಕೆ ಸಪರೇಟು ದುಡ್ಡು. ಬಾಯಲ್ಲಿ ಕರಗುವ ಮೆತ್ತನೆಯ ಇಡ್ಲಿ ಆದರೆ ಬೊಬ್ಬೆ ಹಾಕುವಂತಹ ಗುಂಟೂರು ಒಣ ಮೆಣಸಿನ ಕಾಯಿಯ ಕೆಂಪು ಚಟ್ನಿ. ಅಷ್ಟು ತಿಂದು ಮುಗಿಸುವಷ್ಟರಲ್ಲಿ ಎರಡು ಬಾಟಲಿ ನೀರು ಹೊಟ್ಟೆಗೆ ಸೇರಿತ್ತು.

ತಿನ್ನುವಾಗ ಇದರ ರುಚಿ ಎಲ್ಲೊ ತಿಂದಂತೆ ಇದೆ -ಅನ್ನೋದು ನೆನಪಾಯಿತು. ಚಿಕ್ಕವಳಿದ್ದಾಗ ಅಜ್ಜಿ ಆಗಾಗ ನಮ್ಮ ಮನೆಗೆ ಬರುತ್ತಿದ್ದರು, ಅವರಿಗೆ ಇಡ್ಲಿ ತಿನ್ನಬೇಕೆಂದು ಬಯಕೆ ಬಂದಾಗ ಮನೆ ಹತ್ತಿರದಿಂದ ಪಾರ್ಸಲ್ ತರುತ್ತಿದ್ದೆ. ಚಿಕ್ಕ ಶೆಡ್‍ನಲ್ಲಿ ಗಂಡ-ಹೆಂಡತಿ ಇಡ್ಲಿ, ಪೂರಿ ಮಾರುತ್ತಿದ್ದರು. ಶಾಲೆಗೆ ಹೋಗುವ ಅವರ ಮಗಳು ಬೆಳಿಗ್ಗೆ ಅವರಿಗೆ ಸಹಾಯ ಮಾಡುತ್ತಿದ್ದಳು. ತೆಲುಗು ಭಾಷಿಗರು. ಅಲ್ಲಿಯ ಚಟ್ನಿಯೂ ಹಾಗೆ. ಖಾರದ ಬಾಂಬ್. ಅಜ್ಜಿ ಚಿಟಿಕೆ ಚಟ್ನಿಗೆ ಅರ್ಧ ಗ್ಲಾಸು ನೀರು ಬೆರೆಸಿ ಚಪ್ಪರಿಸಿ ತಿನ್ನುತ್ತಿದ್ದರು. ಈ ಆಂಧ್ರದವರು ಮಾಡುವ ಅಡುಗೆಗಳು ಸಕತ್ ಖಾರ. ತಿಂದು ಅಭ್ಯಾಸ ಇಲ್ಲದವರಿಗೆ ಕಣ್ಣು ಮೂಗಿನಲ್ಲಿ ನೀರು ಧಳಧಳ ಖಂಡಿತ.

ಮರುದಿನ ಬೆಳಿಗ್ಗೆ ಶೌಚಾಲಯದಲ್ಲಿ ಪಟ್ಟ ಕಷ್ಟ ಪುನಃ ಬೇಡವೆಂದು ಗೂಗಲ್‍ನಲ್ಲಿ ತಿಂಡಿಯ ಹುಡುಕಾಟ ಶುರುವಾಯಿತು. ಪ್ರತಿಯೊಂದಕ್ಕೆ ಅದರ ರೇಟಿಂಗ್ಸ್ ಹೇಗಿವೆ? ಜನ ಏನಂದಿದ್ದಾರೆ? ಕೂತು ತಿನ್ನುವಂತಹ ಜಾಗ ಇದಿಯಾ? ಅಂತೆಲ್ಲ ನೋಡಿ ಅಳೆದು ಸುರಿದು ಸಾಕಷ್ಟು ವಿಚಾರವಿಮರ್ಶೆಯ ನಂತರ ಒಂದು ಜಾಗ ಹಿಡಿಸಿತು. ಮನೆಯಿಂದ ಅಷ್ಟೇನು ದೂರವಿರಲಿಲ್ಲ. ಉತ್ತಮ ರೇಟಿಂಗ್ಸ್ ಹಾಗೂ ಸುಮಾರು ಜನ ಒಳ್ಳೆಯ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ‘ಮೊದಟಿ ಮುದ್ದ’ (ಮೊದಲ ತುತ್ತು)ಕೇವಲ ಸಿರಿಧಾನ್ಯ ಹಾಗೂ ಬೇಳೆಕಾಳುಗಳನ್ನು ಬಳಸಿ ಮಾಡುವ ಆಹಾರ ಪದಾರ್ಥಗಳು ಸಿಗುತ್ತವೆ. ರಾಗಿಯ ಇಡ್ಲಿ, ಬೆಲ್ಲ ಹಾಗೂ ಉಪ್ಪಿನ ರಾಗಿ ಅಂಬಲಿ, ಪೆಸರಟ್ಟು (ಆಂಧ್ರ ಹಾಗೂ ತೆಲಂಗಾಣದ ವಿಶಿಷ್ಟ ಉಪಹಾರ. ಹೆಸರುಕಾಳಿನ ದೋಸೆ), ವಿವಿಧ ಸಿರಿಧಾನ್ಯಗಳ ಉಪ್ಪಿಟ್ಟು, ಪೊಂಗಲ್, ದೋಸೆ ಹಾಗೂ ಬಗೆಬಗೆಯ ಕಷಾಯಗಳು. ಒಟ್ಟಾರೆ ಆರೋಗ್ಯಕರ ಆಹಾರ ಸಿಗುವ ಬೀಡು. ಆಗ ತಿಂದ ರಾಗಿ ಇಡ್ಲಿ, ಹೆಚ್ಚು ಖಾರವಿರದ ಗಟ್ಟಿ ಚಟ್ನಿ ಹಾಗೂ ಸೋರೆಕಾಯಿ, ಕೊಬ್ಬರಿ ತುರಿ ಹಾಕಿದ ಸುಡು ಸಾಂಬಾರಿನ ಸ್ವಾದ ಈಗಲೂ ಬಾಯಲ್ಲಿ ಹಾಗೆಯೇ ಇದೆ. ಹನ್ನೊಂದು ಗಂಟೆಯೊಳಗೆ ಹೋಟೆಲಿನ ಬಾಗಿಲು ಬಂದ್. ಅಲ್ಲಿಯವರೆಗೆ ಬೆಳಿಗ್ಗೆ ವಾಕಿಂಗ್ ಮುಗಿಸಿ ಬರುವವರಿಗೆ ಗಂಜಿ, ಕಷಾಯ, ಅಲ್ಲಿಯೇ ಕುಳಿತು ತಿನ್ನುವವರಿಗೆ ಅನ್‍ಲಿಮಿಟೆಡ್ ಚಟ್ನಿ ಮತ್ತು ಸಾಂಬಾರಿನ ಕಾರುಬಾರು ಜೋರಾಗಿರುತ್ತದೆ. ಆಗಾಗ ಸವಿಯಲು ಸರಿ. ಆದರೆ ಬೆಂಗಳೂರಿನ ರುಚಿ ನೀಡುವ ತಾಣ ಹುಡುಕಿ ಹುಡುಕಿ ಸಾಕಾಯಿತು. ಇಲ್ಲಿನವರು ನಡೆಸುವ ದರ್ಶಿನಿಗಳಿದ್ದರೂ, ಅವು ನಮ್ಮ ಉಕ್ಕುತ್ತಿರುವ ಆಸೆ ತೀರಿಸಲಿಲ್ಲ. ಆಗ ಬರುತ್ತಿದ್ದ ದುಃಖವನ್ನು ವರ್ಲ್ಡ್ ಫೇಮಸ್ ಹೈದರಾಬಾದ್ ಬಿರಿಯಾನಿ ಕೂಡ ಕಮ್ಮಿ ಮಾಡಲಿಲ್ಲ.

ಬೆಂಗಳೂರಿನಲ್ಲಿ ನೂರು ಹೆಜ್ಜೆಗೊಮ್ಮೆ ಸಿಗುವ ಇಡ್ಲಿ ಸಾಂಬಾರಿನ ದರ್ಶಿನಿಗಳು, ಎಡವಿಬಿದ್ದರೆ ಅಲ್ಲಲ್ಲಿ ಸಿಗುವ ಚಾಟ್ ಮತ್ತು ಜ್ಯೂಸ್ ಸೆಂಟರ್‌ಗಳು, ದೂರದಿಂದಲೇ ವಾಸನೆಯಿಂದ ತನ್ನತ್ತ ಸೆಳೆಯುವ ಬೇಕರಿಯ ಬ್ರೆಡ್ಡು ಬನ್ನುಗಳು. ಇಂತಹ ಅವಕಾಶಗಳು ಹೊಸ ಶಹರಿನಲ್ಲಿ ಎಲ್ಲಿ ತಪ್ಪಿಹೋಗುತ್ತವೊ ಎಂಬ ಭಯದಿಂದಲೇ ರೈಲು ಹತ್ತಬೇಕಾಯಿತು.

ಸಂಪೂರ್ಣವಾಗಿ ಶಿಫ್ಟ್ ಆಗುವ ಮುನ್ನ ಹಲವು ತಿಂಗಳ ಮುಂಚೆ ಮನೆ ಹುಡುಕುವ ಸಲುವಾಗಿ ಎರಡು ದಿನಕ್ಕಾಗಿ ಇಲ್ಲಿಗೆ ಬಂದು ಉಳಿಯಬೇಕಾಯಿತು. ಕಾಚಿಗುಡ ಸ್ಟೇಷನ್‍ಗೆ ಸಮೀಪದಲ್ಲಿ ತಂಗಿದೆವು. ನನ್ನದೊಂದು ಕೆಟ್ಟ ಬುದ್ಧಿ. ಯಾವುದಾದರು ಹೊಸ ಊರಿಗೆ ಅಥವಾ ಏರಿಯಾಗೆ ಹೋದಾಗ ಮಾಡುವ ಮೊದಲ ಕೆಲಸವೆಂದರೆ ಗೂಗಲ್‍ನಲ್ಲಿ ‘ರೆಸ್ಟೋರೆಂಟ್ಸ್ ನಿಯರ್ ಮಿ’ ಶೋಧಿಸುವುದು. ನಾಷ್ಟಕ್ಕೆ, ಊಟಕ್ಕೆ ಎಲ್ಲೆಲ್ಲಿ ಯಾವುದಿದೆ? ವೆಜ್ ಅಥವಾ ನಾನ್ ವೆಜ್‍ನಲ್ಲಿ ಯಾವುದು ಚೆನ್ನಾಗಿದೆ? ಚಹಾ ಮತ್ತು ಸಂಜೆ ತಿಂಡಿಗೆ ಪ್ರಸಿದ್ಧ ತಾಣಗಳು. ಎಲ್ಲವನ್ನು ಮುಂಚೆಯೇ ತಿಳಿದುಕೊಂಡು ತಯಾರಿ ಇಟ್ಟುಕೊಳ್ಳುವುದು. ಹಸಿದಾಗ ಇರುವ ಅಲ್ಪಸ್ವಲ್ಪ ಶಕ್ತಿಯನ್ನು ಉಳಿಸಿಕೊಂಡು, ಅಲ್ಲಿಇಲ್ಲಿ ಅಲೆಯುವುದನ್ನು ತಪ್ಪಿಸಬಹುದು. ಹೊಟ್ಟೆ ಚುರ್ರ್ ಗುಟ್ಟಿದಾಗ ನನ್ನ ರೌದ್ರಾವತಾರ ಹೊರಗೆ ಬಾರದಂತೆ ಮಾಡಿಕೊಳ್ಳುವ ನನ್ನದೇ ಉಪಾಯ.

ಆ ದಿನವೂ ಬೆಳಗಿನ ಉಪಹಾರಕ್ಕಾಗಿ ಗೂಗಲ್ ಮೊರೆಹೋದೆ. ‘ಹೋಟೆಲ್ ಸ್ವೀಕಾರ್’ ಎಂಬುದು ಸರಿ ಎನಿಸಿ ಹೋದೆವು. ಮೆನ್ಯೂನಲ್ಲಿ ಸೌತ್ ಇಂಡಿಯನ್ ತಿಂಡಿಗಳ ದೊಡ್ಡ ಪಟ್ಟಿಯೇ ಇತ್ತು. ಸೇಫರ್ ಸೈಡ್ ಗೆ ಒಂದು ಪ್ಲೇಟ್ ಇಡ್ಲಿ ವಡೆಯ ಆರ್ಡರ್ ಆಯಿತು. ಹೊಳೆಯುವ ಸ್ಟೀಲ್ ತಟ್ಟೆಯಲ್ಲಿ ಎರಡು ಮೃದು ಇಡ್ಲಿ, ಹಸಿರು ಗಟ್ಟಿ ಚಟ್ನಿ, ಊದಿಕೊಂಡ ತೂತು ವಡೆ, ಪಕ್ಕದಲ್ಲಿ ಸ್ವಲ್ಪ ಎಂತದೊ ಪುಡಿ ಮೇಲೆ ತುಪ್ಪ ಹಾಗೂ ಒಂದು ಬಟ್ಟಲಿನ ತುಂಬ ಸಾಂಬಾರು. ಚಮಚದಿಂದ ಬಾಯಿಗೆ ಹಾಕಿದ ಆ ಸಾಂಬಾರಿನ ಮೊದಲ ಗುಟುಕು.. ಆಹಾ! ಆನಂದ, ಪರಮಾನಂದ. ಥೇಟ್ ನಮ್ಮ ಬೆಂಗಳೂರಿನಲ್ಲಿ ತಿಂದಂತೆಯೇ ಭಾಸ. ಒಮ್ಮೆಲೆ ಮಲ್ಲೇಶ್ವರಂನ ಎಂ.ಟಿ.ಆರ್ ನಲ್ಲಿದ್ದೇವೆನೊ ಎಂದು ಅನಿಸಿತು. ತದನಂತರ ತುಪ್ಪದ ಮಸಾಲೆ ದೋಸೆ, ಪೊಂಗಲ್, ಒಂದೆರೆಡು ಬಟ್ಟಲು ಹೆಚ್ಚುವರಿ ಸಾಂಬಾರ್, ಕೊನೆಗೆ ಬಿಸಿಬಿಸಿ ಬೈಟೂ ಫಿಲ್ಟರ್ ಕಾಫಿ. ಆ ಇಡೀ ದಿನ ಹೈದರಾಬಾದಿನ ಧಗೆಧಗೆ ಬಿಸಿಲು ಕೂಡ ಸ್ವೀಕಾರ್ ಹೋಟೆಲ್ ನ ಒಂದೊಂದು ತುತ್ತನ್ನೂ ಆಸ್ವಾದಿಸಿ ತಿಂದ ಸಂತೋಷವನ್ನು ತಗ್ಗಿಸಲಿಲ್ಲ.

ಈಗಿರುವ ಮನೆಯಿಂದ ಕಾಚಿಗುಡದ ಹೋಟೆಲ್ ಸ್ವೀಕಾರ್ ಗೆ ಸರಿಸುಮಾರು ಹದಿನೈದು ಕಿ.ಮೀ. ರಜೆಯಲ್ಲಿ ಬೆಳಿಗ್ಗೆ ಎದ್ದಾಗ ನಮ್ಮೂರು ನೆನಪಾಯಿತೆಂದರೆ ಸುಮ್ಮನೆ ಹಲ್ಲುಜ್ಜಿ ಸೀದಾ ಕಾರು ಹತ್ತಿ ಕಾಚಿಗುಡದ ಕಡೆ ಪಯಣ ಶುರು. ಈಗೀಗ ಮೆನ್ಯೂ ಕಾರ್ಡ್ ನೋಡುವ ಅಗತ್ಯವೇ ಇಲ್ಲ. ಎಲ್ಲಾ ಬಾಯಿಪಾಠವಾಗಿದೆ. ಒಮ್ಮೆ ಬಿಲ್ ಪೇ ಮಾಡುವಾಗ ಕ್ಯಾಶಿಯರ್ ಹಾಗೂ ವೇಟರ್ ಕನ್ನಡದಲ್ಲಿ ಮಾತನಾಡಿದಂತೆ ಕೇಳಿಸಿತು. ಕಿವಿಗಳು ನೆಟ್ಟಗಾದವು. ಪರಿಚಯ ಮಾಡಿಕೊಂಡೆವು. ಮೂವತ್ತು ವರ್ಷಗಳ ಹಿಂದೆ ಕರ್ನಾಟಕದಿಂದ ಹೈದರಾಬಾದಿಗೆ ವಲಸೆ ಬಂದವರು. ನಮ್ಮವರು, ನಮ್ಮವರ ಕೈ ರುಚಿ. ಹಾಗಾಗಿಯೇ ತನ್ನತ್ತ ಸೆಳೆಯುತ್ತದೆ ನಮ್ಮನ್ನು. ಆಸುಪಾಸಿನ ಪ್ರದೇಶದಲ್ಲಿ ಹೆಸರು ಗಳಿಸಿಕೊಂಡ ಅಚ್ಚುಕಟ್ಟಾದ ಹೋಟೆಲ್. ರಜೆ ದಿನಗಳಲ್ಲಿ ಹೋದರೆ ಖಾಲಿ ಟೇಬಲ್‍ಗಾಗಿ ಕನಿಷ್ಠ ಅರ್ಧ ತಾಸು ಗಟ್ಟಿ ಮನಸ್ಸು ಮಾಡಿ ಕಾಯಬೇಕು.

ನಮ್ಮದೊಂದು ವಿಚಿತ್ರ ಕತೆ. ಪ್ರತೀ ಸಲ ಹೋದಾಗ ಗಂಟಲು ತನಕ ತಿಂದು ‘ಇನ್ನು ಒಂದೆರಡು ತಿಂಗಳು ಈ ಕಡೆ ಸುಳಿಯಬಾರಪ್ಪʼ ಎಂದು ಶಪಥ ತೆಗೆದುಕೊಳ್ಳುವುದು. ಆದರೆ ಮುಂದಿನ ತಿಂಗಳನಲ್ಲಿಯೇ ಆ ಶಪಥವನ್ನು ಚಾಚೂ ತಪ್ಪದೆ ಮುರಿಯುವುದು. ಪರ ಊರಿನಲ್ಲಿ ಈ ಇಡ್ಲಿ ಸಾಂಬಾರಿನ ಬಯಕೆ ಸಾಕಪ್ಪಾ ಸಾಕು!