ಸಂತನಾದ ಅನಾಗರಿಕ ಹಬೀಬ್ ಅಲ್ ಅಜಾಮಿ

ಪರ್ಸಿಯಾದಲ್ಲಿ ಹುಟ್ಟಿ ಬಸ್ರಾ ನಗರದಲ್ಲಿ ನೆಲಸಿದ ಹಬೀಬ್ ಇಬ್ನ್ ಮುಹಮ್ಮದ್ ಅಲ್ ಅಜಾಮಿ ಅಲ್ ಬಸ್ರಿ ಹೆಸರಾಂತ ಸಂಪ್ರದಾಯವಾದಿಯಾಗಿದ್ದು ಮತ್ತೆ ಸೂಫಿಯಾಗಿ ಪರಿವರ್ತನೆಯಾದದ್ದು ಸಂತ ಅಲ್ ಹಸನ್ ಅಲ್ ಬಸ್ರಿಯವರು ಮತ್ತು ಇಬ್ನ್ ಸಿರಿನ್ ರವರ ಬೋಧನೆಯಿಂದ. ಅವರು ತಮ್ಮ ಸುಖದ ಸುಪ್ಪತ್ತಿನ ಬದುಕಿನಿಂದ ಪರಿವರ್ತನೆಯಾದ ನಂತರ ಒಳ್ಳೆಯ ವಾಗ್ಮಿಯೆಂದು ಹೆಸರು ಗಳಿಸಿದರು, ಇದಕ್ಕೆ ಕಾರಣ ಅವರು ಅಲ್ ಹಾಅನ್ ಎಂಬ ಪ್ರಖ್ಯಾತ ವಾಗ್ಮಿಯ ಉಪನ್ಯಾಸ ಎಲ್ಲಿದ್ದರೂ ಕೂಡ ಬಿಡದೆ ಕೇಳಲು ಹೋಗುತ್ತಿದ್ದರು. ಹೀಗೆ ಅವರ ನಿಕಟ ಅನುಯಾಯಿಯೂ ಆಗಿಬಿಟ್ಟರು. ಹಬೀಬ್‌ರವರಿಗೆ ಅರೆಬಿಕ್ ಭಾಷೆ ಬಾರದೆ ಕುರಾನ್ ಓದಲು ತೊಡಕಾಗುತ್ತಿತ್ತಂತೆ ಅದಕ್ಕೆ ‘ಅಲ್ ಆಜಾಮಿ’ ಅಂತ ಅಡ್ಡ ಹೆಸರಿಟ್ಟು ಇವರನ್ನು ಕರೆದರು; ಈ ಶಬ್ಧದ ಅರ್ಥ ಅನಾಗರಿಕ, ಅರಬಿಕ್ ಭಾಷೆ ಬಾರದವನು ಎಂದಿದೆ.

ಹಬೀಬ್ ಊರಲ್ಲೊಬ್ಬ ದೊಡ್ಡ ಆಸ್ತಿವಂತರಾಗಿ ಮತ್ತು ಬಡ್ಡಿಗೆ ಸಾಲಕೊಡುವ ಮಾರ್ವಾಡಿಯಾಗಿ ಅತ್ಯಂತ ಶ್ರೀಮಂತರಾಗಿದ್ದರು. ದಿನವೂ ಬಸ್ರಾ ನಗರ ಸುತ್ತಾಡಿ ತಮ್ಮಿಂದ ಸಾಲ ಪಡೆದವರಿಂದ ಬಡ್ಡಿ ವಸೂಲಿ ಮಾಡುತ್ತಿದ್ದರು. ಸಾಲ ಪಡೆದವರು ಹಣವಿಲ್ಲವೆಂದರೆ ತನ್ನ ಚಪ್ಪಲಿಗೆ ಚರ್ಮ ಕೊಡಿಸು ಎಂದು ಏನಾದರೂ ಕೇಳುತ್ತಾ ತನ್ನ ದಿನದ ಖರ್ಚನ್ನು ಸಾಲಗಾರರಿಂದ ಹೇಗಾದರೂ ಹೆಚ್ಚುವರಿಯಾಗಿ, ಬಿಟ್ಟಿಯಾಗಿ ಪಡೆದು, ಹೊಂದಿಸಿಕೊಂಡು ತನ್ನಲ್ಲಿರುವ ಶ್ರೀಮಂತಿಕೆ ದಿನವೂ ವೃದ್ಧಿಯಾಗಬೇಕೇ ಹೊರತು ಸ್ವಲ್ಪವೂ ಕರಗದಂತೆ ನೋಡಿಕೊಳ್ಳುತ್ತಿದ್ದರು.

ಒಂದು ದಿನ ಒಬ್ಬ ಸಾಲಗಾರನನ್ನು ಹುಡುಕುತ್ತಾ ಹೋಗಿದ್ದರು. ಅವನು ಮನೆಯಲ್ಲಿರಲಿಲ್ಲ, ಅವನು ಕಾಣದಿರುವುದರಿಂದ ಮನೆಯಲ್ಲಿದ್ದ ಅವನ ಹೆಂಡತಿಯ ಬಳಿ ಎಂದಿನಂತೆ ಚಪ್ಪಲಿಗೆ ಚರ್ಮ ಕೊಡಿಸಬೇಕೆಂದು ಹೇಳಿದರು.

“ನನ್ನ ಗಂಡ ಮನೆಯಲ್ಲಿಲ್ಲ, ನನ್ನಲ್ಲಿ ನಿಮಗೆ ಕೊಡಲು ಏನೂ ಇಲ್ಲ. ನಾವು ಒಂದು ಕುರಿಯನ್ನು ಜುಬಾಂ ಮಾಡಿದ್ದೇವೆ, ಅದರ ತಲೆ ಉಳಿದಿದೆ. ಅದನ್ನು ಬೇಕಿದ್ದರೆ ಕೊಡುತ್ತೇನೆ” ಎಂದಳು ಆ ಸಾಲಗಾರನ ಹೆಂಡತಿ. ಇದಾದರೂ ಸಿಕ್ಕಿದ್ದನ್ನು ಮನೆಗೆ ಕೊಂಡು ಹೋಗುವ ಎಂದು ಹಬೀಬ್ ಲೆಕ್ಕ ಹಾಕಿಕೊಂಡರು.

“ಸರಿ, ಅದನ್ನೇ ಕೊಡು ಮತ್ತೆ. ಈಗ ಒಲೆಯಲ್ಲಿ ಮಡಿಕೆಯಿಟ್ಟು ಬೆಂಕಿ ಮಾಡು ನೋಡುವಾ..” ಎಂದರು.
“ಮನೆಯಲ್ಲಿ ಬ್ರೆಡ್ಡಾಗಲೀ, ಉರುವಲಾಗಲೀ ಏನೂ ಇಲ್ಲ.” ಎಂದಳು ಸಾಲಗಾರನ ಹೆಂಡತಿ.
“ಸರಿ, ನಾನು ಬ್ರೆಡ್ಡು ಮತ್ತು ಉರುವಲು ತರುತ್ತೇನೆ, ಇದರ ಬೆಲೆಯನ್ನು ಚಪ್ಪಲಿ ಚರ್ಮದ ಖರ್ಚಿಗೆ ಹಾಕುತ್ತೇನೆ.” ಎಂದರು.

ಹಬೀಬ್‌ರವರು ಹೇಳಿದ ಸಾಮಾನುಗಳನ್ನೆಲ್ಲ ತಂದರು. ಹೆಂಗಸು ಅಡುಗೆ ಮಾಡತೊಡಗಿದಳು. ಮಾಂಸ ಬೆಂದ ನಂತರ ಇನ್ನೇನು ಪಾತ್ರೆಗೆ ಬಡಿಸಲು ತಯಾರು ಮಾಡುತ್ತಿರುವಾಗ ಒಬ್ಬ ಭಿಕ್ಷುಕ ಬಂದು ಬಾಗಿಲು ಬಡಿದ.

ಇದನ್ನು ಕಂಡ ಹಬೀಬ್, “ನೀನು ಕೇಳಿದ್ದನ್ನು ನಾವು ನಿನಗೆ ಕೊಟ್ಟರೆ ನೀನೇನೂ ಶ್ರೀಮಂತನಾಗುವುದಿಲ್ಲ. ಕೊಟ್ಟ ನಾವು ಮಾತ್ರ ಬಡವರಾಗುತ್ತೇವೆ.” ಎಂದು ಅವನನ್ನು ದೂರ ಹೋಗಲು ಹೇಳಿದರು.

ಹೆಂಗಸಿನೊಂದಿಗೆ ಮತ್ತೆ ಭಿಕ್ಷುಕ ಅಂಗಲಾಚಿ, ತನ್ನ ಕರಟೆಗೆ ಏನಾದರೂ ತಿಂಡಿ ಹಾಕೆಂದು ಬೇಡಿಕೊಂಡ. ಹೆಂಗಸು ಮಡಿಕೆಯ ಬಾಯಿ ತೆರೆದು ನೋಡುವಾಗ ಬೇಯಿಸಿದ ಅಡುಗೆಯೆಲ್ಲ ಸುಟ್ಟು ಕರ್ರಗಾಗಿತ್ತು. ಅವಳು ಇದನ್ನು ನೋಡಿ ದಂಗಾಗಿ ಹಬೀಬರನ್ನು ಕರೆದು ತೋರಿಸಿದಳು.

“ನೋಡು, ನೀನು ಆ ಭಿಕ್ಷುಕನಿಗೆ ಬಯ್ದು, ಓಡಿಸಿದಿಯಲ್ಲಾ ಅದರಿಂದ ಹೀಗಾಯ್ತು. ಇದರಿಂದಾಗಿ ನಮಗಿನ್ನು ಈ ಬದುಕಿನಲ್ಲಿ ಏನೆಲ್ಲಾ ಆಗಲಿದೆಯೋ, ಏನೋ!” ಎಂದು ಅವಳು ಅತ್ತಳು.

ಇದನ್ನು ನೋಡಿದಾಗ ಹಬೀಬರ ಹೊಟ್ಟೆಯಲ್ಲಿ ಒಂಥರಾ ಬೆಂಕಿಯ ಉರಿ ಕಾಣಿಸಿಕೊಂಡಿತು. ಅದು ತಣಿಯವ ಸೂಚನೆ ಕಾಣಲಿಲ್ಲ. “ನೋಡು ಹೆಂಗಸೇ, ನಾನು ಮಾಡಿದ್ದೆಲ್ಲ ತಪ್ಪಾಯಿತು. ನಾನು ಅದಕ್ಕಾಗಿ ಪಶ್ಚಾತ್ತಾಪ ಪಡುತ್ತಿದ್ದೇನೆ.” ಎಂದು ಅಲ್ಲಿಂದ ಹೊರಟರು.

ಮರುದಿನ ಎಂದಿನಂತೆ ಅವರು ಸಾಲ ವಸೂಲಾತಿಗೆ ಹೊರಟಿದ್ದರು. ಆ ದಿನ ಶುಕ್ರವಾರ, ಮಕ್ಕಳೆಲ್ಲ ಆಟವಾಡುತ್ತಿದ್ದರು. ಹಬೀಬರನ್ನು ಕಂಡ ಕೂಡಲೇ ಮಕ್ಕಳೆಲ್ಲರೂ ಜೋರಾಗಿ ಕೂಗ ತೊಡಗಿದರು. “ಏ…ನೋಡ್ರೋ… ಹಬೀಬ್ ಬರುತ್ತಿದ್ದಾನೆ, ಓಡಿ…ಓಡಿ…ಅವನ ಗಾಳಿ ನಮಗೆ ಸೋಕಿದರೂ ಸಾಕು, ನಾವೆಲ್ಲ ಅವನ ಹಾಗೆಯೇ ಶಾಪಗ್ರಸ್ಥರಾಗುತ್ತೇವೆ.”

ಮಕ್ಕಳ ಈ ಮಾತುಗಳು ಹಬೀಬ್‌ರವರಿಗೆ ಬಹಳವಾಗಿ ನಾಟಿತು. ಅವರು ತನ್ನ ದಾರಿ ಬದಲಿಸಿ ಶುಕ್ರವಾರ ಮಸೀದಿಯ ಸಭೆಗೆ ನಡೆಯ ತೊಡಗಿದರು. ಅಲ್ಲಿ ಹಸನ್ ಅಲ್ ಬಸ್ರೀಯವರ ಪ್ರವಚನದ ಕೆಲವು ವಾಕ್ಯಗಳು ಅವರ ಹೃದಯಕ್ಕೆ ನೇರವಾಗಿ ತಾಗಿ ಅವರಿಗೆ ಸ್ಮೃತಿ ತಪ್ಪಿದಂತಾಯಿತು. ಹಬೀಬ್‌ರವರು ಬಹಳ ಪಶ್ಚಾತ್ತಾಪ ಪಟ್ಟರು. ಇದು ಸಂತ ಹಸನ್ ಅಲ್ ಬಸ್ರಿಯವರಿಗೆ ಗೊತ್ತಾಗಿ, ಹಬೀಬ್‌ರವರ ಬಳಿ ಬಂದು ಕೈಹಿಡಿದು ಅವರನ್ನು ಸಮಾಧಾನ ಪಡಿಸಿದರು.

ಮಸೀದಿಯಿಂದ ಹಿಂತಿರುಗುವಾಗ ದಾರಿಯಲ್ಲಿ ಒಬ್ಬ ಅವರಿಂದ ಸಾಲ ಪಡೆದ ವ್ಯಕ್ತಿ ಹಬೀಬ್‌ರವರನ್ನು ಕಂಡು, ಹಾದಿ ಬಿಟ್ಟು ಬೇರೆಕಡೆ ತಿರುಗಿ ಓಡ ತೊಡಗಿದ. ಹಬೀಬ್‌ರವರು ಅವನನ್ನು ಕೂಗಿ ಕರೆದರು, “ಓಡಬೇಡಪ್ಪಾ, ನಿಲ್ಲು. ಇಷ್ಟರವರೆಗೆ ನೀವೆಲ್ಲ ನನ್ನನ್ನು ಕಂಡು ಓಡುತ್ತಿದ್ದೀರಲ್ಲಾ, ಇನ್ನು ನಾನು ನಿಮ್ಮನ್ನು ಕಂಡು ಓಡಲು ಶುರು ಮಾಡ ಬೇಕಾಗಿದೆ” ಎಂದು ಹೇಳಿದರು.

ಅದೇ ಹಾದಿಯಲ್ಲಿ ಮುಂದೆ ನಡೆಯುತ್ತಿದ್ದರು. ಮಕ್ಕಳ ಗುಂಪು ಅದೇ ಸ್ಥಳದಲ್ಲಿ ಆಟವಾಡುತ್ತಿತ್ತು. ಹಬೀಬರನ್ನು ಕಂಡ ಕೂಡಲೇ ಮಕ್ಕಳು ಮತ್ತೆ ಬೊಬ್ಬೆ ಹಾಕಿದರು: “ನೋಡ್ರೋ ಅಲ್ಲಿ ಪ್ರಶಾಂತವಾಗಿರುವ ಹಬೀಬ್ ಬರುತ್ತಿದ್ದಾರೆ. ಓಡ್ರೋ… ನಮ್ಮ ಮೈಮೇಲಿನ ಧೂಳು ಅವರ ಮೈ ಮೇಲೆ ನಿಲ್ಲಕೂಡದು, ನಾವೆಲ್ಲರೂ ತಪ್ಪು ಮಾಡಿರುವ ಪಾಪಿಗಳು”

“ಓ ದೇವರೇ… ನಾನು ನಿನಗೆ ಶರಣಾಗತನಾದ ಈ ಒಂದು ದಿನದಿಂದಾಗಿ, ಮನುಷ್ಯರ ಹೃದಯದಲ್ಲಿ ನನಗಾಗಿ ಶಾಂತಿಯ ನಗಾರಿಯನ್ನು ಬಾರಿಸಿದೆಯಾ, ಒಂದು ದಿನದ ಸಚ್ಚಾರಿತ್ರ್ಯಕ್ಕಾಗಿ ನನ್ನ ಹೆಸರನ್ನು ಎಲ್ಲೆಡೆ ಹರಡಿದೆಯಾ!” ಎಂದು ಹಬೀಬ್ ಕೂಗಿದರು.

ನಂತರ ಒಂದು ಸಂದೇಶವನ್ನು ಹಬೀಬ್ ಸಾರ್ವಜನಿಕರೆದುರು ಬಹಿರಂಗ ಪಡಿಸಿದರು. “ಹಬೀಬ್‌ನಿಂದ ಯಾರಿಗೆ ಏನು ಬೇಕಾದರೂ ಬಂದು ತೆಗೆದುಕೊಳ್ಳಬಹುದು”

ಜನರು ಅವರ ಸುತ್ತ ಬಂದು ಸೇರಿದರು. ಅವರ ತನ್ನದೆಂಬುದನ್ನೆಲ್ಲವನ್ನೂ ಜನರಿಗೆ ದಾನವಾಗಿ ನೀಡಿದರು. ಎಲ್ಲವನ್ನೂ ದಾನಮಾಡಿದ ಶ್ರೀಮಂತ ಹಬೀಬ್ ಈಗ ಚಿಕ್ಕಾಸು ಕೂಡ ಇಲ್ಲದ ದರಿದ್ರರಾದರು. ಯಾರೋ ಒಬ್ಬರು ಬಂದು ದಾನ ನೀಡುವಂತೆ ಕೇಳಿದಾಗ, ತನ್ನಲ್ಲೇನೂ ಇಲ್ಲವೆಂದು ತನ್ನ ಹೆಂಡತಿಯ ಚಾದರವನ್ನು ತೆಗೆದು ಕೊಟ್ಟರು. ಇನ್ನೊಬ್ಬ ಬಂದು ಕೇಳಿದಾಗ ತನ್ನಲ್ಲೇನೂ ಉಳಿದಿಲ್ಲದ ತಾನು ತೊಟ್ಟ ಅಂಗಿಯನ್ನೇ ತೆಗೆದು ಕೊಟ್ಟು ಬರಿಮೈಯಲ್ಲಿ ಉಳಿದರು. ನಂತರ ಯೂಪ್ರೆಟಿಸ್ ನದಿಯ ತೀರದಲ್ಲಿದ್ದ ಒಂದು ಚಿಕ್ಕ ಶಿಥಿಲಗೊಂಡ ಗುಡಿಸಲನ್ನು ದುರಸ್ತಿ ಮಾಡಿ ತನ್ನ ಕುಟುಂಬದೊಂದಿಗೆ ವಾಸ ಮಾಡ ತೊಡಗಿದರು. ಅಲ್ಲೇ ಕೂತು ಸೃಷ್ಟಿಕರ್ತನ ಪ್ರಾರ್ಥನೆಯಲ್ಲಿ ಮಗ್ನರಾದರು. ಸಂತ ಹಸನ್‌ರವರ ಶಿಷ್ಯನಾಗಿ ಹಗಲಿರುಳೂ ಅವರ ಪ್ರಹಸನವನ್ನು ಕೇಳುತ್ತಾ ಇದ್ದರು. ಆದರೆ ಕುರಾನನ್ನು ಓದಲು ಕಲಿಯಲು ಎಷ್ಟು ಪ್ರಯತ್ನಪಟ್ಟರೂ ಅವರಿಗೆ ಸಾಧ್ಯವಾಗಲಿಲ್ಲ. ಇದರಿಂದಾಗಿ ಜನ ಅವರಿಗೆ ‘ಅಲ್ ಆಜಾಮಿ’ ಎಂದು ಕರೆಯತೊಡಗಿದರು.

ಹಲವು ವರ್ಷಗಳು ಸಂದವು, ಹಬೀಬ್‌ರವರು ದಟ್ಟದರಿದ್ರರಾಗಿಯೇ ಉಳಿದರು. ಮನೆವಾರ್ತೆಯ ವೆಚ್ಚಕ್ಕಾಗಿ ಅವರ ಪತ್ನಿ ಹಣ ಕೇಳುತ್ತಲೇ ಇದ್ದರು. ಇದರಿಂದಾಗಿ ಹಬೀಬ್‌ರವರು ಮುಂಜಾನೆ ತನ್ನ ಗುಡಿಸಲಿನಿಂದ ಹೊರಟು ದೂರದಲ್ಲಿ ಒಂದು ಪಾಳುಬಿದ್ದ ಮುರುಕು ಗುಡಿಸಲಲ್ಲಿ ಹಗಲು ಹೊತ್ತು ಇಡೀ ದಿನ ಏಕಾಂತದಲ್ಲಿ ಪ್ರಾರ್ಥನೆಯನ್ನು ಮಾಡುತ್ತಿದ್ದರು. ರಾತ್ರಿ ತನ್ನ ಗುಡಿಸಲಿಗೆ ಹಿಂತಿರುಗಿ ಬರುತ್ತಿದ್ದರು.

“ನೀವು ಎಲ್ಲಿ ಕೆಲಸ ಮಾಡುತ್ತಿದ್ದೀರಿ, ಮನೆಗೆ ಏನೂ ತಾರದೆ ಬರಿಗೈಯಲ್ಲೇ ಬರುತ್ತಿದ್ದೀರಲ್ಲಾ?” ಎಂದು ಪತ್ನಿ ಕೇಳಿದರು.
“ನಾನು ಯಾರ ಕೈಕೆಳಗೆ ಕೆಲಸ ಮಾಡುತ್ತಿರುವೆನೋ ಆ ಯಜಮಾನ ತುಂಬ ಧಾರಾಳವಾದ ಹೃದಯವಂತ. ಅವನು ಎಷ್ಟೊಂದು ಧಾರಾಳಿಯೆಂದರೆ ಅವನೊಂದಿಗೆ ನನಗಾಗಿ ಏನಾದರೂ ಬೇಡಿಕೊಳ್ಳಲು ಕೂಡ ಮುಜುಗರವಾಗುತ್ತದೆ. ಸರಿಯಾದ ಸಮಯದಲ್ಲಿ ಅವನು ಕೂಲಿಯನ್ನು ಕೊಟ್ಟೇ ಕೊಡುತ್ತಾನೆ. ಹತ್ತು ದಿನಕ್ಕೊಮ್ಮೆ ನಿನ್ನ ಕೂಲಿಯನ್ನು ಕೊಡುತ್ತೇನೆಂದು ಹೇಳುತ್ತಾನೆ.” ಎಂದು ಹಬೀಬ್‌ರವರು ತನ್ನ ಪತ್ನಿಯನ್ನು ಸಮಾಧಾನ ಪಡಿಸಿದರು.

ತನ್ನ ಏಕಾಂತದ ಪ್ರಾರ್ಥನೆಗಾಗಿ ಆರಿಸಿದ ಮುರುಕು ಗುಡಿಸಲಲ್ಲಿ ಸ್ವಲ್ಪ ದುರಸ್ತಿಯ ಕೆಲಸವನ್ನೂ ಹಬೀಬ್‌ರವರು ಮಾಡುತ್ತಿದ್ದರು. ಹೀಗೆ ಹತ್ತು ದಿನಗಳು ಕಳೆಯುವಾಗ ಒಂದು ಮಧ್ಯಾಹ್ನದ ನಮಾಜು ಮಾಡುವಾಗ ಅವರ ತಲೆಯಲ್ಲಿ ಒಂದು ಯೋಚನೆ ಮೂಡಿತು. “ನಾನು ಏನನ್ನು ಮನೆಗೆ ಕೊಂಡುಹೋಗಲಿ, ನಾನು ಪತ್ನಿಗೆ ಏನೆಂದು ಹೇಳಲಿ?”

ಹಬೀಬ್‌ರವರು ಇದನ್ನೇ ಮತ್ತೆ ಮತ್ತೆ ಯೋಚಿಸುತ್ತಾ ಕೂತಿರುವಾಗ ದೇವರು ಅವರ ಮನೆ ಬಾಗಿಲಿಗೆ ಒಬ್ಬ ಕೂಲಿಯ ಮೂಲಕ ಅವನ ಹೇಸರ ಕತ್ತೆ ಹೊರುವಷ್ಟು ಹಿಟ್ಟು, ಇನ್ನೊಂದು ಕತ್ತೆಯ ಬೆನ್ನ ಮೇಲೆ ಧರ್ಮ ಸುಲಿದ ಕುರಿ ಮಾಂಸ, ಮತ್ತೊಂದರ ಮೇಲೆ ಎಣ್ಣೆ, ದಿನಸಿ ಸಾಮಾನುಗಳು, ಜೇನು ತುಪ್ಪ ಇತ್ಯಾದಿಗಳನ್ನು ಕಳುಹಿಸಿಕೊಟ್ಟ. ಮನೆಯ ಮುಂದೆ ಒಬ್ಬ ಸುಂದರ ಯುವಕ ಬಂದು ಐನೂರು ದಿರ್‌ಹಾಮ್ ಬೆಳ್ಳಿನಾಣ್ಯಗಳ ಥೈಲಿಯನ್ನು ಹಿಡಿದುಕೊಂಡು ಹಬೀಬರ ಗುಡಿಸಲಿನ ಬಾಗಿಲನ್ನು ಬಡಿದ.

“ಏನಾಗ ಬೇಕಿತ್ತು?” ಎನ್ನುತ್ತಾ ಹಬೀಬರ ಪತ್ನಿ ಬಾಗಿಲು ತೆರೆದು ಹೊರ ಬಂದಳು.
“ಯಜಮಾನ್ರು ಇದನ್ನೆಲ್ಲ ಕಳುಹಿಸಿ ಕೊಟ್ಟಿದ್ದಾರೆ. ಇದನ್ನೆಲ್ಲ ಒಳಗಿಡಿ. ಹಬೀಬ್ ಅವರಿಗೆ ಹೇಳಿ, ನಿಮ್ಮ ಕೆಲಸವನ್ನು ಇನ್ನಷ್ಟು ಉತ್ತಮಗೊಳಿಸಿದರೆ ಇನ್ನಷ್ಟು ಕೂಲಿ ಸಿಗುತ್ತದೆ ಎಂದು ಯಜಮಾನರು ಹೇಳಿದ್ದಾರೆ ಅಂತ.” ಎಂದು ಸುಂದರ ಯುವಕನೂ ಹೊರಟ. ಕೂಲಿಯವನೂ ಸಾಮಾನುಗಳನ್ನು ಮನೆಯೊಳಗಿಟ್ಟು ತನ್ನ ಕತ್ತೆಗಳೊಂದಿಗೆ ಹೊರಟು ಹೋದ. ಇತ್ತ ರಾತ್ರಿ ಹಬೀಬ್‌ರವರು ತುಂಬ ಯೋಚಿಸುತ್ತಾ, ದುಃಖದಿಂದ ಮನೆ ಕಡೆ ಹೊರಟರು. ಮನೆ ಹತ್ತಿರ ವಾಗುತ್ತಿದ್ದಂತೆ ಮಾಂಸದಡುಗೆ, ರೊಟ್ಟಿ ಕರಿಯುವ ಸುಗಂಧ ಮೂಗಿಗೆ ಬಡಿಯಿತು. ಅವರ ಪತ್ನಿ ಇವರನ್ನು ಕಂಡು ಹೊರಗೆ ಬಂದವಳೇ ಕೈಕಾಲು ತೊಳೆಯಲು ನೀರು ಕೊಟ್ಟಳು, ಒಳಗೆ ಬಂದಾಗ ಮುಖವೊರೆಸಿ, ಎಂದಿಗಿಂತ ಹೆಚ್ಚಿನ ಪ್ರೀತಿತೋರಿದಳು.

” ರೀ…ನಿಮ್ಮ ಯಜಮಾನರು ನಿಜಕ್ಕೂ ತುಂಬ ಉದಾರಿ, ತುಂಬ ಕರುಣಾಳು. ಒಬ್ಬ ಸುಂದರ ಯುವಕನ ಮೂಲಕ ಏನೆಲ್ಲ ಕಳುಹಿಸಿದ್ದಾನೆ ನೋಡಿ, ನಿಮ್ಮ ಯಜಮಾನರು ಅವನ ಮೂಲಕ ಹೇಳಿಕಳಿಸಿದ್ದಾರೆ, ‘ನಿಮ್ಮ ಕೆಲಸವನ್ನು ಇನ್ನಷ್ಟು ಉತ್ತಮಗೊಳಿಸಿದರೆ ಇನ್ನಷ್ಟು ಕೂಲಿ ಸಿಗುತ್ತದೆ’ ಅಂತ” ಎಂದು ಉತ್ಸಾಹದಿಂದ ಹೇಳಿದಳು.

ಪತ್ನಿಯ ಮಾತುಗಳನ್ನು ಕೇಳುತ್ತಾ ಹಬೀಬ್‌ರವರು ಮೂಕವಿಸ್ಮಿತರಾದರು!

“ನಾನು ಬರೇ ಹತ್ತು ದಿನಗಳು ಕೆಲಸ ಮಾಡಿದ್ದಕ್ಕೆ ಇಷ್ಟೆಲ್ಲಾ ಕೂಲಿ ನೀಡಿದ. ಇನ್ನೂ ಶ್ರಮಪಟ್ಟು ಕೆಲಸ ಮಾಡಿದರೆ ಇನ್ನೇನೆಲ್ಲಾ ಕೊಡುತ್ತಾನೋ ಏನೋ,” ಎಂದರು ಹಬೀಬ್.

ನಂತರದಲ್ಲಿ ತನ್ನ ಗಮನವನ್ನೆಲ್ಲ ಅವನತ್ತ ತಿರುಗಿಸಿ ಲೌಕಿಕ ಸುಖವನ್ನೆಲ್ಲವನ್ನೂ ತೊರೆದು ದೇವರ ಸೇವೆಗಾಗಿ ತನ್ನ ಉಳಿದ ಜೀವಮಾನವನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು.

******

ಒಂದು ದಿನ ಒಬ್ಬಳು ಮುದುಕಿ ಬಂದು ಹಬೀಬ್‌ರವರ ಮುಂದೆ ಕೂತು ಗೋಳೆಂದು ಅತ್ತಳು. “ನನ್ನ ಮಗನೊಬ್ಬ ನನ್ನನ್ನು ಅಗಲಿ ಬಹಳ ಕಾಲವಾಯಿತು. ನನಗೆ ಇನ್ನು ಅವನನ್ನು ಅಗಲಿರಲು ಸಾಧ್ಯವಾಗದು. ನನ್ನ ಪರವಾಗಿ ದೇವರೊಂದಿಗೆ ಪ್ರಾರ್ಥಿಸಿ. ನಿಮ್ಮ ಪ್ರಾರ್ಥನೆಯ ಫಲವಾಗಿಯಾದರೂ ನನ್ನ ಮಗ ಮನೆಗೆ ಹಿಂತಿರುಗಿ ಬರಲಿ” ಎಂದು ಹಬೀಬರನ್ನು ಕೇಳಿಕೊಂಡಳು.

“ನಿನ್ನ ಬಳಿ ಹಣ ಇದೆಯೇ?” ಎಂದು ಹಬೀಬರು ಅವಳನ್ನು ಕೇಳಿದರು.
“ಹೌದು, ಎರಡು ದಿರ್‍ಹಾಮುಗಳಿವೆ” ಎಂದಳವಳು.
“ಅದನ್ನು ಬಡವರಿಗೆ ದಾನ ಮಾಡು.” ಎಂದರು ಹಬೀಬ್.

ಹಬೀಬ್‌ರವರು ದುವಾ ಮಾಡಿದರು. ಮತ್ತೆ ಮುದುಕಿಗೆ ಹೇಳಿದರು, “ಹೋಗು, ನಿನ್ನ ಮಗ ಹಿಂತಿರುಗಿ ಬಂದಿದ್ದಾನೆ.”

ಮುದುಕಿ ಹಿಂತಿರುಗಿ ಮನೆಯನ್ನು ತಲಪುವಾಗ ಮಗ ಬಂದು ನಿಂತಿದ್ದ. “ನನ್ನ ಮಗ ಬಂದ…” ಎಂದು ಸಂತೋಷದಿಂದ ಮುದುಕಿ ಕೂಗಿದಳು. ಅವನನ್ನು ಕರೆದುಕೊಂಡು ಬಂದು ಹಬೀಬರ ಮುಂದೆ ನಿಂತಳು.

“ಏನಾಯಿತು ನಿನಗೆ?” ಎಂದು ಹಬೀಬ್‌ರವರು ಕೇಳಿದರು.
“ನಾನು ಕಿರ್‌ಮಾನ್ ಎಂಬ ಊರಲ್ಲಿದ್ದೆ. ನನ್ನ ಗುರುಗಳು ನನ್ನನ್ನು ಮಾಂಸ ತರಲು ಕಳುಹಿಸಿದ್ದರು. ನಾನು ಮಾಂಸವನ್ನು ತಂದು ಅವರ ಕೈಗೆ ಕೊಡುತ್ತಿದ್ದೆನಷ್ಟೇ, ಒಂದು ಸುಳಿಗಾಳಿ ರಭಸದಿಂದ ಬೀಸಿಬಂದು, ನನಗೊಂದು ಅಶರೀರವಾಣಿ ಕೇಳಿಸಿತು ‘ಓ ಗಾಳಿಯೇ, ಹಬೀಬರ ದುವಾ ನಿನ್ನ ಬೆಂಬಲಕ್ಕಿದೆ, ಇವನ ತಾಯಿಯ ಎರಡು ದಿರ್‍ಹಾಮ್ ದಾನದ ಪುಣ್ಯವೂ ಇದೆ. ಇವನನ್ನು ಮನೆಗೆ ತಲಪಿಸು’ ಮರುಕ್ಷಣದಲ್ಲಿ ನಾನು ಮನೆಯ ಮುಂದಿದ್ದೆ” ಎಂದ ಮಗ.

ಒಂದು ವರ್ಷ ಹಜ್ ಯಾತ್ರೆಯ ತಿಂಗಳು ದುಲ್‌ಹಜ್‌ನ ದಿನಾಂಕ ಎಂಟರಂದು ಹಬೀಬ್‌ರವರು ಬಸ್ರಾದಲ್ಲಿದ್ದರು. ಒಂಭತ್ತನೆಯ ದಿನಾಂಕದಂದು ಹಜ್‌ಯಾತ್ರೆಯ ಅರಫಾದ ಪ್ರಾರ್ಥನೆಯಲ್ಲಿ ಶಾಮೀಲಾಗಿದ್ದರು.

ಒಮ್ಮೆ ಬಸ್ರಾ ನಗರಕ್ಕೆ ಬರಗಾಲ ಬಂತು. ಕಡು ಬಡ ಜನರು ಆಹಾರಕ್ಕಾಗಿ ಹಾಹಾಕಾರ ಮಾಡುತ್ತಿದ್ದರು. ಹಬೀಬ್‌ರವರು ವರ್ತಕರ ಬಳಿ ಹೋಗಿ ಸಾಲ ಪಡೆದು ಅವಶ್ಯಕ ಆಹಾರ ಸಾಮಗ್ರಿಗಳನ್ನು ಖರೀದಿಸಿ ಬಡ ಜನರಿಗೆ ಹಂಚುತ್ತಿದ್ದರು. ತನ್ನ ಖಾಲಿ ಹಣದ ಥೈಲಿಯನ್ನು ಮಲಗುವಾಗ ತಲೆದಿಂಬಿನಡಿಯಲ್ಲಿಟ್ಟು ಮಲಗುತ್ತಿದ್ದರು. ಮರುದಿನ ವರ್ತಕರು ಬಂದು ತಾವು ನೀಡಿದ ಸಾಮಾನಿನ ಹಣದ ಲೆಕ್ಕಾಚಾರವನ್ನು ನೀಡಿದಾಗ ತಲೆದಿಂಬಿನಡಿಯಿಂದ ಹಣದ ಥೈಲಿಯನ್ನು ತೆಗೆದು ದಿರ್‍ಹಾಮ್‌ಗಳನ್ನು ಲೆಕ್ಕ ಮಾಡಿ ಕೊಡುತ್ತಿದ್ದರು. ಅವರು ಹಿಂದೆ ಕೊಟ್ಟ ಸಾಲಗಳೆಲ್ಲ ವಾಪಾಸು ಬಂದು ತಲೆದಿಂಬಿನಡಿಯಲ್ಲಟ್ಟ ಥೈಲಿಯಲ್ಲಿ ಜಮಾ ಆಗುತ್ತಿದ್ದವು.

ಹಬೀಬರಿಗೊಂದು ಮನೆಯಿತ್ತು. ಅವರ ಮೈಮುಚ್ಚಲು ಒಂದು ಉಣ್ಣೆಯ ತುಪ್ಪಳದ ಕೋಟಿತ್ತು. ಇದನ್ನು ಸೆಖೆಗಾಲದಲ್ಲೂ ಮತ್ತು ಚಳಿಗಾಲದಲ್ಲೂ ಧರಿಸುತ್ತಿದ್ದರು. ಒಮ್ಮೆ ನಮಾಜಿನ ಮೊದಲು ವಜೂ ಅಥವಾ ವಿಧಿವತ್ತಾಗಿ ಕೈಕಾಲು ತೊಳೆಯುತ್ತಿದ್ದಾಗ ಕೋಟನ್ನು ನೆಲದ ಮೇಲೆ ಬಿಟ್ಟು ಹೋಗಿದ್ದರು. ಆ ಕಡೆ ಬಂದ ಹಬೀಬ್‌ರವರ ಗುರು ಸಂತ ಹಸನ್ ಅಲ್ ಬಸ್ರೀ ದಾರಿಯಲ್ಲಿ ಬಿದ್ದಿದ್ದ ಕೋಟನ್ನು ಹೆಕ್ಕಿಕೊಂಡರು.

“ಈ ಅಲ್ ಅಜಾಮಿಗೆ (ಅನಾಗರಿಕ) ಇದರ ಬೆಲೆ ತಿಳಿದಿಲ್ಲ. ಈ ತುಪ್ಪಳದ ಕೋಟನ್ನು ಹೀಗೆ ಬಿಟ್ಟು ಹೋಗಬಾರದಾಗಿತ್ತು, ಇದು ಖಂಡಿತಾ ಕಳೆದು ಹೋಗುತ್ತಿತ್ತು.” ಎಂದರು ಹಸನ್. ಹಬೀಬ್‌ರವರು ಆಗಲೇ ಹಿಂತಿರುಗಿ ಬಂದು ಇದನ್ನು ನೋಡುತ್ತಿದ್ದರು.

“ನಮ್ಮೆಲ್ಲರ ಗುರುಗಳೇ, ಇಮಾಮರೇ, ತಾವು ಯಾಕೆ ಇಲ್ಲಿ ನಿಂತಿರುವಿರಿ?” ಎಂದು ತಮ್ಮ ಗುರುಗಳಿಗೆ ಸಲಾಮ್ ಹೇಳುತ್ತಲೇ ಹಬೀಬ್‌ರವರು ಗೌರವ ಸೂಚಿಸಿದರು.

“ನಿನಗೆ ಗೊತ್ತಿಲ್ಲವೇ ಈ ಕೋಟನ್ನು ಈ ಥರ ಎಸೆದು ಹೋಗಬಾರದಂತ? ಇದು ಕಳೆದು ಹೋಗುತ್ತಿತ್ತು, ಹೇಳು, ಯಾರ ಸುಪರ್ದಿನಲ್ಲಿ ಇದನ್ನು ಬಿಟ್ಟು ಹೋಗಿದ್ದಿಯಾ?” ಎಂದು ಹಸನ್ ಕೇಳಿದರು.
“ಅವನ ಸುಪರ್ದಿನಲ್ಲಿ, ಅದನ್ನು ನೋಡಿಕೊಳ್ಳಲು ನಿಮ್ಮನ್ನು ರಕ್ಷಕನನ್ನಾಗಿ ನೇಮಿಸಿದವನು.” ಎಂದು ಹಬೀಬ್ ವಿನಯದಿಂದ ಹೇಳಿದರು.

ಒಂದು ದಿನ ಹಸನ್‌ರವರು ಹಬೀಬ್‌ರವರನ್ನು ಆಹ್ವಾನಿಸಲು ಬಂದಿದ್ದರು. ಹಬೀಬ್‌ರವರು ಹಸನ್‌ರವರ ಮುಂದೆ ಎರಡು ಬಾರ್ಲಿ ರೊಟ್ಟಿ ಮತ್ತು ಸ್ವಲ್ಪ ಉಪ್ಪು ಇಟ್ಟರು. ಹಸನ್‌ರವರು ತಿನ್ನಲು ಶುರು ಮಾಡಿದರು. ಒಬ್ಬ ಭಿಕ್ಷುಕ ಬಾಗಿಲ ಬಳಿ ಬಂದು ತಿನ್ನಲು ಏನಾದರೂ ಕೊಡಿ ಎಂದು ಕೇಳಿದ. ಹಬೀಬ್‌ರವರು ಹಸನ್‌ರವರ ಮುಂದಿದ್ದ ರೊಟ್ಟಿ ಮತ್ತು ಉಪ್ಪನ್ನು ಎತ್ತಿ ಅವನಿಗೆ ನೀಡಿದರು.

ಇದನ್ನು ಕಂಡ ಹಸನ್‌ರವರಿಗೆ ಬಹಳ ಆಶ್ಚರ್ಯವಾಯಿತು.

“ಹಬೀಬ್…ನೀನು ತುಂಬ ಯೋಗ್ಯ ಮನುಷ್ಯ. ನಿನಗೆ ಸ್ವಲ್ಪ ಜ್ಞಾನ ಕೂಡ ಇರಬೇಕು. ಅದು ಒಳ್ಳೆಯದು. ನಿನ್ನ ಅತಿಥಿ ತಿನ್ನುತ್ತಿರುವಾಗ ರೊಟ್ಟಿಯನ್ನು…. ಎಲ್ಲವನ್ನೂ ತೆಗೆದು ಭಿಕ್ಷುಕನಿಗೆ ನೀಡಿದೆ, ನೀನು ಒಂದು ಭಾಗವನ್ನು ಭಿಕ್ಷುಕನಿಗೂ, ಇನ್ನೊಂದು ಭಾಗವನ್ನು ಅತಿಥಿಗೂ ನೀಡ ಬಹುದಾಗಿತ್ತು.” ಎಂದರು ಹಬೀಬ್‌ರವರ ಗುರು ಮತ್ತು ಸಂತ ಹಸನ್‌ರವರು.

ಹಬೀಬ್‌ರವರು ಏನನ್ನೂ ಹೇಳದೆ ಸುಮ್ಮನಿದ್ದರು. ಓರ್ವ ಕೆಲಸದವ ತಲೆಯ ಮೇಲೆ ದೊಡ್ಡ ಟ್ರೇಯನ್ನು ಇಟ್ಟುಕೊಂಡು ಅಲ್ಲಿಗೆ ಪ್ರವೇಶಿಸಿದ. ಅವನು ಟ್ರೇಯನ್ನು ಕೆಳಗಿಟ್ಟಾಗ ಅದರಲ್ಲಿ ಒಂದು ಕುರಿಯ ತಂದೂರಿ, ಕಬಾಬ್ ಇತ್ತು. ಒಳ್ಳೆಯ ಬಿಸಿಬಿಸಿಯಾದ ಬ್ರೆಡ್ಡುಗಳಿದ್ದವು. ಒಂದು ಹಣದ ಚೀಲದಲ್ಲಿ ಐನೂರು ಬೆಳ್ಳಿಯ ದಿರ್‍ಹಾಮ್ ನಾಣ್ಯಗಳಿದ್ದವು. ಟ್ರೇಯನ್ನು ಕೆಲಸದವನು ಹಬೀಬರ ಮುಂದಿಟ್ಟ. ಹಬೀಬ್‌ರವರು ಅದರಲ್ಲಿನ ಹಣದ ಥೈಲಿಯನ್ನು ಭಿಕ್ಷುಕನಿಗೆ ನೀಡಿದರು. ತಿಂಡಿ ತುಂಬಿದ ಟ್ರೇಯನ್ನು ತೆಗೆದು ಹಸನ್‌ರವರ ಮುಂದಿಟ್ಟರು. ಹಸನ್ ತಗೆದು ಕಬಾಬ್ ಮತ್ತು ರೊಟ್ಟಿ ತಿನ್ನ ತೊಡಗಿದರು. ಹಸನ್‌ರವರು ಸಾಕಷ್ಟು ತಿಂದ ನಂತರ ಹಬೀಬ್ ಹೀಗೆ ಹೇಳಿದರು:

“ಗುರುಗಳೇ, ನೀವು ತುಂಬ ಒಳ್ಳೆಯವರು. ನಿಮಗೆ ಸ್ವಲ್ಪ ನಂಬಿಕೆ ಇರುತ್ತಿದ್ದರೆ ತುಂಬ ಒಳ್ಳೆಯದಿತ್ತು. ಜ್ಞಾನದ ಜೊತೆಗೆ ನಂಬಿಕೆಯೂ ಇದ್ದರೆ ಇನ್ನೂ ಒಳ್ಳೆಯದು.”

ಒಮ್ಮೆಹಸನ್‌ರವರು ಎಲ್ಲಿಗೋ ಹೊರಟಿದ್ದರು. ಅವರು ಟೈಗ್ರಿಸ್ ನದಿಯ ದಡಕ್ಕೆ ಬಂದಾಗ ಅಲ್ಲಿಗೆ ಹಬೀಬ್‌ರವರು ಬಂದಿದ್ದರು. “ಗುರುಗಳೇ, ನೀವಿಲ್ಲಿ ಯಾಕೆ ನಿಂತಿದ್ದೀರಿ ?” ಎಂದು ಹಬೀಬ್‌ರವರು ಕೇಳಿದರು.
” ನಾನು ಆಚೆ ದಡಕ್ಕೆ ಹೋಗಬೇಕು. ದೋಣಿ ಕಾಣ್ತಾ ಇಲ್ಲ.” ಎಂದರು ಹಸನ್.
” ಗುರುಗಳೇ ಏನಾಗಿದೆ ನಿಮಗೆ? ನನಗೆ ಏನೆಲ್ಲ ಗೊತ್ತಿದೆಯೋ ಅದೆಲ್ಲ ನಿಮ್ಮಿಂದಲೇ ನಾನು ಕಲಿತಿರೋದು. ಇತರರ ಮೇಲಿರುವ ದ್ವೇಷವನ್ನು ಹೃದಯದಿಂದ ಕಿತ್ತೆಸೆಯಿರಿ. ಮನಸ್ಸನ್ನು ಇಹದ ಸುಖದಿಂದ ಮುಕ್ತಗೊಳಿಸಿರಿ. ಎದುರಾಗುವ ಸಂಕಷ್ಟಗಳೆಲ್ಲವೂ ದೇವರ ಉಡುಗೊರೆಯೆಂದು ತಿಳಿಯಿರಿ. ಎಲ್ಲವೂ ದೇವರ ಕೊಡುಗೆ ಎಂದು ದೃಢವಿಶ್ವಾಸ ವಿರಿಸಿಕೊಳ್ಳಿ. ನೀರ ಮೇಲೆ ಕಾಲಿಟ್ಟು ಸರ ಸರನೆ ನಡೆದು ದಾಟಿಬಿಡಿ.” ಎನ್ನುತ್ತಾ ಹಬೀಬ್ ನೀರ ಮೇಲೆ ನಡೆಯ ತೊಡಗಿದರು.

ಅದನ್ನು ಕಂಡ ಹಸನ್ ಮೂರ್ಛೆತಪ್ಪಿ ಬಿದ್ದುಬಿಟ್ಟರು. ಅವರಿಗೆ ಪ್ರಜ್ಞೆ ಬಂದಾಗ ಸುತ್ತಲಿದ್ದ ಜನರು ಕೇಳಿದರು, “ಸಮಸ್ತ ಜನರ ಗುರುಗಳೇ, ನಿಮಗೇನಾಯಿತು?”
“ನನ್ನ ಶಿಷ್ಯ ಹಬೀಬ್ ಇಂದು ನನ್ನನ್ನು ಮೀರಿಸಿ ಬಿಟ್ಟ. ಅವನು ನೀರಿನ ಮೇಲೆ ನಡೆದು ಬಿಟ್ಟ. ನಾನು ಅವನೆದುರಿಗೆ ಷಂಡನಂತಾದೆ. ನಾಳೆ ಮಾಶರಾದಲ್ಲಿ (ಪುನರುತ್ಥಾನದ ದಿನ) ಸೇತುವೆಯನ್ನು ದಾಟು ಎಂಬ ಆಜ್ಞೆ ಬಂದಾಗ ನಾನು ಹೀಗೆಯೇ ಧೈರ್ಯವಿಲ್ಲದ ಷಂಡನಾದರೆ ಹೇಗೆ ?” ಎಂದರು ಹಸನ್.

ನಂತರ ಒಂದು ದಿನ ” ಹಬೀಬ್, ನೀನು ಈ ವಿದ್ಯೆಯನ್ನು ಹೇಗೆ ಕಂಡುಕೊಂಡೆ?” ಹಸನ್ ಕೇಳಿದರು.
“ಹೇಗೆಂದರೆ, ನಾನು ಹೃದಯವನ್ನು ಶುದ್ಧ ಬಿಳಿಯಾಗಿಸುತ್ತೇನೆ. ನೀವು ಕಾಗದವನ್ನು ಕರ್ರಗೆ ಮಾಡುತ್ತೀರಿ.” ಎಂದರು ಹಬೀಬ್.
“ನನ್ನ ಜ್ಞಾನದಿಂದ ಇನ್ನೊಬ್ಬರಿಗೆ ಲಾಭವಾಯಿತು. ಆದರೆ ನನಗೆ ಲಾಭ ತರಲಿಲ್ಲ.” ಎಂದು ಸಂತ ಹಸನ್‌ರವರು ಗೊಣಗಿದರು.

ಅನುಭಾವಿ ಕವಿ ಇಬ್ನ್ ಅತಾ ಅಲ್ ಅದಮಿ

ಇವರ ಪೂರ್ಣ ಹೆಸರು ಅಬುಲ್ ಅಬ್ಬಾಸ್ ಅಹ್ಮದ್ ಇಬ್ನ್ ಮುಹಮ್ಮದ್ ಇಬ್ನ್ ಸಹ್ಲ್ ಇಬ್ನ್ ಅತಾ ಅಲ್ ಅದಮಿ. ಇವರು ಖ್ಯಾತ ಸಂತ ಅಲ್ ಜುನೈದ್‌ರವರ ಶಿಷ್ಯ. ಇವರು ಅನುಭಾವಿ ಕವಿಯಾಗಿ ಅನೇಕ ಕವನಗಳ ಕತೃ ಆಗಿ ಬಗ್ದಾದಿನ ಹೆಸರಾಂತ ಅನುಭಾವಿ ಮಂಡಳಿಯ ಮುಖ್ಯ ಸದಸ್ಯನಾಗಿಯೂ ಹೆಸರುವಾಸಿಯಾದವರು.

ಇಬ್ನ್ ಅತಾ ರವರು ಪ್ರವಚನ ಮಾಡುತ್ತಿದ್ದಲ್ಲಿಗೆ ಜನರ ಗುಂಪೊಂದು ಬಂತು. ಅವರು ನೆಲವನ್ನು ನೋಡುವಾಗ ಎಲ್ಲ ಒದ್ದೆಯಾಗಿತ್ತು.

“ಇದ್ಯಾಕೆ ಹೀಗೆ? ಏನಾಯಿತು?”ಎಂದು ಅವರು ಕೇಳಿದರು.
“ಒಂದು ವಿಶೇಷ ಅನುಭಾವಿ ಪ್ರಜ್ಞೆ ನನ್ನಲ್ಲಿ ಉಂಟಾಯಿತು. ಅದೇಕೋ ನನಗೆ ನನ್ನ ಕಳೆದ ಪಾಪದ ಬಗ್ಗೆ ನೆನೆದು ಪಶ್ಚಾತ್ತಾಪ ಪಟ್ಟೆ. ಪ್ರವಚನ ಮಾಡುವಾಗ ನಿಂತಲ್ಲಿ ನಿಲ್ಲದೆ ಅಚೀಚೆ ಸುತ್ತು ಬಂದು ಮಾತಾಡುತ್ತಿದ್ದೆ, ನನ್ನ ಕಣ್ಣಿ ನಿಂದ ಇಳಿದ ಕಣ್ಣೀರು ನೆಲವನ್ನು ಒದ್ದೆ ಮಾಡಿತು.” ಎಂದರು ಇಬ್ನ್ ಅತಾ.
“ಅಂತಹ ಘೋರ  ತಪ್ಪನ್ನೇನು ಮಾಡಿದ್ದೀರಿ ?” ಎಂದು ಆಗಂತುಕರು ಕೇಳಿದರು.
” ನಾನು ಬಾಲಕನಾಗಿದ್ದಾಗ ನಾನು ಬೇರೆಯವರ ಬಾತು ಕೋಳಿಯನ್ನು ಹಿಡಿದಿದ್ದೆ. ಈವತ್ತು ಪಶ್ಚಾತ್ತಾಪದ ಬಗ್ಗೆ ಪ್ರವಚನ ಮಾಡುತ್ತಿರುವಾಗ ಅದರ ನೆನಪಾಯಿತು. ನಾನು ಅದರ ಯಜಮಾನನಿಗೆ ಒಂದು ಸಾವಿರ ದಿನಾರುಗಳನ್ನು ಕೊಟ್ಟೆ.  ಆದರೂ ನನ್ನ ಅಂತರಾತ್ಮಕ್ಕೆ ಸಮಾಧಾನವಾಗಲಿಲ್ಲ. ಈ ತಪ್ಪಿಗೆ ನನಗೆ ದೇವರು ಎಂತಹ ಶಿಕ್ಷೆ ಕೊಡುತ್ತಾನೋ ಎಂದು ಭಯ ಆವರಿಸಿ ನಾನು ಅಳಲು ಶುರು ಮಾಡಿದೆ.” ಎಂದರು ಇಬ್ನ್ ಅತಾ.

ಇಬ್ನ್ ಅತಾರವರು ಒಮ್ಮೆ ಮಸೀದಿಯಲ್ಲಿ ಕೂತಿದ್ದಾಗ “ನೀವು ದಿನವೂ ಎಷ್ಟು ಕುರಾನ್‌ನ ಭಾಗಗಳನ್ನು ಓದುತ್ತೀರಿ?” ಜನ ಕೇಳಿದರು.
“ಹಿಂದೆ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಎರಡು ಬಾರಿ ಕುರಾನನ್ನು ಓದಿ ಮುಗಿಸುತ್ತಿದ್ದೆ, ಕಳೆದ ಹದಿನಾಲ್ಕು ವರ್ಷಗಳಿಂದ ಹೀಗೆ ನಾನು ಓದುತ್ತಿದ್ದೆ. ಈಗ ನಾನು ಸೂರಃ ಎಂಟು, ಅಲ್ ಅನ್‌ಫಾಲ್ ಓದಿ ಮುಗಿಸಿದ್ದೇನೆ.” ಎಂದರು,

ತನ್ನ ಸುಂದರರಾದ ಹತ್ತು ಗಂಡು ಮಕ್ಕಳನ್ನು ಕರೆದುಕೊಂಡು ಒಮ್ಮೆ ಇಬ್ನ್ ಅತಾರವರು ಪ್ರಯಾಣದಲ್ಲಿದ್ದರು. ದಾರಿಯಲ್ಲಿ ದರೋಡೆಕೋರರು ಸುತ್ತುವರಿದರು. ಇವರಲ್ಲಿ ಒಂದು ಚಿಕ್ಕಾಸೂ ಇರಲಿಲ್ಲ. ಸುಮ್ಮನೆ ಬಿಟ್ಟು ಬಿಡುವ ಬದಲಿಗೆ, ವಿನಾಕಾರಣ ಒಬ್ಬೊಬ್ಬರದ್ದೇ ತಲೆಯನ್ನು ದರೋಡೆಕೋರರು ಕಡಿಯ ತೊಡಗಿದರು, ಇಬ್ನ್ ಅತಾರವರು ಸುಮ್ಮನಿದ್ದರು. ತನ್ನ ಮಕ್ಕಳ ತಲೆಯನ್ನು ದರೋಡೆಕೋರರು ಕಡಿಯುತ್ತಿರುವಾಗ ಇಬ್ನ್ ಅತಾರವರು ತಿರುಗಿ ನಿಂತು ದೇವರನ್ನು ನೆನೆಯುತ್ತಲೇ ಗಹಗಹಿಸಿ ನಗ ತೊಡಗಿದರು. ಒಂಭತ್ತು ಮಕ್ಕಳ ತಲೆಯನ್ನು ಕಡಿದಿದ್ದರು. ಹತ್ತನೆಯವನನ್ನು ಹಿಡಿದು ಕೊಲ್ಲಲೆಂದು ನಿಂತಿದ್ದರು.

ಅವರ ಹತ್ತನೆಯ ಮಗ ತಂದೆ ನಗುತ್ತಿರುವುದು ಕಂಡು, “ನೀನು ಎಂತಹ ಕಟುಕ ತಂದೆ! ನಿನ್ನ ಒಂಭತ್ತು ಮಕ್ಕಳನ್ನು ಹಿಡಿದು ಈ ಕ್ರೂರಿಗಳು ಕೊಲ್ಲುತ್ತಿರುವಾಗ ಏನೂ ಮಾತಾಡದೆ ನೀನು ನಗುತ್ತಿದ್ದಿಯಲ್ಲಾ?” ಎಂದ.

“ನಗುತ್ತಿರುವುದು ನಿನ್ನ ತಂದೆಯ ಆತ್ಮ. ಅವನು ನೋಡು, ಎಲ್ಲವನ್ನೂ ಮಾಡಿಸುವವನು, ಅವನನ್ನು ವಿರೋಧಿಸಿ ಯಾರೂ ಏನನ್ನೂ ಹೇಳಲಾರರು. ಎಲ್ಲವನ್ನೂ ಅವನು ನೋಡುತ್ತಿದ್ದಾನೆ, ಎಲ್ಲ ಗೊತ್ತಿದೆ ಅವನಿಗೆ, ಅವನಿಗೆ ಅಪಾರವಾದ ಶಕ್ತಿ ಇದೆ, ಅವನು ಮನಸ್ಸು ಮಾಡಿದರೆ ಎಲ್ಲರನ್ನೂ ಬದುಕಿಸಬಲ್ಲ.” ಎಂದರು ಇಬ್ನ್ ಅತಾ.

ಹತ್ತನೆಯ ಮಗನನ್ನು ಕೊಲ್ಲಲು ಹಿಡಿದ ಕೊಲೆಗಡುಕ ಈ ಮಾತುಗಳನ್ನು ಕೇಳಿ ಉದ್ವೇಗಗೊಂಡ. “ಅಯ್ಯೋ ಮುದುಕಾ, ನೀನು ಇದನ್ನು ಮೊದಲು ಹೇಳಿದ್ದರೆ! ನಿನ್ನ ಯಾವ ಮಗನೂ ಕೊಲೆಯಾಗುತ್ತಿಲ್ಲವಲ್ಲೋ….!” ಎಂದು ಪರಿತಪಿಸಿದ.

*****

ಒಮ್ಮೆ ಕ್ರೈಸ್ತ ಧರ್ಮಶಾಸ್ತ್ರ ಪಂಡಿತರು ಇಬ್ನ್ ಅತಾರವರ ಬಳಿಗೆ ಬಂದರು. “ಅದು ಹೇಗೆ ನೀವು ಸೂಫಿಗಳು, ಸರಳವಾದ ಜನರ ಆಡು ಮಾತನ್ನು ಬಿಟ್ಟು, ವಿಚಿತ್ರವಾದ ಶಬ್ಧಗಳನ್ನು ಕಂಡು ಹಿಡಿದು, ಮಾತಿನಲ್ಲಿ ಪ್ರಯೋಗಿಸಿ ಕೇಳುವವರಿಗೆ ಕಸಿವಿಸಿಯಾಗುವಂತೆ ಮಾಡುತ್ತಿದ್ದೀರಿ? ಇದರಿಂದ ಎರಡು ಸಾಧ್ಯತೆಗಳನ್ನು ನೀವು ಪ್ರಯತ್ನಿಸುತ್ತಿದ್ದೀರಿ ಎಂದಾಗುತ್ತದೆ. ಒಂದನೇಯದ್ದು ನೀವು ಏನನ್ನೋ ಮರೆಮಾಚುತ್ತಿರುತ್ತೀರಿ. ಮರೆಮಾಚುವಿಕೆಯು ಸತ್ಯಕ್ಕೆ ತದ್ವಿರುದ್ಧವಾದದ್ದು. ಅಂದರೆ ನಿಮ್ಮ ಬೋಧನೆಗಳೆಲ್ಲವೂ ಸುಳ್ಳು ಎಂಬುದು ಸ್ಪಷ್ಟವಾಯಿತು. ಅಥವಾ ಇನ್ನೊಂದು ನಿಮ್ಮ ಬೋಧನೆಯಲ್ಲಿ ಅದ್ಯಾವುದೋ ನ್ಯೂನತೆ ಇದೆ, ಅದನ್ನು ನೀವು ಸಾರ್ವಜನಿಕವಾಗಿ ಮಾತಾಡುವಾಗ ಬಹಿರಂಗ ಗೊಳಿಸದೆ ರಹಸ್ಯವಾಗಿಟ್ಟುಕೊಳ್ಳುತ್ತಿದ್ದೀರಿ.” ಎಂದು ನೇರವಾಗಿಯೇ ಟೀಕಿಸಿ ಕೇಳಿದರು.

“ನಾವು ಹೀಗೆ ಮಾಡುತ್ತಿರುವುದು ಯಾಕೆಂದರೆ ಆ ರಹಸ್ಯ ನಮಗೆ ಅಮೂಲ್ಯವಾದದ್ದು. ನಾವು ಏನನ್ನು ಬದುಕಿನಲ್ಲಿ ಅಳವಡಿಸಿಕೊಂಡು ಪ್ರತಿಪಾದಿಸುತ್ತೇವೋ ಆ ಮೌಲ್ಯಗಳು ನಮಗೆ ಅತ್ಯಂತ ಅಮೂಲ್ಯವಾದದ್ದು. ಈ ರಹಸ್ಯವು ನಾವು ಸೂಫಿಗಳಿಗಲ್ಲದೆ ಇತರರು ಯಾರಿಗೂ ತಿಳಿಯಲಾರದು. ನಾವು ಸರಳವಾದ ಮಾತುಗಳನ್ನು ಬಳಸುವುದಿಲ್ಲ, ಜನರು ಕೇಳಿದಂತೆ ಯೋಚಿಸಲು ಹಚ್ಚುತ್ತೇವೆ. ಹಾಗಾಗಿ ನಾವು ಹೊಸ ಶಬ್ಧಗಳನ್ನು ಬಳಸುತ್ತೇವೆ.” ಎಂದು ಉತ್ತರಿಸಿದರು ಇಬ್ನ್ ಅತಾ.

*******

ಇಬ್ನ್ ಅತಾರವರು ಪಾಷಂಡಿ ಅಥವಾ ಸಂಪ್ರದಾಯ ವಿರೋಧಿ ಎಂದು ಒಮ್ಮೆ ಬಹಿರಂಗವಾಗಿ ಆರೋಪಿಸಲಾಯಿತು. ಅಲ್ಲಿನ ಖಲೀಫಾರವರ ವಜೀರ್ (ಪ್ರಧಾನ ಮಂತ್ರಿ) ಅಲಿ ಇಬ್ನ್ ಈಸಾ, ಇಬ್ನ್ ಅತಾರವರನ್ನು ಮೂದಲಿಸಿ, ತನ್ನ ಮುಂದೆ ಹಾಜರಾಗುವಂತೆ ಆಜ್ಞಾಪಿಸಿದ. ಅದಕ್ಕೆ ಇಬ್ನ್ ಅತಾರವರು ಅತ್ಯಂತ ಖಾರವಾಗಿಯೇ ಪ್ರತಿಕ್ರಿಯಿಸಿದರು. ಇದು ವಜೀರನನ್ನು ಇನ್ನಷ್ಟು ಕ್ರೋಧಕ್ಕೊಳಗಾಗುವಂತೆ ಮಾಡಿತು. ಅವನು ತನ್ನ ಆಳುಗಳನ್ನು ಕರೆದು ಇಬ್ನ್ ಅತಾರವರ ಕಾಲಿನ ಮೆಟ್ಟುಗಳನ್ನು ಕಳಚಿ ಅವರ ತಲೆಯ ಮೇಲೆ ಸಾಯುವಂತೆ ಹೊಡೆಯಲು ಆಜ್ಞಾಪಿಸಿದ. ಈ ಕ್ರೂರ ಶಿಕ್ಷೆಯನ್ನು ಅನುಭವಿಸುವಾಗ ಮಧ್ಯದಲ್ಲಿ ಇಬ್ನ್ ಅತಾರವರು ‘ದೇವರು ಇವನ ಕೈ ಕಾಲುಗಳನ್ನು ತುಂಡರಿಸಿ ಹಾಕಲಿ!’ ಎಂದು ಮನದಲ್ಲಿ ಹಾರೈಸಿದರು.

ಸ್ವಲ್ಪವೇ ಸಮಯದಲ್ಲಿ ಯಾವುದೋ ಗಹನವಾದ ವಿಷಯಕ್ಕೆ ಸಂಬಂಧಿಸಿದಂತೆ ಖಲೀಫರು ತನ್ನ ವಜೀರ ಅಲಿ ಇಬ್ನ್ ಈಸಾ ರವರ ಮೇಲೆ ಕೋಪಗೊಂಡು ಅವನ ಕೈ ಕಾಲುಗಳನ್ನು ಕಡಿದು ಹಾಕಿದರು.

ಯಾವ ಸಂಕಷ್ಟ ಬಂದರೂ ಕೂಡ ಬದ್ದುವಾ ಅಥವಾ ಶಾಪವನ್ನು ಹಾಕುವುದು ಶೂಫಿ ಸಂತರ ಒಳ್ಳೆಯ ನಡವಳಿಕೆಯೆಂದು ಪರಿಗಣಿಸಲ್ಪಟ್ಟಿಲ್ಲವಾದ್ದರಿಂದ ಮತ್ತು ತನ್ನ ಬದುಕಿನುದ್ದಕ್ಕೂ ಯಾವುದೇ ಸಂದರ್ಭದಲ್ಲಿ ತಾಳ್ಮೆಯನ್ನು ಕಳಕೊಳ್ಳದ, ಸೂಫಿ ಸಂತರಲ್ಲಿ ಶ್ರೇಷ್ಠ ಪಂಡಿತರೆಂದು ಪರಿಗಣಿಸಲ್ಪಟ್ಟ ಈಬ್ನ್ ಅತಾರವರ ಅನಿರೀಕ್ಷಿತ ನಡವಳಿಕೆಯು ಸೂಫಿ ವಲಯದಲ್ಲಿ ದೊಡ್ಡ ಗೊಂದಲವನ್ನುಂಟುಮಾಡಿತು. ಈ ಘಟನೆಯ ಬಗ್ಗೆ ಸೂಫಿಗಳ ಗುಂಪಿನಲ್ಲಿ ಬಹಳಷ್ಟು ಖಾರವಾಗಿಯೇ ಚರ್ಚೆಗಳು ನಡೆದವು. ಇಬ್ನ್ ಅತಾರವರು ಇಂತಹ ಬದ್ದುವಾ ಮಾಡಬಾರದಾಗಿತ್ತೆಂದು ಕೆಲವರು ಅಭಿಪ್ರಾಯ ಪಟ್ಟರು. “ತಮ್ಮ ಪ್ರಾರ್ಥನೆಯ ಮೂಲಕ ಅವನನ್ನು ಸರಿದಾರಿಗೆ ತರಿಸಲು ಶಕ್ತರಾದವರು ಇಂತಹ ಶಾಪವನ್ನು ಹಾಕ ಬಾರದಾಗಿತ್ತು, ನೀವು ಅವನನ್ನು ಆಶೀರ್ವದಿಸ ಬೇಕಾಗಿತ್ತು.” ಎಂದು ಕೆಲವರು ಇಬ್ನ್ ಅತಾರವರಿಗೆ ಖಾರವಾಗಿ ಪ್ರತಿಕ್ರಿಯಿಸಿದರು. ಇನ್ನು ಕೆಲವರು, “ಅವನು ನೀಚನಾಗಿದ್ದ, ಮತ್ತು ಪ್ರಜೆಗಳನ್ನು ರಕ್ಷಿಸುವ ಬದಲು ಶಿಕ್ಷಿಸುತ್ತಿದ್ದ. ಯಾವತ್ತೂ ಪ್ರಶಾಂತರಾಗಿಯೇ ಇರುತ್ತಿದ್ದ ಇಬ್ನ್ ಅತಾರಂತವರು ಇಷ್ಟು ಕಠೋರವಾಗಲು ಅವನು ತೋರಿದ ಕ್ರೌರ್ಯವೇ ಕಾರಣ” ಎಂದು ಅಭಿಪ್ರಾಯಪಟ್ಟರು.

ಇನ್ನು ಕೆಲವು ಸೂಫಿ ಪಂಡಿತರು ಅಭಿಪ್ರಾಯ ಪಡುವಂತೆ, ಇಬ್ನ್ ಅತಾರವರು ಗಂಭೀರವಾದ ಅಂತರ್ ದೃಷ್ಟಿಯುಳ್ಳ ಸಂತ. ಇಂತಹ ಕ್ರೂರಿಯಾದ ವಜೀರನಿಗೆ ಭವಿಷ್ಯದಲ್ಲಿ ಏನಾಗಲಿದೆಯೆನ್ನುವುದು ಅವರಿಗೆ ತಿಳಿದೇ ಇತ್ತು. ದೇವರು ಅವನಿಗೆ ಯಾವ ಶಿಕ್ಷೆಯನ್ನು ಕೊಡಲು ಬಯಸಿದ್ದನೋ ಅದನ್ನು ಇಬ್ನ್ ಅತಾರವರ ಮೂಲಕ ನೀಡಿದ. ದೇವರ ಈ ಅಪೇಕ್ಷೆಯೇ ಅವರ ನಾಲಗೆಯ ಮೂಲಕ ಮೂಡಿ ಬಂದಿರಬೇಕು. ಆದುದರಿಂದ ಇಬ್ನ್ ಅತಾರವರು ಇದಕ್ಕೆ ಕಾರಣರಲ್ಲ.

ಇನ್ನೊಂದು ಅಭಿಪ್ರಾಯದಂತೆ “ಇಬ್ನ್ ಅತಾರವರು ವಜೀರನನ್ನು ಶಪಿಸಿದ್ದಲ್ಲ, ಆಶೀರ್ವದಿಸಿದ್ದು. ಅವರು ದೇವರಲ್ಲಿ ಕೇಳಿದ್ದು ತನ್ನ ಶ್ರೀಮಂತಿಕೆ, ಅಧಿಕಾರವನ್ನು ಕಳೆದುಕೊಂಡು ವಜೀರ ನನ್ನಂತೆಯೇ ಹೀನವಾದ ಅವಮಾನವನ್ನು ಈ ಲೋಕದಲ್ಲಿ ಅನುಭವಿಸಬೇಕು ಎನ್ನುವುದನ್ನು. ಈ ಮೂಲಕ ವಜೀರ್ ಅಲಿ ಇಬ್ನ್ ಈಸಾನಿಗೆ ಇಬ್ನ್ ಅತಾರವರು ಒಳಿತನ್ನೇ ಬಯಸಿದ್ದಾರೆ. ಪರಲೋಕದ ಕಠಿಣ ಶಿಕ್ಷೆಯ ಮುಂದೆ ಈ ಲೋಕದಲ್ಲಿ ಎಂತಹ ಶಿಕ್ಷೆಯಾದರೂ ತುಂಬ ಕಮ್ಮಿ ನೋವಿನದ್ದೇ ಸರಿ! “