ಆಗಲೂ ಹೀಗೇ ಇದ್ದಳು. ಸಂಜೆಗತ್ತಲ ಹೊತ್ತಲ್ಲಿ ನೂರು ಆಶೆಗಳನ್ನು ಹುಟ್ಟಿಸುವವಳು ಒಂದು ಸಂಜೆ ಇರುಳು ತಲೆಯ ಮೇಲಿದ್ದ ಕಲಗಚ್ಚಿನ ಬಕೆಟ್ಟನ್ನು ನನ್ನ ಮೇಲೆ ಬಗ್ಗಿಸಿದ್ದಳು. ಆಮೇಲೆ ಎಂದೂ ಬಂದಿರಲಿಲ್ಲ. ಮಾತೂ ಬಿಟ್ಟಿದ್ದಳು. ಗುರುತೇ ಇಲ್ಲದವಳಂತೆ ದೂರವಾದಳು. ನಾನೂ ಊರು ಬಿಟ್ಟು ದೂರ ಎಲ್ಲೆಲ್ಲೋ ಹೋದೆ. ಏನೆಲ್ಲಾ ಆದೆ. ಅವಳ ಮೇಲೇ ಮೊದಲ ಕತೆ ಬರೆದು ಹರಿದು ಹಾಕಿದೆ. ಆಮೇಲೆಯೂ ಕಥೆಗಳನ್ನು ಬರೆದೆ. ಕವಿಯೂ ಆದೆ.
ಅಬ್ದುಲ್ ರಶೀದ್ ಬರೆದ ಕಥೆ ‘ಕಲಗಚ್ಚುʼ ಈ ಭಾನುವಾರದ ನಿಮ್ಮ ಓದಿಗೆ
ನಾಲ್ಕು ದಶಕಗಳ ಹಿಂದೆ ಬರೆದು ಹರಿದು ಹಾಕಿದ್ದ ಆ ಮೊದಲ ಕತೆಯ ಅಭಿಸಾರಿಕೆ ಎದುರಿಗೆ ಬಂದು ಕುಳಿತು ಸಣ್ಣಗೆ ಕೆಮ್ಮಿದಳು.
ಅದೇ ಹಳೆಯ ಡೌಲು, ಅದೇ ಹಳೆಯ ದೌಲತ್ತು ಮತ್ತು ಆಗಿನದ್ದಕ್ಕಿಂತಲೂ ತೀಕ್ಷ್ಣವಾಗಿದ್ದ ಅರೇಬಿಯನ್ ಅತ್ತರು. ಆಗ ಆಗಿದ್ದರೆ ಸಾಂಬ್ರಾಣಿ, ಕರ್ಪೂರ, ಧೂಪಗಳ ಪರಿಮಳಯುಕ್ತ ಹೊಗೆಯೊಳಗಿಂದ ಅವಳು ಎದ್ದು ಬರುತ್ತಿರುವಂತೆ ಅನಿಸುತ್ತಿತ್ತು. ಈಗ ಹಾಗಲ್ಲ. ತಲೆನೋವು ಬರಿಸುವ ತೀಕ್ಷ್ಣ ಅತ್ತರು. ಅವಳು ಬರುತ್ತಿರುವುದು ಗೊತ್ತಿದ್ದೇ ಕಚೇರಿಯ ಕೋಣೆಯ ಕಿಟಕಿಯನ್ನು ವಿಶಾಲಕ್ಕೆ ತೆರೆದಿಟ್ಟಿದ್ದೆ. ಮಳೆಗಾಲ ಕಳೆದರೂ ಇನ್ನೂ ಹಸಿಹಸಿ ಶಿಲೀಂಧ್ರ ತುಂಬಿಕೊಂಡಿದ್ದ ಕೋಣೆಯ ತಾರಸಿ ಮತ್ತು ಗೋಡೆಗಳಿಂದ ಒಂದು ರೀತಿಯ ಹಸಿಕಮಟು ವಾಸನೆ ಕಿಟಕಿಯಿಂದ ಹೊರಹೋಗಲು ಹವಣಿಸುತ್ತಿತ್ತು. ವರುಷಗಳಿಂದ ತಿರುಗದೇ ಇದ್ದ ಹಳೆಯ ಫ್ಯಾನೂ ಪುರಾತನ ತೊಟ್ಟಿಲಿನ ಹಾಗೆ ಜೋಗುಳದ ಸದ್ದು ಮಾಡುತ್ತಾ ತಿರುಗುತ್ತಿತ್ತು. ಮಡಿಕೇರಿಯ ಮಂಜುಚುಂಬಿತ ಬೆಟ್ಟವೊಂದರ ತುದಿಯಲ್ಲಿರುವ ನನ್ನ ಕಚೇರಿ. ಕಿಟಕಿ ತೆರೆದರೆ ಒಳನುಗ್ಗುವ ಥಂಡಿ ಗಾಳಿ ಮತ್ತು ಅಷ್ಟೇ ಚಂದದ ಸಂಜೆಯ ಎಳೆಬಿಸಿಲು. ಆದರೆ ಇವಳು ಬರುತ್ತಾಳೆ ಅಂದರೆ ಬಾಗಿಲು ಕಿಟಕಿ ತೆರೆದಿಡಲೇಬೇಕು. ಇಲ್ಲವಾದರೆ ಇವಳ ಅತ್ತರಿನ ಪರಿಮಳಕ್ಕೆ ಇನ್ನೊಂದು ಸುತ್ತಿನ ಅರೆ ತಲೆಶೂಲದ ನೋವಿಗೆ ಸಿದ್ಧನಾಗಲೇಬೇಕು.
ಈ ಅರೆತಲೆನೋವು ನನಗೆ ನನ್ನ ತಾಯಿಯ ಕುಟುಂಬದಿಂದ ಬಳುವಳಿಯಾಗಿ ಬಂದದ್ದು. ಹಾಗಾಗಿ ಅನುಭವಿಸಲೇಬೇಕು. ಜೊತೆಗೆ ಒಂದಲ್ಲ ಒಂದು ಬಗೆಯ ಪರಿಮಳದೊಡನೆ ನನ್ನ ಅಸ್ತವ್ಯಸ್ತವೂ ಮನೋಹರವೂ ಆದ ಜೀವನದೊಳಕ್ಕೆ ಹೊಕ್ಕು ಒಂದಲ್ಲ ಎರಡಲ್ಲ ನೂರಾರು ಸುಖಗಳನ್ನೂ ಶೂಲಗಳನ್ನೂ ಕೊಟ್ಟು ಹೋಗುವ ಸುಂದರಿಯರು.
ಈಕೆ ಬರುವಾಗಲಾದರೂ ಎಚ್ಚರಿಕೆಯಿಂದಿರಬೇಕು ಎಂದು ಬಾಗಿಲನ್ನೂ ಕಿಟಕಿಯನ್ನೂ ವಿಶಾಲವಾಗಿ ತೆರೆದಿಟ್ಟು ಕಾಯುತ್ತಿದ್ದೆ.
ಕಾಯುತ್ತಿದ್ದುದು ಇವಳು ಬರುತ್ತಾಳೆ ಎನ್ನುವುದಕ್ಕಿಂತಲೂ ಹೆಚ್ಚಾಗಿ ಇವಳಿಂದ ದೊರಕಬೇಕಿದ್ದ ಒಂದು ಉತ್ತರಕ್ಕಾಗಿ. ಆ ಉತ್ತರ ದೊರೆತರೆ ನನ್ನ ಮೊದಲ ಕಥೆಯನ್ನು ಮತ್ತೆ ಬರೆಯುವುದಾಗಿ ತರುಣ ಸಂಪಾದಕರೊಬ್ಬರಿಗೆ ಮಾತು ಕೊಟ್ಟಿದ್ದೆ. ಅದು ಇನ್ನೊಂದು ಸುಳ್ಳುನೆಪ ಅಂದುಕೊಂಡ ಅವರು ‘ಆಯ್ತು ಕಾಯುವೆನು’ ಎಂದಷ್ಟೇ ಮುಗುಮ್ಮಾಗಿ ಅಂದು ಸುಮ್ಮನಾಗಿದ್ದರು. ಅವರೇನೂ ಕಾಯುವುದಿಲ್ಲ ಎಂದು ಗೊತ್ತಿದ್ದರೂ ನಾನು ನಿಜವಾಗಿಯೂ ಇವಳಿಗೆ ಕಾಯುತ್ತಿದ್ದೆ. ಏಕೆಂದರೆ ಸುಮಾರು ನಲವತ್ತು ವರ್ಷಗಳ ಹಿಂದೆ ಇವಳು ತನ್ನ ತಲೆಯ ಮೇಲಿದ್ದ ಕಲಗಚ್ಚಿನ ಬಕೆಟನ್ನು ನನ್ನ ಮೈಯ ಮೇಲೆ ಸುರಿದಿದ್ದಳು. ಆಗ ನನಗೆ ಹದಿನಾರು ವರ್ಷವಿರಬೇಕು. ಇವಳಿಗೂ ಹೆಚ್ಚುಕಡಿಮೆ ಅದೇ ವಯಸ್ಸು. ನಾನು ಎಂದಿನ ಹಾಗೆ ಸಂಜೆಗತ್ತಲೆಯಲ್ಲಿ ತಲೆಯ ಮೇಲೆ ಕಲಗಚ್ಚು ತುಂಬಿರುವ ಕಬ್ಬಿಣದ ಬಕೆಟನ್ನು ಹೊತ್ತುಕೊಂಡು ಬರುತ್ತಿದ್ದ ಇವಳನ್ನು ಒಂದು ಕ್ಷಣ ತಬ್ಬಿಕೊಳ್ಳಲು ಹೋಗಿದ್ದೆ. ಯಾವತ್ತೂ ಸುಮ್ಮನಿರುತ್ತಿದ್ದ ಅವಳು ಆ ದಿನ ಬಕೆಟನ್ನು ತಲೆಯಿಂದ ಬಗ್ಗಿಸಿ ನನ್ನ ಮೈಮೇಲೆ ಸುರಿದು ಬಿಟ್ಟಿದ್ದಳು. ಆಮೇಲೆ ಏನೂ ಮಾತಾಡದೆ ಖಾಲಿಯಾಗಿದ್ದ ಆ ಬಕೆಟ್ಟನ್ನು ಕೈಯಲ್ಲಿ ಹಿಡಿದುಕೊಂಡು ಮಾಯವಾಗಿದ್ದಳು.
ಅವಳ ಅಪ್ಪ ಅಬೂಬಕ್ಕರ್ ಅವರು ಜತನದಿಂದ ಸಾಕುತ್ತಿದ್ದ ಆಡುಗಳಿಗೆ ಆ ದಿನ ಕಲಗಚ್ಚು ಇಲ್ಲ ಅನ್ನುವುದನ್ನು ನೆನೆಸಿಕೊಂಡು ಅವಳಿಗೆ ವಾಪಾಸು ಹೋಗುವಾಗ ದಾರಿಯಲ್ಲಿ ಅಳುಬಂದಿತ್ತಂತೆ. ಅದಾಗಿ ಸುಮಾರು ಮೂವತ್ತೈದು ವರ್ಷಗಳ ನಂತರ ಅವಳು ನೆರೆದಿದ್ದ ಸಭೆಯೊಂದರಲ್ಲಿ ಭಾಷಣ ಮಾಡುತ್ತಾ ಹೇಳುತ್ತಿದ್ದಳು. ಆ ಸಭೆಯ ಮುಖ್ಯ ಅತಿಥಿಯಾಗಿ ಕುಳಿತಿದ್ದ ನನಗೆ ನಡುಕವೇ ಬಂದು ಬಿಟ್ಟಿತ್ತು. ಆದರೆ ಅವಳು ನನ್ನ ಮರ್ಯಾದೆ ಉಳಿಸಿದ್ದಳು. ಅದು ಅವಳಿಗಾಗಿ ಏರ್ಪಡಿಸಿದ್ದ ಸನ್ಮಾನ ಸಮಾರಂಭ. ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ತನ್ನ ಸಾರ್ವಜನಿಕ ಸೇವೆ ಆರಂಭಿಸಿ ಆನಂತರ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆಯಾಗಿ ಇದೀಗ ಜಿಲ್ಲಾ ಪಂಚಾಯತಿಯ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷೆಯೂ ಆಗಿರುವ ಇವಳನ್ನು ನಮ್ಮ ಊರಿನಲ್ಲಿ ಸನ್ಮಾನಿಸುತ್ತಿದ್ದರು.
ಸನ್ಮಾನಿತರ ಕುರಿತು ಮಾತನಾಡಲು ನಾನು. ಸಣ್ಣಪುಟ್ಟ ಬರಹಗಾರನಾಗಿಯೂ, ಭಾಷಣಕಾರನಾಗಿಯೂ, ಸರಕಾರೀ ಶಾಲೆಯೊಂದರ ಶಿಕ್ಷಕನಾಗಿಯೂ ಇರುವ ನಾನು ಅದೇ ಊರಿನವನೂ ಆಕೆಯ ಬಾಲ್ಯಕಾಲದ ಸ್ನೇಹಿತನೂ ಆಗಿರುವುದರಿಂದ ಅಭಿನಂದನಾ ಭಾಷಣಕ್ಕೆ ನನ್ನನ್ನೇ ಕರೆದಿದ್ದರು. ಏನೋ ಮಾತಾಡುತ್ತಾಳೆ ಅಂದರೆ ಕಲಗಚ್ಚಿನದ ವಿಷಯಕ್ಕೇ ಬರುವುದಾ ದುಷ್ಟೆ! ಆದರೆ ನನ್ನ ಪುಣ್ಯಕ್ಕೆ ಪೂರ್ತಿ ಕಥೆ ಹೇಳದೆ ವಿಷಯವನ್ನು ಬೇರೆ ಕಡೆ ತಿರುಗಿಸಿದ್ದಳು.
‘ನನ್ನ ಅಪ್ಪ ಆಡು ಮೇಯಿಸುತ್ತಿದ್ದರು. ಆ ಆಡುಗಳು ಇವರ ತೋಟದ ತೆಂಗಿನ ಸಸಿಗಳನ್ನೂ, ಬಾಳೆಯ ಕುಡಿಗಳನ್ನೂ ತಿನ್ನುತ್ತಿದ್ದವುʼ ಅವಳು ವೇದಿಕೆಯ ಮೇಲಿದ್ದ ನನ್ನ ಕಡೆ ಕೈತೋರಿಸಿ ನಸುನಕ್ಕು, ತನ್ನ ತಲೆಯ ಮೇಲಿನ ಬಟ್ಟೆಯನ್ನು ಸರಿಪಡಿಸಿ ಕಥೆ ಹೇಳಿದ್ದಳು.
“ಅದಕ್ಕಾಗಿ ಇಲ್ಲಿ ಕುಳಿತಿದ್ದಾರಲ್ಲ ಖ್ಯಾತ ಸಾಹಿತಿಗಳು ಇವರ ತಂದೆ. ‘ನಿಮ್ಮ ಆಡುಗಳನ್ನು ನಿಮ್ಮ ಹಿತ್ತಲಿನಲ್ಲಿಯೇ ಕಟ್ಟಿ ಹಾಕಿ ಅವುಗಳಿಗೆ ಬೇಕಾದ ಹುಲ್ಲನ್ನೂ ಸೊಪ್ಪನ್ನೂ ತೋಟದಿಂದ ತೆಗೆದುಕೊಳ್ಳಿ. ಕಲಗಚ್ಚನ್ನೂ ತೆಗೆದುಕೊಂಡು ಹೋಗಿ’ ಎಂದಿದ್ದರು. ನನ್ನ ತಂದೆಯವರನ್ನು ಎಲ್ಲರೂ ಆಡು ಅಬೂಬಕರ್ ಎಂದೇ ಕರೆಯುತ್ತಿದ್ದರು. ಇವರ ತೋಟದಿಂದ ಹುಲ್ಲು ಕುಯಿದುಕೊಂಡು ಹೋಗುತ್ತಿದ್ದರು. ನಾನು ಕಲಗಚ್ಚಿನ ಬಕೆಟ್ಟು ಹೊತ್ತುಕೊಂಡು ಹೋಗುತ್ತಿದ್ದೆ. ಆಗ ಇವರು ಕಲಗಚ್ಚಿನ ಬಕೆಟ್ಟನ್ನು ನನ್ನ ತಲೆಯ ಮೇಲೆ ಹೊರಿಸಲು ಸಹಕರಿಸುತ್ತಿದ್ದರುʼ ಎಂದು ನನ್ನ ಕಡೆ ಕೈತೋರಿಸಿ ನಕ್ಕು ಮುಂದುವರಿಸಿದಳು.
‘ಒಂದು ದಿನ ಕೈತಪ್ಪಿ ಇವರ ಮೈಮೇಲೆ ಕಲಗಚ್ಚಿನ ಬಕೆಟ್ಟು ಬೀಳಿಸಿಬಿಟ್ಟಿದ್ದೆ. ಆಗ ನನಗೆ ಬುದ್ದಿ ಬೆಳೆದಿರಲಿಲ್ಲ. ಇವರ ಮೈಮೇಲೆ ಕಲಗಚ್ಚು ಬೀಳಿಸಿದೆನಲ್ಲಾ ಎಂಬುದಕ್ಕಿಂತ ನನ್ನ ಆಡುಗಳಿಗೆ ಕಲಗಚ್ಚು ಇಲ್ಲವಲ್ಲಾ ಎಂದು ತುಂಬತುಂಬ ಬೇಜಾರಾಗಿತ್ತು”ಎಂದು ತುಂಬ ಬೇಜಾರಾದವಳಂತೆ ಮಾತನಾಡಿದ್ದಳು.
‘ಕುರೆಗೆ ಕೈ ತಪ್ಪಿದ್ದಂತೆ’ ನಾನು ಮನಸಿನಲ್ಲೇ ಬೈದುಕೊಂಡು ಅಭಿನಂದನಾ ಭಾಷಣ ಮಾಡಿದ್ದೆ. ಮನಸಿನಲ್ಲೇ ಬೈದಾಗಲೆಲ್ಲ ನಾನು ಅವಳನ್ನು ಕುರೆ ಎಂದೇ ಕರೆಯುತ್ತಿದ್ದೆ. ಕುರೆ ಅಂದರೆ ಮಂಗ ಅಂತ ಅರ್ಥ.
ಅವಳ ತಂದೆ ಅಬೂಬಕರರು ಆಡು ಮೇಯಿಸುತ್ತಿದ್ದುದು, ಬಾವಿಗಿಳಿದು ಬಿದ್ದ ಕೊಡಪಾನಗಳನ್ನು ಎತ್ತಿಕೊಡುತ್ತಿದ್ದುದು, ಗೇರು ಬೀಜದ ಹಣ್ಣುಗಳನ್ನು ಸಿಪಿಸಿ ಬಸ್ಸಿನಲ್ಲಿ ಮಡಿಕೇರಿಗೆ ತೆಗೆದುಕೊಂಡು ಹೋಗಿ ಮಾರಿ ಬಂದ ಹಣದಲ್ಲಿ ಮಡಿಕೇರಿಯಿಂದ ಕಿತ್ತಳೆ ಹಣ್ಣುಗಳನ್ನು ತಂದು ಮಾರುತ್ತಿದ್ದುದು. ಅವರ ಎಂಟು ಜನ ಮಕ್ಕಳಲ್ಲಿ ಕೊನೆಯವರಾದ ಶ್ರೀಮತಿ ಆಯಿಶಾರವರು ಶಾಲಾ ವಿದ್ಯಾಭ್ಯಾಸ ಇಲ್ಲದಿದ್ದರೂ ಸ್ವಂತ ಪ್ರತಿಭೆ ಮತ್ತು ಧೈರ್ಯದಿಂದ ಸಾರ್ವಜನಿಕ ಸೇವೆಗೆ ಕಾಲಿಟ್ಟಿದ್ದು ಮತ್ತು ಇದೀಗ ಜಿಲ್ಲಾ ಪಂಚಾಯತಿಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷೆಯಾಗಿರುವುದು, ಮುಂದೆ ಒಂದು ದಿನ ಭಾಗ್ಯವಿದ್ದರೆ ಶಾಸಕಿಯಾಗಿ ಮಂತ್ರಿಯಾಗಿ ಇನ್ನೂ ಜಬರ್ದಸ್ತಿನಲ್ಲಿ ಆಡಳಿತ ನಡೆಸುವುದು ಎಲ್ಲವನ್ನೂ ನನ್ನ ಮಾಮೂಲು ಶೈಲಿಯಲ್ಲಿ ಹೇಳಿ ಮುಗಿಸಿದ್ದೆ.
ಮುಗಿಸುವ ಮೊದಲು. ನನ್ನ ಮೊದಲ ಕತೆಯ ನಾಯಕಿ ಇದೇ ಶ್ರೀಮತಿ ಆಯಿಶಾರವರು ಎಂದು ಹೇಳಿಬಿಟ್ಟಿದ್ದೆ. ‘ಆದರೆ ಆಗ ನನಗೆ ಸರಿಯಾಗಿ ಬರೆಯಲು ಬರುತ್ತಿರಲಿಲ್ಲ. ವಿಷಯಗಳನ್ನು ಸೂಕ್ತವಾಗಿ ವಿವರಿಸಲೂ ಬರುತ್ತಿರಲಿಲ್ಲ. ಹಾಗಾಗಿ ಅದನ್ನು ಬರೆದು ಆಮೇಲೆ ಹರಿದು ಹಾಕಿಬಿಟ್ಟಿದ್ದೆ. ಈಗ ಅದನ್ನು ಮತ್ತೆ ಬರೆಯಬೇಕೆಂಬ ಆಸೆಯಾಗುತ್ತಿದೆ. ಆದರೆ ಅದಕ್ಕೆ ಶ್ರೀಮತಿ ಆಯಿಶಾರವರು ಮನಸ್ಸು ಮಾಡಬೇಕಷ್ಟೇ’ ಎಂದು ಮಾತು ಮುಗಿಸಿದ್ದೆ.
‘ನಾನು ಏನು ಹೇಳುವುದು ಮಂಗಾ. ನೀನೇ ಬೇಕು ಬೇಕೆಂದು ಮಾಡಿಕೊಂಡದ್ದು ನನ್ನ ಹತ್ತಿರ ಎಂತ ಕೇಳುವುದು?’ ಅಭಿನಂದನಾ ಸಮಾರಂಭದ ನಂತರದ ಸಾರ್ವಜನಿಕ ಭೋಜನದ ನಂತರ ಕೈತೊಳೆಯುವ ಜಾಗದಲ್ಲಿ ಆಕೆ ತನ್ನ ಮೊಣಗಂಟಿನಿಂದ ಯಾರಿಗೂ ಗೊತ್ತಾಗದ ಹಾಗೆ ನನ್ನ ಪಕ್ಕೆಲುಬಿನ ಬಳಿಗೆ ತಿವಿದು ಕೇಳಿದ್ದಳು. ಎಲ್ಲರ ಎದುರು ಅವಳು ನನ್ನನ್ನು ಸಾಹಿತಿಗಳು, ಶಾಲೆಯ ಸಾರು ಎಂದೆಲ್ಲ ಕರೆದರೂ ಹೀಗೆ ಯಾರೂ ಇಲ್ಲದಲ್ಲಿ ಕರೆಯುವುದು ಮಂಗ ಅಂತಲೇ. ನಾನು ಅವಳನ್ನು ಕರೆಯುವುದು ‘ಕುರೆ’. ಕುರೆ ಅಂದರೆ ಕೊಡಗಿನ ಅರೆಭಾಷೆಯಲ್ಲಿ ಮಂಗ ಅಂತ. ನಾನು ಶಾಲೆಯಿಂದ ಬರುವಾಗ ಕಪಿಗೆ ಬೇರೆ ಬೇರೆ ಭಾಷೆಗಳಲ್ಲಿರುವ ಪದಗಳನ್ನು ಕಲಿತು ಬಂದು ಅದನ್ನು ನಾವೆಲ್ಲರೂ ವಿಂಗಡಿಸಿ ಒಬ್ಬೊಬ್ಬರಿಗೆ ನಾವೇ ಇಟ್ಟುಕೊಂಡಿದ್ದೆವು. ಕುರೆ, ಕಪಿ, ಕೋತಿ, ಕುರಂಗು, ಮರ್ಕಟ, ಮಂಗ ಇನ್ನೂ ತುಂಬಾ ಇದ್ದವು. ನಾನು ಇವಳಿಗೆ ಕುರೆ ಎಂದು ಇಟ್ಟಿದ್ದೆ. ಅವಳು ನನಗೆ ಮಂಗ ಎಂದು ಇಟ್ಟಿದ್ದಳು. ಹಾಗೇ ಉಳಿದವರುಗಳಿಗೆ ಉಳಿದ ಹೆಸರುಗಳು.
‘ಇಲ್ಲ ಈ ಸಲ ನೀನು ಹೇಳಲೇಬೇಕು ಕುರೆಯಂತವಳೇ’ ನಾನು ಮತ್ತೆ ಮತ್ತೆ ಕೇಳಿಕೊಂಡಿದ್ದೆ.
“ಯಾವಾಗಲೂ ಸುಮ್ಮನೆ ಇರುತ್ತಿದ್ದವಳು ಆವತ್ತು ಯಾಕೆ ನನ್ನ ಮೈಮೇಲೆ ಕಲಗಚ್ಚು ಸುರಿದೆ? ನಿನ್ನ ಕಾಲಿಗೆ ಬೀಳುತ್ತೇನೆ. ದಮ್ಮಯ್ಯ ಹೇಳುʼ ಎಂದು ವಿನಂತಿಸಿಕೊಂಡಿದ್ದೆ.
‘ಆಯ್ತು ಮಂಗ ಹೇಳುತ್ತೇನೆ’ ಅಂದಿದ್ದಳು.
ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷಳಾದ ಮೇಲೆ ಆಕೆಗೆ ನನ್ನ ಸಹಾಯ ಬೇಕೇ ಬೇಕಿತ್ತು. ನನ್ನ ಕುಡಿತದ ಕಾರಣದಿಂದಾಗಿ ದೂರದ ಕುಗ್ರಾಮವೊಂದರ ಸರಕಾರೀ ಶಾಲೆಯ ಮಾಸ್ತರನಾಗಿ ಎತ್ತಂಗಡಿಗೊಂದಿದ್ದ ನನ್ನನ್ನು ಮಡಿಕೇರಿಗೆ ನಿಯೋಜನೆಯ ಮೇಲೆ ಕರೆಸಿಕೊಂಡು ಒಂದು ಕಚೇರಿಯನ್ನೂ ಕೊಡಿಸಿ ಕೂರಿಸಿದ್ದಳು. ಬ್ರಿಟಿಷರ ಕಾಲದಲ್ಲಿ ನ್ಯಾಯಾಧೀಶರಾಗಿದ್ದವರಿಗೆ ಬೆಟ್ಟದ ತುದಿಯಲ್ಲಿ ಕಟ್ಟಿಸಿದ್ದ ವಸತಿಗೃಹ ಅದು. ಅದೀಗ ಗ್ರಾಹಕರ ವ್ಯಾಜ್ಯಗಳ ನ್ಯಾಯಾಧಿಕರಣವಾಗಿಯೂ ಕೆಲಸ ಮಾಡುತ್ತಿತ್ತು. ಅದರ ಪಕ್ಕದಲ್ಲೇ ನನ್ನ ಕಚೇರಿ. ಕಚೇರಿಯ ಕೆಲಸದ ಜೊತೆಯಲ್ಲೇ ಇವಳಿಗೆ ಭಾಷಣಗಳನ್ನೂ ಬರೆದುಕೊಡಬೇಕಿತ್ತು. ಬರೆದುಕೊಟ್ಟ ಭಾಷಣವನ್ನು ಒಮ್ಮೆ ನನ್ನ ಬಾಯಿಯಿಂದಲೇ ಕೇಳಿಸಿಕೊಂಡು ಹರಿದು ಹಾಕುವ ಆಯೆಶಾ ತನ್ನದೇ ರೀತಿಯಲ್ಲಿ ಬಹಳ ಚೆನ್ನಾಗಿ ಮಾತನಾಡುತ್ತಿದ್ದಳು.
ಆದರೆ ಮಾತನಾಡುವ ಮೊದಲು ನನ್ನ ಕೈಯಿಂದ ಬರೆಸಿಕೊಂಡು ಓದಿಸಿ ಕೇಳದಿದ್ದರೆ ಅವಳಿಗೆ ಬಾಯಿ ಕಟ್ಟಿದಂತೆ ಆಗುತ್ತದೆಯಂತೆ.
“ನೀನು ಬರೆದರೆ ವರ್ಣನೆ ಚೆನ್ನಾಗಿರುತ್ತದೆ ಮಂಗಾ ಅನ್ನುತ್ತಿದ್ದಳು.”
ಭಾಷಣ ಬರೆಯುವುದಕ್ಕಿಂತ ಅವಳೆದುರು ಕೂರುವ ಸೌಭಾಗ್ಯಕ್ಕಾಗಿ ನಾನು ಆಯಸ್ಸು ಪೂರ್ತಿ ಕಾಯುತ್ತಿದ್ದೆ ಎನ್ನುವುದು ಅವಳಿಗೇನು ಗೊತ್ತು?
‘ನೋಡು ಆಯಿಶಾ. ನಿನಗೂ ಯಾರೂ ಇಲ್ಲ ನನಗೂ ಯಾರೂ ಇಲ್ಲ. ನಾವಿಬ್ಬರು ಮದುವೆ ಆಗುವುದಾ’ ಒಮ್ಮೆ ಆಶೆ ತಡೆಯಲಾರದೆ ಕೇಳಿಯೇ ಬಿಟ್ಟಿದ್ದೆ.
ಇನ್ನು ಕೆಲವು ವರ್ಷಗಳ ನಂತರ ಶಾಲಾ ಮಾಸ್ತರನಾಗಿಯೇ ನಿವೃತ್ತನಾಗುವ ನಾನು. ಇವಳು ಮಂತ್ರಿಯಾಗಲೂಬಹುದು. ಆಗ ಇವಳ ಹಿಂದೆ ಮುಂದೆ ಓಡಾಡಿಕೊಂಡು ಭಾಷಣ ಗೀಷಣ ಬರೆದುಕೊಂಡು, ಒಂದಿಷ್ಟು ಜನರನ್ನೂ, ಅಧಿಕಾರಿಗಳನ್ನೂ ದುರುಗುಟ್ಟಿ ನೋಡಿ ಹೆದರಿಸಿ ಉಳಿದ ಸಮಯದಲ್ಲಿ ಇವಳ ತುಟಿಗಳ ಮೇಲಿನ ಕಟ್ಟಿರುವೆಯಂತಹ ಮಚ್ಚೆಯೊಂದನ್ನು ನೋಡುತ್ತಾ ಸಾಯುವವರೆಗೂ ಬದುಕಿರಬಹುದು ಎನ್ನುವುದು ನನ್ನ ದುರಾಶೆ.
ಆದರೆ ಆಕೆಯ ಯೋಚನೆಗಳೇ ಬೇರೆ.
‘ಬಾವಿ ಬತ್ತಿದ ಮೇಲೆ ನೀರು ಸೇದಲು ಯಾರಾದರೂ ಬರುತ್ತಾರಾ ಮಂಗಾ. ನೀನು ಇನ್ನೊಮ್ಮೆ ಹೀಗೆ ಕೇಳಿದರೆ ಎಲ್ಲರ ಮುಂದೆ ಛೀಮಾರಿ ಹಾಕುತ್ತೇನೆ’ ಅಂತ ಹೆದರಿಸಿದ್ದಳು.
‘ಛೀಮಾರಿ’ ಎನ್ನುವುದು ನಾನೇ ಅವಳಿಗೆ ಅರ್ಥ ಹೇಳಿ ಕಲಿಸಿದ್ದ ಪದ. ನನ್ನ ಮೇಲೆಯೇ ಪ್ರಯೋಗಿಸಿದ್ದಳು.
ಆಗ ಅವಳು ಇನ್ನೂ ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿ ಆಯ್ಕೆಯಾಗಿದ್ದಳು. ಯಾರೋ ಸಭೆಯಲ್ಲಿ ಬಳಸಿದ್ದ ಛೀಮಾರಿ ಅನ್ನುವ ಪದವನ್ನು ಮೊದಲ ಬಾರಿ ಕೇಳಿಸಿಕೊಂಡು ನನ್ನಲ್ಲಿ ಅರ್ಥ ಕೇಳಿದ್ದಳು. ಕಪಾಟಿನಲ್ಲಿ ಚಳಿ ಹಿಡಿದು ಮಲಗಿದ್ದ ಕನ್ನಡ ರತ್ನಕೋಶವನ್ನು ಅವಳ ಮುಂದಿಟ್ಟು ಅರ್ಥ ಹೇಳಿದ್ದೆ.
ಅವಳು ಆ ಪದವನ್ನು ಮೊದಲ ಬಾರಿಗೆ ನನ್ನನ್ನು ಹೆದರಿಸಲು ಬಳಸಿದ್ದಳು.
‘ಮೊದಲು ಕನ್ನಡ ಕಲಿ ಆಮೇಲೆ ಹೆದರಿಸು’ ಎಂದು ನಾನೂ ದುರುಗುಟ್ಟಿ ನೋಡಿದ್ದೆ.
‘ನಿನ್ನ ಹಾಗೆ ಕಲಿತಿದ್ದರೆ ನಾನು ಇಷ್ಟು ಹೊತ್ತಿಗೆ ಸಚಿವೆ ಆಗುತ್ತಿದ್ದೆ’ ಅಂದಿದ್ದಳು.
ನನಗೆ ಯಾಕೋ ಆಕೆಯ ಮೇಲೆ ಮಮತೆ ಉಕ್ಕಿ ಬಂದಿತ್ತು.
‘ಆಯ್ತು ನೀನು ಸಚಿವೆ ಆಗು, ನಾನು ನಿನಗೆ ಕನ್ನಡ ಕಲಿಸುತ್ತೇನೆ’ ಎಂದು ಕಲಿಸಲು ಶುರುಮಾಡಿದ್ದೆ.
ಸಾಮಾಜಿಕ ನ್ಯಾಯ, ಮಹಿಳಾ ಸಬಲೀಕರಣ, ಲಿಂಗ ತಾರತಮ್ಯ, ಮುಖ್ಯವಾಹಿನಿ, ಸ್ತ್ರೀ ಸಮಾನತೆ, ಇನ್ನೂ ಇಂತಹ ನೂರಾರು ಪದಗಳನ್ನು ಹುಡುಕಿ ತೆಗೆದು ಎಲ್ಲೆಲ್ಲಿ ಹೇಗೆ ಬಳಸಬೇಕೆಂದು ಹೇಳಿಕೊಟ್ಟಿದ್ದೆ. ಬಹಳ ಬುದ್ದಿವಂತಳೂ ಹುಟ್ಟು ಮಾತುಗಾರಳೂ ಆಗಿದ್ದ ಆಕೆ ಬಹಳ ಬೇಗ ಒಂದೊಂದೇ ಮೆಟ್ಟಿಲೇರಿ ಈಗ ಜಿಲ್ಲಾ ಪಂಚಾಯತಿಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷೆಯೂ ಆಗಿಬಿಟ್ಟಿದ್ದಳು!
ಮನಸು ಮಾಡಿದರೆ ನನ್ನನ್ನು ಸಭೆಗೆ ಕರೆದು ಎಲ್ಲರ ಮುಂದೆಯೇ ಛೀಮಾರಿ ಹಾಕುವ ಅಧಿಕಾರವೂ ಈಗ ಅವಳಿಗಿತ್ತು.
‘ಮದುವೆ ಆಗದಿದ್ದರೂ ಬೇಡ ಆದರೆ ಛೀಮಾರಿ ಹಾಕಬೇಡ ಮಾರಾಯ್ತಿ’ ಅಂತ ಬೇಡಿಕೊಂಡಿದ್ದೆ.
‘ಮಂಗಾ. ಮದುವೆಯ ಆಶೆ ಬಿಡಬೇಡ ಆದರೂ ಆಗಬಹುದು’ ಎಂದು ಆಶೆ ಹುಟ್ಟಿಸಿ ನಕ್ಕಿದ್ದಳು.
ಆಶೆ ಹುಟ್ಟಿಸುವಾಗ ಇನ್ನಷ್ಟು ಆಳಕ್ಕೆ ಹೋಗುವ ಅವಳ ಕೆನ್ನೆಯ ಗುಳಿಗಳು. ಮೇಲ್ದುಟಿಯ ಮೇಲೆ ಎಡಕ್ಕೆ ಮೂಗಿನ ಹೊಳ್ಳೆಗೆ ತಾಗಿಕೊಂಡಂತಿರುವ ಕಟ್ಟಿರುವೆಯಂತಹ ಅದೇ ಮಚ್ಚೆ.
ಆಗಲೂ ಹೀಗೇ ಇದ್ದಳು. ಸಂಜೆಗತ್ತಲ ಹೊತ್ತಲ್ಲಿ ನೂರು ಆಶೆಗಳನ್ನು ಹುಟ್ಟಿಸುವವಳು ಒಂದು ಸಂಜೆ ಇರುಳು ತಲೆಯ ಮೇಲಿದ್ದ ಕಲಗಚ್ಚಿನ ಬಕೆಟ್ಟನ್ನು ನನ್ನ ಮೇಲೆ ಬಗ್ಗಿಸಿದ್ದಳು. ಆಮೇಲೆ ಎಂದೂ ಬಂದಿರಲಿಲ್ಲ. ಮಾತೂ ಬಿಟ್ಟಿದ್ದಳು. ಗುರುತೇ ಇಲ್ಲದವಳಂತೆ ದೂರವಾದಳು. ನಾನೂ ಊರು ಬಿಟ್ಟು ದೂರ ಎಲ್ಲೆಲ್ಲೋ ಹೋದೆ. ಏನೆಲ್ಲಾ ಆದೆ. ಅವಳ ಮೇಲೇ ಮೊದಲ ಕತೆ ಬರೆದು ಹರಿದು ಹಾಕಿದೆ. ಆಮೇಲೆಯೂ ಕಥೆಗಳನ್ನು ಬರೆದೆ. ಕವಿಯೂ ಆದೆ. ಮರಣವು ಬಂದರೆ ಬರಲಿ ನಿನ್ನ ಪಾದಗಳ ಕೆಳಗೆ ಎಂದು ಅವಳ ಹುಚ್ಚಿನಲ್ಲಿ ಕವಿತೆಗಳನ್ನೂ ಬರೆದೆ. ಕ್ರಾಂತಿಯನ್ನೂ, ಕುಡುಕುತನವನ್ನೂ, ವ್ಯಭಿಚಾರಗಳನ್ನೂ, ಪ್ರಖರ ಪ್ರೇಮವನ್ನೂ, ಆಧ್ಯಾತ್ಮ, ಭೂತಚೇಷ್ಟೆ, ಜಾದೂ, ಕಣ್ಕಟ್ಟುಗಳನ್ನೂ ಅನುಭವಿಸಿ ನೋಡಿದೆ.
ಯಾವುದರಲ್ಲೂ ಅವಳ ಖದರು ಕಾಣಿಸುತ್ತಿರಲಿಲ್ಲ. ಅವಳ ಮೈಯಿಂದ ಹೊರಡುತ್ತಿದ್ದ ಸಾಂಬ್ರಾಣಿ ಕರ್ಪೂರ ಧೂಪದ ಹೊಗೆಯ ಮುಂದೆ ಉಳಿದದ್ದು ಏನೂ ಅಲ್ಲ ಎಂದು ಅನಿಸುವ ಹೊತ್ತಿಗೆ ತೀರಾ ಸಾಧುವಾಗಿದ್ದೆ. ವಯಸ್ಸೂ ಆಗಿತ್ತು. ಅವಳು ಇರುವ ಊರಿಗೇ ತಿರುಗಿ ಬಂದಿದ್ದೆ. ಅವಳ ಕುರಿತ ಜ್ವಾಜಲ್ಯಮಾನ ಕತೆಗಳನ್ನು ಕೇಳುವ ಅದೃಷ್ಟ ಮಾತ್ರ ನನಗಿದೆ ಅನಿಸುತ್ತಿತ್ತು.
ಅಷ್ಟು ಹೊತ್ತಿಗೆ ಅವಳೇ ಕರೆಸಿಕೊಂಡಿದ್ದಳು.
‘ಭಾಷಣ ಬರೆದುಕೊಡು ಮಂಗಾ’ ಎಂದು ಏನೂ ಆಗಿಯೇ ಇಲ್ಲ ಎಂಬಂತೆ ಅಂದು ಹೊಸ ಕೆಲಸ ಕೊಟ್ಟಿದ್ದಳು.
‘ನಿನ್ನ ಕಾಲುಗಳನ್ನು ತಲೆಯ ಮೇಲಿಟ್ಟುಕೊಂಡು ಸಾವಿರ ವರ್ಷ ಬದುಕುವೆ’ ಎಂದು ಹೇಳಬೇಕೆನಿಸಿತ್ತು. ಆದರೆ ಏನೂ ಹೇಳದೆ ಅವಳು ವಹಿಸಿದ ಕೆಲಸ ಮಾಡುವುದು ಎಲ್ಲ ಕುಡುಕುತನಗಳಿಗಿಂತ ಸುಖ ಕೊಡುತ್ತಿದೆ ಅನಿಸುತ್ತಿತ್ತು.
ಅವಳು ಬರುತ್ತಿರುವುದು ಗೊತ್ತಿದ್ದೇ ಕಚೇರಿಯ ಕೋಣೆಯ ಕಿಟಕಿಯನ್ನು ವಿಶಾಲಕ್ಕೆ ತೆರೆದಿಟ್ಟಿದ್ದೆ. ಮಳೆಗಾಲ ಕಳೆದರೂ ಇನ್ನೂ ಹಸಿಹಸಿ ಶಿಲೀಂಧ್ರ ತುಂಬಿಕೊಂಡಿದ್ದ ಕೋಣೆಯ ತಾರಸಿ ಮತ್ತು ಗೋಡೆಗಳಿಂದ ಒಂದು ರೀತಿಯ ಹಸಿಕಮಟು ವಾಸನೆ ಕಿಟಕಿಯಿಂದ ಹೊರಹೋಗಲು ಹವಣಿಸುತ್ತಿತ್ತು.
ಏನೂ ಹೇಳದೆ ಏನೂ ಮಾತಾಡದೆ ಅವಳು ಕರಗುವ ದಿನಗಳಿಗಾಗಿ ಕಾಯುವುದರಲ್ಲಿ ನಶೆ ಇದೆ ಅನಿಸುತ್ತಿತ್ತು. ಹಾಗಾಗಿ ಕಾಯುತ್ತಿದ್ದೆ. ಇವತ್ತು ಕತೆಯ ಕಾರಣವನ್ನು ಹೇಳಲು ಬಂದೇ ಬರುತ್ತಾಳೆ ಎಂದು ಬಾಗಿಲನ್ನೂ ಕಿಟಕಿಗಳನ್ನೂ ವಿಶಾಲಕ್ಕೆ ತೆರೆದು ಕಾಯುತ್ತಿದ್ದೆ.
ಹೊರಗಿಂದ ಕೋಣೆಯೊಳಗೇ ನುಗ್ಗಿ ಬರಲು ಕಾಯುತ್ತಿರುವ ಶ್ರಾವಣದ ಮೋಡಗಳು
******
‘ಇದೆಂತ ಮಂಗಾ, ನಿನಗೆ ಚಳಿಯಾಗುವುದಿಲ್ಲವಾ. ಮೊದಲು ಕಿಟಕಿ ಮುಚ್ಚು’ ಎಂದು ಬಂದವಳೇ ಅಧಿಕಾರಿಣಿಯಂತೆ ಆದೇಶ ನೀಡಲು ತೊಡಗಿದಳು.
‘ಸ್ವಲ್ಪ ಇರಿ ಮೇಡಂ. ಮೊದಲು ನಿಮ್ಮ ಅತ್ತರಿನ ಪರಿಮಳ ಒಂದಿಷ್ಟು ಆಚೆ ಹೋಗಲಿ. ನಿಮಗೆ ಚಳಿಯಾಗುವುದಾದರೆ ಈ ಪುರಾತನ ಪಂಖವನ್ನು ನಿರ್ಜೀವಗೊಳಿಸುತ್ತೇನೆ’ಎಂದು ಬಿಳಿಯರ ಕಾಲದ ಅದರ ಪುರಾತನ ಜೋಗುಳವನ್ನು ನಿಲ್ಲಿಸಿದೆ.
‘ಛೀ ಎಂತ ಅಲ್ಲವಾ, ಈಗಲೂ ನಾವು ಅದೇ ಥರ ಮಂಗ ಕುರೆ ಅಂತ ಕರೆಯುವುದು. ನಮಗೆ ಇಬ್ಬರಿಗೂ ಒಂದು ಚೂರು ನಾಚಿಕೆ ಇಲ್ಲವಲ್ಲಾ!’ ಟೇಬಲಿನ ಮೇಲಿದ್ದ ಕಾಗದ ಪತ್ರಗಳ ಮೇಲಿಟ್ಟ ಭಾರದ ಗುಂಡಿನ ಜೊತೆ ತನ್ನ ನೀಳ ಬೆರಳುಗಳಿಂದ ಆಡಲು ತೊಡಗಿದಳು. ಅವಳ ದುಂಡಗೆ ಕತ್ತರಿಸಿದ ಉಗುರುಗಳಲ್ಲಿ ಮಿರುಗುವ ಕಪ್ಪು ಬಣ್ಣ, ತುಟಿಗಳಿಗೆ ಕಂಡೂ ಕಾಣಿಸದ ಹಾಗೆ ಬಳಿದಿರುವ ನೇರಳೆಯ ಬಣ್ಣ. ಅದರ ಮೇಲಕ್ಕೆ ಕಾಣುತ್ತಿರುವ ಕಟ್ಟಿರುವೆಯಂತೆ ಹೊಳೆವ ಮಚ್ಚೆ. ಅವಳು ಅವಳು ತಲೆಗೆ ಸುತ್ತಿದ್ದ ಕರಿಯ ಲೇಸ್ ಬಟ್ಟೆಯನ್ನು ಸಡಿಲಿಸಿ ತೋಳುಗಳ ಮೇಲೆ ಹಾಕಿಕೊಂಡು ‘ಈಗ ಹೇಳು ಮಂಗ ಎಂತ ನಿನ್ನ ಕಥೆಯ ವಿಷಯ ’ ಅಂತ ಕಣ್ಣಿಗೆ ಕಣ್ಣು ಕೊಟ್ಟು ಕೂತಳು. ಇವಳು ಹೀಗೆ ಬೇಕಂತಲೇ ಕಣ್ಣಿಗೆ ಕಣ್ಣು ಕೊಡುವುದು. ಅದರಿಂದ ಅವಳಿಗೆ ಆಗಬೇಕಾಗಿದ್ದೇನೂ ಇಲ್ಲ. ಎಲ್ಲ ಐಹಿಕ ಅಧಿಕಾರಗಳನ್ನೂ ತಬ್ಬಿಬ್ಬುಗೊಳಿಸಬಲ್ಲ ಹೆಣ್ಣಿನ ಸೌಂದರ್ಯದ ಪರಿಮಳವನ್ನು ಸ್ಥಾಪಿಸುವುದು ಅಂತ ನನಗೂ ಗೊತ್ತು.
‘ಇದೆಲ್ಲ ವಯ್ಯಾರ ಬಿಟ್ಟು ನೀನು ನಲವತ್ತು ವರ್ಷಗಳ ಹಿಂದೆ ನನ್ನ ಮೈಮೇಲೆ ಕಲಗಚ್ಚು ಯಾಕೆ ಸುರಿದೆ ಹೇಳು’ ಎಂದೆ.
‘ನೀನು ನನ್ನ ತಂದೆಯನ್ನು ಯಾಕೆ ಕೊಪ್ಪರಿಗೆಯ ಬಾವಿಗೆ ಇಳಿಸಿದೆ?ʼ
ಅವಳು ನೇರವಾಗಿ ಕೇಳಿದಳು.
ನನಗೆ ತಬ್ಬಿಬ್ಬಾಯಿತು. ಇವಳಿಗೆ ನಲವತ್ತು ವರ್ಷಗಳ ಹಿಂದಿನ ಆ ವಿಷಯ ಹೇಗೆ ಗೊತ್ತಾಯಿತು? ಅವಳ ತಂದೆ ಆಡು ಅಬೂಬಕರ್ ರವರು ಇದನ್ನು ಯಾಕೆ ಇವಳಿಗೆ ಹೇಳಲು ಹೋದರು?
‘ಹಾಗೆ ಹೇಳಲು ನಿನ್ನ ತಂದೆಯವರಿಗೇನಾದರೂ ತಲೆ ಕೆಟ್ಟಿತ್ತಾ?ʼ
‘ಹೌದು ಅವರಿಗೆ ಆವತ್ತಿನಿಂದ ತಲೆ ಕೆಟ್ಟಿತ್ತು’ ಆಯಿಶಾ ಯಾವ ಭಾವವೂ ಇಲ್ಲದೆ ಹೇಳಿದಳು.
ಆದರೆ ಅದು ಇರಿಯುವಂತೆ ಕೇಳಿಸುತ್ತಿತ್ತು.
ನಮ್ಮ ತೋಟದ ಒಂದು ಮೂಲೆಯಲ್ಲಿ ಒಂದು ಹಳೆಯ ಬಾವಿ ಇತ್ತು. ಹಳೆಯದು ಅಂದರೆ ಬಹಳ ಹಳೆಯದು. ಅದನ್ನು ಎಲ್ಲರೂ ಕೊಪ್ಪರಿಗೆಯ ಬಾವಿ ಎಂದು ಕರೆಯುತ್ತಿದ್ದರು. ಕೊಡಗಿನ ರಾಜರ ಕಾಲದ ಬಾವಿ. ಅದರೊಳಗೆ ಯಾರೋ ವೈರಿಗಳ ದಾಳಿಗೆ ಹೆದರಿ ಚಿನ್ನದ ಆಭರಣಗಳೂ ನಾಣ್ಯಗಳೂ ಇದ್ದ ಕೊಪ್ಪರಿಗೆಯನ್ನು ಮುಳುಗಿಸಿ ಅದನ್ನು ಕಾಯಲು ಒಂದು ಸರ್ಪವನ್ನು ನೇಮಿಸಿರುವರೆಂದೂ ಸುದ್ದಿ ಇತ್ತು. ಅದರೊಳಗೆ ಇಳಿಯಬಾರದು ಮತ್ತು ಹೆಚ್ಚು ಇಣುಕಬಾರದು ಎಂಬ ನಂಬಿಕೆಯೂ ಇತ್ತು. ಅದು ಯಾವುದೋ ಕಾರಣದಿಂದ ಆ ತೋಟವೂ ಆ ಬಾವಿಯೂ ನನ್ನ ತಂದೆಯವರ ಸುಪರ್ದಿಗೆ ಬಂದಿತ್ತು. ತೋಟ ಇರುವ ಕಾರಣದಿಂದ, ತೋಟದಲ್ಲಿ ಬಾವಿ ಇರುವ ಕಾರಣದಿಂದ ಮತ್ತು ಬಾವಿಯೊಳಗೆ ಕೊಪ್ಪರಿಗೆ ಇರುವ ಕಾರಣದಿಂದ ಪ್ರಯೋಜನಕ್ಕಿಲ್ಲದ ಒಂದು ಅನಗತ್ಯ ಶ್ರೀಮಂತಿಕೆ ನಮ್ಮ ತಂದೆಯವರಿಗೆ ಬಂದಿತ್ತು. ಅದು ಮಕ್ಕಳಾದ ನಮಗೂ ಒಂದು ರೀತಿಯ ಹಿರಿಮೆಯನ್ನು ತಂದುಕೊಟ್ಟಿತ್ತು. ಬಾವಿಯಲ್ಲಿರುವ ಕೊಪ್ಪರಿಗೆಯ ಕಲ್ಪನೆಯಿಂದಲೇ ನಾವು ಖುಷಿಯಾಗಿದ್ದೆವು ಮತ್ತು ತುಂಟರೂ ಆಗಿದ್ದೆವು.
ಕಕ್ಕಡ ಮಾಸವೆಂದು ನಮ್ಮ ಕಡೆ ಕರೆಯಲ್ಪಡುವ ಆಷಾಡದ ಜೋರು ಮಳೆಯಲ್ಲಿ ಆ ಬಾವಿ ತುಂಬಿ ಹರಿಯುತ್ತಿತ್ತು. ಸ್ಪಟಿಕದಂತಹ ಅದರ ನಿರ್ಮಲ ಜಲ ಮಳೆಯ ನೀರಿನ ಜೊತೆ ಸೇರಿಕೊಂಡು ತೋಟದಲ್ಲಿ ಹರಿಯುತ್ತಾ ತೊರೆಯೊಂದನ್ನು ಸೇರಿ ಅಲ್ಲಿಂದ ನದಿಗೆ ಹರಿದುಹೋಗುತ್ತಿತ್ತು. ಅದು ಪಯಸ್ವಿನಿ ನದಿ. ಆ ಹರಿದು ಹೋಗುವ ನೀರಿಗೆ ವಿರುದ್ಧವಾಗಿ ಈಜಿ ಮೇಲಕ್ಕೆ ಬರುವ ಪಯಸ್ವಿನಿ ನದಿಯ ಮೀನುಗಳು ನಮ್ಮ ತೋಟಕ್ಕೂ ಹತ್ತಿ ಬಂದು ಮೊಟ್ಟೆ ಇಟ್ಟು ವಾಪಾಸಾಗುತ್ತಿದ್ದವು.
ಆ ಮೊಟ್ಟೆಗಳು ಸಣ್ಣ ಸಣ್ಣ ಮರಿ ಮೀನುಗಳಾಗಿ ಬೆಳೆದು ಮತ್ತೆ ನದಿ ಸೇರುತ್ತಿದ್ದವು.
ಹಾಗೆ ಮೊಟ್ಟೆ ಇಟ್ಟು ವಾಪಾಸಾಗುವ ಮೀನುಗಳನ್ನು ಬಿದಿರಿನ ಗೊರಬೆಗಳಲ್ಲಿ ಹಿಡಿದು ತಂದು ಸಾರು ಮಾಡಲು ಕೊಡುವುದು ಆಡು ಅಬೂಬಕರರ ಇನ್ನೊಂದು ಹವ್ಯಾಸವಾಗಿತ್ತು.
ಒಂದು ಮಳೆಗಾಲದಲ್ಲಿ ಹಾಗೆ ಕೊಡುವಾಗ ಅಬೂಬಕ್ಕರರ ಬಿದಿರಿನ ಗೊರಬೆಯಲ್ಲಿ ಜೀವಂತವಾಗಿ ಚಡಪಡಿಸುವ ಉದ್ದನೆಯ ಒಂದು ಹಾವು ಮೀನೂ ಇತ್ತು.
ನೀರಿಲ್ಲದಿದ್ದರೆ ಭೂಮಿಯಲ್ಲೂ ಬದುಕಬಲ್ಲ ಮೀನಂತೆ ಅದು.
‘ಇದನ್ನು ತಿನ್ನುವ ಬದಲು ಸಾಕಬಹುದಲ್ಲಾ’ ಎಂದು ಒಂದು ಕೆಸುವಿನ ಎಲೆಯಲ್ಲಿ ಅದನ್ನು ಸುತ್ತಿತಂದು ಬಾವಿಗೆ ಬಿಟ್ಟಿದ್ದೆ.
‘ಈಗ ನಮ್ಮ ಬಾವಿಯಲ್ಲಿ ಎರಡು ಹಾವುಗಳು’ ಎಂದು ಕೊಚ್ಚಿಕೊಳ್ಳುತ್ತಿದ್ದೆ.
ಕೊಪ್ಪರಿಗೆಯನ್ನು ಕಾಯುವ ಎರಡು ಹಾವುಗಳ ಸಾಹುಕಾರ ನಾನು ಎಂದು ಖುಷಿಯಾಗುತ್ತಿತ್ತು. ಬಾವಿಯೊಳಗಿಂದ ಆ ಹಾವು ಮೀನೂ ಆಗಾಗ ಬೆಳ್ಳಿಯ ದಾರದಂತೆ ಬಾವಿಯ ಸ್ಪಟಿಕ ಜಲದಲ್ಲಿ ಮಿಂಚಿ ಮರೆಯಾಗುತ್ತಿತ್ತು.. ಜೊತೆಗೆ ಬಾವಿಯೊಳಗೆ ಬಿದ್ದುಹೋದ ಹಳೆಯ ತಾಮ್ರದ, ಹಿತ್ತಾಳೆಯ ಕೊಡಪಾನಗಳೂ ಮಿಂಚುತ್ತಿದ್ದವು.
ನಾನು ಬಾವಿಯ ಕಟ್ಟೆಗೆ ಬೆನ್ನು ಕೊಟ್ಟು ನಿಂತು ಬಾವಿಯ ಮುಂದಿನ ಮಣ್ಣಿನ ಬರೆಯಲ್ಲಿ ಬೆಳೆದಿದ್ದ ಹಸಿರು ಹುಲ್ಲಿನ ಮೇಲೆ ಕುಳಿತುಕೊಳ್ಳುತ್ತಿದ್ದ ಆಯೆಶಾಳ ಜೊತೆ ಮಾತನಾಡುತ್ತಿದ್ದೆ. ಅವಳು ಕಲಗಚ್ಚಿಗಾಗಿ ಬಂದವಳು ಅಲ್ಲಿ ಕುಳಿತು ಕಾಯುತ್ತಿದ್ದಳು.
ನನಗೆ ಬಹುಶಃ ಹದಿನಾರು ವರ್ಷ. ಹೆಚ್ಚು ಕಡಿಮೆ ಅವಳಿಗೂ ಅಷ್ಟೇ ವಯಸ್ಸು.
ಹಸಿರು ಹುಲ್ಲಿನ ಮೇಲೆ ಬೀಳುವ ಸಂಜೆಯ ಬಿಸಿಲಲ್ಲಿ ಅವಳು ಅಪರಿಮಿತ ಸುಂದರಿಯಾಗಿ ಕಂಗೊಳಿಸುತ್ತಿದ್ದಳು. ನನ್ನ ಬಹುಪಾಲು ಮಾತುಗಳು ಬಾವಿಯೊಳಗೆ ಸರ್ಪಗಾವಲಲ್ಲಿರುವ ಚಿನ್ನದ ಕೊಪ್ಪರಿಗೆಯ ಕುರಿತೇ ಇರುತ್ತಿತ್ತು. ಅವುಗಳನ್ನು ಕೇಳುತ್ತಾ ಅವಳ ಕಣ್ಣುಗಳು ಅರಳುತ್ತಿದ್ದವು.
‘ನಾನು ಬಿಟ್ಟಿರುವ ಹಾವು ಮೀನು ದೊಡ್ಡ ಸರ್ಪವಾಗಿ ಬೆಳೆದು ಕೊಪ್ಪರಿಗೆಯ ಉಸ್ತುವಾರಿಯನ್ನು ತಾನು ವಹಿಸಿಕೊಳ್ಳುವುದು.’
‘ಆಮೇಲೆ ಏನೂ ಭಯವಿಲ್ಲ. ಕೊಪ್ಪರಿಗೆ ನಮ್ಮದಾಗುವುದು. ಅವಳ ಅಪ್ಪ ಆಡು ಅಬೂಬಕರರು ಆಡು ಮೇಯಿಸುವುದು ಬೇಡ. ಅವಳು ಕಲಗಚ್ಚು ಹೊರುವುದು ಬೇಡ. ಯಾರೂ ಏನೂ ಕಷ್ಟ ಪಡುವುದು ಬೇಡ. ನಾನೂ ಶಾಲೆಗೆ ಹೋಗದೆ ನಿನ್ನ ಜೊತೆಗೇ ಇರುತ್ತೇನೆ.’
ಅವಳಿಗೆ ಕಥೆ ಹೇಳುತ್ತಿದ್ದೆ.
ಅವಳ ಕಣ್ಣುಗಳು ಇನ್ನಷ್ಟು ಹೊಳೆಯುತ್ತಿದ್ದವು.
ಸಂಜೆಗತ್ತಲಲ್ಲಿ ಅವಳು ಕಲಗಚ್ಚಿನ ಬಕೆಟ್ಟು ತಲೆಯ ಮೇಲಿಟ್ಟುಕೊಂಡು ಎರಡೂ ಕೈಗಳನ್ನೆತ್ತಿ ಅದನ್ನು ಬೀಳದಂತೆ ನಡೆಯುತ್ತಿರುವಾಗ ಅವಳನ್ನು ಕತ್ತಲಲ್ಲಿ ತಡೆದು ನಿಲ್ಲಿಸಿ ಸುಮ್ಮನೆ ತಬ್ಬಿಕೊಳ್ಳುತ್ತಿದ್ದೆ. ಅವಳ ಕೊರಳಿಂದ ಬರುತ್ತಿದ್ದ ಕರ್ಪೂರ ಧೂಪ ಸಾಂಬ್ರಾಣಿಯ ಹೊಗೆಯ ಪರಿಮಳ, ಬೆವರಿದ ಅವಳ ಮೈಯ್ಯ ಪರಿಮಳ ನನ್ನೊಳಗೆ ಸೇರಿಕೊಳ್ಳುವ ತನಕ ಆಘ್ರಾಣಿಸುತ್ತಿದ್ದೆ.
ನನ್ನ ಅಪ್ಪುಗೆ ಸಡಿಲವಾದ ನಂತರ ಅವಳು ಮಾತಿಲ್ಲದೆ ಮಾಯವಾಗುತ್ತಿದ್ದಳು.
ಪ್ರತಿ ಸಂಜೆ ಒಂದು ಪ್ರಾರ್ಥನೆಯಂತೆ ಯಾರ ಗಮನಕ್ಕೂ ಬಾರದೆ ನಡೆಯುತ್ತಿದ್ದ ಒಂದು ವ್ರತ. ಹಲವು ಮಾಸಗಳ ಒಂದು ಅಲೌಕಿಕ ಪ್ರೇಮ.
ಆದರೆ ಆವತ್ತು ನನ್ನ ಮೈಮೇಲೆ ಕಲಗಚ್ಚು ಸುರಿದು ಮಾಯವಾಗಿದ್ದಳು.
ನೆನಪೇ ಇಲ್ಲದ ಹಾಗೆ. ಹಾಗೊಂದು ವ್ರತ ನಮ್ಮಿಬ್ಬರ ನಡುವೆ ಆ ಎಳೆಯ ವಯಸಿನಲ್ಲಿ ನಡೆದೇ ಇಲ್ಲ ಎನ್ನುವ ಹಾಗೆ ‘ದೂರ ಹೋಗು’ ಎಂದು ಚೀರಿ ಸದ್ದಿಲ್ಲದೆ ಕತ್ತಲಲ್ಲಿ ಕಾಣಿಸದಾಗಿದ್ದಳು.
ಆ ದಿನಗಳಲ್ಲಿ ನನಗೆ ಹುಚ್ಚು ಹಿಡಿದಿತ್ತು. ದೀರ್ಘವಾಗಿ ಊಳಿಡುವ ಒಂದು ಕಾಡುಪ್ರಾಣಿಯಂತೆ, ಗಾಯಗೊಂಡ ಛಿದ್ರ ಆತ್ಮದಂತೆ ಅವಳಿಗಾಗಿ ಹಂಬಲಿಸಿದ್ದೆ. ಅವಳ ಬರುವಿಕೆಗಾಗಿ ಕಾದಿದ್ದೆ. ಅವಳು ಬರಲೇ ಇಲ್ಲ. ನಾನೇ ಹುಚ್ಚು ಬಿಡಿಸಿಕೊಂಡು ವಾಪಾಸು ಬಂದಿದ್ದೆ.
ಅವಳು ಈಗಲೂ ಹಾಗೆಯೇ ನಿರ್ವಿಕಾರವಾಗಿ ಇದ್ದಳು. ನಾನು ಮತ್ತೆ ಹುಚ್ಚನಾಗಲು ತೊಡಗುತ್ತಿರುವೆ ಅಂತ ಭಯ ಶುರುವಾಗಿತ್ತು.
ಒಂದು ಕಥೆ ಬರೆದು ಎಲ್ಲ ಅವಘಡಗಳನ್ನೂ ಮುಗಿಸಿಬಿಡಬೇಕು ಎನ್ನುವ ಹಠ.
ಅವಳ ಹಠಮಾರಿತನವನ್ನು ನನ್ನ ಕಥೆಗಾರಿಕೆಯಿಂದ ಸೋಲಿಸಬೇಕು ಎನ್ನುವ ಹುಚ್ಚು ತಂತ್ರ.
‘ನೀನು ಬಾವಿಯ ಕಥೆ ಹೇಳಿ ನನ್ನ ಯಾಮಾರಿಸುತ್ತಿದ್ದ ಹಾಗೆ ಕೊಪ್ಪರಿಗೆಯ ಆಶೆ ತೋರಿಸಿ ನನ್ನ ತಂದೆಯನ್ನೂ ಬಾವಿಗೆ ಇಳಿಸಿದೆ’ ಆಕೆ ತನ್ನೆಲ್ಲ ಸಿಟ್ಟನ್ನೂ ಒಂದಿಷ್ಟೂ ತೋರಿಸದ ಹಾಗೆ ತಣ್ಣಗೆ ಹೇಳುತ್ತಿದ್ದಳು.
ಕಿಟಕಿಯಿಂದ ಇಳಿದು ಬರುವ ಸಂಜೆಯ ಬೆಳಕು, ನುಗ್ಗಿ ಬರುತ್ತಿರುವ ತಣ್ಣನೆಯ ಗಾಳಿಗೆ ಹಾರುತ್ತಿರುವ ಅವಳ ಮುಂಗುರುಳು, ಸಣ್ಣದರಿಂದಲೇ ಕಟ್ಟು ಕತೆಗಳನ್ನೂ, ರೋಮಾಂಚನಗಳನ್ನೂ, ಐಶ್ವರ್ಯವನ್ನೂ, ಸೌಂದರ್ಯವನ್ನೂ, ನಶೆಯನ್ನೂ ಹುಚ್ಚನಂತೆ ಅರಸುತ್ತಲೇ ಮುದುಕನಾಗುತ್ತಿರುವ ನಾನು!
ಈಗ ಈಕೆಯೇ ಒಂದು ದೊಡ್ಡ ಪವಾಡದಂತೆ ಸಂಜೆಯ ಬೆಳಕಲ್ಲಿ ಕಂಗೊಳಿಸುತ್ತಿದ್ದಾಳೆ.
‘ಹೌದು ಅವರನ್ನು ಬಾವಿಗೆ ಇಳಿಸಿದ್ದು ಹೌದು. ಬಾವಿಯೊಳಗೆ ಹೊಳೆಯುತ್ತಿದ್ದ ಕೊಪ್ಪರಿಗೆಯೂ ಅದನ್ನು ಕಾಯುತ್ತಿದ್ದ ಹಾವು ಮೀನೂ ಕಾಣಿಸಿದ್ದೂ ಹೌದು. ಬಾವಿಯೊಳಗೆ ಇಳಿದ ಅವರು, ‘ಮಣ್ಣಾಂಗಟ್ಟಿ ಕೊಪ್ಪರಿಗೆಯೂ ಇಲ್ಲ ಏನೂ ಇಲ್ಲ’ ಎಂದು ಒಂದಿಷ್ಟು ಹಳೆಯ ಕೊಡಪಾನಗಳನ್ನು ಎತ್ತಿಕೊಂಡು ಹೋಗಿದ್ದೂ ಹೌದು’ ಏನೋ ಮಾಯಕ್ಕೆ ಸಿಕ್ಕಿಹಾಕಿಕೊಂಡವನಂತೆ ಅವಳ ಮುಖವನ್ನೇ ನೋಡುತ್ತಾ ಉಲಿಯುತ್ತಿದ್ದೆ.
‘ಹೌದಾ? ನಿಜವಾ? ಕೊಪ್ಪರಿಗೆ ಇರಲಿಲ್ಲವಾ?’
‘ನಾನು ನೋಡಿದಾಗ ಕಂಡಿತ್ತು. ಅವರು ಹೋದಾಗ ಇರಲಿಲ್ಲ. ಬಾವಿಗೆ ಹಗ್ಗ ಹಾಕಿ ಇಳಿದು ಖಾಲಿ ಕೊಡಪಾನಗಳನ್ನು ಎತ್ತಿಕೊಂಡು ಹೋದರು. ಇದು ನಮ್ಮಿಬ್ಬರ ನಡುವಿನ ವಿಷಯ ಯಾರಿಗೂ ಹೇಳಬೇಡ ಎಂದು ಹೋಗಿದ್ದರು. ಆದರೆ ನಿನಗೆ ಯಾಕೆ ಹೇಳಿದರು?’ ನಾನು ಅವಳನ್ನೇ ತಿರುಗಿ ಕೇಳಿದೆ.
“ಅವರು ಹೇಳಲಿಲ್ಲ. ಆದರೆ ಅವರು ಮರಳಿದಾಗ ಅವರು ಕೈಯಲ್ಲಿ ಹಳೆಯ ಕೊಡಪಾನಗಳು ಮತ್ತು ಮುಖದಲ್ಲಿ ಒಂದು ಮಾಯದ ನಗು. ಆ ನಗು ಅವರ ಮುಖದಿಂದ ಅಳಿಸಿಹೋಗಲೇ ಇಲ್ಲ. ಅವರಿಗೆ ಹುಚ್ಚು ಹಿಡಿದಿತ್ತು, ಏಕೆಂದರೆ ನನ್ನ ಬಾಪಾ ನಿಜವಾಗಿಯೂ ಕೊಪ್ಪರಿಗೆಯನ್ನು ನೋಡಿದ್ದರು. ಮತ್ತು ಒಂದು ಸರ್ಪವೂ ಅದನ್ನು ಕಾಯುತ್ತಿರುವುದು ಅವರಿಗೆ ಕಂಡಿತ್ತು. ಅವರಿಗೆ ಹೆದರಿಕೆಯಾಗಿರಲಿಲ್ಲ. ನಿಜಕ್ಕೂ ಅಷ್ಟು ದೊಡ್ಡ ಐಶ್ವರ್ಯ ನೋಡಿ ತುಂಬ ಖುಷಿಯಾಗಿತ್ತು. ಹಾಗಾಗಿ ಅವರಿಗೆ ಬ್ರಾಂತು ಹಿಡಿದಿತ್ತು. ತೀರಿಹೋಗುವವರೆಗೂ ಅವರ ಮುಖದ ನಗು ಮಾಯಲೇ ಇಲ್ಲ. ನಗುತ್ತಲೇ ಇದ್ದರು. ಆದರೂ ಎಲ್ಲರೂ ಅವರನ್ನು ಬ್ರಾಂತು ಹಿಡಿದ ಅಬೂಬಕರ್ ಎಂದು ಕರೆದು ಹಾಸ್ಯ ಮಾಡುತ್ತಿದ್ದರು.”
‘ಈಗ ಗೊತ್ತಾಯಿತಾ ನಾನು ಯಾಕೆ ನಿನ್ನ ಮೇಲೆ ಕಲಗಚ್ಚು ಸುರಿದೆ ಅಂತ’ ಆಯಿಶಾ ತಣ್ಣಗೆ ನಕ್ಕಳು.
ಅವಳ ನಗುವಿನ ಜೊತೆಗೇ ಆ ಕೋಣೆಯಲ್ಲಿ ಹರಡಿಕೊಳ್ಳುತ್ತಿದ್ದ ಸಂಜೆಯ ಕತ್ತಲಿನ ನೆರಳುಗಳು ಮತ್ತು ಅವಳ ದೇಹದ ಅತ್ತರು ಬೆರೆತ ಪರಿಮಳ.
‘ಈಗಲಾದರೂ ಕಿಟಕಿ ಬಾಗಿಲುಗಳನ್ನು ಹಾಕು ಮಂಗಾ’ ಅವಳು ಏನೂ ನಡೆದೇ ಇಲ್ಲವೆಂಬಂತೆ ಎದ್ದು ನಿಂತಳು.
‘ಹೊಸತಾಗಿ ಕಥೆ ಬರೆಯುವಾಗ ಯೋಚಿಸು’ ಅಂದಳು
‘ನಾವು ಯೋಚಿಸುವ ಹಾಗೆ ಲೋಕ ಇರುವುದಿಲ್ಲ’ ಅಂದಳು
‘ಆಯ್ತು ಮಾರಾಯ್ತಿ. ಕಾಲಿಗೆ ಬಿದ್ದು ಕೇಳಿಕೊಳ್ಳುವೆ ಒಂದೇ ಒಂದು ಬೇಡಿಕೆ.’
‘ಏನು?’ ಎಂದು ತಿರುಗಿ ಕಣ್ಣಲ್ಲಿ ಕಣ್ಣಿಟ್ಟು ಕೇಳಿದಳು.
‘ನಿನ್ನ ತುಟಿಯ ಮೇಲಿನ ಆ ಕಟ್ಟಿರುವೆಯಂತಹ ಮಚ್ಚೆಯನ್ನು ಈ ಕತ್ತಲೆಯ ಕೋಣೆಯಲ್ಲಿ ಬಿಟ್ಟು ಹೋಗು ಸಾಮ್ರಾಜ್ಞಿ.’
‘ಆಯ್ತು, ಸ್ಥಾಯಿ ಸಮಿತಿಯಲ್ಲಿ ಈ ಕುರಿತು ಚರ್ಚಿಸಿ ತೀರ್ಮಾನಿಸುತ್ತೇನೆ. ಈಗ ನೀನು ಕಚೇರಿಯ ಬಾಗಿಲು ಹಾಕಿಕೊಂಡು ಮನೆಗೆ ಹೋಗಿ ಒಂದು ಖಾಲಿ ಟೀ ಮಾಡಿ ಕುಡಿದು ಕಥೆ ಬರೆಯಲು ಶುರುಮಾಡು’ ಅಂದಳು.
“ಕಥೆಗೆ ‘ಕೊಪ್ಪರಿಗೆ’ ಎಂದು ಹೆಸರಿಡಲೇ ಎಂದು ಕೇಳಿದೆ.”
‘ಬೇಡ, “ಕಲಗಚ್ಚು” ಎಂದು ಇಡು ಸೂಪರಾಗಿರುತ್ತದೆ’ ಎಂದು ತನ್ನೆಲ್ಲ ಚಂದವನ್ನು ಜೊತೆಗೆ ಎತ್ತಿಕೊಂಡು ಹೊರಟಳು.
ನಾನು ಏಳಲಾರದೆ ಹಾಗೇ ಕುಳಿತು ಕಣ್ಣುಮುಚ್ಚಿದೆ.
ಅವಳು ಬಿಟ್ಟು ಹೋದ ಅಷ್ಟೂ ಪರಿಮಳ!
(ತುಷಾರ ಮಾಸಪತ್ರಿಕೆಯಲ್ಲಿ ಪ್ರಕಟಿತ)
ಕಥೆ, ಕಾದಂಬರಿ, ಕವಿತೆ, ಅಂಕಣಗಳನ್ನು ಬರೆಯುತ್ತಾರೆ. ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ. ಅಲೆದಾಟ, ಫೋಟೋಗ್ರಫಿ ಮತ್ತು ಬ್ಲಾಗಿಂಗ್ ಇವರ ಇತರ ಹವ್ಯಾಸಗಳಲ್ಲಿ ಕೆಲವು. ಕೊಡಗಿನವರು.
ಬಹಳ ಇಷ್ಟವಾಯಿತು ಕಥೆ
ಹಹ್ಹಹ್ಹಾ…. ಮಸ್ತ್ ಮಜಾ ಬಂತು….ಕತೆ….
ಸೊಗಸಾಗಿದೆ.
ಕಥೆ ಇಷ್ಟವಾಯಿತು ರಶೀದ್ ಸರ್. ಇಲ್ಲಿ ಬರುವ ಆಯಿಶಾರ ಅತ್ತರಿನ ಪರಿಮಳ ಕತೆಯ ಹೊರಗೂ ಹೇಗೆ ಹರಡಿದೆಯಲ್ಲ ಅಂತ ಅಚ್ಚರಿಯಾಯಿತು. ಕಥೆಯಲ್ಲಿ ಹೇಳದೇ ಉಳಿದುಹೋದ ಸಂಗತಿಗಳೂ ಓದಿಯಾದ ನಂತರ ಮರಳಿ ಬಂದು ಕಾಡುವುದು ಒಂದು ಥ್ರಿಲ್.
ಕಲಗಚ್ಚು ಕಥೆಯ ತುಂಬಾ ಅತ್ತರಿನ ಪರಿಮಳ…
ರಶೀದ ಕಲಗಚ್ಚು ಎಂದರೆ ಎನು
ಕತೆ ಇಷ್ಟವಾಯಿತು. ಹುಟ್ಟಿ ಬೆಳೆದ ಮಣ್ಣಿನ ವಾಸನೆ ಅತ್ತರಿನ ಪರಿಮಳದ ಹಾಗೆ ಎಲ್ಲೇ ಹೋದರೂ ಉಳಿದು ಬಿಡುತ್ತದೆ ಅಲ್ಲವೇ. ನಿಮ್ಮ ಕತೆಗಳಲ್ಲಿ ಮಣ್ಣಿನ ವಾಸನೆಯೂ ಗಾಢವಾಗಿ ತಟ್ಟುವಂತಿರುತ್ತದೆ. ನಿಮ್ಮ ಹೊಸ ಸಂಕಲನ ಯಾವಾಗ…
ಇಷ್ಟವಾಯಿತು ಸರ್…