ಕಥನದ ಉತ್ತರಾರ್ಧದಲ್ಲಿ ಲಕ್ಷ್ಮೀಶರು ತನ್ನ ರಂಗಾನುಭವಾಧಾರಿತ ರಂಗ ಚಿಂತನೆಗಳನ್ನು ಸರಳವಾದ ಭಾಷೆಯಲ್ಲಿ ಮಂಡಿಸಿದ್ದು, ಚರ್ಚಿಸಬೇಕಾದ, ಚಿಂತನೀಯವಾದ ಅನೇಕ ವಿಚಾರಗಳು ಅಲ್ಲಿ ಬಂದಿವೆ. ಇಡಿಯ ಆಟಕ್ಕೆ ಆಧಾರವಾಗಿ ನಿರ್ವಹಣೆ, ಹಾಡು, ಕುಣಿತಗಳನ್ನು ನಡೆಸುವ ಮೆರೆಸುವ ಹಿಮ್ಮೇಳದ ಮಹತ್ವ ಸಾಮಾನ್ಯ ಪ್ರೇಕ್ಷಕನಿಗೆ ಅರಿವಿಗೆ ಬರದಿರುವ ಸಂಗತಿ, ಹಲವು ವಾದಕರ ವಾಣಿಯಾಗಿ ಇಲ್ಲಿ ಪ್ರಸ್ತಾವಿತವಾಗಿದೆ. ಅದು ನಿಜ ಕೂಡ.
ಲಕ್ಷ್ಮೀ ಮಚ್ಚಿನ ಬರೆದ ‘ಮದ್ಲೆಗಾರ ಲಕ್ಷ್ಮೀಶ ಅಮ್ಮಣ್ಣಾಯರ ರಂಗಾಂತರಂಗ’ ಪುಸ್ತಕಕ್ಕೆ ಡಾ. ಎಂ.ಪ್ರಭಾಕರ ಜೋಷಿ ಬರೆದ ಮುನ್ನುಡಿ
ಇತ್ತೀಚಿನ ದಶಕಗಳಲ್ಲಿ, ಸುಮಾರು 1980ರ ಬಳಿಕ, ಯಕ್ಷಗಾನ ಕಲೆ, ಕಲಾವಿದರ ಕುರಿತಾಗಿ ವಿಪುಲವಾದ ಬರವಣಿಗೆ ಬಂದಿದೆ. ಸಂಶೋಧನೆ, ಗೌರವಗ್ರಂಥಗಳು, ವಿಮರ್ಶೆ, ತಾಂತ್ರಿಕ ವಿವರ (ಸಂಗೀತ, ಪ್ರಸಾಧನ, ರಂಗವಿಚಾರ ಇತ್ಯಾದಿ) ವ್ಯಕ್ತಿ ಪರಿಚಯಗಳು ಹೀಗೆ ವಿವಿಧ ಮುಖಗಳ, ವಿವಿಧ ಸ್ತರಗಳ ಬರಹಗಳು ಪ್ರಕಟವಾಗಿದ್ದು, ಅವೆಲ್ಲ ಒಂದೊಂದು ರೀತಿಯಲ್ಲಿ ಈ ಕ್ಷೇತ್ರದ ಅರಿವನ್ನು ಹೆಚ್ಚಿಸುವಲ್ಲಿ ಪೂರಕವಾಗಿವೆ. ಕಾಲಿಕವಾದ ರಂಗದ ಸ್ಥಿತಿ ಗತಿಗಳನ್ನು, ಚಿತ್ರಿಸಿ, ಕಲಾ ಇತಿಹಾಸದ ತಿಳಿವಿಗೆ ಸಾಮಗ್ರಿ ನೀಡುವಂತಹವುಗಳಾಗಿವೆ. ಕಲಾವಿದರ ಜೀವನ ಕಥನದ ಪುಸ್ತಕಗಳಿಗೆ ಪ್ರತ್ಯೇಕ ಆಕರ್ಷಣೆ, ಮಹತ್ವ ಇದೆ.
ಯಕ್ಷಗಾನರಂಗದ ಓರ್ವ ಪ್ರಬುದ್ಧ, ಸಮರ್ಥ, ರಸಜ್ಞ ವಾದಕನಾಗಿ ಮತ್ತು ಶಿಸ್ತುಬದ್ಧ, ಚೊಕ್ಕ ವ್ಯಕ್ತಿತ್ವದವರಾಗಿ, ಕಲಾವಿದರ, ಮೇಳ ಸಂಘಟಕರ, ಕಲಾರಸಿಕರ ಮಧ್ಯೆ ಮಾನ್ಯರಾದವರು. ಅವರನ್ನು 1970ರ ದಶಕದಲ್ಲಿ ತರುಣ ಕಲಾವಿದನಾಗಿ ಕಂಡ ದಿನಗಳಿಂದ ಈವರೆಗೂ, ಅವರ ಕುರಿತಾದ ಪ್ರೀತಿ, ಗೌರವಗಳು ಹೆಚ್ಚಾಗಿವೆಯೇ ಹೊರತು ಕಡಿಮೆ ಆಗಿಲ್ಲ. ವಾದನದ ಕಲಾತ್ಮಕತೆಯ ಅಂದವನ್ನು, ಶ್ರವಣ ಸುಖವನ್ನು ನೀಡಿದ ಓರ್ವ ಕಲಾವಿದ ಲಕ್ಷ್ಮೀಶ ಅಮ್ಮಣ್ಣಾಯರು. ಬಳ್ಪದ ಅಮ್ಮಣ್ಣಾಯ ಕುಟುಂಬವೊಂದು ಅಸಾಮಾನ್ಯ ಕಲಾಪ್ರಾವೀಣ್ಯದ ಮನೆತನ. ಅದರ ವಿವರ ಇಲ್ಲಿ ಚೆನ್ನಾಗಿ ಬಂದಿದೆ.
ಇವರ ತಂದೆ ವಿಷ್ಣು ಅಮ್ಮಣ್ಣಾಯರು ಕೃಷಿ, ಶಿಲ್ಪ, ಗಾರೆ, ಗಣಪತಿ ಮೂರ್ತಿ ತಯಾರಿ, ಕುಶಲಕರ್ಮ, ಕಲೆಗಳನ್ನು ಬಲ್ಲ ಓರ್ವ ಬಹುವಿಧ ಪ್ರಾವೀಣ್ಯದ ವಿಸ್ಮಯಕರ ವ್ಯಕ್ತಿ. ಅದರಿಂದಲೇ ಲಕ್ಷ್ಮೀಶರಿಗೂ ಮುಟ್ಟಿದ ವಿದ್ಯೆ ಕರಗತವಾಗುವ ಮತ್ತು ಏಕಪಾಠಿತ್ವದ ಬಲ್ಪಿನ ಬಲ್ಮೆ. ಹಲವು ವಿದ್ಯೆಗಳಲ್ಲಿ ಕೈ ಆಡಿಸಿದ, ಇಂದಿಗೂ ಅದರ ಜ್ಞಾನ ಉಳಿಸಿಕೊಂಡಿರುವವರು. ಆರಂಭದಲ್ಲಿ ಯಕ್ಷಗಾನದ ಬಗೆಗೆ ಅನಾಸಕ್ತಿಯಲ್ಲೇ ಇದ್ದವರು.
ಮುಂದೆ ತಿರುವುಗಳು ಬಂದು, ವರ್ಷ ಹದಿನೈದರಲ್ಲಿ ಉತ್ತಮ ಭವಿಷ್ಯವುಳ್ಳ ಕಲಾವಿದನಾಗಿ ಕಾಣಿಸಿಕೊಂಡು, ಆ ಭರವಸೆಯನ್ನುಳಿಸಿ ಬೆಳೆದು, ಯಕ್ಷಗಾನದ ಮೊದಲ ಪಂಕ್ತಿಯ ಚೆಂಡೆ ಮದ್ದಳೆಗಾರರಾಗಿ ಇಂದಿಗೂ ಸಕ್ರಿಯರು. ಚಿತ್ರ, ಯಂತ್ರ ದುರಸ್ತಿ, ಮದ್ದಳೆ ತಯಾರಿಗಳನ್ನು ಸುಲಭವಾಗಿ ಎಂಬಂತೆ ಕಲಿತು ಒಂದು ಕುಟುಂಬಕ್ಕೆ, ತಂಡಕ್ಕೆ ಹೇಗೆ ಬೇಕೋ ಹಾಗೆ ಒದಗುವವರಾಗಿ ಬೆಳೆದರು.
ಬಾಲ್ಯ, ಕುಟುಂಬ ಚಿತ್ರಗಳು, ಒಡನಾಟ, ತುಂಟಾಟ, ಬಡತನ, ಕಲಾವಿದನಾಗಿ ರೂಪುಗೊಂಡು ಬೆಳೆದ ಬಗೆ ಇವುಗಳ ಚಿತ್ರಣಗಳು ಇಲ್ಲಿ ಬಂದಿವೆ.
ಇಲ್ಲಿಯ ನಿರೂಪಣೆಯ ವಿಧಾನದಲ್ಲಿ ಲೇಖಕನು ಹೇಳುವ ಕ್ರಮ ಮತ್ತು ಸ್ವತಃ ಕಲಾವಿದನು ಆತ್ಮಕಥೆಯಾಗಿ ಹೇಳುವುದು – ಹೀಗೆ ಎರಡೂ ಸಂಮಿಶ್ರವಾಗಿದ್ದು, ಒಂದು ವಿಶಿಷ್ಟ ಪಾಕವನ್ನು, ರುಚಿಯನ್ನು ಸೃಜಿಸಿದೆ. ಭಾವುಕತೆಯ, ಸ್ವಾರಸ್ಯದ, ವಿನೋದದ ಘಟನೆಗಳ, ಕಲಾಜೀವನದ ಪಯಣದ, ಸಿಹಿಕಹಿಗಳ, ಒಡನಾಟಗಳ ಹದವಾದ ಚೊಕ್ಕ ನಿರೂಪಣೆ ಬಂದಿದೆ.
ಅಮ್ಮಣ್ಣಾಯರು ಪ್ರಸಿದ್ಧ ಗುರು ಧರ್ಮಸ್ಥಳ ಮುಂಡ್ರುಪ್ಪಾಡಿ ಎಂ. ಜಿ. ಶ್ರೀಧರ ರಾಯರಿಂದ ಮತ್ತು ಅರ್ವಾಚೀನ ಯಕ್ಷಗಾನ ರಂಗದ ಮಹೋನ್ನತ ವಾದಕರಲ್ಲಿ ಓರ್ವರೆನಿಸಿದ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರಿಂದ, ಅಂತೆಯೇ ಹಿರಿಯ ಮದ್ದಳೆಗಾರ, ಶಿಕ್ಷಕ ಗೋಪಾಲಕೃಷ್ಣ ಕುರುಪರಿಂದ ಮಾರ್ಗದರ್ಶನ, ಒಡನಾಟ ಪಡೆದ ಭಾಗ್ಯಶಾಲಿ. ಅದನ್ನವರು ಸಾಧನೆಯಿಂದ ಸಾರ್ಥಕಪಡಿಸಿ, ಅರ್ಹ ಸಾಧಕ ಶಿಷ್ಯರೆನಿಸಿದ್ದಾರೆ. ತಾರುಣ್ಯದ ಹೊಸ್ತಿಲಲ್ಲಿದ್ದ ಕಲಾವಿದನನ್ನು ಧೈರ್ಯವಹಿಸಿ, ಧೈರ್ಯಕೊಟ್ಟು ರಂಗಕ್ಕೆ ತಂದ ಬಲ್ಲಾಳರ ನಿರೀಕ್ಷೆ ಫಲಿಸಿತು.
1976ರಲ್ಲಿ ಹದಿನಾರರ ಹರೆಯದಲ್ಲಿ ಶ್ರೀ ಧರ್ಮಸ್ಥಳ ಮೇಳದ ವಾದಕರಾಗಿ ಬಲ್ಲಾಳರು, ಮಹಾಭಾಗವತ ಕಡತೋಕ ಮಂಜುನಾಥ ಭಾಗವತರ ಸಹವರ್ತಿಯಾಗಿ ಹೆದರುತ್ತಲೇ ರಂಗಕ್ಕೆ ಬಂದು, ಮುಂದೆ ಬೆಳೆಯುತ್ತಾ ನಾಲ್ಕು ದಶಕಗಳಲ್ಲಿ ಓರ್ವ ಉತ್ತಮ ಮಟ್ಟದ ಚೆಂಡೆ, ಮದ್ದಳೆವಾದಗಾರನಾಗಿ ಸಾರ್ಥಕ ರಂಗ ವ್ಯವಸಾಯ ನಡೆಸಿದ ಕಥೆ ರೋಚಕ ಮತ್ತು ಬೋಧಕ. ಅದರ ನಿರೂಪಣೆ ಇಲ್ಲಿ ಈ ಬಗೆಯ ಅನೇಕ ಪುಸ್ತಕಗಳಿಗಿಂತ ಭಿನ್ನವಾಗಿ ನಿರೂಪಿತವಾಗಿದೆ.
ಅಮ್ಮಣ್ಣಾಯ ಮನೆತನದ, ಗುರುಗಳಾದ ಶ್ರೀಧರ ರಾವ್ ಮತ್ತು ಬಲ್ಲಾಳರ ಕಲಾನಿಷ್ಠೆ, ಪ್ರೌಢಿಮೆ, ಮೌನಗಂಭೀರ. ಆದರೆ ಸರಸ ವ್ಯಕ್ತಿತ್ವ, ಅಸಾಧಾರಣ ವಾದನ ಪರಿಣತಿ, ಬಹು ವಿದ್ಯಾ ನೈಪುಣ್ಯ ಇವೆಲ್ಲ ಲಕ್ಷ್ಮೀಶರಲ್ಲಿ ಒಟ್ಟಾಗಿ ಬಂದಿವೆ ಎಂಬುದನ್ನು ಅತಿಶಯೋಕ್ತಿ ಇಲ್ಲದೇ ಹೇಳಬಹುದು.
ಜಾಗೃತ, ವ್ಯವಸ್ಥಿತ ಹಿಮ್ಮೇಳವಾದಕ ಎಂಬುದು ಅವರಿಗೆ ಅರ್ಹವಾದ ಪ್ರಶಂಸೆ. ಅದರ ವಿವರಣೆ ಅಲ್ಲಲ್ಲಿ ಹಲವು ಘಟನೆಗಳಲ್ಲಿ ಬಂದಿವೆ.
ಲಕ್ಷ್ಮೀಶ ಅಮ್ಮಣ್ಣಾಯರ ವಾದನ ಬಲ್ಲಾಳರ ವಾದನದಂತೆ ನಾಜೂಕು, ಚೊಕ್ಕ, ಸ್ವಚ್ಛ, ಕಲಾತ್ಮಕ. ಹಾಡಿನ ಭಾವ, ವೇಷ, ಸನ್ನಿವೇಶ, ಕಥೆಯ ವೇಗ, ಭಾಗವತನ ಶೈಲಿ, ಸಂಪ್ರದಾಯದ ನಡೆ ಎಲ್ಲವನ್ನೂ ಅಷ್ಟು ಚೊಕ್ಕವಾಗಿ ನಿರಾಯಾಸವಾಗಿ ಎರಕವಾಗಿಸಿ ನುಡಿಸುವ ಉತ್ಕೃಷ್ಟ ವಾದಕರು.
ವಾದನದ ಕಲಾತ್ಮಕತೆಯ ಅಂದವನ್ನು, ಶ್ರವಣ ಸುಖವನ್ನು ನೀಡಿದ ಓರ್ವ ಕಲಾವಿದ ಲಕ್ಷ್ಮೀಶ ಅಮ್ಮಣ್ಣಾಯರು. ಬಳ್ಪದ ಅಮ್ಮಣ್ಣಾಯ ಕುಟುಂಬವೊಂದು ಅಸಾಮಾನ್ಯ ಕಲಾಪ್ರಾವೀಣ್ಯದ ಮನೆತನ. ಅದರ ವಿವರ ಇಲ್ಲಿ ಚೆನ್ನಾಗಿ ಬಂದಿದೆ.
ಸ್ವಚ್ಛ, ಬಿಡಿ ಬಿಡಿಯಾದ ಉರುಳಿಕೆ, ಟಾಂಕಿ, ಬೆರಳ ಘಾತ, ತಾಂ, ಧೀಂ, ತೋಂ, ತರಿ, ಕಿಟ ಎಲ್ಲ ಬಿಡಿ ಬಿಡಿ ನುಡಿಮಾಲೆ.
ಮಲ್ಲಿಗೆ ದಂಡೆ.
ಹುರಿದ ಅಕ್ಕಿ.
ತರಿ ತರಿ ಖಾದ್ಯ. ಮೋಹಕವಾದಕ, ನಾದದ ಅರಿವಿನ ಲಕ್ಷ್ಮೀಶರಲ್ಲಿ ಬಡಿತ ಬಿಡಿತಗಳ ದೊಡ್ಡ ವೈವಿಧ್ಯವಿದೆ. ಅಂದ ಎರಕಗಳಿವೆ. ಆದರೆ ವೈವಿಧ್ಯ ತೋರಿಸಲೆಂದೇ ಅವರು ಬಾರಿಸುವುದಿಲ್ಲ. ಅದು ತಾನಾಗಿ ಕಲಾಕೃತಿಯಾಗಿ ಮೂಡಿ ಬರುತ್ತದೆ. ಚೆಂಡೆ, ಮದ್ದಳೆ ಎರಡರಲ್ಲೂ ಏಕಪ್ರಕಾರವಾದ ಹಿಡಿತ ಅವರದು.
ಅವರ ‘ಎಡ’ದ ಕೆಲಸ ಮತ್ತು ‘ಗುಮ್ಕಿ’ತುಂಬ ವಿಶಿಷ್ಟ. ಬಾರಿಸುವಿಕೆ ಬರೆದು ಕೊರೆದಂತೆ ಪೆಟ್ಟುಗಳು. ಲಯಶುದ್ಧಿ, ಅಂದದ ಕರೆಪೆಟ್ಟು. ‘ಮದ್ದಳೆಯ ಸಾಹಿತ್ಯ’ ಎಂಬ ರೂಢಿಯ ಪರಿಭಾಷೆ ಅಮ್ಮಣ್ಣಾಯರಂತಹ ಮದ್ದಳೆವಾದಕರಲ್ಲಿ ಶಬ್ದಶಃ ಅರ್ಥಶಃ ನಿಜವೆನಿಸುತ್ತದೆ. ಆಧುನಿಕ ತಾಂತ್ರಿಕತೆ, ಮೈಕು ಬಳಕೆ, ನಾದದ ಹದ, ರಂಗದ ಸೂಕ್ಷ್ಮ, ಕೂಟ ಮನೋಧರ್ಮ, ಹೊಂದಿಕೆ, ಜತೆಯಲ್ಲಿ ಆತ್ಮಪ್ರತ್ಯಯ ಎಲ್ಲ ಅವರಲ್ಲಿ ಹಾಳತವಾಗಿ ಇದೆ.
ಸ್ವತಃ ಭಾಗವತಿಕೆ ಮತ್ತು ಬಡಗುತಿಟ್ಟಿನ ಮದ್ದಳೆವಾದನ ಇವೆರಡರಲ್ಲೂ ಅವರಿಗೆ ಪರಿಶ್ರಮವಿರುವುದು ಅವರ ವಿಶಿಷ್ಟವಾದ ಪ್ರಾವೀಣ್ಯಕ್ಕೆ ನೆರವಾಗಿದೆ.
ಅಮ್ಮಣ್ಣಾಯ ತುಂಬ ಮೌನಿ, ಗಂಭೀರ. ಆಟ ಕೂಟದ ಒಡನಾಟಗಳಲ್ಲಿ ಬೇರೆಯವರ ಜತೆ ಸ್ನೇಹದಿಂದಿದ್ದರೂ ಅನವಶ್ಯ ಹರಟೆ, ಹಸ್ತಕ್ಷೇಪ ಇಲ್ಲ. ರಂಗದಲ್ಲೂ ನಿಶ್ಚಲ – ಸಕ್ರಿಯ! ಬಲ್ಲಾಳರ ಹಾಗೆ ಎಂದರೆ ಹಾಗೆಯೇ. ಕೈ ಮಾತ್ರ ಅಲುಗುವ ಶರೀರ ನಿಶ್ಚಲವಾಗಿರುವ ಆದರೆ ಅನ್ಯಮನಸ್ಕನಲ್ಲದ ವಾದಕ.
ಸೂಕ್ಷ್ಮವಾಗಿ ಗ್ರಹಿಸಬಲ್ಲವರಿಗೆ ಅವರ ವಿನೋದ, ಕುಶಾಲಿನ ‘ಒಳಪೆಟ್ಟು’ ಗೊತ್ತಾದೀತು. ಒಳ್ಳೆಯ ವಿನೋದಪ್ರಿಯ. ಬಲ್ಲಾಳರ ಇಬ್ಬರು ಶಿಷ್ಯರಾದ ಲಕ್ಷ್ಮೀಶ ಮತ್ತು ಪದ್ಯಾಣ ಶಂಕರನಾರಾಯಣ ಭಟ್ಟ ಇವರಲ್ಲಿ ರಂಗವ್ಯಕ್ತಿತ್ವ, ವ್ಯಕ್ತಿತ್ವ ವಿಧಾನಗಳಲ್ಲಿ ಅನೇಕ ಸಾಮ್ಯಗಳಿರುವುದು ಗಮನಾರ್ಹ.
ಅಮ್ಮಣ್ಣಾಯರ ಸ್ವನಿರ್ವಹಣೆ ಉತ್ಕೃಷ್ಟ. ಉಡುಪು, ತೊಡುಪು, ಪ್ರಯಾಣ, ಸಾಮಗ್ರಿಜೋಡಣೆ, ಎಲ್ಲ ಅಷ್ಟು ನಾಜೂಕು, ಅಚ್ಚುಕಟ್ಟು. ನಿತ್ಯ ತಿರುಗಾಟದ ಯಕ್ಷಗಾನ ಕಲಾವಿದನೊಬ್ಬ ಬಿಳಿಬಟ್ಟೆ, ಗರಿಕೆಡದ ಕೊಳೆಯಾಗದಿರುವ ಸೋಜಿಗದ ಉದಾಹರಣೆ ಅಮ್ಮಣ್ಣಾಯರು (ಅಶೋಕ ಭಟ್ಟರು ಅದನ್ನು ಉಲ್ಲೇಖಿಸಿದ್ದಾರೆ). ಸಪುರವಾದ ಬೆಂಚಿನಲ್ಲಿ, ಅಂಗಾತ ತಲೆದಿಂಬಿಲ್ಲದೇ ಮಲಗಿ, ಗಂಟೆಗಟ್ಟಲೆ ನಿದ್ರಿಸಬಲ್ಲರು. ಶಿಲ್ಪಕಲಾ ಚಾತುರ್ಯದ ಹಾಗೆಯೇ ಇದು!
ನಾನು ಒಂದೆರಡು ಬಾರಿ ಅವರಲ್ಲಿ ವಿನೋದಕ್ಕಾಗಿ ‘ನಿಮಗೆ ಇಡಿಯ ತಿರುಗಾಟಕ್ಕೆ ಎರಡು ಪ್ರತಿ ಡ್ರೆಸ್ಸು, ಒಂದು ಬೈರಾಸು, ಸಣ್ಣ ಚೀಲ ಸಾಕು’ ಎಂದು ಬಟ್ಟೆ ಕೊಳೆಯಾಗದೇ ಇರುವ ಬಗ್ಗೆ ಹೇಳಿದ್ದೆ. ಅದಕ್ಕವರ ತಣ್ಣನೆಯ ಉತ್ತರ ‘ನೀವು ನನ್ನ ಶಿಸ್ತನ್ನು, ಜಾಗ್ರತೆಯನ್ನು ಹೊಗಳಿದ್ದೋ ಅಲ್ಲ ನಾನು ಕುರೆ (ಲೋಭಿ) ಎಂದದ್ದೋ’ ಎಂದು.
ಕೂಟ, ಸಂಘಟನೆಗಳಿಗೆ ಸದಾಸಹಕಾರಿ ಅವರು. ಆದರೆ ತೀರ ಕಿರಿಕಿರಿ ಅನಿಸಿದಾಗ ಅವರ ಪ್ರತಿಭಟನೆಯೂ ವಿಚಿತ್ರ. ಅಂತಹ ಒಂದೆರಡು ವಿವರ ಇಲ್ಲಿ ಬಂದಿವೆ. ನಾನೂ ಅಂತಹ ಘಟನೆಯೊಂದನ್ನು ಕಂಡಿದ್ದೇನೆ. ಕೋಪ, ಹಾರಾಟ, ಹೆಚ್ಚು ಮಾತಿಲ್ಲದ ಅವರ ವಾದನದ ಹಾಗೆಯೇ ಅವರ ಪ್ರತಿಭಟನೆ.
ಅವರು ಪೂರ್ಣಾವಧಿ ತಿರುಗಾಟದಿಂದ ನಿವೃತ್ತರಾದುದೂ ಬಹುಶಃ ಇಂತಹದ್ದೇ ಒಂದು ಪ್ರತಿಕ್ರಿಯೆ. ತನಗಾದ ಸಿಹಿಕಹಿಗಳ ಅನುಭವಗಳನ್ನು ಅವರು ನಿರೂಪಿಸಿದ್ದರೂ ಗೋಗರೆತದಂತೆ ಹೇಳಲಿಲ್ಲ. ತಿರುಗಾಟದ ಯಕ್ಷಗಾನ ಕಲಾವಿದನ ಸಾಂಸಾರಿಕ ಜೀವನವೂ ಪಂಥಾಹ್ವಾನವೇ.
ಒಂದು ಪತ್ರಿಕೆಯ ವಿಳಾಸದ ಚೀಟಿ ಎಂತಹ ವಿಚಿತ್ರ ಸಮಸ್ಯೆ, ಸ್ವಾರಸ್ಯ ಸೃಷ್ಟಿಸಿತು ಎಂಬ ಒಂದು ಘಟನೆ ಇಲ್ಲಿದೆ. ಓದಿಯೇ ಸವಿಯಬೇಕು. ಸಮಕಾಲೀನ ಯಕ್ಷಗಾನದ ಇತಿಹಾಸದ ಒಂದು ಆಕರವಾಗಿಯೂ ಈ ಬರಹವು ಗಮನಾರ್ಹವಾಗಿದೆ. ಲಕ್ಷ್ಮೀಶರ ಒಡನಾಡಿಗಳು ನೀಡಿರುವ ಅನಿಸಿಕೆ ಅನುಭವಗಳು ಅವರ ಸಾಧನೆ ವ್ಯಕ್ತಿತ್ವಗಳಿಗೆ ಕನ್ನಡಿಗಳಾಗಿವೆ.
ಅಂತೆಯೇ ಇವರ ಕುಟುಂಬಪ್ರಿಯತೆ, ಕೃತಜ್ಞತಾಭಾವ, ಸವಾಲುಗಳ ಸ್ವೀಕರಣ- ನಿರ್ವಹಣ, ಹೊಸರಂಗ ಪದ್ಧತಿಗಳಿಗೆ ಅವರು ಹೊಂದಿಕೊಂಡ ರೀತಿ, ಅವರು ನೀಡುವ ಹಲವು ವ್ಯಕ್ತಿಚಿತ್ರಗಳು, ಇಲ್ಲಿ ಚೆನ್ನಾಗಿ ರೇಖಿತವಾಗಿವೆ. ಅಂತೆಯೇ ಅವರ ವ್ಯಕ್ತಿತ್ವ ಸ್ನೇಹಪರತೆ ಮೊದಲಾದವುಗಳು ಕೂಡ.
ಕಥನದ ಉತ್ತರಾರ್ಧದಲ್ಲಿ ಲಕ್ಷ್ಮೀಶರು ತನ್ನ ರಂಗಾನುಭವಾಧಾರಿತ ರಂಗ ಚಿಂತನೆಗಳನ್ನು ಸರಳವಾದ ಭಾಷೆಯಲ್ಲಿ ಮಂಡಿಸಿದ್ದು, ಚರ್ಚಿಸಬೇಕಾದ, ಚಿಂತನೀಯವಾದ ಅನೇಕ ವಿಚಾರಗಳು ಅಲ್ಲಿ ಬಂದಿವೆ. ಇಡಿಯ ಆಟಕ್ಕೆ ಆಧಾರವಾಗಿ ನಿರ್ವಹಣೆ, ಹಾಡು, ಕುಣಿತಗಳನ್ನು ನಡೆಸುವ ಮೆರೆಸುವ ಹಿಮ್ಮೇಳದ ಮಹತ್ವ ಸಾಮಾನ್ಯ ಪ್ರೇಕ್ಷಕನಿಗೆ ಅರಿವಿಗೆ ಬರದಿರುವ ಸಂಗತಿ, ಹಲವು ವಾದಕರ ವಾಣಿಯಾಗಿ ಇಲ್ಲಿ ಪ್ರಸ್ತಾವಿತವಾಗಿದೆ. ಅದು ನಿಜ ಕೂಡ.
ದಿ| ಬಲ್ಲಾಳರು, ನೆಡ್ಳೆ ನರಸಿಂಹ ಭಟ್ಟರೂ ಹೇಳುತ್ತಿದ್ದಂತೆ ಹಿಮ್ಮೇಳದ (ಚೆಂಡೆ, ಮದ್ದಳೆ ವಾದನ) ಪ್ರಾವೀಣ್ಯ, ಸಾಮರ್ಥ್ಯ, ಕಲೆಗಾರಿಕೆ ಅರ್ಥವಾಗುವುದು ಕೆಲವರಿಗೆ ಮಾತ್ರ. ಕಾರಣ ಅದಕ್ಕೆ ಹೆಚ್ಚಿನ ತಾಂತ್ರಿಕ ಜ್ಞಾನ, ಸೂಕ್ಷ್ಮಗಳು ಅಪೇಕ್ಷಿತ.
ಈ ಎಲ್ಲ ವಿಷಯಗಳನ್ನು, ವ್ಯವಸ್ಥಿತ ಸಂಯಮದ ನಿರೂಪಣೆಯಿಂದ ಲಕ್ಷ್ಮೀ ಮಚ್ಚಿನರು ವಿಶಿಷ್ಟ ಸಂಕ್ಷಿಪ್ತ ಸುಂದರವಾಗಿ ನಿರೂಪಿಸಿದ್ದಾರೆ. ಗ್ರಂಥದ ನಾಯಕ – ಲೇಖಕರಲ್ಲಿ ಒಂದು ಬಗೆಯ ಸಾಮ್ಯವಿದೆ. ಅದು ಚೊಕ್ಕ ಮತ್ತು ಸಂಯಮ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ