ಗೋವಿಂದ ಪೈಗಳಿಗೆ 1949 ರಲ್ಲಿ ಮದರಾಸು ಸರಕಾರ ‘ರಾಷ್ಟ್ರಕವಿ’ ಬಿರುದು ನೀಡಿ ಗೌರವಿಸಿತು. ಅವರು 1950 ರಲ್ಲಿ ಮುಂಬಯಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ಅವರು ಸನ್ಮಾನ, ಗೌರವಗಳನ್ನು ಸ್ವೀಕರಿಸಲು ಒಪ್ಪುತ್ತಿರಲಿಲ್ಲ. ಮೈಸೂರು ವಿಶ್ವವಿದ್ಯಾನಿಲಯ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಬೇಕೆಂದು ಬಯಸಿದಾಗ ಪೈಗಳು ವಿನಯದಿಂದ ನಿರಾಕರಿಸಿದರು. ‘ಕರಾವಳಿಯ ಕವಿರಾಜಮಾರ್ಗ’ ಸರಣಿಯಲ್ಲಿ ರಾಷ್ಟ್ರಕವಿ ಗೋವಿಂದ ಪೈಗಳ ಕುರಿತು ಬರೆದಿದ್ದಾರೆ ಡಾ.ಬಿ. ಜನಾರ್ದನ ಭಟ್. 

 

1949ನೆಯ ಇಸವಿ, ಆಗಸ್ಟ್ 14. ಮದರಾಸಿನ ರಾಜಾಜಿಭವನದಲ್ಲಿ ಮದರಾಸು ಸರಕಾರದವರು ಐದು ಭಾಷೆಯ ಶ್ರೇಷ್ಠ ಕವಿಗಳಿಗೆ ರಾಷ್ಟ್ರಕವಿ ಎಂಬ ಬಿರುದು ನೀಡುವ ಸಂದರ್ಭ. ಕನ್ನಡ ಭಾಷೆಯ ರಾಷ್ಟ್ರಕವಿ ಬಿರುದನ್ನು ದೇಶಬಾಂಧವರ ಒತ್ತಾಯಕ್ಕೆ ಮಣಿದು ಸ್ವೀಕರಿಸಲಿದ್ದವರು ಆಗಿನ ದಕ್ಷಿಣಕನ್ನಡ ಜಿಲ್ಲೆಯ ಮಂಜೇಶ್ವರದ ಗೋವಿಂದ ಪೈಗಳು. ಬಿಳಿಕೂದಲು, ಬೆಳ್ಳಿಮೀಸೆಯ, ಭವ್ಯ ಆಕಾರದ, ಸಿಂಹಕಂಠದ ಪೈಗಳ ವ್ಯಕ್ತಿತ್ವ ಎಲ್ಲರನ್ನೂ ಆಕರ್ಷಿಸಿತ್ತು. ಎಲ್ಲರಿಗಿಂತ ಮೊದಲು ಪ್ರಶಸ್ತಿ ಸ್ವೀಕರಿಸಬೇಕಾಗಿದ್ದ ಅವರು ಎಲ್ಲರಿಗಿಂತ ಕೊನೆಗೆ ಬಂದು, ತಮ್ಮ ಕವನದ ಜತೆಗೆ, ಅದರ ಇಂಗ್ಲಿಷ್ ಅನುವಾದವನ್ನೂ ಓದಿದರು. ಆ ಕವನದಲ್ಲಿ, ಸ್ವಾತಂತ್ರ್ಯಕ್ಕೆ ಅರ್ಥಬರಬೇಕಾದರೆ ಬಡವರ ಅನ್ನ, ವಸತಿ ಸಮಸ್ಯೆ ಪರಿಹಾರ ಆಗಬೇಕೆಂಬ ಆಶಯವನ್ನು ವ್ಯಕ್ತಪಡಿಸಿದ ಆ ಸಿಂಹಗರ್ಜನೆಯಂಥ ಕಾವ್ಯವಾಚನ ಜನರ ಹೃದಯವನ್ನು ತಟ್ಟಿತು. ಕೈಚಪ್ಪಾಳೆ ಸುದೀರ್ಘವಾಗಿ ಅನುರಣಿಸಿತು.

ಕನ್ನಡ, ತಮಿಳು, ಸಂಸ್ಕೃತ, ತೆಲುಗು ಮತ್ತು ಮಲಯಾಳಿ ಕವಿಗಳಿಗೆ ರಾಷ್ಟ್ರಕವಿ ಪದವಿ ಪ್ರದಾನ ಮಾಡಿದ ಮದರಾಸಿನ ರಾಜ್ಯಪಾಲ, ಭಾವನಗರದ ಮಹಾರಾಜ ಕೃಷ್ಣಸಿಂಹರು ತಾವು ಇಂಗ್ಲಿಷಿನಲ್ಲಿ ಎಲ್ಲ ಕವಿಗಳನ್ನು ಅಭಿನಂದಿಸಿ ಮಾಡುವ ಭಾಷಣವನ್ನು ಆಯಾಯ ಕವಿಗಳಿಗೆ ಭಾಷಾಂತರಿಸಿ ಹೇಳಲು ಯಾರಾದರೂ ಇದ್ದಾರೋ ಎಂದು ಕೇಳಿದರು. ಆಗ ಕನ್ನಡದ ರಾಷ್ಟ್ರಕವಿ ಗೋವಿಂದ ಪೈಗಳು ಎದ್ದು ನಿಂತು ತಾನು ಬಲ್ಲೆನೆಂದು ಹೇಳಿ ಆ ಭಾಷಣವನ್ನು ಸಂಸ್ಕೃತ, ತಮಿಳು, ತೆಲುಗು ಮತ್ತು ಮಲಯಾಳೀ ಭಾಷೆಗಳಲ್ಲಿ ಹೇಳಿದರು. ಈ ಸನ್ನಿವೇಶವನ್ನು ಊಹಿಸಿದರೆ ರೋಮಾಂಚನವಾಗುತ್ತದೆ.

(ಗೋವಿಂದ ಪೈಯವರ ಕೈಬರಹದ ಮಾದರಿ)

ಕೊಂಕಣಿ ಮಾತೃಭಾಷೆಯ ಮಂಜೇಶ್ವರ ಗೋವಿಂದ ಪೈಗಳು ಇಂಗ್ಲಿಷ್, ಫ್ರೆಂಚ್, ಜರ್ಮನ್, ಲ್ಯಾಟಿನ್, ಗ್ರೀಕ್, ಅರಬಿ, ಪಾರ್ಸಿ, ಹೀಬ್ರೂ, ಉರ್ದು, ಪಾಲಿ, ಸಂಸ್ಕೃತ, ಬಂಗಾಳಿ, ಮರಾಠಿ, ಹಿಂದಿ ಮತ್ತು ದ್ರಾವಿಡ ಭಾಷೆಗಳ ಸಹಿತ ಸುಮಾರು 22 ಭಾಷೆಗಳನ್ನು ಕಲಿತಿದ್ದರು. ಪೈಗಳ ಗ್ರಂಥ ಭಂಡಾರದಲ್ಲಿ ಒಟ್ಟು 36 ಭಾಷೆಗಳ ಪುಸ್ತಕಗಳಿವೆ. ಅವರಿಗೆ ಗೊತ್ತಿತ್ತೆಂದು ದಾಖಲಾಗಿರುವ 22 ಭಾಷೆಗಳನ್ನುಳಿದು ಉಳಿದ ಭಾಷೆಗಳನ್ನು ಕಲಿಯಲು ಅವರು ಉದ್ದೇಶಿಸಿರಬಹುದೆಂದು ಊಹಿಸಬಹುದು. ಕನ್ನಡವಲ್ಲದೆ ಉಳಿದ ಹಲವು ಭಾಷೆಗಳ ಪುಸ್ತಕಗಳಲ್ಲಿ, ಆಯಾಯಾ ಭಾಷೆಗಳಲ್ಲಿಯೇ ತಮ್ಮ ಪ್ರಸಿದ್ಧ ನೇರಳೆ ಶಾಯಿಯ ಕೈಬರಹದಲ್ಲಿ ಟಿಪ್ಪಣಿಗಳನ್ನು ಬರೆದಿದ್ದಾರೆ.

*****

ಮೂಲಭಾಷೆಗಳಿಂದಲೇ ಅನುವಾದ!

 ಗೋವಿಂದ ಪೈಗಳ ಬಹುಭಾಷಾ ಸಾಮರ್ಥ್ಯಕ್ಕೆ ಒಂದು ಶಾಶ್ವತ ಸಾಕ್ಷಿ ಎಂದರೆ ಅವರು ಜರ್ಮನ್, ಫ್ರೆಂಚ್, ಜಪಾನೀ, ಉರ್ದು ಮತ್ತು ಇಂಗ್ಲಿಷ್ ಭಾಷೆಗಳಿಂದ ಕನ್ನಡಕ್ಕೆ ಮಾಡಿರುವ ಅನುವಾದಗಳು. ಅಲ್ಲದೆ ಜರ್ಮನ್, ಫ್ರೆಂಚ್ ಮತ್ತು ಉರ್ದು ಭಾಷೆಗಳಿಂದ ಇಂಗ್ಲಿಷ್ ಭಾಷೆಗೂ ಅನುವಾದಿಸಿದ ‘ಪುರುಷ ಸರಸ್ವತಿ’ ಈ ಪೈಗಳು! ಮದರಾಸಿನ ‘ದ ಮಾಡರ್ನ್ ವರ್ಲ್ಡ್’ಮಾಸಿಕ ಪತ್ರಿಕೆಯಲ್ಲಿ 1911 – 1912 ರಲ್ಲಿ ಪೈಗಳು ಜರ್ಮನ್ ಮತ್ತು ಫ್ರೆಂಚ್ ಭಾಷೆಗಳಿಂದ, ಆಯಾಯ ಭಾಷೆಗಳ ಛಂದಸ್ಸಿನಲ್ಲಿಯೇ ಇಂಗ್ಲಿಷ್ ಭಾಷೆಗೆ ಅನುವಾದಿಸಿ ಪ್ರಕಟಿಸಿದ್ದಾರೆ. ಅವುಗಳಲ್ಲಿ ಒಂದು, ಜರ್ಮನ್ ಕವಿ ಹೈನ್ರಿಕ್ ಹೀನ್‌ನ ಒಂದು ಕವಿತೆಯನ್ನು ಇಂಗ್ಲಿಷಿಗೆ The Voice of Hills ಎಂಬ ಶೀರ್ಷಿಕೆ ಕೊಟ್ಟು ಅನುವಾದಿಸಿರುವುದು. ಫ್ರೆಂಚ್ ಕವಿ ವಿಕ್ಟರ್ ಹ್ಯೂಗೋನ ಒಂದು ಕವಿತೆಯನ್ನು ಕೂಡ (A Hymn to the Great Dead) ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಕವಿ ಇಕ್ಬಾಲರ ‘ಹಿಂದುಸ್ತಾನ್ ಹಮಾರ’ ಉರ್ದು ಕವಿತೆಯನ್ನು ಕನ್ನಡಕ್ಕೂ ಇಂಗ್ಲಿಷಿಗೂ ಅನುವಾದಿಸಿದ್ದಾರೆ. ಅವರ ಇಂಗ್ಲಿಷ್ ಅನುವಾದವು, ಆ ಕವಿತೆಯ ಅತ್ಯುತ್ತಮ ಇಂಗ್ಲಿಷ್ ಅನುವಾದ ಎಂದು ಕವಿ ಇಕ್ಬಾಲರೇ ಶ್ಲಾಘಿಸಿದ್ದರಂತೆ. ಜರ್ಮನಿಯ ಪ್ರಸಿದ್ಧ ದೇಶಭಕ್ತಿ ಗೀತೆ ರಚನೆಕಾರ ಕವಿ ಕಾರ್ಲ್ ಥಿಯೋಡೋರ್ ಕೋರ್ನರ್‌ನ ಒಂದು ಜರ್ಮನ್ ಕವಿತೆಯನ್ನು ಮೂಲ ಛಂದಸ್ಸಿನಲ್ಲಿಯೇ ಕನ್ನಡಕ್ಕೆ ‘ಕೊಳುಗುಳದ ಮನವಿ’ ಎಂದು ಅನುವಾದಿಸಿದ್ದಲ್ಲದೆ, ಅದೇ ಛಂದಸ್ಸಿನಲ್ಲಿ ಇಂಗ್ಲಿಷಿಗೆ, ‘‘Prayer during the battle” ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ. ಈ ಇಂಗ್ಲಿಷ್ ಅನುವಾದವನ್ನು ‘ಗಿಳಿವಿಂಡು’ ಸಂಕಲನದ ಎರಡನೆಯ ಮುದ್ರಣದಲ್ಲಿ ಪ್ರಕಟಿಸಲು ಜಿ. ಪಿ. ರಾಜರತ್ನಂ ಅವರನ್ನು ಪೈಗಳು ಕೇಳಿಕೊಂಡದ್ದು ಹೀಗೆ: “I am rather quite enamoured of my English verse translation of German poem ‘Prayer during the battle’ in the original metre and I should not like to see it die without seeing the light”. ಜಪಾನಿನ ನೋ ನಾಟಕಗಳನ್ನು ಮೂಲ ಜಪಾನೀ ಭಾಷೆಯಲ್ಲಿಯೇ ಓದಿ ಕೆಲವು ನಾಟಕಗಳನ್ನು, ಈ ನಾಟಕ ಪರಂಪರೆಯ ಕುರಿತಾದ ಪ್ರಸ್ತಾವನೆಯೊಂದಿಗೆ ಕನ್ನಡಕ್ಕೆ ಅನುವಾದಿಸಿರುವುದು ಪೈಗಳ ಇನ್ನೊಂದು ವಿಸ್ಮಯಕಾರಿ ಅನುವಾದ.

*****

ಪಂಜೆ ಮಂಗೇಶ ರಾಯರ ವಿದ್ಯಾರ್ಥಿಯೂ, ಅಭಿಮಾನಿಯೂ ಆಗಿದ್ದ ಮಂಜೇಶ್ವರ ಗೋವಿಂದ ಪೈಗಳು (1883-1963) ದಕ್ಷಿಣ ಕನ್ನಡ ಜಿಲ್ಲೆ ಕಂಡ ಮಹಾನ್ ಸಾಹಿತಿಗಳಲ್ಲಿ ಒಬ್ಬರು. ಅವರು ಕೇವಲ ಕವಿಯಲ್ಲ; ನಾಟಕಕಾರ, ಚಿಂತಕ, ಇತಿಹಾಸ ಮತ್ತು ಸಂಸ್ಕೃತಿ ಸಂಶೋಧಕ, ಬಹುಭಾಷಾ ಕೋವಿದ.  ಹಲವು ಕ್ಷೇತ್ರಗಳಲ್ಲಿ ಅಭೂತಪೂರ್ವ ಸಾಧನೆ ಮಾಡಿದ ಹಿಮಾಲಯ ಸದೃಶ ಋಷಿ; ಪ್ರಾತಃಸ್ಮರಣೀಯರು.

ಕೇವಲ ಕಾವ್ಯವೊಂದನ್ನೇ ತೆಗೆದುಕೊಂಡರೂ ಪೈಗಳ ಕೊಡುಗೆ ಐತಿಹಾಸಿಕವಾಗಿ ಮಹತ್ವದ್ದು. ಅವರು ಕನ್ನಡ ಕವಿತೆಗೆ ಹಲವು ವಿಧಗಳ  ಆಯಾಮಗಳನ್ನು ಕೊಟ್ಟವರು. ಪಂಜೆಯವರ ಶಿಷ್ಯರಾಗಿದ್ದರೂ ಪ್ರಾಸತ್ಯಾಗದಂತಹ ವಿಷಯಗಳಲ್ಲಿ ಅವರ ಮಾತನ್ನು ಒಪ್ಪದೆ ಮುಂದುವರಿದರು. ಕನ್ನಡ ಕಾವ್ಯಕ್ಕೆ ಅವರು ಹಲವು ಹೊಸ ಅಂಶಗಳನ್ನು ತಂದುಕೊಟ್ಟರು.

ಪೈಗಳ ಬಾಲ್ಯ – ಬದುಕು

ಮಂಗಳೂರಿನ ಶ್ರೀಮಂತ ವರ್ತಕರಾದ ಸಾಹುಕಾರ ಬಾಬಾ ಪೈಗಳ ಮನೆತನದ ಸಾಹುಕಾರ ತಿಮ್ಮ ಪೈಗಳ ಮಗ ಗೋವಿಂದ ಪೈಗಳು. ತಾಯಿ ದೇವಕಿಯಮ್ಮ. ತಾಯಿಯ ಕಡೆಯಿಂದಲೂ ಅವರು ಆಗರ್ಭ ಶ್ರೀಮಂತರು. ತಾಯಿಯ ತಂದೆ ಲಕ್ಷ್ಮಣ ಶ್ಯಾನುಭಾಗರ ಮನೆಯಲ್ಲಿಯೇ ಗೋವಿಂದ ಪೈಗಳೂ ಅವರ ಸೋದರ ಸೋದರಿಯರೂ ಹುಟ್ಟಿ, ಬೆಳೆದದ್ದು.  ಆದ್ದರಿಂದಲೇ ಮಂಗಳೂರು ಗೋವಿಂದ ಪೈಗಳಾಗಬೇಕಿದ್ದ ಅವರು ಮಂಜೇಶ್ವರ ಗೋವಿಂದ ಪೈಗಳಾದರು. 1883 ಮಾರ್ಚ್ 23 ಅವರ ಜನ್ಮದಿನ. ಅವರಿಗೆ ಮೂವರು ತಮ್ಮಂದಿರು, ಮೂವರು ತಂಗಿಯಂದಿರು.

ಪೈಗಳ ಪ್ರಾಥಮಿಕ ವಿದ್ಯಾಭ್ಯಾಸ ಮಂಗಳೂರು ಮಿಷನ್ ಶಾಲೆಯಲ್ಲಿ. ಹೈಸ್ಕೂಲು ವಿದ್ಯಾಭ್ಯಾಸ ಕೆನರಾ ಹೈಸ್ಕೂಲಿನಲ್ಲಿ. (ಅಲ್ಲಿ ಎಂ.ಎನ್.ಕಾಮತರು ಪೈಗಳ ಸಹಪಾಠಿಯಾಗಿದ್ದರು). 1895 -96 ರಿಂದಲೇ ಅವರು ಹಳೆಗನ್ನಡ ವೃತ್ತ, ಕಂದ, ಷಟ್ಪದಿಗಳಲ್ಲಿ ಪದ್ಯ ಬರೆಯುತ್ತಿದ್ದರು. ಒಂದು ಯಕ್ಷಗಾನ ಪ್ರಸಂಗವನ್ನೂ ಬರೆದಿದ್ದರು. ಇಂಗ್ಲಿಷಿನಲ್ಲಿಯೂ ಪದ್ಯಗಳನ್ನು ಬರೆದು, ಕೆನರಾ ಹೈಸ್ಕೂಲಿನ ಕೈಬರಹದ ಪತ್ರಿಕೆ, ‘ಏಂಜೆಲ್’ ನಲ್ಲಿ ಪ್ರಕಟಿಸುತ್ತಿದ್ದರು. 1900 ರಿಂದ, ಅಂದರೆ ಅವರ ಹದಿನೇಳನೆಯ ವಯಸ್ಸಿನಿಂದ ‘ಸುವಾಸಿನಿ’ ಇತ್ಯಾದಿ ಪತ್ರಿಕೆಗಳಲ್ಲಿ ಅವರ ಕವಿತೆಗಳು ಪ್ರಕಟವಾಗಲಾರಂಭಿಸಿವೆ.

*****

ಕವನ ಬರೆದುದಕ್ಕೆ ದಂಡನೆ!

ಹೈಸ್ಕೂಲು ಹುಡುಗ ಗೋವಿಂದ ಪೈಗಳು ಕವನ ಬರೆಯುವ ವಿಷಯವನ್ನು ಗುಟ್ಟಾಗಿಟ್ಟಿದ್ದರು. ತಮ್ಮಂದಿರಿಗೆ ಅದು ತಿಳಿದಿತ್ತು. ಒಮ್ಮೆ ಮಕ್ಕಳ ನಡುವೆ ಜಗಳವಾದಾಗ ತಮ್ಮಂದಿರು ಅಣ್ಣ ಕವನ ಬರೆಯುವ ವಿಷಯವನ್ನು ಅಮ್ಮನಿಗೆ ಹೋಗಿ ದೂರಿತ್ತರು. ಪದ್ಯ ಬರೆದುದಕ್ಕಾಗಿ ಅಮ್ಮ ಅವರನ್ನು ದಂಡಿಸಿದರು. ಇದರ ಹಿನ್ನೆಲೆಯ ಹೀಗೆ: ಆ ಕಾಲದ ಶ್ರೇಷ್ಠ ಯಕ್ಷಗಾನ ಕವಿ ಮೂಲ್ಕಿ ವಾಸುದೇವ ಪ್ರಭುಗಳೆಂಬವರು ‘ಬಿಲ್ಲಹಬ್ಬ’ ಎಂಬ ಪ್ರಸಂಗವನ್ನು ಬರೆದ ಮೇಲೆ ಅವರಿಗೆ ಹುಚ್ಚು ಹಿಡಿದಿತ್ತು. ಅನಂತರ ‘ಸಮುದ್ರ ಮಥನ’ ಪ್ರಸಂಗವನ್ನು ರಚಿಸಿದ ಮೇಲೆ ಅವರಿಗೆ ಹುಚ್ಚು ಬಿಟ್ಟಿತಂತೆ. ಇದು ಆ ಕಾಲದಲ್ಲಿ ಪ್ರಚಾರದಲ್ಲಿದ್ದು ಸಂಪ್ರದಾಯಸ್ಥೆಯಾದ ದೇವಕಿಯಮ್ಮ ಮಗನ ಪದ್ಯ ಬರೆಯುವ ಹುಚ್ಚನ್ನು ಕಂಡು ಹೌಹಾರಿದ್ದರು. ಆಮೇಲೆ ಗೋವಿಂದ ಪೈಗಳು ಮನೆಯಲ್ಲಿ ಕವನ ಬರೆಯದೆ ದಾರಿಯಲ್ಲಿ ಮತ್ತು ಶಾಲೆಯಲ್ಲಿ ಮಾತ್ರ ಗುಟ್ಟಿನಲ್ಲಿ ಬರೆಯುತ್ತಿದ್ದರಂತೆ. (ಗೋವಿಂದ ಪೈ: ಸ್ಮೃತಿ-ಕೃತಿ. ಕಯ್ಯಾರ ಕಿಂಞಣ್ಣ ರೈ. ಮಂಗಳೂರು ವಿಶ್ವವಿದ್ಯಾಲಯ. 1983)

*****

ಪೈಗಳು ಇಂಟರ್‍ಮೀಡಿಯೇಟ್ ವಿದ್ಯಾಭ್ಯಾಸವನ್ನು ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಮುಗಿಸಿದರು. ಅಲ್ಲಿಯೇ ಪಂಜೆಯವರು ಅವರಿಗೆ ಅಧ್ಯಾಪಕರಾಗಿದ್ದದ್ದು. ನಂತರ ಬಿ.ಎ. ಪದವಿಗಾಗಿ ಮದ್ರಾಸಿನ ಕ್ರಿಶ್ಚಿಯನ್ ಕಾಲೇಜಿಗೆ ಸೇರಿದರು. ಅಂತಿಮ ಬಿ.ಎ. ಪರೀಕ್ಷೆಗೆ ಬರೆಯುತ್ತಿದ್ದಾಗ ತಂದೆ ಅಸ್ವಸ್ಥರಾದುದರಿಂದ ವಿದ್ಯಾಭ್ಯಾಸ ನಿಲ್ಲಿಸಿ ಊರಿಗೆ ಮರಳಿದರು. ಅವರು ಉತ್ತರ ಬರೆದಿದ್ದ ಒಂದೇ ಪತ್ರಿಕೆ ಇಂಗ್ಲಿಷಿನಲ್ಲಿ ಅವರಿಗೆ ವಿಶ್ವವಿದ್ಯಾನಿಲಯದ ಸುವರ್ಣ ಪದಕ ಸಿಕ್ಕಿತ್ತು! ಮದ್ರಾಸಿನಲ್ಲಿ ಬೇರೆ ಬೇರೆ ಭಾಷೆಗಳನ್ನು ಕಲಿಯುವುದಕ್ಕೆ ಪ್ರಾರಂಭಿಸಿದ ಅವರು ಲ್ಯಾಟಿನ್, ಫ್ರೆಂಚ್, ಬಂಗಾಳಿ, ಸಂಸ್ಕೃತ, ಪಾಲಿ ಮುಂತಾದ ಹಲವು ಭಾಷೆಗಳನ್ನು ಕಲಿತರು.

ಊರಿಗೆ ಬಂದು ಕುಟುಂಬದ ವ್ಯವಹಾರಗಳನ್ನು ನೋಡಿಕೊಳ್ಳಬೇಕಾದ ಜವಾಬ್ದಾರಿ ಅವರ ಮೇಲೆ ಬಿತ್ತು. ಅವರು ಮಂಜೇಶ್ವರದಲ್ಲಿಯೇ ಇದ್ದು ಮಂಗಳೂರಿಗೆ ಹೋಗಿಬರುತ್ತಿದ್ದರು. ಪೈಗಳದು ಮಂಗಳೂರಿನಲ್ಲಿ ಬಹಳ ಗಣ್ಯ ಮನೆತನ. ಅವರ ಅಜ್ಜ ನಾರಾಯಣ ಪೈಗಳು ಮಂಗಳೂರಿನ ಸರಕಾರಿ ಕಾಲೇಜನ್ನು ಸ್ಥಾಪಿಸಲು ಪ್ರಮುಖ ಕಾರಣರಾಗಿದ್ದರು. ವೆಂಕಟರಮಣ ದೇವಸ್ಥಾನದ ಟ್ರಸ್ಟಿಯೂ ಆಗಿದ್ದರು.

ಪೈಗಳು ಕೃಷ್ಣಾಬಾಯಿ ಎಂಬವರನ್ನು ಮದುವೆಯಾದರು. 1910 ರಲ್ಲಿ ಅವರಿಗೆ ಜನಿಸಿದ ಹೆಣ್ಣುಮಗುವೊಂದು ತೀರಿಹೋಯಿತು. ಪೈಗಳ 44 ನೆಯ ವಯಸ್ಸಿನಲ್ಲಿ (1927) ಅವರ ಪತ್ನಿ ಕೃಷ್ಣಾಬಾಯಿ ಉಬ್ಬಸರೋಗ ಉಲ್ಬಣಿಸಿ ತೀರಿಕೊಂಡರು. ಆಮೇಲೆ ಪೈಗಳು ಮರುಮದುವೆಯಾಗದೆ ಅವರ ನೆನಪಿನಲ್ಲಿಯೇ ಬದುಕಿದರು.

*****

ಗಾಂಧೀಜಿಯವರ ಕೈಯಲ್ಲಿ ಪೈಗಳ ಬೆತ್ತ

1911 ರಲ್ಲಿ ಪೈಗಳು ಬರೋಡಾದ ನೌಸಾರಿಯಲ್ಲಿ ಕಾಕಾ ಕಾಲೇಲ್ಕರ್ ಅವರ ಜತೆಗೆ ಕೆಲವು ಕಾಲ ಇದ್ದರು. ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲುಗೊಳ್ಳಬೇಕೆಂದು ನಿರ್ಧರಿಸಿ, ಅದರ ಒಂದು ಅಂಗವಾದ ‘ರಾಷ್ಟ್ರೀಯ ಶಾಲೆ’ಯ ಮೂಲಕ ದುಡಿಯಬೇಕೆಂದು ಬರೋಡಕ್ಕೆ ಹೋದದ್ದಾಗಿತ್ತು. ನೌಸಾರಿಯಲ್ಲಿ ದೇಶಪಾಂಡೆ ಎಂಬವರು ರಾಷ್ಟ್ರೀಯ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದ್ದರು. ಕಾಕಾ ಕಾಲೇಲ್ಕರರೂ ಅದೇ ಸಂಸ್ಥೆಯಲ್ಲಿದ್ದರು. ಈ ಸಂಸ್ಥೆ ಗುಪ್ತವಾಗಿ ಕ್ರಾಂತಿಕಾರಿ ಚಟುವಟಿಕೆಗಳಿಗೂ ಸಹಕರಿಸುತ್ತಿತ್ತು. ದೇಶಪಾಂಡೆಯವರು ಅರವಿಂದ ಘೋಷರ (ಮುಂದೆ ಮಹರ್ಷಿ ಅರವಿಂದರು) ಅನುಯಾಯಿ. ಈ ನೌಸಾರಿ ಮತ್ತೊಂದು ಸಂಗತಿಗಾಗಿಯೂ ಕನ್ನಡ ಸಾಹಿತ್ಯದಲ್ಲಿ ಆಗಾಗ ಉಲ್ಲೇಖಗೊಳ್ಳುತ್ತದೆ. ಕನ್ನಡದ ಆದಿಪ್ರಾಸದ ಐತಿಹಾಸಿಕ ತ್ಯಾಗ ನಡೆದದ್ದು ನೌಸಾರಿಯಲ್ಲಿ! 1911 ರಲ್ಲಿ. ಪತ್ನಿಯ ಅಸೌಖ್ಯದಿಂದಾಗಿ ಪೈಗಳು ಮುಂದೆ ನೌಸಾರಿಯ ರಾಷ್ಟ್ರೀಯ ಶಾಲೆಯನ್ನು ಬಿಟ್ಟು ಮಂಜೇಶ್ವರಕ್ಕೆ ಮರಳಿದರು. ಆಮೇಲೆ ಕಾಲೇಲ್ಕರ್ ಅವರು ಮಂಜೇಶ್ವರಕ್ಕೆ ಭೇಟಿ ನೀಡಿದ್ದಾಗ ಪೈಗಳ ಆತಿಥ್ಯವನ್ನು ಸ್ವೀಕರಿಸಿದ್ದರು. ಆಗ ಪೈಗಳು ಅವರಿಗೆ ಮನೆಯಲ್ಲಿದ್ದ ಅಮೂಲ್ಯ ಬೆತ್ತವೊಂದನ್ನು ನೀಡಿದ್ದರು. ಗಾಂಧೀಜಿಯವರ ದಂಡಿ ಯಾತ್ರೆಯ ಸಂದರ್ಭದಲ್ಲಿ ಕಾಲೇಲ್ಕರ್ ಅವರು ಈ ಬೆತ್ತವನ್ನು ಗಾಂಧೀಜಿಯವರಿಗೆ ಕೊಟ್ಟರು. ಈ ಬೆತ್ತ ಗಾಂಧೀಜಿಯವರು ಬಳಸಿದ್ದ ವಸ್ತುಗಳ ಮ್ಯೂಸಿಯಮಿನಲ್ಲಿ ಈಗಲೂ ಇದೆ.

*****

ಸದಾ ಅಧ್ಯಯನಶೀಲರಾಗಿ ಗ್ರಂಥಗಳನ್ನು ಓದುತ್ತಾ ಇರುತ್ತಿದ್ದ ಪೈಗಳ ಮನೆಯೊಂದು ಗ್ರಂಥಾಲಯವಾಗಿತ್ತು. ಮೂವತ್ತಾರು ಭಾಷೆಯ ಗ್ರಂಥಗಳನ್ನು ಪ್ರಪಂಚದಲ್ಲೆಡೆಯಿಂದ ತರಿಸಿಕೊಂಡಿದ್ದರು. ಮಂಜೇಶ್ವರದ ಅವರ ಮನೆ ನಾಡಿನ ಸಾಹಿತಿಗಳಿಗೊಂದು ಯಾತ್ರಾಸ್ಥಳವಾಗಿತ್ತು. ಅವರು ಜಪಾನಿನ ‘ನೋ’ ನಾಟಕಗಳನ್ನು ಜಪಾನಿ ಭಾಷೆಯಲ್ಲಿಯೇ ಓದಿಕೊಂಡು ಕನ್ನಡಕ್ಕೆ ಅನುವಾದಿಸಿರುವುದು ವಿಶೇಷವಾಗಿದೆ.

ಪೈಗಳು ಸದಾ ಅಧ್ಯಯನಶೀಲರಾಗಿದ್ದು ಪುಸ್ತಕಗಳನ್ನು ಓದಿ ಟಿಪ್ಪಣಿ ಮಾಡುತ್ತಿದ್ದರು. ಅವರು ಓದಿದ ಪುಸ್ತಕಗಳಲ್ಲೆಲ್ಲ, ಅವರ ಪ್ರಸಿದ್ಧವಾದ ನೇರಳೆ ಶಾಯಿಯ ಪೆನ್ನಿನಿಂದ ಹಾಕಿದ ಅಡಿಗೆರೆಗಳು, ವಿಮರ್ಶೆಯ ಮಾತುಗಳನ್ನು ಕಾಣಬಹುದು. ಈಗ ಉಡುಪಿಯಲ್ಲಿರುವ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ಗೋವಿಂದ ಪೈಗಳ ಗ್ರಂಥ ಭಂಡಾರವನ್ನು ಇರಿಸಲಾಗಿದ್ದು ಅಲ್ಲಿ ಮೂವತ್ತಾರು ಭಾಷೆಗಳ ಸುಮಾರು 5000 ಪುಸ್ತಕಗಳಿವೆ.

ಗೋವಿಂದ ಪೈಗಳ ಪ್ರಭಾವ ಆ ಕಾಲದಲ್ಲಿ ಪಂಜೆಯವರ ಪ್ರಭಾವದಷ್ಟೇ ಅಥವಾ ತುಸು ಹೆಚ್ಚೇ ಇದ್ದಿತು. ಅಜಾತ ಶತ್ರುವಾದ ಅವರ ಪ್ರೀತಿ ಪ್ರೋತ್ಸಾಹ ಆ ಕಾಲದ ಕವಿಗಳಿಗೆಲ್ಲ ಸಿಕ್ಕಿತ್ತು. ಕನ್ನಡದ ಹಿರಿಯಣ್ಣ ಮಾಸ್ತಿಯವರ ಬಗ್ಗೆ ಸಮಕಾಲೀನ ಸಾಹಿತಿಗಳಿಗೆ ಇದ್ದಂತೆ, ಈ ಭಾಗದ ಸಾಹಿತಿಗಳಿಗೆ ಗೋವಿಂದ ಪೈಗಳೆಂದರೆ ಭಕ್ತಿ ಮತ್ತು ಪ್ರೀತಿಯಿತ್ತು. ಕನ್ನಡ ನಾಡಿನ ಗಣ್ಯ ಸಮಕಾಲೀನ ಸಾಹಿತಿಗಳಿಗೆ ಅವರ ಜತೆಗೆ ಸ್ನೇಹ, ಪತ್ರ ವ್ಯವಹಾರಗಳು ಮತ್ತು ಭೇಟಿ ನೀಡುವ ಸೌಹಾರ್ದ ಸಂಬಂಧವಿತ್ತು.

ಗೋವಿಂದ ಪೈಗಳಿಗೆ 1949 ರಲ್ಲಿ ಮದರಾಸು ಸರಕಾರ ‘ರಾಷ್ಟ್ರಕವಿ’ ಬಿರುದು ನೀಡಿ ಗೌರವಿಸಿತು. ಅವರು 1950 ರಲ್ಲಿ ಮುಂಬಯಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ಅವರು ಸನ್ಮಾನ, ಗೌರವಗಳನ್ನು ಸ್ವೀಕರಿಸಲು ಒಪ್ಪುತ್ತಿರಲಿಲ್ಲ. ಮೈಸೂರು ವಿಶ್ವವಿದ್ಯಾನಿಲಯ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಬೇಕೆಂದು ಬಯಸಿದಾಗ ಪೈಗಳು ವಿನಯದಿಂದ ನಿರಾಕರಿಸಿದರು. ಆಗ ಅವರು ಬರೆದ ಪತ್ರದ ಪ್ರತಿ ಇಲ್ಲಿದೆ:

ಗೋವಿಂದ ಪೈಗಳು 6.9.1963 ರಂದು ಮಂಗಳೂರಿನಲ್ಲಿ ತಮ್ಮ ಎಂಬತ್ತನೆಯ ವಯಸ್ಸಿನಲ್ಲಿ ತೀರಿಕೊಂಡರು. ದಕ್ಷಿಣ ಕನ್ನಡದ ಭಾಗವಾಗಿದ್ದ  ಕಾಸರಗೋಡು ಕೇರಳ ರಾಜ್ಯಕ್ಕೆ ಸೇರಿದ್ದರಿಂದ ತೀವ್ರವಾಗಿ ನೊಂದಿದ್ದ ಅವರು, ತಾವು ಕನ್ನಡನಾಡಿನಲ್ಲಿಯೇ ಕೊನೆಯುಸಿರು ಎಳೆಯಬೇಕೆಂದು ಆಶಿಸಿದ್ದರು. ಅವರ ಆಸೆಯಂತೆ (ಅಂದರೆ ತಮ್ಮ ಜೀವಿತಾವಧಿಯಲ್ಲಿ ಕಾಸರಗೋಡು – ಅವರಿದ್ದ ಮಂಜೇಶ್ವರ ಸಹಿತ – ಕನ್ನಡನಾಡಿಗೆ ಸೇರುವ ಮೂಲಕ ತಾವು ನೆಮ್ಮದಿಯಿಂದ ಪ್ರಾಣಬಿಡಬೇಕೆನ್ನುವುದು ಅವರ ಇಂಗಿತವಾಗಿತ್ತು) ಇದು ನೆರವೇರಲಿಲ್ಲವಾದರೂ, ಅವರಿಗೆ ಅಸೌಖ್ಯವಾದಾಗ ಮಂಗಳೂರಿಗೆ ಕರೆದುಕೊಂಡು ಬಂದದ್ದರಿಂದ ಕನ್ನಡನಾಡಿನಲ್ಲಿ ಕೊನೆಯುಸಿರು ಎಳೆಯುವಂತಾಯಿತು.

ಮಂಜೇಶ್ವರದಲ್ಲಿರುವ ಗೋವಿಂದ ಪೈಗಳ ಮನೆಯನ್ನು ಈಗ ‘ಗಿಳಿವಿಂಡು’ ಯೋಜನೆಯಂತೆ ನವೀಕರಿಸಿ ರಾಷ್ಟ್ರಕವಿಯ ಸ್ಮಾರಕವಾಗಿಸಲಾಗಿದೆ. ಅವರ ಗ್ರಂಥಭಂಡಾರ ಉಡುಪಿಯ ‘ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ’ದಲ್ಲಿ ಸುರಕ್ಷಿತವಾಗಿದೆ. (ನನಗೆ ಆ ಸಂಸ್ಥೆಯಲ್ಲಿ ಭಾಷಾವಿಜ್ಞಾನಿ ಡಾ. ಯು. ಪಿ. ಉಪಾಧ್ಯಾಯರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಪಿ.ಎಚ್.ಡಿ. ಪದವಿ ಪಡೆಯುವ ಅವಕಾಶ ದೊರೆತಿದೆ) . ಆ ಸಂಸ್ಥೆ ವರ್ಷಕ್ಕೊಬ್ಬರು ಶ್ರೇಷ್ಠ ಕನ್ನಡ ಸಾಹಿತಿ ಅಥವಾ ವಿದ್ವಾಂಸರಿಗೆ ಒಂದುಲಕ್ಷ ರೂಪಾಯಿಗಳ ಗೌರವ ಧನದೊಂದಿಗೆ ಗೋವಿಂದ ಪೈ ಪ್ರಶಸ್ತಿಯನ್ನು ನೀಡುತ್ತದೆ.

ಗೋವಿಂದ ಪೈಗಳ ಕಾವ್ಯ

ಗೋವಿಂದ ಪೈಗಳು ತಮ್ಮ ವ್ಯಕ್ತಿತ್ವ, ಪಾಂಡಿತ್ಯ, ಸಂಶೋಧಕ ಪ್ರವೃತ್ತಿ ಇವುಗಳಿಂದ ಕನ್ನಡಿಗರ ಗೌರವಕ್ಕೆ ಪಾತ್ರರಾಗಿರುವವರು. ಅವರು ಶ್ರೇಷ್ಠ ಕವಿಯೂ ಹೌದು ಎನ್ನುವುದನ್ನು ಯಾಕೋ ಬಹಳ ಜನ ಹೇಳುವುದಿಲ್ಲ. ಅವರ ಕವನಗಳ ಭಾಷೆ ಜಿಗುಟಾದುದರಿಂದ ಸುಲಭ ಗ್ರಾಹ್ಯವಲ್ಲ, ಹಾಗಾಗಿ ಸಾಮಾನ್ಯ ಓದುಗರಿಂದ ದೂರ ಉಳಿದರು ಎಂಬ ಸಮಾಧಾನವನ್ನು ಹೇಳಲಾಗುತ್ತಿದೆ.

ಜಿ.ಪಿ. ರಾಜರತ್ನಂ ಹೇಳಿದಂತೆ ಪೈಗಳ ಪದ್ಯರಚನೆ ದುರ್ಗಸದೃಶವಾದದ್ದು; ಅವುಗಳಲ್ಲಿನ ಭಾಷೆಯ ಪ್ರೌಢಿಮೆ, ಬಂಧದ ಬಿಗಿಕಟ್ಟು, ಭಾವದ ಗುರುಭಾರ ಎಂಬ ಈ ಮುಮ್ಮ್ಯೆಯ ವಜ್ರಕವಚವನ್ನು ಭೇದಿಸಿ ಒಳಗಿನ ಹೃದಯವನ್ನು ಅರಿತುಕೊಳ್ಳಬೇಕಾಗುತ್ತದೆ.
ಕನ್ನಡ ಕಾವ್ಯಕ್ಕೆ ಗೋವಿಂದ ಪೈಗಳ ಕೊಡುಗೆಯನ್ನು ಹೀಗೆ ಗುರುತಿಸಬಹುದು:

1. ಅವರು ಕನ್ನಡಕ್ಕೆ ಅನಿವಾರ್ಯವೆನಿಸಿದ್ದ ದ್ವಿತೀಯಾಕ್ಷರದ ಪ್ರಾಸವನ್ನು ತೊರೆದು ಹೊಸದಾರಿ ತೋರಿಸಿಕೊಟ್ಟರು.
2. ಕನ್ನಡಕ್ಕೆ ಸಾನೆಟನ್ನು ಪರಿಚಯಿಸಿದರು.
3.ಪ್ರಗಾಥ, ಖಂಡಕಾವ್ಯ ಮತ್ತು ಕಥನಕವನಗಳಲ್ಲಿ ದೊಡ್ಡ ಸಾಧನೆ ಮಾಡಿದರು.
ಗೋವಿಂದ ಪೈಗಳ ಇನ್ನೊಂದು ಸಾಧನೆ ಕನ್ನಡದ `ಗೀತಾಂಜಲಿ’ ಎನ್ನಬಹುದಾದ `ನಂದಾದೀಪ’ ಎನ್ನುವ ಕವನಗುಚ್ಛವನ್ನು ಬರೆದಿರುವುದು.

*****

ಪ್ರಾಸತ್ಯಾಗದ ರೋಚಕ ಚರಿತ್ರೆ!

ಗೋವಿಂದ ಪೈಗಳ ಮಹತ್ವದ ಕೊಡುಗೆ ಪ್ರಾಸತ್ಯಾಗವೆಂದೇ ಗುರುತಿಸಲ್ಪಟ್ಟಿದೆ. ಈಗ ನಮಗೆ ಈ ನಿರ್ಧಾರ ಅಂಥ ವಿಶೇಷದ್ದೆನಿಸದಿದ್ದರೂ ಆ ಸನ್ನಿವೇಶದಲ್ಲಿ ಅದೊಂದು ಧೀರ ನಿರ್ಧಾರವಾಗಿತ್ತು-ದೂರಗಾಮೀ ಪರಿಣಾಮವುಳ್ಳದ್ದಾಗಿತ್ತು. ಹೊಸಗನ್ನಡ ಕಾವ್ಯಕ್ಕೆ ಆಧುನಿಕತೆಯನ್ನು ತಂದುಕೊಡುವುದರಲ್ಲಿ ಪ್ರಾಸತ್ಯಾಗಕ್ಕೆ ಒಂದು ಮಹತ್ವದ ಸ್ಥಾನವಿದೆ. 1899-1900ರ ಸುಮಾರಿಗೆ ಪೈಗಳು ಪ್ರಾಸವನ್ನು ತೊರೆದರೆ ಹೇಗೆ ಎಂದು ಚಿಂತಿಸತೊಡಗಿದರು. ತಮ್ಮ ಅಧ್ಯಾಪಕರಾಗಿದ್ದ ಪಂಜೆಯವರೊಡನೆ ಇದನ್ನು ಪ್ರಸ್ತಾಪಿಸಿದಾಗ ಅವರು ಏನೋ ಕೊಂಕು ಮಾತಾಡಿ ಪ್ರಸ್ತಾಪವನ್ನು ತೇಲಿಸಿಬಿಟ್ಟರು. ಆದರೆ ಪೈಗಳು ಈ ಬಗ್ಗೆ ಸಾಕಷ್ಟು ಚಿಂತಿಸಿ 1911ರಲ್ಲಿ ಒಂದು ಧೀರ ನಿರ್ಧಾರವನ್ನು ತೆಗೆದುಕೊಂಡರು. ತಾವು ಗುಜರಾತಿನ ನೌಸಾರಿಯಲ್ಲಿದ್ದಾಗ `ಆಗೋದು ಹೋಗೋದು ದೇವ ಇಚ್ಛೆ. ಹೂಡೋದು ಬಿತ್ತೋದು ನನ್ನ ಇಚ್ಛೆ.’ ಇನ್ನು ಮೀನ ಮೇಷ ನೋಡದೆ `ಪ್ರಾಸವನೀಗಲೆ ತೊರೆದು ಬಿಡುವುದೇ ನಿಶ್ಚಯಂ’ ಎಂದು ನಿರ್ಧರಿಸಿ, ಪ್ರಾಸಬಿಟ್ಟು ರವೀಂದ್ರರ `ಭಾರತಲಕ್ಷ್ಮೀ’ ಕವನವನ್ನು ಅನುವಾದಿಸಿದರು. ಇಕ್ಬಾಲರ ಉರ್ದು ಪದ್ಯವೊಂದನ್ನೂ ಪ್ರಾಸರಹಿತವಾಗಿ ಭಾಷಾಂತರಿಸಿದರು. ಜತೆಗೆ `ಹೊಲೆಯನು ಯಾರು?’ ಎಂಬ ಸ್ವಂತ ಕವನವನ್ನು ಪ್ರಾಸಬಿಟ್ಟು ಬರೆದರು. ಪ್ರಾಸ ಬಿಟ್ಟುದಕ್ಕೆ ಗೋವಿಂದ ಪೈಗಳನ್ನು ಹಲವು ಮಂದಿ ಖಂಡಿಸಿದರು! ಕನ್ನಡ ಸಾಹಿತ್ಯಲೋಕದಲ್ಲಿ ಹಾಹಾಕಾರ ಎದ್ದಿತು! ಆಗಿನ ಪತ್ರಿಕೆಗಳಲ್ಲಿ ಇದರ ಬಗ್ಗೆ ನಡೆದ ವಾದವಿವಾದಗಳ ಬಗ್ಗೆಯೇ ಯಾರಾದರೂ ಒಂದು ಸಂಶೋಧನೆ ನಡೆಸಬಹುದು. ಇದೇ ನಿಮಿತ್ತವಾಗಿ ಕನ್ನಡದಲ್ಲಿ ಒಬ್ಬರು ಗಣ್ಯ ಸಾಹಿತಿ ಹುಟ್ಟಿಕೊಂಡದ್ದು ಈ ಕಥೆಯ ಒಂದು ಕುತೂಹಲಕರ ಉಪಕಥೆ! ಅದೂ ತಿಳಿಯತಕ್ಕದ್ದಾಗಿದೆ. ಅವರೇ ಅಭಿಜಾತ ಹಾಸ್ಯ ಸಾಹಿತಿ ಹುರುಳಿ ಭೀಮರಾಯರು. ಹುರುಳಿಯವರು ಕನ್ನಡ ಸಾಹಿತ್ಯ ಕ್ಷೇತ್ರ ಆಸಕ್ತರಾದುದೇ ಆಕಸ್ಮಿಕವಾಗಿ. ಹುರುಳಿ ಭೀಮರಾಯರು ಉಡುಪಿಯವರು. ಅವರ ಬಾಡಿಗೆದಾರನಾಗಿಯೇ, ಅವರ ಮನೆಯ ಕಂಪೌಂಡಿನಲ್ಲಿದ್ದ ಚಾಳಿನಲ್ಲಿಯೇ ಕವಿ ಮುದ್ದಣ ಇದ್ದದ್ದು. ಅವರ ಅಣ್ಣನೂ, ಮುದ್ದಣನೂ ಗೆಳೆಯರಾಗಿದ್ದರು. ಆಗ ಉಡುಪಿಯ ಸಂಸ್ಕೃತ ಪಾಠಶಾಲೆಯಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿದ್ದ ಹುರುಳಿಯವರಿಗೆ ಕನ್ನಡ ಸಾಹಿತ್ಯದಲ್ಲಿ ಅಷ್ಟು ಆಸಕ್ತಿಯಿರಲಿಲ್ಲ. 1911ರಲ್ಲಿ ಗೋವಿಂದ ಪೈಗಳು ಪ್ರಾಸಬಿಟ್ಟು ಬರೆದ ‘ಹೊಲೆಯನಾರು?’ ಎಂಬ ಕವನವನ್ನು ಖಂಡಿಸಬೇಕೆಂದು ಅವರ ಮಿತ್ರರು ಒತ್ತಾಯಿಸಿದುದರಿಂದ ಭೀಮರಾಯರು ಅದನ್ನು ಓದಿ ನೋಡಿದರು. ಅದರಲ್ಲಿ ಪ್ರಾಸ ಇಲ್ಲ ಎನ್ನುವುದನ್ನು ಬಿಟ್ಟರೆ ಬೇರೆ ಖಂಡನಾರ್ಹ ವಿಷಯ ಅವರಿಗೆ ಕಂಡುಬರಲಿಲ್ಲ. ಹಾಗಾಗಿ ಪ್ರಾಸ ಬಿಟ್ಟುದನ್ನೇ ಖಂಡಿಸಿ ಒಂದು ಲೇಖನ ಬರೆದು ‘ಸ್ವದೇಶಾಭಿಮಾನಿ’ ಯಲ್ಲಿ ಪ್ರಕಟಿಸಿದರು. ಕೆಲವು ಕಾಲ ಪೈಗಳಿಗೂ ಭೀಮರಾಯರಿಗೂ ಪತ್ರಿಕೆಯಲ್ಲಿ ಸಂವಾದ ನಡೆಯಿತು. ಭೀಮರಾಯರು ಮಿತ್ರರ ಒತ್ತಾಯಕ್ಕೆ ಇದರಲ್ಲಿ ಭಾಗವಹಿಸಿದ್ದರೇ ಹೊರತು ಆಗ ಅವರಿಗೆ ಕನ್ನಡ ಸಾಹಿತ್ಯ ಲೋಕದ ಹೊಕ್ಕುಬಳಕೆ ಅಷ್ಟಾಗಿ ಇರಲಿಲ್ಲ. ಭೀಮರಾಯರಿಗೆ ಬರವಣಿಗೆಯಲ್ಲಿಯೂ, ಪತ್ರಿಕೋದ್ಯಮದಲ್ಲಿಯೂ ಆಸಕ್ತಿ ಮೂಡಲು ಈ ಚರ್ಚೆಯೇ ನೆವವಾಯ್ತು. ಆಮೇಲೆ ಅವರು  ಕನ್ನಡ ಅಧ್ಯಾಪಕರಾಗಿ, ಸ್ವತಂತ್ರ ಪತ್ರಕರ್ತರಾಗಿ, ‘ಕಂಠೀರವ’ ಪತ್ರಿಕೆಯ ಸಂಪಾದಕರಾಗಿ (1932 – 1967), ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯ ಪ್ರತಿನಿಧಿಯಾಗಿ ಕೆಲಸ ಮಾಡಿದರು. ‘ಮುರುಕು ದಂಬೂಕು’ ಮತ್ತು ‘ಹಾಸನ್ ಟೋಪಿ’ ಎಂಬ ಎರಡು ಅದ್ಭುತ ಹಾಸ್ಯ ಕಾದಂಬರಿಗಳನ್ನು ಕನ್ನಡಕ್ಕೆ ಕೊಟ್ಟಿದ್ದಾರೆ. ಪ್ರಾಸತ್ಯಾಗದ ಬಗ್ಗೆ ಬಂದ ಟೀಕೆಗಳಿಗೆ ಪೈಗಳು ಸಮರ್ಪಕವಾಗಿ ಉತ್ತರ ನೀಡಿದರು : “ಕನ್ನಡಕ್ಕೆ ಪ್ರಾಸವೇನೂ ವೇದವಾಕ್ಯವಲ್ಲ. ಶಾಶ್ವತವೂ ಅಲ್ಲ. ಅದನ್ನು ಬೇಕಾದಂತೆ ಬಳಸಿ, ಬೇಡವೆನಿಸಿದಾಗ ಬಿಟ್ಟು ಬಿಡಬಹುದು. ಇಂದು ಒಬ್ಬನೇ ನಡೆವ ಮೇಕೆದಾರಿ ಮುಂದು ತೇರು ಎಳವ ಹೆದ್ದಾರಿ”ಯಾಗುತ್ತದೆ ಎಂದು ಉತ್ತರಿಸಿದರು. ಆ ಭವಿಷ್ಯವಾಣಿ ನಿಜವಾಯಿತು. ಈ ಸಂದರ್ಭದಲ್ಲಿ ಪರಂಪರೆಯ ಪ್ರತಿನಿಧಿ ಎನಿಸಿದ್ದ ಮುಳಿಯ ತಿಮ್ಮಪ್ಪಯ್ಯನವರು ತಮ್ಮ `ಕನ್ನಡ ಕೋಗಿಲೆ’ಯಲ್ಲಿ ಒಂದು ಸಂಪಾದಕೀಯ ಬರೆದು ಪದ್ಯಕ್ಕೆ ಪ್ರಾಸವಿರಲೇಬೇಕೆಂದೇನೂ ಇಲ್ಲವೆಂದು ಹೇಳಿದರು. ಕೆಲವು ವರ್ಷಗಳ ನಂತರ ಪ್ರಾಸತ್ಯಾಗವು ತೇರು ಎಳೆವ ಹೆದ್ದಾರಿಯಾಗತೊಡಗಿದಂತೆ ಪಂಜೆಯವರ ಸಹಿತ ಎಲ್ಲರೂ ಪೈಗಳನ್ನು ಶ್ಲಾಘಿಸಿದರು. “25 ವರ್ಷಗಳ ಹಿಂದೆ ನನ್ನ ಸ್ನೇಹಿತರೊಬ್ಬರು ಬರೆದ ಒಂದು ಹೊಸ ಕವನವನ್ನು ಕಂಡು ನನಗೆ ‘ಮಡೀ ಮುದಿಕಿಯ ಮೈಮೇಲೆ ಮುಸುರೆ ಚೆಲ್ಲಿದಂತಾಯಿತುʼ. ಅನಂತರ ನಮ್ಮೊಳಗಾದ ಈ ವಿಷಯದ ಚರ್ಚೆಯಲ್ಲಿ ಅವರು ಜಯಸಿದರು. ಅವರ ಪ್ರಾಸ ಮತವನ್ನು ನಾನು ಒಪ್ಪಿಕೊಂಡೆನು; ಅವರು ಸೋತಿದ್ದರೆ ನಮ್ಮ ಜಿಲ್ಲೆಯಿಂದ ಕನ್ನಡಕ್ಕೆ ಸಲ್ಲತಕ್ಕ ಸಾಹಿತ್ಯ ಸೇವೆಯಲ್ಲಿ ಒಂದಂಶವೇ ತಪ್ಪಿ ಹೋಗುತ್ತಿದ್ದಿತೋ ಏನೋ ಹೇಗೆ ಹೇಳಬಹುದು?” ಎಂದು ರಾಯಚೂರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣದಲ್ಲಿ ಪಂಜೆಯವರು ಹೇಳಿದರು.

*****

ಪ್ರಾಸಬಿಟ್ಟು ಬರೆದ ಕನ್ನಡದ ಮೊದಲನೆಯ ಸ್ವತಂತ್ರ ಕವನ (1911) ಹೀಗಿದೆ:

ಹೊಲೆಯನು ಯಾರು?

ಹೊಲೆಯನಾರೂರ ಹೊರಗಿರುವವನೆ ಗೆಳೆಯ?
ಜಾತಿಯಿಂದಲ್ಲ ಗುಣದಿಂದಹನು ಹೊಲೆಯ || ಪಲ್ಲ ||
ಇಬ್ಬರಾಡುವ ಗುಟ್ಟು ಕದ್ದು ಕೇಳುವ ಹೊಲೆಯ,
ಗಂಡ ಹೆಂಡಿರ ಬೇರೆ ಮಾಡುವವ ಹೊಲೆಯ |
ಚಾಡಿ ಮಾತಾಡಿ ಭೇದವ ಕಲ್ಪಿಪನೆ ಹೊಲೆಯ,
ಒಣಹರಟೆಯಿಂ ಕಾಲ ಕಳೆಯುವವ ಹೊಲೆಯ || 1 ||
ಬಾಯಿಬಾರದ ಜಂತುಗಳ ಕಾಡುವವ ಹೊಲೆಯ,
ಹಾಲು ಕುಡಿದಾಕಳನು ಸದೆವಾತ ಹೊಲೆಯ |
ಮನೆಯ ಬತ್ತಿದ ಪಶುವಿಗುಣಿಸು ಕೊಡದವ ಹೊಲೆಯ,
ಜೀವಿಗಳ ಕೊಂದು ಜೀವಿಸುವವನೆ ಹೊಲೆಯ || 2 ||
ಹೆಂಡ ಕುಡಿದರಸುಬೀದಿಯಲಿ ತಿರಿವವ ಹೊಲೆಯ,
ಹಣವಿಟ್ಟು ಜೂಜಾಟವಾಡುವವ ಹೊಲೆಯ |
ತನ್ನೊಡವೆ ಮಡದಿಯಲಿ ತೃಪ್ತಿ ಪಡೆದವ ಹೊಲೆಯ
ಪರರ ಧನವನಿತೆಯರ ಬಯಸುವವ ಹೊಲೆಯ || 3 ||
ಎಳೆಮಕ್ಕಳಿಗೆ ವಿದ್ಯೆ ಕಲಿಸಿಕೊಡದವ ಹೊಲೆಯ,
ಯುವಕರಿಗೆ ದುರ್ಬುದ್ಧಿ ಕಲಿಸುವವ ಹೊಲೆಯ |
ತಾನರಿತ ಜ್ಞಾನ ಪರರಿಗೆ ಪೇಳದವ ಹೊಲೆಯ,
ತನ್ನಿಂದ ಹಿರಿಯರನು ಮನ್ನಿಸದ ಹೊಲೆಯ || 4 ||
ಪರರ ಬೇನೆಯಲಿ ಮನಹಿಗ್ಗುವಾತನೆ ಹೊಲೆಯ
ಪೀಡಿತರನಿನಿಸು ಕನಿಕರಿಸದವ ಹೊಲೆಯ |
ಪರರ ಹೊಗೆಯನು ನೋಡೆ ಕಾದಿರುವವನೆ ಹೊಲೆಯ,
ಹಸಿದವರಿಗೊಂದು ತುತ್ತೆರಚದವ ಹೊಲೆಯ || 5 ||
ಹಣವ ಪಡೆದೊತ್ತೆಯನು ಹಿಂದೆ ಕೊಡದವ ಹೊಲೆಯ,
ಹಣವಿದ್ದು ಸಾಲವನು ತೀರಿಸದವ ಹೊಲೆಯ |
`ಆಶೆಮಾತನು ಕೊಟ್ಟು ಭಾಷೆ ತಪ್ಪುವ ಹೊಲೆಯ’,
ಬಗೆಬಗೆದು ಮೋಸವನು ಮಾಡುವವ ಹೊಲೆಯ || 6 ||
ಶುದ್ಧ ತಾನೆಂದು ಪರರನು ಮುಟ್ಟದವ ಹೊಲೆಯ,
ಹೊಲೆಯರೆಂದನ್ಯರನು ಕರೆವವನೆ ಹೊಲೆಯ |
ತಾನು ಮೇಲೆಂದುಬ್ಬಿ ಹೀನೈಸುವವ ಹೊಲೆಯ,
ಕೀಳುದಸೆಯನ್ನುದ್ಧರಿಸದವ ಹೊಲೆಯ || 7 ||
ತಾ ಬೋಧಿಸುವ ಧರ್ಮವಾಚರಿಸದವ ಹೊಲೆಯ,
ತಾನು ತಾನೆಂದು ಶ್ಲಾಘಿಸುವವನೆ ಹೊಲೆಯ |
ಪರರ ಹೊಲ್ಲೆಹದ ಕಾವ್ಯವ ಬಿತ್ತರಿಪ ಹೊಲೆಯ,
ಪರರ ಗುಣಗಳಿಗೆ ಕುರುಡಾಗಿಹನೆ ಹೊಲೆಯ || 8 ||
ರಾಷ್ಟ್ರದುನ್ನತಿಯ ಸಾಧಿಸೆ ಶ್ರಮಿಸದವ ಹೊಲೆಯ
ತನ್ನ ರಾಷ್ಟ್ರಕೆ ದ್ರೋಹ ಚಿಂತಿಪನೆ ಹೊಲೆಯ |
ಸ್ವಾರ್ಥದಿಂ ರಾಷ್ಟ್ರಹಿತವನು ಮರೆವವನು ಹೊಲೆಯ
ರಾಷ್ಟ್ರಭಕ್ತಿಯ ಲೇಶವಿಲ್ಲದವ ಹೊಲೆಯ || 9 ||
ಎಲ್ಲವುಗಳಲ್ಲಿ ಹರಿಯನು ಕಾಣದವ ಹೊಲೆಯ,
ಶ್ರೀ ಹರಿಯೊಳೆಲ್ಲವನು ಕಾಣದವ ಹೊಲೆಯ |
ಮುಂಗೆಯ್ದ ಪಾಪಕನುತಾಪ ಪಡದವ ಹೊಲೆಯ,
ದೇವಕೀನಂದನನ ನೆನೆಯದವ ಹೊಲೆಯ || 10 ||

*****

ಪಾಶ್ಚಾತ್ಯ ಕಾವ್ಯ ಪ್ರಕಾರಗಳಾದ `ಪ್ರಗಾಥ’ (ode) ಮತ್ತು ಚತುರ್ದಶಪದಿ (sonnet- ಸುನೀತ)ಗಳನ್ನು ಕನ್ನಡದಲ್ಲಿ ಸೃಷ್ಟಿಸಿದುದು ಗೋವಿಂದ ಪೈಗಳ ಮತ್ತೊಂದು ಸಾಧನೆ. 1928ರಲ್ಲಿ ಪ್ರಕಟವಾದ `ಶ್ರೀ ಗೊಮ್ಮಟ ಜಿನಸ್ತುತಿ’ಯಲ್ಲಿ ಭರತ ಬಾಹುಬಲಿಯ ಕತೆಯನ್ನು ಮತ್ತೇಭವಿಕ್ರೀಡಿತ ವೃತ್ತದಲ್ಲಿ ಬರೆದಿದ್ದಾರೆ. “ಆದರೆ ಪ್ರಗಾಥದಲ್ಲಿ ಸಾಮಾನ್ಯವಾಗಿ ಕಾಣಿಸುವ ಭಾವೋತ್ಕರ್ಷವಾಗಲೀ ನಯಗಾರಿಕೆಯಾಗಲೀ ಇಲ್ಲಿ ಕಾಣಿಸದೆ, ಪಾಂಡಿತ್ಯ ಹಾಗೂ ತತ್ತ್ವಗಳ ಮಂಡನೆಯೇ ಹೆಚ್ಚಾಗಿ ಕಾಣಿಸುತ್ತದೆ” (ಸುಬ್ರಾಯ ಚೊಕ್ಕಾಡಿ – `ಕೃತಿ ಶೋಧ’).

ಸುನೀತಗಳಲ್ಲಿ (ಅವರು ಅವುಗಳನ್ನು ಚತುರ್ದಶಪದಿಗಳು ಎಂದಿದ್ದಾರೆ) ಪೈಗಳಿಗೆ ಹೆಚ್ಚಿನ ಸಿದ್ಧಿ ಲಭಿಸಿದೆ. ಅವರ `ಗಿಳಿವಿಂಡು’ ಸಂಕಲನದಲ್ಲಿ ಹತ್ತು, `ನಂದಾದೀಪ’ದಲ್ಲಿ 12, ಮೂರನೆಯ ಸಂಕಲನ `ಹೃದಯರಂಗ’ದಲ್ಲಿ 24 ಸುನೀತಗಳಿವೆ.

ತುರೀಯ

ಮಳೆ ಮರಳೆ, ಇರುಳೊರಳೆ, ಇಳೆ ಗಾಳಿಗಾಡೆ,
ತಡೆದ ಪೊಯ್ಗೈಗೆ ಹಡಗೊಡದವಗೆ ತಗಲಿ
ದೊಡಕು ಹಲಿಗೆನೆ ಮಿಂಚಿ ಮೂಮೊಳದ ಜಗಲಿ-
ನಡೆದನಾಳ್ವಾರಲ್ಲಿ ಕಡೆದು ಮೆಯ್ಗೂಡೆ,

ಇದೊ ಮಿಂಚಿತದೊ ಕಂಡುದದೆ ಕುಳಿತರಲ್ಲಿ,
ಬರಲು ಪೂತತ್ತನಿಬ್ಬರು ಕುಳಿತರಲ್ಲಿ,
ಮರುಮಿಂಚೆ ಕಂಡವರನಯ್ದೆ ಪೆಯ್ಯಲ್ಲಿ,
ನಿತ್ತು ಮೂರಾಳ್ವಾರು ಹೊತ್ತು ಕಳೆವಾಗ,

ಕಾಣದಾರೊಬ್ಬನೊ ಡವಂದವರನೊತ್ತೆ
ಬಾರದ ತುರೀಯನಾರೀತನೆನುವನ್ನ,
ಕ್ಷಣಕೆ ಕಾರಂ ಕೊನೆಯ ಕ್ಷಣಿಕೆ ತುಸುವೆತ್ತೆ
ಕಂಡರೆರಡನೆಯ ಮೆಯ್ಗೊಂಡ ತಂತನ್ನ,

ಮನವರಿತರೊಡನೆ ನಾಲಕ್ನೆ ಕಾಲವೀತಂ
ಬಂದುದಿಳಿತಂದು ತಿರುವಂದಾದಿ ಗೀತಂ

(ತುರೀಯ= ನಾಲ್ಕನೆಯ ವ್ಯಕ್ತಿ, ಒರಳು = ಅರಚಾಡು, ಒಡಕು= ಮುರುಕು, ಕೆಡೆದು = ಮಲಗಿ, ಮೆಯ್ಗೂಡೆ= ಮೈಯ್ಯನ್ನು ಮುದುರಿಸಿಕೊಳ್ಳಲು, ಒಡವಂದು = ಅವರೊಡನೆ ಸೇರಿ, ಒತ್ತೆ = ಅವರನ್ನು ತಳ್ಳಲು, ಕಾರಂ= ಕತ್ತಲೆಯನ್ನು, ಕ್ಷಣಿಕೆ= ಮಿಂಚು, ಕಂಡರೆರಡನೆಯ= ಆ ಮೂವರಲ್ಲಿ ಪ್ರತಿಯೊಬ್ಬನು ಎರಡನೆಯ ಮೈಯ್ಯನ್ನು ತಾಳಿದ ತನ್ನನ್ನೇ ಕಂಡನು, ‘ನಾಲ್ಕನೆಯ ಕಾಲ’ ಎಂದರೆ ನಿತ್ಯತೆ, (eternity)ಪರಮಾತ್ಮ )

ಪೈಗಳ ಸಾನೆಟ್‌ಗಳಿಗೆ ಉದಾಹರಣೆಯಾಗಿ `ತುರೀಯ’ ಮತ್ತು `ಬೇಲೂರಿನ ಚೇಳು’ ಕವನಗಳನ್ನು ನೋಡಬಹುದು. ಇವುಗಳ ಸನ್ನಿವೇಶಗಳನ್ನು ಕವಿಯೇ ಸ್ಪಷ್ಟಪಡಿಸಿದ್ದಾರೆ. ಇವುಗಳಲ್ಲಿ `ಬೇಲೂರಿನ ಚೇಳು’ ಕವಿತೆಯನ್ನು ಡಿ.ವಿ.ಜಿ.ಯವರ ಅನ್ತಃಪುರ ಗೀತೆಯ ಜತೆ ಹೋಲಿಸಿ ನೋಡಬೇಕು.

ಗೋವಿಂದ ಪೈಗಳು ಇದೇ ಮದನಿಕೆಯ ವಿಗ್ರಹವನ್ನು ಕುರಿತು ‘ಬೇಲೂರಿನ ಚೇಳು’ ಎಂಬ ಕವಿತೆಯನ್ನು ಬರೆದಿದ್ದಾರೆ. ಮೊದಲು ಗೋವಿಂದ ಪೈಗಳ ಕವಿತೆಯನ್ನು ನೋಡೋಣ:

ಬೇಲೂರಿನ ಚೇಳು

ಅಂದಿನಿಂದೀ ಹರೆಯವೊಂದು ದಿನ ಹೆಚ್ಚಿಲ್ಲ
ಇನ್ನು ನಿಗುರಿಲ್ಲಂದು ಕೊಂಕಿಸಿದ ಭಂಗಿ;
ನೋಡುವನಿಬರಂ ನೋಡೆ ಬತ್ತಲೆಯ ಮುಚ್ಚಿಲ್ಲ –
ಹಿಡಿಗೆ ಮುಡಿಸಲೊ ನಿಂಗೆ? ನಾಚೆಯಾ ತಂಗಿ?
ನೋಡೆವೆನೆ ನೋಡಿಸುವೆ, ಬೇಡವೆನೆ ಬೇಡಿಸುವೆ,
ನುಡಿಸೇ ನೀ ನುಡಿಯೆ, ಕಣ್ಣಿಡಲಣಂ ಕಣಿಸೆ;
ಗೂಡು ಬೆಳಕಿನ ಶಲಭವೆನೆ ಮನವನಾಡಿಸುವೆ –
ಆದರೆತ್ನಿಸಿ ಮುಟ್ಟೆ ನೀನಣಂ ಘೃಣಿಸೆ!
ಒದರೆ ಸೀರೆಯ ಚೇಳ, ತೋರಬಾರದೆ ಬೆನ್ನ
ನನಿತು ದಿಗ್ಭ್ರಮೆಯೊ, ಮೆಯ್ಮರವೊ, ತಳಮಳವೊ?
ಏನಿರಲಿ, ಅಂತೆ ಇರು, ಜಗವ ತೃಷೆಯಿಸೆ ನಿನ್ನ
ಲಾವಣ್ಯ ನಿಧಿಯೋ, ಯೌವನದ ಮೃಗಜಳವೋ!
ನಿನ್ನ ಜಾಡಿಸಿದ ಕೊಂಡಿಯ ಚೇಳು ನೋಡ
ಕಾಂಬೆದೆಗೆ ಮುಳ್ಳೂರಿಕೊಳ್ಳುತಿದೆ ಸೇಡ!

ಇದೊಂದು ಸುನೀತ. ಇದರಲ್ಲಿ ಬಳಸಿದ ಕೆಲವು ಶಬ್ದಗಳಿಗೆ ಪೈಗಳೇ ಟಿಪ್ಪಣಿ ನೀಡಿದ್ದಾರೆ. ಲಾವಣ್ಯನಿಧಿ ಅಂದರೆ ಸೌಂದರ್ಯದ ಸಮುದ್ರ ಹಾಗೂ ಉಪ್ಪುನೀರಿನ ಕಡಲು (ಆದಕಾರಣ ತೃಷೆಯನು ನಿವಾರಿಸಲಾರದು) ಎಂಬ ಎರಡು ಅರ್ಥಗಳಿವೆಯೆನ್ನುವುದನ್ನು ಸೂಚಿಸಿದ್ದಾರೆ.

ಬೇಲೂರಿನ ಒಂದೇ ವಿಗ್ರಹದ ಬಗ್ಗೆ ಇಬ್ಬರು ಹಿರಿಯ ಕವಿಗಳು ಬರೆದ ಕವಿತೆಗಳು ಹೇಗೆ ಭಿನ್ನವಾಗಿವೆ ಎಂಬುದನ್ನು ಓದುಗರು ಗಮನಿಸಬೇಕೆನ್ನುವುದೇ ಇಲ್ಲಿನ ಆಶಯ. ಡಿ.ವಿ.ಜಿ. ಮತ್ತು ಗೋವಿಂದ ಪೈಗಳಿಬ್ಬರೂ ಕೀಟ್ಸ್ ಕವಿಯ ` Ode on a Grecian Urn ‘ ಕವಿತೆಯಿಂದ ಪ್ರಭಾವಿತರಾಗಿರಬಹುದು. `ನಿವೇದನೆ’ ಸಂಕಲನದ `ಬೇಲೂರಿನ ಶಿಲಾಬಾಲಿಕೆಯರು’ ಕವಿತೆಯಲ್ಲಿ ಡಿ.ವಿ.ಜಿ.ಯವರು –
ಶ್ರವಣಕೆ ಸಿಲುಕದ ಲಲಿತಾ
ರವಸುಖಮಂ ರಸನೆಗೊದವದಮೃತ ದ್ರವಮಂ
ಎವೆಯಿಕ್ಕದ ನಯನಗಳಿಂ
ಸವಿವುದು ನೀವೆಂಬ ಮಾಯಗಾತಿಯರಿವರಾರ್
– ಎಂದು ಶಿಲಾಬಾಲಿಕೆಯರನ್ನು ಕುರಿತು ಹೇಳುತ್ತಾರೆ. ಅವರು ಈ ಮದನಿಕೆಯರನ್ನು `ಸರಸ ಜೀವನ ಮಂತ್ರಗುರು’ ಗಳೆಂದು ಕರೆದು, ಸೌಂದರ್ಯವನ್ನು ಪರತತ್ವದ ಮಟ್ಟಕ್ಕೇರಿಸಿದ್ದಾರೆ.

ಡಿ.ವಿ.ಜಿ.ಯವರ –
ಸೌಂದರ್ಯಮೇ ವಿಶ್ವತತ್ವಮಾ ಪರತತ್ವ
ಭಾಸಮೇ ಸೌಂದರ್ಯಮೆನುತ ಸಾರಿ
ಎಂಬ ಸಾಲುಗಳು ಕೀಟ್ಸ್ ಕವಿಗೆ ಋಣಿಯಾಗಿವೆ (beauty is truth, and truth beauty) (`ಇಲ್ಲಿಯ ಒಂದೆರಡು ಸಾಲುಗಳು ಆ ಮಹಾಕವಿಯ ಪ್ರಸಾದವಾಗಿದೆ’ – ಡಿ.ವಿ.ಜಿ.) ಪ್ರಸ್ತುತಿ ಮದನಿಕೆ(ಚೇಳಿನ ಭಯದಿಂದ ಬಟ್ಟೆಯನ್ನು ಕೊಡವಿ ದಿಗಂಬರೆಯಾಗಿ ನಿಂತವಳು) `ನೀಲಾಂಬರೆ’ಯ ನಗ್ನ ಸೌಂದರ್ಯವನ್ನು ನೋಡಬೇಕೆನ್ನುವುದು ದೇವನಾದ ಕೇಶವನ ಇಚ್ಛೆ- ಡಿ.ವಿ.ಜಿ.ಯವರಿಗೆ. ಅವರ ಕವಿತೆ ಹೀಗಿದೆ:

ನೀಲಾಂಬರೆ

ಏನೀ ಭಯ ಭ್ರಾಂತಿಯೇ – ನೀಲಾಂಬರೆ |
ಏನಂಗ ವಿಭ್ರಾಂತಿಯೇ – ಅಶಾಂತಿಯೇ ||
ನೀಲಾಂಬರದ ನಿರಿ – ಯಾಲಯ ತನಗೆಂದು |
ಚೇಳಿಗಾರರುಹಿದರೇ – ಮನೋಹರೆ ||
ಹೇಮಾಂಗರಾಗಕೆ – ಶ್ಯಾಮಾಂಬರಚ್ಛವಿ |
ರಾಮಣೀಯಕವೆಂದು – ಭಾಮೆ ನೀಂ ಬಗೆದು ||
ಕ್ಷೌಮವ ಕೊಳ್ಳಲೀ – ಭೀಮೋತ್ಪಾತವಿದೇನೆ |
ಸೌಮ್ಯನಾಯಕೀ ವರ – ಸ್ವಾಮಿಯೇ ಗತಿಯಲ್ತೆ ||
ಬೆಚ್ಚಿಸಿ ನಿನ್ನನು – ನಿಶ್ಚೇಲಗೈದು ತ – |
ನ್ನಕ್ಷಿಗೆ ಸಿಂಗಾರ – ದೂಟವನುಣಿಸೆ ||
ವೃಶ್ಚಿಕ ಮಂತ್ರವ – ನುಚ್ಚರಿಸಿದನೇನೆ |
ಅಚ್ಚುಮೆಚ್ಚಿನ ನಿನ್ನ – ಮಾಯಾವಿ ಕೇಶವ ||
ಗೋವಿಂದ ಪೈಗಳು ಅಧ್ಯಾತ್ಮದ ಹಂಗಿಲ್ಲದೆ ಕೇವಲ ರಸಿಕರಾಗಿ ಈ ವಿಗ್ರಹವನ್ನು ವರ್ಣಿಸುವುದು ವಿಶೇಷ. ತಮ್ಮ ಗಾಂಭೀರ್ಯವನ್ನು ಕಾಯ್ದುಕೊಳ್ಳಲು ಶಿಲಾಬಾಲಿಕೆಯನ್ನು `ತಂಗಿ’ ಎಂದು ಕರೆದಿದ್ದಾರೆ. ಶಿಲೆಯಲ್ಲಿ ಮೂಡಿದ (ಅಥವಾ ಯಾವುದೇ) ಕಲೆಯ ಶಾಶ್ವತ ಸ್ವರೂಪವನ್ನು, ಅದು ಲೌಕಿಕದ ಬಳಕೆಗೆ ಒದಗದೆ ಅಂತರವನ್ನು ಕಾಯ್ದುಕೊಳ್ಳುವುದನ್ನು ಪ್ರಧಾನವಾಗಿ ತೋರಿಸುತ್ತಾರೆ, ಕೀಟ್ಸ್ ಕವಿ –
Heard melodies are sweet, but those unheard
Are sweeter, therefore, ye soft pipes play on
ಎನ್ನುತ್ತಾನೆ. ಇದನ್ನು ಡಿ.ವಿ.ಜಿ.ಯವರು `ಶ್ರವಣಕೆ ಸಿಲುಕದ ಲಲಿತಾರವಸುಖ’ `ರಸನೆಗೊದವದಮೃತದ್ರವ’ ಎಂದರೆ ಪೈಗಳು `ಲಾವಣ್ಯ ನಿಧಿ’ `ಮೃಗಜಳ’ ಎನ್ನುತ್ತಾರೆ.

ಗೋವಿಂದ ಪೈಗಳ `ಬೇಲೂರಿನ ಚೇಳು’ ಸರಸವೂ, ಅರ್ಥಪೂರ್ಣವೂ ಆಗಿ ಗಮನಸೆಳೆಯುತ್ತದೆ.

*****

ಗೋವಿಂದ ಪೈಗಳು 1900ರಿಂದಲೇ ಕವನಗಳನ್ನು ಬರೆಯುತ್ತಿದ್ದರು. ಅವುಗಳು 1930ರ ‘ಗಿಳಿವಿಂಡು’ ಸಂಕಲನದಲ್ಲಿ ಸೇರಿದ್ದವು. 1927ರಲ್ಲಿ ಪೈಗಳ ಪತ್ನಿ ಕೃಷ್ಣಾಬಾಯಿಯವರು ತೀರಿಕೊಂಡರು. ಪತ್ನಿಯ ನೆನಪಿಗೆ ಭಾಷ್ಪಾಂಜಲಿಯಾಗಿ, ವಿಧಾತನಿಗೆ ಶ್ರದ್ಧಾಂಜಲಿಯಾಗಿ ಅವರು ಬರೆದಿರಿಸಿದ ಕವನಗಳು ಮುಂದೆ ‘ನಂದಾದೀಪ’ (1968) ಎಂಬ ಸಂಕಲನದಲ್ಲಿ ಸೇರಿವೆ. ಈ ಕೃತಿಯನ್ನು ‘ಕನ್ನಡದ ಗೀತಾಂಜಲಿ’ ಎಂದು ವಿದ್ವಾಂಸ ಕು.ಶಿ. ಹರಿದಾಸ ಭಟ್ಟರು ಕರೆದಿದ್ದಾರೆ.

`ನಂದಾದೀಪ’ ಸಂಕಲನದ ಕವನಗಳ ಹಿನ್ನೆಲೆ ಕವಿಯ ಮಾತಿನಲ್ಲಿ : “ನನ್ನ ಸಹಧರ್ಮಿಣಿಯ ನೆನಪಿಗೆ ಭಾಷ್ಪಾಂಜಲಿಯಾಗಿ, ನಮ್ಮನ್ನು ಅಗಲಿಸಿದ ವಿಧಾತನಿಗೆ ಶ್ರದ್ಧಾಂಜಲಿಯಾಗಿ ಕೆಲವು ಕವಿತೆಗಳನ್ನು ರಚಿಸಬೇಕೆಂದು ಅದೇ ಮೇ ತಿಂಗಳಲ್ಲಿ ಬರೆಯತೊಡಗಿದೆ. ಅಂದು ಅವಳ ಅಗಲುವಿಕೆಯಿಂದ ನನ್ನಲ್ಲಿ ಹೊತ್ತಿ ಮುಂದೆ ನಾನು ಇದ್ದಿರುವ ತನಕ ನಂದದ ಶೋಕಾನಲದಿಂದ ದೇವರ ಮುಂದೆ ಹಚ್ಚಿರಿಸಿದ ದೀಪ ಎಂಬ ಅರ್ಥದಲ್ಲಿ ಆ ಕವಿತೆಗಳನ್ನು `ನಂದಾದೀಪ’ ಎಂದೆ.” (1927ರಲ್ಲಿ ಪತ್ನಿಯನ್ನು ಕಳೆದುಕೊಂಡ ಪೈಗಳು ಮತ್ತೆ ಮದುವೆಯಾಗದೆ ಅವರನ್ನು ದಿನವೂ ಸ್ಮರಿಸುತ್ತ ಶ್ರದ್ಧಾಂಜಲಿ ಅರ್ಪಿಸುತ್ತಿದ್ದರು.) ನಂದಾದೀಪದಲ್ಲಿ ವಿರಹ ವೇದನೆ ಭಗವತ್ ಚಿಂತನೆಯಾಗಿ ಪಾಕಗೊಂಡಿದೆ ಎಂದು ಕಯ್ಯಾರರು ಸರಿಯಾಗಿ ಗುರುತಿಸಿದ್ದಾರೆ.

ಕಯ್ಯಾರ ಕಿಞ್ಞಣ್ಣ ರೈಗಳಿಗೆ ಅವರು ಆ ಬಗ್ಗೆ ಹೀಗೆ ಹೇಳಿದ್ದರು : “ಕಾವ್ಯದ ಗತಿ ತೀರಾ ಮಾರ್ದವ, ನವರಸಪೂರ್ಣ; ಅದಕ್ಕೆ ಕೈ ಹಚ್ಚಿದಾಗ ಮತ್ತೆ ರಸಲೋಕದ ಗಾರ್ಹಸ್ಥ್ಯ ಜೀವನ, ಲೌಕಿಕ ಸುಖದ ಸವಿ ಮನಸ್ಸಿನಲ್ಲಿ ಮರುಕಳಿಸಲು ಆಸ್ಪದವಾಗುತ್ತದೆ. ಅದನ್ನು ಮರೆತು ಬೇರೆ ಕಡೆಗೆ ನನ್ನ ಗಮನ ಹರಿಸಬೇಕಾಗುತ್ತದೆ; ಸಂಶೋಧನೆ ಕೈಗೆತ್ತಿಕೊಂಡೆ; ಸಂಶೋಧನೆಯೆಂದರೆ ಸತ್ಯವನ್ನು ಕಂಡುಹುಡುಕುವ ಕೆಲಸ; ಸ್ವಲ್ಪ ಸತ್ಯ, ಅರ್ಧಸತ್ಯ ತಿಳಿದರೆ ಸಾಲದು; ಪೂರ್ಣಸತ್ಯದ ಅರಿವಾಗಬೇಕು. ಆ ಪೂರ್ಣಸತ್ಯವನ್ನು ತಿಳಿಯಲು ಏಕಾಗ್ರತೆ ಮೈಗೂಡಿಸಿಕೊಳ್ಳಬೇಕಾಗುತ್ತದೆ. ಆಗ ಮನಸ್ಸಿನ ಮಾರ್ದವ ನವರಸಗಳ ಆವಿಷ್ಕಾರ ಕಡಿಮೆಯಾಗುತ್ತದೆ. ಗಾರ್ಹಸ್ಥ್ಯದ ಸವಿನೆನಹು ಮಾಸಿ ಮನಸ್ಸು ಸಂಶೋಧನೆಯ ಏಕಾಗ್ರತೆಯಲ್ಲಿ ನೆಲೆ ನಿಲ್ಲುತ್ತದೆ. ಅದಕ್ಕಾಗಿ ನಾನು ಸಂಶೋಧನೆಗೆ ಶರಣುಹೋದೆ.”

ಈ ಸಂಕಲನದ ಒಂದು ಕವಿತೆ ಇಲ್ಲಿದೆ:

ಈರೆಳೆಯ ಕಿನ್ನರಿಯ

ಈರೆಳೆಯ ಕಿನ್ನರಿಯ
ನಿದನೆತ್ತಿ ನೀನೆರೆಯ
ನುಡಿಸುವಂದಂದಿಗೆನ್ನ
ಸಿಹಿವೋದು
ದಕಟ! ಜತೆಯೆಳೆಯದನ್ನ
ಸಂದಿಸದೆ,
ಇದನೆ ಮಿಡಿವೇಕೆ ಮುನ್ನ?

ಈರೆಳೆಯಿನಳವಳಿಸ
ಬಲ್ಲ ದನಿ ತಳಮಳಿಸ
ದಿಹುದೆ ಓರೆಳೆಗೆ ಸೆಳೆಯೆ?
ಅಮ್ಮುವುದೆ
ಇಮ್ಮಡಿಯ ನರಕೆ ತಳೆಯೆ?
ಮೇಣೊಂದೆ
ಕರೆಯಿಂದ ಹರಿವ ಹೊಳೆಯೆ?

ಇಂತೊಂದೆ ತಂತಿಯಿಂ
ಕಿರಿಚು ಅಶಾಂತಿಯಿಂ
ವಿಷಯಲಾಲಸೆಯಲ್ಲದೆ,
ಸುಸ್ವರಂ
ಮಿಸುಕಲಿದರಿಂ ಬಲ್ಲುದೆ?
ನಿನ್ನ ನಲಿ
ಗಾನಕಿನ್ನಿದು ಸಲ್ವುದೆ?

ಅಂತಾದೊಡೀ ಸರಿಯ
ನಿನಿಸು ತಳುವದೆ ತರಿಯ!
ಒಂದಿಸಿದನದರೊಂದಿಗೆ
ಕ್ರಂದಿಪುದು
ಸಂದುದರ ಮರುಸಂದಿಗೆ
ಬಂಧನವ
ಬಾರಿಸೆರೆಯಾ ಬಂದಿಗೆ!

ಅಲ್ಲದೊಡೆ, ಈ ತಂತಿ
ನೀಚಗತಿಯಿಂ ಕಂತಿ
ಕಿರಿಸ್ವರಕೆ ಕೊಸರದಂತೆ
ಸಂಯಮದ ಏಕತಾನತೆಗಿದಂ ತೇ
ರೈಸೊಡೆಯ-
ನೀ ಎಂದೆ ನಿನದಿಪಂತೆ!

(ಅರಕೆ= ಅರೆವಾಸಿ, ಅರ್ಧ, ಮರುಸಂದಿಗೆ= ಮರಳಿ ಸೇರುವಿಕೆ)

ಬದುಕಿನಲ್ಲಿ ಆಧ್ಯಾತ್ಮದ ಆದೇಶವನ್ನು ಭಕ್ತಿಯಿಂದ ಕೇಳಿಸಿಕೊಳ್ಳುವ ಹಂಬಲ ಗೋವಿಂದ ಪೈಗಳ ಬದುಕಿನಲ್ಲೆಂತೊ ಕಾವ್ಯದಲ್ಲಿಯೂ ಅಂತೆಯೇ ಪಡಿಮೂಡಿರುವುದಕ್ಕೆ ‘ಕೇಳಿಸದ ಕರೆ’ (‘ಗಿಳಿವಿಂಡು’ ಸಂಕಲನದ ಕವಿತೆ) ಮತ್ತು ‘ಈರೆಳೆಯ ಕಿನ್ನರಿಯ’ ಕವನಗಳನ್ನು ಉದಾಹರಣೆಯಾಗಿ ನೋಡಬಹುದು.

ಕೇಳಿಸದ ಕರೆ (ಹಾಡು)

ಗಿಳಿಬಾಗಿಲ ತೆರೆಯೆಯಾ ? ಹೂ
ದನಿಯಿನೆನ್ನ ಕರೆಯೆಯಾ ?
ಬದಲು ಬಿದುವ ತೋರೆಯಾ ತಾ
ರಾಕಟಾಕ್ಷ ಬೀರೆಯಾ ?

ಹಣತೆಹುಳವ ನಂದಿಸಿ, ಬಾ
ವಲಿಯ ತಕ್ಕಡಿಯೊಂದಿಸಿ,
ಇರುಳ ಮಳಿಗೆ ಮುಗಿಯಿತು, ನೈ
ದಿಲೆಯ ಬೀಗ ಬಿಗಿಯಿತು.

ಪಡುಹಾಸಂಗಿಯೆಡೆಯ
ಲಂಗಾತ ಬಿದ್ದ ಕವಡೆಯ
ಬಗೆವಳೆ ಉಷೆ ದಾಯಮಂ
ನಿನಗುಲಿಸಲೆಲರ ಗೇಯಮಂ ?

ನಿನಗೆ ತೆತ್ತು ನೆನಸನು, ನಿ
ನಿನ್ನಿಂದ ಕೊಳಲು ಕನಸನು,
ನಿನ್ನ ಕಣ್ಣ ಸಂತೆಗೆ ರವಿ
ಬಂದನಿದೋ ಕದಂ ತೆಗೆ !

ನಲಿನಿಯ ನನೆಮುನಿಸಿನ ಕೋ
ಗಿಲೆಯ ಕೊರಳ ಕನಸಿನ,
ಮುಗಿಲಿನ ಮಿರುವರಿಕೆಯ ಸ
ಲ್ಲುತಿದೆ ನೋಡ ಹರಕೆಯ !

ಪತಂಗದಂಚೆಗರಿಯಲಿ, ವಿ
ಹಂಗದೆಲರ ತರಿಯಲಿ,
ಅಲರ ಪರಿಸೆಯಲಿ ‘ನಿನ್ನ ನಾ
ಪಾರ್ವೆನೊಸಗೆಯನುದಿನ !

ನೆನೆವ ಮೊಗ್ಗೆಯಲಿ ನಿನ್ನ
ಸೂವರಿಪಾಸೆಯನೆನ್ನ
ಸೆರೆಬಿಡಿಸೆಯ ನೆಟ್ಟಗೆನ್ನ
ಕಾವ ಕಣ್ಣಿನ ಹುಟ್ಟಿಗೆ ?

ಎದುರು ಕನ್ನಡಿಯಿಲ್ಲದೆ
ಕಣ್ಣು ಕಣ್ಣನು ಬಲ್ಲುದೆ ?
ಹೆರದೆ ಬಸಿರ ಮಗುವನು ತಾ
ಯರಿಯಳದರ ಮೊಗವನು !

ಕಣ್ಣ ನಗೆಯ ಸೆಲೆಯೊಲು, ಬಿರಿ
ವೂಗಳ ಕಾದಲೆಯೊಲು,
ಉಲಿಸಾಲದ ಬಾಸೆಯಂ ಕೇ
ಳಿಸಿ ತುಂಬೆನ್ನಾಸೆಯಂ !

ಬದುಕು ಗಾಳಿಪಟವೆನ್ನ ಮುಂ
ಬೆಳೆಯದೆಳೆಯನೆಳೆವನ್ನ,
ಕಡಿಯೆ – ಕತ್ತಲ ಕಾಡಿಗೊ ? ನೀ
ನಿರುವ ನೇಸರ ನಾಡಿಗೊ ?

(ಗಿಳಿಬಾಗಿಲು= ಚಿಕ್ಕ ಕಿಟಕಿ, (mostly over the head of the sleeper to see if it is dawn), ಹಾಸಂಗಿ= ಪಗಡೆಯಾಟದ ಹಾಸು, ಮಿರುವರಿಕೆ= ಮಿರ್ರನೆ ಓಡುವಿಕೆ, ಪತಂಗದ ಅಂಚೆ= ಚಿಟ್ಟೆಯ ಟಪಾಲು, ತರಿ= ದೋಣಿ, ಸೂವರಿಪ= ಸೂ ಎಂದರೆ ಮೊರೆವ, ಹುಟ್ಟಿ= ಜೇನ ಹುಟ್ಟಿ, ಕಅದಲೆ= ಕಾದಲ್ಮೆ, ಪ್ರೀತಿ, ಎಳೆ= ನೂಲು)

ಪೈಗಳು ಮತ್ತೆ ಕವನ ರಚನೆಗೆ ತೊಡಗಿದ್ದು ಕವಿ ಜಿ.ಆರ್. ಪಾಂಡೇಶ್ವರ ಅವರ ಪ್ರೀತಿಯ ಒತ್ತಾಯದಿಂದ. ಪಾಂಡೇಶ್ವರರು ತಮ್ಮ `ಚೆಂಗಲವೆ’ (1940) ಸಂಕಲನಕ್ಕೆ ಮುನ್ನುಡಿ ಬರೆಯಲು ಪೈಗಳಿಗೆ ಪ್ರೂಫ್ ಪ್ರತಿಯನ್ನು ಕೊಟ್ಟಿದ್ದರು. ಅದರಲ್ಲಿರುವ `ಪಂಡಿತವಕ್ಕಿ’ ಎಂಬ ಕವನದ ಅಡಿಟಿಪ್ಪಣಿಯಲ್ಲಿ ಅದು ಗೋವಿಂದ ಪೈಗಳನ್ನು ಕುರಿತು ಬರೆದುದು ಎಂದಿತ್ತು. ಕವನದ ಕೆಲವು ಸಾಲುಗಳಿವು :

ರನ್ನ ಪಂಪಾದಿಗಳ ಕಾವ್ಯ ಕಾನನದ
ಉನ್ನತೋನ್ನತ ವೃಕ್ಷರಾಜ ಸಂಪದದ
ನಿನ್ನೆಗಳ ನೆನೆನೆನೆದು ಮರುಳ ಮೌನದಲಿ
ತನ್ನ ತಾನರಿಯದೆಯೆ ಶುಷ್ಕ ವ್ಯಾಜ್ಯದಲಿ
ಹಾಡುವುದ ಮರೆತಿಂತು ಕುಳಿತೆಯೋ ಹಕ್ಕಿ?
ಹಾಡಲಾರದೆ ನಾವು ಅಳುತಿಹೆವು ಬಿಕ್ಕಿ!

ಪೈಗಳು ಅಡಿಟಿಪ್ಪಣಿಯನ್ನು ಹೊಡೆದು ಹಾಕಿದರು. ಆದರೆ ಪಾಂಡೇಶ್ವರರ ಆಗ್ರಹದಂತೆ ಮತ್ತೆ ಕವನಗಳನ್ನು ಬರೆಯತೊಡಗಿದರು. ಪೈಗಳ ಪ್ರಸಿದ್ಧ ಕಾವ್ಯಕೃತಿ `ಗೊಲ್ಗೊಥಾ’ ಕೂಡ ಒಂದು ರೀತಿಯಲ್ಲಿ ಪಾಂಡೇಶ್ವರರಿಗೆ ಋಣಿಯಾಗಿದೆ. ಪಾಂಡೇಶ್ವರರು ಮಂಜೇಶ್ವರಕ್ಕೆ ಹೋಗಿ ಪೈಗಳಿಗೆ ತಮ್ಮ `ಕ್ರಿಸ್ತಜನ್ಮ’ ಎಂಬ ಕವನವನ್ನು ಓದಿ ಹೇಳಿದ್ದರು. ಅದನ್ನು ಕೇಳಿ ಪೈಗಳಿಗೆ ಕ್ರಿಸ್ತನ ಕೊನೆಯ ದಿನಗಳನ್ನು ಕುರಿತು ಕಾವ್ಯ ರಚಿಸಬೇಕೆಂದು ಇಚ್ಛೆಯುಂಟಾಯಿತು. ಕೆಲವೇ ದಿನಗಳಲ್ಲಿ `ಗೊಲ್ಗೊಥಾ’ (1931) ರಚಿತವಾಯಿತು. ಇದರಲ್ಲಿ 377 ಸಾಲುಗಳಿದ್ದು ಸರಳ ರಗಳೆಯಲ್ಲಿದೆ. (ಪೈಗಳು `ಝಂಪೆ ರಗಳೆ’ ಎಂದಿದ್ದಾರೆ). ಯೇಸುವಿನ ಕೊನೆಯ ದಿನದ ಚಿತ್ರಣವನ್ನು ಕ್ರೈಸ್ತ ತತ್ವಜ್ಞಾನಕ್ಕೂ, ಕಾವ್ಯಧರ್ಮಕ್ಕೂ ಅಪಚಾರವಾಗದಂತೆ ಹಾಗೂ ರಸಪ್ರತೀತಿಯುಂಟಾಗುವಂತೆ ಈ ಕಾವ್ಯ ಕೊಡುತ್ತದೆ. ಮಹಾಕಾವ್ಯದ ಗಾಂಭೀರ್ಯ ಮತ್ತು ಉದಾತ್ತ ರಸಭಾವಗಳನ್ನು ಈ ಖಂಡಕಾವ್ಯದಲ್ಲಿ ಕಾಣಬಹುದು.

ಭಾವಖಚಿತತೆಗಾಗಿ ವಿವರಗಳನ್ನು, ಭಾವ ಪುನರಾವರ್ತನೆ ಹಾಗೂ ಉಪಮೆಗಳನ್ನು ಒದಗಿಸುವಲ್ಲಿ ಪೈಗಳು ಯಶಸ್ವಿಯಾಗಿದ್ದಾರೆ. ಉದಾಹರಣೆಗೆ ತನಗಾಗಿ ದುಃಖಿಸುತ್ತಿರುವ ಹೆಂಗಳೆಯರನ್ನು ಕಂಡು ಯೇಸು ಹೇಳುವ ಮಾತುಗಳಿವು:

ನನಗೆ ಗೋಳಾಡದಿರಿ; ನಿಮಗಾಗಿ ನಿಮ್ಮ ಮ
ಕ್ಕಳಿಗಾಗಿ ಗೋಳಾಡಿ! ಇದೋ ಬರುತಲಿವೆ ದಿನಂ
ಧನ್ಯರೆನಿತಕಟ ಬಂಜೆಯರು! ಹೆರದಾ ಬಸಿರ್ಗ
ಳೆನಿತು ಧನ್ಯವೊ | ಧನ್ಯವೆನಿತೊ ಹಾಲೂಡಿಸದ
ಮೊಲೆಗಳೆಂಬುವ ದಿನಂ ಬರುತಲಿವೆ | ಅಂದಿಗೆಲೆ
ಬೆಟ್ಟಗಳೆ! ನಮ್ಮ ಮೇಲುರುಳಿರೆಲೆ ಗುಡ್ಡಗಳೆ!

ಯೇಸುವನ್ನು ಶಿಲುಬೆಗೇರಿಸಿದಾಗ –

“.. … … ಹದ್ದು ಬಿಗಿ
ವಿಡಿದ ಲಾವಿಗೆಯಂತೆ, ಪಡುವಣದಿ ಬಿಳಿಯ ಬಿದಿ
ಗೆಯ ತಿಂಗಳಂತೆ, ಬಿಲ್ಲಿಗೆ ತೊಟ್ಟ ಸರಳಂತೆ,
ಮರಣ ವೃಕ್ಷದೊಳಮೃತ ಫಲದಂತೆ ತೂಗುತಿರೆ,
ತನ್ನ ಬೇನೆಯನಣಂ ಗಣಿಸದವನುಸುರಿದಂ –
ನರದೇಹವೆತ್ತವನಿಗಾ ತನುವ ಗುಣಧರ್ಮ
ವಹಬೇನೆ ಇಲ್ಲದಿಹುದೆಂತು? ತಾನಾರ ತನು
ಮನವನಿನಿಸಾದೊಡಂ ನೋಯಿಸಿಲ್ಲೆಂದು ಸಾ
ವಿರ ಚೇಳ್ಗಳೊಮ್ಮಿಗಕಟಾ ಕಡಿದ ಯಾತನೆಯ
ಸಿಲುಬೆಯಳಲುರಿಯ ತಣ್ಣನೆ ಕಳೆದು, ತಾಯ ವೇಗ
ನೋಡೆ ಮಗು ಬೆಸಲಳನೋತು ಸೈರಿಸುವಂತೆ,
ಚೂಣಿಯ ಭಟಂ ಗಾಯದಳಲ ಲೆಕ್ಕಿಸದೆ ಮುಂ
ಗಾದಾಡಿ ಮಡಿದು ಜಯವಡುವಂತೆ, ನರನರಂ
ಗಳಲಿ ಕುದಿಕುದಿವ ವೇದನೆ ಸೋಸಿ, ತನ್ನ ತೊರೆ
ದರ್ಭಕರ ಹಂಬಲಿಸುವ ಮುಮೂರ್ಷು ತಾಯಂತೆ,
ತನ್ನ ಕಡಿವವರ್ಗೆ ತಣ್ಣೆಳಲನೀವ ಮರದಂತೆ,
ತನ್ನಳಲನವರ ಹಂಬಲದಿ ಮರೆತು ಸುರಿದಂ,
`ಕ್ಷಮಿಸಿವರನೆಲೆ ತಂದೆ ! ತಾವೇನನೆಸಗಿದಪೆ
ವೆಂದರಿಯರಿವರು,’…………..

ಮಹಾತ್ಮರ ಕೊನೆಯ ದಿನಗಳು ಪೈಗಳ ಕವಿಸಂವೇದನೆಯನ್ನು ಹೆಚ್ಚಾಗಿ ಪ್ರೇರೇಪಿಸಿವೆ. `ವೈಶಾಖಿ’ ಗೌತಮ ಬುದ್ಧನ ಕೊನೆಗಾಲದ ಚಿತ್ರಣ. ಶ್ರೀಕೃಷ್ಣ (‘ಪ್ರಭಾಸʼ), ಗಾಂಧೀಜಿ (‘ದೇಹಲಿ: ಮಹಾತ್ಮನ ಕಡೆಯ ದಿನʼ) ಇವರ ಕೊನೆಯ ದಿನಗಳೂ ಅವರಿಗೆ ಕಾವ್ಯ ಪ್ರೇರಣೆಯನ್ನು ಒದಗಿಸಿವೆ. ದೂರ ದೇಶದಲ್ಲಿ ನಡೆದ ಘಟನೆಯೊಂದರ ವರದಿ ಕೂಡ ಅವರಿಗೆ ಒಂದು ಅನುಭವವಾಗಿ ಕವನವಾಗಿ ಸೃಷ್ಟಿಗೊಳ್ಳುತ್ತಿತ್ತು. ಕರುಣೆ ಮತ್ತು ಭಕ್ತಿ ಅವರ ಕಾವ್ಯದ ಸ್ಥಾಯೀ ಭಾವಗಳು. ಕಷ್ಟದಲ್ಲಿರುವವರ ಬಗ್ಗೆ ಅನುಕಂಪ, ದುಃಖಾರ್ತರ ಬಗ್ಗೆ ಸಹಾನುಭೂತಿ ಇವೆಲ್ಲ ಅವರಿಂದ ಕವನಗಳನ್ನು ಬರೆಸಿವೆ. ಅವರ ಸಣ್ಣ ದೊಡ್ಡ ಕಥನ ಕವನಗಳಲ್ಲಿ ಈ ಭಾವ ಪೋಷಣೆಯೇ ನಡೆದಿದೆ.

ಸ್ವತಃ ಕಾವ್ಯಮಾರ್ಗದಲ್ಲಿ ಆನೆಯಂತೆ (ಮೇಕೆಯಂತಲ್ಲ) ನಡೆದ ಪೈಗಳು ಪ್ರಾಸತ್ಯಾಗ ಮಾಡಿದುದು, ಪಾಶ್ಚಾತ್ಯ ಛಂದೋರೂಪ – ವಸ್ತುಗಳನ್ನು ಕನ್ನಡಕ್ಕೆ ತಂದುದು ಹೊಸಗನ್ನಡ ಕಾವ್ಯದ ಬೆಳವಣಿಗೆಗೆ ಬಹಳಷ್ಟು ಕೊಡುಗೆ ನೀಡಿತು.
ಪಂಜೆ ಮಂಗೇಶರಾಯರು ಮತ್ತು ಗೋವಿಂದ ಪೈಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಕಾವ್ಯದ ದಾರಿಯನ್ನು ಈ ರೀತಿ ತೆರೆದರೆ ಮುಳಿಯ ತಿಮ್ಮಪ್ಪಯ್ಯನವರು ಮತ್ತು ನಂತರ ಕಡೆಂಗೋಡ್ಲು ಶಂಕರ ಭಟ್ಟರು ಹೊಸಗನ್ನಡ ಕಾವ್ಯಕ್ಕೆ ಹೆಚ್ಚಿನ ಸ್ವತ್ವವನ್ನು ನೀಡುವ ಸಾಧನೆ ನಡೆಸಿದರು. ಅವರ ಸಾಧನೆಯನ್ನು ಮುಂದೆ ನೋಡಬಹುದು.

*****

ಗೋವಿಂದ ಪೈಗಳ ಕೃತಿಗಳು: ಕವನ ಸಂಕಲನಗಳು – ಗಿಳಿವಿಂಡು (1930), ನಂದಾದೀಪ (1968), ಹೃದಯರಂಗ (1969). ಖಂಡ ಕಾವ್ಯಗಳು – ಗೊಲ್ಗೊಥಾ (1931), ವೈಶಾಖಿ (1947), ನಾಟಕಗಳು – ಹೆಬ್ಬೆರಳು (1946). ಚಿತ್ರಭಾನು ಅಥವಾ 1942 (1962). ಗದ್ಯ – ಭಗವಾನ್ ಬುದ್ಧ (1954), ಶ್ರೀಕೃಷ್ಣ ಚರಿತ್ರೆ (1962 – ಅನುವಾದ), ಮೂರು ಉಪನ್ಯಾಸಗಳು (1940).
ಉಡುಪಿಯ ಗೋವಿಂದ ಪೈ ಸಂಶೋಧನ ಕೇಂದ್ರದವರು ಪೈಗಳ ವಿಚಾರ ಸಾಹಿತ್ಯದ ಬೃಹತ್ ಸಂಪುಟವಾದ ‘ಗೋವಿಂದ ಪೈ ಸಂಶೋಧನ ಸಂಪುಟ’ (1995)ವನ್ನು ಪ್ರಕಟಿಸಿದ್ದಾರೆ. (ಪ್ರಧಾನ ಸಂಪಾದಕರು: ಪ್ರೊ. ಕು.ಶಿ. ಹರಿದಾಸ ಭಟ್ಟ. ಸಂಪಾದಕರು : ಹೆರಂಜೆ ಕೃಷ್ಣ ಭಟ್ಟ ಮತ್ತು ಮುರಳೀಧರ ಉಪಾಧ್ಯ ಹಿರಿಯಡಕ.). ಇದು ಡೆಮಿ 1/4 ಗಾತ್ರದ (ಈಗ ಮುದ್ರಣವಾಗುತ್ತಿರುವ ಬಹುತೇಕ ಪುಸ್ತಕಗಳ ಗಾತ್ರಕ್ಕಿಂತ ಎರಡು ಪಟ್ಟು ಗಾತ್ರದ ಕಾಗದವನ್ನು ಬಳಸಿದ) 1400 ಪುಟಗಳ ಬೃಹತ್ ಗ್ರಂಥ. ಇದರಲ್ಲಿರುವ ವಿಷಯ ವಿಸ್ತಾರವನ್ನು ಗಮನಿಸಲಷ್ಟೆ ಇದರ ಪರಿವಿಡಿಯನ್ನು ಇಲ್ಲಿ ಕೊಡಲಾಗಿದೆ.

ಗೋವಿಂದ ಪೈಗಳ ಇಂಗ್ಲಿಷ್ ಲೇಖನಗಳು ‘ಇಂಡಿಯಾನಾ’ ಎಂಬ ಇನ್ನೊಂದು ಬೃಹತ್ ಗ್ರಂಥದಲ್ಲಿ ಸಂಕಲಿತವಾಗಿವೆ. ಸಂಪಾದಕರು: ಮಂಜೇಶ್ವರ ಮುಕುಂದ ಪ್ರಭು ಮತ್ತು ಪ್ರೊ. ಹೆರಂಜೆ ಕೃಷ್ಣ ಭಟ್ ಅವರು. ಗೋವಿಂದ ಪೈಗಳ ಸಮಗ್ರ ಕಾವ್ಯವನ್ನು ಮತ್ತು ಸಮಗ್ರ ನಾಟಕಗಳನ್ನು ಕಾವ್ಯಾಲಯ ಪ್ರಕಾಶಕರು, ಮೈಸೂರು ಮತ್ತು ಉಡುಪಿಯಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದವರು ಜಂಟಿಯಾಗಿ ಪ್ರಕಟಿಸಿದ್ದಾರೆ. ಇವುಗಳನ್ನು ಸಂಪಾದಿಸಿಕೊಟ್ಟವರು: ಶಿವಾಜಿ ಜೋಯಿಸ್.
(ಟಿಪ್ಪಣಿ: ಈ ಲೇಖನಮಾಲೆ ನವೋದಯದ ಹಿರಿಯರ ಕಾವ್ಯದ ಪರಿಚಯವಷ್ಟೇ ಆಗಿದೆ. ಅವರ ಸಮಗ್ರ ಸಾಧನೆಗಳ ಪರಿಚಯವನ್ನು ಮಾಡಿಕೊಡುವ ಲೇಖನಮಾಲೆ ಇದಲ್ಲ. ಇಲ್ಲಿ ಪೈಗಳಂತಹ ಪ್ರಾತಃಸ್ಮರಣೀಯರ ಸಾಧನೆಯನ್ನು ಹಿಮಾಲಯದ ಚಿತ್ರ ತೋರಿಸಿದಂತೆ ತೋರಿಸಬಹುದಷ್ಟೆ. ಸಾಹಿತಿಗಳ ಸಮಗ್ರ ಸಾಧನೆಯ ಒಂದು ಕಲ್ಪನೆ ಇಲ್ಲದಿದ್ದರೆ ಅವರ ಕವಿತೆಗಳನ್ನಷ್ಟೇ ನೋಡಿ ಅವರ ಕುರಿತಾಗಿ ಒಂದು ಅಭಿಪ್ರಾಯವನ್ನು ತಾಳುವಂತಾಗಬಾರದು ಎನ್ನುವ ಕಾರಣಕ್ಕೆ ಕವಿಗಳ ಬೇರೆ ಬರವಣಿಗೆಯನ್ನು ಉಲ್ಲೇಖಿಸಲು ಮಾತ್ರ ಸಾಧ್ಯವಾಗಿದೆ.)
(ಈ ಬರಹದ ಜತೆಗೆ ಬಳಸಿಕೊಂಡಿರುವ ‘ಕನ್ನಡಿಗರ ತಾಯಿ’, ‘ಹೊಲೆಯನು ಯಾರು?’, `ಕೇಳಿಸದ ಕರೆ’, `ಈರೆಳೆಯ ಕಿನ್ನರಿಯ’, `ಬೇಲೂರಿನ ಚೇಳು’ ಮತ್ತು `ತುರೀಯ’ ಕವಿತೆಗಳನ್ನು ಪ್ರಕಟಿಸಲು ಗೋವಿಂದ ಪೈ ಅವರ ಬರಹಗಳ ಹಕ್ಕುದಾರರಾದ ಮೈಸೂರಿನ ಕಾವ್ಯಾಲಯ ಪ್ರಕಾಶಕರು ಅನುಮತಿ ನೀಡಿದ್ದಾರೆ. ಅವರಿಗೆ ಕೃತಜ್ಞತೆಗಳು)