‘ನಾತಿಚರಾಮಿ’ ಗೆ ಬರೆಯುವಾಗ ಸಹ ಸುರೇಶನ ಪಾತ್ರದಲ್ಲಿ ವಿಜಯ್ ಇರಬಹುದು ಎನ್ನುವ ಕಲ್ಪನೆ ನನಗಿರಲಿಲ್ಲ. ನಂತರ ಆ ಪಾತ್ರವನ್ನು ವಿಜಯ್ ನಿರ್ವಹಿಸುವರು ಎಂದಾಗ ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನ್ನಲ್ಲಿ ಸ್ವಲ್ಪ ಅನುಮಾನವೇ ಇತ್ತು. ಏಕೆಂದರೆ ವಿಜಯ್‌ರನ್ನು ಸಾಫ್ಟ್ ಸಾಫ್ಟ್ ಪಾತ್ರಗಳಲ್ಲಿ ಕಲ್ಪಿಸಿಕೊಂಡಷ್ಟು ಸುಲಭವಾಗಿ ಗ್ರೇ ಶೇಡ್ ಇರುವ ಸುರೇಶನ ಪಾತ್ರದಲ್ಲಿ ಕಲ್ಪಿಸಿಕೊಳ್ಳುವುದು ನನಗೆ ಕಷ್ಟವಾಗುತ್ತಿತ್ತು. ಆದರೆ ಚಿತ್ರದ ಮೊದಲ ಪ್ರತಿ ನೋಡುವಾಗ ಆ ಪಾತ್ರದ ಎಲ್ಲಾ ಸಂಕೀರ್ಣತೆಯನ್ನೂ ಒಳಗಿಳಿಸಿಕೊಂಡು, ಸುರೇಶನನ್ನು ವಿಜಯ್ ಮಾನವೀಯಗೊಳಿಸಿದ್ದ ಪರಿ ನನ್ನಲ್ಲಿ ಮೆಚ್ಚುಗೆ ಮೂಡಿಸಿತ್ತು.
ಸಂಚಾರಿ ವಿಜಯ್ ನೆನಪಿನಲ್ಲಿ ಸಂಧ್ಯಾರಾಣಿ ಬರಹ
ವಿಜಯ್ ಎನ್ನುವ ಈ ಸಂಚಾರಿ
ಕಲಾಕ್ಷೇತ್ರದ ಕಾಫಿ ಟೇಬಲಿನಾಚೆ
ರಂಗಶಂಕರದ ರಂಗಮಂಚದ ಮೇಲೆ
ಕಲಾಸೌಧದ ತಿರುವು ಮೆಟ್ಟಿಲುಗಳ ಮೇಲೆ
ಎಲ್ಲೆಂದರಲ್ಲಿ ಎದುರಾಗುತ್ತಿದ್ದ ಹುಡುಗ
ಯಾರದೋ ನೋವಿಗೆ, ಕಳೆದುಕೊಂಡ ಹಾಡಿಗೆ,
ಚರಣವಾಗದೆ ಉಳಿದ ಪಲ್ಲವಿಗೆ
ಕೈಜಾರಿದ ಹೂವಿಗೆ, ಯಾವುದೋ ಅಳಲಿಗೆ
ಹೆಗಲಾಗುತ್ತಲೇ ಇದ್ದವ…
ಜೂನ್ 13, ಭಾನುವಾರ, ‘ಸಂಚಾರಿ ವಿಜಯ್ ಗೆ ಆಕ್ಸಿಡೆಂಟ್ ಆಗಿದೆಯಂತೆ, ಮಿದುಳಿಗೆ ತೀವ್ರ ಪೆಟ್ಟಾಗಿ ರಕ್ತಸ್ರಾವ ಆಗಿದೆಯಂತೆ,’ ಮೊಬೈಲ್ ನ ಪರದೆಯ ಮೇಲಿದ್ದ ಈ ಅಕ್ಷರಗಳನ್ನು ನಂಬಲಾಗದಂತೆ ಮತ್ತೆಮತ್ತೆ ನೋಡಿದ್ದೆ. ಹಿಂದಿನವಾರ ತಾನೆ ಇಬ್ಬರೂ ಮಾತನಾಡಿದ್ದೆವು, ಇದೇನು ಹೀಗೆ? ಸ್ವಲ್ಪ ಹೊತ್ತು ಏನೆಂದರೆ ಏನೂ ತೋಚಲಿಲ್ಲ. ಕೆಲವು ಸತ್ಯಗಳನ್ನು ಉದಾಸೀನ ಮಾಡಿಬಿಟ್ಟರೆ ಬಹುಶಃ ಅದು ಸುಳ್ಳಾಗಿಬಿಡಬಹುದು ಎಂದು ಮನಸ್ಸು ಹಾರೈಸುತ್ತದಲ್ಲ..ಅದೇ ರೀತಿ ಸುಮ್ಮನಿರಲು ನೋಡಿದೆ, ಆಗಲಿಲ್ಲ.
ತಕ್ಷಣ ಮಂಸೋರೆಗೆ ಕರೆ ಮಾಡಿದೆ, ಎಂಗೇಜ್ ಬಂತು. ಮತ್ತೂ ಸ್ವಲ್ಪ ಹೊತ್ತು ಕಾದೆ, ಉಹೂ.. ಮಂಸೋರೆ ಮತ್ತೆ ಕರೆ ಮಾಡಲಿಲ್ಲ. ಆಗಲೇ ನಡೆದಿರಬಹುದಾದ ಕೆಡುಕಿನ ಸತ್ಯ ಮನಸ್ಸಿಗೆ ನಿಧಾನವಾಗಿ ಇಳಿಯತೊಡಗಿತ್ತು, ಮತ್ತೆ ಮಂಸೋರೆಗೆ ಮೆಸೇಜ್ ಮಾಡಿದೆ, ‘ಇದೇನು ಮಂಜು, ವಿಜಯ್ ಆಕ್ಸಿಡೆಂಟ್ ಸುದ್ದಿ, ನಂಬಲಾಗುತ್ತಿಲ್ಲ… ಹೇಗಿದ್ದಾರೆ?’. ಉಹೂ ಮಂಸೋರೆ ಉತ್ತರ ಇಲ್ಲ.
ಅವರಿಬ್ಬರೂ ಎಷ್ಟು ಹತ್ತಿರದ ಸ್ನೇಹಿತರು ಎನ್ನುವುದು ನನಗೆ ಗೊತ್ತಿತ್ತು. ಬರೀ ನಗು, ಜೋಕ್, ಪಾರ್ಟಿಗಳನ್ನು ಹಂಚಿಕೊಂಡವರಲ್ಲ ಅವರು, ಕನಸುಗಳನ್ನು, ಅದನ್ನು ಸತ್ಯವಾಗಿಸಿಕೊಳ್ಳಬೇಕೆನ್ನುವ ತುಡಿತದಲ್ಲಿ ಸುಡುಕೆಂಡದ ಹಾದಿಯ ನಡಿಗೆಯನ್ನು, ಹಸಿವನ್ನು, ಕಣ್ಣೀರನ್ನು ಹಂಚಿಕೊಂಡವರು. ‘ಹರಿವು’ ಮಂಸೋರೆ ನಿರ್ದೇಶನದ ಮೊದಲ ಚಿತ್ರವಷ್ಟೇ ಅಲ್ಲ, ಬಹುಶಃ ವಿಜಯ್ ಪೂರ್ಣಪ್ರಮಾಣದ ನಾಯಕನಾಗಿ ಅಭಿನಯಿಸಿದ ಮೊದಲ ಚಿತ್ರವೂ ಹೌದು. ಆ ಚಿತ್ರ ಕುಂಟಿದ ಬಗೆಯನ್ನು, ಆಗುತ್ತ ಆಗುತ್ತಲೇ ನಿಂತುಹೋದ ಬಗೆಯನ್ನು, ನಿಂತುಹೋಯಿತು ಎನ್ನುವಾಗ ಪೂರ್ಣವಾದ ಬಗೆಯನ್ನು ಮಂಸೋರೆ, ವಿಜಯ್ ಇಬ್ಬರ ಮಾತುಗಳಲ್ಲೂ ಕೇಳಿದ್ದೆ. ಹೆಚ್ಚುಕಡಿಮೆ ಪ್ರಾಮಿಸರಿ ನೋಟ್ ಬರೆದುಕೊಟ್ಟು ಚಿತ್ರವನ್ನು ಪೂರ್ತಿ ಮಾಡಿದ್ದರು. ಆ ಸಮಯದಲ್ಲಿ ಒಬ್ಬರಿಗೊಬ್ಬರು ಹೆಗಲಾಗಿ, ಬೆನ್ನಾಗಿ ನಿಂತ ಇವರಿಬ್ಬರ ನಡುವೆ ದೇಹ-ಪ್ರಾಣದಂತಹ ಸ್ನೇಹ ಗಟ್ಟಿಯಾಗಿಹೋಗಿತ್ತು. ಆನಂತರ ಮಂಸೋರೆ ನಿರ್ದೇಶಿಸಿದ ಎರಡೂ ಚಿತ್ರಗಳಲ್ಲೂ ಅನಿವಾರ್ಯವಾಗಿ ವಿಜಯ್ ಇರಲೇಬೇಕಾಗಿ ಬಂದಿದ್ದ ಸಂದರ್ಭಗಳನ್ನು ಈಗ ನೆನೆಸಿಕೊಂಡರೆ ಇವರಿಬ್ಬರ ಬಾಂಧವ್ಯ ವಿಧಿನಿರ್ಣಯವೇ ಆಗಿತ್ತೇನೋ ಅನ್ನಿಸುತ್ತದೆ.
ವಿಜಯ್ ಇರುವಾಗ ಬಿಡುಗಡೆಯಾದ ಅವರ ನಟನೆಯ ಕಡೆಯ ಚಿತ್ರವೂ ಮಂಸೋರೆ ನಿರ್ದೇಶಿಸಿದ್ದ ‘ಆಕ್ಟ್ 1978’ ಚಿತ್ರವೇ. ವಿಜಯ್ ಮತ್ತೆಮತ್ತೆ ಹೇಳುತ್ತಿದ್ದ ಮಾತು, ‘ಚಿತ್ರ ನಿರ್ಮಾಣ ಅಷ್ಟೇ ಅಲ್ಲ, ಅದನ್ನು ಥಿಯೇಟರ್ ಗೆ ತರುವುದೂ ಒಂದು ಯುದ್ಧವೇ’, ‘ಹರಿವು’ ಮತ್ತು ‘ನಾನು ಅವನಲ್ಲ ಅವಳು’ ಎರಡೂ ಚಿತ್ರಗಳಲ್ಲೂ ವಿಜಯ್ ಇದನ್ನು ಅನುಭವಿಸಿದ್ದರು. ಆದರೆ ‘ಆಕ್ಟ್ 1978’ ಚಿತ್ರಮಂದಿರಕ್ಕೆ ಬಂತು ಮತ್ತು ಹಲವಾರು ದಿನಗಳು ನಡೆಯಿತು ಸಹ.
ನನ್ನ ಮೆಸೇಜ್ ಮತ್ತು ಕರೆಗೆ ಮಂಸೋರೆ ಉತ್ತರಿಸದೆ ಉಳಿದಾಗ ಆತಂಕ ಆಳವಾಗುತ್ತಾ ಹೋಯಿತು, ಮತ್ತೆ ಕರೆ ಮಾಡಲು ಹೆದರಿಕೆ ಆಗುತ್ತಿತ್ತು. ಎಲ್ಲೆಲ್ಲಿ ಸುದ್ದಿ ಸಿಗಬಹುದೋ ಅಲ್ಲೆಲ್ಲಾ ಜಾಲಾಡಿ ಓದಿದೆ, ಆದರೆ ಆ ಬಗ್ಗೆ ಮಾತನಾಡಲು ಕೊರಳನ್ನು ಹಿಡಿದಂತಾಗುತ್ತಿತ್ತು. ‘ಡಾಕ್ಟರ್ ಕಷ್ಟ ಎಂದು ಹೇಳಿದರಂತೆ…’ ಎಂದು ಗೆಳತಿಯೊಬ್ಬಳು ಕರೆ ಮಾಡಿದಳು, ‘ಹೂ… ಫೋನ್ ಇಡ್ತೇನೆ’ ಎಂದು ಮಾತು ಮುಂದುವರೆಸದೆ ಕರೆ ನಿಲ್ಲಿಸಿದೆ. ಆ ಬಗ್ಗೆ ಮಾತನಾಡಲು ಆಗುತ್ತಲೇ ಇರಲಿಲ್ಲ, ನುಡಿಗಳಲ್ಲಿ ಆಡಿದರೆ ಅದು ಸತ್ಯವಾಗಿಬಿಡಬಹುದೇನೋ ಎನ್ನುವ ಭಯ.
ಅದು 2014 ಅಥವಾ 2015ರ ಬೆಂಗಳೂರು ಚಲನಚಿತ್ರೋತ್ಸವ ಇರಬೇಕು. ಈ ಉತ್ಸವಗಳಲ್ಲಿ ಬೇರೆ ದೇಶದ, ಭಾಷೆಯ ಚಿತ್ರಗಳನ್ನು ಹೆಚ್ಚಾಗಿ ನೋಡುತ್ತೇನೆ, ನಮ್ಮ ಭಾಷೆಯ ಚಿತ್ರಗಳು ನಂತರ ಥಿಯೇಟರ್‍ನಲ್ಲಿ ನೋಡಲು ಸಿಗುತ್ತವೆ ಎನ್ನುವುದು ಅದಕ್ಕೆ ಕಾರಣ. ಆದರೆ ಅಂದು ‘ಹರಿವು’ ಎನ್ನುವ ಈ ಕನ್ನಡ ಚಿತ್ರಕ್ಕೆ ಹೋಗಿದ್ದೆ. ಆ ಚಿತ್ರದ ಪ್ರಧಾನ ಪಾತ್ರಧಾರಿ ನನಗೆ ರಂಗಮಂದಿರಗಳಲ್ಲಿ ಪರಿಚಿತನಾಗಿದ್ದ ಹುಡುಗ. ಚಿತ್ರ ಮುಗಿಯುವಷ್ಟರಲ್ಲಿ ‘ಶರಣಪ್ಪ’ನ ದುಃಖ, ಅಳಲು, ಸಂಕಟ ನನ್ನನ್ನು ಅಲ್ಲಾಡಿಸಿ ಹಾಕಿತ್ತು. ಚಿತ್ರದುದ್ದಕ್ಕೂ ನನ್ನ ಕಣ್ತುಂಬಾ ನೀರು. ಭಾವಾತಿರೇಕಕ್ಕೆ ಹೋಗದೆ ಭಾವದ ತೀವ್ರತೆಯನ್ನು ದಾಟಿಸುವ ಕಲೆ ವಿಜಯ್ ಗೆ ಒಲಿದಿತ್ತು. ಅದಕ್ಕೆ ನೆರವಾಗುತ್ತಿದ್ದದ್ದು ಅವರ ಕಣ್ಣುಗಳು. ಇದುವರೆಗೂ ತನ್ನೊಳಗೆ ಅಷ್ಟು ಅಳಲನ್ನು ತುಂಬಿಕೊಂಡಿದ್ದ ಕೆಲವೇ ಕಣ್ಣುಗಳನ್ನು ನಾನು ನೋಡಿದ್ದೇನೆ. ಆ ಚಿತ್ರ ಮುಗಿದ ಮೇಲೆ ತಕ್ಷಣ ಇನ್ನೊಂದು ಚಿತ್ರಕ್ಕೆ ಹೋಗುವ ಮನಸ್ಸಾಗಿರಲಿಲ್ಲ, ಸ್ವಲ್ಪ ಹೊತ್ತು ಸುಮ್ಮನೆ ಕುಳಿತುಬಿಟ್ಟಿದ್ದೆ. ಆ ಘಳಿಗೆಯಲ್ಲಿ ಅದೇ ನಿರ್ದೇಶಕ, ಅದೇ ಕಲಾವಿದನೊಂದಿಗೆ ಮುಂದೊಂದು ದಿನ ನಾನು ಕೆಲಸ ಮಾಡುತ್ತೇನೆ ಎನ್ನುವ ಯಾವುದೇ ಅಂದಾಜು ನನಗಿರಲಿಲ್ಲ.
‘ನಾತಿಚರಾಮಿ’ ಗೆ ಬರೆಯುವಾಗ ಸಹ ಸುರೇಶನ ಪಾತ್ರದಲ್ಲಿ ವಿಜಯ್ ಇರಬಹುದು ಎನ್ನುವ ಕಲ್ಪನೆ ನನಗಿರಲಿಲ್ಲ. ನಂತರ ಆ ಪಾತ್ರವನ್ನು ವಿಜಯ್ ನಿರ್ವಹಿಸುವರು ಎಂದಾಗ ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನ್ನಲ್ಲಿ ಸ್ವಲ್ಪ ಅನುಮಾನವೇ ಇತ್ತು. ಏಕೆಂದರೆ ವಿಜಯ್‌ರನ್ನು ಸಾಫ್ಟ್ ಸಾಫ್ಟ್ ಪಾತ್ರಗಳಲ್ಲಿ ಕಲ್ಪಿಸಿಕೊಂಡಷ್ಟು ಸುಲಭವಾಗಿ ಗ್ರೇ ಶೇಡ್ ಇರುವ ಸುರೇಶನ ಪಾತ್ರದಲ್ಲಿ ಕಲ್ಪಿಸಿಕೊಳ್ಳುವುದು ನನಗೆ ಕಷ್ಟವಾಗುತ್ತಿತ್ತು. ಆದರೆ ಚಿತ್ರದ ಮೊದಲ ಪ್ರತಿ ನೋಡುವಾಗ ಆ ಪಾತ್ರದ ಎಲ್ಲಾ ಸಂಕೀರ್ಣತೆಯನ್ನೂ ಒಳಗಿಳಿಸಿಕೊಂಡು, ಸುರೇಶನನ್ನು ವಿಜಯ್ ಮಾನವೀಯಗೊಳಿಸಿದ್ದ ಪರಿ ನನ್ನಲ್ಲಿ ಮೆಚ್ಚುಗೆ ಮೂಡಿಸಿತ್ತು. ಆ ಚಿತ್ರದ ಸಂದರ್ಭದಲ್ಲಿ ವಿಜಯ್ ಜೊತೆಗೆ ಒಡನಾಟ ಹೆಚ್ಚಾಗಿತ್ತು. ಅದಕ್ಕೆ ಮೊದಲು ಸ್ನೇಹಿತೆ ಮಂಗಳಾರ ‘ಸಂಚಾರಿ’ ಅಂಗಳದಲ್ಲಿ, ಕಲಾಸೌಧದಲ್ಲಿ ಕಾಣಿಸಿಕೊಳ್ಳುತ್ತಿದ್ದ ವಿಜಯ್ ಈಗ ಮಾತಿಗೆ ಸಿಗುತ್ತಿದ್ದರು. ಮುಂಬೈನ ಚಿತ್ರೋತ್ಸವದಲ್ಲಿ ತಂಡದ ಹಲವರು ಅಲ್ಲಿಗೆ ಹೋಗಿದ್ದು, ಅಲ್ಲಿನ ಪ್ರದರ್ಶನ, ಸಂವಾದ, ನಂತರ ಒಟ್ಟಾಗಿ ಮಾಡುತ್ತಿದ್ದ ಚರ್ಚೆಗಳು ಇನ್ನೂ ನೆನಪಿದೆ.
‘ಹರಿವು’ ನಂತರ ಬಂದ ಲಿಂಗದೇವರು ಅವರ ನಿರ್ದೇಶನದ ‘ನಾನು ಅವನಲ್ಲ ಅವಳು’ ಚಿತ್ರವನ್ನು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಮೊದಲ ಶೋ ನೋಡುವಾಗ ವಿಜಯ್ ನಟನೆಗೆ ನಾನು ಬೆರಗಾಗಿದ್ದೆ. ಅದುವರೆವಿಗೂ ತೃತೀಯಲಿಂಗಿಗಳನ್ನು ಅಸಹ್ಯವಾಗಿ, ಸ್ಯಾಡಿಸ್ಟಿಕ್ ಮನೋಭಾವದೊಂದಿಗೆ ಚಿತ್ರಿಸುತ್ತಿದ್ದ ವಾಡಿಕೆಯನ್ನು ಮುರಿದು, ಈ ಚಿತ್ರ ಅವರನ್ನು ರಕ್ತ ಮಾಂಸಗಳ ಮನುಷ್ಯರನ್ನಾಗಿ ಕಂಡಿತ್ತು. ಅವರ ನೋವು, ಸಂಕಟ, ಅವರು ಅನುಭವಿಸುವ ತರತಮ, ಅವಮಾನ, ಮನದ ಮಾತುಗಳನ್ನು ಕೇಳಲು, ಅದನ್ನು ಸತ್ಯವಾಗಿಸಲು ಅವರು ಪಡುವ ಪಡಿಪಾಟಲು ಎಲ್ಲವನ್ನೂ ಕಟ್ಟಿಕೊಟ್ಟಿತ್ತು. ಮಾದೇಶ ವಿದ್ಯಾ ಆಗುವ ಪ್ರಸ್ಥಾನದಲ್ಲಿ ವಿಜಯ್ ಗೆದ್ದಿದ್ದರು.
ನನಗೆ ಮುಖ್ಯವಾಗಿ ಗಮನ ಸೆಳೆದದ್ದು ಹೆಣ್ಣಾಗುವ ಹೆಬ್ಬಯಕೆಯ ಗಂಡಾಗಿ ಮತ್ತು ಹೆಣ್ಣಾದ ಗಂಡಾಗಿ ವಿಜಯ್ ಆ ಪಾತ್ರವನ್ನು ಎಲ್ಲೂ ಕ್ಯಾರಿಕೇಚರ್ ಮಾಡದೆ ಸಂಯಮದಿಂದ ನಟಿಸಿದ್ದ ರೀತಿ. ಎಡಗೈಯಲ್ಲಿ ವ್ಯಾನಿಟಿ ಬ್ಯಾಗ್ ಜೊತೆಯಲ್ಲಿ ಸೀರೆ ನೆರಿಗೆಯನ್ನು ಗುಪ್ಪೆ ಸೇರಿಸಿ ಹಿಡಿದು, ನಡುವಿನ ಭಾಗ ಮರೆಯಾಗಿಸುವಂತೆ ಸೆರಗಿನ ಅಂಚನ್ನು ಎಳೆದುಕೊಂಡು, ಬಲಗೈ ಚಾಚಿ ನಿಂತಿದ್ದ ವಿದ್ಯಾ ಚಿತ್ರ ಇನ್ನೂ ನನ್ನ ಮನಸ್ಸಿನಲ್ಲಿದೆ. ಆ ಇಡೀ ಭಾವಭಂಗಿ, ದೇಹಭಾಷೆ ಥೇಟ್ ಹೆಣ್ಣಿನದು. ವಿಜಯ್ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬಂತು ಮತ್ತು ವಿಜಯ್ ಗೆ ಚಿತ್ರಗಳಲ್ಲಿ ಅವಕಾಶಗಳು ಕಡಿಮೆ ಆದವು, ಪರಿಸ್ಥಿತಿಯ ವಿಡಂಬನೆ ಎಂದರೆ ಇದು. ಸಣ್ಣ ಸಣ್ಣ ಗುಂಪುಗಳು ಒಂದೆಡೆ ಸೇರಿದಾಗ ಅಲ್ಲಿ ಈ ಚಿತ್ರ ಪ್ರದರ್ಶಿಸಿ, ನಿರ್ದೇಶಕ ಲಿಂಗದೇವರು ಮತ್ತು ವಿಜಯ್ ಸಂವಾದಕ್ಕೆ ಒಡ್ಡಿಕೊಂಡಿದ್ದೂ ಇದೆ. ಕನ್ನಡ ಚಿತ್ರರಂಗದ ಇಂದಿನ ಸ್ಥಿತಿಗೆ ಇದು ಕಾರಣ ಮತ್ತು ಉದಾಹರಣೆ ಎರಡೂ ಹೌದು.
‘ಅವಿರತ’ ತಂಡದ ಸ್ನೇಹಿತರು ಈ ಚಿತ್ರದ ಪ್ರದರ್ಶನ ಏರ್ಪಡಿಸಿ, ವಿಜಯ್ ವೇದಿಕೆಗೆ ನಡೆದು ಬರುವಾಗ ‘ಸ್ಟಾಂಡಿಂಗ್ ಒವೇಶನ್’ ಕೊಡಿಸಿ, ಅಭಿನಂದಿಸಿದಾಗ ಇವರು ಸಂಕೋಚದಿಂದ ಹಿಡಿಯಾಗಿದ್ದರು, ನಂತರ ಯಾವುದೋ ದರ್ಶಿನಿಯಲ್ಲಿ ಬೈಟೂ ಕಾಫಿ ಕುಡಿಯುವಾಗ ಹೆಚ್ಚು ನಿರಾಳವಾಗಿದ್ದರು.
ಯಾವುದೇ ಹೊಸತಿಗೆ ಸಂಪೂರ್ಣವಾಗಿ ಒಗ್ಗಿಕೊಳ್ಳಬೇಕೆಂದರೆ ಹಳೆಮನೆಯ ಕೀಲಿಕೈ ಬಿಸುಡಬೇಕು, ಹಳೆಯ ಸೇತುವೆಗಳನ್ನು ಸುಟ್ಟುಬಿಡಬೇಕು ಎನ್ನುವ ಮಾತಿದೆ. ಥೇಟ್ ಹಾಗೆಯೇ ಇಂಜಿನಿಯರ್ ಆಗಿದ್ದ ವಿಜಯ್ ಕೆಲಸಕ್ಕೆ ರಾಜಿನಾಮೆ ಕೊಟ್ಟು ಅಭಿನಯಕ್ಕೆ ತಮ್ಮನ್ನು ಒಪ್ಪಿಸಿಕೊಂಡಿದ್ದರು. ಅಲ್ಲೊಂದು, ಇಲ್ಲೊಂದು ಚಿತ್ರ, ಆಗೊಂದು ಈಗೊಂದು ನಾಟಕ.
ಎಲ್ಲೋ ಆಕಾಶ ಬೆತ್ತಲಾದ ಮಳೆ,
ಭೂಮಿ ಭೋರಿಟ್ಟು ಅತ್ತ ನೆರೆ,
ದೋಣಿ ಕಟ್ಟಿದ ಹುಡುಗ ನಾವಿಕನಾದ,
ವಾತ್ಸಲ್ಯ ಅರಿಯಲು ಅಪ್ಪನಾಗಬೇಕಿಲ್ಲ
ಅವಳನ್ನು ಅರಿಯಲು ಹೆಣ್ಣಾಗಲೂ ಬೇಕಿಲ್ಲ
ಏನೂ ಅಗದೆಯೂ ಎಲ್ಲ ಆದ ಈ ಹುಡುಗ
ಎಲ್ಲಾ ಆಗಿಯೂ ಏನನ್ನೂ ಉಳಿಸಿಕೊಳ್ಳದವ
ಖಾಲಿಯಾಗಿಯೇ ಉಳಿದ ಕೈಯಿಂದ
ಕೊಡುತ್ತಲೇ ನಡೆದವ
ಚಿತ್ರ ಮುಗಿಯುವಷ್ಟರಲ್ಲಿ ‘ಶರಣಪ್ಪ’ನ ದುಃಖ, ಅಳಲು, ಸಂಕಟ ನನ್ನನ್ನು ಅಲ್ಲಾಡಿಸಿ ಹಾಕಿತ್ತು. ಚಿತ್ರದುದ್ದಕ್ಕೂ ನನ್ನ ಕಣ್ತುಂಬಾ ನೀರು. ಭಾವಾತಿರೇಕಕ್ಕೆ ಹೋಗದೆ ಭಾವದ ತೀವ್ರತೆಯನ್ನು ದಾಟಿಸುವ ಕಲೆ ವಿಜಯ್ ಗೆ ಒಲಿದಿತ್ತು. ಅದಕ್ಕೆ ನೆರವಾಗುತ್ತಿದ್ದದ್ದು ಅವರ ಕಣ್ಣುಗಳು.
ಆಗ ಕೊಡಗು ಮಳೆಗೆ, ಮಳೆಯ ಉತ್ಪಾತಕ್ಕೆ ತತ್ತರಿಸಿ ನಿಂತಿತ್ತು. ವಿಜಯ್ ಮೆಸೇಜ್ ಮಾಡಿದ್ದರು. ‘ಕೊಡಗಿಗೆ ಹೊರಟಿದ್ದೇವೆ, ನಿಮಗೆ ತೋಚಿದಷ್ಟು, ಸಾಧ್ಯವಾದಷ್ಟು ನೆರವು ನೀಡಿ’ ಎಂದು. ಯಾರಾದರೂ ಸಂಕಟದಲ್ಲಿದ್ದಾರೆ ಎಂದು ಗೊತ್ತಾದಾಗ ಈತ ತಮಗೆ ಸಾಧ್ಯವಾದಷ್ಟು ಹಣ ಸಹಾಯ ಮಾಡಿ, ಮನೆಯಲ್ಲಿ ಉಳಿದು ತಮ್ಮ ಕೆಲಸಗಳಲ್ಲಿ ತೊಡಗಿಕೊಂಡವರಲ್ಲ. ಸ್ನೇಹಿತರನ್ನೆಲ್ಲಾ ಸೇರಿಸಿ, ಹಣ ಒಗ್ಗೂಡಿಸಿ, ಕಡೆಗೆ ಅದನ್ನು ಸಾರ್ಥಕಗೊಳಿಸಲು ತಾವೇ ರಂಗಕ್ಕಿಳಿಯುವವರು. ಆನಂತರ ಕೋವಿಡ್ ಮನುಕುಲದ ಮೇಲೆ ದಾಳಿ ಮಾಡಿತು. ವಿಜಯ್ ಯಥಾಪ್ರಕಾರ ಮೂಗಿಗೆ ಮಾಸ್ಕ್ ಏರಿಸಿಕೊಂಡು ರಸ್ತೆಗಿಳಿದರು. ‘ಸ್ಟೇ ಹೋಂ, ಸ್ಟೇ ಸೇಫ್’ ಎಂದು ನಾವೆಲ್ಲಾ ಮನೆಯಲ್ಲಿರುವಾಗ, ವಿಜಯ್ ರಸ್ತೆಯ ಮೂಲೆಗಳಲ್ಲಿ, ಯಾವುದೋ ಬಡಾವಣೆಯ ಅಂಚಿನಲ್ಲಿ, ಹಾಡಿಗಳಲ್ಲಿ, ದೂರದೂರುಗಳಲ್ಲಿ ದಿನಸಿ, ಆಹಾರದ ಪೊಟ್ಟಣ, ಔಷಧಿ, ಮಾತ್ರೆ ಹಂಚುತ್ತಿದ್ದರು. ‘ಉಸಿರು’ ತಂಡದೊಡನೆ ಸೇರಿ ಉಸಿರಾಡಲು ತತ್ತರಿಸುತ್ತಿದ್ದ ಶ್ವಾಸಕೋಶಗಳಿಗೆ ಉಸಿರು ತುಂಬುತ್ತಿದ್ದರು.
ಹಾಗೆ ಕೆಲಸ ಮಾಡುವಾಗಲೂ ಅರ್ಹರಿಗೆ, ಅಗತ್ಯ ಇರುವವರಿಗೆ ತಮ್ಮ ಸೇವೆ ತಲುಪುತ್ತಿದೆಯೆ ಎನ್ನುವುದರ ಬಗ್ಗೆ ಅವರಿಗಿದ್ದ ಕಳಕಳಿಯ ಬಗ್ಗೆ ಕವಿರಾಜ್ ಅವರು ಬರೆದುಕೊಂಡಿದ್ದು ಓದಿದೆ. ಅವರಿಗೆ ಸಾರ್ಥಕತೆ ಸಿಗುತ್ತಿದ್ದದ್ದು ಅವರು ಒಳ್ಳೆಯ ಕೆಲಸ ಮಾಡಿದ ಕೂಡಲೆ ಅಲ್ಲ, ಅದು ಬೇಕಾದವರಿಗೆ ತಲುಪಿ ಅವರ ಸಂಕಟ ದೂರಾದಾಗ. ಎರಡರ ನಡುವೆ ಅಪಾರ ಅಂತರವಿದೆ. ಮೊದಲನೆಯದರಲ್ಲಿ ‘ನಾನು’ ಮುಖ್ಯವಾದರೆ, ಎರಡನೆಯ ಸಂದರ್ಭದಲ್ಲಿ ಇನ್ನೊಂದು ಜೀವ ಮುಖ್ಯವಾಗುತ್ತದೆ, ತನ್ನದೇ ಹೊಣೆಯಾಗುತ್ತದೆ.
ಭಾನುವಾರ ಸಂಜೆಯಾಗುತ್ತಿದ್ದಂತೆ ವೈದ್ಯರು ಅವರ ಸ್ಥಿತಿಯನ್ನು ವಿವರಿಸುತ್ತಿದ್ದರು: ಮಿದುಳು ನಿಷ್ಕ್ರಿಯವಾದರೂ ಜೀವ ಹೋದಂತಲ್ಲ, ಅಂಗಾಂಗಳು ಸುಸ್ಥಿತಿಯಲ್ಲಿರುವವರೆಗೂ ತಾಂತ್ರಿಕವಾಗಿ ಮನುಷ್ಯ ಜೀವಿಸಿರುವನೆಂದೇ ಲೆಕ್ಕ ಎಂದು ಹೇಳುತ್ತಿದ್ದರು. ಆದರೆ ಆತ ಮತ್ತೆ ಮೊದಲಿನಂತಾಗುವ ಯಾವುದೇ ಸಾಧ್ಯತೆಯಿಲ್ಲ. ಅಂದರೆ ಆಗ ವಿಜಯ್ ‘ತಾಂತ್ರಿಕವಾಗಿ’ ಮಾತ್ರ ಬದುಕಿದ್ದರು. ‘ಸದಾ ಜನರಿಗಾಗಿಯೇ ಒದ್ದಾಡುತ್ತಿದ್ದ ಅಣ್ಣನ ಅಂಗಾಂಗಗಳನ್ನು ದಾನ ಮಾಡುತ್ತೇವೆ, ಅಣ್ಣನ ಆಶಯ ಹೀಗಾದರೂ ನೆರವೇರಲಿ’ ಎಂದು ವಿಜಯ್ ಅವರದೇ ಸ್ವರದಲ್ಲಿ ಅವರ ತಮ್ಮ ಬಿಕ್ಕಳಿಸುತ್ತಿದ್ದರೆ ಕರುಳಿನಲ್ಲಿ ಕತ್ತರಿಯಾಡಿಸಿದಂತಾಗುತ್ತಿತ್ತು. ‘ಬೆಳಗಾದರೆ ಅವನು ಇರುವುದಿಲ್ಲ ಎನ್ನುವ ವಿಷಯವನ್ನು ಹೇಗೆ ಒಪ್ಪಿಕೊಳ್ಳಲಿ’ ಎಂದು ನೀನಾಸಂ ಸತೀಶ್ ಗದ್ಗದಿಸುತ್ತಿದ್ದರೆ ಅದು ನಮ್ಮೆಲ್ಲರ ಸಂಕಟವಾಗಿತ್ತು.
ತೆರೆ ಬಿದ್ದು, ಬಣ್ಣ ಕಳಚಿ, ಎದ್ದು ನಡೆದಾಗಲೂ
ಯಾರಲ್ಲೋ ಕಣ್ಣಾಗಿ, ಹೃದಯವಾಗಿ
ಕಿಡ್ನಿಯಾಗಿ, ಲಿವರ್ ಆಗಿ
ಮಿಡಿಯುತ್ತಲೆ ಉಳಿದ ಸಾಹುಕಾರ
ಹತ್ತುಜನಗಳಿಗಾಗಿ ಬದುಕಬೇಕು ಎನ್ನುವುದನ್ನು
ಈತ ಅರ್ಥೈಸಿಕೊಂಡಿದ್ದು ಬಹುಶಃ ಹೀಗೆ..
ಹಲವರಿಗಾಗಿ ಎಂದೇ ಜೀವ ಬಿಟ್ಟೆಯಾ
ಎಂದು ನಾವಂದುಕೊಳ್ಳುವಾಗ
ಹಲವಾರು ಬದುಕುಗಳನ್ನು ಬದುಕುತ್ತಿದ್ದೇನೆ
ಎಂದು ಅವ ನಗುತ್ತಿರಬಹುದು
ರಂಗದ ಮೇಲೆ, ಕ್ಯಾಮೆರಾ ಮುಂದೆ ಹತ್ತುಹಲವು
ಬದುಕುಗಳನ್ನು ಬದುಕಿದವ
ಹತ್ತು ಹಲವು ಜೀವಗಳಲ್ಲಿ ಉಳಿದುಬಿಟ್ಟ
ಬಹಳ ಹಿಂದೆ ಅಪ್ಪ ಶಿಬಿ ಚಕ್ರವರ್ತಿಯ ಕಥೆ ಹೇಳಿದ್ದರು. ವೇಷ ಮರೆಸಿಕೊಂಡ ದೇವತೆಗಳು, ಪಾರಿವಾಳ, ಗಿಡುಗನ ರೂಪ ಧರಿಸಿ ಶಿಬಿ ಚಕ್ರವರ್ತಿಯಲ್ಲಿಗೆ ಬರುತ್ತಾರೆ. ಪಾರಿವಾಳ ನನ್ನನ್ನು ರಕ್ಷಿಸು ಎಂದು ಶರಣು ಬೇಡುತ್ತದೆ. ಶಿಬಿ ಒಪ್ಪಿಕೊಳ್ಳುತ್ತಾನೆ. ಆಗ ಗಿಡುಗ ಬಂದು ನ್ಯಾಯ ಕೇಳುತ್ತದೆ. ನನ್ನ ಆಹಾರವೇ ಪಾರಿವಾಳ, ಈಗ ನೀನು ಅದನ್ನು ಕಾಪಾಡಿದರೆ ನಾನು ಏನು ತಿನ್ನಲಿ, ಉಪವಾಸ ಸಾಯಬೇಕಾಗುತ್ತದೆ, ನನ್ನ ಜೀವದ ಗತಿ ಏನು ಎನ್ನುತ್ತದೆ. ಹಾಗೆಂದು ಬೇರೆ ಜೀವವೊಂದರ ಮಾಂಸ ತರಿಸಿಕೊಟ್ಟರೆ ಆಗಲೂ ಪಾರಿವಾಳವನ್ನು ಕಾಪಾಡಿದ ಉದ್ದೇಶ ಸಫಲವಾಗುವುದಿಲ್ಲ. ಕಡೆಗೆ ಶಿಬಿ ಆ ಪಾರಿವಾಳದ ತೂಕದ ಮಾಂಸವನ್ನು ತನ್ನ ದೇಹದಿಂದ ತೆಗೆದುಕೊಡುತ್ತೇನೆ ಎಂದು ಹೇಳುತ್ತಾನೆ. ತಕ್ಕಡಿಯೊಂದನ್ನು ತರಿಸಿ, ಒಂದು ತಟ್ಟೆಯಲ್ಲಿ ಪಾರಿವಾಳವನ್ನಿರಿಸಿ, ಇನ್ನೊಂದು ತಟ್ಟೆಯಲ್ಲಿ ತನ್ನ ದೇಹದ ಭಾಗಗಳನ್ನು ಕತ್ತರಿಸಿ ಒಂದೊಂದಾಗಿ ಹಾಕತೊಡಗುತ್ತಾನೆ. ತಕ್ಕಡಿಯ ಮುಳ್ಳು ಮೇಲೇರುವುದಿಲ್ಲ. ಕೊನೆಯದಾಗಿ ತನ್ನ ತಲೆಯನ್ನು ಕತ್ತರಿಸಿ ತೂಕಕ್ಕೆ ಹಾಕಲು ಮುಂದಾಗುತ್ತಾನೆ. ದೇವತೆಗಳು ಸೋಲುತ್ತಾರೆ…
ಮೊನ್ನೆ ಸಂಜೆ ಡಾಕ್ಟರ್ ವಿಜಯ್ ಬದುಕು ಮತ್ತು ಸಾವಿನ ನಡುವಿನ ತಾಂತ್ರಿಕತೆಯ ವಿವರಗಳನ್ನು ಕೊಡುವಾಗ ನನ್ನ ಮನಸ್ಸಿನ ತುಂಬಾ ಇದೇ ಕಥೆ. ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವ ಸ್ನೇಹಿತೆ ನಿನ್ನೆ ಮೆಸೇಜ್ ಮಾಡಿದಳು, ‘ನಮ್ಮ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರಿಗೆ ವಿಜಯ್ ಕಿಡ್ನಿ ಜೋಡಿಸುತ್ತಿದ್ದೇವೆ…’ ಸೋಲಿಸಲೆಂದು ಬಂದ ಸಾವಿಗೆ ಸವಾಲು ಹಾಕುವ ಹಾಗೆ ವಿಜಯ್ ಇನ್ನು ಮುಂದೆ ಹಲವಾರು ಜನರಲ್ಲಿ ಬದುಕಿಬಿಡುತ್ತಾರೆ.
ಕಣ್ತುಂಬಾ ನೋವು ಈಸಾಡುತ್ತಿದ್ದರೂ
ತುಟಿ ಗಲ್ಲದ ತುಂಬಾ ನಗು ತುಂಬಿಕೊಂಡಿದ್ದ ಈ ಹುಡುಗ
ಮೊನ್ನೆ ಹೀಗೆ ಹಠಾತ್ತನೆ, ಒಬ್ಬರಿಗೂ ಹೇಳದೆ
ಎದ್ದು ಹೊರಟುಬಿಟ್ಟ
ವಿಜಯ್ ಆರೋಗ್ಯ ಹೇಗಿದೆ ಎಂದು ಸತ್ಯ ತಿಳಿದುಕೊಳ್ಳಬೇಕು ಎಂದು ಬಹಳ ದಿನಗಳ ನಂತರ ಕರೆ ಮಾಡಿದ್ದ ಸ್ನೇಹಿತನೊಂದಿಗೆ ಮಾತನಾಡುತ್ತಿದ್ದೆ. ಅವರು ಹೆಲ್ಮೆಟ್ ಧರಿಸದೇ ಇದ್ದದ್ದು ತಪ್ಪೇ ಇರಬಹುದು, ಗಾಡಿ ವೇಗವಾಗೇ ಹೋಗಿದ್ದಿರಬಹುದು ಆದರೆ ಅದಕ್ಕೆ ವಿಜಯ್‌ಗೆ ಇಷ್ಟು ದೊಡ್ಡ ಶಿಕ್ಷೆ ಆಗಿದ್ದು ಯಾವ ನ್ಯಾಯ? ರಂಗ ಬಿಟ್ಟು, ಪಾತ್ರ ಬಿಟ್ಟು ಹೀಗೆ ನಡುವಲ್ಲಿ ಆಟಬಿಟ್ಟು ಹೋಗಿದ್ದು ಯಾವ ನ್ಯಾಯ?
ಕಳೆದವಾರ ವಿಜಯ್ ಮೆಸೇಜ್ ಮಾಡಿದರು, ‘ಏನು ಮೇಡಂ ಕಡೆಗೂ ನೀವು ಪಾರ್ಟಿ ಕೊಡಿಸಲಿಲ್ಲ ನೋಡಿ’ ಎಂದರು. ‘ಹೌದು ರಾಷ್ಟ್ರಪ್ರಶಸ್ತಿ ಪಡೆದವರು ಪಾರ್ಟಿ ಕೊಡಿಸಿ ಮೇಲ್ಪಂಕ್ತಿ ಹಾಕಿಕೊಡಬೇಕು’ ನನ್ನ ಉತ್ತರ. ನಿಮ್ಮ ಚಿತ್ರಕ್ಕೂ ಬಂದಿದೆಯಲ್ಲ, ಅದಕ್ಕಾಗಿ ಆದರೂ ಕೊಡಿಸಬೇಕಪ್ಪ ಎಂದು ಅವರೂ ಜಗ್ಗಾಡಿದರು. ಕಡೆಗೆ ನಾನು, ‘ಆಯ್ತು ಈ ಲಾಕ್ಡೌನ್ ಮುಗಿಯಲಿ, ನೀವೂ, ಮಂಸೋರೆ ಮನೆಗೆ ಬನ್ನಿ. ಒಳ್ಳೆ ಊಟ ಮಾಡಿ, ಚೆನ್ನಾಗಿ ಹರಟೆ ಹೊಡೆಯೋಣ’ ಎಂದು ಹೇಳಿದ್ದೆ, ‘ಓಕೆ ಓಕೆ, ಕಾಯ್ತಾ ಇರ್ತೀನಿ’ ಎಂದಿದ್ದರು.
ಲಾಕ್ಡೌನ್ ಮುಗಿಯುತ್ತಾ ಬಂದಿತ್ತಲ್ಲ, ಏನು ಅವಸರವಿತ್ತು? ಈಗ ನಾನು ಕಾಯುತ್ತಿದ್ದೇನೆ, ಏನು ಅಟ್ಟು ಬಡಿಸಿದರೆ ನೀವು ಮನೆಗೆ ಬರುವಿರಿ ವಿಜಯ್? ಆ ಮಾತುಕತೆಯಾಡಿದಾಗ ವಿಜಯ್ ಅವರು ಹಾಡಿದ್ದ ಒಂದು ಹಾಡನ್ನು ಕಳಿಸಿಕೊಟ್ಟಿದ್ದರು, ಆ ಹಾಡು ಹಾಗೇ ಉಳಿದಿದೆ ಅವರನ್ನು ನೆನಪಿಸುತ್ತಾ, ‘ಬೇಗ ಹುಷಾರಾಗಿ ಬನ್ನಿ ವಿಜಿ. ನಮ್ಮೆಲ್ಲರ ಪ್ರಾರ್ಥನೆ ನಿಮ್ಮ ಜೊತೆಯಲ್ಲಿ…’ ಎಂದು ನಾನು ಕಳಿಸಿ, ಸಿಂಗಲ್ ಟಿಕ್ ಆಗಿಯೇ ಉಳಿದ ಮೆಸೇಜಿನ ಹಾಗೆ… ಮತ್ತೆಂದೂ ಆ ನಂಬರಿನಿಂದ ಮೆಸೇಜ್ ಬರುವುದಿಲ್ಲ, ಮತ್ತೆಂದೂ ಆ ನಗುಮೊಗ ನಮ್ಮ ಕಣ್ಣೆದಿರು ಬರುವುದಿಲ್ಲ, ಆದರೆ ಮತ್ತೆಂದಿಗೂ ನಿಮ್ಮನ್ನು ಮರೆಯಲಾಗುವುದೇ ಇಲ್ಲ ವಿಜಯ್.
ಲೇಖಕಿ, ಅನುವಾದಕಿ, ಪತ್ರಕರ್ತೆ ಮತ್ತು ಚಿತ್ರ ಸಾಹಿತಿ . ‘ಯಾಕೆ ಕಾಡುತಿದೆ ಸುಮ್ಮನೆ’ ( ಅಂಕಣ ಬರಹ) ‘ತುಂಬೆ ಹೂ’ ( ಜೀವನ ಚರಿತ್ರೆ) ‘ಪೂರ್ವಿ ಕಲ್ಯಾಣಿ’ ಮತ್ತು ‘ನನ್ನೊಳಗಿನ ಹಾಡು ಕ್ಯೂಬಾ’ (ನಾಟಕ) ಇವರ ಕೃತಿಗಳು. ಊರು ಬಂಗಾರಪೇಟೆ, ಇರುವುದು ಬೆಂಗಳೂರು.
ಪರಿಣಾಮಕಾರಿಯಾಗಿ ತಟ್ಟುವ ಭಾವನಾತ್ಮಕ ಬರಹ..
ಅಗಲಿಕೆಯ ಸಂಕಟ ಸ್ಥಾಯಿಯಾಗಿದೆ..
ವಿಜಯ್ ಅವರಿಗೆ ಭಾವಪೂರ್ಣ ನಮನಗಳು.
ಅವರ ವ್ಯಕ್ತಿತ್ವದ ಅನಾವರಣವನ್ನು ಸರಳವಾಗಿ
ಬಿಚ್ಚಿಟ್ಟಿದ್ದೀರಾ. ಓದ್ತಾ ಓದ್ತಾ ಮನಸ್ಸು ತುಂಬಿ ಬಂತು.
ಮರೆಯಲಾಗದ ನೆನಪುಗಳನು ಬಿಟ್ಟು ಅವರು ಹೊರಟ ರೀತಿ ನೋವು ಕೊಟ್ಟಿದೆ.
ಆಪ್ತ ಬರಹ.
ಅವಸರದಲ್ಲಿ ಮತ್ತೆ ಬಾರದ ಹಾಗೆ ಎದ್ದು ಹೋಗಿ ಬಿಟ್ಟರು ವಿಜಯ.
ಕಲಾವಿದನಿಗೆ ಗೌರವದ ನಮನಗಳು.
೨೦೧೮ ರ ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಹರಿವು ಚಿತ್ರ ಪ್ರದರ್ಶನವನ್ನು ಏರ್ಪಡಿಸಿದಾಗ ಉಪಸ್ಥಿತರಿದ್ದ ರಾಷ್ಟ್ರ ಪ್ರಶಸ್ತಿ ಸಿಕ್ಕ ಕಲಾವಿದ ಇಷ್ಟು ಸಾದಾ ಸೀದಾ ಇರಲೂ ಸಾಧ್ಯ ಎನ್ನುವುದನ್ನು ಸಂಚಾರಿ ವಿಜಯ ಅವರನ್ನು ನೋಡಿ ಅಚ್ಚರಿ ಪಟ್ಟರು ಸೇರಿದ್ದ ಜನ. ಆ ವಿಷಯವನ್ನು ನಿನ್ನೆ ನಾನು ನನ್ನ ಫೇಸ್‌ಬುಕ್‌ದಲ್ಲಿ ಹಂಚಿಕೊಂಡೆ. ಇಲ್ಲಿದೆ ನೋಡಿ:
“ಸಂಚಾರಿ_ವಿಜಯ”
__________________
“ಧಾರವಾಡ_ಸಾಹಿತ್ಯ_ಸಂಭ್ರಮ_೨೦೧೮.”
____________________________________
೨೦೧೮ ಜನವರಿ ೨೧. ರವಿವಾರ.
ಧಾರವಾಡ ಸಾಹಿತ್ಯ ಸಂಭ್ರಮದ ಕೊನೆಯ ದಿನ. ಮೂರು ದಿನದ ಸಮಾರೋಪ ಮುಗಿದ ನಂತರ ಸಂಜೆ ೦೭.೩೦ ಕ್ಕೆ #ಹರಿವು ಚಿತ್ರ ಪ್ರದರ್ಶನ. ಸ್ಥಳ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಭವನ. ಇಡೀ ಸಭಾಭವನ ತುಂಬಿತುಳುಕುತ್ತಿತ್ತು.
ಕರ್ನಾಟಕದ ಸಾಹಿತ್ಯ ಲೋಕದ ಬಹಳಷ್ಟು ದಿಗ್ಗಜರೂ ಉಪಸ್ಥಿತರಿದ್ದರು. #ಹರಿವು ಚಲನಚಿತ್ರ ಮುಗಿದಾಗ ರಾತ್ರಿ ೦೯.೩೦ ಗಂಟೆ. ಚಿತ್ರ ವೀಕ್ಷಿಸುತ್ತಿದ್ದ ಎಲ್ಲರ ಕಣ್ಣಲ್ಲೂ ಕಣ್ಣೀರು.
ನಿರೂಪಣೆ ಮಾಡುತ್ತಿದ್ದ ನಾನು ನಾಡೋಜ ಚೆನ್ನವೀರ ಕಣವಿಯವರನ್ನು ವೇದಿಕೆಗೆ ಕರದೆ. ಚಿತ್ರದ ನಿರ್ದೇಶಕ ಮಂನಸೋರೆ (ಮಂಜುನಾಥ) ಅವರನ್ನು ಕರದೆ. ಚಿತ್ರದ ನಾಯಕ ಸಂಚಾರಿ ವಿಜಯ ಅವರನ್ನು ಕೂಡ ವೇದಿಕೆಗೆ ಕರದೆ. ಚಿತ್ರ ನೋಡುತ್ತ ಕುಳಿತ ಎಲ್ಲರಿಗೂ ಅಚ್ಚರಿ. ಈ ಚಿತ್ರದ ನಾಯಕ ಕೂಡ ಬಂದಿದ್ದಾರೆಯೇ ಎಂದು ಆಶ್ಚರ್ಯಕರವಾಗಿ ವೇದಿಕೆಯತ್ತ ನೋಡುತ್ತಿದ್ದರು. ಮಂನಸೋರೆ ನಮ್ಮ ಮುಂದೆಯೇ ಓಡಾಡುತ್ತಿದ್ದರೂ ಇವರೆ ಮಂನಸೋರೆ, ಚಲನಚಿತ್ರದ ನಿರ್ದೇಶಕರು ಎಂದು ಬಹಳಷ್ಟು ಜನರಿಗೆ ಗೊತ್ತಿರಲಿಲ್ಲ. ನಾಯಕ ವಿಜಯ ಸಭಾಭವನದ ಒಂದು ಮೂಲೆಯಲ್ಲಿ ಕುಳಿತು ತಮ್ಮ ಪಾಡಿಗೆ ತಾವು ಚಿತ್ರ ವೀಕ್ಷಿಸುತ್ತಿದ್ದರು. ನಾನು ಹೆಸರು ಹೇಳಿ ಕರೆದ ಕೂಡಲೇ ಅವರು ಮೇಲಿನಿಂದ ವೇದಿಕೆಯ ತನಕ ಬರುವ ತನಕ ಚಪ್ಪಾಳೆಯ ಸುರಿಮಳೆ. ಇಬ್ಬರನ್ನೂ ಸ್ವಾಗತಿಸಿ ನಾಡೋಜ ಚೆನ್ನವೀರ ಕಣವಿಯವರಿಗೆ ಕೆಲ ಮಾತು ಹೇಳಲು ವಿನಂತಿಸಿಕೊಂಡೆ. ಕಣ್ಣಲ್ಲಿ ನೀರು ತುಂಬಿಕೊಂಡಿದ್ದ ಕಣವಿಯವರು ಚಿತ್ರವನ್ನು ಹೊಗಳಿ ನಿರ್ದೇಶಕ ಮಂನಸೋರೆ ಮತ್ತು ನಾಯಕ ನಟ ಸಂಚಾರಿ ವಿಜಯ ಅವರನ್ನು ಬಾಯಿತುಂಬ ಹೊಗಳಿದರು. ವಿನಯದ ಮುದ್ದೆಯಾಗಿದ್ದ ಇಬ್ಬರೂ ಕಣವಿಯವರ ಪಾದ ಮುಟ್ಟಿ ಆಶೀರ್ವಾದ ಪಡೆದರು. ಸಭಾಭವನ ಎರಡು ನಿಮಿಷಗಳ ಕಾಲ ಬಿಡದೆ ಚಪ್ಪಾಳೆ ಮೂಲಕ ತನ್ನ ಸಂಪೂರ್ಣ ಸಂತೋಷವನ್ನು ವ್ಯಕ್ತಪಡಿಸಿತು.
ವಿಜಯ ಮತ್ತು ಮಂನಸೋರೆ ಅವರಿಗೆ ಮಾತನಾಡಲು ಹೇಳಿದೆ. ನಿರಾಕರಿಸಿದರು.ತಮ್ಮ ಸಂತೋಷವನ್ನು ಸಭೆಗೆ ನಮಸ್ಕಾರಗಳನ್ನು ಸಲ್ಲಿಸುವ ಮೂಲಕ ವ್ಯಕ್ತಪಡಿಸಿದರು.
ರಾಷ್ಟ್ರ ಪ್ರಶಸ್ತಿಯನ್ನು ಪಡೆದ ಕಲಾವಿದ ಇಷ್ಟು ಸರಳ ಮತ್ತು ಸಾದಾ ಇರಲು ಸಾಧ್ಯವಿಲ್ಲ ಎಂದು ಅಂದುಕೊಂಡಿದ್ದ ಪ್ರೇಕ್ಷಕರು ಸಂಚಾರಿ ವಿಜಯ ಅವರ ವಿನಯ, ಸರಳತೆ, ಸೌಜನ್ಯಪೂರಿತ ನಡವಳಿಕೆ ನೋಡಿ ದಂಗು ಬಡಿದು ಹೋಗಿದ್ದರು. ಇಬ್ಬರು ಕಲಾವಿದರನ್ನು ನಿಲ್ಲಿಸಿ ಮತ್ತೆ ಚಪ್ಪಾಳೆ ಮೂಲಕ ತಮ್ಮ ಆನಂದವನ್ನು ಹೊರಹಾಕಿದರು.
ಹೊರ ಹೋಗುವ ಮೊದಲು ಇಂತಹದೊಂದು ಅವಕಾಶ ನೀಡಿದ್ದಕ್ಕಾಗಿ ಕೃತಜ್ಞತೆ ಅರ್ಪಿಸಿದರು.
ಸಂಚಾರಿ ವಿಜಯ ಸದಾಕಾಲವೂ ತಮ್ಮ ಅಭಿನಯ, ವಿನಯಪೂರಿತ ನಡವಳಿಕೆ, ಮಾಡಿದ ಸಮಾಜಸೇವೆ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತಾರೆ.
ಇಂದು ಮತ್ತೆ ಎಲ್ಲ ನೆನಪಾಯಿತು.
ಗೌರವದ ನಮನಗಳು.
ಹ ವೆಂ ಕಾಖಂಡಿಕಿ.
ಸಂಧ್ಯಾ, ತುಂಬಾ ಆತ್ಮೀಯವಾದ ಬರಹ ಮತ್ತು ನೆನಪುಗಳನ್ನು ಹಂಚಿಕೊಂಡಿದ್ದೀರಿ.
ಇಂತಹ ಒಳ್ಳೆಯ ವ್ಯಕ್ತಿತ್ವಗಳು ಒಂದೊಂದೇ ಕಣ್ಮರೆಯಾಗುತ್ತಿರುವುದು ಮನಸ್ಸನ್ನು ಕಲಕುತ್ತವೆ.
…,..ಪುಷ್ಪಾ
ಎಷ್ಟೋಂದು ಜನರ ಎಷ್ಟೇ ಬರಹಗಳನ್ನು ಓದಿದರೂ ಮನಸ್ಸು ಭಾರವನ್ನು ತಡೆದುಕೊಳ್ಳುತ್ತಿದೆ. ಒಡನಾಡಿಗಳಾದ ನಿಮಗೆಲ್ಲ ಮನಸ್ಸು ಎಷ್ಟು ವಿಚಲಿತರಾಗಿರಬಹುದು. ಬರಹದ ಮೂಲಕ ನೋವು ತೋಡಿಕೊಂಡಿದ್ದೀರ.
ವ್ಯಕ್ತಿ ಮತ್ತು ವ್ಯಕ್ತಿತ್ವ ಮತ್ತೆಲ್ಲೂ ಕಾಣದಂತಹ ವಿಜಯ್.
ಚಂದದ ಬರಹ, ಓದುತ್ತಿದ್ದಾಗ ಕಣ್ತುಂಬಿ ಬಂತು.
ಮೇಡಂ ಹೃದಯಸ್ಪರ್ಶಿ ಬರಹ….ನನಗೆ ಇನ್ನೂ ಅವ್ರನ್ನ ಕಳೆದುಕೊಂಡ ನೋವು ನೀಗ್ತಾ ಇಲ್ಲ….ನಾನು ಅವರ ಅಭಿನಯದ ಕಟ್ಟ ಅಭಿಮಾನಿ……Such a talented actor,. missing him forever….ಕಣ್ಣ ಅಂಚಲ್ಲಿ ನೀರು? ಅವ್ರ ವ್ಯಕ್ತಿತ್ವದ ಬಗ್ಗೆ ಮಾತಾಡೋಕೆ ನಾವು ತುಂಬಾ ಚಿಕ್ಕವರು .
ತುಂಬಾ ಒಳ್ಳೆಯ ಬರಹ ,
ವಿಜಯ್ ಎಂದಿಗೂ ಸಾಯುವುದಿಲ್ಲ, ಹತ್ತು ಹಲವು ಜನರು ದೇಹದಲ್ಲಿ ಹೃದಯವಾಗಿ ಕಿಡ್ನಿಯಾಗಿ ಬದುಕುತ್ತಾರೆ..
ಸಾವು ಅವರನ್ನ ಸೋಲಿಸಲಿಲ್ಲ, ಉಸಿರಾಗಿ ಅವರು ಇನ್ನೂ ನಮ್ಮಲ್ಲಿಯೇ ಇದ್ದಾರೇ..
ವಿಜಯ್ ನಿಮ್ಮನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ…