ನಿರ್ದಯಿ ಜಗವೇ ನಿನಗೇನು ಗೊತ್ತು?

ನಿರ್ದಯಿ ಜಗವೇ ನಿನಗೇನು ಗೊತ್ತು?
ಎದೆಯ ಗೂಡೊಳಗೆಲ್ಲೋ ಅಡಗಿದ್ದ
ಅಮಾಯಕ ಮರಿ ಜೀವ
ಮಿಡು ಮಿಡುಕಿ ಕಂಗಾಲಾಗಿ ಉಸಿರಿಗೆ ಹಪಹಪಿಸಿ
ಒದ್ದಾಡಿ ಕಾದಾಡಿ ಜೀವ ಪಣಕ್ಕೊಡ್ಡಿ
ಕೈಕಾಲು ಸೋತು ತನ್ನದೆಲ್ಲವ ಒಪ್ಪಿಸಿ
ಶರಣಾಗಲೇಬೇಕಾದ ಕಟ್ಟ ಕಡೆಯ ಕ್ಷಣ
ಎದೆಯುಮ್ಮಳಿಸಿ ಜ್ವಲಿಸುವ ತಾಪ…
ಒಂದಲ್ಲ ಎರಡಲ್ಲ…
ಸಹಸ್ರ ಸಹಸ್ರ ಜೀವಗಳು…

ಕೊನೆಗೂ ಯಾವ ಸಮೀಕರಣವೂ ತಾಳೆಯಾಗದೇ
ಎಲ್ಲವೂ ಮಣ್ಣುಗೂಡಿ ಮಣ್ಣಾಗಿ ಹೋದ ಮೇಲೆ
ಯಾರನ್ನು ದೂರುವುದು? ಆದರೆ…
ಇದೆ ಮತ್ತು ಇಲ್ಲಗಳ ನಡುವೆ
ಅದೆಷ್ಟೊಂದು ದೊಡ್ಡ ಕಂದರ?

ಅದೋ ನೋಡು ಜೀವ ಹೇಗೆ
ತಳಮಳಿಸಿ ಹೊರಳುತಿದೆ
ಆ ಮಗ್ಗುಲಿನಿಂದ ಈ ಮಗ್ಗುಲಿಗೆ
ಇತ್ತಲಿಂದ ಅತ್ತಲಿಗೆ
ಯಾವ ಬೆಂಕಿ ಭೋರ್ಗರೆಯುತಿದೆಯೋ ಎದೆಯೊಳಗೆ?
ಎದೆಯ ಚೀಲದ ತುಂಬಾ ಉಸಿರಿಗೆ ಬರ
ಒಳ ಗಲ್ಲಿಗಳಲ್ಲಿ ಅವಿರತ ಹೊಯ್ದಾಟ
ಕರುಳಿನ ಗೋಡೆಗೆ ಆತು
ವಿಲವಿಲನೊದ್ದಾಡುವ ಕ್ಷೀಣ ಉಸಿರು.
ಕಾವು ತಾಳಲಾರದೇ ರಕ್ತನಾಳಗಳಲ್ಲೆಲ್ಲಾ
ಹಸಿಹಸಿ ಪಸೆಯಾರಿ
ಬರಗೆಟ್ಟ ಜೀವ ಹಿಡಿದಿಟ್ಟ ಬೋಗುಣಿಯ ಮೈ ತುಂಬಾ
ಅಯ್ಯೋ ಮುಚ್ಚಲಾಗದ ತೂತೇ?
ಜೀವದ ಹನಿ ಹನಿ ಸೋರಿ ಹೋಗುತ್ತಿದ್ದರೂ
ಹಿಡಿದಿಡಲಾಗದೇ ಒದ್ದಾಡಿ
ಪ್ರಾಣ ಒಪ್ಪಿಸುವ ಕೊನೆಯ ಗಳಿಗೆ…
ಮತ್ತೇನುಳಿದಿದೆ ಈಗ?
ಜೀವವೆಂದರೆ ಅಯ್ಯೋ ಶವಗಳ ಲೆಕ್ಕವಲ್ಲಾ!
ಎಲ್ಲ ಬಂಧಗಳೆಳೆ ತುಂಡರಿಸಿ ಬೀಳುವುದು
ಮತ್ತೆಂದೂ ಪಡೆಯದಂತೆ ಕಳೆದುಹೋಗುವುದು.
ನಿರ್ದಯಿ ಜಗವೇ ನಿನಗೆ ಗೊತ್ತೆ?

*****
ರಾಶಿ ರಾಶೀ ಜೀವಗಳು ಹೀಗೆ ಅಕಾರಣ
ಉದುರುದುರಿ ಹೋಗುವುದಕ್ಕೆ
ಯಾವ ಪುರಾವೆಗಳೂ ಉಳಿದಿಲ್ಲ
ದೊರೆಗೆ ಯಾವ ಜೀವದ ಲೆಕ್ಕವೂ ಬೇಕಿಲ್ಲ
ಕಟುಕನ ಕತ್ತಿಗೆ ದಾಕ್ಷಿಣ್ಯವಂತೂ ಮೊದಲೇ ಇರಲಿಲ್ಲ!

ಎಂದಿಗೂ ತೆರೆದುಕೊಳ್ಳಲಾಗದ
ಕತ್ತಲಿಗುಳಿಯುವುದು ಸಾಕ್ಷ್ಯಗಳಿಲ್ಲದ ಬಿಕ್ಕು,
ವೇದನೆ ತುಂಬಿದ ನಿಗೂಢ ಮೌನ
ಖುಲ್ಲಂಖುಲ್ಲಾ ಬಿಚ್ಚಿಟ್ಟ ಬಯಲ ಹಾಳೆ.

ಸಾವಿನ ಖಡ್ಗ ಸೋಕಿಯೂ ಉಳಿದ ಜೀವಗಳು
ತಳಮಳಿಸುವ ಒದ್ದಾಟದಲ್ಲಿ
ಕಾದೂ ನೊಂದೂ…..
ಸಹಿಯಿಲ್ಲದ ಬಿಕನಾಸಿ ಪ್ರಾಣಗಳು
ಬದುಕಿದ್ದೂ ವಿಲವಿಲ ಒದ್ದಾಡುತ್ತವಲ್ಲಾ?
ನಿರ್ದಯಿ ಜಗವೇ ನಿನಗೆ ಗೊತ್ತೆ?

ಸಂಕಟವೇ ಸುರುಟಿ ಸುರುಟಿ
ಕರುಳು ನೇಯ್ದು
ಕೊರಳು ಬಿಗಿದುಕೊಂಡರೆ
ಕಣ್ಣೀರಿಗೂ ಕರುಣೆಯಿಲ್ಲ
ಸುರಿದೂ ಸುರಿದೂ ತಾನೇ ಬತ್ತಿ ಬರಡಾಗಿ….
ನಿರುಪದ್ರವಿ ಮೌನಗಳು
ದಿಗಿಲಿನಲ್ಲೇ ನೆಲಕ್ಕೊರಗುತ್ತವೆ
ಬೇರೂರಿ ನೆಲದಾಳಕ್ಕೂ ಹರಡುತ್ತವೆ….

ಕಣ್ಣಿಲ್ಲದ ಕುರುಡು ನಿರ್ದಯ ದೊರೆಗಳ ಆಳ್ವಿಕೆಯಲ್ಲಿ…
ಉಳಿದವರೇನೂ? ಸತ್ತವರೇನೂ?
ಹಚ್ಚೆಯೇನು? ಮಚ್ಚೆಯೇನು?
ಎಲ್ಲವೂ ಒಂದೇ!